Tag Archives: ಬಾಂಗ್ಲಾ

ಎಕೂಷೆ ಫೆಬ್ರವರಿ : ಅಂತರರಾಷ್ಟ್ರೀಯ ಮಾತೃಭಾಷಾ ದಿನ

-ಭಾರತೀ ದೇವಿ. ಪಿ

ಬಹುಸಂಖ್ಯಾತರ ಭಾಷೆಯನ್ನು ಮಾನ್ಯಮಾಡಬೇಕೆಂದು ಹುಟ್ಟಿಕೊಂಡ ಚಳುವಳಿಯೊಂದು ಸ್ವಾಯತ್ತದೇಶಕ್ಕಾಗಿ ನಡೆದ ದೊಡ್ಡ ಹೋರಾಟ ರೂಪುಗೊಳ್ಳುವಲ್ಲಿ ಪ್ರಧಾನ ಪಾತ್ರವಹಿಸಿದ್ದನ್ನು ನೆನಪಿಸಿಕೊಡುವ ದಿನ ಫೆಬ್ರವರಿ 21. ಪ್ರತಿವರ್ಷ ಫೆಬ್ರವರಿ 21ನೇ ತಾರೀಕನ್ನು ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ. ಸಾಂಸ್ಕೃತಿಕ ಮತ್ತು ಭಾಷಿಕ ಬಹುತ್ವವನ್ನು ಮಾನ್ಯಮಾಡುವ ದಿಸೆಯಲ್ಲಿ ವಿಶ್ವಸಂಸ್ಥೆ 1999ರಲ್ಲಿ ಈ ದಿನವನ್ನು ಮಾತೃಭಾಷಾ ದಿನವನ್ನಾಗಿ ಘೋಷಿಸಿತು.

ಈ ಫೆಬ್ರವರಿ 21ರ ವಿಶೇಷತೆ ಏನು ಎಂಬುದನ್ನು ತಿಳಿಯಲು ಇತಿಹಾಸದತ್ತ ಕಣ್ಣು ಹಾಯಿಸಬೇಕಾಗುತ್ತದೆ. 1947ರಲ್ಲಿ ಬ್ರಿಟಿಷರು ತಮ್ಮ ಆಳ್ವಿಕೆಯಲ್ಲಿದ್ದ ಪ್ರದೇಶವನ್ನು ಬಿಟ್ಟುಹೋಗುವ ಮೊದಲು ಭಾರತ ಮತ್ತು ಪಾಕಿಸ್ತಾನ ಎಂಬ ದೇಶಗಳು ರೂಪುಗೊಂಡದ್ದನ್ನು ನಾವೆಲ್ಲರೂ ಬಲ್ಲೆವು. ಹೀಗಾದಾಗ ಪಾಕಿಸ್ತಾನ ಎರಡು ಭಾಗಗಳಾಗಿ ಈಗಿರುವ ಪಾಕಿಸ್ತಾನ ಪಶ್ಚಿಮ ಪಾಕಿಸ್ತಾನವಾಗಿಯೂ, ಇಂದಿನ ಬಾಂಗ್ಲಾದೇಶ ಪೂರ್ವಪಾಕಿಸ್ತಾನವಾಗಿಯೂ ಭಾರತದ ಪೂರ್ವ ಮತ್ತು ಪಶ್ಚಿಮ ಗಡಿಗಳಾಚೆ ಹರಡಿಹೋಗಿದ್ದವು. ಆಡಳಿತ, ಕಾನೂನು, ನೀತಿನಿಯಮಗಳಿಗೆ ಸಂಬಂಧಿಸಿದ ವಿಷಯಗಳನ್ನು ನಿರ್ಧರಿಸುವಲ್ಲಿ ಹೆಚ್ಚಿನ ಹಿಡಿತವಿದ್ದದ್ದು ಪಶ್ಚಿಮ ಪಾಕಿಸ್ತಾನದ ನೇತಾರರ ಕೈಯಲ್ಲಿ. ಹೀಗಾಗಿ ಪೂರ್ವಪಾಕಿಸ್ತಾನದ ಜನರು ಎಲ್ಲ ರಂಗದಲ್ಲಿಯೂ ಅವಗಣನೆಗೆ ಒಳಗಾಗಿದ್ದರು. ಜೊತೆಗೆ ಪೂರ್ವಪಾಕಿಸ್ತಾನದ ಬಹುಸಂಖ್ಯಾತರ ಭಾಷೆ ಬಾಂಗ್ಲಾ (ಬಂಗಾಳಿ) ಇದ್ದಾಗಲೂ ಅದನ್ನು ಕಡೆಗಣಿಸಿ ಜಿನ್ನಾ ಮೊದಲಾಗಿ ನೇತಾರರು ಉರ್ದುವನ್ನು ರಾಷ್ಟ್ರಭಾಷೆಯಾಗಿ ಘೋಷಿಸಿದರು. ಇದು ಪೂರ್ವ ಪಾಕಿಸ್ತಾನದ ಜನರ ಭಾವನೆಗಳನ್ನು ಘಾಸಿಗೊಳಿಸಿತು. ಇದು ತಮ್ಮ ಹಕ್ಕನ್ನು, ಹಿತಾಸಕ್ತಿಯನ್ನು ಅವಗಣಿಸುವ ಬಗೆಯಾಗಿ ಅವರಿಗೆ ಕಂಡಿತು. ಇದೇ ಸಂದರ್ಭದಲ್ಲಿ ಭಾಷೆಯ ಕುರಿತಾದ ತಮ್ಮ ಹಕ್ಕು ಸ್ಥಾಪಿಸುವ ಉದ್ದೇಶದಿಂದ ‘ಆಲ್ ಪಾರ್ಟಿ ಸ್ಟೇಟ್ ಲಾಂಗ್ವೇಜ್ ಕಮಿಟಿ’ ರೂಪಿತವಾಯಿತು.

ಈ ವಿರುದ್ಧ 1952ರ ಫೆಬ್ರವರಿ 20-21ರಂದು ದೇಶವ್ಯಾಪಿ ಚಳುವಳಿ ಮಾಡುವುದಾಗಿ ಈ ಸಮಿತಿ ನಿರ್ಧರಿಸಿತು. 21ರಂದು ಬಜೆಟ್ ಮಂಡನೆಯಿದ್ದ ಕಾರಣ ಈ ದಿನಗಳನ್ನು ಅವರು ಆರಿಸಿಕೊಂಡರು. ಇದರಲ್ಲಿ ವಿದ್ಯಾರ್ಥಿಗಳು, ನಾಯಕರು, ಸಾಹಿತಿಗಳು ಎಲ್ಲರೂ ಸೇರಿದ್ದರು. ಆದರೆ ಸರ್ಕಾರ ಇದ್ದಕ್ಕಿದ್ದಂತೆ ಚಳುವಳಿ ನಡೆಸದಂತೆ 144ನೇ ಸೆಕ್ಷನ್ ಹೇರಿತು. ಈ ಸಂದರ್ಭದಲ್ಲಿ ಮುಂದಿನ ಕ್ರಮ ನಿರ್ಧರಿಸಲು 20ರ ಸಂಜೆ ಮುಂಚೂಣಿಯಲ್ಲಿರುವವರು ಸಭೆ ಸೇರಿದರು. ಈ ಹೊತ್ತಿನಲ್ಲಿ ಪ್ರತಿಭಟನೆ ಕೈಬಿಡುವ ತೀರ್ಮಾನಕ್ಕೂ ಕೆಲವು ನಾಯಕರು ಬಂದರು. ಆದರೆ ಈಗಾಗಲೇ ಹುರುಪಿನಿಂದ ಕೆಚ್ಚಿನಿಂದ ಕೂಡಿದ್ದ ಯುವಸಮುದಾಯಕ್ಕೆ ಈ ನಿರ್ಧಾರ ಸಮ್ಮತವಾಗಲಿಲ್ಲ.

ಫೆಬ್ರವರಿ 21ರಂದು (ಬಂಗಾಳಿ ಭಾಷೆಯಲ್ಲಿ ಎಕೂಷೆ ಫೆಬ್ರವರಿ) ವಿದ್ಯಾರ್ಥಿಗಳು ಢಾಕಾದಲ್ಲಿ ಶಾಂತಿಯುತವಾಗಿ ಪ್ರತಿಭಟನೆಗಿಳಿದರು. ಬಜೆಟ್ ಮಂಡನೆಗೆಂದು ಬರುತ್ತಿದ್ದ ನಾಯಕರು ಪ್ರವೇಶಿಸದಂತೆ ದ್ವಾರದಲ್ಲಿ ತಡೆ ಒಡ್ಡಿದರು. ಈ ಸಂದರ್ಭದಲ್ಲಿ ಪೊಲೀಸರು ಸರ್ಕಾರದ ಆದೇಶದಂತೆ ಗುಂಡು ಹಾರಿಸತೊಡಗಿದರು. ಈ ಗುಂಡಿನ ದಾಳಿಗೆ ಹಲವಾರು ವಿದ್ಯಾರ್ಥಿಗಳು ಬಲಿಯಾದರು.

ಪ್ರಭುತ್ವದ ಹೇರಿಕೆ, ಕ್ರೌರ್ಯವನ್ನು ನೇರವಾಗಿ ಬಯಲಿಗೆಳೆದ ಈ ಘಟನೆ ಸ್ವಾಯತ್ತ ಬಾಂಗ್ಲಾದೇಶಕ್ಕಾಗಿ ಹೋರಾಟ ನಡೆಸಲು ದೊಡ್ಡ ಪ್ರೇರಣೆಯಾಯಿತು. ಕೊನೆಯಲ್ಲಿ 1971ರಲ್ಲಿ ಸ್ವತಂತ್ರ ಬಾಂಗ್ಲಾದೇಶ ತಲೆಯೆತ್ತಿತು.

ಈ ನೆನಪಿನಲ್ಲಿ ವಿಶ್ವಸಂಸ್ಥೆ ಫೆಬ್ರವರಿ 21ನ್ನು ಬಹುತ್ವವನ್ನು ಒಳಗುಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರೇರೇಪಿಸುವ ದಿನವಾಗಿ ಮಾತೃಭಾಷಾ ದಿನ ಎಂದು ಘೋಷಿಸಿದೆ. ಬಹುಭಾಷಿಕ ಪರಿಸರದಲ್ಲಿ ನೆಲೆಸಿ ಗೊತ್ತಿದ್ದೋ ಗೊತ್ತಿಲ್ಲದೆಯೋ ನಿರಂತರ ಕೊಡುಕೊಳೆಯಲ್ಲಿ ನಿರತವಾಗಿರುವ ನಾವು ಬಹುತ್ವವನ್ನು ಮಾನ್ಯಮಾಡುವುದನ್ನು ಅತ್ಯಗತ್ಯವಾಗಿ ಕಲಿಯಲೇಬೇಕಾಗಿದೆ. ಮಾತೃಭಾಷಾ ದಿನ ನಮ್ಮ ಭಾಷೆ ಸಕ್ಕರೆ, ಚಿನ್ನ ಎಂದು ಕೊಂಡಾಡುವ ದಿನವಲ್ಲ ಎಂಬುದು ಈ ದಿನದ ಹಿನ್ನೆಲೆಯನ್ನು ಅರಿತರೆ ಅರ್ಥವಾಗುತ್ತದೆ. ಭಾಷಾ ಹೇರಿಕೆ, ಭಾಷಾ ಮೂಲಭಾತವಾದವನ್ನು ಕಿತ್ತೊಗೆದು ಪ್ರಜಾಪ್ರಭುತ್ವೀಯ ನೆಲೆಯಲ್ಲಿ ಎಲ್ಲ ಭಾಷೆಗಳನ್ನು ಗೌರವಿಸುವ ನೆಲೆಯಲ್ಲಿ ನಮ್ಮನ್ನು ಚಿಂತನೆಗೆ ಹಚ್ಚುವ ದಿನ ಇದು. ಈ ದಿನಕ್ಕೆ ಸಂಬಂಧಿಸಿದಂತೆ ಈ ವರ್ಷದ ಘೋಷಣಾ ವಾಕ್ಯವೂ ‘ಮಾತೃಭಾಷಾಮಾಧ್ಯಮ ಮತ್ತು ಎಲ್ಲರನ್ನೂ ಒಳಗೊಳ್ಳುವ ಶಿಕ್ಷಣ’ ಎಂದಿರುವುದು ಇಂದಿನ ತುರ್ತನ್ನು ಮತ್ತೆ ಒತ್ತಿಹೇಳುವಂತಿದೆ.