Tag Archives: ಬೆಂಗಳೂರು

ಡಿ. ಕೆ. ರವಿ ‘ಅಸಹಜ ಸಾವಿ’ಗೆ ಮಿಡಿದ ಕನ್ನಡದ 10 ಕಂಬನಿಗಳು!

ಐಎಎಸ್‍ ಅಧಿಕಾರಿ ಡಿ. ಕೆ. ರವಿ ಅವರ ‘ಅಸಹಜ ಸಾವಿ’ಗೆ ಕಳೆದ ಎರಡು ದಿನಗಳಿಂದ ರಾಜ್ಯದ ಉದ್ದಗಲಕ್ಕೂ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಬ್ಬ ಪ್ರಾಮಾಣಿಕ ಅಧಿಕಾರಿಯ ಸಾವು ಜನರ ಅಂತರಾತ್ಮವನ್ನು ತಟ್ಟಿರುವುದು ಇದಕ್ಕೆ ಸಾಕ್ಷಿ. ಮುಕ್ತ, ನಿರ್ಭೀತ ಸಮಾಜದ ಕನಸು ಇಟ್ಟುಕೊಂಡವರಿಗೆ ಆದರ್ಶಕ್ಕಾಗಿ ಒಬ್ಬ ವ್ಯಕ್ತಿ ಅಥವಾ ಸಿದ್ಧಾಂತದ ಅಗತ್ಯವಿರುತ್ತದೆ. ಬಹುಶಃ ಕೋಲಾರದಲ್ಲಿ ರವಿ ಅವರು ತಮ್ಮ ಅವಧಿಯಲ್ಲಿ ನಡೆದುಕೊಂಡ ಜನಪರ ನಡವಳಿಕೆ ಅವರನ್ನು ಆ ಸ್ಥಾನದಲ್ಲಿ ತಂದುಬಿಟ್ಟಿತ್ತು. ಇವತ್ತು ಆ ಸ್ಥಾನ ಅಕಾಲಿಕವಾಗಿ ಖಾಲಿಯಾದಾಗ ಸಹಜವಾಗಿಯೇ ಭಾವನೆಗಳಿಗೆ ಘಾಸಿಯಾಗಿದೆ. ಪೇಸ್ಬುಕ್‍ನಂತಹ ಸಾಮಾಜಿಕ ಜಾಲತಾಣದಲ್ಲಿ ರವಿ ಅವರ ಸಾವಿನ ಕುರಿತು ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳು ಸಾವಿನ ಸುತ್ತಲಿನ ನಾನಾ ಆಯಾಮಗಳನ್ನು ಕಟ್ಟಿಕೊಡುತ್ತವೆ. ಈ ಹಿನ್ನೆಲೆಯಲ್ಲಿ ಅವುಗಳಲ್ಲಿ ಆಯ್ದ ಕೆಲವನ್ನು ನಾವಿಲ್ಲಿ ಒಂದೇ ಸೋರಿನ ಅಡಿಯಲ್ಲಿ ತರುವ ಪ್ರಯತ್ನ ಮಾಡಿದ್ದೀವಿ. ಈ ಮೂಲಕ ರವಿ ಅವರಿಗೆ ಶ್ರದ್ಧಾಂಜಲಿ ಮತ್ತು ಅವರ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆಗಾಗಿ ‘ವರ್ತಮಾನ’ ಬಳಗ ಆಶಿಸುತ್ತದೆ…

role1

1.

-ಶಶಿ ಶೇಖರ್

ಭ್ರಷ್ಟ ವ್ಯವಸ್ಥೆಗೆ ಬಲಿಯಾಯ್ತು ಪ್ರಾಮಾಣಿಕತೆ…!!!

ಒಂದು ನೀಚ ಭ್ರಷ್ಟ ವ್ಯವಸ್ಥೆ ಎಂತಹ ಪ್ರಾಮಾಣಿಕ, ಧಕ್ಷ ಅಧಿಕಾರಿಯ ಪ್ರಾಣವನ್ನಾದರೂ ಬಲಿ ಪಡೆಯುತ್ತೆ. ಅದಕ್ಕೆ ಮತ್ತೊಂದು ಉದಾಹರಣೆ ಡಿಕೆ ರವಿ ಅನುಮಾನಾಸ್ಪದ ಸಾವು. ಈ ಹಿಂದೆ ಇದೇ ರೀತಿ ದಕ್ಷತೆ ಮೆರೆದಿತ್ತ ಹಲವು ಅಧಿಕಾರಿಗಳು ಸಾವನ್ನಪ್ಪಿದ್ರು..
ಕರ್ನಾಟಕದ ಮಟ್ಟಿಗೆ ಕೆಎಎಸ್ ಅಧಿಕಾರಿ ಮಹಾಂತೇಶ್ ಕೊಲೆ ಮತ್ತು ಎಸ್ ಐ ಮಲ್ಲಿಕಾರ್ಜುನ ಬಂಡೆ. ಆದ್ರೆ ಕೆಲವೇ ದಿನಗಳಲ್ಲಿ ಇಷ್ಟು ದೊಡ್ಡಮಟ್ಟದಲ್ಲಿ ಹೆಸರು ಪಡೆದಿದ್ದವರು ಡಿಕೆ ರವಿ. ಕೋಲಾರದಲ್ಲಿ ಡಿಸಿಯಾಗಿ ಕೆಲಸ ಮಾಡಿದ ಅಷ್ಟೂ ದಿನ ಅಲ್ಲಿನ ಮರಳು ಮಾಫಿಯಾವನ್ನ ಉಸಿರೆತ್ತದಂತೆ ಮಾಡಿದ್ದು ಡಿಕೆ ರವಿ ಹೆಗ್ಗಳಿಕೆ. ಒಬ್ಬ ಅಧಿಕಾರಿ ವರ್ಗಾವಣೆಯಾದ್ರೆ ನಮ್ಮಲ್ಲಿ ಅಷ್ಟಾಗಿ ಪ್ರತಿಭಟನೆಗಳು ಆಗೋದಿಲ್ಲ. ಆದ್ರೆ ಡಿ ಕೆ ರವಿ ವರ್ಗಾವಣೆಯಾದಾಗ ಇಡೀ ಕೋಲಾರಕ್ಕೆ ಕೋಲಾರವೇ ವಿರೋಧಿಸಿತ್ತು. ಅಷ್ಟರಮಟ್ಟಿಗೆ ಡಿಕೆ ರವಿ ಜನಸ್ನೇಹಿಯಾಗಿದ್ದರು ಮತ್ತು ಜನಪರ ಕೆಲಸ ಮಾಡ್ತಾಯಿದ್ರು. ಕೋಲಾರದಲ್ಲಿ ಮರಳುಮಾಫಿಯಾವನ್ನ ಮಟ್ಟಹಾಕಿದ ರವಿಯವರನ್ನ ಸರ್ಕಾರ ಇದ್ದಕ್ಕಿದ್ದಂತೆ ವಾಣಿಜ್ಯ ತೆರಿಗ ಇಲಾಖೆಗೆ ವರ್ಗ ಮಾಡಿತ್ತು. ಐಎಎಸ್ ಅಧಿಕಾರಿಗಳಿಗೆ ಅಷ್ಟೇನು ಪ್ರಿಯವಲ್ಲದ ಇಲಾಖೆ ಅಂದ್ರೆ ಅದು ವಾಣಿಜ್ಯ ತೆರಿಗೆ ಇಲಾಖೆ. ಆದ್ರೆ ಸರ್ಕಾರದ ನಿರ್ಧಾರವನ್ನ ತುಂಬಾ ಖುಷಿಯಿಂದಲೇ ಸ್ವಾಗತಿಸಿ ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತರಾಗಿ ಧಕ್ಷತೆಯಿಂದ ಕೆಲಸ ಮಾಡ್ತಾಯಿದ್ರು. ಕಳೆದ ನಾಲ್ಕು ತಿಂಗಳಾವದಿಯಲ್ಲಿ ಬೆಂಗಳೂರು ಲ್ಯಾಂಡ್ ಮಾಫಿಯಾ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ಮಾಡೋ ಹಲವು ಕಂಪನಿಗಳ ಮೇಲೆ ರೇಡ್ ಮಾಡಿದ್ರು. ಕೇವಲ ನಾಲ್ಕು ತಿಂಗಳಲ್ಲಿ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿದ್ದ ರಿಯಲ್ ಎಸ್ಟೇಟ್ ಕಂಪನಿಗಳಿಂದ 120 ಕೋಟಿಗೂ ಅಧಿಕ ತೆರಿಗೆ ವಸೂಲಿ ಮಾಡಿದ್ರು. ಬಾಯಿಸತ್ತರವರ ಜಮೀನಿಗೆ ಬೇಲಿ ಸುತ್ತುತ್ತಿದ್ದವರನ್ನ ಅಕ್ಷರಶಃ ಎದುರುಹಾಕಿಕೊಂಡಿದ್ದರು ಡಿಕೆ ರವಿ. ಇಂತಹ ಆಧಿಕಾರಿ ಇನ್ನಷ್ಟು ವರ್ಚಗಳ ಕಾಲ ಕೆಲಸ ಮಾಡಿದ್ದಿದ್ರೆ ಭ್ರಷ್ಟರಪಾಲಿಗೆ ಸಿಂಹಸ್ವಪ್ನರಾಗಿರ್ತಿದ್ರು… ಆದ್ರೆ ಈ ಭ್ರಷ್ಟ ವ್ಯವಸ್ಥೆಗೆ ಬಲಿಯಾಗಿ ಹೋದ್ರು. ಅವರ ಸಾವು ಆತ್ಮಹತ್ಯೆಯೋ ಕೊಲೆಯೋ ಅಂತ ಈಗಲೇ ಊಹೆ ಮಾಡೋಕೆ ಸಾಧ್ಯವೇ ಇಲ್ಲ. ಒಂದು ವೇಳೆ ಅದು ಕೊಲೆಯಾಗಿದ್ರೂ ಅದು ಈ ವ್ಯವಸ್ಥೆ ಮಾಡಿದ ಕೊಲೆ. ಅದು ಆತ್ಮಹತ್ಯೆಯೇ ಆಗಿದ್ರೂ ಅದು ವ್ಯವಸ್ಥೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದ ಪ್ರಚೋದನೆ… ಡಿಕೆ ರವಿಯವರೆ ಮತ್ತೆ ಹುಟ್ಟಿ ಬನ್ನಿ…

***

2.

-ರವೀಂದ್ರ ಗಂಗಲ್‍

ಒಮ್ಮಿಂದೊಮ್ಮಿಲೇ ಉನ್ಮಾದಕ್ಕೆ ಸಿಕ್ಕು ಅತಿರೇಕವಾಗಿ ವರ್ತಿಸುವುದಕ್ಕಿಂತ ಮೊದಲು… ಈ ವ್ಯವಸ್ಥೆಯಲ್ಲಿರುವ ಮೂಲ ತಪ್ಪುಗಳನ್ನು ತಿಳಿದುಕೊಳ್ಳಿ. ದೋಷಗಳನ್ನು ಕಂಡುಹಿಡಿಯಲು ಪ್ರಯತ್ನಿಸಿ. ಸತ್ತವರು ಸತ್ತು ಹೋಗುತ್ತಾರೆ. ಅವರಿಗೆ “ಈ ಭೂಮಿಗೆ ಮತ್ತೆ ಹುಟ್ಟಿ ಬಾ, ಈ ನೆಲದಲ್ಲಿ ಮತ್ತೆ ಹುಟ್ಟಿ ಬರಬೇಡವೆನ್ನುವುದು” ತೀರಾ ಬಾಲಿಶತನವಾಗುತ್ತದೆ. ಅವಾಸ್ತವಿಕವೆನ್ನಿಕೊಳ್ಳುತ್ತದೆ. ಈ ರಾಜ್ಯದ ಪ್ರತಿ ತಾಲೂಕಿನಲ್ಲಿ ಸರ್ಕಾರಿ ಸ್ವಾಮಿತ್ವದ ಹತ್ತಾರು ಇಲಾಖೆಗಳಿವೆ. ಪ್ರತಿ ಇಲಾಖೆಗೂ ಒಬ್ಬ ಅಧಿಕಾರಿ ನೇಮಕಗೊಂಡಿರುತ್ತಾನೆ. ಬಹುಸಂಖ್ಯಾತ ಸರ್ಕಾರಿ ಅಧಿಕಾರಿಗಳು ತಮ್ಮ ತಾಲೂಕಿನ ಶಾಸಕನಿಗೆ ಪ್ರತಿ ತಿಂಗಳು ದೇಣಿಗೆ ಕೊಟ್ಟುಬರುತ್ತಾರೆ. ಪ್ರತಿ ಸರ್ಕಾರಿ ಕಛೇರಿಗಳು ಬ್ರಿಟಿಷ್ ಆಡಳಿತದ ಶೈಲಿಯನ್ನೇ ಇವತ್ತಿಗೂ ಅನುಸರಿಸುತ್ತವೆ. ಅಲ್ಲಿ ಉನ್ನತ ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತನೆ ಮಾಡುತ್ತಾರೆ. ರಾಜಕಾರಣಿಗಳ ಚೇಲಾಗಳಾಗಿ ಬದುಕುತ್ತಾರೆ. ಜನರನ್ನು ಅವ್ಯಾಹತವಾಗಿ ಸುಲಿಯುತ್ತಾರೆ. ಈ ರಾಜಕಾರಣಿಗಳು ತಮಗೆ ಬೇಕಾದ ಅಧಿಕಾರಿಗಳನ್ನೇ ತಮ್ಮ ಸುತ್ತಮುತ್ತ ಬಿಟ್ಟುಕೊಳ್ಳುತ್ತಾರೆ. ಭಾರತದ ವಿಷಪೂರಿತ ರಾಜಕಾರಣಕ್ಕೆ ಹತ್ತಾರು ಹೆಡೆಗಳಿವೆ. ಹೆಡೆಗೆ ಹೊಡೆಯದೇ, ಬರಿ ಬಾಲವನ್ನು ತುಳಿಯುವುದು ಮೂರ್ಖತನ. ಹೊಡೆದರೆ ಹೆಡೆಗೆ ಹೊಡೆಯಬೇಕು. ಅದನ್ನು ಹೇಗೆ ಮಾಡಬೇಕೆಂದು ಚಿಂತಿಸಿ. ಇವತ್ತು ಸಿದ್ದರಾಮಯ್ಯ ಇದ್ದಾನೆ. ನಾಳೆ ಶೆಟ್ಟರ್ ಬರುತ್ತಾನೆ. ಇಂಥಹ ದುರಂತಗಳು ಮತ್ತೆಮತ್ತೆ ಮರುಕಳಿಸುತ್ತಲೇ ಇರುತ್ತವೆ. ದುರಂತ ಸಂಭವಿಸಿದಾಗ ಬುಗಿಲೆದ್ದು ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದು ನಮ್ಮ ಅನಾರೋಗ್ಯ ಮನಸ್ಥಿತಿಯನ್ನು ತೋರಿಸಿಕೊಡುತ್ತದೆ. ಮೊದಲು ನಾವುಗಳು ಅಲರ್ಟ್ ಆಗ್ಬೇಕು. ನಮ್ಮ ಸುತ್ತಲಿನವರಿಗೆ ಅರಿವು ಮೂಡಿಸಬೇಕು. ಬೃಹತ್ತಾಗಿ ಬೆಳೆದು ನಿಂತಿರುವ ಒಂದು ಮರದ ರೆಂಬೆಕೊಂಬೆಗಳನ್ನ ಕತ್ತರಿಸಿ ಹಾಕುವುದಕ್ಕಿಂತ, ತಾಯಿಬೇರಿಗೆ ವಿಷ ತುಂಬುವ ಕೆಲಸ ನಡೆಯಬೇಕು.

ಡಿ.ಕೆ.ರವಿ ಪ್ರಾಮಾಣಿಕ ಅಧಿಕಾರಿ. ಬಡವರ ಬಗ್ಗೆ ಕಾಳಜಿಯನ್ನು ಇಟ್ಟುಕೊಂಡಿದ್ದ ಆಡಳಿತಗಾರ. ಸಾಯಬಾರದ ಸಾವನ್ನು ಸತ್ತರು. ಅವರ ಮನೆಯವರಿಗೆ ನೋವನ್ನ ಭರಿಸುವ ಶಕ್ತಿ ಸಿಗಲಿ ಎಂದಷ್ಟೇ ನಾನು ಆಶಿಸಬಲ್ಲೆ.

***473592371

3.

-ಪ್ರದೀಪ್‍ ಕೆ. ಎಸ್‍

ಸಮಾಜದ ಆಗುಹೋಗುಗಳ ಬಗ್ಗೆ ಕಿಂಚಿತ್ ಕಳಕಳಿ ಇರುವವರು ಕೂಡ ವಿಚಲಿತರಾಗುವಂತಹಾ ಘಟನೆ ಇದು . ಸಮಾಜಕ್ಕೆ ಮಾದರಿಯಾಗಿದ್ದ ಕಿರಿ ವಯಸ್ಸಿನ ಹಿರಿಯ ಅಧಿಕಾರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ . ತರಹದ ಆಘಾತಗಳು ಅವರ ಕುಟುಂಬವರ್ಗವನ್ನಲ್ಲದೆ ಅವರ ಆದರ್ಶಗಳ ನೇರ ,ಪರೋಕ್ಷ ಫಲಾನುಭವಿಗಳನ್ನು ಕಾಡುತ್ತವೆ .

ನಿಷ್ಪಕ್ಷಪಾತವಾಗಿ ತನಿಖೆಯಾಗಲಿ .ಅಷ್ಟೊಂದು ಕ್ರಿಯಾಶೀಲ ,ಚಿಂತನಶೀಲ ವ್ಯಕ್ತಿಯ ಸಾವಿಗೆ ಕಾರಣ ಮತ್ತು ಪ್ರೇರೇಪಣಾ ಅಂಶಗಳು ಬೆಳಕಿಗೆ ಬರಲಿ . ಒಬ್ಬ ಪ್ರಾಮಾಣಿಕ ಅಧಿಕಾರಿಯ ಸೇವೆಗೆ ಬೆಲೆ ಸಿಕ್ಕಲಿ . ಸಾವಿಗೆ ತಕ್ಷಣದ ಕಾರಣ ಆತ್ಮಹತ್ಯೆ ,ಅಥವಾ ಯಾವುದೇ ಇರಲಿ .ಒಬ್ಬ ಮನುಷ್ಯನಾಗಿ ಅವರನ್ನು ಹಂತಕ್ಕೆ ತಳ್ಳಿದ ವ್ಯವಸ್ಥೆ ಅಥವಾ ವ್ಯಕ್ತಿಗಳು ಶಿಕ್ಷಾರ್ಹರು .

ಸಮಾಜದ ಒಳ ಹೂರಣಗಳು ಬರಡಾಗುತ್ತಿವೆ ಇದು ಸಾವಿರಾರು ವರ್ಷಗಳ ನಿರಂತರ ಸವಕಳಿ .ಇದ್ದಕ್ಕಿದ್ದಂತೆ ಬೆರಗಾಗಿಛೇ …” ಉದ್ಗಾರಕ್ಕಿಂತ ಇಂತಹಾ ಕೆಲ ಪ್ರಾಮಾಣಿಕರನ್ನಾದರೂ ಹೇಗೆ ಉಳಿಸಿಕೊಳ್ಳಬೇಕೆಂಬ ಚಿಂತನೆ , ನಾವೂ ಕೂಡಾ ಭ್ರಷ್ಟ ವ್ಯವಸ್ಥೆಯ ಪಾತ್ರಧಾರಿಗಳೆಂಬ ಪಾಪ ಪ್ರಜ್ಞೆ ಬೆಳೆಯಲಿ .

ರವಿ ಯವರಿಗೆ ಮನಃಪೂರ್ವಕ ಶ್ರದ್ಧಾಂಜಲಿ

***

4.

-ದಿನೇಶ್‍ ಕುಮಾರ್‍

ಎಲ್ಲ ಅಂದುಕೊಂಡಂತೇ ಆಗುತ್ತಿದೆ. ರಾಜಕೀಯ ಪಕ್ಷಗಳು ಡಿ.ಕೆ.ರವಿ ಸಾವನ್ನೂ ರಾಜಕೀಯದ ಸರಕು ಮಾಡಿಕೊಳ್ಳುತ್ತಿವೆ. ಒಬ್ಬ ನನ್ನ ಬಳಿ ಆಡಿಯೋ, ವಿಡಿಯೋ ದಾಖಲೆ ಇದೆ ಎನ್ನುತ್ತಾನೆ, ಮತ್ತೊಬ್ಬ ಪ್ರಭಾವಿ ಸಚಿವರು ತೆರಿಗೆ ಹಣ ಕಡಿಮೆ ಮಾಡಲು ಒತ್ತಡ ಹೇರಿದ್ದರು ಎನ್ನುತ್ತಾನೆ. ಇದನ್ನು ಪ್ರೇಮಪ್ರಕರಣ ಅಂತ ತಳುಕು ಹಾಕಬೇಡಿ ಎಂದು ಏಕಾಏಕಿ ಹೊಸ ವಿಷಯ ಸಿಡಿಸುತ್ತಾನೆ ಮತ್ತೊಬ್ಬ. ರವಿ ಸಾವಿನ ವಿಷಯ ಚರ್ಚೆಯಾಗುವಾಗ ಇಬ್ಬರು ಸಚಿವರು ಸದನದಲ್ಲೇ ನಿದ್ದೆ ಮಾಡುತ್ತಾರೆ. ಲೋಕಸಭೆಯಲ್ಲಿ ಪ್ರಹ್ಲಾದ ಜೋಷಿ ಇದೇ ವಿಷಯ ಮಾತನಾಡುವಾಗ ಕರ್ನಾಟಕದ ಮತ್ತೊಬ್ಬ ಸಂಸದ ಹಿಂದೆ ನಿಂತು ಕೇಕೆ ಹಾಕಿ ನಗುತ್ತಾನೆ. ಸಿಓಡಿ ತನಿಖೆ ಮಾಡ್ತೀವಿ ಎನ್ನುತ್ತೆ ರಾಜ್ಯ ಸರ್ಕಾರ, ಸಿಬಿಐ ತನಿಖೆನೇ ಬೇಕು-ಸದನದಲ್ಲೇ ಮಲಗುತ್ತೇವೆ ಎನ್ನುತ್ತವೆ ವಿರೋಧಪಕ್ಷಗಳು. ಇತ್ತ ಡಿ.ಕೆ.ರವಿಯ ಫುಟೇಜುಗಳಿಗೆ ಸಿನಿಮಾಹಾಡುಗಳನ್ನು ರೀಮಿಕ್ಸ್ ಮಾಡಿ ನ್ಯೂಸ್ ಚಾನಲ್ ಗಳು ಟಿಆರ್ ಪಿಗಾಗಿ ಹಣಾಹಣಿ ನಡೆಸುತ್ತಿವೆ.
ಪರಿಸ್ಥಿತಿ ಇನ್ನಷ್ಟು ಹದಗೆಟ್ಟುಹೋಗುವ ಮುನ್ನ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿಬಿಡುವುದು ಎಲ್ಲ ರೀತಿಯಲ್ಲೂ ಒಳ್ಳೆಯದು. ಒಂದೊಮ್ಮೆ ರವಿ ಆತ್ಮಹತ್ಯೆಯನ್ನೇ ಮಾಡಿಕೊಂಡಿದ್ದರೂ ಅದಕ್ಕೊಂದು ಕಾರಣ, ಕಾರಣಕರ್ತರು ಇರಲೇಬೇಕಲ್ಲವೇ? ಅವರಿಗೆ ಶಿಕ್ಷೆಯಾಗಬೇಕಲ್ಲವೇ? ಸಿಬಿಐ ಆಗಲೀ ಸಿಓಡಿಯಾಗಲೀ ವೈಜ್ಞಾನಿಕ ರೀತಿಯ ತನಿಖೆಯನ್ನೇ ನಡೆಸಬೇಕು. ಉಪ್ಪು ತಿಂದವರು ನೀರು ಕುಡಿಯಲಿ. ಇಡೀ ರಾಜ್ಯವೇ ಸಾವಿನ ಮನೆಯಾಗಿಹೋಗಿದೆ. ಸೂತಕದ ನಡುವೆ ಈ ರಾಜಕೀಯ ಹೇಸಿಗೆಗಳನ್ನೆಲ್ಲ ಜನರೇಕೆ ಸಹಿಸಿಕೊಳ್ಳಬೇಕು? ಸಿದ್ಧರಾಮಯ್ಯನವರೇ, ಸಿಬಿಐ ತನಿಖೆ ಆಗಿಹೋಗಲಿ ಬಿಡಿ.

ಮತ್ತು

ಒಂದು ತಿಂಗಳು ಪವರ್ ಬಿಲ್ ಕಟ್ಟದೇ ಹೋದರೆ ನಿಮ್ಮ ಮನೆಯ ಪವರ್ ಮೀಟರ್ ನ ಫ್ಯೂಸ್ ಕಿತ್ತು ಹಾಕಲಾಗುತ್ತದೆ. ಆದರೆ ಈ ರಿಯಲ್ ಎಸ್ಟೇಟ್ ಕಿರಾತಕರು ನೂರಾರು ಕೋಟಿ ತೆರಿಗೆ ವಂಚಿಸುತ್ತಿದ್ದರೂ ಅವರು ಗಣ್ಯಮಾನ್ಯರು, ಅವರ ಕೂದಲೂ ಕೊಂಕುವುದಿಲ್ಲ. ನಾಲ್ಕೇ ತಿಂಗಳಲ್ಲಿ ಡಿ.ಕೆ. ರವಿ ಇಂಥ ಕಿರಾತಕರಿಂದ ವಸೂಲಿ ಮಾಡಿದ್ದು ೧೨೫ ಕೋಟಿ ರುಪಾಯಿ. ರವಿ ಸಾವಿಗೂ ಈ ಹಲಾಲುಕೋರರಿಗೂ ಸಂಬಂಧವಿದೆಯಾ ಅಂತ ತನಿಖೆ ಮಾಡಬೇಕಾಗಿರೋದು ಪೊಲೀಸರು. ಆದರೆ ಇಡೀ ಬೆಂಗಳೂರನ್ನು ಹರಿದು ಹಂಚಿ ಮುಕ್ಕುತ್ತಿರುವ ಈ ಬಿಲ್ಡರ್ ಗಳ ಚಮಡಾ ಸುಲಿಯೋ ಕೆಲಸ ಯಾರು ಮಾಡಬೇಕು? ಎಲ್ಲ ರಿಯಲ್ ಎಸ್ಟೇಟು ಕಂಪೆನಿಗಳೂ ನಮ್ಮ ಪುಡಾರಿಗಳಿಗೆ ಶೇರುಗಳನ್ನು ಕೊಟ್ಟಿವೆ. ರಾಜ್ಯದಲ್ಲೊಂದು ರಣಹೇಡಿಗಳ ಸರ್ಕಾರವಿದೆ ಮತ್ತು ಅದರಷ್ಟೇ ದುಷ್ಟ ವಿರೋಧಪಕ್ಷಗಳಿವೆ. ಕೊಲೆಯಾಗಿರೋದು ರವಿಯಲ್ಲ, ನಾಡಿನ ಸಾಕ್ಷಿಪ್ರಜ್ಞೆ. ನಮ್ಮೆಲ್ಲರ ಆತ್ಮಸಾಕ್ಷಿಗಳೂ ಹೋಲ್ ಸೇಲಾಗಿ ನೇಣು ಹಾಕಿಕೊಂಡಿವೆ. ಯಾರ ಆತ್ಮಕ್ಕೆ ಶಾಂತಿ ಕೋರುವಿರಿ?

***

5.

-ರಾಘವೇಂದ್ರ

ಭ್ರಷ್ಟಚಾರ..ವ್ಯವಸ್ಥೆ, ಸಮಾಜ ಇವೆಲ್ಲವೂ ಒಂದಕ್ಕೊಂದು ಬೆಸೆದುಕೊಂಡು ಬಿಟ್ಟಿವೆ..ಅದನ್ನ ಬದಲಾಯಿಸಲು ಆ ದೇವರಿಂದಲೂ ಸಾಧ್ಯವಿಲ್ಲಾ…ಅಂತಾ ನಾವು ಅದೆಷ್ಟು ಬಾರಿ ಮಾತನಾಡ್ತೀವೋ ಲೆಕ್ಕವೇ ಇಲ್ಲಾ..ಆದ್ರೆ ನಿಜವಾಗಲೂ ಅದರ ನಿರ್ನಾಮ ಸಾಧ್ಯ..ಅದ್ರನ್ನ ಮೆಟ್ಟಿ ನಿಲ್ಲ ಬೇಕಾದವರು ಸಾಮಾನ್ಯ ಜನರು ಅನ್ನೋದನ್ನ ಸಾರಲು ಹೊರಟ ಹೋರಾಟಗಾರನೊಬ್ಬ ದುರಂತ ಅಂತ್ಯ ಕಂಡಿದ್ದಾನೆ..ಆತ ಎಂದೂ ನನ್ನಿಂದ ಇದು ಸಾದ್ಯವಿಲ್ಲಾ ಅಂದು ಕೊಳ್ಳಲೇ ಇಲ್ಲಾ..ಆರಂಭ ಅನ್ನೋದು ತನ್ನಿಂದಲೇ ಅಂತಾ ಮುನ್ನುಗ್ಗಿದ್ದ..ಆತನ ಜೊತೆಗೆ ಲಕ್ಷಾಂತರ ಮಂದಿ ಕೈಜೋಡಿಸಿದ್ರು..ಸಮಾಜಕ್ಕೆ ಬಹುದೊಡ್ಡ ಕಂಟಕವಾಗಿರೋ ಜಾತಿ ವ್ಯವಸ್ತೆ ವಿರುದ್ದ ಆತ ಸಮರ ಸಾರಿದ್ದ..ಆಡಂಬರದ ಹಂಗಿಲ್ಲದೇ ಸಾಮಾನ್ಯರೊಬ್ಬರ ಮನೆಯಲ್ಲಿ ಊಟ ಮಾಡಿದ್ದ..ಸಮಾಜದ ಕಟ್ಟ ಕಡೆಯ ಮಂದಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದ..ಆತ ನಿಜಕ್ಕೂ ಆ ಜಿಲ್ಲೆ ಜನರ ಪಾಲಿಗೆ ಬದಲಾವಣೆಯ ಹರಿಕಾರನಾಗಿ ಕಂಡಿದ್ದ..ಹೀಗಾಗೇ ಅವತ್ತು ಆತನ ವರ್ಗವಣೆಯನ್ನ ವಿರೋಧಿಸಿ ಅಷ್ಟು ಜನ ಆತನ ಪರವಾಗಿ ಬೀದಿಗೆ ಇಳಿದಿದ್ದು..ಹಾಗೇ ಅವತ್ತು ಅಚಾನಕ್ಕಾಗಿ ಬಂದ ಬದಲಾವಣೆಯನ್ನ ಸ್ವೀಕರಿಸಿದ ಆತ ಇಲ್ಲೂ ಸಹ ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ..ಆದ್ರೆ ಸೋಮವಾರ ಸಂಜೆ ಸ್ಪೋಟವಾದ ಸುದ್ದಿ ಮಾತ್ರ ಇಡೀ ಆಘಾತಕಾರಿ…ಅಲ್ಲಿ ಆತ ತನ್ನ ಮನೆಯಲ್ಲೇ ಸಾವನ್ನಪ್ಪಿದ್ದ..ಅದು ಆತ್ಮಹತ್ಯೆನಾ..?ಕೊಲೆನಾ..?ಆತನಿಗೆ ಭೂಗತ ಪಾತಕಿಗಳಿಂದ ಬೆದರಿಕೆ ಇತ್ತಾ..? ಏನೇ ಆದ್ರು ಅಲ್ಲೊಂದು ಅನುಮಾನ ಇದ್ದೇ ಇದೆ…ಇನ್ನು ಆತನ ಸಾವಿನ ಸುದ್ದಿ ರಾಜ್ಯದ್ಯಾಂತ ಜನ ರೊಚ್ಚಿಗೆದ್ದಾರೆ..ಅವ್ರ ಆಕ್ರೋಶದ ಕಟ್ಟೆ ಒಡೆದಿದೆ…ಆದ್ರೆ ಇದು ನಿಜಕ್ಕೂ ಆತನ ಆಶೋತ್ತರಗಳನ್ನ, ಆತ ಕಂಡ ಕನಸನ್ನ ಸಾಕಾರ ಮಾಡೋ ಹಾದಿಯಲ್ಲಿ ಮುನ್ನಡೆಯುತ್ತಾ..? ಅಥವಾ ಎಂದಿನಂತೆ ಎರಡು ದಿನ ಆತನನ್ನ ನೆನೆದು ನಂತರ ಮರೆಯುವಂತ ಕೆಲಸ ಆಗುತ್ತಾ..? ಏನೇ ಆದ್ರು ಸತ್ಯ ಮತ್ತೆ ಹುಟ್ಟಿ ಬರುತ್ತೆ..ಇಲ್ಲಿ ಆತ ಸತ್ತಿರಬಹುದು ..ಆದ್ರೆ ಆತನ ಆದರ್ಶ, ಗುರಿ , ಪ್ರಾಮಾಣಿಕತೆಗೆ ಎಂದಿಗೂ ಸಾವಿಲ್ಲ..ಅವು ಎಂದಾದರೊಂದು ದಿನ ಗೆಲ್ಲುತ್ವೆ..ಅದು ನಮ್ಮ ನಿಮ್ಮಲ್ಲಿ ಬದಲಾವಣೆಯ ಹಸಿವನ್ನ ಹೆಚ್ಚಿಸಲಿ..ಆ ಹಸಿವು ಆತನ ಪ್ರಾಮಾಣಿಕತೆಯನ್ನ ಉಳಿಸಿ ಆತನ ಧ್ಯೇಯವನ್ನ ಸಾಕಾರಗೊಳಿಸೋ ನಿಟ್ಟಿನಲ್ಲಿ ಪ್ರಥಮ ಹೆಜ್ಜೆ ಆಗಲಿ..ಇದಕ್ಕೆ ನೀವೇನಂತೀರಿ…?

ಡಿ.ಕೆ.ರವಿ, ನೀ ಮತ್ತೊಮ್ಮೆ ಉದಯಿಸು…!

***

6.

-ಪ್ರಗತ್‍ ಗೌಡ

‘ಮತ್ತೆ ಹುಟ್ಟಿ ಬಾ’ ಎನ್ನುವ ಮಾತು ತೀರಾ ಬಾಲಿಶ ಹೇಳಿಕೆಯಾಗಿ ಕಂಡುಬರುತ್ತಿದೆ ಇತ್ತೀಚೆಗೆ. ಮತ್ತೆ ಹುಟ್ಟಿ ಬಂದರೆ ಮುಂದೆ ಇದೇ ರೀತಿಯ ಸನ್ನಿವೇಶದಲ್ಲಿ ಉಳಿಸಿಕೊಳ್ಳಲು ಸಾದ್ಯವೇ? ಆ ಒಂದು ವಾತಾವರಣ ಇಲ್ಲಿ ನಿರ್ಮಿತವಾಗಿದೆಯೇ? ಇಂತಹ ಸನ್ನಿವೇಶಗಳಲ್ಲೂ ಸ್ವಹಿತ ಸ್ವಪ್ರತಿಷ್ಟೆ ರಾಜಕೀಯ ಲಾಭ ತೆಗೆದುಕೊಳ್ಳುತ್ತಿರುವ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಸಂಘಟನಾ ಕಾರ್ಯಕರ್ತರು ಉರಿಯುವ ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುವಂತೆ ಬಾಸವಾಗುತ್ತಿದ್ದಾರೆ.

ಇಂತಹ ಕ್ರಿಮಿಗಳು ಇರುವ ವರೆಗೂ ಮತ್ತೆ ಹುಟ್ಟಿ ಬರಬೇಡಿ.

***

7.

-ನಾಗೇಂದ್ರ ಬಿ. ಸಿ

ಪಂಚೆ ಮೇಲಕ್ಕೆ ಕಟ್ಟಿ ,ಟವೆಲ್ ಕೊಡವಿ ‘ನಾನು ಪ್ರಾಮಾಣಿಕ’ ಅಂತ ಹೇಳಿದ್ರೆ ಆಗೋಲ್ಲಾ ಸ್ವಾಮಿ .ಪಕ್ಕದಲ್ಲಿ ಅಧಕ್ಷರು ,ಅಪ್ರಾಮಾಣಿಕರು ಹಾಗು ರಿಯಲ್ ಎಸ್ಟೇಟ್ ದಗಲ್ಬಾಜಿಗಳನ್ನ ಇಟ್ಕೊಂಡು ರಾಜ್ಯಬಾರ ನಡೆಸಿದರೆ ಉತ್ತರ ಕೊಡಬೇಕಾದವರು ನೀವೇನೇ,ಅಷ್ಟಕ್ಕೂ ರಾಜಕೀಯದಲ್ಲಿ ‘ಪ್ರಾಮಾಣಿಕ’ ಅನ್ನೋ ಸವಕಲು ನಾಣ್ಯವನ್ನ ಯಾಕೆ ಇನ್ನೂ ಚಲಾವಣೆಯಲ್ಲಿ ಇಡೋ ಪ್ರಯತ್ನ ಮಾಡ್ತಿದೀರಿ ? ….ಜನರನ್ನ ಮೂರ್ಖರನ್ನಾಗಿಸೋ ಕಾಲ ಮುಗಿದಿದೆ ,ಕೇವಲ ‘ಭಾಗ್ಯ’ಗಳ ಮೂಲಕ ಸಮಾಜದ ಸುಧಾರಣೆ ಆಗೋಲ್ಲಾ,ನೀವು ಮಾಡ್ತಿರೋದು ಭಾಗ್ಯಗಳ ಮುಖೇನ ಜಾತಿ ಮತಗಳ ಆಧಾರದಲ್ಲಿ ಸಮಾಜವನ್ನು ಒಡೆದು ಆಳೋ ನೀತಿಯನ್ನೇ … ಅದು ಸಮಾಜದಲ್ಲಿ ಅಸಮಧಾನದ ಸೆಳುಕುಗಳನ್ನ ಹುಟ್ಟುಹಾಕ್ತಿದೆ ಹಾಗು ಅದು ಜನರ ಸಾಮರಸ್ಯವನ್ನ ಹಾಳುಗೆಡವುತ್ತಿದೆ …ಆದ್ದರಿಂದ ನೀವೀಗ ಬೀಜೆಪಿಯವರನ್ನ ‘ಕೋಮುವಾದಿಗಳು’ ಅನ್ನೋ ನೈತಿಕತೆಯನ್ನ ಕಳೆದುಕೊಂಡು ಯಾವುದೋ ಕಾಲಾವಾಗಿದೆ….ಮೊನ್ನೆಯ ಘಟನೆಯಿಂದಾಗಿ ಪ್ರಾಮಾಣಿಕ ಅಧಿಕಾರಿಗಳ ಆತ್ಮಸ್ಥೈರ್ಯವೇ ಮುರಿದುಹೋಗಿರತ್ತೆ ಅವರುಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ನೆಟ್ಟಗೆ ಅಧಿಕಾರ ನಡೆಸಿ ಸ್ವಾಮಿ,ಇಲ್ಲಾಂದ್ರೆ ಮುಂದಿನ ಪೀಳಿಗೆ ಇತಿಹಾಸದ ಪುಟಗಳನ್ನ ತಿರುವಿದಾಗ ಇಂತಹವರಿಂದಲೂ ನಮ್ಮ ರಾಜ್ಯ ಆಳಲ್ಪಟ್ಟಿತ್ತಲ್ಲ ಅಂತ ಅಸಹ್ಯಿಸಿಕೊಂಡಾರು…..

***

8.

-ರಾಘವೇಂದ್ರ ರಾವ್‍

ಪ್ರತಿನಿತ್ಯ ದಿನಪತ್ರಿಕೆ ಓದುತ್ತಿದ್ದ ನನ್ನ ಮಗಳಿಗೆ ಡಿ.ಕೆ.ರವಿ ಅವರ ಕೆಲಸ ಕಾರ್ಯಗಳು ಬಹಳ ಅಚ್ಚುಮೆಚ್ಚಾಗಿದ್ದವು. ಏಳನೆಯ ತರಗತಿಯಲ್ಲಿದ್ದರೂ ಅವಳಿಗೆ ತಾನೂ ಅಂತೆಯೇ ಐಎಎಸ್ ಅಧಿಕಾರಿ ಆಗಬೇಕೆಂಬ ಆಸೆ ಚಿಗುರಿದ್ದು ರವಿಯವರು. ಕಾರಲ್ಲಿ ಅವರು ಓಡಾಡುವುದನ್ನು ಕಾಣುತ್ತಿದ್ದ ಆವಳಿಗೆ ಒಮ್ಮೆ ಅವರನ್ನು raghavendra rao1ಕಂಡು ಮಾತನಾಡಬೇಕೆಂಬ ಆಸೆ…. ಜಿಲ್ಲಾಧಿಕಾರಿ, ಅವರ ಕಾರ್ಯಭಾರಗಳು ಅವರ ಒತ್ತಡಗಳು, ಶಿಷ್ಟಾಚಾರ… ಇತ್ಯಾದಿಗಳ ಅರಿವಿದ್ದ ನಮಗೆ ಅವರನ್ನು ಕಾಣಲು ಹಿಂಜರಿಕೆ. ವಿದ್ಯಾರ್ಥಿಗಳೆಂದರೆ ಅವರಿಗೆ ಅಚ್ಚುಮೆಚ್ಚು… ಆದ್ದರಿಂದ ಧೈರ್ಯ ಮಾಡಿ ಕಛೇರಿ ಬಳಿ ಹೋದೆವು. ಚುನಾವಣಾ ಪೂರ್ವ ಭರದ ಕೆಲಸ ಅಲ್ಲಿ ಸಾಗಿತ್ತು. ಹೊರಗೆ ಇದ್ದ ಸಿಬ್ಬಂದಿ ಸಾಕಷ್ಟು ಕಾಯಿಸಿದರು. ವಿದ್ಯಾರ್ಥಿ ಅವರನ್ನು ನೋಡಬಯಸಿದ್ದಾಳೆಂದು ಗೊತ್ತಾದ ತಕ್ಷಣ ಮೊದಲೇ ಹೇಳಬಾರದಿತ್ತಾ… ಎಂದು ಒಳಗೆ ಕಳುಹಿಸಿದರು. ಡಿ.ಕೆ.ರವಿ ಅವರ ನಗುಮೊಗ ನಮ್ಮ ಆತಂಕ, ಭಯಗಳನ್ನು ದೂರ ಮಾಡಿತು. ರಕ್ಷಾಳೊಡನೆ ಬಹಳಾ ಆತ್ಮೀಯವಾಗಿ ಮನೆಯ ನೆಂಟ ಎನ್ನುವಂತೆ ಮಾತನಾಡಿದರು. ಅವಳ ಆಕಾಂಕ್ಷೆಯನ್ನು ಕೇಳಿ ತಿಳಿದು. ಕೆಲವು ಹಿತವಚನ ಹೇಳಿದರು. ಹೆಣ್ಣು ಮಕ್ಕಳು ಚೆನ್ನಾಗಿ ಓದಲೇಬೇಕು ಎಂದರು. ಆಟೋಗ್ರಾಫ್, ಫೋಟೋಗ್ರಾಫ್ ಗೆ ಅವಕಾಶ ಕೊಟ್ಟರು. ತಾವೇ ಪುಸ್ತಕದ ಒಂದು ಹಾಳೆಯನ್ನು ತೆಗೆದು Raksha All the best ಎಂದು ಬರೆದು ಕೊಟ್ಟರು. ಅವರ ಸ್ನೇಹ, ಸೌಜನ್ಯಪೂರ್ಣ ನಡವಳಿಕೆ ನಮ್ಮಗಳ ಮೇಲೆ ಉಂಟುಮಾಡಿದ ಸದ್ಭಾವನೆ ನಮ್ಮ ಜೀವನಪೂರ್ತಿ ಉಳಿಯುವಂತಹದ್ದು. ಒಳಿತಿನ ಮೇಲೆ ನಮ್ಮ ನಂಬುಗೆಯನ್ನು ಹೆಚ್ಚಿಸಿತು.
ಅವರ ಸಾವಿಗೆ ಪರಿಹಾರವಿಲ್ಲ. ಸಾವನ್ನು ತಂದವರಿಗೆ ಒಳಿತಾಗುವ ಸಂಭವವಿಲ್ಲ… ಇವರ ಸಾವು ಅವರಂತಹ ಚೇತನಗಳಿಗೆ ಮತ್ತಷ್ಟು ಶಕ್ತಿ ತುಂಬಲಿ…
ಸುದ್ಧಿ ತಿಳಿದಾಗಿನಿಂದ ಮನದಲ್ಲ್ಲಿ ಮನೆಯಲ್ಲಿ ಸೂತಕದ ವಾತಾವರಣ.

***

9.

– ಮುರಳಿ ತರೀಕೆರೆ

ಧಿಕ್ಕಾರ…!!!

ಪ್ರಾಮಾಣಿಕ ಅಧಿಕಾರಿಗಳನ್ನ ಬಲಿ ಪಡೆದುಕೊಳ್ಳುವ ಭ್ರಷ್ಟ ವ್ಯವಸ್ತೆಗೆ ನನ್ನ ಧಿಕ್ಕಾರ, 
ಭುಗಳ್ಳತನ, ಮರಳು ಮಾಫಿಯ ಇತ್ಯಾದಿ ಮಾಫಿಯಗಳನ್ನು ತಮ್ಮ ಓಡಲಿನಲ್ಲಿಟ್ಟುಕೊಂಡು ಪೋಷಿಸುವ ನೀಚ ರಾಜಕಾರಣಿಗಳಿಗೆ ನನ್ನ ಧಿಕ್ಕಾರ,
ಅಧಿಕಾರದ ದುರ್ಭಳಕೆ ಮಾಡಿಕೊಳ್ಳುವ ಭ್ರಷ್ಟ ಅಧಿಕಾರಿಗಳಿಗೆ ನನ್ನ ಧಿಕ್ಕಾರ,
ದಕ್ಷ, ಪ್ರಾಮಾಣಿಕ ಅಧಿಕಾರಿಯೊಬ್ಬರನ್ನ ಉಳಿಸಿಕೊಳ್ಳಲಾಗದ ಆಡಳಿತ ಪಕ್ಷಕ್ಕೆ ನನ್ನ ಧಿಕ್ಕಾರ, 
ಅವಕಾಶ ಬಳಸಿ ತಮ್ಮ ತೂತುಗಳನ್ನ ಮುಚ್ಚಿಕೊಳ್ಳುತ್ತ, ಪರಸ್ಪರ ಕೆಸರಾಟ ನಡೆಸುವ ವಿರೋದ ಪಕ್ಷಗಳಿಗೂ ನನ್ನ ಧಿಕ್ಕಾರ.
ಸತ್ತ ಮೂರು ದಿನ, ಕೂಗಾಡಿಚೀರಾಡಿ, ಮತ್ತೆ ಮರು ದಿನ ಎಲ್ಲವನ್ನು ಮರೆತು, ಪ್ರಾಮಾಣಿಕ ಅಧಿಕಾರಿಯೊಬ್ಬರ ಒಂದೆರಡು ಆದರ್ಶಗಳನ್ನ ರೂಡಿಸಿಕೊಳ್ಳದ ಮಸುಳೆಗಣ್ಣಿನ ಮನಸುಗಳಿಗೆ ಧಿಕ್ಕಾರ.
.
.
ಇಷ್ಟೆಲ್ಲಾ ಆದರೂ ದೂರದ ಬೆಟ್ಟದ ಗರ್ಭ ಗೂಡಿಯಲ್ಲಿ ಸುಮ್ಮನೆ ಕಲ್ಲಾಗಿ ಕೂಳಿತ ದೇವನಿಗೂ ನನ್ನ ಧಿಕಾರ

ನಿಮ್ಮ ಆದರ್ಶಗಳು ನನ್ನಂತ ಕೋಟಿ ಯುವ ಮನಸುಗಳಿಗೆ ದಾರಿದೀಪ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ರವಿ ಸರ್

***

10.

-ರಾಹುಲ್‍ ಬೆಳಗಲಿ

473590681ಹೀಗೂ ಒಮ್ಮೆ ಆಲೋಚಿಸಿ……
ಒಬ್ಬ ಅಧಿಕಾರಿ, ರಾಜಕಾರಣಿ ಅಥವಾ ಸಾಮಾನ್ಯ ವ್ಯಕ್ತಿಯೇ ಆತ್ಮಹತ್ಯೆ ಮಾಡಿಕೊಂಡರೂ ಅಥವಾ ಸಾವನ್ನಪ್ಪಿದರೂ ಅದಕ್ಕೆ ಕಾರಣಗಳು ಹಲವು ಇರುತ್ತವೆ. ಎಲ್ಲದಕ್ಕೂ ವ್ಯವಸ್ಥೆ ಅಥವಾ ಸರ್ಕಾರವೊಂದೇ ಕಾರಣವಾಗಿರುವುದಿಲ್ಲ. ಆ ವ್ಯಕ್ತಿ 24 ಗಂಟೆಯೂ ಬರೀ ಸಮಾಜ, ಸರ್ಕಾರ ಮತ್ತು ಅವ್ಯವಸ್ಥೆ ಬಗ್ಗೆ ಚಿಂತಿಸುವುದಿಲ್ಲ. ಕಚೇರಿ ಕೆಲಸದ ನಂತರ ತನ್ನದೇ ಆದ ವೈಯಕ್ತಿಕ ಜೀವನ, ಕುಟುಂಬ, ಸ್ನೇಹಬಳಗ ಎಂದೆಲ್ಲಾ ಇರುತ್ತದೆ. ಆತ ಅಥವಾ ಆಕೆ ಕೂಡ ಮನುಷ್ಯ. ಎಲ್ಲರಂತೆಯೇ ಮಾನವ ಸಹಜ ಗುಣ, ಸಂಕಷ್ಟ, ಸಮಸ್ಯೆ, ನೋವು, ನಲಿವು ಇರುತ್ತವೆ. ಯಾರ ಮುಂದೆಯೂ ಹೇಳಿಕೊಳ್ಳಲಾಗದ ಮತ್ತು ಹಂಚಿಕೊಳ್ಳಲಾಗದ ನೋವು, ಸಂಕಟ, ಯಾತನೆ ಮತ್ತು ಅಸಹಾಯಕತೆಯೂ ಇರುತ್ತವೆ. ವ್ಯಕ್ತಿ ಎಷ್ಟೇ ಎತ್ತರಕ್ಕೇರಿದರೂ ಆತ ಆಥವಾ ಆಕೆ ದೇವಮಾನವ ಆಗುವುದಿಲ್ಲ. ಎಲ್ಲಾ ರೀತಿಯ ಸಮಸ್ಯೆಗಳಿಂದ ಸುಲಭವಾಗಿ ಪಾರಾಗಲು ಸಹ ಸಾಧ್ಯವಾಗುವುದಿಲ್ಲ. ಸಾವು ತಂದೊಡ್ಡುವ ಕೆಲ ಕಾರಣಗಳು ಕೆಲ ಬಾರಿ ಬಹಿರಂಗ ಆಗುತ್ತವೆ. ಕೆಲವೊಮ್ಮೆ ಸಾವಿನೊಂದಿಗೆ ಮಣ್ಣಾಗುತ್ತವೆ. ಎಲ್ಲದಕ್ಕೂ ಬರೀ ವ್ಯವಸ್ಥೆಯನ್ನೇ ದೂಷಿಸುವುದು ಆಗಿದ್ದರೆ, ಈ ವೇಳೆಗೆ ಯಾರೂ ಸಹ ಬದಕುತ್ತಿರಲಿಲ್ಲ. ಈ ಸಮಾಜವು ಇಷ್ಟು ಚಲನಶೀಲತೆಯಿಂದ ನಡೆಯುತ್ತಿರಲಿಲ್ಲ. ಆದರೆ ಇದನ್ನೇ ನೆಪವಾಗಿಸಿಕೊಂಡು ಪ್ರಾಮಾಣಿಕತೆಗೆ ಇತಿಶ್ರೀ ಹಾಡುವುದು ಮತ್ತು ಯಾರೂ ಸಹ ಅಂತಹ ಹುದ್ದೆಗೇರಲು ಪ್ರಯತ್ನಿಸಬೇಡಿ ಎನ್ನುವುದು ನಿರಾಸೆ ಮತ್ತು ಭಾವೋದ್ರೇಕದ ಪರಮಾವಧಿಯೇ ಹೊರತು ಮತ್ತೇನೂ ಅಲ್ಲ….ಹೀಗೂ ಒಮ್ಮೆ ಆಲೋಚಿಸಿ.

***