Tag Archives: ಬೆತ್ತಲೆ ವೃಕ್ಷ

ಪುಸ್ತಕ ಪರಿಚಯ: ಹಿತ್ತಲ ಗಿಡ ಮುದ್ದಲ್ಲ


-ಬಿ. ಶ್ರೀಪಾದ್ ಭಟ್


ಗೆಳೆಯ ಸಿ.ಜಿ.ಲಕ್ಷ್ಮೀಪತಿ ಅವರು ಬರೆದ  ಬೆತ್ತಲೆ ವೃಕ್ಷ ಪುಸ್ತಕವು 2007ರಲ್ಲಿ ಪ್ರಕಟಣೆಗೊಂಡಿತು. ಲೈಂಗಿಕತೆಯನ್ನು ಅದರ ವಿವಿಧ ಆಯಾಮಗಳಲ್ಲಿ, ನಾಗರೀಕ ಸಮಾಜವು ಈ ಲೈಂಗಿಕತೆಗೆ ಆರೋಗ್ಯಕರವಾದ ಮನಸ್ಥಿತಿಯಲ್ಲಿ ತರೆದುಕೊಳ್ಳುವುದರ ಕುರಿತಾಗಿ, ಗಂಡು ಮತ್ತು ಹೆಣ್ಣಿನ ವಿಭಿನ್ನ ವ್ಯಕ್ತಿತ್ವಗಳು, ಬಹುರೂಪಿ ವರ್ತನೆಗಳ ಕುರಿತಾಗಿ ಸಿ.ಜಿ.ಲಕ್ಷ್ಮೀಪತಿಯವರು ತಮ್ಮ “ಬೆತ್ತಲೆ ವೃಕ್ಷ” ಪುಸ್ತಕದಲ್ಲಿ ಸಮಗ್ರವಾಗಿ ಮತ್ತು ವಿವರವಾಗಿ ಚರ್ಚಿಸಿದ್ದಾರೆ.

2000ರಲ್ಲಿ ‘ಅಗ್ನಿ’ವಾರಪತ್ರಿಕೆಯಲ್ಲಿ ಕೆಲವು ತಿಂಗಳುಗಳ ಕಾಲ ಪ್ರಕಟಗೊಂಡ ಲೇಖನಗಳ ಸಂಗ್ರಹವೇ ಈ ‘ಬೆತ್ತಲೆ ವೃಕ್ಷ’ ಪುಸ್ತಕ. ಲೇಖಕ ಲಕ್ಷ್ಮೀಪತಿ ಯವರು ಈ ಕೃತಿಯಲ್ಲಿ ‘ನಾನು ಸಾಂಪ್ರದಾಯಿಕ ಸಮಾಜಶಾಸ್ತ್ರೀಯ ವಿಧಾನವನ್ನು ಬಳಸಿಲ್ಲ. ಒಂದರರ್ಥದಲ್ಲಿ ಇತರರ ಜೀವನಾನುಭವ, ನನ್ನ ಅನುಭವ, ಲೈಂಗಿಕತೆ ಬಗೆಗಿನ ಗುಟ್ಟಾದ ಕತೆಗಳು, ನಂಬಿಕೆಗಳು ಈ ಕೃತಿಯನ್ನು ರೂಪಿಸುವಲ್ಲಿ ನೆರವಾಗಿವೆ. ಸಾಮಾನ್ಯವಾಗಿ ಲೈಂಗಿಕತೆಯನ್ನು ಕುರಿತು ಬರೆಯುವಾಗ ಅದು ವಲ್ಗರ್ ಆಗದಂತೆ ಹೇಳಬಹುದಾದ್ದನ್ನು ಓದುಗರಿಗೆ ಮುಜುಗರವಾಗದಂತೆ, ಆದರೆ ಮರೆಮಾಚದಂತೆ ಮಂಡಿಸುವುದು ಕಷ್ಟದ ಕೆಲಸ. ಈ ಕೆಲಸದಲ್ಲಿ ನಾನು ಸಾಕಷ್ಟು ಯಶಸ್ವಿಯಾಗಿದ್ದೇನೆ ಅಂದುಕೊಂಡಿದ್ದೇನೆ’ ಎಂದು ತಮ್ಮ ಮುನ್ನುಡಿ ಮಾತಿನಲ್ಲಿ ಬರೆಯುತ್ತಾರೆ.

ಅವರು ಈ ಲೇಖನವನ್ನು ಪ್ರತಿ ವಾರ ಪತ್ರಿಕೆಗೆ ಬರೆಯುತ್ತಿದ್ದಾಗ ಆರಂಭದ ದಿನಗಳಲ್ಲಿ ಕೆಲವು ಮಹಿಳಾ ಸಂಘಟನೆಗಳಿಂದ  ಈ ಲೇಖನಗಳಿಗೆ ವಿರೋಧ ಎದುರಿಸಿದ್ದರು. ಲೇಖಕರು ಮುಕ್ತ ಲೈಂಗಿಕತೆಯ ಕುರಿತಾಗಿ ಬರೆವಾಗ ಅನೇಕ ಕಡೆ ಲೈಂಗಿಕ ಅಂಗಾಂಗಗಳ ಬಳಕೆಗಳ ಕುರಿತಾಗಿ ವಿವರವಾಗಿ ಬರೆದಿರುವುದನ್ನು ತೀವ್ರವಾಗಿ ವಿರೋಧಿಸಿದ್ದರು. ಮಹಿಳೆಗೆ ಲೈಂಗಿಕತೆಯ ಕುರಿತಾಗಿ ನಿಯಂತ್ರಿಸುತ್ತಿರುವುದು ಸಮಾಜವನ್ನು ನಿಯಂತ್ರಿಸುತ್ತಿರುವ ಊಳಿಗಮಾನ್ಯ ಸಂಸ್ಕೃತಿ ಹಾಗೂ ಪುರುಷಾಧಿಪತ್ಯದ ಕುರಿತಾಗಿ ಲೇಖಕರು ಎಲ್ಲಿಯೂ ಬರೆದಿಲ್ಲ ಎಂದು ಮಹಿಳಾ ಸಂಘಟನೆಗಳು ಅರೋಪಿಸಿದ್ದವು. ಮಹಿಳಾ ಜಾಗೃತಿ ಸಂಘಟನೆಯ ಸುಷ್ಮಾ ಅವರು ಪ್ರತಿಭಟನೆ ರೂಪವಾಗಿ ಬರೆದ ಪತ್ರವನ್ನು ಸಹ ಇದೇ ಪುಸ್ತಕದಲ್ಲಿ ಪ್ರಕಟಿಸಲಾಗಿದೆ.

ಇದಕ್ಕೂ ಮುಂಚೆ ಮಹಿಳಾ ಜಾಗೃತಿ ಸಂಘಟನೆಗಳ ಪ್ರತಿಭಟನೆಗೆ ಉತ್ತರಿಸುತ್ತಾ ಲಕ್ಷ್ಮೀಪತಿಯವರು ಸಂಭೋಗಿಸುವುದು ಹೇಗೆಂದು ತಿಳಿಯದ ಕೋಟ್ಯಾಂತರ ಮಹಿಳೆಯರಿದ್ದಾರೆ. ಗಂಡಸಿನ ಲೈಂಗಿಕ ಒತ್ತಡ ತೀರಿದೊಡನೆ ಸಂಭೋಗವೇ ಮುಗಿದು ಹೋಯಿತೆಂದು ಭಾವಿಸುತ್ತಾರೆ. ಸ್ವಲ್ಪ ತಿಳಿವಳಿಕೆ, ಲೈಂಗಿಕ ಶಿಕ್ಷಣ, ನೈಸಿರ್ಗಕವಾಗಿ, ಗಂಡು ಹೆಣ್ಣಿನ ಸಲುಗೆ ಸ್ನೇಹದಿಂದ ಯಾವುದೇ ವೆಚ್ಚವಿಲ್ಲದೆ ಸುಲುಭವಾಗಿ ದೊರೆಯುವ ಈ ಪರಮೋನ್ನತ ಸುಖದಿಂದ ದಂಪತಿಗಳು ವಂಚಿತರಾಗುವುದನ್ನು ಗಮನಿಸಿದರೆ ವಿಷಾದ ಉಂಟಾಗುತ್ತದೆ.

ಬೈಯುವಾಗ, ತೀವ್ರವಾಗಿ ಪ್ರೀತಿಸುವಾಗ, ಹರಟೆ ಕೊಚ್ಚುವಾಗ ಲೈಂಗಿ ಭಾಷೆ ಎಷ್ಟು ಹಾಸು ಹೊಕ್ಕಾಗಿರುತ್ತದೆಂದರೆ ಅದನ್ನು ಹೊರತುಪಡಿಸಿ ಮಾತನಾಡಲೂ ಸಾಧ್ಯವಿಲ್ಲ ಎಂದು ಪ್ರತಿಕ್ರಯಿಸುತ್ತಾರೆ. ಮೇಲಿನ ಮಹಿಳಾ ಜಾಗೃತಿ ಸಂಘಟನೆಯ ಕಳಕಳಿಯ ಮಾತುಗಳು ಎಷ್ಟು ಸತ್ಯವೋ ಅಷ್ಟೇ ಸತ್ಯ ಗೆಳೆಯ ಲಕ್ಷ್ಮೀಪತಿಯವರ ವಿವರಣೆಗಳು. ಏಕೆಂದರೆ ಲೈಂಗಿಕ ಬದುಕಿನ ಕುರಿತಾಗಿ ಹಿಂದಿನ ಕಾಲದಿಂದಲೂ ಹೆಣ್ಣು ಕೌರ್ಯಕ್ಕೆ, ಅತ್ಯಾಚಾರಕ್ಕೆ, ಮೌಢ್ಯಕ್ಕೆ ಬಲಿಯಾಗುತ್ತಳೇ ಇದ್ದಾಳೆ. ಇದಕ್ಕೆ ಮಾನವಶಾಸ್ತ್ರಜ್ಞರೂ, ಸಮಾಜಶಾಸ್ತ್ರಜ್ಞರೂ ವಿಭಿನ್ನ ರೀತಿಯ ವಿಶ್ಲೇಷಣೆಗಳನ್ನ ನೀಡಿದ್ದಾರೆ.

ಇಲ್ಲಿನ ಪುಸ್ತಕದಲ್ಲಿ ಲೇಖಕ ಇದಕ್ಕೆ ಹೆಚ್ಚಾಗಿ ಒತ್ತು ನೀಡಿಲ್ಲ. ಮೌಢ್ಯದ ಕುರಿತಾಗಿ ವಿವರವಾಗಿ ಹಾಗೂ ವೈಚಾರಿಕವಾಗಿ ಬರೆದಿದ್ದಾರೆ ನಿಜ. ಆದರೆ ಈ ಮೌಢ್ಯವನ್ನು ವೈಯುಕ್ತಿಕ ಹಾಗೂ ಕುಟಂಬದ ನೆಲೆಯಲ್ಲಿ ವಿಶ್ಲೇಷಿಸಿದ್ದಾರೆಯೇ ಹೊರತಾಗಿ ಈ ಊಳಿಗಮಾನ್ಯದ ಹಿನ್ನಲೆಯಲ್ಲಿ ಅಲ್ಲ.ಇಲ್ಲಿ ಲೇಖಕರೇ ಕೆಲವರು ಲೈಂಗಿಕ ವಿಚಾರಗಳನ್ನು ರಂಜಕವಾಗಿ ಬರೆಯಬಾರದು ಗಂಭೀರವಾಗಿ ಬರೆಯಬೇಕು ಮುಂತಾದ ಸಲಹೆಗಳನ್ನು ನೀಡುತ್ತಾರೆ.ಸೆಕ್ಸ ಎನ್ನುವುದು ನಮ್ಮ ದೇಹದ ಚೈತನ್ಯದ ಒಂದು ಭಾಗವೇ ಆಗಿರುವುದರಿಂದ ಅದರ ನೆನಪು,ಮಾತೇ ರೋಮಾಂಚನ ಉಂಟು ಮಾಡುತ್ತದೆ.ಅಂಥ ಅದ್ಭುತ ಆನಂದಮಯವಾದ ಕ್ರಿಯೆಯನ್ನು ಜೀವಂತವಾಗಿ ಬರೆದರೆ ಆಗುವ ತಪ್ಪಾದರೂ ಏನು ? ಲೈಂಗಿಕತೆಯನ್ನು ಕುರಿತು ನನಗೂ ಅದಕ್ಕೂ ಸಂಬಂಧವೂ ಇಲ್ಲವೇನೋ ಎಂಬಂತೆ ಬರೆಯುವುದು ಕೃತಕವೂ,ಅಪ್ರಾಮ್ರಾಣಿಕವೂ ಆಗುತ್ತದೆ. ಎಂದು ಹೇಳುತ್ತಾರೆ.ಅವರ ಮಾತು ನಿಜ.ಆದರೆ ಕೇವಲ ಗಂಡುಹೆಣ್ಣಿನ ವೈಯುಕ್ತಿಕ ಲೈಂಗಿಕ ಕ್ರಿಯೆಗಳ ಆಯಾಮದಲ್ಲೇ ಬರೆದರೆ ಅದಕ್ಕೆ ಸೀಮಿತ ಚೌಕಟ್ಟು ಹಾಕಿದಂತಾಗುವುದಿಲ್ಲವೇ?  ಇದು ಈ ಪುಸ್ತಕದಲ್ಲಿ ಕೊರತೆಯಾಗಿ ಕಾಡುತ್ತದೆ.

ಈ ‘ಬೆತ್ತಲೆ ವೃಕ್ಷ’ ಪುಸ್ತಕವನ್ನು ಸ್ಥೂಲವಾಗಿ ನಾಲ್ಕು ಭಾಗಗಳಾಗಿ ಓದಬಹುದು. ಮೊದಲ ಭಾಗದಲ್ಲಿ ವೇದಗಳ ಕಾಲದ ಮುಕ್ತ ಕಾಮದ ಲೈಂಗಿಕತೆ, ತಂತ್ರ, ಮಿಥುನದ ವಿವಿಧ ಕ್ರಿಯೆಗಳ ವಿವರವಾದ ವಿವರಣೆ, ವಾತ್ಸಾಯನನ ಕಾಮಸೂತ್ರ ಕುರಿತಾಗಿ ಅತ್ಯಂತ ವಿವರವಾದ ಅಧ್ಯಯನ. ಈ ಮೊದಲ ಭಾಗದಲ್ಲಿ ಲೈಂಗಿಕ ಕ್ರಿಯೆಗಳ ಕುರಿತಾಗಿ, ಆ ಘಟ್ಟಗಳಲ್ಲಿ ಲೈಂಗಿಕ ಕ್ರಿಯೆಯ ಸಮಯದಲ್ಲಿನ ಅಂಗಾಂಗಳ ಬಳಕೆಗಳ ಕುರಿತಾಗಿ, ಸಾವಿರಾರು ವರ್ಷಗಳ ಹಿಂದಿನ ಕಾಲದ ನಾಗರೀಕತೆಯ ಹಾಗೂ ಆ ಕಾಲಘಟ್ಟದ ಸಮಾಜದ ಅನೇಕ ಕುರುಡು ನಂಬಿಕೆಗಳ, ಅವರ ಲೈಂಗಿಕ ಒರಟುತನದ ಕುರಿತಾಗಿಯೂ ವಿವರವಾಗಿ ಬರೆದಿದ್ದಾರೆ.

ಸೆಕ್ಸ್ ನ ಕುರಿತಾದ ವಿಸ್ತೃತ ವಿವರಣೆಗಳನ್ನು ಸಹ ಒದಗಿಸಿದ್ದಾರೆ. ಈ ವಿವರಗಳು ಅನೇಕ ವೇಳೆ ಪುನರಾವೃತ್ತಿಗೊಳ್ಳುತ್ತವೆ. ಅಲ್ಲದೆ ಈ ಲೇಖನಗಳು ವಾರಪತ್ರಿಕೆಗೆ ಬರೆದಿದ್ದಕ್ಕಾಗಿಯೋ ಏನೋ ಅದಕ್ಕೆ ಸಹಜವಾಗಿಯೇ ಒಂದು ಅಕಡೆಮಿಕ್ ಚೌಕಟ್ಟಾಗಲೀ, ಸಂಶೋಧನೆಯ  ಸ್ವರೂಪವಾಗಲೀ ದಕ್ಕಿದಂತಿಲ್ಲ. ಇಲ್ಲಿ ಒಂದು ಬಗೆಯ ‘ಟ್ಯಾಬ್ಲಾಯ್ಡ್’ ರೋಚಕತೆ ಪ್ರಭಾವಿಸಿದೆ.  ಈ ಭಾಗದಲ್ಲಿ ಲೈಂಗಿಕ ಕ್ರಿಯೆಗಳ ಕುರಿತಾಗಿ ಹಾಗೂ ಆ ಕಾಲಘಟ್ಟದ ಅನಾಗರಿಕ ವರ್ತನೆಗಳು ಮತ್ತು ಲೈಂಗಿಕತೆಯ ಕುರಿತಾದ ಮೂಢನಂಬಿಕೆಗಳನ್ನು ವಿವರಿಸುವಾಗ ಲೇಖಕರು ಎಲ್ಲಿಯೂ ಮಧ್ಯಮ ವರ್ಗ ಬಯಸುವ ಅಕಡೆಮಿಕ್ ಬಾಷೆಯನ್ನು, ಸಿದ್ಧ ಮಾದರಿಯನ್ನು ಬಳಸುವುದಿಲ್ಲ. ಅನೇಕ ವೇಳೆ ಭಾಷೆಯ ರಂಜಕ ಬಳಕೆಯೂ ಸಹ ಈ ಮಧ್ಯಮವರ್ಗದ ಮನಸ್ಥಿತಿಗೆ ಕಸಿವಿಸಿಯನ್ನುಂಟು ಮಾಡುತ್ತದೆ. ಈ ಕಾರಣಕ್ಕಾಗಿಯೇ ಈ ಮೊದಲ ಭಾಗವನ್ನು ಓದುವಾಗ ಅದು ಈ ಭಾಗದಲ್ಲಿ ಅನೇಕ ಕಡೆ  ಲೈಂಗಿಕತೆಯ ಕುರಿತಾಗಿ ಅತ್ಯಂತ ವೈಜ್ಞಾನಿಕವಾಗಿ ವಿಶ್ಲೇಷಣೆಗೆ ಒಳಗಾಗಿದ್ದರೂ ಅದು ಓದುಗರನ್ನು ಆಕರ್ಷಿಸುವತ್ತಲೇ  ಗಿರಿಕಿ ಹೊಡೆಯುತ್ತದೆ ಎನ್ನುವ ಭಾವನೆ ಉಂಟಾದರೆ ಅದು ಓದುಗರ ತಪ್ಪಲ್ಲ. ಇದು ಈ ಭಾಗದ ಮಿತಿಯೂ ಕೂಡ. ಏಕೆಂದರೆ ಈ ಮುಕ್ತ ಲೈಂಗಿಕತೆಯ ಕುರಿತಾಗಿ ಪ್ರಾಮಾಣಿಕವಾಗಿ, ವೈಜ್ಞಾನಿಕವಾಗಿ ಬರೆಯುವಾಗ ಯಾವ ಮಾದರಿಯನ್ನು ಅನುಸರಿಸಬೇಕು, ಬಳಸಬೇಕಾದ ಪರಿಕರಗಳಾವವು ಎನ್ನುವುದರ ಕುರಿತಾಗಿ ಲೇಖಕ ಲಕ್ಷ್ಮೀಪತಿಯವರಲ್ಲಿ ಗೊಂದಲಗಳಿವೆ.

ಆದರೆ ಇಲ್ಲಿ ಲೇಖಕರು ಎಲ್ಲಿಯೂ ವಿಕೃತ ಚಿತ್ರಣವನ್ನು ನೀಡಿಲ್ಲ. ಅನಗತ್ಯವಾಗಿ ತಪ್ಪು ಗ್ರಹಿಕೆಗಳನ್ನು ಕೊಟ್ಟಿಲ್ಲ. ಇಡೀ ಚರ್ಚೆಯು  ಆರೋಗ್ಯಕರ ಮನಸ್ಥಿಯಲ್ಲೇ ನಡೆಯುತ್ತದೆ. ಎರಡನೇ ಭಾಗವಾದ ರತಿ ಸೂತ್ರ ಮತ್ತು ಗಾಂಧೀಜಿಯ ವೈಯುಕ್ತಿಕ ಬದುಕನ್ನು ಒಳಗೊಂಡ ಲೈಂಗಿಕ ವಿಶ್ಲೇಷಣೆಗೆ ಬಂದಾಗ ಈ ಗೊಂದಲಗಳು ಮತ್ತಷ್ಟು ಗೋಜಲುಗೊಂಡು ಕೆಲವು ಕಡೆ ಜಾಳು ಜಾಳಾಗಿ ನಿರೂಪಿತವಾಗಿವೆ. ಗಾಂಧೀಜಿಯವರ ಲೈಂಗಿಕತೆಯ ಪ್ರಯೋಗದ ಕುರಿತಾಗಿ ಈ ಭಾಗದಲ್ಲಿ ಪ್ರಕಟವಾದ ಅಸಹನೆಗೆ ಸಮಜಾಯಿಷಿಯೇ ಇಲ್ಲ. ಗಾಂಧಿಯವರ ವೈಯುಕ್ತಿಕ ಬದುಕನ್ನು ಲೈಂಗಿಕ ವಿಶ್ಲೇಷಣೆಗೆ ಬಳಸಿಕೊಳ್ಳುವಾಗ ಅದು ಕತ್ತಿಯ ಮೇಲಿನ ನಡಿಗೆಯಾಗಿರುತ್ತದೆ ಎನ್ನುವುದು ಬಹಳ ಮುಖ್ಯ.ಸ್ವಲ್ಪ ಎಚ್ಚರ ತಪ್ಪಿದರೂ ಮಹಾತ್ಮ ಗಾಂಧಿಯವರನ್ನು ಅತ್ಯಂತ ಕೆಳಮಟ್ಟದಲ್ಲಿ ಚಿತ್ರಿಸಬಹುದಾದ ಅಪಾಯಗಳಿವೆ.ಈ ಪುಸ್ತಕವೂ ಈ ಅಪಾಯದಿಂದ ಪಾರಾಗಿಲ್ಲ. ಮತ್ತು ಈ ಕುರಿತಾಗಿ ಅದರ ಸಾಮಾನ್ಯವಾದ ವಿಶ್ಲೇಷಣೆ ಹೆಚ್ಚಿನದೇನನ್ನು ಹೇಳದೆ ನಿರಾಶೆಗೊಳಿಸುತ್ತದೆ.

ಆದರೆ ಇಲ್ಲಿನ ಮೂರನೇ ಭಾಗವಾದ ರಜನೀಶ್ರವರ ಲೈಂಗಿಕ ಕ್ರಾಂತಿ ಹಾಗೂ ನಾಲ್ಕನೇ ಭಾಗವಾದ ವಿಹಾರಿ ವಿಕೃತಿ ಕುರಿತಾದ ಲೇಖನಗಳು ನಿಜಕ್ಕೂ ಯಶಸ್ವೀ ಲೇಖನಗಳು. ಈ ಭಾಗದಲ್ಲಿ ಡೊಮೆನಿಕ್ ಮುನ್ನುಡಿಯಲ್ಲಿ ಬರೆದಂತೆ ಲೈಂಗಿಕ ವ್ಯಕ್ತಿತ್ವಕ್ಕೊಂದು ಕನ್ನಡಿ ಯನ್ನು ಲಕ್ಷ್ಮೀಪತಿಯವರು ಸಮರ್ಥವಾಗಿ ಹಿಡಿದುಕೊಡುತ್ತಾರೆ. ಇಲ್ಲಿ ತಮ್ಮ ವೈಚಾರಿಕ ಪ್ರತಿಭೆಯನ್ನು ಸರಾಗವಾಗಿ ಬಳಸಿಕೊಂಡು ಬರೆದಿದ್ದಾರೆ.ಇಲ್ಲಿ ಭಾಷೆಯ ಬಳಕೆ ಲೇಖಕರ ಹಿಡಿತಕ್ಕೆ ದಕ್ಕಿದೆ. ಈ ಭಾಗಗಳಲ್ಲಿ ಲೈಂಗಿಕತೆಯ ಕುರಿತಾದ ಅನೇಕ ಪೂರ್ವಗ್ರಹ ಚಿಂತನೆಗಳನ್ನು ಕೆಡವಿಹಾಕುತ್ತಾರೆ.ಇಲ್ಲಿ ಸಮಾಜಶಾಸ್ತ್ರೀಯ ಹಾಗೂ ಮನೋ ವೈಜ್ನಾನಿಕ ಮಾದರಿಗಳನ್ನು ಲೇಖಕ ಲಕ್ಷ್ಮೀಪತಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ.

ಒಟ್ಟಾರೆಯಾಗಿ ಇಂದು 21ನೇ ಶತಮಾನದಲ್ಲಿ ನಾಗರೀಕ ಸಮಾಜವು ತನ್ನನ್ನು ತಾನು ಆಧುನಿಕತೆಗೆ ಒಪ್ಪಿಸಿಕೊಂಡಿದ್ದರೂ ಮುಕ್ತ ಲೈಂಗಿಕತೆಯ ಕುರಿತಾದ ಚರ್ಚೆಗೆ ಇನ್ನೂ ಮಡಿವಂತಿಕೆ ತೋರಿಸುತ್ತಿದೆ. ಈಗಲೂ ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕತೆಯನ್ನು ಒಂದು ವೈಜ್ಞಾನಿಕ ಪಾಠವಾಗಿ ಹೇಳಿಕೊಡಬೇಕೆ ಬೇಡವೇ ಎಂದು ಪರವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಲಕ್ಷ್ಮೀಪತಿಯವರ ಬೆತ್ತಲೆ ವೃಕ್ಷ ಪುಸ್ತಕವು ಈ ಚರ್ಚೆಗೆ  ಒಂದು ವೇದಿಕೆಯನ್ನು ಒದಗಿಸಿಕೊಡುತ್ತದೆ. ಇಲ್ಲಿ ಬರೆಯಲ್ಪಟ್ಟ  ಅನೇಕ ವಿಷಯಗಳ ಕುರಿತಾಗಿ ಒಪ್ಪಿಕೊಳ್ಳಬೇಕೆ ಬೇಡವೇ ಎನ್ನುವುದೂ ಸಹ ಚರ್ಚೆಗೊಳಗಾದಾಗ ಈ ಹೊಸ ಕಿಟಿಕಿಯ ಮೂಲಕ ದೊರಕುವ ಬೆಳಕಿಂಡಿಯ ಸಾಧ್ಯತೆಗಳು ಅಪಾರ.

ಈ ಪುಸ್ತಕ ಪ್ರಕಟವಾಗಿದ್ದು 2007ರಲ್ಲಿ. ಅಂದರೆ ಇದು ಪ್ರಕಟವಾಗಿ 5 ವರ್ಷಗಳ ನಂತರವೂ ಈ ಬೆತ್ತಲೆ ವೃಕ್ಷದ ಕೃತಿಯ ಕುರಿತಾಗಿ ಒಂದು ವಿಮರ್ಶೆಯೂ ಪ್ರಕಟವಾಗಿಲ್ಲ. ಚರ್ಚೆಯಾಗಿಲ್ಲ. ‘ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ’ ತರಹದ  ಕವನಗಳ ಕುರಿತಾಗಿ ಪುಟಗಟ್ಟಲೆ ಬರೆಯುವ ಈ ವಿಮರ್ಶಕರಿಗೆ ಈ ಪ್ರೇಮದ ಪರಿಯ ನಿಗೂಢ ಆಕರ್ಷಣೆಯಾದ ಲೈಂಗಿಕತೆಯನ್ನು ಚರ್ಚಿಸುವ ಈ ಪುಸ್ತಕದ ಕುರಿತು ಅಸಡ್ಡೆ!

ನಮ್ಮ ಕನ್ನಡದ ಘೋಷಿತ ವಿಮರ್ಶಕರಿಗೆ ನವ್ಯದ ಸ್ವಚ್ಛಂದವಾದ, ಲಿಬಿಡೂ ಮಾದರಿಯ ಆತ್ಮವಂಚನೆಯನ್ನೇ ಹಾಸಿ ಹೊದ್ದ ಸಾಧಾರಣ ಕೃತಿಗಳ ಕುರಿತಾಗಿ ಇರುವ ಆಸಕ್ತಿ ಈ ಪ್ರಯೋಗಾತ್ಮಕ ಪುಸ್ತಕವಾದ ‘ಬೆತ್ತಲೆವೃಕ್ಷ’ ಬಗೆಗೆ ಇಲ್ಲವೇ ಇಲ್ಲ! ಇವರ ಅನಾದರದ ಕಾರಣವೂ ಸಹ ನಿಗೂಢ! ಕಡೆಗೆ ಕನ್ನಡ ಓದುಗರಿಗಾಗಿ ಇಂತಹದೊಂದು ಪುಸ್ತಕವಿದೆ ಎಂದು ಪರಿಚಯಿಸಲಿಕ್ಕಾಗಿಯೇ ನನ್ನಂತಹ ಸಾಮಾನ್ಯ ಓದುಗ ಇಂದು ಆತ್ಮೀಯ ಗೆಳೆಯ ಲಕ್ಷ್ಮೀಪತಿಯ ಈ ಕೃತಿಯ ಕುರಿತಾಗಿ ಬರೆಯಬೇಕಾಯಿತು!

“ಬೆತ್ತಲೆ ವೃಕ್ಷ”
ಲೇಖಕ : ಸಿ.ಜಿ.ಲಕ್ಷ್ಮೀಪತಿ
ಪ್ರಕಾಶಕರು : ಸಖಿ ಪ್ರಕಾಶನ
ಏಕಾಂತ ನಿಲಯ
ಎಂ.ಪಿ.ಪ್ರಕಾಶ ನಗರ
ಹೊಸಪೇಟೆ

ಪುಟಗಳು  : 179
ಬೆಲೆ :Rs.120