Tag Archives: ಭಯ

ಮದನಘಟ್ಟವನ್ನು ಕಾಡುತ್ತಿದ್ದ ಭಾನಾಮತಿ

ತುಮಕೂರು ಬಳಿ ಮದನಘಟ್ಟ ಎಂಬ ಗ್ರಾಮ. ಆ ಗ್ರಾಮದಲ್ಲಿ ಕೆಲ ತಿಂಗಳಿಂದ ಭಾನಾಮತಿ ಕಾಟ. ಒಂದು ಕಡೆ ಸಣ್ಣ ಬೆಂಕಿಯೊಂದಿಗೆ ಪ್ರಾರಂಭವಾದ ಈ ಸಮಸ್ಯೆ ಇಡೀ ಊರನ್ನೇ ಸಂಕಷ್ಟಕ್ಕೆ ಸಿಲುಕಿಸಿತು. ಇದ್ದಕ್ಕಿದ್ದಂತೆ ಎಲ್ಲೆಂದರಲ್ಲಿ ಬೆಂಕಿ ಕಾಣಿಸಿಕೊಂಡು ಅಮೂಲ್ಯ ಆಸ್ತಿಪಾಸ್ತಿ ಹಾಳು ಮಾಡತೊಡಗಿತು. ದಿನದ ಇಪ್ಪತ್ನಾಲ್ಕು ಗಂಟೆಗಳೂ ಕಾವಲು ಕಾಯಲು ಸಾದ್ಯವೇ? ಅದೂ ಭಾನಾಮತಿ ಎಂಬ ಅತಿಮಾನವ ಶಕ್ತಿಯ ಕಾಟ ತಡೆಯಲು ಸಾಧ್ಯವೇ?

ಒಂದು ದಿನ ಒಂದು ಮನೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡಿತು. ಮತ್ತೊಂದು ದಿನ ಒಬ್ಬರ ತೋಟದಲ್ಲಿದ್ದ ತೆಂಗಿನ ಮರಗಳನ್ನು ಸುಟ್ಟು ಹಾಕಿತು. ಮತ್ತೊಂದು ದಿನ ಇನ್ನೊಬ್ಬರ ಮನೆಯಲ್ಲಿನ ಬಟ್ಟೆಗಳನ್ನು ಸುಟ್ಟು ಹಾಕಿತು. ಯಾವಾಗ ಎಲ್ಲಿ ಬೆಂಕಿ ದಿಢೀರ್ ಹೊತ್ತಿಕೊಳ್ಳುತ್ತದೋ ಊರಿನ ಒಬ್ಬರಿಗೂ ಸುಳಿವು ಸಿಗುತ್ತಿರಲಿಲ್ಲ. ಇದ್ದಕ್ಕಿದ್ದಂತೆ ಹೊತ್ತಿಕೊಳ್ಳುವ ಬೆಂಕಿಗೆ ಆಸ್ತಿಪಾಸ್ತಿ ನಷ್ಟವಾಗಿ ಇಡೀ ಊರು ಸಂಕಷ್ಟದಲ್ಲಿತ್ತು. ಊರ ದೇವರು ಮುನಿದಿರಬಹುದು ಎಂದು ಊರ ದೇವರ ಆಚರಣೆ ಮಾಡಿದರು. ಆದರೆ ಸಮಸ್ಯೆ ಪರಿಹಾರವಾಗಲಿಲ್ಲ. ಇತರೆ ದೇವರ ಪೂಜೆ ಪುನಸ್ಕಾರ, ಶಾಂತಿ ಇತ್ಯಾದಿ ಆಚರಣೆಗಳನ್ನು ಮಾಡಿದರೂ ಪ್ರಯೋಜನವಾಗಲಿಲ್ಲ. ಎಲ್ಲ ಪ್ರಯತ್ನಗಳೂ ವಿಫಲವಾಗಿದ್ದವು. ಲಕ್ಷಾಂತರ ರೂಪಾಯಿಗಳ ಆಸ್ತಿಪಾಸ್ತಿ ನಷ್ಟವಾಗಿತ್ತು. ಕೊನೆಗೆ ಊರೇ ಖಾಲಿ ಮಾಡುವ ನಿರ್ಧಾರಕ್ಕೂ ಬಂದರು.

ಪೊಲೀಸರಿಗೆ ದೂರು ನೀಡಲಾಯಿತು. ಪೊಲೀಸರು ಈ ಊರಿನ ಬಗ್ಗೆ ನಿಗಾ ಇಟ್ಟರು. ಆದರೂ ಸುಳಿವು ಸಿಗಲಿಲ್ಲ. ಒಟ್ಟಿನಲ್ಲಿ ಆಡಳಿತಕ್ಕೂ, ಊರಿಗೂ ಬಹುದೊಡ್ಡ ತಲೆನೋವಾಗಿ ಪರಿಣಮಿಸಿತ್ತು.

ಅದೊಂದು ದಿನ ನನ್ನ ಗೆಳೆಯ ಪತ್ರಕರ್ತರೊಬ್ಬರು ಈ ವಿಷಯ ನನಗೆ ತಿಳಿಸಿ ಈ ಸಮಸ್ಯೆ ಪರಿಹರಿಸುವಂತೆ ಕೋರಿದರು. ನಾನು ಒಪ್ಪಿ ಅಲ್ಲಿಗೆ ಹೊರಟೆ.

ನಾನು ಆ ಗ್ರಾಮ ಪ್ರವೇಶಿಸುವಷ್ಟರಲ್ಲಿ ತಹಸೀಲ್ದಾರರು, ಇಂಟೆಲಿಜೆನ್ಸ್ ಪೊಲೀಸರು ಅಲ್ಲಿ ನೆರೆದಿದ್ದರು. ಊರ ಮಂದಿಗೂ ಈ ಸಮಸ್ಯೆಗೆ ಹೇಗೆ ಪರಿಹಾರ ಕಂಡುಹಿಡಿಯಬಹುದೆಂಬ ಕುತೂಹಲ.

ನಾನು ಊರನ್ನು ಆಮೂಲಾಗ್ರವಾಗಿ ಪರಿಶೀಲಿಸುತ್ತಾ ಅವರೊಂದಿಗೆ ಚರ್ಚೆ ನಡೆಸುತ್ತಿದ್ದಾಗಲೇ ನಮ್ಮ ಕಣ್ಣ ಮುಂದೆ ಮನೆಯೊಂದರಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿತು!

ಬೆಂಕಿ ಅಲ್ಲಿದ್ದ ತೆಂಗಿನಕಾಯಿ ರಾಶಿಯ ಮೇಲೆ ಹೊತ್ತಿಕೊಂಡಿತ್ತು. ಅದನ್ನು ನೋಡಿ ಎಲ್ಲರೂ ಅದನ್ನು ಆರಿಸುವ ಉಮೇದಿನಲ್ಲಿ ನೀರು ತೆಗೆದುಕೊಂಡು ಬಂದರು.

ನಾನು ಎಲ್ಲರನ್ನೂ ದೂರ ನಿಲ್ಲಿಸಿ, ಬೆಂಕಿಯನ್ನು ವಿವರವಾಗಿ ಪರಿಶೀಲಿಸಿದೆ. ಅಲ್ಲಿ ಸೀಮೆಎಣ್ಣೆ ವಾಸನೆ ಬರುತ್ತಿತ್ತು. ಅಲ್ಲದೆ ಬಟ್ಟೆಯೊಂದರ ಮೇಲಿಂದ ಬೆಂಕಿ ಹರಡಿತ್ತು. ಅಂದರೆ ಸೀಮೆಎಣ್ಣೆ ಬಟ್ಟೆಗೆ ಹಚ್ಚಿ ಬೆಂಕಿ ಸೃಷ್ಟಿಸಲಾಗಿದೆ ಎಂಬ ನಿರ್ಧಾರಕ್ಕೆ ಬಂದೆ. ಹಾಗೆಯೇ ಸುತ್ತಲೂ ಪರಿಶೀಲಿಸಿದಾಗ ಮನೆಯ ಹೊರಗಡೆ ಬೆಂಕಿ ಕಡ್ಡಿ ಹೊತ್ತಿಸಿ ಎಸೆದ ಬೆಂಕಿ ಕಡ್ಡಿಗಳಿದ್ದವು. ಅಲ್ಲಿಗೆ ಬೆಂಕಿಯ ಮೂಲ ಮನುಷ್ಯರೇ ಹೊರತು ಅತಿಮಾನವ ಶಕ್ತಿಗಳದ್ದಲ್ಲ ಎಂಬ ಖಚಿತ ತೀರ್ಮಾನಕ್ಕೆ ಬಂದೆ.

ಇನ್ನು ಆ ಬೆಂಕಿ ಹೊತ್ತಿರುವ ಕೆಲಸ ಮಾಡುತ್ತಿದ್ದವರು ಯಾರು ಎಂದು ಪತ್ತೆ ಮಾಡುವುದು ಮುಂದಿನ ಜವಾಬ್ದಾರಿ. ಗ್ರಾಮದ ಎಲ್ಲ ಜನರನ್ನೂ ಸಭೆ ಸೇರಿಸಿ ಪ್ರತಿಯೊಬ್ಬರನ್ನೂ ಮಾತನಾಡಿಸಿದೆ. ಯಾರ ಮೇಲೂ ಅನುಮಾನ ಬರಲಿಲ್ಲ. ಆದರೆ ಗ್ರಾಮಸ್ಥರಲ್ಲಿ ಕೊಂಚ ಹಿಂಜರಿಕೆ ಸೃಷ್ಟಿ ಮಾಡುವ ದೃಷ್ಟಿಯಿಂದ ಕೆಲವು ಪವಾಡಗಳ ಚಮತ್ಕಾರ ಪ್ರದರ್ಶಿಸಿದೆ. ವಶೀಕರಣ ವಿದ್ಯೆಯನ್ನು ಪ್ರದರ್ಶಿಸಿ ಅದರ ಮೂಲಕ ಸತ್ಯ ಬಯಲಿಗೆ ಎಳೆಯಬಹುದು ಎಂದು ಅವರಿಗೆ ಸೂಚ್ಯವಾಗಿ ವಿವರಿಸಿದೆ. ಆದರೂ ಭಾನಾಮತಿಯ ಹಿಂದಿನ ಶಕ್ತಿಗಳು ಯಾವುವು ಎಂದು ಗೊತ್ತಾಗಲಿಲ್ಲ.

ನಂತರ ಊರಿನಲ್ಲೆಲ್ಲ ಬೆಂಕಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸುತ್ತಾಡಿ ಬೆಂಕಿ ಹೊತ್ತಿರುವುದರಲ್ಲಿ ಏನಾದರೂ ಸಾಮ್ಯತೆ ಇದೆಯೇ ಎಂದು ಪರಿಶೀಲಿಸಿದೆ. ಅಂತಹ ಯಾವುದೇ ಸಂಗತಿ ಬಯಲಿಗೆ ಬರಲಿಲ್ಲ.

ಆದರೆ ಈ ಪ್ರಕ್ರಿಯೆಯಲ್ಲಿ ಒಬ್ಬ ಹುಡುಗಿ ನನ್ನನ್ನು ಎಲ್ಲ ಕಡೆಗೂ ಅನುಸರಿಸಿ ಬರುತ್ತಿರುವುದು ಗೊತ್ತಾಯಿತು.

ನಾನು ಆಕೆಯನ್ನು ಹಿಡಿದು ಪ್ರಶ್ನಿಸಿದೆ. ಭಾನಾಮತಿ ಕೈವಾಡ ಹೊರಗೆ ಬಂದಿತು. ನನ್ನನ್ನು ಅನುಸರಿಸಿ ಬರುತ್ತಿದ್ದ ಹುಡುಗಿಗೂ ಈ ಪ್ರಕರಣಗಳಿಗೂ ಸಂಬಂಧವಿತ್ತು. ಆ ಹುಡುಗಿ ಮತ್ತು ಯುವಕನೊಬ್ಬ ಸೇರಿ ಅವರ ಕುಟುಂಬದ ಸಮಸ್ಯೆಯನ್ನು ಇಡೀ ಊರಿನ ಸಮಸ್ಯೆಯನ್ನಾಗಿಸಿದ್ದರು. ಅವರ ಕುಟುಂಬದಲ್ಲಿ ಏನೋ ಒಂದು ಸಮಸ್ಯೆಯಿತ್ತು. ಅದನ್ನು ತಪ್ಪಿಸಲು ಅವರು ಭಾನಾಮತಿಯ ಆಟ ಹೂಡಿದ್ದರು.

ನಾನು ಆ ಯುವಕನನ್ನು ಹಿಡಿದು ಪ್ರತ್ಯೇಕವಾಗಿ ಪೊಲೀಸರ ಸಮ್ಮುಖದಲ್ಲಿ ಮಾತನಾಡಿದೆ. ಇನ್ನು ಮುಂದೆ ಭಾನಾಮತಿಯ ಆಟ ಹೂಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಆತನಿಗೆ ಎಚ್ಚರಿಕೆ ನೀಡಲಾಯಿತು.

ಊರ ಮಂದಿ ಮನುಷ್ಯರಿಂದಲೇ ಅದೂ ತಮ್ಮ ಊರಿನವರಿಂದಲೇ ಈ ಕೃತ್ಯ ನಡೆಯಿತು ಎಂದು ಹೇಳಿದರೆ ನಂಬಲೇ ಸಿದ್ಧರಿಲ್ಲ. ತೋಟ, ಮನೆ ನಷ್ಟ ಮಾಡಿಕೊಂಡವರು ಉಗ್ರಾವತಾರ ತಾಳಿದ್ದರು. ’ಅವರು ಯಾರೆಂದು ತೋರಿಸಿ ಸರ್. ಅವರನ್ನು ಇಂದು ನಾವು ಸುಮ್ಮನೆ ಬಿಡುವುದಿಲ್ಲ,’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು, ತಹಸೀಲ್ದಾರರು ಇದನ್ನು ಬಹಿರಂಗಗೊಳಿಸುವುದು ಒಳ್ಳೆಯದಲ್ಲ ಎಂದು ಯೋಚಿಸಿ ಅದರ ಹಿಂದಿನ ಕರ್ತೃವನ್ನು ಎಚ್ಚರಿಕೆ ನೀಡಿ ಬಿಟ್ಟುಕೊಟ್ಟೆವು.

ಈಗ ಊರು ಭಾನಾಮತಿಯ ಕಾಟವಿಲ್ಲದೆ ನೆಮ್ಮದಿಯಾಗಿದೆ.

ಹುಲಿಕಲ್ ನಟರಾಜ್   

ಪವಾಡ ಸಂಶೋಧನಾ ಕೇಂದ್ರ(ರಿ)
ದೊಡ್ಡಬಳ್ಳಾಪುರ-561203
ಮೊ:9481776616
miraclebuster_nataraj@yahoo.com