Tag Archives: ಭಾನಾಮತಿ

ಮದನಘಟ್ಟವನ್ನು ಕಾಡುತ್ತಿದ್ದ ಭಾನಾಮತಿ

ತುಮಕೂರು ಬಳಿ ಮದನಘಟ್ಟ ಎಂಬ ಗ್ರಾಮ. ಆ ಗ್ರಾಮದಲ್ಲಿ ಕೆಲ ತಿಂಗಳಿಂದ ಭಾನಾಮತಿ ಕಾಟ. ಒಂದು ಕಡೆ ಸಣ್ಣ ಬೆಂಕಿಯೊಂದಿಗೆ ಪ್ರಾರಂಭವಾದ ಈ ಸಮಸ್ಯೆ ಇಡೀ ಊರನ್ನೇ ಸಂಕಷ್ಟಕ್ಕೆ ಸಿಲುಕಿಸಿತು. ಇದ್ದಕ್ಕಿದ್ದಂತೆ ಎಲ್ಲೆಂದರಲ್ಲಿ ಬೆಂಕಿ ಕಾಣಿಸಿಕೊಂಡು ಅಮೂಲ್ಯ ಆಸ್ತಿಪಾಸ್ತಿ ಹಾಳು ಮಾಡತೊಡಗಿತು. ದಿನದ ಇಪ್ಪತ್ನಾಲ್ಕು ಗಂಟೆಗಳೂ ಕಾವಲು ಕಾಯಲು ಸಾದ್ಯವೇ? ಅದೂ ಭಾನಾಮತಿ ಎಂಬ ಅತಿಮಾನವ ಶಕ್ತಿಯ ಕಾಟ ತಡೆಯಲು ಸಾಧ್ಯವೇ?

ಒಂದು ದಿನ ಒಂದು ಮನೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡಿತು. ಮತ್ತೊಂದು ದಿನ ಒಬ್ಬರ ತೋಟದಲ್ಲಿದ್ದ ತೆಂಗಿನ ಮರಗಳನ್ನು ಸುಟ್ಟು ಹಾಕಿತು. ಮತ್ತೊಂದು ದಿನ ಇನ್ನೊಬ್ಬರ ಮನೆಯಲ್ಲಿನ ಬಟ್ಟೆಗಳನ್ನು ಸುಟ್ಟು ಹಾಕಿತು. ಯಾವಾಗ ಎಲ್ಲಿ ಬೆಂಕಿ ದಿಢೀರ್ ಹೊತ್ತಿಕೊಳ್ಳುತ್ತದೋ ಊರಿನ ಒಬ್ಬರಿಗೂ ಸುಳಿವು ಸಿಗುತ್ತಿರಲಿಲ್ಲ. ಇದ್ದಕ್ಕಿದ್ದಂತೆ ಹೊತ್ತಿಕೊಳ್ಳುವ ಬೆಂಕಿಗೆ ಆಸ್ತಿಪಾಸ್ತಿ ನಷ್ಟವಾಗಿ ಇಡೀ ಊರು ಸಂಕಷ್ಟದಲ್ಲಿತ್ತು. ಊರ ದೇವರು ಮುನಿದಿರಬಹುದು ಎಂದು ಊರ ದೇವರ ಆಚರಣೆ ಮಾಡಿದರು. ಆದರೆ ಸಮಸ್ಯೆ ಪರಿಹಾರವಾಗಲಿಲ್ಲ. ಇತರೆ ದೇವರ ಪೂಜೆ ಪುನಸ್ಕಾರ, ಶಾಂತಿ ಇತ್ಯಾದಿ ಆಚರಣೆಗಳನ್ನು ಮಾಡಿದರೂ ಪ್ರಯೋಜನವಾಗಲಿಲ್ಲ. ಎಲ್ಲ ಪ್ರಯತ್ನಗಳೂ ವಿಫಲವಾಗಿದ್ದವು. ಲಕ್ಷಾಂತರ ರೂಪಾಯಿಗಳ ಆಸ್ತಿಪಾಸ್ತಿ ನಷ್ಟವಾಗಿತ್ತು. ಕೊನೆಗೆ ಊರೇ ಖಾಲಿ ಮಾಡುವ ನಿರ್ಧಾರಕ್ಕೂ ಬಂದರು.

ಪೊಲೀಸರಿಗೆ ದೂರು ನೀಡಲಾಯಿತು. ಪೊಲೀಸರು ಈ ಊರಿನ ಬಗ್ಗೆ ನಿಗಾ ಇಟ್ಟರು. ಆದರೂ ಸುಳಿವು ಸಿಗಲಿಲ್ಲ. ಒಟ್ಟಿನಲ್ಲಿ ಆಡಳಿತಕ್ಕೂ, ಊರಿಗೂ ಬಹುದೊಡ್ಡ ತಲೆನೋವಾಗಿ ಪರಿಣಮಿಸಿತ್ತು.

ಅದೊಂದು ದಿನ ನನ್ನ ಗೆಳೆಯ ಪತ್ರಕರ್ತರೊಬ್ಬರು ಈ ವಿಷಯ ನನಗೆ ತಿಳಿಸಿ ಈ ಸಮಸ್ಯೆ ಪರಿಹರಿಸುವಂತೆ ಕೋರಿದರು. ನಾನು ಒಪ್ಪಿ ಅಲ್ಲಿಗೆ ಹೊರಟೆ.

ನಾನು ಆ ಗ್ರಾಮ ಪ್ರವೇಶಿಸುವಷ್ಟರಲ್ಲಿ ತಹಸೀಲ್ದಾರರು, ಇಂಟೆಲಿಜೆನ್ಸ್ ಪೊಲೀಸರು ಅಲ್ಲಿ ನೆರೆದಿದ್ದರು. ಊರ ಮಂದಿಗೂ ಈ ಸಮಸ್ಯೆಗೆ ಹೇಗೆ ಪರಿಹಾರ ಕಂಡುಹಿಡಿಯಬಹುದೆಂಬ ಕುತೂಹಲ.

ನಾನು ಊರನ್ನು ಆಮೂಲಾಗ್ರವಾಗಿ ಪರಿಶೀಲಿಸುತ್ತಾ ಅವರೊಂದಿಗೆ ಚರ್ಚೆ ನಡೆಸುತ್ತಿದ್ದಾಗಲೇ ನಮ್ಮ ಕಣ್ಣ ಮುಂದೆ ಮನೆಯೊಂದರಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿತು!

ಬೆಂಕಿ ಅಲ್ಲಿದ್ದ ತೆಂಗಿನಕಾಯಿ ರಾಶಿಯ ಮೇಲೆ ಹೊತ್ತಿಕೊಂಡಿತ್ತು. ಅದನ್ನು ನೋಡಿ ಎಲ್ಲರೂ ಅದನ್ನು ಆರಿಸುವ ಉಮೇದಿನಲ್ಲಿ ನೀರು ತೆಗೆದುಕೊಂಡು ಬಂದರು.

ನಾನು ಎಲ್ಲರನ್ನೂ ದೂರ ನಿಲ್ಲಿಸಿ, ಬೆಂಕಿಯನ್ನು ವಿವರವಾಗಿ ಪರಿಶೀಲಿಸಿದೆ. ಅಲ್ಲಿ ಸೀಮೆಎಣ್ಣೆ ವಾಸನೆ ಬರುತ್ತಿತ್ತು. ಅಲ್ಲದೆ ಬಟ್ಟೆಯೊಂದರ ಮೇಲಿಂದ ಬೆಂಕಿ ಹರಡಿತ್ತು. ಅಂದರೆ ಸೀಮೆಎಣ್ಣೆ ಬಟ್ಟೆಗೆ ಹಚ್ಚಿ ಬೆಂಕಿ ಸೃಷ್ಟಿಸಲಾಗಿದೆ ಎಂಬ ನಿರ್ಧಾರಕ್ಕೆ ಬಂದೆ. ಹಾಗೆಯೇ ಸುತ್ತಲೂ ಪರಿಶೀಲಿಸಿದಾಗ ಮನೆಯ ಹೊರಗಡೆ ಬೆಂಕಿ ಕಡ್ಡಿ ಹೊತ್ತಿಸಿ ಎಸೆದ ಬೆಂಕಿ ಕಡ್ಡಿಗಳಿದ್ದವು. ಅಲ್ಲಿಗೆ ಬೆಂಕಿಯ ಮೂಲ ಮನುಷ್ಯರೇ ಹೊರತು ಅತಿಮಾನವ ಶಕ್ತಿಗಳದ್ದಲ್ಲ ಎಂಬ ಖಚಿತ ತೀರ್ಮಾನಕ್ಕೆ ಬಂದೆ.

ಇನ್ನು ಆ ಬೆಂಕಿ ಹೊತ್ತಿರುವ ಕೆಲಸ ಮಾಡುತ್ತಿದ್ದವರು ಯಾರು ಎಂದು ಪತ್ತೆ ಮಾಡುವುದು ಮುಂದಿನ ಜವಾಬ್ದಾರಿ. ಗ್ರಾಮದ ಎಲ್ಲ ಜನರನ್ನೂ ಸಭೆ ಸೇರಿಸಿ ಪ್ರತಿಯೊಬ್ಬರನ್ನೂ ಮಾತನಾಡಿಸಿದೆ. ಯಾರ ಮೇಲೂ ಅನುಮಾನ ಬರಲಿಲ್ಲ. ಆದರೆ ಗ್ರಾಮಸ್ಥರಲ್ಲಿ ಕೊಂಚ ಹಿಂಜರಿಕೆ ಸೃಷ್ಟಿ ಮಾಡುವ ದೃಷ್ಟಿಯಿಂದ ಕೆಲವು ಪವಾಡಗಳ ಚಮತ್ಕಾರ ಪ್ರದರ್ಶಿಸಿದೆ. ವಶೀಕರಣ ವಿದ್ಯೆಯನ್ನು ಪ್ರದರ್ಶಿಸಿ ಅದರ ಮೂಲಕ ಸತ್ಯ ಬಯಲಿಗೆ ಎಳೆಯಬಹುದು ಎಂದು ಅವರಿಗೆ ಸೂಚ್ಯವಾಗಿ ವಿವರಿಸಿದೆ. ಆದರೂ ಭಾನಾಮತಿಯ ಹಿಂದಿನ ಶಕ್ತಿಗಳು ಯಾವುವು ಎಂದು ಗೊತ್ತಾಗಲಿಲ್ಲ.

ನಂತರ ಊರಿನಲ್ಲೆಲ್ಲ ಬೆಂಕಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸುತ್ತಾಡಿ ಬೆಂಕಿ ಹೊತ್ತಿರುವುದರಲ್ಲಿ ಏನಾದರೂ ಸಾಮ್ಯತೆ ಇದೆಯೇ ಎಂದು ಪರಿಶೀಲಿಸಿದೆ. ಅಂತಹ ಯಾವುದೇ ಸಂಗತಿ ಬಯಲಿಗೆ ಬರಲಿಲ್ಲ.

ಆದರೆ ಈ ಪ್ರಕ್ರಿಯೆಯಲ್ಲಿ ಒಬ್ಬ ಹುಡುಗಿ ನನ್ನನ್ನು ಎಲ್ಲ ಕಡೆಗೂ ಅನುಸರಿಸಿ ಬರುತ್ತಿರುವುದು ಗೊತ್ತಾಯಿತು.

ನಾನು ಆಕೆಯನ್ನು ಹಿಡಿದು ಪ್ರಶ್ನಿಸಿದೆ. ಭಾನಾಮತಿ ಕೈವಾಡ ಹೊರಗೆ ಬಂದಿತು. ನನ್ನನ್ನು ಅನುಸರಿಸಿ ಬರುತ್ತಿದ್ದ ಹುಡುಗಿಗೂ ಈ ಪ್ರಕರಣಗಳಿಗೂ ಸಂಬಂಧವಿತ್ತು. ಆ ಹುಡುಗಿ ಮತ್ತು ಯುವಕನೊಬ್ಬ ಸೇರಿ ಅವರ ಕುಟುಂಬದ ಸಮಸ್ಯೆಯನ್ನು ಇಡೀ ಊರಿನ ಸಮಸ್ಯೆಯನ್ನಾಗಿಸಿದ್ದರು. ಅವರ ಕುಟುಂಬದಲ್ಲಿ ಏನೋ ಒಂದು ಸಮಸ್ಯೆಯಿತ್ತು. ಅದನ್ನು ತಪ್ಪಿಸಲು ಅವರು ಭಾನಾಮತಿಯ ಆಟ ಹೂಡಿದ್ದರು.

ನಾನು ಆ ಯುವಕನನ್ನು ಹಿಡಿದು ಪ್ರತ್ಯೇಕವಾಗಿ ಪೊಲೀಸರ ಸಮ್ಮುಖದಲ್ಲಿ ಮಾತನಾಡಿದೆ. ಇನ್ನು ಮುಂದೆ ಭಾನಾಮತಿಯ ಆಟ ಹೂಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಆತನಿಗೆ ಎಚ್ಚರಿಕೆ ನೀಡಲಾಯಿತು.

ಊರ ಮಂದಿ ಮನುಷ್ಯರಿಂದಲೇ ಅದೂ ತಮ್ಮ ಊರಿನವರಿಂದಲೇ ಈ ಕೃತ್ಯ ನಡೆಯಿತು ಎಂದು ಹೇಳಿದರೆ ನಂಬಲೇ ಸಿದ್ಧರಿಲ್ಲ. ತೋಟ, ಮನೆ ನಷ್ಟ ಮಾಡಿಕೊಂಡವರು ಉಗ್ರಾವತಾರ ತಾಳಿದ್ದರು. ’ಅವರು ಯಾರೆಂದು ತೋರಿಸಿ ಸರ್. ಅವರನ್ನು ಇಂದು ನಾವು ಸುಮ್ಮನೆ ಬಿಡುವುದಿಲ್ಲ,’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು, ತಹಸೀಲ್ದಾರರು ಇದನ್ನು ಬಹಿರಂಗಗೊಳಿಸುವುದು ಒಳ್ಳೆಯದಲ್ಲ ಎಂದು ಯೋಚಿಸಿ ಅದರ ಹಿಂದಿನ ಕರ್ತೃವನ್ನು ಎಚ್ಚರಿಕೆ ನೀಡಿ ಬಿಟ್ಟುಕೊಟ್ಟೆವು.

ಈಗ ಊರು ಭಾನಾಮತಿಯ ಕಾಟವಿಲ್ಲದೆ ನೆಮ್ಮದಿಯಾಗಿದೆ.

ಹುಲಿಕಲ್ ನಟರಾಜ್   

ಪವಾಡ ಸಂಶೋಧನಾ ಕೇಂದ್ರ(ರಿ)
ದೊಡ್ಡಬಳ್ಳಾಪುರ-561203
ಮೊ:9481776616
miraclebuster_nataraj@yahoo.com

ಊಟ ಮಾಡಿದರೆ ಕೈಯೆಲ್ಲ ಹಸಿರು!

– ಹುಲಿಕಲ್ ನಟರಾಜ್

ಕೊಪ್ಪಳದಲ್ಲಿ ನಾನು ಒಂದು ಕಾರ್ಯಕ್ರಮದಲ್ಲಿದ್ದೆ. ಪವಾಡ ಬಯಲು ಕಾರ್ಯಕ್ರಮದ ನಂತರ ಕೆಲವರು ಅವರ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಅದರಲ್ಲಿ ಒಬ್ಬರು ಬಂದು,`ಸರ್ ನಮ್ಮೂರಿನಲ್ಲಿ ಒಂದು ಹುಡುಗನಿಗೆ ಸುಮಾರು ಎರಡು ವರ್ಷದಿಂದ ಭಾನಾಮತಿ ಹಿಡಿದಿದೆ. ಅವನು ಊಟ ಮಾಡಿ ಕೈ ತೊಳೆದರೆ ಸಾಕು. ಕ್ಯೆಯಲ್ಲ ಹಸಿರಾಗುತ್ತದೆ. ಇದು 7ನೇ ಕ್ಲಾಸ್ನಿಂದ ಶುರುವಾಗಿ 9ನೇಕ್ಲಾಸ್ಗೆ ಬಂದರೂ ಸರಿಯಾಗಿಲ್ಲ. ನೀವೇನಾದರು ಮಾಡಿ. ಎಂದರು.

ನಾವು ಆ ಹುಡುಗನಿರುವ ಹಳ್ಳಿಗೆ ತಲುಪಿದೆವು. ಆ ಹುಡುಗ ನೋಡೋಕೆ ಒಂದು ರೀತಿಯಲ್ಲಿ ಅಮಾಯಕನಂತಿದ್ದ. ಓದೋದರಲ್ಲಿ ನಿಶ್ಯಕ್ತಿಯಾಗಿದ್ದ. ತಂದೆ ತಾಯಿ ಅಮಾಯಕರಂತೆ ಕಂಡು ಬಂದರು. ನಾನು ಅಲ್ಲೇ ಉ
ಳಿದೆ.

`ನೀನು ಊಟ ಮಾಡು ನಾವೂ ಊಟ ಮಾಡ್ತೀವಿ ನೋಡೋಣ ಏನಾಗುತ್ತೆ ಎಂದೆ. ಅಂದು ರಾತ್ರಿ ಮಂದ ಬೆಳಕು. ನಾವೆಲ್ಲ ಊಟ ಮಾಡಿ ಕೈ ತೊಳೆದೆವು. ಅವನೂ ತೊಳೆದ. ಅವನು ಕೈ ತೊಳೆದಂತೆ ನೀರೆಲ್ಲ ಹಸಿರಾಗಿತ್ತು. ನನಗೆ ನೋಡುತ್ತಿದ್ದಂತೆ ದಿಗ್ಭ್ರಮೆಯಾಯಿತು.

ನಾನು ಅವರ ತಂದೆಯವರ ಹತ್ತಿರ ಯಾವಾಗ ಈ ರೀತಿ ಆಗುತ್ತೆ ಎಂದು ಕೇಳಿದೆ. ದಿನಕ್ಕೆ ಎರಡು ಬಾರಿ ಬೆಳಿಗ್ಗೆ ಮತ್ತು ರಾತ್ರಿ ಆಗುತ್ತದೆ. ಒಂದೊಂದು ಸಲ ಸಂಜೆಯೂ ಆಗುತ್ತದೆ. ನಾವು ಎಲ್ಲ ಕಡೆ ತೋರಿಸಿದೆವು. ಏನೂ ಪ್ರಯೋಜನವಾಗಿಲ್ಲ. ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದೆವು. ಸ್ವಲ್ಪ ಹೊತ್ತು ಚೆನ್ನಾಗಿರ್ತಾನೆ. ಆಮೇಲೆ ಅದೇ ಕಥೆ ಎಂದರು.

ಇದರ ರಹಸ್ಯ ಬಯಲು ಮಾಡಬೇಕು ಎಂದು ದೃಢ ನಿರ್ಧಾರ ಮಾಡಿ ನಾನು ಅವನೊಂದಿಗೆ ಮತ್ತೆ ಎರಡು ಬಾರಿ ತಿಂಡಿ ತಿಂದೆ. ಏನೂ ಆಗಲಿಲ್ಲ. ಮಧ್ಯಾಹ್ನ ಊಟವಾದ ನಂತರ ಕೈ ತೊಳೆದರೆ ಅದೇ ಹಸಿರು ನೀರು!

ನನಗೆ ಏನೋ ತೋಚಲಿಲ್ಲ. ಇನ್ನೊಮ್ಮೆ ಬರುತ್ತೇನೆ ಎಂದು ಹೇಳಿ ಹೊರಡಲು ಎದ್ದೆ. ಆಗ `ಸರ್ ದಯವಿಟ್ಟು ಹಾಗೆ ಹೇಳಬೇಡಿ. ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಿರಿ. ಅದಕ್ಕೆ ನೀವು ಏನು ಹೇಳಿದರೂ ನಾವು ತಯಾರು ಎಂದು ಆ ಹುಡುಗನ ತಂದೆ ಕೈ ಹಿಡಿದುಕೊಂಡರು. ಆ ಹುಡುಗನನ್ನು ನಮ್ಮ ಊರಿಗೆ ಕಳುಹಿಸಿ ಎಂದು ಹೇಳಿ ಮರಳಿದೆ.

ಒಂದು ತಿಂಗಳ ನಂತರ ಆ ಹುಡುಗನನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿದ್ದರು. ನಮ್ಮ ಮನೆಯಲ್ಲಿ ಒಂದು ತಿಂಗಳು ಇದ್ದ. ಆಗ ಅವನಿಗೆ ಏನು ಆಗಲಿಲ್ಲ. ಅವನು ಊಟ ಮಾಡಿದಾಗ ಕೈಯಲ್ಲಿ ಎಂತಹ ಹಸಿರು ಬಣ್ಣವೂ ಬರಲಿಲ್ಲ. ಇದರಿಂದ ನನಗೆ ಅನುಮಾನ ಬಂದು ಆ ಹುಡುಗನನ್ನು ವಿಚಾರಿಸಿದೆ.

`ಯಾಕಪ್ಪ ಊರಲ್ಲಿ ಇದ್ದಾಗ ಮಾತ್ರ ನೀನು ಕೈ ತೊಳೆದಾಗ ಹಸಿರು ನೀರು ಬರ್ತಿತ್ತು. ಇಲ್ಲಿ ಅಂತಹದ್ದು ಏನು ಇಲ್ಲ ಎಂದು ಕೇಳಿದ್ದಕ್ಕೆ ಆತ ಏನೂ ಉತ್ತರ ಕೊಡಲಿಲ್ಲ.

ಅವನನ್ನು ಮತ್ತೆ ಊರಿಗೆ ಕರೆದುಕೊಂಡು ಹೋದೆ. ಮತ್ತೆ ಅಲ್ಲಿ ಒಟ್ಟಿಗೆ ಊಟಮಾಡಿದೆವು. ಮತ್ತೆ ಅವನ ಕೈ ಹಸಿರಾಗಿತ್ತು. ನನಗೆ ಪುನಃ ಶಾಕ್ ಆಯಿತು. ಆ ನೀರನ್ನು ಮೂಸಿದಾಗ ಇಂಕಿನ ವಾಸನೆ ಬಡಿಯಿತು. ಇಂಕ್ ಮೂಲ ಹುಡುಕುತ್ತಾ ಹೋದೆ. ಅವರ ಮನೆಯಲ್ಲಿ ಯಾರೂ ಇಂಕ್ ಬಳಸುತ್ತಿರಲಿಲ್ಲ.

ಇದು ಹುಡುಗನ ಕೃತ್ಯವೇ ಎಂದು ಸ್ಪಷ್ಟವಾಯಿತು. `ನನಗೆ ಎಲ್ಲ ಗೊತ್ತಾಯಿತು. ನಿನಗೆ ಈ ಹಸಿರು ಇಂಕ್ ಪೆನ್ನು ಹೇಗೆ ಬಂತು ಹೇಳು? ಎಂದೆ. ಅವನು ಉತ್ತರಿಸಲಿಲ್ಲ. ಅವನ ಮೇಲೆ ಜೋರು ಮಾಡಿದ ನಂತರ ಹೇಳಿದ.

ಅವನು ಬಿಚ್ಚಿಟ್ಟ ಕಥೆ ಇದು :
`ನಮ್ಮ ಮನೆಯಲ್ಲಿ ಅಪ್ಪ ಕೆಲಸ ಮಾಡು ಅಂತಾರೆ. ಕಸ ಗುಡಿಸು ಅಂತ ಬೈತಾರೆ. ಸಗಣಿ ಬಾಚು ಅಂತಾರೆ. ನನಗೆ ಕೆಲಸ ಮಾಡಕ್ಕೆ ಇಷ್ಟ ಇರಲಿಲ್ಲ. ಒಂದು ದಿವಸ ಸುಮ್ಮನೆ ಇಂಕನ್ನು ಕ್ಯೆಯಲ್ಲಿ ಹಾಕಿಕೊಂಡಿದ್ದೆ. ಆಗ ನಮ್ಮ ತಂದೆ ತಾಯಿ ಭಯ ಪಟ್ಟುಕೊಂಡು ನನ್ನನ್ನ ದೇವಸ್ಥಾನಕ್ಕೆ ಕರೆದು ಕೊಂಡು ಹೋಗಿದ್ದರು. ಆಗ ಅವರು ನನ್ನಿಂದ ಯಾವ ಕೆಲಸವನ್ನೂ ಮಾಡಿಸಲಿಲ್ಲ. ಇದನ್ನೇ ಹೀಗೆ ಮಾಡಿದರೆ ನನಗೆ ಯಾವ ಕೆಲಸ ಮಾಡಿಸೋಲ್ಲ ಅಂದುಕೊಂಡು ಮುಂದುವರೆಸಿದೆ

`ಯಾರಿಗೂ ಗೊತ್ತಿಲ್ಲದಂತೆ ಇಂಕ್ ಹಾಕಿಕೊಳ್ಳುತ್ತಿದ್ದೆ ಹೇಗೆ? ಎಂದೆ.

ನಾನು ಕುಳಿತುಕೊಳ್ಳುವ ಜಾಗದಲ್ಲಿ ನನ್ನ ಹಿಂದೆ ರಾಗಿ ಮೂಟೆ ಇತ್ತು. ಅದರ ಸಂದಿಯಲ್ಲಿ ಇಟ್ಟುಕೊಳ್ಳುತ್ತಿದ್ದೆ. ಊಟ ಮಾಡಿದ ತಕ್ಷಣ ಹತ್ತಿಯಲ್ಲಿ ಹಸಿರು ಇಂಕನ್ನು ಹಾಕಿಕೊಳ್ತಿದ್ದೆ ಎಂದ.
ಇನ್ನೆಂದೂ ಹೀಗೆ ಮಾಡದಂತೆ ಎಚ್ಚರಿಕೆ ನೀಡಿ ಆ ಹುಡುಗನ ತಂದೆ ತಾಯಿಯರಿಗೆ ಸಮಸ್ಯೆ ನಿವಾರಣೆಯಾಗಿದೆ ಎಂಬ ಭರವಸೆ ನೀಡಿದೆ.

ಮಕ್ಕಳಲ್ಲಿರುವ ಸೋಮಾರಿತನವೂ ಇಂತಹ ಸಮಸ್ಯೆಯನ್ನು ಹುಟ್ಟುಹಾಕಬಲ್ಲುದು ಎಂದು ಅರಿವಾಯಿತು. ಆದ್ದರಿಂದ ಮಕ್ಕಳಲ್ಲಿ ಕಷ್ಟ ಸಹಿಷ್ಣುತೆ, ಶ್ರಮಜೀವನದ ಪಾಠಗಳನ್ನು ನಾವು ಕಲಿಸಬೇಕು.

ಗೊತ್ತಿಲ್ಲದ ಶಿಕ್ಷಣ ಕೊನೆಗೆ ಪರದಾಟ…

ಕೆಲವು ಸಂಗತಿಗಳು ನಮ್ಮ ಸುತ್ತಲೇ ನಡೆದರೂ ಅವುಗಳ ಮೇಲೆ ನಮಗೆ ನಿಯಂತ್ರಣವಿರುವುದಿಲ್ಲ. ಆ ಹುಡುಗಿಯ ಹೆಸರು ಪುಷ್ಪ. ಹುಡುಗಿ ಹತ್ತನೆಯ ತರಗತಿ ಮುಗಿಸಿದ ನಂತರ ಕಾಲೇಜಿಗೆ ಸೇರಿಸದೆ ಆಕೆಗೆ ಮದುವೆ ಮಾಡಲು ನಿರ್ಧರಿಸಿದರು.

ಆಕೆಯ ಪೋಷಕರು ಹಳ್ಳಿಯಲ್ಲಿದ್ದರೂ ನನಗೆ ಗೊತ್ತಿದ್ದರಿಂದ ನಾನು ಅವರಿಗೆ ಕಿರಿಯ ವಯಸ್ಸಿನಲ್ಲಿ ಮದುವೆ ಮಾಡದಂತೆ ಎಚ್ಚರಿಸಿದೆ. ಆದರೆ ಅವರು ನನ್ನ ಎಚ್ಚರಿಕೆಯನ್ನೂ ಧಿಕ್ಕರಿಸಿ ಆಕೆಯನ್ನು ವಿವಾಹ ಬಂಧನಕ್ಕೆ ಒಳಪಡಿಸಿದರು.

ಕೆಲವು ದಿನಗಳ ನಂತರ ಆ ಹುಡುಗಿಯನ್ನು ನೋಡಲು ಹೊರಟೆ. ಹುಡುಗಿಯನ್ನು ಒಂದು ದೇವಸ್ಥಾನದಲ್ಲಿ ಇರಿಸಿದ್ದರು. ಕುಟುಂಬದ ಎಲ್ಲರ ಮುಖದಲ್ಲೂ ಒಂದು ಬಗೆಯ ಭಯವಿತ್ತು. ಆ ಹುಡುಗಿಯನ್ನು ಮಾತನಾಡಿಸಲು ಪ್ರಯತ್ನಿಸಿದೆ. ಹುಡುಗಿ ತುಂಬಾ ಸುಸ್ತಾದಂತೆ ಕಂಡುಬಂದಳು. ಆಕೆಯ ಪೋಷಕರು, `ರಾತ್ರಿ ಆದರೆ ಸಾಕು. ಭಯಪಡುತ್ತಾಳೆ. ದೀಪ ಆರಿಸಿದರೆ ಕಿರುಚಾಡುತ್ತಾಳೆ. ಏನೇನೋ ವಿಚಿತ್ರವಾಗಿ ಆಡುತ್ತಿದ್ದಾಳೆ,’ ಎಂದರು.

ಆರೋಗ್ಯಪೂರ್ಣವಾಗಿ ನಳನಳಿಸುತ್ತಿದ್ದ ಹುಡುಗಿ ಹೀಗಾಗಿದ್ದು ನೋಡಿ ನನಗೆ ಬಹಳ ದುಃಖವಾಯಿತು.

ಆ ಹುಡುಗಿಯ ಗಂಡನನ್ನು ಮಾತನಾಡಿಸಿದೆ. “ಯಾಕಪ್ಪಾ ನಿನ್ನ ಹೆಂಡತಿ ಭಯಪಡುತ್ತಾಳಂತೆ. ಅವಳಿಗೇನಾದರೂ ಹೊಡೆಯೋದು, ಬಡಿಯೋದು ಮಾಡಿದೆಯೋ ಹೇಗೆ?” ಎಂದೆ.

ಅದಕ್ಕೆ ಆತ, “ಇಲ್ಲ ಸರ್, ಅವಳೆಂದರೆ ನನಗೆ ಇಷ್ಟ. ನನ್ನ, ಅವಳ ಮೊದಲ ರಾತ್ರಿಯಾದ ನಂತರ ಹೀಗೆ ಭಯಪಡಲು ಪ್ರಾರಂಭಿಸಿದ್ದಾಳೆ. ಮೊದ ಮೊದಲು ಸುಮ್ಮನಿದ್ದಳು. ನಂತರ ಹೆದರೋಕೆ ಪ್ರಾರಂಭಿಸಿದಳು. ಹೀಗಾಗಿ ಅವಳ ತಂದೆ ತಾಯಿ ಮನೆಗೆ ಕರೆದುಕೊಂಡು ಹೋದರು,” ಎಂದ.

ನನಗೆ ಸಮಸ್ಯೆ ಸ್ಪಷ್ಟವಾಯಿತು. ಇದು ಲೈಂಗಿಕತೆಯ ತಿಳಿವಳಿಕೆ ಇಲ್ಲದಿದ್ದರಿಂದ ಉಂಟಾದ ಸಮಸ್ಯೆ.

ಆ ಹುಡುಗಿಯನ್ನು ಸ್ತ್ರೀವೈದ್ಯರಲ್ಲಿಗೆ ಕರೆದೊಯ್ದು ಲೈಂಗಿಕತೆಯ ಪೂರ್ಣ ಮಾಹಿತಿಯನ್ನು ವೈದ್ಯರ ಮೂಲಕ ಕೊಟ್ಟ ನಂತರ ಅವರು ಸುಖ ಸಂಸಾರ ನಡೆಸುತ್ತಿದ್ದಾರೆ.

ಲೈಂಗಿಕತೆಯ ಶಿಕ್ಷಣ ನೀಡಬೇಕು ಎನ್ನುವ ಬಗ್ಗೆ ಆಗಾಗ್ಗೆ ಚರ್ಚೆಯಾಗುತ್ತಿರುತ್ತದೆ. ಪುರುಷರಿಗೂ, ಮಹಿಳೆಯರಿಗೂ ವಿವಾಹದ ನಂತರ ತಮ್ಮ ಜವಾಬ್ದಾರಿಗಳೇನು ಎಂಬ ತಿಳಿವಳಿಕೆ ಇಲ್ಲದಿದ್ದಲ್ಲಿ ಸಂಕಷ್ಟ ಖಂಡಿತ.

ಹುಲಿಕಲ್ ನಟರಾಜ್
ಪವಾಡ ಸಂಶೋಧನಾ ಕೇಂದ್ರ(ರಿ)
ದೊಡ್ಡಬಳ್ಳಾಪುರ-561203
ಮೊ:9481776616
miraclebuster_nataraj@yahoo.com

ಅಜ್ಞಾನ ತಂದಿತ್ತ ಸಂಕಷ್ಟ!

ಚಿತ್ರದುರ್ಗದಲ್ಲಿರುವ ಮುರುಘಾ ಮಠದಲ್ಲಿ “ಶರಣ ಸಂಸ್ಕೃತಿ” ವೈಚಾರಿಕ ಪ್ರಜ್ಞೆಯ ಕಾರ್ಯಕ್ರಮ ನಡೆಯುತ್ತದೆ. ಅಲ್ಲಿ ಪ್ರತಿ ವರ್ಷ ಸಂಜೆ ಈ ಕಾರ್ಯಕ್ರಮ ಶುರುವಾಗಿ ಮಧ್ಯರಾತ್ರಿವರೆಗೂ ನಡೆಯುತ್ತಿತ್ತು. ಆ ದಿನ ಈ ಕಾರ್ಯಕ್ರಮಕ್ಕೆ ಸಾಕಷ್ಟು ಜನ ಆಗಮಿಸಿದ್ದರು. ನನ್ನ ಭಾಷಣವನ್ನು ಬಹಳ ಮಂದಿ ಮೆಚ್ಚಿಕೊಂಡರು. ನನ್ನ ಕೋಣೆಯ ಪಕ್ಕದಲ್ಲೇ ಇದ್ದವರು ತಮ್ಮನ್ನು ಪರಿಚಯಿಸಿಕೊಂಡರು. ನಂತರ ಅವರನ್ನು ಕಾಡುತ್ತಿದ್ದ ಸಮಸ್ಯೆಯೊಂದನ್ನು ಬಿಚ್ಚಿಟ್ಟರು.

“ಸರ್, ನಮ್ಮ ಮಗನಿಗೆ ಸುಮಾರು ಐದು ತಿಂಗಳಿಂದ ಭಾನಾಮತಿ ಹಿಡಿದಿದೆ. ಇದರಿಂದ ನಾವು ಇಲ್ಲಿ ಒಂದು ತಿಂಗಳಿಂದ ಉಳಿದುಕೊಂಡಿದ್ದೀವಿ,” ಎಂದರು. ಭಾನಾಮತಿ ಎಂಬ ಸಮಸ್ಯೆಯಿಂದ ಬಳಲುತ್ತಿರುವವರು ನಾನು ಕಂಡಂತೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪುರುಷರಲ್ಲಿ ಕಡಿಮೆಯೇ. ಆದರೆ ಇಲ್ಲಿ ಮೂವತ್ತು ವರ್ಷದ ಆರೋಗ್ಯಪೂರ್ಣ ಯುವಕ ಭಾನಾಮತಿಯ ಸಂಕಷ್ಟಕ್ಕೆ ಸಿಲುಕಿಕೊಂಡಿರುವುದು ನನಗೆ ಬಹಳ ಬೇಸರ ಮೂಡಿಸಿತು. ಹಾಗೆಯೇ ಅವನ ವಿವರಗಳನ್ನು ಕೇಳುತ್ತಾ ಹೊರಟಂತೆ ಇದೊಂದು ವಿಸ್ಮಯಕಾರಕ ಘಟನೆ ಎನ್ನಿಸಿತು.

ದಷ್ಟಪುಷ್ಟವಾದ, ಬಲಿಷ್ಟ ಮೈಕಟ್ಟು ಹೊಂದಿದ ಈ ಯುವಕ ವಿದ್ಯಾವಂತ ಕೂಡ. ಆರು ತಿಂಗಳ ಹಿಂದೆ ಯುವತಿಯೊಡನೆ ವಿವಾಹವೂ ಆಯಿತು. ಮದುವೆಯಾಗುವವರೆಗೂ ಎಲ್ಲವೂ ಚೆನ್ನಾಗಿತ್ತು. ಮದುವೆಯಾಗಿ ಮೊದಲ ರಾತ್ರಿ ಪ್ರಾರಂಭವಾಯಿತು ನೋಡಿ ಅಲ್ಲಿಂದ ಹುಚ್ಚನಂತೆ ಆಡಲಾರಂಭಿಸಿದ. ಹೆಂಡತಿಯ ಮುಖ ಕಂಡರೆ ದೂರ ಓಡುತ್ತಿದ್ದ. ಆಕೆಯನ್ನು ನೋಡಿದರೆ ಅವನ ಮೈ ಬೆವರಿ ತೊಪ್ಪೆಯಾಗುತ್ತಿತ್ತು. ಇದನ್ನು ನೋಡಿ ಆಕೆ ತನ್ನ ತಂದೆ ತಾಯಿಗೆ ತಿಳಿಸಿದಳು. ಅವರು ಮೊದಲಿಗೆ ಅರಿಶಿನದ ಮೈನಲ್ಲಿ ಹೊರಗಡೆ ಓಡಾಡಿ ಗಾಳಿ ಮೆಟ್ಟಿಕೊಂಡಿರಬಹುದು ಎಂದುಕೊಂಡರು. ಸರಿಯಾಗುತ್ತದೆ ಎನ್ನುವ ಭರವಸೆಯನ್ನೂ ತುಂಬಿದರು.

ನಂತರ ಯಥಾಪ್ರಕಾರ ಎಲ್ಲ ದೇವರುಗಳಿಗೂ ಹರಕೆ ಹೊತ್ತು, ಮಂತ್ರ, ತಾಯಿತ ಕಟ್ಟಿಸಿದರೂ ಪ್ರಯೋಜನವಾಗಲಿಲ್ಲ. ವೈದ್ಯರ ಸಲಹೆ ಪಡೆದರೂ ಅಷ್ಟೇನೂ ಲಾಭವಾಗಲಿಲ್ಲ. ಎಲ್ಲಿ ಹೋದರೂ ಆತನಲ್ಲಿ ದೋಷ ಹುಡುಕಲು ಸಾಧ್ಯವಾಗಲಿಲ್ಲ. ಆದರೆ ಆತನ ಕಿರುಚಾಟವಂತೂ ನಿಲ್ಲಲಿಲ್ಲ. ರಾತ್ರಿಯಾದರೆ ವಿಚಿತ್ರ ಆಟ, ಬೆಳಿಗ್ಗೆ ಮಂಕು ಕವಿದಂತೆ ನೋಟ.

ಮನೆದೇವರ ಬಳಿಗೆ ಹೋಗಿಬನ್ನಿ ಎಂದರು. ಅದನ್ನೂ ಮಾಡಿದೆವು. ಆದರೆ ಅದೂ ಅಲ್ಪಕಾಲೀನ. ಅಲ್ಲಿದ್ದಷ್ಟು ಕಾಲ ಚೆನ್ನಾಗಿದ್ದ. ಇಲ್ಲಿ ಬಂದ ನಂತರ ಅದೇ ರಾಗ ಅದೇ ಹಾಡು!

ಮುಂದೇನು ಮಾಡಬೇಕು ಎಂದು ದಿಕ್ಕೇ ತೋಚದೆ ಈ ಮಠದಲ್ಲಿದ್ದೇವೆ ಎಂದರು. ನಾನು ಅವರ ವಿಳಾಸ, ಮೊಬೈಲ್ ಸಂಖ್ಯೆ ಪಡೆದುಕೊಂಡು ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿ ಬೀಳ್ಕೊಂಡೆ.

ನಂತರ ಆ ನವದಂಪತಿಗಳನ್ನು ಒಂದು ಬಾರಿ ನನ್ನ “ಪವಾಡ ರಹಸ್ಯ ಬಯಲು” ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಇಬ್ಬರೂ ಜೊತೆಯಲ್ಲಿದ್ದರು.

ಕಾರ್ಯಕ್ರಮ ಮುಗಿದ ನಂತರ ದಂಪತಿಗಳು ನಮ್ಮ ಮನೆಯಲ್ಲೇ ಉಳಿದರು. ಮೊದಲಿಗೆ ಆತನ ಪತ್ನಿಯನ್ನು ಕೌನ್ಸೆಲ್ಲಿಂಗ್ ಮಾಡಲಾರಂಭಿಸಿದೆ. ನಿಮ್ಮ ನಡುವೆ ಏನಾದರೂ ಭಿನ್ನಾಭಿಪ್ರಾಯ ಇದೆಯೇ? ಅಥವಾ ಲೈಂಗಿಕ ಅನುಭವ ಪಡೆದುಕೊಳ್ಳುವ ವಿಷಯದಲ್ಲಿ ಪರಸ್ಪರ ಅರಿವಿನ ಕೊರತೆಯುಂಟಾಯಿತೇ? ಇತ್ಯಾದಿ ವಿಷಯಗಳನ್ನು ಕೇಳುತ್ತಾ ಹೋದೆ.

ಆಕೆ, “ಸರ್ ಅವರು ನನ್ನನ್ನು ಮುಟ್ಟೇ ಇಲ್ಲ. ನನ್ನ ಮುಖ ನೋಡಿದರೆ ಹೆದರಿಕೊಳ್ಳುತ್ತಾರೆ. ಅವರ ಮುಖ ಬೆವರುತ್ತದೆ. ಮೊದಲ ದಿನದಿಂದಲೂ ಇದು ನಡೆದಿದೆ. ಅಂದಿನಿಂದ ಅವರ ಜೊತೆ ಮಲಗೋದೇ ಬಿಟ್ಟಿದ್ದೇನೆ. ಅವರು ಸುಖವಾಗಿರಲಿ ಎನ್ನೋದೇ ನನ್ನ ಆಸೆ,” ಎನ್ನುತ್ತಾ ಕಣ್ಣೀರುಗರೆದಳು.

ನಂತರ ಆತನಲ್ಲಿ ವಿಷಯ ಪ್ರಸ್ತಾಪಿಸಿದೆ. “ಯಾಕಪ್ಪ ನಿನ್ನ ಹೆಂಡತಿಯ ಹತ್ತಿರ ಮಲಗಿದರೆ ಹುಚ್ಚನಂತೆ ಆಡ್ತೀಯಾ? ಈ ಮದುವೆ ನಿನಗೆ ಇಷ್ಟವಿರಲಿಲ್ಲವಾ? ಅಥವಾ ಆ ಹುಡುಗಿ ಇಷ್ಟ ಆಗಿಲ್ವಾ?…” ಪ್ರಶ್ನಿಸಿದೆ.

“ಹಾಗೇನೂ ಇಲ್ಲ ಸರ್, ಆಕೆ ಬಹಳ ಒಳ್ಳೆಯವಳು. ಅವಳನ್ನು ನಾನು ತುಂಬಾ ಪ್ರೀತಿಸುತ್ತೇನೆ,” ಎಂದ.

“ಹಾಗಿದ್ದರೆ ನಿಮ್ಮ ನಡುವೆ ಇರುವ ಸಮಸ್ಯೆ ಏನು?” ಎಂದಿದ್ದಕ್ಕೆ ಆತ, “ನನಗೆ ಪುರುಷತ್ವ ಅಂದರೆ ಏನು ಅಂತ ಗೊತ್ತಿಲ್ಲ. ಹೆಂಡತಿಯೊಡನೆ ಏನು ಮಾಡಬೇಕು ಎನ್ನೋದೂ ಗೊತ್ತಿಲ್ಲ. ಅದರ ಬಗ್ಗೆ ತಿಳಿವಳಿಕೆ ಇಲ್ಲದೆ ಅದರ ಬಗ್ಗೆ ಮಾತನಾಡೋದಕ್ಕೆ ಬಹಳ ಮುಜುಗರ. ಆದ್ದರಿಂದ ಅದನ್ನು ಧೈರ್ಯವಾಗಿ ಹೇಳಲಾಗದೆ ಈ ರೀತಿ ಆಡುತ್ತಿದ್ದೇನೆ,” ಎಂದ.

ಅವರಿಬ್ಬರನ್ನೂ ಕೂಡಲೇ ವೈದ್ಯರ ಬಳಿ ಕರೆದೊಯ್ದು ಈ ಲೈಂಗಿಕತೆಯ ಕುರಿತು ಅವರಿಗೆ ಅರಿವನ್ನು ನೀಡುವಂತೆ ಕೇಳಿದೆ.

ಅವರು ಸೂಕ್ತ ಸಲಹೆ ನೀಡಿ ಅವನ ಹಿಂಜರಿಕೆ ನಿವಾರಣೆಗೆ ಔಷಧವನ್ನೂ ನೀಡಿದರು. ನಂತರ ಆತ ತನ್ನ ಸಾಂಸಾರಿಕ ಜೀವನವನ್ನು ಸುಖವಾಗಿ ನಡೆಸಲು ಆರಂಭಿಸಿದ. ಈಗ ಅವರಿಗೂ ಒಂದು ಮುದ್ದಾದ ಹೆಣ್ಣುಮಗುವಿದೆ. ಸುಖೀ ಕುಟುಂಬವಾಗಿದೆ.

ಆದ್ದರಿಂದ ನಮ್ಮಲ್ಲಿ ಏನಾದರೂ ಸಮಸ್ಯೆ ಇದ್ದಲ್ಲಿ ಅದನ್ನು ನಮ್ಮ ಹತ್ತಿರದವರ ಬಳಿ ಹೇಳಿಕೊಂಡರೆ ಅದಕ್ಕೆ ಪರಿಹಾರ ದೊರೆಯಬಹುದು. ಅದನ್ನು ಹೊರತುಪಡಿಸಿ ಒಳಗೇ ಕೊರಗಿದರೆ ಈ ರೀತಿ ಹೊಸ ಸಮಸ್ಯೆ ಹುಟ್ಟಿಕೊಳ್ಳುತ್ತದೆ.

(ಚಿತ್ರಕೃಪೆ: ವಿಕಿಪೀಡಿಯ)

ಹುಲಿಕಲ್ ನಟರಾಜ್
ಪವಾಡ ಸಂಶೋಧನಾ ಕೇಂದ್ರ(ರಿ)
ದೊಡ್ಡಬಳ್ಳಾಪುರ-561203
ಮೊ:9481776616
miraclebuster_nataraj@yahoo.com

ಹಾವಿನ ನಂಜುಂಡ ಈ ನಂಜಪ್ಪ!

ನಾವು ನಮ್ಮ ಅರಿವಿಗೆ ನಿಲುಕದ ಎಷ್ಟೋ ಸಂಗತಿಗಳನ್ನು ದೆವ್ವ ಅಥವಾ ದೇವರಿಗೆ ಆರೋಪಿಸಿ ಅದು ಅಲೌಕಿಕ ಶಕ್ತಿ ಎಂದೇ ಪ್ರತಿಪಾದಿಸುತ್ತೇವೆ. ಇದಕ್ಕೆ ವಿದ್ಯಾವಂತರೂ ಹೊರತಲ್ಲ. ನೀವು ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣಿತರಾದರೂ ಕೆಲವು ವಿಸ್ಮಯಕಾರಕ ಸಂಗತಿಗಳ ಹಿಂದಿನ ವಾಸ್ತವಾಂಶ ಗೊತ್ತೇ ಆಗುವುದಿಲ್ಲ. ಅಂತಹುದೊಂದು ಘಟನೆ ಅಲ್ಲಿ ನನಗೆ ಎದುರಾಗಿತ್ತು.

ಆತ ಎಷ್ಟೋ ಮಂದಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು. ಆದರೆ ಅವರಿಗೂ ಪರಿಹರಿಸಲಾಗದಂತಹ ಒಂದು ಕಗ್ಗಂಟಾದ ಸಮಸ್ಯೆ ಅವರ ಬೆನ್ನು ಹತ್ತಿತ್ತು. ಆ ದಿನ ನಾನೊಂದು ಶಾಲೆಯಲ್ಲಿ ಪವಾಡಗಳ ಹಿಂದಿನ ರಹಸ್ಯಗಳನ್ನು ಅನಾವರಣ ಮಾಡುತ್ತಿದ್ದೆ. ಕಾರ್ಯಕ್ರಮ ಮುಗಿದ ಕೂಡಲೇ ಆ ವೈದ್ಯರು ನನ್ನನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಬಿಚ್ಚಿಟ್ಟರು.

ಅವರ ಬಳಿಗೆ ಒಬ್ಬ ರೋಗಿ ಬಂದಿದ್ದ. ಅವನಿಗೆ ಯಾರೂ ವಿವರಿಸಲಾಗದಂತಹ ವಿಚಿತ್ರ ಕಾಯಿಲೆ! ಭಾನಾಮತಿಯೇ ಇರಬಹುದು! ನಿಜಕ್ಕೂ ನಿಮಗೆ ಇದೊಂದು ಸವಾಲು ಎನ್ನುತ್ತಲೇ ಅವರು ನನ್ನನ್ನು ಕರೆದೊಯ್ದರು. ನನಗಂತೂ ಬಹಳ ಕುತೂಹಲ ಹುಟ್ಟಿತು. ಏನಿರಬಹುದು?

ಮೈಸೂರಿನಿಂದ ನೂರು ಕಿಲೋಮೀಟರ್ ದೂರದಲ್ಲಿ ಪಾಲ್ಕಿ ಎಂಬ ಗ್ರಾಮ. ಅಲ್ಲಿ ನಂಜಪ್ಪ ಎಂಬವನಿಗೇ ಈ ವಿಚಿತ್ರ ಕಾಯಿಲೆ. ಆತ ಕೆಲ ತಿಂಗಳ ಹಿಂದೆ ಗಟ್ಟಿಮುಟ್ಟಾಗಿದ್ದ ಆಳು. ಕೃಷಿ ಕೆಲಸ ಮಾಡುತ್ತಾ ಇದ್ದುದರಲ್ಲಿ ನೆಮ್ಮದಿಯಿಂದಲೇ ಇದ್ದ. ಆದರೆ ಈ ವಿಚಿತ್ರ ಕಾಯಿಲೆ ಹತ್ತಿಕೊಂಡಿದ್ದೇ ನೋಡಿ, ಊಟ ಸೇರದಾಯಿತು. ಸದಾ ಮಂಕು ಬಡಿದ ಹಾಗೆ ಕುಳಿತಿರುತ್ತಾನೆ. ಮನೆಯವರಿಗೆಲ್ಲಾ ಆತಂಕ ಹುಟ್ಟಿಸಿದ್ದಾನೆ. ಕೊನೆಗೆ ಈತ ಬದುಕುವನೋ ಇಲ್ಲವೋ ಎಂಬಂತೆ ಇದ್ದಾನೆ. ಅರವತ್ತು ಕೆಜಿ ತೂಕವಿದ್ದವನು ಈಗ ಮೂವತ್ತಕ್ಕೆ ಇಳಿದಿದ್ದಾನೆ… ಇತ್ಯಾದಿ ವಿವರಗಳನ್ನು ನೀಡಿದರು.

ಅಲ್ಲಿಗೆ ಹೋದೆವು. ನಂಜಪ್ಪ ನಿಸ್ತೇಜವಾಗಿದ್ದ. ಬದುಕಿನ ನಿತ್ಯದ ವ್ಯಾಪಾರಗಳಲ್ಲಿ ಆತನಿಗೆ ಆಸಕ್ತಿಯೇ ಹೊರಟುಹೋಗಿತ್ತು.

ಕಾರಣ ಇಷ್ಟೇ. ಒಂದು ದಿನ ಹೊಲದಿಂದ ನಡೆದುಕೊಂಡು ಬರುತ್ತಿರುವಾಗ ಒಂದು ಕೇರೆಹಾವು ಕಚ್ಚಿಬಿಟ್ಟಿತ್ತು. ಅದು ವಿಷಪೂರಿತ ಹಾವು ಅಲ್ಲದಿದ್ದರೂ ಅದು ನಾಗರಹಾವೇ ಎಂದು ಆತ ನಂಬಿದ್ದ. ನಿಜಕ್ಕೂ ನಾಗರಹಾವು ಕಚ್ಚಿದ್ದರೆ ಆತ ಚಿಕಿತ್ಸೆ ಪಡೆಯದೆ ಇಷ್ಟು ದಿನ ಬದುಕಲು ಸಾಧ್ಯವೇ ಇರಲಿಲ್ಲ. ಅದರಲ್ಲಿ ವಿಷವಿದ್ದಲ್ಲಿ!

ತನಗೆ ಹಾವು ಕಡಿದಿದೆ. ಅದರ ವಿಷ ಮೈನಲ್ಲಿದೆ. ನಾನು ಸತ್ತುಹೋಗಬಹುದು ಎಂಬ ಕೊರಗು ಅವನಲ್ಲಿ ಮೂಡಿತ್ತು. ಇದರಿಂದ ರಾತ್ರಿಯೆಲ್ಲಾ ಕೂಗಾಡುತ್ತಿದ್ದ. ಹಾವಿನ ಭಯ ಅವನನ್ನು ಕಂಗೆಡಿಸಿತ್ತು. ಹಾದಿಬೀದಿಯಲ್ಲಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದ.

ಇದರಿಂದ ಇಡೀ ಕುಟುಂಬ ಸಂಕಷ್ಟದಲ್ಲಿ ಸಿಲುಕಿತ್ತು. ನಂಜಪ್ಪ ಊಟ, ನಿದ್ರೆಯ ಕಡೆಗೆ ಆಸಕ್ತಿ ಕಳೆದುಕೊಂಡಿದ್ದ. ಅಜ್ಞಾನ ಒಮ್ಮೊಮ್ಮೆ ನಮ್ಮನ್ನು ಎಂತಹ ಇಕ್ಕಟ್ಟಿಗೆ ಸಿಲುಕಿಸುತ್ತದೆ ಎನ್ನುವುದಕ್ಕೆ ನಂಜಪ್ಪ ಜೀವಂತ ಉದಾಹರಣೆಯಾಗಿದ್ದ. ಇದು ನಿಜಕ್ಕೂ ಮಾನಸಿಕ ಕಾಯಿಲೆಯೇ ಹೊರತು ದೈಹಿಕ ಕಾಯಿಲೆ ಅಲ್ಲವೇ ಅಲ್ಲ ಎಂದು ನನಗೆ ಅರ್ಥವಾಗಿತ್ತು. ಅದನ್ನು ದೂರ ಮಾಡುವುದು ಹೇಗೆ ಎಂಬುದೇ ನಮ್ಮ ಮುಂದಿದ್ದ ಸಮಸ್ಯೆ.

ವಿಶೇಷ ಎಂದರೆ ಇದನ್ನು ಭಾನಾಮತಿ ಎಂದು ಯಾರೋ ನಂಬಿಸಿದ್ದರು. ಅದನ್ನು ಕುಟುಂಬವೂ ನಂಬಿಕೊಂಡಿತ್ತು. ಭಾನಾಮತಿಯಿಂದ ಬಿಡುಗಡೆ ಪಡೆಯಲೂ ಅವರು ಮಾಡಿದ ಪ್ರಯತ್ನಗಳು ಒಂದೆರಡಲ್ಲ.

ನನಗೆ ನಂಜಪ್ಪನನ್ನು ನೋಡುತ್ತಲೇ ಒಂದು ಉಪಾಯ ಹೊಳೆಯಿತು. ಅದನ್ನು ಯಾರಿಗೂ ಹೇಳದೆ ಜಾರಿಗೆ ತಂದೆ.

ಒಂದು ಹಲ್ಲು ಕಿತ್ತ ನಾಗರಹಾವು ತರಿಸಿದೆ. ನಂಜಪ್ಪ ನಿದ್ರಾವಶವಾಗುವಂತೆ ಮಾಡಿ ಆತನಿಂದಲೇ ಹಾವು ಕಚ್ಚಿದ ಜಾಗವನ್ನು ತೋರಿಸುವಂತೆ ಸೂಚಿಸಿದೆ. ಆತನ ಸುಪ್ತಮನಸ್ಸಿನಲ್ಲಿ ಹಾವು ಬರುವಂತೆ ಮಾಡಿದೆ. ಆತನ ಸುಪ್ತ ಮನಸ್ಸಿನಲ್ಲಿ ಹಾವು ಬಂದಿತು. ಕಚ್ಚಿದ ಜಾಗ ತೋರಿಸುವಂತೆ ಸೂಚಿಸಿದೆ. ತೋರಿಸಿದ. ಆತ ತೋರಿಸಿದ ಸ್ಥಳಕ್ಕೆ ಒಂದು ಬ್ಲೇಡ್‌ನಿಂದ ಗಾಯ ಮಾಡಿದೆ. ಅಲ್ಲಿಂದ ಹೊರಬಂದ ರಕ್ತವನ್ನು ಹಾವಿನ ಮೂತಿಗೆ ಬಳಿದೆ. ನಂತರ ಆತನನ್ನು ಕಣ್ಣು ಬಿಡಲು ಹೇಳಿದೆ.

ಕಣ್ಣು ಬಿಟ್ಟವನೇ ‘ಇದೇ ಹಾವು ನನಗೆ ಕಚ್ಚಿದ್ದು,’ ಎಂದ! ಎದ್ದು ಮನೆಯೆಲ್ಲಾ ಕುಣಿದಾಡಿದ. ಅವನ ಸಂತೋಷ ಮೇರೆ ಮೀರಿತು. ಅವನಿಗೆ ಅ ಹಾವು ಗೊತ್ತಿಲ್ಲವಾದರೂ ಅದೇ ಹಾವು ತನ್ನ ದೇಹದಿಂದ ವಿಷ ಹೀರಿದೆ ಎಂಬ ಸಂಗತಿ ಅವನಲ್ಲಿ ಅಪಾರ ಖುಷಿ ಹುಟ್ಟುಹಾಕಿತ್ತು.

ಮನುಷ್ಯನನ್ನು ಗುರುತು ಹಿಡಿಯಬಹುದು. ಹಾವುಗಳನ್ನೂ ಹೀಗೆ ಒಮ್ಮೆ ನೋಡಿದ ಕೂಡಲೇ ಗುರುತು ಹಿಡಿಯಲು ಸಾಧ್ಯವೇ? ಒಟ್ಟಿನಲ್ಲಿ ನಂಜಪ್ಪನಂತೂ ತನಗೆ ಕಚ್ಚಿದ ಹಾವು ಅದೇ ಎಂದು ನಂಬಿದ. ಸರಿಯಾಗಿ ಹಾವು ಕಚ್ಚಿದ ಸ್ಥಳದಲ್ಲಿ ಅದೇ ಹಾವು ವಿಷ ಹೀರಿದೆ ಎನ್ನುವುದನ್ನೂ ತೋರಿಸಿದೆ. ನಂಜಪ್ಪ ಖುಷಿಯಿಂದ ಕುಣಿದಾಡಿದ. ಇನ್ನು ನಿನ್ನ ಮೈಯಲ್ಲಿ ವಿಷವಿಲ್ಲ. ಇನ್ನು ಭಯ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದೆ. ನಂಜಪ್ಪ ಮಾತ್ರವಲ್ಲದೆ ಆತನ ಕುಟುಂಬ ಸದಸ್ಯರೆಲ್ಲರೂ ಸಂತೋಷಪಟ್ಟರು.

ಈಗ ನಂಜಪ್ಪ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಾನೆ. ಒಂದು ತಪ್ಪು ತಿಳಿವಳಿಕೆ ಜೀವಕ್ಕೇ ಎರವಾಗಬಲ್ಲುದು ಎನ್ನುವುದಕ್ಕೆ ನಂಜಪ್ಪನೇ ಉದಾಹರಣೆ.

ಹುಲಿಕಲ್ ನಟರಾಜ್
ಪವಾಡ ಸಂಶೋಧನಾ ಕೇಂದ್ರ(ರಿ)
ದೊಡ್ಡಬಳ್ಳಾಪುರ-561203
ಮೊ:9481776616
miraclebuster_nataraj@yahoo.com

(ಚಿತ್ರಕೃಪೆ: ವಿಕಿಪೀಡಿಯ)