Tag Archives: ಮತದಾರ

ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಊಳಿಗಮಾನ್ಯ ವ್ಯವಸ್ಥೆಯ ಕಡೆಗೆ ಭಾರತ

 – ಆನಂದ ಪ್ರಸಾದ್

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಸ್ವಾತಂತ್ರ್ಯಾನಂತರ ರೂಪುಗೊಂಡು ಆರಂಭದಲ್ಲಿ ಹೆಚ್ಚಿನ ಹಣದ ಪ್ರಭಾವವಿಲ್ಲದೆ ನಡೆಯುತ್ತಿತ್ತು.  ಇತ್ತೀಚಿನ ವರ್ಷಗಳಲ್ಲಿ ಇದು ಹಣವುಳ್ಳವರು ಹಣ, ಹೆಂಡ, ಸೀರೆ ಹಾಗೂ ಮತದಾರರಿಗೆ ವಿವಿಧ ಬಗೆಯ ಕೊಡುಗೆಗಳನ್ನು ನೀಡಿ ಮತವನ್ನು ಖರೀದಿಸುವ ವ್ಯವಹಾರವಾಗಿ ಮಾರ್ಪಾಟಾಗಿದೆ.  ಇಂಥ ವ್ಯವಸ್ಥೆಯಲ್ಲಿ ಹೆಚ್ಚು ಹಣ ಹೊಂದಿದವರೇ ಗೆದ್ದು ಮತ್ತೆ ದೇಶವನ್ನು ಐದು ವರ್ಷಗಳ ಕಾಲ ಲೂಟಿ ಮಾಡಿ ಪುನಃ ಆ ಹಣದ ಒಂದಂಶವನ್ನು ಚುನಾವಣೆಗಳಲ್ಲಿ ಹಂಚಿ ಗೆದ್ದು ಬರುವ ಪರಿಸ್ಥಿತಿ ಬಂದಿದೆ.  ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ದುಡ್ಡಿರುವವರ ಕಾಲಿನಡಿಯಲ್ಲಿ ಬಿದ್ದು ನರಳುತ್ತಿದೆ ಮತ್ತು ಊಳಿಗಮಾನ್ಯ ವ್ಯವಸ್ಥೆಯಾಗಿ ಮಾರ್ಪಾಟಾಗಿದೆ.  ಇದಕ್ಕೆ ಯಾರು ಹೊಣೆ?  ಇದಕ್ಕೆ ಹಣ, ಹೆಂಡ, ಸೀರೆ ಹಾಗೂ ಇನ್ನಿತರ ವಸ್ತುಗಳನ್ನು ಸ್ವೀಕರಿಸಿ ಮತವನ್ನು ಮಾರಿಕೊಳ್ಳುವ ಮತದಾರರೇ ಕಾರಣ.  ಹಣ ಹಾಗೂ ಇನ್ನಿತರ ಕೊಡುಗೆಗಳನ್ನು ತೆಗೆದುಕೊಳ್ಳುವವರು ಇದ್ದಾಗ ಮಾತ್ರ ಹಣವಂತರು ಇಂಥ ಅಡ್ಡದಾರಿಯನ್ನು ಹಿಡಿದು ಗೆಲ್ಲಲು ಸಾಧ್ಯವಾಗುತ್ತದೆ.  ಸ್ವಾಭಿಮಾನ ಉಳ್ಳ ಮತದಾರರು ಇದ್ದರೆ ಇಂಥ ಆಮಿಷಗಳನ್ನು ಖಡಾಖಂಡಿತವಾಗಿ ವಿರೋಧಿಸಿ ತರಾಟೆಗೆ ತೆಗೆದುಕೊಳ್ಳುವ ಪ್ರವೃತ್ತಿ ಬೆಳೆಸಿಕೊಂಡಿದ್ದರೆ ಆಮಿಷ ಒಡ್ಡಿ ಓಟು ಖರೀದಿಸುವ ಧೈರ್ಯ ಯಾವ ಹಣವಂತನಿಗೂ ಬpillars_of_democracyರುತ್ತಿರಲಿಲ್ಲ.  ಹೀಗಾಗಿ ಇಂಥ ಪ್ರವೃತ್ತಿ ಬೆಳೆಯಲು ನಮ್ಮ ಮತದಾರರೇ ಹೆಚ್ಚು ಜವಾಬ್ದಾರರು.  ಇದನ್ನು ಆರಂಭದಲ್ಲೇ ವಿರೋಧಿಸಿ ಹಣ ಹಾಗೂ ಇನ್ನಿತರ ಕೊಡುಗೆಗಳನ್ನು ನೀಡುವ ಅಭ್ಯರ್ಥಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರೆ  ಇಂಥ ಕೆಟ್ಟ ಪ್ರವೃತ್ತಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ.

ಬಡತನ ಹಾಗೂ ಅಜ್ಞಾನ ಈ ರೀತಿ ಹಣ ತೆಗೆದುಕೊಂಡು ಓಟು ಹಾಕಲು ಕಾರಣ ಎಂದು ಹೇಳಿ ಇದನ್ನು ಸಮರ್ಥಿಸಲು ಸಾಧ್ಯವಿಲ್ಲ.  ನಮ್ಮ ಮತದಾರರ ನೈತಿಕ ಅಧಃಪತನವೇ ಇದಕ್ಕೆ ಕಾರಣ.  ಕೇವಲ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಮಾತ್ರವೇ ಭ್ರಷ್ಟವಾಗಿಲ್ಲ ಮತದಾರರೂ ಭ್ರಷ್ಟರಾಗಿದ್ದಾರೆ, ನೈತಿಕ ಅಧಃಪತನವನ್ನು ಹೊಂದಿದ್ದಾರೆ ಎಂಬುದನ್ನು ಈ ಪ್ರವೃತ್ತಿ ಎತ್ತಿ ತೋರಿಸುತ್ತದೆ.  ಇತ್ತೀಚೆಗೆ ಟಿವಿ ವಾಹಿನಿಯೊಂದರಲ್ಲಿ ಈ ರೀತಿ ಹಣ ತೆಗೆದುಕೊಂಡು ಓಟು ಹಾಕುವುದನ್ನು ಮತದಾರರು ಸಮರ್ಥಿಸಿದ್ದು ಹೇಗೆಂದರೆ ಜನಪ್ರತಿನಿಧಿಗಳು ಐದು ವರ್ಷಗಳಲ್ಲಿ ಭ್ರಷ್ಟಾಚಾರ ಮಾಡುವುದಿಲ್ಲವೇ, ಹೀಗಿರುವಾಗ ನಾವು ಓಟಿಗಾಗಿ ಹಣ ತೆಗೆದುಕೊಂಡರೆ ಏನು ತಪ್ಪು ಎಂಬುದಾಗಿತ್ತು.  ಇಂಥ ಮತದಾರರು ಇರುವಾಗ ಪ್ರಜಾಪ್ರಭುತ್ವ ವ್ಯವಸ್ಥೆ ಉದ್ಧಾರವಾಗುವುದಾದರೂ ಹೇಗೆ?  ಎರಡೂ ಕೈ ಸೇರಿದರೆ ಮಾತ್ರ ಚಪ್ಪಾಳೆ ಅಗುವುದು.  ಮತದಾರರು ಚುನಾವಣಾ ಅಭ್ಯರ್ಥಿಗಳ ಜೊತೆ ಕೈ ಜೋಡಿಸಿ ಅನೈತಿಕತೆಯನ್ನು ಪ್ರೋತ್ಸಾಹಿಸುತ್ತಿರುವ ಕಾರಣವೇ ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವಿಗೇ ಗಂಡಾಂತರಕಾರಿಯಾಗಿಬೆಳೆಯುತ್ತಿದೆ.  ಹೀಗಾಗಿ ನಮ್ಮ ಚುನಾವಣಾ ವ್ಯವಸ್ಥೆ ಭ್ರಷ್ಟವಾಗಿದೆ ಎಂದಾದರೆ ಅದಕ್ಕೆ ಮತದಾರರು ಹೆಚ್ಚು ಜವಾಬ್ದಾರರು.  ಏಕೆಂದರೆ ಮತದಾರರು ಬಹುಸಂಖ್ಯಾತರು, ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಕಡಿಮೆ ಸಂಖ್ಯೆಯಲ್ಲಿ ಇರುವ ಕಾರಣ ಅವರು ಅಲ್ಪಸಂಖ್ಯಾತರು.  ಬಹುಸಂಖ್ಯಾತ ಇರುವ ಮತದಾರರು ಅಲ್ಪಸಂಖ್ಯೆಯಲ್ಲಿ ಇರುವ ಅಭ್ಯರ್ಥಿಗಳು ಹಣ, ಹೆಂಡ ಹಾಗೂ ಇನ್ನಿತರ ಕೊಡುಗೆಗಳನ್ನು ಹಂಚಲು ಬರುವಾಗ ತರಾಟೆಗೆ ತೆಗೆದುಕೊಳ್ಳಲು ಅವಕಾಶ ಇದೆ.  ಹೀಗೆ ಎಲ್ಲ ಮತದಾರರೂ ಇಂಥ ಅನೈತಿಕ ಕೆಲಸವನ್ನು ತರಾಟೆಗೆ ತೆಗೆದುಕೊಂಡರೆ ಯಾವುದೇ ಅಭ್ಯರ್ಥಿಗೂ ಇಂಥವುಗಳನ್ನು ಹಂಚುವ ಧೈರ್ಯ ಬರಲಾರದು.

ಚುನಾವಣಾ ಆಯೋಗ ಹಣ ಹಾಗೂ ಇನ್ನಿತರ ಆಮಿಷಗಳನ್ನು ಒಡ್ಡುವವರು ಹಾಗೂ ಅವುಗಳನ್ನು ತೆಗೆದುಕೊಳ್ಳುವವರು ಇಬ್ಬರ ಮೇಲೂ ಜಾಮೀನುರಹಿತ ಬಂಧನಕ್ಕೆ ಅವಕಾಶ ನೀಡುವ ಕಾನೂನು ತರಲು ಯೋಚಿಸುತ್ತಿದ್ದು ಇದನ್ನು ಸರ್ಕಾರದ ಒಪ್ಪಿಗೆಗಾಗಿ ಕಳುಹಿಸಿದೆ ಎಂದು ತಿಳಿದುಬಂದಿದೆ.  ಇಂಥ ಕಾನೂನು ತಂದರೂ ಮತದಾರರು ನೈತಿಕವಾಗಿ ಬೆಳೆಯದಿದ್ದರೆ ಹೆಚ್ಚಿನ ಪ್ರಯೋಜನ ಆಗಲಾರದು ಏಕೆಂದರೆ ಇದೆಲ್ಲ ಮತದಾರರು ಹಾಗೂ ಅಭ್ಯರ್ಥಿಗಳು ಜೊತೆಗೂಡಿ ನಡೆಸುತ್ತಿರುವ ಅನೈತಿಕ ಕಾರ್ಯವಾದುದರಿಂದ ಇದು ಕಾನೂನಿನ ಕಣ್ಣು ತಪ್ಪಿಸಿ ಕದ್ದು ಮುಚ್ಚಿ ನಡೆಯುವ ವ್ಯವಹಾರವಾಗಿದೆ.  ಹೀಗಾಗಿ ಇದನ್ನು ಮತದಾರರು ವಿರೋಧಿಸದ ಹೊರತು ನ್ಯಾಯಾಲಯದಲ್ಲಿ ಸಾಬೀತುಪಡಿಸುವುದು ಅಸಾಧ್ಯ.  ಮತದಾರರೇ ನೈತಿಕವಾಗಿ ಅಧಃಪತನ ಹೊಂದಿದ್ದಾಗ ಈ ಕದ್ದುಮುಚ್ಚಿ ನಡೆಯುವ ವ್ಯವಹಾರ ನಡೆಯುತ್ತಿರುವ ಬಗ್ಗೆ ಆಯೋಗಕ್ಕೆ ಸಾಕ್ಷ್ಯ ಸಹಿತ ದೂರು ನೀಡುವವರಾದರೂ ಯಾರು?

 
ಮತದಾರರು ನೈತಿಕವಾಗಿ ದೃಢತೆ ಬೆಳೆಸಿಕೊಂಡರೆ ಹಣ ಹಾಗೂ ಇನ್ನಿತರ ಕೊಡುಗೆ ನೀಡಿ ಓಟು ಖರೀದಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಊಳಿಗಮಾನ್ಯ ವ್ಯವಸ್ಥೆಯಾಗಿ ಪರಿವರ್ತಿಸುತ್ತಿರುವ ಕೆಟ್ಟ ಪ್ರವೃತ್ತಿಯನ್ನು ತಡೆಯಲು ಸಾಧ್ಯ.  ಮತದಾರರೇ ಭ್ರಷ್ಟರಾದರೆ ನಮ್ಮ ನಾಗರಿಕತೆಯ ಅಧಃಪತನ ತಡೆಯುವುದು ಸಾಧ್ಯವಿಲ್ಲ.  ಬಡತನ ಹಣ ತೆಗೆದುಕೊಂಡು ಓಟು ಹಾಕಲು ಕಾರಣ ಎಂಬುದು ಒಪ್ಪತಕ್ಕ ಮಾತಲ್ಲ.  ಬಡತನವಿದ್ದರೂ ದುಡಿದು ತಿನ್ನುವ ಸ್ವಾಭಿಮಾನ ಬೆಳೆಸಿಕೊಂಡವರು ಎಂಜಲು ಕಾಸಿಗೆ ಕೈಯೊಡ್ಡುವುದಿಲ್ಲ.  ಸ್ವಾಭಿಮಾನವಿಲ್ಲದ, ದೇಶದ ಬಗ್ಗೆ ಕಾಳಜಿ ಇಲ್ಲದ ಮತದಾರರು ಮಾತ್ರ ಈ ರೀತಿ ಎಂಜಲು ಕಾಸಿಗೆ ಕೈಯೊಡ್ಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಗೆಡವಲು ಮುಖ್ಯ ಕಾರಣರಾಗುತ್ತಿದ್ದಾರೆ.  ಇಂಥ ಪ್ರವೃತ್ತಿಯನ್ನು ಸಾಮೂಹಿಕವಾಗಿ ವಿರೋಧಿಸುವ, ತರಾಟೆಗೆ ತೆಗೆದುಕೊಳ್ಳುವ ಎಚ್ಚರ ಬೆಳೆದರೆ ಮಾತ್ರ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಸಾಧ್ಯ.  ಇಲ್ಲದಿದ್ದರೆ ಇದು ಉಳ್ಳವರ, ಭ್ರಷ್ಟರ ಪ್ರಭುತ್ವವಾಗಿ ಮಾತ್ರ ಮುಂಬರುವ ದಿನಗಳಲ್ಲಿ ಪರಿವರ್ತನೆಯಾಗಲಿದೆ.  ಹಾಗಾದರೆ ಅದಕ್ಕೆ ನಮ್ಮ ಮತದಾರರೇ ಜವಾಬ್ದಾರರು.  ಹಾಗಾಗದಂತೆ ತಡೆಯುವ ಹಕ್ಕು ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಿಕ್ಕಿದೆ.  ಅದನ್ನು ಬಳಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವುದು ಅವರ ಕೈಯಲ್ಲಿಯೇ ಇದೆ.