Tag Archives: ಮದರ್ ಇಂಡಿಯಾ

ಮೆಹಬೂಬ್ ಖಾನ್, ಮದರ್ ಇಂಡಿಯಾ, ಮತ್ತು ವಿಜಯ ಮಲ್ಯ

ಬಿ. ಶ್ರೀಪಾದ್ ಭಟ್

30-40ರ ದಶಕದ ಆ ಕಾಲವೇ ಅಂತಹದ್ದು. ಎರಡನೇ ಮಹಾಯುದ್ಧದ, ಗಾಂಧೀಜಿಯವರ ನೇತೃತ್ವದ ಸ್ವಾತಂತ್ರ ಹೋರಾಟದ, ತಳ ಸಮುದಾಯಗಳ ಧ್ವನಿಯಾಗಿ ಅಂಬೇಡ್ಕರ್ ರವರ ಹೋರಾಟದ ಆ ದಶಕಗಳು ಅತ್ಯಂತ ಅತಂತ್ರ ಸ್ಥಿತಿಯ, ತಳಮಳದ, ಉದ್ವೇಗದ, ಹತಾಶೆಯ ದಿನಗಳಾಗಿದ್ದವು. ಆ ದಶಕಗಳು ಭಾರತದ ಹಿಂದಿ ಸಿನಿಮಾದ ಇತಿಹಾಸದಲ್ಲೇ ಅತ್ಯಂತ ಪ್ರಗತಿಪರ ದಶಕಗಳಾಗಿದ್ದವು. ಮರಾಠೀ ಮೂಲದ ವಿ.ಶಾಂತಾರಾಮ್ ಒಂದು ಕಡೆ ಸಾಮಾಜಿಕ ಸಮಸ್ಯೆಗಳನ್ನು, ತುಳಿತಕ್ಕೊಳಗಾದ ಹೆಣ್ಣಿನ ಬದುಕನ್ನು ಅಧರಿಸಿ ನಿರ್ಮಿಸಿದ ಚಿತ್ರಗಳಾದ “ಆದ್ಮಿ”, “ದುನಿಯಾ ನಾ ಮಾನೆ”, “ಡಾ.ಕೊಟ್ನಿಸ್ ಕಿ ಅಮರ್ ಕಹಾನಿ”, “ಅಮರ್ ಜ್ಯೋತಿ”, “ತೀನ್ ಬತ್ತಿ ಚಾರ್ ರಾಸ್ತೆ”, “ದೋ ಆಂಖೆ ಬಾರಹ್ ಹಾತ್” ಗಳು ಇವತ್ತಿಗೂ 50 ರಿಂದ 70 ವರ್ಷಗಳ ನಂತರವೂ ತಮ್ಮ ಮುಗ್ಧತೆಯಿಂದ, ಮಾನವೀಯತೆಯಿಂದ, ಸಾಮಾಜಿಕ ನ್ಯಾಯದ ಪರಿಕಲ್ಪನೆಯಿಂದ ಭಾರತದ ಶ್ರೇಷ್ಟ ಚಿತ್ರಗಳ ಪಾಲಿಗೆ ಸೇರುತ್ತವೆ.

ಇನ್ನು ಭಾರತದ ಶ್ರೇಷ್ಟ ನಿರ್ದೇಶಕರಲ್ಲೊಬ್ಬರಾದ ಗುಜರಾತ್ ಮೂಲದಿಂದ ಬಂದ ಮೆಹಬೂಬ್ ಖಾನ್, ತುಳಿತಕ್ಕೊಳಗಾದ ಜನತೆಯ, ಬಡಜನರ, ಹಳ್ಳಿ ಬದುಕಿನ ವಿಷಯಗಳನ್ನೇ ಹೂರಣವನ್ನಾಗಿರಿಸಿಕೊಂಡು ಅತ್ಯಂತ ಅರ್ಥಪೂರ್ಣ, ಮಾನವೀಯ, ಜೀವಪರ ಚಿತ್ರಗಳನ್ನು ನಿರ್ಮಿಸಿದರು ಹಾಗು ನಿರ್ದೇಶಿಸಿದರು. ಇವರ ನಿರ್ದೇಶನದಲ್ಲಿ ತೆರೆ ಕಂಡಂತಹ ’ಔರತ್’, ’ರೋಟಿ,’, ’ಅಮರ್’. ,’ಆನ್’, ’ಅಂದಾಜ಼್’, ’ಅನ್ಮೋಲ್ ಘಡಿ’, ’ಮದರ್ ಇಂಡಿಯಾ’ ಚಿತ್ರಗಲೂ ಇಂಡಿಯಾ ಚಿತ್ರರಂಗದ ಅತ್ಯುತ್ತಮ ಚಿತ್ರಗಳ ಪಾಲಿಗೆ ಸೇರುತ್ತವೆ. ಅನೇಕ ಕಾರಣಗಳಿಗಾಗಿ ಇವರ ಚಿತ್ರಗಳಲ್ಲಿ ಹಸಿವು, ಹಳ್ಳಿಗರ ಮೇಲೆ ನಗರವಾಸಿಗಳ ದಬ್ಬಾಳಿಕೆ ಹಾಗು exploitation ಪದೇ ಪದೇ ತೋರಲ್ಪಡುತ್ತವೆ. ಆದರೆ ದುರಂತವೆಂದರೆ ಮೆಹಬೂಬ್ ಖಾನ್ ತಮ್ಮ ಪ್ರತಿಭೆಗೆ ತಕ್ಕಂತೆ ಅಷ್ಟೊಂದು ಚರ್ಚೆಗೆ, ಖ್ಯಾತಿಗೆ ಒಳಪಡಲಿಲ್ಲ. ಇದು ಈ ನೆಲದ ವಿಪರ್ಯಾಸಗಳಲ್ಲೊಂದು. ಈ ರೀತಿಯ ವಿಪರ್ಯಾಸಕ್ಕೆ ಅನೇಕ ಪ್ರತಿಭಾವಂತರು ಬಲಿಯಾಗಿದ್ದಾರೆ.

ಮೆಹಬೂಬ್ ಖಾನ್ ನಿರ್ದೇಶನದ, ಬೇಗಂ ಅಖ್ತರ್, ಸಿತಾರ ದೇವಿ, ಅಶ್ರಫ್ ಖಾನ್, ಚಂದ್ರ ಮೋಹನ್ ಅಭಿನಯದ 1942ರಲ್ಲಿ ತೆರೆ ಕಂಡ” ರೋಟಿ” ಚಿತ್ರ ಅನೇಕ ಕಾರಣಕ್ಕಾಗಿ ಇವತ್ತಿಗೂ ಪ್ರಸ್ತುತವಾಗಿದೆ, ತನ್ನ ಸಮಕಾಲೀನತೆಯನ್ನ ಉಳಿಸಿಕೊಂಡಿದೆ .ಇದರಲ್ಲಿ ಈ ಶ್ರೀಮಂತರ, ಮಧ್ಯಮ ವರ್ಗದವರ ಅಟ್ಟಹಾಸಕ್ಕೆ, ಕೊಳ್ಳುಬಾಕುತನಕ್ಕೆ, ಸ್ವಾರ್ಥಕ್ಕೆ, ಆಳದಲ್ಲಿ ಹುದುಗಿದ ದುರಾಸೆಗೆ, ಅದರ ಫಲವಾಗಿ ಮನುಕುಲದ ದುರಂತ, ಈ ದುರಂತದಲ್ಲಿ ತಮ್ಮದಲ್ಲದ ಕಾರಣಗಳಿಗೂ ಅಮಾಯಕರಾದ ಬಹುಪಾಲು ಹಳ್ಳಿಗಾಡಿನ ಜನತೆ, ಆದಿವಾಸಿಗಳು ಬಲಿಯಾಗುತ್ತಾರೆ ಹಾಗು ಅವರ ಮುಗ್ಧ ಪ್ರಪಂಚ ಈ ಎಲ್ಲ ಕ್ರೌರ್ಯಕ್ಕೆ ಸಿಕ್ಕು ನುಚ್ಚು ನೂರಾಗುತ್ತದೆ. ಇದನ್ನು ಮೆಹಬೂಬ್ ಖಾನ್ ತಮ್ಮ “ರೋಟಿ” ಚಿತ್ರದಲ್ಲಿ ಅತ್ಯಂತ ನಾಟಕೀಯವಾಗಿ, ಪರಿಣಾಮಕಾರಿಯಾಗಿ ತೋರಿಸಿಕೊಟ್ಟಿದ್ದಾರೆ. 80 ರ ದಶಕದಲ್ಲಿ ದೂರದರ್ಶನದಲ್ಲಿ ತಿಂಗಳಿಗೆ ಒಂದು ಬಾರಿ ಹಳೇ ಕಾಲದ ಮಹತ್ವದ ಚಿತ್ರಗಳನ್ನು ತೋರಿಸುತ್ತಿದ್ದರು. ಈ ಚಿತ್ರವನ್ನು ಆಗ ಕಾಲೇಜಿನಲ್ಲಿ ಓದುತ್ತಿದ್ದ ನಾವೆಲ್ಲ ಅದೃಷ್ಟವಶಾತ್ ದೂರದರ್ಶನದಲ್ಲಿ ನೋಡಿದ್ದೆವು.

ಸಂಕ್ಷಿಪ್ತವಾಗಿ ಇದರ ಕತೆ ಹೀಗಿದೆ:
ಲಕ್ಷ್ಮಿದಾಸ (ನಟ ಚಂದ್ರಮೋಹನ್)  ನಗರದ ಶ್ರೀಮಂತ ಮಹಿಳೆಯೊಬ್ಬಳನ್ನು ತಾನು ಅವಳ ಕಳೆದು ಹೋದ ಮಗನೆಂದು ಮೋಸದಿಂದ, ಸುಳ್ಳು ಹೇಳಿ ಅವಳ ಆಸ್ತಿಯ ಮಾಲೀಕನಾಗುತ್ತಾನೆ. ಪ್ರಪಂಚದ ಎಲ್ಲ ಶ್ರೀಮಂತಿಕೆಯೂ ತನ್ನ ಬಳಿ ಇರಬೇಕೆನ್ನುವ, ಬಡ ಜನರನ್ನು ತಿರಸ್ಕಾರದಿಂದ, ಅಮಾನವೀಯತೆಯಿಂದ ನೋಡುವ ಅವನ ವ್ಯಕ್ತಿತ್ವವೇ ಸ್ವಾರ್ಥ, ಕಪಟ, ವಂಚನೆಯಿಂದ ಕೂಡಿರುತ್ತದೆ. ಅವನ ನೀಚತನ ಎಲ್ಲಿಗೆ ಮುಟ್ಟುತ್ತದೆಯೆಂದರೆ ತಾನು ಮದುವೆಯಾಗುವ ಡಾರ್ಲಿಂಗ್‌ಳ( ಬೇಗಂ ಅಖ್ತರ್) ತಂದೆಯನ್ನೇ ಮೋಸದಿಂದ ಕೊಲೆ ಮಾಡಿ ಅವನ ಆಸ್ತಿಯನ್ನು ವಶಪಡಿಸಿಕೊಳ್ಳುತ್ತಾನೆ. ಒಂದು ದಿನ ತನ್ನ ಪ್ರೇಯಸಿ ಡಾರ್ಲಿಂಗ್‌ಳೊಂದಿಗೆ ವಿಮಾನವನ್ನೇರಿ ಬಂಗಾರವನ್ನು ಹುಡುಕಲು ಪ್ರಯಾಣ ಬೆಳೆಸುತ್ತಾನೆ.

ಆದರೆ ಮಾರ್ಗ ಮಧ್ಯದಲ್ಲಿ ಆದಿವಾಸಿಗಳು ವಾಸಿಸುತ್ತಿರುವ ಹಳ್ಳಿಯೊಂದರಲ್ಲಿ ಅಪಘಾತಕ್ಕೀಡಾಗುತ್ತಾರೆ. ಈ ಆದಿವಾಸಿಗಳ ನಾಯಕ ಬಾಲಮ್ ( ಅಶ್ರಫ಼್ ಖಾನ್) ಹಾಗು ಅವನ ಪ್ರಿಯತಮೆ ಕಿನಾರಿ ( ಸಿತಾರ ದೇವಿ). ಇವರೆಲ್ಲ ದುಡ್ಡಿನ ಮುಖವನ್ನೇ ನೋಡಿರುವುದಿಲ್ಲ. ಅಲ್ಲಿರುವುದು ಸರ್ವರಿಗೂ ಸಮ ಬಾಳು ಸರ್ವರಿಗೂ ಸಮ ಪಾಲು ಎನ್ನುವ ಸಮಾಜವಾದದ

ತತ್ವ. ಅವರೆಲ್ಲ barter ಪದ್ಧತಿಯಡಿ ಬದುಕುತ್ತಿರುತ್ತಾರೆ. ಒಬ್ಬರು ಬೆಳೆದದನ್ನು ಇನ್ನೊಬ್ಬರಿಗೆ ಕೊಟ್ಟು ಅವರು ಬೆಳೆದದ್ದನ್ನು ತಾವು ತೆಗೆದುಕೊಳ್ಳುವ ಈ ಸಮತಾವಾದದ ಜೀವನ ಕ್ರಮದಿಂದಾಗಿ ಆ ಹಳ್ಳಿಯಲ್ಲಿ ಎಲ್ಲರೂ ನೆಮ್ಮದಿಯಿಂದ ಜೀವಿಸುತ್ತಿರುತ್ತಾರೆ. ಬಾಲಮ್ ಹಾಗೂ ಅವನ ಸಂಗಡಿಗರು ಅಪಘಾತಕ್ಕೀಡಾದ ಲಕ್ಷ್ಮಿದಾಸ ಹಾಗೂ ಡಾರ್ಲಿಂಗ್‌ಳನ್ನು ಅಪಘಾತದಿಂದ ರಕ್ಷಿಸುತ್ತಾರೆ. ಅದರೆ ಮೂಲಭೂತವಾಗಿ evil ಮನಸ್ಸಿನ ಲಕ್ಷ್ಮಿದಾಸ ಈ ಮುಗ್ಧ ಆದಿವಾಸಿಗಳ ಬಾಳಲ್ಲಿ ನರಕವನ್ನೇ ಸೃಷ್ಟಿಸುತ್ತಾನೆ. ಅವರಲ್ಲಿ ಬಂಗಾರದ ಆಸೆಯನ್ನು ತೋರಿಸುತ್ತಾನೆ. ಮೂಲವಾಸಿಗಳಾದ ಇವರನ್ನೇ ಒತ್ತೆಯಾಗಿರಿಸಿಕೊಳ್ಳುತ್ತಾನೆ. ಆದಿವಾಸಿಗಳ ಈ ಸುಖ ಸಂತೋಷದ ಜೀವನದಲ್ಲಿ ಈ ಲಕ್ಷಿ ಹಾಗೂ ಲಕ್ಮೀದಾಸನ ಪ್ರವೇಶದಿಂದ ಸಂಪೂರ್ಣ ಕೋಲಾಹಲವುಂಟಾಗುತ್ತದೆ. ಸಮತಾವಾದ ಶೈಲಿಯ ಬದುಕು ಛಿದ್ರಛಿದ್ರವಾಗಿ ಹಳ್ಳಿಗರು ಪರಸ್ಪರ ಕಿತ್ತಾಡುತ್ತ ತಮ್ಮ ಬದುಕನ್ನು ನಾಶಪಡಿಸಿಕೊಳ್ಳುತ್ತಾರೆ.  ಲಕ್ಷ್ಮಿದಾಸ, ಬಾಲಮ್ ಹಾಗು ಆದಿವಾಸಿಗಳನ್ನು ಮೋಸದಿಂದ, ಸುಳ್ಳು ಭರಸೆಗಳ ಮೂಲಕ ಅವರ ಇಬ್ಬರು ಹಳ್ಳಿಗರಾದ ಚಂಗು – ಮಂಗು  ಹಾಗು ಎತ್ತುಗಳ ನೆರವನ್ನು ಪಡೆದು ಅವರ ಮೂಲಕ ನಗರಕ್ಕೆ ಪ್ರಯಾಣ ಬೆಳೆಸುತ್ತಾನೆ. ಆದರೆ ನಂತರ ಇವನ ಹಾಗೂ ಡಾರ್ಲಿಂಗ್‌ಳ ಪತ್ತೆನೇ ಇರುವುದಿಲ್ಲ. ತಮ್ಮ ಜನ ಚಂಗು-ಮಂಗು ಹಾಗೂ ಎತ್ತುಗಳನ್ನು  ಹುಡುಕಿಕೊಂಡು ಪ್ರಥಮ ಬಾರಿಗೆ ನಗರಕ್ಕೆ ಪ್ರಯಾಣ ಬೆಳೆಸುವ ಬಾಲಮ್ ಹಾಗು ಕಿನಾರಿ ಅಲ್ಲಿ ಅನುಭವಿಸುವ ಅವಮಾನ, ನೋವುಗಳು, ಲಕ್ಮೀದಾಸನ ಕಪಟತನ ಚಿತ್ರದ ಮುಂದಿನ ಭಾಗ.

ಇಂತಹ ಕತೆಯುಳ್ಳ ಚಲನಚಿತ್ರವನ್ನು ನಿರ್ಮಿಸಿ ತಮ್ಮ ಮಾನವತಾವದದ, ಜೀವಪರ ಚಿಂತನೆಯನ್ನು ಬಿಗಿಯಾದ ಚಿತ್ರಕಥೆಯ ಮೂಲಕ, ನಾಟಕೀಯ ಅಭಿನಯದ ಮೂಲಕ ಅತ್ಯಂತ ಸಶಕ್ತವಾಗಿ ತೆರೆಗೆ ತಂದ ಮೆಹಬೂಬ್ ಖಾನ್ 15 ವರ್ಷಗಳ ನಂತರ ತಮ್ಮ ಜೀವಿತದ ಅತ್ಯುತ್ತಮ ಚಿತ್ರವಾದ “ಮದರ್ ಇಂಡಿಯಾ”ವನ್ನು ನಿರ್ಮಿಸಿ ನಿರ್ದೇಶಿಸುವುದರ ಮೂಲಕ ಪ್ರಗತಿಪರ ಧೋರಣೆಯೊಂದಿಗೆ ಕಾಲ ಬದಲಾದರೂ ತಾವು ಬದಲಾಗದೆ, ತಮ್ಮ ಚಿಂತನೆಗಳನ್ನು ಸದಾ ಹರಿತವಾಗಿರಿಸಿಕೊಂಡು ತಮ್ಮ ಚಿತ್ರಜೀವನದ ಇನ್ನೊಂದು ಮಜಲನ್ನು ತಲಪುತ್ತಾರೆ. ಆದರೆ ನಿಜದ, ಒರಿಜಿನಲ್ ಪ್ರತಿಭಾವಂತನ ಬಗ್ಗೆ ಈ ದೇಶ ಸದಾಕಾಲ ವಿಸ್ಮೃತಿಯನ್ನು, ಮೆಳ್ಳುಗಣ್ಣನ್ನು, ಅನೇಕ ಬಾರಿ ಕುರುಡುಗಣ್ಣನ್ನು ತೋರಿಸುತ್ತದೆ. ಇದು ರಾಮಮನೋಹರ ಲೋಹಿಯ, ರುತ್ವಿಕ್ ಘಟಕ್, ಎಂ.ಡಿ.ನಂಜುಂಡ ಸ್ವಾಮಿ, ಹೀಗೆ ಅನೇಕರ ಪಾಲಿಗೆ ನಿಜವಾಗಿ ಹೋಯಿತು. ನಿರ್ದೇಶಕ ಮೆಹಬೂಬ್ ಖಾನ್ ಪಾಲಿಗೆ ಕೂಡ.

ಈಗಲೂ ನೋಡಿ ಈ ಉದ್ಯಮಿ ವಿಜಯ ಮಲ್ಯ ದುಡ್ಡನ್ನು ಹುಣಿಸೇಕಾಯಿ ಬೀಜದ ತರಹ ಬಳಸಿ ಭೋಗದಲ್ಲಿ, ರಂಜನೆಯಲ್ಲಿ, ಸಂಪೂರ್ಣ ಸುಖದಲ್ಲಿ ಬದುಕಿದ. ತನ್ನ ಜೀವಿತಾವಧಿಯುದ್ದಕ್ಕೂ ಸಾಮಾಜಿಕತೆಗೆ, ಸಾಮಜಿಕ ಜವಾಬ್ದಾರಿಗಳಿಗೆ ಕವಡೆ ಕಾಸಿನ ಬೆಲೆ ಕೊಡದೆ ಅಪ್ಪಟ ಬಂಡವಾಳಶಾಹಿಯಂತೆ ಮೆರೆದ ಹಾಗೂ ತನ್ನ ಈ ಐಷಾರಮಿನ ಬದುಕಿನಲ್ಲಿ ಒಮ್ಮೆಯೂ ಇಲ್ಲಿನ ಇನ್ನೊಂದು ಮುಖವಾದ ಸಾಮಾಜಿಕ ನರಕದ ಬಗ್ಗೆ ಕವಡೆ ಕಾಸಿನ ಕಿಮ್ಮತ್ತೂ ನೀಡದೆ ರೋಟಿ ಚಿತ್ರದ ಲಕ್ಷ್ಮೀದಾಸನಂತೆ ಹಣದ ಹಿಂದೆ, ಸುಖದ ಹಿಂದೆ ಮೆರೆದ ಈ ಪ್ಲೇಬಾಯ್ ಉದ್ಯಮಿ ಈ ವಿಜಯ್ ಮಲ್ಯ ಈಗಿನ ತನ್ನ ಖಾಸಗೀ ವ್ಯಪಾರದ ಕುಸಿತಕ್ಕೆ,ದಿವಾಳಿತನಕ್ಕೆ ಸರ್ಕಾರವನ್ನು ದೂಷಿಸುತ್ತಾನೆ. ಆದರೂ ಭಂಡನಂತೆ ಸರ್ಕಾರದ, ಬ್ಯಾಂಕಿನ ನೆರವು ಕೇಳುತ್ತಾನೆ. ಈ ರೀತಿ ಅನೇಕ ಲಕ್ಷ್ಮೀದಾಸರಿದ್ದಾರೆ ನಮ್ಮ ವ್ಯವಸ್ಥೆಯಲ್ಲಿ ಅಂಬಾನಿಗಳ, ಸಿಂಘಾನಿಗಳ ಇತ್ಯಾದಿಗಳ ರೂಪದಲ್ಲಿ.