Tag Archives: ಮಧುಕರ ಶೆಟ್ಟಿ

ಮಧುಕರ ಶೆಟ್ಟಿ ಮತ್ತವರ ಆದರ್ಶ ದುಷ್ಟಕೂಟಗಳ ದಾಳಗಳಾಗದಿರಲಿ…

– ರವಿ ಕೃಷ್ಣಾರೆಡ್ಡಿ

ಮಧುಕರ ಶೆಟ್ಟರು ಲೋಕಾಯುಕ್ತದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು—ಅದೂ ಈ ರೀತಿ, ವ್ಯಕ್ತಪಡಿಸುವ ಸಂದರ್ಭ ಇದಾಗಿರಲಿಲ್ಲ.

ಅವರು ಕರ್ನಾಟಕದ ದುಷ್ಟ ರಾಜಕಾರಣದ ಮತ್ತು ಮಾಧ್ಯಮದೊಂದಿಗಿನ ಅದರ ಅನೈತಿಕ ಸಂಬಂಧದ ದುಷ್ಟಕೂಟದ ಕೈಯಲ್ಲಿನ ದಾಳಗಳಾಗಿ ಉಪಯೋಗಿಸಲ್ಪಟ್ಟಿದ್ದಾರೆ.

ಯಾವ ಸಂದರ್ಭವೊಂದನ್ನು ಸಂಸ್ಥೆಯೊಂದನ್ನು ಇನ್ನೂ ಗಟ್ಟಿಗೊಳಿಸುವುದಕ್ಕಾಗಿ, ಕ್ರಿಯಾಶೀಲವಾಗಿ ಮಾಡುವುದಕ್ಕಾಗಿ, ಅಲ್ಲಿನ ಕಲ್ಮಶಗಳನ್ನು ತೆಗೆಯುವುದಕ್ಕಾಗಿ ಬಳಸಿಕೊಳ್ಳಬೇಕಿತ್ತೊ, ಅದನ್ನು ಈ ಮಹಾದುಷ್ಟಕೂಟ ತನ್ನ ಸ್ವಾರ್ಥಸಾಧನೆಗೆ ಬಳಸಿಕೊಳ್ಳುತ್ತಿದೆ. ಲೋಕಾಯುಕ್ತದ ಗತಿ ಏನಾಗುತ್ತದೆ ಎಂದು ಪ್ರಜ್ಞಾವಂತರು ಕಕಮಕರಾಗಿರುವಾಗ ಇದು ಖಂಡಿತವಾಗಿ ಅನಗತ್ಯವಾಗಿತ್ತು.

ಕಳೆದ ಆರೇಳು ತಿಂಗಳಿನಿಂದ ಮಧುಕರ ಶೆಟ್ಟರೊಡನೆ ಆಪ್ತವಾಗಿ ಕುಳಿತು ಮಾತನಾಡಿರಬಹುದಾದ ಯಾರಿಗೂ ಅವರು ಸಂದರ್ಶನದಲ್ಲಿ ಹೇಳಿರುವ ಮಾತುಗಳು ಬಹುಶಃ ಹೊಸದೇನೂ ಅಲ್ಲ. ಅವರು ಅಮೆರಿಕಕ್ಕೆ ಹೊರಡುವ ಒಂದೆರಡು ತಿಂಗಳಿನ ಹಿಂದೆ ಶೆಟ್ಟರನ್ನು ಭೇಟಿಯಾಗುವ ಸಂದರ್ಭ ಒದಗಿತ್ತು. ಸ್ನೇಹಿತರೊಬ್ಬರು ಅವರನ್ನು ಭೇಟಿ ಮಾಡುವವರಿದ್ದರು. ಜೊತೆಗೆ ನಾನೂ ಹೋಗಿದ್ದೆ. ಹಾಗಾಗಿ ಈ ಸಂದರ್ಶನದಲ್ಲಿ ಹೇಳಿದ ಎಲ್ಲವನ್ನೂ ಅಂದು ಅವರು ನಮ್ಮೊಡನೆ ಹಂಚಿಕೊಂಡಿದ್ದರು. ಹಾಗಾಗಿ ಈ ಸಂದರ್ಶನದಲ್ಲಿ ಪ್ರಸ್ತಾಪಿತವಾಗಿರುವ ಒಂದು ವಿಷಯ (ಅವರ ಮದುವೆ ಮತ್ತು ಅವರ ತಂದೆಯವರ ವಿರೋಧ) ಬಿಟ್ಟು ಮಿಕ್ಕೆಲ್ಲವೂ ನನಗೆ ಮೊದಲೇ ತಿಳಿದವಾಗಿದ್ದವು.

ಆದರೆ, ಈಗ ಆವರ ಈ ಮಾತುಗಳು ಸಂದರ್ಶನ ರೂಪದಲ್ಲಿ ಬಂದಿರುವುದು, ಅದನ್ನು ಆ ಪತ್ರಿಕೆ ಪ್ರಸ್ತುತ ಪಡಿಸಿರುವ ರೀತಿ ಮತ್ತು ಅದರ ಸಂದರ್ಭ, ಇವು ಯಾವುವೂ ಲೋಕಾಯುಕ್ತ ಸಂಸ್ಥೆಗಾಗಲಿ, ಕರ್ನಾಟಕದ ಜನತೆಗಾಗಲಿ ಒಳ್ಳೆಯದು ಮಾಡುವ ಹಾಗೆ ಕಾಣುತ್ತಿಲ್ಲ. ಹೀಗಾಗಿ ಇಂತಹ ವಿಚಾರಗಳ ಬಗ್ಗೆ ಸಂದರ್ಶನ ನೀಡುವುದೇ ಅಪಾಯಕಾರಿ. ಅದೂ ಇಲ್ಲಿ ಮಾಧ್ಯಮಗಳು ಮತ್ತು ರಾಜಕಾರಣಿಗಳು ಸಮಾನ ಪಿತೂರಿಕೋರರಾಗಿರುವಾಗ.

ಇಷ್ಟಕ್ಕೂ ಮಧುಕರ ಶೆಟ್ಟರ ಅಂತಿಮ ಗುರಿ ಏನು? ಅದು ತಾವು ಈ ಹಿಂದೆ ದುಡಿದ ಲೋಕಾಯುಕ್ತ ಸಂಸ್ಥೆಯನ್ನು ಮತ್ತಷ್ಟು ಜನಪರವಾಗಿ, ಪ್ರಜಾಸತ್ತೆಯ ಪರವಾಗಿ ಬಲಪಡಿಸುವುದಾಗಿತ್ತೆ ಅಥವ ಅದನ್ನು ದುರ್ಬಲಗೊಳಿಸುವುದಾಗಿತ್ತೆ? ಅವರದು ಖಂಡಿತವಾಗಿ ಮೊದಲನೆಯದೇ ಆಗಿರಬೇಕು. ಆದರೆ ಅವರು ಅದನ್ನು ಒಂದು ಲೇಖನವಾಗಿ ತಮ್ಮೆಲ್ಲಾ ವಿಚಾರಗಳನ್ನು ತರ್ಕಬದ್ಧವಾಗಿ ಒಂದು ಕಡೆಯಿಂದ ಮಂಡಿಸುತ್ತ ನಿರೂಪಿಸಿ, ಬರೆದು, ಪ್ರಕಟಿಸಬೇಕಿತ್ತೇ ಹೊರತು, ಸಂದರ್ಶನವಾಗಿ ಅಲ್ಲ. ಹಾಗೆ ಮಾಡದೇ ಹೋದದ್ದರ ಪರಿಣಾಮಗಳನ್ನು ಈಶ್ವರಪ್ಪನವರಂತಹ ಕಿಡಿಗೇಡಿ, ಸಂಕುಚಿತ ದೃಷ್ಟಿಯ, ಸಣ್ಣತನದ ರಾಜಕಾರಣಿಗಳ ಹೇಳಿಕೆಗಳಲ್ಲಿ ನೋಡುತ್ತಿದ್ದೇವೆ. ಕುಮಾರಸ್ವಾಮಿಯವರು ಸಂತೋಷ ಹೆಗ್ಡೆಯವರ ವಿರುದ್ಧ ತಮ್ಮ ವೈಯಕ್ತಿಕ ದ್ವೇಷ ಕಾರಿಕೊಳ್ಳಲು ಬಳಕೆಯಾಗಿದೆ. ಯಡಿಯೂರಪ್ಪ ಸಹ ಇಂದು ತಮ್ಮ ವಿರುದ್ಧದ ಆರೋಪಗಳಿಗೆ ಶೆಟ್ಟರ ಹೇಳಿಕೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರೆ ಅವರ ಹೇಳಿಕೆ ಇಲ್ಲಿ ಯಾವ ಮಟ್ಟದ ಹಾನಿ ಮಾಡಿದೆ ಮತ್ತು ಭ್ರಷ್ಟರಿಗೆ ಮಧುಕರ ಶೆಟ್ಟಿ ಯಾವ ಪರಿ ಅನುಕೂಲಕರವಾಗಿ ಪರಿಣಮಿಸಿದ್ದಾರೆ ಎಂದು ಗೊತ್ತಾಗುತ್ತದೆ. ಇಂದು ಕರ್ನಾಟಕದ ಭ್ರಷ್ಟರೆಲ್ಲ ಒಂದೇ ಮಾತುಗಳನ್ನು ಆಡುತ್ತಿದ್ದಾರೆ.

ಇಷ್ಟಕ್ಕೂ ಮಧುಕರ ಶೆಟ್ಟರು ಮತ್ತು ಆ ಸಂದರ್ಶನ ಓದಿದವರು ಒಂದು ವಿಚಾರವನ್ನು ಗಮನಿಸಬೇಕು: ಲೋಕಾಯುಕ್ತ ಸಂಸ್ಥೆಯಿಂದಾಗಿ ಭ್ರಷ್ಟಾಚಾರ ಹುಟ್ಟಿಲ್ಲ. ಭ್ರಷ್ಟಾಚಾರ ಇದ್ದಿದ್ದರಿಂದಾಗಿ ಮತ್ತು ಅದನ್ನು ತಡೆಗಟ್ಟುವ ನಿಮಿತ್ತವಾಗಿ ಜನಪ್ರತಿನಿಧಿಗಳ ಸರ್ಕಾರ ಲೋಕಾಯುಕ್ತವನ್ನು ಸ್ಥಾಪಿಸಿರುವುದು. ಲೋಕಾಯುಕ್ತದಲ್ಲೂ ಭ್ರಷ್ಟರಿದ್ದರೆ ಅದನ್ನು ಸರಿಪಡಿಸಿಕೊಳ್ಳುತ್ತ ಹೋಗಬೇಕೆ ಹೊರತು ಅದನ್ನು ಮತ್ತಷ್ಟು ದುರ್ಬಲಗೊಳಿಸುವುದು ತರವಲ್ಲ.

ನಾನು ಹೆಚ್ಚುಕಮ್ಮಿ ವ್ಯವಸ್ಥೆಯ ಹೊರಗಿದ್ದು ಮಾತನಾಡುವವನು. ಇಲ್ಲಿನ ಭ್ರಷ್ಟ ವ್ಯವಸ್ಥೆಯಿಂದಾಗಿ ಆದಷ್ಟೂ ಅದರ ಸಂಪರ್ಕದಿಂದ ಹೊರಗೇ ಇರುವ ರೀತಿ ವರ್ತಿಸುತ್ತೇನೆ. ಇದು ನಾನು ನನ್ನನ್ನು ಅವಮಾನ-ಸೋಲುಗಳಿಂದ ದೂರ ಇಟ್ಟುಕೊಳ್ಳುವ ರೀತಿ. ಈ ವ್ಯವಸ್ಥೆಯ ಭಾಗವಾದರೆ ನಾನೂ ಭ್ರಷ್ಟನಾಗುತ್ತೇನೆ ಎನ್ನುವ ಭಯ ನನಗಿಲ್ಲ. ಆದರೆ ಸೋಲು-ಅವಮಾನಗಳು ಖಂಡಿತ ಆಗುತ್ತವೆ. ಆಗಿವೆ. ಹಾಗಾಗಿಯೆ ಅವುಗಳ ಅವಶ್ಯಕತೆಯಿಲ್ಲ ಎಂದು ದೂರ ಇರುತ್ತೇನೆ.  ಕೆಲವೊಮ್ಮೆ ಸೋಲುವುದು ನೈತಿಕವಾಗಿ ತಪ್ಪೇನೂ ಅಲ್ಲ, ಮತ್ತು ಆ ಪ್ರಯತ್ನ ನಾವು ನಂಬಿಕೊಂಡ ಆದರ್ಶದ ಕ್ರಿಯಾರೂಪ ಎಂದಾದಾಗ, ಅಂತಹ ಕೆಲಸಗಳನ್ನು ಮಾಡಲು ಮುಂದಾಗುತ್ತೇನೆ. ಅಲ್ಲಿ ಸೋಲುವುದು ಶತ:ಸಿದ್ಧವಾಗಿದ್ದರೂ. ಮಾತುಗಳೂ ಅಷ್ಟೆ. ಕೆಲವೊಂದು ವೇದಿಕೆಗಳಲ್ಲಿ ತುಂಬಾ ಆದರ್ಶದ, ಅವಾಸ್ತವಿಕ ಎನ್ನಬಹುದಾದ ಮಾತುಗಳನ್ನು ಆಡುತ್ತೇನೆ. ಅದು ಈ ಹೊತ್ತಿನಲ್ಲಿ ಅವಾಸ್ತವ ಎಂದು ಗೊತ್ತಿದ್ದರೂ. ಆದರೆ ಅವು ಎಂದೂ ಸಾಧ್ಯವಾಗದ ಮಾತುಗಳೇನೂ ಅಲ್ಲ. ಪ್ರಪಂಚದ ಯಾವುದೋ ಭಾಗದಲ್ಲಿ ಒಂದಲ್ಲ ಒಂದು ಸಲ ಅವು ಸಾಧಿಸಿ ತೋರಿಸಲ್ಪಟ್ಟಿವೆ, ಇಲ್ಲವೇ ಸಾಧಿಸಲ್ಪಡುತ್ತವೆ. ನನ್ನ ಇಂತಹ ಆಚಾರ-ವಿಚಾರಗಳನ್ನು ಮುಂದಿಟ್ಟುಕೊಂಡು ಕೆಲವರು ನಾನೊಬ್ಬ ಹುಚ್ಚ, ಪೆದ್ದ, ತಿಕ್ಕಲು, ಎಂದೆಲ್ಲಾ ಅಂದಿದ್ದಾರೆ. ಅದು ಅವರ ವೈಯಕ್ತಿಕ ದ್ವೇಷ ಕಾರಿಕೊಳ್ಳುವ ತೆವಲಿಗಾಗಿಯೇ ಹೊರತು ಅಲ್ಲಿ ಬೇರೇನೂ ಇರಲು ಸಾಧ್ಯವಿಲ್ಲ.

ಇದನ್ನೆಲ್ಲಾ ಹೇಳಬಯಸಿದ್ದು ಮಧುಕರ ಶೆಟ್ಟರು ವ್ಯಕ್ತಪಡಿಸಿರುವ ಕೆಲವು ಆದರ್ಶಪ್ರಾಯದ ಅಭಿಪ್ರಾಯಗಳಿಗೆ ಭಿನ್ನಾಭಿಪ್ರಾಯ ಸೂಚಿಸಲು ಮತ್ತು ಅವು ಅವರಂತಹವರು ಆಡುವ ಮಾತುಗಳಲ್ಲ ಮತ್ತು ಇದು ಸಂದರ್ಭವೂ ಅಲ್ಲ ಎಂದು ಹೇಳಲು. ಅವರು ವ್ಯವಸ್ಥೆಯ ಭಾಗವಾಗಿದ್ದವರು. ಆದರೆ ಅತೀ ಎನ್ನಿಸುವಷ್ಟು ಆದರ್ಶದ ಮಾತುಗಳನ್ನು ಆಡಿದ್ದಾರೆ. ನನ್ನಂತಹ ‘ಪೆದ್ದ’ನೇ ಆಶ್ಚರ್ಯಪಡುವಷ್ಟು. ಒಂದು, ಅಧಿಕಾರಿಯ ಮರಣದ ವಿಷಯವಾಗಿದ್ದರೆ, ಮತ್ತೊಂದು “ವೈಯಕ್ತಿಕ ವರ್ಚಸ್ಸು ಮತ್ತು ನೈತಿಕತೆ ವೃದ್ಧಿ ಗೀಳಿಗೆ ಬಿದ್ದ ವ್ಯಕ್ತಿಯಿಂದ ಆತ ಪ್ರತಿನಿಧಿಸುವ ಸಂಸ್ಥೆ ಹಾಳಾಗುತ್ತದೆ. ಪ್ರಾಮಾಣೀಕನೆಂಬ ಬಿರುದು-ಬಾವಲಿಗಳ ಬೆನ್ನತ್ತಿದವನು ಸಂಸ್ಥೆಯ ಮಾರ್ಯಾದೆ ಮತ್ತು ಗೌರವ ಉಪೇಕ್ಷಿಸುತ್ತಾನೆ. ಇಂಥವರು ಭ್ರಷ್ಟರಿಗಿಂತಲೂ ಅಪಾಯಕಾರಿ. ಇಷ್ಟಕ್ಕೂ ಒಬ್ಬ ವ್ಯಕ್ತಿ, ಅಧಿಕಾರಿ, ವ್ಯವಸ್ಥೆಯ ಮುಖ್ಯಸ್ಥನನ್ನು ಪ್ರಾಮಾಣಿಕ ಎಂದು ಕರೆಯುವುದೇ ಹಾಸ್ಯಾಸ್ಪದ.” ಎನ್ನುವ ಮಾತುಗಳು. ಇದನ್ನು ಶೆಟ್ಟರು ಸಹಜವಾಗಿ ಇಡೀ ಸಮಾಜವನ್ನು, ಎಲ್ಲಾ ಸಂಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು, ಆದರ್ಶದ ನೆಲೆಯಲ್ಲಿ ಹೇಳಿದರೋ ಇಲ್ಲವೋ ಗೊತ್ತಿಲ್ಲ. ಆದರೆ, ಕುಮಾರಸ್ವಾಮಿಯವರು ಮಾತ್ರ ಇದನ್ನು ನೇರ ಸಂತೋಷ ಹೆಗ್ಡೆಯವರಿಗೆ ತಿರುಗಿಸಿದ್ದಾರೆ.

ಅವರಂತಹ ವ್ಯಕ್ತಿ, ವ್ಯವಸ್ಥೆಯ ಭಾಗವಾಗಿದ್ದವರು, ಅದನ್ನು ಸುಧಾರಿಸಲು ಸಹಕರಿಸಬೇಕೇ ಹೊರತು (ಅದನ್ನು ಅವರ ಅಧಿಕಾರವಧಿಯುದ್ದಕ್ಕೂ ಮಾಡಿದ್ದಾರೆ ಎಂದು ನಾನು ಖಂಡಿತ ನಂಬುತ್ತೇನೆ. ಅದನ್ನು ಗೌರವಿಸುತ್ತೇನೆ ಕೂಡಾ.) ಆದರ್ಶದ ನೆಲೆಯಲ್ಲಿ ಮಾತನಾಡುತ್ತ ಅದನ್ನು undermine ಮಾಡಬಾರದು. ಈ ವಿಚಾರಗಳನ್ನು ಎತ್ತುವುದಕ್ಕೆ, ಪ್ರಸ್ತುತಗೊಳಿಸುವುದಕ್ಕೆ ಬೇರೆಯದೇ ಆದ ವೇದಿಕೆಗಳಿವೆ, ರೀತಿಗಳಿವೆ. ಅದನ್ನು ಅವರು ಗಮನಿಸಬೇಕಿತ್ತು.

ಒಬ್ಬ ಪೋಲಿಸ್ ಅಧಿಕಾರಿ ಸಾಮಾಜಿಕವಾಗಿ ಎಂತಹ ಜೀವನ ನಡೆಸಬೇಕು, ಯಾರೊಂದಿಗೆ ಎಷ್ಟು ಬೆರೆಯಬೇಕು, ಬೆರೆಯಬಾರದು, ಎನ್ನುವುದರ ಬಗ್ಗೆ ಶೆಟ್ಟರು ಅವರ ವೃತ್ತಿಯಲ್ಲಿರುವ ಯಾರಿಗೇ ಆದರೂ ಆದರ್ಶಪ್ರಾಯರಾಗುವ ವ್ಯಕ್ತಿ. ಅವರೇ ಹೇಳಿಕೊಂಡಂತೆ ಬೆಂಗಳೂರಿನಲ್ಲಿ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗೆಳೆಯರಿಲ್ಲ. ಪಾರ್ಟಿಗಳಿಗೆ ಹೋಗುವುದಿಲ್ಲ. ಹೀಗಾಗಿ ಯಾರೂ ತಮ್ಮನ್ನು ಸ್ನೇಹ, ನೆಂಟಸ್ತಿಕೆಯ ಮೂಲಕ ದುರುಪಯೋಗಪಡಿಸಿಕೊಳ್ಳಲು ಬಿಡುವುದಿಲ್ಲ. ನ್ಯಾಯಾಧೀಶರೆಲ್ಲ ಎಂತೆಂತವರ ಜೊತೆಯೆಲ್ಲಾ ವೇದಿಕೆ ಹಂಚಿಕೊಳ್ಳಲು, ಸಭೆಸಮಾರಂಭಗಳಲ್ಲಿ ಪಾಲ್ಗೊಳ್ಳಲು ಔಚಿತ್ಯವಿಲ್ಲದೆ ಸಿದ್ಧರಾಗಿ ನಿಂತಿರುವ ಸಂದರ್ಭ ಇದು. ಇಂತಹ ಸಂದರ್ಭದಲ್ಲಿ ಹೆಂಡತಿ ಮತ್ತು ಮಗಳು ದೇಶದ ಹೊರಗಿದ್ದಾಗಲೂ ಇಲ್ಲಿ ಪೊಲಿಸ್ ಅಧಿಕಾರಿ ಇರಬೇಕಾದ ರೀತಿಯಲ್ಲಿ ವಿನಾಕಾರಣ ಸಮಾಜದ ಎಲ್ಲರೊಂದಿಗೂ ಗುರುತಿಸಿಕೊಳ್ಳದೆ ನಿಷ್ಟುರ ಜೀವನ ನಡೆಸಿದವರು ಮಧುಕರ್ ಶೆಟ್ಟರು. ಅವರು ಅನವಶ್ಯಕವಾಗಿ ದುರುಳರ ದಾಳಗಳಾಗುವುದು,  ಅದೂ ಪ್ರಾಮಾಣಿಕತೆ ಮತ್ತು ನೈತಿಕತೆಯ ಹೆಸರಿನಲ್ಲಿ, ಖಂಡಿತ ಬೇಸರದ ಸಂಗತಿ.

ಬಹುಶ: ಈ ಲೇಖನವನ್ನು ಮಧುಕರ ಶೆಟ್ಟರು ಓದಿದರೂ ಓದಬಹುದು. ಹಾಗಾದ ಪಕ್ಷದಲ್ಲಿ ಅವರಲ್ಲಿ ನನ್ನ ಒಂದು ವಿನಂತಿ ಏನೆಂದರೆ, “ದಯವಿಟ್ಟು ನಿಮ್ಮ ಸಂದರ್ಶನ ಮತ್ತು ಅದರ ಮೂಲಕ ನೀವು ನಿಜಕ್ಕೂ ಹೇಳಬಯಸಿದ್ದು ಏನು, ಲೋಕಾಯುಕ್ತದಲ್ಲಿರುವ ಸಮಸ್ಯೆಗಳೇನು, ಅದನ್ನು ದೋಷಮುಕ್ತ ಮಾಡಲು ಮತ್ತು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಮಾಡಬೇಕಿರುವ ಕೆಲಸಗಳೇನು, ಇತ್ಯಾದಿಯೆಲ್ಲ  ವಿಸ್ತೃತವಾಗಿ ಬರೆಯಿರಿ. ಅದನ್ನು ಒಂದಲ್ಲ, ಕರ್ನಾಟಕದ ಎಲ್ಲಾ ಪ್ರಮುಖ ಕನ್ನಡ-ಇಂಗ್ಲಿಷ್ ಪತ್ರಿಕೆಗಳಿಗೂ ಕಳುಹಿಸಿಕೊಡಿ. ನಿಮ್ಮ ಸಂದರ್ಶನವನ್ನು ಸ್ವಾರ್ಥಸಾಧನೆಗೆ ಬಳಸಿಕೊಳ್ಳುತ್ತಿರುವವರಿಗೆ ಅದು ಎಚ್ಚರವೂ ಆಗಲಿ.”

ಚೆಡ್ಡಿ ಪತ್ರಕರ್ತರ ಸಂಚಿಗೆ ಪತ್ರಕರ್ತರ ಐ.ಪಿ.ಎಸ್. ಮಗ ಬಲಿಪಶು

ಮಧುಕರ ಶೆಟ್ಟಿ ಸಂದರ್ಶನ ವಿವಾದ – ಕಾಸಿಗಾಗಿ ಸುದ್ದಿ ಹಾಕುವ ಚೆಡ್ಡಿ ಪತ್ರಕರ್ತರ ಸಂಚಿಗೆ  ಸಮಾಜವಾದಿ ಪತ್ರಕರ್ತರ ಐ.ಪಿ.ಎಸ್ ಮಗ ಬಲಿಪಶು

-ಚಂದ್ರಗಿರಿ

ದಿನಾಂಕ 13-11-2011ರ ಭಾನುವಾರ ಕಾರ್ಪೊರೇಟ್ ಎಂ.ಪಿ. ಮಲೆಯಾಳಿ ರಾಜೀವ್ ಚಂದ್ರಶೇಖರ್ ಮಾಲಿಕತ್ವದಲ್ಲಿ ಬರುವ ಕನ್ನಡ ಪ್ರಭದಲ್ಲಿ ಲೋಕಾಯುಕ್ತದಲ್ಲಿ ಕೆಲಸ ಮಾಡಿದ ಐ.ಪಿ.ಎಸ್. ಅಧಿಕಾರಿ ಮಧುಕರ ಶೆಟ್ಟಿ ಆವರ ಸಂದರ್ಶನ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಕೊಳದಲ್ಲಿ ಅಪಾರವಾದ ಹೊಂಡನ್ನು ಸೃಷ್ಟಿ ಮಾಡಿದೆ. ರಜೆ ಮೇಲೆ ಅಮೆರಿಕಾಕ್ಕೆ ತೆರಳಿ ವಿದ್ಯಾಭ್ಯಾಸ ಮಾಡುತ್ತಿರುವ  ಐ.ಪಿ.ಎಸ್. ಅಧಿಕಾರಿ ಮುಗ್ಧ ಮಧುಕರ ಶೆಟ್ಟೆ ಅವರ ಸಂದರ್ಶನ ಪ್ರಾಮಾಣಿಕತೆಯಿಂದ ಕೂಡಿದ್ದರೂ ಸಮಯೋಚಿತ ಸಂಚಿಗೆ ಬಲಿಯಾಗಿದೆ.

ಈಚಿನ ದಿನಗಳಲ್ಲಿ ಕರ್ನಾಟಕದ ಜನರಿಗೆ  ಲೋಕಾಯುಕ್ತದ ಬಗ್ಗೆ ನಂಬಿಕೆಯನ್ನು ಶಿಥಿಲಗೊಳಿಸುವ ಮಧುಕರ್ ಅವರ ಈ ಸಂದರ್ಶನ ಈ ಸಂದರ್ಭದಲ್ಲಿ ಪ್ರಕಟವಾಗಿರುವುದು ಭ್ರಷ್ಟ ವ್ಯವಸ್ಥೆಗೆ ಕಡಿವಾಣ ಹಾಕಲು ಮುಂದಾಗಿದ್ದ ಒಂದು ಸಂಸ್ಥೆಯ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಅನುಮಾನವಿದೆ. ಕಾಸಿಗಾಗಿ ಸುದ್ದಿ ಪ್ರಕಟಿಸುವ ಮಾಧ್ಯಮಗಳು ಮತ್ತು ಕೆಲ ರಾಜಕಾರಣಿಗಳು ಮಧುಕರ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ದುರುಪಯೋಗ ಮಾಡಿಕೊಂಡಿರುವ ದಟ್ಟ ಅನುಮಾನಗಳು ನನ್ನನ್ನು ಕಾಡುತ್ತಿವೆ.

ಕನ್ನಡದ ಹೆಸರಾಂತ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮಶೆಟ್ಟರ ಮಗನಾದ ಶ್ರೀ ಮಧುಕರ ಶೆಟ್ಟರು ಪತ್ರಿಕಾ ವಲಯ ಹಾಗೂ ಪ್ರಗತಿಪರ ವಲಯದಲ್ಲಿ ಅನೇಕರಿಗೆ ಚಿರಪರಿಚಿತರಾಗಿದ್ದಾರೆ. ನಾನು ಬಲ್ಲ ಅನೇಕ ಪತ್ರಿಕಾ ಸ್ನೇಹಿತರು ಅವರು ಉಡುಪಿಯಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಿದ್ದನ್ನು, ಲೋಕಾಯುಕ್ತದಲ್ಲಿ ಭ್ರಷ್ಟರನ್ನು ಮಟ್ಟ ಹಾಕಿದ ಬಗೆಯನ್ನು, ಅದರಲ್ಲೂ ವಿಶೇಷವಾಗಿ ಕಟ್ಟಾ ಸುಬ್ರಮಣ್ಯಾ ನಾಯ್ಡು ಅವರ ಭೂ ವಂಚನೆ ಪ್ರಕರಣವನ್ನು ನಿಭಾಯಿಸುತ್ತಿರುವ ರೀತಿಯನ್ನು ವಿಜೃಂಭಣೆಯಿಂದ ವಿವರಿಸಿದ್ದಾರೆ.

ಸಿವಿಲ್ ಸರ್ವಿಸ್ ಪರೀಕ್ಷೆ ಪಾಸಾಗಿ ಐ.ಪಿ.ಎಸ್. ತರಬೇತಿ ಪಡೆದು ದಕ್ಷ ಪೊಲೀಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಧುಕರ ಶೆಟ್ಟರು ಇದ್ದಕ್ಕಿದ್ದಂತೆ ಎರಡು ವರ್ಷ ಅಮೆರಿಕದಲ್ಲಿ ಓದುವ ಸಲುವಾಗಿ ರಜೆ ಹಾಕುವ ಪ್ರಸಂಗ ಎದುರಾದಾಗ ಅವರ ಆಪ್ತ ಬಳಗ ಶೆಟ್ಟರಿಗೆ ಲೋಕಾಯುಕ್ತ ಕಾರ್ಯ ವೈಖರಿ ಬಗ್ಗೆ ಬೇಸರವಾಗಿರುವುದನ್ನು ಅಲ್ಲಲ್ಲಿ ವಿಷಾದನೀಯವಾಗಿ ವಿವರಿಸುತ್ತಿತ್ತು. ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಭೇಟಿ ಮಾಡಿ ತಮ್ಮ ನೋವು ತೋಡಿಕೊಂಡ ಬಗ್ಗೆಯೂ  ಗಿಲ್ಡ್ ಮತ್ತು ಕ್ಲಬ್‌ಗಳಲ್ಲಿ ಈ ಬಳಗ ಮಾತನಾಡಿದ್ದುಂಟು.

ಮಧುಕರ್ ಲೋಕಾಯುಕ್ತ ಸಂತೋಷ ಹೆಗ್ಡೆ ಅವರ ಕಾರ್ಯದಕ್ಷತೆಯನ್ನು ಪ್ರಶ್ನಿಸಿ ಅವರ ಅತಿಯಾದ ಪ್ರಚಾರವನ್ನು ಟೀಕಿಸುತ್ತಿದ್ದುದು ಅವರ ಪತ್ರಿಕಾ ಮಿತ್ರರ ಮಾತಿನಿಂದ ನಮಗೆ ಗೊತ್ತಾಗುತ್ತಿತ್ತು. ಸಂತೋಷ ಹೆಗ್ಡೆ ಬಗ್ಗೆ ತಮಗಿರುವ ಅಸಮಾಧಾನವನ್ನು ಮಧುಕರ ಲೋಕಾಯುಕ್ತ ಸಂಸ್ಥೆಯೇನು ಸಾಚ ಅಲ್ಲ ಎನ್ನುವ ಮೂಲಕ ಪರೋಕ್ಷವಾಗಿ ವ್ಯಕ್ತ ಪಡಿಸುತ್ತಿದ್ದುದು ಅನೇಕ ಪತ್ರಕರ್ತರಿಗೆ ಗೊತ್ತಾಗಿತ್ತು. ಆದರೆ ಸಂತೋಷ ಹೆಗ್ಡೆ ಅವರ ಪ್ರಾಮಾಣಿಕತೆ ಮುಂದೆ ಮಧುಕರರ “ಗಾಸಿಪ್” ಯಾವುದೇ ಪರಿಣಾಮ ಉಂಟು ಮಾಡಲಿಲ್ಲ.

ಆದರೀಗ ಲೋಕಾಯುಕ್ತ  ಸಂತೋಷ ಹೆಗ್ಡೆ ಅವರ ಕಾರ್ಯದಕ್ಷತೆ ರೇಣುಕಾಚಾರ್ಯ, ಕುಮಾರಸ್ವಾಮಿ, ಬಿ.ಜೆ.ಪಿ. ಈಶ್ವರಪ್ಪ, ಮಾಜಿ ರೌಡಿ ಶೀಟರ್ ಬಿ.ಕೆ. ಹರಿಪ್ರಸಾದ್ ಅಂತಹವರ ಟೀಕೆಗೆ ತುತ್ತಾಗಿರುವ ಸಂದರ್ಭದಲ್ಲಿ ಮುಗ್ಧ ಮಧುಕರ  ಕನ್ನಡ ಪ್ರಭಕ್ಕೆ ದೂರವಾಣಿ ಸಂದರ್ಶನ ನೀಡಿ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಹೂರಣವನ್ನು ಕನ್ನಡಿಗರಿಗೆ ಉಣಬಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸೇರಿದಂತೆ ಅನೇಕ ಸಚಿವರು ಜೈಲಿಗೆ ಹೋಗಿ ಬರುತ್ತಿರುವಾಗ,  ಮಗನ ಮನೆ ಮೇಲೆ ಲೋಕಾಯುಕ್ತರು ದಾಳಿ ಮಾಡಿದಾಗ ಮಂಡಲ ಪಂಚಾಯತಿ ಸದಸ್ಯರ ರೀತಿಯಲ್ಲಿ ಲೋಕಾಯುಕ್ತ ಪೊಲೀಸರಿಗೆ ಮಾಜಿ ಪ್ರಧಾನಿಗಳು ಧಮಕಿ ಹಾಕಿರುವಾಗ ಮಧುಕರರ ಮುಗ್ಧ ಹೇಳಿಕೆ ಪ್ರಾಮಾಣಿಕತೆಯ ಆದರ್ಶವನ್ನು ನಂಬಿ ಬದುಕು ನಡೆಸುವ ಕನ್ನಡಿಗರ ಪಾಲಿಗೆ ನುಂಗಲಾರದ ತುತ್ತು. ನಮಗೆ ಈಗ ಕರ್ನಾಟಕದಲ್ಲಿ ಸಂತೋಷ ಹೆಗ್ಡೆ ಬಿಟ್ಟರೆ ಬೇರಾರೂ ಪ್ರಾಮಾಣಿಕರು ಮತ್ತು ಪರಿಪಕ್ವರೂ ಕಾಣುತ್ತಿಲ್ಲದ ಈ ಸಂದರ್ಭದಲ್ಲಿ ಮಧುಕರರ ಸಂದರ್ಶನ ಪ್ರಾಮಾಣಿಕರ ಆತ್ಮಸ್ಥೈರ್ಯಕ್ಕೆ  ಸವಾಲಾಗಿ ಪರಿಣಮಿಸಿದೆ.

ಮಧುಕರ ಶೆಟ್ಟರು ಪ್ರಾಮಾಣಿಕ ಅಧಿಕಾರಿ ಎಂಬುದರಲ್ಲಿ ನಮ್ಮ ಎರಡು ಮಾತಿಲ್ಲ. ಅಂತೆಯೇ ಇವರು ಸಿನಿಕರು ಎಂಬುದು ಸಂದರ್ಶನದ ಪ್ರತಿ ಹಂತದಲ್ಲೂ ವ್ಯಕ್ತವಾಗಿದೆ. ಕೆಟ್ಟು ಕೆರ ಹಿಡಿದಿರುವ ಈ ವ್ಯವಸ್ಥೆಯಲ್ಲಿ ಪರಿಸ್ಥಿತಿಯನ್ನು ನಿಧಾನಕ್ಕೆ ನಿಯಂತ್ರಣಕ್ಕೆ ತಂದುಕೊಂಡು ಸಮಾಜವನ್ನು ಸುಧಾರಣೆ ಮಾಡುವ ಹಂತಕ್ಕೆ ಹೋಗಬೇಕು. ಅದು ಬಿಟ್ಟು ತಡ ರಾತ್ರಿ ಗೋಷ್ಠಿಗಳಲ್ಲಿ ಪರಿಚಯಸ್ಥರ ಮುಂದೆ ತಾನೇ ಕೆಲಸ ಮಾಡುವ ವ್ಯವಸ್ಥೆ ಬಗ್ಗೆ ದೂರಿ ಒಳ್ಳೆಯವನಾಗಬಾರದು. ಇದು ಮೀಡಿಯಾ ಫ್ರೆಂಡ್ಲಿ ಆಫೀಸರ್ ಮನೋಭಾವನೆಗಿಂತ ಮಿಗಿಲಾಗಿ ಏನೂ ಅಲ್ಲ.

ದೂರದ ಅಮೆರಿಕೆಯಿಂದ ದೂರವಾಣಿಯಲ್ಲಿ ನೀವು ಕಾಸಿಗಾಗಿ ಸುದ್ದಿ ಹಾಕುವ ಚೆಡ್ಡಿ ಪತ್ರಕರ್ತರೊಂದಿಗೆ ಮಾತನಾಡಿದ ನಂತರ ಕನ್ನಡ ನಾಡಿನಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಹೀಗಿವೆ ನೊಡಿ ಮಧುಕರ್..:

  • ಬಿ.ಜೆ.ಪಿ ಅಧ್ಯಕ್ಷ ಈಶ್ವರಪ್ಪ ‘ಕಳ್ಳರನ್ನು ಕಳ್ಳರೇ ಹಿಡಿಯುವುದು ಎಂತಹ ಹಾಸ್ಯಾಸ್ಪದ’ ಎಂದಿದ್ದಾರೆ.
  • ‘ಮಧುಕರ್ ನನಗೆ ಈ ಹಿಂದೆಯೇ ಈ ವಿಷಯವನ್ನು ತಿಳಿಸಿದ್ದರು. ಅದಕ್ಕೆ ನಾನು ಲೋಕಾಯುಕ್ತ ಸಂಸ್ಥೆ ಬಗ್ಗೆ ಹಿಂದಿನಿಂದಲೂ ಅನುಮಾನ ವ್ಯಕ್ತಪಡಿಸಿದ್ದು,’ ಎಂದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿದ್ದಾರೆ. ಅವರು ಇನ್ನೂ ಮುಂದೆ ಹೋಗಿ ಸಂತೋಷ ಹೆಗ್ಡೆ ಅವರನ್ನು ಮತ್ತೊಮ್ಮೆ ಟೀಕೆ ಮಾಡಿದ್ದಾರೆ.
  • ಮಧುಕರ್ ಅಮೆರಿಕಾಕ್ಕೆ ಹೋದ ಮೇಲೆ ಸಿಐಎ ಏಜೆಂಟ್ ಥರ ಮಾತನಾಡುತ್ತಾರೆ ಕಣ್ರೀ ಎಂದು ವಡ್ಡರ್ಸೆಗೆ ಆಗದ ಕೆಲವು ಕುಹಕಿ ಕಮುನಿಸ್ಟರು ಕೇಕೆ ಹಾಕುತ್ತಿದ್ದಾರೆ.

ಏನೇ ಆಗಲಿ, ಮಧುಕರ ಶೆಟ್ಟರು ಕನ್ನಡಿಗರಿಗೆ ಏನಾದರೂ ತಮ್ಮ ಸಂದೇಶ ರವಾನಿಸುವದಿದ್ದರೆ ಯೂಟ್ಯೂಬ್ ಮುಖಾಂತರ ಮಾತನಾಡಲಿ. ನಾವು ಅದನ್ನು ಡೌನ್ ಲೋಡ್ ಮಾಡಿ ಪ್ರೆಸ್ ಕ್ಲಬ್‌ನಲ್ಲಿ ಪ್ರದರ್ಶಿಸುತ್ತೇವೆ. ಇನ್ನು ಮುಂದೆ ಮಧುಕರ್ ಕಾಸಿಗಾಗಿ ಸುದ್ದಿ ಪ್ರಕಟಿಸುವ ಚೆಡ್ಡಿ ಪತ್ರಕರ್ತರಿಗೆ ಟ್ರ್ಯಾಪ್ ಆಗುವುದು ಬೇಡ.