Tag Archives: ಮಹಂತೇಶ್

ಮಹಂತೇಶ್ ಸಾವು: ಸತ್ಯ ಪ್ರತಿಪಾದಕರಿಗಿದು ಸಂದೇಶವೆ?

– ಶಿವರಾಮ್ ಕೆಳಗೋಟೆ

ಕರ್ನಾಟಕ ಸರಕಾರದ ಲೆಕ್ಕ ಪರಿಶೋಧನಾ ಅಧಿಕಾರಿ ಮಹಂತೇಶ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಅವರ ಮೇಲೆ ಬೆಂಗಳೂರಿನ ಏಟ್ರಿಯಾ ಹೊಟೇಲ್ ಬಳಿ ದಾಳಿಯಾಗಿ ಐದು ದಿನಗಳಾಗಿವೆ. ಪೊಲೀಸರು ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಅದರರ್ಥ ಪೊಲೀಸ್ ವ್ಯವಸ್ಥೆ ಬೆಂಗಳೂರಿನಲ್ಲಿ ನಿಷ್ಕ್ರಿಯವಾಗಿದೆ. ಮಹಂತೇಶ್ ಅವರ ಕುಟುಂಬ ಸದಸ್ಯರು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟು ಪೊಲೀಸರು ಪ್ರಕರಣವನ್ನು ಒಂದು ಅಪಘಾತ ಎಂದು ತಿಪ್ಪೆಸಾರಿಸಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಆರೋಪಕ್ಕೆ ಕಾರಣವಿದೆ. ಮಹಂತೇಶ್ ಪ್ರಮುಖ ಹುದ್ದೆಯಲ್ಲಿದ್ದರು. ಸಹಕಾರಿ ಸಂಘಗಳ ವ್ಯವಹಾರವನ್ನು ಆಡಿಟ್ ಜವಾಬ್ದಾರಿ ಅವರದು. ಇತ್ತೀಚಿನ ದಿನಗಳಲ್ಲಿ ಕೆಲ ಗೃಹನಿರ್ಮಾಣ ಸಹಕಾರ ಸಂಘಗಳ ಭಾನಗಡಿಗಳು ಹೊರಬಂದವು. ಕೆಲ ಉನ್ನತ ಸ್ಥಾನದಲ್ಲಿದ್ದವರು ತಪ್ಪು ದಾಖಲೆಗಳನ್ನು ಸಲ್ಲಿಸಿ ದುಬಾರಿ ಬೆಲೆಯ ನಿವೇಶನಗಳನ್ನು ಪಡೆದುಕೊಂಡದ್ದು ಮಾಧ್ಯಮಗಳ ಮೂಲಕ ಬಹಿರಂಗವಾಯ್ತು.

ಅಧಿಕಾರಿಯ ಆರೋಗ್ಯ ಸ್ಥಿತಿ ತಿಳಿದುಕೊಳ್ಳಲು ಆಸ್ಪತ್ರೆಗೆ ಭೇಟಿ ನೀಡಿದ್ದ ರಾಜಕಾರಣಿ ಮಹಿಮಾ ಪಟೇಲ್ ಮಾಧ್ಯಮದವರೊಂದಿಗೆ ಮಾತನಾಡಿ, ಇತ್ತೀಚೆಗೆ ಕೆಲ ಗೃಹನಿರ್ಮಾಣ ಸಹಕಾರ ಸಂಘಗಳಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ಮಾಹಿತಿ ಪಡೆಯಲು ಮಹಂತೇಶ್ ಅವರಿಗೆ ಮಾಹಿತಿ ಹಕ್ಕು ಕಾಯ್ದೆ ಅಧಿನಿಯಮದಡಿ ಅರ್ಜಿ ಸಲ್ಲಿಸಿದ್ದೆ ಎಂದಿದ್ದಾರೆ. ಪಟೇಲ್ ಗೃಹ ನಿರ್ಮಾಣ ಸಹಕಾರ ಸಂಘಗಳಲ್ಲಿನ ಅವ್ಯವಹಾರ ಬಗ್ಗೆ ನ್ಯಾಯಾಲಯದಲ್ಲಿ ಹೋರಾಡಲು ಮುಂದಾಗಿದ್ದಾರೆ.

ಹೀಗೆ ಸಂಘಗಳ ಅನಾಚಾರಗಳು ಬಯಲಿಗೆ ಬರಲು ಇದೇ ಅಧಿಕಾರಿ ಕಾರಣ ಇರಬಹುದೆಂದು ‘ಆರೋಪಿಗಳು’ ತೀರ್ಮಾನಿಸಿ ಅವರ ಮೇಲೆ ಹಲ್ಲೆ ನಡೆಸಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಇದೇ ಉದ್ದೇಶಕ್ಕಾಗಿ ಇಂತಹದೊಂದು ಹಲ್ಲೆ ನಡೆದು ಸಾವಿಗೆ ಕಾರಣವಾಯಿತೇ ಎಂಬುದನ್ನು ತನಿಖೆ ಮಾಡುವ ಹೊಣೆ ಸರಕಾರದ ಮೇಲಿದೆ. ಇಲ್ಲವಾದರೆ ಸತ್ಯ, ಪ್ರಾಮಾಣಿಕತೆ ಎಂದು ಹೋರಾಡುವವರೆಲ್ಲ ಇಂಥದೇ ಅಂತ್ಯ ಕಾಣುತ್ತಾರೆ ಎಂದು ಸರಕಾರವೇ ಹೇಳಿದಂತಾಗುತ್ತದೆ.

ಡಿಸಿಪಿ ರವಿಕಾಂತೇಗೌಡ ಮಾಧ್ಯಮಗಳಿಗೆ ಮಾತನಾಡಿ ಹೈಗ್ರೌಂಡ್ಸ್ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಅವರ ಸಾವಿನ ನಂತರ ಕೊಲೆ ಪ್ರಕರಣ ದಾಖಲಾಗಿದೆ. ತನಿಖೆಗಾಗಿ ನಾಲ್ಕು ತಂಡಗಳನ್ನು ನೇಮಿಸಲಾಗಿದೆ. ತನಿಖೆ ತ್ವರಿತ ಗತಿಯಲ್ಲಿ ಸಾಗುತ್ತಿದೆ. ನಮಗೆ ಒಂದಿಷ್ಟು ಮಾಹಿತಿ ಲಭ್ಯವಾಗಿದೆ ಎಂದಿದ್ದಾರೆ.

ಐದು ದಿನಗಳ ನಂತರವೂ ಯಾರೊಬ್ಬರನ್ನು ವಶಕ್ಕೆ ತೆಗೆದುಕೊಳ್ಳದಿದ್ದರೂ ತನಿಖೆ ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂದು ನಂಬಬೇಕೆ? ಇತ್ತೀಚಿನ ವರ್ಷಗಳಲ್ಲಿ ಪೊಲೀಸರು ತನಿಖೆಗೆ ಬಳಸುವ ಕ್ರಮ ಮತ್ತು ಸಾಧನಗಳ ಪರಿಚಯ ಇರುವ ಯಾರಿಗೇ ಆದರೂ ಇಷ್ಟು ತಡವಾಗಿಯಾದರೂ ಯಾರನ್ನೂ ಬಂಧಿಸದೇ ಇರುವುದು ಸಂಶಯದ ಸಂಗತಿ.

ಇದುವರೆಗೂ ಗೃಹಮಂತ್ರಿ ಎನಿಸಿಕೊಂಡಿರುವ ಆರ್. ಅಶೋಕ್ ಈ ಬಗ್ಗೆ ಮಾತನಾಡಿಲ್ಲ. ಅವರ ಮೌನ ಕೂಡಾ ಅನುಮಾನಾಸ್ಪದ. ರಾಜಧಾನಿಯ ಮಧ್ಯಭಾಗದಲ್ಲಿ ಮಾರಣಾಂತಿಕ ಹಲ್ಲೆ ನಡೆದು ಐದು ದಿನಗಳ ನಂತರವೂ ಆರೋಪಿಗಳ ಬಂಧನ ಆಗುವುದಿಲ್ಲ ಎಂದರೆ ಈ ರಾಜ್ಯಕ್ಕೆ ಒಬ್ಬ ಗೃಹ ಮಂತ್ರಿ ಇದ್ದಾರೆ ಎಂದು ನಂಬಬೇಕೆ? ಮುಖ್ಯಮಂತ್ರಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳುವ ಸಂಪ್ರದಾಯ ಮಾಡಿದ್ದಾರೆ. ಆದರೆ ಅಷ್ಟೇ ಸಾಕೆ?