Tag Archives: ರೈತಸಂಘ

ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 2

-ಎನ್.ಎಸ್. ಶಂಕರ್

‘ರೈತಸಂಘ ರೈತರ ಸಮಸ್ಯೆಗಳನ್ನು ಇಡೀ ರಾಜ್ಯದ ಆರ್ಥಿಕ ಸಂದರ್ಭದಲ್ಲಿಟ್ಟು ಕೃಷಿ ಮತ್ತು ಕೈಗಾರಿಕೆ, ರೈತ ಮತ್ತು ಸರ್ಕಾರದ ಸಂಬಂಧಗಳನ್ನು ಮೊತ್ತ ಮೊದಲ ಬಾರಿಗೆ ವಿಶ್ಲೇಷಿಸಿತು… ಆದರೆ ರೈತಸಂಘ ಪ್ರಬಲಗೊಂಡಂತೆಲ್ಲ ಅದರ ಪ್ರಾಬಲ್ಯವೇ ಕೆಲವು ರಾಜಕೀಯ ಪ್ರಶ್ನೆಗಳನ್ನು ಹುಟ್ಟು ಹಾಕಿತು… ರೈತರ ಹೋರಾಟ ಉಗ್ರವಾಗತೊಡಗಿದಷ್ಟೂ ಗ್ರಾಮದ ಇತರರ ತೊಳಲಾಟ ಹೆಚ್ಚಾಗಿದ್ದು ಈ ಹೋರಾಟದ ರಾಜಕೀಯ ಪ್ರತಿಧ್ವನಿಯಂತಿದೆ…’ ಎಂದು ಲಂಕೇಶ್ “ಟೀಕೆ ಟಿಪ್ಪಣಿ”ಯಲ್ಲಿ ಬರೆದರು (ರೈತರು: ಒಂದು ರಾಜಕೀಯ ಟಿಪ್ಪಣಿ). ಅವರು ಎತ್ತಿಕೊಂಡ ಉದಾಹರಣೆ- ಶಿವಮೊಗ್ಗದ ಕೆಲವು ಹಳ್ಳಿಗಳಲ್ಲಿ ರೈತರು ‘ಗ್ರಾಮಕ್ಕೆ ಅಧಿಕಾರಿಗಳ ಪ್ರವೇಶ ಸಂಜೆ 4ರಿಂದ 5’ ಎಂದು ಹಾಕಿದ ದಿಟ್ಟ ಬೋರ್ಡ್ ಗಳದ್ದು. ಅಂದರೆ ಗ್ರಾಮದ ಇತರ ಅಸಹಾಯಕರ ನರಕವನ್ನು ಈ ಬೋರ್ಡ್ ಇನ್ನೂ ಘೋರವಾಗಿಸಬಲ್ಲುದು ಎಂಬುದು ಲಂಕೇಶರ ಆತಂಕವಾಗಿತ್ತು. ಅವರ ಈ ವಾದವನ್ನು ಮೊದಲು ಪ್ರಶ್ನಿಸಿದ್ದು ತೇಜಸ್ವಿ.

‘ರೈತಸಂಘದಲ್ಲಿ ಎಲ್ಲ ಜಾತಿಗಳಿಗೆ ಪ್ರಾತಿನಿಧ್ಯ ಕಡಿಮೆ ಎಂದಿದ್ದೀರ. ಆದರೆ ರೈತಸಂಘ ಮೂಲಭೂತವಾಗಿ ಆರಂಭವಾದದ್ದು ಒಂದು ಕಸುಬಿನವರ ಅಂದರೆ ರೈತರ ಸಂಘಟನೆಯಾಗಿ ಅಲ್ಲವೆ? ಜಾತಿಗಳ ಪ್ರಕಾರ ಉದ್ಯೋಗ ಹಂಚಿರುವ ಈ ದೇಶದಲ್ಲಿ ಚಪ್ಪಲಿ ಮಾಡುವವರ ಸಂಘಟನೆ ಮಾಡಿದರೂ ಯಾವುದೋ ಒಂದು ಜಾತಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುವುದಿಲ್ಲವೆ?

‘ರೈತಸಂಘ ಇತರರ ಮುಖವಾಣಿಯಾಗಲು ಯತ್ನಿಸಬೇಕೆಂದು ಹೇಳಿದ್ದೀರಿ. ಆದರೆ ನನ್ನ ದೃಷ್ಟಿಯಲ್ಲಿ ಇದು ಅನಗತ್ಯ. ಯಾವ ಸಂಘಟನೆಯಾದರೂ ತನಗೆ ಸಂಬಂಧಿಸಿಲ್ಲದ ಜನರ ಮುಖವಾಣಿಯಂತೆ ಯಾಕೆ ನಾಟಕವಾಡಬೇಕು?…  ಎಂದರೆ ಪ್ರತಿ ಸಂಘಟನೆಯೂ ಗ್ರಾಮದ ಇತರರ ಹಿತಾಸಕ್ತಿಗಳಿಗೆ ವ್ಯತಿರಿಕ್ತವಾಗದಂತೆ ನಿಲುವನ್ನು ತಗೊಂಡರೆ ಸಾಕೆಂದು ನನ್ನ ಚಿಂತನೆ. ನೀವು ಕೊಟ್ಟ ಬೋರ್ಡ್ನ ಉದಾಹರಣೆಯೂ ಸರಿಯಾದುದೆಂದು ನನಗನ್ನಿಸುವುದಿಲ್ಲ. ನಮ್ಮ ಗ್ರಾಮಗಳಿಗೆ ಯಾರಾದರೂ ಸರ್ಕಾರಿ ಅಧಿಕಾರಿ ಯಾವುದೇ ಜಾತಿಯವನ ಅಥವಾ ಕಸುಬಿನವನ ಯೋಗಕ್ಷೇಮ ಕೇಳಲು ಬರುತ್ತಿದ್ದಾನೆಂದು ತಿಳಿದಿದ್ದೀರಾ? ರೈಡ್ ಮಾಡಲು, ಶರಾಬು ಕಾಯಿಸುವವರನ್ನು ಹಿಡಿಯಲು, ಸಾಲ ವಸೂಲಿ, ಮನೆ ಜಫ್ತಿ, ಇಂತಹುವಲ್ಲದೆ ಇನ್ಯಾವ ಕಾರಣಕ್ಕಾದರೂ ಯಾವನಾದರೂ ಸರ್ಕಾರಿ ಅಧಿಕಾರಿ ಗ್ರಾಮಗಳ ಪರಿಧಿಯೊಳಕ್ಕೆ ಕಾಲಿಟ್ಟ ಉದಾಹರಣೆ ಇದೆಯೆ?…

‘ರೈತಸಂಘ ರಚನಾತ್ಮಕ ಕಾರ್ಯಕ್ರಮಗಳ ಮೇಲೆ ತನ್ನ ಸಂಘಟನೆಯನ್ನು ಬೆಳೆಸಲಿಲ್ಲ ಎನ್ನುವ ನಿಮ್ಮ ವಾದದಲ್ಲಿ ತಿರುಳಿದೆ. ಆದರೆ ಇಡೀ ಸಾಮಾಜಿಕ ರಾಜಕೀಯ ಕ್ಷೇತ್ರಗಳಲ್ಲಿ ಪರಿವರ್ತನೆಗೆ ಯತ್ನಿಸಬೇಕೆಂದು ನೀವು ಹೇಗೆ ಆಶಿಸುತ್ತೀರ? ಜೀವನದ ಎಲ್ಲ ರಂಗಗಳಲ್ಲೂ ಅವರು ರಣಕಹಳೆ ಊದಿ ಯುದ್ಧ ಆರಂಭಿಸಲು ಶಕ್ಯವೇ?…’ ಎಂದು ಕಿಚಾಯಿಸಿದರು ತೇಜಸ್ವಿ.

ಇದಕ್ಕೆ ಲಂಕೇಶ್ ನೀಡಿದ ಮಾರುತ್ತರವನ್ನೂ ನೋಡಬೇಕು. ‘ಅತ್ಯಂತ ವೈಜ್ಞಾನಿಕವಾದ’ ವೆಂಕಟಸ್ವಾಮಿ ವರದಿ ಪರವಾಗಿ ನಂಜುಂಡಸ್ವಾಮಿ ಮತ್ತು ರಾಮದಾಸ್ ಎಷ್ಟು ವಾದಿಸಿದರೂ (ತೇಜಸ್ವಿ ಬರೆದ ಪ್ರಕಾರ ‘ರೈತರೆದುರು ತಮ್ಮ ನಿಲುವನ್ನು ವಿವರಿಸಿ ಅವರಿಂದ ಬೈಸಿಕೊಂಡು ಬಂದರೂ’) ಬಹುಪಾಲು ರೈತಸಂಘ, ವರದಿಯ ವಿರುದ್ಧವೇ ಆರ್ಭಟಿಸಿ ಗದ್ದಲವೆಬ್ಬಿಸಿತ್ತು. (ಅಂದರೆ ವರದಿ ವಿಷಯದಲ್ಲಿ ದೇವೇಗೌಡರ ನಿಲುವಿಗೂ, ರೈತಸಂಘದ ನಿಲುವಿಗೂ ವ್ಯತ್ಯಾಸವಿರಲಿಲ್ಲ!) ಜೊತೆಗೆ, ಜಿಲ್ಲೆಯೊಂದರಲ್ಲಿ ರೈತಸಂಘದ ಪದಾಧಿಕಾರಿಗಳು ಮತ್ತು ದಲಿತರಿಗೆ ಮಾರಾಮಾರಿ ನಡೆದು ಹರಿಜನರ ಕೈ ಕಾಲು ಮುರಿದದ್ದು; ಇನ್ನೊಂದು ಜಿಲ್ಲೆಯಲ್ಲಿ ರೈತ ಮುಖಂಡರು ಹಣ ಎತ್ತುವ ಹಾಗೂ ಕಳ್ಳನಾಟಾ ಸಾಗಾಟದ ಆಪಾದನೆಗೆ ಒಳಗಾಗಿದ್ದು; ಮತ್ತು ನಿಂತಲ್ಲೆಲ್ಲ ಚುನಾವಣೆಯಲ್ಲಿ ಸೋತಿದ್ದು- ಈ ನಾಲ್ಕು ಅಂಶಗಳನ್ನು ಉಲ್ಲೇಖಿಸುವ ಲಂಕೇಶರು ‘ನಾವು ರೈತ ಚಳವಳಿಯ ಮೂಲೋದ್ದೇಶಗಳನ್ನು ಹೇಗೆ ಮರೆಯಬಾರದೋ, ಹಾಗೆಯೇ ಸರ್ಕಾರದ ಮೂಲೋದ್ದೇಶಗಳನ್ನೂ ಮರೆಯಬಾರದು. ಸರ್ಕಾರ ಇರಬೇಕಾದ್ದು ರೈತರಿಗೆ ನೆರವಾಗುವುದಕ್ಕೆ ಎಂಬುದು ನಿಜ. ಸರ್ಕಾರ ಇರಬೇಕಾದ್ದು ರಕ್ಷಣೆಯೇ ಇಲ್ಲದ ಜನಕ್ಕೆ, ನಿಲ್ಲಲು ನೆಲೆಯಿಲ್ಲದೆ ಹಳ್ಳಿಗಳಲ್ಲಿನ ಉಳ್ಳವರ ಗರ್ಜನೆಗೆ ನಡುಗುವ ಜನಕ್ಕೆ ರಕ್ಷಣೆ ನೀಡಲು ಕೂಡ ಎಂಬುದು ಅಷ್ಟೇ ನಿಜ’ ಎಂದು ನೆನಪಿಸಿದರು.

ಆಗ ನಮಗೂ ಬಿಸಿರಕ್ತದ ‘ಸಹಜ ಅವಿವೇಕದ’ ವಯಸ್ಸು. ಲಂಕೇಶ್ ಪತ್ರಿಕೆಯಲ್ಲಿ ಈ ವಾಗ್ವಾದವನ್ನು ಓದಿಕೊಂಡಾಗ ನಮ್ಮ ಕಣ್ಣಿಗೆ ಲಂಕೇಶರು ಪೂರ್ವಗ್ರಹ ಪೀಡಿತರಾಗಿಯೂ, ತೇಜಸ್ವಿ ಹೀರೋ ಆಗಿಯೂ ಕಂಡಿದ್ದರು. ಈಗ ಯೋಚಿಸಿದರೆ, ಲಂಕೇಶ್ ಚಿಂತನೆಯ ಹಿಂದಿನ ವಿವೇಕ ಮನ ತಟ್ಟುತ್ತದೆ. ಇದರ ಎದುರು ತೇಜಸ್ವಿ, ಯಾವ ಜ್ವಲಂತ ಪ್ರಶ್ನೆಗಳ ಗೋಜಿಗೂ ಹೋಗದೆ ರೈತಸಂಘದ ಸಮರ್ಥಕರಾಗಿ ಒಳಗಿನಿಂದ ವಾದ ಹೂಡಿದಂತೆ ತೋರುತ್ತದೆ. ತೇಜಸ್ವಿ ನಿಲುವನ್ನು ದೇವನೂರ ಮಹಾದೇವರ ‘…ರೈತಸಂಘವು ಅಸ್ಪೃಶ್ಯ ಕೂಲಿ ನಾಯಕತ್ವ ಪಡೆಯದೆ, ಹಾಗೇ ದಲಿತ ಸಂಘವು ಜಲಗಾರ ನಾಯಕತ್ವ ಪಡೆಯದೆ, ಅವು ಎಷ್ಟೇ ಬೊಬ್ಬೆ ಹಾಕಿದರೂ ಅಷ್ಟೊ ಇಷ್ಟೊ ದಕ್ಕಿಸಿಕೊಳ್ಳಬಹುದೇ ಹೊರತು, ಅಂದರೆ ಅರೆ ಹೊಟ್ಟೆಯ ರೈತಸಂಘ ಮುಕ್ಕಾಲು ಹೊಟ್ಟೆ ತುಂಬಿಸಿಕೊಳ್ಳಬಹುದೇ ಹೊರತು, ಹಾಗೆ ಹೊಟ್ಟೆಗಿಲ್ಲದ ದಲಿತಸಂಘ ಕಾಲು ಹೊಟ್ಟೆ ತುಂಬಿಸಿಕೊಳ್ಳಬಹುದೇ ಹೊರತು ಈ ನಾಡ ಕಟ್ಟುವ ಸಂಘಟನೆಗಳಾಗವು’ ಎಂಬ ಆಶಯದ ಜತೆ ಇಟ್ಟು ನೋಡಿದರೆ, ತೇಜಸ್ವಿ ವಾದದ ಸಮೀಪದೃಷ್ಟಿದೋಷ ಮನವರಿಕೆಯಾಗುತ್ತದೆ…

ಬರೀ ಇಷ್ಟನ್ನೇ ಹೇಳಿದರೆ, ರೈತಚಳವಳಿಯ ‘ವಿರುದ್ಧ ದಡ’ದಲ್ಲಿ ನಿಂತು ಒಮ್ಮುಖ ವಾದ ಹೂಡಿದಂತಾಗಬಹುದು. ಬೇಡ, ಈ ಎರಡೂ ಸಂಘಟನೆಗಳ ಪ್ರಾಮಾಣಿಕ ಮನುಷ್ಯ ಪ್ರಯತ್ನಗಳನ್ನು ಪರಿಶೀಲಿಸೋಣ. ಯಾಕೆಂದರೆ ಆಗ ಏನು ಸಾಧ್ಯವಿತ್ತು, ಏನು ಸಾಧ್ಯವಾಯಿತು ಎಂಬುದನ್ನು ಗಮನಿಸಿ ಮಾತಾಡದಿದ್ದರೆ ಎಲ್ಲ ಆರಾಮಕುರ್ಚಿ  ಕಲಾಪವಾಗಬಹುದು.

ನಿದರ್ಶನವಾಗಿ ಇಲ್ಲಿ ಎರಡೂ ಸಂಘಟನೆಗಳ ನೈತಿಕ ಸ್ಥೈರ್ಯವನ್ನು ಒರೆಗೆ ಹಚ್ಚಿದ ಬಾಳ್ಳುಪೇಟೆ ಘಟನೆಯನ್ನು ನೋಡೋಣ. ರೈತಸಂಘದ ಮುಂದಾಳುಗಳಲ್ಲಿ ಒಬ್ಬರಾಗಿದ್ದು ನಂತರ ದಲಿತ ಸಂಘಟನೆ ಕಡೆ ವಾಲಿದ ಕಲಾವಿದ ಗೆಳೆಯ ಕೆ.ಟಿ. ಶಿವಪ್ರಸಾದ್ ಗೆ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯೇ ಕಾರ್ಯಕ್ಷೇತ್ರವಾಗಿತ್ತು. ಶಿವಪ್ರಸಾದ್ ಒಂದು ರೀತಿಯಲ್ಲಿ ಎರಡೂ ಸಂಘಟನೆಗಳ ಸಜೀವ ಕೊಂಡಿಯಾಗಿದ್ದವರು. ಮತ್ತು ಬಾಳ್ಳುಪೇಟೆ ರೈತ ದಲಿತರಿಬ್ಬರ ಒಗ್ಗಟ್ಟಿನ ಹೋರಾಟಕ್ಕೆ ಉತ್ತಮ ಮಾದರಿಯೂ ಆಗಿತ್ತು. ಅಲ್ಲಿಗೆ ಹತ್ತಿರದ ರಾಜೇಂದ್ರಪುರ ಎಂಬ- ಕೇವಲ ದಲಿತರೇ ಇದ್ದ- ಊರಿನಲ್ಲಿ ಪಕ್ಕದ ಎಸ್ಟೇಟ್ ಮಾಲೀಕನೊಬ್ಬ ಇಬ್ಬರು ಹರಿಜನರ ಮನೆಗಳೂ ಸೇರಿ ಜನ ತಿರುಗಾಡುವ ದಾರಿಯೆಲ್ಲ ಸೇರಿಸಿಕೊಂಡು ಬೇಲಿ ಹಾಕಿಬಿಟ್ಟ. ಪರಿಣಾಮ ಅಲ್ಲಿನ ದಲಿತರಿಗೆ ನಾಗರಿಕ ಸಂಪರ್ಕವೇ ತಪ್ಪಿ ಹೋಗುವಂತಾಯಿತು. ಆಗ ಇದರ ವಿರುದ್ಧ ಹೋರಾಡಿದ್ದು ರೈತಸಂಘ. ಹೋರಾಡಿದ್ದಷ್ಟೇ ಅಲ್ಲ, ಗೆದ್ದು ಪ್ಲಾಂಟರ್ಗಳಿಗೆ ದಂಡ ಹಾಕಿದ್ದೂ ಆಯಿತು. ಶಿವಪ್ರಸಾದ್ ಹೇಳುವಂತೆ- ಇದು ಪಾಳೇಗಾರರಿಗೊಂದು ‘ಥ್ರೆಟ್’ ಆಯಿತು. ಇದು ಹಾಗೂ ಇಂಥವೇ ಘಟನೆಗಳನ್ನು ಜ್ಞಾಪಕದಲ್ಲಿಟ್ಟುಕೊಂಡು ಕಾಯುತ್ತಿದ್ದ ಪ್ಲಾಂಟರ್ಗಳಿಗೆ ಬಾಳ್ಳುಪೇಟೆಯಲ್ಲಿ ಅವಕಾಶ ಸಿಕ್ಕಿಬಿಟ್ಟಿತು.ಮುಂದಿನದನ್ನು ಶಿವಪ್ರಸಾದ್ ಬಾಯಲ್ಲೇ ಕೇಳಬಹುದು (ಪಂಚಮ ವಿಶೇಷಾಂಕ):

…ಏಕೋ ರೈತಸಂಘ ನಮ್ಮ ವಿರುದ್ಧವಾಗಿ ತಲೆ ಎತ್ತುತ್ತಾ ಇದೆ, ಇದ್ನ ಮಟ್ಟ ಹಾಕ್ಬೇಕು ಅಂತ ಯೋಚ್ನೆ ಮಾಡ್ಕಂಡು ಪ್ಲಾಂಟರ್ಗಳು ಕಾಯ್ತಾ ಇದ್ರು. ಬಾಳ್ಳುಪೇಟೆ ಹರಿಜನರೆಲ್ಲ ರೈತಸಂಘದಲ್ಲೇ ಇದ್ರು. ಇದೇ ಸಮಯಕ್ಕೆ ರೋಟರಿ ಕ್ಲಬ್ ನವರು, ಅಂದ್ರೆ ಈ ಪ್ಲಾಂಟರ್ಗಳೇ, ಹರಿಜನೋದ್ಧಾರದ ಹೆಸರ್ನಲ್ಲಿ ಹರಿಜನರಿಗೆ ಬಟ್ಟೆ ಹಂಚಿದರು. (1983 ಮಾರ್ಚ್ 5). ಹಳೆ ಬಟ್ಟೆ ಹಂಚಿದರು ಅಂತ ಹರಿಜನರ ಕಡೆಯಿಂದ ಸ್ವಲ್ಪ ಗೊಂದಲ ಆಯ್ತು. ಇದೆಲ್ಲ ಹಾಸನದ ಜನತಾ ಮಾಧ್ಯಮ ಪತ್ರಿಕೇಲಿ ದೊಡ್ಡದಾಗಿ ಬಂತು. ವಾತಾವರಣ ಸ್ವಲ್ಪ ಬಿಸಿಯಾಯ್ತು. ಇದರಿಂದ ಪ್ಲಾಂಟರ್ಗಳೆಲ್ಲ ತಮ್ಮದೇ ಒಂದು ಕಮಿಟಿ ಮಾಡ್ಕಂಡು, 83 ಮಾರ್ಚ್ ನಲ್ಲಿ, ಸುಮಾರು ನೂರೈವತ್ತು ಜನ ಇದ್ರು ಅಂತ ಕಾಣುತ್ತೆ, ‘ಹೊಲೆಯರಿಗೆ ಧಿಕ್ಕಾರ’ ಅಂತ ಕೂಗ್ಕೊಂಡು ನಾಯಿ ಅಟ್ಟಿಸ್ಕಂಡು ಹೋದಂಗೆ ಬೀದಿ ಬೀದಿಲೆಲ್ಲ ಹರಿಜನರಿಗೆ ಹೊಡೆದರು. ಮಾರನೆ ದಿನ ಪೊಲೀಸಿನವರು ಬಂದು, ಹೊಡೆದವರ ಮೇಲೆ ಏನೂ ಕೇಸಾಕದೆ ಶಾಂತಿ ಸಭೆ ಕರೀಬೇಕು ಅಂದ್ರು. ಅಷ್ಟೊತ್ತಿಗೆ ದಲಿತ ಸಂಘರ್ಷ ಸಮಿತಿಯ (ಚಂದ್ರ ಪ್ರಸಾದ್) ತ್ಯಾಗಿಯೂ ಅಲ್ಲಿಗೆ ಬಂದರು. ನಾನು ಮತ್ತು ತ್ಯಾಗಿ ಹೊಡೆದವರ ಮೇಲೆ ಏನೂ ಕೇಸಾಕದೆ ಶಾಂತಿ ಸಭೆ ಕರೆಯೋದು ತಪ್ಪು ಅಂದ್ವಿ. ರೈತಸಂಘದ (ಮಂಜುನಾಥ) ದತ್ತ ಅಲ್ಲೇ ಒಂದು ಭಾಷಣ ಮಾಡಿ ಪ್ಲಾಂಟರುಗಳೆಲ್ಲ ನನ್ನ ಬೂಟಿಗೆ ಸಮಾನ ಅಂದ. ಇದರಿಂದ ಶಾಂತಿ ಸಮಿತಿಯೂ ಆಗಲಿಲ್ಲ. ರೈತಸಂಘದ ನಾಯಕರುಗಳೂ ಅವರವರ ಮನೆಗಳಿಗೆ ಹೊರಟೋದರು. ಆದರೆ ಅಲ್ಲಿದ್ದ ನಾವು ಪರಿಣಾಮ ಎದುರಿಸಬೇಕಾಯಿತು. ‘ದೊಂಬಿ ಕೇಸು’ ಅಂತ ಮಾಡಿ ಹೊಡಸ್ಕಂಡ ಹರಿಜನರನ್ನೆ ಅರೆಸ್ಟು ಮಾಡಿ ಮೈಸೂರು ಜೈಲಿಗೆ ಹಾಕಿದರು. ಈ ಬಗ್ಗೆ ರೈತಸಂಘ ಏನೇನೂ ಮಾಡ್ಲಿಲ್ಲ. ಅಂತೂ ದಲಿತ ಸಂಘರ್ಷ ಸಮಿತಿ ಜೊತೆ ಸೇರ್ಕಂಡು ನಾವೇ ಇದನ್ನೆಲ್ಲ ಎದುರಿಸಿದ್ವಿ. ಒಂದಿನ ನಮ್ಮ ಸಕಲೇಶಪುರ ತಾಲ್ಲೂಕು ರೈತಸಂಘದ ಅಧ್ಯಕ್ಷ ವಿಶ್ವನಾಥನ್ನ ಯಾಕೆ ಎಲ್ಲ ಗೊತ್ತಿದ್ದೂ ನೀವು ಈ ಮೇಲ್ಜಾತಿಯವರ ದಬ್ಬಾಳಿಕೇನ ವಿರೋಧಿಸ್ತಾ ಇಲ್ಲ? ಒಂದು ಪತ್ರಿಕೆ ಹೇಳಿಕೆನಾದ್ರೂ ಕೊಡಿ ಅಂತ ಕೇಳಿದೆ. ಅದಕ್ಕೆ ವಿಶ್ವನಾಥ- ಇಲ್ಲಿ ಲಿಂಗಾಯಿತ್ರು ದೌರ್ಜನ್ಯ ಮಾಡಿರೋದ್ರಿಂದ ಇವರ ವಿರುದ್ಧ ಪೇಪರ್ ಸ್ಟೇಟ್ಮೆಂಟ್ ಕೊಟ್ರೆ ಲಿಂಗಾಯಿತ್ರೆಲ್ಲ ರೈತಸಂಘ ಬಿಟ್ಟುಹೋಗ್ತಾರೆ ಎಂದು ಹೇಳಿ ನನ್ನನ್ನು ದಂಗುಬಡಿಸಿದ…

ಇದು ಇಲ್ಲಿಗೆ ನಿಲ್ಲಲಿಲ್ಲ. ಪರಿಸ್ಥಿತಿ ಎಷ್ಟು ಗಂಭೀರವಾಯಿತೆಂದರೆ ಅಂತಿಮವಾಗಿ ಶಿವಪ್ರಸಾದ್ರ ‘ಕಥೆಯನ್ನೇ ಮುಗಿಸುವ’ ಸಂಚು ರೂಪುಗೊಂಡು ಅವರು ಬಾಳ್ಳುಪೇಟೆಯನ್ನೇ ಬಿಡಬೇಕಾಯಿತು. ಶಾಂತಿಸಭೆ ಮುರಿದು ಬಿದ್ದ ಮೇಲೆ ಆ ಊರಿನಲ್ಲಿ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಯಾಯಿತು. ಮುಂದೆ:

…ಎರಡು ಪೊಲೀಸ್ ಜೀಪುಗಳು ಬಾಳ್ಳುಪೇಟೆಯಲ್ಲಿ ಮೊಕ್ಕಾಂ ಹೂಡಿದವು. ರಾತ್ರಿ ವೇಳೆ ದಲಿತರು ಹೊರಬರಲು ಹೆದರುತ್ತಿದ್ದರು. ಶ್ರೀಮಂತ ಪ್ಲಾಂಟರ್ಗಳು ಮತ್ತೆ ಹಲ್ಲೆಗೆ ಪ್ರಚೋದನೆ ನೀಡಬಹುದೆಂಬ ಸಂದೇಹವನ್ನು ಶಿವಪ್ರಸಾದ್ ವ್ಯಕ್ತಪಡಿಸಿದರು. ಇದನ್ನು ಹೇಗಾದರೂ ಮಾಡಿ ಸರಿಪಡಿಸಬೇಕೆಂದು ಹೆಣಗಿದರು. ದಲಿತ ಯುವಕರಿಗೆ ಸಂಯಮ ಬೋಧಿಸಿದರು. ಶಾಂತಿಯುತ ಹೋರಾಟದ ಮೂಲಕ ಘಟನೆಯ ಮುಖ್ಯ ಸೂತ್ರಧಾರಿಗಳನ್ನು ಬಂಧಿಸಲು ಒತ್ತಡ ಹೇರಲು ಹವಣಿಸಿದರು. ರಾಜ್ಯ ಡಿ.ಎಸ್.ಎಸ್. ಹೆಚ್ಚಿನ ಆಸಕ್ತಿ ತೋರಲಿಲ್ಲ. ಆದರೆ ದೇವಯ್ಯ ಹರವೆ ಬಂದು ಇದಕ್ಕೊಂದು ಪರಿಹಾರ ಕಂಡು ಹಿಡಿಯಲು ರೈತನಾಯಕರನ್ನು ಕೋರಿದರು. ಶಿವಪ್ರಸಾದ್ ರೈತಸಂಘ ತೊರೆದಿದ್ದರಿಂದ ಹಾಗೂ ಅವರು ಘಟನೆಯ ಸ್ಥಳದಲ್ಲೇ ಇರುವುದರಿಂದ ರೈತಸಂಘದವರೂ ಹೆಚ್ಚಿನ ಆಸಕ್ತಿಯನ್ನು ತೋರಲಿಲ್ಲ. ಹಾಸನದಿಂದ ಮೈಸೂರಿಗೆ ಹೋದ ದೇವಯ್ಯ ಹರವೆ ಅಕಾಲ ಮರಣಕ್ಕೀಡಾದರು… ಈ ನಡುವೆ ದಲಿತರಿಗೆ ನೆರವು ನೀಡುತ್ತಿರುವ ಶಿವಪ್ರಸಾದ್ ಮೇಲೆ ಹಲ್ಲೆಯಾಗುವ ಸೂಚನೆಗಳು ಕಾಣತೊಡಗಿದವು. ಒಮ್ಮೆ ಗೆಳೆಯ ಮರ್ಕಲಿ ಶಿವಕುಮಾರ್ ಮತ್ತು ನಾನು ಹಾಸನದಿಂದ ಕಾರು ಮಾಡಿಕೊಂಡು ಹೋಗಿ ಅವರನ್ನು ರಹಸ್ಯವಾಗಿ ಹಾಸನಕ್ಕೆ ಕರೆ ತಂದೆವು… ಬಾಳ್ಳುಪೇಟೆಯಲ್ಲಿ ದಾಖಲೆ ಅರು ತಿಂಗಳು ನಿಷೇಧಾಜ್ಞೆ ಜಾರಿಯಲ್ಲಿತ್ತು. ಕಡೆಗೆ ಯಾವ ನಿರ್ದಿಷ್ಟ ಪರಿಹಾರವೂ ಇಲ್ಲದೆ, ಸಮಸ್ಯೆ ತಂತಾನೇ ಅಂತ್ಯವಾಯಿತು. (ಕೆ.ಟಿ. ಶಿವಪ್ರಸಾದ್ ಕುರಿತ ಸಂಚಿಕೆ ಕಲ್ಲರಳಿ ಹೂವ್ವಂತೆಯಲ್ಲಿ ಕೆ. ಪುಟ್ಟಸ್ವಾಮಿ)

ಇದು ನಮ್ಮ ಸಂಘಟನೆಗಳ ಒಟ್ಟು ಪ್ರಯಾಸಗಳನ್ನು (-ದಣಿವು ಎಂಬ ಅರ್ಥದಲ್ಲೂ ಪ್ರಯಾಸ) ಹಲವು ಬಣ್ಣಗಳಲ್ಲಿ ತೋರಿದ ಘಟನೆ. ಅಲ್ಲಿ ಏನೆಲ್ಲ ಇತ್ತು!

(ಮುಂದುವರೆಯುವುದು)