Tag Archives: ವಕೀಲರು

ವಕೀಲರನ್ನು, ಪತ್ರಕರ್ತರನ್ನು ಅನುಮಾನದಿಂದ ನೋಡುವಂತೆ ಮಾಡಿದವರ್ಯಾರು?

– ಶಿವರಾಮ್ ಕೆಳಗೋಟೆ

ವಕೀಲರ ಸಂಘದ ಕಾರ್ಯದರ್ಶಿ ಎ.ಪಿ ರಂಗನಾಥ್ ಸುವರ್ಣ ನ್ಯೂಸ್ ವಾಹಿನಿಯ ನೇರ ಪ್ರಸಾರದ ವಾರ್ತಾ ಸಂಚಿಕೆಯಲ್ಲಿ ಸಂಪಾದಕ ಹಮೀದ್ ಪಾಳ್ಯವರಲ್ಲಿ ಒಂದು ಮನವಿ ಮಾಡಿಕೊಂಡರು. ಪೊಲೀಸರು ಹಾಗೂ ಪತ್ರಕರ್ತರಿಂದ ವಕೀಲರ ಮೇಲೆ ನಡೆದ ಹಲ್ಲೆ, ಕೋರ್ಟ್ ಆವರಣದಲ್ಲಿ ನಡೆದ ದಾಂಧಲೆಯ ಸಿಡಿ ಕಳುಹಿಸುತ್ತೇನೆ ದಯವಿಟ್ಟು ಪ್ರಸಾರ ಮಾಡಿ ಎಂದರು. ಹಮೀದ್ ಪಾಳ್ಯ ಒಪ್ಪಲಿಲ್ಲ. ಅದೇ ಹೊತ್ತಿಗೆ ನ್ಯೂಸ್ ರೂಂ ನಿಂದ ಸ್ಟುಡಿಯೋದೊಂದಿಗೆ ಸಂಪರ್ಕದಲ್ಲಿದ್ದ ಅಜಿತ್ ಹನುಮಕ್ಕನವರ್ ‘ನಮಗೆ ಕೋರ್ಟ್ ಆವರಣದಲ್ಲಿ ಹೊಡೆದು ಕಳುಹಿಸಿದ ಮೇಲೆ, ನಿಮ್ಮ ಸುದ್ದಿ ಪ್ರಸಾರ ಮಾಡಬೇಕು ಎಂದು ನಿರೀಕ್ಷಿಸುವುದೇ ಹಾಸ್ಯಾಸ್ಪದ,’ಎನ್ನುತ್ತಾರೆ.

ಸುವರ್ಣ ನ್ಯೂಸ್ ಅಷ್ಟೇ ಅಲ್ಲ, ಯಾವ ಸುದ್ದಿ ವಾಹಿನಿಯೂ ವಕೀಲರ ಬಳಿ ಇರುವ ವಿಡಿಯೋ ಕ್ಲಿಪಿಂಗ್ ಗಳನ್ನು ಪ್ರಸಾರ ಮಾಡಲು ಒಪ್ಪಲಿಲ್ಲ.  ಎಲ್ಲಾ ಚಾನೆಲ್ ಮುಖ್ಯಸ್ಥರು ಕೊಡುವ ಸಮರ್ಥನೆ ‘ನಾವು ಅಲ್ಲಿರಲಿಲ್ಲ. ನಮ್ಮನ್ನು ಅಲ್ಲಿಂದ ಓಡಿಸಿದ್ದಿರಿ..’ ವಾದಕ್ಕೋಸ್ಕರ ಈ ವಾದವನ್ನು ಒಪ್ಪಿಕೊಳ್ಳೋಣ. ಹಾಗಾದರೆ, ಚಾನೆಲ್ ಪ್ರತಿನಿಧಿ ಖುದ್ದು ಹಾಜರಾಗದ ಯಾವ ಘಟನೆಯನ್ನೂ ಪ್ರಸಾರ ಮಾಡುವುದೇ ಇಲ್ಲವೆ? ಖುದ್ದು ವೀಕ್ಷಿಸದ ಯಾವ ಅನ್ಯಾಯವನ್ನು, ಗಲಭೆಯನ್ನೂ, ಕೊಲೆಯನ್ನೂ, ಭ್ರಷ್ಟಾಚಾರವನ್ನೂ ವರದಿ ಮಾಡುವುದೇ ಇಲ್ಲವೆ?

ಅಪರಾಧ ಕಾರ್ಯಕ್ರಮಗಳಲ್ಲಿ ಕೊಲೆಯನ್ನು ‘ಮರು ಸೃಷ್ಟಿ’ ಮಾಡುವ ಕಲೆ ನಿಮಗೆ ಗೊತ್ತು. ಆದರೆ, ಪೊಲೀಸರು ಬೆಂಕಿ ಹಚ್ಚಿ ವಾಹನಗಳನ್ನು ಸುಟ್ಟ ವಿಡಿಯೋಗಳು ಏಕೆ ಬೇಡ? ‘ಪೂರ್ವಗ್ರಹಿಗಳಾಗಿರಬೇಡಿ’ ಎಂಬುದು ನನ್ನನ್ನೂ ಸೇರಿದಂತೆ ಎಲ್ಲಾ ಪತ್ರಕರ್ತರಿಗೆ ಹಿರಿಯರು ಹೇಳಿ ಕೊಟ್ಟ ಮೊದಲ ಪಾಠ. ಆದರೆ ಈ ಹೊತ್ತಿನ ಚಾನೆಲ್, ಪತ್ರಿಕೆ ಮುನ್ನಡೆಸುತ್ತಿರುವ ಹಿರಿಯರಿಗೆ ಈ ಪಾಠ ಬೇಕಿಲ್ಲವೆ? ಏಕೆ ಇಷ್ಟೊಂದು ಹಠ?

ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡುತ್ತ ‘ಮೊದಲು ಸಾರ್ವಜನಿಕರು ರಾಜಕಾರಣಿಗಳ ಬಗ್ಗೆ ಸದಾ ಅನುಮಾನದಿಂದ ಮಾತನಾಡುತ್ತಿದ್ದರು. ಆದರೆ ಈಗ ಪತ್ರಕರ್ತರು, ವಕೀಲರು ಮತ್ತು ಪೊಲೀಸರ ಬಗ್ಗೆಯೂ ಹಾಗೆಯೆ ಮಾತನಾಡುವಂತಾಗಿದೆ,’ ಎಂದರು. ಪೊಲೀಸರ ಬಗ್ಗೆ ಅನುಮಾನದಿಂದ ನೋಡುವ ಪರಿಪಾಟ ಬಹಳ ದಿನಗಳ ಹಿಂದಿನಿಂದಲೇ ಇದೆ. ಮೊನ್ನೆ ಮೊನ್ನೆ ಮಂಗಳೂರಿನಲ್ಲಿ ಕಾಂಡೋಮ್ ಇಟ್ಟು ಅಮಾಯಕರನ್ನು ಬಂಧಿಸಿದ್ದ ಕೀರ್ತಿ ಇವರದು. ಅದಿರಲಿ. ಆದರೆ, ಪತ್ರಕರ್ತರು ಮತ್ತು ವಕೀಲರು ಸಾರ್ವಜನಿಕರ ದೃಷ್ಟಿಯಲ್ಲಿ ಹೀಗೇಕಾದರು?

ವಕೀಲರು:

ಸ್ವಾತಂತ್ರ್ಯಹೋರಾಟದಲ್ಲಿ ಪಾಲ್ಗೊಂಡಿದ್ದ ಬಹುತೇಕರು ವಕೀಲರು. ಯಾರು ‍ಯಾಕೆ, ಮಹಾತ್ಮ ಗಾಂಧಿ ಮೂಲತಃ ವಕೀಲರು(ಹಾಗೆ ಪತ್ರಕರ್ತರು ಕೂಡ). ಆದರೆ ಈಗಿನ ಎಲ್ಲಾ ವಕೀಲರು ಹಿಂದಿನ ವಕೀಲರಂತೆ ಇಲ್ಲ. ಹಾಗೆ ಇರಲೂ ಸಾಧ್ಯವಿಲ್ಲ.

ಇತ್ತೀಚೆಗೆ ಒಂದು ಲಾ ಕಾಲೇಜಿನ ಪ್ರಾಧ್ಯಾಪಕರು ಖಾಸಗಿ ಮಾತಿನಲ್ಲಿ ಹಂಚಿಕೊಂಡಿದ್ದು ಈ ಹೊತ್ತಿನ ವಕೀಲರ ಸ್ಥಿತಿ, ಮನಸ್ಥಿತಿ ಬಗ್ಗೆ ಒಂದಿಷ್ಟು ಬೆಳಕು ಚೆಲ್ಲುತ್ತದೆ. ಕರ್ನಾಟಕದಲ್ಲಿರುವ ಅನೇಕ ಅನುದಾನಿತ ಕಾನೂನು ಕಾಲೇಜುಗಳಿಗೆ ಪ್ರವೇಶ ಪಡೆಯುವವರ ಕೊರತೆ ಇದೆ. ಪ್ರವೇಶಾತಿ ಇಲ್ಲದಿದ್ದರೆ ಅನುದಾನಕ್ಕೆ ಕುತ್ತು ಬೀಳುವ ಆತಂಕದಲ್ಲಿರುವ ಸಂಸ್ಥೆಗಳು ಹೇಗಾದರೂ ಮಾಡಿ ಪ್ರತಿ ವರ್ಷ ಒಂದಿಷ್ಟು ವಿದ್ಯಾರ್ಥಿಗಳನ್ನು ಹುಡುಕಿ ಪ್ರವೇಶ ಕೊಡುತ್ತಾರೆ. ಅವರು ಕಟ್ಟುನಿಟ್ಟಾಗಿ ಕಾಲೇಜಿಗೆ ಬರದಿದ್ದರೂ ಕೇಳುವುದಿಲ್ಲ. ಹಾಜರಾತಿ ಕಡ್ಡಾಯವಿಲ್ಲ. ಪರೀಕ್ಷೆ ಮೌಲ್ಯಮಾಪನ ಶಿಸ್ತುಬದ್ಧವಾಗಿ ನಡೆಯುವುದಿಲ್ಲ. ಸಾಮಾನ್ಯವಾಗಿ ಇಂತಹ ಕಾಲೇಜುಗಳಿಗೆ ಪ್ರವೇಶ ಪಡೆಯುವವರು ಬೇರೆ ಯಾವ ಕೋರ್ಸ್‌ಗೂ ಸೇರಿಕೊಳ್ಳಲು ಅರ್ಹ ಅಂಕಗಳಿಲ್ಲದವರು. ಕೊನೆಗೆ ವಿಧಿ ಇಲ್ಲದೆ ಕಪ್ಪು ಕೋಟು ಹಾಕಿ ಕೋರ್ಟ್ ಪ್ರವೇಶಿಸುತ್ತಾರೆ.– ಇಂಥವರ ಸಂಖ್ಯೆ ಒಟ್ಟು ವಕೀಲರ ಸಂಖ್ಯೆಯಲ್ಲಿ ತೀರಾ ನಗಣ್ಯ. ಆದರೆ ಕಲ್ಲು ಎಸೆಯೋಕೆ, ಪತ್ರಕರ್ತಮತ್ತು ಪೊಲೀಸರ ಮೇಲೆ ಹಲ್ಲೆ ಮಾಡಿ ಇಡೀ ವಕೀಲ ಸಮುದಾಯದ ಗೌರವಕ್ಕೆ ಧಕ್ಕೆ ಉಂಟು ಮಾಡಲು ಅಷ್ಟುಸಂಖ್ಯೆ ಸಾಕು. ಇವರ ಕಾರಣ ರಾಜ್ಯದ ಎಲ್ಲಾ ವಕೀಲರನ್ನು ಅನುಮಾನದಿಂದ ನೋಡುವಂತಾಗಿದೆ.

ಪತ್ರಕರ್ತರು:

ವಕೀಲರಾದರೂ ಕನಿಷ್ಟ ಕಾನೂನು ಪದವಿ ಪಡೆದಿರಬೇಕು. ಆದರೆ ಪತ್ರಕರ್ತರಿಗೆ ಯಾವ ಪದವಿಯೂ ಕಡ್ಡಾಯವಲ್ಲ. ಸುದ್ದಿ ಗ್ರಹಿಸುವ ಕಲೆ ಗೊತ್ತಿದ್ದರೆ ಸಾಕು. (‘ಸುದ್ದಿ ಗ್ರಹಿಸುವ ಕಲೆ’ ಸಾಪೇಕ್ಷ. ಅದನ್ನು ಅಳೆಯಲು ಒಂದೊಂದು ಸಂಸ್ಥೆ, ಒಬ್ಬೊಬ್ಬ ಸಂಪಾದಕರ ಮಾನದಂಡ ಬೇರೆ ಬೇರೆ.) ಇತ್ತೀಚೆಗೆ ಪತ್ರಿಕೋದ್ಯಮ ಪ್ರವೇಶಿಸುತ್ತಿರುವ ಅನೇಕ ಯುವ ಪತ್ರಕರ್ತರಲ್ಲಿ ಹುಸಿ ಅಹಂ ಸಾಮಾನ್ಯವಾಗಿರುತ್ತದೆ. ‘ನಾವು ಪತ್ರಕರ್ತರು. ಎಲ್ಲಿಗೆ ಬೇಕಾದರೂ ಹೋಗಬಹುದು, ಯಾರನ್ನು ಬೇಕಾದರೂ ಯಾವ ಪ್ರಶ್ನೆ ಬೇಕಾದರೂಕೇಳಬಹುದು’ – ಎಂಬುದನ್ನೇ ತಮ್ಮ ಹಕ್ಕು ಎಂದುಕೊಂಡವರಂತೆ ವರ್ತಿಸುತ್ತಾರೆ. ಅಷ್ಟೇ ಆಗಿದ್ದರೆ ಪರವಾಗಿಲ್ಲ. ಗೂಂಡಾಗಿರಿಗೂ ಇಳಿಯುವ ಸಾಹಸ ಮಾಡುತ್ತಾರೆ. ಲಜ್ಜೆ ಬಿಟ್ಟು ಸಾರ್ವಜನಿಕವಾಗಿ ತಮ್ಮ‘ಅಂಗ’ ಪ್ರದರ್ಶನಕ್ಕಿಳಿಯುತ್ತಾರೆ. ಇಂಥವರ ಸಂಖ್ಯೆ ಸಹಜವಾಗಿಯೇ ಸಭ್ಯ ಪತ್ರಕರ್ತರಿಗಿಂತ ಕಡಿಮೆಯೇ. ಆದರೆ ಇಡೀ ಮಾಧ್ಯಮ ಕ್ಷೇತ್ರದ ಬೆಂಬಲ ಗಿಟ್ಟಿಸುವಷ್ಟು ಸಾಮರ್ಥ್ಯ ಅವರಿಗಿದೆ. ಪ್ರಿಂಟ್  ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಎಲ್ಲಾ ಮುಖ್ಯಸ್ಥರು ಒಗ್ಗೂಡಿ ‘ಪತ್ರಕರ್ತರಿಗೆ ನ್ಯಾಯ’ ಕೊಡಿಸಲು ಹೋರಾಡುವಂತೆ ಪ್ರೇರೇಪಿಸುತ್ತಾರೆ. ಹಾಗೆಯೇ ಸಾರ್ವಜನಿಕವಾಗಿ ಪತ್ರಕರ್ತರ ಬಗ್ಗೆ ಕೀಳು ಭಾವನೆ ಮೂಡಿಸುವಲ್ಲಿ ಯಶಸ್ವಿ ಯಾಗುತ್ತಾರೆ.

Deccan Herald - Mining Payments

Deccan Herald - Mining Payments

ಇವರೆಲ್ಲರ ಹೊರತಾಗಿ ಮತ್ತೆ ಕೆಲವರಿದ್ದಾರೆ. ಅವರು ವೃತ್ತಿಯಲ್ಲಿ ಅಗ್ರಗಣ್ಯರು. ಸುಳ್ಳು ದಾಖಲೆ ಕೊಟ್ಟು ಜಿ-ಕೆಟಗರಿ ಸೈಟು ಕೊಳ್ಳುವವರು, ಗಣಿ ಕಪ್ಪ ಪಡೆದು ನಾಚಿಕೆ ಇಲ್ಲದೆ ಸ್ಟುಡಿಯೋದಲ್ಲಿ ನ್ಯಾಯ ನೀತಿ ಅಂತ ಕಾರ್ಯಕ್ರಮ ಮಾಡೋರು, ಸುದ್ದಿಗೆ ಬೆಲೆ ಕಟ್ಟಿ ವೃತ್ತಿ ಘನತೆಯನ್ನು ವ್ಯಾಪಾರಕ್ಕಿಟ್ಟವರು, ತಮ್ಮ ಜಾತಿ ಮತ್ತು ಪಂಥಗಳಿಗಾಗಿ ಸುದ್ದಿಯ ಸ್ಟೇಸ್ ಅನ್ನು ಮಾರಿಕೊಂಡವರು– ಇವರೆಲ್ಲರೂ ಇವತ್ತಿನ ಈ ಸ್ಥಿತಿಗೆ ಕಾರಣ.

ಎಲ್ಲಾ ಸುದ್ದಿಸಂಸ್ಥೆಗಳ ಸಂಪಾದಕರು ಬೀದಿಗಿಳಿದು ‘ಹಲ್ಲೆ ಮಾಡಿದ ವಕೀಲರನ್ನು ಬಂಧಿಸಿ’ ಎಂದು ಒತ್ತಾಯ ಮಾಡಿದರೂ ಪೊಲೀಸ ವ್ಯವಸ್ಥೆ ಏಕೆ ಜಪ್ಪಯ್ಯ ಎನ್ನುತ್ತಿಲ್ಲ ಎನ್ನುವುದಕ್ಕೆ ಕಾರಣವೇನೆಂದರೆ ಪ್ರತಿಭಟನೆ ನೇತೃತ್ವ ವಹಿಸಿರುವ ಅನೇಕರು ನೈತಿಕತೆ ಉಳಿಸಿಕೊಂಡಿಲ್ಲ. ಹಾಗಾಗಿ ಅವರ ಮಾತಿಗೆ ಬೆಲೆ ಇಲ್ಲ. ಹಿಂದೆ ದಾಳಿಕೋರರನ್ನು ಬಂಧಿಸಿ ಎಂದು ನಾಲ್ಕು ಸಾಲು ಸಂಪಾದಕೀಯ ಬರೆದರೂ ಸಾಕಿತ್ತು. ಅದರ ಪರಿಣಾಮ ಮಾರನೆಯ ದಿನವೇ ಕಾಣುತ್ತಿತ್ತು.

ಮುಖ್ಯವಾಗಿ ಈಗ ಆಗಬೇಕಿರುವುದು ದುಷ್ಟರನ್ನು ದೂರ ಇಡುವುದು. ಅವರು ಎಲ್ಲಿಯೇ ಇರಲಿ. ವೃತ್ತಿ ಘನತೆಗೆ ಕುಂದುಂಟುಮಾಡುವವರು ಯಾವ ವೃತ್ತಿಯಲ್ಲೂ ಇರಬಾರದು. ಏನಂತೀರಿ?

ಫೋಟೊ: www.daijiworld.com

ವಕೀಲರು, ಪತ್ರಕರ್ತರು ಮತ್ತು ಫ್ಯಾಂಟಮ್ ಭೂತ


– ಪರಶುರಾಮ ಕಲಾಲ್


 

ಮಾಧ್ಯಮಗಳು ಮತ್ತು ವಕೀಲರ ನಡುವೆ ನಡೆದ ಯುದ್ಧವನ್ನು ನಾವು ಎಲ್ಲರೂ ನೋಡಿದ್ದೇವೆ. ನೋಡಿದ್ದೇವೆ ಏನು ಬಂತು ರೇಸಿಗೆಯಾಗುವಷ್ಟು ದೃಶ್ಯಮಾಧ್ಯಮಗಳು ಉಣ ಬಡಿಸಿವೆ. ವಕೀಲರದು ಸರಿಯೇ ? ಮಾಧ್ಯಮದ್ದು ಸರಿಯೇ ಈ ಪ್ರಶ್ನೆಯನ್ನು ನಾವು ಹಾಕಿಕೊಳ್ಳುವುದಕ್ಕಿಂತ ಇದು ಯಾಕೇ ನಡೆಯಿತು ? ಏನು ಸಮಸ್ಯೆ ಇದಕ್ಕೆ ಕಾರಣ ಎಂದು ಎಲ್ಲರೂ ಯೋಚಿಸಬೇಕಿದೆ.

ಈ ದೇಶದಲ್ಲಿ ಕಾರ್ಯಾಂಗ, ಶಾಸಕಾಂಗ ಕುಸಿದ ಸಂದರ್ಭದಲ್ಲಿ ನ್ಯಾಯಾಂಗ ಒಂದಿಷ್ಟು ಮಾನವಂತ ಕೆಲಸ ಮಾಡಿತು ಎನ್ನುವದನ್ನು ಒಪ್ಪುವ ಒಂದು ವರ್ಗ ಇದೆ. ಚರ್ಚೆಯನ್ನು ಇಲ್ಲಿಂದಲೇ ಆರಂಭಿಸೋಣ. ಅಣ್ಣಾ ಹಜಾರೆ ಭೃಷ್ಠಾಚಾರದ ವಿರುದ್ಧ ಹೋರಾಟದವರೆಗೆ ಇದನ್ನು ಎಳೆದುಕೊಂಡು ಹೋಗಬಹುದು. ಗಣಿ ಹಗರಣ ಕುರಿತಂತೆ ಆಂಧ್ರ ಹಾಗೂ ಕರ್ನಾಟಕದಲ್ಲಿ  ಸಿಬಿಐ ತನಿಖೆ ನಡೆಸುತ್ತಿರುವುದು. ಯಡಿಯೂರಪ್ಪ ಗಣಿ ಕಪ್ಪ ಪಡೆದ ಪ್ರಕರಣದ ಬಗ್ಗೆಯೂ ಸಿಬಿಐ ತನಿಖೆ ನಡೆಸಲು ಸಾಧ್ಯವೇ ವರದಿ ನೀಡಲು ಸಿಇಸಿ (ಕೇಂದ್ರ ಉನ್ನತಾಧಿಕಾರಿಗಳ ತಂಡ) ಸೂಚಿಸಿದೆ. ಇಲ್ಲಿ ಮಾಧ್ಯಮಗಳಿಗಿಂತ ನ್ಯಾಯಾಂಗ ಇಡೀ ಪ್ರಕರಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ನ್ಯಾಯಾಂಗವೆಂದರೆ ನ್ಯಾಯಾಧೀಶರು ಮಾತ್ರವಲ್ಲ, ಅಲ್ಲಿ ವಕೀಲರು ಇರುತ್ತಾರೆ. ಅವರ ಪಾತ್ರವೂ ಸಹ ಬಹಳ ಮುಖ್ಯ.

ಮತ್ತೊಂದು; ನಾವು ದೃಶ್ಯ ಮಾಧ್ಯಮಗಳ ಕಡೆ ನೋಡೋಣ. ದೃಶ್ಯಮಾಧ್ಯಮಗಳು ಸುದ್ದಿ ಮಾಧ್ಯಮವಾಗಿ ಬಂದ ಮೇಲೆ ರೋಚಕ ಸುದ್ದಿಗಳಿಗೆ ಹೆಚ್ಚು ಗಮನ ಕೊಟ್ಟವು. ಮತ್ತೊಂದು ಕಡೆ ಇವೇ ನ್ಯಾಯಾಲಯಗಳಾಗಿ ಕೆಲಸ ಮಾಡ ತೊಡಗಿದವು. ಆರೋಪಿಗಳನ್ನು ಆರೋಪಿಗಳೆಂದು ಕರೆಯದೇ ಈ ಕೃತ್ಯವೆಸಗಿದ ಪಾತಕಿಗಳು, ದುಷ್ಟರು, ಖೂಳರು ಎಂದೇ ಚಿತ್ರಿಸಿದವು. ಎಷ್ಟೋ ಸಾರಿ ಇವರೇ ನ್ಯಾಯಾಧೀಶರಾಗಿ ತೀರ್ಪು ನೀಡಿದ ರೀತಿಯಲ್ಲಿ ವರದಿ ಮಾಡಿದ್ದು ಇದೆ. ಇದು ಸಾಲದು ಎಂಬಂತೆ ಚಿತ್ರನಟಿಯರನ್ನು ಕುಳ್ಳರಿಸಿ, ಕುಟುಂಬ ನ್ಯಾಯಾಲಯವನ್ನು ತೆರೆದು ಗಂಡ-ಹೆಂಡತಿ ಜಗಳ ಬಿಡಿಸುವ ನ್ಯಾಯಾಧೀಶರ ಪಾತ್ರ ನೀಡಿದರು. ಜನರಿಗೆ ಮನರಂಜನೆ ನೀಡುತ್ತಾ ಕೆಳ ಮಧ್ಯಮವರ್ಗದವರ ಬದುಕು ಬೀದಿಪಾಲಾಗಿಸಿ, ಎಷ್ಟೋ ಪ್ರಕರಣಗಳಲ್ಲಿ ನೇರವಾಗಿ ಹೊಡೆದಾಡಿಸುವ ದೃಶ್ಯಗಳನ್ನು ಸಹ ಲೈವ್ ಆಗಿಯೇ ಬಿತ್ತರಿಸಿದವು. ಈಗ ಕುಟುಂಬ ಜಗಳವಿರಲಿ, ಏನೋ ಸಮಸ್ಯೆ ಇರಲಿ ಎಲ್ಲರೂ ಈ ದೃಶ್ಯಮಾಧ್ಯಮಗಳ ಬಾಗಿಲು ತಟ್ಟುವಂತೆ ಮಾಡಿ ಬಿಟ್ಟಿವೆ. ಯಾರಿಗೂ ನಾವು ಹೆದುರುವುದಿಲ್ಲ. ನಾವು ಮಾಧ್ಯಮದವರು. ಏನು ಬೇಕಾದರೂ ಮಾಡುತ್ತೇವೆ ಎಂಬ ದುಸ್ಸಾಹಸದ ಮಾತುಗಳನ್ನು ಆಡಿದವು.

ನ್ಯಾಯಾಂಗ ವ್ಯವಸ್ಥೆಯ ಭಾಗವಾಗಿರುವ ವಕೀಲರೂ ಇದೇ ದುಸ್ಸಾಹಸದ ಮಾತುಗಳನ್ನು ಖಾಸಗಿಯಾಗಿ ಆಡುತ್ತಾರೆ. ಆಡಿಕೊಳ್ಳಲಿ ಬಿಡಿ. ಎಷ್ಟೇ ಆಗಲಿ, ಅದು ಅವರ ಖಾಸಗಿ ಮಾತು ಎನ್ನಬಹುದು. ದೃಶ್ಯ ಮಾಧ್ಯಮದವರು, ಮುದ್ರಣ ಮಾಧ್ಯಮದವರು ಇದೇ ಮಾತನ್ನು ಆಡಿದಾಗ ಭಯ ಆವರಿಸುತ್ತೆ . ಯಾಕೆಂದರೆ ಅದು ಸಾರ್ವಜನಿಕವಾಗಿ ಆಡಿ ಬಿಟ್ಟಾಗ. ಖಾಸಗಿಯಾಗಿ ಏನೋ ಬೇಕಾದರೂ ಹೇಳಿಕೊಳ್ಳಲಿ, ಆದರೆ ಅದನ್ನು ಪತ್ರಿಕೆಗಳಲ್ಲಿ ಬರೆದು, ದೃಶ್ಯಮಾಧ್ಯಮದಲ್ಲಿ ಆಡಿ ತೋರಿಸಿದಾಗ ಇವರೆಲ್ಲಾ ಏನು ಮಾಡುತ್ತಿದ್ದಾರೆ ? ಏನು ಮಾಡಬೇಕು ಎಂದುಕೊಂಡಿದ್ದಾರೆ ? ವಕೀಲರು ಹಾಗೂ ಮುಖ್ಯವಾಗಿ ದೃಶ್ಯ ಮಾಧ್ಯಮದವರು ಇವರಿಬ್ಬರಿಗೆ ಸುಪ್ರಮಸಿ ಸಮಸ್ಯೆ ಕಾಡುತ್ತಿದೆ. ಇದು ಒಂದು ರೀತಿಯ ಫ್ಯಾಂಟಮ್ ಭೂತ ಆವರಿಸಿಕೊಂಡಿದೆ. ನಾವೇ ಸೂಪರ್ ಮ್ಯಾನ್ ಎನ್ನುವ ಎರಡು ಸೂಪರ್ ಮ್ಯಾನ್‌ಗಳ ನಡುವೆ ನಡೆಯುತ್ತಿರುವ ಯುದ್ಧವಿದು. ಇದಕ್ಕಿಂತ ಬೇರೇನೂ ಇದರ ಹಿಂದೆ ಇಲ್ಲ.

ಇದಕ್ಕೆ ಮುದ್ರಣ ಮಾಧ್ಯಮವೂ ಕೈಗೊಡಿಸಿದೆ. ಮುದ್ರಣ ಮಾಧ್ಯಮವೂ ಈಗ ರೋಚಕ ಸುದ್ದಿಗೆ, ಟ್ಯಾಬ್ಲಾಯ್ಡ್  ಭಾಷೆಗೆ ಒಳಗಾಗಿರುವ ಹೊತ್ತಿನಲ್ಲಿ ಅದನ್ನೇ ದೊಡ್ಡ ತನಿಖೆ ವರದಿ ಎಂದು ಬಿಂಬಿಸಿಕೊಳ್ಳುತ್ತಿರುವಾಗ ಅವರು ಬೆಂಬಲಿಸಲೇಬೇಕು. ಬೆಂಬಲಿಸಿದ್ದಾರೆ. ಅವರು ಯುದ್ಧವನ್ನು ಘೋಷಿಸಿದ್ದಾರೆ. ಬೆಂಗಳೂರಿನ ಸಿಟಿ ಸಿವಿಲ್  ಕೋರ್ಟ್ ಆವರಣ ಬಿಟ್ಟು ದೃಶ್ಯಮಾಧ್ಯಮದ ಕಣ್ಣು ಬೇರೆ ಕಡೆ ಹೋಗಲೇ ಇಲ್ಲ. ಇಡೀ ದಿನ ಕರ್ನಾಟಕವೇ  ಹತ್ತಿ ಉರಿಯುತ್ತಿದೆ ಎಂಬ ಚಿತ್ರಣವನ್ನು ನೀಡಿದರು. ರೆಡ್ಡಿಯನ್ನು ಅದುವರೆಗೆ ಹೊಸ ಬಟ್ಟೆ, ಧರಿಸಿದ್ದರು. ಇಡ್ಲಿ ತಿಂದರು, ಕಾಫಿ ಕುಡಿದರು ಎಂದೆಲ್ಲಾ ವರ್ಣಿಸುತ್ತಿದ್ದ  ದೃಶ್ಯ ಮಾಧ್ಯಮಗಳು ರೆಡ್ಡಿಯನ್ನು ಕೈ ಬಿಟ್ಟು ಬಿಟ್ಟರು. ಇದು ರೆಡ್ಡಿ ಗ್ಯಾಂಗ್ಗೂ, ಸರ್ಕಾರಕ್ಕೂ  ಸ್ವಲ್ಪ ಖುಷಿಯ ವಿಷಯ. ಈ ಘಟನೆಯಾಗದಿದ್ದರೆ ಗಣಿ ಹಗರಣದಲ್ಲಿ ಯಾರಿರಬಹುದು ಎಂದು ಎಲ್ಲರ ಹೆಸರನ್ನು ಇರಬಹುದು ಎಂದು ಹೇಳಲಾಗುತ್ತಿದೆ ಎಂದು ಅವರೇ ತೀರ್ಪು  ನೀಡಿ ಬಿಡುತ್ತಿದ್ದರು.

ಕೊನೆ ಗುಟುಕು : ಒಬ್ಬ ಪೊಲೀಸ್ ಪೇದೆ ಮಹದೇವಯ್ಯ ವಕೀಲರ ಕಲ್ಲು ತೂರಾಟದಿಂದ ಗಾಯಗೊಂಡು ಸರಿಯಾದ ಚಿಕಿತ್ಸೆ ಸಿಗದೇ ಸತ್ತು ಹೋಗಿ ಬಿಟ್ಟ ಎಂದೇ ಬಹುತೇಕ ದೃಶ್ಯ ಮಾಧ್ಯಮಗಳು ಹೇಳಿಯೇ ಬಿಟ್ಟವು. ಅದು ಸುಳ್ಳಾಗಿತ್ತು. ಸುಳ್ಳಾಗಿದ್ದರ ಬಗ್ಗೆ ಯಾವ ಕ್ಷಮೆಯನ್ನೂ ಕೇಳದೇ ಇರುವುದನ್ನು ನೋಡಿದರೆ ಇದು ನಿರ್ಲಜ್ಜೆಯ  ಪರಮಾವಧಿ ಎನ್ನದೇ ಬೇರೆ ಪದವೇ ಇಲ್ಲ.

ಗಾಂಧಿ ವಿವರಿಸುವ ವಕೀಲರೂ, ಗೂಂಡಾ ಪ್ರವೃತ್ತಿಯೂ

-ಅಮಾಸ

 ನ್ಯಾಯಕ್ಕೆ ಮೊರೆ ಹೋಗುವ ಬಡಬಗ್ಗರ ಕಣ್ಣಲ್ಲಿ ‘ನ್ಯಾಯ ದೇವರ’ ಹಾಗೆ ಕಾಣಿಸುವ ವಕೀಲರು, ಕಕ್ಷಿಗಾರರ ಕಣ್ಣಲ್ಲಿ ನೀರಿನ ಬದಲಾಗಿ ರಕ್ತವನ್ನು ಹರಿಸುವಂಥ ನಿಷ್ಕರುಣಿಗಳೂ ಆಗಿರುತ್ತಾರೆ. ಅಂಥವರ ಅರಾಜಕತೆಗೆ ಮಾನವೀಯ ಮುಖಗಳೇ ಇರುವುದಿಲ್ಲ. ಭಾರಿ ದಪ್ಪದ ಪುಸ್ತಕ ತೋರಿಸಿ ಅದರೊಳಗಿನ ಸುಳಿವುಗಳೊಂದಿಗೆ ವಾದಿಸುವ ಇವರ ಕರೀ ಕೋರ್ಟಿನ ಒಳಗೆ ಎಲ್ಲ ಮೌಲ್ಯಗಳು ಥಣ್ಣಗೆ ಮಲಗಿಕೊಂಡಿರುತ್ತವೆ. ಇಲ್ಲದ ಕಡೆ ಜಗಳ ಹಚ್ಚಿ ದೇವಮಾನವರ ಹಾಗೆ ನ್ಯಾಯ ಕೊಡಿಸುವ ಇವರೊಳಗಿನ ಕ್ರೌರ್ಯ ಬೂದಿಮುಚ್ಚಿದ ಕೆಂಡದ ಹಾಗಿರುತ್ತದೆ.

ಆದರೆ ಈಗ ತಮ್ಮನ್ನು ಯಾರೂ ಪ್ರಶ್ನಿಸಬಾರದು, ತಾವು ಶ್ರೇಷ್ಠರು ಎಂಬ ಅಹಮ್ಮಿನೊಂದಿಗೆ ಕಾನೂನಿನ ಚೌಕಟ್ಟು ಮುರಿದು ದೆವ್ವಗಳಂತೆ ವರ್ತಿಸಿರುವುದು ಸತ್ಯ ಹೇಳುವ, ಸತ್ಯಶೋಧನೆಯಲ್ಲಿ ನಿರತವಾಗಿರುವ ಪತ್ರಿಕಾರಂಗದ ಜೊತೆಗೆ…. ಕಾರಿಕೊಂಡ ವಕೀಲರು ಯಾರೂ ವಯಸ್ಸಾದವರಲ್ಲ ಯುವಕರು, ಅಂದರೆ, ಈಗಷ್ಟೆ ತಮ್ಮ ಸಂಭಾವನೆಯನ್ನು ನಿಗದಿಪಡಿಸಿಕೊಳ್ಳುತ್ತಿರುವವರು ಇರಬಹುದು. ವೃತ್ತಿಗುಣದೋಷದಿಂದ ಕೆಟ್ಟವರ್ತನೆಯಲ್ಲಿ ತೊಡಗಿದ್ದಾರೆ. ಅವರ ರೋಷಕ್ಕೆ ಕಾರಣ ಬಹಳ ಸಣ್ಣದು ಎನಿಸಬಹುದು, ಆದರೆ ಈ ರಾಜ್ಯದ ಆಡಳಿತ ವ್ಯವಸ್ಥೆಯ ಪಿತೂರಿಯಿಂದಾಗಿ ಹೀಗೆ ಈ ಅವಕಾಶವನ್ನು ಪತ್ರಕರ್ತರ ಮೇಲೆ ಬಳಸಿಕೊಂಡಿರಬಹುದು. ಸದನದ ಸಲ್ಲಾಪ, ವಕೀಲರ ಗೂಂಡಾ ಪ್ರವೃತ್ತಿಯ ವರದಿ, ರಾಜಕಾರಣಿಗಳ ಅವತಾರದ ಸಮೀಕ್ಷೆ, ಗಣಿಗಾರಿಕೆಯ ವರದಿ, ಭ್ರಷ್ಟಾಚಾರದ ಕುರಿತ ವಿಶ್ಲೇಷಣೆ ಈ ಬೂಟಾಟಿಕೆಯ ಮಧ್ಯಮವರ್ಗೀಯ ಜನರನ್ನು ಕೆದಕಿದ್ದಂತೂ ಹೌದು. ಆದರೆ ಸತ್ಯವನ್ನು ಬಹಿರಂಗಗೊಳಿಸುವ ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವ ಅಹಮ್ಮಿನ ನಡವಳಿಕೆಯು ವಕೀಲರಿಗೆ ಗೌರವ ತರುವಂಥದ್ದಲ್ಲ.

“ಪರರ ದುಃಖ ನಿವಾರಣೆಗಾಗಿ ಯಾರೂ ವಕೀಲಿ ಮಾಡುವುದಿಲ್ಲ; ಹಣ ಗಳಿಸಲು ಮಾಡುತ್ತಾರೆ. ಐಶ್ವರ್ಯ ಸಂಪಾದನೆಗೆ ಇದೊಂದು ದಾರಿಯಾಗಿದೆ. ಜಗಳ ಹೆಚ್ಚಾದರೆ ಅವರಿಗೆ ಲಾಭ ಹೆಚ್ಚು. ಜಗಳ ಹೆಚ್ಚಾದರೆ ವಕೀಲರಿಗೆ ಸಂತೋಷ; ನಾನಿದನ್ನು ಸ್ವಂತವಾಗಿ ಬಲ್ಲೆ, ಚಿಕ್ಕಪುಟ್ಟ ವಕೀಲರು ಇಲ್ಲದ ಕಡೆ ಜಗಳ ಹಚ್ಚುತ್ತಾರೆ. ಅವರ ದಲ್ಲಾಳಿಗಳು (ಪೂಟ್ ಲಾಯರ್) ಜಿಗಣಿಯಂತೆ ಬಡವರ ರಕ್ತ ಹೀರುತ್ತಾರೆ. ಆ ಕಸಬೇ ಜಗಳ ಕಚ್ಚಾಟಗಳಿಗೆ ಪ್ರೋತ್ಸಾಹ ಕೊಡುವಂಥದು. ವಕೀಲರಿಗೆ ಕೆಲಸ ಹೆಚ್ಚು ಇರುವುದಿಲ್ಲ. ಭೋಗ ವಿಲಾಸಗಳನ್ನು ಬಯಸುವ ಮೈಗಳ್ಳ ಜನ ಇಂಥ ವೃತ್ತಿಗಳನ್ನು ಹುಡುಕುತ್ತಾರೆ. ಇದು ಸತ್ಯ, ಉಳಿದೆಲ್ಲ ವಾದವೂ ಬರೀ ನೆಪ. ವಕೀಲಿ ಕಸಬು ಗೌರವಯುತವಾದುದೆಂದು ಕಂಡುಹಿಡಿದವರೂ ವಕೀಲರೇ. ಆತ್ಮಪ್ರಶಂಸೆ ಮಾಡಿಕೊಳ್ಳುವ ಹಾಗೆಯೆ ಕಾನೂನನ್ನು ರಚಿಸುತ್ತಾರೆ.” ಸ್ವಂತ ಅನುಭವದ ಮೇಲೆ ಮಹಾತ್ಮರು ತಮ್ಮ ಹಿಂದ್ ಸ್ವರಾಜ್ಯ ಕೃತಿಯಲ್ಲಿ ವಕೀಲಿ ವೃತ್ತಿ ಕುರಿತಾಗಿ ಹೇಳಿದ ಮಾತುಗಳಿವು. ಕುಹಕತನದ ವೃತ್ತಿಯವರು ಪಟ್ಟಭದ್ರರಾಗುತ್ತ ಸ್ವಹಿತಾಸಕ್ತಿಗೆ ಅನುಗುಣವಾಗಿ ಆಡಳಿತದ ಸೂತ್ರವನ್ನು ಬದಲಾಯಿಸುವ ಮತ್ತೂ ಭಯ ಹುಟ್ಟಿಸುವ ಸಲುವಾಗಿ ಕುಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಾ ಬಂದಿರುವುದು ಯಾವ ರಂಗದಲ್ಲೂ ಕಡಿಮೆಯೇನಿಲ್ಲ. ಇಂದು ಆಡಳಿತಕ್ಕೇರುವುದೆಂದರೆ ಸ್ವಂತ ಅಸ್ತಿತ್ವ ಪ್ರತಿಷ್ಠಾಪಿಸುವುದು ಮಾತ್ರ ಆಗಿದೆ. ಆದರ್ಶೀಕೃತ ಮಾದರಿ ವ್ಯಕ್ತಿತ್ವಗಳು ಪೂಜೆಗೊಳ್ಳುವ ಈ ಹೊತ್ತಿನಲ್ಲಿ ಭಂಡತನದ ಸಾಧಿಸುವಿಕೆ ಸುಲಭವಾದದ್ದು. ಗಾಂಧಿ ಸ್ವತಃ ವಕೀಲರಾಗಿದ್ದರಿಂದ ವೃತ್ತಿಯ ಆಳರಿವು ಅವರಿಗಿತ್ತು. ಆತ್ಮ ವಿಮರ್ಶೆ ಮಾಡಿಕೊಳ್ಳದ ಯಾವ ಕೆಲಸವೂ, ಅನುಭವದಿಂದ ಬರಲಾರದ ಯಾವ ಮಾತೂ, ಸಿಡಿದೇಳಲಾರದ ಚಳುವಳಿಗಳೂ ಯಾಕೆ ಮಂಕಾಗಿವೆ ಅಂದರೆ ಅದರೊಳಗಿರುವ ಮತ್ತೂ ಆಳಕ್ಕೆ ಹೂತು ಹೋಗಿರುವ ಸ್ವಹಿತಾಸಕ್ತಿ ಕಾರಣ.

ಇವರನ್ನು ನಂಬುವುದಾದರೂ ಹೇಗೆ ? ತಮ್ಮನ್ನು ಸ್ಪಷ್ಟ ಸ್ಪಟಿಕದ ಹಾಗೆ ಇಟ್ಟುಕೊಳ್ಳದ ವಕೀಲರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಾರಲ್ಲ…. ಇಂಥವರು ಈ ದೇಶದ ಪ್ರಜಾಪ್ರಭುತ್ವದ ಮಹತ್ವದ ಅಂಗವೊಂದನ್ನು ಸಶಕ್ತವಾಗಿ ನಿರ್ವಹಿಸುತ್ತಾರೆನ್ನುವುದು ಅನುಮಾನ. ನಾನು ದೂರದ ಹಳ್ಳಿಯಲ್ಲಿ ಕುಳಿತು ಪತ್ರಿಕೆ ತೆರೆದು ನೋಡಿದರೆ, ಟಿವಿ ಹಾಕಿ ನೋಡಿದರೆ ಕಂಡದ್ದು ಯುವ ವಕೀಲರ ಕೈಯಲ್ಲಿ ಕಲ್ಲು, ಬೂಟು, ಕುರ್ಚಿ ಹಿಡಿದ ಚಿತ್ರಗಳು. ಕಾಲದ ಬೆಂಕಿಯಲ್ಲಿ ಮಾಗದ ಮನಸುಗಳು ದಾರಿ ತಪ್ಪದಂತೆ ತಿದ್ದುವುದು ಸಾಧ್ಯವಾದರೆ ಮುಂದಿನ ದಿನಮಾನಗಳಲ್ಲಿ ಮಾನವೀಯ ಮೌಲ್ಯಗಳ ಕುರಿತು ನಂಬಿಕೆ ಬರುತ್ತದೆ. ಇದು ಹೀಗೆ ಅವರವರ ಸ್ವಪ್ರತಿಷ್ಠೆಯ ಮಾತಾದರೆ ವೃತ್ತಿಧರ್ಮದ ಅವನತಿಯ ಜೊತೆಗೆ ಪ್ರಜಾಪ್ರಭುತ್ವವನ್ನು ತೆಗೆದು ಹಾಕುವ ಪ್ರವೃತ್ತಿ ಬೆಳೆಯುತ್ತದೆ. ಹಾಗಾಗಿ ಇಂದು ಜನಸಾಮಾನ್ಯ ಜಾಗೃತಗೊಳ್ಳಬೇಕಾಗಿರುವುದು ಗೋಳೀಕರಣ ಸೃಷ್ಟಿಸಿರುವ ಮಧ್ಯಮವರ್ಗೀಯ ಆಶೋತ್ತರಗಳಿಂದ. ಸಮಾಜ ಒಡೆಯುವ ಓಟ್ ಬ್ಯಾಂಕ್ ರಾಜಕಾರಣ, ಶ್ರೇಷ್ಠತೆಯ ವ್ಯಸನ, ಅರಾಜಕ ಅಸಮಾನತೆಗಳೂ, ಜಮೀನ್ದಾರೀ ಅಂಶಗಳು ಹೀಗೆ ಬ್ರಿಟಿಷರು ಬಿಟ್ಟು ಹೋಗಿರುವ ರಾಜಕಾರಣದ ಎಲ್ಲಾ ಮಜಲುಗಳೂ ಅದರೊಳಗೆ ಉಳಿದುಕೊಂಡಿದ್ದಾವೆ.