Tag Archives: ವಿಜ್ಞಾನ

ಭೂಮಿ ಹುಟ್ಟಿದ್ದು ಹೇಗೆ – ಲೇಖನ: ಭಾಗ- 4

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


150 ಕೋಟಿ ವರ್ಷಗಳ ಹಿಂದೆ – ಭೂಮಿಯಲ್ಲಿ ಖಂಡಗಳು ವ್ಯಾಪಿಸಿಕೊಂಡವು. ಅಷ್ಟೇ ಅಲ್ಲದೆ ಈ ಭೂಪ್ರದೇಶಗಳು ಚಲಿಸುವುದಕ್ಕೂ ಆರಂಭಿಸಿದ್ದವು. 1912ರಲ್ಲಿ ಆಲ್ಫ್ರೆಡ್ ವ್ಯಾಗ್ನರ್ ಎಂಬ ವಿಜ್ಞಾನಿ ಖಂಡಗಳ ಅಲೆತದ ಸಿದ್ಧಾಂತವನ್ನು ಮಂಡಿಸಿದರು. ಒಮ್ಮೆ ಖಂಡಗಳು ಒಂದೇ ಆಗಿದ್ದು ಕಾಲಾನಂತರ ಭಿನ್ನವಾಗಿ ಹರಡಿಕೊಂಡವು ಎಂದು ವ್ಯಾಗ್ನರ್ ಪ್ರತಿಪಾದಿಸಿದರು. ವಿಜ್ಞಾನಿಗಳು ಅವರ ವಾದವನ್ನು ಒಪ್ಪಿಕೊಳ್ಳಲಿಲ್ಲ. ತಮ್ಮ ಪ್ರತಿಪಾದನೆಗೆ ತಕ್ಕ ಪುರಾವೆ ಹುಡುಕಾಟದಲ್ಲಿ ವ್ಯಾಗ್ನರ್ ವಿಧಿವಶವಾದರು. ಆದರೆ ಅವರು ಪ್ರತಿಪಾದಿಸಿದ ವಿಚಾರ ನಿಜವಾಯಿತು.

ಸಾಗರದ ತಳದಲ್ಲಿ ಶಿಲಾರಸ ಸದಾ ಚಲಿಸುತ್ತಲೇ ಇತ್ತು. ತೀವ್ರವಾದ ಶಾಖದಿಂದ ಭೂಮಿಯ ಮೇಲ್ಪದರ ಬಿರುಕು ಕಾಣಿಸಿಕೊಂಡು ಶಿಲಾರಸ ಹೊಸ ಭೂಮಿ ಪ್ರದೇಶವನ್ನು ಸೃಷ್ಟಿ ಮಾಡುತ್ತಿತ್ತು. ಜೊತೆಗೆ ನಿರಂತರವಾಗಿ ಚಲಿಸುತ್ತಲೆ ಇರುತ್ತಿದ್ದ ಲಾವಾರಸ ಬಿರುಕುಬಿಟ್ಟ ಭೂತೊಗಟೆಯನ್ನು ತನ್ನೊಂದಿಗೆ ಸೆಳೆದೊಯ್ಯುತ್ತಿತ್ತು. ಈ ಪ್ರಕ್ರಿಯೆ ಭೂಭಾಗಗಳನ್ನು ಚಲಿಸುವಂತೆ ಮಾಡಿತ್ತು.

ಉದಾಹರಣೆ, ಫಿಷರ್ ಎನ್ನುವ ಜ್ವಾಲಾಮುಖಿ ಒಂದೇ ಆಗಿದ್ದ ಯೂರೋಪ್ ಮತ್ತು ಅಮೆರಿಕ ಖಂಡಗಳನ್ನು ಬೇರ್ಪಡಿಸಿತು.

ಹೀಗೆ ಖಂಡಗಳ ಅಲೆತ ಕೂಡ ಬಹಳ ವರ್ಷಗಳ ಕಾಲ ನಡೆಯಿತು. ವರ್ಷಕ್ಕೆ ಮೂರು ಸೆಂಟಿ ಮೀಟರ್ ನಂತೆ ಖಂಡಗಳು ಚಲಿಸಿದವು.

ಮಹಾಖಂಡ

ಚಲಿಸುತ್ತಿದ್ದ ಖಂಡಗಳ ನಡುವೆ ಮಹಾಘರ್ಷಣೆಯೊಂದು ಸಂಭವಿಸಿತು. ಆಗ ಹುಟ್ಟಿದ್ದು ಒಂದು ಮಹಾಖಂಡ.

100 ಕೋಟಿ ವರ್ಷಗಳ ಹಿಂದೆ ಭೂಖಂಡಗಳ ನಿರಂತರ ಚಲನೆಯ ಪರಿಣಾಮ ಕೆನಡ ಮತ್ತು ಅಮೆರಿಕಗಳ ನಡುವೆ ಬೇರೆಬೇರೆ ಭೂಖಂಡಗಳು ಡಿಕ್ಕಿ ಹೊಡೆದವು.

ಹೀಗೆ ಸೇರಿದ ಭೂಖಂಡ ಒಂದು ಮಹಾಖಂಡವನ್ನೇ ನಿರ್ಮಿಸಿದವು. ಇದನ್ನು ವಿಜ್ಞಾನಿಗಳು ರೊಡೀನಿಯಾ, ಅಂದರೆ ತಾಯಿನಾಡು ಅಂತ ಕರೆದರು.  ರೊಡೀನಿಯಾ ಬಂಜರು ಖಂಡವಾಗಿತ್ತು. ಅಲ್ಲಿ ಯಾವ ರೀತಿಯ ಜೀವಿಗಳೂ ಇರಲಿಲ್ಲ. ಆದರೆ ಸಾಗರದೊಳಗಿನ ಜೀವಿಗಳಿಗೆ ದೊಡ್ಡ ಆಘಾತವನ್ನು ನೀಡಿತು.

ಈ ಮಹಾಖಂಡ ಭೂಮಿಯ ಮೇಲೆ ಹರಿಯುತ್ತಿದ್ದ ಬೆಚ್ಚನೆಯ ನೀರಿನ ಪ್ರವಾಹಕ್ಕೆ ಅಡ್ಡವಾಯಿತು. ಇದರಿಂದ ಧ್ರುವಪ್ರದೇಶದ ಹಿಮ ತನ್ನ ವ್ಯಾಪ್ತಿ ವಿಸ್ತರಿಸಿತು. ನಿಧಾನವಾಗಿ ಇಡೀ ಸಾಗರಗಳುಹಿಮದ ಪದರಗಳಿಂದ ಮುಚ್ಚಲ್ಪಟ್ಟವು. ಉಷ್ಣಾಂಶ -40 ಡಿಗ್ರಿ ಸೆಲ್ಷಿಯಸ್ ಗೆ ಇಳಿಯಿತು. ಒಂದು ಮೈಲಿಗೂ ಹೆಚ್ಚು ಆಳಕ್ಕೆ ಹಿಮ ವ್ಯಾಪಿಸಿಕೊಂಡಿತು.

ಭೂಮಿ ಹಿಮದ ಗೋಳವಾಯಿತು.

ಬೆಂಕಿಯುಂಡೆ, ಜಲಪ್ರಳಯವನ್ನು ನೋಡಿದ ಭೂಮಿ ಈಗ ಸಂಪೂರ್ಣ ಹಿಮಗಡ್ಡೆಯಾಗಿ ಹೋಗಿತ್ತು. ರೊಡೀನಿಯಾ ಖಂಡ ಸೃಷ್ಟಿಸಿದ ಈ ಹವಾಮಾನ ವೈಪರೀತ್ಯದಿಂದಾಗಿ ಈ ಗ್ರಹದ ಮೇಲಿದ್ದ ಸಾಗರ ಜೀವಿಗಳು ನಾಶವಾದವು.

ಆದರೆ ಹಿಮನದಿಯ ಅಡಿಯಲ್ಲೂ ಜ್ವಾಲಾಮುಖಿ ಚಟುವಟಿಕೆಗಳು ಕ್ರಿಯಾಶೀಲವಾಗಿದ್ದವು. ಇದರಿಂದಾಗಿ ಬಿಡುಗಡೆಯಾದ ಶಾಖ ಮತ್ತು ಇಂಗಾಲದ ಡೈಆಕ್ಸೈಡ್ ಹಿಮಗಡ್ಡೆಯ ದಟ್ಟಪದರದಲ್ಲಿ ಬಿರುಕು ಮೂಡಿಸಿತು. ರೊಡೇನಿಯಾ ಮಹಾಖಂಡ ಒಡೆಯಿತು.

ಭೂಮಿಯನ್ನು ಆವರಿಸಿಕೊಂಡಿದ್ದ ಮಂಜಿನ ಪದರ ಕರಗಿತು. ಆಮ್ಲಜನಕದ ಪ್ರಮಾಣ ಹೆಚ್ಚಿತು. ಸಾಗರದೊಳಗೆ ಬದುಕುಳಿದ ಜೀವಿಗಳು ವಿಕಾಸಗೊಂಡವು. ವಿಚಿತ್ರವಾದ ಮತ್ತು ಅಪಾಯಕಾರಿ ಜೀವಿಗಳು ಬೆಳೆದವು.

ಭೂಮಿಯ ವಾತಾವರಣದಲ್ಲಿ ಈಗ ಹಿಂದೆಂದಿಗಿಂತ ಅಪಾರ ಪ್ರಮಾಣದಲ್ಲಿ ಆಮ್ಲಜನಕವಿತ್ತು. ಜೀವವಿಕಾಸಕ್ಕೆ ಇದು ಪ್ರಮುಖ ಕಾರಣವಾಯಿತು.

ಕೆನಡಾದ ಬರ್ಬಸ್ ಶೆಲ್ ಕ್ವಾರಿ ಪಳೆಯುಳಿಕೆ ಜಗತ್ತಿನ ಕಿಟಕಿ ಎನಿಸಿಕೊಂಡಿರುವ ಸ್ಥಳ. ಅತ್ಯಲ್ಪಕಾಲದಲ್ಲಿ ಜೀವಿಗಳು ವಿಕಾಸ ಹೊಂದಿದ್ದಕ್ಕೆ ಮತ್ತು ವಿಕಾಸ ಹೊಂದಿದ ಜೀವಿಗಳ ವೈವಿಧ್ಯತೆಗೆ ಪುರಾವೆ ಸಿಕ್ಕಿದ್ದು ಇಲ್ಲಿಂದಲೆ.

ಅಮೆರಿಕದ ವಿಜ್ಞಾನಿ ಚಾರ್ಲ್ಸ್ ಡ್ಯುಲಮ್ ಈ ಕ್ವಾರ್ರಿಯನ್ನು ಪತ್ತೆ ಮಾಡಿದ್ದು. ಸ್ವತಃ ವಾಲ್ಕರ್ ಈ ಕ್ವಾರ್ರಿಯಲ್ಲಿ 60 ಸಾವಿರ ಪಳೆಯುಳಿಕೆಗಳನ್ನು ಸಂಗ್ರಹಿಸಿದರು. ನಂತರದ ದಿನಗಳಲ್ಲಿ ಒಂದು ಲಕ್ಷಕೂ ಹೆಚ್ಚು ಪಳೆಯುಳಿಕೆಗಳನ್ನು ವಿವಿಧ ವಿಜ್ಞಾನಿಗಳು ಸಂಗ್ರಹಿಸಿದರು.

50 ಕೋಟಿ ವರ್ಷಗಳ ಹಿಂದೆ ಜೀವಿಗಳು ಸ್ಫೋಟಕ ವೇಗದಲ್ಲಿ ವಿಕಾಸ ಹೊಂದಿದ್ದು ಈ ಪಳೆಯುಳಿಕೆಗಳಿಂದ ತಿಳಿದು ಬಂತು. ಇದನ್ನೇ ಕ್ಯಾಂಬ್ರಿಯನ್ ಸ್ಫೋಟವೆಂದು ಕರೆಯಲಾಯಿತು. ಈ ಕಾಲದ ಸಾಗರ ಜೀವಿಗಳು ಕೇವಲ ಸಸ್ಯಗಳನ್ನಷ್ಟೇ ತಿಂದು ಬದುಕುತ್ತಿರಲಿಲ್ಲ. ಅವು ಮತ್ತೊಂದು ಸಹ-ಜೀವಿಯನೇ ತಿಂದು ಬದುಕಲು ಆರಂಭಿಸಿದ್ದವು.

ಇದೇ ಸಮಯದಲು ಅವುಗಳ ದೇಹ ಹಲವು ಮಾರ್ಪಾಟುಗಳನ್ನು ಕಾಣಲು ಆರಂಭಿಸಿದವು. ಕಣು, ಅಸ್ಥಿಪಂಜರ, ಹಲ್ಲು ಮುಂತಾದವು ಹಲವು ಜೀವಿಗಳಲ್ಲು ವಿಕಾಸವಾಗಿದ್ದವು. ಆಧುನಿಕ ಜೀವಿಗಳು ಭೂಮಿಗೆ ಬಂದವು.

ನಂತರದ 10 ಕೋಟಿ ವರ್ಷಗಳಲ್ಲಿ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಮತ್ತಷ್ಟು ಹೆಚ್ಚಿತು. ಈ ಹೆಚ್ಚಳದಿಂದ ಓಜೋನ್ ಪದರ ರಚನೆಯಾಗಿ ಭೂಮಿಯನ್ನು ಸುತ್ತುವರೆಯಿತು. ಇದು ಸೂಕ್ಷ್ಮ ಅತಿನೇರಳೆ ಕಿರಣಗಳಿಂದ ಭೂಮಿಯ ಮೇಲಿದ್ದ ಸೂಕ್ಷ್ಮ ಜೀವಿಗಳನ್ನು ಉಳಿಸಿತು.

(ಮುಂದುವರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ:

ಭೂಮಿ ಹುಟ್ಟಿದ್ದು ಹೇಗೆ – ಲೇಖನ : ಭಾಗ – 2

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


456 ಕೋಟಿ ವರ್ಷಗಳ ಹಿಂದೆ ಹುಟ್ಟಿದ ಭೂಮಿ ಬೆಂಕಿ ಉಂಡೆಯಾಗಿ, ಹಿಮದ ಉಂಡೆಯಾಗಿ, ಹಾಗೇ ವಿಷಮ ವಾತಾವರಣವನ್ನು, ಉಕ್ಕುವ ಕಡಲನ್ನು ತುಂಬಿಕೊಂಡು ವಿಶಿಷ್ಟ ಗ್ರಹವಾಗಿ ರೂಪಾಂತರವಾಯಿತು.

ಸೂರ್ಯನನ್ನು ಸುತ್ತುತ್ತಿರುವ ಎಂಟು ಗ್ರಹಗಳಲ್ಲಿ ಭೂಮಿ ದೂರದ ದೃಷ್ಟಿಯಿಂದ ಮೂರನೆಯದು. ಸುಮಾರು 150 ದಶಲಕ್ಷ ಕಿ.ಮೀ. ದೂರದಲ್ಲಿ ತನ್ನ ಪಥದಲ್ಲಿ ಸುತ್ತುತ್ತಾ ಇರುವ ಈ ಗ್ರಹ ಜೀವಿಗಳಿಗೆ ನೆಲೆನೀಡಿರುವ ಸೌರಮಂಡಲದ ಏಕೈಕ ಸದಸ್ಯ.

ಕೋಟ್ಯಂತರ ವರ್ಷಗಳ ಹಿಂದೆ ನಿಹಾರಿಕೆಯಿಂದ ಸಿಡಿದ ಕಣಗಳು ಕಾಲಾನಂತರ ಧೂಳು, ಶಿಲೆ, ಅನಿಲಗಳಿಂದ ಕೂಡಿ ಆದ ಗ್ರಹಗಳಲ್ಲಿ ಭೂಮಿಯೂ ಒಂದು. ಇದು ಭೂಮಿಯ ಭ್ರೂಣಾವಸ್ಥೆಯಷ್ಟೆ.

ಇಷ್ಟನ್ನು ತಿಳಿಯುವುದಕ್ಕೂ ವಿಜ್ಞಾನಿಗಳಿಗೆ ಸಾಕಷ್ಟು ಸಮಯವೇ ಬೇಕಾಯಿತು. ಇಷ್ಟಕ್ಕೂ ಭೂಮಿ ಕುರಿತ ಅಧ್ಯಯನ ಸಂಶೋಧನೆಗಳ ಆರಂಭವಾಗಿದ್ದು ಕೇವಲ 2000 ವರ್ಷಗಳ ಹಿಂದೆ. ಈ  ಹುಡುಕಾಟಕ್ಕೆ ಸರಿಯಾದ ದಾರಿ ಸಿಕ್ಕಿದ್ದು ಸ್ಕಾಟ್‍ಲ್ಯಾಂಡಿನಲ್ಲಿ…

ಗುಟ್ಟು ಬಿಟ್ಟು ಕೊಟ್ಟ ಬಂಡೆ

1778 ರಲ್ಲಿ ಸ್ಕಾಟ್ಲೆಂಡ್ ದೇಶದ ಎಡಿನ್‍ಬರೊ ಕರಾವಳಿ ಪ್ರದೇಶದಲ್ಲಿ ಒಂದು ಬಂಡೆ ಪತ್ತೆಯಾಯಿತು. ಇದು ಭೂಮಿಯ ಜನ್ಮರಹಸ್ಯದ ಹುಡುಕಾಟಕೆ ಹೊಸತಿರುವು ನೀಡಿತು.

ಶಿಲೆಗಳು ಹೇಗಾದವು ಎಂದು ಅಧ್ಯಯನ ನಡೆಸುತ್ತಿದ್ದ ಜೇಮ್ಸ್ ಹಟ್ಟನ್ ಈ ಬಂಡೆಯನ್ನು ಪತ್ತೆ ಮಾಡಿದರು. ಆಧುನಿಕ ಭೂಗರ್ಭ ಶಾಸ್ತ್ರದ ಪಿತಾಮಹ ಎನಿಸಿಕೊಂಡ ಜೇಮ್ಸ್ ಕಲ್ಲುಗಳ ಅಧ್ಯಯನ ಮಾಡುತ್ತ ಎಡಿನ್‍ಬರೊ ಕರಾವಳಿ ಪ್ರದೇಶಕ್ಕೆ ಬಂದಾಗ ಈ ಬಂಡೆ ಅವರಲ್ಲಿ ಬೆರಗು ಹುಟ್ಟಿಸಿತು.

ಕೆಲವು ಪದರಗಳಲ್ಲಿದ್ದ ಈ ಶಿಲೆಯನ್ನು ನೋಡಿದ ಅವರು ಇದರ ರಚನೆಗೆ ಧೀರ್ಘಕಾಲ ತೆಗೆದುಕೊಂಡಿದೆ ಎಂದು ಊಹಿಸಿದರು. ತೀವ್ರ ಪರಿಶೀಲನೆ, ಅಧ್ಯಯನದ ಬಳಿಕ, ’ಶಿಲಾರಚನೆ ಅತಿ ನಿಧಾನ ಕ್ರಿಯೆ. ಈ ಬಂಡೆ ರಚನೆಗೆ ಸಾವಿರಾರು ವರ್ಷಗಳೇ ಆಗಿರಬಹುದು’ ಎಂದು ಅಂದಾಜು ಮಾಡಿದರು. ಹಾಗಾದರೆ ಈ ಭೂಮಿ ಕೂಡ ಕೆಲವೇ ವರ್ಷಗಳಲ್ಲಿ ಆಗಿಲ್ಲ ಎಂಬುದು ಅವರಿಗೆ ಸ್ಪಷ್ಟವಾಯಿತು. ಈ ವಿಚಾರ ಅಲ್ಲಿಯವರೆಗೆ ಚರ್ಚ್‌ಗಳು ಹೇಳುತ್ತಿದ್ದ ನಂಬಿಕೆಗೆ ವಿರುದ್ಧವಾಗಿತ್ತು.

ಬೆಂಕಿಯುಂಡೆಯಾಗಿದ್ದ ಭೂಮಿ

ಜೇಮ್ಸ್ ಹಟ್ಟನ್

ಹಲವು ಶತಮಾನಗಳ ಕಾಲ ಕ್ರೈಸ್ತ ಧರ್ಮೀಯರ ಗ್ರಂಥ ಬುಕ್ ಆಫ್ ಜೆನೆಸಿಸ್ ಜನರಲ್ಲಿ ಸೂರ್ಯ, ಚಂದ್ರ, ನಕ್ಷತ್ರ, ಭೂಮಿಗಳ ಬಗ್ಗೆ, ಮನುಷ್ಯನ ಹುಟ್ಟಿನ ಬಗ್ಗೆ, ಹಲವು ಅವೈಜ್ಞಾನಿಕ ವಿಚಾರಗಳನ್ನು ಬಿತ್ತಿತ್ತು. ಆ ಗ್ರಂಥದ ಪ್ರಕಾರ ಭೂಮಿಯು ಆರು ಸಾವಿರ ವರ್ಷಗಳ ಹಿಂದೆ ಹುಟ್ಟಿತ್ತು. ಕ್ರೈಸ್ತ ಗುರುಗಳು ಇದನ್ನೇ ಪ್ರಚಾರ ಮಾಡುತ್ತಿದ್ದರು. ಜೇಮ್ಸ್ ಹಟ್ಟನ್‍ನ ಸಂಶೋಧನೆ ಎತ್ತಿದ ಪ್ರಶ್ನೆ ಆ ನಂಬಿಕೆಯ ಬುಡವನ್ನೆ ಅಲ್ಲಾಡಿಸಿತು.

ಶಿಲೆಗಳನ್ನು ಅಧ್ಯಯನ ಮಾಡುತ್ತ ಭೂಮಿಯು ಆರು ಸಾವಿರ ವರ್ಷಗಳಿಗಿಂತ ಪುರಾತನವೆಂದು ಅನುಮಾನಿಸುತ್ತಿದ್ದ ಹಟ್ಟನ್‌ಗೆ ಪುರಾವೆಯಾಗಿ ಸಿಕ್ಕ ಈ ಬಂಡೆ ಭೂಮಿಯ ರಚನೆ ಹೇಗಾಗಿರಬಹುದು ಎಂಬ ಸುಳಿವನ್ನು ಬಿಟ್ಟುಕೊಟ್ಟಿತು.

ಎರಡು ಪದರಗಳಲ್ಲಿ ರಚನೆಯಾಗಿದ್ದ ಈ ಬಂಡೆ ಲಂಬವಾಗಿತ್ತು. ಸಾವಿರಾರು ವರ್ಷಗಳ ಹಿಂದೆ ಇದು ಭೂಮಿಗೆ ಸಮಾನಾಂತರವಾಗಿಯೇ ಇದ್ದು, ಭೂಚಲನೆಯ ಪರಿಣಾಮ ಲಂಬವಾಗಿ ನಿಂತಿದ್ದವು.

ಸಾವಿರಾರು ವರ್ಷಗಳ ಅವಧಿಯಲ್ಲಿ ಇಂತಹ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದ ಈ ಬಂಡೆಯ ಅಧ್ಯಯನದ ಬಳಿಕ ಭೂಮಿಯ ಇತಿಹಾಸ ಲಕ್ಷಾಂತರ ವರ್ಷಗಳದ್ದಿರಬಹುದು ಇಲ್ಲವೇ ಅದರಾಚೆಗೂ ಇರಬಹುದು ಎಂಬ ನಿಲುವಿಗೆ ಬಂದರು ಹಟ್ಟನ್. ಇದು ಭೂಮಿಯ ಜನ್ಮರಹಸ್ಯ ಅರಿಯುವ ನಿಟ್ಟಿನಲ್ಲಿ ಇಟ್ಟ ಮೊದಲ ಹೆಜ್ಜೆಯಾಯಿತು. ಇಲ್ಲಿಂದ ಮುಂದೆ ಭೂಮಿಯ ಇತಿಹಾಸ ಅರಿಯಲು ಕಲ್ಲುಗಳತ್ತ ಮುಖ ಮಾಡಿದರು.

ಹಟ್ಟನ್ ಸಂಶೋಧನೆಯ ನಂತರದ 200 ವರ್ಷಗಳಲ್ಲಿ ಶಿಲಾರಚನೆ ಹಾಗೂ ವಿವಿಧ ರೀತಿಯ ಬಂಡೆಗಳ ಬಗ್ಗೆ ಅಧ್ಯಯನ ನಡೆದವು. ಈ ಮೂಲಕ ಭೂಮಿಯ ಹುಟ್ಟು ಅದರ ರಚನೆ ಕುರಿತ ಹಲವು ಅಚ್ಚರಿಯ ಅಂಶಗಳು ಹೊರಬಂದವು.

ಭಯಾನಕವಾಗಿತ್ತು ಭೂಮಿ!

ಅಕ್ಷರಶಃ ಕಲ್ಪನೆಗೂ ಮೀರಿದ ವಿದ್ಯಮಾನಗಳು ಭೂಮಿಯ ಆರಂಭಿಕ ದಿನಗಳಲ್ಲಿ ನಡೆದವು. ಇಂದು ಸುಂದರ ನೀಲಿಗ್ರಹ ಎಂದು ಕರೆಸಿಕೊಳ್ಳುವ ಈ ಭೂಮಿ ಒಂದು ಕಾಲದಲ್ಲಿ ಬೆಂಕಿಯುಂಡೆಯಾಗಿತ್ತು.

ಭೂಗ್ರಹದ ಮೇಲ್ಮೈ ಲಾವಾರಸದಿಂದ ತುಂಬಿ ತುಳುಕುತ್ತಿತ್ತು. ಮೈಲುಗಟ್ಟಲೆ ಆಳದವರೆಗೆ, ಸಾವಿರಾರು ಮೈಲು ವಿಸ್ತಾರವಾಗಿ, ವ್ಯಾಪಿಸಿಕೊಂಡಿತ್ತು. 4500 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಭೂಮಿ ಬೆಂಕಿಯ ಚೆಂಡಾಗಿತ್ತು. ಅಂತರಿಕ್ಷದಿಂದ ಅಪ್ಪಳಿಸುತ್ತಿದ್ದ ಉಲ್ಕೆಗಳ ಮಳೆ ಈ ಬೆಂಕಿಯನ್ನು ಹೆಚ್ಚಿಸುತ್ತಲೇ ಇದ್ದವು.

ಭೂಮಿ ಇಂತಹ ಸ್ಥಿತಿಯಲ್ಲಿತ್ತು ಅನ್ನೋ ಸಿದ್ಧಾಂತವನ್ನು ನಮ್ಮ ಮುಂದೆ ಇಟ್ಟಿದ್ದು ಇಂಗ್ಲೆಂಡಿನ ವಿಜ್ಞಾನಿ ಲಾರ್ಡ್ ಕೆಲ್ವಿನ್.

ಹೀಗೆ ಬೆಂಕಿಯ ಉಂಡೆಯಂತೆ ಇದ್ದ ಭೂಮಿ ನಿಧಾನವಾಗಿ ತಣ್ಣಗಾಗುತ್ತ ಬಂತು. 2 ಕೋಟಿ ವರ್ಷಗಳಲ್ಲಿ ಭೂಮಿ ತಣ್ಣಗಾಯಿತು ಎಂಬ ಲೆಕ್ಕಾಚಾರವನ್ನು ಕೆಲ್ವಿನ್ ಮುಂದಿಟ್ಟರು.

ಲಾರ್ಡ್ ಕೆಲ್ವಿನ್

ಕೆಲ್ವಿನ್ ಪ್ರತಿಪಾದಿಸಿದ ವಿಚಾರಗಳಲ್ಲಿ ಎಲ್ಲವೂ ಸರಿ ಇರಲಿಲ್ಲ. ಅವರು ಹೇಳಿದಂತೆ ಭೂಮಿ ಲಾವಾರಸದಿಂದ ತುಂಬಿ ಬೆಂಕಿ ಚೆಂಡಾಗಿತ್ತು, ನಿಜ. ಆದರೆ ಅದು ತಣ್ಣಗಾಗಲು ತೆಗೆದುಕೊಂಡ ಅವಧಿ 2 ಕೋಟಿ ವರ್ಷಗಳಷ್ಟೇ ಆಗಿರಲಿಲ್ಲ.

ಕೆಲ್ವಿನ್ ಭೂಮಿಯ ಒಡಲೊಳಗೆ ಹುಟ್ಟಿದ್ದ ಶಾಖದ ಮೂಲವನ್ನು ತಿಳಿಯುವಲ್ಲಿ ಸೋತಿದ್ದರು. ಇದೇ ಅವರ ಲೆಕ್ಕಾಚಾರವನ್ನು ಸುಳ್ಳು ಮಾಡಿತ್ತು. ಭೂಮಿಯೊಳಗಿದ್ದ ಯುರೇನಿಯಂ, ಥೋರಿಯಂ, ರಾಸಾಯನಿಕಗಳಿಂದ ಹೊರಬೀಳುತ್ತಿದ್ದ ವಿಕಿರಣ ಭೂಮಿ ತಣ್ಣಗಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಿದ್ದವು. ಹಾಗಾಗಿ ಭೂಮಿಯ ಗರ್ಭ ಬಹುಕಾಲ ಬೆಂಕಿ ಕುಂಡದಂತೇ ಇತ್ತು.

ಭೂಮಿ ಕಾವು ಹೆಚ್ಚಿಸುತ್ತಲೇ ಇದ್ದ ಯುರೇನಿಯಂ 20ನೇ ಶತಮಾನದ ಯುದ್ಧದಲ್ಲಿ ದೊಡ್ಡ ಅಸ್ತ್ರವಾಗಿ ನಮ್ಮೆಲ್ಲರಿಗೂ ಗೊತ್ತು. ಅದು ವಿಜ್ಞಾನಿಗಳ ಭೂಮಿಯ ಇತಿಹಾಸ ಪತ್ತೆಗೆ ಸಾಧನವೂ ಆಯಿತು.

1911 ರಲ್ಲಿ 21 ವರ್ಷದ ವಿಜ್ಞಾನಿ ಆರ್ಥರ್ ಹೋಮ್ಸ್ ವಿಕಿರಣ ಬಳಸಿ ಭೂಮಿಯ ಅಧ್ಯಯನ ಮಾಡಿದರು. ಈ ಅಧ್ಯಯನದ ಬಳಿಕ ಭೂಮಿಯ ಇತಿಹಾಸವನ್ನು ಸಾವಿರ, ಲಕ್ಷ ವರ್ಷಗಳ ಲೆಕ್ಕ ಬಿಟ್ಟು ಕೋಟಿಗಳಲ್ಲಿ ಮಾತನಾಡಲಾರಂಭಿಸಿದರು.

(ಮುಂದುವರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ:

ಭೂಮಿ ಹುಟ್ಟಿದ್ದು ಹೇಗೆ? : ಭಾಗ -1

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


ಭೂಮಿಗೆ 450 ಕೋಟಿ ವರ್ಷಗಳ ಇತಿಹಾಸವಿದೆ. ಅನಂತವಾದ ವಿಶ್ವದಲ್ಲಿ ಭೂಮಿಯ ಹೊರತಾಗಿ ಮತ್ತೊಂದು  ಹಸಿರು, ಉಸಿರು, ನೀರು ಕಾಣುವ ಮತ್ತು ಜೀವಿಗಳು ವಾಸಿಸುತ್ತಿರುವ ನೆಲ ಕಾಣಿಸುವುದಿಲ್ಲ. ಆದರೆ ಹಲವು ಗೆಲಾಕ್ಸಿಗಳು, ಅಸಂಖ್ಯ ನಕ್ಷತ್ರಗಳು, ಕೋಟ್ಯಂತರ ಆಕಾಶ ಕಾಯಗಳಿವೆ. ಇಂಥ ವಿಶ್ವದಲ್ಲಿ ಭೂಮಿ ಸಣ್ಣ ಕಣವಷ್ಟೆ. ಆದರೆ ಅದರ ವೈಶಿಷ್ಟ್ಯಗಳಿಂದಾಗಿ ಭೂಮಿ ಅಸಾಮಾನ್ಯ ಗ್ರಹವಾಗಿ ನಿಲ್ಲುತ್ತದೆ. ವಿಶ್ವದಲ್ಲಿ ಹೋಲಿಕೆಗೆ ಮತ್ತೊಂದು ಗ್ರಹ ಇದುವರೆಗೂ ಸಿಕ್ಕಿಲ್ಲ. ಇಂಥ ಅನನ್ಯವಾದ ಗ್ರಹದ ಹುಟ್ಟಿನ ಮೂಲವನ್ನು ಪರಿಚಯಿಸುವ ಒಂದು ಸಣ್ಣ ಪ್ರಯತ್ನವಿದು.

ಭೂಮಿ ಇಡೀ ವಿಶ್ವದಲ್ಲಿ ಒಂದು ಸಣ್ಣ ಕಣವಷ್ಟೆ. ಭೂಮಿಯಂತೆ ವಿಶಿಷ್ಟವಾಗಿಲ್ಲದಿದ್ದರೂ, ಅಸಂಖ್ಯವೂ, ಅಗಾಧವೂ ಆದ ಕಾಯಗಳನ್ನು ವಿಶ್ವವು ಹೊಂದಿದೆ. ಒಂದು ಕಾಲಕ್ಕೆ ಈ ವಿಶ್ವ ಎನ್ನುವುದೇ ಇರಲಿಲ್ಲ ಎನ್ನುತ್ತಾರೆ ವಿಜ್ಞಾನಿಗಳು. ನಿಮಗೆ ಅಚ್ಚರಿಯಾಗಬಹುದು. ಸೌರವ್ಯೂಹ, ಕ್ಷೀರಪಥದಂತಹ ಗೆಲಾಕ್ಸಿಗಳು, ನಕ್ಷತ್ರಗಳು, ನಕ್ಷತ್ರಪುಂಜಗಳು, ಕ್ಷುದ್ರಗ್ರಹಗಳು, ಕಪ್ಪು ಕುಳಿಗಳು, ಧೂಮಕೇತುಗಳು.. ಹೀಗೆ ಏನನ್ನೋ ಒಳಗೊಂಡಿರುವ ವಿಶ್ವ ಕೂಡ ಇರಲೇ ಇಲ್ಲ ಎನ್ನುತ್ತಾರೆ.. ಭೂಮಿ ಹುಟ್ಟುವ ಮುನ್ನ ಭೂಮಿಯ ತಾಯಿಯಂತೆ ಇರುವ ವಿಶ್ವ ಹೇಗೆ ಹುಟ್ಟಿತು?

ವಿಶ್ವದ ಉಗಮ:

ಮೊದಲಿಗೆ ಏನೂ, ಏನೇನೂ ಇರಲಿಲ್ಲ. ಒಂದು ರೀತಿಯಲ್ಲಿ ಏಕಮೇವ ಶೂನ್ಯತೆ. ಆ ಏಕಶೂನ್ಯದ ಸುತ್ತಲೂ ಏನೂ ಇರಲಿಲ್ಲ. ಅಲ್ಲಿ ಅಂತರಿಕ್ಷವಾಗಲಿ, ಖಾಲಿ ಜಾಗವಾಗಲಿ… ಕೊನೆಗೆ ಕತ್ತಲಾಗಲಿ, ಏನೂ ಇರಲಿಲ್ಲ. ಅದು ಅಂತಹ ಸ್ಥಿತಿಯಲ್ಲಿ ಹೇಗೆ ಎಷ್ಟು ದಿನ ಇತ್ತು ಅಂತಲೂ ಗೊತ್ತಿಲ್ಲ. ಏಕೆಂದರೆ ಆಗ ಕಾಲವೂ ಇರಲಿಲ್ಲ. ಹಾಗಾಗಿ ಅದಕ್ಕೆ ಭೂತಕಾಲವಾಗಲಿ, ಇತಿಹಾಸವಾಗಲಿ ಇರಲಿಲ್ಲ…

ಇಂಥ ಏನೂ ಇಲ್ಲದ ಸ್ಥಿತಿಯಲ್ಲಿ ನಮ್ಮ ಈ ಬ್ರಹ್ಮಾಂಡ ಉದಯಿಸಿತು. ಯಾವಾಗ ಎಂದು ಕೇಳಬಹುದು.  ಬ್ರಹ್ಮಾಂಡ ವಿಜ್ಞಾನಿಗಳು (ಖಗೋಳ ವಿಜ್ಞಾನಿಗಳು) ಹೇಳುವ ಪ್ರಕಾರ ಸುಮಾರು 1370 ಕೋಟಿ ವರ್ಷಗಳ ಹಿಂದೆ..

ಅದು ಆಗಿದ್ದಾದರೂ ಹೇಗೆ? ಅಂತಹ ಒಂದು ಏಕಶೂನ್ಯತೆಯಿಂದ, ಪದಗಳಲ್ಲಿ ವರ್ಣಿಸಲಾಗದ ಅಗಾಧತೆಯಲ್ಲಿ, ಅನಂತ ಆಯಾಮಗಳಲ್ಲಿ, ಕಲ್ಪಿಸಿಕೊಳ್ಳಲಾಗದಷ್ಟು ವಿಸ್ತಾರ ವ್ಯೋಮಾಕಾಶದಲ್ಲಿ ಈ ಬ್ರಹ್ಮಾಂಡ ಕ್ಷಣಾರ್ಧದಲ್ಲಿ ಅಸ್ತಿತ್ವಕ್ಕೆ ಬಂದುಬಿಟ್ಟಿತು.

ಆ ಮೊದಲ ಸೆಕೆಂಡಿನಲ್ಲಿ ಗುರುತ್ವಾಕರ್ಷಣೆ ಮತ್ತು ಇತರ ಭೌತಶಾಸ್ತ್ರದ ಪ್ರಮುಖ ಬಲಗಳು ಉದಯಿಸಿದವು. ಒಂದು ನಿಮಿಷಕ್ಕಿಂತ ಕಮ್ಮಿ ಅವಧಿಯಲ್ಲಿ ಈ ಬ್ರಹ್ಮಾಂಡ ಲಕ್ಷಾಂತರ ಕೋಟಿ ಮೈಲುಗಳ ಅಗಲದಲ್ಲಿ ಬೆಳೆದು, ವಿಸ್ತಾರವಾಗಿ ಚಾಚಿಕೊಂಡಿತು. ಅದರ ಜೊತೆಗೆ ಸಹಸ್ರ ಕೋಟಿ ಡಿಗ್ರಿಗಳ ಶಾಖವೂ ಇತ್ತು. ಅದು ಪರಮಾಣು ಪ್ರಕ್ರಿಯೆಗಳನ್ನು ಸಾಧ್ಯವಾಗಿಸುವ ಶಾಖ. ಆ ಸಮಯದ ಪರಮಾಣು ಪ್ರಕ್ರಿಯೆಗಳು ಹಗುರ ಮೂಲಧಾತುಗಳಾದ ಜಲಜನಕ ಮತ್ತು ಹೀಲಿಯಂ ಅನ್ನು ಸೃಷ್ಟಿಸಿದವು. ಹೀಗೆ ಸಾಗುವ ಸೃಷ್ಟಿಕ್ರಿಯೆ ಮುಂದಕ್ಕೆ ವಿಶ್ವದಲ್ಲಿ ಇದ್ದಿರಬಹುದಾದ ಎಲ್ಲಾ ಭೌತವಸ್ತುಗಳಲ್ಲಿ ಶೇ. 98ನ್ನು ಕೇವಲ ಮೂರೇ ನಿಮಿಷಗಳಲ್ಲಿ ಉತ್ಪನ್ನ ಮಾಡಿತು.

ಕೇವಲ ಎರಡು-ಮೂರು ನಿಮಿಷಗಳಲ್ಲಿ ಏನೂ ಇಲ್ಲದ ಸ್ಥಿತಿಯಿಂದ ಅಗಾಧ, ಅನಂತ, ಸುಂದರ, ಅಪರಿಮಿತ ಸಾಧ್ಯತೆಗಳ ಬ್ರಹ್ಮಾಂಡ ಆಸ್ತಿತ್ವಕ್ಕೆ ಬಂದಿದ್ದು. ಇದನ್ನೆ (ಖಗೋಳ) ಬ್ರಹ್ಮಾಂಡವಿಜ್ಞಾನದ ವಿಜ್ಞಾನಿಗಳು ಬಿಗ್-ಬ್ಯಾಂಗ್, ಮಹಾ ಸ್ಫೋಟ ಎಂದು ಕರೆಯುವುದು. ಅದು ಸ್ಫೋಟಕ್ಕಿಂತ ಹೆಚ್ಚಾಗಿ ಇದ್ದಕ್ಕಿದ್ದಂತೆ ಬೃಹತ್ ಪ್ರಮಾಣದಲ್ಲಿ ಘಟಿಸಿದ ಮಹಾವಿಸ್ತರಣೆ.

ಭೂಮಿ ಎಂಬ ಬೆರಗು

ಹೀಗೆ ಉದ್ಭವವಾದ ಅಗಾಧ ವಿಶ್ವದಲ್ಲಿ ಭೂಮಿಯೇನು ಏಕಾಏಕಿ ಪ್ರತ್ಯಕ್ಷವಾಗಲಿಲ್ಲ. ವಿಶ್ವವು ಕೋಟಿ ವರ್ಷಗಳ ಕಾಲ ವಿಸ್ತರಿಸಿಕೊಳ್ಳುತ್ತಾ ಇರುವಾಗಲೇ ಭೂಮಿ ನಿಧಾನವಾಗಿ ತನ್ನನ್ನು ರೂಪಿಸಿಕೊಳ್ಳುತ್ತಿತ್ತು.. ಕಲ್ಪನಾತೀತವಾದ ವಿಸ್ತಾರವಾದ ವಿಶ್ವದಲ್ಲಿ ಭೂಮಿ ಹುಟ್ಟಿದ್ದು ಒಂದು ಬೆರಗೇ…

1370 ಕೋಟಿ ವರ್ಷಗಳಷ್ಟು ಹಳೆಯದಾದ ಬ್ರಹ್ಮಾಂಡದಲ್ಲಿ ಸುಮಾರು 460 ಕೋಟಿ ವರ್ಷಗಳ ಹಿಂದೆ ನಮ್ಮ ಸೌರಮಂಡಲ ರೂಪಗೊಂಡಿತು. ಸುಮಾರು 2400 ಕೋಟಿ ಕಿಲೋಮೀಟರ್ ಗಳ ಉದ್ದಗಲದ ಅಂತರಿಕ್ಷದಲ್ಲಿ ಅನಿಲ ಮತ್ತು ಧೂಳು ಗುಂಪಾಗುತ್ತ ಬಂದು ಒಂದಾಗಿ ಸೇರಲು ಆರಂಭವಾಯಿತು.

ಅದರಲ್ಲಿ ಬಹುಪಾಲು ಎಲ್ಲವೂ ಅಂದರೆ ಶೇ. 99.9 ರಷ್ಟು ಸೂರ್ಯನ ಸೃಷ್ಟಿಗೇ ಬಳಕೆಯಾಯಿತು. ಇನ್ನೂ ತೇಲುತ್ತಿದ್ದ ಅಳಿದುಳಿದ ವಸ್ತುಗಳಲ್ಲಿ ಒಂದು ಕಣ ತನ್ನ ಹತ್ತಿರ ತೇಲುತ್ತಿದ್ದ ಇನ್ನೊಂದು ಕಣದೊಂದಿಗೆ ಎಲೆಕ್ಟ್ರೊಸ್ಟಾಟಿಕ್ ಬಲದಿಂದಾಗಿ ಕೂಡಿಕೊಳ್ಳಲು ಆರಂಭಿಸಿದವು. ಹಾಗೆ ಕೂಡಿಕೊಳ್ಳುತ್ತ ಅವೇ ಗ್ರಹಗಳಾಗಿ, ಉಪಗ್ರಹಗಳಾಗಿ ಆಕಾಶಕಾಯಗಳಾಗಿ ಬದಲಾಗುತ್ತ ಹೋದವು.

ಸೌರಮಂಡಲದ ಉದ್ದಗಲಕ್ಕೂ ಈ ವಿದ್ಯಮಾನ ದೀರ್ಘ ಕಾಲ ನಡೆಯಿತು. ಒಂದಕ್ಕೊಂದು ಡಿಕ್ಕಿಹೊಡೆದ ಧೂಳಿನ ಕಣಗಳು ಕ್ರಮೇಣ ಇನ್ನೊಂದಕ್ಕೆ ಡಿಕ್ಕಿ ಹೊಡೆದು, ಒಂದಕ್ಕೊಂದು ಅಂಟಿಕೊಳ್ಳುತ್ತ ದೊಡ್ಡವಾಗುತ್ತ ಹೋದವು. ಅವೇ ಕ್ರಮೇಣ ತಟ್ಟೆಯಾಕಾರದಲ್ಲಿ ಹರಡಿ ಕೊಂಡ ಗ್ರಹಾರಿಕೆ ಅಥವಾ ಪ್ಲಾನೆಟೆಸಿಮಲ್ಸ್ ಎಂದು ಕರೆಯಲ್ಪಡಬಲ್ಲಷ್ಟು ದೊಡ್ಡದಾದ ಧೂಳಿನ ಕಾಯಗಳಾದವು. ಇದು ಅದೇ ಗತಿಯಲ್ಲಿ ಅನಿಶ್ಚಿತ ಕ್ರಮದಲ್ಲಿ ನಿರಂತರವಾಗಿ ನಡೆಯುತ್ತಿತ್ತು. ಬಹಳ ಡಿಕ್ಕಿಗಳನ್ನು ಕಂಡ ಆಕಾಶಕಾಯಗಳು ಕ್ರಮೇಣ ಎಷ್ಟು ದೊಡ್ಡವಾದವೆಂದರೆ ತಾವು ಚಲಿಸುತ್ತಿದ್ದ ಕಕ್ಷೆಯೊಳಗೆ ಕ್ರಮೇಣ ಅವೇ ಮೇಲುಗೈ ಸಾಧಿಸಿದವು.

ಇದೆಲ್ಲವೂ ಆಗಲು ಯುಗಗಳೇನೂ ಹಿಡಿಯಲಿಲ್ಲ. ವಿಜ್ಞಾನಿಗಳ ಪ್ರಕಾರ, ಸಣ್ಣ ಕಣಗಳ ಗುಂಪೊಂದು ನೂರಾರು ಮೈಲು ಅಗಲದ ಪುಟ್ಟದೊಂದು ಗ್ರಹವಾಗಿ ಬದಲಾಗಲು ಹಿಡಿದ ಅವಧಿ ಕೇವಲ ಹತ್ತಾರು ಸಾವಿರ ವರ್ಷಗಳು ಮಾತ್ರ. ನಮ್ಮ ಭೂಮಿ ಹೀಗೆ ಸುಮಾರು 20 ಕೋಟಿ ವರ್ಷಗಳಲ್ಲಿ ನಿರ್ಮಾಣವಾಯಿತು.

ಆಗಲೂ ಅದು ಬೆಂಕಿಯ ಲಾವಾರಸದಿಂದ ತುಂಬಿ ತುಳುಕುತ್ತಿತ್ತು ಮತ್ತು ಇನ್ನೂ ಸೌರಮಂಡಲದ ಅಂತರಿಕ್ಷದಲ್ಲಿ ತೇಲುತ್ತಿದ್ದ ಧೂಳು ಮತ್ತಿತರ ಆಕಾಶಕಾಯಗಳು ಅದಕ್ಕೆ ಬಂದು ಡಿಕ್ಕಿ ಹೊಡೆಯುತ್ತಲೇ ಇದ್ದವು. ಈ ಅವಧಿಯಲ್ಲಿಯೇ, ಅಂದರೆ ಸುಮಾರು 440 ಕೋಟಿ ವರ್ಷಗಳ ಹಿಂದೆ, ಈಗಿನ ಮಂಗಳ ಗ್ರಹದಷ್ಟು ದೊಡ್ಡದಾಗಿದ್ದ ಆಕಾಶಕಾಯವೊಂದು ಭೂಮಿಗೆ ಬಂದು ಡಿಕ್ಕಿ ಹೊಡೆಯಿತು. ಆ ಡಿಕ್ಕಿ ಎಷ್ಟು ಬಲವಾಗಿತ್ತೆಂದರೆ ಭೂಭಾಗದ ಮೇಲ್ಪದರ ಸಾಕಷ್ಟು ಛಿದ್ರವಾಗಿ ಅಂತರಿಕ್ಷಕ್ಕೆ ಚೆಲ್ಲಿತು.

ಅದಾದ ಕೆಲವೇ ವಾರಗಳ ಅವಧಿಯಲ್ಲಿ ಭೂಮಿಯಿಂದ ಚಿಮ್ಮಿ ಹೋದ ಭಾಗಗಳೆಲ್ಲ ಆಕಾಶದಲ್ಲಿ ಒಂದಾಗಿ ಕೂಡಿಕೊಂಡವು. ಮತ್ತು ಭೂಮಿಯ ಗುರುತ್ವಾಕರ್ಷಣಾ ಬಲದಿಂದಾಗಿ ಅದು ಭೂಮಿಯನ್ನು ಸುತ್ತುಹಾಕಲು ಆರಂಭಿಸಿತು.

ಒಂದೇ ವರ್ಷದ ಅವಧಿಯಲ್ಲಿ ಅದು ಗೋಳದ ರೂಪ ಪಡೆದುಕೊಂಡಿತು. ಆ ಗೋಳವೇ ಇವತ್ತಿಗೂ ಭೂಮಿಯನ್ನು ಸುತ್ತುತ್ತ ನಮ್ಮ ಜೊತೆಗಿರುವ ಚಂದ್ರ.

(ಮುಂದುವರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ:

ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೂಢನಂಬಿಕೆ

-ದಿನೇಶ್ ಕುಮಾರ್ ಎಸ್.ಸಿ.

ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೂಢನಂಬಿಕೆ ಎಂಬ ವಿಷಯದ ಕುರಿತು ವಿಚಾರಸಂಕಿರಣದಲ್ಲಿ ಭಾಗವಹಿಸುತ್ತಿದ್ದೇನೆ ಎಂದಾಗ ನನ್ನ ಕವಿಮಿತ್ರರೊಬ್ಬರು ಹೇಳಿದ್ದು, ವಿದ್ಯುನ್ಮಾನ ಮಾಧ್ಯಮ ಎಂಬುದೇ ಈ ಯುಗದ ಅತಿ ದೊಡ್ಡ ಮೂಢನಂಬಿಕೆ ಎಂದು. ಹಲವರಿಗೆ ಒಪ್ಪಿಕೊಳ್ಳುವುದಕ್ಕೆ ತುಸು ಕಷ್ಟವಾದರೂ ಮೀಡಿಯಾ ಅನ್ನೋದೇ ಒಂದು ದೊಡ್ಡ ಮೌಢ್ಯವಾಗಿರುವುದು ಸತ್ಯದ ಮಾತು. ಈ ಮಾತನ್ನು ಸಮರ್ಥಿಸುವುದಕ್ಕೆ ಸಾಕಷ್ಟು ಆಧಾರಗಳಿವೆ. ಆದರೆ ಮೀಡಿಯಾದಲ್ಲಿ ಮೌಢ್ಯ ಎಂಬ ವಿಷಯ ಇವತ್ತಿನ ಚರ್ಚೆಯ ವಿಷಯವಾಗಿರುವುದರಿಂದ ಮೀಡಿಯಾ ಎಂಬ ಮೌಢ್ಯ ಎಂಬ ವಿಶಾಲ ವ್ಯಾಪ್ತಿಯ ವಿಷಯವನ್ನು ಸದ್ಯಕ್ಕೆ ಕೈಬಿಡುತ್ತಿದ್ದೇನೆ.

ಎಲೆಕ್ಟ್ರಾನಿಕ್ ಮಾಧ್ಯಮವೆಂಬುದು ಆಧುನಿಕ ವಿಜ್ಞಾನ ತಂತ್ರಜ್ಞಾನದ ವಿಶಿಷ್ಠ ಕೊಡುಗೆ. ಆದರೆ ಅದು ಮೌಢ್ಯವನ್ನು ಬಿತ್ತರಿಸಲು ಬಳಕೆಯಾಗುತ್ತಿದೆ ಎಂಬುದೇ ಒಂದು ವ್ಯಂಗ್ಯ. ಅಗ್ಗದ ಜನಪ್ರಿಯತೆಗಾಗಿ ಅವುಗಳಿಗೆ ಅಂಧಶ್ರದ್ಧೆಗಳು ಬೇಕು, ಸೆಕ್ಸ್ ಮತ್ತು ಕ್ರೈಂಗಳು ಬೇಕು. ಮೂವರು ಸಚಿವರು ಬ್ಲೂ ಫಿಲ್ಮ್ ನೋಡಿದ್ದನ್ನು ಈ ಚಾನಲ್‌ಗಳು ಬಹಿರಂಗಪಡಿಸಿ ಅವರ ಸಚಿವ ಸ್ಥಾನ ಕಳೆದವು. ಆದರೆ ಅದೇ ಸಮಯದಲ್ಲಿ ಕರ್ನಾಟಕದ ಜನತೆಗೆ ಬ್ಲೂ ಫಿಲ್ಮ್ ತೋರಿಸಿದವು, ಮಸುಕು ಕೂಡ ಮಾಡದೆ. ಎಲೆಕ್ಟ್ರಾನಿಕ್ ಮಾಧ್ಯಮ ಉತ್ತರದಾಯಿತ್ವವನ್ನು ಕಳೆದುಕೊಂಡಿದೆ. ಉತ್ತರದಾಯಿತ್ವ ಇಲ್ಲದ ಮಾಧ್ಯಮ ಯಾವತ್ತಿಗೂ ವಿನಾಶಕಾರಿಯಾಗಿರುತ್ತದೆ ಮಾತ್ರವಲ್ಲ, ಸಮಾಜದ್ರೋಹದ ಕೆಲಸವನ್ನು ಎಗ್ಗಿಲ್ಲದೆ ಮಾಡುತ್ತಿರುತ್ತದೆ. ನಮ್ಮ ಚಾನಲ್‌ಗಳು ಈಗ ಆ ಕೆಲಸವನ್ನು ಮಾಡುತ್ತಿವೆ.

ಈ ತರಹದ ಗೋಷ್ಠಿಗಳಿಗೆ ಸಾಧಾರಣವಾಗಿ ಎಲೆಕ್ಟ್ರಾನಿಕ್ ಮೀಡಿಯಾದ ಪ್ರತಿನಿಧಿಗಳು ಬರುವುದು ಕಡಿಮೆ. ಬಂದರೂ ಇಲ್ಲಿನ ಚರ್ಚೆಯ ವಿಷಯಗಳು ಆ ಚಾನಲ್‌ಗಳಲ್ಲಿ ಪ್ರಸಾರವಾಗುವುದಿಲ್ಲ. ಹೀಗಾಗಿ ಇಲ್ಲಿ ಮಾತನಾಡುವ ವಿಷಯಗಳು ಯಾರನ್ನು ತಲುಪಬೇಕೋ ಅವರನ್ನು ತಲುಪುವುದೇ ಇಲ್ಲ. ಅದಕ್ಕೆ ಕಾರಣಗಳೂ ಇವೆ. ಎಲೆಕ್ಟ್ರಾನಿಕ್ ಮೀಡಿಯಾಗಳಿಗೆ ತಾವು ಮೌಢ್ಯವನ್ನು ಹರಡುತ್ತಿದ್ದೇವೆ ಎಂಬ ವಿಷಯ ಚೆನ್ನಾಗಿಯೇ ಗೊತ್ತು. ಪ್ರಜ್ಞಾಪೂರ್ವಕವಾಗಿಯೇ ಈ ಕೆಲಸವನ್ನು ಅವು ಮಾಡುತ್ತಿವೆ. ಹೀಗಾಗಿ ಯಾವ ಸಲಹೆ-ಸೂಚನೆ-ನಿರ್ದೇಶನಗಳೂ ಅವುಗಳಿಗೆ ಬೇಕಾಗಿಲ್ಲ. ನಿದ್ದೆ ಮಾಡುತ್ತಿರುವವರನ್ನು ಎಚ್ಚರಿಸಬಹುದು, ನಿದ್ದೆಯ ನಾಟಕವಾಡುತ್ತಿರುವವರನ್ನು ಅಲ್ಲ. ಎಲೆಕ್ಟ್ರಾನಿಕ್ ಮಾಧ್ಯಮಗಳು ತಾವೂ ಅಂಧಶ್ರದ್ಧೆಗೆ ಬಿದ್ದು ಜ್ಯೋತಿಷ್ಯದಂಥ ಕಾರ್ಯಕ್ರಮಗಳನ್ನು ವಿಜೃಂಭಿಸುವ ಕೆಲಸ ಮಾಡುತ್ತಿಲ್ಲ. ಚಾನಲ್‌ನಲ್ಲಿ ಮಾತನಾಡುವ ಜ್ಯೋತಿಷಿಗಳು ಹೇಳುವ ಮಾತುಗಳನ್ನು ಚಾನಲ್ ನವರೇ ನಂಬುವುದಿಲ್ಲ, ಅನುಸರಿಸುವುದಿಲ್ಲ. ಈ ಮೀಡಿಯಾ ಜನರಿಗೆ ತಮ್ಮದು ಮುಠ್ಠಾಳ, ಮನೆಹಾಳ ಕಾರ್ಯಕ್ರಮಗಳು ಎಂಬುದು ಚೆನ್ನಾಗಿಯೇ ಗೊತ್ತು.

ಎಲೆಕ್ಟ್ರಾನಿಕ್ ಮಾಧ್ಯಮಗಳು ಹಲವು ಬಗೆಯ ಮೌಢ್ಯಗಳನ್ನು ಪ್ರಸಾರ ಮಾಡುತ್ತಿವೆ. ಪ್ರಸಾರ ಮಾಡುತ್ತಿವೆ ಎಂಬ ಶಬ್ದಕ್ಕಿಂತ ಮಾರಾಟ ಮಾಡುತ್ತಿವೆ ಎಂಬ ಶಬ್ದವನ್ನು ಬಳಸಲು ಬಯಸುತ್ತೇನೆ. ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಪ್ರತಿ ಕಾರ್ಯಕ್ರಮವೂ ಮಾರಾಟದ ಸರಕು. ಜ್ಯೋತಿಷ್ಯ, ಪುನರ್ಜನ್ಮ, ಬಾನಾಮತಿ, ಸಂಖ್ಯಾಶಾಸ್ತ್ರ, ವಾಸ್ತು ಶಾಸ್ತ್ರ, ಮಾಟ-ಮಂತ್ರ ಇತ್ಯಾದಿಗಳೆಲ್ಲವೂ ಬಹುಬೇಗ ಸೇಲ್ ಆಗುವ ವಸ್ತುಗಳು. ಜನರಿಗೆ ಅಂತೀಂದ್ರಿಯವಾದದ್ದೆಲ್ಲ ಕುತೂಹಲ ಹುಟ್ಟಿಸುತ್ತವೆ. ಯಾವುದಕ್ಕೆ ವೈಜ್ಞಾನಿಕ ತರ್ಕ ವಿಶ್ಲೇಷಣೆಗಳು ಬಹುಬೇಗ ತಲೆಗೆ ಹೊಳೆಯುತ್ತವೋ ಅಂಥವು ಜನರಿಗೆ ಬೇಕಾಗಿಲ್ಲ. ಹೀಗಾಗಿ ತಮ್ಮ ಬುದ್ಧಿಗೆ ನಿಲುಕದ್ದನ್ನೆಲ್ಲ ಜನರು ಆಶ್ಚರ್ಯದಿಂದ ನೋಡುತ್ತಾರೆ. ಮತ್ತು ಅದಕ್ಕೆ ತಲೆಕೊಡುತ್ತಾರೆ. ಇದು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಸ್ಪಷ್ಟವಾಗಿ ಗೊತ್ತಿರುವ ವಿಷಯ. ಹೀಗಾಗಿ ಅವು ಒಂದಾದ ಮೇಲೊಂದರಂತೆ ಇಂಥ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತವೆ.

ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕೆಲಸ ಮಾಡುವ ನನ್ನ ಗೆಳೆಯನೊಬ್ಬ ಇದನ್ನು ಚೆನ್ನಾಗಿ ವಿಶ್ಲೇಷಣೆ ಮಾಡುತ್ತಾನೆ. ಅವನ ದೃಷ್ಟಿಯಲ್ಲಿ ಅವನೊಬ್ಬ ಪತ್ರಕರ್ತನಲ್ಲ. ಒಬ್ಬ ಬಿಜಿನೆಸ್ ಮ್ಯಾನ್, ಅವನ ಜತೆ ಕೆಲಸ ಮಾಡುವ ಸಹ ಪತ್ರಕರ್ತರು ಸೇಲ್ಸ್ ಮನ್‌ಗಳು. ಜನ ಏನನ್ನು ನೋಡುತ್ತಾರೆ ಎಂಬುದಷ್ಟೇ ಅವರಿಗೆ ಮುಖ್ಯ. ಜನರಿಗೆ ಏನನ್ನು ಕೊಡಬೇಕು ಎಂಬುದು ಮುಖ್ಯವಲ್ಲ. ಒಂದು ವೇಳೆ ಜನರಿಗೆ ನಿಜವಾಗಿಯೂ ಕೊಡಬೇಕಾಗಿದ್ದನ್ನು ಕೊಟ್ಟರೆ ಅವರು ಸ್ಪರ್ಧೆಯಲ್ಲಿ ಉಳಿಯುವುದಿಲ್ಲ. ಹೀಗಾಗಿ ನಾವು ಜನ ನೋಡುವುದನ್ನಷ್ಟೆ ಕೊಡುತ್ತೇವೆ ಎನ್ನುತ್ತಾನೆ ಆತ. ಹೀಗಾಗಿ ಜ್ಯೋತಿಷ್ಯ, ಮಾಟ-ಮಂತ್ರ, ಸೆಕ್ಸ್, ಕ್ರಿಕೆಟ್ ಇಂಥವುಗಳೇ ಚಾನಲ್‌ಗಳಿಗೆ ಆದ್ಯತೆಯ ವಿಷಯ. ಅವುಗಳನ್ನು ಬಿಟ್ಟು ಇವು ಬದುಕಲಾರಂತೆ ಆಗಿಹೋಗಿವೆ.

ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ನೇಮಕಗೊಂಡ ತರುವಾಯ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಹೇಳಿದ್ದು ಇದನ್ನೇ. ಅವರಿಗೆ ಎಲೆಕ್ಟ್ರಾನಿಕ್ ಮಾಧ್ಯಮಗಳ ಕುರಿತು ತೀವ್ರ ಅಸಮಾಧಾನವಿತ್ತು. ಚಾನಲ್‌ಗಳು ಅಂಧಶ್ರದ್ಧೆಗಳನ್ನು ಹರಡುತ್ತಿವೆ. ಇವುಗಳಿಗೆ ಲಗಾಮು ಹಾಕಲೇಬೇಕು ಎಂಬ ಮಾತುಗಳನ್ನು ಅವರು ಆಡಿದರು. ಖಟ್ಜು ಕೆಲವು ದೇಶಮಟ್ಟದ ಹಿಂದಿ ಚಾನಲ್‌ಗಳನ್ನು ನೋಡಿ ಈ ಅಭಿಪ್ರಾಯ ಹೇಳಿರಬಹುದು. ಒಂದು ವೇಳೆ ಅವರು ನಮ್ಮ ಕನ್ನಡ ಚಾನಲ್‌ಗಳನ್ನು ನೋಡಿದ್ದರೆ, ಅದರಲ್ಲೂ ನರೇಂದ್ರ ಬಾಬು ಶರ್ಮನಂಥವನ ಮಾತುಗಳನ್ನು ಒಂದು ಹತ್ತು ನಿಮಿಷ ಕೇಳಿದ್ದರೆ ಅವರ ಎದೆ ಒಡೆದುಹೋಗುತ್ತಿತ್ತೇನೋ?

ಆರ್ಥಿಕ ಉದಾರೀಕರಣ, ಜಾಗತೀಕರಣದ ಪರಿಣಾಮವಾಗಿ ದೇಶದಲ್ಲಿಂದು ಎಲೆಕ್ಟ್ರಾನಿಕ್ ಮಾಧ್ಯಮ ಬೆಳೆದು ನಿಂತಿದೆ. ಈಗ ಅದು ಲಂಗು ಲಗಾಮಿಲ್ಲದ ಕುದುರೆ. ನಮ್ಮ ಪತ್ರಿಕಾ ಮಾಧ್ಯಮಕ್ಕೂ ಎಲೆಕ್ಟ್ರಾನಿಕ್ ಮಾಧ್ಯಮಕ್ಕೂ ಅವುಗಳ ರಚನೆ, ದೃಷ್ಟಿಯಲ್ಲೇ ಮೂಲಭೂತವಾದ ವ್ಯತ್ಯಾಸವಿದೆ. ಪತ್ರಿಕಾ ಮಾಧ್ಯಮ ಭಾರತದ ಮಟ್ಟಿಗೆ ಬೆಳೆಯಲು ಶುರುವಾಗಿದ್ದು ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ. ಆ ಕಾಲದಲ್ಲಿ ಪತ್ರಿಕಾ ಮಾಧ್ಯಮಗಳ ಧೋರಣೆ ಹೇಗಿತ್ತೆಂದರೆ ಅದು ಒಂದು ಆದರ್ಶದ ಕ್ಷೇತ್ರವಾಗಿತ್ತು. ಅದೂ ಕೂಡ ಚಳವಳಿಯ ಭಾಗವಾಗಿಯೇ ಕೆಲಸ ಮಾಡುತ್ತಿತ್ತು.

ಇವತ್ತಿಗೂ ನೀವು ಪತ್ರಿಕೆಗಳನ್ನು, ಅದರಲ್ಲೂ ವಿಶೇಷವಾಗಿ ದಿನಪತ್ರಿಕೆಗಳನ್ನು ನೋಡಿ. ಅವುಗಳು ಸಾಮಾಜಿಕ ಕಳಕಳಿ ಅವುಗಳಿಗೆ ಸ್ಥಾಯಿಯಾದ ಉದ್ದೇಶಗಳಲ್ಲಿ ಒಂದು. ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳು ಕೆಲವು ರಾಜಕೀಯ ಪಕ್ಷಗಳ, ವ್ಯಕ್ತಿಗಳ, ಸಂಘಟನೆಗಳ ತುತ್ತೂರಿಯಾಗಿದ್ದರೂ ಅಲ್ಲಿ ಜನಪರವಾದ ಸುದ್ದಿಗಳಿಗೆ ಮಹತ್ವ ಇದ್ದೇ ಇರುತ್ತದೆ. ಯಾವುದೋ ಹಳ್ಳಿಯ ಏನೋ ಸಮಸ್ಯೆಯನ್ನು ಒಬ್ಬ ಓದುಗ ವಾಚಕರ ವಾಣಿಯಲ್ಲಿ ಬರೆಯಬಲ್ಲ, ಆ ಸುದ್ದಿ ಇತರ ಓದುಗರಿಗೆ ಅಪ್ರಸ್ತುತವಾಗಿದ್ದರೂ ಕೂಡ.

ಅದಕ್ಕಿಂತ ಹೆಚ್ಚಾಗಿ ವೃತ್ತ ಪತ್ರಿಕೆಗಳ ಪತ್ರಕರ್ತರನ್ನು ಆ ಪತ್ರಿಕೆಗಳ ಮಾಲೀಕ ನನಗೆ ಸೇಲ್ ಆಗುವ ಸುದ್ದಿಯನ್ನೇ ಬರೆಯಬೇಕು ಎಂದು ಎಂದೂ ಸಹ ಕೈಹಿಡಿದು ಬರೆಸಲು ಹೋಗುವುದಿಲ್ಲ. ಅಷ್ಟು ಸ್ವಾತಂತ್ರ್ಯವನ್ನು ಈ ಪತ್ರಕರ್ತರು ಅನುಭವಿಸುತ್ತಿದ್ದಾರೆ. ಆದರೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಇದಕ್ಕೆ ಅವಕಾಶವಿಲ್ಲ. ವರದಿಗಾರ ಸೇಲ್ ಆಗುವ ಸುದ್ದಿಯನ್ನೇ ಕೊಡಬೇಕು. ಕೊಡದೇ ಇದ್ದರೆ ಸಂಪಾದಕ ಸ್ಥಾನಗಳಲ್ಲಿರುವವರು ತಲೆ ತಿನ್ನಲು ಶುರು ಮಾಡಿರುತ್ತಾನೆ. ಕೆಲಸ ಕಳೆದುಕೊಳ್ಳುವ ಭೀತಿಗೆ ಸಿಲುಕುವ ವರದಿಗಾರ ತನ್ನ ಇಚ್ಛೆಗೆ ವಿರುದ್ಧವಾಗಿ ಜನಪ್ರಿಯ ಸುದ್ದಿಗಳ ಬೆನ್ನುಹತ್ತುತ್ತಾನೆ.

ಹೀಗಾಗಿ ಯಾವುದೋ ಒಂದು ಕಾಲೇಜಿನ ಮುಂಭಾಗ ಯಾರೋ ಒಂದು ನಿಂಬೆಹಣ್ಣು, ಕುಂಕುಮದ ಪೊಟ್ಟಣ, ಸಣ್ಣ ಬೊಂಬೆ ಇಟ್ಟು ಹೋಗಿದ್ದರೆ ಚಾನಲ್ ವರದಿಗಾರ ಎಲ್ಲವನ್ನೂ ಬಿಟ್ಟು ಓಬಿವ್ಯಾನ್ ತಂದು ಅದರ ಕವರೇಜ್ ಗೆ ನಿಂತುಬಿಡುತ್ತಾನೆ. ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ಒಲಿಸಿಕೊಳ್ಳಲೆಂದೇ ಮಾಟ ಮಾಡಿಸಿದ್ದಾನೆ ಎಂದು ಓತಪ್ರೋತ ಕಥೆ ಕಟ್ಟುತ್ತಾನೆ. ಚಾನಲ್ ಗಳಲ್ಲಿ ಗಂಟೆಗಟ್ಟಲೆ ಪ್ಯಾನಲ್ ಚರ್ಚೆ ಶುರುವಾಗಿಬಿಡುತ್ತದೆ. ಅಲ್ಲಿ ಕೆಲವು ಚಿತ್ರವಿಚಿತ್ರ ವೇಷದ ಜ್ಯೋತಿಷಿಗಳು, ಮಾಟಗಾರರು, ಕಾಳಿ ಉಪಾಸಕರೆಂದು ಹೇಳಿಕೊಳ್ಳುವ ಆಂಟಿ ಮಾಟಗಾರರು (ವೈರಸ್ ಗಳಿಗೆ ಆಂಟಿವೈರಸ್ ಗಳಿದ್ದಂತೆ ಈ ಆಂಟಿ ಮಾಟಗಾರರು, ಇವರೂ ಕೂಡ ಒಂದು ಥರದ ವೈರಸ್ಸುಗಳೇ) ಬಂದು ಕುಳಿತುಬಿಡುತ್ತಾರೆ. ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಟಿವಿಯಲ್ಲಿ ಕಾಣಿಸಿಕೊಳ್ಳುತ್ತೇವೆಂಬ ಕಾರಣಕ್ಕೆ ಕ್ಯಾಮೆರಾ ಮುಂದೆ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಚಾನಲ್‌ಗಳ ಹೊಟ್ಟೆ ತುಂಬುತ್ತದೆ.

ನಿತ್ಯ ಬೆಳಿಗ್ಗೆ ನೀವು ಟಿವಿ ಆನ್ ಮಾಡಿ ನೋಡಿ. ಎಲ್ಲ ಚಾನಲ್ ಗಳಲ್ಲೂ ವಿಚಿತ್ರ ಪೋಷಾಕುಗಳನ್ನು ಧರಿಸಿ, ವಿಚಿತ್ರ ರೀತಿಯಲ್ಲಿ ಸಜ್ಜುಗೊಳಿಸಿದ ಸ್ಟುಡಿಯೋದಲ್ಲಿ ಜ್ಯೋತಿಷಿಗಳು ಹಾಜರಾಗಿರುತ್ತಾರೆ. ಕೆಲವು ಜ್ಯೋತಿಷಿಗಳೋ ತಮ್ಮನ್ನು ತಾವು ಗರ್ಭಗುಡಿಯಲ್ಲಿ ಕುಳಿತುಕೊಂಡ ಹಾಗೆ ಸ್ಟುಡಿಯೋ ಅಲಂಕಾರ ಮಾಡಿಸಿಕೊಂಡಿರುತ್ತಾರೆ. ತಮ್ಮ ತಲೆಯ ಹಿಂದೆ ಡ್ಯೂಪ್ಲಿಕೇಟ್ ಪ್ರಭಾವಳಿಗಳ ಸಮೇತ ಆಸೀನರಾಗಿ ಜ್ಯೋತಿಷ್ಯ ಶುರುಮಾಡುತ್ತಾರೆ. sಸಾಧಾರಣವಾಗಿ ಕನ್ನಡ ಚಾನಲ್‌ಗಳಲ್ಲಿ ಈ ಜ್ಯೋತಿಷಿಗಳು ಲ್ಯಾಪ್ ಟಾಪ್ ನಲ್ಲಿ ಜ್ಯೋತಿಷ್ಯದ ಒಂದು ರೆಡಿಮೇಡ್ ಸಾಫ್ಟ್ ವೇರ್ ಹಾಕಿಕೊಂಡು ಕೂತಿರುತ್ತಾರೆ. ಒಬ್ಬ ನಿರೂಪಕಿ ಜತೆಗೆ ಕುಳಿತಿರುತ್ತಾಳೆ. ಆಕೆಯೇ ದೂರವಾಣಿ ಕರೆಗಳನ್ನು ಸ್ವೀಕರಿಸಿ ವೀಕ್ಷಕನ/ವೀಕ್ಷಕಳ ಜನ್ಮದಿನಾಂಕ ಪಡೆಯುತ್ತಾಳೆ, ಅವಳು ಅವನ ಜತೆ ಮಾತನಾಡುತ್ತಿರುವಾಗ ಜ್ಯೋತಿಷಿ ಲ್ಯಾಪ್ ಟಾಪ್‌ನಲ್ಲಿ ಜನ್ಮದಿನಾಂಕ ಎಂಟ್ರಿ ಮಾಡಿ, ಗುರು, ಶನಿ, ರಾಹು ಎಲ್ಲರೂ ಯಾವ್ಯಾವ ಮನೆಯಲ್ಲಿದ್ದಾರೆ ಎಂಬುದನ್ನು ಗಮನಿಸಿ ತನ್ನ ಜಡ್ಜ್‌ಮೆಂಟ್ ಕೊಡೋದಕ್ಕೆ ಶುರು ಮಾಡುತ್ತಾನೆ.

ಸಾಧಾರಣವಾಗಿ ಈ ಜ್ಯೋತಿಷಿಗಳು ದುರಹಂಕಾರಿಗಳು. ಅವರು ಮಾತನಾಡುವ ಶೈಲಿಯನ್ನು ಸರಿಯಾಗಿ ಗಮನಿಸಿ. ತಾವು ಏನನ್ನು ಹೇಳುತ್ತಿದ್ದೇವೋ ಅದೇ ಸತ್ಯ ಎಂಬ ಉಡಾಫೆ ಅವರುಗಳದ್ದು. ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಅವರ ಬಳಿ ಪರಿಹಾರವಿದೆ. ಚಿತ್ರ ವಿಚಿತ್ರವಾದ ಪರಿಹಾರಗಳನ್ನು ಅವರು ನೀಡುತ್ತಾರೆ. ತುಪ್ಪದ ದೀಪ ಹಚ್ಚಿ ಎನ್ನುವುದರಿಂದ ಹಿಡಿದು, ಆ ದೇವಸ್ಥಾನದಲ್ಲಿ ಅಭಿಷೇಕ ಮಾಡಿ, ಈ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿ, ಮನೆ ಸುತ್ತ ಎಳ್ಳು ಚೆಲ್ಲಿ, ಬಿಳಿ ಬಟ್ಟೆ ಹಾಕ್ಕೊಳ್ಳಿ, ಶನಿವಾರ ಮನೆಯಿಂದ ಹೊರಗೆ ಹೋಗಬೇಡಿ, ಬೀದಿ ನಾಯಿಗೆ ಊಟ ಹಾಕಿ ಎನ್ನುವವರೆಗೆ ಈ ಪರಿಹಾರಗಳಿರುತ್ತವೆ. ಒಬ್ಬ ಜ್ಯೋತಿಷಿ ಕಳೆದ ವರ್ಷ ಫೆಬ್ರವರಿಯಲ್ಲಿ ಜಗತ್ತು ಪ್ರಳಯವಾದಂತೆ ತಡೆಯಲು ದೇವಸ್ಥಾನಗಳಲ್ಲಿ ಐದು ವಿಧವಿಧದ ಎಣ್ಣೆಗಳನ್ನು ಬಳಸಿ ದೀಪ ಹಚ್ಚಿ ಎಂದು ಕರೆ ನೀಡಿದ್ದ. ರಾಜ್ಯದ ಎಲ್ಲ ದೇವಸ್ಥಾನಗಳಲ್ಲೂ ಅಂದು ನೂಕುನುಗ್ಗಲು.

ಜ್ಯೋತಿಷ್ಯ ಸಾಕಾಗದೇ ಹೋದಾಗ ಚಾನಲ್‌ಗಳು ಪುನರ್ಜನ್ಮ ಕುರಿತು ಕಾರ್ಯಕ್ರಮ ಮಾಡುತ್ತವೆ. ವ್ಯಕ್ತಿಯೊಬ್ಬನಿಗೆ ಪ್ರಜ್ಞೆ ತಪ್ಪಿಸಿ, ಅರೆ ಪ್ರಜ್ಞಾವಸ್ಥೆಯಲ್ಲಿ ಅವನ ಪುನರ್ಜನ್ಮದ ಕಥೆ ಕೇಳುವುದು ಈ ಕಾರ್ಯಕ್ರಮದ ತಂತ್ರ. ಇದೂ ಸಹ ಸ್ಕ್ರಿಪ್ಟೆಡ್ ಕಾರ್ಯಕ್ರಮ. ಸತ್ತ ಕೆಲವೇ ದಿವಸಕ್ಕೆ ಚಾನಲ್ ಒಂದರಲ್ಲಿ ಸಾಯಿಬಾಬಾ ಬಂದು ಮಾತನಾಡಿದ್ದೂ ಸಹ ಹೀಗೆಯೇ.

ಇನ್ನೊಂದು ಗಮನಿಸಬೇಕಾದ ಅಂಶವೊಂದಿದೆ. ಜ್ಯೋತಿಷ್ಯ, ಮಾಟ ಮಂತ್ರ ಇನ್ನಿತ್ಯಾದಿ ಅಂಧಶ್ರದ್ಧೆಗಳ ವಿರುದ್ಧ ಸುದ್ದಿ ಮಾಡಿದರೂ, ಕಾರ್ಯಕ್ರಮ ಮಾಡಿದರೂ ಜನರು ನೋಡುತ್ತಾರೆ. ಹಿಂದೆ ಕ್ರೈಂ ಡೈರಿ, ಕ್ರೈಂಡ ಸ್ಟೋರಿ ಥರಹದ ಕಾರ್ಯಕ್ರಮಗಳಲ್ಲಿ ಬ್ಲೇಡ್ ಬಾಬಾಗಳು, ಡೋಂಗಿ ಸ್ವಾಮಿಗಳು, ಸುಳ್ಳು ದೇವರನ್ನು ಆವಾಹನೆ ಮಾಡಿಕೊಳ್ಳುವವರ ವಿರುದ್ಧ ಕಾರ್ಯಕ್ರಮಗಳು ಬರುತ್ತಿದ್ದವು. ಇತ್ತೀಚಿಗೆ ಹುಲಿಕಲ್ ನಟರಾಜ್ ಅವರ ಪವಾಡ ಬಯಲು ಕಾರ್ಯಕ್ರಮಗಳೂ ಸಹ ಜನಪ್ರಿಯವಾಗಿದ್ದವು. ಆದರೆ ಚಾನಲ್ ಗಳಿಗೆ ಹೊಟ್ಟೆ ತುಂಬಿಸುವಷ್ಟು ಇವು ಶಕ್ತವಾಗಿಲ್ಲ. ಹೀಗಾಗಿ ಅವು ಹೀಗೂ ಉಂಟೆ ಥರದ ಕಾರ್ಯಕ್ರಮಗಳನ್ನು ವರ್ಷಗಟ್ಟಲೆ ಪ್ರಸಾರ ಮಾಡುತ್ತವೆ.

ಜ್ಯೋತಿಷ್ಯ ಈಗ ಕವಲೊಡೆದು ಹೆಮ್ಮರವಾಗಿ ಬೆಳೆದಿದೆ. ಜ್ಯೋತಿಷಿಗಳಿಗೆ ವಾಸ್ತು ತಜ್ಞರು, ಸಂಖ್ಯಾ ತಜ್ಞರು, ಮಂತ್ರವಾದಿಗಳು ಪೈಪೋಟಿ ನೀಡುತ್ತಿದ್ದಾರೆ. ಹಿಂದೆ ಜ್ಯೋತಿಷಿಗಳನ್ನು ಸ್ಟುಡಿಯೋ ಚರ್ಚೆಗೆ ಕರೆದರೆ ಜತೆಯಲ್ಲಿ ಪ್ರತಿವಾದ ಮಾಡಲು ಒಬ್ಬ ವಿಜ್ಞಾನಿಯನ್ನೋ, ವಿಜ್ಞಾನ ಬರಹಗರಾರನ್ನೋ ಕಾಟಚಾರಕ್ಕಾದರೂ ಕರೆಯುತ್ತಿದ್ದರು. ಈಗ ಇವರುಗಳದ್ದೇ ದರ್ಬಾರು. ಕೆಲವು ಜ್ಯೋತಿಷಿಗಳನ್ನು ಕಿರುತೆರೆಯ ಮೇಲೆ ನೊಡುವುದಕ್ಕೆ ಭಯವಾಗುತ್ತದೆ. ಹಾಗಿರುತ್ತದೆ ಅವರ ವೇಷಭೂಷಣ. ಈ ಜ್ಯೋತಿಷಿಗಳೇ ಈಗ ಚಾನಲ್‌ಗಳಿಗೆ ಹಣ ತರುವ ಏಜೆಂಟರಾಗಿದ್ದಾರೆ.

ಅಂಧಶ್ರದ್ಧೆಗಳನ್ನು ಹರಡುವ ಚಾನಲ್‌ಗಳ ಮುಖ್ಯಸ್ಥರನ್ನೆಲ್ಲ ಒಮ್ಮೆ ಕರೆಸಿ ಅವರೊಂದಿಗೆ ಮಾತನಾಡಿ ನೋಡಿ. ಎಲ್ಲರೂ ಒಂದೇ ಉತ್ತರ ನೀಡುತ್ತಾರೆ. ಟಿಆರ್‌ಪಿಗಾಗಿ ನಾವು ಇದನ್ನೆಲ್ಲ ಮಾಡುತ್ತೇವೆ ಎಂಬುದು ಅವರು ಸೋಗು. ತಾವು ಮಾಡುತ್ತಿರುವುದು ಸರಿಯಲ್ಲ ಎಂಬುದನ್ನು ಅವರು ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ. ಟಿಆರ್‌ಪಿ ಕಪಿಮುಷ್ಠಿಯಲ್ಲಿ ನಾವೆಲ್ಲ ಸಿಕ್ಕಿಬಿದ್ದಿದ್ದೇವೆ ಎಂದು ಅವರು ತಮ್ಮ ಅಸಹಾಯಕತೆ ತೋರ್ಪಡಿಸಿಕೊಳ್ಳುತ್ತಾರೆ.

ಅಷ್ಟಕ್ಕೂ ಟಿಆರ್ ಪಿ ಎಂಬುದೇ ಮಹಾಮೋಸದ ಪ್ರಕ್ರಿಯೆ. ಅದು ನಿಜವಾದ ನೋಡುಗರ ಸಂಖ್ಯೆಯನ್ನು ಪ್ರತಿನಿಧಿಸುವುದಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಷಯವೇ. ಟಿಆರ್‌ಪಿಯನ್ನು ನಿರ್ಧರಿಸುವ ಸಂಸ್ಥೆ ರಾಜ್ಯದ ಪ್ರಮುಖ ನಗರಗಳಲ್ಲಿ ಆಯ್ದ ಕೆಲವು ಟಿವಿ ವೀಕ್ಷಕರ ಮನೆಗಳಲ್ಲಿ ತಮ್ಮ ಉಪಕರಣಗಳನ್ನು ಜೋಡಿಸಿರುತ್ತಾರೆ. ಅವರು ಯಾವ ಚಾನಲ್ ನ ಯಾವ ಕಾರ್ಯಕ್ರಮ ನೋಡುತ್ತಾರೆ ಎಂಬುದರ ಆಧಾರದ ಮೇಲೆ ಟಿಆರ್‌ಪಿ ಮತ್ತು ಜಿಆರ್‌ಪಿಗಳು ನಿರ್ಧಾರವಾಗುತ್ತವೆ. ಟಿಆರ್ ಪಿಯನ್ನು ಆಧರಿಸಿ ಜಾಹೀರಾತು ಸಂಸ್ಥೆಗಳು ಜಾಹೀರಾತು ನೀಡುತ್ತವೆ. ಜಾಹೀರಾತು ಇಲ್ಲದೇ ಇದ್ದರೆ ಚಾನಲ್‌ಗಳು ಬದುಕುವುದಿಲ್ಲ. ಹೀಗಾಗಿ ಅವುಗಳಿಗೆ ಟಿಆರ್‌ಪಿ ಬೇಕೇಬೇಕು.

ಟಿಆರ್ ಪಿ ಮೆಷಿನ್ನುಗಳು ಪಟ್ಟಣಗಳಲ್ಲಿ ಇರುವುದಿಲ್ಲ, ಹಳ್ಳಿಗಳಲ್ಲಿ ಇರುವುದಿಲ್ಲ. ಹೀಗಾಗಿ ಗ್ರಾಮಾಂತರ ಪ್ರದೇಶದ ಜನರ ಇಷ್ಟಾನಿಷ್ಟಗಳು ಮೆಷಿನ್ನುಗಳಲ್ಲಿ ಲೆಕ್ಕ ಆಗೋದೇ ಇಲ್ಲ. ಹಾಗೆ ನೋಡಿದರೆ ಆಧುನೀಕರಣದ ಭರಾಟೆಯಲ್ಲಿ ಗ್ರಾಮೀಣ ಜನರನ್ನು ಲೆಕ್ಕಕ್ಕೆ ತೆಗೆದುಕೊಳ್ಳುವವರಾದರೂ ಯಾರು? ಟಿಆರ್‌ಪಿ ಮೆಷಿನ್ನುಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಯಾಕೆ ಇಡುವುದಿಲ್ಲವೆಂಬ ಪ್ರಶ್ನೆಗೆ ಉತ್ತರವೂ ಆಘಾತಕಾರಿಯಾಗಿಯೇ ಇದೆ. ಗ್ರಾಮೀಣ ಜನರು ಜಾಹೀರಾತುದಾರರ ಗ್ರಾಹಕರಲ್ಲವಾದ್ದರಿಂದ ಹಳ್ಳಿಗಳ ಜನರ ಅಭಿರುಚಿ, ಇಷ್ಟಗಳನ್ನು ಅವರು ಲೆಕ್ಕ ಹಾಕುವುದಿಲ್ಲವಂತೆ.

ಇಂಥ ಸನ್ನಿವೇಶದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಮೌಢ್ಯವನ್ನು ಬಿತ್ತುವ ಕೆಲಸವನ್ನು ನಿಲ್ಲಿಸುವುದಾದರೂ ಹೇಗೆ? ಇದು ಯಾರ ಹೊಣೆಗಾರಿಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಬಹುಶಃ ಈ ಸಮಸ್ಯೆಗೆ ಇದುವರೆಗೆ ಯಾರೂ ಸಹ ಮುಖಾಮುಖಿಯಾಗಿ ನಿಂತು ಪರಿಹಾರಕ್ಕೆ ಯತ್ನಿಸದೇ ಇರುವುದೇ ದೊಡ್ಡ ಸಮಸ್ಯೆಯಾಗಿದೆ.

ಸಾಮಾಜಿಕ ಸಂಘಟನೆಗಳು ಇಂಥ ಅಂಧಶ್ರದ್ಧೆಗಳ ವಿರುದ್ಧ ಮಾತನಾಡುತ್ತವೆ, ಆದರೆ ಚಾನಲ್ ಗಳ ಮುಂದೆ ನಿಂತು ಇದನ್ನು ಹೇಳಲು ಯತ್ನಿಸಿದ ಉದಾಹರಣೆಗಳು ಕಡಿಮೆ. ಸುದ್ದಿಮಾಧ್ಯಮಗಳನ್ನು ಎದುರುಹಾಕಿಕೊಳ್ಳಲು ಸಂಘಟನೆಗಳು ಹಿಂದೆಮುಂದೆ ನೋಡುತ್ತವೆ. ಎಲ್ಲೋ ಅಲ್ಲೊಂದು ಇಲ್ಲೊಂದು ಧ್ವನಿಗಳು ಮೊಳಗಿದರೂ ಅವು ಹಾಗೆಯೇ ತಣ್ಣಗಾಗುತ್ತವೆ.

ಇಂಥ ಸಂದರ್ಭದಲ್ಲಿ ಕ್ರಿಯಾಶೀಲ ಪಾತ್ರ ವಹಿಸಬಹುದಾಗಿರುವುದು ಮೀಡಿಯಾದ ಬಹುಮುಖ್ಯ ಭಾಗವಾಗಿರುವ ಪತ್ರಿಕಾರಂಗ. ಎಲೆಕ್ಟ್ರಾನಿಕ್ ಮಾಧ್ಯಮಗಳ ಇಂಥ ಹೊಣೆಗೇಡಿತನದ ವಿರುದ್ಧ ಮಾತನಾಡಬಹುದಾಗಿರುವುದು ಪತ್ರಿಕೆಗಳು. ಆದರೆ ನೋವಿನ ಸಂಗತಿಯೆಂದರೆ ಈ ಪತ್ರಿಕೆಗಳು ಕೂಡ ಎಲೆಕ್ಟ್ರಾನಿಕ್ ಮಾಧ್ಯಮಗಳ ಪ್ರಭಾವಳಿಗೆ ಒಳಗಾಗಿ ಜ್ಯೋತಿಷ್ಯ ಸಂಬಂಧಿ ಲೇಖನಗಳನ್ನು ದಿನೇದಿನೇ ಹೆಚ್ಚು ಮಾಡುತ್ತಲೇ ಇವೆ. ಕನ್ನಡದ ಬಹುತೇಕ ಎಲ್ಲ ದಿನಪತ್ರಿಕೆಗಳು ಜ್ಯೋತಿಷ್ಯಕ್ಕಾಗಿಯೇ ವಾರಕ್ಕೊಂದು ವಿಶೇಷ ಪುರವಣಿಯನ್ನು ನೀಡುತ್ತಿವೆ. ಯಾವ ನೈತಿಕ ಧೈರ್ಯದಿಂದ ಇವುಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ವಿರುದ್ಧ ಮಾತನಾಡಬಲ್ಲವು? ಒಂದು ಮಾಧ್ಯಮದ ತಪ್ಪುಗಳನ್ನು ಇನ್ನೊಂದು ಮಾಧ್ಯಮದವರು ಬರೆಯಬಾರದು ಎಂಬ ಅಲಿಖಿತ ನಿಯಮವೊಂದು ಕನ್ನಡ ಮಾಧ್ಯಮರಂಗದಲ್ಲಿ ಜಾರಿಯಲ್ಲಿದೆ. ಇದು ಇನ್ನೊಂದು ಬಗೆಯ ಮೌಢ್ಯ. ಇವರು ಪರಸ್ಪರ ಕೆಸರು ಎರಚಿಕೊಂಡು ಹೊಡೆದಾಡಲಿ ಎಂದು ಯಾರೂ ಬಯಸುತ್ತಿಲ್ಲ. ಆದರೆ ಒಂದು ಮಾಧ್ಯಮ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವಾಗ ಇನ್ನೊಂದು ಮಾಧ್ಯಮ ಸುಮ್ಮನೇ ಕುಳಿತುಕೊಳ್ಳುವುದು ಆತ್ಮವಂಚನೆಯಲ್ಲವೇ?

ಈ ಆತ್ಮವಂಚನೆಯ ವಿರುದ್ಧ ಕರ್ನಾಟಕದ ಜನರು ಜಾಗೃತರಾಗಬೇಕಿದೆ. ಅದಕ್ಕೂ ಮುನ್ನ ವೈಜ್ಞಾನಿಕ ಮನೋಭಾವವಿರುವ ಎಲ್ಲರೂ ಸಂಘಟಿತರಾಗಬೇಕಿದೆ. ಕರ್ನಾಟಕ ವಿಜ್ಞಾನ್ ಪರಿಷತ್‌ನಂಥ ಸಂಘಟನೆಗಳು ಈ ಚಾನಲ್‌ಗಳ ಮುಖ್ಯಸ್ಥರೊಂದಿಗೆ ಮಾತನಾಡಬೇಕಿದೆ, ಒತ್ತಡ ಹೇರಬೇಕಿದೆ. ಚಾನಲ್‌ಗಳು ಸರಿಪಡಿಸಲಾಗದ ತಪ್ಪು ಮಾಡಿದಾಗ ಅವುಗಳ ವಿರುದ್ಧ ಪ್ರತಿಭಟಿಸಬೇಕಿದೆ. ಮೀಡಿಯಾಗಳು ಹರಡುವ ಅಂಧಶ್ರದ್ಧೆಯ ವಿರುದ್ಧ ದೂರು ನೀಡುವಂಥ ಧೈರ್ಯ ಮತ್ತು ಬದ್ಧತೆಯನ್ನು ನಾವು ನೀವೆಲ್ಲರೂ ಸೇರಿ ಪ್ರದರ್ಶಿಸಬೇಕಿದೆ.

(ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಪರಿಷತ್ತು, ಜನಪ್ರಿಯ ವಿಜ್ಞಾನ ಸಾಹಿತಿಗಳ ವೇದಿಕೆ ಬೆಂಗಳೂರಿನ ಕಿಮ್ಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ೫ನೇ ರಾಜ್ಯಮಟ್ಟದ ವಿಜ್ಞಾನ ಸಾಹಿತಿಗಳ ಸಮಾವೇಶದ ಎರಡನೇ ದಿನ (ಫೆಬ್ರವರಿ ೧೨) ನಡೆದ ವಿದ್ಯುನ್ಮಾನ ಮಾಧ್ಯಮದಲ್ಲಿ ಮೂಢನಂಬಿಕೆ ವಿಷಯ ಕುರಿತ ಗೋಷ್ಠಿಯಲ್ಲಿ ಮಂಡಿಸಿದ ಭಾಷಣ.

ಉಪಸ್ಥಿತರು: ಅಧ್ಯಕ್ಷತೆ: ಜಿ. ರಾಮಕೃಷ್ಣ, ಸಂಪಾದಕರು, ಹೊಸತು ಪತ್ರಿಕೆ

ಸಹ ವಿಷಯ ಮಂಡಕರು: ಡಾ. ನಾ.ಸೋಮೇಶ್ವರ ಹಾಗು ಬಿ.ಎಸ್.ಸೊಪ್ಪಿನ