Tag Archives: ಶಿವಮೊಗ್ಗ

Deccan Herald - Mining Payments

ವಿವೇಚನಾ ಖೋಟಾದ ಲಾಭವೇಕೆ?

– ಭೂಮಿ ಬಾನು

ಬರವಣಿಗೆ ಬಲ್ಲವನಿಗೆ ಅಹಂ ನೆತ್ತಿಗೇರುವುದು ಸಹಜ. ಪತ್ರಕರ್ತರ ಬಳಗದಲ್ಲಂತೂ ಅಹಂ ಸರ್ವೇ ಸಾಮಾನ್ಯ. ಇತ್ತೀಚೆಗಂತೂ ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳುವ ಅವಕಾಶ ಇದೆ ಎನ್ನುವ ಕಾರಣಕ್ಕೆ ತೀರಾ ಅಸಹಜ ಎನ್ನವಷ್ಟು ಅಹಂ ಅನೇಕ ಟಿವಿ ಪತ್ರಕರ್ತರ ನೆತ್ತಿಯೇರಿ ಕೂತಿದೆ. ಪರಿಣಾಮವಾಗಿ, ಸುತ್ತಲ ಸಮಾಜದಿಂದ ಅಂತಹವರು ನಿರೀಕ್ಷಿಸುವುದೂ ಹೆಚ್ಚಾಗಿದೆ. ಮಾಧ್ಯಮ ಮಂದಿ ಪದೇ ಪದೇ ಅಲ್ಲಲ್ಲಿ ಟೀಕೆಗೆ, ಮೂದಲಿಕೆಗೆ ಒಳಗಾಗುವುದು ಇದೇ ಕಾರಣಕ್ಕೆ. ತಾವು ಪತ್ರಕರ್ತರು, ಮಾಧ್ಯಮದವರು ಎಂಬ ಕಾರಣಕ್ಕೆ ವಿಶೇಷ ಸವಲತ್ತು ಪಡೆಯುವುದು ಜನ್ಮ ಸಿದ್ಧ ಹಕ್ಕು ಎಂದು ಈ ಸಮುದಾಯ ಭಾವಿಸಿದಂತಿದೆ.

ಇತ್ತೀಚೆಗೆ ಅಲ್ಲಲ್ಲಿ ಕೇಳಿ ಬರುತ್ತಿರುವ ‘ಪತ್ರಕರ್ತರ ಸೈಟು’ ಪುರಾಣ ನನ್ನ ಈ ಅಭಿಪ್ರಾಯಕ್ಕೆ ಮೂಲ ಕಾರಣ. ಬೆಂಗಳೂರಿನ ಕೆಲ ಹಿರಿಯ ಪತ್ರಕರ್ತರು ಅನಾದಿ ಕಾಲದಿಂದಲೂ ಮುಖ್ಯಮಂತ್ರಿಯ ವಿವೇಚನಾ ಖೋಟಾದ ಫಲಾನುಭವಿಗಳಾಗಿ ಬಿಡಿಎ ಸೈಟನ್ನು ಪಡೆದುಕೊಂಡಿದ್ದಾರೆ. ಅದಕ್ಕೆ ಅವರು ಅನುಸರಿಸಿದ ವಿಧಾನ ನಾನಾ ರೀತಿಯದ್ದು. ಅವರಲ್ಲೊಬ್ಬರು ಹೆಂಡತಿಗೆ ಸುಳ್ಳೇ ವಿಚ್ಛೇದನ ಕೊಡುವ ಮಟ್ಟಿಗೆ ಹೋದರು ಎಂದರೆ ಅವರ ಸೈಟು ದಾಹ ಎಷ್ಟಿತ್ತು ಎನ್ನುವುದು ಗೊತ್ತಾಗುತ್ತದೆ.

ಬೆಂಗಳೂರಿನಲ್ಲಿ ಹುಟ್ಟಿಕೊಂಡ ಜಾಡ್ಯ ರಾಜ್ಯದ ಇತರೆ ಜಿಲ್ಲೆಗಳಿಗೂ ಹಬ್ಬುತ್ತಿದೆ. ಅಲ್ಲಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಸ್ಥಳೀಯ ಪತ್ರಕರ್ತ ಸಂಘದವರು ಅಥವಾ ಅವರಲ್ಲೇ ಇರುವ ಪ್ರಭಾವಿ ಪತ್ರಕರ್ತರು ಮಂತ್ರಿಗಳ ಮೇಲೆ ಸೈಟುಗಳಿಗಾಗಿ ಒತ್ತಾಯ ಮಾಡುತ್ತಿರುವುದು ಗುಟ್ಟಿನ ಸಂಗತಿ ಅಲ್ಲ.

ಶಿವಮೊಗ್ಗದಲ್ಲೂ ಇಂತಹದೇ ಪ್ರಕರಣ ಚರ್ಚೆಯಾಗುತ್ತಿದೆ. ಅಲ್ಲಿನ ಪತ್ರಕರ್ತರು ಬಹುಸಂಖ್ಯೆಯಲ್ಲಿ ಒಟ್ಟುಗೂಡಿ ಸೈಟು ಬೇಕೆಂದು ಅರ್ಜಿ ಹಾಕಿದ್ದಾರೆ. ಅರ್ಜಿ ಹಾಕಿದವರ ಪಟ್ಟಿಯಲ್ಲಿ ಪತ್ರಕರ್ತರಲ್ಲದವರು ಇದ್ದಾರೆಂದು ಕೆಲವರು ಚಕಾರ ಎತ್ತಿದ್ದಾರೆ. ಜೊತೆಗೆ ಒಂದು ಬಾರಿ ಸೈಟು ಪಡೆದವರು ಮತ್ತೆ ಅರ್ಜಿ ಹಾಕಿದ್ದಾರೆ ಎಂಬ ಟೀಕೆಯೂ ಇದೆ. ಆದರೆ ಕೆಲವು ವೇದಿಕೆಗಳ ಹೊರತಾಗಿ ಮತ್ತೆಲ್ಲಿಯೂ – ಇಂತಹದೊಂದು ಸೈಟು ಹಂಚಿಕೆ ಪ್ರಕ್ರಿಯೆಯೇ ತಪ್ಪು ಎನ್ನುವ ಅಭಿಪ್ರಾಯ ಕೇಳಿ ಬರುತ್ತಿಲ್ಲ. ಇಂತಹ ವಾಮ ಮಾರ್ಗಗಳಿಂದ ಸೈಟು ಪಡೆಯದವರ ದೊಡ್ಡ ಗುಂಪೇ ಇದೆ. ಮತ್ತು ಆ ಗುಂಪು ಸದಾ ತಮಗೆ ಸಿಗಬೇಕಿದ್ದ ಒಂದು ಅವಕಾಶ ಅಥವಾ ಲಾಭದಿಂದ ವಂಚಿತರಾಗಿದ್ದೇವೆ ಎಂಬ ಭಾವನೆಯಿಂದ ಸದಾ ಬಳಲುತ್ತಿರುತ್ತದೆ. ಜೊತೆಗೆ ಮತ್ತಿತರರಿಂದ ಅವರಿಗಾದ ‘ವಂಚನೆ’ ಕಾರಣ ಸಿಂಪತಿಯನ್ನು ಬಯಸುತ್ತದೆ. ಆದರೆ ತಾವು ಅಂತಹ ಸೈಟಿಗಾಗಿ ಆಸೆ ಪಡುವುದೇ ತಪ್ಪು, ಅಪ್ರಾಮಾಣಿಕತೆ ಎಂದೇಕೆ ಅನಿಸುವುದಿಲ್ಲ?.

ಮುಖ್ಯವಾಹಿನಿಯ ಯಾವ ಪತ್ರಿಕೆಯೂ ಹೀಗೊಂದು ಸಂಪಾದಕೀಯ ಬರೆದಂತಿಲ್ಲ (ಬರೆದಿದ್ದರೆ ಸಂತೋಷ). ಮುಖ್ಯಮಂತ್ರಿಗಿರುವ ವಿವೇಚನಾ ಅಧಿಕಾರದ ಬಗ್ಗೆ ಅಲ್ಲಲ್ಲಿ ಚರ್ಚೆಯಾಗಿದೆ ಯೇ ಹೊರತು, ಪತ್ರಕರ್ತರು ವಿವೇಚನಾ ಕೋಟಾದ ಲಾಭ ಪಡೆಯುವುದು ಚರ್ಚೆಗೆ ಬಂದಿಲ್ಲ.

ಯಾಕೆ ಹೀಗೆ?

ಮಾಧ್ಯಮ ಕ್ಷೇತ್ರಕ್ಕೆ ಸುದೀರ್ಘ ಇತಿಹಾಸವಿದೆ. ಧಾರ್ಮಿಕ ಕಾರಣಗಳಿಗಾಗಿ ಹುಟ್ಟಿಕೊಂಡ ಪತ್ರಿಕೋದ್ಯಮ ಸಹಜವಾಗಿ ಸಾಮಾಜಿಕ ಚಳವಳಿಗಳಲ್ಲಿ ಮುಖ್ಯ ಪಾತ್ರ ವಹಿಸಿತು. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಚಳವಳಿಯ ಭಾಗವಾಗಿಯೇ ಪತ್ರಿಕೆಗಳು ಕೆಲಸ ಮಾಡಿದವು. ಆಗ ಲಾಭದ ಉದ್ದೇಶ ಕಡಿಮೆ ಇತ್ತು. ಸ್ವಾತಂತ್ರ್ಯ ನಂತರ ಬಹು ವಿಸ್ತಾರವಾದ ಕ್ಯಾನ್ವಾಸ್ ಪತ್ರಕರ್ತರ ಎದುರು ತೆರೆದುಕೊಂಡಿತು. ಅದರ ಪರಿಣಾಮ ತನಿಖೆ, ವಿಶ್ಲೇಷಣೆ, ಅಭಿವೃದ್ಧಿ, ಜನಾಭಿಪ್ರಾಯ – ಎಂಬ ವಿವಿಧ ಆಯಾಮಗಳ ಅಡಿಯಲ್ಲಿ ಸುದ್ದಿಯ ಹರವು ವಿಸ್ತಾರಗೊಂಡಿತು. ಅದರಂತೆಯೇ ಮಾಧ್ಯಮ ಯಾವುದೇ ಚಳವಳಿಯ ಭಾಗವಾದಂತೆ ಆಗಾಗ ಕಂಡರೂ ಅದರ ವ್ಯಾಪ್ತಿ ಚಳವಳಿಯ ಘಟನಾವಳಿಗಳನ್ನು ವರದಿ ಮಾಡುವಷ್ಟು ಮಟ್ಟಕ್ಕೆ ಸೀಮಿತಗೊಂಡಿತ್ತು. ಇತ್ತೀಚಿನ ವರ್ಷಗಳಲ್ಲಿ ಪತ್ರಿಕೋದ್ಯಮ strictly ಒಂದು ಉದ್ಯಮ. ಪತ್ರಕರ್ತರದು ಇತರೆ ಎಲ್ಲಾ ಕ್ಷೇತ್ರಗಳ ನೌಕರರಂತೆ ಒಂದು ವೃತ್ತಿ. ಅಲ್ಲಲ್ಲಿ ಕೆಲ ಪತ್ರಕರ್ತರು ಈ ಸೀಮಿತ ಅರ್ಥ ಗಳಾಚೆ ನಿಂತು ಕೆಲಸ ಮಾಡುತ್ತಿದ್ದಾರೆ ಎಂದರೆ ಅವರ ಕರ್ತವ್ಯ – ರೋಗಿಯ ಬಗ್ಗೆ ವಿಶೇಷ ಕಾಳಜಿಯಿಂದ ನಿಗದಿತ ಸಮಯದಾಚೆಗೂ ಕೆಲಸ ಮಾಡುವ ವೈದ್ಯ, ವಿದ್ಯಾರ್ಥಿಗಳ ಒಳಿತಿಗಾಗಿ ವಿಶೇಷ ಆಸಕ್ತಿವಹಿಸಿ ಪಾಠ ಮಾಡುವ ಶಿಕ್ಷಕ ಅಥವಾ ಇನ್ನಾವುದೇ ವೃತ್ತಿಯಲ್ಲಿರುವ ಪ್ರಾಮಾಣಿಕ ವ್ಯಕ್ತಿಯ ಕರ್ತವ್ಯಕ್ಕೆ ಸಮ.

ಇತರೆ ಎಲ್ಲಾ ಕ್ಷೇತ್ರಗಳಲ್ಲಿರುವಂತೆ ಇಲ್ಲಿಯೂ ಭ್ರಷ್ಟರಿದ್ದಾರೆ. ಬಹುಕೋಟಿ ಮೊತ್ತದ ಹಗರಣಗಳಲ್ಲಿ ಭಾಗಿಯಾದವರಿದ್ದಾರೆ. ಅವರ ಹೆಸರು ಅವರ ‘ವ್ಯವಹಾರಗಳ’ ಕಾರಣ ಪ್ರಮುಖ ತನಿಖಾ ವರದಿಗಳಲ್ಲಿ ಪ್ರಕಟಗೊಂಡರೂ ಒಂದಿಷ್ಟೂ ನಾಚಿಕೆ, ಪಾಪಪ್ರಜ್ಞೆ ಇಲ್ಲದೆ ಹಿತಬೋಧನೆ ಮುಂದುವರಿಸಿದ್ದಾರೆ. ಹಾಗಾದರೆ ಪತ್ರಕರ್ತರು ವಿಶೇಷ ಪ್ರತಿಭೆಗಳು, ಆಕಾಶದಿಂದ ಇಳಿದು ಬಂದವರಂತೆ ಪರಿಭಾವಿಸುವುದು ಎಷ್ಟು ಸರಿ? ಇವರಿಗೆ ವಿವೇಚನಾ ಕೋಟಾದ ಲಾಭ ಏಕೆ?