Tag Archives: ಸಂಪಾದಕೀಯ

ಪತ್ರಿಕೋದ್ಯಮದ ಪರಿಪಾಟಲು

-ಡಾ. ಎನ್. ಜಗದೀಶ್ ಕೊಪ್ಪ

ಮಿತ್ರರೆ, ಈ ದಿನ ಅಂದರೆ, ದಿನಾಂಕ 15-12-11ರ ಕನ್ನಡಪ್ರಭ ಪತ್ರಿಕೆಯ ಸಂಪಾದಕೀಯವನ್ನು ನೀವು ಓದಿರಬಹುದೆಂದು ಭಾವಿಸಿದ್ದೇನೆ. ಬೆಳಿಗ್ಗೆ ಅದನ್ನು ಓದಿದ ಮೇಲೆ ನಮ್ಮಿಬ್ಬರ ನಡುವೆ ಅಂತಹ ಗಾಢ ಸಂಬಂದ ಇಲ್ಲದಿದ್ದರೂ ಕೂಡ ಹಲವು ಭೇಟಿ ಮತ್ತು ಪತ್ರಿಕೋದ್ಯಮ ವಿಚಾರ ಸಂಕಿರಣದಲ್ಲಿ ಒಟ್ಟಾಗಿ ವೇದಿಕೆ ಹಂಚಿಕೊಂಡ ಪರಿಣಾಮ  ನನಗೆ ಮಿತ್ರರೇ ಆಗಿರುವ ವಿಶ್ವೇಶ್ವರ ಭಟ್ ಇದನ್ನು ಬರೆಯಬಾರದಿತ್ತು ಎಂದು ಆ ಕ್ಷಣದಲ್ಲಿ ನನಗನಿಸಿತು.

ಏಕೆಂದರೆ, ಮೂರು ದಶಕಗಳ ಕಾಲ ಪತ್ರಿಕೋದ್ಯಮಕ್ಕೆ ಮಣ್ಣು ಹೊತ್ತಿರುವ ನಾನು, ಯಾವುದೇ ವ್ಯಕ್ತಿಯ ಬಗ್ಗೆ ಪ್ರೀತಿ ಅಥವಾ ದ್ವೇಷವಿಲ್ಲದೆ ನಿರ್ಭಾವುಕತನದಿಂದ ನಡೆದುಕೊಳ್ಳುವುದೇ ಪತ್ರಕರ್ತನ ಮೂಲಭೂತ ಕರ್ತವ್ಯ ಎಂದು ನಂಬಿದವನು.

ಕಳೆದ 15 ದಿನಗಳ ಹಿಂದೆ ಧಾರವಾಡದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಸಿದ್ದಲಿಂಗ ಪಟ್ಟಣಶೆಟ್ಟಿ ಭಟ್ಟರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಬಗ್ಗೆ ಅವರು ತಮ್ಮ ಕನ್ನಡಪ್ರಭದ ಸಂಪಾದಕೀಯದಲ್ಲಿ ಆಕ್ರೋಶವನ್ನು ಹೊರಚೆಲ್ಲಿದ್ದಾರೆ. ಅದು ಎಲ್ಲಿಯವರೆಗೆ ಸಾಗಿದೆ ಎಂದರೆ, ಪಟ್ಟಣಶೆಟ್ಟಿಯವರ ಮೊದಲ ಪತ್ನಿ ಬೀದಿಯಲ್ಲಿ ಅಟ್ಟಾಡಿಸಿಕೊಂಡು ಚಪ್ಪಲಿಯಲ್ಲಿ ಹೊಡೆದ ಪ್ರಸಂಗ ಕೂಡ ದಾಖಲಾಗಿದೆ. ಕನ್ನಡ ಸಾಹಿತ್ಯವನ್ನು, ಅದರಲ್ಲೂ ವಿಶೇಷವಾಗಿ ಮಾಲತಿ ಪಟ್ಟಣಶೆಟ್ಟಿಯವರ ಕಾವ್ಯವನ್ನು ಓದಿಕೊಂಡಿರುವ ಎಲ್ಲರೂ ಸಿದ್ದಲಿಂಗ ಪಟ್ಟಣಶೆಟ್ಟಿಯವರ ದಾಂಪತ್ಯದ ಕಹಿನೆನಪುಗಳನ್ನು ಬಲ್ಲರು. ಹಲವುಕಡೆ ಇದನ್ನು ಸ್ವತಃ ಅವರೇ ದಾಖಲಿಸಿದ್ದಾರೆ. ನನ್ನ ಪ್ರಶ್ನೆ ಇದಲ್ಲ, ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ಸಂಪಾದಕನೊಬ್ಬ ಸಂಪಾದಕೀಯ ಪುಟವನ್ನ ಹೀಗೆ ಸ್ವಾರ್ಥಕ್ಕೆ ಬಳಸಿಕೊಳ್ಳಬಹುದೆ? ಜಿಲ್ಲಾ ಮಟ್ಟದಲ್ಲಿ ಸಂಪಾದಕನೇ ಪ್ರಕಾಶಕ, ಮುದ್ರಕ, ಕಡೆಗೆ ಓದುಗ ಕೂಡ ಆಗಿರುವುದರಿಂದ ಇಂತಹ ಘಟನೆಗಳು ಸಾಮಾನ್ಯ.

ಇಡೀ ಘಟನೆಯಲ್ಲಿ ಸಿದ್ದಲಿಂಗ ಪಟ್ಟಣಶೆಟ್ಟರ ತಪ್ಪು ಎದ್ದು ಕಾಣುತಿದೆ ನಿಜ. ಅವರನ್ನು ತರಾಟೆಗೆ ತೆಗೆದುಕೊಳ್ಳಲು ಭಟ್ಟರಿಗೆ ಅವರದೇ ಆದ ಬ್ಲಾಗ್, ವೆಬ್‌ಸೈಟ್, ಫೇಸ್‌ಬುಕ್ ತಾಣವಿದ್ದದ್ದರಿಂದ ಅಲ್ಲಿ ಈ ವಿಷಯವನ್ನು ಪ್ರಸ್ತಾಪಿಸಬಹುದಿತ್ತು. ನಮ್ಮಂತಹ ಸಾರ್ವಜನಿಕರ ಜೊತೆ ಒಡನಾಡುವ ಪತ್ರಕರ್ತರಿಗೆ ಇಂತಹ ಆಪಾದನೆ, ಟೀಕೆ ಎಲ್ಲವೂ ಸಾಮಾನ್ಯ. ಇವುಗಳಿಗೆ ನಾವು ಗುರಿಯಾಗದೆ, ನಾಲ್ಕು ಗೋಡೆಯ ನಡುವೆ ಇರುವ ನಮ್ಮ ಪತ್ನಿ ಅಥವಾ ಮಕ್ಕಳು ಗುರಿಯಾಗಲು ಸಾಧ್ಯವಿಲ್ಲ. ನಾವು ತಪ್ಪು ಮಾಡದಿದ್ದಾಗ ಇಲ್ಲವೆ ಅನಾವಶ್ಯಕಕವಾಗಿ ನಮ್ಮ ಮೇಲೆ ಆರೋಪ ಹೊರಿಸಿದಾಗ ಮುಖಾ ಮುಖಿಯಾಗಿ ನಿಂತು ಝಾಡಿಸುವುದು ಉತ್ತಮ ಮಾರ್ಗವೇ ಹೊರತು ಪರೋಕ್ಷವಾಗಿ ಪತ್ರಿಕೆಯ ಮೂಲಕ ಬೆಂಕಿ ಕಾರುವುದು ಉತ್ತಮ ಬೆಳವಣಿಗೆಯಲ್ಲ.

ಕೆಲವೆಡೆ ಭಟ್ಟರ ಸಂಪಾದಕೀಯ ಸಾಲುಗಳು ಅವರ ಟೀಕಾಕಾರಿಗೆ ಎಚ್ಚರಿಕೆ ನೀಡುವಂತಿವೆ. ಇಡೀ ರಾಜ್ಯಾದ್ಯಂತ ನನ್ನ ಪತ್ರಿಕೆ, ಛಾನಲ್‌ನ ವರದಿಗಾರರಿದ್ದಾರೆ, ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಮಿತ್ರರಿದ್ದಾರೆ, ಅವರ ಮೂಲಕ ಕ್ಷಣ ಮಾತ್ರದಲ್ಲಿ ವಿಷಯ ಸಂಗ್ರಹಿಸಬಲ್ಲೆ ಎಂಬುದರ ಮೂಲಕ ಭಟ್ಟರು ಬ್ಲ್ಯಾಕ್‌ಮೇಲ್ ಪತ್ರಿಕೋದ್ಯಮಕ್ಕೆ ಇಳಿಯುತಿದ್ದಾರೆನೋ ಎಂಬ ಸಂಶಯ ಆತಂಕ ಕಾಡತೊಡಗಿದೆ.

ಅಕ್ಷರದ ಹೆಸರಿನಲ್ಲಿ ಅನ್ನ ತಿನ್ನುತ್ತಾ ಬದುಕು ಕಟ್ಟಿಕೊಂಡಿರುವ ನಾನು ಭಟ್ಟರು ಅನುಭವಿಸಿದಂತಹ ನೂರಾರು ಅಪಮಾನ, ಯಾತನೆಗಳನ್ನು ಅನುಭವಿಸಿದ್ದೇನೆ. ಎದುರಿಗೆ ಸಿಕ್ಕಾಗ ಮುಖ ಮುಸುಡಿ ನೋಡದೆ ಎದೆಗೆ ಒದ್ದ ಹಾಗೆ ಮಾತನಾಡಿದ್ದೇನೆ. ಆದರೆ, ನನ್ನನ್ನು ಟೀಕಿಸುವವರ ಬಗ್ಗೆ ದ್ವೇಷಿಸುವವರ ಬಗ್ಗೆ ಅಕ್ಷರ ರೂಪದಲ್ಲಿ ನಾನೆಂದು ಸೇಡು ತೀರಿಸಿಕೊಳ್ಳಲಾರೆ. ಏಕೆಂದರೆ, ಅಕ್ಷರ ದಾಖಲಾಗುವ ಮಾಧ್ಯಮ. ಅಲ್ಲಮನ ಈ  ವಚನದ ಸಾಲು ನಾನು ಸಿಟ್ಟಿಗೆದ್ದಾಗಲೆಲ್ಲಾ ನನ್ನನ್ನು ತಡೆಯುತ್ತದೆ. “ಬರೆಯಬಾರದು ನೋಡಾ ಅಳಿಸಬಾರದ ಲಿಪಿಯ”. ನಾವು ಬರೆದ ಲಿಪಿ ಶಾಶ್ವತವಾಗಿ ಉಳಿಯುವಂತಿರಬೇಕು. ಹಾಗಾಗ ಬೇಕೆಂದರೆ, ಲೇಖಕ, ಪತ್ರಕರ್ತನಾದವನು ಬರವಣಿಗೆಯಲ್ಲಿ ಸಂಯಮ ಕಾಪಾಡಿಕೊಳ್ಳಬೇಕು. ಇದು ನನ್ನ ನಂಬಿಕೆ.