ಕಥೆ : ಆಚಾರವಿಲ್ಲದ ನಾಲಿಗೆ..

– ಡಾ.ಎಸ್.ಬಿ.ಜೋಗುರ

ಖರೆ ಅಂದ್ರ ಅಕಿ ಹೆಸರು ಶಿವಮ್ಮ. ಓಣ್ಯಾಗಿನ ಮಂದಿ ಮಾತ್ರ ಅಕಿನ್ನ ಕರಿಯೂದು ಹರಕ ಶಿವಮ್ಮ ಅಂತ. ಬಾಯಿ ತಗದರ ಸಾಕು ಅಂತಾ ರಂಡೇರು..ಇಂಥಾ ಸೂಳೇರು ಅಕಿದೇನು ಕೇಳ್ತಿ ಹುಚ್ ಬೋಸ್ಡಿ ಅಂತ ಬೈಯ್ಯೋ ಶಿವಮ್ಮ ಗಂಡಸರ ಪಾಲಿಗೂ ಒಂದಿಷ್ಟು ಬೈಗುಳ ಯಾವತ್ತೂ ಸ್ಟಾಕ್ ಇಟಗೊಂಡಿರತಿದ್ದಳು. ಹಾಲು ಕೊಡುವ ಗುರಲಿಂಗನ ಸಂಗಡ ಅವತ್ತ ಮುಂಜಮುಂಜಾನೆನೇ ಕಾಲ ಕೆರದು ಜಗಳಕ್ಕ ನಿಂತಿದ್ದಳು. ‘ಯಾವ ಪಡಸಂಟನನ್ ಹಾಟಪ್ಪನೂ ಪುಗ್ಸಟ್ಟೆ ಹಾಲ ಕೊಡಲ್ಲ, ಕೊಡತಿದ್ದರ ಚುಲೋ ಹಾಲು ಕೊಡು, ಇಲ್ಲಾಂದ್ರ ಬಿಡು.’ ಅಂತ ಮನಿಮುಂದ ನಿಂತು ಒಂದು ಸವನ ಗಂಟಲ ಹರಕೋತಿದ್ದಳು. ಗಂಡ ಶಂಕ್ರಪ್ಪ ‘ಹೋಗಲಿ ಬಿಡು, ಅದೇನು ಹಚಗೊಂಡು ಕುಂತಿ..? ಮುಂಜಮುಂಜಾನೆ’ ಅಂದಿದ್ದೇ ಶಿವಮ್ಮ ಮತ್ತಷ್ಟು ನೇಟ್ ಆದಳು. ‘ನೀವು ಕೊಟ್ಟ ಸಲಿಗೆನೇ ಇವರೆಲ್ಲಾ ಹಿಂಗಾಗಿದ್ದು. ಇಂವೇನು ಪುಗ್ಸಟ್ಟೆ ಕೊಡ್ತಾನಾ..ಹಾಂಟಪ್ಪ ? ಐತವಾರಕ್ಕೊಮ್ಮ ಬಂದು ರೊಕ್ಕಾ ತಗೊಳಂಗಿಲ್ಲಾ..’? ಅಂದದ್ದೇ ಶಂಕ್ರಪ್ಪಗ ಹೆಂಡತಿ ಅಟಾಪಾಗಲಾರದ ಹೆಣಮಗಳು ಅಂತ ಗೊತ್ತಿತ್ತು. ಅಕಿ ಒಂಥರಾ ಖರೆಖರೆ ಮುಂಡೆರಿದ್ದಂಗ. ಗಂಟೀ ಚೌಡೇರಂಗ ಗಲಗಲ ಅಂತ ಬಾಯಿ ಮಾಡಿ ತಂದೇ ಖರೆ ಮಾಡವಳು ಅಂತ ಅಂವಗ ಯಾವಾಗೋ ಗೊತ್ತಾಗೈತಿ.

ಪಾಪ ಶಂಕ್ರಪ್ಪ ಅಕಿ ಎದುರಿಗಿ ಬಾಯಿ ಸತ್ತ ಮನುಷ್ಯಾ ಅನ್ನೋ ಬಿರುದು ತಗೊಂಡು ಬದುಕುವಂಗ ಆಗಿತ್ತು. ಪಡಶಂಟ..ಹಾಟ್ಯಾ..ಬಾಯಾಗ ಮಣ್ಣ ಹಾಕಲಿ ಇವೆಲ್ಲಾ ಅಕಿ ಬಾಯಾಗ ಏನೂ ಅಲ್ಲ ಸಿಟ್ಟ ನೆತ್ತಿಗೇರಿ ಖರೆಖರೆ ಬೈಗುಳದ ಶಬ್ದಕೋಶ ತಗದಳಂದ್ರ ಕಿವಿ ಮುಚಕೊಂಡು ಕೇಳುವಂಥಾ ಸೊಂಟದ ಕೆಳಗಿನ ಎಲ್ಲಾ ಬೈಗುಳನೂ ಅಕಿ ಬಳಿ ಸ್ಟಾಕ್ ಅದಾವ. ಹಂಗಾಗೇ ಓಣ್ಯಾಗಿನ ಮಂದಿ ಹೋಗಿ ಹೋಗಿ ಆ ಹರಕ ಬಾಯಿಗಿ ಯಾಕ ಹತ್ತೀರಿ ಮಾರಾಯಾ.? ಅಂತಿದ್ದರು. ಈ ಶಿವಮ್ಮಗ ಮಕ್ಕಳಾಗಿ..ಮೊಮ್ಮಕ್ಕಳಾಗಿ ಅವರು ಲಗ್ನಕ್ಕ ಬಂದರೂ ಅಕಿ ಬಾಯಿ ಮಾತ್ರ ಬದಲಾಗಿರಲಿಲ್ಲ.

ಇಂಥಾ ಶಿವಮ್ಮಗ ತನ್ನ ತವರಿಮನಿ ಮ್ಯಾಲ ವಿಪರೀತ ಮೋಹ. ಲಗ್ನ ಆಗಿ ದೇವರ ಹಿಪ್ಪರಗಿಯ ಪಾಟೀಲ ರುದ್ರಗೌಡನ ಮನಿತನಕ ನಡೀಲಾಕ ಬಂದ ದಿನದಿಂದ ಹಿಡದು ಇಲ್ಲೀಮಟ ಬರೀ ತನ್ನ ಅಣ್ಣ ತಮ್ಮದೇರು..ಅಕ್ಕ ತಂಗಿದೇರು ಅವರ ಮಕ್ಕಳು.. ಉದ್ದಾರ ಆಗೊದೇ ನೋಡತಿದ್ದಳು. ಈ ಶಿವಮ್ಮ ಬಾಗೇವಾಡಿ ತಾಲೂಕಿನ ಸಾಲವಡಗಿಯವಳು. ವಾರಕ್ಕೊಮ್ಮ ..ತಿಂಗಳಿಗೊಮ್ಮ ಅಕಿ ಅಣ್ಣ ತಮ್ಮದೇರು ಹಿಪ್ಪರಗಿ ಸಂತಿಗಿ ಬರವರು. ಅವರ ಕೈಯಾಗ ಅಕಿ ಉಪ್ಪ ಮೊದಲಮಾಡಿ ಕಟ್ಟಿ ಕಳಸೂವಕ್ಕಿ. ಇದೇನು ಕದ್ದಲೆ ನಡಿಯೂ ಕೆಲಸಲ್ಲ ಗಂಡ ಶಂಕ್ರಪ್ಪನ ಕಣ್ಣ ಎದುರೇ ಹಂಗ ಸಕ್ಕರಿ, ಅಕ್ಕಿ, ಗೋದಿ ಕಡ್ಲಿಬ್ಯಾಳಿ ಎಲ್ಲಾ ಕಟ್ಟಿ ಕಳಿಸುವಕ್ಕಿ. ಶಿವಮ್ಮಳ ಗಂಡ ಶಂಕ್ರಪ್ಪ ದೇವರಂಥಾ ಮನುಷ್ಯಾ ಒಂದೇ ಒಂದು ದಿನ ಅದ್ಯಾಕ ನೀನು ಇವೆಲ್ಲಾ ಕೊಟ್ಟು ಕಳಸ್ತಿ ಅಂತ ಕೇಳ್ತಿರಲಿಲ್ಲ. ಹಿಂಗಿದ್ದ ಮ್ಯಾಲೂ ಶಿವಮ್ಮ ಜಿಗದ್ಯಾಡಿ ಮತ್ತ ಗಂಡ ಶಂಕ್ರಪ್ಪನ ಮ್ಯಾಲೇ ಠಬರ್ ಮಾಡತಿದ್ದಳು. ತನ್ನ ತಂಗಿ ಇಂದಿರಾಬಾಯಿ ಲಗ್ನದೊಳಗ ಒಂದು ತೊಲಿ ಬಂಗಾರ ಆಯೇರಿ ಮಾಡ್ರಿ ಅಂತ ಗಂಡಗ ಹೇಳಿದ್ದಳು. ಶಂಕ್ರಪ್ಪ ಅರ್ಧ ತೊಲಿದು ಒಂದು ಉಂಗುರ ತೊಡಿಸಿ ಕೈ ತೊಳಕೊಂಡಿದ್ದ. ತಾ ಹೇಳಿದ್ದು ಒಂದು ತೊಲಿ ಅಂತ ಗಂಡನ ಜೋಡಿ ಜಗಳಾ ತಗದು, ತಿಂಗಳಾನುಗಟ್ಟಲೆ ಮಾತು ಬಿಟ್ಟ ಶಿವಮ್ಮ ಮುಂದ ‘ಕುಬಸದೊಳಗ ಮತ್ತರ್ಧ ತೊಲಿ ಹಾಕದರಾಯ್ತು ತಗೊ’ ಅಂದಾಗ ಮಾತಾಡಿದ್ದಳು.

ಅಂಥಾ ಶಿವಮ್ಮಳ ಹೊಟ್ಟೀಲೇ ಎರಡು ಗಂಡು ಮೂರು ಹೆಣ್ಣು. ಅವರ ಹೊಟ್ಟೀಲೇ ಮತ್ತ ಎರಡೆರಡು, ಮೂರ್ಮೂರು ಮಕ್ಕಳಾಗಿ ಶಿವಮ್ಮ ಮೊಮ್ಮಕ್ಕಳನ್ನೂ ಕಂಡಾಗಿತ್ತು. ಇಬ್ಬರು ಗಂಡು ಹುಡುಗರ ಪೈಕಿ ಹಿರಿ ಮಗ ರಾಚಪ್ಪ ಲಗ್ನ ಆದ ವರ್ಷದೊಳಗ ಬ್ಯಾರಿ ಆಗಿದ್ದ. ಕಿರಿ ಮಗ ಚನಬಸು ಮಾತ್ರ ಅವ್ವ-ಅಪ್ಪನ ಜೋಡಿನೇ ಇದ್ದ. ರಾಚಪ್ಪ ಕನ್ನಡ ಸಾಲಿ ಮಾಸ್ತರ ಆಗಿ ಬಿಜಾಪೂರ ಸನ್ಯಾಕ ಇರೋ ಕವಲಗಿಯಲ್ಲಿ ನೌಕರಿಗಿದ್ದ. ಮನಿ ಮಾತ್ರ ಬಿಜಾಪೂರದೊಳಗೇ ಮಾಡಿದ್ದ. ಕಿರಿ ಮಗ ಚನಬಸು ಪಿ.ಯು.ಸಿ ಮಟ ಓದಿ ಮುಂದ ನೀಗಲಾರದಕ್ಕ ದೇವರಹಿಪ್ಪರಗಿಯೊಳಗ ಒಂದು ಕಿರಾಣಿ ಅಂಗಡಿ ಹಾಕಿದ್ದ. ವ್ಯಾಪಾರನೂ ಚುಲೊ ಇತ್ತು. ಶಂಕ್ರಪ್ಪ ಆಗಿನ ಕಾಲದೊಳಗ ಮುಲ್ಕಿ ಪರೀಕ್ಷೆ ಪಾಸಾದವನು. ಮನಿಮಟ ನೌಕರಿ ಹುಡಕೊಂಡು ಬಂದರೂ ಹೋಗಿರಲಿಲ್ಲ. ಈಗ ಅಂಗಡಿ ದೇಖರೇಕಿಯೊಳಗ ಮಗನ ಜೋಡಿ ಕೈಗೂಡಿಸಿದ್ದ. ಚನಬಸುಗ ಎರಡು ಮಕ್ಕಳು ಒಂದು ಗಂಡು ಒಂದು ಹೆಣ್ಣು. ಗಂಡ ಹುಡುಗ ಸಂಗಮೇಶ ಬಿಜಾಪೂರ ಸರಕಾರಿ ಕಾಲೇಜಲ್ಲಿ ಬಿ.ಎ. ಓದತಿದ್ದ. ಹೆಣ್ಣು ಹುಡುಗಿ ಅನಸೂಯಾ ಹಿಪ್ಪರಗಿಯೊಳಗೇ ಪಿ.ಯು.ಸಿ ಮೊಅಲ ವರ್ಷ ಓದತಿದ್ದಳು.

ಶಂಕ್ರಪ್ಪನ ತಂಗಿ ಶಾರದಾಬಾಯಿ ಮಗಳು ಕಸ್ತೂರಿ ಓದಲಿಕ್ಕಂತ ಇವರ ಮನಿಯೊಳಗೇ ಬಂದು ಇದ್ದಳು. ತನ್ನ ತಂಗಿಗಿ ಕೈ ಆಡೂ ಮುಂದ ಏನೂ ಮಾಡಲಿಲ್ಲ. ಅಕಿಗಿ ಲಕ್ವಾ ಹೊಡದು ಹಾಸಿಗೆ ಹಿಡದ ಮ್ಯಾಲೂ ಅವಳಿಗೆ ಏನೂ ತಾ ಆಸರಾಗಲಿಲ್ಲ. ಕದ್ದು ಮುಚ್ಚಿ ಏನರೇ ಸಹಾಯ ಮಾಡೋಣ ಅಂದ್ರ ಎಲ್ಲಾ ಕಾರಬಾರ ಹೆಂಡತಿ ಶಿವಮ್ಮಂದು ಹಿಂಗಾಗಿ ಓಳಗೊಳಗ ಶಂಕ್ರಪ್ಪಗ ತನ್ನ ತಂಗಿಗಿ ಹೊತ್ತಿಗಾಗಲಿಲ್ಲ ಅನ್ನೂ ಸಂಗಟ ಇದ್ದೇ ಇತ್ತು. ತನ್ನ ತಂಗೀ ಮಗಳು ಕಸ್ತೂರಿ ಓದೂದರೊಳಗ ಬಾಳ ಹುಷಾರ್ ಹುಡುಗಿ. ಅಕಿ ಇನ್ನೂ ಎಂಟು ವರ್ಷದವಳು ಇದ್ದಾಗೇ ಅಕಿ ಅಪ್ಪ ಹೊಲದಾಗ ನೀರ ಹಾಯ್ಸೂ ಮುಂದ ಹಾವು ಕಡದು ತೀರಕೊಂಡ. ಅವ್ವಗ ಇದ್ದಕ್ಕಿದ್ದಂಗ ಲಕ್ವಾ ಹೊಡದು ಹಾಸಗಿಗಿ ಹಾಕ್ತು. ಮನಿಯೊಳಗ ಮಾಡವರೂ ಯಾರೂ ಇರಲಿಲ್ಲ. ಕಸ್ತೂರಿ ಅಜ್ಜಿ ಶಾವಂತ್ರವ್ವಳೇ ಅಡುಗಿ ಕೆಲಸಾ ಮಾಡವಳು. ಅಲ್ಲಿರೋಮಟ ಕಸ್ತೂರಿ ಅಕಿ ಕೈ ಕೈಯೊಳಗ ಕೆಲ್ಸಾ ಮಾಡುವಕ್ಕಿ. ಅಕಿ ಓದಾಕಂತ ಹಿಪ್ಪರಗಿಗಿ ಬಂದ ಮ್ಯಾಲ ಆ ಮುದುಕಿ ಶಾವಂತ್ರವ್ವಗೂ ಮನಿ ಕೆಲಸಾ ಬಾಳ ಆಗಿತ್ತು. ಕಸ್ತೂರಿ ಮೆಟ್ರಿಕ್ ಮಟ ತನ್ನೂರು ಇಂಗಳಗಿಯೊಳಗೇ ಓದಿ ತಾಲೂಕಿಗೇ ಫ಼ಸ್ಟ್ ಬಂದಿದ್ದಳು. ಆವಾಗ ಶಂಕ್ರಪ್ಪಗ ಬಾಳ ಖುಷಿ ಆಗಿತ್ತು. ಫ಼ೇಡೆ ಹಂಚಲಾಕಂತ ಅವನೇ ಖುದ್ದಾಗಿ ಕಸ್ತೂರಿ ಕೈಯೊಳಗ ಐದು ನೂರು ರೂಪಾಯಿ ಕೊಟ್ಟಿದ್ದ. ಅದು ಹೆಂಗೋ ಹೆಂಡತಿ ಶಿವಮ್ಮಗ ಗೊತ್ತಾಗಿ ಬೆಳ್ಳಬೆಳತನಕ ಒದರಾಡಿದ್ದಳು. ಗಂಡ ಶಂಕ್ರಪ್ಪ ‘ನಾ ಬರೀ ಐದು ನೂರು ರೂಪಾಯಿ ಕೊಟ್ಟಿದ್ದಕ ಹಿಂಗ ಮಾಡ್ತಿ, ನೀ ನನ್ನ ಎದುರೇ ಉಪ್ಪು ಮೊದಲ ಮಾಡಿ ಕಟ್ಟಿ ಕಳಸ್ತಿದಿ ನಾ ಏನರೇ ಅಂದೀನಾ..?’ ಅಂದಾಗ ಶಿವಮ್ಮಳ ಬಳಿ ಮರುಮಾತಿರಲಿಲ್ಲ. ಆ ಹುಡಗಿಗೆರೆ ಯಾರು ಅದಾರ ನಮ್ಮನ್ನ ಬಿಟ್ಟರೆ, ಪಾಪ ನಮ್ಮ ತಂಗಿ ನೋಡದರ ಹಂಗ.. ಅಪ್ಪಂತೂ ಇಲ್ಲ ನಾವೂ ಅಕಿಗೆ ಆಸರಾಗಲಿಲ್ಲ ಅಂದ್ರ ಯಾರು ಆಗ್ತಾರ ಅಂದದ್ದೇ ಶಿವಮ್ಮ ಮೂಗ ನಿಗರಿಸಿ ಆ ಆಸ್ತಿ ನಮ್ಮ ಮೊಮ್ಮಗನ ಹೆಸರಿಗಿ ಮಾಡ್ಲಿ ಇಲ್ಲೇ ಬಂದು ಇರಲಿ ತಾಯಿ ಮಗಳನ್ನ ನಾವೇ ನೋಡಕೋತೀವಿ ಅಂದಾಗ ಶಂಕ್ರಪ್ಪ ಸಿಟ್ಟೀಲೇ ಹೆಂಡತಿನ್ನ ದಿಟ್ಟಿಸಿ ನೋಡಿದ್ದ.

ತಂಗೀ ಮಗಳು ಕಸ್ತೂರಿಯನ್ನ ಇಲ್ಲಿ ಓದಲಿಕ್ಕ ತಂದು ಇಟಗೋತೀನಿ ಅಂದಿದ್ದಕ್ಕೂ ಶಿವಮ್ಮ ದೊಡ್ಡದೊಂದು ಜಗಳಾನೇ ತಗದಿದ್ದಳು. ತನ್ನ ತಮ್ಮನ ಮಗ ರಮೇಶನ್ನೂ ಕರಕೊಂಡು ಬರ್ರಿ ಅವನೂ ಓದಲಿ ಅಂತ ಪಂಟ ಹಿಡದಳು. ‘ಅಂವಾ ಉಡಾಳ ಕುರಸಾಲ್ಯಾ ಮೆಟ್ರಿಕ್ ಎರಡು ಸಾರಿ ಫ಼ೇಲ್ ಆದಂವ. ಅವನ್ನ ತಗೊಂಡು ಬಂದು ಏನು ಮಾಡ್ತಿ..? ಹುಚ್ಚರಂಗ ಮಾತಾಡಬ್ಯಾಡ ಕಸ್ತೂರಿ ಫ಼ಸ್ಟ್ ಕ್ಲಾಸ್ ಹುಡುಗಿ, ಅಂಥ ಹುಡುಗರನ್ನ ಓದಸದರ ನಮಗೂ ಹೆಸರು’ ಅಂದಾಗ ‘ಹೆಸರಿಲ್ಲ ಏನೂ ಇಲ್ಲ, ನಿಮ್ಮ ತಂಗಿ ಮಗಳು ಅಂತ ಅಷ್ಟೇ’ ಅಂದಿದ್ದಳು. ’ಹುಚಗೊಟ್ಟಿ ಹಳಾ ಹುಚಗೊಟ್ಟಿ.. ಹಂಗ ಮಾತಾಡಬ್ಯಾಡ. ಮುದುಕಿ ಆಗಲಿಕ್ಕ ಬಂದರೂ ನಿನ್ನ ಸಣ್ಣ ಬುದ್ದಿ ಬದಲ್ ಆಗಲಿಲ್ಲ ನೋಡು. ಬ್ಯಾರೇ ಯಾರಿಗರೆ ಕಲಸ್ತೀವಾ..? ಅದೂ ಅಲ್ಲದೇ ಆ ಹುಡುಗಿ ಮನಿ ಕೆಲಸಾ ಮಾಡಕೊಂಡು ಓದತಾ” ಅಂದಾಗ ಶಿವಮ್ಮ ಸುಮ್ಮ ಆಗಿದ್ದಳು. ಕಸ್ತೂರಿ ಬಂದ ದಿನದಿಂದಲೂ ಮನೀದು ಅರ್ದ ಕೆಲಸಾ ಅವಳೇ ಮಾಡಕೊಂಡು ಹೋಗತಿದ್ದಳು. ಅಷ್ಟರ ಮ್ಯಾಲೂ ಶಿವಮ್ಮಗ ಆ ಹುಡುಗಿ ಮ್ಯಾಲ ಒಂಚೂರೂ ಕರುಣೆ ಇರಲಿಲ್ಲ. ದಿನಕ್ಕ ಒಮ್ಮೆರೆ ಬಿರಸ್ ಮಾತಲಿಂದ ಕಸ್ತೂರಿಯನ್ನ ನೋಯಿಸದಿದ್ದರ ಅಕಿಗಿ ತಿಂದ ಕೂಳ ಕರಗ್ತಿರಲಿಲ್ಲ.

ಸಂಗಮೇಶ ಮತ್ತ ಕಸ್ತೂರಿ ಇಬ್ಬರೂ ಒಂದೇ ಕ್ಲಾಸಲ್ಲಿ ಓದತಿದ್ದರು. ಸಂಗಮೆಶ ಕಾಲೇಜಿಗೇನೋ ಬರತಿದ್ದ ಆದರೆ ಕ್ಲಾಸಿಗೆ ಕೂಡ್ತಿರಲಿಲ್ಲ. ಅದೆಲ್ಲಿ ಹೋಗತಿದ್ದ ಏನು ಮಾಡತಿದ್ದ ಅಂತ ಕಸ್ತೂರಿ ಒಟ್ಟಾರೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಮೊದಮೊದಲ ಮನ್ಯಾಗ ತನ್ನ ಮಾವ ಶಂಕ್ರಪ್ಪನ ಮುಂದ ಹೇಳತಿದ್ದಳು. ಯಾವಾಗ ಅತ್ತೆ ಶಿವಮ್ಮ ಚಾಡಿ ಚುಗಲಿ ಹೇಳೂದು ಕಲತರ ನಿನ್ನ ಸ್ವಾಟೀನೇ ಹರೀತೀನಿ ಅಂತ ವಾರ್ನಿಂಗ್ ಮಾಡದ್ಲೋ ಅವಾಗಿನಿಂದ ಅಕಿ ಸಂಗಮೇಶನ ಚಟುವಟಿಕೆಗಳನ್ನೆಲ್ಲಾ ಕಂಡೂ ಕಾಣಲಾರದಂಗ ಇರತಿದ್ದಳು.

ಒಂದಿನ ತರಗತಿಯಲ್ಲಿ ಈ ಸಂಗಮೆಶ ಹೆಡ್ ಪೋನ್ ಹಾಕೊಂಡು ಮೊಬೈಲ್ ಸಾಂಗ್ ಕೇಳ್ತಾ ಇದ್ದಾಗ ಇಂಗ್ಲಿಷ ಅಧ್ಯಾಪಕರೊಬ್ಬರು ಎಬ್ಬಿಸಿ ನಿಲ್ಲಿಸಿ ಎಲ್ಲರೆದುರೇ ಹಿಗ್ಗಾ ಮಿಗ್ಗಾ ಬೈದು ಮೊಬೈಲ್ ಕಸಿದುಕೊಂಡಿರುವದಿತ್ತು. ಇದೆಲ್ಲಾ ಕಸ್ತೂರಿಯ ಕಣ್ಣೆದುರೇ ನಡೆದಿದ್ದರೂ ಆಕೆ ಮನೆಯಲ್ಲಿ ಬಾಯಿ ಬಿಟ್ಟಿರಲಿಲ್ಲ. ತಾನಾಯಿತು ತನ್ನ ಓದಾಯ್ತು ಎಂದಿದ್ದ ಕಸ್ತೂರಿ ಆ ವರ್ಷ ಕಾಲೇಜಿಗೆ ಪ್ರಥಮವಾಗಿ ಪಾಸಾಗಿದ್ದಳು. ಮಾವ ಶಂಕ್ರಪ್ಪ ಇಡೀ ಊರ ತುಂಬಾ ತನ್ನ ತಂಗಿ ಮಗಳು ಫ಼ಸ್ಟ್ ಕ್ಲಾಸ್ ಲ್ಲಿ ಪಾಸಾಗಿದ್ದಾಳೆ ಎಂದು ಹೇಳಿದ್ದ. ಮಗನ ಬಗ್ಗೆ ಕೇಳಿದಾಗ ಬೇಸರದ ಮೌನ ತಾಳಿದ್ದ. ಶಿವಮ್ಮಗಂತೂ ಕಸ್ತೂರಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು ಒಂದು ಬಗೆಯ ಸಂಕಟಕ್ಕೆ ಕಾರಣವಾಗಿತ್ತು. ಈ ಕಸ್ತೂರಿ ಓದುವದರಲ್ಲಿ ತುಂಬಾ ಜಾಣ ಹುಡುಗಿ ಇವಳು ಮುಂದೊಂದು ದಿನ ನೌಕರಿ ಹಿಡಿಯೋದು ಗ್ಯಾರಂಟಿ ಎನ್ನುವದು ಶಿವಮ್ಮಳಿಗೆ ಗೊತ್ತಾಯ್ತು. ಹೇಗಾದರೂ ಮಾಡಿ ಈ ಹುಡುಗಿಯನ್ನ ಮೊಮ್ಮಗ ಸಂಗಮೇಶಗೆ ತಂದುಕೊಂಡು ಬಿಟ್ಟರೆ ಮುಗೀತು ಅಲ್ಲಿಗೆ ಅವಳಿಗೆ ಬರೋ ಆಸ್ತಿಯೆಲ್ಲಾ ಮೊಮ್ಮಗನ ಹೆಸರಿಗೆ ಬಂದಂಗೆ. ಜೊತೆಗೆ ಇಕಿ ನೌಕರಿ ಮಾಡದರೂ ಸಂಬಳವೆಲ್ಲಾ ಮೊಮ್ಮಗನ ಕೈಗೆ ಎಂದೆಲ್ಲಾ ಯೋಚನೆ ಮಾಡಿ ಶಿವಮ್ಮ ಆ ದಿನ ರಾತ್ರಿ ಮಲಗುವಾಗ ಗಂಡನ ಮುಂದೆ ಕಸ್ತೂರಿ ಬಗ್ಗೆ ತಾನು ಯೋಚನೆ ಮಾಡಿರುವದೆಲ್ಲಾ ಹೇಳಿದಳು. ಶಂಕ್ರಪ್ಪ ಅಷ್ಟೊಂದು ಕುತೂಹಲದಿಂದ ಹೆಂಡತಿ ಮಾತನ್ನ ಕೇಳಲಿಲ್ಲ. ಬರೀ ಹಾಂ..ಹುಂ.. ಎನ್ನುತ್ತಲೇ ಮಲಗಿಬಿಟ್ಟ.

ಕಸ್ತೂರಿಯ ತಂದೆ ಮುರಗೆಪ್ಪನ ಸಹೋದರಿ ಗಂಗಾಬಾಯಿಯ ಮಗ ರಾಜಶೇಖರ ಗೋಲಗೇರಿಯಲ್ಲಿ ಹೈಸ್ಕೂಲ್ ಮಾಸ್ತರ್ ಆಗಿದ್ದ. ತನ್ನ ಮಗನಿಗೆ ಅಣ್ಣನ ಮಗಳನ್ನೇ ತಂದುಕೊಳ್ಳುವದೆಂದು ಮೊದಲಿನಿಂದಲೂ ಗಂಗಾಬಾಯಿ ಎಲ್ಲರೆದುರು ಹೇಳುತ್ತಲೇ ಬಂದಿದ್ದಳು. ಹೀಗಾಗಿ ಮತ್ತೆ ಬೇರೆ ಹುಡುಗನನ್ನು ಹುಡುಕುವ ಅವಶ್ಯಕತೆಯೇ ಇರಲಿಲ್ಲ. ರಾಜಶೇಖರ ಪ್ರತಿ ತಿಂಗಳಿಗೆ ಕಸ್ತೂರಿಯ ಓದಿನ ಖರ್ಚಿಗೆಂದು ಐದು ನೂರು ರೂಪಾಯಿಗಳನ್ನು ಕಳುಹಿಸುತ್ತಿದ್ದ. ಆ ವಿಷಯವನ್ನು ಕಸ್ತೂರಿ ತನ್ನ ಮಾವ ಶಂಕ್ರಪ್ಪನ ಮುಂದೆ ಮಾತ್ರ ಹೇಳಿರುವದಿತ್ತು. ಬೇರೆ ಯಾರ ಮುಂದೆಯೂ ಹೇಳದಿರುವಂತೆ ಶಂಕ್ರಪ್ಪನೇ ಆಕೆಗೆ ತಿಳಿಸಿದ್ದ. ಕಸ್ತೂರಿಗೆ ಒಳಗಿನ ಸಂಬಂಧದಲ್ಲಿಯೇ ಒಬ್ಬ ಹುಡುಗನಿದ್ದಾನೆ ಆ ಹುಡುಗ ತನ್ನ ಮಗನಿಗಿಂತಲೂ ನೂರು ಪಾಲು ಉತ್ತಮ ಎನ್ನುವದನ್ನು ಶಂಕ್ರಪ್ಪ ಹೇಳಿರಲಿಲ್ಲ. ಕಸ್ತೂರಿಗಂತೂ ತನ್ನ ಮದುವೆಗಿಂತಲೂ ಮುಖ್ಯವಾಗಿ ತಾನು ಏನಾದರೂ ಮಹತ್ತರವಾದುದನ್ನು ಸಾಧಿಸಬೇಕು ಎನ್ನುವ ಹಟವಿತ್ತು. ಪ್ರತಿ ವರ್ಷವೂ ಆಕೆ ಫ಼ಸ್ಟ್ ಕ್ಲಾಸಲಿಯೇ ತೇರ್ಗಡೆಯಾಗುತ್ತಾ ನಡೆದಳು. ಕಸ್ತೂರಿ ಮನೆಯಲ್ಲಿ ತನಗೆ ಒಪ್ಪಿಸುವ ಎಲ್ಲ ಕೆಲಸಗಳನ್ನು ಅತ್ಯಂತ ಚಮಕತನದಿಂದ ಮಾಡುತ್ತಿದ್ದಳು. ರಾತ್ರಿ ಎಲ್ಲರ ಊಟ ಮುಗಿದಾದ ಮೇಲೆಯೂ ಆಕೆ ಎಲ್ಲ ಪಾತ್ರೆಗಳನ್ನು ತೊಳೆದು ಮಲಗುತ್ತಿದ್ದಳು. ಬೆಳಿಗ್ಗೆ ಮತ್ತೆ ಎಲ್ಲರಿಗಿಂತಲೂ ಮುಂಚೆಯೇ ಎದ್ದು ವತ್ತಲಿಗೆ ಪುಟು ಹಾಕಿ ಓದುತ್ತಾ ಕೂಡುವ ಕಸ್ತೂರಿ ಬಗ್ಗೆ ಶಂಕ್ರಪ್ಪನಿಗೆ ತೀರಾ ಅಕ್ಕರೆ. ’ಇಷ್ಟು ಬೇಗ ಯಾಕವ್ವಾ ಏಳ್ತಿ..? ಇನ್ನೂ ನಸುಕೈತಿ ಮಲಕೊಬಾರದಾ.’ ಎಂದರೆ ’ಮಾವಾ ಇಡೀ ಜೀವನದಲ್ಲಿ ಅರ್ಧ ಭಾಗ ಬರೀ ನಿದ್ದೆಯಲ್ಲೇ ಹೋಗತೈತಿ. ಇನ್ನಿರೋ ಅರ್ಧ ಭಾಗದೊಳಗ ನಮ್ಮ ಎಲ್ಲಾ ಚಟುವಟಿಕೆ ನಡೀಬೇಕು,’ ಅಂದಾಗ ತನ್ನ ಸೊಸಿ ಹೇಳೂದು ಖರೆ ಐತಿ ಅನಿಸಿ ಕೈಯಲ್ಲಿ ತಂಬಗಿ ಹಿಡದು ಬಯಲಕಡೆಗೆ ನಡೆದಿದ್ದ. ಶಂಕ್ರಪ್ಪಗೂ ತನ್ನ ಮೊಮ್ಮಗ ಸಂಗಮೇಶಗೆ ಕಸ್ತೂರಿ ಚುಲೋ ಜೋಡಿ ಆಗ್ತಿತ್ತು. ಕಿವಿ ಹಿಂಡಿ ಅವನ್ನ ದಾರಿಗಿ ತರತಿದ್ದಳು. ಆದರ ಏನು ಮಾಡೋದು ಕಸ್ತೂರಿನ್ನ ಕರಕೊಂಡು ಬರಾಕ ಇಂಗಳಗಿಗೆ ಹೋದಾಗ ಮುದುಕಿ ಶಾವಂತ್ರವ್ವ ಗಂಗಾಬಾಯಿ ಮತ್ತ ಅಕಿ ಮಗ ರಾಜಶೇಖರನ ಕತಿ ಹೇಳಿದ್ದಳು. ಕಸ್ತೂರಿಯಂಥಾ ಹುಡುಗಿಗೆ ಆ ಹುಡುಗನೇ ಚುಲೋ. ಈಗಾಗಲೇ ಅಂವಾ ನೌಕರಿ ಮಾಡಾಕತ್ತಾನ ಇಂದಲ್ಲಾ ನಾಳೆ ಇಕಿಗೂ ನೌಕರಿ ಹತ್ತೂದು ಗ್ಯಾರಂಟಿ ಆಗ ಇವರ ಮುಂದ ಯಾರು..? ಎಂದೆಲ್ಲಾ ಯೋಚನೆ ಮಾಡತಾ ಶಂಕ್ರಪ್ಪ ನಡದಿದ್ದ. ಹಿಂದಿನ ರಾತ್ರಿ ಹೆಂಡತಿ ಶಂಕ್ರವ್ವ ಎತ್ತಿದ್ದ ಪ್ರಶ್ನೆ ಹಂಗೇ ಉಳದಿತ್ತು. ಅಕಿ ಬಿಡೂ ಪೈಕಿ ಅಲ್ಲ ಮತ್ತ ಆ ಪ್ರಶ್ನೆ ಎತ್ತೇ ಎತ್ತತಾಳ ಅವಾಗ ಎಲ್ಲಾ ಹೇಳಿಬಿಡಬೇಕು ಇಲ್ಲಾಂದ್ರ ಸುಳ್ಳೆ ನಾಳೆ ಜಗಳಾ ತಕ್ಕೊಂಡು ಕೂಡ್ತಾಳ. ತಂಗಿ ಶಾರದಾಬಾಯಿ ಬಾಳ ಚುಲೊ ಹೆಣಮಗಳು. ಅಕಿ ನಸೀಬದೊಳಗ ಇದಿ ಅದ್ಯಾಕೋ ಕೆಟ್ಟದ್ದು ಬರದು ಆಟ ಆಡಸ್ತು. ಯಾರಿಗೂ ಒಂದೇ ಒಂದಿನ ಕೆಟ್ಟದ್ದು ಬಯಸದವಳಲ್ಲ..ಲಗ್ನಕಿಂತಾ ಮೊದಲೂ ತನಗ ಇಂಥಾದು ಬೇಕು ಅಂತ ಬಯಸದವಳಲ್ಲ. ಅಂಥಾ ಹೆಣಮಗಳಿಗೆ ಲಕ್ವಾ ಹೊಡಿಯೂದಂದ್ರ ಹ್ಯಾಂಗ..? ಆ ದೇವರು ಅನ್ನವರೇ ಎಟ್ಟು ಕಠೋರ ಅದಾನ ಅಂತೆಲ್ಲಾ ಬಯಲುಕಡಿಗೆ ಕುಳಿತಲ್ಲೇ ಯೋಚನೆ ಮಾಡೂ ವ್ಯಾಳೆದೊಳಗ ಇದ್ದಕ್ಕಿದ್ದಂಗ ಎದಿಯೊಳಗ ಏನೋ ಚುಚ್ಚದಂದಾಗಿ ಶಂಕ್ರಪ್ಪ ಅಲ್ಲೇ ಉರುಳಿಬಿದ್ದಿದ್ದ. ಅವನ ಜೀವ ಅಲ್ಲೇ ಬಯಲಾಗಿತ್ತು.

ಆ ದಿವಸ ಮನಿಯೊಳಗ ಹತ್ತಾರು ಮಂದಿ ನೆರೆದಿದ್ದರು. ಚನಬಸು ಇನ್ನೂ ಅಂಗಡಿ ಬಾಗಿಲ ತಗದಿರಲಿಲ್ಲ. ಇಂಗಳಗಿಯಿಂದ ಕಸ್ತೂರಿಯ ಅಜ್ಜಿ ಶಾವಂತ್ರವ್ವ ಬಂದಿದ್ದಳು. ಸಾಲವಡಗಿಯಿಂದ ಶಿವಮ್ಮಳ ತಮ್ಮ ಸಿದ್ದಪ್ಪನೂ ಬಂದಿದ್ದ. ಕಸ್ತೂರಿ ಕಂಬದ ಮರಿಗೆ ನಿಂತಗೊಂಡಿದ್ದಳು. ಸಂಗಮೇಶ ಅಲ್ಲೇ ಜೋಳದ ಚೀಲದ ಮ್ಯಾಲ ಕುತಗೊಂಡಿದ್ದ. ಶಾವಂತ್ರವ್ವ ಶಿವಮ್ಮ ಇದರಾಬದರ ಕುತಗೊಂಡು ಮಾತಾಡಾಕ ಸುರು ಮಾಡದರು. ’ನೋಡವಾ ಯಕ್ಕಾ, ಕಸ್ತೂರಿ ನಿನಗ ಹ್ಯಾಂಗ ಮೊಮ್ಮಗಳೊ ನನಗೂ ಹಂಗೇ.. ಅವರಿಗಂತೂ ಅಕಿ ಮ್ಯಾಲ ಬಾಳ ಕಾಳಜಿ ಇತ್ತು. ಅದಕ್ಕೇ ಅವರು ಮತ್ತ ಮತ್ತ ಅಕಿ ನಮ್ಮ ಮನಿ ಸೊಸಿ ಆದರ ಚುಲೊ ಆಗತೈತಿ ಅಂತ ಬಾಳ ಸೇರಿ ಹೇಳಿದೈತಿ. ಈಗ ಅನಾಯಸ ನೀನೂ ಬಂದೀದಿ ಮನಿಗಿ ಹಿರಿ ಮನುಷ್ಯಾಳು ಬ್ಯಾರೆ, ನಮ್ಮ ಹುಡುಗ ಸಂಗಮೇಶ ಮತ್ತ ಕಸ್ತೂರಿ ಇಬ್ಬರೂ ಕೂಡೇ ಕಲತವರು. ಕಸ್ತೂರಿ ಮ್ಯಾಲ ಅವನೂ ಬಾಳ ಜೀಂವ ಅದಾನ. ಅದಕ್ಕ ಅವನಿಗೆ ಕಸ್ತೂರಿನ್ನ ತಂದುಕೊಂಡ್ರ ಹ್ಯಾಂಗ..?’ ಅಂತ ಕೇಳಿದ್ದೇ ಶಾವಂತ್ರವ್ವ ಮೌನ ಮುರಿಲೇ ಇಲ್ಲ. ಹಿಂದೊಮ್ಮ ಈ ವಿಷಯ ತಗದು ಮಾತಾಡೂ ಮುಂದ ತನ್ನ ಗಂಡನೂ ಹಿಂಗೇ ಗಪ್ ಚುಪ್ ಆಗೇ ಇದ್ದ. ಈಗ ನೋಡದರ ಶಾವಂತ್ರವ್ವನೂ.. ಅಂತ ಯೋಚನೆ ಮಾಡಿ” ನೀ ಮಾತಾಡು.. ಏನರೇ ಹೇಳು, ಹಿಂಗ ಸುಮ್ಮ ಕುಂತರ ಹ್ಯಾಂಗ..?’
’ಅಯ್ಯ ಯಕ್ಕಾ ನಾ ಏನು ಮಾತಾಡ್ಲಿ..? ನಿನ್ನ ಗಂಡ ಏನೂ ಹೇಳಿಲ್ಲನೂ.’
’ಎದರ ಬಗ್ಗೆ’
’ಅದೇ ಕಸ್ತೂರಿ ಲಗ್ನದ ಬಗ್ಗೆ’
’ಇಲ್ಲ.. ಏನೂ ಹೇಳಲಿಲ್ಲ’
’ಅದ್ಯಾಂಗದು..’
’ಇಲ್ಲ ಖರೆನೇ ಏನೂ ಹೇಳಿಲ್ಲ.’
’ತಂಗೀ.. ಕಸ್ತೂರಿನ್ನ ತನ್ನ ತಂಗೀ ಮಗನಿಗೇ ತಂದುಕೊಳ್ಳಬೇಕು ಅಂತ ಕಸ್ತೂರಿ ಅಪ್ಪ ಸಾಯೂ ಮೊದಲೇ ಮಾತಾಗಿತ್ತು. ಕಸ್ತೂರಿ ಅತ್ತಿ ಗಂಗಾಬಾಯಿ ಕಸ್ತೂರಿನ್ನ ಯಾವಾಗಲೋ ತನ್ನ ಮನಿ ಸೊಸಿ ಅಂತ ಒಪಗೊಂಡಾಳ. ಅಕಿ ಅಣ್ಣ ಮುರಗೇಶಪ್ಪಗ ಸಾಯೂ ಮುಂದ ಮಾತು ಕೊಟ್ಟಾಳ. ಆವಾಗ ಕಸ್ತೂರಿ ಇನ್ನೂ ಬಾಳ ಸಣ್ಣದು. ಕಸ್ತೂರಿ ಅವ್ವಗ ಇದೆಲ್ಲಾ ಗೊತ್ತದ ನಿನ್ನ ಗಂಡ ಶಂಕ್ರಪ್ಪನ ಮುಂದೂ ಇದೆಲ್ಲಾ ನಾ ಹೇಳಿದ್ದೆ,’ ಅಂದದ್ದೇ ಶಿವಮ್ಮಳ ಮುಖ ಗಂಟಗಂಟಾಗಿತ್ತು.
’ನನ್ನ ಮ್ಮೊಮ್ಮಗನಿಗೆ ಏನು ಕಡಿಮೆ ಆಗೈತಿ..”
’ಕಡಿಮಿ,..ಹೆಚ್ಚ ಅಂತಲ್ಲ.. ಮಾತು ಕೊಟ್ಟ ಮ್ಯಾಲ ಮುಗೀತು.’ ಶಿವಮ್ಮ ಗರಂ ಆದಳು.’
’ಇಷ್ಟು ದಿವಸ ಹೇಳಾಕ ನಿಮಗೇನಾಗಿತ್ತು..ಧಾಡಿ?’
’ನೀ ಕೇಳಿರಲಿಲ್ಲ..ನಾವು ಹೇಳಿರಲಿಲ್ಲ.
ಚನಬಸು ಅವ್ವನ ಸನ್ಯಾಕ ಬಂದು, ’ಹೋಗಲಿ ಬಿಡವಾ, ಅವರವರ ಋಣಾನುಬಂಧ ಹ್ಯಾಂಗಿರತೈತಿ ಹಂಗಾಗಲಿ.’ ಶಿವಮ್ಮ ಕಸ್ತೂರಿ ಕಡೆ ನೋಡಿ, ’ಇವಳರೇ ಹೇಳಬೇಕಲ್ಲ ಬುಬ್ಬಣಚಾರಿ,’ ಅಂದಾಗ ಶಾವಂತ್ರವ್ವ ಅಜ್ಜಿ, ’ಅಕಿಗ್ಯಾಕ ಎಲ್ಲಾ ಬಿಟ್ಟು ಪಾಪ..!’
’ನೀವು ನೀವು ಖರೆ ಆದ್ರಿ’
’ಯಾಕ ಹಂಗ ಮಾತಾಡ್ತಿ..? ನಿನ್ನ ಮೊಮ್ಮಗ ಏನು ಕುಂಟೊ..ಕುರುಡೊ..?’
’ಅವೆಲ್ಲಾ ಬ್ಯಾಡ..’ ಅಂದಾಗ ಶಾವಂತ್ರವ್ವ ದೊಡ್ದದೊಂದು ನಿಟ್ಟುಸಿರನ್ನು ಬಿಟ್ಟು
’ಆಯ್ತು ನಾ ಇನ್ನ ಬರ್ತೀನಿ, ಸಾಡೆ ಬಾರಾಕ ಒಂದು ಬಸ್ಸೈತಿ,’ ಅಂದಾಗ ಶಿವಮ್ಮ ಅಕಿಗೆ ಹುಂ… ನೂ ಅನಲಿಲ್ಲ.. ಹಾಂ.. ನೂ ಅನಲಿಲ್ಲ. ಶಾವಂತ್ರವ್ವ ಕಸ್ತೂರಿ ಕಡೆ ನೋಡಿ, ’ಪರೀಕ್ಷೆ ಮುಗಿದದ್ದೇ ಬಂದು ಬಿಡವ. ನಿಮ್ಮವ್ವ ನಿನ್ನನ್ನ ಬಾಳ ನೆನಸತಿರತಾಳ,’ ಅಂದಾಗ ಕಸ್ತೂರಿ ಕಣ್ಣಲ್ಲಿಯ ನೀರು ದಳದಳನೇ ಕೆಳಗಿಳಿದವು. ಶಾವಂತ್ರವ್ವ ಹೊಂಟು ನಿಂತಾಗ, ಮುದುಕಿ ಶಿವಮ್ಮ ’ಹೋಗಿ ಬಾ’ ಅಂತ ಒಂದು ಮಾತ ಸೈತಾ ಆಡಲಿಲ್ಲ. ಕಸ್ತೂರಿಗೆ ಬಾಳ ಕೆಟ್ಟ ಅನಿಸಿತ್ತು. ತನ್ನ ಅಜ್ಜಿಗೆ ಚಾ ಮಾಡಿ ಕೊಡ್ತೀನಿ ಇರು ಅಂತ ಹೇಳೂವಷ್ಟು ಸೈತ ತನಗಿಲ್ಲಿ ಹಕ್ಕಿಲ್ಲ ಅಂತ ಒಳಗೊಳಗ ನೊಂದುಕೊಂಡಳು. ಶಿವಮ್ಮ ಗಂಡ ಸತ್ತು ಇನ್ನೂ ತಿಂಗಳು ಸೈತ ಕಳದಿಲ್ಲ ತನ್ನ ಮೊಮ್ಮಗನ ಲಗ್ನದ ಬಗ್ಗೆ ಯೋಚನೆ ಮಾಡ್ತಿರೋದು ಕಸ್ತೂರಿಗೆ ಅಸಹ್ಯ ಅನಿಸಿತ್ತು. ಮೊಮ್ಮಗ ಸಂಗಮೇಶ ಮತ್ತ ಮತ್ತ ’ನಾ ಅಕಿನ್ನ ಮದುವಿ ಆಗುವಂಗಿಲ್ಲ.. ನನಗ ಒಳಗಿನ ಸಂಬಂಧ ಬೇಕಾಗಿಲ್ಲ,’ ಅಂತ ಕಡ್ಡೀ ಮುರದಂಗ ಹೇಳಿದ ಮ್ಯಾಲೂ ಅಕಿ ಕೇಳಿರಲಿಲ್ಲ. ಒಂದೇ ಹುಡುಗಿ ಚುಲೋ ತೋಟ ಪಟ್ಟಿ ಲಗ್ನ ಆದರ ಸೀದಾ ಬಂದು ಮೊಮ್ಮಗನ ಉಡಿಯೊಳಗೇ ಬೀಳತೈತಿ ಹ್ಯಾಂಗರೆ ಮಾಡಿ ಈ ಸಂಬಂಧ ಮಾಡಬೇಕು ಅಂತ ಜಪ್ಪಿಸಿ ಕಾಯ್ಕೊಂಡು ಕುಂತಿದ್ದಳು. ಯಾವಾಗ ಇಕಿ ತಿಪ್ಪರಲಾಗಾ ಹಾಕದರೂ ಕಸ್ತೂರಿ ಲಗ್ನ ಬ್ಯಾರೆ ಹುಡುಗನ ಜೋಡಿ ನಡಿಯೂದೈತಿ ಅಂತ ಗೊತ್ತಾಯ್ತೋ ಆವಾಗಿಂದ ಶಿವಮ್ಮಳ ಮಾತ ಬಾಳ ಬಿರಸ್ ಆದ್ವು. ಕಸ್ತೂರಿ ಮುಖ ನೋಡಿ ಮಾತಾಡಲಾರದಷ್ಟು ಆಕಿ ಕಠೋರ ಆದಳು. ಕಸ್ತೂರಿಗೂ ಯಾವಾಗ ಪರೀಕ್ಷೆ ಮುಗದಿತ್ತು.. ಯಾವಾಗ ಊರಿಗೆ ಹೋಗ್ತೀನಿ ಅನಿಸಿತ್ತು. ಪರೀಕ್ಷೆ ಇನ್ನೊಂದೆರಡು ದಿನ ಇತ್ತು. ಮನೆಯಲ್ಲಿರೋ ಹಾಸಿಗೆಗಳನ್ನೆಲ್ಲಾ ಗುಡ್ದೆ ಹಾಕಿ ಹೋಗಿ ತೊಳಕೊಂಡು ಬರಲಿಕ್ಕ ಹೇಳಿದಳು. ಹೊತ್ತು ಹೊಂಟರೆ ಪರೀಕ್ಷೆ. ಕಸ್ತೂರಿ ಹೆದರಕೋಂತ ಅಜ್ಜಿ.. ಪರೀಕ್ಷೆ ಮುಗಿದ ದಿನಾನೇ ಎಲ್ಲಾ ಕ್ಲೀನ್ ಮಾಡ್ತೀನಿ ಅಂದಾಗ ’ಬಾಳ ಶಾಣೆ ಆಗಬ್ಯಾಡ ಹೇಳದಷ್ಟು ಕೇಳು’ ಅಂತ ರಂಪಾಟ ಮಾಡಿ ಕ್ಲೀನ್ ಮಾಡಿಸಿದ್ದಳು. ಶಿವಮ್ಮಳಿಗೆ ಕಮ್ಮೀತಕಮ್ಮಿ ಎಪ್ಪತ್ತು ವರ್ಷ. ಈ ವಯಸ್ಸಲ್ಲೂ ಈ ತರಹದ ಕೊಂಕು ಬುದ್ದಿ ಕಂಡು ಕಸ್ತೂರಿಗೆ ಅಚ್ಚರಿ ಎನಿಸಿತ್ತು. ಇನ್ನೇನು ಹೆಚ್ಚಂದರೆ ಹದಿನೈದು ದಿನ, ಸುಮ್ಮನೇ ಯಾಕ ಒಣಾ ಲಿಗಾಡು ಅಂದುಕೊಂಡು ಶಿವಮ್ಮ ಹೇಳೋ ಎಲ್ಲಾ ಕೆಲಸಗಳನ್ನ ಮರು ಮಾತಾಡದೇ ಮಾಡುತ್ತಿದ್ದಳು.

ಅದಾಗಲೇ ನಾಲ್ಕು ಪೇಪರ್ ಮುಗಿದಿದ್ದವು. ಅದು ಕೊನೆಯ ಪೇಪರ್. ಆ ದಿನ ಬೆಳ್ಳಂಬೆಳಿಗ್ಗೆ ಆ ಮನೆಯಲ್ಲಿ ಒಂದು ರಂಪಾಟ ಶುರುವಾಗಿತ್ತು. ’ಮನಿ ಒಳಗಿನವರೇ ಕಳ್ಳರಾದರ ಹ್ಯಾಂಗ ಮಾಡೂದು..? ಅಪ್ಪ ಇಲ್ಲ ಅವ್ವ ಹಾಸಗಿ ಹಿಡದಾಳ ಅಂತ ಓದಾಕ ಕರಕೊಂಡು ಬಂದ್ರ ಇಂಥಾ ಲಪುಟಗಿರಿ ಮಾಡದರ ಏನು ಹೇಳಬೇಕು..? ದುಡ್ಡಲ್ಲ ಎರಡದುಡ್ಡಲ್ಲ. ನಾಕು ತೊಲಿ ಬಂಗಾರದ ಕಾಸಿನ ಸರ ಇಲ್ಲೇ ಇದ್ದದ್ದು ಅದು ಹ್ಯಾಂಗ ಮನಿ ಬಿಟ್ಟು ಓಡಿ ಹೋಗತೈತಿ..? ನನಗ ಗೊತೈತಿ ಅದ್ಯಾರು ತಗೊಂಡಾರ ಅಂತ ನಾ ಹೇಳೋದಕಿಂತ ಮೊದಲೇ ಕೊಟ್ಟರ ಚುಲೋ.. ಇಲ್ಲಾಂದ್ರ ಪೋಲಿಸ್ ಕಂಪ್ಲೇಂಟ್ ಕೊಡಬೇಕಾಗತೈತಿ,’ ಅಂತ ಶಿವಮ್ಮ ಒಂದು ಸವನ ಚೀರಾಡತಿದ್ದಳು. ಸಂಗಮೇಶ, ಕಸ್ತೂರಿ, ಚನಬಸು ಮತ್ತವನ ಹೆಂಡತಿ, ಮಗಳು ಅನಸೂಯಾ, ಸಿದ್ದಪ್ಪನ ಮಗ ರಮೇಶ ಎಲ್ಲರೂ ದಂಗಾಗಿ ನಿಂತಿದ್ದರು. ಶಿವಮ್ಮಜ್ಜಿ ಯಾರನ್ನ ಟಾರ್ಗೆಟ್ ಆಗಿ ಮಾತಾಡಾಕತ್ತಾಳ ಅಂತ ಎಲ್ಲರಿಗೂ ಗೊತ್ತಿತ್ತು. ಚನಬಸು ’ಅವ್ವಾ ನೀ ನೋಡಿದ್ದರ ಮಾತಾಡು ಸುಮ್ಮನೇ ಆರೋಪ ಬ್ಯಾಡ.’ ಎಂದ.
’ಆರೋಪ ಯಾಕೋ.. ಇಲ್ಲಿ ನಿಂತಾಳಲ್ಲ ಮಳ್ಳೀಯಂಗ ಇಕಿನೇ ಕದ್ದಿದ್ದು.’
’ಅಕಿನೇ ಅಂತ ಹ್ಯಾಂಗ ಹೇಳ್ತಿ?’
’ಪರೀಕ್ಷೆ ಮುಗದು ಊರಿಗೆ ಹೊಂಟವರು ಯಾರು..?’
ಸಂಗಮೇಶ, ’ಅಜ್ಜಿ ಸುಮ್ ಸುಮ್ನೇ ಏನೇನೋ ಮಾತಾಡಬ್ಯಾಡ.’ ಎಂದ.
’ಯಾಕ ಮಾತಾಡಬಾರದು.? ಹಂಗಿದ್ದರ ನನ್ನ ಕಾಸಿನ ಸರ ಎಲ್ಲಿ ಹೋಯ್ತು..?’
’ನಮಗೇನು ಗೊತ್ತು..’
’ನನಗ ಗೊತೈತಿ ಅಕಿನೇ.. ಆ ಕಚ್ಚವ್ವನೇ ತಗೊಂಡಾಳ ಅದ್ಕೇ ಹಂಗ ಗುಮ್ಮನ ಗುಸಕ್ ನಿಂತಂಗ ನಿಂತಾಳ.’

ಕಸ್ತೂರಿ ಒಳಗೊಳಗೆ ತಾಪ ಆದರೂ ಮೌನ ಮುರಿಲಾರದೇ ನಿಂತಿದ್ದಳು. ಮುದುಕಿ ಶಿವಮ್ಮ ಕಸ್ತೂರಿ ಅಳು ನುಂಗಿ ನಿಂತದ್ದನ್ನ ನೋಡಿ ಮತ್ತ ಬೈಯಾಕ ಸುರು ಮಾಡಿದ್ದಳು.
’ನಮ್ಮ ಮನಿಯೊಳಗ ಬೇಕು ಬೇಕಾದ್ದು, ಬೇಕು ಬೇಕಾದಲ್ಲಿ ಬಿದಿರತೈತಿ, ಯಾರೂ ಮುಟ್ಟೂದಿಲ್ಲ. ಇಲ್ಲೀಮಟ ಒಂದೇ ಒಂದು ರೂಪಾಯಿ ಕಳುವಾಗಿದ್ದಿಲ್ಲ. ಇವತ್ತ ಲಕ್ಷ ರೂಪಾಯಿದು ಕಾಸಿನ ಸರ ಹಡಪ್ಯಾರಂದ್ರ ಹೊಟ್ಟಿ ಉರಿಯೂದಿಲ್ಲನೂ..? ಯಾರದರೇ ಮನಿ ನುಂಗವರು ಸೂಳೇರು.. ಹಳಾ ಸೂಳೇರು.’

ಇಕಿ ಬೈಯೂದು ಕೇಳಿ ಕೋಲಿಯೊಳಗಿರೋ ಶಿವಮ್ಮಳ ತಮ್ಮನ ಮಗ ರಮೇಶ ಹಲ್ಲು ಕಿಸಿತಿದ್ದ. ಇಷ್ಟು ಮಂದಿ ಮುಂದ ಕದಿಲಾರದೇ ಕವಕವ ಅಂತ ಅನಸಕೊಂಡು ಸುಮ್ಮ ನಿಂತಿರೋ ಕಸ್ತೂರಿನ್ನ ಬೇಕಂತಲೇ ಕೆದಕಿ ’ಸುಮ್ಮ ಅದನ್ನ ಎಲ್ಲಿಟ್ಟಿದಿ ಕೊಟ್ಟಿ ಚುಲೊ.. ಇಲ್ಲಾಂದ್ರ ಪೋಲಿಸರಿಗೇ ಕೊಡ್ತೀನಿ,’ ಅಂದಾಗ ಕಸ್ತೂರಿ ಹೆದರಿಬಿಟ್ಟಳು.
’ದೇವರ ಮೇಲೆ ಆಣೆ ಮಾಡಿ ಹೇಳ್ತೀನಿ.’
’ಆ ಆಣಿ ಗೀಣಿ ಬ್ಯಾಡ, ಮೊದಲ ಆ ಕಾಸಿನ ಸರ ಕೊಡು.’
’ನನಗ ಗೊತ್ತಿಲ್ಲ.. ನಾ ತಗೊಂಡಿಲ್ಲ.’
’ತಗೊಂಡವರು ಯಾರರೇ ತಗೊಂಡೀನಿ ಅಂತಾರಾ..?’
’ನನ್ನ ಬ್ಯಾಗ ಚೆಕ್ ಮಾಡ್ರಿ.’
’ಅದೆಲ್ಲಾ ಬೇಕಾಗಿಲ್ಲ, ನಿನ್ನ ಲಗೇಜ್ ಪ್ಯಾಕ್ ಮಾಡ್ಕೊ, ನೀ ಇಲ್ಲಿರುದು ಬ್ಯಾಡ ನಡಿ ನಿಮ್ಮ ಊರಿಗಿ,’ ಅಂದಾಗ ಸಂಗಮೇಶ
’ಅಜ್ಜೀ ನಾಳೆ ಒಂದು ದಿನ ಲಾಸ್ಟ್ ಪೇಪರ್.’
’ಅದೆಲ್ಲಾ ಬ್ಯಾಡ ಮತ್ತ ನಾ ಪೋಲಿಸರಿಗೆ ಕರಿಯುವಂಗ ಆಗಬಾರದು ಹೋಗಲಿ ಪೀಡಾ.. ಒಂದು ಸರ ಹೋಯ್ತು ಅಷ್ಟೇ.’

ಕಸ್ತೂರಿಗೆ ತಾನು ಕಳ್ಳಿ ಅನ್ನುವ ಬಿರುದು ಹೊತಗೊಂಡು ಈ ಮನಿಯಿಂದ ಹೊರಬೀಳಬೇಕಾಯ್ತಲ್ಲ..! ಅನ್ನೋ ನೋವಿತ್ತು. ತನ್ನ ಬಟ್ಟೆ ಬರೆ, ಪುಸ್ತಕ ಎಲ್ಲವನ್ನು ತಂದು ಶಿವಮ್ಮಳ ಎದುರಲ್ಲಿಯೇ ಒಂದೊಂದಾಗಿ ಝಾಡಿಸಿ, ತನ್ನ ಬ್ಯಾಗಲ್ಲಿಟ್ಟುಕೊಂಡು ಕಣ್ಣೀರು ಸುರಿಸುತ್ತಲೇ ಮೆಲ್ಲಗೆ ನಡೆದಳು. ಹೊರಳಿ ಅಲ್ಲಿರುವ ಎಲ್ಲರನ್ನು ಒಂದು ಸಾರಿ ಗಮನಿಸಿದಳು. ಅವರೆಲ್ಲರೂ ಕಲ್ಲಿನ ಗೊಂಬೆಯಂತಾಗಿದ್ದರು. ಆಕೆ ಹೊಸ್ತಿಲು ದಾಟುತ್ತಿರುವಂತೆ ಶಿವಮ್ಮಳ ತಮ್ಮನ ಮಗ ರಮೇಶ ದೇವರ ಕೊಣೆಯಿಂದ ಹಲ್ಲುಕಿಸಿಯುತ್ತ ಹೊರಬಂದ. ಶಿವಮ್ಮಜ್ಜಿ ಅವನ ನಗುವನ್ನು ಕಂಡು ಗಡಬಡಿಸಿ ಕಣ್ಣು ಚಿವುಟುತ್ತಿದ್ದಳು. ಆ ಕಣ್ಣು ಮುಚ್ಚಾಲೆಯ ಆಟ ಉಳಿದವರ ಪಾಲಿಗೆ ನಿಗೂಢವಾಗಿತ್ತು.

ಇಲ್ಲಿ ನಂಬಿಕೆಗಳೇ ಕಾನೂನು.

-ಡಾ. ಸಿದ್ದಲಿಂಗಯ್ಯ.

ಈಗ ನಾವು ನಡೆಸುತ್ತಿರುವ ಸಾಮಾಜಿಕ ನ್ಯಾಯದ ಚಿಂತನೆಗೆ ಶತಮಾನಗಳ ಇತಿಹಾಸವಿದೆ. ಆಧುನಿಕ ಕಾಲದಲ್ಲಿ ಈ ಚಿಂತನೆಗೆ ಒಂದಿಷ್ಟು ಬಲ, ವ್ಯಾಪಕತೆ ಬಂದಿದ್ದರೂ ಅದು ಸಣ್ಣ ಪ್ರಮಾಣದ ಕೆಲವು ಗುಂಪುಗಳಲ್ಲಿ ಮಾತ್ರ ಉಳಿದಿದೆ. ಕೆಲವು ಸಲ ಈ ಚಿಂತನಾ ಕ್ರಮ ಗೌಣವಾಗಿದ್ದೂ ಉಂಟು. ದಲಿತರು ಹಾಗೂ ಮೇಲ್ವರ್ಗದವರ ನಡುವಿನ ಅಂತರ ಸುಮಾರು 64 ಅಡಿ ಎಂದು ಶಾಸ್ತ್ರಗಳು ಹೇಳುತ್ತವೆ. ಬದಲಾಗಿರುವ ಇವತ್ತಿನ ಚಿಂತನಾ ಕ್ರಮದ ಪರಿಣಾಮದಿಂದ ದಲಿತರು ಮೇಲ್ವರ್ಗದವರ ಎದುರು ಹೆಚ್ಚೆಂದರೆ ಒಂದು ಅಡಿ ಸಮೀಪ ಬಂದಿರಬೇಕು, ಅಷ್ಟೇ. ಇವತ್ತಿನ ಸಾಮಾಜಿಕ ಸಂದರ್ಭದಲ್ಲಿ ದಲಿತರು ಮತ್ತು ಮೇಲ್ವರ್ಗದವರ ನಡುವೆ ದೈಹಿಕ ಅಂತರ ಕಡಿಮೆಯಾಗಿ ಮಾನಸಿಕ ಅಂತರ ಹೆಚ್ಚಾಗಿದೆ. ನಮ್ಮ ಪುರಾತನ ಸಾಮಾಜಿಕ ವ್ಯವಸ್ಥೆ ನ್ಯಾಯ ತೀರ್ಮಾನಗಳನ್ನು ಮಾಡುವಾಗ ಯಾರನ್ನು ದೂರ ಇಟ್ಟಿತ್ತೋ, ಈಗ ಅದೇ ವರ್ಗದ ಜನರು ದೇಶದ  ಸರ್ವೊಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಸ್ಥಾನದಲ್ಲಿ ಕೂತದ್ದು ಚರಿತ್ರೆಯ ಸೋಜಿಗ. ಈ ನೆಲದ  ಪೂರ್ವಿಕರು ಸಂಬಂಧದಿಂದ ಸಮಾಜದ ಕಟ್ಟಕಡೆಯ ಮನುಷ್ಯರಾಗಿ ನಿಲ್ಲಬೇಕಾಗಿತ್ತು. ಹಾಗೆ ದೂರ ನಿಂತ ವ್ಯಕ್ತಿಯೇ ಭಾರತದ ಮೊದಲ ಪ್ರಜೆಯಾಗಿದ್ದು ಕೂಡ ಚರಿತ್ರೆಯ ಸೋಜಿಗ.

1856ರ ಜೂನ್ ತಿಂಗಳಿನಲ್ಲಿ ಮುಂಬಯಿ ಕರ್ನಾಟಕ ಪ್ರಾಂತ್ಯಕ್ಕೆ ಸೇರಿದ ಧಾರವಾಡದ ಒಬ್ಬ ದಲಿತ ವಿದ್ಯಾರ್ಥಿ ಸರ್ಕಾರಿ ಶಾಲೆಯೊಂದರಲ್ಲಿ ಸೀಟು ಬೇಕೆಂದು ಅರ್ಜಿ ಸಲ್ಲಿಸಿದ. ಇದು ದೇಶಾದ್ಯಂತ ಕೋಲಾಹಲಕ್ಕೆ ಕಾರಣವಾಯಿತು. ಭವಿಷ್ಯದಲ್ಲಿ ಸಮಾಜ ನಮ್ಮನ್ನು ಗುರುತಿಸಬೇಕು, ಗೌರವಿಸಬೇಕು, ಅಮಾನವೀಯವಾಗಿ ನಡೆಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂಬ ಅಂತರಂಗದ ಹಂಬಲಕ್ಕೆ ಈ ಅರ್ಜಿ ಸಾಕ್ಷಿಯಾಯಿತು. ಇದಾದ 80 ವರ್ಷಗಳ ನಂತರ 1936 ರ ಅಕ್ಟೋಬರ್‌‌‌‌‌‌‌ನಲ್ಲಿ, ಮೈಸೂರು ದಾರ್ಬಾರ್‌‌‌‌‌‌‌ನಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಪ್ರವೇಶ ನೀಡಿ ಗೌರವಿಸಲಾಯಿತು. ಮೈಸೂರು ಅರಮನೆ ದಲಿತ ವ್ಯಕ್ತಿಯೊಬ್ಬರಿಗೆ ಪ್ರವೇಶ ನೀಡಿ ಗೌರವಿಸಿದ್ದನ್ನು ಕಂಡು ಬ್ರಿಟಾನಿಯಾ ವಿಶ್ವಕೋಶ ಇದೊಂದು ಕ್ರಾಂತಿಕಾರಕ ಕ್ರಮ ಎಂದು ಶ್ಲಾಘಿಸಿ ಬರೆದಿತ್ತು.

ಊರಿನ ಅಂಚಿನಲ್ಲಿದ್ದ ಶೋಷಿತ ವರ್ಗದವರು ಅನೇಕ ಸಂದರ್ಭಗಳಲ್ಲಿ ಊರಿನ ನಡುವೆ ಬಂದಿರುವುದು ನಮ್ಮೆಲ್ಲರ ಗಮನದಲ್ಲಿದೆ. ಇದಕ್ಕೆ ಕಾರಣ ಸಾಮಾಜಿಕ ವ್ಯವಸ್ಥೆಯ ಉದಾರವಾದಿ ಧೋರಣೆ. ಬುದ್ಧ, ಬಸವಣ್ಣ, ಗೋಪಾಲಸ್ವಾಮಿ ಅಯ್ಯರ್, ಕಾಕಾ ಕಾರ್ಕಾನಿಸ್, ಕುದ್ಮುಲ್ ರಂಗರಾಯರಂತಹ ವ್ಯಕ್ತಿಗಳಿಂದ ಹಿಡಿದು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಗಾಂಧೀಜಿಯವರ ಹೋರಾಟಗಳು ಕೂಡ ದಲಿತರ ವಿಮೋಚನೆಗೆ ಕಾರಣವಾಗಿವೆ. ಅಸ್ಪೃಷ್ಯತೆ ನಿಷೇಧ ಕಾಯ್ದೆ ಸಂಸತ್ತಿನಲ್ಲಿ ಪಾಸಾದ ಸಂದರ್ಭದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ರವರು ಸಂವಿಧಾನ ಕರ್ತೃಗಳಾಗಿ ಅಲ್ಲಿ ಇದ್ದರೂ ಕೂಡ, ನೆರದಿದ್ದ ಜನ ‘ಮಹಾತ್ಮ ಗಾಂಧೀಜಿಗೆ ಜಯವಾಗಲಿ’ ಎಂದು ಹೇಳಿದರು. ಬಾಬಾಸಾಹೇಬ್ ಅಂಬೇಡ್ಕರ್‌ರವರ ಸಂಘರ್ಷ, ಗಾಂಧೀಜಿಯವರ ದಲಿತಪರ ಧೋರಣೆ ಇಂಥದ್ದೊಂದು ಕಾಯ್ದೆ ಜಾರಿಯಾಗಲು ಸಾಧ್ಯವಾಗಿಸಿತೆಂಬುದನ್ನು ನಾವು ಗಮನಿಸಬೇಕು.

ನಾಲ್ಕೈದು ವರ್ಷಗಳ ಹಿಂದೆ ಚಿತ್ರದುರ್ಗದ ಗ್ರಾಮವೊಂದರ ಊರ ಹಬ್ಬದ ರಥೋತ್ಸವದ ಕಾರ್ಯಕ್ರಮ ನಡೆಯುತ್ತಿದ್ದಾಗ ಅಚಾತುರ್ಯದಿಂದ ರಥದ ಮೇಲಿನಿಂದ ಕೆಲ ಜನರು ಕೆಳಗೆ ಬಿದ್ದರು. ಅವರನ್ನು ತಕ್ಷಣವೇ ಕೆಳಗಿದ್ದ ಜನ ಹೊತ್ತೊಯ್ದು ಆಸ್ಪತ್ರೆಗೆ ಸೇರಿಸಿದರು. ಕೆಳಗೆ ಬಿದ್ದ ತಮ್ಮನ್ನು ಮುಟ್ಟಿ ಆಸ್ಪತ್ರೆಗೆ ಸೇರಿಸಿದ್ದು ದಲಿತರು ಎಂದು ತಿಳಿದ ಗಾಯಗೊಂಡ ಮೇಲ್ವರ್ಗದವರು ದಲಿತರ ಮೇಲೆ ಹಲ್ಲೆ ಮಾಡಲು ಮುಂದಾದರು. ಹಾಗೆ ದಲಿತರನ್ನು ಮುಟ್ಟಿಸಿಕೊಳ್ಳುವುದಕ್ಕಿಂತ ಪರಲೋಕವೇ ವಾಸಿ ಎಂದು ಅವರು ಏಕೆ ಭಾವಿಸಿಕೊಂಡರೋ?. ಇದು ನನ್ನನ್ನು ಬಹುಕಾಲ ಕಾಡಿತು. ಇಂತಹ ಮೇಲ್ವರ್ಗದ ಜನರಿಗೆ ತಗುಲಿರುವ ಮೌಢ್ಯದಿಂದ ಹೊರತರಲು ಮಾನವೀಯ ಶಿಕ್ಷಣದ ಹೊರತು ಬೇರಾವ ಶಿಕ್ಷಣದಿಂದಲೂ ಸಾಧ್ಯವಿಲ್ಲವೆನಿಸಿತು.

26.06.2004 ರಂದು ಪಿ.ಟಿ.ಐ. ಒಂದು ಘಟನೆಯನ್ನು ವರದಿ ಮಾಡಿತು. ತಮಿಳುನಾಡಿನ ಕುಂಭಕೋಣಂನ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ದಲಿತರು ಗಂಡುನಾಯಿಗಳನ್ನು ಸಾಕಬಾರದು ಎಂಬ ನಿಯಮವನ್ನು ಮೇಲ್ಜಾತಿಯ ಜನ ಮಾಡಿದರಂತೆ. ದಲಿತರ ಗಂಡುನಾಯಿ ಆಕಸ್ಮಾತ್ ಮೇಲ್ವರ್ಗದವರ ಹೆಣ್ಣು ನಾಯಿಯ ಸಂಪರ್ಕಕ್ಕೆ ಬಂದು ವರ್ಣಸಂಕರವಾಗಿ ಏನಾದರೂ ಅಪಾಯವಾಗಬಹುದು ಎಂದು ಆ ನಿಯಮ ಮಾಡಿದರಂತೆ. ಇದರ ಫಲವಾಗಿ ದಲಿತರು ಗಂಡುನಾಯಿ ಸಾಕಬಾರದು ಎಂಬ ನಿಯಮ ಅಲ್ಲಿ ಜಾರಿಗೆ ಬಂತು. ಈ ಬಗೆಯ ಮೌಢ್ಯದ ಪರಮಾವಧಿಯನ್ನು ಎದುರಿಸುವುದಾದರೂ ಹೇಗೆ? ಶತಮಾನಗಳಿಂದ ಉಳಿದುಕೊಂಡು ಬಂದಿರುವ ಈ ತರಹದ ಜಡ್ಡುಗಟ್ಟಿದ ನಂಬಿಕೆಗಳನ್ನು ಪ್ರಶ್ನೆ ಮಾಡಿದರೆ ಸಂಘರ್ಷಕ್ಕೆ ದಾರಿಯಾಗುತ್ತದೆ, ಸಾವುನೋವುಗಳಿಗೂ ಕಾರಣವಾಗುತ್ತದೆ.

ಮತ್ತೊಂದು ಘಟನೆ ಕುರಿತು ಹೇಳುವೆ: ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಅರಳಾಳು ಎನ್ನುವ ಗ್ರಾಮದ 30 ಜನ ದಲಿತರನ್ನು ಒಂದು ತಿಂಗಳ ಮಟ್ಟಿಗೆ ಸೆಂಟ್ರಲ್ ಜೈಲಿನಲ್ಲಿ ಇಡಲಾಗಿತ್ತು. ಆ ಮೂವತ್ತು ಮಂದಿಯಲ್ಲಿ ಹೆಂಗಸರು, ಮಕ್ಕಳು, ವೃದ್ಧರು ಎಲ್ಲರೂ ಇದ್ದರು. ದಲಿತರನ್ನು ಜೈಲಿನಲ್ಲಿ ಇಟ್ಟಿರುವುದರ ಕುರಿತು ಅಲ್ಲಿನ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅವರು ಕೊಟ್ಟ ಉತ್ತರ ಹೀಗಿತ್ತು: ‘ಈ ಗ್ರಾಮದ ದಲಿತರ ಮೇಲೆ ಇಲ್ಲಿನ ಬಲಾಢ್ಯರಿಂದ ಹಲ್ಲೆಯಾಗುವ ಸಂಭವವಿದೆ. ಇವರಿಗೆ ರಕ್ಷಣೆ ಕೊಡಬೇಕಾದರೆ ಸೆಂಟ್ರಲ್ ಜೈಲೇ ಸೂಕ್ತವಾದ ಸ್ಥಳ, ಹೀಗಾಗಿ ಅವರನ್ನೆಲ್ಲಾ ಸೆಂಟ್ರಲ್ ಜೈಲಿನಲ್ಲಿ ಇಟ್ಟಿದ್ದೇವೆ.’ ಆ ಅಧಿಕಾರಿಗೆ ಏಕೆ ಈ ಭಾವನೆ ಬಂತೋ ಗೊತ್ತಿಲ್ಲ. ಬಹುಶಃ  ಅಧಿಕಾರಿಯಲ್ಲಿದ್ದ ಅತ್ಯುತ್ಸಾಹ, ಜೊತೆಗೆ ದಲಿತರನ್ನು ಸವರ್ಣೇಯರ ಹಲ್ಲೆಗಳಿಂದ ರಕ್ಷಿಸಲು ಬೇರಾವ ದಾರಿಗಳಿಲ್ಲವೆಂಬ ನಂಬಿಕೆ ಸೆಂಟ್ರಲ್ ಜೈಲೇ ವಾಸಿಯೆಂದು ಆಯ್ಕೆ ಮಾಡಿಕೊಂಡಿರಲು ಕಾರಣವಾಗಿರಬಹುದೇನೋ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಜಲು ಪದ್ಧತಿ ಈಗಲೂ ಜೀವಂತವಾಗಿದೆ. ಕೊರಗ ಜನಾಂಗದವರು ಮೇಲ್ವರ್ಗದ ರೋಗಪೀಡಿತ ವ್ಯಕ್ತಿಗಳ  ಉಗುರು ಮತ್ತು ಕೂದಲುಗಳನ್ನು ಅನ್ನದಲ್ಲಿ ಕಲಸಿ ತಿಂದರೆ ಅವರ ಕಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆ ಈ ಪದ್ಧತಿಯ ಹಿಂದಿದೆ. ಜಗತ್ತಿನಲ್ಲಿ ಇದಕ್ಕಿಂತಲೂ ಅಮಾನವೀಯವಾದ ಪದ್ಧತಿ ಇನ್ನೊಂದು ಇರಲಿಕ್ಕಿಲ್ಲ. ಜಾತ್ರೆಗಳಲ್ಲಿ ಜೀವದ ಹಂಗುತೊರೆದು ಅಪಾಯಕಾರಿ ಸಿಡಿಮದ್ದನ್ನು ಸಿಡಿಸುವುದು ಈ ಜನಾಂಗದವರ ಕೆಲಸವೇ. ನಾನು ವಿಧಾನ ಪರಿಷತ್ತಿನ ಸದಸ್ಯನಾಗಿದ್ದಾಗ ಈ ಕುರಿತ ಪ್ರಶ್ನೆಯನ್ನು ಸರ್ಕಾರದ ಮುಂದಿಟ್ಟೆ. ಸರ್ಕಾರಕ್ಕೂ ಅಜಲು ಪದ್ಧತಿಯ ಕ್ರೌರ್ಯದ ಬಗ್ಗೆ ಹೆಚ್ಚಿನ ಮಾಹಿತಿಗಳು ಸಿಕ್ಕಿದ್ದವು. ಆಗ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಲಿಖಿತ ರೂಪದಲ್ಲಿ ಉತ್ತರ ಕೊಟ್ಟರು: ‘ಕೊರಗ ಜನಾಂಗದವರಿಗೆ ಈ ಪದ್ಧತಿ ಇಷ್ಟವಿಲ್ಲದಿದ್ದರೆ ನಿಲ್ಲಿಸಬಹುದು.’ ಸರ್ಕಾರ ನೀಡಿದ ಉತ್ತರ ಹೇಗಿದೆಯೆಂದರೆ ಪ್ರಾಣ ರಕ್ಷಣೆಯನ್ನು ಕೇಳಿದ ಒಬ್ಬನಿಗೆ  ‘ನಿನಗೆ ಸಾಯಲು ಇಷ್ಟವಿಲ್ಲದೇ ಇದ್ದರೆ ರಕ್ಷಣೆಯನ್ನು ಕೊಡುತ್ತೇವೆ’ ಎಂದು ಹೇಳಿದಂತಾಯಿತು. ಆದರೆ ಜನಪರ ಚಳವಳಿಗಳ ಹೋರಾಟದಿಂದ ಕೆಲದಿನಗಳಲ್ಲಿಯೇ ಸರ್ಕಾರ ಅಜಲು ಪದ್ಧತಿ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತು.

ಅಮೆರಿಕಾದ ಕಪ್ಪುಜನ ಅನುಭವಿಸಿರುವ ಶೋಷಣೆಗೆ ಹೋಲಿಸಿದರೆ, ಭಾರತದಲ್ಲಿ ಅಸ್ಪೃಶ್ಯರ ಮೇಲೆ ಎಸಗಿರುವ ಶೋಷಣೆ ಹೆಚ್ಚು ಭೀಕರ ಅನ್ನಿಸುತ್ತದೆ. ಕಪ್ಪು ಜನರನ್ನು ತಮ್ಮ ಅಡಿಗೆಯವರನ್ನಾಗಿ ನೇಮಿಸಿಕೊಳ್ಳುವ ಮೂಲಕ ತಮ್ಮ ಅಡಿಗೆ ಮನೆಗಳಿಗೆ ಬಿಟ್ಟುಕೊಂಡ ಅಮೆರಿಕಾದ ಸವರ್ಣೇಯರು ಅಷ್ಟಿಷ್ಟಾದರೂ ಮಾನವೀಯತೆಯನ್ನು ಅಲ್ಲಿನ ಶೋಷಿತರ ಮೇಲೆ ತೋರಿದರು. ಇಲ್ಲಿ ಅಸ್ಪೃಶ್ಯರನ್ನು ಮನೆ, ಮನಸ್ಸು ಎರಡರಿಂದಲೂ ದೂರವಿಡಲಾಗುತ್ತಿದೆ. ಹಳ್ಳಿಯ ಹೋಟೆಲ್‍ಗಳಲ್ಲಿ ಈಗಲೂ ದಲಿತರಿಗೆ ಪ್ರವೇಶ ನೀಡುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ದೇವಸ್ಥಾನದ ಗರ್ಭಗುಡಿಗೆ ದಲಿತರ ಪ್ರವೇಶ ಕನಸಿನಂತೆ ಕಾಣುತ್ತಿದೆ. ಜನಿವಾರ, ಶಿವದಾರಗಳೇ ಈಗ  ದೇವಸ್ಥಾನ ಪ್ರವೇಶದ ಮಾನದಂಡಗಳು. ಬಹಳ ಹಿಂದೆ ಸ್ವಾತಂತ್ರ್ಯಪೂರ್ವದಲ್ಲಿ ಸಿದ್ದಪ್ಪ ಎನ್ನುವ ದಲಿತ ವ್ಯಕ್ತಿಯೊಬ್ಬರು ನಂಜನಗೂಡಿನ ನಂಜುಂಡೇಶ್ವರನ ದರ್ಶನಕ್ಕೆಂದು ಹೋದರು. ಆ ದೇವಸ್ಥಾನದಲ್ಲಿ ಅವರಿಗೆ ಪ್ರವೇಶವನ್ನು ನೀಡಲಿಲ್ಲ. ಅವರು ದೇವಸ್ಥಾನದ ಹೊರಗಡೆ ನಿಂತು ಹೇಳಿದರು: “ನನಗೆ ನಂಜುಂಡೇಶ್ವರನ ದರ್ಶನ ಭಾಗ್ಯವಿಲ್ಲ, ನಂಜುಂಡೇಶ್ವರನಿಗೂ ನನ್ನ ದರ್ಶನ ಭಾಗ್ಯವಿಲ್ಲ.”  ಆ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಯಾವ ಎತ್ತರದಲ್ಲಿ ಕಂಡುಕೊಂಡರು ಎಂಬುದು ಇಲ್ಲಿ ಮುಖ್ಯ. ಈ ತರಹ ಆತ್ಮ ಗೌರವದ ಪರಿಜ್ಞಾನ ದಲಿತರಲ್ಲಿ ಮೂಡಬೇಕಾಗಿದೆ.

ನಾನು ಬಾಲ್ಯದಲ್ಲಿರಬೇಕಾದರೆ ನನ್ನ ತಂದೆ ತಾಯಿ ಬೆಂಗಳೂರಿನ ನಗರ ಭಾಗದ ಮನೆಯೊಂದರಲ್ಲಿ ಕೆಲಸಕ್ಕಿದ್ದರು. ಆ ಮನೆಯ ಗೃಹಪ್ರವೇಶದ ಸಂದರ್ಭದಲ್ಲಿ ಶಾಲೆ ಮುಗಿಸಿಕೊಂಡು ಅಲ್ಲಿಗೆ ಹೋಗಿದ್ದೆ. ನನ್ನ ತಾಯಿ ಹಿಂಬಾಗಿಲ ಮೂಲಕ ಅಲ್ಲಿಗೆ ಬರುವಂತೆ ಸೂಚನೆ ಕೊಟ್ಟಿದ್ದರು. ಮನೆಯ ಹಿಂದೆ ಹಿಂಬಾಗಿಲ ಮೂಲೆಯೊಂದರಲ್ಲಿ ನಾವೆಲ್ಲ ಕೂತು ಊಟ ಮಾಡುತ್ತಿದ್ದಾಗ ಆ ಮನೆಯ ಮಾಲೀಕರು ನಮ್ಮತ್ತ ಬಂದರು. ಅವರು ನಮ್ಮತ್ತ ಬರುವುದನ್ನು ಕಂಡು ನಮ್ಮ ತಾಯಿ ಸ್ವಲ್ಪ ಆತಂಕಗೊಂಡರು, ನಾನು ಕೂಡ ಗೊಂದಲಗೊಂಡೆ. ಅವರು ಬಂದವರೇ ‘ನಿಮ್ಮನ್ನು ಒಳಮನೆಗೆ ಕರೆದು ಊಟ ಮಾಡಿಸಬಹುದಿತ್ತು, ಆದರೆ ಈ ಸಂಪ್ರದಾಯ, ಜಾತಿ ಪದ್ಧತಿ ನನ್ನ ಕೈಗಳನ್ನು ಕಟ್ಟಿಹಾಕಿದೆ. ನಿಮ್ಮನ್ನು ಇಲ್ಲಿ ಕೂರಿಸಿ ಊಟ ಕೊಡುತ್ತಿರುವುದಕ್ಕೆ ನನ್ನನ್ನು ಕ್ಷಮಿಸಿಬಿಡಿ’ ಎಂದು ತುಂಬಾ ದುಃಖಪಟ್ಟರು. ಆ ಅಸಹಾಯಕತೆಯಲ್ಲೂ ಅವರು ನನಗೆ ಮಹಾಮಾನವರಂತೆ ಕಂಡರು. ಆ ವ್ಯಕ್ತಿಯ ಮೇಲೆ ಅಪಾರ ಗೌರವ ಮೂಡಿ ನನಗೆ ಗೊತ್ತಿಲ್ಲದಂತೆ ಕಣ್ಣುಗಳು ಒದ್ದೆಯಾಗಿದ್ದವು. ಒಮ್ಮೆ ಗೆಳೆಯ ಅಗ್ರಹಾರ ಕೃಷ್ಣಮೂರ್ತಿ ಅವರ ಬಂಧುಗಳ ಮನೆಗೆ ಊಟಕ್ಕೆಂದು ನನ್ನನ್ನು ಕರೆದರು. ನಾನು ಜಾತಿಯಲ್ಲಿ ದಲಿತ ಎಂದು ಅಗ್ರಹಾರ ಅವರ ಬಂಧುಗಳಿಗೆ ಮೊದಲೇ ಹೇಳಿ ನಾವಿಬ್ಬರು ಸಂಜೆ ಊಟಕ್ಕೆ ಬರುತ್ತಿದ್ದೇವೆ ಎಂದು ಹೇಳಿದರಂತೆ. ಅವರು ಬಂಧುಗಳು ನೀವೊಬ್ಬರೆ ಬನ್ನಿ, ನಿಮ್ಮ ಸ್ನೇಹಿತರು ಬರುವುದು ಬೇಡ ಎಂದರಂತೆ. ಅಗ್ರಹಾರ ಅವತ್ತಷ್ಟೆ ಅಲ್ಲ ಮತ್ತೆಂದೂ ಅವರ ಬಂಧುಗಳ ಮನೆಗೆ ಕಾಲಿಡಲಿಲ್ಲ ಎಂಬುದು ಗೊತ್ತಾಯಿತು.

ಈ ಮಣ್ಣಿನ ಅಸ್ಪೃಶ್ಯರನ್ನು ನಾಯಿ ನರಿಗಳಿಗಿಂತ ಕೀಳಾಗಿ ಕಂಡಿರುವುದನ್ನು ನಾವು ಇತಿಹಾಸದ ಪಾಠಗಳಲ್ಲಿ ಓದಿದ್ದೇವೆ. ಮನುಸ್ಮೃತಿಯ ಎಲ್ಲ ನಿಯಮಗಳನ್ನು ಜಾರಿಮಾಡಿದ್ದ ಕಾಲದಲ್ಲಿ ಈ ಅಸ್ಪೃಶ್ಯರ ಬದುಕು ಹೇಗಿತ್ತೆಂಬುದನ್ನು ಈ ಕಾಲದಲ್ಲಿ ನಿಂತು ಸುಲಭವಾಗಿ ಊಹಿಸಿಬಹುದು. ತಮ್ಮ ಮುಖ ನೋಡಿದರೆ ಅಶುಭವೆಂದು ತಿಳಿದಿದ್ದ ಸವರ್ಣೇಯರ ಬೀದಿಗಳಿಗೆ ದಲಿತರು ಕಾಲಿಡುವಾಗ ಸೊಂಟಕ್ಕೆ ಪರಕೆ ಕಟ್ಟಿಕೊಂಡು, ಎಂಜಲು ನೆಲಕ್ಕೆ ಬೀಳದಂತೆ ತಡೆಯಲು ಕತ್ತಿಗೆ ಮಡಕೆ ಕಟ್ಟಿಕೊಂಡು ಬರಬೇಕಾಗಿತ್ತು. ಸವರ್ಣೇಯರ ಎಲ್ಲ ಕ್ರೌರ್ಯಗಳಿಗೆ ಸಿಕ್ಕಿ ದಲಿತರು ಒಂದೋ ಆತ್ಮಹತ್ಯೆ ಮಾಡಿಕೊಳ್ಳಬಹುದಿತ್ತು ಇಲ್ಲವೇ ಸಿಡಿದು ತಿರುಗಿ ಬೀಳಬಹುದಿತ್ತು. ಆದರೆ ಅವಮಾನದಲ್ಲಿ ಬೆಂದ ದಲಿತರು ಪ್ರತಿಪುರಾಣ, ಪ್ರತಿಸಂಸ್ಕೃತಿ ಕಟ್ಟುವ ಹೊಸ ಮಾರ್ಗಗಳನ್ನು ಆರಿಸಿಕೊಂಡರು. ಸವರ್ಣೇಯರ ಕ್ರೌರ್ಯಗಳಿಗೆ ಅಂಜದೆ ಗಟ್ಟಿಯಾಗಿ ನಿಂತು ಹೊಸ ಸಾಹಿತ್ಯ ಪರಂಪರೆಗಳನ್ನು ಸೃಷ್ಟಿಸಿದ ದಲಿತರ ಜಾನಪದ ಮಹಾಕಾವ್ಯಗಳನ್ನು ಇವತ್ತಿಗೂ ಮರಾಠಿಯಲ್ಲಿ ಹೇರಳವಾಗಿ ಕಾಣಬಹುದು. ಅವಮಾನವನ್ನು ಮೀರುವ ದಲಿತರ ಪ್ರಯತ್ನಗಳೆಲ್ಲ ಹೊಸ ಸಾಹಿತ್ಯ ಮಾರ್ಗ ಸೃಷ್ಟಿಸಲು ಕಾರಣವಾಗಿದೆ. ಆದರೂ ಅಮೆರಿಕಾ, ಆಫ್ರಿಕಾದಂತಹ ದೇಶಗಳಲ್ಲಿ ಘಟಿಸಿದ ಕಪ್ಪುಜನರ ದಂಗೆಯಂತೆ ದಲಿತರ ವಿಮೋಚನೆಗೆ ಯಾವ ದಂಗೆಯೂ ಇಲ್ಲಿ ಜರುಗಲಿಲ್ಲ. ಅವಮಾನ, ಶೋಷಣೆಯ ನೆರಳಿನಲ್ಲಿ ಬದುಕುವುದನ್ನು ರೂಢಿಮಾಡಿಕೊಂಡಿದ್ದ ನಮ್ಮ ಪೂರ್ವಿಕರು ಪ್ರತಿಸಂಸ್ಕೃತಿ  ಕಟ್ಟುವುದರಲ್ಲಿ ತಮ್ಮ ವಿಮೋಚನೆಯ ದಾರಿಗಳನ್ನು ಕಂಡುಕೊಂಡರು. ದಲಿತರ ದೈವವನ್ನು ಅವಮಾನಿಸಿದರೆ ದಲಿತರನ್ನು ಸುಲಭವಾಗಿ ಹಣಿಯಬಹುದೆಂಬುದನ್ನು ಸವರ್ಣೇಯರು ಕಂಡುಕೊಂಡಿದ್ದರು. ಹೀಗಾಗಿ ದಲಿತರ ದೈವಗಳು ವರ-ಶಾಪಕೊಡದೆ, ಮೇಲ್ವರ್ಗದ ದೇವತೆಗಳ ಕಾವಲಿಗೆ ನಿಂತಂತೆ ಕಾಣುತ್ತವೆ. ವರ್ತಮಾನದಲ್ಲೂ ಕೂಡ ದಲಿತರ ದೈವಗಳು ತೀರಾ ದುರ್ಬಲವಾಗಿ ಕಾಣುತ್ತವೆ.

ಸಮಾಜದ ವ್ಯಂಗ್ಯ ಹೇಗಿದೆ ನೋಡಿ: ಯಾವ ಮೇಲ್ವರ್ಗದಿಂದ ದಲಿತರ ಮೇಲೆ ಅಮಾನವೀಯ ಶೋಷಣೆ, ಕ್ರೌರ್ಯಗಳು ನಡೆದವೋ ಅದೇ ಮೇಲ್ವರ್ಗದಿಂದ ದಲಿತರ ಉದ್ಧಾರಕ್ಕೆಂದು ದೊಡ್ಡ ನಾಯಕರು ಬಂದರು. ಗೋಪಾಲಸ್ವಾಮಿ ಅಯ್ಯರ್, ಕುದ್ಮುಲ್ ರಂಗರಾಯರು, ಕಾಕಾ ಕಾರ್ಕಾನಿಸ್, ತಗಡೂರು ರಾಮಚಂದ್ರರಾಯರು ಇವರೆಲ್ಲ ದಲಿತರ ಆತ್ಮಗೌರವಕ್ಕಾಗಿ ಬೀದಿಗೆ ಬಂದು ತಮ್ಮ ಸಮುದಾಯಗಳಿಂದಲೇ ಬಹಿಷ್ಕಾರಕ್ಕೆ ಒಳಗಾದರು. ನಾಲ್ವಡಿ ಕೃಷ್ಣರಾಜ ಒಡೆಯರು ದಲಿತರಿಗೆಂದೇ ‘ಪಂಚಮ ಬೊರ್ಡಿಂಗ್ ಸ್ಕೂಲ್’ ತೆರೆದಾಗ, ದಲಿತರಿಗೆ ಪಾಠಮಾಡಲು ಕರ್ನಾಟಕದಿಂದ ಒಬ್ಬೇ ಒಬ್ಬ ಶಿಕ್ಷಕ ಮುಂದೆ ಬರಲಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರು ಎದೆಗುಂದದೆ ಕೇರಳದಿಂದ ಶಿಕ್ಷಕರನ್ನು ಕರೆಸಿದರು. ತಮ್ಮ ಜನಾಂಗದಿಂದ ಎದುರಾದ ಎಲ್ಲ ವಿರೋಧವನ್ನು ಮೆಟ್ಟಿ ಮಳವಳ್ಳಿಯಿಂದ ತಲಕಾಡು ಚಿಕ್ಕರಂಗೇಗೌಡರು ದಲಿತರಿಗೆ ಪಾಠಮಾಡಲು ಮುಂದೆ ಬಂದರು. ಇವತ್ತಿಗೂ ಮಳವಳ್ಳಿ ತಾಲ್ಲೂಕಿನಲ್ಲಿ ಮನೆಗೊಬ್ಬೊಬ್ಬ ದಲಿತ ಸರ್ಕಾರಿ ನೌಕರ ಸಿಗಲು ತಲಕಾಡು ಚಿಕ್ಕರಂಗೇಗೌಡರಂತಹ ದೊಡ್ಡ ಅಂತಃಕರಣದ ಶಿಕ್ಷಕರು ಕಾರಣ. ಇವತ್ತು ದಲಿತ ಸಂಘರ್ಷ ಸಮಿತಿ ನಡೆಸುತ್ತಿರುವ ಸಾಮಾಜಿಕ ಹೋರಾಟಗಳು ಕಣಿಯನ್ ಜನಾಂಗದ ಶೋಷಣೆಯ ವಿಮೋಚನೆಗೆ ತಗಡೂರು ರಾಮಚಂದ್ರರಾಯರು ನಡೆಸಿದ ಹೋರಾಟದ ಮುಂದುವರೆದ ಭಾಗದಂತೆಯೇ ಕಾಣುತ್ತಿವೆ.

ನಮ್ಮ ನೆಲದ ಕಾನೂನುಗಳು ಅತ್ಯಂತ ಜನಪರವಾಗಿ, ಮಾನವೀಯವಾಗಿ ಮತ್ತು ಕ್ರಾಂತಿಕಾರಕವಾಗಿ ಇವೆ. ಇಂತಹ ಕಾನೂನುಗಳನ್ನು ಅನೇಕ ಸಂದರ್ಭದಲ್ಲಿ ಈ ಸಮಾಜ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಇದ್ದಾಗ ಸಂಘರ್ಷಗಳು ಹುಟ್ಟಿಕೊಂಡಿವೆ. ಇನ್ನು ನೂರು ವರ್ಷಗಳ ನಂತರ ಬರಬೇಕಾದ ಕಾನೂನು ಈಗಲೇ ಬಂದಿದೆ ಎನ್ನುವವರನ್ನು ನಾವು ಕಾಣುತ್ತಿದ್ದೇವೆ. ಈಗ ನಂಬಿಕೆಗಳೂ ಕಾನೂನುಗಳಾಗುತ್ತಿವೆ. ಸಾಮಾಜಿಕ ಸಂಘರ್ಷ ಉಂಟಾದಾಗ ನಂಬಿಕೆಯೇ ಗೆಲ್ಲುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ದುರಂತವೆಂದರೆ  ನಮ್ಮ ಸಾಮಾಜಿಕ ವ್ಯವಸ್ಥೆ ಶೋಷಣೆಯ ಪರವಾದ ಜನವಿರೋಧಿ ನಂಬಿಕೆಯನ್ನು ಬಲಪಡಿಸುತ್ತ ಉದಾರವಾದಿ ಚಿಂತನೆಯ ಬೆಳವಣಿಗೆಗೆ ಪೆಟ್ಟು ನೀಡುತ್ತಿದೆ. ನಂಬಿಕೆ ಮತ್ತು ಕಾನೂನುಗಳ ನಡುವಿನ ಸಂಘರ್ಷದಲ್ಲಿ ನಂಬಿಕೆಗೆ ಜಯ ಸಿಗುತ್ತಿರುವುದು, ಅದರಲ್ಲೂ ಜನವಿರೋಧಿ ಸಾಂಪ್ರದಾಯಿಕ ನಂಬಿಕೆಗಳಿಗೆ ಜಯ ಸಿಗುತ್ತಿರುವುದು ಭಯ ಹುಟ್ಟಿಸುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಬೇಕಾದರೆ ಕಾನೂನುಗಳು ಹೇಗೆ ರಾಷ್ಟ್ರದ ಹಿತಕ್ಕೆ ಪೂರಕವಾಗಿವೆ ಹಾಗೂ ಕಾನೂನಿನ ಹಿಂದಿನ ಸದುದ್ದೇಶ ಏನೆಂಬುದನ್ನು ನಾವು ಸಮಾಜಕ್ಕೆ ಮನವರಿಕೆ ಮಾಡಿಕೊಡಬೇಕಾಗಿದೆ.

ಮಲೆನಾಡಿನ ಮಹಾಮಳೆ

– ಪ್ರಸಾದ್ ರಕ್ಷಿದಿ

ಈ ವರ್ಷ ಮಲೆನಾಡಿಗೆ ಆಪತ್ತು ತಂದು ಮಳೆ “ಶತಮಾನದ ಮಳೆ” ಎಂದೇ ಪ್ರಖ್ಯಾತವಾಯಿತು. ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಅನಾಹುತ ತಂದ ಈ ಮಳೆಗಾಲದಲ್ಲಿ ಅತಿ ಹೆಚ್ಚು ತೊಂದರೆಯಾದದ್ದು ಕೊಡಗಿಗೆ, ನಂತರ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೆಲವು ಭಾಗಗಳು ಮತ್ತು ಅಲ್ಲಲ್ಲಿ ಕೆಲವು ಕಡೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ. (ಕೇರಳದ ವಿಚಾರವನ್ನು ನಾನಿಲ್ಲಿ ಪ್ರಸ್ತಾಪಿಸುತ್ತಿಲ್ಲ)

ಕಾಫಿ ನಾಡಿನಲ್ಲಿ ಮಳೆಯನ್ನು ಅಳೆಯುವ ಪದ್ಧತಿ ಬ್ರಿಟಿಷರ ಕೊಡುಗೆ. ಹಾಗಾಗಿ ಇಲ್ಲಿ ಅನೇಕ ಕಡೆಗಳಲ್ಲಿ ಮಳೆ ಅಳೆಯುವುದು ಒಂದು ನಿತ್ಯವಿಧಿಯಾಗಿದ್ದು ಕೆಲವು ಕಾಫಿ ಎಸ್ಟೇಟುಗಳಲ್ಲಿ ಒಂದು ಶತಮಾನಕ್ಕೂ ಹೆಚ್ಚುಕಾಲದ ಮಳೆ ದಾಖಲೆ ದೊರೆಯುತ್ತದೆ.

ಕಳೆದ ಮೂರು ವರ್ಷಗಳು ಅತಿ ಕಡಿಮೆ ಮಳೆಯ ವರ್ಷಗಳು. ಈ ವರ್ಷವೂ ಅದೇ ರೀತಿ ಮುಂದುವರೆದಿದ್ದರೆ ಅನೇಕ ಕಡೆಗಳಲ್ಲಿ ಕಾಫಿ ಮತ್ತು ಮೆಣಸಿನ ಬೆಳೆ ಬೆಳೆಯುವುದು ಅಸಾಧ್ಯವೆನ್ನುವ ಸ್ಥಿತಿ ಬರುತ್ತಿತ್ತು, ಬೇಸಗೆಯಲ್ಲಿ ತೋಟಕ್ಕೆ ನೀರು ಹನಿಸುವುದಿರಲಿ, ಕುಡಿಯಲೂ ನೀರಿಲ್ಲದ ಸ್ಥಿತಿ ಮಲೆನಾಡಿನ ಹಲವು ಕಡೆಗಳಲ್ಲಿ ಇತ್ತು. ಹಾಗಾಗಿ ಈ ವರ್ಷವಾದರೂ ಒಳ್ಳೆಯ ಮಳೆಯಾಗಲಿ ಎಂದು ಎಲ್ಲರೂ ಹಾರೈಸಿದ್ದರು.

ವರ್ಷಕ್ಕೆ ಸುಮಾರು ಸರಾಸರಿ ನೂರಾ ಹತ್ತು ಇಂಚುಗಳಷ್ಟು ಮಳೆ ಬೀಳುವ ನಮ್ಮೂರಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಎಂಬತ್ತು ಇಂಚು ದಾಟಿರಲಿಲ್ಲ. ಕಳೆದ ಒಂದು ಶತಮಾನದ ದಾಖಲೆಯಂತೆ ನಮ್ಮೂರಿನಲ್ಲಿ ಅತಿ ಹೆಚ್ಚು ಮಳೆಯಾದದ್ದೆಂದರೆ ಒಂದು ವರ್ಷಕ್ಕೆ ನೂರಾ ಅರುವತ್ತೆರಡು ಇಂಚುಗಳು(1962ರಲ್ಲಿ) ಆಗಲೂ ಈ ದಿನಾಂಕಕ್ಕೆ ಈ ವರ್ಷ ಬಂದಷ್ಟು ಮಳೆಯಾಗಿರಲಿಲ್ಲವೆನ್ನುವುದಷ್ಟೇ ಮತ್ತು ಮಧ್ಯೆ ಮಧ್ಯೆ ಮಳೆ ಬಿಡುವನ್ನು ಕೂಡಾ ಕೊಟ್ಟಿತ್ತು. ಈ ವರ್ಷ 10/9//2018 ರವರೆಗೆ ಒಟ್ಟು ನೂರಾ ನಲುವತ್ತೆರಡು ಇಂಚು ಮಳೆಯಾಗಿದೆ. (ಈಗ ಒಂದು ವಾರದಿಂದ ಬಿಸಿಲಿದೆ) ಮತ್ತು ಈ ವರ್ಷದ ಮಳೆಗಾಲ ಜೂನ್ ಮೂರನೇ ತಾರೀಖಿನಿಂದ ಪ್ರಾರಂಭವಾಗಿ ಎಂಬತ್ತೊಂಬತ್ತು ದಿನಗಳ ಕಾಲ ಬಿಡದೆ ಸುರಿದಿದೆ.

ಒಂದು ಇಂಚು ಮಳೆಯೆಂದರೆ ಒಂದು ಎಕರೆಯ ಮೇಲೆ ಸುಮಾರು ಒಂದು ಲಕ್ಷದ ಎಂಟುಸಾವಿರ ಲೀಟರ್ ನೀರು. ಅಂದರೆ ಈವರ್ಷ ಇದುವರೆಗೆ ನಮ್ಮೂರಿನಲ್ಲಿ ಬಿದ್ದ ನೀರಿನ ಪ್ರಮಾಣ ಒಂದು ಎಕರೆಯ ಮೇಲೆ ಸುಮಾರು ಒಂದೂವರೆ ಕೋಟಿ ಲೀಟರ್ ಗಳಷ್ಟು ನೀರು! ಈ ಪ್ರಮಾಣದ ಮಳೆಯಾಗಿಯೂ ನಮ್ಮೂರಿನಲ್ಲಿ ಭೂಕುಸಿತ ಆಗಿಲ್ಲ. ನಾವೊಂದಷ್ಟು ಜನ ಗೆಳೆಯರೊಡಗೂಡಿ, ಭೂಕುಸಿತ ಉಂಟಾಗಿರುವ ಕೊಡಗು

ಹಾಗೂ ಸಕಲೇಶಪುರ ತಾಲ್ಲೂಕಿನ ಹಲವು ಸ್ಥಳಗಳಿಗೆ, ಇದುವರೆಗೆ ಮೂರು ನಾಲ್ಕು ಬಾರಿ ಹೋಗಿ ಬಂದೆವು. ಈ ವರ್ಷದ ಅನಾಹುತಗಳ ಬಗ್ಗೆ ಅನೇಕ ಅಭಿಪ್ರಾಯಗಳು, ವರದಿಗಳು ಹೇಳಿಕೆಗಳು, ಬಂದಿವೆ ವಾಗ್ವಾದಗಳು ನಡೆದಿವೆ, ವಿಜ್ಞಾನಿಗಳು, ರೈತರು, ರಾಜಕಾರಣಿಗಳು ಹೀಗೆ ಬೇರೆ ಬೇರೆ ಜನರು ತಮ್ಮ ವಾದಗಳನ್ನು ಮಂಡಿಸಿದ್ದಾರೆ. ಈ ಎಲ್ಲವನ್ನೂ ಗಮನಿಸಿ ನಾನು, ನನ್ನ ಅನುಭವಗಳನ್ನು ಇಲ್ಲಿದಾಖಲಿಸಿದ್ದೇನೆ.

ಈ ವರ್ಷ ಮಲೆನಾಡಿನಲ್ಲಿ ಆದ ಅನಾಹುತಗಳಿಗೆ ಕಾರಣವನ್ನು ಹುಡುಕುತ್ತ, ಸೂಕ್ಷ್ಮವಾಗಿ ಗಮನಿಸುತ್ತ ಹೋದರೆ. ಮುಖ್ಯವಾಗಿ ಎರಡು ವಿಧದ ಕಾರಣಗಳನ್ನು ಕಾಣಬಹುದು. ಮೊದಲನೆಯದು ಪ್ರಾಕೃತಿಕ. ಮುಖ್ಯವಾಗಿ ನಿರಂತರವಾಗಿ ಸುರಿದ ಮಳೆ, ಹಾಗೂ ಅನೇಕರು ಹೇಳಿದಂತೆ ಭೂಕಂಪ, ಅಥವಾ ಭೂಮಿಯ ಒಳಗಡೆಯಿಂದಾದ ಯಾವುದೋ ಬದಲಾವಣೆ. ಎರಡನೆಯದ್ದು ಮಾನವ ನಿರ್ಮಿತ ಕಾರಣಗಳು. ಅರಣ್ಯನಾಶ, ಗುಡ್ಡಗಳ ನೆತ್ತಿಯವರೆಗಿನ ಕೃಷಿ, ಹೈವೇಗಳ ನಿರ್ಮಾಣ, ಅಣೆಕಟ್ಟುಗಳು ,ವಿದ್ಯುತ್ ಯೋಜನೆಗಳು, ರೈಲ್ವೇ ಮುಂತಾದ ನೂರಾರು ಅಭಿವೃದ್ಧಿ ಕಾರ್ಯಗಳು. ಜೆ.ಸಿ.ಬಿಗಳಿಂದ ಗುಡ್ಡಗಳನ್ನು ಕಡಿದು ರಸ್ತೆ ಮಾಡಿರುವುದು, ಮನೆ-ರೆಸಾರ್ಟು ಹೋಮ್ ಸ್ಟೇಗಳ ನಿರ್ಮಾಣ,ಹಲವು ಕಡೆಗಳಲ್ಲಿ ಗುಡ್ಡದ ಮೇಲೂ ನಿರ್ಮಿಸಿರುವ ಕೆರೆಗಳು ಮುಂತಾದವುಗಳು.

ಗುಡ್ಡದ ಮೇಲಿನ ಕೆರೆಗಳ ನಿರ್ಮಾಣಕ್ಕೆ ಕಳೆದ ಕೆಲವು ವರ್ಷಗಳಿಂದ ಕಡಿಮೆ ಮಳೆಯಾದ ಕಾರಣ ಅನೇಕ ಕಡೆಗಳಲ್ಲಿ ಗುಡ್ಡದ ಮೇಲೆ ಎತ್ತರದ ಸ್ಥಳಗಳಲ್ಲಿ ಕೆರೆಗಳನ್ನು ನಿರ್ಮಿಸತೊಡಗಿದರು. ಇದಕ್ಕೆ ಸರ್ಕಾರದ ಕೃಷಿಹೊಂಡ ಯೋಜನೆಯೂ ನೆರವಿಗೆ ಬಂತು. ಇಲ್ಲಿ ಸಂಗ್ರಹವಾದ ನೀರಿನಿಂದ ಬೇಸಗೆಯಲ್ಲಿ ಗುರುತ್ವ ಶಕ್ತಿಯಿಂದ ತೋಟಕ್ಕೆ ನೀರಾವರಿ ಮಾಡುವುದು, ಸಾಧ್ಯವಾದರೆ ಮಳೆಗಾಲದಲ್ಲಿ ಸಣ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡುವುದು ಇದರ ಉದ್ದೇಶ.

ಹತ್ತು ಸಾವಿರ ಚದರಡಿ ಯಿಂದ ಹಿಡಿದು ಒಂದು ಎಕರೆಯಷ್ಟು ವಿಸ್ತಾರದ ಆರರಿಂದ ಏಂಟು ಅಡಿ ಆಳದವರೆಗಿನ ಈ ಕೆರೆಗಳು. ಎರಡು ಲಕ್ಷ ಲೀಟರ್ ನಿಂದ ಹಿಡಿದು ಒಂದು ಕೋಟಿ ಲೀಟರ್ ನಷ್ಟು ನೀರನ್ನು ಸಂಗ್ರಹಿಸಬಲ್ಲವು. ಅಂದರೆ ಹತ್ತುಸಾವಿರ ಚದರಡಿಯ ಕೃಷಿ ಹೊಂಡದಲ್ಲಿಎರಡು ಸಾವಿರ ಟನ್ ತೂಕದ ನೀರು ಸಂಗ್ರಹವಾದರೆ,ಒಂದು ಎಕರೆ ಕೆರೆಯಲ್ಲಿ ಹತ್ತುಸಾವಿರ ಟನ್ ತೂಕದ ನೀರು. ಈ ನೀರಿಗೆ ಘನ ವಸ್ತುವಿನಂತೆ ಬರಿಯ ತೂಕವಲ್ಲದೆ ಹರಿಯುವ ಗುಣ. ಜಿನುಗಿ ತೂರಿಹೋಗುವ ಶಕ್ತಿ ಮತ್ತು ಎಲ್ಲದಿಕ್ಕಿಗೆ ಒತ್ತುವ “ಹೈಡ್ರೋ ಡೈನಮಿಕ್ ಪ್ರೆಷರ್” ಇರುತ್ತದೆ. ಅದು ಎತ್ತರದಲ್ಲಿ ಭೂಮಿಯ ಮೇಲೆ ವರ್ತಿಸುವ ರೀತಿ ಮತ್ತು ಶಕ್ತಿಯನ್ನುಪರಿಗಣಿಸಬೇಕು.

ಮಳೆಯೊಂದರಿಂದಲೇ ಇಷ್ಟೆಲ್ಲ ಅನಾಹುತಗಳು ಆಗಿದ್ದರೆ, ವ್ಯಾಪಕವಾಗಿ ಎಲ್ಲ ಕಡೆಯೂ ಆಗಬೇಕಿತ್ತು. ಭೂಕುಸಿತವಾದ ಅನೇಕ ಕಡೆಗಳಲ್ಲೂ ಮಧ್ಯೆ ಒಂದೆರಡುಬಾರಿ ಮಳೆ ವಾರದ ಬಿಡುವು ಕೊಟ್ಟಿತ್ತೆಂದು ಅಲ್ಲಿ ವಾಸವಿದ್ದವರೇ ಹೇಳುತ್ತಾರೆ. ನಿರಂತರ ಮಳೆಯಾದ ಹಲವು ಸ್ಥಳಗಳಲ್ಲಿ ಭೂಕುಸಿತವಾಗಿಲ್ಲ. ಇನ್ನು ಭೂಕುಸಿತಕ್ಕೆ ಭೂಕಂಪವೇ ಕಾರಣವಾಗಿದ್ದರೆ. ಈಗ ವರದಿಯಾಗಿರುವ ರಿಕ್ಟರ್ ಸ್ಕೇಲ್ 3.4 ರ ಭೂಕಂಪ ಮಲೆನಾಡಿನಲ್ಲಿ ಅನೇಕ ಬಾರಿ ಆಗಿದೆ. ಹಾಗೇನಾದರೂ ಭೂಕಂಪದಿಂದ ಭೂಕುಸಿತ ಅಥವಾ ಮನೆಗಳ ನಾಶ ಈಗ ಆಗಿರುವುದಕ್ಕಿಂತ ಎಷ್ಟೋ ಪಾಲು ಹೆಚ್ಚಿರುತ್ತಿತ್ತು. ಈಗ ಕುಸಿದ ಮನೆಗಳಿಗಿಂತ ಇನ್ನೂ ಅಪಾಯವೆನಿಸುವ ನೂರಾರು ಸ್ಥಳಗಳಲ್ಲಿ ಏನೂ ಆಗಿಲ್ಲ. ಮತ್ತು ಭೂಕಂಪದ ಪರಿಣಾಮ ಅಲ್ಲೊಂದು ಇಲ್ಲೊಂದು ಕಡೆಗಳಲ್ಲಿ ಬೊಟ್ಟುಮಾಡಿದಂತಿರದೆ, ವ್ಯಾಪಕವಾಗಿರುತ್ತದೆ. ಹಾಗಾಗಿ ಈ ಭೂಕಂಪ ಮಳೆಯೊಂದಿಗೆ ಸೇರಿ ಭೂಕುಸಿತ ಮುಂತಾದ ವಿದ್ಯಮಾನಗಳ ಪರಿಣಾಮವನ್ನು ಹೆಚ್ಚಿಸಿರಬಹುದಷ್ಟೇ ಹೊರತು ಅದೇ ಕಾರಣವಲ್ಲ.

ಪ್ರತಿ ವರ್ಷ ಬೀಳುವ ಒಟ್ಟು ಮಳೆಯ ಅಳತೆಯ ದಾಖಲೆಯನ್ನಿಟ್ಟುಕೊಂಡು, ಈ ವರ್ಷ ಹೆಚ್ಚು ಮಳೆಯಾಗಿದೆ. ಆದ್ದರಿಂದ ಹೆಚ್ಚು ನೀರಿದೆ. ಆಥವಾ ಭೂಮಿಯಲ್ಲಿ ಇರುವ ತೇವಾಂಶ ಮತ್ತು ಒರತೆಯ ಪ್ರಮಾಣ ಎಷ್ಟಿದೆ ಎಂದೋ, ಹಾಗೆಯೇ ಇದರಿಂದ ಬೆಳೆಗೆ ಅನುಕೂಲ-ಅನಾನುಕೂಲವಿದೆಯೇ ಎಂದೋ ನಿರ್ಧರಿಸಲು ಸಾಧ್ಯವಿಲ್ಲ. ಯಾಕೆಂದರೆ ಪ್ರತಿ ವರ್ಷದ ಮಳೆಗಾಲವೂ ಒಂದು ಬೇರೆಯೇ ವಿದ್ಯಮಾನ.
ಉದಾಹರಣೆಗೆ ಕಾಫಿ ಬೆಳೆಯಲ್ಲಿ ಫೆಬ್ರವರಿ ಮಾರ್ಚ್ ತಿಂಗಳ ಬೀಳುವ “ಹೂವಿನ ಮಳೆ” ಆ ವರ್ಷದ ಪೂರ್ಣ ಫಸಲಿನ ಪ್ರಮಾಣವನ್ನು ನಿರ್ಧರಿಸಿ ಬಿಡುತ್ತವೆ. ನಂತರ ವರ್ಷವಿಡೀ ಬೀಳುವ ಮಳೆಯ ಮಾದರಿ ಆ ವರ್ಷದ ಬೆಳೆಯ ಸ್ಥಿತಿಯನ್ನು ನಿರ್ಧರಿಸುತ್ತದೆ. ಅಂದರೆ ಬಿಡುವು ಕೊಟ್ಟು ಬರುತ್ತದೆಯೇ ಇಲ್ಲ ಒಂದೇ ಸಮನೆ ಸುರಿದು ಬೆಳೆಯನ್ನು ನಾಶ ಮಾಡುತ್ತದೆಯೇ, ಆಥವಾ ಉದ್ದಕ್ಕೂಸೋನೆ ಮಳೆಯಾಗಿ ಒಟ್ಟು ಮಳೆಯ ಪ್ರಮಾಣ ಕಡಿಮೆ ಇದ್ದರೂ ತೋಟವೆಲ್ಲ ರೋಗಕ್ಕೆ ತುತ್ತಾಗುವಂತೆ ಮಾಡಿ ಫಸಲನ್ನು ನಾಶಮಾಡಿದೆಯೇ ಎಂದು ಗಮನಿಸಬೇಕು. ಅದೇ ರೀತಿ ಆ ವರ್ಷ ಗಾಳಿಬೀಸಿದ ವೇಗ ಎಷ್ಟು. ಒಟ್ಟು ಎಷ್ಟು ದಿನಗಳ ಕಾಲ ಗಾಳಿ ಬೀಸಿದೆ ಎನ್ನುವುದನ್ನೂ ಗಮನಿಸಬೇಕು. ಯಾಕೆಂದರೆ ಗಾಳಿಯ ಜೊತೆಗೂಡಿದ ಮಳೆ ಭೂಮಿಯನ್ನು ಇನ್ನಷ್ಟು ತಂಪಾಗಿದೆ ಶೀತವೇರಿಸುತ್ತದೆ. ಈ ವರ್ಷದ ಮಹಾಮಳೆಯಲ್ಲಿ ಗಾಳಿಬೀಸಿದ ವೇಗವೂ ಹೆಚ್ಚಾಗಿರಲಿಲ್ಲ ಮತ್ತು ಗಾಳಿಬೀಸಿದ ದಿನಗಳ ಸಂಖ್ಯೆಯೂ ಕಡಿಮೆ. ಹಾಗೇನಾದರೂ ವಾಡಿಕೆಯಂತೆ ಕೆಲವು ವರ್ಷಗಳಲ್ಲಿ ಬೀಸುವ ಮಳೆಗಾಲದ ಗಾಳಿ ಈ ಬಾರಿ ಬೀಸಿದ್ದರೆ, ಈ ವರ್ಷದ ಅನಾಹುತ ಇನ್ನೂ ಹೆಚ್ಚಾಗುತ್ತಿತ್ತು. ಆದ್ದರಿಂದ ನಾವು,ಭೂಮಿಯಲ್ಲಿ ಇಂಗಿರಬಹುದಾದ ನೀರು, ಜಲಮೂಲಗಳ ಪರಿಸ್ಥಿತಿ ಎಲ್ಲವೂ ಸೇರಿದಂತೆ ಯಾವುದೇ ಒಂದು ವರ್ಷ ಮಳೆಯಿಂದಾದ ಪರಿಣಾಮವನ್ನು ತೀರ್ಮಾನಿಸಬೇಕಾದರೆ ಆ ವರ್ಷ ಬಿದ್ದ ಮಳೆಯ ಪ್ರಮಾಣವೊಂದೇ ಅಲ್ಲ, ಮಳೆ ಬಿದ್ದ ಮಾದರಿ. ಮಧ್ಯೆ ಕೊಟ್ಟಂತಹ ಬಿಡುವಿನ ಮತ್ತು ಬಿಸಿಲಿನ ದಿನಗಳು. ಬೀಸಿದ ಗಾಳಿಯ ವೇಗ ಮತ್ತು ಪ್ರಮಾಣ, ಉಷ್ಣಾಂಶವೂ ಸೇರಿದಂತೆ ಹಲವು ವಿಷಯಗಳನ್ನು ಗಮನಿಸಬೇಕಾಗುತ್ತದೆ.

 

ಇನ್ನು ಮಾನವ ನಿರ್ಮಿತ ಕಾರಣಗಳನ್ನು ಪರಿಶೀಲಿಸಿದರೆ, ಹೈವೇಗಳ ಕುಸಿತ. ರಸ್ತೆಗಳೇ ಕೊಚ್ಚಿಹೋಗಿರುವುದು. ಯಾರೆಷ್ಟೇ ಮುಚ್ಚಿಟ್ಟರೂ ಎತ್ತಿನಹೊಳೆಯೋಜನೆ. ಮತ್ತು ಜಲವಿದ್ಯುತ್ ಯೋಜನೆಗಳ ಸ್ಥಳಗಳಲ್ಲಿ ಉಂಟಾಗಿರುವ ವ್ಯಾಪಕ ಹಾನಿ ಎದ್ದು ಕಾಣುತ್ತಿದೆ.ಅರಣ್ಯ ಪ್ರದೇಶದಲ್ಲಿ ಮಾಡುವ ಯಾವುದೇ ಯೋಜನೆಯಿರಲಿ, ಹೊಸ ರಸ್ತೆಗಳ ನಿರ್ಮಾಣ ಅನಿವಾರ್ಯವಾಗುತ್ತದೆ. ಈ ರಸ್ತೆಗಳು ಆ ಯೋಜನೆಯ ಸಮಯದಲ್ಲಿ ಮಾತ್ರವಲ್ಲ ಮುಗಿದ ನಂತರವೂ, ಮ

ರಗಳ್ಳತನ, ಪ್ರಾಣಿಗಳಬೇಟೆ. ನದಿ ಮೂಲದ ವರೆಗೂ ಮರಳು ಗಣಿಗಾರಿಕೆಗೆ ಅನುಕೂಲ ಮಾಡಿಕೊಟ್ಟು ಮತ್ತಷ್ಟು ವಿನಾಶಕ್ಕೆ ಆರಣವಾಗುತ್ತದೆ. ಪ್ರತಿಯೊಂದು ಅಭಿವೃದ್ಧಿಯೋಜನೆಗಳ ಜೊತೆಯಲ್ಲೇ ಆಗಿರುವ ಅರಣ್ಯನಾಶವೂ ಕಣ್ಣಿಗೆ ಗೋಚರಿಸುತ್ತದೆ. ಆದರೆ ಕಣ್ಣಿಗೆ ಕಾಣದ ಅರಣ್ಯನಾಶ ಇನ್ನೊಂದು ಬಗೆಯದ್ದಿದೆ. ಇದು ಖಾಸಗಿ ವಲಯದ್ದು. ವ್ಯಾಪಕವಾದ ಕೃಷಿ, ಅದೂ ಗುಡ್ಡಗಳ ಮೇಲೆ-ಗುಡ್ಡಗಳ ನೆತ್ತಿಯ ತನಕ ನಡೆದಿದೆ, ಗುಡ್ಡದ ನೆತ್ತಿಯಲ್ಲಿ ಇರಬೇಕಾ ಶೋಲಾ ಅರಣ್ಯ ಮತ್ತು ಹುಲ್ಲುಗಾವಲುಗಳು ಅನೇಕ ಕಡೆಗಳಲ್ಲಿ ತೋಟಗಳಾಗಿವೆ. ಇದರಲ್ಲಿ ಸರ್ಕಾರಿ ಜಮೀನಿನ ಒತ್ತುವರಿ ಎಷ್ಟುಸಾವಿರ ಎಕರೆಗಳು ಎಂದು ಸರ್ಕಾರವೇ ಹೇಳಬೇಕು. ಆದರೆ ಅಲ್ಲೆಲ್ಲ ಇದ್ದ ನೈಸರ್ಗಿಕ ಅರಣ್ಯ ನಾಶವಾಗಿದೆ.

ಈ ಬಾರಿ ಅನಾಹುತಗಳಾದ ಪ್ರದೇಶಗಳಲ್ಲಿರುವುದು ಮುಖ್ಯವಾಗಿ ಕಾಫಿ ಬೆಳೆ. ಇದು ಇಂದು ನಾನಾ ಬಗೆಯ ಸಂಕಷ್ಟಗಳಿಂದ ನರಳುತ್ತಿದೆ. ಹವಾಮಾನದಲ್ಲಾದ ವೈಪರೀತ್ಯ ಮತ್ತು ಉಷ್ಣಾಂಶ ಹೆಚ್ಚಳದಿಂದಾಗಿ ಅರೇಬಿಕಾ ಕಾಫಿ ಬೆಳೆಯಲಾಗುತ್ತಿಲ್ಲ. ಹೆಚ್ಚಿನ ತೋಟಗಳಲ್ಲಿ ರೋಬಸ್ಟ ಬೆಳೆ ಬೆಳೆಯಲು ಪ್ರಾರಂಭಿಸಿದ್ದಾರೆ. ಇದರಿಂದಾಗಿಯೂ ತೋಟಗಳಲ್ಲಿನ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮೆಣಸಿನ ಬೆಳೆ ನಿರಂತರ ರೋಗಕ್ಕೆ ತುತ್ತಾಗುತ್ತಿದೆ. ಅರಣ್ಯಗಳಲ್ಲಿ ಅಭಿವೃದ್ಧಿ ಯೋಜನೆಗಳಿಂದ ತೋಟಗಳಲ್ಲಿ ಕಾಡು ಪ್ರಾ

ಣಿಗಳ ಕಾಟ ಹೆಚ್ಚಾಗಿ. ಆದಾಯವಿಲ್ಲದ ಕಾಫಿಬೆಳೆಗಾರರರು ಕಳೆದ ಇಪ್ಪತ್ತು ವರ್ಷಗಳಲ್ಲಿ ಸಾಕಷ್ಟು ರೆಸಾರ್ಟು -ಹೋಮ್ ಸ್ಟೇಗಳನ್ನು ನಿರ್ಮಿಸಿಕೊಂಡು ಒಂದಷ್ಟು ಆದಾಯ ಗಳಿಸತೊಡಗಿದರು. ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆ

ತು. ನೂರಾರು ಜನರಿಗೆ ಉದ್ಯೋಗವೂ ದೊರೆಯುವಂತಾಯಿತು. ಆದರೆ ಇದರಲ್ಲಿ ಲಾಭವಿದೆಯೆಂದು ಕಂಡುಕೊಂಡ ರಾಜಕಾರಣಿಗಳು, ಉದ್ಯಮಿಗಳು, ಎಲ್ಲಾರೀತಿಯ ದಂಧೆಕೋರರು ಇತ್ತ ನುಗ್ಗಿದರು.ಇದರಿಂದಾಗಿರುವ ಸಾಮಾಜಿಕ, ಹಾಗೂ ಪರಿಸರ ಸಮಸ್ಯೆಗಳು ಬೇರೆಯೇ ಇವೆ.

ಈ ರೀತಿಯ ನೂರಾರು ರೆಸಾರ್ಟುಗಳು, ಅರಣ್ಯದ ಅಂಚಿನಲ್ಲಿ, ಸರ್ಕಾರಿ ಭೂಮಿಯ ಒತ್ತುವರಿಯಲ್ಲಿ ಇವೆ. ಗುಡ್ಡಗಳನ್ನು ಕಡಿದು ರಸ್ತೆಗಳನ್ನು ಮಾಡಿದ್ದಾರೆ. ಇವೆಲ್ಲದರ ಜೊತೆ ವಸತಿಗಾಗಿ ಹೆಚ್ಚಿದ ಒತ್ತಡದಿಂದ ಗುಡ್ಡಗಳನ್ನು ಕಡಿದು ಮೆಟ್ಟಿಲು ಮೆಟ್ಟಿಲುಗಳಾಗಿ ಮನೆಗಳನ್ನು ಕಟ್ಟಲಾಗಿದೆ. ಇವೆಲ್ಲವೂ ಭೂ ಮೇಲ್ಮೈಯನ್ನು ಬದಲಿಸಿವೆ. ರಸ್ತೆಗಳಿರಲಿ. ಹೆದ್ದಾರಿಗಳಿರಲಿ ನಗರ ಪ್ರದೇಶವಿರಲಿ ಸರಿಯಾಗಿ ನೀರು ಹರಿದು ಹೋಗುವ ವ್ಯವಸ್ಥೆಯೇ ಇಲ್ಲ.ಹೆದ್ದಾರಿಗಳನ್ನುಳಿದು, ಅನೇಕ ರಸ್ತೆಗಳಲ್ಲಿ ಕೇವಲ ಕಿಲೋಮೀಟರಿಗೊಂದರಂತೆ ಮೋರಿಗಳಿವೆ.

ಈ ಎಲ್ಲ ವಿದ್ಯಮಾನಗಳಿಂದ ಆದಂತ ಭೂಸವಕಳಿ. ಭೂವಿನ್ಯಾಸದ ಬದಲಾವಣೆಗಳು ಪ್ರಾಕೃತಿಕ ವಿಕೋಪದ ಜೊತೆ ಸೇರಿಯೇ ಈ ರೀತಿಯ ಅನಾಹುತಗಳು ಉಂಟಾಗಿವೆ. ಆದರೆ ಇದುವರೆಗಿನ ಎಲ್ಲ ಅಭಿಪ್ರಾಯ ಮತ್ತು ಹೇಳಿಕೆಗಳು, ಬಹುಷಃ ಆರು ಜನ ಕುರುಡರು ಆನೆಯನ್ನು ವರ್ಣಿಸಿದ ಕತೆಯಂತೆ ಕಂಡುಬರುತ್ತಿದೆ.

ಆದರೆ ರಾಜಕಾರಣಿಗಳು. ಮತ್ತು ಸಮಾಜದ ಕೆಲವು ವರ್ಗಗಳ ಜನ ಈಗಿನ ಎಲ್ಲ ಅನಾಹುತಗಳನ್ನು ಭೂಕಂಪ ಇಲ್ಲವೇ “ಶತಮಾನದ ಮಳೆ”ಯ ತಲೆಗೆ ಕಟ್ಟುವ ಹುನ್ನಾರದಲ್ಲಿದ್ದಾರೆ. ಯಾಕೆಂದರೆ ಯಾವುದೇ ರೀತಿಯ “ಅಭಿವೃಧ್ಧಿ” ಕಾರ್ಯಕ್ರಮಗಳೇ ರಾಜಕಾರಣಿಗಳಿಗೆ. ಗುತ್ತಿಗೆದಾರರಿಗೆ, ದಂಧೆಕೋರರಿಗೆ ಸದಾ ಹಾಲುಕರೆಯುವ ಹಸು. ಇದರೊಂದಿಗೆ ಈಗ ರೆಸಾರ್ಟ್ ಉದ್ಯಮವೂ ಸೇರಿದೆ.ಇದೀಗ ಮತ್ತೆ ಕೊಡಗಿನ ಮೂಲಕ ಕೇರಳಕ್ಕೆ ಪವರ್ ಟ್ರಾನ್ಸ್ ಮಿಷನ್ ಲೈನ್ ಹಾಗೂ ರೈಲ್ವೇ ಸಂಪರ್ಕಕ್ಕೆ ಕೇರಳ ಸರ್ಕಾರ

ದ ಒತ್ತಡವೂ ಹೆಚ್ಚಿದೆ. ಇದರಿಂದ ಸಿಗಬಹುದಾದ ರಾಜಕೀಯ ಮತ್ತು ಆರ್ಥಿಕಲಾಭವನ್ನು ಪಡೆಯಲು ಎಲ್ಲರೂ ಪಕ್ಷಾತೀತರಾಗಿ ಸಿದ್ಧರಾಗುತ್ತಿದ್ದಾರೆ.  ಹಾಗಾದರೆ ಈ ಮಳೆಯಿಂದ ಏನೂ ತೊಂದರೆ ಆಗಿಲ್ಲವೇ ಎಂದರೆ ಖಂಡಿತ ಆಗಿದೆ. ಕಳೆದ ಕೆಲವು ವರ್ಷಗಳಂತೆ ಈ

 ಭಾಗದಲ್ಲಿ ಈ ವರ್ಷವೂ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೆ ಬಹುಷಃ ಯಾವುದೇ ಅನಾಹುತ ಸಂಭವಿಸುತ್ತಿರಲಿಲ್ಲ ಎನಿಸುತ್ತದೆ. ನಾವು ನಮ್ಮ ಎಲ್ಲ ಪ್ರಕೃತಿ ವಿರೋಧಿ ಕೆಲಸಗಳನ್ನು ಇನ್ನಷ್ಟು ಉಗ್ರವಾಗಿ ಮುಂದುವರೆಸುತ್ತಿದ್ದೆವು ಆದರೆ ಮುಂದೆ ಒಂದು ದಿನ ಇದಕ್ಕಿಂತ ಹೆಚ್ಚಿನ ದುರಂತ ಖಂಡಿತ ಕಾದಿರುತ್ತಿತ್ತು.

ಇಷ್ಟು ಮಳೆಯಾದ ಪ್ರದೇಶಗಳನ್ನು ನೋಡುತ್ತ ಬಂದರೆ ಒಂದು ವಿಷಯ ಮನದಟ್ಟಾಗುತ್ತದೆ. ಈಗ ಭೂಕುಸಿತ ಉಂಟಾಗಿರುವ ಪ್ರದೇಶಗಳೆಲ್ಲ ಜಲದ ಕಣ್ಣುಗಳು. ಈ ವರ್ಷ ಸುರಿದ ಮಳೆಗೆ ಭೂಮಿಯ ಒಳಭಾಗದಲ್ಲಿ ಸಂಗ್ರಹವಾಗಿ ನಿರಂತರ ಹೊಳೆ ಹಳ್ಳಗಳಿಗೆ ನೀರೂಡುತ್ತಿದ್ದ ಅಂತರ್ಜಲ ಸಂಗ್ರಹಾಗಾರಗಳು ಒಡೆದು ಛಿದ್ರವಾಗಿವೆ ಮತ್ತು ಬಸಿದು ಹೋಗಿವೆ. ಇದರಿಂದಾಗಿ ಕೇವಲ ಒಂದು ವಾರದ ಬಿಸಿಲಿಗೆ ಹಳ್ಳಗಳಲ್ಲಿ ನೀರು ಬರಿದಾದಂತೆ ಕಾಣುತ್ತಿದೆ. ಯಾಕೆಂದರೆ ಸಂಗ್ರಹಾಗಾರಗಳು ಬರಿದಾದಂತಿವೆ.

ನಾವು ಇತ್ತೀಚಿಗೆ ನೋಡಿದ ಹೆಚ್ಚಿನ ಎಲ್ಲ ಭೂಕುಸಿತವಾಗಿರುವುದು ಸ್ವಾಭಾವಿಕ ಒರತೆಗಳಿದ್ದ ಪ್ರದೇಶಗಳಲ್ಲಿ ಭೂಕುಸಿತದ ಸ್ಥಳಗಳ ಜನರ ಅನುಭವದಂತೆ, ಭೂಕುಸಿತವಾಗುವ ಹಿಂದಿನ ದಿನವೇ ಅದರೆ ಕೆಲವು ಲಕ್ಷಣಗಳು ಕಂಡಿವೆ. ಅಂದರೆ ಭೂಮಿ ಬಿರುಕು ಬಿಟ್ಟಿರುವುದು, ಏನೋ ಶಬ್ದ ಕೇಳಿಸಿದ್ದು ಇತ್ಯಾದಿ. ಆದರೆ ಭೂಕುಸಿತವಾಗುವ ಮೊದಲು ಸುಮಾರಾಗಿ ಬೆಟ್ಟದ ಮಧ್ಯ ಭಾಗದಲ್ಲಿ ಫ್ರೆಷರ್ ಕುಕ್ಕರ್ ನ ವಾಲ್ವ್ ತೆರದುಕೊಂಡಂತೆ ಅಪಾರ ಒತ್ತಡದಿಂದ ಸುಮಾರು ಹತ್ತರಿಂದ ಹದಿನೈದು ಅಡಿಗಳಷ್ಟು ವ್ಯಾಸದ ದೊಡ್ಡ ಗಾತ್ರದ ನೀರು ಇಪ್ಪತ್ತರಿಂದ ಮೂವತ್ತು ಅಡಿಗಳಷ್ಟು ಎತ್ತರಕ್ಕೆ ಚಿಮ್ಮತೊಡಗಿದೆ. ಅಲ್ಲಿಂದ ಪ್ರಾರಂಭವಾದ ಭೂಮಿಯ ಜಾರುವಿಕೆ ಮರ ಮಣ್ಣು ಕಲ್ಲು ಎಲ್ಲವನ್ನೂ ಕೆಳಕ್ಕೆ ತಳ್ಳುತ್ತಾ ಪ್ರಪಾತವನ್ನೇ ನಿರ್ಮಿಸುತ್ತಾ ಕೆಳಗೆ ಬಂದು ತಗ್ಗಿನಲ್ಲಿ ಬಯಲು ಅಥವಾ ಹೊಳೆ ಸಿಗುವವರೆಗೂ ಸಾಗಿದೆ.

ಈ ವಿದ್ಯಮಾನ ಕೊಡಗಿನ ಸೋಮವಾರಪೇಟೆ ಸಮೀಪದ ಕಿರಗಂದೂರು ಮುಂತಾದ ಹಲವು ಕಡೆಗಳಲ್ಲಿ ಹಗಲೇ ನಡೆದಿದ್ದರೆ. ಮಡಿಕೇರಿ ಮಂಗಳೂರು ರಸ್ತೆಯ ಜೋಡುಪಾಲದಂತಹ ಸ್ಥಳಗಳಲ್ಲಿ ರಾತ್ರಿಯ ವೇಳೆ ನಡೆದಿದೆ. ಈಗ ಸ್ಥಳಗಳಲ್ಲಿ ಇಡೀ ಗುಡ್ಡವನ್ನು ಮೇಲಿನಿಂದ ಕೆಳಕ್ಕೆ ಉದ್ದಕ್ಕೆ ಸೀಳಿ ತುಂಡೊಂದನ್ನು ಹೊರಕ್ಕೆ ತೆಗೆದಂತೆ ಕಾಣುತ್ತದೆ. ಈ ಬಗೆಯ ಕುಸಿತವೇ ಹೆಚ್ಚಾಗಿ ಎಲ್ಲ ಕಡೆಗಳಲ್ಲಿ ಕಂಡುಬರುವುದು. ಈ ವರ್ಷದ ನಿರಂತರ ಮಳೆಯಿಂದಾಗಿ ಭೂಮಿಯ ಒಳಭಾಗದಲ್ಲಿ ಸಂಗ್ರವಾದ ಅಪಾರ ಜಲರಾಶಿ ಒತ್ತಡದಿಂದ ಒಡೆದು ಹೊರಬಂದಂತೆ ತೋರುತ್ತದೆ. ಹೀಗೆ ಒಡೆದು ಹೊರಬರುವ ಮುಂಚೆ ಅದು ಭೂಮಿಯ ಒಳಭಾಗದಲ್ಲೂ ಅನೇಕ ಬದಲಾವಣೆ ಕುಸಿತಗಳನ್ನು ಮಾಡಿರಬಹುದು, ಈ ಪ್ರದೇಶದ ಭೂರಚನೆಯೂ ಅದಕ್ಕೆ ಅನುಗುಣವಾಗಿಯೇ ಇದೆ. ಹಾಗಾಗಿ ಬೆಟ್ಟಗಳು ಮೇಲಿನಿಂದ ಕೆಳಗಿನ ವರೆಗೆ ಸೀಳುಬಿಟ್ಟು ನೀರು ಅಪಾರಪ್ರಮಾಣದಲ್ಲಿ ಒಂದೇಬಾರಿ ಸೋರಿಹೋಗಿ ದೊಡ್ಡ ಪ್ರಮಾಣದ ಪ್ರವಾಹ ಉಂಟಾಯಿತಲ್ಲದೆ. ಮಳೆ ನಿಂತ ತಕ್ಷಣ ಪಾತ್ರೆ ಬರಿದಾದಂತೆ ಹೊರಗೆ ಹರಿಯುವ ನೀರಿನ ಪ್ರಮಾಣ ಒಮ್ಮೆಲೆ ಕುಸಿದಿರಬೇಕು. (ಇತ್ತೀಚಿನ ಡ್ರೋನ್ ಚಿತ್ರಗಳು ಇದನ್ನೇ ಸೂಚಿಸುತ್ತವೆ) ಆದರೆ ಭೂಕುಸಿತವಾಗದ ಸ್ಥಳಗಳಲ್ಲೂ ಅಂದರೆ ಇತರ ಕಡೆಗಳ ಹೊಳೆಗಳಲ್ಲೂ ನೀರೇಕೆ ಕಡಿಮೆಯಾಯಿತು.

ಇದರೊಂದಿಗೆ ಇನ್ನೊಂದು ಪ್ರಮುಖ ವಿಚಾರವನ್ನು ಗಮನಿಸಬೇಕು. ಅದು ಮರಳುಗಣಿಗಾರಿಕೆ. ಇಂದು ಮರಳು ಗಣಿಗಾರಿಕೆ, ನದಿಗಳು ಸಮುದ್ರ ಸೇರುವ ಅಳಿವೆಯಿಂದ ಪ್ರಾರಂಭವಾಗಿ ನದೀ ಮೂಲದವರೆಗೂ ನಡೆದಿದೆ.ಈ ಮರಳು ಲೂಟಿ ನದೀ ತಳವನ್ನೇ ಬಗೆದು ಖಾಲಿಮಾಡಿದೆ. ಕಳೆದ ವರ್ಷಗಳಲ್ಲಿ ಬಿದ್ದ ಅತಿಕಡಿಮೆ ಮಳೆಯಿಂದಾಗಿ ಇಡೀ ವರ್ಷವೇ ಹೊಳೆ ಹಳ್ಳಗಳಲ್ಲಿ ಹರಿಯುತ್ತಿದ್ದ ನೀರಿನ ಪ್ರಮಾಣವೂ ಕಡಿಮೆಯೇ ಇತ್ತು. ಈ ವರ್ಷ ಮಳೆ ಹೆಚ್ಚು ಬೀಳುತ್ತಿದ್ದ ಕಾಲದಲ್ಲಿ ತುಂಬಿ ಹರಿದು ಮಳೆನೀಂತ ಕೂಡಲೇ ಕಡಿಮೆಯಾಗಲು ಕಾರಣ ನದೀತಳ ಮತ್ತು ಪಾತ್ರಗಳಲ್ಲಿ ನೀರನ್ನು ಹಿಡಿದಿಟ್ಟುಕೊಂಡು ನಿಧಾನವಾಗಿ ನದಿಗೆ ಮರು ಪೂರಣ ಮಾಡುತ್ತಿದ್ದ ಮರಳು ಮಾಯವಾಗಿರುವುದು. ಇದರಿಂದಾಗಿ ನಮಗೆ ಈ ವರ್ಷ ಎಲ್ಲಕಡೆಗಳಲ್ಲೂ ಇದ್ದಕ್ಕಿದ್ದಂತೆ ನೀರು ಕಡಿಮೆಯಾದಂತೆ ಕಾಣಿಸುತ್ತಿದೆ. ಈ ವರ್ಷವಂತೂ ಆ ಸ್ಥಳಗಳಲ್ಲಿ ಕೆಸರು ಹೂಳು ತುಂಬಿ ನೀರು ಹಿಡಿದಿಡುವ ಶಕ್ತಿ ಇನ್ನಷ್ಟು ಕಡಿಮೆಯಾಗಿದೆ. ಹೂಳಿನ ಮೇಲೆ ಬಿಸಿಲು ಬಿದ್ದಕೂಡಲೇ ನೀರು ಆವಿಯಾಗಿ ಒಣಗಿ ಗಟ್ಟಿಯಾಗುತ್ತದೆ. ಮರಳಿನಂತೆ ಒಳಭಾಗದಲ್ಲೇ ನೀರನ್ನು ಹಿಡಿದಿಟ್ಟುಕೊಳ್ಳುವುದಿಲ್ಲ.

ಆದರೆ ಇತ್ತೀಚೆಗೆ ಪತ್ರಿಕೆಗಳಲ್ಲಿ “ಈ ವರ್ಷ ಒಂದೇ ಬಾರಿಗೆ ದೊಡ್ಡ ಪ್ರಮಾಣದ ಮಳೆ ಬಂದಿದ್ದರಿಂದ ನೀರು ಭೂಮಿಯಲ್ಲಿ ಇಂಗದೆ ಹರಿದು ಹೋಗಿರುವುದು ಹೀಗೆ ಬೇಗ ನೀರಿನ ಹರಿವು ಕಡಿಮೆಯಾಗಲು ಕಾರಣ” ಎಂದು ಕೆಲವರು ಭೂವಿಜ್ಞಾನಿಗಳು ಹೇಳಿದರೆಂದು ವರದಿಯಾಗಿದೆ. ಈ ಮಾತು ಅವಲೋಕನ ,ಅಧ್ಯಯನಗಳಿಲ್ಲದ ಬೀಸು ಹೇಳಿಕೆಯಷ್ಟೆ. ಆ ರೀತಿಯಲ್ಲಿ ನೀರು ಹರಿದು ಹೋಗಲು ಸಾಧ್ಯವಿಲ್ಲ ಯಾಕೆಂದರೆ ಸುಮಾರು ಎಂಬತ್ತು ದಿನಗಳ ಕಾಲ ನಿರಂತರವಾಗಿ ಸುರಿದ ಮಳೆ, ಪ್ರತಿವರ್ಷ ನೀರಿನ ಒರತೆಯಾಗುವ ಸ್ಥಳಗಳಲ್ಲದೆ ಅನೇಕ ಹೊಸ ಒರತೆಗಳೂ ಸೃಷ್ಟಿಯಾಗಿದ್ದವು. ಇವೆಲ್ಲ ಪ್ರತಿ ವರ್ಷಕ್ಕಿಂತ 

ಹೆಚ್ಚು ಪ್ರಮಾಣದ ನೀರು ಭೂಮಿಯಲ್ಲಿ ಇಂಗಿರುವುದಕ್ಕೆ ಸಾಕ್ಷಿಯಾಗಿದ್ದವು.ಜಲದ ಕಣ್ಣುಗಳು ಒತ್ತಡದಿಂದ ಸಿಡಿದು ಭೂಮಿಯನ್ನು ತೊಡೆದುಹಾಕಿ ಮಾಡಿರುವ ಅನಾಹುತದಲ್ಲಿ ನಮ್ಮ ಪಾಲೂ ಖಂಡಿತ ಇದೆ. ಇನ್ನು ಮುಂದಾದರೂ ಪ್ರಕೃತಿಯೊಡನೆ ಸಹಬಾಳ್ವೆ ನಡೆಸಲು ನಾವು ಕಲಿಯದಿದ್ದರೆ ಮುಂದೆಯೂ ಕೂಡಾ ಇಂಥದ್ದು ಆಗದಂತೆ ತಡೆಯಲು ಸಾಧ್ಯವಿಲ್ಲ.

 

(20/09/2018)

ಮತೀಯ ಸಂಘಟನೆಗಳ ಸೇವಾಕಾರ್ಯ ಹಾಗೂ ಹಿಂದಿರುವ ಹಿಡನ್ ಅಜೆಂಡಾ

– ಇರ್ಷಾದ್ ಉಪ್ಪಿನಂಗಡಿ

ಪಕ್ಕದ ರಾಜ್ಯ ಕೇರಳ ಹಾಗೂ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಮಹಾ ಪ್ರವಾಹ ಅಪಾರ ಪ್ರಮಾಣದ ಜೀವ ಹಾಗೂ ಆಸ್ತಿ ಪಾಸ್ತಿ ಹಾನಿಯನ್ನು ಉಂಟುಮಾಡಿತ್ತು. ಮಹಾ ಪ್ರವಾಹಕ್ಕೆ ತುತ್ತಾಗಿ ಜನಸಾಮಾನ್ಯರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸಹಾಯಕ್ಕೆ ಧಾವಿಸುವುದು ತಮ್ಮ ಕರ್ತವ್ಯ ಎಂದು ಭಾವಿಸಿ ಹಲವಾರು ಸಂಘಟನೆಗಳು, ಸ್ವಯಂ ಸೇವಕರು, ವಿದ್ಯಾರ್ಥಿಗಳು, ವೈದ್ಯರು ಹಾಗೂ ಸರ್ಕಾರಿ ಅಧಿಕಾರಿಗಳು ಜೀವದ ಹಂಗು ತೊರೆದು ಸ್ವಂದಿಸಿದರು. ಆಹಾರ, ಹಣಕಾಸು, ದಿನಬಳಕೆಯ ವಸ್ತುಗಳ ನೆರವಿನ ಜೊತೆಗೆ ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದರು. ಹೀಗೆ, ದುರಂತದ ಸಂದರ್ಭಗಳಲ್ಲಿ ಸಹಜೀವಿಯ ರಕ್ಷಣೆಗೆ ಜನರು, ಸಂಘಸಂಸ್ಥೆಗಳು ಧಾವಿಸಿದ್ದು ಇದೇ ಮೊದಲೇನಲ್ಲ. ದೇಶದಲ್ಲಿ ಈ ಹಿಂದೆಯೂ ಸಂಭವಿಸಿದ ಹಲವಾರು ಪಾಕೃತಿಕ ವಿಕೋಪದ ಪರಿಸ್ಥಿತಿಯಲ್ಲಿ ಸರ್ಕಾರಿ ರಕ್ಷಣಾ ಕಾರ್ಯಾಚರಣೆ ಪಡೆಗಳೊಂದಿಗೆ ಜನರು ಹಾಗೂ ಖಾಸಗಿ ಸಂಘಸಂಸ್ಥೆಗಳು ಭಾಗಿಯಾಗಿ ತಮ್ಮ ಕೈಲಾದ ಸಹಾಯವನ್ನು ಮಾಡಿ ಮಾನವೀಯತೆಯನ್ನು ಮೆರೆದಿವೆ. ಇಂತಹ 

ಸನ್ನಿವೇಶಗಳಲ್ಲಿ ತೊಂದರೆಗೊಳಗಾದ ಜನರ ಸಹಾಯಕ್ಕೆ ಧಾವಿಸುವ ಹಲವಾರು ರಾಜಕೀಯ ಹಾಗೂ ರಾಜಕೀಯ ರಹಿತ ಸಂಘಸಂಸ್ಥೆಗಳ ಪೈಕಿ ಹಲವರಿಗೆ ಪ್ರಾಮಾಣಿಕ ಉದ್ದೇಶ ಇರುತ್ತದೆ. ಮತ್ತೆ ಕೆಲವರಿಗೆ ಸೇವೆಯ ಜೊತೆಗೆ ಪ್ರಚಾರ ಪಡೆಯುವ ಉದ್ದೇಶವೂ ಇರುತ್ತದೆ. ಹೀಗೆ ಒಂದಿಷ್ಟು ಪ್ರಚಾರ ಪಡೆದುಕೊಳ್ಳುವುದು ತಪ್ಪು ಎಂದು ಹೇಳುವುದು ಅಷ್ಟೊಂದು ಸಮಂಜಸವಲ್ಲ. ಆದರೆ ಇಂತಹ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜನರ ಸಹಾಯಕ್ಕೆ ಧಾವಿಸುವ ಮತಾಂಧ ವಿಚಾರಧಾರೆಗಳನ್ನು ಹೊಂದಿರುವ ರಾಜಕೀಯ/ ಧಾರ್ಮಿಕ ಸಂಘಟನೆಗಳ ಕಾರ್ಯವೈಖರಿ ಹಾಗೂ ಹಿಡನ್ ಅಜೆಂಡಾ ಇಲ್ಲಿ ಚರ್ಚೆಯಾಗಲೇ ಬೇಕು.

ಸಂಘ ಪರಿವಾರದ ಸಂಘಟನೆಗಳು ದೇಶದ ಯಾವುದೇ ಭಾಗದಲ್ಲಿ ಪಾಕೃತಿಕ ವಿಕೋಪಗಳು ನಡೆದಂತಹ ಸಂದರ್ಭದಲ್ಲಿ ಜನರ ಸಹಾಯಕ್ಕೆ ಧಾವಿಸುತ್ತವೆ. ಇದು ಸಂಘಪರಿವಾರದ ಸಂಘಟನಾ ಕಾರ್ಯತಂತ್ರದ ಭಾಗವೂ ಹೌದು. ಗುಜರಾತ್ ಭೂಕಂಪದ ಘಟನೆಯಿಂದ ಹಿಡಿದು, ಬಿಹಾರ ನೆರೆ, ನೇಪಾಲ ಭೂಕಂಪ ಹಾಗೂ ಇತ್ತೀಚಿನ ಕೇರಳ ಹಾಗೂ ಕೊಡಗು ಮಹಾಪ್ರವಾಹದ ಸಂದರ್ಭದಲ್ಲೂ ಸಂಘಪರಿವಾರದ ಸ್ವಯಂಸೇವಕರು ಖಾಕಿ ಚೆಡ್ಡಿ ತೊಟ್ಟು ಕಾರ್ಯಾಚರಣೆಗೆ ಇಳಿದಿದ್ದಾರೆ. ಇಷ್ಟೇ ಯಾಕೆ 1965 ಇಂಡಿಯಾ- ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ದೆಹಲಿಯಲ್ಲಿ ವಾಹನ ಸಂಚಾರ ನಿಯಂತ್ರಣ ಮಾಡುವ ಕೆಲಸವನ್ನೂ ಸಂಘಪರಿವಾರ ಮಾಡಿತ್ತು. ಅಂದಿನ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಸಂಘಟನೆಯ ಪ್ರಮುಖರು ಸಂಪರ್ಕಿಸಿದ ಹಿನ್ನೆಲೆಯಲ್ಲಿ ಶಾಸ್ತ್ರಿ ಒಪ್ಪಿಗೆ ಸೂಚಿಸಿದ್ದರಂತೆ. ಸಂಘಪರಿವಾರದ ಮತಾಂಧತೆ ಹಾಗೂ ರಕ್ತಪಾತದದ ಇತಿಹಾಸದ ಕುರಿತಾಗಿ ಚರ್ಚೆ ನಡೆಯುವ ಸಂದರ್ಭದಲ್ಲಿ ಸಂಘಟನೆಯ ಇಂತಹ ಸೇವಾ ಕಾರ್ಯಗಳನ್ನು ಮುಂದಿಟ್ಟು ಹಲವರು ಸಮರ್ಥನೆಯನ್ನು ಕೊಡುತ್ತಾರೆ. ಇದು ಕೇವಲ ಹಿಂದುತ್ವ ಮತೀಯ ಸಂಘಟನೆಗಳಿಗೆ ಮಾತ್ರ ಸೀಮಿತವಾಗಿಲ್ಲ. 

ಇತ್ತೀಚೆಗೆ ಮುಸ್ಲಿಂ ಸಮುದಾಯದಲ್ಲಿ ಆಳವಾಗಿ ಬೇರೂರುತ್ತಿರುವ ಮತೀಯ ಸಂಘಟನೆ ಹಾಗೂ ಅದರ ರಾಜಕೀಯ ಪಕ್ಷ ಕೂಡಾ ಸೇವಾ ಕಾರ್ಯವನ್ನು ತಮ್ಮ ಕಾರ್ಯತಂತ್ರದ ಒಂದು ಭಾಗವಾಗಿ ಅಳವಡಿಸಿಕೊಂಡಿದೆ. ಕೇರಳ ಹಾಗೂ ಕೊಡಗು ಮಹಾ ಪ್ರವಾಹದ ಸಂದರ್ಭದಲ್ಲಿ ಮುಸ್ಲಿಂ ಮೂಲಭೂತವಾದಿ ಸಂಘಟನೆಯೊಂದರ ಕಾರ್ಯಕರ್ತರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಸಂತ್ರಸ್ತರ ಶಿಬಿರಗಳನ್ನು ಶಿಸ್ತು ಬದ್ಧವಾಗಿ ನಡೆಸುವ ಮೂಲಕ ಜನರಿಂದ ಮೆಚ್ಚುಗೆಯನ್ನು ಪಡೆದುಕೊಂಡರು. ಜೊತೆಗೆ ಮಾಧ್ಯಮಗಳ ಗಮನವನ್ನೂ ಸೆಳೆದಿದ್ದರು. ಸರ್ಕಾರಿ ಅಧಿಕಾರಿಗಳಿಂದಲೂ ಪ್ರಶಂಸೆಯನ್ನು ಪಡೆದುಕೊಂಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದರು.

ನಾವು ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಹಲವಾರು ಅಂಶಗಳಿವೆ. ಹಿಂದೂ ಹಾಗೂ ಮುಸ್ಲಿಂ ಮತೀಯ ವಿಚಾರಧಾರೆ ಹೊಂದಿರುವ ಸಂಘಟನೆಗಳು ಅಪಾಯದ ಸಂದರ್ಭಗಳಲ್ಲಿ ಜನರ ರಕ್ಷಣೆಗೆ ಸ್ವಯಂಸ್ಪೂರ್ತಿಯಿಂದ ಧಾವಿಸಿದರೆ ಅದು ತಪ್ಪೆಂದು ವಾದಿಸಲು ಅಸಾಧ್ಯ. ಆದರೆ , ಅವರ ಸೇವಾ ಮನೋಭಾವದ ಹಿಂದಿರುವ ಗುಪ್ತ ಉದ್ದೇಶ ಏನು ಎಂಬುವುದನ್ನು ಅರಿತು

ಕೊಳ್ಳಬೇಕಾಗಿದೆ. ಇಂತಹ ಸಂದರ್ಭದಲ್ಲಿ ಸೇವಾ ಮನೋಭಾವದ ಜೊತೆಗೆ ಸಂಘಟನೆಯನ್ನು ವಿಸ್ತರಿಸುವ ಹಾಗೂ ಕ್ಯಾಡರ್ ಗಳನ್ನು ತಯಾರಿಸುವ ಉದ್ದೇಶಗಳನ್ನು ಇವರು ಹೊಂದಿದ್ದಾರೆ ಎಂಬುದು ಸ್ಪಷ್ಟ. ಜೊತೆಗೆ ಪ್ರಮುಖವಾಗಿ ಅಂತಹಾ ಸಂಘಟನೆಗಳ ಬಗ್ಗೆ ಜನಸಮಾನ್ಯರು ಹೊಂದಿರುವ ಭಾವನೆಗಳನ್ನು ಬದಲಾಯಿಸಲು ಈ ಸಂದರ್ಭಗಳನ್ನು ಒಂದು ಅವಕಾಶವಾಗಿ ಬಳಸುತ್ತಾರೆ ಎಂಬುದು ಗಮನಿಸಬೇಕಾದ ವಿಚಾರ. ದುರಂತಗಳು ಸಂಭವಿಸಿದ ಸಂದರ್ಭದಲ್ಲಿ ಸರ್ಕಾರಿ ವ್ಯವಸ್ಥೆಗಳಿಗಿಂತಲೂ ತಾವು ವೇಗವಾಗಿ ಸ್ಪಂದಿಸುತ್ತೇವೆ ಹಾಗೂ ತಮ್ಮ ಸಮುದಾಯದ ಜನರ ಮನಸ್ಸಿಗೆ ತಟ್ಟುವಂತಹ ಕೆಲಸವನ್ನು ಮಾಡುವ ಮೂಲಕ ಜನರ ವಿಶ್ವಾಸವನ್ನು ಪಡೆದುಕೊಳ್ಳುವ ವ್ಯವಸ್ಥಿತ ಅಜೆಂಡಾವನ್ನು ಇವರು ಹೊಂದಿದ್ದಾರೆ. ಈ ಕಾರಣದಿಂದಾಗಿಯೇ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ ಭಾರತೀಯ ಸೇನೆ ತಲುಪದಂತಹ ಸ್ಥಳಕ್ಕೂ ನಮ್ಮ ಸಂಘಟನೆ ತಲುಪಿದೆ ಎಂಬ ಸಂದೇಶ ಹೊಂದಿದ ಪೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಇದರ ಜೊತೆಗೆ ಇತರ ಸಮುದಾಯದ ಜನರಿಗೆ ಸಹಾಯ ಮಾಡುವ ಮೂಲಕ ಅದನ್ನು ಮಾಧ್ಯಮಗಳ ಗಮನಕ್ಕೆ ತಂದು ತಮಗೆ ಅಂಟಿದ ಕಲೆಗಳನ್ನು ತೊಡೆದುಹಾಕುವ ಪ್ರಯತ್ನವನ್ನೂ ಕೋಮುವಾದಿ ಸಂಘಟನೆಗಳು ಮಾಡುತ್ತವೆ. ಈ ನಿಟ್ಟಿನಲ್ಲಿ ಬಹುಸಂಖ್ಯಾತ ಹಾಗೂ ಅಲ್ಪಸಂಖ್ಯಾತ ಮತೀಯವಾದಿ ಸಂಘಟನೆಗಳು ಅನುಸರಿಸುತ್ತಿರುವ ಕಾರ್ಯತಂತ್ರ ಭಿನ್ನವಾಗಿರುತ್ತದೆ.

ಯಾವುದೇ ಧರ್ಮ- ಜಾತಿ, ಬಡವ- ಶ್ರೀಮಂತ ಎಂದು ನೋಡದೆ ಎಲ್ಲವನ್ನೂ ಕೊಚ್ಚಿಕೊಂಡು ಹೋದ ಕೊಡಗು ಮಹಾಪ್ರವಾಹದಿಂದ ಸಂತ್ರಸ್ತರಾದ ಜನರು ಆಶ್ರಯ ಪಡೆದುಕೊಳ್ಳುತ್ತಿರುವ ಪರಿಹಾರ ಕೇಂದ್ರಗಳಲ್ಲಿ ಧರ್ಮದ ಆಧಾರದಲ್ಲಿ ವಿಭಜನೆ ಕಾಣ ಸಿಕ್ಕಿತ್ತು. ಸಂಪೂರ್ಣ ಜಿಲ್ಲಾಡಳಿತದ ಹಿಡಿತದಲ್ಲಿರುವ ಪರಿಹಾರ ಕೇಂದ್ರಗಳಲ್ಲಿ ಎಲ್ಲಾ ಸಮುದಾಯದ ನಿರಾಶ್ರಿತ ಜನರಿದ್ದರು. ಸರ್ಕಾರ ನಡೆಸುವ ಪರಿಹಾರ ಕೇಂದ್ರಗಳ ಜೊತೆಗೆ ಎರಡೂ ಧರ್ಮದ ಮತೀಯವಾದಿ ಸಂಘಟನೆಗಳ ಸೇವಾಘಟಕಗಳು ನಡೆಸುತ್ತಿರುವ ಸಂತ್ರಸ್ತರ ಕೇಂದ್ರಗಳಿದ್ದವು. ಹೀಗೆ ನಿರಾಶ್ರಿತರ ಕೇಂದ್ರಗಳನ್ನು ತಮ್ಮ ಹಿಡಿತದಲ್ಲಿ ನಡೆಸುವ ಮೂಲಕ ತಮ್ಮ ತಮ್ಮ ಸಮುದಾಯಗಳಿಗೆ ಅಗತ್ಯ ಸಂದರ್ಭಗಳಲ್ಲಿ ನೆರವಿಗೆ ಬರುವವರು ನಾವೇ ಎಂಬುವುದನ್ನು ಸಾರಿ ಹೇಳುವ ಗುಪ್ತ ಉದ್ದೇಶ ಇದರಲ್ಲಿ ಅಡಗಿದೆ. ಸೂಕ್ಷ್ಮವಾಗಿ ಇವುಗಳನ್ನು ಗಮನಿಸಿದರೆ ಮತೀಯ ವಿಭಜನೆಯ ಆಳವನ್ನು ತೆರೆದಿಡುತ್ತವೆ. ಈ ಮೂಲಕ ಮತೀಯ ಧ್ರವೀಕರಣಕ್ಕೆ ಎರಡು ಧರ್ಮದ ಮತೀಯವಾದಿ ಸಂಘಟನೆಗಳು ದಾರಿ ಮಾಡಿಕೊಡುತ್ತಿವೆ. ಸರ್ಕಾರದ ಹಾಗೂ ಅಧಿಕಾರಿಗಳ ವೈಫಲ್ಯಗಳು ಕೋಮುವಾದಿ ಸಂಘಟನೆಗಳಿಗೆ ಇಂತಹ ಸಂದರ್ಭಗಳಲ್ಲಿ ತಮ್ಮ ಹಿಡನ್ ಅಜೆಂಡಾಗಳನ್ನು ಜಾರಿಗೊಳಿಸುವ ಮೂಲಕ ಅದರ ಲಾಭವನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಿಕೊಡುತ್ತಿದೆ ಎಂಬುವುದು ಸತ್ಯ.

ಧರ್ಮದ ಆಧಾರದಲ್ಲಿ ದೇಶದಲ್ಲಿ ಕೋಮುವಾದವನ್ನು ಭಿತ್ತಿ ಮಹಾ ವಿಕೋಪವನ್ನು ಸೃಷ್ಟಿಸಿದ ಮತಾಂಧರು ಈ ದೇಶಕ್ಕೆ ಮಾಡಿರುವ ಹಾನಿ ಅಪಾರ. ಪ್ರಕೃತಿ ವಿಕೋಪಗಳಿಂದಾದ ಹಾನಿಯನ್ನು ಸರಿಡಿಸಲು ಸರ್ಕಾರಕ್ಕೆ ಅಬ್ಬಬ್ಬಾ ಅಂದರೆ ಒಂದೆರಡು ವರ್ಷಗಳು ಸಾಕಾಗಬಹುದು. ಆದರೆ ಧರ್ಮದ ಹೆಸರಿನಲ್ಲಿ ದ್ವೇಷದ ಭಾವನೆ ಭಿತ್ತಿ ಜನರ ಮನಸ್ಸುಗಳನ್ನು ವಿಭಜಿಸುವ ಮೂಲಕ ಉಂಟುಮಾಡಿದ ಹಾನಿಯನ್ನು ಸರಿಪಡಿಸಲು ಅಸಾಧ್ಯ. ಮತೀಯ ಸಂಘಟನೆಗಳು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜನರ ರಕ್ಷಣೆಗೆ ಧಾವಿಸಿ ಅವರು ಮಾಡಿದ ಸೇವಾಕಾರ್ಯಗಳಿಗಿಂತ ಹತ್ತು ಪಟ್ಟು ಅಧಿಕ ಪ್ರಚಾರ ಪಡೆದುಕೊಂಡು ತಮ್ಮ ಪಾಪ ಕೃತ್ಯಗಳಿಗೆ ಸಮರ್ಥನೆಯನ್ನು ನೀಡುವುದರ ಜೊತೆಗೆ ಜನರ ಮನಸ್ಸಿನಲ್ಲಿ ಅನುಕಂಪ ಗಿಟ್ಟಿಸಿಕೊಳ್ಳುವ ಹಿಡನ್ ಅಜೆಂಡಾವನ್ನು ನಾವು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳಬೇಕಾಗಿದೆ.

 

ನಾಗರ ಹುತ್ತದಲ್ಲಿ ವೈದಿಕರು !

ನಾಗಾರಾಧನೆ ಎಂಬ ಕಿರುಸಂಸ್ಕೃತಿಯ ತುರ್ತು ರಕ್ಷಣೆ ಮುಂದಾಗಬೇಕಿದೆ ತುಳುವರು!

                                                                                                                            – ನವೀನ್ ಸೂರಿಂಜೆ

ಕರಾವಳಿಯಲ್ಲಿ ನಡೆಯುವ ನಾಗರಪಂಚಮಿಗೂ, ಕರ್ನಾಟಕದ ಇತರ ಭಾಗದಲ್ಲಿ ನಡೆಯುವ ನಾಗರಪಂಚಮಿಗೂ ಅಜಗಜಾಂತರ ವ್ಯತ್ಯಾಸವಿದೆ. ಕರಾವಳಿಯಲ್ಲಿ ನಾಗನ ಕಲ್ಲನ್ನು ಬ್ರಾಹ್ಮಣರು ಹೊರತುಪಡಿಸಿ ಉಳಿದವರು ಮುಟ್ಟುವಂತೆಯೇ ಇಲ್ಲ. ಉಳಿದ ಜಾತಿಗಳವರು ಕೊಡುವ ಪೂಜಾ ಸಾಮಾಗ್ರಿಗಳಿಂದ ಬ್ರಾಹ್ಮಣರಷ್ಟೇ ಪೂಜೆ ಮಾಡಬೇಕು. ಕರಾವಳಿ ಹೊರತುಪಡಿಸಿದ ಕಡೆಯೆಲ್ಲಾ ನೇರವಾಗಿ ಯಾವುದೇ ಜಾತಿಗಳವರು ನಾಗಕಲ್ಲನ್ನು ಮುಟ್ಟಿ ನೇರವಾಗಿ ಪೂಜೆ ಮಾಡಬಹುದು. ವಾಸ್ತವವಾಗಿ ಈ ನಾಗನಿಗೂ ವೈದಿಕರಿಗೂ ಸಂಬಂಧವೇ ಇಲ್ಲ. ಮದ್ವಾಚಾರ್ಯರು, ಶಂಕರಾಚಾರ್ಯರ ಪ್ರಭಾವದಿಂದಾಗಿ ಶೂದ್ರರ ನಾಗರಾಧನೆಯ ಸಂಸ್ಕೃತಿಯನ್ನೇ ದರೋಡೆ ಮಾಡಲಾಯಿತು.

ನಾಗ ಅಥವಾ ಸರ್ಪನಿಗೆ ಪಂಚಮಿಯಾಗಲೀ, ನಾಗಮಂಡಲವಾಗಲೀ, ಅಶ್ಲೇಷ ಬಲಿಯಾಗಲೀ ಕೊಡುವ ಕ್ರಮವೇ ಇರಲಿಲ್ಲ. ಕರಾವಳಿಯಲ್ಲಿ ನಾಗಬೆಮ್ಮೆರು ಹಿಂದೂಗಳ ಮೂಲ ದೈವ. ಭೂತಾರಾಧನೆಯ ರೀತಿಯಲ್ಲೇ ನಾಗಾರಾಧನೆಯನ್ನು ದಲಿತರು ಶೂದ್ರರು ಮಾಡುತ್ತಿದ್ದರು. ನಾಗ ಅಥವಾ ಸರ್ಪನಿಗೆ ಪಂಚಮಿಯಾಗಲೀ, ನಾಗಮಂಡಲವಾಗಲೀ, ಅಶ್ಲೇಷ ಬಲಿಯಾಗಲೀ ಕೊಡುವ ಕ್ರಮವೇ ಇರಲಿಲ್ಲ. ಕರಾವಳಿಯಲ್ಲಿ ನಾಗಬೆಮ್ಮೆರು ಹಿಂದೂಗಳ ಮೂಲ ದೈವ. ಭೂತಾರಾಧನೆಯ ರೀತಿಯಲ್ಲೇ ನಾಗಾರಾಧನೆಯನ್ನು ದಲಿತರು ಶೂದ್ರರು ಮಾಡುತ್ತಿದ್ದರು. ಭೂತಾರಾಧನೆಯಲ್ಲಿ ವೈದಿಕ ಧರ್ಮ ನುಸುಳಲು ಇನ್ನೂ ಪ್ರಯತ್ನಿಸುತ್ತಿದೆಯಾದರೆ, ನಾಗಾರಾಧನೆಯನ್ನು ಭಾಗಶಃ ಆಕ್ರಮಿಸಿಕೊಂಡಿದೆ. ಅಲ್ಪ ಸ್ವಲ್ಪ ಉಳಿದಿರುವ ನಾಗಾರಾಧನೆಯ ಮೂಲ ಸಂಸ್ಕೃತಿಯನ್ನು ಉಳಿಸುವುದು ಕರಾವಳಿಗರ ಜವಾಬ್ದಾರಿಯಾಗಿದೆ.

ಮಂಜೇಶ್ವರ ಭಾಗದಲ್ಲಿ ಈಗಲೂ ನಾಗಾರಾಧನೆಯೆಂದರೆ ದೈವರಾಧನೆಯ ರೀತಿಯದ್ದೇ ಆದ ಸರ್ಪ ಕೋಲ. ಮಾರ್ಚ್ ತಿಂಗಳ ವೇಳೆಯಲ್ಲಿ ಕರಾವಳಿಯಲ್ಲಿ ಭೂತ ಕೋಲ ನಡೆಯುವಂತೆ ಸರ್ಪಕೋಲ ನಡೆಯುತ್ತದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸರ್ಪಕೋಲ ಸಂಪೂರ್ಣ ನಶಿಸಿ ಹೋಗಿ ವೈದಿಕರ ಪೂಜಾವಿಧಾನಗಳು ಜಾರಿಯಲ್ಲಿದ್ದರೆ ಮಂಜೇಶ್ವರ ಭಾಗದಲ್ಲಿ ಇನ್ನೂ ಸರ್ಪಕೋಲ ಉಳಿದುಕೊಂಡಿದೆ. ಈ ಸರ್ಪಕೋಲವನ್ನು ಅಳಿವಿನಂಚಿನಲ್ಲಿರುವ ಸೂಕ್ಷ್ಮ ಕಿರು ಸಂಸ್ಕೃತಿ ಎಂದು ಘೋಷಿಸಿ ರಕ್ಷಿಸುವ ಕೆಲಸವನ್ನು ಮಾಡಬೇಕಿದೆ.

ಮಂಜೇಶ್ವರದ ಐಸ್ರಾಳ ಗುತ್ತು ನಾಗಬನ ಸೇರಿದಂತೆ ಕೆಲವೆಡೆಯಷ್ಟೇ ಈಗಲೂ ಸರ್ಪಕೋಲ ನಡೆಯುತ್ತಿದೆ. ನಲಿಕೆ ಜನಾಂಗದ ನಾಗನ ಪಾತ್ರಧಾರಿ ಸರ್ಪ ದೈವವನ್ನು ಮೈಮೇಲೆ ಅವಾಹಿಸಿಕೊಳ್ಳುತ್ತಾರೆ. ಸರ್ಪಕೋಲದಲ್ಲಿ ಇಬ್ಬರು ಪಾತ್ರಧಾರಿಗಳು ಇರುತ್ತಾರೆ. ಒಬ್ಬರು ಪಾತ್ರಧಾರಿ ಮತ್ತೊಬ್ಬರು ಮಂತ್ರವಾದಿ ಪಾತ್ರಧಾರಿ. ಸರ್ಪದೈವವನ್ನು ತನ್ನ ಮೈಮೇಲೆ ಆವಾಹಿಸಿಕೊಳ್ಳುವ ಪಾತ್ರಧಾರಿ ಅಡಕೆಯ ಹಾಳೆಯಲ್ಲಿ ರಚಿಸಿದ ಸರ್ಪದಹೆಡೆಯ ಮುಖವಾಡವನ್ನು ಹಲ್ಲಲ್ಲಿ ಕಚ್ಚಿಕೊಂಡು ಧರಿಸಿರುತ್ತಾನೆ. ಹಾವಿನಂತೆ ತೆವಲುತ್ತಾ, ಮಲಗುತ್ತಾ ನಿಧಾನಕ್ಕೆ ಸಂಚರಿಸುವ ಸರ್ಪ ಪಾತ್ರಧಾರಿಗೆ ಎಲೆಗಳನ್ನು ಎರಚುವ ಮೂಲಕ ಮಂತ್ರವಾದಿ ಕೋಪಗೊಳಿಸುತ್ತಾನೆ. ಇದೇ ರೀತಿ ಕೋಲಪೂರ್ತಿ ಸರ್ಪವನ್ನು ಸುಸ್ತುಗೊಳಿಸಿ ಮಂತ್ರಧಾರಿಯವ ವಶಪಡಿಸಿಕೊಳ್ಳುತ್ತಾನೆ. ಅಲ್ಲಿಗೆ ಊರಿಗೆ, ನಾಡಿನ ಜನರಿಗೆ ಅಥವಾ ಸರ್ಪಕೋಲ ನಡೆಸುವ ಕುಟುಂಬಕ್ಕೆ ಅಂಟಿದ ಸರ್ಪ ಕಂಟಕಗಳು ಪರಿಹಾರವಾಯ್ತು ಎಂದರ್ಥ.

ದಲಿತ ಸಮುದಾಯಗಳೇ ಪಾತ್ರಿಗಳಾಗಿ ನಡೆಸುತ್ತಿದ್ದ ಸರ್ಪಕೋಲವು ನಂತರದ ದಿನಗಳಲ್ಲಿ ಶೂದ್ರ, ದಲಿತರ ಉಳಿದ ಕಿರುಸಂಸ್ಕೃತಿಗಳ ರೀತಿಯಲ್ಲೇ ವೈದಿಕೀಕರಣಗೊಂಡಿತು. ಬ್ರಾಹ್ಮಣರ ವೈದ್ಯ ಎನ್ನುವ ಸಮುದಾಯ ಕರಾವಳಿಯಲ್ಲಿ ಈಗ ನಾಗಪಾತ್ರಿಯಾಗಿದೆ. ಕೋಟಿ ಕೋಟಿ ವೆಚ್ಚದಲ್ಲಿ ನಡೆಯುವ ನಾಗಮಂಡಲದ ಗುತ್ತಿಗೆಯನ್ನು ಇದೇ ನಾಗಪಾತ್ರಿಗಳು ತೆಗೆದುಕೊಳ್ಳುತ್ತಾರೆ. ಹೂ ಮತ್ತು ಹಣ್ಣುಗಳಿಂದ ಅಲಂಕೃತವಾದ ವೇದಿಕೆಯಲ್ಲಿ ಹತ್ತಾರು ಕ್ವಿಂಟಾಲ್ ಅಡಿಕೆ ಮರದ ಹೂವನ್ನು (ಪಿಂಗಾರ) ಬಳಕೆ ಮಾಡಿಕೊಂಡು ನಾಗನೃತ್ಯ ಮಾಡಲಾಗುತ್ತದೆ. ಇದು ಸರ್ಪಕೋಲದ ನಕಲು. ದಲಿತ ನಲಿಕೆ ಸಮುದಾಯದವರು ಮಾಡುವ ಸರ್ಪಕೋಲ ಬರಿಯ ಗದ್ದೆಯಲ್ಲಿ ಅಡಕೆ ಹಾಳೆಯಲ್ಲಿ ಮುಗಿದರೆ ಬ್ರಾಹ್ಮಣರು ನಡೆಸುವ ನಾಗಮಂಡಲಕ್ಕೆ ಕೋಟಿಕೋಟಿ ಸುರಿಯಲಾಗುತ್ತದೆ. ತುಳುನಾಡಿನ ಬುಡಕಟ್ಟುಗಳಾಗಿರುವ ದಲಿತರು, ಬಂಟರು, ಬಿಲ್ಲವರು ಮತ್ತಿತರ ಶೂದ್ರ ಜಾತಿಗಳು ದೇವರನ್ನು ನಂಬುತ್ತಿರಲಿಲ್ಲ. ಭೂತಗಳನ್ನು ಮಾತ್ರ ಆರಾಧಿಸುತ್ತಿದ್ದರು. ನಾಗ ಬಿರ್ಮೆರು ಇಲ್ಲಿನ ಮೂಲ ದೈವವಾಗಿತ್ತು. ಈಗ ಬಂಟರು ಬಿಲ್ಲವರು ಮುಂಬೈ ಮತ್ತು ವಿದೇಶದಲ್ಲಿ ಸಂಪಾದಿಸಿ ಹಣವನ್ನು ವೈದಿಕರ ನಾಗಮಂಡಲಕ್ಕೆ ವ್ಯಯ ಮಾಡುತ್ತಿದ್ದಾರೆ. ಸರ್ಪಕೋಲವನ್ನು ಮರೆತೇ ಬಿಟ್ಟಿದ್ದಾರೆ.

ನಾಗರ ಪಂಚಮಿಯಂದು ನಾಗನ ಕಲ್ಲಿಗೆ ಹಾಲು ಹುಯ್ಯುವ ಸಂಪ್ರದಾಯ ತುಳುನಾಡಿನ ಬುಡಕಟ್ಟಿನಲ್ಲಿ ಇರಲಿಲ್ಲ. ದೈವಗಳಿಗೆ ಹೇಗೆ ಹೂ ನೀರು ಇಡಲಾಗುತ್ತದೋ ಅದನ್ನೇ ನಾಗ ಬಿರ್ಮೆರೆ ಗುಡಿಗೂ ಮಾಡಲಾಗುತ್ತಿತ್ತು. ಈಗಲೂ ಹಲವು ನಾಗಬಿರ್ಮೆರೆ ಗುಡಿಯಲ್ಲಿ ನಾಗನನ್ನು ದೈವದ ರೀತಿಯಲ್ಲೇ ಆರಾಧನೆ ಮಾಡಲಾಗುತ್ತಿದೆ.

ಬಹುಶಃ ಶಂಕರಾಚಾರ್ಯರು, ಮದ್ವಾಚಾರ್ಯರ ವೈದಿಕ ಧರ್ಮ ಪ್ರಚಾರ ನಾಗನನ್ನು ದೇವರಾಗಿಸಿ, ಪೌರಾಣಿಕ ಕತೆಯ ಭಾಗವಾಗಿಸಿ ಸರ್ಪಕೋಲವನ್ನು ನಾಶ ಮಾಡಿತು. ಕುಕ್ಕೆ ಸುಬ್ರಹ್ಮಣ್ಯವನ್ನು ಕ್ಷೇತ್ರವನ್ನು ನಾಗನದೇವರ ಆದಿ ಕ್ಷೇತ್ರ ಎಂದು ಶಂಕರರು ಕರೆದರು. ಕುಕ್ಕೆ ಸುಬ್ರಹ್ಮಣ್ಯ ಮೂಲತಹ ಬುಡಕಟ್ಟು ಆದಿವಾಸಿಗಳಾದ ಮಲೆಕುಡಿಯರಿಗೆ ಸೇರಿದ್ದು. ಕುಮಾರಾಧಾರ ನದಿಯ ಅಂಚಿನ ಕಾಡಿನಲ್ಲಿ ವಾಸಿಸುತ್ತಿದ್ದ ಮಲೆಕುಡಿಯರು ಬಿದಿರಿನ ಕುಕ್ಕೆಯೊಳಗಡೆ ಕಲ್ಲನ್ನಿರಿಸಿ ನಾಗನ ಆರಾಧನೆ ಮಾಡುತ್ತಿದ್ದರು. ವೈದಿಕ ಧರ್ಮಪ್ರಚಾರಕ್ಕೆ ಬಂದ ಶಂಕರರು ಕುಕ್ಕೆಯ ನಾಗ ಪೂಜೆಯನ್ನು ಸ್ಮಾರ್ತ ಬ್ರಾಹ್ಮಣರಿಗೆ ವಹಿಸಿದರು. ಬ್ರಿಟೀಷರ ಕಾಲದಲ್ಲಿ ಮಾಧ್ವರು ಸ್ಮಾರ್ತರಿಂದ ಕುಕ್ಕೆಯ ಪೂಜೆಯನ್ನು ವಶಪಡಿಸಿಕೊಂಡರು. ಈಗಲೂ ಕುಕ್ಕೆ ಸುಬ್ರಹ್ಮಣ್ಯನ ರಥವನ್ನು ಮಲೆಕುಡಿಯರೇ ಕಾಡಿನಿಂದ ಬಿದಿರನ್ನು ಸಂಗ್ರಹಿಸಿ ಅವರೇ ಸಿದ್ದಗೊಳಿಸಬೇಕು. ಕುಕ್ಕೆಗೂ ಮಲೆಕುಡಿಯರಿಗೂ ಇರುವ ಸಂಬಂಧಕ್ಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ರಥವೇ ಸಾಕ್ಷಿ.

ನಾಗ ದೈವಕ್ಕೆ ತುಳುನಾಡಿನಲ್ಲಿ ಆದಿ ಯಾವುದು ಅಂತ್ಯ ಯಾವುದು ಎಂಬುದೇ ಇಲ್ಲ. ಶಂಕರರು ಮೊದಲ ಬಾರಿಗೆ ಮೂಲನಿವಾಸಿಗಳಿಂದ ನಾಗನ ಪೂಜೆಯ ಹಕ್ಕನ್ನು ಕಿತ್ತುಕೊಂಡು, ಅದಕ್ಕೊಂದು ಮಡಿಮೈಲಿಗೆಯನ್ನು ನೀಡಿ ವೈದಿಕರಿಗೆ ಹಸ್ತಾಂತರಿಸಿದ ಕ್ಷೇತ್ರ ಕುಕ್ಕೆಯಾದ್ದರಿಂದ ಕುಕ್ಕೆ ಸುಬ್ರಹ್ಮಣ್ಯವನ್ನೇ ನಾಗದೇವರ ಆದಿಕ್ಷೇತ್ರ ಎಂದು ನಂಬಿಸಲಾಯ್ತು. ಕೆಲವು ಪಾಡ್ದನಗಳಲ್ಲಿ ಕಾಸರಗೋಡು, ಮಂಜೇಶ್ವರದ ಹಲವು ನಾಗಬನಗಳನ್ನು ಆದಿ ನಾಗಬನಗಳು ಎನ್ನಲಾಗುತ್ತದೆ. ಅಲ್ಲೆಲ್ಲ ಇನ್ನೂ ಸರ್ಪಕೋಲ ಚಾಲ್ತಿಯಲ್ಲಿದೆ.

ನಾಗರಪಂಚಮಿ, ನಾಗಮಂಡಲ, ಆಶ್ಲೇಷ ಬಲಿ ಪೂಜೆಗಳು ಕರಾವಳಿಯ ಮೂಲ ನಿವಾಸಿ ಶೂದ್ರರುಗಳದ್ದಲ್ಲ. ನಾಗಮಂಡಲದ ಜೊತೆಗೆ ಡಕ್ಕೆ ಬಲಿ ಪೂಜೆಯನ್ನೂ ಈಗ ಬ್ರಾಹ್ಮಣರೇ ಆಗಿರುವ ವೈದ್ಯ ಸಮುದಾಯ ನಡೆಸುತ್ತೆ. ಇದೂ ಕೂಡಾ ಶೂದ್ರರ ಒಂದು ಆಚರಣೆ. ಡಕ್ಕೆ ಬಲಿ ಎನ್ನುವುದು ವೈದಿಕೇತರ ಆಚರಣೆ. ಪಾಣರ ಎಂಬ ಬುಡಕಟ್ಟು ಸಮುದಾಯವು ಈ ಡಕ್ಕೆ ಬಲಿಯನ್ನು ನಿರ್ವಹಿಸಬೇಕು. ದೈವಗಳಿಗೆ ಡಕ್ಕೆ ಬಲಿ ಎಂದರೆ ಪ್ರಾಣಿ ಅಥವಾ ಕೊಳಿ ಬಲಿ ಕೊಡುವುದು ಎಂದು ಮೂಲ ಅರ್ಥ. ಆದರೆ ಅದನ್ನೂ ಬ್ರಹ್ಮಮಂಡಲ ಡಕ್ಕೆ ಬಲಿ ಎಂದು ವೈದಿಕೀಕರಣಗೊಳಿಸಲಾಯ್ತು. ದೈವಗಳನ್ನು ಆರಾಧನೆ ಮಾಡುತ್ತಿದ್ದ ಕರಾವಳಿಗರನ್ನು ವೈದಿಕ ಧರ್ಮದ ವಿಷ್ಣು ಮತ್ತು ಪುರಾಣಗಳತ್ತಾ ಮತಾಂತರ ಮಾಡುವುದು ಆಚಾರ್ಯದ್ವಯರಿಗೆ ಸುಲಭದ್ದಾಗಿರಲಿಲ್ಲ. ಅದಕ್ಕಾಗಿ ಅವರು ಕಂಡುಕೊಂಡಿದ್ದು ಇಲ್ಲಿನ ದೈವ, ನಾಗ ಬೆರ್ಮೆರನ್ನು ಪುರಾಣದ ಕತೆಗಳಿಗೆ ಜೋಡಿಸಿದ್ದು.

ಕಾಸರಗೋಡಿನ ನೆಟ್ಟನಿಗೆಯ ಗುಹೆಯೊಂದರಲ್ಲಿ 12 ವರ್ಷಗಳಿಗೊಮ್ಮೆ ನಾಗನ ಪೂಜೆ ನಡೆಯುತ್ತೆ. ಕಾಡಿನ ನಿವಾಸಿಗಳಾಗಿದ್ದ ದಲಿತ ಕಾಪಾಡರು ಈ ಪೂಜೆಯನ್ನು ಮಾಡಬೇಕು. ಕಾಪಾಡರು, ಬಾಕುಡರು ಈ ನೆಲದ ಮೂಲ ನಿವಾಸಿಗಳು. ಇಲ್ಲೂ ಬ್ರಾಹ್ಮಣರ ಪ್ರವೇಶವಾಗಿವಾಗಿದೆ. ಆದರೆ 12 ವರ್ಷಗಳಿಗೊಮ್ಮೆ ಗುಹೆಗೆ ಹೋಗುವುದರಿಂದ ಬ್ರಾಹ್ಮಣ ಅರ್ಚಕರಿಗೆ ವಿಷದ ನಿಜದ ನಾಗರ ಹಾವಿನ ಹೆದರಿಕೆ ಇರೋದರಿಂದ ಮೊದಲಿಗೆ ಕಾಪಾಡರನ್ನು ಗುಹೆಯೊಳಗೆ ಕಳುಹಿಸುತ್ತಾರೆ. 

ಈ ರೀತಿ ಕಾಪಾಡರನ್ನು ಗುಹೆಯೊಳಗೆ ಕಳುಹಿಸುವಾಗ ಅವರಿಗೆ ಉತ್ತರ ಕ್ರಿಯೆಯನ್ನೂ ಮಾಡಲಾಗುತ್ತದೆ. ಕಾಪಾಡರು ಗುಹೆಯೊಳಗೆ ಹೋಗಿ ವಾಪಸ್ಸು ಬಂದ ನಂತರ ಬ್ರಾಹ್ಮಣರು ಗುಹೆಯೊಳಗೆ ಹೋಗುತ್ತಾರೆ.

ಬಾಕುಡರು, ಕಾಪಾಡರು ಮುಂತಾದ ದಲಿತ ಶೂದ್ರರ ನೆಲದಲ್ಲಿ ನಡೆಯುವ ನಾಗ ಬೆರ್ಮೆರ ಆರಾಧನೆಗೂ ನಾಗರಪಂಚಮಿಯ ದಿನ ಹಾಲೆರೆಯುವ ವೈದಿಕ ಆಚರಣೆಗಳಿಗೂ ಸಂಬಂಧವಿಲ್ಲ. ಕರಾವಳಿ ಹಿಂದೂಗಳ ನಾಗಾರಾಧನೆಯನ್ನು ಉಳಿಸಬೇಕಾದರೆ ಅದನ್ನು ವೈದಿಕರ ಕಪಿಮುಷ್ಠಿಯಿಂದ ಹೊರತಂದು ಮತ್ತೆ ಸರ್ಪಕೋಲಗಳತ್ತಾ ಹೋಗಬೇಕಿದೆ.