ವಸ್ತ್ರ ಸಂಹಿತೆ ಎಂಬ ಎರಡು ಅಲಗಿನ ಕತ್ತಿ

– ಭಾರತೀ ದೇವಿ. ಪಿ

ನಮ್ಮ ದೇಶದಲ್ಲಿ ವಸ್ತ್ರ ಸಂಹಿತೆಯ ವಿಷಯ ಬಂದಾಗಲೆಲ್ಲ ಅದು ಯಾವಾಗಲೂ ಎರಡು ಅತಿಯಾದ ವಾದಗಳಿಗೆ ಹೋಗಿ ನಿಲ್ಲುತ್ತದೆ. ಎಲ್ಲರೂ ಒಂದೇ ಎಂಬ ಭಾವನೆ ಉಂಟುಮಾಡುವಲ್ಲಿ, ಶಿಸ್ತು ಮೂಡಿಸುವಲ್ಲಿ ಒಂದೇ ಬಗೆಯ ಬಟ್ಟೆ ಎಂಬ ತಿಳುವಳಿಕೆ ನಮ್ಮಲ್ಲಿ ಎಲ್ಲೆಡೆ ಕಾಣಬರುವ ಸಮಾಚಾರ. ಇದು ಪ್ರಜಾಪ್ರಭುತ್ವೀಯ ನೆಲೆಯದು. ಆದರೆ ಅದರಾಚೆಗೆ ವಯಸ್ಸಿನಲ್ಲಿ ಒಂದು ಹಂತ ದಾಟಿದ ಮಕ್ಕಳ ಮೇಲೆ, ಕೆಲಸದ ಸ್ಥಳದಲ್ಲಿ, ಧಾರ್ಮಿಕ ಕೇಂದ್ರಗಳಲ್ಲಿ ಇಂತಹುದೇ ಬಟ್ಟೆ ಧರಿಸಬೇಕೆಂದು ಹೇರುವುದು ಇಂದು ಸಂಸ್ಕೃತಿಯ ಹೆಸರಿನಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ಇಲ್ಲಿ ಸಮಾನ ಭಾವನೆ ಮೂಡಿಸಬೇಕು ಎನ್ನುವುದಕ್ಕಿಂತ  ಹೆಚ್ಚಾಗಿ ’ಇಂಥವರಿಗೆ ಪಾಠ ಕಲಿಸಬೇಕು’ ಎಂದು ಕತ್ತಿ ಹಿರಿದ ಸಂಸ್ಕೃತಿಯ ಪೊಲೀಸರ ದರ್ಬಾರು ಹೆಚ್ಚು.

ಇಂತಹ ಜನಗಳಿಗೆ ಸಂಸ್ಕೃತಿ ಎನ್ನುವುದು ನಿಂತ ನೀರಲ್ಲ, ಸದಾ ಬದಲಾವಣೆಗೆ ಒಡ್ಡಿಕೊಳ್ಳುತ್ತಾ ಚಲನಶೀಲವಾಗಿರುವುದು ಎಂಬ ತಿಳುವಳಿಕೆ ಇಲ್ಲ. ಸಾವಿರ ವರ್ಷಗಳ ಹಿಂದೆ ಇದ್ದಂತೆ ಇಂದು ನಾವಿಲ್ಲ. ಇವರ್‍ಯಾರೂ ಇಂದು ಬಸ್, ಮೊಬೈಲ್ ಫೋನ್, ಕಂಪ್ಯೂಟರ್ ಬಳಸದಿರಲಾರರು. ಸಂಸ್ಕೃತಿ ಎಂಬುದು ಕೇವಲ ಆಹಾರ, ಉಡುಗೆ ತೊಡುಗೆ, ಧಾರ್ಮಿಕ ನಂಬಿಕೆಗಳಿಗೆ ಸಂಬಂಧಿಸಿದ್ದಲ್ಲ. ಇಡೀ ಜೀವನಶೈಲಿಗೆ ಸಂಬಂಧಿಸಿದ್ದು ಎಂಬ ಅರಿವಿಲ್ಲದಾಗ ಇಂತಹ ದುಡುಕುಗಳು ಉಂಟಾಗುತ್ತವೆ. ಅಲ್ಲದೆ, ಪಂಚೆ ಉಡುವುದು, ಸೀರೆ ತೊಡುವುದು ಮಾತ್ರ ಸಂಸ್ಕೃತಿಯಲ್ಲ, ಇನ್ನೂ ಹಲವು ಬಗೆಯ ಉಡುಗೆ ತೊಡುಗೆಗಳೂ ಇವೆ ಎಂಬ ಬಹುತ್ವದ ಕಲ್ಪನೆ ಇದ್ದಾಗಲೂ ಈ ಬಗೆಯ ಕೂಗು ಕೇಳಿಬರುವುದಿಲ್ಲ.

ಆದರೆ ಒಂದು ವಿಚಾರ ನೀವು ಗಮನಿಸಿ, ವಸ್ತ್ರ ಸಂಹಿತೆಯ ಆಯುಧ ಬಹುತೇಕ ಸಂದರ್ಭದಲ್ಲಿ ಪ್ರಯೋಗವಾಗುವುದು ಹೆಣ್ಣಿನ ಮೇಲೆ ಮತ್ತು ಅದು ಪ್ರಯೋಗವಾಗುವುದು ಸಂಸ್ಕೃತಿಯ ಹೆಸರಿನಲ್ಲಿ. ಹೆಣ್ಣುಮಕ್ಕಳು ಪ್ಯಾಂಟ್ ಶರ್ಟು ಧರಿಸಬಾರದು, ಪಬ್‌ಗೆ ಹೋಗಬಾರದು, ರಾತ್ರಿ ಒಬ್ಬಳೇ ತಿರುಗಬಾರದು… ಹೀಗೆ ಇದು ಮುಂದುವರೆಯುತ್ತದೆ. ಇದನ್ನು ಪ್ರಶ್ನಿಸಿದಾಗಲೆಲ್ಲ ’ಹಾಗಿದ್ದರೆ ಹೆಣ್ಣುಮಕ್ಕಳು ಗಂಡುಮಕ್ಕಳಂತೆ ಕುಡಿದರೆ, ಪ್ಯಾಂಟು ಹಾಕಿದರೆ ಸಮಾನತೆಯೇ?’ ಎಂಬ ಸವಾಲು ಸಿದ್ಧವಿರುತ್ತದೆ. ಇದರರ್ಥ ಹೆಣ್ಣುಮಕ್ಕಳೂ ಹಾಗೆ ಮಾಡಲೇಬೇಕೆಂದಲ್ಲ. ಬಯಸಿದ ಬಟ್ಟೆ ಹಾಕುವುದು, ಬೇಕಿದ್ದನ್ನು ಸೇವಿಸುವುದು ಅವರವರ ಖುಷಿಗೆ ಬಿಟ್ಟ ವಿಚಾರ. ಆದರೆ ಈ ಸಂಸ್ಕೃತಿಯ ಹೆಸರಿನ ಬೇಲಿ ಸದಾ ಯಾಕೆ ಹೆಣ್ಣುಮಕ್ಕಳ ಸುತ್ತಲೇ ಕಟ್ಟಲಾಗುತ್ತದೆ ಎಂಬುದು ಇಲ್ಲಿ ಮುಖ್ಯವಾದ ಪ್ರಶ್ನೆ. ಒಂದೊಮ್ಮೆ ಗಂಡಸರಂತೆ ಹೆಣ್ಣೂ ಇಂಥವುಗಳಿಗೆ ಒಳಗಾದರೆ ಈಕೆಯ ಬಗ್ಗೆ ಮಾತ್ರ ಯಾಕೆ ಇಂತಹ ವರ್ತನೆ ಕಾಣುತ್ತದೆ? ನಮ್ಮ ಸ್ತ್ರೀಯರು ಹಾಳಾದರೆ ಸಂಸ್ಕೃತಿ ಹಾಳಾಗುತ್ತದೆ, ಹೆಣ್ಣು ಸರಿಯಿದ್ದರೆ ಸಮಾಜ ಚೆನ್ನಾಗಿರುತ್ತದೆ ಎಂದು ಹೇಳುವ ಮಂದಿ ತಮ್ಮ ಜವಾಬ್ದಾರಿಯನ್ನು ಹೆಣ್ಣುಮಕ್ಕಳನ್ನು ಕಾಯುವುದಕ್ಕೆ ಮಾತ್ರ ಸೀಮಿತಗೊಳಿಸಿದ್ದಾರೆಯೇ? ಎಂಬ ಪ್ರಶ್ನೆಯೂ ಏಳುತ್ತದೆ. ಹೆಣ್ಣು ಸಂಸ್ಕೃತಿಯನ್ನು ಸಿಕ್ಕಿಸುವ ಗೂಟವಾಗಿ ಕಾಣುತ್ತಾಳೆ.

ಇತ್ತೀಚೆಗೆ ವಸ್ತ್ರ ಸಂಹಿತೆ ಬಗ್ಗೆ ಹೆಚ್ಚಿನ ಕೂಗು ಕೇಳಿಬರುತ್ತಿರುವುದಕ್ಕೆ ಹಿನ್ನೆಲೆಯಾಗಿ ಇನ್ನೊಂದು ಸಂಗತಿಯನ್ನು ಗಮನಿಸಬೇಕಿದೆ. ಇವತ್ತಿನ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಗೋಡೆಗಳನ್ನು ದಾಟಿ ಹೊರಬಂದಿದ್ದಾರೆ. ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಅನೇಕ ಮೂಲಭೂತವಾದಿಗಳಿಗೆ ಇದನ್ನು ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಬಹುಶಃ ಈ ಪ್ರಕ್ರಿಯೆಯನ್ನು ಹಿಂದಕ್ಕೊಯ್ಯುವುದಂತೂ ಸಾಧ್ಯವಿಲ್ಲ. ಆದರೆ ನಿಧಾನಗೊಳಿಸುವ ರೀತಿಯಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ಅಡ್ಡಗಾಲು ಹಾಕುವುದನ್ನು ಕಾಣುತ್ತೇವೆ. ಇಂದು ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಕ್ಕೂ ಈ ಮನೋಭಾವವೇ ಕಾರಣವಾಗಿದೆ ಎನಿಸುತ್ತದೆ.

ಅಲ್ಲದೆ, ಹಿಂದಿನಿಂದಲೂ ನಾಗರಿಕವೆನಿಸಿಕೊಂಡ ಸಮಾಜಗಳಲ್ಲಿ ಹೆಣ್ಣಿನ ದೇಹ ಅದು ಸದಾ ಮುಚ್ಚಿಡಬೇಕಾದದ್ದು ಎಂಬ ಭಾವನೆ ಇದೆ. ಆದರೆ ಗಂಡಿನ ದೇಹದ ಬಗ್ಗೆ ಈ ಭಾವನೆ ಇಲ್ಲ. ಇಂದಿಗೂ ಬುಡಕಟ್ಟು ಜನಾಂಗಗಳ ಹೆಣ್ಣುಮಕ್ಕಳು ತಮ್ಮ ದೇಹದ ಬಗ್ಗೆ ನಮ್ಮಷ್ಟು ಚಿಂತಿತರಲ್ಲ. ಎಂದು ಹೆಣ್ಣೊಬ್ಬಳ ದೇಹ ಒಬ್ಬನ ಆಸ್ತಿ ಎಂಬ ಕಲ್ಪನೆ ಮೂಡಿತೋ ಆಗ ಅದು ಕಾಪಿಟ್ಟುಕೊಳ್ಳಬೇಕಾದ, ಅನ್ಯರ ಕಣ್ಣಿಗೆ ಬೀಳಬಾರದಾದ ವಸ್ತು ಎಂಬ ತಿಳುವಳಿಕೆ ಮೂಡಿತು. ಪರ್ದಾ, ಬುರ್ಖಾ ಇದರ ತೀರಾ ಮುಂದುವರಿದ ಹಂತಗಳು ಅಷ್ಟೆ.

ಅತ್ಯಾಚಾರದ ಬಗ್ಗೆ ಮಾತು ಬಂದಾಗಲೆಲ್ಲ ಸದಾ ಕೇಳಿಬರುವ ಒಂದು ಮಾತು ’ಹುಡುಗಿಯರು ಅಂತಹ ಬಟ್ಟೆ ಧರಿಸಿದರೆ ಹುಡುಗರ ಮನಸ್ಸು ಕೆಡದಿರುತ್ತದೆಯೇ? ಹುಡುಗಿಯೇ ಸರಿ ಇಲ್ಲ, ಅದಕ್ಕೆ ಹಾಗಾಗಿದೆ’. ಆದರೆ ಗಮನಿಸಿದರೆ, ಕಟ್ಟಡ ಕಾರ್ಮಿಕನ ಮಗಳು, ಶಾಲೆಗೆ ಒಂಟಿಯಾಗಿ ಹೋಗುವ ಹುಡುಗಿ ಅಥವಾ ಏನೂ ಅರಿಯದ ಮೂರು ತಿಂಗಳ ಹಸುಳೆಯ ಮೇಲೆ ಎರಗುವ ಜನರಿರುವಾಗ ಅವರನ್ನು ಹುಡುಗಿಯರ ಯಾವ ಅಶ್ಲೀಲ ಭಂಗಿ ಕೆರಳಿಸಿರುವುದು ಸಾಧ್ಯ? ಮೂರು ತಿಂಗಳ ಹಸುಳೆ ಏನು ಮಾಡಬಲ್ಲದು? ಇಲ್ಲಿ ಮದ್ದು ಅರೆಯಬೇಕಾದದ್ದು ಹೆಣ್ಣನ್ನು ಒಂದು ಭೋಗದ ವಸ್ತುವಾಗಿ ನೋಡುವ ಮನಸ್ಸುಗಳಿಗೆ, ಕಣ್ಣುಗಳಿಗೆ ಹೊರತು ಹೆಣ್ಣುಮಕ್ಕಳ ನಡವಳಿಕೆಯನ್ನು ನಿರ್ಬಂಧಿಸುವುದು ಸರಿಯಾದ ದಾರಿಯಲ್ಲ.

ನಮ್ಮ ಸಮಾಜದಲ್ಲಿ ಗಂಡು ಹೆಣ್ಣುಗಳು ಪರಸ್ಪರರ ದೇಹದ ಬಗ್ಗೆ ತಿಳಿಯುವುದಕ್ಕೆ ಆರೋಗ್ಯಕರವಾದ ದಾರಿಗಳು ಇಲ್ಲ. ಅದರ ಕುರಿತು ಮಾತಾಡುವುದು ನಿಷಿದ್ಧ. ಅವರು ಯಾವುದೋ ಮೂರನೇ ದರ್ಜಿ ಪುಸ್ತಕವೋದಿ, ಸಿನೆಮಾ ನೋಡಿ ತಲೆತುಂಬಾ ವಿಚಿತ್ರವಾದ ಕಲ್ಪನೆ ಇಟ್ಟುಕೊಂಡಿರುತ್ತಾರೆ. ಹೀಗಾದಾಗಲೇ ಹೆಣ್ಣಿನ ದೇಹವನ್ನು ಅದಿರುವಂತೆಯೇ ಸಹಜವಾಗಿ ನೋಡುವುದು ಇವರಿಗೆ ಸಾಧ್ಯವಾಗುವುದಿಲ್ಲ, ಮನಸ್ಸಿನಲ್ಲಿ ವಿಕಾರಗಳು ಹುಟ್ಟುತ್ತವೆ. ಇದಕ್ಕೆ ಇಬ್ಬರಲ್ಲೂ ಸರಿಯಾದ ತಿಳುವಳಿಕೆ ನೀಡುವುದು ಮುಖ್ಯವೇ ಹೊರತು ಕಟ್ಟಿಹಾಕುವುದಲ್ಲ.

ಸಂಸ್ಕೃತಿಯ ಬಗ್ಗೆ ನಮಗೆ ಗೌರವವಿದೆ. ಆದರೆ ದಮನಿಸುವ ಸಂಸ್ಕೃತಿಯ ಬಗ್ಗೆ ಅಲ್ಲ. ಹೆಣ್ಣಿನ ಸಮಾನತೆಯ ಬಗ್ಗೆ ಕಿಂಚಿತ್ತೂ ಅರಿವಿರದೆ ಮನೆಯಲ್ಲಿ ಇನ್ನೂ ಹೆಣ್ಣು ‘ಸರ್ವಿಸ್ ಪ್ರೊವೈಡರ್’ ಆಗಿರಬೇಕೆಂದು ಬಯಸುತ್ತಾ, ಗೃಹಿಣೀ ಧರ್ಮದ ಬಗ್ಗೆ ಹೊಗಳುತ್ತಾ ಪ್ರಜಾಪ್ರಭುತ್ವೀಯ ನೆಲೆಯಲ್ಲಿ ಎಲ್ಲರಿಗಿರುವ ಹಕ್ಕು, ಬಾಧ್ಯತೆಗಳನ್ನು ಮರೆತು ಮಾತಾಡುವ ಜನರ ‘ಸಂಸ್ಕೃತಿ’ ಇಂದಿನ ಸಂದರ್ಭದಲ್ಲಿ ಆರೋಗ್ಯಕರವಲ್ಲ.

1 thought on “ವಸ್ತ್ರ ಸಂಹಿತೆ ಎಂಬ ಎರಡು ಅಲಗಿನ ಕತ್ತಿ

Leave a Reply

Your email address will not be published.