ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-28)


– ಡಾ.ಎನ್.ಜಗದೀಶ್ ಕೊಪ್ಪ


ಜಿಮ್ ಕಾರ್ಬೆಟ್ ಭಾರತ ತೊರೆಯುವ ಮುನ್ನ ಕೊನೆಯ ದಿನಗಳಲ್ಲಿ ಬರೆದ ಎರಡು ಕೃತಿಗಳಿಂದ ವಿಶ್ವ ಪ್ರಸಿದ್ಧನಾದ. ಆತನ ಮೊದಲ ಕೃತಿಯನ್ನು (ಜಂಗಲ್ ಸ್ಟೊರೀಸ್) ಇಂಗ್ಲೆಂಡ್ ಮೂಲದ ‘ಆಕ್ಸ್‌ಫರ್ಡ್ ಯೂನಿರ್ವಸಿಟಿ ಪ್ರೆಸ್’ ಪ್ರಕಟಿಸಲು ಮುಂದೆ ಬಂದಿತು. ಭಾರತದ ಓದುಗರಿಗಾಗಿ ಮದ್ರಾಸ್ ಶಾಖೆಯ ಮುಖಾಂತರ ಪುಸ್ತಕವನ್ನು ಪ್ರಕಟಿಸಿದ ಸಂಸ್ಥೆ ನಂತರ ಅದನ್ನು ಕ್ರಮವಾಗಿ ಇಂಗ್ಲೆಂಡ್ ಮತ್ತು ಅಮೇರಿಕಾದಲ್ಲಿ ಪ್ರಕಟಿಸಿತು. ಜಿಮ್ ಕಾರ್ಬೆಟ್‌ನ “ಜಂಗಲ್ ಸ್ಟೊರೀಸ್” ಕೃತಿ ನಿರೀಕ್ಷೆಗೂ ಮೀರಿ ಆತನಿಗೆ ಮತ್ತು ಪ್ರಕಟಿಸಿದ “ಆಕ್ಸ್‌ಫರ್ಡ್ ಯೂನಿರ್ವಸಿಟಿ ಪ್ರೆಸ್” ಸಂಸ್ಥೆಗೆ ಯಶಸ್ಸನ್ನು ತಂದುಕೊಟ್ಟಿತು. ಕೇವಲ ಒಂದು ವರ್ಷದಲ್ಲಿ ಐದು ಲಕ್ಷ ಪ್ರತಿಗಳು ಮಾರಾಟವಾದವು. ಇಂಗ್ಲೆಂಡಿನಲ್ಲಿ ಪರಿಸರ ಕ್ಲಬ್ ರಚಿಸಿಕೊಂಡಿದ್ದ ಕೆಲವರು, ಈ ಕೃತಿಯನ್ನು ಕೊಂಡು ಸದಸ್ಯರಿಗೆ ಉಚಿತವಾಗಿ ಹಂಚಿದರು.

ಮತ್ತೇ ಆಕ್ಸ್‌ಫರ್ಡ್ ಪ್ರಕಾಶನ ಸಂಸ್ಥೆ, ಶಿಕಾರಿಯ ಅನುಭವನ್ನು ಬರೆದುಕೊಡುವಂತೆ  ಜಿಮ್ ಕಾರ್ಬೆಟ್‌ಗೆ ಮನವಿ ಮಾಡಿತು. ಇದರ ಫಲವಾಗಿ  ಕಾರ್ಬೆಟ್‌ನಿಂದ “ಮ್ಯಾನ್ ಈಟರ್ ಆಪ್ ಕುಮಾವನ್” ಎಂಬ ಕೃತಿ ಹೊರಬಂದಿತು. ಅವನ ಮೊದಲ ಕೃತಿ “ಜಂಗಲ್ ಸ್ಟೊರೀಸ್”, ಕಾಡಿನ ಅನುಭವಗಳ ಲೇಖನಗಳ ಸಂಕಲನವಾಗಿದ್ದರೆ, ಎರಡನೇ ಕೃತಿ ತಾನು ಬೇಟೆಯಾಡಿದ ನರಭಕ್ಷಕ ಚಿರತೆಯ ಒಂದು ಸುಧೀರ್ಘ ರೋಚಕ ಕಥನವಾಗಿತ್ತು. ಒಂದು ರೊಮಾಂಚಕಾರಿ ಪತ್ತೆದಾರಿ ಮಾದರಿಯಲ್ಲಿ ತಾನು ಬೇಟೆಯಾಡಿದ ನರಭಕ್ಷಕ ಹುಲಿಯ ಬಗ್ಗೆ ಪ್ರತಿ ಪುಟದಲ್ಲೂ ಓದುಗರಿಗೆ ಕುತೂಹಲವಿರುವಂತೆ ರೋಚಕತೆಯ ಅಂಶವನ್ನು ಕಾಪಾಡಿಕೊಂಡು ಬರೆದದ್ದು ಕಾರ್ಬೆಟ್‌ನ ವಿಶೇಷವಾಗಿತ್ತು.

ಈ ಕೃತಿ ಕೂಡ ಅಭೂತ ಪೂರ್ವ ಯಶಸ್ಸನ್ನು ಕಂಡಿತು. ಇದರಿಂದ ಪ್ರೇರಿತನಾದ ಕಾರ್ಬೆಟ್ ಮುಂದೆ ರುದ್ರ ಪ್ರಯಾಗದ ನರಭಕ್ಷಕ ಚಿರತೆಯನ್ನು ಬೇಟೆಯಾಡಿದ ಅನುಭವವನ್ನು  “ದ ಮ್ಯಾನ್ ಈಟಿಂಗ್ ಲೆಪರ್ಡ್ ಆಫ್ ರುದ್ರಪ್ರಯಾಗ್” ಎಂಬ ಹೆಸರಿನಲ್ಲಿ ಪ್ರಕಟಿಸಿದ. ಈ ಕೃತಿ ಇಂದಿಗೂ ಕೂಡ ಜಗತ್ತಿನ ಅತಿ ಹೆಚ್ಚು ಮಾರಾಟವಾದ ಪುಸ್ತಕಗಳ ಪಟ್ಟಿಗೆ ಸೇರಿದೆ. ಎರಡು ಸಾವಿರದ ಇಸವಿಯ ಅಂತ್ಯದ ವೇಳೆಗೆ ಈ ಕೃತಿ  ಜಗತ್ತಿನಾದ್ಯಂತ 56 ಲಕ್ಷ ಪ್ರತಿ ಮಾರಾಟವಾಗಿದೆ. ಅಲ್ಲದೆ, ಲೆಕ್ಕಕ್ಕೆ ಸಿಗದ ಹಾಗೆ ಸ್ಥಳಿಯ ಭಾಷೆಗಳಲ್ಲಿ ಪ್ರಕಟವಾಗಿದೆ, (ಕನ್ನಡದಲ್ಲಿ ತೇಜಸ್ವಿ ಅನುವಾದ ಮಾಡಿರುವ ಈ ಕೃತಿ ಹದಿನಾಲ್ಕಕ್ಕೂ ಹೆಚ್ಚು ಮುದ್ರಣವನ್ನು ಕಂಡಿದೆ)

1946ರ ಮಾರ್ಚ್‌ನಲ್ಲಿ ಅಮೇರಿಕಾದ “ಯೂನಿವರ್ಸಲ್ ಪಿಕ್ಚರ್ಸ್ ಸಂಸ್ಥೆ” ಜಿಮ್ ಕಾರ್ಬೆಟ್‌ನಿಂದ ಹಕ್ಕು ಪಡೆದು, “ಮ್ಯಾನ್ ಈಟರ್ ಆಪ್ ಕುಮಾವನ್” ಚಿತ್ರವನ್ನು ನಿರ್ಮಿಸಿತು. ಭಾರತದ ಮೂಲದ ನಟ ಸಾಬು ನಾಯಕನಾಗಿದ್ದ ಈ ಚಿತ್ರಕ್ಕೆ ಭಾರತ ಸರ್ಕಾರ ಭಾರತದ ಅರಣ್ಯದಲ್ಲಿ ಚಿತ್ರೀಕರಣ ಮಾಡಲು ಅನುಮತಿ ನೀಡಲಿಲ್ಲ. ಹಾಗಾಗಿ ಹಾಲಿವುಡ್‌ನಲ್ಲಿ  ಸೆಟ್ ನಿರ್ಮಿಸಿ ಈ ಚಿತ್ರವನ್ನು ತಯಾರಿಸಲಾಯಿತು. ಹೀಗೆ ಭಾರತ ತೊರೆಯುವ ಮುನ್ನ ಅಪ್ಪಟ ಪರಿಸರ ಪ್ರೇಮಿಯಾಗಿದ್ದ ಕಾರ್ಬೆಟ್‌ಗೆ ಸಂಧಿಗ್ದ ಸ್ಥಿತಿಯೊಂದು ಎದುರಾಯಿತು. ತನ್ನ ಶಿಕಾರಿಯ ಅನುಭವಗಳನ್ನು ದಾಖಲಿಸುತ್ತಾ ಜಗತ್ ಪ್ರಸಿದ್ಧ ಲೇಖಕನಾಗಿ ಹೊರಹೊಮ್ಮಿದ ಕಾರ್ಬೆಟ್ ಅನಿರೀಕ್ಷಿತವಾಗಿ ಮಲೇರಿಯಾ ರೋಗಕ್ಕೆ ತುತ್ತಾಗಿ ತಿಂಗಳು ಗಟ್ಟಲೆ ಹಾಸಿಗೆ ಹಿಡಿದ. ಅದೃಷ್ಟವಶಾತ್ ಆ ವೇಳೆಗೆ ಅವಿಷ್ಕಾರಗೊಂಡಿದ್ದ ಪೆನ್ಸಿಲಿನ್ ಔಷಧದಿಂದಾಗಿ ಚೇತರಿಸಿಕೊಂಡ. ಆದರೆ, ಅವನಿಗೆ ಗಂಟಲು ಬೇನೆ ಕಾರ್ಬೆಟ್‌ಗೆ ಕಾಣಿಸತೊಡಗಿತು. ತಮ್ಮನ ಅನಾರೋಗ್ಯವನ್ನು ನೋಡಿ, ಹೆದರಿದ ಅಕ್ಕ ಮ್ಯಾಗಿ ಭಾರತ ತೊರೆಯುವ ನಿರ್ಧಾರವನ್ನು ಕೈಬಿಡುವಂತೆ ಕೇಳಿಕೊಂಡಳು. ಸ್ವಾತಂತ್ರ್ಯ ನಂತರ ಭಾರತದಲ್ಲಿ ನಮ್ಮ ಆಸ್ತಿಗಳನ್ನು ಭಾರತ ಮುಟ್ಟುಗೋಲು ಹಾಕಿಕೊಂಡರೆ, ಏನು ಮಾಡುವುದು ಎಂಬ ಅವನ ಪ್ರಶ್ನೆಗೆ ಮ್ಯಾಗಿ ಬಳಿ ಉತ್ತರವಿರಲಿಲ್ಲ. ಆಕೆಗಂತೂ ನೈನಿತಾಲ್ ತೊರೆದು ಹೋಗುವುದು ಸಂಕಟದ ವಿಷಯವಾಗಿತ್ತು.

ಗಾರ್ನಿ ಹೌಸ್ ಬಂಗಲೆಯನ್ನು ಮಾರಿದ ನಂತರ ಒಂದು ವಾರ ಆ ಮನೆಯಲ್ಲಿದ್ದು. ಮನೆ ತೊರೆದು ಬರುವಾಗ, ಸೇವಕರು ಮತ್ತು ಅವರ ಕುಟುಂಬದ ಸದಸ್ಯರು ಕೈಮುಗಿಯುತ್ತಾ ಗೇಟಿನ ಮುಂದೆ ತಲೆತಗ್ಗಿಸಿ ನಿಂತಿದ್ದರು. ಅವರ ಕೆನ್ನೆಗಳು ಕಣ್ಣೀರಿನಿಂದ ತೊಯ್ದು ಹೋಗಿದ್ದವು. ಕಾರ್ಬೆಟ್ ಮತ್ತು ಮ್ಯಾಗಿ ಅವರನ್ನು ಸಂತೈಸುವ ಶಕ್ತಿ ಕಳೆದುಕೊಂಡು, ಕಣ್ಣೀರು ಹಾಕುತ್ತಾ ನೈನಿತಾಲ್ ಪರ್ವತವನ್ನು ಇಳಿದು, ಕಲದೊಂಗಿಯ ಮನೆ ಸೇರಿಕೊಂಡಿದ್ದರು. ಬರುವಾಗ ಆ ಎರಡು ವೃದ್ಧ ಜೀವಗಳು ಪರಸ್ಪರ ಕೈ ಹಿಡಿದುಕೊಂಡು ಹಸ್ತವನ್ನು ಅದುಮುವುದರ ಮೂಲಕ ಒಬ್ಬರಿಗೊಬ್ಬರು ಸಂತೈಸಿಕೊಳ್ಳತ್ತಿದ್ದರು. ನೈನಿತಾಲ್, ಮ್ಯಾಗಿ ಮತ್ತು ಕಾರ್ಬೆಟ್‌ಗೆ ಕೇವಲ ಗಿರಿಧಾಮ ಮಾತ್ರವಲ್ಲ, ತಾಯಿ ನೆಲವಾಗಿತ್ತು. ಅಲ್ಲಿಯೇ ಹುಟ್ಟಿ, ಆ ನೆಲದ ಜೊತೆ ಸುಧೀರ್ಘ ಒಡನಾಡಿದ ಆ ಹಿರಿಯ ಜೀವಗಳ ಬಾಲ್ಯದ ನೆನಪುಗಳು ಅಲ್ಲಿನ ಕಲ್ಲು, ಮಣ್ಣು, ಗಿಡ, ಮರ, ಪಕ್ಷಿ, ನೀರು, ಗಾಳಿ ಎಲ್ಲವುಗಳ ಜೊತೆ ತಳಕು ಹಾಕಿಕೊಂಡಿದ್ದವು. ಇನ್ನೆಂದೂ ತಿರುಗಿ ಈ ನೆಲಕ್ಕೆ ನಾವು ಬಾರೆವು ಎಂಬ ಸಂಕಟ ಅವರನ್ನು ತೀವ್ರವಾಗಿ ಬಾಧಿಸಿತು. ಕೀನ್ಯಾಕ್ಕೆ ತೆರಳುವ ಮುನ್ನ ಕಾರ್ಬೆಟ್ ತನ್ನ ಆರೋಗ್ಯವನ್ನು ಸುಧಾರಿಸಿಕೊಳ್ಳುವ ಸಲುವಾಗಿ, ಅಕ್ಕ ಮ್ಯಾಗಿಯ ಜೊತೆ ಸಿಷೆಲ್ಸ್ ದ್ವೀಪಕ್ಕೆ ಹೋಗಿ ಮೂರು ತಿಂಗಳು ವಿಶ್ರಾಂತಿ ಪಡೆದು ಮರಳಿ ಭಾರತಕ್ಕೆ ಬಂದ.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ನೀಡುವ ನಿಟ್ಟಿನಲ್ಲಿ ಲಾರ್ಡ್‌ ಮೌಂಟ್‌ಬ್ಯಾಟನ್‌ನನ್ನು ವೈಸ್‌ರಾಯ್ ಆಗಿ ನೇಮಕ ಮಾಡಿತು. ಆಗಸ್ಟ್ 15 ಕ್ಕೆ ಮುಂಚಿತವಾಗಿ ಬ್ರಿಟಿಷ್ ಸರ್ಕಾರ ಭಾರತದ ಸರ್ಕಾರದ ಮುಂದೆ ಹಲವಾರು ನಿಬಂಧನೆಗಳನ್ನು ವಿಧಿಸಿತ್ತು. ಅವುಗಳಲ್ಲಿ ಭಾರತದಲ್ಲಿರುವ ಬ್ರಿಟಿಷರ ಆಸ್ತಿ ಮತ್ತು ಅವರ ಜೀವಗಳಿಗೆ ಧಕ್ಕೆಯಾಗಬಾರದು ಎಂಬುದು ಒಂದಾಗಿತ್ತು. ಈ ಕಾರಣಕ್ಕಾಗಿ ಸ್ವಾತಂತ್ರ್ಯಾ ನಂತರವೂ ಬ್ರಿಟಿಷ್ ಸೇನೆ ಭಾರತದಲ್ಲಿ ಇರುತ್ತದೆ ಎಂಬ ಷರತ್ತನ್ನು ವಿಧಿಸಲಾಗಿತ್ತು. ಸ್ವಾತಂತ್ರ್ಯದ ದಿನಗಳು ಹತ್ತಿರವಾದಂತೆ ದೇಶಾದ್ಯಂತ ನೆಲೆಸಿದ್ದ ಬ್ರಿಟಿಷರ ಸುರಕ್ಷತೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇವೆಲ್ಲವನ್ನು ಕುತೂಹಲದಿಂದ ಎದುರು ನೋಡುತ್ತಿದ್ದ ಕಾರ್ಬೆಟ್ ಮತ್ತು ಮ್ಯಾಗಿಗೆ, ಭಾರತದ ವಿಭಜನೆಯ ಸಂದರ್ಭದಲ್ಲಿ ಉತ್ತರಭಾರತದಲ್ಲಿ, ವಿಶೇಷವಾಗಿ ಪಂಜಾಬ್ ಲಾಹೋರ್ ನಗರಗಳಲ್ಲಿ ಸಂಭವಿಸಿದ ಗಲಭೆಯಿಂದ ಆತಂಕಕ್ಕೆ ಒಳಗಾದರು. ಹಿಂಸೆಯಿಂದ ಭಯಭೀತರಾದ ಇಬ್ಬರೂ ಕೂಡಲೇ ಭಾರತ ತೊರೆಯಲು ನಿರ್ಧರಿಸಿದರು.

ಕೀನ್ಯಾದಲ್ಲಿ ಕಾರ್ಬೆಟ್‌ನ ಹಿರಿಯ ಸಹೋದರ ಟಾಮ್ ಕಾರ್ಬೆಟ್ ಮತ್ತು ಸಹೋದರಿಯ ಮಗ ನೆಸ್ಟರ್ ಇದ್ದುದರಿಂದ ಇವರಿಬ್ಬರ ವಾಸಕ್ಕೆ ಅಲ್ಲಿ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಆ ವೇಳೆಗೆ ತಾಂಜೇನಿಯಾದಲ್ಲಿದ್ದ ಕೃಷಿತೋಟವನ್ನು, ಪಾಲುದಾರ ಮತ್ತು ಕುಮಾವನ್ ಪ್ರಾಂತ್ಯದ ಮಾಜಿ ಜಿಲ್ಲಾಧಿಕಾರಿ ವಿಂದಮ್ ವಾಪಸ್ ಇಂಗ್ಲೆಂಡಿಗೆ ತೆರಳಿದ ಕಾರಣ ಮಾರಾಟ ಮಾಡಲಾಗಿತ್ತು. ಕಾರ್ಬೆಟ್ ತನ್ನ ಪಾಲಿನ ಹಣವನ್ನು ಅಕ್ಕನ ಮಗ ನೆಸ್ಟರ್‌ಗೆ ನೀಡಿ ಕೀನ್ಯಾದಲ್ಲಿ ತೋಟ ಮತ್ತು ಮನೆ ಸಿದ್ಧಪಡಿಸಲು ಕೇಳಿಕೊಂಡಿದ್ದನು. ತಾವು ಭಾರತ ತೊರೆಯುತ್ತಿರುವ ವಿಷಯವನ್ನು ಚೋಟಿ ಹಲ್ದಾನಿ ಹಳ್ಳಿಯ ಜನಕ್ಕೆ ತಿಳಿಸಲಾಗದೆ, ಅಣ್ಣನ ಮನೆಗೆ ಹೋಗಿ ಬರುತ್ತೀವಿ ಎಂದು ತಿಳಿಸಿ, ಅವರಿಗೆ ನಂಬಿಕೆ ಬರುವ ಹಾಗೆ ಮನೆಯ ಬೀಗದ ಕೀಲಿಯನ್ನು ಅವರಿಗೆ ಒಪ್ಪಿಸಿ, ಲಕ್ನೊ ಮಾರ್ಗವಾಗಿ ಬಾಂಬೆಗೆ ರೈಲಿನಲ್ಲಿ ತೆರಳಿದರು.

ಕಾರ್ಬೆಟ್ ಮತ್ತು ಮ್ಯಾಗಿ ಭಾರತ ತೊರೆಯುತ್ತಿರುವುದು ಅವರ ಆಪ್ತ ಸೇವಕ ರಾಮ್‌ಸಿಂಗ್‌ಗೆ ಮಾತ್ರ ತಿಳಿದಿತ್ತು ಅವನಿಗೆ ಚೋಟಿ ಹಲ್ದಾನಿ ಹಳ್ಳಿಯಲ್ಲಿ ಮನೆ ನಿರ್ಮಿಸಿಕೊಟ್ಟು, ಪ್ರತಿ ತಿಂಗಳು ತಿಂಗಳಿಗೆ 10 ರೂ. ಮಾಸಾಶನ ಸಿಗುವಂತೆ ಕಾರ್ಬೆಟ್ ವ್ಯವಸ್ಥೆ ಮಾಡಿದ್ದ. ಲಕ್ನೊ ರೈಲು ನಿಲ್ದಾಣದಲ್ಲಿ ಅವರನ್ನು ಬೀಳ್ಕೊಡಲು ಬಂದಿದ್ದ ರಾಮ್‌ಸಿಂಗ್‌ ರೈಲು ಹೊರಡುತ್ತಿದ್ದಂತೆ ಪ್ಲಾಟ್ ಫಾರಂ ಮೇಲೆ ಕುಕ್ಕರುಗಾಲಿನಲ್ಲಿ ಬಿಕ್ಕಳಿಸಿ ಅತ್ತುಬಿಟ್ಟ. ಅವನಿಗೆ ವಿದಾಯ ಹೇಳಲು ಬೋಗಿಯ ಬಾಗಿಲಲ್ಲಿ ನಿಂತಿದ್ದ ಕಾರ್ಬೆಟ್ ಮತ್ತು ಮ್ಯಾಗಿಯ ಕಣ್ಣುಗಳು ತೇವವಾದವು.

ಬಾಂಬೆ ತಲುಪಿದ ಕಾರ್ಬೆಟ್ ಮತ್ತು ಅವನ ಸಹೋದರಿ, 1947ರ ಡಿಸಂಬರ್ 15ರಂದು ಹಡಗಿನ ಮೂಲಕ ಮೊಂಬಸ ಪಟ್ಟಣ ತಲುಪಿದರು. ಅಲ್ಲಿಂದ ರೈಲಿನಲ್ಲಿ ರಾಜಧಾನಿ ನೈರೋಬಿ ನಗರಕ್ಕೆ ಬಂದಿಳಿದರು. ಆ ವೇಳೆಗಾಗಲೇ  ಜಿಮ್ ಕಾರ್ಬೆಟ್‌ನ ಜೀವದ ಗೆಳೆಯ ಹಾಗೂ ರುದ್ರ ಪ್ರಯಾಗದ ಜಿಲ್ಲಾಧಿಕಾರಿಯಾಗಿದ್ದ ಇಬ್ಬೊಟ್ ಸನ್ ಸೇವೆಯಿಂದ ನಿವೃತ್ತನಾಗಿ ಬ್ರಿಟಿಷ್ ಸರ್ಕಾರದಿಂದ ಸರ್ ಪದವಿ ಪಡೆದು ತನ್ನ ಪತ್ನಿ ಜೀನ್ ಜೊತೆ ನೈರೋಬಿಯಲ್ಲಿ ವಾಸವಾಗಿದ್ದ. ಒಂದು ವಾರ ಅಕ್ಕ ತಮ್ಮ ಇಬ್ಬರೂ ಇಬ್ಬೊಟ್ ಸನ್ ಮನೆಯಲ್ಲಿ ತಂಗಿ ವಿಶ್ರಾಂತಿ ಪಡೆದರು. ಇಬ್ಬೊಟ್ ಸನ್ ಮತ್ತು ಕಾರ್ಬೆಟ್ ಇಬ್ಬರೂ ಕುಳಿತು ಭಾರತದಲ್ಲಿದ್ದ ಸಂದರ್ಭದಲ್ಲಿ ರುದ್ರ ಪ್ರಯಾಗದ ನರಭಕ್ಷಕ ಚಿರತೆಯನ್ನು ಕೊಲ್ಲಲು ತಾವುಗಳು  ಅನುಭವಿಸಿದ ಬವಣೆಗಳನ್ನು ಮೆಲುಕು ಹಾಕಿದರು.

ಇತ್ತ ಕಾಬೆಟ್‌ನ ಅಕ್ಕನ ಮಗ ನೆಸ್ಟರ್ ತನ್ನ ಸೋದರ ಮಾವ ಕಾರ್ಬೆಟ್ ಮತ್ತು ಚಿಕ್ಕಮ್ಮ ಮ್ಯಾಗಿ ಇವರುಗಳ ವಿಶ್ರಾಂತಿ ಜೀವನಕ್ಕಾಗಿ ಕೀನ್ಯಾದ ಕಿಪ್ ಕರೆನ್ ಎಂಬಲ್ಲಿ 650 ಎಕರೆ ಕಾಫಿ ತೋಟ ಖರೀದಿಸಿ, ಅವರಿಗಾಗಿ ಒಂದು ಸುಂದರ ಹಾಗೂ ಚಿಕ್ಕದಾದ ಕಾಟೇಜ್ ನಿರ್ಮಾಣ ಮಾಡಿದ್ದ. ಈ ಪ್ರದೇಶ ಮತ್ತು ಪರಿಸರ ಕಾರ್ಬೆಟ್‌ಗೆ ಇಷ್ಟವಾದರೂ ಅಕ್ಕ ಮ್ಯಾಗಿಗೆ ಇಷ್ಟವಾಗಲಿಲ್ಲ. ನಗರ ಮತ್ತು ಪಟ್ಟಣಗಳಿಂದ ಬಹು ದೂರದಲ್ಲಿದ್ದ ಈ ತೋಟದಲ್ಲಿ ಇರುವುದು ಕಷ್ಟ ಎಂಬ ಭಾವನೆ ಮ್ಯಾಗಿಗೆ ಕಾಡತೊಡಗಿತು. ಇಬ್ಬರೂ ಎಪ್ಪತ್ತು ದಾಟಿದ್ದ ವಯೋವೃದ್ಧರಾದ್ದರಿಂದ ಅನಾರೋಗ್ಯಕ್ಕೆ ತುತ್ತಾದರೆ, ವೈದ್ಯರಾಗಲಿ, ಆಸ್ಪತ್ರೆಗಳಾಗಲಿ ಹತ್ತಿರದಲ್ಲಿ ಇರದಿರುವುದು ಮ್ಯಾಗಿಯ ಬೇಸರಕ್ಕೆ ಕಾರಣವಾಗಿತ್ತು. ಸಹೋದರಿಯ ಮಾತಿಗೆ ಎದುರಾಡದ ಕಾರ್ಬೆಟ್ ಗೊಂದಲಕ್ಕೆ ಸಿಲುಕಿದ. ನಂತರ ಅವಳ ಇಚ್ಛೆಯಂತೆ ಆ ಮನೆ ಮತ್ತು ಕಾಫಿ ತೋಟವನ್ನು ತೊರೆದು ಅವನ ಹಿರಿಯಣ್ಣ ಟಾಮ್ ಕಾರ್ಬೆಟ್‌ನ ಎಸ್ಟೇಟ್‌ಗೆ ತನ್ನ ವಾಸ್ತವ್ಯವನ್ನು ಬದಲಿಸಿದ.

ಭಾರತವನ್ನು, ವಿಶೇಷವಾಗಿ ನೈನಿತಾಲ್ ತೊರೆದು ಬಂದಿರುವುದು ಮ್ಯಾಗಿಯ ಮಾನಸಿಕ ಕ್ಲೇಶಕ್ಕೆ ಕಾರಣವಾಗಿದೆ ಎಂದು ಊಹಿಸಿದ ಕಾರ್ಬೆಟ್ ಹಿರಿಯಣ್ಣನ ಸನೀಹದಲ್ಲಿ ನೈನಿತಾಲ್ ಗಿರಿಧಾಮದ ಬಾಲ್ಯದ ನೆನಪುಗಳ ಜೊತೆ ಅಕ್ಕ ಮ್ಯಾಗಿ ನೆಮ್ಮದಿಯಿಂದ ಇರುತ್ತಾಳೆ ಎಂದು ನಂಬಿದ್ದ. ಆದರೆ, ಇಲ್ಲಿಯೂ ಬಹಳ ಕಾಲ ಇರಲು ಮ್ಯಾಗಿ ತಕರಾರು ತೆಗೆದಳು. ನೈನಿತಾಲ್‌ನ ವಿಶಾಲವಾದ ಬಂಗಲೆಯಲ್ಲಿ ತಣ್ಣನೆಯ ವಾತಾವರಣ, ಸ್ವಚ್ಛಂಧ ಪರಿಸರದ ಬದುಕಿನಲ್ಲಿ ಹುಟ್ಟಿ ಬೆಳೆದು, ಜೀವನ ಬಹುತೇಕ ಭಾಗವನ್ನು ಕಳೆದಿದ್ದ ಮ್ಯಾಗಿಗೆ ಕೀನ್ಯಾದ ಗ್ರಾಮಾಂತರ ಪ್ರದೇಶ, ಮತ್ತು ಪುಟ್ಟ ಮನೆಯ ವಾಸಕ್ಕೆ ಹೊಂದಿಕೊಳ್ಳುವುದು ಕಷ್ಟವಾಯಿತು. ಅಂತಿಮವಾಗಿ ಕೀನ್ಯಾದ ಹಿಮ ಪರ್ವತದ ತಪ್ಪಲಿನಲ್ಲಿ ಇದ್ದ ಹೊಟೇಲ್ ಒಂದರಲ್ಲಿ ವಿಶಾಲವಾದ ಕಾಟೇಜ್ ಅನ್ನು ಬಾಡಿಗೆ ಪಡೆದು ಕಾರ್ಬೆಟ್ ಮ್ಯಾಗಿ ಇಬ್ಬರೂ ವಾಸಿಸತೊಡಗಿದರು. ಪರ್ವತದ ಇಳಿಜಾರಿನಲ್ಲಿ ಇದ್ದ ಹೊಟೇಲ್‌ನ ಕೊಠಡಿಯಿಂದ ಕಾಣುತ್ತಿದ್ದ ಹಿಮ ಪರ್ವತ ಅರಣ್ಯ ಇವೆಲ್ಲವೂ ಮ್ಯಾಗಿಯ ಪಾಲಿಗೆ ನೈನಿತಾಲ್ ಗಿರಿಧಾಮದ ವಾತಾವರಣದಂತೆ ಕಂಡು ಬಂದವು. ಹೊಟೇಲ್‌ನಲ್ಲಿ ಶಾಶ್ವತವಾಗಿ ಇರಲು ಬಯಸಿ, ತಂಗಿದ್ದ ಕೊಠಡಿಯನ್ನು ದೀರ್ಘಾವಧಿಗೆ ಒಪ್ಪಂದದ ಆಧಾರದ ಮೇಲೆ ಪಡೆದುಕೊಂಡರು.

(ಮುಂದುವರಿಯುವುದು)

Leave a Reply

Your email address will not be published.