ಬಡತನಕ್ಕೆ ಬಾಯಿಲ್ಲವಾಗಿ…


– ಡಾ.ಎನ್.ಜಗದೀಶ್ ಕೊಪ್ಪ


ಜಗತ್ತನ್ನು ಕಾಡುತ್ತಿರುವ ಮಹಾಮಾರಿ ಎನಿಸಿಕೊಂಡ ಕಾಯಿಲೆಗಳಲ್ಲಿ ಏಡ್ಸ್ ರೋಗ ಕೂಡ ಒಂದು. ಹೈಟಿ ದ್ವೀಪದಲ್ಲಿ 1980 ರ ದಶಕದಲ್ಲಿ ಗೊರಿಲ್ಲಾ ಮುಖಾಂತರ ಮನುಷ್ಯನಿಗೆ ತಗುಲಿಕೊಂಡ, ಮದ್ದಿಲ್ಲದ ಈ ಕಾಯಿಲೆಗೆ ಬಲಿಯಾದವರ ಸಂಖ್ಯೆ ಈಗ ನಿಖರವಾದ ಅಂಕಿ ಅಂಶಗಳಿಗೂ ನಿಲುಕದ ಸಂಗತಿ. ಪಾಶ್ಚಿಮಾತ್ಯ ಜಗತ್ತು ರೂಢಿಸಿಕೊಂಡ ಭೋಗದ ಲೋಲುಪತೆಯಯಿಂದಾಗಿ, ರಕ್ತದ ಮೂಲಕ, ವಿರ್ಯಾಣು ಮೂಲಕ, ತಾಯಿಯ ಎದೆ ಹಾಲು ಮೂಲಕ ರಕ್ತ ಬಿಜಾಸುರನಂತೆ ಹರಡಿ ಎದ್ದು ನಿಂತ ಈ ಮಹಾ ರೋಗಕ್ಕೆ ಕಡಿವಾಣವಿಲ್ಲದಂತಾಗಿದೆ. ನಿರಂತರ ಸಂಶೋಧನೆ ಮತ್ತು ಅವಿಷ್ಕಾರಗಳಿಂದ ಕೆಲವು ಔಷಧಗಳನ್ನು ಕಂಡುಕೊಂಡಿದ್ದರೂ ಸಹ ಅವುಗಳು, ಬರೆದಿಟ್ಟ ಸಾವಿನ ದಿನಾಂಕವನ್ನು ಅಲ್ಪದಿನಗಳ ಕಾಲ ಮುಂದೂಡಬಲ್ಲ ಸಾಧನಗಳಾಗಿವೆ ಅಷ್ಟೇ.

ಸೋಜಿಗದ ಸಂಗತಿಯೆಂದರೆ, ಪಾಶ್ಚಿಮಾತ್ಯ ಜಗತ್ತು ಅಂಟಿಸಿದ ಈ ಕಾಯಿಲೆಗೆ ಬಲಿಯಾದದ್ದು ಮಾತ್ರ ತೃತೀಯ ಜಗತ್ತು. ಅಂದರೆ, ಏಷ್ಯಾ ಮತ್ತು ಆಫ್ರಿಕಾ ಖಂಡದ ಜನತೆ. ಆಫ್ರಿಕಾದ ಹಲವಾರು ದೇಶಗಳಲ್ಲಿ ಛಾಲ್ತಿಯಲ್ಲಿದ್ದ ಮುಕ್ತ ಲೈಂಗಿಕ ಚಟುವಟಿಗಳು ರೋಗದ ಕ್ಷಿಪ್ರ ಹರಡುವಿಕೆಗೆ ಪರೋಕ್ಷವಾಗಿ ಸಹಕಾರಿಯಾದವು. ವಿಶ್ವಾದ್ಯಂತ ಜನತೆ ಒಣಗಿ ಹೋದ ತರಗಲೆಗಳಂತೆ ಉದುರಿ ಬಿದ್ದರು. ಭಾರತವೂ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಕಾಯಿಲೆಗೆ ಮದ್ದು ಹುಡುಕುವುದಕ್ಕಿಂತ ಈ ಮಹಾಮಾರಿ ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಂದ ಆಧುನಿಕ ಜಗತ್ತು, ಇತ್ತೀಚೆಗೆ ಏಡ್ಸ್ ರೋಗ ನಿಯಂತ್ರಣದತ್ತ ಗಂಭೀರವಾಗಿ ಗಮನ ಹರಿಸಿದೆ. ಇಂತಹ ಒಂದು ಪ್ರಯತ್ನಕ್ಕೆ ಕೈ ಜೋಡಿಸಿದ್ದು, ಬಿಲ್-ಮಿಲಿಂಡ  ಗೇಟ್ಸ್ ಪೌಂಡೇಶನ್. ಮೈಕ್ರೋಸಾಪ್ಟ್ ಸಂಸ್ಥೆಯ ಸಂಸ್ಥಾಪಕ ಬಿಲ್ ಗೇಟ್ಸ್‌ನ ಮಾನವೀಯ ಮುಖದ ಒಂದು ಭಾಗವಾಗಿರುವ ಈ ಪೌಂಡೇಶನ್ ಪ್ರತಿವರ್ಷ ಏಡ್ಸ್ ನಿಯಂತ್ರಣಾಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ದಾನವಾಗಿ ವಿನಿಯೋಗಿಸುತ್ತಿದೆ. ಇತ್ತೀಚೆಗಿನ ವರ್ಷಗಳಲ್ಲಿ ಜಗತ್ ಪ್ರಸಿದ್ಧ ಹೂಡಿಕೆದಾರ ವಾರೆನ್ ಬಪೆಟ್ ತನ್ನ ಸಂಪಾದನೆಯ ಬಹು ಭಾಗವನ್ನು ಧಾರೆಯರೆದು ಈ ಸಂಸ್ಥೆಯ ಜೊತೆ ಕೈಜೋಡಿಸಿದ್ದಾನೆ.

ಮಿಲಿಂಡ ಫೌಂಡೇಶನ್ ನೀಡುತ್ತಿರುವ ಆರ್ಥಿಕ ಸಹಾಯದ ಸಿಂಹ ಪಾಲು ಭಾರತ ಉಪಖಂಡದ ದೇಶಗಳು ಮತ್ತು ಆಫ್ರಿಕಾದ ದೇಶಗಳಿಗೆ ಸಲ್ಲುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಮಲೇರಿಯ, ಕ್ಷಯ ರೋಗ ನಿಯಂತ್ರಣ ಮತ್ತು ಮಕ್ಕಳ ಆರೋಗ್ಯದ ಕಡೆ ಸಹ ಗಮನ ಹರಿಸಿ ಈ ಸಂಸ್ಥೆ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ದೆಹಲಿಯಲ್ಲಿ ಮಿಲಿಂಡ ಗೇಟ್ಸ್‌ ಪೌಂಡೇಶನ್ ಸಂಸ್ಥೆಯ ಕಚೇರಿಯಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೂಲಕ ಸ್ವಯಂ ಸೇವಾ ಸಂಘಟನೆಗಳನ್ನು ಬಳಸಿಕೊಂಡು ದೇಶಾದ್ಯಂತ ಈ ಸಂಸ್ಥೆ ಕಾರ್ಯನಿರತವಾಗಿದೆ. 1998 ರಿಂದ ಈ ಸಂಸ್ಥೆಯ ಗೌರವ ಸಂದರ್ಶಕ ಸಲಹೆಗಾರರಾಗಿ ಕೆಲಸ ಮಾಡಿ ಅನುಭವ ಇರುವ ನಾನು ಮತ್ತು ಇತರೆ ರಂಗದ ಅನೇಕ ಮಿತ್ರರು, ಯೋಜನೆಗಳು ಗುರಿ ತಪ್ಪಿದಾಗ ಸರಿ ದಾರಿಗೆ ತರುವಲ್ಲಿ ಶ್ರಮಿಸಿದ್ದೇವೆ. (ಇದಕ್ಕೆ ಕಾರಣರಾದವರು ಈಗ ಪ್ರಧಾನಿ ಕಚೇರಿಯ ಹಿರಿಯ 19 ಮಂದಿ ಅಧಿಕಾರಿಗಳಲ್ಲಿ ಒಬ್ಬರಾಗಿರುವ ಕರ್ನಾಟಕದ ಹಿರಿಯ ಐ.ಎ.ಎಸ್. ಅಧಿಕಾರಿ ಹಾಗೂ ತುಮಕೂರಿನ ನನ್ನ ಮಿತ್ರ ಎಲ್.ಕೆ. ಅತಿಕ್ ಅಹಮ್ಮದ್.)

ಭಾರತದಲ್ಲಿ ಏಡ್ಸ್ ಕಾಯಿಲೆ ಹರಡಲು ವೈಶ್ಯೆಯರು ಮತ್ತು ಲಾರಿ ಚಾಲಕರು ಎಂದು ಬಲವಾಗಿ ನಂಬಿದ್ದ ನಂಬಿಕೆಗಳನ್ನು ಅಲುಗಾಡಿಸಿ, ಅವರಿಗಿಂತ ಹೆಚ್ಚಾಗಿ ರೋಗ ಹರಡುತ್ತಿರುವುದು ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುತ್ತಿರುವ ಕುಶಲರಲ್ಲದ ಕಾರ್ಮಿಕರು ಎಂಬುದನ್ನು ಅಧ್ಯಯನದಿಂದ ಸಾಬೀತು ಪಡಿಸಲಾಗಿದೆ. ಇದಕ್ಕೆ ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿರುವುದನ್ನೂ ಸಹ ಗುರುತಿಸಲಾಗಿದೆ.

ಈ ಅಧ್ಯಯನಕ್ಕೆ ಆರಿಸಿಕೊಂಡ ಸ್ಥಳವೆಂದರೆ, ಗುಜರಾತಿನ ಆಳಂಗ್ ಎಂಬ ಕಡಲ ತೀರದ ಹಡಗು ಒಡೆಯುವ ಬಂದರಿನ ಒಂದು ಪ್ರದೇಶ. ಈ ಪುಟ್ಟ ಊರಿನಲ್ಲಿ ಉತ್ತರಪ್ರದೇಶ ಮತ್ತು ಬಿಹಾರದಿಂದ ದಿನಗೂಲಿಗೆ ದುಡಿಯುವ 56 ಸಾವಿರ ಕಾರ್ಮಿಕರು ಹಡಗು ಒಡೆಯುವ ಕೆಲಸದಲ್ಲಿ ನಿರತರಾಗಿದ್ದರು (ಇದು 2000 ನೇ ಇಸವಿಯ ಅಂಕಿ ಅಂಶ, ಈಗ ಇದು ದುಪ್ಪಟ್ಟಾಗಿರಬಹುದು.) ಇವರೆಲ್ಲರೂ ತಮ್ಮ ಕುಟುಂಬಗಳನ್ನ ಸ್ವಂತ ಊರುಗಳಲ್ಲಿ ಬಿಟ್ಟು ಬಂದು ಕಾರ್ಮಿಕರ ಶೆಡ್ಡುಗಳಲ್ಲಿ ಪ್ರಾಣಿಗಳಂತೆ ವಾಸಿಸುತ್ತಿದ್ದಾರೆ. ಕಠಿಣ ದುಡಿಮೆ, ಏಕಾಂತ, ಇವುಗಳ ನಡುವೆ ನರಳುವ ಇವರುಗಳು ಬಲುಬೇಗ ಕುಡಿತ ಮತ್ತು ವೈಶ್ಯಾವಾಟಿಕೆಗೆ ಬಲಿಯಾಗುವ ನತದೃಷ್ಟರು. ಸಮೀಕ್ಷೆಯ ಪ್ರಕಾರ ಇಲ್ಲಿನ ಶೇಕಡ 64ರಷ್ಟು ಕಾರ್ಮಿಕರು ಏಡ್ಸ್ ರೋಗಕ್ಕೆ ತಮಗೆ ಅರಿವಿಲ್ಲದಂತೆ ತುತ್ತಾಗಿದ್ದರು.  ಅಲ್ಲದೇ ತಮ್ಮ ತಮ್ಮ ಊರಿಗಳಿಗೆ ಹೋದಾಗ ತಾವು ಅಂಟಿಸಿಕೊಂಡ ಈ ಮಹಾಮಾರಿಯನ್ನು ತಮ್ಮ ಪತ್ನಿಯರಿಗೆ ದಾಟಿಸಿಬಂದಿದ್ದರು. ಅವರುಗಳು ಸಹ ತಮಗೆ ಅರಿವಿಲ್ಲದೆ, ಎದೆಯ ಹಾಲಿನ ಮೂಲಕ ಮಕ್ಕಳಿಗೆ ಈ ಕಾಯಿಲೆಯನ್ನು ಬಳುವಳಿಯಾಗಿ ನೀಡಿದ್ದರು. ಇದು ಆಳಂಗ್‌ನ ಒಂದು ಕಥೆ ಮಾತ್ರವಲ್ಲ, ಎಲ್ಲಾ ನಗರಗಳ ದುಡಿಯುವ, ಗ್ರಾಮೀಣ ಪ್ರದೇಶದಿಂದ ಬಂದ ಕಾರ್ಮಿಕರ ಕಥನವೂ ಹೌದು. (ಈ ಕುರಿತು ಮದ್ದಿಲದ ಸಾವ ಕುರಿತು ಎಂಬ ನನ್ನ ಸುಧೀರ್ಘ ಲೇಖನ, ಆರು ತಿಂಗಳ ಹಿಂದೆ ಸಂವಾದ ಮಾಸಪತ್ರಿಕೆಯಲ್ಲಿ ಮತ್ತು ಆಯಾಮ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಆಸಕ್ತರು ಗಮನಿಸಬಹುದು.)

ಏಡ್ಸ್ ರೋಗ ನಿಯಂತ್ರಣ ಕುರಿತಂತೆ ಹಮ್ಮಿಕೊಂಡ ಕಾರ್ಯಕ್ರಮಗಳು ಭಾರತದಲ್ಲಿ ಹೆಮ್ಮೆ ಪಡುವಷ್ಟು ಸುಧಾರಣೆಯಾಗಿಲ್ಲ. ಹಣದಾಸೆಗೆ ಸೃಷ್ಟಿಯಾದ ಹಲವಾರು ಎನ್.ಜಿ.ಓ.ಗಳ ಅಸಮರ್ಪಕ ಕಾರ್ಯವೈಖರಿ ಇದಕ್ಕೆ ಮೂಲ ಕಾರಣ. ಜೊತೆಗೆ ಇದೊಂದು ಕಾಟಾಚಾರದ ಕೆಲಸ ಎಂಬ ಆಲಸ್ಯ ಬೆಳಸಿಕೊಂಡ ಸರ್ಕಾರಿ ಅಧಿಕಾರಿಗಳ ಸೋಮಾರಿತನ ಕೂಡ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಡಾಬದ ಬಳಿ ನಿಂತು ಅಲ್ಲಿಗೆ ಬರುವ ಲಾರಿ ಚಾಲಕರಿಗೆ ಉಚಿತ ಕಾಂಡೋಮ್ ಹಂಚುವುದು, ಅಥವಾ ವೈಶ್ಯಾವಾಟಿಕೆ ಪ್ರದೇಶಗಳಲ್ಲಿ ವೈಶ್ಯೆಯರಿಗೆ ಹಂಚುವುದರಿಂದ ಏಡ್ಸ್ ನಿಯಂತ್ರಣ ಸಾಧ್ಯ ಎಂಬ ಹುಂಬತನವನ್ನು ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಬೆಳಸಿಕೊಂಡಿವೆ. ಅದಕ್ಕೂ ಮೀರಿ, ಅವರ ಮನವೊಲಿಸುವುದು, ಅವರ ಆರ್ಥಿಕ ಬದುಕನ್ನು ಸುಧಾರಣೆ ಮಾಡುವುದು, ಕಾರ್ಮಿಕರ ವಲಸೆ ತಡೆಗಟ್ಟವುದು, ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಗೆ ಒತ್ತುಕೊಡುವುದು, ಇವುಗಳು ಏಡ್ಸ್ ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಬಲ್ಲವು ಎಂಬುದನ್ನು ಮನದಟ್ಟು ಮಾಡಿಕೊಡುವುದು ನಿಜಕ್ಕೂ ಸವಾಲಿನ ಕೆಲಸವಾಗಿದೆ.

ವರ್ಷದ ಹಿಂದೆ ಮಿಲಿಂಡ ಗೇಟ್ಸ್‌ ಸಂಸ್ಥೆ, ಕಾರ್ಯಕರ್ತರಿಗಾಗಿ ಮೂರು ದಿನಗಳ ತರಬೇತಿ ಶಿಬಿರವನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಿತ್ತು. ನಿಯಂತ್ರಣದ ಕಾರ್ಯತಂತ್ರವನ್ನು ಬದಲಿಸುವ ನಿಟ್ಟಿನಲ್ಲಿ ಈ ಶಿಬಿರವನ್ನು ಏರ್ಪಡಿಸಲಾಗಿತ್ತು. ಸಮಾಲೋಚಕನಾಗಿ ಪಾಲ್ಗೊಂಡಿದ್ದ ನಾನು ಮತ್ತು ಗೆಳೆಯರು ಸಲಹೆ ನೀಡುವ ಮೊದಲು ಕಾರ್ಯಕರ್ತರ ಸಮಸ್ಯೆಯನ್ನು ತಿಳಿಯೋಣವೆಂದು ಕಾರ್ಯಕರ್ತರ ಅಭಿಪ್ರಾಯ ಮಂಡನೆಗೆ ಅವಕಾಶ ಮಾಡಿಕೊಟ್ಟೆವು.

ಪಾತಿಮಾ ಎಂಬ 55 ವರ್ಷದ ಮುಸ್ಲಿಂ ವಿಧವೆಯೊಬ್ಬಳು, ದಿನಕ್ಕೆ 50ರೂ ವೇತನದ ಆಧಾರದ ಮೇಲೆ ಸ್ಥಳಿಯ ಸ್ವಯಂ ಸೇವಾಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ಅವಳ ಕೆಲಸ ಪ್ರತಿ ದಿನ ಕನಿಷ್ಟ ಹತ್ತು ಮಂದಿ ವೇಶ್ಯೆಯರನ್ನು ಗುರುತಿಸಿ ಸಂಸ್ಥೆಗೆ ಕರೆತರಬೇಕು. ಸಂಸ್ಥೆ ಅವರಿಗೆ ಏಡ್ಸ್ ಬಗ್ಗೆ ತಿಳುವಳಿಕೆ ನೀಡಿ ಕಾಂಡೋಮ್ ಉಪಯೋಗಿಸುವಂತೆ ಮನವೊಲಿಸುತಿತ್ತು. ಮಾತನಾಡಲು ಎದ್ದು ನಿಂತ ಆಕೆ “ಸಾಹೇಬ್ರ, ರಂಡೀರು (ವೇಶ್ಯೆಯರು) ಕರ್ಕೋಬರ್ರಿ, ಕರ್ಕೋಬರ್ರಿ ಅಂತಾರ, ಯಾವ ಹೆಣ್ಮಗಳು ನಾನು ರಂಡಿ ಅಂತ ಮುಂದ ಬತ್ತಾಳ ನೀವೇ ಹೇಳ್ರಲಾ? ಹಾಂಗ ನೋಡಿದ್ರೆ ನಾವು ಕೂಡ ರಂಡೀರೆ ಇದ್ದೀವಿ ಸಾಹೇಬ್ರ. ನಮ್ಮ ಗಂಡಂದಿರು ಸರಿ ಇದ್ರ ನಮಗೆ ಈ ಪಾಡು ಯಾಕ್ ಬತ್ತಿತು ಹೇಳ್ರಲಾ,” ಎನ್ನುತ್ತಾ ತನ್ನ ಸೆರಗಿನಿಂದ ಮುಖಮುಚ್ಚಿಕೊಂಡು ಬಿಕ್ಕಳಿಸಿ ಅತ್ತುಬಿಟ್ಟಳು. ತಡೆಹಿಡಿದುಕೊಂಡಿದ್ದ ಆಕೆಯ ಸಹನೆಯೆಲ್ಲಾ ಆ ಕ್ಷಣದಲ್ಲಿ ಕಟ್ಟೆಯೊಡೆದು ಮಾತುಗಳ ರೂಪದಲ್ಲಿ ಹೊರಬಿದ್ದಿತು. ಅವಳ ನೋವು ಮತ್ತು ಆಕ್ರೋಶದಲ್ಲಿ ನಾವು ಈವರೆಗೆ ಕಾಣಲಾಗದ ಬಡತನದ ಕರಾಳ ಮುಖವೊಂದು ಅಲ್ಲಿ ಅನಾವರಣಗೊಂಡಿತ್ತು.

ಹುಬ್ಬಳಿ ಧಾರವಾಡ ಅವಳಿ ನಗರಗಳಲ್ಲಿ ಮುಸ್ಲಿಂ ಮಹಿಳೆಯರೂ ಸೇರಿದಂತೆ 30 ಸಾವಿರಕ್ಕು ಹೆಚ್ಚು ಬಡ ಮಹಿಳೆಯರು ತಮ್ಮ ಕುಟುಂಬದ ರಥ ಎಳೆಯಬೇಕಾದ ಹೊಣೆ ಹೊತ್ತಿಕೊಂಡು ಉಳ್ಳವರ ಮನೆಯಲ್ಲಿ ಮನೆಗೆಲಸ ಮಾಡುತ್ತಾರೆ. ಸುಮಾರು ಎರಡು ಸಾವಿರ ಮಹಿಳೆಯರು ಖಾಸಾಗಿ ಹೋಟೆಲ್‌‍ಗಳಲ್ಲಿ ಮತ್ತು ಜೋಳದ ರೊಟ್ಟಿ ಮಾರುವ ಅಂಗಡಿಗಳಲ್ಲಿ ರೊಟ್ಟಿ ಬಡಿಯುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಇನ್ನಿತರೆ ಮೂರು ನಾಲ್ಕು ಸಾವಿರದಷ್ಟು ಹೆಂಗಸರು ಧಾರವಾಡ ಮತ್ತು ಹುಬ್ಬಳ್ಳಿ ಮಾರುಕಟ್ಟೆ ಪ್ರದೇಶದಲ್ಲಿ ಕಾಯಿಪಲ್ಲೆ ಮಾರುತ್ತಾರೆ. ಮನೆಗೆಲಸ ಮಾಡುತ್ತಿರುವ ಹೆಣ್ಣುಮಕ್ಕಳಲ್ಲಿ ಹಲವರು ಲೈಂಗಿಕ ಶೋಷಣೆಗೆ ಒಳಗಾಗುತ್ತಿದ್ದು, ಮಾನ ಮರ್ಯಾದೆ ದೃಷ್ಟಿಯಿಂದ ಇಲ್ಲವೇ ಅನೈತಿಕ ಸಂಬಂಧಕ್ಕೆ ಸಹಕರಿಸದಿದ್ದರೆ, ಕೆಲಸ ಕಳೆದುಕೊಳ್ಳುವ ಭಯದಿಂದ ತಾನು ಹೆತ್ತ ಮಕ್ಕಳ ತುತ್ತಿನ ಚೀಲ ತುಂಬಿಸಬೇಕಾದ ತುರ್ತು ಅಗತ್ಯದಿಂದ ಪುರುಷ ಲೋಕದ ಕ್ರೌರ್ಯಕ್ಕೆ ತಣ್ಣಗೆ ಬಲಿಯಾಗುತ್ತಿದ್ದಾರೆ. ಇದು ಪಾತಿಮಾ ಬಿಚ್ಚಿಟ್ಟ ವಾಸ್ತವದ ಬದುಕಿನ ಸತ್ಯ. ಇಂತಹ ಶೋಷಣೆಗೆ ಒಡ್ಡಿಕೊಳ್ಳಲು ಇಷ್ಟವಾಗದ ಮಹಿಳೆಯರು ಉರಿವ ಬಿಸಿಲಿನಲ್ಲಿ, ಸುರಿವ ಮಳೆಯಲ್ಲಿ ಸೊಪ್ಪು ತರಕಾರಿ ಮಾರುತ್ತಾ ತಮ್ಮ ಕಾಯವನ್ನು ಕರ್ಪೂರದಂತೆ ಕರಗಿಸುತ್ತಿದ್ದಾರೆ. ಇದು ಕೇವಲ ಹುಬ್ಬಳ್ಳಿ ಧಾರವಾಡದ ಕಥೆಯಲ್ಲ, ಈ ದೇಶದ ಯಾವುದೇ ನಗರದಲ್ಲಿ ನಡೆಯುತ್ತಿರುವ ಕಥೆ. ಈ ದುರಂತ ನಮ್ಮ ನಾಗರೀಕ ಜಗತ್ತು ತಲೆತಗ್ಗಿಸಬೇಕಾದ ಸಂಗತಿ. (ಕಳೆದ ವಾರ ಧಾರವಾಡ ಕರ್ನಾಟಕ ವಿ.ವಿ.ಯ ಪ್ರಾಧ್ಯಾಪಕನೊಬ್ಬ ಮನೆ ಗೆಲಸ ಮಾಡುತಿದ್ದ ವಿಧವೆ ಹೆಣ್ಣು ಮಗಳೊಬ್ಬಳನ್ನು ಒಂಬತ್ತು ತಿಂಗಳ ಕಾಲ ಪ್ರತ್ಯೇಕ ಮನೆ ಮಾಡಿ ಇರಿಸಿಕೊಂಡು ಶೋಷಿಸಿದ ಘಟನೆ ಬಹಿರಂಗಗೊಂಡು ಈಗ ಆತನ ವಿರುದ್ಧ  ಮೊಕದ್ದಮೆ ದಾಖಲಾಗಿದೆ.)

ಅಮಾಯಕ ಮಹಿಳೆಯರನ್ನು ಇಂತಹ ನರಕ ಸದೃಶ್ಯ ಬದುಕಿಗೆ ದೂಡಿದ, ದೂಡುತ್ತಿರುವ ಇವರ ಪತಿ ಮಹಾಶಯರ ಕಥನ ಒಂದು ರೀತಿಯಲ್ಲಿ ಶಹಜಾದೆ ಹೇಳುತ್ತಿದ್ದ ಅರೇಬಿಯನ್ ನೈಟ್ಸ್ ಕಥೆಯಂತಹದ್ದು. ಅದಕ್ಕೆ ಆದಿ-ಅಂತ್ಯವೆಂಬುದೇ ಇಲ್ಲ. 10 ವರ್ಷದ ಹಿಂದೆ ಇದೇ ಅವಳಿ ನಗರಕ್ಕೆ ಹೊಂದಿಕೊಂಡಂತೆ ಇರುವ 70ಕ್ಕೂ ಹೆಚ್ಚು ಹಳ್ಳಿಗಳ ಕಾರ್ಮಿಕರ ದಿನಗೂಲಿ ಕೇವಲ 35 ರೂಪಾಯಿ ಇತ್ತು. ಈ ಅಲ್ಪ ಹಣದಲ್ಲಿ ಅವರು ನೆಮ್ಮದಿಯ ಜೀವನ ಕೂಡ ಸಾಗಿಸುತಿದ್ದರು. ಅವರಿಗೆ ಬೇರೆ ಯಾವುದೇ ದುಶ್ಚಟಗಳು ಇರಲಿಲ್ಲ. ಮೂರು ರೂಪಾಯಿಗೆ ಒಂದು ಕೆ.ಜಿ. ರಾಗಿ, ಏಳು ರೂಪಾಯಿಗೆ ಜೋಳ, ಎಂಟರಿಂದ ಒಂಬತ್ತು ರೂಪಾಯಿಗೆ ಅಕ್ಕಿ, ಐದರಿಂದ ಹತ್ತು ರೂಪಾಯಿ ಒಳಗೆ ಕೈಚೀಲಸದ ತುಂಬಾ ಕಾಯಿ ಪಲ್ಲೆ ದೊರೆಯುತಿತ್ತು. ಇವರು ಕೂಲಿಗೆ ಬರುವಾಗ ಮನೆಯಿಂದ ತಂದ ರೊಟ್ಟಿ, ಪಲ್ಯ, ಬೇಸರವಾದಾಗ ಅಗಿಯಲು ಎಲೆ ಅಡಿಕೆ ತರುತ್ತಿದ್ದರು. ಇವಿಷ್ಟೇ ಅವರ ಹವ್ಯಾಸಗಳಾಗಿದ್ದವು. ದುಡಿದು ಸಂಪಾದಿಸಿದ ಹಣ ಅವರ  ಕುಟುಂಬದ ನಿರ್ವಹಣೆಗೆ ಮತ್ತು ಸರಳ ಜೀವನಕ್ಕೆ ಸಾಕಾಗುತ್ತಿತ್ತು.

ಈಗಿನ ಕೂಲಿದರ ಈ ರೀತಿ ಇದೆ.  ಕೃಷಿ ಚಟುವಟಿಕೆಗೆ ಹಳ್ಳಿಗಳಲ್ಲಿ ನೂರಾಐವತ್ತು ರೂ ಇದ್ದರೆ, ನಗರಗಳಲ್ಲಿ ಮಣ್ಣು ಅಗೆತ, ಕಟ್ಟಡ ನಿರ್ಮಾಣ ಕೆಲಸಕ್ಕೆ ಇನ್ನೂರು ರೂಪಾಯಿ ಇದೆ. ಅರೆ ಕುಶಲ ಕೆಲಸಗಳಾದ ನೆಲಕ್ಕೆ ಟೈಲ್ಸ್ ಹಾಕುವುದು, ನಳ ಜೋಡಿಸುವುದು, ಕಬ್ಬಿಣ ಕಟ್ಟುವುದು ಇವುಗಳ ಸಹಾಯಕರ ಕೆಲಸಕ್ಕೆ ಇನ್ನೂರ ಐವತ್ತು ಕೂಲಿ ಸಿಗುತ್ತಿದೆ. ಸರಾಸರಿ ಒಬ್ಬನ ಕೂಲಿ ಇನ್ನೂರು ರೂ. ಎಂದು ಲೆಕ್ಕ ಹಾಕಿದರೂ ತಿಂಗಳಲ್ಲಿ ನಾಲ್ಕು ವಾರದ ರಜೆ ಮತ್ತು ಮದುವೆ, ಹಬ್ಬ ಇತ್ಯಾದಿಗೆ ಒಂದು ದಿನ ರಜೆ ಇವುಗಳನ್ನು ಕಳೆದು ಉಳಿದ 25 ದಿನಗಳಿಗೆ ಒಬ್ಬ ಕಾರ್ಮಿಕನ ಸಂಪಾದನೆ 5 ಸಾವಿರ ರೂಪಾಯಿ.

ಇವತ್ತಿನ ವ್ಯಕ್ತಿಯೊಬ್ಬನ 5 ಸಾವಿರ ರೂ.ಗಳ ಆದಾಯದಲ್ಲಿ ಅವನ ವೈಯಕ್ತಿಕ ಖರ್ಚಿನ ವಿವರ ಹೀಗಿದೆ. ಪ್ರತಿ ದಿನ ನಗರಕ್ಕೆ ಬಂದು ಹೋಗವ ಬಸ್ ಪ್ರಯಾಣದ ವೆಚ್ಚ-20 ರೂ., ಹತ್ತು ಗುಟ್ಕಾ ಪಾಕೇಟ್ ಗಳಿಗೆ 20 ರೂ., ಎರಡು ಚಹಾ, ಮತ್ತು ಮಿರ್ಚಿಗೆ 20 ರೂ., ಮಧ್ಯಾಹ್ನದ ಲಘು ಊಟ ಅಥವಾ ಉಪಹಾರಕ್ಕೆ 15 ರೂ., ರಾತ್ರಿಯ ಕುಡಿತಕ್ಕೆ ಕಡಿಮೆ ದರದ ವಿಸ್ಕಿಗೆ (180 ಎಂ.ಎಲ್.) 50 ರೂ., ವಿಸ್ಕಿ ಜೊತೆ ತಿನ್ನುವ ಕುರುಕು ತಿಂಡಿಗೆ 10 ರೂ., ಆನಂತರ ಒಳಗೆ ಹೋದ ಪರಮಾತ್ಮ ಮಾತಾಡು ಕಂದಾ, ಮಾತಾಡು ಕಂದಾ ಎಂದು ರುದ್ರ ನರ್ತನ ಮಾಡಿ ಎದೆಗೆ ಒದ್ದ ಪರಿಣಾಮ, ಅವನ ಪರಿಚಿತರಿಗೆಲ್ಲಾ ಮಲಗಿರಲಿ ಎದ್ದಿರಲಿ ಮೊಬೈಲ್‌ನಲ್ಲಿ ಕರೆ ಮಾಡಿ ಮಾತನಾಡಿದ್ದಕ್ಕೆ ಸರಾಸರಿ ಕರೆನ್ಸಿ ವೆಚ್ಚ 20 ರೂಪಾಯಿ. ಇವುಗಳ ಒಟ್ಟು ಮೊತ್ತ ದಿನವೊಂದಕ್ಕೆ 145 ರೂಪಾಯಿ, ಅಂದರೆ, 30 ದಿನಗಳಿಗೆ 4ಸಾವಿರದ 350 ರೂಪಾಯಿ. ಉಳಿದ 650 ರೂಪಾಯಿಗಳಲ್ಲಿ ವಾರಕ್ಕೆ ಒಂದು ಸಿನಿಮಾ ಎಂದರೂ ನಾಲ್ಕು ವಾರಕ್ಕೆ 400 ರೂ. ಹೀಗೆ ಅವನ ಒಟ್ಟು ಸಂಪಾದನೆಯಲ್ಲಿ ಖರ್ಚು ಕಳೆದು ಉಳಿಯ ಬಹುದಾದ ಹಣ ಕೇವಲ 250 ರೂಪಾಯಿ. ಈ ಹಣದಲ್ಲಿ ಕುಟುಂಬ ಹೇಗೆ ನಡೆಯಬೇಕು, ನೀವೆ ನಿರ್ಧರಿಸಿ.

ನಗರ ಮತ್ತು ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಯಾಗಿದೆ, ದುಡಿಯುವ ಕೈಗಳಿಗೆ ಕೈ ತುಂಬಾ ಕೆಲಸ ಮತ್ತು ಸಂಬಳ ಸಿಕ್ಕಿದೆ ಎಂದು ಅಭಿವೃದ್ಧಿಯ ಬಗ್ಗೆ ಬೊಗಳೆ ಬಿಡುವವರ ಮಾತಿನ ಹಿಂದೆ ಇರುವ ಕಹಿ ಸತ್ಯ ಇದು. ಆಧುನಿಕ ಜಗತ್ತಿನ ಅಭಿವೃದ್ಧಿಯ ಮಂತ್ರವೆಂದರೆ, ಬಲಗೈಯಲ್ಲಿ ಹತ್ತು ರೂಪಾಯಿ ನೀಡಿ, ಎಡಗೈಯಲ್ಲಿ ಒಂಬತ್ತು ರೂಪಾಯಿ ಕಿತ್ತು ಕೊಳ್ಳುವುದೇ ಆಗಿದೆ. ಭಾರತ ಮತ್ತು ಜಗತ್ತಿನ ಹಿರಿಯಣ್ಣ ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರಗಳು ಆರ್ಥಿಕ ಬೆಳವಣಿಗೆಯಲ್ಲಿ ಏಕೆ ಮುಗ್ಗರಿಸುತ್ತಿವೆ, ಬಡತನ ಏಕೆ ನಿರ್ಮೂಲನವಾಗುತ್ತಿಲ್ಲ ಎಂಬ ಪ್ರಶ್ನೆಗೆ ನಾವು ರೂಪಿಸಿರುವ ಅಭಿವೃದ್ಧಿಯ ಕ್ರಮ ಎಂತಹದ್ದು ಎಂಬುದರ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಈ ರಾಜ್ಯದ ಅಬಕಾರಿ ಸಚಿವನೊಬ್ಬ ಅಬಕಾರಿ ಆದಾಯ 6 ಸಾವಿರ ಕೋಟಿಯಿಂದ 9 ಸಾವಿರ ಕೋಟಿಗೆ ಹೆಚ್ಚಿದೆ ಎಂದು ಹೆಮ್ಮೆಯಿಂದ ಹೇಳುಕೊಳ್ಳವದು ನಾಚಿಕೆಗೇಡಿನ ಸಂಗತಿ ಎಂದು ಯಾರಿಗೂ ಅನಿಸುತ್ತಿಲ್ಲ. 9 ಸಾವಿರ ಕೋಟಿ ಆದಾಯದಲ್ಲಿ ಈ ರಾಜ್ಯದ ಎಷ್ಟು ಹೆಣ್ಣು  ಮಕ್ಕಳ ಕಣ್ಣೀರಿನ ಕಥೆ ಅಡಗಿದೆ ಎಂಬುದು ನಮ್ಮನ್ನಾಳುವ ಮೂರ್ಖರಿಗೆ ಗೊತ್ತಿದೆಯಾ?

ಮನು ಕುಲವನ್ನು ಉದ್ಧಾರ ಮಾಡಲಾಗದ, ಈ ನೆಲದ ಮೇಲಿನ ಮನುಷ್ಯನ ಬದುಕಿಗೆ ಘನತೆ ತರಲಾದ ಯಾವುದೇ ಆರ್ಥಿಕ ಸಿದ್ಧಾಂತಗಳಿಗೆ, ಚಿಂತನೆಗಳಿಗೆ, ವೇದ, ಪುರಾಣ, ಉಪನ್ಯಾಸಗಳಿಗೆ ಬೆಂಕಿ ಹಚ್ಚಿ ನಾವೀಗ ಮನುಷ್ಯರಾಗಿ ಬದುಕುವ ಚಿಂತನೆಯ ಮಾದರಿಯನ್ನು ರೂಪಿಸಕೊಳ್ಳಬೇಕಾಗಿದೆ.

1 thought on “ಬಡತನಕ್ಕೆ ಬಾಯಿಲ್ಲವಾಗಿ…

  1. Munna kodihal

    ನಿಜವಾಗಲೂ ಇವತ್ತಿನ ಪರಸ್ಥಿತಿ ನೋಡುತ್ತಿದ್ದರೆ ನಮ್ಮನ್ನಾಳುವ ನಾಯಕರ ಬಗ್ಗೆ ನಾಚಿಕೆ ಬರುತ್ತೆ ಸರ್. ಈ ನಿಮ್ಮ ಸಮಾಜ ಪರ ಕಾಳಜಿಯ ಲೇಖನಗಳು ಹೀಗೆ ಮೂಡಿ ಬರಲಿ. ಇವತ್ತು ಕೇವಲ ಹುಬ್ಬಳ್ಳಿ-ಧಾರವಾಡ ಜನರ ಸ್ಥಿತಿ ಅಷ್ಷೆ ಅಲ್ಲ ರಾಜ್ಯದ ಎಲ್ಲ ಬಡ ಜನರ ಸ್ಥಿತಿ ಕಣ್ಣಿರಲ್ಲಿ ಕೈ ತೋಳೆಯುವಂತಾಗಿದೆ, ಸಾರಾಯಿ ನಿರ್ಮೂಲನೆ ಆದಾಗ ಮಾತ್ರ ಬಡತನ ನಿರ್ಮೂಲನೆ ಆಗಲಿಕ್ಕೆ ಸಾಧ್ಯ ಅಲ್ವಾ ಸರ್?

    Reply

Leave a Reply

Your email address will not be published.