ಎಲ್ಲರಂತಲ್ಲ ಈ ಸ್ವಾಮೀಜಿ……..ವೈಚಾರಿಕತೆ, ಮಾನವೀಯತೆಗೆ ಮಾರುಹೋದವರು

ನಾಗರಾಜ್ ಹರಪನಹಳ್ಳಿ

ರಾಜಕೀಯ ನಿಲುವುಗಳು ಏನೇ ಇರಲಿ, ಕರ್ನಾಟಕ ಕಂಡ ವೈಚಾರಿಕ ಸ್ವಾಮಿಗಳಲ್ಲಿ ಮುರುಘಾಮಠದ ಶಿವಮೂರ್ತಿ ಶರಣರು ಒಬ್ಬರು. ಅವರ ವೈಚಾರಿಕ ಹಾದಿ ನನಗೆ ಇಷ್ಟ. ಕಳೆದ ರವಿವಾರ (ಜುಲೈ 22) ಶರಣರು ಮುಂಡಗೋಡ ತಾಲೂಕಿನ ಅತ್ತಿವೇರಿ ಬಳಿಯ ಗೌಳಿದೊಡ್ಡಿಗೆ ಭೇಟಿ ನೀಡಿದ್ದರು. ಡಾಂಬರು ರಸ್ತೆಯಿಂದ ಗೌಳಿ ದೊಡ್ಡಿಗೆ ಇರುವುದು ಮಣ್ಣಿನ ರಸ್ತೆ. ಮಳೆಗಾಲವಾದ್ದರಿಂದ ಮಣ್ಣಿನ ರಸ್ತೆ ಸ್ಥಿತಿ ಕೇಳಬೇಕೆ? ಅದು ರೊಜ್ಜಾಗಿತ್ತು. ಶಾಸಕ ವಿ.ಎಸ್.ಪಾಟೀಲ್ ರೊಜ್ಜಿನ ದಾರಿಯಲ್ಲಿ ನಡೆದು ಬಂದರೆ, ಶರಣ ಶಿವಮೂರ್ತಿ ಶರಣರು  ಟ್ಯಾಕ್ಟರ್‌ನಲ್ಲಿ ಬಂದರು. ಹೆಲಿಕಾಪ್ಟರ್ ಬಳಸುವ ಜಗದ್ಗುರು ಅಲ್ಲ ನೋಡಿ. ಹಾಗಾಗಿ  ನಮ್ಮ ಶರಣರು ಮನುಷ್ಯರ ಹಾದಿಯಲ್ಲಿ ನಡೆದವರು. ಸರಳತೆ ಮತ್ತು ಮನುಷ್ಯತ್ವದ ಸ್ಪರ್ಶವಿದ್ದ ಕಾರಣ ಗೌಳಿಗಳ ಜೊತೆ ಮಾತನಾಡುತ್ತಾ ’ನಿಮ್ಮ ಜೊತೆ ಇರುವುದೇ ನನ್ನ ಬದುಕಿನ ಧನ್ಯತಾ ಘಳಿಗೆ’ ಎಂದರು. ’ಸಹಜ ಬದುಕು ನಿಮ್ಮದು. ಪ್ರಕೃತಿ ಜೊತೆ ಬೆರೆತ ನೀವೇ ಧನ್ಯರು ಎಂದ ಶರಣರು, ನೀವು ಮುಖ್ಯವಾಹಿನಿಗೆ ಬನ್ನಿ ಎನ್ನಲಾರೆ, ಮುಖ್ಯವಾಹಿನಿಯೇ ನಿಮ್ಮತ್ತ ಬರಬೇಕು’. ಬುದ್ಧನ ನಡೆ, ಗಾಂಧಿ ಅಂಬೇಡ್ಕರ್ ನಡೆ ಸಾಮಾನ್ಯರು ಇದ್ದ ಕಡೆಗೆ ಇತ್ತು. ಹಾಗಾಗಿ ಅವರಿಗೆ ಜನಸಾಮಾನ್ಯರ ಕಷ್ಟದ ಅರಿವಿತ್ತು. ಬುದ್ಧನ ವಿಚಾರಗಳು ನಿಮ್ಮತ್ತ ಹರಿದು ಬರಬೇಕು ಎಂದು ಶಿವಮೂರ್ತಿ ಶರಣರು ನುಡಿದರು. ಮಕ್ಕಳ ತಲೆ ನೇವರಿಸಿದರು. ಗೌಳಿಗಳ ಜೊತೆ ಸಂಭಾಷಣೆ ಮಾಡಿದರು. ಊಟ ಮಾಡಿದರು. ಕೈಲಾದ ನೆರವು ನೀಡುವುದಾಗಿ ಹೇಳಿ ಹೊರಟರು. ಶಿವಮೂರ್ತಿ ಶರಣರ ನಡೆ ಎಲ್ಲೂ ಕೃತಕ ಎನ್ನಿಸಲಿಲ್ಲ. 12ನೇ ಶತಮಾನದ ಶಿವಶರಣರ ನಡೆಯನ್ನು ನೆನೆಪಿಸುವಂತೆ ಎಲ್ಲವೂ ನಡೆದು ಹೋಯಿತು.

ಇದೆಲ್ಲಾ ತನ್ನನ್ನು ’ಇತರರಿಂದ’ ಜಗದ್ಗುರು ಎಂದು ಕರೆಯಿಸಿಕೊಳ್ಳದ ಶರಣರಿಗೆ ಮಾತ್ರ ಸಾಧ್ಯವಾಗುತ್ತದೆ. 20 ನೇ ವಯಸ್ಸಿಗೆ ಸನ್ಯಾಸ ಸ್ವೀಕರಿಸಿ, ಮುರುಘರಾಜೇಂದ್ರ ಮಠದಲ್ಲಿ ಸಾಧನೆಗೈದು, ಶಿರಸಿ ಶಾಖಾ ಮಠದಲ್ಲಿ 1978 ರಿಂದ 1990ರ ವರೆಗೆ ಶಿವಮೂರ್ತಿ ಶರಣರು ಇದ್ದರು. ಆಗ ಉತ್ತರ ಕನ್ನಡ ಮತ್ತು ಹಾವೇರಿ ಜಿಲ್ಲೆಗಳ ಬಡವರ, ಶ್ರಮಿಕರ ಬದುಕನ್ನು ಅರಿತವರು. 1991 ರಿಂದ ಈತನಕ ಚಿತ್ರದುರ್ಗದ ಮಠದಲ್ಲಿ ಇದ್ದುಕೊಂಡು, ನಾಡು, ಹೊರನಾಡು, ವಿದೇಶಗಳಲ್ಲಿ ಸಂಚರಿಸುತ್ತಾ ಬಸವತತ್ವ ಪ್ರತಿಪಾದನೆ ಮಾಡುತ್ತಾ ಸಾಗಿರುವ ಶರಣರು ಸಮಾಜದಲ್ಲಿ ಮೌನ ಕಾಂತ್ರಿ ನಡೆಸಿರುವುದು ನಿಜ. ಸ್ತ್ರೀ ಸ್ವಾತಂತ್ರ್ಯ, ಸಮಾನತೆಯನ್ನು ತಮ್ಮ ವ್ಯಾಪ್ತಿಯಲ್ಲಿ ಸಾಧ್ಯ ಇರುವಷ್ಟರ ಮಟ್ಟಿಗೆ ಜಾರಿಗೆ ತಂದವರು. ರಾಜ್ಯದ ಉಮ್ಮತ್ತೂರು, ಬದನವಾಳು, ಹೊಳಲ್ಕೆರೆ, ಕಂಬಾಲಪಲ್ಲಿ ಮುಂತಾದ  ಕೋಮುಗಲಭೆ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿ ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆ ಮೂಡಿಸಲು ಪ್ರಯತ್ನಿಸಿದ ಶರಣರಲ್ಲಿ ಶಿವಮೂರ್ತಿ ಶರಣರದ್ದು ಮೊದಲ ಹೆಸರು. ಮೂಢನಂಬಿಕೆಗಳ ವಿರುದ್ಧ ಶಿವಮೂರ್ತಿ ಶರಣರು ನಡೆಸಿರುವ ಹೋರಾಟ ಸಹ ಸ್ಮರಣೀಯ. ಕಾಂತ್ರಿಕಾರಿ ಕವಿ ಗದ್ಧರ್, ನಟಿ ಶಬನಾ ಆಜ್ಮಿ. ದಲೈಲಾಮ, ಬಿಳಿಗಿರಿ ರಂಗನ ಬೆಟ್ಟದ ಡಾ. ಸುದರ್ಶನ್, ಬೀದರ್‌ನ ಸಿದ್ಧರಾಮ ಶರಣರು, ಮೇಧಾ ಪಾಟ್ಕರ್ ಮುಂತಾದವರಿಗೆ ಬಸವಶ್ರೀ ಪ್ರಶಸ್ತಿಯನ್ನು ಶ್ರೀ.ಮುರುಘಾ ಮಠದ ವತಿಯಿಂದ ನೀಡುತ್ತಾ ಬಂದಿದ್ದಾರೆ. ಇಂತಹ ಪ್ರಗತಿಪರ ಶರಣರು (ಸ್ವಾಮಿ) ಗೌಳಿ ದೊಡ್ಡಿಗೆ ಬರುತ್ತಿರುವಾಗ ಅವರನ್ನು ಕಾಣುವ ಕುತೂಹಲ ನನಗೂ ಇತ್ತು. ಶರಣರನ್ನು ಹತ್ತಿರದಿಂದ ಕಾಣುವ ಸಂದರ್ಭ ಅಂತೂ ಒದಗಿ ಬಂದಿತ್ತು.

ಗೌಳಿ ಜನಾಂಗ ಉತ್ತರ ಕನ್ನಡದ ಬುಡಕಟ್ಟು ಜನಾಂಗಗಳ ಪೈಕಿ ಒಂದು. ಕಾಡಿನ ಜೊತೆ ಸಂಬಂಧ ಹೊಂದಿದವರು. ದನ ಎಮ್ಮೆ ಸಾಕಿ ಬದುಕಿನ ಬಂಡಿ ಸಾಗಿಸಿದವರು. ಅವರ ಹಟ್ಟಿಗಳಲ್ಲಿ ದನಗಳ ಜೊತೆ ಸಹಜೀವನ ನಡೆಸಿದವರು. ಅವರ ಮಕ್ಕಳು ಪೌಷ್ಠಿಕ ಅಂಶಗಳ ಕೊರತೆಯಿಂದ ಬಳಲಿದವರು. ಶರಣರು ಬರುವ ಎರಡು ತಾಸಿಗೂ ಮೊದಲು ದೃಶ್ಯಮಾಧ್ಯಮದ ಮಿತ್ರರ ಜೊತೆ ನಾನು ಗೌಳಿಗಳ ಜೀವನ ಮತ್ತು ಅವರ ಕಷ್ಟಗಳನ್ನು ಅರಿಯಲು ಯತ್ನಿಸಿದ್ದೆವು. ಶಾಸಕ ವಿ.ಎಸ್.ಪಾಟೀಲ್ ಸಹ ನಮ್ಮ ಜೊತೆ ಇದ್ದರು. ಮುಂಡಗೋಡನ ಇತರ ಗೌಳಿ ಹಾಡಿಗಳಿಗಿಂತ ಅತ್ತಿವೇರಿ ಬಳಿಯ ಗೌಳಿ ದೊಡ್ಡಿ ಸ್ಥಿತಿ ಅಧೋಗತಿಗೆ ಇಳಿದ ಕಾರಣಗಳನ್ನು ತಿಳಿಯಲು ನಾವು ಯತ್ನಿಸಿದ್ದೆವು. ಅತ್ತಿವೇರಿ ಪಕ್ಷಿಧಾಮದ ಬಳಿ ಜಲಾಶಯದ ಹಿನ್ನೀರು ಗೌಳಿಗಳ ಬದುಕನ್ನು ಸ್ವಲ್ಪಮಟ್ಟಿಗೆ ಕಿತ್ತುಕೊಂಡರೆ, ಅಲ್ಲಿನ ಅಭಯಾರಣ್ಯದ ನೆಪದಲ್ಲಿ ಅರಣ್ಯಾಧಿಕಾರಿಗಳು ಗೌಳಿಗಳ ಮೇಲೆ ನಿರಂತರವಾಗಿ ನಡೆಸಿರುವ ಮಾನಸಿಕ ದೌರ್ಜನ್ಯ ಆತಂಕಕಾರಿಯಾದುದು. ಇದು ನನ್ನ ಮನ ಕಲಕಿತು. ನೂರಾರು ವರ್ಷಗಳಿಂದ ಇರುವ ಗೌಳಿಗಳನ್ನು ಜಾಗ ಬಿಟ್ಟು ತೆರಳಿ ಎಂದರೆ, ’ಅವರೆಲ್ಲಿಗೆ’ ಹೋಗಬೇಕು? ಅಭಯಾರಣ್ಯ ಪ್ರದೇಶದಲ್ಲಿ ನೆಲಸಿದ ಬುಡಕಟ್ಟು ಜನರ ಸ್ಥಿತಿ ಇದು. ಬದುಕಿನ ಅಸ್ಥಿರತೆ, ಇಲ್ಲಿನ ಗೌಳಿಗಳನ್ನು ಕಾಡಿದೆ. ಜೊಯಿಡಾದ ಕುಂಬ್ರಿ ಜಮೀನಿನಲ್ಲಿ ಭತ್ತದ ಗದ್ದೆ ಮಾಡಿ ಬದುಕುತ್ತಿರುವ ಕುಣಬಿಗಳು, ಸಿದ್ಧಿಗಳು, ಗೌಳಿಗಳು, ಮರಾಠಿಗರು ಅನುಭವಿಸುತ್ತಿರುವ ಅಸ್ಥಿರತೆ ಇಲ್ಲೂ ಸಹ ಇದೆ ಎಂದು ಮನವರಿಕೆಯಾಗಲು ಹೆಚ್ಚು ಸಮಯ ಬೇಕಾಗಲಿಲ್ಲ.

ಕೊಡಗಿನ ಮತ್ತು ಚಿಕ್ಕಮಗಳೂರಿನ ಕೆಲ ಅರಣ್ಯ ಪ್ರದೇಶಗಳನ್ನು ಪಶ್ಚಿಮಘಟ್ಟ ವಿಶ್ವಪರಂಪಾರಿಕ ತಾಣದ ಪಟ್ಟಿಗೆ ಸೇರಿಸುವ ನೆಪದಲ್ಲಿ ಅಲ್ಲಿನ ಅರಣ್ಯವಾಸಿಗಳು, ಬುಡಕಟ್ಟು ಜನರು ಮುಂದೆ ಎದುರಿಸಬಹುದಾದ ಕಷ್ಟದ ಸನ್ನಿವೇಶವನ್ನು ಉತ್ತರ ಕನ್ನಡದ ಅರಣ್ಯವಾಸಿಗಳು ಅಭಯಾರಣ್ಯ ಮತ್ತು ಹುಲಿ ಸಂರಕ್ಷಣಾ ಯೋಜನೆಗಳ ಹೆಸರಲ್ಲಿ ಅನುಭವಿಸುತ್ತಿದ್ದಾರೆ. ಅಣಶಿ ಜೊಯಿಡಾ ದಾಂಡೇಲಿ ಅಭಯಾರಣ್ಯ ಪ್ರದೇಶದಲ್ಲಿ ನೆಲಸಿರುವ ಬುಡಕಟ್ಟು ಜನರ ಆತಂಕಗಳು ಸಹ ಕೊಡಗಿನ ಜನರ ಮಾದರಿಯದ್ದೇ ಆಗಿದೆ.  ವಿದೇಶದಿಂದ ಹಣ ಪಡೆದು ಎನ್.ಜಿ.ಓ. ಮುಖವಾಡದಲ್ಲಿ ಪರಿಸರ ರಕ್ಷಕರು ಎಂದು ಪೋಜು ಕೊಡುತ್ತಾ (ಸಮಾಜಸೇವೆ ನೆಪದಲ್ಲಿ) ಕಾರ್ಯನಿರ್ವಹಿಸುತ್ತಿರುವ ಡೋಂಗಿ ಪರಿಸರವಾದಿಗಳು ಅರಣ್ಯವಾಸಿಗಳ ಬಗ್ಗೆ ಎಂದು ತಲೆ ಕೆಡಿಸಿಕೊಂಡಿಲ್ಲ. ಅವರನ್ನು ಅರಣ್ಯದಿಂದ ಹೊರಹಾಕಿ, ಬದುಕನ್ನು ಮೂರಾಬಟ್ಟೆಯನ್ನಾಗಿಸುವ ಮತ್ತು ಯಥಾಸ್ಥಿತಿವಾದವನ್ನು ಪ್ರತಿಪಾದಿಸುವ ಹುನ್ನಾರು ಸಹ ಪರಿಸರವಾದಿಗಳ ಗುಪ್ತಾ ಅಜೆಂಡಾದಲ್ಲಿ ಸೇರಿದೆ ಎಂಬುದು ಈಚೆಗೆ ಬಯಲಾಗತೊಡಗಿದೆ. ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷರ ಹಿಡನ್ ಅಜೆಂಡಾ ಕೊಡಗಿನ ಬಿಜೆಪಿ ಶಾಸಕರಿಗೆ ನಿಧಾನಕ್ಕೆ ಅರ್ಥವಾಗತೊಡಗಿದೆ. ಪ.ಘ.ಕಾ.ಅಧ್ಯಕ್ಷ ಅಶೀಸರರನ್ನು ಆ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಆಗ್ರಹಿಸಿರುವುದರಲ್ಲಿ ಅರ್ಥವಿದೆ.

ಹುಲಿ ಅಧ್ಯಯನದ ಹೆಸರಲ್ಲಿ ಉಲ್ಲಾಸ್ ಕಾರಂತ ಹತ್ತು ಹುಲಿಗಳ ಜೀವ ತೆಗೆದ ಕತೆಯನ್ನು ಅರಣ್ಯ ಪ್ರೀತಿಸುವ ಅರಣ್ಯಾಧಿಕಾರಿಗಳು ನೆನಪಿಸಿಕೊಳ್ಳಬೇಕಿದೆ. ಜಿಲ್ಲೆಯ ಪರಿಸರವಾದಿಗಳಿಗಿಂತ ಹೆಚ್ಚಾಗಿ ಬುಡಕಟ್ಟು ಜನರು, ಕಾಡಿನ ವಾಸಿಗಳು ಅರಣ್ಯವನ್ನು ಪ್ರೀತಿಸಿದ್ದಾರೆ. ಈಗ ದೇವರಕಾಡು ಸಂರಕ್ಷಣೆಯ ಹೆಸರಲ್ಲಿ 50 ಕೋಟಿ ರೂಪಾಯಿಗಳನ್ನು ನೀಡುವಂತೆ ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷರು ಸರ್ಕಾರವನ್ನು ಕೇಳುತ್ತಿದ್ದಾರೆ. ಹಣದ ಮೇಲೆ ಯಾವಾಗಲೂ ಪರಿಸರವಾದಿಗಳ ಕಣ್ಣು ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ. ತಮ್ಮ ಎನ್.ಜಿ.ಓ.ಗೆ ಬರುವ ವಿದೇಶಿ ದುಡ್ಡಿನಿಂದಲೇ ಕಾಡಿನ ಬಗ್ಗೆ ಕಾಳಜಿಯ ಕಾರ್ಯಕ್ರಮಗಳನ್ನು ರೂಪಿಸಬಹುದಲ್ಲ. ಬುಡಕಟ್ಟು ಜನರಿಗೆ ಕಾಡಿನ ಉತ್ಪನ್ನಗಳು ಸಹ ದಕ್ಕದಂತೆ ಮಾಡಿದ ಶ್ರೇಯಸ್ಸು ಉತ್ತರ ಕನ್ನಡದ ಕೆಲ  ಪರಿಸರವಾದಿಗಳಿಗೆ ಸಲ್ಲುತ್ತದೆ. ಕಾಡಿನ ಉತ್ಪನ್ನಗಳು ನಾಡಿನ ಮೇಲ್ಜಾತಿಯ ಜನರಿಗೆ ಸಿಕ್ಕುವಂತೆ ಮಾಡಿ, ಅದರಿಂದ ಸಣ್ಣ ಉದ್ಯಮ ನಡೆಸಿ ಬದುಕನ್ನು ಸಬಲೀಕರಣ ಮಾಡಿಕೊಂಡ ಖ್ಯಾತ ಪರಿಸರವಾದಿಗಳು ನಮ್ಮಲ್ಲಿದ್ದಾರೆ. ಇದರ ಅರಿವನ್ನು ನಾವು ಕಾಡಿನ ಜನರಿಗೆ ಕೊಡಬೇಕಿದೆ. ಪಶ್ವಿಮ ಘಟ್ಟವನ್ನು ವಿಶ್ವಪಾರಂಪರಿಕೆ ಪಟ್ಟಿಗೆ ಸೇರ್ಪಡೆಯಾಗುವಷ್ಟರ ಮಟ್ಟಿಗೆ ಕಾಡನ್ನು ರಕ್ಷಿಸಿದವರು ಕಾಡಿನಲ್ಲಿರುವ ಬುಡಕಟ್ಟು ಜನರೇ ಹೊರತು, ಪರಿಸರವಾದಿಗಳಲ್ಲ. ಹಾಗಾಗಿ ವಿಶ್ವಪಾರಂಪರಿಕ ’ಪಟ್ಟ’ವನ್ನು ಈಗ ಕಟ್ಟಿಕೊಂಡರೆಷ್ಟು, ಬಿಟ್ಟರೆಷ್ಟು. ನಮ್ಮ ನಾಡಿನ ಜನ ನೆಮ್ಮದಿಯಿಂದ ಇದ್ದು, ಪಶ್ಚಿಮಘಟ್ಟವನ್ನು ಈಗ ಇರುವಂತೆ ರಕ್ಷಿಸಿಕೊಂಡರೆ ಸಾಕಲ್ಲವೇ?

ಕೊನೆ ಹನಿ :

ಚಿತ್ರದುರ್ಗಕ್ಕೂ ನನಗೂ ಬಿಡಿಸಲಾಗದ ನಂಟಿದೆ. ಸಾಸಲು ಗ್ರಾಮದ ಹತ್ತಿರ ಭರಮಣ್ಣ ನಾಯಕನ ದುರ್ಗಾ ಎಂಬ ಪುಟ್ಟ ಗ್ರಾಮವಿದೆ. ಅಲ್ಲಿನ ಬೆಟ್ಟದ ಮೇಲೆ ಏಕನಾಥೇಶ್ವರಿ ಸಹ ನೆಲಸಿದ್ದಾಳೆ. ಅದು  ನನ್ನ ಅಜ್ಜನ ಊರು. ದುರ್ಗದ ಕೋಟೆಯನ್ನು 1991ರಲ್ಲಿ ಒಮ್ಮೆ ಸುತ್ತಿ ಬಂದಿದ್ದೆ. ಪುಟ್ಟಣ್ಣ ಕಣಗಾಲ್, ತಳುಕಿನ ಸುಬ್ಬರಾಯರು, ಚಾಮಯ್ಯ ಮೇಷ್ಟ್ರು, ಆರತಿ, ವಿಷ್ಣುವರ್ಧನ್, ಕೋಟೆ ಸುತ್ತುವಾಗ ನನ್ನ ನೆನಪಿನ ಅಂಗಳದಲ್ಲಿ ಹಾದು ಹೋದರು. ಅಷ್ಟು ಗಾಢವಾಗಿ ನನ್ನನ್ನು ನಾಗರಹಾವು ಸಿನಿಮಾ ತಟ್ಟಿತ್ತು.

ಚಿತ್ರದುರ್ಗದಲ್ಲಿ ಶೂನ್ಯಪೀಠಾಧಿಪತಿ ಮುರುಘಾ ಶಾಂತವೀರರು ನೆಲೆ ನಿಲ್ಲುವಂತೆ ದೊರೆ ಭರಮಣ್ಣ ನಾಯಕ ಕೋರಿಕೊಂಡನಂತೆ. ಅದಕ್ಕಾಗಿ ಶ್ರೀಗಳಿಗೆ ಕ್ರಿ.ಶ.1703ರಲ್ಲಿ ಚಿತ್ರದುರ್ಗ ಕೋಟೆಯ ಮೇಲೆ ಹಾಗೂ ನಗರದ ಪಶ್ಚಿಮ ಭಾಗದ ಹೊರಹೊಲಯದಲ್ಲಿ ಬೃಹತ್ ಮಠಗಳನ್ನು ಕಟ್ಟಿಸಿಕೊಟ್ಟನಂತೆ. ಅಂದಿನಿಂದ ಇಂದಿನವರೆಗೆ ಶೂನ್ಯಪೀಠವು ಶ್ರೀ ಮುರುಘರಾಜೇಂದ್ರ ಮಠದಲ್ಲಿ ಮುಂದುವರೆದಿದೆ. ಮಠ ಪ್ರಗತಿ ಪರ ಹಾದಿಯಲ್ಲಿ ಸಾಗಿ ನಾಡಿನುದ್ದಕ್ಕೂ ಬೆಳಕಿನ ದೀಪಗಳನ್ನು ಹಚ್ಚುತ್ತಿದೆ.

Leave a Reply

Your email address will not be published.