Daily Archives: August 1, 2012

ಅಮೀರ ಖಾನ ನಿಮಿತ್ತ ಮಾತ್ರ…

– ಮಹಾದೇವ ಹಡಪದ

ಮಧ್ಯಮವರ್ಗೀಯವೆಂದು ಕೆಲವರಿಗೆ ಅನ್ನಿಸುತ್ತಿರುವ ಸತ್ಯಮೇವ ಜಯತೆ ಕಾರ್ಯಕ್ರಮದ ತಯಾರಿ ಹಂತವನ್ನು ಹೇಳಿಕೊಳ್ಳುತ್ತಲೇ ಲೊಳಲೊಟ್ಟೆ ನಿಲುವಿನ ಹೇಳಿಕೆಗಳನ್ನು ಅಮೀರ ಖಾನ ಬಗ್ಗೆ ಮಾತಾಡುತ್ತಿರುವುದು ಬೇಸರದ ಸಂಗತಿ. ನಾಟಕ ಮಾಡಿಸುವಾಗಲೂ ನಿರ್ದೇಶಕನೊಬ್ಬ ನಟನೊಂದಿಗೆ ತುಂಬ ಸೂಕ್ಷ್ಮವಾಗಿ ಕೆಲಸ ಮಾಡಲು ಹೆಣಗುತ್ತಾನೆ. ಅರೆ! ಸುಳ್ಳಸುಳ್ಳೆ ಮಾಡುವುದಕ್ಕೇಕೆ ಇಷ್ಟೊಂದು ತಾಲೀಮು ಎನ್ನುವ ನಟರು ಇಲ್ಲಿ ಸಿಗುತ್ತಾರೆ. ಆದರೆ ಒಂದು ತೆರನಾದ ಸಿನಿಮೀಯ ಅಳುವು ಆ ಪಾತ್ರದ ಆಳವನ್ನು ತೆರೆದಿಡಲು ಸಾಧ್ಯವಾಗಲಾರದು. ಅದನ್ನು ಮೀರುವ ಎಷ್ಟೋ ನೋವುಗಳು ಆ ಪಾತ್ರದ ಆ ಕ್ಷಣದ ನೋವಿನ ಮಡುವಿನಲ್ಲಿ ಸ್ಫೋಟಗೊಳ್ಳಲಿ ಎನ್ನುವ ಬಯಕೆಯಿಂದ ಅಳುವನ್ನು ಮೊಟಕುಗೊಳಿಸಲಾಗುತ್ತದೆ. ಭಾವವನ್ನು ಒತ್ತಿಡಲಾಗುತ್ತದೆ. ಅದರ ತಯಾರಿಯಲ್ಲಿ ನಾಟಕದವರೂ ಪ್ರೇಕ್ಷಕರನ್ನು ಮನದಲ್ಲಿಟ್ಟುಕೊಂಡು ಮಾಡುತ್ತಿರುತ್ತಾರೆ ಹೊರತು ನಾವು ಮಾಡಿದ್ದನ್ನೆ ನೀವು ನೋಡಿ ಎನ್ನುವ ಧಮಕಿಯಿಂದಲ್ಲ. ಆಗೆಲ್ಲ ನಿರ್ದೇಶಕ ಒಬ್ಬ ನಟನೊಡನೆ ಸಾಕಷ್ಟು ಹೊತ್ತು ಕಳೆಯಬೇಕಾಗುತ್ತದೆ. ಹಾಗೇಯೇ ಅಮೀರ ಖಾನ ಹೇಗೆಲ್ಲ ತಾಂತ್ರಿಕವಾಗಿ ತನ್ನ ಕಾರ್ಯಕ್ರಮ ರೂಪಿಸುತ್ತಾನೆ ಹೆಂಗೆ ತನ್ನ ಮಧ್ಯಮವರ್ಗೀಯ ಪ್ರೇಕ್ಷಕರನ್ನೆಲ್ಲ ಮರುಳುಗೊಳಿಸುತ್ತಾನೆಂದು ಇನ್ನೊಬ್ಬ ಜನಪ್ರಿಯ ಕಲಾ ಉತ್ಪಾದಕ ಒಂದು ಗುಣಾತ್ಮಕ ಕಾರ್ಯಕ್ರಮದ ರೂಪವನ್ನು ಒಡೆದು ನೋಡಲು ಪ್ರಯತ್ನಿಸುತ್ತಲಿರುತ್ತಾನೆ. ಆತನ ಉದ್ಧೇಶವೂ ತನ್ನ ತಾ ರಕ್ಷಿಸಿಕೊಳ್ಳುವುದಾಗಿರುತ್ತದೆ. ಮತ್ತು ಜನಮಾನಸವನ್ನು ತನ್ನ ಅಳಬುರಕ, ದ್ವೇಷಾಸೂಯೇ ಪ್ರಧಾನವಾದ ಕಥನವನ್ನೆ ಜಪಿಸುವಂತೆ ಪ್ರೇರೆಪಿಸುವುದಾಗಿರುತ್ತದೆ.

ಅರಿಸ್ಟಾಟಲ್ ಒಂದು ಕಡೆ, ರುದ್ರನಾಟಕದ ಕ್ರಿಯೆಯ ಜೀವಾತ್ಮದ ಸ್ವರೂಪವನ್ನು ಹೀಗೆ ಹೇಳುತ್ತಾರೆ:

“ವಸ್ತುವಿನ ಗುರಿಯು ಯಾವುದಾದರೂ ಇರಲಿ, ಅದನ್ನು ಸಾಧಿಸಲು ವಸ್ತುವು ಮೊದಲು ಸಿದ್ಧವಾಗಬೇಕು. ಹಾಗೆ ಸಿದ್ಧವಾಗುವುದು ಕೂಡ ಗುರಿಯನ್ನು ಸಾಧಿಸಲು ಅನುಕೂಲವಾದ ರೂಪದಲ್ಲಿ ಸಿದ್ಧವಾಗಬೇಕು. ಈ ಅನುಕೂಲ ರೂಪದ ಪ್ರಥಮ ಆವಿರ್ಭಾವ, ಆದ್ಯ ಅವತಾರವೇ ಅದರ ಆತ್ಮ. ಇದು ವಸ್ತುವಿನ ಪ್ರತ್ಯೇಕ ಅಂಗಗಳಲ್ಲಿರುವುದಿಲ್ಲ, ಆ ಅಂಗಗಳೆಲ್ಲವೂ ಒಂದು ಕ್ರಮದಲ್ಲಿ ಸಂಯೋಗವಾಗಿರುವ ಅದರ ರಚನೆಯಲ್ಲಿರುತ್ತದೆ. ಏಕೆಂದರೆ ಈ ಅಂಗಗಳಲ್ಲಿ ಕೆಲವು ನ್ಯೂನಾತಿರೇಕಗಳಿದ್ದರೂ ಉದ್ಧೇಶವನ್ನು ಸಂಪೂರ್ಣವಾಗಲ್ಲದಿದ್ದರೂ ಅಂಶತಃ ಸಾಧಿಸಬಹುದು. ಆದರೆ ರಚನೆಯಲ್ಲಿ ದೋಷವಿದ್ದರೆ ಅದು ಸಾಧ್ಯವೇ ಇಲ್ಲ.”

ಹೀಗೆ ವಿಮರ್ಶಾ ದೃಷ್ಟಿಯಿಂದ ನೋಡಿದಾಗ ಸತ್ಯಮೇವ ಜಯತೇ ಯಾವ ತಾಂತ್ರಿಕ ಮಾರ್ಗೋಪಾಯದಿಂದ ತಯಾರಾದರೂ ಅದು ಆಗು ಮಾಡುವ ಮತ್ತು ಅದರೊಳಗಿನ ಅಂತರ್ಬೋಧೆಯೇ ಮುಖ್ಯವಾಗುತ್ತದೆ. ಅದು ಮಾತ್ರ ಸಾಕು ಆ ಕಾರ್ಯಕ್ರಮದ ಪ್ರೇಕ್ಷಕನಿಗೆ. ಅದರಾಚೆಗಿನ ಸತ್ಯಶೋಧನೆ ಹುಸಿಯಾಗಿ ಎಲ್ಲೋ ಕಳೆದು ಹೋಗಿಬಿಡುತ್ತದೆ. ಆ ವಿಷಯದ ಸ್ಪಷ್ಟತೆ, ನಿಖರವಾದ ವಸ್ತುನಿರೂಪಣೆ, ಅದು ಆಗುಮಾಡುವ ಪರಿಣಾಮ, ಸಾಧ್ಯಾಸಾಧ್ಯತೆಗಳೆಲ್ಲದರ ನಡುವೆ ಒಂದು ಮಿತಿ ಇಲ್ಲೂ ಸೀಮಿತ ಚೌಕಟ್ಟನ್ನು ಹಾಕಿ ಕೊಟ್ಟಿರುತ್ತದೆ. ಜಾಗತಿಕ ಮಾರುಕಟ್ಟೆಯ ಪ್ರಚಾರಪ್ರಿಯತೆಗಳೂ ಕೂಡ ಈ ಕಾರ್ಯಕ್ರಮದ ರೂಪುರೇಷೆಯನ್ನು ನಿರ್ಮಿಸಿರಬಹುದಾದ ಸಾಧ್ಯತೆಗಳು ಇದ್ದೆ ಇರುತ್ತವೆ. ಹಾಗಾಗಿ ಒಂದು ಕನಸು-ಆಶಯದ ಮಾರ್ಗದಲ್ಲಿ ವ್ಯಕ್ತಗೊಳ್ಳುವಾಗ ಗಲಬಲಿಗಳು ಆಗಿರುತ್ತವೆ ಮತ್ತು ಅದು ಒಟ್ಟು ಕಾರ್ಯಕ್ರಮದ ಮಿತಿಯೂ ಆಗಿರುತ್ತದೆ.

ಒಂದಷ್ಟು ಗುಂಪುಗಳು ಸಾರ್ವಜನಿಕ ಜಾಲತಾಣಗಳಲ್ಲಿ ಮೀಸಲಾತಿ ಕುರಿತಾಗಿ ಎಡಬಿಡಂಗಿ ದೃಶ್ಯಗಳನ್ನು ಅಪಲೋಡ್ ಮಾಡುತ್ತಲೇ ಇರುತ್ತಾರೆ. ಆ ಕುರಿತಾಗಿ ಒಂದು ಚರ್ಚೆ ನಡೆದದ್ದೇ ಆದರೆ ಅವರ ಆಕ್ರೋಶಕ್ಕೆ ಕಡಿವಾಣ ಹಾಕಬಹುದು. ಇಲ್ಲವೇ ಅದೊಂದು ಸಮಕಾಲೀನ ಜಾನಪದ ಅಭಿವ್ಯಕ್ತಿಯೆಂದು ಓಸರಿಸಿ ಅದೊಂದು ಮೌಢ್ಯ ಆಚರಣೆಯನ್ನು ಅಚ್ಚುಕಟ್ಟಾಗಿ ಆಚರಿಸಿಕೊಳ್ಳಲೆಂದು ಅವರ ಪಾಡಿಗೆ ಅವರನ್ನು ಬಿಟ್ಟು, ತೀರ ಹಳ್ಳಿಗಳಲ್ಲಿ ಇಂದಿಗೂ ಹೊಗೆಯಾಡುತ್ತಿರುವ ಜಾತಿ ಜಡತೆಯನ್ನು ಕಿತ್ತು ಹಾಕಲು ಶ್ರಮಿಸಬೇಕಾದ್ದು ಮುಖ್ಯ ಆಗಬೇಕಾದ ಕೆಲಸ. ನೌಕರಿಯಲ್ಲಿರುವ ಹಿಂದುಳಿದ ವರ್ಗದವರ ಬಗ್ಗೆ ಅನುಮಾನಗಳು ಮೂಡುತ್ತಿವೆ. ಹಳ್ಳಿ ಭಾಗದಲ್ಲಿ ನಿರಂತರ ಶೋಷಣೆ ಜಾರಿಯಲ್ಲಿರುವಾಗ ಇಂದು ಜಾತೀಯತೆ ನಿರ್ಮೂಲನೆ ಆಗಿದೆ ಎಂದು ಭ್ರಮಿಸಿಕೊಂಡು ಬದುಕುವ ಹೀನ ಜಾಯಮಾನದ ಶ್ರೇಷ್ಠತೆಯ ವ್ಯಸನ ಆವರಿಸಿರುವುದು ಸುಳ್ಳಲ್ಲ. ಈ ಹಳ್ಳಿಗಾಡಿನ ಅಪ್ಪ-ಅಮ್ಮಂದಿರು ಇದು ನಮ್ಮ ಕರ್ಮ ಎನ್ನುವಂತೆ ಬದುಕಿರುವಾಗ ಆ ವಿಷವರ್ತುಲದಿಂದ ಓದಿ ತಿಳಿದವರು ಹೊಳೆ ದಾಟಿದ ಮೇಲೆ ಬದಲಾವಣೆ ಆಯಿತೆಂದು ಬಗೆದರೋ ಏನೋ.. ಒಟ್ಟು ಸಾಮಾಜಿಕ ರಚನೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಆಗುವುದನ್ನು ತಮ್ಮ ತುಷ್ಟಿಗುಣಕ್ಕೆ ಅನ್ವಯಿಸಿಕೊಂಡು ಬೇಡಿಕೆಯನ್ನು ಹೆಚ್ಚಿಸಿಕೊಳ್ಳುವ ಬಂಡವಾಳದಾರರು ಜನಜೀವನದ ಒಟ್ಟು ಆಶಯಗಳನ್ನು ರೂಪಿಸುತ್ತಿರುವಾಗ ಸತ್ಯಮೇವ ಜಯತೇ ಎಂಬಂಥ ಕಾರ್ಯಕ್ರಮಗಳು ಯಾವ ಮಾದರಿಯಲ್ಲಿದ್ದರೂ ಒಂದು ಸಂಚಲನ ಸುರುವಿಗೆ ನಾಂದಿ ಹಾಡಬಲ್ಲವು.

ಸತ್ಯಮೇವ ಜಯತೇ ಕಾರ್ಯಕ್ರಮ ಯಾವ ಕೆಲಸಗಳನ್ನು ಗುರುತಿಸಲಿ ಗುರುತಿಸದೇ ಇರಲಿ ತನ್ನ ಅಂತಃಸತ್ವದಲ್ಲಿ ಕರುಣಾರ್ದ್ರ ಕತೆಯೊಂದನ್ನು ನಿರೂಪಿಸಲು ತೊಡಗಿರುವುದೇ ಮಹತ್ವದ ಹೆಜ್ಜೆ. ಇವತ್ತಿನ ಇಂಡಿಯಾದ ಸಂದರ್ಭದಲ್ಲಿನ ವಿಷಾದಕರ ಸತ್ಯಗಳ ಜೊತೆಗೆ ರಾಜಿಯಾಗುತ್ತಲೇ ಹಲಕೆಲವು ತೇಪೆ ಹಚ್ಚುವ ಕಾರ್ಯಕ್ರಮಗಳನ್ನು ಭಾರಿ ಯೋಜನೆಗಳೆಂಬಂತೆ ಪ್ರತಿಬಿಂಬಿಸುತ್ತಿರುವ ಒಂದು ವರ್ಗ, ಪ್ರಗತಿಯ ವಿಲಕ್ಷಣ ರೂಪಗಳನ್ನು ಹುಚ್ಚುಹುಚ್ಚಾಗಿ ಸಂಭ್ರಮಿಸುತ್ತಿದೆ. ಸಮಾಜದ ಚಾರಿತ್ರಿಕ ಚಲನೆಯನ್ನು ವರ್ಲಿ ಚಿತ್ರದ ರೇಖೆಗಳಂತೆ ಸರಳವಾಗಿ ಗುರುತಿಸುತ್ತ, ಸಮಾಜವಿಜ್ಞಾನದ ಹೊಸ ವಿಘಟನೆಯನ್ನು ಹೊಸದೊಂದು ವ್ಯಾಖ್ಯಾನದಂತೆ ರೂಪಿಸುವ ಮೇಲ್ಮಧ್ಯಮ ವರ್ಗದವರಿಗೆ ಆ ಸರಳ ರೇಖೆಗಳ ಮಾಂತ್ರಿಕ ಚಲನೆಯ ಶಕ್ತಿ ಅರ್ಥವಾಗದಿರುವುದು ನಿಜಕ್ಕೂ ದುರಂತದ ಸಂಗತಿ. ಕಲೆಯ ಅಭಿವ್ಯಕ್ತಿಯ ಸ್ವರೂಪದಲ್ಲಿ ಸದಾ ಆಧುನಿಕತೆ ಪ್ರವೇಶ ಪಡೆಯುತ್ತಿರುತ್ತದೆ. ಕಾಲದೇಶದ ತುರ್ತಿನೊಂದಿಗೆ ಕಲಾಮಾರ್ಗಗಳು ಮಾರ್ಪಾಟಾಗುವ ಗಳಿಗೆಯಲ್ಲಿ ಸಮಾಜದ ಸ್ಪಷ್ಟ ಚಿತ್ರಣ ವ್ಯಕ್ತವಾಗದೆ ಬರಿ ಕೌಶಲವೇ ಮುಖ್ಯ ಎನ್ನಿಸಿದಾಗ, ಅದರಲ್ಲಿ ಬೆನ್ನೆಲುಬಿನ ಸ್ಥಿರತೆ ಅನುಮಾನ ಹುಟ್ಟಿಸುತ್ತದೆ. ಹಾಗೆ ಅನುಮಾನ ಹುಟ್ಟಿಸಲು ಎರಡು ಮಾರ್ಗಗಳು ಇಂದು ಪ್ರೇರಣೆ ಕೊಡುತ್ತಿವೆ. ಒಂದು ನಗರ ಜೀವನದ ಹುಸಿ ಆದರ್ಶದ ಕನಸು, ಮತ್ತೊಂದು ವ್ಯವಸ್ಥಿತವಾಗಿ ರಾಜಕೀಯ ಅಜಂಡಾಗಳನ್ನು ಇರುವ ಸೀಮಿತ ಕೃತಿಗಳಲ್ಲಿ ಹುಡುಕುವ ಹಪಹಪಿ. ಈ ಕಾರಣಗಳಿಂದಾಗಿಯೇ ವೈಭವೀಕರಿಸುವ ಸ್ವಕೀಯತೆ ನಮ್ಮನ್ನು ನಿಜವಾದ ಕಲಾಮಾರ್ಗದೊಂದಿಗೆ ದಿಕ್ಕು ತಪ್ಪಿಸುತ್ತಲೇ ಇರುತ್ತದೆ. ಆದಷ್ಟು ಜಾಗರೂಕರಾಗಿ ಆಯ್ಕೆ ಮಾಡಿಕೊಳ್ಳುವ ವಸ್ತುವಿಷಯಗಳು ಕೂಡ ನಮ್ಮನ್ನು ಕಪ್ಪು-ಬಿಳಿ ಗೆರೆಗಳ ನಡುವೆ ತಂದು ನಿಲ್ಲಸಿ ಬಿಡುವ ಆತಂಕದ ಸಂದರ್ಭಗಳು ಬಂದೊದಗುತ್ತವೆ. ಆಗೆಲ್ಲ ಒಂದು ತೆರನಾದ ಜಿಗುಪ್ಸಾಭಾವ ನಮ್ಮನ್ನ ಆಕ್ರಮಿಸಿ ಜಗತ್ತ ಶೂನ್ಯದ ತತ್ವಕ್ಕೆ ಕಟಿಬದ್ಧರನ್ನಾಗಿಸಿಬಿಡುತ್ತದೆ. ಹಾಗಾಗಿ ಇವತ್ತಿನ ದುರ್ದೆಸೆಯಲ್ಲಿ ಕಲಾಮಾಧ್ಯಮಗಳೂ ಈ ಒಂದು ವರ್ಗವನ್ನು ಉದಾಸೀನ ಮಾಡಿದೆ ಎಂದೇ ಹೇಳಬಹುದಾಗಿದೆ. ಆ ವರ್ಗದ ಕುರಿತಾಗಿ ಕಲಾ ಮಾಧ್ಯಮಗಳು ಕೆಲಸ ಮಾಡುವುದೇ ಅಪರೂಪ ಅಂಥದರಲ್ಲಿ ಅಮೀರ ಖಾನ ತನ್ನ ತಾಂತ್ರಿಕ ಮಿತಿಯೊಳಗೆ ಕಾರ್ಯಕ್ರಮದ ಕ್ರಿಯಾಶೀಲತೆಯನ್ನು ಒರೆಗೆ ಹಚ್ಚಿಕೊಂಡು ಪ್ರಯತ್ನಿಸಿರುವುದು ಸ್ತುತ್ಯಾರ್ಹ.