Daily Archives: August 4, 2012

Anna_Hazare

ಅಣ್ಣಾ, ನಿಮ್ಮ ಮನಸ್ಸು ಮಲಿನವಾಯಿತೇಕೆ?


-ಚಿದಂಬರ ಬೈಕಂಪಾಡಿ


ಒಬ್ಬ ವ್ಯಕ್ತಿಗಿರಬಹುದಾದ ವ್ಯಾಮೋಹಗಳಲ್ಲಿ ಮಹತ್ವಾಕಾಂಕ್ಷೆಯೂ ಒಂದು. ಹಣ, ಕೀರ್ತಿ, ಆಸ್ತಿಗಳ ವ್ಯಾಮೋಹದಂತೆಯೇ ಮಹತ್ವಾಕಾಂಕ್ಷೆಯೂ ಹೊರತಲ್ಲ. ಸನ್ಯಾಸಿಯೆಂದರೆ ಸರ್ವಸಂಗ ಪರಿತ್ಯಾಗಿ. ಅವನಿಗೆ ಅಧಿಕಾರ ಬೇಡ, ಹಣ, ಕೀರ್ತಿ, ಪ್ರಚಾರ, ಲೌಕಿಕವಾದ ಯಾವುದೇ ಸುಖಭೋಗಗಳೂ ಬೇಡ. ಪಾರಮಾರ್ಥಿಕದ ಸುಖಕ್ಕಾಗಿ ಹಂಬಲಿಸುವುದು, ಅದರಲ್ಲೇ ಸಂತೃಪ್ತನಾಗುವುದು. ಆದರೆ ಈಗ ಇದು ಸಾಧ್ಯವಾಗುತ್ತಿಲ್ಲ. ಸನ್ಯಾಸಿಗಳಿಗೂ ತಮ್ಮದೇ ಆದ ಮಠ, ಪೀಠಗಳು ಬೇಕು. ಕೋಶ ತುಂಬಿರಬೇಕು. ಆಸ್ತಿ ಅಪಾರವಿರಬೇಕು. ಇವೆಲ್ಲವೂ ಸಮಾಜಕ್ಕಾಗಿ ಮಾಡುವ ಸೇವೆಗಾಗಿ, ಭಕ್ತರ ಅಭೀಷ್ಠೆ ಈಡೇರಿಸುವುದಕ್ಕಾಗಿ. ಸರ್ಕಾರಗಳು ಮಾಡಬೇಕಾದ ಕೆಲಸವನ್ನು ಕೆಲವು ಮಠ ಮಾನ್ಯಗಳು ಮಾಡುತ್ತಿವೆ. ‘ಕೆರೆಯ ನೀರನು ಕೆರೆಗೆ ಚೆಲ್ಲಿ’  ಎನ್ನುವಂತೆ ಭಕ್ತರಿಂದ ಸಂಗ್ರಹಿಸಿದ ಸಂಪತ್ತನ್ನು ಭಕ್ತರ ಕಲ್ಯಾಣಕ್ಕಾಗಿ ವಿನಿಯೋಗಿಸುತ್ತಿವೆ.

ಖರ್ಚು ಮಾಡಿದರೂ ಭಂಡಾರ ಭರ್ತಿಯಾಗಿಯೇ ಇರುವಂತೆ ಸದಾ ನೋಡಿಕೊಳ್ಳುತ್ತಿರಬೇಕು. ಇದು ಅವರ ಕಾಳಜಿಯೂ ಹೌದು. ಆದರೇ ಈ ನಾಡಿನ ಎಲ್ಲಾ ಮಠ ಮಾನ್ಯಗಳೂ ಮಾಡುತ್ತಿಲ್ಲ. ಎಲ್ಲಾ ಮಠಗಳೂ ಈ ಕಾಯಕಕ್ಕೆ ಮುಂದಾದರೆ ಸರ್ಕಾರಕ್ಕೇನು ಕೆಲಸ ಉಳಿದೀತು? ಎನ್ನುವ ಕಾರಣಕ್ಕೆ ಅಂದುಕೊಳ್ಳಬೇಕಾಗಿಲ್ಲ. ಅದು ಅವರವರ ಇಚ್ಛೆಗೆ ಬಿಟ್ಟ ವಿಚಾರ. ಮಠಗಳು ರಾಜಕೀಯ ಮಾಡಬಾರದು, ರಾಜಕೀಯ ಸೇರಬಾರದು. ಈಗ ಬಹುತೇಕ ಮಠಾಧೀಶರು ರಾಜಕಾರಣದಲ್ಲಿ ತಮ್ಮದೇ ಆದ ಪ್ರಭಾವಿ ವಲಯವನ್ನು ನಿರ್ಮಿಸಿಕೊಂಡಿದ್ದಾರೆ, ರಾಜಕೀಯದಿಂದ ದೂರ ಇರುವವರೂ ಇದ್ದಾರೆ. ಧರ್ಮದ ಹೆಸರಲ್ಲಿ ಅಥವಾ ಧರ್ಮ ಉಳಿಸುವವರ ಹೆಸರಲ್ಲಿ ಕೆಲಸ ಮಾಡುವ ಸಂಘಟನೆ, ಪಕ್ಷಗಳಿಗೆ ರಾಜಗುರುಗಳಾಗಿ ಕೆಲಸ ಮಾಡುತ್ತಿದ್ದಾರೆ. ರಾಜನಿಗೆ ರಾಜಧರ್ಮದ ನೀತಿಯನ್ನು ಹಿಂದೆ ಹೇಳುತ್ತಿರಲಿಲ್ಲವೇ ಹಾಗೆ ಎಂದು ಈಗ ತಮ್ಮನ್ನು ಸಮರ್ಥಿಸಿಕೊಳ್ಳುತ್ತಾರೆ.

ಅವರ ಸಮರ್ಥನೆಯನ್ನು ಚರ್ಚೆ ಮಾಡುವುದು ಅನಗತ್ಯ. ರಾಜಕಾರಣಿಗಳಿಗೆ ಗುರುಗಳು ಆಶೀರ್ವಾದ ಮಾಡುವುದು ತಪ್ಪಲ್ಲ, ತಿದ್ದಿಬುದ್ಧಿ ಹೇಳುವುದೂ ಅಪರಾಧವಲ್ಲ. ಆದರೆ ಅವರ ಕಾವಿಯೊಳಗಿರುವ ರಾಜಕೀಯದ ತುಡಿತ, ಮನಸ್ಸು, ಮಾತು ಒಬ್ಬ ವೃತ್ತಿಪರ ರಾಜಕಾರಣಿಗಿಂತಲೂ ಪರಿಪಕ್ವವಾಗಿರುವ ಉದಾಹರಣೆಗಳೂ ಇವೆ. ಕಾವಿಯ ಮರೆಯಲ್ಲಿರುವ ವ್ಯಾಮೋಹ ದೇಹವನ್ನು ಮಾತ್ರವಲ್ಲಾ ಮನಸನ್ನೂ ಆವರಿಸಿಕೊಂಡುಬಿಟ್ಟರೇ?. ನೇರವಾಗಿ ರಾಜಕೀಯ ಪಕ್ಷದ ಮೂಲಕ ಜನರ ಮುಂದೆ ದೇಹ ನಿಂತಿರದಿದ್ದರೂ ಮನಸ್ಸು ನಿಂತಿರುತ್ತದೆ. ಕಣದಲ್ಲಿ ನಿಂತವನಲ್ಲೇ ಲೀನವಾಗಿ ಅವನೇ ತಾನಾಗಿ ಕಾಣಿಸಿಕೊಳ್ಳುವ ವ್ಯಾಮೋಹವನ್ನು ನಿರಾಕರಿಸಲು ಸಾಧ್ಯವೇ? ಈ ವ್ಯಾಮೋಹಕ್ಕಿರುವ ಶಕ್ತಿಯೇ ಅಂಥದ್ದು ಅಂದುಕೊಂಡು ಸುಮ್ಮನಿರಬಹುದಿತ್ತು. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಹಾಗೆ ಮಾಡುವುದು ಸಾಧ್ಯವಿಲ್ಲ ಮತ್ತು ಸಾಧುವೂ ಅಲ್ಲ ಎನ್ನುವುದಕ್ಕೆ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಉದಾಹರಣೆಯಾಗುತ್ತಾರೆ.

ಅಣ್ಣಾ ಈ ದೇಶಕಂಡ ಅಪ್ಪಟ ಗಾಂಧಿವಾದಿ. ಗಾಂಧೀಜಿಯವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಮಾಜಿಕ ಕಾರ್ಯಕರ್ತರಾಗಿ ಜನಸೇವೆ ಮಾಡುತ್ತಾ ಬಂದ ಅವರ ಕಾಳಜಿ ಶ್ಲಾಘನೀಯ. ಕಳೆದು ಹೋಗುತ್ತಿರುವ ಗಾಂಧಿವಾದಿಗಳ ನಡುವೆ ಕೊಂಡಿಯಾಗಿರುವ ಅಣ್ಣಾ ಪ್ರಚಾರದ ಬೆಳಕಲ್ಲಿ ಪ್ರಕಾಶಮಾನವಾಗಿ ಬೆಳಗುತ್ತಿದ್ದಾರೆ. ಜಡತ್ವದ ಹೊದಿಕೆಯೊಳಗೆ ಸುಖನಿದ್ದೆಯಲ್ಲಿದ್ದ ನಿರ್ಲಿಪ್ತ ಮನಸ್ಸುಗಳನ್ನು ಎಚ್ಚರಗೊಳಿಸಿದ್ದಾರೆ. ಎಲ್ಲವನ್ನೂ ಸಹಿಸಿಕೊಳ್ಳುವುದೇ ಬದುಕು, ಅದೇ ನೀತಿ, ಧರ್ಮ ಎನ್ನುವಂತೆ ಪ್ರಶ್ನೆ ಮಾಡುವುದನ್ನೇ ಮರೆತು ಬಿಟ್ಟವರಿಗೆ ಪ್ರಶ್ನೆ ಮಾಡಬೇಕು ಎನ್ನುವ ಅರಿವು ಮೂಡಿಸಿದ್ದಾರೆ. ಸಮಾಜಕ್ಕೆ ಎಲ್ಲರೂ ಬದ್ಧರು ಎನ್ನುವುದರ ಜೊತೆಗೇ ಅಧಿಕಾರ ಶಾಹಿ ಮತ್ತು ಪ್ರಭುತ್ವದ ಕೋಟೆಯೊಳಗೆ ಲಗ್ಗೆ ಹಾಕುವ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಅಣ್ಣಾ ತಾನು ತೊಡುವ ಬಿಳಿ ವಸ್ತ್ರದಷ್ಟೇ ಮಡಿಯಾಗಿ ಮನಸ್ಸನ್ನು ಇಟ್ಟುಕೊಂಡಿದ್ದರು ಅಂದ ಮೇಲೆ ಕೈಬಾಯಿ ಶುದ್ಧವೆಂದು ಹೇಳಬೇಕಾಗಿಲ್ಲ.

ಅವರ ಸಾಮಾಜಿಕ ಹೋರಾಟಗಳು ಗಾಂಧಿಗಿರಿಯಷ್ಟೇ ಮೊನಚಾಗಿದ್ದವು, ಜನಾಕರ್ಷಣೆಗೊಳಪಡುತ್ತಿದ್ದವು. ಆದರೆ ಪ್ರಚಾರದ ಪ್ರಖರತೆಯ ಬೆಳಕು ಅಣ್ಣಾ ಅವರನ್ನು ಆವರಿಸಿಕೊಂಡ ಮೇಲೆ ಅಣ್ಣಾ ಕೋಟೆ ನಿರ್ಮಾಣವಾಯಿತು. ಮಹಾರಾಷ್ಟ್ರಕ್ಕೆ ಸೀಮಿತವಾಗಿದ್ದ ಅಣ್ಣಾ ದೇಶದ ಶಕ್ತಿಕೇಂದ್ರದಲ್ಲಿ ಕಾಣಿಸಿಕೊಂಡರು. ಈಗ ಅಣ್ಣಾ ಇಲ್ಲದ ಹೋರಾಟವನ್ನು ಊಹಿಸಿಕೊಳ್ಳುವುದೇ ಕಷ್ಟ ಎನ್ನುವಷ್ಟರಮಟ್ಟಿಗೆ ಬೆಳೆದುನಿಂತಿದ್ದಾರೆ. ಅಣ್ಣಾ ಹಳ್ಳಿಗಾಡಿನಿಂದ ಬಂದು ಹೈಪ್ರೊಫೈಲ್‌ಗಳನ್ನು ಕಾಡುತ್ತಿದ್ದ ನಾಯಕತ್ವದ ಕೊರತೆಯನ್ನು ನೀಗಿಸಿದ್ದಾರೆ. ಸಾಮಾಜಿಕವಾಗಿ ಉನ್ನತ ಸ್ಥಾನಮಾನ, ಹಣ, ಅಂತಸ್ತು ಇದ್ದವರ ಕಾಲಬುಡದಲ್ಲಿ ರಾಜಕಾರಣ ಮಂಡಿಯೂರುತ್ತದೆ ಅನಿವಾರ್ಯವಾದಾಗ ಮಾತ್ರ. ಸಾಮಾನ್ಯ ವರ್ಗ ಸದಾ ಅಧಿಕಾರ ಮತ್ತು ರಾಜಕಾರಣದ ಸುತ್ತಲೂ ಗಿರಕಿಹೊಡೆಯುತ್ತಿರುತ್ತದೆ.

ಆದ್ದರಿಂದ ಸಾಮಾನ್ಯವರ್ಗದ ಮುಂದೆ ರಾಜಕಾರಣ ಮಂಡಿಯೂರಿದಂತೆ ಕಾಣಿಸಿದರೂ ಅದು ನಿಜವಲ್ಲ, ನಿಜದಂತೆ ಕಾಣುವುದು ಸಾಮಾನ್ಯವರ್ಗದ ಮನಸ್ಸಿನ ಭ್ರಮೆ. ಇದನ್ನು ಚೆನ್ನಾಗಿ ಅರಿತಿರುವ ಹೈಪ್ರೊಫೈಲ್ ವರ್ಗ ರಾಜಕಾರಣಿಗಳನ್ನು ನಾಯಕರೆಂದು ಒಪ್ಪಿಕೊಳ್ಳಲು ಬಯಸುವುದಿಲ್ಲ. ಅಂಥವರ್ಗದ ಕಣ್ಣಿಗೆ ನಾಯಕರಾಗಿ ಕಾಣಿಸಿಕೊಂಡಿರುವವರು ಅಣ್ಣಾ. ಆದರಿಂದಲೇ ನೀವು-ನಾವೂ ಊಹಿಸಲು ಸಾಧ್ಯವಿಲ್ಲದವರು ಅಣ್ಣಾ ಅವರ ಬೆನ್ನಿಗೆ ನಿಲ್ಲುವುದನ್ನು ಕಾಣಬಹುದು. ನಿಜವಾದ ಕಾಳಜಿಯ ಸಾಮಾನ್ಯವರ್ಗ ಅಣ್ಣಾ ಅವರಲ್ಲಿ ಗಾಂಧಿಯನ್ನು ಕಾಣುತ್ತಿದ್ದಾರೆ. ಗಾಂಧೀಜಿಯವರನ್ನು ನೋಡಿರದಿದ್ದವರೇ ಈಗ ಈ ದೇಶದ ನಿರ್ಣಾಯಕ ಶಕ್ತಿಯಾಗಿರುವುದರಿಂದ ಸಹಜವಾಗಿಯೇ ಆಕರ್ಷಿತರಾಗಿದ್ದಾರೆ. ಇದನ್ನು ಚೆನ್ನಾಗಿ ಗುರುತಿಸಿದವರು ಕೆಲವೇ ಕೆಲವು ಜನರು. ಅಣ್ಣಾ ಅವರ ಮೂಲಕ ವೇದಿಕೆ ನಿರ್ಮಿಸಿಕೊಂಡು ತಾವೇ ಚೌಕಟ್ಟು ಹಾಕಿ ಕೊಂಡರು. ಅಣ್ಣಾತಂಡ ಅಸ್ತಿತ್ವಕ್ಕೆ ಬಂತು. ಆಗ ಅಣ್ಣಾ ಮಾತ್ರ ಏಕಸೂತ್ರಧಾರಿಯಾಗಿದ್ದರು. ತಂಡ ಬಂದಮೇಲೆ ಅಣ್ಣಾ ನಿಧಾನವಾಗಿ ಸೂತ್ರವನ್ನು ಕಳೆದುಕೊಂಡು ಕೇವಲ ಪಾತ್ರಧಾರಿಯಾಗಿಬಿಟ್ಟರು ಅನ್ನಿಸಿದರೆ ತಪ್ಪಲ್ಲ.

ಸ್ವಾತಂತ್ಯ್ರ ಹೋರಾಟಕ್ಕೆ ಗಾಂಧೀಜಿ ನಾಯಕತ್ವ ಕೊಟ್ಟರು. ಗಾಂಧಿಗಿರಿಯೇ ನಡೆಯುತ್ತಿದ್ದರೂ ಈ ಹೋರಾಟಕ್ಕೆಂದೇ ವೇದಿಕೆ ರೂಪಿಸಿದರು. ಅದರ ಹೆಸರೇ ಕಾಂಗ್ರೆಸ್. ಈ ಹೆಸರಿನಡಿಯಲ್ಲಿಯೇ ಸ್ವಾತಂತ್ರ್ಯ ಹೋರಾಟ ನಡೆದವು. ಸ್ವಾತಂತ್ರ್ಯ ಸಿಕ್ಕಿದ ಮೇಲೆ ಗಾಂಧಿ ಕಾಂಗ್ರೆಸ್ ವಿಸರ್ಜನೆ ಮಾಡಲು ಸಲಹೆ ಮಾಡಿದ್ದರು. ಈ ವೇದಿಕೆಯ ಅವಶ್ಯಕತೆ ಇನ್ನಿಲ್ಲ ಎನ್ನುವುದು ಅವರು ಆಗ ಕೊಟ್ಟ ಕಾರಣ. ಆದರೆ ಗಾಂಧೀಜಿಯವರ ಸಲಹೆ ಅನುಷ್ಠಾನವಾಗಲಿಲ್ಲ. ಆ ಕಾರಣಕ್ಕೆ ಈಗಲೂ ಕಾಂಗ್ರೆಸ್ ಉಳಿದುಕೊಂಡಿದೆ. ಅವರವರ ಅನುಕೂಲ, ಆಸಕ್ತಿಗೆ ಪೂರಕವಾಗುವ ಪಕ್ಷಗಳನ್ನು ನಾಯಕರುಗಳು ಕಟ್ಟಿಕೊಂಡರು. ಈಗ ನಮ್ಮ ಸುತ್ತಲೂ ಇರುವ ಪಕ್ಷಗಳು ಅವುಗಳ ಮುಂದುವರಿಕೆ. ಆದರೆ ಹಳೆತಲೆಮಾರಿನ ಆದರ್ಶಗಳು ಮಾತ್ರ ಉಳಿದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು.

ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಉತ್ಸಾಹವನ್ನು ಅಣ್ಣಾ ಈ ಇಳಿವಯಸ್ಸಿನಲ್ಲೂ ಉಳಿಸಿಕೊಂಡಿರುವುದೇ ಸೋಜಿಗ. ದಿಲ್ಲಿಯಲ್ಲಿ ಉಪವಾಸ ಹೂಡುವ ಮೂಲಕ ಭ್ರಷ್ಟಾಚಾರದ ವಿರುದ್ಧ ಎತ್ತಿದ ಕೂಗು ದೇಶದ ಸಾಮಾನ್ಯ ಜನರ ಕೂಗಾಯಿತು. ಅಣ್ಣಾ ಹೋರಾಟಕ್ಕೆ ಸಾಗರೋಪಾದಿಯಲ್ಲಿ ಜನರು ಹರಿದು ಬಂದರು. ಹೈಪ್ರೊಫೈಲ್ ವ್ಯಕ್ತಿಗಳು ಉಪವಾಸ ಸ್ಥಳದಲ್ಲಿ ಕಾಣಿಸಿಕೊಂಡಾಗ ಸಹಜವಾಗಿಯೇ ಅಣ್ಣಾ ಪುಳಕಗೊಂಡರು. ಅಣ್ಣಾ ಹಮ್ಮಿಕೊಂಡ ಹೋರಾಟವನ್ನು ಎರಡನೇ ಸ್ವಾತಂತ್ರ್ಯ ಹೋರಾಟವೆಂದು ಮಾಧ್ಯಮಗಳು ಬಣ್ಣಿಸಿದ್ದು ವಾಸ್ತವ ಕೂಡಾ. ಪ್ರಚಾರ ಎನ್ನುವುದು ಅತ್ಯಂತ ಅಪಾಯಕಾರಿ ಎನ್ನುವುದು ಬಹಳ ಜನರಿಗೆ ಗೊತ್ತಿಲ್ಲ. ಪ್ರಾಮಾಣಿಕನನ್ನು ಬಹುಬೇಗ ಅಪ್ರಾಮಾಣಿಕನನ್ನಾಗಿಸುವ ಶಕ್ತಿ ಪ್ರಚಾರಕ್ಕಿದೆ. ಹಾಗೆಂದು ಭಯಪಡಬೇಕಾಗಿಲ್ಲ. ಸ್ವಯಂನಿಯಂತ್ರಣವಿದ್ದರೆ ಯಾವ ಪ್ರಚಾರವೂ ಹಾನಿಮಾಡಲು ಸಾಧ್ಯವಿಲ್ಲ. ಆದರೆ ಇಂಥ ಪ್ರಚಾರಗಳ ಸುಳಿಗೆ ಸಿಲುಕಿದರೆ ಆಗಬಹುದಾದ ಅನಾಹುತವೇನು ಎನ್ನುವುದಕ್ಕೆ ಅಣ್ಣಾ ತಂಡದೊಳಗಿರುವ ಭಿನ್ನಾಭಿಪ್ರಾಯ ಉದಾಹರಣೆಯಾಗಬಲ್ಲುದು. ಒಂದೇ ಮಾತಿನಲ್ಲಿ ಹೇಳಬೇಕಾದರೆ ಈಗ ಅಣ್ಣಾತಂಡ ಏಕಸ್ವರವಾಗಿಲ್ಲ.

ಪ್ರಬಲ ಲೋಕಪಾಲ್ ಜಾರಿಗೆ ಬರಬೇಕು ಎನ್ನುವುದು ಅಣ್ಣಾ ತಂಡದ ಪೇಟೆಂಟ್ ಎಂಬರ್ಥದಲ್ಲಿ ನೋಡಲಾಗುತ್ತಿದೆ. ವಾಸ್ತವವಾಗಿ ಇದು ಈ ದೇಶದ ಶೋಷಿತರ, ದಲಿತರ, ಅನಕ್ಷರಸ್ಥರ ಮತ್ತು ಬಲಿಷ್ಠ ಭಾರತದ ಕನಸು ಕಾಣುವ ಎಲ್ಲರ ಕನಸು. ಅವರಿಗೆ ಹೇಳಲು ಅಸಾಧ್ಯವಾಗಿತ್ತು, ಅಣ್ಣಾ ತಂಡ ಹೇಳಲು ಶಕ್ತವಾಯಿತು. ಅಂಥ ಶಕ್ತಿ ಕೊಟ್ಟವರು ಮೇಲೆ ಹೇಳಿದ ಜನಶಕ್ತಿ. ಆದರೆ ಪ್ರಬಲ ಲೋಕಪಾಲ್ ಜಾರಿ ಸುಲಭವಾಗಿ ಬರುವುದಿಲ್ಲ. ಯಾಕೆಂದರೆ ಅದನ್ನು ಜಾರಿಗೆ ತರಬೇಕಾದವರು ಜನಶಕ್ತಿಯ ಪ್ರತಿನಿಧಿಗಳು. ಅದು ಜಾರಿಗೆ ಬಂದರೆ ಅವರು ಮತ್ತೆ ಪ್ರತಿನಿಧಿಗಳಾಗಿ ಆರಿಸಿಬರಲು ಕಷ್ಟವಾಗಬಹುದು. ಆ ಕಷ್ಟದ ಅಂಶವನ್ನು ನಿವಾರಿಸಿಕೊಂಡು ಜಾರಿಗೆ ತರಲು ಅವರದೂ ಅಭ್ಯಂತರವಿರಲ್ಲಿಲ್ಲ. ಅಣ್ಣಾ ಹೇಳುವಂಥ ಲೋಕಪಾಲ್ ಜಾರಿಗೆ ಬಂದರೆ ಶಕ್ತಿಕೇಂದ್ರದೊಳಗೆ ಈಗ ಇರುವ ಬಹುತೇಕ ಮಂದಿಗೆ ಎಂಟ್ರಿ ಸಾಧ್ಯವಿಲ್ಲ. ದೇಶದ ಮೊದಲ ಆದ್ಯತೆ ವಸತಿ ಕಲ್ಪಿಸುವುದಲ್ಲ, ಜೈಲು ನಿರ್ಮಿಸುವುದು ಎನ್ನುವುದು ಅವರಿಗೂ ಗೊತ್ತು.

ಈ ಎಲ್ಲವೂ ಅಣ್ಣಾ ಅವರಿಗೂ ಗೊತ್ತು. ಒಂದು ವ್ಯವಸ್ಥೆಗೆ ವಿರುದ್ಧವಾದ ಪರ್ಯಾಯ ವ್ಯವಸ್ಥೆಯನ್ನು ಸುಲಭವಾಗಿ ಜಾರಿಗೆ ತರಲು ಸಾಧ್ಯವಿಲ್ಲ. ಪ್ರತಿರೋಧಗಳಿರುತ್ತವೆ. ಸ್ವಾತಂತ್ರ್ಯ ಗಾಂಧೀಜಿಯವರ ಒಂದೇ ಬೈಠಕ್ ಹೋರಾಟಕ್ಕೆ ಸಿಗಲಿಲ್ಲ. ಅನೇಕ ವರ್ಷಗಳ ನಿರಂತರ ಹೋರಾಟದ ಫಲ. ಪ್ರಬಲ ಲೋಕಪಾಲ್ ಜಾರಿಗೂ ಗಾಂಧೀಜಿ ಅವರ ಹೋರಾಟ ಮಾದರಿಯಾಗಬೇಕಿತ್ತು. ಸ್ವಯಂ ಜನರೇ ಹೋರಾಟಕ್ಕಿಳಿಯಬೇಕಲ್ಲದೇ ಹೋರಾಟಕ್ಕಿಳಿಯಲು ಒತ್ತಾಯಮಾಡುವಂತಾಗಬಾರದು. ಅಣ್ಣಾ ಹಮ್ಮಿಕೊಂಡ ಹೋರಾಟಕ್ಕೆ ಸಹಜವಾದ ಕಾರಣವಿತ್ತು, ಅನಿವಾರ್ಯವೂ ಆಗಿತ್ತು. ಆದರೆ ಹೋರಾಟಕ್ಕೆ ಕಾವುಬಂದಿರಲಿಲ್ಲ. ಈ ಕಾರಣದಿಂದಾಗಿಯೇ ಉಪವಾಸ ಸತ್ಯಾಗ್ರಹ ಪ್ರಹಸನದ ರೂಪತಳೆಯಿತು. ಇದು ಹೋರಾಟಕ್ಕೆ ಆದ ಹಿನ್ನಡೆ ಹೊರತು ಹೊಸ ಪರ್ಯಾಯ ರಾಜಕೀಯ ಶಕ್ತಿ ಹುಟ್ಟು ಹಾಕಲು ನಿಜವಾದ ಪ್ರೇರಣೆ ಅಲ್ಲ. ಆದರೆ ಅಣ್ಣಾ ಯಾಕೆ ಹಾಗೆ ಭಾವಿಸಿದರು ಎನ್ನುವುದು ಅಚ್ಚರಿಯಂತೂ ಅಲ್ಲ. ಅಣ್ಣಾ ಅದೆಷ್ಟೇ ಪ್ರಾಮಾಣಿಕತೆಯನ್ನು ತಮ್ಮ ತಂಡದ ಬಗ್ಗೆ ವ್ಯಕ್ತಪಡಿಸಿದರೂ ಸಂಶಯದ ಬೇರುಗಳು ಮಾತ್ರ ಚಿಗುರುತ್ತಲೇ ಇರುತ್ತವೆ. ಅಂಥ ಸಂಶಯಗಳಲ್ಲಿ ಒಂದು ಪರ್ಯಾಯ ರಾಜಕೀಯ ಶಕ್ತಿಯನ್ನು ಹುಟ್ಟುಹಾಕುವ ಯೋಚನೆ ಬಂದದ್ದು. ಈ ಯೋಚನೆಯ ಹೊಣೆಯನ್ನು ಅಣ್ಣಾ ಅವರ ತಲೆಗೆ ಕಟ್ಟಲು ಸಾಧ್ಯವಿಲ್ಲ. ಅಣ್ಣಾ ಮನಸ್ಸು ಮಾಡಿದ್ದರೆ ಬಹಳ ಹಿಂದೆಯೇ ಮಹಾರಾಷ್ಟ್ರ ವಿಧಾನಸಭೆ ಪ್ರವೇಶಿಸುತ್ತಿದ್ದರು. ಅಂಥವರು ಲೋಕಸಭೆ ಪ್ರವೇಶಿಸಲು ಉತ್ಸುಕರಾಗಿದ್ದಾರೆ ಅಂದುಕೊಳ್ಳುವುದು ಮೂರ್ಖತನವಾಗುತ್ತದೆ.

ಅಣ್ಣಾರಂತೆ ಅವರ ತಂಡದಲ್ಲಿದ್ದವರೆಲ್ಲರೂ ವ್ಯಾಮೋಹ ಮುಕ್ತರೆಂದು ಭಾವಿಸಬೇಕಾಗಿಲ್ಲ. ವ್ಯಾಮೋಹ ಅನೇಕರಲ್ಲಿ ಅನೇಕ ಕಾರಣಗಳಿಗಾಗಿ ಇರಬಹುದು, ಇಲ್ಲದಿರಬಹುದು. ಈ ವ್ಯಾಮೋಹ ಅಣ್ಣಾ ಅವರನ್ನು ಆವರಿಸಿಕೊಳ್ಳುವಂತೆ ಮಾಡುವ ಪ್ರಯತ್ನದ ಮೊದಲ ಹಂತ ಈಗಿನದ್ದು. ಈ ದೇಶದಲ್ಲಿ ಪರ್ಯಾಯ ರಾಜಕೀಯ ಶಕ್ತಿಯ ಹುಟ್ಟು ಅನಿವಾರ್ಯ. ಅಂಥ ಶಕ್ತಿಯನ್ನು ಹುಟ್ಟು ಹಾಕಲು ಅಣ್ಣಾ ಸಮರ್ಥರು. ಆದರೆ ಅಧಿಕಾರದ ಚುಕ್ಕಾಣಿ ಹಿಡಿಯಬಲ್ಲಷ್ಟು ಸಮರ್ಥವಾದ ರಾಜಕೀಯ ಶಕ್ತಿಯನ್ನು ಹುಟ್ಟು ಹಾಕುವುದು ಸುಲಭವಲ್ಲ ಎನ್ನುವುದನ್ನು ಇತಿಹಾಸದಿಂದ ಕಲಿಯಬೇಕಾಗುತ್ತದೆ. ಅಣ್ಣಾ ಅವರ ಹೊಸ ಸಾಹಸವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡಿದಾಗ ತಟ್ಟನೆ ನೆನಪಾದವರು ಮಹೇಂದ್ರ್ ಸಿಂಗ್ ಟಿಕಾಯತ್. ಅಷ್ಟು ದೊಡ್ಡ ರೈತಶಕ್ತಿಯಾಗಿದ್ದ ಟಿಕಾಯತ್ ಈಗ ಇತಿಹಾಸ.

ಅಣ್ಣಾ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದಾಗ, ಉಪವಾಸಕ್ಕೆ ಕುಳಿತುಕೊಳ್ಳುತ್ತಿದ್ದಾಗ ಆಗುತ್ತಿದ್ದ ರೋಮಾಂಚನ ಅವರು ತಂಡಕಟ್ಟಿಕೊಂಡ ಮೇಲೆ ಆಗುತ್ತಿರಲಿಲ್ಲ. ಆ ತಂಡದವರು, ಅವರ ಮಾತುಗಳನ್ನು ಕೇಳಿಸಿಕೊಂಡಾಗಲೆಲ್ಲಾ ಕೆಲವು ರಾಜಕಾರಣಿಗಳು ಕಣ್ಣಮುಂದೆ ಬಂದಂತಾಗುತ್ತಿತ್ತು. ಸದಾ ಪ್ರಚಾರ ಬಯಸುವ ರಾಜಕಾರಣಿಗಳಿಗಿಂತೇನು ಕಡಿಮೆಯಿಲ್ಲ, ಅಂಥ ಸುದ್ದಿಮೂಲಗಳು ಅನ್ನಿಸತೊಡಗಿತು. ಅಣ್ಣಾ ಜಂತರ್ ಮಂತರ್‌ನಲ್ಲಿ ಉಪವಾಸಕ್ಕೆ ಕುಳಿತದ್ದು ಮತ್ತು ಅವರು ಉಪವಾಸ ಕೈಬಿಟ್ಟು ಪರ್ಯಾಯ ರಾಜಕೀಯ ಶಕ್ತಿ ಹುಟ್ಟು ಹಾಕುವ ಘೋಷಣೆ ಮಾಡಿದ್ದಂತೂ ಅಚ್ಚರಿಮೂಡಿಸಲಿಲ್ಲ. ಆದರೆ ಆತುರವಾಯಿತು ಅನ್ನಿಸಿತು ಮತ್ತು ಇದು ನಿಮ್ಮ ಅಖಾಡ ಅಲ್ಲ ಅಣ್ಣಾ ಅನ್ನಬೇಕೆನಿಸಿತು. ನಿರ್ಮಲವಾಗಿದ್ದ ಅಣ್ಣಾ ಮನಸ್ಸು ರಾಜಕೀಯ ಶಕ್ತಿಯ ಕನಸಿನೊಂದಿಗೆ ಮಲಿನವಾಯಿತು ಅನ್ನಬೇಕೇ? ಇನ್ನಷ್ಟು ದಿನ ಹೀಗೆಯೇ ತಂಡ ಉಳಿದರೆ ಅಣ್ಣಾ ನಿಮ್ಮ ಮೈಕೈಯನ್ನೂ ಮಲಿನ ಮಾಡಿಬಿಡುತ್ತಾರಲ್ಲ ಎನ್ನುವ ಆತಂಕವಾಗುತ್ತಿದೆ.