Daily Archives: August 6, 2012

ಹಸಿವು ಮತ್ತು ಸಾವಿಗೆ ಧರ್ಮದ ಹಂಗಿಲ್ಲ


– ಡಾ.ಎನ್.ಜಗದೀಶ್ ಕೊಪ್ಪ


 

ಕರ್ನಾಟಕದ ಬುದ್ಧಿವಂತರ ನಾಡೆಂದು ಹೆಸರಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇಲಿಂದ ಮೇಲೆ ಸಂಭವಿಸುತ್ತಿರುವ ಅಮಾನುಷವಾದ ಘಟನೆಗಳು ನಾಗರೀಕ ಜಗತ್ತು ತಲೆತಗ್ಗಿಸುವಂತೆ ಮಾಡಿವೆ. ಸಮಾಜ ಘಾತುಕ ಶಕ್ತಿಗಳು ಧರ್ಮದ ಮತ್ತು ಕನ್ನಡ ನಾಡು ನುಡಿ ರಕ್ಷಣೆಯ ಹೆಸರಿನಲ್ಲಿ ಮುಖವಾಡ ಧರಿಸಿಕೊಂಡು ವಿಜೃಂಭಿಸುತ್ತಿರುವದನ್ನ ಗಮನಿಸಿದರೆ, ಕರ್ನಾಟಕದಲ್ಲಿ ಮನುಷ್ಯರೆನಿಸಿಕೊಂಡವರು ಸರ್ಕಾರ ನಡೆಸುತ್ತಿಲ್ಲ, ಬದಲಾಗಿ ಇದೊಂದು “ಜಂಗಲ್ ರಾಜ್” ಎಂದು ನಿಸ್ಸಂಕೋಚವಾಗಿ ಹೇಳಬಹುದು.

ಈ ನೆಲದ ಮೇಲಿನ ಒಂದು ಜೀವ ಅದು ಗಂಡಾಗಿರಲಿ, ಹೆಣ್ಣಾಗಿರಲಿ, ಘನತೆಯಿಂದ ಬದುಕುವುದಕ್ಕೆ ಧರ್ಮದ ಅಥವಾ ಜಾತಿಯ ಹಂಗುಗಳು ಬೇಕಾಗಿಲ್ಲ ಎಂಬ ಸುಪ್ತ ಪ್ರಜ್ಞೆಯೊಂದು ಗುಪ್ತಗಾಮಿನಿಯಂತೆ ಈ ನೆಲದ ಸಂಸ್ಕೃತಿಯಲ್ಲಿ ಹರಿದು ಬಂದಿದೆ. ಇಂತಹ ಪ್ರಜ್ಙೆ ಮತ್ತು ನಂಬಿಕೆಗಳನ್ನು ಸೂಫಿ ಸಂತರು ಸೇರಿದಂತೆ, ಅಂಬೇಡ್ಕರ್, ಲೋಹಿಯಾ, ಕುವೆಂಪು ಮುಂತಾವರು ತಮ್ಮ ಬದುಕು ಮತ್ತು ಚಿಂತನೆಗಳ ಮೂಲಕ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ, ಜೊತೆಗೆ ವಿಸ್ತರಿಸಿದ್ದಾರೆ.

ಮಂಗಳೂರು ಘಟನೆಯ ಹಿನ್ನೆಲೆಯಲ್ಲಿ ಏಳು ವರ್ಷ ಹಿಂದೆ ತಮಿಳುನಾಡಿನ ಧಾರ್ಮಿಕ ಶ್ರದ್ಧಾ ಕೇಂದ್ರವಾದ ದರ್ಗಾ ಮತ್ತು ಅಲ್ಲಿನ ಮುಸ್ಲಿಮ್ ಸಮುದಾಯ ಸುನಾಮಿ ಸಂತ್ರಸ್ತರ ಬಗ್ಗೆ ನಡೆದುಕೊಂಡ ಮಾನವೀಯ ನಡುವಳಿಕೆ ಪದೇ ಪದೇ ನೆನಪಾಗುತ್ತಿದೆ.

ಕೇಂದ್ರಾಡಳಿತ ಪ್ರದೇಶ ಪಾಂಡಿಚೇರಿಗೆ ಸೇರಿದ ಕಾರೈಕಲ್ ಜಿಲ್ಲಾ ಕೇಂದ್ರ ಮತ್ತು ತಮಿಳುನಾಡಿನ ಜಿಲ್ಲಾ ಕೇಂದ್ರವಾದ ನಾಗಪಟ್ಟಣಂ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಕಡಲ ತೀರಕ್ಕೆ ಹೊಂದಿಕೊಂಡಂತೆ ನಾಗೂರು ಎಂಬ ಊರಿದೆ. ಇಪ್ಪತ್ತು ಸಾವಿರ ಜನಸಂಖ್ಯೆ ಇರುವ ಈ ಊರಿನಲ್ಲಿ ಶೇಕಡ 90 ಮಂದಿ ಮುಸ್ಲಿಂ ಬಾಂಧವರು ನೆಲೆಸಿದ್ದಾರೆ. ಇವರ ಮಾತೃಭಾಷೆ ತಮಿಳು. ಇದೇ ಊರಿನಲ್ಲಿ ಸಾಹುಲ್ ಹಮೀದ್ (1490-1573) ಎಂಬ ಪ್ರಸಿದ್ಧ ಸೂಫಿ ಸಂತನ ದರ್ಗಾ ಇದ್ದು, ಪ್ರತಿದಿನ ದಕ್ಷಿಣ ಭಾರತದ ರಾಜ್ಯಗಳಿಂದ ಸಾವಿರಾರು ಹಿಂದು ಮತ್ತು ಮುಸ್ಲಿಂ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಕ್ಷೇತ್ರ ಇವತ್ತಿಗೂ ದಕ್ಷಿಣ ಭಾರತದಲ್ಲಿ ಮುಸ್ಲಿಂ ಸಮುದಾಯದ ಪುಣ್ಯಕ್ಷೇತ್ರಗಳಲ್ಲಿ ಒಂದು. ಈ ದರ್ಗಾಕ್ಕೆ ಒಂದು ಐತಿಹಾಸಿಕ ಮಹತ್ವವಿದೆ.

16ನೇ ಶತಮಾನದಲ್ಲಿ ತಮಿಳುನಾಡನ್ನು ಆಳುತಿದ್ದ ವಿಜಯನಗರ ಸಾಮ್ರಾಜ್ಯದ ಅರಸರಲ್ಲಿ ಒಬ್ಬನಾಗಿದ್ದ ಅಚ್ಯುತಪ್ಪ ನಾಯಕ ಎಂಬ ದೊರೆ ಗುಣವಾಗದ ಕಾಯಿಲೆಯಿಂದ ಬಳಲುತಿದ್ದಾಗ ಈ ಪ್ರದೇಶಕ್ಕೆ ಬಂದ ಸೂಫಿ ಸಂತ ಪಾರಿವಾಳದ ರಕ್ತದ ಮೂಲಕ ಅರಸನ ಕಾಯಿಲೆಯನ್ನು ವಾಸಿಮಾಡಿದನಂತೆ. ಇದರಿಂದ ಸಂತೃಪ್ತನಾದ ದೊರೆ ಆ ಸಂತನಿಗೆ ಇನ್ನೂರು ಎಕರೆ ಭೂಮಿ ಧಾನ ಮಾಡಿದ. ಇದೇ ಭೂಮಿಯಲ್ಲಿ ತನ್ನ ಶಿಷ್ಯರೊಂದಿಗೆ ನೆಲೆ ನಿಂತು, ಜನಸಾಮಾನ್ಯರ ದೈಹಿಕ ಮತ್ತು ಮಾನಸಿಕ ರೋಗಗಳನ್ನು ಗುಣಪಡಿಸುತ್ತಾ ಜೀವಿಸಿದ್ದ ಸಂತ ಸಾಹುಲ್ ಹಮೀದ್ 1573ರಲ್ಲಿ ನಾಗೂರಿನಲ್ಲಿ ಅಸು ನೀಗಿದಾಗ ಅವನ ಶಿಷ್ಯಂದಿರು ಗುರುವಿಗೆ ಸಮಾಧಿ ನಿರ್ಮಾಣ ಮಾಡಿ ಅಂದಿನಿಂದ ಇಂದಿನವರೆಗೂ ಅದನ್ನು ಪೂಜಿಸುತ್ತಾ ಶ್ರದ್ಧೆಯಿಂದ ನಡೆದುಕೊಂಡು ಬಂದಿದ್ದಾರೆ. ತಮಿಳುನಾಡಿನ ಈ ಕರಾವಳಿ ಪ್ರದೇಶಗಳನ್ನು ಆಳಿದ ಟಿಪ್ಪು ಸುಲ್ತಾನ್, ಮರಾಠರು ಮತ್ತು ಬ್ರಿಟೀಷರು ಕೂಡ ಈ ಧಾರ್ಮಿಕ ಶ್ರದ್ಧಾಕೇಂದ್ರಕ್ಕೆ ನೆರವಾದ ಬಗ್ಗೆ ದಾಖಲೆಗಳಿವೆ.

ಸಂತನ ವಂಶಸ್ತರ ಮೇಲ್ವಿಚಾರಣೆಯಲ್ಲಿ ಟ್ರಸ್ಟ್ ಕೂಡ ರಚನೆಯಾಗಿದೆ. ಗುಣವಾಗದ ಕಾಯಿಲೆಗಳಿಗೆ ಈಗಲೂ ಅಲ್ಲಿ ದೇಸಿ ಪದ್ಧತಿಯ ಔಷಧೋಪಚಾರ ನಡೆಯುತ್ತಿದೆ. ವಿಶೇಷವಾಗಿ ಮಾನಸಿಕ ಅಸ್ವಸ್ಥರನ್ನು ಗುಣಪಡಿಸುವ ಧಾರ್ಮಿಕ ಮತ್ತು ಔಷಧೋಪಚಾರ ಕ್ರಿಯೆಗಳು ಸಹ ಅಲ್ಲಿ ಜರಗುತ್ತವೆ.

ಅಧಿಕ ಸಂಖ್ಯೆಯಲ್ಲಿ ಹಿಂದೂ ಭಕ್ತರೂ ಸಹ ಆಗಮಿಸಿ, ದರ್ಗಾ ಹಿಂದಿರುವ ಬೃಹತ್ ಕಲ್ಯಾಣಿಯಲ್ಲಿ ಸ್ನಾನ ಮಾಡಿ, ಸಂತನ ಸಮಾಧಿಗೆ ಪೂಜೆ ಸಲ್ಲಿಸುವ ವಾಡಿಕೆ ಚಾಲ್ತಿಯಲ್ಲಿದೆ.

2004ರ ಡಿಸೆಂಬರ್ 26ರಂದು ಇಂಡೋನೆಷ್ಯಾದ ಸಮುದ್ರದ ತಳದಲ್ಲಿ ಸಂಭವಿಸಿದ ಭೂಕಂಪದ ಪರಿಣಾಮ ಉಂಟಾದ ಸುನಾಮಿ ಅಲೆಗಳಿಗೆ ಭಾರತದ ಪೂರ್ವ ಭಾಗದ ಕಡಲತೀರದ ಪ್ರದೇಶಗಳು ತುತ್ತಾದದ್ದು ಎಲ್ಲರೂ ಬಲ್ಲ ಸಂಗತಿ. ತಮಿಳುನಾಡಿನ ಕಡಲತೀರಗಳು ಈ ಸಂದರ್ಭದಲ್ಲಿ ಅಪಾರ ಹಾನಿಗೆ ಒಳಗಾದವು. ಐವತ್ತೈದು ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣಕಳೆದುಕೊಂಡರು. ಬ್ರಿಟೀಷರಿಗೂ ಮುನ್ನ ಡಚ್ಚರಿಂದ ಮತ್ತು ಪೋರ್ಚುಗೀಸರಿಂದ ಆಳಿಸಿಕೊಂಡಿದ್ದ ನಾಗಪಟ್ಟಣ, 5ನೇ ಶತಮಾನದಿಂದಲೂ ಬಂದರು ಪಟ್ಟಣವಾಗಿ ಪ್ರಸಿದ್ಧಿ ಪಡೆದಿತ್ತು. ಸುನಾಮಿ ಪಕೃತಿ ವಿಕೋಪಕ್ಕೆ ಇಡೀ ನಾಗಪಟ್ಟಣ ಜಿಲ್ಲೆ ತುತ್ತಾಗಿ 35 ಸಾವಿರ ಜನ ಪ್ರಾಣ ತೆತ್ತು, ಲಕ್ಷಾಂತರ ಮಂದಿ ತಮ್ಮ ಆಸ್ತಿಗಳನ್ನು ಕಳೆದುಕೊಂಡು ಅಕ್ಷರಶಃ ಅನಾಥರಾದರು. ಈ ಸಂದರ್ಭದಲ್ಲಿ ಭಾರತ ಸರ್ಕಾರ ವಿದೇಶಗಳ ನೆರವನ್ನು ನಿರಾಕರಿಸಿ, ಸಂತ್ರಸ್ತರ ಪರಿಹಾರಕ್ಕೆ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ಕೈಗೆತ್ತಿಗೊಂಡಿತು.

ನಾಗಪಟ್ಟಣಂ ಜಿಲ್ಲೆಯಲ್ಲಿ ರಸ್ತೆ, ದೊರವಾಣಿ ಸಂಪರ್ಕ, ವಿದ್ಯತ್ ಸಂಪರ್ಕ ಎಲ್ಲವೂ ಅಸ್ತವ್ಯಸ್ತಗೊಂಡಿದ್ದವು. ಎಲ್ಲಡೆ ಕೊಳೆತ ಪ್ರಾಣಿಗಳ, ಮನುಷ್ಯರ ಮೃತ ದೇಹಗಳು ಗೋಚರಿಸುತಿದ್ದವು. ಸಾಂಕ್ರಾಮಿಕ ರೋಗ ಹರಡಲು ಪ್ರಾರಂಭಿಸಿತು. ಒಂದೆಡೆ ಮೃತ ದೇಹಗಳಿಗೆ ಮುಕ್ತಿ ಕಲ್ಪಿಸಿಕೊಡಬೇಕಾದ ಸವಾಲು, ಇನ್ನೊಂದೆಡೆ ಬದುಕುಳಿದವರಿಗೆ ಸೂರು, ಅನ್ನ ನೀರು, ಆರೋಗ್ಯ ಸೌಲಭ್ಯ ಒದಗಿಸುವ ಸವಾಲು. ಇವೆಲ್ಲವುಗಳನ್ನು ಆ ಸಂದರ್ಭದಲ್ಲಿ ಅಲ್ಲಿನ ಜಿಲ್ಲಾಧಿಕಾರಿಯಾಗಿದ್ದ 36 ವರ್ಷ ವಯಸ್ಸಿನ ಐ.ಎ.ಎಸ್. ಅಧಿಕಾರಿ ರಾಧಾಕೃಷ್ಣನ್ ಅತ್ಯಂತ ಸಮರ್ಥವಾಗಿ ನಿಭಾಯಿಸಿದ ರೀತಿ ಆಶ್ಚರ್ಯಪಡುವಂತಹದ್ದು.

ನಾಗಪಟ್ಟಣಂ ಹೊರವಲಯದಲ್ಲಿ 75 ಎಕರೆಗೂ ಹೆಚ್ಚು ವಿಸ್ತೀರ್ಣವಿರುವ ಜಿಲ್ಲಾದಿಕಾರಿಯ ಕಛೇರಿ ಆವರಣದಲ್ಲಿ ತೆಂಗಿನ ಗರಿಗಳಿಂದ ಬೃಹತ್ ಶೆಡ್ಡುಗಳನ್ನು ನಿರ್ಮಾಣ ಮಾಡಿ, ಬದುಕುಳಿದವರಿಗೆ ಆಶ್ರಯ ಕಲ್ಪಿಸಲಾಯಿತು. ಕೇಂದ್ರದಿಂದ ಮತ್ತು ದೇಶದ ವಿವಿಧ ರಾಜ್ಯಗಳಿಂದ ಬಂದ ಪಡೆಗಳನ್ನು ಮತ್ತು ಸ್ವಯಂಸೇವಕರನ್ನು ಮೃತದೇಹಗಳಿಗೆ ಅಂತ್ಯ ಸಂಸ್ಕಾರ ಮಾಡುವ ಕೆಲಸಕ್ಕೆ ನಿಯೋಜಿಸಲಾಯಿತು. ಇಂತಹ ಕೆಲಸ ಕೇವಲ ಸರ್ಕಾರ ಅಥವಾ ಸ್ವಯಂ ಸೇವಾ ಸಂಸ್ಥೆಗಳು ಇವುಗಳು ಮಾಡಿದರೆ ಸಾಲದು, ಸ್ಥಳೀಯರೂ ಇದರಲ್ಲಿ ಪಾಲ್ಗೊಳ್ಳಬೇಕೆಂದು ನಾಗೂರು ದರ್ಗಾ ಮುಸ್ಲಿಂ ಬಾಂಧವರಿಗೆ ಕರೆ ನೀಡಿತು.

ನಾಗೂರು ದರ್ಗಾದ ಈ ಕರೆಗೆ ಓಗೊಟ್ಟ ಕಾರೈಕಲ್, ಕುಂಭಕೋಣಂ, ಮಯಿಲಾಡುತೊರೈ, ತಿರುವರೂರು ಮತ್ತು ತಂಜಾವೂರು ಪ್ರದೇಶಗಳೀಂದ ಬಂದ ಮುಸ್ಲಿಂಮರು ಸಾವಿರಾರು ಸಂಖ್ಯೆಯಲ್ಲಿ ಬಂದು ಕೊಳೆಯುತಿದ್ದ ಮೃತ ದೇಹಗಳಿಗೆ ಜಾತಿ, ಧರ್ಮ ನೋಡದೆ, ಅಂತ್ಯಕ್ರಿಯೆ ನಡೆಸಿದರು. ನಾಗೂರು ದರ್ಗಾ ಆವರಣದಲ್ಲಿ ಬೃಹತ್ ಪೆಂಡಾಲ್ ನಿರ್ಮಿಸಿ, ಬದುಕುಳಿದಿದ್ದ ಎಂಟು ಸಾವಿರ ಮಂದಿಗೆ 40 ದಿನಗಳ ಆಶ್ರಯ ಒದಗಿಸಿದರು. ಬೆಳಿಗ್ಗೆ ಎಂಟು ಗಂಟೆಗೆ ಚಹಾ, 11 ಗಂಟೆಗೆ ಊಟ, ನಾಲ್ಕು ಗಂಟೆಗೆ ಚಹಾ ಬ್ರೆಡ್, ಸಂಜೆ ಏಳುಗಂಟೆಗೆ ಊಟ. ಹೀಗೆ ನಿರಂತರ ನಲವತ್ತು ದಿನಗಳ ಕಾಲ, ಜಾತಿ ಅಥವಾ ಧರ್ಮದ ನೆಲೆ ನೋಡದೇ ಎಂಟು ಸಾವಿರ ಮಂದಿಗೆ ಆಶ್ರಯ ನೀಡಿ ಕಾಪಾಡಿದ ಗೌರವ ಈ ದರ್ಗಾಕ್ಕೆ ಸೇರಿತು. ಈ ಮಹತ್ಕಾರ್ಯಕ್ಕಾಗಿ ಮುಸ್ಲಿಂ ವರ್ತಕರು, ರೈತರು, ಪ್ರತಿದಿನ ಕ್ವಿಂಟಾಲ್‌ಗಟ್ಟಲೆ ಅಕ್ಕಿ, ತರಕಾರಿ, ಎಣ್ಣೆ ಬೇಳೆ, ಸಾಂಬಾರ್ ಪುಡಿ, ಸಕ್ಕರೆ, ಹಾಲು, ಚಹಾ ಪುಡಿಯನ್ನು ದರ್ಗಾದ ಆವರಣಕ್ಕೆ ತಂದು ಸುರಿದು ತಮ್ಮ ಹೆಸರು ಕೂಡ ತಿಳಿಸದೆ ಹೋಗುತಿದ್ದ ರೀತಿಗೆ ಸ್ವತಃ ಸಾಕ್ಷಿಯಾದ ನಾನು ಬೆರಗಾಗಿದ್ದೀನಿ. ಅವರ ನಡುವಳಿಕೆಯಲ್ಲಿ “ನೀಡುವವನಿಗೆ ಅಹಂ, ಪಡೆದವನಿಗೆ ಕೀಳರಿಮೆ ಇರಬಾರದು” ಎಂಬ ಮನುಷ್ಯತ್ವದ ಮಹಾನ್ ಪ್ರಜ್ಞೆಯೊಂದು ಎದ್ದು ಕಾಣುತಿತ್ತು.

ಬದುಕಿದ್ದಾಗ ಜಾತಿಯನ್ನ, ಧರ್ಮವನ್ನು ಅಪ್ಪಿಕೊಂಡು ಬಡಿದಾಡುವ ಈ ನರಜನ್ಮಕ್ಕೆ ಸುನಾಮಿಯ  ಹೊಡೆತಕ್ಕೆ ಸಿಲುಕಿ ಕಡಲತೀರದಲ್ಲಿ ಕೊಳೆಯುತ್ತಿರುವಾಗ, ಯಾವುದೋ ಇನ್ನೊಂದು ಬದುಕುಳಿದ ಜೀವ ಬೃಹತ್ ಕಂದಕ ತೋಡಿ, ಸಾಮೂಹಿಕವಾಗಿ ಹೂಳುವಾಗ, ಅಲ್ಲಿ ಧರ್ಮದ ಅಥವಾ ಜಾತಿಯ ಸೋಂಕು ಕಾಣಲಿಲ್ಲ. ಬದುಕಿದ್ದ ಜೀವಕ್ಕೆ ಮೃತಪಟ್ಟವರೆಲ್ಲರೂ ಮನುಷ್ಯರು ಎಂಬ ಪ್ರಜ್ಞೆ ಮಾತ್ರ ಇತ್ತು. ಹಸಿದ ಜೀವವೊಂದು ಅನ್ನಕ್ಕೆ ಕೈಯೊಡ್ಡಿದಾಗ ಅಲ್ಲಿ ತಾನು ಈವರೆಗೆ ಅಪ್ಪಿಕೊಂಡಿದ್ದ ಜಾತಿ ಅಥವಾ ಧರ್ಮದ ನೆನಪೇ ಆ ಕ್ಷಣದಲ್ಲಿ ಬರಲಿಲ್ಲ. ಏಕೆಂದರೆ, ಪಕೃತಿಯ ವಿಕೋಪದಲ್ಲಿ ಬದುಕುಳಿದ ಜೀವಕ್ಕೆ ಜಾತಿ-ಧರ್ಮಕ್ಕಿಂತ ಹೊಟ್ಟೆ ತುಂಬುವ ಅನ್ನ ಮುಖ್ಯವಾಗಿತ್ತು. ಇಂತಹ ಕಟು ವಾಸ್ತವ ಸತ್ಯಗಳನ್ನು ಧರ್ಮದ ಹೆಸರಿನಲ್ಲಿ ಕತ್ತಿ ಹಿಡಿದು ಬೀದಿಯಲ್ಲಿ ಹಾರಾಡುವ ಹಲಾಲುಕೋರರಿಗೆ ತಲುಪಿಸುವ ಬಗೆ ಹೇಗೆ? ನೀವೇನಾದರೂ ಬಲ್ಲಿರಾ?

[ಕಳೆದ ಶನಿವಾರ (28/7/12) ಈ ದರ್ಗಾಕ್ಕೆ ಭೇಟಿ ನೀಡಿ, ಪೋಟೊ ತೆಗೆದು, ಅಲ್ಲಿನ ಮುಖ್ಯಸ್ಥರೊಂದಿಗೆ ಚಹಾ ಕುಡಿದು, ಮಾತನಾಡುವಾಗ ಹಳೆಯ ಘಟನೆಗಳು ನೆನಪಾದವು.]