Daily Archives: August 7, 2012

ಆರ್.ಎಸ್.ಎಸ್. ಹಿಂದುತ್ವದಲ್ಲಿ ದಲಿತರ ಜೊತೆಗಿನ ವೈವಾಹಿಕ ಸಂಬಂಧಗಳು


-ನವೀನ್ ಸೂರಿಂಜೆ


[ಹಿಂದೂ ಹುಡುಗಿಯನ್ನು ಮುಸ್ಲಿಂ ಹುಡುಗರು ಮದುವೆಯಾದರೆ ಅದು ಲವ್ ಜೆಹಾದ್ ಎಂದು ಸಂಘಪರಿವಾರಿಗಳು ಬೊಬ್ಬೆ ಹೊಡೆಯುತ್ತಾರೆ. ಹಿಂದೂ ಮೇಲ್ಜಾತಿಯ ಹುಡುಗಿಯರನ್ನು ದಲಿತರು ಮತ್ತು ಕೆಳ ಜಾತಿಯ ಹುಡುಗರು ಮದುವೆಯಾದರೆ ಸಂಘ ಪರಿವಾರಿಗಳ ನಿಲುವೇನು? ಜಾತಿಗಳನ್ನು ಮರೆತು ಹಿಂದೂಗಳಾದ ನಾವೆಲ್ಲಾ ಒಂದಾಗೋಣ ಎಂದು ಹಿಂದೂ ಸಮಾವೇಶದಲ್ಲಿ ಕರೆ ಕೊಡುವ ಸಂಘಪರಿವಾರ ಜಾತಿ ವ್ಯವಸ್ಥೆಯನ್ನು ಮರೆತು ಅವರಿಗೆ ಬೇಕಾದಾಗ ನೆನಪಿಸಿಕೊಳ್ಳುತ್ತದೆಯೇ ವಿನಹ ಅಂಬೇಡ್ಕರ್ ಹೇಳಿದಂತೆ ಜಾತಿ ವಿನಾಶಕ್ಕೆ ಯತ್ನ ನಡೆಸುವುದಿಲ್ಲ. ಅದಿರಲಿ. ಬೇರೆ ಬೇರೆ ಜಾತಿ, ಧರ್ಮದ ಪ್ರೇಮಿಗಳು ಮನೆ ಮಂದಿ ಅಥವಾ ಸಮಾಜ, ಸಂಘಟನೆಗೆ ಹೆದರಿ ನಮ್ಮಲ್ಲಿಗೆ ಬಂದಾಗ ನಾವು ಗೆಳೆಯರು ಒಟ್ಟಾಗಿ, ಇಲಾಖೆಗಳ ಸಹಕಾರದೊಂದಿಗೆ ಪ್ರೇಮಿಗಳಿಗೆ ಮದುವೆ ಮಾಡಿಸಿದ್ದೇವೆ. ಇಂತಹ ಒಂಬತ್ತು ಮದುವೆ ಮಾಡಿದ ಖುಷಿ ನಮ್ಮಲ್ಲಿದೆ. ಅದರ ಒಂದು ಕಥೆ ಇಲ್ಲಿದೆ. (ಯುವಕ, ಯುವತಿ ಮತ್ತು ಅವರ ತಂದೆ ತಾಯಿಯ ಹೆಸರು ಬದಲಿಸಲಾಗಿದೆ.)]

ಅವಳು ಪೂರ್ತಿ ಥರಗುಟ್ಟುತ್ತಿದ್ದಳು. “ಸಾರ್ ಹೇಗಾದರೂ ಬದುಕಿಸಿ ಸರ್. ಅವರು ತುಂಬಾ ಜನ ಇದ್ದಾರೆ ಸರ್. ಭಜರಂಗದಳದವರು ಸರ್. ಅವರು ನನ್ನನ್ನು ಸುಮ್ಮನೆ ಬಿಡುವುದಿಲ್ಲ. ಅವರ ಬಗ್ಗೆ ನಿಮಗೆ ಗೊತ್ತಿಲ್ಲ ಸರ್” ಎಂದು ಅವಳು ಒಂದೇ ಉಸಿರಿಗೆ ಬಡಬಡಾಯಿಸುತ್ತಿದ್ದಳು. ಅವಳ ಆವೇಶದಷ್ಟೇ ಶಾಂತನಾಗಿದ್ದ ನಾನು “ನನಗೆ ಬಜರಂಗದಳದವರು ಚೆನ್ನಾಗಿ ಗೊತ್ತು. ಅವರ ಯಾವ ಲೀಡರ್ ಅಥ್ವಾ ಕಾರ್ಯಕರ್ತ ಬರುವುದಾದರೆ ಬಂದು ನನ್ ಹತ್ರ ಮಾತನಾಡಲಿ. ನೀನು ತಲೆಬಿಸಿ ಮಾಡಬೇಡ. ನಿನ್ನಂತ ಹುಡುಗಿಯರನ್ನು ಹೆದರಿಸುವುದಕ್ಕಷ್ಟೇ ಅವರ ಪರಾಕ್ರಮ. ಆರಾಮ ಇರು,” ಎಂದು ಅವಳನ್ನು ಸಂತೈಸುತ್ತಿದ್ದೆ.

ಈ ಭಜರಂಗಿಗಳಿಂದ ಬೆದರಿಕೆಗೊಳಗಾದವರ ಮನಸ್ಥಿತಿಯೇ ಅಂತದ್ದು. ಒಂದೋ ಬಜರಂಗಿಗಳ ಜೊತೆ ರಾಜಿ ಮಾಡಿಕೊಳ್ಳಬೇಕು. ಇಲ್ಲದೇ ಇದ್ದರೆ ಬೇರೆ ದಾರಿಯೇ ಇಲ್ಲ ಎನ್ನುವಂತಹ ಪರಿಸ್ಥಿತಿ. ಒಂದು ಕಾಲದಲ್ಲಿ ಕೋಮುವಾದ, ಜಾತಿ ವ್ಯವಸ್ಥೆಯ ವಿರುದ್ದ ಉಗ್ರವಾಗಿ ಭಾಷಣ ಮಾಡುತ್ತಿದ್ದ ಮಂಗಳೂರು ಯೂನಿವರ್ಸಿಟಿ ಫ್ರೋಫೆಸರ್‌ಗಳು ಈಗ ಬಾಯಿ ಮುಚ್ಚಿ ಕುಳಿತಿರುವುದು ಇದೇ ಕಾರಣಕ್ಕೆ. ಭಾಷಣ ಬಿಡಿ. ರಾಜ್ಯದ ಸೃಜನಶೀಲ ಲೇಖಕಿ ನಾಗವೇಣಿ ಬರೆದಿರುವ “ಗಾಂಧಿ ಬಂದ” ಪುಸ್ತಕ ಮಂಗಳೂರು ಯೂನಿವರ್ಸಿಟಿಯ ಪಾಠ ಪುಸ್ತಕವಾಗಿದ್ದು, ಅದನ್ನು ಪಾಠ ಮಾಡಲು ಪ್ರಾಧ್ಯಾಪಕರು ಸಿದ್ದರಿಲ್ಲ. ಕೆಲವು ಪ್ರಾಧ್ಯಾಪಕರು ವೈಯುಕ್ತಿಕವಾಗಿ ಪ್ರಗತಿಪರರಾಗಿದ್ದರೂ ಗಾಂಧಿ ಬಂದ ಪುಸ್ತಕದಲ್ಲಿನ ಜಾತಿಯ ವ್ಯವಸ್ಥೆಯ ಬಗ್ಗೆ ತರಗತಿಯಲ್ಲಿ ಪಾಠ ಮಾಡಿದರೆ ಎಬಿವಿಪಿ ವಿದ್ಯಾರ್ಥಿಗಳ ಮೂಲಕ ಸಂಘಪರಿವಾರ ತನ್ನ ವಿರುದ್ಧ ಎಲ್ಲಿ ಮುಗಿ ಬೀಳುತ್ತೋ ಎಂಬ ಆತಂಕ ಅವರದ್ದು. ಅದಕ್ಕೆ ಗಾಂಧಿ ಬಂದ ಪುಸ್ತಕದ ಉಸಾಬರಿನೇ ಬೇಡ ಎಂದು ಪುಸ್ತಕವನ್ನೆ ಕೆಲವರು ವಿರೋಧಿಸುತ್ತಿದ್ದಾರೆ. ವಿರೋಧ ಮಾಡಲು ಮನಸ್ಸು ಒಪ್ಪದವರು ನಾಗವೇಣಿಯ ಬೆಂಬಲಕ್ಕಂತೂ ನಿಲ್ಲುವುದಿಲ್ಲ. ಅದೆಲ್ಲಾ ಇರಲಿ. ಸಮಾಜದ ಬಲಿಷ್ಠ ವರ್ಗದ ಸ್ಥಿತಿನೇ ಹೀಗಿರಬೇಕಾದರೆ ಬಿ.ಎ. ಓದಿ ಸಿಟಿ ಸೆಂಟರ್ ಮಾಲ್‌ನ ಅಂಗಡಿಯೊಂದರಲ್ಲಿ ಬಿಲ್ಲು ಬರೆಯೋ ಹುಡುಗಿ ಜೀವ ಇನ್ನೆಷ್ಟು ಥರಗುಟ್ಟಿರಬಹುದು ಎಂದೆಲ್ಲಾ ಲೆಕ್ಕಾಚಾರ ಹಾಕುತ್ತಲೇ ಅವಳಿಗೆ ಸಮಾಧಾನ ಹೇಳುತ್ತಿದ್ದೆ.

ಅವಳು ಮಂಗಳೂರಿನ ನಂತೂರು ನಿವಾಸಿ ಚಂದ್ರಶೇಖರ ಮತ್ತು ಶಾಂಭವಿಯವರ ಎರಡನೇ ಪುತ್ರಿ. ಹೆಸರು ಚೈತನ್ಯ. ಜಾತಿ ಕೊಟ್ಟಾರಿ. ಕೊಟ್ಟಾರಿ ಸಮುದಾಯ ಎನ್ನುವಂತದ್ದು ತೀರಾ ಅನ್ನುವಷ್ಟಲ್ಲದಿದ್ದರೂ ಹಿಂದುಳಿದಿರುವ ಸಮುದಾಯ. ಹೆಚ್ಚು ಜನಸಂಖ್ಯೆಯನ್ನು ಹೊಂದಿರದ ಒಂದು ಸೂಕ್ಷ್ಮ ಸಂವೇದನೆ ಉಳ್ಳ ಜಾತಿ. ಇವರನ್ನು ಕಂಚಿಗಾರರು ಎಂದೂ ಕರೆಯುತ್ತಾರೆ. ಕಂಚಿನ ಪಾತ್ರೆ, ಮೂರ್ತಿ ಇನ್ನಿತರ ವಸ್ತುಗಳನ್ನು ತಯಾರಿಸುವುದರಿಂದ ವ್ಯವಹಾರಿಕ ಕಲಾಚತುರತೆಯನ್ನು ಹೊಂದಿರುವವರು. ಈ ಸಮುದಾಯಕ್ಕೆ ಅದೇನು ವ್ಯವಹಾರಗಳು ಗೊತ್ತಿದ್ದರೂ ಕೂಡಾ ಇವರೊಂದು ಅಸಂಘಟಿತ ಹಿಂದುಳಿದ ಜಾತಿ ಎನ್ನುವುದರಲ್ಲಿ ಅನುಮಾನ ಇಲ್ಲ. ಈ ಅಸಂಘಟಿತರಾಗಿರುವ ಹಿಂದುಳಿದ ಜಾತಿಗಳನ್ನು ಮೇಲ್ವರ್ಗಗಳು ಬಳಕೆ ಮಾಡಿಕೊಳ್ಳುವುದಕ್ಕೆ ಸುಲಭವಾಗುತ್ತದೆ. ಸಮುದಾಯದ ಇಂತಹ ದೌರ್ಬಲ್ಯಗಳನ್ನು ಬಳಸಿಕೊಂಡೇ ಕೊಟ್ಟಾರಿಗಳನ್ನು ಬ್ರಾಹ್ಮಣರು ದೇವಸ್ಥಾನದ ಕೆಲಸಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದರು. ಕರಾವಳಿಯ ದೇವಸ್ಥಾನಗಳಲ್ಲಿ ಹಿಂದೆಲ್ಲಾ ಕಂಚಿನ ಮೂರ್ತಿಯನ್ನು ಪ್ರತಿಷ್ಟಾಪಿಸುವುದೆಂದರೆ ಅದೊಂದು ಪ್ರತಿಷ್ಠೆಯ ವಿಷಯ. ಬ್ರಾಹ್ಮಣರಲ್ಲಿ ಮತ್ತು ಮೇಲ್ವರ್ಗಗಳಲ್ಲಿ ಅಂತಹ ಪ್ರತಿಷ್ಠೆ ಮೇಳೈಸಿದಾಗೆಲ್ಲಾ ಕಂಚಿಗಾರರು ಬಳಸಲ್ಪಡುತ್ತಿದ್ದರು. ಈಗೆಲ್ಲಾ ದೇವಸ್ಥಾನದಲ್ಲಿ ಚಿನ್ನ ಬೆಳ್ಳಿಯದ್ದೇ ಮೂರ್ತಿಗಳಾಗಿದ್ದರಿಂದ ಕೊಟ್ಟಾರಿಗಳು ಬೇರೆ ಬೇರೆ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಹಿಂದುಳಿದ ಸಮುದಾಯವಾದ ಕೊಟ್ಟಾರಿಗಳನ್ನು ಬಳಸಿಕೊಳ್ಳುವ ಕೆಲಸವನ್ನು ಸಂಘಪರಿವಾರ ಮುಂದುವರಿಸುತ್ತಿದೆ. ಈ ಕಾರಣಕ್ಕಾಗಿಯೇ ಕೊಟ್ಠಾರಿ ಸಮುದಾಯದ ಹೆಚ್ಚಿನ ಯುವಕರು ಭಜರಂಗದಳ, ವಿಶ್ವಹಿಂದೂ  ಪರಿಷತ್‌ನಂತಹ ಆರ್.ಎಸ್.ಎಸ್.ನ ಘಟಕಗಳಲ್ಲಿ ಕಾರ್ಯಕರ್ತರಾಗಿ ಇದ್ದಾರೆ. ಅಲ್ಲೊಬ್ಬರು ಇಲ್ಲೊಬ್ಬರು ನಾಯಕರಾಗಿಯೂ ಬೆಳೆದಿದ್ದಾರೆ. ಆದರೆ ಇವರೆಲ್ಲರನ್ನೂ ನಿಯಂತ್ರಿಸುವುದು ಆರ್.ಎಸ್.ಎಸ್‌ನ ಭಟ್ಟರು. ಎಂತಹ ಕೆಳವರ್ಗದ ಮಂದಿ ನಾಯಕರಾದರೂ ಭಟ್ಟರ ಪಾಲಿಗೆ ಅವರೆಲ್ಲಾ ಕಾರ್ಯಕರ್ತರೇ !

ಈ ರಾಜಕೀಯಗಳೆಲ್ಲಾ ಕೊಟ್ಟಾರಿ ಸಮುದಾಯದ ನಾಯಕರಿಗೇ ಅರ್ಥ ಆಗುವುದಿಲ್ಲ. ಇನ್ನು ಚೈತನ್ಯಳಿಗೆಲ್ಲಿ ಅರ್ಥ ಆಗಬೇಕು. ಅವಳಿಗೆ ಹೆಚ್ಚೆಂದರೆ 23 ವರ್ಷ ವಯಸ್ಸು. ಬಲ್ಮಠದ ಮಹಿಳಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಆಕೆ ಕೆಲಸಕ್ಕೆ ಸೇರಿದ್ದು ನಗರದ ಸಿಟಿ ಸೆಂಟರ್ ಮಾಲ್‌ನಲ್ಲಿರುವ ವಸ್ತ್ರದ ಅಂಗಡಿಯಲ್ಲಿ. ಸಿಟಿ ಸೆಂಟರ್ ಮಾಲ್‌ನ ಆಕರ್ಷಣೆಯೇ ಅಂತದ್ದು. ಆ ಮಾಲ್ ಕಟ್ಟುತ್ತಾ ಇರಬೇಕಾದರೆ ಸಿನೇಮಾದಲ್ಲಿ ಬರುವ ಭೂತ ಬಂಗಲೆಯಂತೆ ಮಾಲ್ ಗೋಚರಿಸುತ್ತಿತ್ತು. ಪೂರ್ಣ ಸಿದ್ದಗೊಂಡ ನಂತರ ಅದೊಂದು ಹೊಸ ಲೋಕ ತೆರೆದುಕೊಂಡಂತೆ ಬಾಸವಾಗೋ ರೀತಿ ಎದ್ದು ನಿಂತಿತು. ಅಲ್ಲಿ ಹೋದವರೆಲ್ಲಾ ಹೊಸತೊಂದು ಭ್ರಮಾಲೋಕದಲ್ಲಿ ವಿಹರಿಸುತ್ತಾರೆ. ಇದೇ ಕಾರಣಕ್ಕೋ ಏನೋ ಈ ಸಿಟಿ ಸೆಂಟರ್ ಮಾಲ್‌ನ ಯಾವ ಅಂಗಡಿಗೆ ಅಧಿಕಾರಿಗಳು ರೈಡ್ ಮಾಡಿದರೂ ಅಂಗಡಿ ಮುಚ್ಚುವುದಿಲ್ಲ. ಅಷ್ಟೊಂದು “ವ್ಯವಹಾರಗಳು” ಈ ಮಾ‍ಲ್‌ನಲ್ಲಿ ನಡೆಯುತ್ತದೆ. ಈ ಮಾಲ್‌ಗೆ ಆಕ್ಯೂಪೆನ್ಸಿ ಸರ್ಟಿಫಿಕೇಟ್ ಆಗ್ಲೀ, ಫೈರ್ ಎನ್ಒಸಿ ಆಗ್ಲಿ ಇಲ್ಲದೇ ಇದ್ದರೂ ಈ ಕಟ್ಟಡವನ್ನು ಯಾವ ಇಲಾಖೆಯ ಜೆಸಿಬಿಗಳೂ ಮುಟ್ಟುವುದಿಲ್ಲ. ಅರ್ಧ ರಸ್ತೆಯನ್ನು ಆಕ್ರಮಿಸಿ ನಿಯಮ ಮೀರಿ ಹೆಚ್ಚುವರಿ ಫ್ಲೋರ್‌ಗಳನ್ನು ಹೊಂದಿರುವ ಕಟ್ಟಡವನ್ನು ಯಾವ ಜಿಲ್ಲಾಧಿಕಾರಿಯೂ ಕನಿಷ್ಠ ಪ್ರಶ್ನೆ ಮಾಡುವುದಿಲ್ಲ. ಇಂತಿಪ್ಪ ಪ್ರಭಾವಿ ಮಾಲ್‌ನಲ್ಲಿ ದಿನವಿಡೀ ರಂಗು ರಂಗಿನ ಕಳೆ ಏರಿಸೋದು ಇಲ್ಲಿಗೆ ಬರೋ ಜೋಡಿಗಳು. ಅದೆಂಥಾ ಜೋಡಿಗಳು ಅಂತೀರಾ? ಕಾರವಾರದ ಓಂ ಬೀಚ್‌ಗೆ ಪೈಪೋಟಿ ಕೊಡೋ ರೀತಿಯ ಡ್ರೆಸ್ ತೊಟ್ಟುಕೊಂಡ ಜೋಡಿಗಳು ಇಲ್ಲಿಗೆ ಬರುತ್ತದೆ. ಆಶ್ಲೀಲವಾಗಿ ಡ್ರೆಸ್ ತೊಟ್ಟುಕೊಂಡು ಕುಡಿಯುತ್ತಿದ್ದರು ಎಂದು ಆರೋಪಿಸಿ ಪಬ್‌ಗೆ ದಾಳಿ ಮಾಡಿದ್ದ ಹಿಂದೂ ಸಂಘಟನೆಗಳು ಸಿಟಿ ಸೆಂಟರ್ ಮಾಲ್ ವಿಷಯದಲ್ಲಿ ಮಾತ್ರ ತೆಪ್ಪಗಿದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಸಿಟಿ ಸೆಂಟರ್ ಮಾಲ್‌ನ ಸೆಕ್ಯೂರಿಟಿ ಕಾಂಟ್ರಾಕ್ಟ್ ಇರುವುದೇ ಭಜರಂಗದಳದ ಮುಖಂಡನಿಗೆ. ಮಾಲ್‌ನಲ್ಲಿ ಸಣ್ಣ ಗಲಾಟೆ ಆದರೂ ಸೆಕ್ಯೂರಿಟಿ ಕಾಂಟ್ರಾಕ್ಟ್ ಕ್ಯಾನ್ಸಲ್ ಆಗುತ್ತದೆ. ಹಾಗಾಗಿ ಮಾಲ್‌ನಲ್ಲಿ ಹಿಂದೂ ಯುವತಿ, ಮುಸ್ಲಿಂ ಯುವಕ ಆರಾಮಾವಾಗಿ ವಿಹರಿಸಬಹುದು. ಈ ಭಜರಂಗಿ ಸರ್ಪಗಾವಲಿನಲ್ಲಿರೋ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಚೈತನ್ಯಳಿಗೆ ಪ್ರದೀಪ್ ಎಂಬ ಯುವಕ ಪರಿಚಿತನಾಗಿದ್ದ. ಪರಿಚಯ ಸ್ನೇಹಕ್ಕೆ ತಿರುಗಿ, ನಂತರ ಅದು ಪ್ರೇಮಕ್ಕೆ ಪರಿವರ್ತನೆಯಾಗಿತ್ತು. ಸಮಸ್ಯೆ ಸೃಷ್ಠಿಯಾಗಿರುವುದೇ ಇಲ್ಲಿ. ಪ್ರದೀಪ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದು, ದೈವಕ್ಕೆ ಕೋಲ ಕಟ್ಟುವ ಪರವ ಜಾತಿಯವನು.

ತೆಳು ಕಪ್ಪಗಿದ್ದರೂ ಸ್ಪುರದ್ರೂಪಿಯಾಗಿದ್ದ ಪ್ರದೀಪ ತನ್ನ ಮನೆ ಹಿರಿಯರಂತೆ ಕೋಲ ಕಟ್ಟುವ ವೃತ್ತಿಗೆ ಹೋಗಿರಲಿಲ್ಲ. ಕಾಲೇಜು ಶಿಕ್ಷಣ ಮುಗಿಸಿದ ನಂತರ ಸಂಗೀತದತ್ತ ಒಲವು ತೋರಿಸಿದ್ದ. ಸಂಗೀತವನ್ನು ಅರಗಿಸಿಕೊಂಡ ಈತ ಉದಯೋನ್ಮುಖ ಕಲಾವಿದನಾಗಿ ಬೆಳೆದ. 28 ವಯಸ್ಸಿಗೆಲ್ಲಾ ಸಂಗೀತವನ್ನೇ ವೃತ್ತಿಯನ್ನಾಗಿಸೋ ಮಟ್ಟಕ್ಕೆ ಬೆಳೆದ. ಮದುವೆ ಸಮಾರಂಭ, ಮನೊರಂಜನಾ ಕಾರ್ಯಕ್ರಮಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದ. ಇವನ ಪ್ರತಿಭೆ, ಅಂದ, ಚೆಂದ, ಮೈಕಟ್ಟು, ಬುದ್ಧಿಮತ್ತೆಗೆ ಕ್ಲೀನ್ ಬೌಲ್ಡ್ ಆಗಿದ್ದ ಚೈತನ್ಯ ಪ್ರದೀಪನ ಜೊತೆ ಕರಗಿ ಹೋಗಿದ್ದಳು. ಪ್ರೀತಿ ಸಮಸ್ಯೆಯಾಗಿ ಕಂಡಿದ್ದೇ ಅವಳಿಗೆ ಮನೆಯವರು ಗಂಡು ಹುಡುಕಲು ಪ್ರಾರಂಭ ಮಾಡಿದಾಗ. ಬಂದ ಎಲ್ಲಾ ಪ್ರಪೋಸಲ್‌ಗಳನ್ನು ನಿರಾಕರಿಸಿದ ಚೈತನ್ಯಳಿಗೆ ತಾನು ಪ್ರೇಮಿಸುತ್ತಿರುವ ವಿಚಾರ ಹೇಳಲು ಅಳಕು. ಹಾಗಂತ ತಂದೆ ತಾಯಿ ನೋಡಿದ ಸಂಬಂಧ ಒಪ್ಪುವಂತೆಯೂ ಇಲ್ಲ. ಕೊನೆಗೊಂದು ದಿವಸ ಹೇಳಿ ಬಿಟ್ಟಳು. ತಾನು ಪ್ರದೀಪನನ್ನು ಪ್ರೀತಿಸುವುದಾಗಿಯೂ ಆತ ಪರವ ಜಾತಿಗೆ ಸೇರಿದವನಾಗಿಯೂ ತಂದೆ ತಾಯಿಗೆ ಹೇಳಿದಳು. ಮನೆಯಲ್ಲೊಂದು ದೊಡ್ಡ ರಂಪಾಟವೇ ನಡೆಯಿತು. ಪ್ರದೀಪನ ಜೊತೆ ಪ್ರೀತಿ ಮುಂದುವರಿಸಿದ್ದೇ ಆದಲ್ಲಿ ಒಂದೋ ನೀನು ಬದುಕಬೇಕು. ಇಲ್ಲವಾದಲ್ಲಿ ನಾವು ಬದುಕಬೇಕು ಎಂಬಲ್ಲಿಯವರೆಗೆ ತಂದೆ ಮಾತನಾಡಿ ಬಿಟ್ಟಿದ್ದರು. ಇದೆಲ್ಲಾ ನಡೆದ ಮರುದಿನ ಚೈತನ್ಯ ಸಿಟಿ ಸೆಂಟರ್‌ನ ಅಂಗಡಿಗೆ ಕೆಲಸಕ್ಕೆ ಹೋದವಳು ಮನೆಗೆ ಹೋಗಲಿಲ್ಲ. ನೇರವಾಗಿ ತನ್ನ ಗೆಳತಿ ಇರೋ ಪಿಜಿಯಲ್ಲಿ ಉಳಿದುಕೊಂಡಳು.

ಮನೆಗೆ ಬಾರದ ಚೈತನ್ಯಳನ್ನು ಆ ದಿನ ಸಂಜೆಯಿಂದಲೇ ಹುಡುಕಲು ಶುರುವಿಟ್ಟುಕೊಂಡರು. ಪೊಲೀಸರಿಗೆ ದೂರು ನೀಡುವಂತಿಲ್ಲ. ಮನೆಯ ಮರ್ಯಾದೆಯ ಪ್ರಶ್ನೆ. ಪೊಲೀಸರು ಹುಡುಕಿ ತಂದು ಕೊಟ್ಟರೂ ಮತ್ತೆ ಯಾರೂ ಆಕೆಯನ್ನು ನಮ್ಮ ಜಾತಿಯಲ್ಲಿ ಮದುವೆಯಾಗಲು ಮುಂದೆ ಬರುವುದಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ದೂರು ನೀಡಿದ ತಕ್ಷಣ ಮರುದಿನ ಯಾವುದಾದರೊಂದು ಪತ್ರಿಕೆಯ ಅಪರಾಧ ಪೇಜ್‌ನಲ್ಲಿ ಸುದ್ಧಿ ಪ್ರಕಟವಾಗಿರುತ್ತದೆ. ಅದರ ಉಸಾಬರಿಯೇ ಬೇಡವೆಂದು ಮನೆ ಮಂದಿಯೇ ಚೈತನ್ಯಳನ್ನು ಹುಡುಕಲು ಶುರು ಮಾಡಿದ್ದರು. ಮನೆ ಮಂದಿ ಮಾತ್ರ ಅಲ್ಲ ಒಂದಿಡೀ ಭಜರಂಗಿ ಸೇನೆಯೇ ಈಕೆಯ ಬೆನ್ನು ಬಿದ್ದಿತ್ತು. ಭಜರಂಗದಳದ ಮುಖಂಡನೆ  ಹೆಂಡತಿಯ ಕಡೆಯಿಂದ ಚೈತನ್ಯ ಸಂಬಂಧಿಯಾಗಬೇಕು. ಆ ನಿಟ್ಟಿನಲ್ಲಿ ಹುಡುಕಾಟ ಪ್ರಾರಂಭವಾಗಿತ್ತು. ಚೈತನ್ಯ ಮತ್ತು ಪ್ರದೀಪ ನೇರವಾಗಿ ಮಹಿಳಾ ವಕೀಲರೊಬ್ಬರಲ್ಲಿಗೆ ಬಂದು ಅಹವಾಲು ಹೇಳಿಕೊಂಡು ಮದುವೆಗೆ ಸಹಕರಿಸುವಂತೆ ಕೇಳಿದ್ದಾಳೆ. ಮದುವೆಯಾಗಬೇಕಾದರೆ ಕನಿಷ್ಠ ವಿಳಾಸದ ದಾಖಲೆಗಳು ಮತ್ತು ವಯಸ್ಸಿನ ದೃಡೀಕರಣದ ದಾಖಲೆಗಳು ಬೇಕಾಗುತ್ತದೆ. ಚೈತನ್ಯಳ ಎಲ್ಲಾ ದಾಖಲೆಗಳ ಮೂಲ ಪ್ರತಿ ಮನೆಯಲ್ಲಿದೆ. ನಕಲು ಪ್ರತಿ ಸಿಟಿ ಸೆಂಟರ್ ಮಾಲ್‌ನಲ್ಲಿ ತಾನು ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿದೆ. ಆ ಅಂಗಡಿಗೆ ಹೋಗಿ ದಾಖಲೆಗಳನ್ನು ತರುವಂತೆ ಇಲ್ಲ. ಯಾಕೆಂದರೆ ಮಾಲ್‌ನ ಸೆಕ್ಯೂರಿಟಿ ಕಾಂಟ್ರಾಕ್ಟ್ ಭಜರಂಗದಳದ್ದಾಗಿತ್ತು. ಕೈಯ್ಯಲ್ಲಿ ವಾಕಿಟಾಕಿ ಹಿಡಿದುಕೊಂಡಿದ್ದ ಸೆಕ್ಯೂರಿಟಿ ಹುಡುಗರಲ್ಲಿ ಈಗ ಚೈತನ್ಯಳ ಫೋಟೋ ಕೂಡಾ ಇದೆ. ಸಾಲದ್ದಕ್ಕೆ ಅಂಗಡಿಯ ಬೇರೆ ಸಿಬ್ಬಂದಿಯಲ್ಲಿ ಚೈತನ್ಯಳ ಬಗ್ಗೆ ಮಾಹಿತಿ ಸಿಕ್ಕರೆ ನೀಡುವಂತೆ ಬೆದರಿಸಲಾಗಿತ್ತು.

ಚೈತನ್ಯ ಭೇಟಿ ಮಾಡಿದ ಮಹಿಳಾ ವಕೀಲರ ಪತಿ ನರೇಂದ್ರ ನಾಯಕ್ ಪ್ರಸಿದ್ಧ ವಿಚಾರವಾದಿ ಸಂಘದ ಮುಖಂಡರು. ವಿಚಾರವಾದಿಯಾಗಿದ್ದರಿಂದ ಕೆಲವೊಂದು ಎಡ ಯುವ ಸಂಘಟನೆಗಳ ಜೊತೆ ಅವರು ಸಂಪರ್ಕ ಇರಿಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಎಡ ಯುವ ಸಂಘಟನೆಯೊಂದರ ಜಿಲ್ಲಾ ಅಧ್ಯಕ್ಷ ಮುನೀರ್‌ಗೆ ಈ ಪ್ರಕರಣ ವಿವರಿಸಿದ್ದರು. ಮುನೀರ್ ನನಗೆ ಕರೆ ಮಾಡಿ ಈ ಪ್ರಕರಣದ ಬಗ್ಗೆ ಚರ್ಚಿಸಿದ್ದ. ಮುನೀರ್ ಎಡ ಯುವ ಸಂಘಟನೆಯ ಜಿಲ್ಲಾಧ್ಯಕ್ಷನಾಗಿದ್ದು, ಆತನಿಗೆ ಒಂದಷ್ಟು ಹುಡುಗರನ್ನು ಕರೆದುಕೊಂಡು ಅಂಗಡಿಗೆ ಹೋಗಿ ದಾಖಲೆ ವಶಪಡಿಸಿಕೊಂಡು ಮದುವೆ ಮಾಡ್ಸೋದು ಅಥವಾ ಪೊಲೀಸರಿಗೆ ಅಧಿಕೃತವಾಗಿ ದೂರು ಕೊಟ್ಟೂ ಮದುವೆ ಮಾಡ್ಸೋದು ದೊಡ್ಡ ವಿಚಾರವಲ್ಲ. ಆದರೆ ಈ ರೀತಿ ಮಾಡಿದಾಗ ಎಡವಟ್ಟುಗಳಾಗುವುದೇ ಜಾಸ್ತಿ. ಹುಡುಗಿ ಕೆಲಸ ಮಾಡುತ್ತಿದ್ದ ಅಂಗಡಿಗೆ ಸಂಘಟನೆಯ ಯುವಕರನ್ನು ಕಳುಹಿಸಿ ದಾಖಲೆ ವಶಪಡಿಸಿಕೊಂಡರೆ ಜಗಳ ಆಗೋ ಸಾಧ್ಯತೆ ಇರುತ್ತದೆ. ಆಗ ಬಿಟ್ಟಿ ಪ್ರಚಾರ ದೊರೆತು ಸುದ್ಧಿಯಾಗುತ್ತದೆ ಮತ್ತು ದೂರು ದಾಖಲಾಗುತ್ತದೆಯೋ ಹೊರತು ಮದುವೆ ಆಗುವುದಿಲ್ಲ. ಇನ್ನು ಪೊಲೀಸರಿಗೆ ಅಧಿಕೃತ ದೂರು ನೀಡಿ ರಿಜಿಸ್ಟರ್ ಮಾಡ್ಸೋಣ ಅಂದರೆ ಪೊಲೀಸರು ಎರಡೂ ಕಡೆಯ ಮನೆಯವರನ್ನು ಕರೆಸುತ್ತಾರೆ. ಪೊಲೀಸರ ಎದುರು ಮನೆಯವರು ಮದುವೆಗೆ ಒಪ್ಪಿದಂತೆ ನಾಟಕವಾಡಿ “ಒಂದು ಐದು ತಿಂಗಳ ಕಾಲಾವಕಾಶ ಕೊಡಿ. ನಾವು ಮಗಳನ್ನು ಚಿಕ್ಕಂದಿನಿಂದ ಕಷ್ಟಪಟ್ಟು ಬೆಳೆಸಿದ್ದೇವೆ. ನಮ್ಮ ಮನೆಯ ಮರ್ಯಾದೆಯೂ ಮುಖ್ಯ ಅಲ್ವ. ಅವಳು ಪ್ರೀತಿಸಿದ ಹುಡುಗನಿಗೇ ಮದುವೆ ಮಾಡಿಕೊಡುತ್ತೇವೆ. ಸಂಬಂಧಿಕರಿಗೆ ಆಹ್ವಾನ ಪತ್ರಿಕೆ ನೀಡಿ ವ್ಯವಸ್ಥಿತವಾಗಿ ಅರೇಂಜ್ಡ್ ಮ್ಯಾರೇಜ್ ಮಾಡುತ್ತೇವೆ. ಒಂದು ಐದು ತಿಂಗಳು ಕಾಯೋಕೆ ಆಗಲ್ವ. ನಾನು ಆಕೆಯನ್ನು ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಪೊಷಿಸಿದ್ದೇನೆ. ಐದು ತಿಂಗಳು ಟೈಮ್ ಕೊಡಿ ಪ್ಲೀಸ್,” ಎಂದು ಅಳುತ್ತಾರೆ. ಆ ಕ್ಷಣಕ್ಕೆ ಹುಡುಗಿಯ ತಾಯಿ ಹೇಳುವುದು ಸರಿ ಅನ್ನಿಸುತ್ತದೆ. ಮನೆಯವರೇ ಮದುವೆ ಮಾಡಿಕೊಡುತ್ತೇನೆ ಎಂದ ಮೇಲೆ ಯಾರು ಏನೂ ಮಾತಾಡೋಕೆ ಇರುವುದಿಲ್ಲ. ಹುಡುಗಿಯನ್ನು ಅವರ ಜೊತೆಯೇ ಪೊಲೀಸರು ಕಳುಹಿಸುತ್ತಾರೆ. ಮನೆಗೆ ಕಳುಹಿಸಿದ ಹತ್ತೇ ದಿನದಲ್ಲಿ ದೂರದ ಜಿಲ್ಲೆಯ ಹುಡುಗನನ್ನು ಹುಡುಕಿ ಹುಡುಗಿಗೆ ಬಲವಂತದ ಮದುವೆ ಮಾಡುತ್ತಾರೆ. ಇಂತಹ ಹಲವಾರು ಪ್ರಕರಣಗಳು ನಮ್ಮ ಮುಂದೆ ಇದ್ದಿದ್ದರಿಂದ ಮತ್ತೆ ಅಂತಹ ತಪ್ಪುಗಳನ್ನು ಮಾಡಬಾರದು ಎಂದು ಕೊಂಡೆವು. ಅದಕ್ಕಿಂತಲೂ ಮುಖ್ಯವಾಗಿ ಮುನೀರ್ ಒಬ್ಬ ಜಾತಿ, ಧರ್ಮವನ್ನು ಮೀರಿ ಬೆಳೆದ ಪಕ್ಕಾ ಕಮ್ಯೂನಿಷ್ಟ್ ಯುವಕನಾಗಿದ್ದರೂ “ಹಿಂದೂಗಳ ಮದುವೆಯ ಉಸಾಬರಿ ಆ ಬ್ಯಾರಿಗೆ ಯಾಕಂತೆ?” ಎಂದು ದಕ್ಷಿಣ ಕನ್ನಡ ಜಿಲ್ಲೆಯ ಜನ ಮೂದಲಿಸದೆ ಇರುವಷ್ಟು ಪ್ರಜ್ಞಾವಂತರಲ್ಲ. ಆದುದರಿಂದಲೇ ಆತ ಮದುವೆಯ ಉಸ್ತುವಾರಿಯನ್ನು ನನ್ನ ಹೆಗಲಿಗೆ ಹಾಕಿದ.

ದಲಿತ ಯುವಕ ಮತ್ತು ಕೊಟ್ಟಾರಿ ಯುವತಿಯ ಮದುವೆ ಮಾಡುವುದು ಎಂದರೆ ಅದೊಂದು ಸಣ್ಣ ರೀತಿಯ ಸಾಮಾಜಿಕ ಕ್ರಾಂತಿ ಎಂದೆಣಿಸಿತು. ಬಹುತೇಕ ಕ್ರಾಂತಿ ವಿವಾದಾಸ್ಪದವಾಗಿರುತ್ತದೆ ಎಂಬಂತೆ ಇದೊಂದು ವಿವಾದಾಸ್ಪದ ವಿಷಯ ಕೂಡಾ. ಅದಕ್ಕಾಗಿ ಯಾವುದಕ್ಕೂ ಮೊದಲು ಯುವತಿ ಜೊತೆ ಮಾತನಾಡೋಣ ಎಂದುಕೊಂಡು ನಾನು ವಿಚಾರವಾದಿಗಳ ಸಂಘದ ಮುಖಂಡ ನರೇಂದ್ರ ನಾಯಕ್ರಿಗೆ ಫೋನಾಯಿಸಿದೆ. ಎರಡೇ ರಿಂಗ್‌ನಲ್ಲಿ ಫೋನ್ ರಿಸೀವ್ ಮಾಡಿದ ಅವರು “ಎಂತದ್ದು ಮಾರಾಯ. ಎಲ್ಲಿದ್ದಿ. ಒಂದು ಉಪಕಾರ ಆಗಬೇಕಿತ್ತು. ಒಂದು ಹುಡುಗಿಯ ಸರ್ಟಿಫಿಕೇಟ್ ಅವಳ ಅಂಗಡಿಯಲ್ಲಿ ಇದೆ. ಅದನ್ನು ತೆಗೆಸಿಕೊಡಬೇಕು. ನೀವು ಟೀವಿಯವರಲ್ವಾ. ನೀವು ಹೋದರೆ ತಕ್ಷಣ ಕೊಡ್ತಾರೆ,” ಅಂದರು. “ಸರಿ ಸರ್. ಆ ಹುಡುಗೀನ ಕಳುಹಿಸಿ. ನಾನು ಸಿಟಿ ಸೆಂಟರ್ ಪಕ್ಕ ನಿಂತಿರುತ್ತೇನೆ,” ಎಂದೆ. ಒಂದು ಹತ್ತು ನಿಮಿಷದಲ್ಲಿ ರಿಕ್ಷದಿಂದ ಇಳಿದ ಹುಡುಗಿ ನನ್ನ ಮೊಬೈಲ್‌ಗೆ ಕರೆ ಮಾಡಿದಳು. ನನ್ನೆದುರೇ ಅವಳ ರಿಕ್ಷಾ ನಿಂತಿದ್ದರೂ ನನಗೆ ಅವಳ ಮುಖ ಪರಿಚಯ ಇಲ್ಲದೇ ಇದ್ದುದರಿಂದ ಅವಳ ಮೊಬೈಲ್ ಕರೆ ಅವಳ ಗುರುತು ಹಿಡಿಯಲು ಸಹಕರಿಸಿತ್ತು. ಬಂದವಳೇ “ನಾಯಕರು ನಿಮ್ಮಲ್ಲಿಗೆ ಕಳುಹಿಸಿದ್ದು. ಹೆಸರು ಚೈತನ್ಯ,” ಎಂದು ಪರಿಚಯಿಸಿಕೊಂಡಳು. ನಂತರ ತನ್ನ ಪ್ರೇಮ ಪುರಾಣವನ್ನು ಒಂದೇ ಉಸಿರಲ್ಲಿ ಹೇಳಿ ಮುಗಿಸಿದವಳೇ ಮತ್ತೆ ಅಲ್ಲಿಂದ ಹೊರಡಲು ಅವಸರಿಸಿದಳು. “ನಿಮಗೆ ಗೊತ್ತಿಲ್ಲ. ಅವರು ಬಜರಂಗದಳದವರು. ಅವರಲ್ಲಿ ತುಂಬಾ ಜನ ಇದ್ದಾರೆ. ನನ್ನನ್ನು ರಸ್ತೆ ಬದಿ ನೋಡಿದರೆ ಕಿಡ್ನ್ಯಾಪ್ ಮಾಡುತ್ತಾರೆ. ಪೊಲೀಸರೂ ಅವರ ಪರವೇ ಇದ್ದಾರೆ. ಪ್ಲೀಸ್ ಇಲ್ಲಿಂದ ಬೇರೆ ಕಡೆ ಹೋಗೋಣಾ. ಅಲ್ಲಿ ಮಾತಾಡೋಣಾ ಸರ್,” ಎಂದು ಚಟಪಡಿಸಲು ಶುರುವಿಟ್ಟುಕೊಂಡಳು. “ನೋಡು ನಾನು ಪತ್ರಕರ್ತ. ಎಲ್ಲಾ ಧರ್ಮದ ಸಂಘಟನೆಗಳ ಎಲ್ಲರ ಪರಿಚಯ ನನಗಿದೆ. ಸುಮ್ಮನೆ ನಿಂತುಕೊ. ಮಾಲ್‌ನ ಅಂಗಡಿಯಿಂದ ತರಬೇಕಾದ ಸರ್ಟಿಫಿಕೇಟ್‌ಗಳ ಬಗ್ಗೆ ಏನು ಮಾಡಬೇಕು ಎಂದು ಯೋಚಿಸುವ,” ಎಂದೆ. ನನಗೆ ಸರ್ಟಿಫಿಕೇಟ್ ತರಲು ಏನು ಮಾಡಬೇಕು ಎಂದು ಒಂದು ಕ್ಷಣ ಹೊಳೆಯಲೇ ಇಲ್ಲ. ನಾನು ಪತ್ರಕರ್ತ, ನನಗೆ ಯಾರೂ ಏನೂ ಮಾಡುವುದಿಲ್ಲ ಎಂದು ಅವಳಲ್ಲಿ ಜಂಭ ಕೊಚ್ಚಿಕೊಂಡಿದ್ದರೂ ಒಬ್ಬನೇ ಅಂಗಡಿಗೆ ಹೋಗಿ ಮಾತನಾಡುವುದು ಪ್ರ್ಯಾಕ್ಟಿಕಲ್ ಆಗಿ ಕಷ್ಟಸಾಧ್ಯ ಅನ್ನಿಸಿತು ಆ ಸಂಧರ್ಭ. ಬೇರೆ ಟಿವಿ ಚಾನಲ್‌ನ ವರದಿಗಾರರನ್ನು ಕರೆಯೋಣ ಎಂದರೆ ಅವರು ಈ ಪ್ರಕರಣವನ್ನು ಸುದ್ದಿಯಾಗಿ ನೋಡಿ ಟಿ.ಆರ್.ಪಿ ಕುತಂತ್ರ ಹಾಕಿದರೆ ಹುಡುಗಿಯ ಬದುಕಿನ ಗತಿಯೇನು ಎಂಬ ಹೆದರಿಕೆ. ಕೊನೆಗೆ ಸರಿಯಾಗಿ ಪರಿಚಯ ಇಲ್ಲದ ಹುಡುಗಿ ಜೊತೆ ನಾನೊಬ್ನೆ ಇರುವುದು ಬೇಡ ಎಂದು ಇಂಗ್ಲೀಷ್ ಪತ್ರಿಕೆಯ ವರದಿಗಾರ್ತಿಯಾಗಿದ್ದ ಅನಿಷಾ ಶೇಟ್‌ಗೆ ಕಥೆ ಹೇಳಿ ಅವಳನ್ನು ಕರೆಸಿಕೊಂಡೆ. ಅವಳು ಅವಳಪ್ಪನ ಕಾರಿನಲ್ಲಿ ನೇರವಾಗಿ ನಾವಿದ್ದ ಕೆ ಎಸ್ ರಾವ್ ರೋಡ್‌ಗೆ ಬಂದಳು. “ಅಬ್ಬಾ” ಅನ್ನಿಸಿತು. ಅವಳ ಕಾರಿನಲ್ಲೇ ಇಬ್ಬರೂ ಕೂತು ಚೈತನ್ಯಳ ಕತೆ ಕೇಳುತ್ತಿದ್ದೆವು. ಅನಿಷಾಳಿಗೆ ಕತೆ ಅರ್ಥ ಆಗುವುದು ಸ್ವಲ್ಪ ತಡ. ಅದಕ್ಕಾಗಿ ಅನಿಷಾ ಕತೆಯನ್ನು ಮತ್ತೆ ಮತ್ತೆ ಕೇಳುತ್ತಿದ್ದಳು. ಮಧ್ಯೆ ಮಧ್ಯೆ ಪ್ರಶ್ನೆ ಕೇಳುತ್ತಿದ್ದಳು. “ಅಯ್ಯೋ… ಇವಳಿಗೆ ಅರ್ಥನೇ ಆಗ್ತಿಲ್ವಲ್ಲಪ್ಪೋ… ಎಷ್ಟು ಪ್ರಶ್ನೆ ಕೇಳ್ತಾಳೆ” ಅಂತ ನನಗೆ ತಲೆಬಿಸಿಯಾದರೂ ಅವಳ ಪ್ರಶ್ನೆಗಳಿಂದಾಗಿ ನನಗೆ ಇನ್ನಷ್ಟೂ ತಿಳಿಯಲು ಅವಕಾಶ ಆಗುತ್ತಿತ್ತು ಎಂಬುದು ಬೇರೆ ವಿಚಾರ. ಅಂದ ಹಾಗೆ ಅನಿಷಾ “ದ ಹಿಂದೂ” ಪತ್ರಿಕೆಯಲ್ಲಿ ವರದಿಗಾರಳಾಗಿದ್ದಳು. ಜನಪರ, ಜೀವಪರ, ಪರಿಸರ ಪರ, ಮಾನವ ಹಕ್ಕುಗಳ ಪರವಾದ ಎಂತಹ ರಿಸ್ಕ್‌ ವಿಷಯವಿದ್ದರೂ ಆಕೆ ಸವಾಲು ಎದುರಿಸಲು ಸಿದ್ದವಿರುತ್ತಿದ್ದಳು. ಅದಕ್ಕೆ ನನಗೆ ಆಕೆ ಇಷ್ಟವಾಗುತ್ತಿದ್ದುದು. ನನಗೆ ಮಾತ್ರವಲ್ಲ ಎಲ್ಲಾ ಆ್ಯಕ್ಟಿವ್ ಜರ್ನಲಿಸ್ಟ್‌ಗಳಿಗೆ ಅನಿಷಾ ಇಷ್ಟವಾಗುತ್ತಿದ್ದುದು ಇದೇ ಕಾರಣಕ್ಕೆ. ಅದೆಲ್ಲಾ ಇರಲಿ. ಒಟ್ಟು ನಾವು ಕಾರಿನೊಳಗೆ ಕೂತು ಚೈತನ್ಯಳ ಕತೆ ಕೇಳುತ್ತಿದ್ದೆವು.

ಕೆ ಎಸ್ ರಾವ್ ರೋಡ್ ಮಂಗಳೂರಿನ ಜನನಿಭಿಡ ರಸ್ತೆ. ಡಿವೈಡರ್ ಹಾಕಿದ ಡಬ್ಬಲ್ ರೋಡ್ ಇದ್ದರೂ ಸಿಟಿ ಸೆಂಟರ್ ಮಾಲ್ ಸೇರಿ ಹಲವು ಕಟ್ಟಡಗಳು ಈ ರಸ್ತೆಯ ಬಹುಭಾಗವನ್ನು ನುಂಗಿ ಕಿಷ್ಕಿಂದೆ ಮಾಡಿ ಬಿಟ್ಟಿದೆ. ಕಿಷ್ಕಿಂದೆಯನ್ನು ಇನ್ನಷ್ಟೂ ಹಾಳು ಮಾಡಲು ಅನಿಷಾ ಕಾರನ್ನು ರಸ್ತೆ ಬದಿಯೇ ನಿಲ್ಲಿಸಿದ್ದಳು. ಡ್ರೈವರ್ ಸೀಟಲ್ಲಿ ಅನಿಷಾ ಇದ್ದರೆ, ಅವಳ ಪಕ್ಕದ ಮುಂದಿನ ಸೀಟಿನಲ್ಲಿ ನಾನಿದ್ದೆ. ಹಿಂದಿನ ಸೀಟಿನಲ್ಲಿ ಕುಳಿತು ಚೈತನ್ಯ ಅವಳ ಆತಂಕದ ಕತೆಯನ್ನು ಕಣ್ಣಾಲಿಗಳನ್ನು ತುಂಬಿಕೊಂಡು ಹೇಳುತ್ತಿದ್ದಳು. ನಾವು ಹಿಂದೆ ತಿರುಗಿ ಕೇಳುತ್ತಿದ್ದೆವು. ಒಂದು ಕ್ಷಣ ಕಾರಿನ ಗಾಜುಗಳ ಮೂಲಕ ಹೊರ ನೋಡುತ್ತೇನೆ, ಹತ್ತಾರು ಮಂದಿ ಕಾರಿನೊಳಗೆ ಇಣುಕುತ್ತಿದ್ದಾರೆ. ಅವರೆಲ್ಲರೂ ಚೈತನ್ಯಳನ್ನು ಹುಡುಕುತ್ತಿದ್ದ ಭಜರಂಗಿಗಳು. ಒಳಗಿರುವುದು ಚೈತನ್ಯ ಹೌದೋ ಅಲ್ಲವೋ ಎಂದು ಅವರಿಗಿನ್ನೂ ಖಾತ್ರಿಯಾದಂತಿಲ್ಲ. ಖಾತ್ರಿ ಆಗುವುದಕ್ಕೂ ಮುಂಚೆ ನಾವು ಜಾಗ ಖಾಲಿ ಮಾಡಿಕೊಳ್ಳಬೇಕು ಎಂದು ಯೋಚಿಸಿದ ನಾನು ಕಾರನ್ನು ನೇರ ಪೊಲೀಸ್ ಕಮಿಷನರ್ ಆಫೀಸಿಗೆ ಕೊಂಡೊಯ್ಯವಂತೆ ಹೇಳಿದೆ. ಕಾರ್ ಸ್ಟಾರ್ಟ್ ಮಾಡಿ ಹೊರಡಿದ ರೀತಿಯಿಂದಲೇ ಅದರೊಳಗಿರುವುದು ಚೈತನ್ಯ ಎಂದು ಅರಿತುಕೊಂಡ ಭಜರಂಗಿಗಳು ಬೈಕೇರಿ ಕಾರನ್ನು ಹಿಂಬಾಲಿಸತೊಡಗಿದರು. ಒಂದು ಮೂರು ನಿಮಿಷವಷ್ಟೆ. ಕಾರು ಪೊಲೀಸ್ ಆಯುಕ್ತರ ಕಚೇರಿಯ ಎದುರಿತ್ತು.

ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ರ ಕಚೇರಿಯೊಳಗೆ ಹೋಗುತ್ತಿದ್ದಂತೆ ಕಚೇರಿಯಲ್ಲಿ ಆಯುಕ್ತರಿಲ್ಲ. ಊಟಕ್ಕೆ ಮನೆಗೆ ಹೋಗಿದ್ದಾರೆ ಎಂದು ತಿಳಿಯಿತು. ಸೀಮಂತ್ ಕುಮಾರ್ ಸಿಂಗ್‌ಗೆ ಫೋನಾಯಿಸಿ ಎಲ್ಲಾ ಕತೆಗಳನ್ನು ಶುರುವಿಂದ ಹೇಳಿದೆ. ಸಾಲದಕ್ಕೆ “ಈ ಪ್ರಕರಣವನ್ನು ಸುಮ್ಮನೆ ಬಿಟ್ಟರೆ ಮರ್ಯಾದಾ ಹತ್ಯೆಯಂತಹ ಘಟನೆಗಳು ಮಂಗಳೂರಿನಲ್ಲಿ ಆಗಬಹುದು. ಅದಕ್ಕೆ ಆಸ್ಪದ ಕೊಟ್ಟರೆ ಕಷ್ಟ ಆಗುತ್ತೆ.” ಎಂದು ಸಲಹೆ ಕೊಟ್ಟೆ. ತಕ್ಷಣ ಸೀಮಂತ್ ಕುಮಾರ್ ಸಿಂಗ್ ಉತ್ತರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಮಕೃಷ್ಣರನ್ನು ಕಮಿಷನರ್ ಆಫೀಸ್‌ಗೆ ತೆರಳಿ ಯುವತಿ ಕೈಯಿಂದ ದೂರು ಸ್ವೀಕರಿಸಿ ಮದುವೆಯವರೆಗೂ ರಕ್ಷಣೆ ಕೊಡುವಂತೆ ಆದೇಶಿಸಿದರು. ಸಬ್ಇನ್ಸ್‌ಪೆಕ್ಟರ್ ರಾಮಕೃಷ್ಣ ಬಂದವರೇ ನನ್ನ ಜೊತೆ ಮಾತನಾಡಿ ಎಲ್ಲಾ ವಿವರ ಕಲೆ ಹಾಕಿದರು. ಅಷ್ಟರಲ್ಲಾಗಲೇ ಚೈತನ್ಯಳ ಮನೆಯವರಿಗೆ ಸುದ್ದಿ ತಿಳಿದು ಕಮಿಷನರ್ ಕಚೇರಿ ಮುಂದೆ ಜಮಾಯಿಸಿದ್ದರು. ಭಜರಂಗದಳದ ಒಂದಷ್ಟು ಕಾರ್ಯಕರ್ತರೂ ಬಂದರು. ಅದರಲ್ಲೊಬ್ಬ ಕಾರ್ಯಕರ್ತ ನನ್ನ ಬಳಿ ಬಂದವನೆ “ನೀವು ಎಂತ ಮಾರಾಯ್ರೆ. ಚೈತನ್ಯಳಿಗೆ ಮಂಡೆ ಸಮ ಇಲ್ಲ. ಅವನು ದಲಿತ. ಕೋಲ ಕಟ್ಟುವ ಜಾತಿಯವ. ಹೇಗೆ ಮದುವೆ ಮಾಡಿ ಕೊಡುವುದು. ಅವಳಿಗೆ ಮಂಡೆ ಸರಿ ಇಲ್ಲ ಅಂತ ನಿಮಗೂ ಮಂಡೆ ಸರಿ ಇಲ್ವ ಮಾರಾಯ?” ಎಂದ. ಅವನ್ನಲ್ಲೇನು ಮಾತು ಎಂದು ನಾನೂ ಸುಮ್ಮನಿದ್ದೆ. ಕೊನೆಗೆ ಸಬ್ಇನ್ಸ್‌ಪೆಕ್ಟರ್ ರಾಮಕೃಷ್ಣ ಹುಡುಗಿ ಕಡೆಯ ಪ್ರಮುಖರನ್ನು, ಭಜರಂಗದಳದ ಪ್ರಮುಖರನ್ನು ಕರೆಸಿಕೊಂಡರು. ಚೈತನ್ಯಳಿಗೆ ಮನೆಯವರು ಸಾಕು ಬೇಕಾಗುವಷ್ಟು ಬುದ್ದಿ ಹೇಳಿದರು. ಚೈತನ್ಯಳದ್ದು ಒಂದೇ ಹಠ. ಮದುವೆಯಾಗುವುದಾದರೆ ಪ್ರದೀಪ್ನನ್ನು ಮಾತ್ರ. “ನೀನು ಕೋಲ ಕಟ್ಟುವವನ್ನು ಮದುವೆಯಾಗುದಾದರೆ ನೀನು ಸತ್ತಿದ್ದಿ ಎಂದು ಭಾವಿಸುತ್ತೇವೆ. ನಮಗೂ ನಿಮಗೂ ಯಾವುದೇ ಸಂಬಂಧ ಇಲ್ಲ” ಎಂದು ಚೈತನ್ಯಳ ಸಂಬಂಧಿ ಭಜರಂಗದಳದ ಮುಖಂಡ ಗುಡುಗಿದ. ಅಲ್ಲಿಯವರೆಗೂ ಸುಮ್ಮನಿದ್ದ ನನಗೆ ಆಗ ಸುಮ್ಮನಿರಲಾಗಲಿಲ್ಲ. “ಅಲ್ರಿ, ದಲಿತರೂ ಹಿಂದೂಗಳು. ಅವರ್ಯಾರೂ ಕ್ರಿಶ್ಚಿಯನ್ ಅಥವಾ ಬೌಧ್ಧ ಧರ್ಮಕ್ಕೆ ಮತಾಂತರ ಆಗಬಾರದು ಎಂದು ಹೇಳುವ ಸಂಘಟನೆ ನಿಮ್ಮದೆ ಅಲ್ವ. ಮತ್ತೆ ನಿಮ್ಮ ಜಾತಿಯ ಹುಡುಗಿ ದಲಿತನನ್ನು ಮದುವೆಯಾದರೆ ಏನು ಕಷ್ಟ?” ಎಂದು ಕೇಳಿದೆ. ಇಂತಹ ಪ್ರಶ್ನೆಗಳು ಅರ್.ಎಸ್.ಎಸ್‌.ಗರಿಗೆ ಹಲವಾರು ಬಾರಿ ಬಂದಿರಬಹುದು. ಆದರೆ ಅವರದ್ದೇ ಮನೆಯ ಹುಡುಗಿಯ ಜೀವಂತ ಉದಾಹರಣೆ  ಮುಂದಿಟ್ಟುಕೊಂಡು ಮಾತನಾಡುವಾಗ ಕಪಾಳಕ್ಕೆ ಚಪ್ಪಲಿಯಲ್ಲಿ ಬಡಿದಂತಾಗಿತ್ತು. ಆದರೂ ಸಾವರಿಸಿಕೊಂಡ ಭಜರಂಗದಳದ ಮುಖಂಡ “ಇಲ್ಲ ನಮ್ಮದೇನೂ ಅಭ್ಯಂತರ ಇಲ್ಲ. ಏನು ಬೇಕಾದರೂ ಮಾಡಿಕೊಂಡು ಸಾಯ್ಲಿ ಅವಳು,” ಎಂದು ನನ್ನ ಕಡೆ ಕೆಕ್ಕರಿಸಿ ನೋಡಲು ಧೈರ್ಯವಿಲ್ಲದೆ ಅವಳತ್ತಾ ಕೆಕ್ಕರಿಸಿ ನೋಡಿ ಅವಳ ತಂದೆ ತಾಯಿಯನ್ನೂ ಚೇರಿನಿಂದ ಎಬ್ಬಿಸಿ ಕರೆದೊಯ್ದ.

“ಸಂಜೆ ಮದುವೆ ಇದೆ. ಹಿಂದೂ ಸಂಪ್ರದಾಯದ ಪ್ರಕಾರವೇ ಮದುವೆ. ದಯವಿಟ್ಟು ಬನ್ನಿ.” ಎಂದು ಹುಡುಗಿಯ ಬಾಯಿಯಿಂದಲೇ ಅವಳ ತಂದೆ ತಾಯಿ ಮತ್ತು ಭಜರಂಗಿಗಳಿಗೆ ಆಯುಕ್ತರ ಕಚೇರಿಯಲ್ಲೇ ಮದುವೆಯ ಆಹ್ವಾನ ನೀಡಲಾಯಿತು. ಉಂ ಅಥವಾ ಊಂ ಊಂ ಎಂಬ ಉತ್ತರವೂ ಬರಲಿಲ್ಲ. ಕನಿಷ್ಠ ತಲೆಯೂ ಅಲ್ಲಾಡಲಿಲ್ಲ. ಸಂಜೆ ಐದು ಗಂಟೆಗೆ ಡೊಂಗರಕೇರಿಯಲ್ಲಿರುವ ಕಾಶೀ ಸಧನದಲ್ಲಿ ಮದುವೆ ಮಾಡುವುದು ಎಂದು ನಿರ್ಧರಿಸಿ ಅಲ್ಲಿನ ಅರ್ಚಕರನ್ನು ಬುಕ್ ಮಾಡಿದೆವು. ಅದರ ಎಲ್ಲಾ ಜವಾಬ್ದಾರಿಯನ್ನು ವಿಚಾರವಾದಿ ಸಂಘದ ಮುಖಂಡ ನರೇಂದ್ರ ನಾಯಕರು ವಹಿಸಿದ್ದರು. ನಂತರ ಪೊಲೀಸರ ಸಹಾಯ ಪಡೆದು ಚೈತನ್ಯಳ ಜೊತೆ ಸಿಟಿ ಸೆಂಟರ್ ಮಾಲ್‌ನ ಅಂಗಡಿಗೆ ಹೋಗಿ ಅವಳ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಬಂದೆವು. ಸಂಜೆ ಐದು ಗಂಟೆಗೆ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಯಿತು. ಮರುದಿನ ರಿಜಿಸ್ಟ್ರಾರ್ ಆಫೀಸಿಗೆ ತೆರಳಿ ಮದುವೆಯನ್ನು ಕಾನೂನು ಬದ್ಧವಾಗಿ ನೊಂದಣಿ ಮಾಡಿಸಿದೆವು.

ಇದಾದ ಕೆಲವೇ ವಾರಗಳ ನಂತರ ಉಪ್ಪಿನಂಗಡಿಯಲ್ಲಿ ಹಿಂದೂ ಸಮಾವೇಶ ನಡೆಯಿತು.. ನಾನು ವರದಿ ಮಾಡಲು ಅಲ್ಲಿಗೆ ತೆರಳಿದ್ದೆ. ಆರ್.ಎಸ್.ಎಸ್. ಮುಖಂಡ ಭಟ್ಟರು ಭಾಷಣ ಮಾಡುತ್ತಿದ್ದರು: “ದಲಿತರನ್ನು ಮತ್ತು ಹಿಂದೂ ಧರ್ಮದ ಇತರ ಜಾತಿಗಳನ್ನು ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಕ್ರಿಶ್ಚಿಯನ್ನರು ಇದರ ಲಾಭ ಪಡೆದುಕೊಂಡು ದಲಿತರನ್ನು ಮತಾಂತರ ಮಾಡುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಯಾವುದೇ ಅಸ್ಪ್ರಶ್ಯತೆ ಇಲ್ಲ. ದಲಿತರು ಮತಾಂತರ ಆಗಕೂಡದು. ಹಿಂದೂ ನಾವೆಲ್ಲ ಒಂದು….”