ಆರ್.ಎಸ್.ಎಸ್. ಹಿಂದುತ್ವದಲ್ಲಿ ದಲಿತರ ಜೊತೆಗಿನ ವೈವಾಹಿಕ ಸಂಬಂಧಗಳು


-ನವೀನ್ ಸೂರಿಂಜೆ


[ಹಿಂದೂ ಹುಡುಗಿಯನ್ನು ಮುಸ್ಲಿಂ ಹುಡುಗರು ಮದುವೆಯಾದರೆ ಅದು ಲವ್ ಜೆಹಾದ್ ಎಂದು ಸಂಘಪರಿವಾರಿಗಳು ಬೊಬ್ಬೆ ಹೊಡೆಯುತ್ತಾರೆ. ಹಿಂದೂ ಮೇಲ್ಜಾತಿಯ ಹುಡುಗಿಯರನ್ನು ದಲಿತರು ಮತ್ತು ಕೆಳ ಜಾತಿಯ ಹುಡುಗರು ಮದುವೆಯಾದರೆ ಸಂಘ ಪರಿವಾರಿಗಳ ನಿಲುವೇನು? ಜಾತಿಗಳನ್ನು ಮರೆತು ಹಿಂದೂಗಳಾದ ನಾವೆಲ್ಲಾ ಒಂದಾಗೋಣ ಎಂದು ಹಿಂದೂ ಸಮಾವೇಶದಲ್ಲಿ ಕರೆ ಕೊಡುವ ಸಂಘಪರಿವಾರ ಜಾತಿ ವ್ಯವಸ್ಥೆಯನ್ನು ಮರೆತು ಅವರಿಗೆ ಬೇಕಾದಾಗ ನೆನಪಿಸಿಕೊಳ್ಳುತ್ತದೆಯೇ ವಿನಹ ಅಂಬೇಡ್ಕರ್ ಹೇಳಿದಂತೆ ಜಾತಿ ವಿನಾಶಕ್ಕೆ ಯತ್ನ ನಡೆಸುವುದಿಲ್ಲ. ಅದಿರಲಿ. ಬೇರೆ ಬೇರೆ ಜಾತಿ, ಧರ್ಮದ ಪ್ರೇಮಿಗಳು ಮನೆ ಮಂದಿ ಅಥವಾ ಸಮಾಜ, ಸಂಘಟನೆಗೆ ಹೆದರಿ ನಮ್ಮಲ್ಲಿಗೆ ಬಂದಾಗ ನಾವು ಗೆಳೆಯರು ಒಟ್ಟಾಗಿ, ಇಲಾಖೆಗಳ ಸಹಕಾರದೊಂದಿಗೆ ಪ್ರೇಮಿಗಳಿಗೆ ಮದುವೆ ಮಾಡಿಸಿದ್ದೇವೆ. ಇಂತಹ ಒಂಬತ್ತು ಮದುವೆ ಮಾಡಿದ ಖುಷಿ ನಮ್ಮಲ್ಲಿದೆ. ಅದರ ಒಂದು ಕಥೆ ಇಲ್ಲಿದೆ. (ಯುವಕ, ಯುವತಿ ಮತ್ತು ಅವರ ತಂದೆ ತಾಯಿಯ ಹೆಸರು ಬದಲಿಸಲಾಗಿದೆ.)]

ಅವಳು ಪೂರ್ತಿ ಥರಗುಟ್ಟುತ್ತಿದ್ದಳು. “ಸಾರ್ ಹೇಗಾದರೂ ಬದುಕಿಸಿ ಸರ್. ಅವರು ತುಂಬಾ ಜನ ಇದ್ದಾರೆ ಸರ್. ಭಜರಂಗದಳದವರು ಸರ್. ಅವರು ನನ್ನನ್ನು ಸುಮ್ಮನೆ ಬಿಡುವುದಿಲ್ಲ. ಅವರ ಬಗ್ಗೆ ನಿಮಗೆ ಗೊತ್ತಿಲ್ಲ ಸರ್” ಎಂದು ಅವಳು ಒಂದೇ ಉಸಿರಿಗೆ ಬಡಬಡಾಯಿಸುತ್ತಿದ್ದಳು. ಅವಳ ಆವೇಶದಷ್ಟೇ ಶಾಂತನಾಗಿದ್ದ ನಾನು “ನನಗೆ ಬಜರಂಗದಳದವರು ಚೆನ್ನಾಗಿ ಗೊತ್ತು. ಅವರ ಯಾವ ಲೀಡರ್ ಅಥ್ವಾ ಕಾರ್ಯಕರ್ತ ಬರುವುದಾದರೆ ಬಂದು ನನ್ ಹತ್ರ ಮಾತನಾಡಲಿ. ನೀನು ತಲೆಬಿಸಿ ಮಾಡಬೇಡ. ನಿನ್ನಂತ ಹುಡುಗಿಯರನ್ನು ಹೆದರಿಸುವುದಕ್ಕಷ್ಟೇ ಅವರ ಪರಾಕ್ರಮ. ಆರಾಮ ಇರು,” ಎಂದು ಅವಳನ್ನು ಸಂತೈಸುತ್ತಿದ್ದೆ.

ಈ ಭಜರಂಗಿಗಳಿಂದ ಬೆದರಿಕೆಗೊಳಗಾದವರ ಮನಸ್ಥಿತಿಯೇ ಅಂತದ್ದು. ಒಂದೋ ಬಜರಂಗಿಗಳ ಜೊತೆ ರಾಜಿ ಮಾಡಿಕೊಳ್ಳಬೇಕು. ಇಲ್ಲದೇ ಇದ್ದರೆ ಬೇರೆ ದಾರಿಯೇ ಇಲ್ಲ ಎನ್ನುವಂತಹ ಪರಿಸ್ಥಿತಿ. ಒಂದು ಕಾಲದಲ್ಲಿ ಕೋಮುವಾದ, ಜಾತಿ ವ್ಯವಸ್ಥೆಯ ವಿರುದ್ದ ಉಗ್ರವಾಗಿ ಭಾಷಣ ಮಾಡುತ್ತಿದ್ದ ಮಂಗಳೂರು ಯೂನಿವರ್ಸಿಟಿ ಫ್ರೋಫೆಸರ್‌ಗಳು ಈಗ ಬಾಯಿ ಮುಚ್ಚಿ ಕುಳಿತಿರುವುದು ಇದೇ ಕಾರಣಕ್ಕೆ. ಭಾಷಣ ಬಿಡಿ. ರಾಜ್ಯದ ಸೃಜನಶೀಲ ಲೇಖಕಿ ನಾಗವೇಣಿ ಬರೆದಿರುವ “ಗಾಂಧಿ ಬಂದ” ಪುಸ್ತಕ ಮಂಗಳೂರು ಯೂನಿವರ್ಸಿಟಿಯ ಪಾಠ ಪುಸ್ತಕವಾಗಿದ್ದು, ಅದನ್ನು ಪಾಠ ಮಾಡಲು ಪ್ರಾಧ್ಯಾಪಕರು ಸಿದ್ದರಿಲ್ಲ. ಕೆಲವು ಪ್ರಾಧ್ಯಾಪಕರು ವೈಯುಕ್ತಿಕವಾಗಿ ಪ್ರಗತಿಪರರಾಗಿದ್ದರೂ ಗಾಂಧಿ ಬಂದ ಪುಸ್ತಕದಲ್ಲಿನ ಜಾತಿಯ ವ್ಯವಸ್ಥೆಯ ಬಗ್ಗೆ ತರಗತಿಯಲ್ಲಿ ಪಾಠ ಮಾಡಿದರೆ ಎಬಿವಿಪಿ ವಿದ್ಯಾರ್ಥಿಗಳ ಮೂಲಕ ಸಂಘಪರಿವಾರ ತನ್ನ ವಿರುದ್ಧ ಎಲ್ಲಿ ಮುಗಿ ಬೀಳುತ್ತೋ ಎಂಬ ಆತಂಕ ಅವರದ್ದು. ಅದಕ್ಕೆ ಗಾಂಧಿ ಬಂದ ಪುಸ್ತಕದ ಉಸಾಬರಿನೇ ಬೇಡ ಎಂದು ಪುಸ್ತಕವನ್ನೆ ಕೆಲವರು ವಿರೋಧಿಸುತ್ತಿದ್ದಾರೆ. ವಿರೋಧ ಮಾಡಲು ಮನಸ್ಸು ಒಪ್ಪದವರು ನಾಗವೇಣಿಯ ಬೆಂಬಲಕ್ಕಂತೂ ನಿಲ್ಲುವುದಿಲ್ಲ. ಅದೆಲ್ಲಾ ಇರಲಿ. ಸಮಾಜದ ಬಲಿಷ್ಠ ವರ್ಗದ ಸ್ಥಿತಿನೇ ಹೀಗಿರಬೇಕಾದರೆ ಬಿ.ಎ. ಓದಿ ಸಿಟಿ ಸೆಂಟರ್ ಮಾಲ್‌ನ ಅಂಗಡಿಯೊಂದರಲ್ಲಿ ಬಿಲ್ಲು ಬರೆಯೋ ಹುಡುಗಿ ಜೀವ ಇನ್ನೆಷ್ಟು ಥರಗುಟ್ಟಿರಬಹುದು ಎಂದೆಲ್ಲಾ ಲೆಕ್ಕಾಚಾರ ಹಾಕುತ್ತಲೇ ಅವಳಿಗೆ ಸಮಾಧಾನ ಹೇಳುತ್ತಿದ್ದೆ.

ಅವಳು ಮಂಗಳೂರಿನ ನಂತೂರು ನಿವಾಸಿ ಚಂದ್ರಶೇಖರ ಮತ್ತು ಶಾಂಭವಿಯವರ ಎರಡನೇ ಪುತ್ರಿ. ಹೆಸರು ಚೈತನ್ಯ. ಜಾತಿ ಕೊಟ್ಟಾರಿ. ಕೊಟ್ಟಾರಿ ಸಮುದಾಯ ಎನ್ನುವಂತದ್ದು ತೀರಾ ಅನ್ನುವಷ್ಟಲ್ಲದಿದ್ದರೂ ಹಿಂದುಳಿದಿರುವ ಸಮುದಾಯ. ಹೆಚ್ಚು ಜನಸಂಖ್ಯೆಯನ್ನು ಹೊಂದಿರದ ಒಂದು ಸೂಕ್ಷ್ಮ ಸಂವೇದನೆ ಉಳ್ಳ ಜಾತಿ. ಇವರನ್ನು ಕಂಚಿಗಾರರು ಎಂದೂ ಕರೆಯುತ್ತಾರೆ. ಕಂಚಿನ ಪಾತ್ರೆ, ಮೂರ್ತಿ ಇನ್ನಿತರ ವಸ್ತುಗಳನ್ನು ತಯಾರಿಸುವುದರಿಂದ ವ್ಯವಹಾರಿಕ ಕಲಾಚತುರತೆಯನ್ನು ಹೊಂದಿರುವವರು. ಈ ಸಮುದಾಯಕ್ಕೆ ಅದೇನು ವ್ಯವಹಾರಗಳು ಗೊತ್ತಿದ್ದರೂ ಕೂಡಾ ಇವರೊಂದು ಅಸಂಘಟಿತ ಹಿಂದುಳಿದ ಜಾತಿ ಎನ್ನುವುದರಲ್ಲಿ ಅನುಮಾನ ಇಲ್ಲ. ಈ ಅಸಂಘಟಿತರಾಗಿರುವ ಹಿಂದುಳಿದ ಜಾತಿಗಳನ್ನು ಮೇಲ್ವರ್ಗಗಳು ಬಳಕೆ ಮಾಡಿಕೊಳ್ಳುವುದಕ್ಕೆ ಸುಲಭವಾಗುತ್ತದೆ. ಸಮುದಾಯದ ಇಂತಹ ದೌರ್ಬಲ್ಯಗಳನ್ನು ಬಳಸಿಕೊಂಡೇ ಕೊಟ್ಟಾರಿಗಳನ್ನು ಬ್ರಾಹ್ಮಣರು ದೇವಸ್ಥಾನದ ಕೆಲಸಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದರು. ಕರಾವಳಿಯ ದೇವಸ್ಥಾನಗಳಲ್ಲಿ ಹಿಂದೆಲ್ಲಾ ಕಂಚಿನ ಮೂರ್ತಿಯನ್ನು ಪ್ರತಿಷ್ಟಾಪಿಸುವುದೆಂದರೆ ಅದೊಂದು ಪ್ರತಿಷ್ಠೆಯ ವಿಷಯ. ಬ್ರಾಹ್ಮಣರಲ್ಲಿ ಮತ್ತು ಮೇಲ್ವರ್ಗಗಳಲ್ಲಿ ಅಂತಹ ಪ್ರತಿಷ್ಠೆ ಮೇಳೈಸಿದಾಗೆಲ್ಲಾ ಕಂಚಿಗಾರರು ಬಳಸಲ್ಪಡುತ್ತಿದ್ದರು. ಈಗೆಲ್ಲಾ ದೇವಸ್ಥಾನದಲ್ಲಿ ಚಿನ್ನ ಬೆಳ್ಳಿಯದ್ದೇ ಮೂರ್ತಿಗಳಾಗಿದ್ದರಿಂದ ಕೊಟ್ಟಾರಿಗಳು ಬೇರೆ ಬೇರೆ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಹಿಂದುಳಿದ ಸಮುದಾಯವಾದ ಕೊಟ್ಟಾರಿಗಳನ್ನು ಬಳಸಿಕೊಳ್ಳುವ ಕೆಲಸವನ್ನು ಸಂಘಪರಿವಾರ ಮುಂದುವರಿಸುತ್ತಿದೆ. ಈ ಕಾರಣಕ್ಕಾಗಿಯೇ ಕೊಟ್ಠಾರಿ ಸಮುದಾಯದ ಹೆಚ್ಚಿನ ಯುವಕರು ಭಜರಂಗದಳ, ವಿಶ್ವಹಿಂದೂ  ಪರಿಷತ್‌ನಂತಹ ಆರ್.ಎಸ್.ಎಸ್.ನ ಘಟಕಗಳಲ್ಲಿ ಕಾರ್ಯಕರ್ತರಾಗಿ ಇದ್ದಾರೆ. ಅಲ್ಲೊಬ್ಬರು ಇಲ್ಲೊಬ್ಬರು ನಾಯಕರಾಗಿಯೂ ಬೆಳೆದಿದ್ದಾರೆ. ಆದರೆ ಇವರೆಲ್ಲರನ್ನೂ ನಿಯಂತ್ರಿಸುವುದು ಆರ್.ಎಸ್.ಎಸ್‌ನ ಭಟ್ಟರು. ಎಂತಹ ಕೆಳವರ್ಗದ ಮಂದಿ ನಾಯಕರಾದರೂ ಭಟ್ಟರ ಪಾಲಿಗೆ ಅವರೆಲ್ಲಾ ಕಾರ್ಯಕರ್ತರೇ !

ಈ ರಾಜಕೀಯಗಳೆಲ್ಲಾ ಕೊಟ್ಟಾರಿ ಸಮುದಾಯದ ನಾಯಕರಿಗೇ ಅರ್ಥ ಆಗುವುದಿಲ್ಲ. ಇನ್ನು ಚೈತನ್ಯಳಿಗೆಲ್ಲಿ ಅರ್ಥ ಆಗಬೇಕು. ಅವಳಿಗೆ ಹೆಚ್ಚೆಂದರೆ 23 ವರ್ಷ ವಯಸ್ಸು. ಬಲ್ಮಠದ ಮಹಿಳಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಆಕೆ ಕೆಲಸಕ್ಕೆ ಸೇರಿದ್ದು ನಗರದ ಸಿಟಿ ಸೆಂಟರ್ ಮಾಲ್‌ನಲ್ಲಿರುವ ವಸ್ತ್ರದ ಅಂಗಡಿಯಲ್ಲಿ. ಸಿಟಿ ಸೆಂಟರ್ ಮಾಲ್‌ನ ಆಕರ್ಷಣೆಯೇ ಅಂತದ್ದು. ಆ ಮಾಲ್ ಕಟ್ಟುತ್ತಾ ಇರಬೇಕಾದರೆ ಸಿನೇಮಾದಲ್ಲಿ ಬರುವ ಭೂತ ಬಂಗಲೆಯಂತೆ ಮಾಲ್ ಗೋಚರಿಸುತ್ತಿತ್ತು. ಪೂರ್ಣ ಸಿದ್ದಗೊಂಡ ನಂತರ ಅದೊಂದು ಹೊಸ ಲೋಕ ತೆರೆದುಕೊಂಡಂತೆ ಬಾಸವಾಗೋ ರೀತಿ ಎದ್ದು ನಿಂತಿತು. ಅಲ್ಲಿ ಹೋದವರೆಲ್ಲಾ ಹೊಸತೊಂದು ಭ್ರಮಾಲೋಕದಲ್ಲಿ ವಿಹರಿಸುತ್ತಾರೆ. ಇದೇ ಕಾರಣಕ್ಕೋ ಏನೋ ಈ ಸಿಟಿ ಸೆಂಟರ್ ಮಾಲ್‌ನ ಯಾವ ಅಂಗಡಿಗೆ ಅಧಿಕಾರಿಗಳು ರೈಡ್ ಮಾಡಿದರೂ ಅಂಗಡಿ ಮುಚ್ಚುವುದಿಲ್ಲ. ಅಷ್ಟೊಂದು “ವ್ಯವಹಾರಗಳು” ಈ ಮಾ‍ಲ್‌ನಲ್ಲಿ ನಡೆಯುತ್ತದೆ. ಈ ಮಾಲ್‌ಗೆ ಆಕ್ಯೂಪೆನ್ಸಿ ಸರ್ಟಿಫಿಕೇಟ್ ಆಗ್ಲೀ, ಫೈರ್ ಎನ್ಒಸಿ ಆಗ್ಲಿ ಇಲ್ಲದೇ ಇದ್ದರೂ ಈ ಕಟ್ಟಡವನ್ನು ಯಾವ ಇಲಾಖೆಯ ಜೆಸಿಬಿಗಳೂ ಮುಟ್ಟುವುದಿಲ್ಲ. ಅರ್ಧ ರಸ್ತೆಯನ್ನು ಆಕ್ರಮಿಸಿ ನಿಯಮ ಮೀರಿ ಹೆಚ್ಚುವರಿ ಫ್ಲೋರ್‌ಗಳನ್ನು ಹೊಂದಿರುವ ಕಟ್ಟಡವನ್ನು ಯಾವ ಜಿಲ್ಲಾಧಿಕಾರಿಯೂ ಕನಿಷ್ಠ ಪ್ರಶ್ನೆ ಮಾಡುವುದಿಲ್ಲ. ಇಂತಿಪ್ಪ ಪ್ರಭಾವಿ ಮಾಲ್‌ನಲ್ಲಿ ದಿನವಿಡೀ ರಂಗು ರಂಗಿನ ಕಳೆ ಏರಿಸೋದು ಇಲ್ಲಿಗೆ ಬರೋ ಜೋಡಿಗಳು. ಅದೆಂಥಾ ಜೋಡಿಗಳು ಅಂತೀರಾ? ಕಾರವಾರದ ಓಂ ಬೀಚ್‌ಗೆ ಪೈಪೋಟಿ ಕೊಡೋ ರೀತಿಯ ಡ್ರೆಸ್ ತೊಟ್ಟುಕೊಂಡ ಜೋಡಿಗಳು ಇಲ್ಲಿಗೆ ಬರುತ್ತದೆ. ಆಶ್ಲೀಲವಾಗಿ ಡ್ರೆಸ್ ತೊಟ್ಟುಕೊಂಡು ಕುಡಿಯುತ್ತಿದ್ದರು ಎಂದು ಆರೋಪಿಸಿ ಪಬ್‌ಗೆ ದಾಳಿ ಮಾಡಿದ್ದ ಹಿಂದೂ ಸಂಘಟನೆಗಳು ಸಿಟಿ ಸೆಂಟರ್ ಮಾಲ್ ವಿಷಯದಲ್ಲಿ ಮಾತ್ರ ತೆಪ್ಪಗಿದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಸಿಟಿ ಸೆಂಟರ್ ಮಾಲ್‌ನ ಸೆಕ್ಯೂರಿಟಿ ಕಾಂಟ್ರಾಕ್ಟ್ ಇರುವುದೇ ಭಜರಂಗದಳದ ಮುಖಂಡನಿಗೆ. ಮಾಲ್‌ನಲ್ಲಿ ಸಣ್ಣ ಗಲಾಟೆ ಆದರೂ ಸೆಕ್ಯೂರಿಟಿ ಕಾಂಟ್ರಾಕ್ಟ್ ಕ್ಯಾನ್ಸಲ್ ಆಗುತ್ತದೆ. ಹಾಗಾಗಿ ಮಾಲ್‌ನಲ್ಲಿ ಹಿಂದೂ ಯುವತಿ, ಮುಸ್ಲಿಂ ಯುವಕ ಆರಾಮಾವಾಗಿ ವಿಹರಿಸಬಹುದು. ಈ ಭಜರಂಗಿ ಸರ್ಪಗಾವಲಿನಲ್ಲಿರೋ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಚೈತನ್ಯಳಿಗೆ ಪ್ರದೀಪ್ ಎಂಬ ಯುವಕ ಪರಿಚಿತನಾಗಿದ್ದ. ಪರಿಚಯ ಸ್ನೇಹಕ್ಕೆ ತಿರುಗಿ, ನಂತರ ಅದು ಪ್ರೇಮಕ್ಕೆ ಪರಿವರ್ತನೆಯಾಗಿತ್ತು. ಸಮಸ್ಯೆ ಸೃಷ್ಠಿಯಾಗಿರುವುದೇ ಇಲ್ಲಿ. ಪ್ರದೀಪ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದು, ದೈವಕ್ಕೆ ಕೋಲ ಕಟ್ಟುವ ಪರವ ಜಾತಿಯವನು.

ತೆಳು ಕಪ್ಪಗಿದ್ದರೂ ಸ್ಪುರದ್ರೂಪಿಯಾಗಿದ್ದ ಪ್ರದೀಪ ತನ್ನ ಮನೆ ಹಿರಿಯರಂತೆ ಕೋಲ ಕಟ್ಟುವ ವೃತ್ತಿಗೆ ಹೋಗಿರಲಿಲ್ಲ. ಕಾಲೇಜು ಶಿಕ್ಷಣ ಮುಗಿಸಿದ ನಂತರ ಸಂಗೀತದತ್ತ ಒಲವು ತೋರಿಸಿದ್ದ. ಸಂಗೀತವನ್ನು ಅರಗಿಸಿಕೊಂಡ ಈತ ಉದಯೋನ್ಮುಖ ಕಲಾವಿದನಾಗಿ ಬೆಳೆದ. 28 ವಯಸ್ಸಿಗೆಲ್ಲಾ ಸಂಗೀತವನ್ನೇ ವೃತ್ತಿಯನ್ನಾಗಿಸೋ ಮಟ್ಟಕ್ಕೆ ಬೆಳೆದ. ಮದುವೆ ಸಮಾರಂಭ, ಮನೊರಂಜನಾ ಕಾರ್ಯಕ್ರಮಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದ. ಇವನ ಪ್ರತಿಭೆ, ಅಂದ, ಚೆಂದ, ಮೈಕಟ್ಟು, ಬುದ್ಧಿಮತ್ತೆಗೆ ಕ್ಲೀನ್ ಬೌಲ್ಡ್ ಆಗಿದ್ದ ಚೈತನ್ಯ ಪ್ರದೀಪನ ಜೊತೆ ಕರಗಿ ಹೋಗಿದ್ದಳು. ಪ್ರೀತಿ ಸಮಸ್ಯೆಯಾಗಿ ಕಂಡಿದ್ದೇ ಅವಳಿಗೆ ಮನೆಯವರು ಗಂಡು ಹುಡುಕಲು ಪ್ರಾರಂಭ ಮಾಡಿದಾಗ. ಬಂದ ಎಲ್ಲಾ ಪ್ರಪೋಸಲ್‌ಗಳನ್ನು ನಿರಾಕರಿಸಿದ ಚೈತನ್ಯಳಿಗೆ ತಾನು ಪ್ರೇಮಿಸುತ್ತಿರುವ ವಿಚಾರ ಹೇಳಲು ಅಳಕು. ಹಾಗಂತ ತಂದೆ ತಾಯಿ ನೋಡಿದ ಸಂಬಂಧ ಒಪ್ಪುವಂತೆಯೂ ಇಲ್ಲ. ಕೊನೆಗೊಂದು ದಿವಸ ಹೇಳಿ ಬಿಟ್ಟಳು. ತಾನು ಪ್ರದೀಪನನ್ನು ಪ್ರೀತಿಸುವುದಾಗಿಯೂ ಆತ ಪರವ ಜಾತಿಗೆ ಸೇರಿದವನಾಗಿಯೂ ತಂದೆ ತಾಯಿಗೆ ಹೇಳಿದಳು. ಮನೆಯಲ್ಲೊಂದು ದೊಡ್ಡ ರಂಪಾಟವೇ ನಡೆಯಿತು. ಪ್ರದೀಪನ ಜೊತೆ ಪ್ರೀತಿ ಮುಂದುವರಿಸಿದ್ದೇ ಆದಲ್ಲಿ ಒಂದೋ ನೀನು ಬದುಕಬೇಕು. ಇಲ್ಲವಾದಲ್ಲಿ ನಾವು ಬದುಕಬೇಕು ಎಂಬಲ್ಲಿಯವರೆಗೆ ತಂದೆ ಮಾತನಾಡಿ ಬಿಟ್ಟಿದ್ದರು. ಇದೆಲ್ಲಾ ನಡೆದ ಮರುದಿನ ಚೈತನ್ಯ ಸಿಟಿ ಸೆಂಟರ್‌ನ ಅಂಗಡಿಗೆ ಕೆಲಸಕ್ಕೆ ಹೋದವಳು ಮನೆಗೆ ಹೋಗಲಿಲ್ಲ. ನೇರವಾಗಿ ತನ್ನ ಗೆಳತಿ ಇರೋ ಪಿಜಿಯಲ್ಲಿ ಉಳಿದುಕೊಂಡಳು.

ಮನೆಗೆ ಬಾರದ ಚೈತನ್ಯಳನ್ನು ಆ ದಿನ ಸಂಜೆಯಿಂದಲೇ ಹುಡುಕಲು ಶುರುವಿಟ್ಟುಕೊಂಡರು. ಪೊಲೀಸರಿಗೆ ದೂರು ನೀಡುವಂತಿಲ್ಲ. ಮನೆಯ ಮರ್ಯಾದೆಯ ಪ್ರಶ್ನೆ. ಪೊಲೀಸರು ಹುಡುಕಿ ತಂದು ಕೊಟ್ಟರೂ ಮತ್ತೆ ಯಾರೂ ಆಕೆಯನ್ನು ನಮ್ಮ ಜಾತಿಯಲ್ಲಿ ಮದುವೆಯಾಗಲು ಮುಂದೆ ಬರುವುದಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ದೂರು ನೀಡಿದ ತಕ್ಷಣ ಮರುದಿನ ಯಾವುದಾದರೊಂದು ಪತ್ರಿಕೆಯ ಅಪರಾಧ ಪೇಜ್‌ನಲ್ಲಿ ಸುದ್ಧಿ ಪ್ರಕಟವಾಗಿರುತ್ತದೆ. ಅದರ ಉಸಾಬರಿಯೇ ಬೇಡವೆಂದು ಮನೆ ಮಂದಿಯೇ ಚೈತನ್ಯಳನ್ನು ಹುಡುಕಲು ಶುರು ಮಾಡಿದ್ದರು. ಮನೆ ಮಂದಿ ಮಾತ್ರ ಅಲ್ಲ ಒಂದಿಡೀ ಭಜರಂಗಿ ಸೇನೆಯೇ ಈಕೆಯ ಬೆನ್ನು ಬಿದ್ದಿತ್ತು. ಭಜರಂಗದಳದ ಮುಖಂಡನೆ  ಹೆಂಡತಿಯ ಕಡೆಯಿಂದ ಚೈತನ್ಯ ಸಂಬಂಧಿಯಾಗಬೇಕು. ಆ ನಿಟ್ಟಿನಲ್ಲಿ ಹುಡುಕಾಟ ಪ್ರಾರಂಭವಾಗಿತ್ತು. ಚೈತನ್ಯ ಮತ್ತು ಪ್ರದೀಪ ನೇರವಾಗಿ ಮಹಿಳಾ ವಕೀಲರೊಬ್ಬರಲ್ಲಿಗೆ ಬಂದು ಅಹವಾಲು ಹೇಳಿಕೊಂಡು ಮದುವೆಗೆ ಸಹಕರಿಸುವಂತೆ ಕೇಳಿದ್ದಾಳೆ. ಮದುವೆಯಾಗಬೇಕಾದರೆ ಕನಿಷ್ಠ ವಿಳಾಸದ ದಾಖಲೆಗಳು ಮತ್ತು ವಯಸ್ಸಿನ ದೃಡೀಕರಣದ ದಾಖಲೆಗಳು ಬೇಕಾಗುತ್ತದೆ. ಚೈತನ್ಯಳ ಎಲ್ಲಾ ದಾಖಲೆಗಳ ಮೂಲ ಪ್ರತಿ ಮನೆಯಲ್ಲಿದೆ. ನಕಲು ಪ್ರತಿ ಸಿಟಿ ಸೆಂಟರ್ ಮಾಲ್‌ನಲ್ಲಿ ತಾನು ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿದೆ. ಆ ಅಂಗಡಿಗೆ ಹೋಗಿ ದಾಖಲೆಗಳನ್ನು ತರುವಂತೆ ಇಲ್ಲ. ಯಾಕೆಂದರೆ ಮಾಲ್‌ನ ಸೆಕ್ಯೂರಿಟಿ ಕಾಂಟ್ರಾಕ್ಟ್ ಭಜರಂಗದಳದ್ದಾಗಿತ್ತು. ಕೈಯ್ಯಲ್ಲಿ ವಾಕಿಟಾಕಿ ಹಿಡಿದುಕೊಂಡಿದ್ದ ಸೆಕ್ಯೂರಿಟಿ ಹುಡುಗರಲ್ಲಿ ಈಗ ಚೈತನ್ಯಳ ಫೋಟೋ ಕೂಡಾ ಇದೆ. ಸಾಲದ್ದಕ್ಕೆ ಅಂಗಡಿಯ ಬೇರೆ ಸಿಬ್ಬಂದಿಯಲ್ಲಿ ಚೈತನ್ಯಳ ಬಗ್ಗೆ ಮಾಹಿತಿ ಸಿಕ್ಕರೆ ನೀಡುವಂತೆ ಬೆದರಿಸಲಾಗಿತ್ತು.

ಚೈತನ್ಯ ಭೇಟಿ ಮಾಡಿದ ಮಹಿಳಾ ವಕೀಲರ ಪತಿ ನರೇಂದ್ರ ನಾಯಕ್ ಪ್ರಸಿದ್ಧ ವಿಚಾರವಾದಿ ಸಂಘದ ಮುಖಂಡರು. ವಿಚಾರವಾದಿಯಾಗಿದ್ದರಿಂದ ಕೆಲವೊಂದು ಎಡ ಯುವ ಸಂಘಟನೆಗಳ ಜೊತೆ ಅವರು ಸಂಪರ್ಕ ಇರಿಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಎಡ ಯುವ ಸಂಘಟನೆಯೊಂದರ ಜಿಲ್ಲಾ ಅಧ್ಯಕ್ಷ ಮುನೀರ್‌ಗೆ ಈ ಪ್ರಕರಣ ವಿವರಿಸಿದ್ದರು. ಮುನೀರ್ ನನಗೆ ಕರೆ ಮಾಡಿ ಈ ಪ್ರಕರಣದ ಬಗ್ಗೆ ಚರ್ಚಿಸಿದ್ದ. ಮುನೀರ್ ಎಡ ಯುವ ಸಂಘಟನೆಯ ಜಿಲ್ಲಾಧ್ಯಕ್ಷನಾಗಿದ್ದು, ಆತನಿಗೆ ಒಂದಷ್ಟು ಹುಡುಗರನ್ನು ಕರೆದುಕೊಂಡು ಅಂಗಡಿಗೆ ಹೋಗಿ ದಾಖಲೆ ವಶಪಡಿಸಿಕೊಂಡು ಮದುವೆ ಮಾಡ್ಸೋದು ಅಥವಾ ಪೊಲೀಸರಿಗೆ ಅಧಿಕೃತವಾಗಿ ದೂರು ಕೊಟ್ಟೂ ಮದುವೆ ಮಾಡ್ಸೋದು ದೊಡ್ಡ ವಿಚಾರವಲ್ಲ. ಆದರೆ ಈ ರೀತಿ ಮಾಡಿದಾಗ ಎಡವಟ್ಟುಗಳಾಗುವುದೇ ಜಾಸ್ತಿ. ಹುಡುಗಿ ಕೆಲಸ ಮಾಡುತ್ತಿದ್ದ ಅಂಗಡಿಗೆ ಸಂಘಟನೆಯ ಯುವಕರನ್ನು ಕಳುಹಿಸಿ ದಾಖಲೆ ವಶಪಡಿಸಿಕೊಂಡರೆ ಜಗಳ ಆಗೋ ಸಾಧ್ಯತೆ ಇರುತ್ತದೆ. ಆಗ ಬಿಟ್ಟಿ ಪ್ರಚಾರ ದೊರೆತು ಸುದ್ಧಿಯಾಗುತ್ತದೆ ಮತ್ತು ದೂರು ದಾಖಲಾಗುತ್ತದೆಯೋ ಹೊರತು ಮದುವೆ ಆಗುವುದಿಲ್ಲ. ಇನ್ನು ಪೊಲೀಸರಿಗೆ ಅಧಿಕೃತ ದೂರು ನೀಡಿ ರಿಜಿಸ್ಟರ್ ಮಾಡ್ಸೋಣ ಅಂದರೆ ಪೊಲೀಸರು ಎರಡೂ ಕಡೆಯ ಮನೆಯವರನ್ನು ಕರೆಸುತ್ತಾರೆ. ಪೊಲೀಸರ ಎದುರು ಮನೆಯವರು ಮದುವೆಗೆ ಒಪ್ಪಿದಂತೆ ನಾಟಕವಾಡಿ “ಒಂದು ಐದು ತಿಂಗಳ ಕಾಲಾವಕಾಶ ಕೊಡಿ. ನಾವು ಮಗಳನ್ನು ಚಿಕ್ಕಂದಿನಿಂದ ಕಷ್ಟಪಟ್ಟು ಬೆಳೆಸಿದ್ದೇವೆ. ನಮ್ಮ ಮನೆಯ ಮರ್ಯಾದೆಯೂ ಮುಖ್ಯ ಅಲ್ವ. ಅವಳು ಪ್ರೀತಿಸಿದ ಹುಡುಗನಿಗೇ ಮದುವೆ ಮಾಡಿಕೊಡುತ್ತೇವೆ. ಸಂಬಂಧಿಕರಿಗೆ ಆಹ್ವಾನ ಪತ್ರಿಕೆ ನೀಡಿ ವ್ಯವಸ್ಥಿತವಾಗಿ ಅರೇಂಜ್ಡ್ ಮ್ಯಾರೇಜ್ ಮಾಡುತ್ತೇವೆ. ಒಂದು ಐದು ತಿಂಗಳು ಕಾಯೋಕೆ ಆಗಲ್ವ. ನಾನು ಆಕೆಯನ್ನು ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಪೊಷಿಸಿದ್ದೇನೆ. ಐದು ತಿಂಗಳು ಟೈಮ್ ಕೊಡಿ ಪ್ಲೀಸ್,” ಎಂದು ಅಳುತ್ತಾರೆ. ಆ ಕ್ಷಣಕ್ಕೆ ಹುಡುಗಿಯ ತಾಯಿ ಹೇಳುವುದು ಸರಿ ಅನ್ನಿಸುತ್ತದೆ. ಮನೆಯವರೇ ಮದುವೆ ಮಾಡಿಕೊಡುತ್ತೇನೆ ಎಂದ ಮೇಲೆ ಯಾರು ಏನೂ ಮಾತಾಡೋಕೆ ಇರುವುದಿಲ್ಲ. ಹುಡುಗಿಯನ್ನು ಅವರ ಜೊತೆಯೇ ಪೊಲೀಸರು ಕಳುಹಿಸುತ್ತಾರೆ. ಮನೆಗೆ ಕಳುಹಿಸಿದ ಹತ್ತೇ ದಿನದಲ್ಲಿ ದೂರದ ಜಿಲ್ಲೆಯ ಹುಡುಗನನ್ನು ಹುಡುಕಿ ಹುಡುಗಿಗೆ ಬಲವಂತದ ಮದುವೆ ಮಾಡುತ್ತಾರೆ. ಇಂತಹ ಹಲವಾರು ಪ್ರಕರಣಗಳು ನಮ್ಮ ಮುಂದೆ ಇದ್ದಿದ್ದರಿಂದ ಮತ್ತೆ ಅಂತಹ ತಪ್ಪುಗಳನ್ನು ಮಾಡಬಾರದು ಎಂದು ಕೊಂಡೆವು. ಅದಕ್ಕಿಂತಲೂ ಮುಖ್ಯವಾಗಿ ಮುನೀರ್ ಒಬ್ಬ ಜಾತಿ, ಧರ್ಮವನ್ನು ಮೀರಿ ಬೆಳೆದ ಪಕ್ಕಾ ಕಮ್ಯೂನಿಷ್ಟ್ ಯುವಕನಾಗಿದ್ದರೂ “ಹಿಂದೂಗಳ ಮದುವೆಯ ಉಸಾಬರಿ ಆ ಬ್ಯಾರಿಗೆ ಯಾಕಂತೆ?” ಎಂದು ದಕ್ಷಿಣ ಕನ್ನಡ ಜಿಲ್ಲೆಯ ಜನ ಮೂದಲಿಸದೆ ಇರುವಷ್ಟು ಪ್ರಜ್ಞಾವಂತರಲ್ಲ. ಆದುದರಿಂದಲೇ ಆತ ಮದುವೆಯ ಉಸ್ತುವಾರಿಯನ್ನು ನನ್ನ ಹೆಗಲಿಗೆ ಹಾಕಿದ.

ದಲಿತ ಯುವಕ ಮತ್ತು ಕೊಟ್ಟಾರಿ ಯುವತಿಯ ಮದುವೆ ಮಾಡುವುದು ಎಂದರೆ ಅದೊಂದು ಸಣ್ಣ ರೀತಿಯ ಸಾಮಾಜಿಕ ಕ್ರಾಂತಿ ಎಂದೆಣಿಸಿತು. ಬಹುತೇಕ ಕ್ರಾಂತಿ ವಿವಾದಾಸ್ಪದವಾಗಿರುತ್ತದೆ ಎಂಬಂತೆ ಇದೊಂದು ವಿವಾದಾಸ್ಪದ ವಿಷಯ ಕೂಡಾ. ಅದಕ್ಕಾಗಿ ಯಾವುದಕ್ಕೂ ಮೊದಲು ಯುವತಿ ಜೊತೆ ಮಾತನಾಡೋಣ ಎಂದುಕೊಂಡು ನಾನು ವಿಚಾರವಾದಿಗಳ ಸಂಘದ ಮುಖಂಡ ನರೇಂದ್ರ ನಾಯಕ್ರಿಗೆ ಫೋನಾಯಿಸಿದೆ. ಎರಡೇ ರಿಂಗ್‌ನಲ್ಲಿ ಫೋನ್ ರಿಸೀವ್ ಮಾಡಿದ ಅವರು “ಎಂತದ್ದು ಮಾರಾಯ. ಎಲ್ಲಿದ್ದಿ. ಒಂದು ಉಪಕಾರ ಆಗಬೇಕಿತ್ತು. ಒಂದು ಹುಡುಗಿಯ ಸರ್ಟಿಫಿಕೇಟ್ ಅವಳ ಅಂಗಡಿಯಲ್ಲಿ ಇದೆ. ಅದನ್ನು ತೆಗೆಸಿಕೊಡಬೇಕು. ನೀವು ಟೀವಿಯವರಲ್ವಾ. ನೀವು ಹೋದರೆ ತಕ್ಷಣ ಕೊಡ್ತಾರೆ,” ಅಂದರು. “ಸರಿ ಸರ್. ಆ ಹುಡುಗೀನ ಕಳುಹಿಸಿ. ನಾನು ಸಿಟಿ ಸೆಂಟರ್ ಪಕ್ಕ ನಿಂತಿರುತ್ತೇನೆ,” ಎಂದೆ. ಒಂದು ಹತ್ತು ನಿಮಿಷದಲ್ಲಿ ರಿಕ್ಷದಿಂದ ಇಳಿದ ಹುಡುಗಿ ನನ್ನ ಮೊಬೈಲ್‌ಗೆ ಕರೆ ಮಾಡಿದಳು. ನನ್ನೆದುರೇ ಅವಳ ರಿಕ್ಷಾ ನಿಂತಿದ್ದರೂ ನನಗೆ ಅವಳ ಮುಖ ಪರಿಚಯ ಇಲ್ಲದೇ ಇದ್ದುದರಿಂದ ಅವಳ ಮೊಬೈಲ್ ಕರೆ ಅವಳ ಗುರುತು ಹಿಡಿಯಲು ಸಹಕರಿಸಿತ್ತು. ಬಂದವಳೇ “ನಾಯಕರು ನಿಮ್ಮಲ್ಲಿಗೆ ಕಳುಹಿಸಿದ್ದು. ಹೆಸರು ಚೈತನ್ಯ,” ಎಂದು ಪರಿಚಯಿಸಿಕೊಂಡಳು. ನಂತರ ತನ್ನ ಪ್ರೇಮ ಪುರಾಣವನ್ನು ಒಂದೇ ಉಸಿರಲ್ಲಿ ಹೇಳಿ ಮುಗಿಸಿದವಳೇ ಮತ್ತೆ ಅಲ್ಲಿಂದ ಹೊರಡಲು ಅವಸರಿಸಿದಳು. “ನಿಮಗೆ ಗೊತ್ತಿಲ್ಲ. ಅವರು ಬಜರಂಗದಳದವರು. ಅವರಲ್ಲಿ ತುಂಬಾ ಜನ ಇದ್ದಾರೆ. ನನ್ನನ್ನು ರಸ್ತೆ ಬದಿ ನೋಡಿದರೆ ಕಿಡ್ನ್ಯಾಪ್ ಮಾಡುತ್ತಾರೆ. ಪೊಲೀಸರೂ ಅವರ ಪರವೇ ಇದ್ದಾರೆ. ಪ್ಲೀಸ್ ಇಲ್ಲಿಂದ ಬೇರೆ ಕಡೆ ಹೋಗೋಣಾ. ಅಲ್ಲಿ ಮಾತಾಡೋಣಾ ಸರ್,” ಎಂದು ಚಟಪಡಿಸಲು ಶುರುವಿಟ್ಟುಕೊಂಡಳು. “ನೋಡು ನಾನು ಪತ್ರಕರ್ತ. ಎಲ್ಲಾ ಧರ್ಮದ ಸಂಘಟನೆಗಳ ಎಲ್ಲರ ಪರಿಚಯ ನನಗಿದೆ. ಸುಮ್ಮನೆ ನಿಂತುಕೊ. ಮಾಲ್‌ನ ಅಂಗಡಿಯಿಂದ ತರಬೇಕಾದ ಸರ್ಟಿಫಿಕೇಟ್‌ಗಳ ಬಗ್ಗೆ ಏನು ಮಾಡಬೇಕು ಎಂದು ಯೋಚಿಸುವ,” ಎಂದೆ. ನನಗೆ ಸರ್ಟಿಫಿಕೇಟ್ ತರಲು ಏನು ಮಾಡಬೇಕು ಎಂದು ಒಂದು ಕ್ಷಣ ಹೊಳೆಯಲೇ ಇಲ್ಲ. ನಾನು ಪತ್ರಕರ್ತ, ನನಗೆ ಯಾರೂ ಏನೂ ಮಾಡುವುದಿಲ್ಲ ಎಂದು ಅವಳಲ್ಲಿ ಜಂಭ ಕೊಚ್ಚಿಕೊಂಡಿದ್ದರೂ ಒಬ್ಬನೇ ಅಂಗಡಿಗೆ ಹೋಗಿ ಮಾತನಾಡುವುದು ಪ್ರ್ಯಾಕ್ಟಿಕಲ್ ಆಗಿ ಕಷ್ಟಸಾಧ್ಯ ಅನ್ನಿಸಿತು ಆ ಸಂಧರ್ಭ. ಬೇರೆ ಟಿವಿ ಚಾನಲ್‌ನ ವರದಿಗಾರರನ್ನು ಕರೆಯೋಣ ಎಂದರೆ ಅವರು ಈ ಪ್ರಕರಣವನ್ನು ಸುದ್ದಿಯಾಗಿ ನೋಡಿ ಟಿ.ಆರ್.ಪಿ ಕುತಂತ್ರ ಹಾಕಿದರೆ ಹುಡುಗಿಯ ಬದುಕಿನ ಗತಿಯೇನು ಎಂಬ ಹೆದರಿಕೆ. ಕೊನೆಗೆ ಸರಿಯಾಗಿ ಪರಿಚಯ ಇಲ್ಲದ ಹುಡುಗಿ ಜೊತೆ ನಾನೊಬ್ನೆ ಇರುವುದು ಬೇಡ ಎಂದು ಇಂಗ್ಲೀಷ್ ಪತ್ರಿಕೆಯ ವರದಿಗಾರ್ತಿಯಾಗಿದ್ದ ಅನಿಷಾ ಶೇಟ್‌ಗೆ ಕಥೆ ಹೇಳಿ ಅವಳನ್ನು ಕರೆಸಿಕೊಂಡೆ. ಅವಳು ಅವಳಪ್ಪನ ಕಾರಿನಲ್ಲಿ ನೇರವಾಗಿ ನಾವಿದ್ದ ಕೆ ಎಸ್ ರಾವ್ ರೋಡ್‌ಗೆ ಬಂದಳು. “ಅಬ್ಬಾ” ಅನ್ನಿಸಿತು. ಅವಳ ಕಾರಿನಲ್ಲೇ ಇಬ್ಬರೂ ಕೂತು ಚೈತನ್ಯಳ ಕತೆ ಕೇಳುತ್ತಿದ್ದೆವು. ಅನಿಷಾಳಿಗೆ ಕತೆ ಅರ್ಥ ಆಗುವುದು ಸ್ವಲ್ಪ ತಡ. ಅದಕ್ಕಾಗಿ ಅನಿಷಾ ಕತೆಯನ್ನು ಮತ್ತೆ ಮತ್ತೆ ಕೇಳುತ್ತಿದ್ದಳು. ಮಧ್ಯೆ ಮಧ್ಯೆ ಪ್ರಶ್ನೆ ಕೇಳುತ್ತಿದ್ದಳು. “ಅಯ್ಯೋ… ಇವಳಿಗೆ ಅರ್ಥನೇ ಆಗ್ತಿಲ್ವಲ್ಲಪ್ಪೋ… ಎಷ್ಟು ಪ್ರಶ್ನೆ ಕೇಳ್ತಾಳೆ” ಅಂತ ನನಗೆ ತಲೆಬಿಸಿಯಾದರೂ ಅವಳ ಪ್ರಶ್ನೆಗಳಿಂದಾಗಿ ನನಗೆ ಇನ್ನಷ್ಟೂ ತಿಳಿಯಲು ಅವಕಾಶ ಆಗುತ್ತಿತ್ತು ಎಂಬುದು ಬೇರೆ ವಿಚಾರ. ಅಂದ ಹಾಗೆ ಅನಿಷಾ “ದ ಹಿಂದೂ” ಪತ್ರಿಕೆಯಲ್ಲಿ ವರದಿಗಾರಳಾಗಿದ್ದಳು. ಜನಪರ, ಜೀವಪರ, ಪರಿಸರ ಪರ, ಮಾನವ ಹಕ್ಕುಗಳ ಪರವಾದ ಎಂತಹ ರಿಸ್ಕ್‌ ವಿಷಯವಿದ್ದರೂ ಆಕೆ ಸವಾಲು ಎದುರಿಸಲು ಸಿದ್ದವಿರುತ್ತಿದ್ದಳು. ಅದಕ್ಕೆ ನನಗೆ ಆಕೆ ಇಷ್ಟವಾಗುತ್ತಿದ್ದುದು. ನನಗೆ ಮಾತ್ರವಲ್ಲ ಎಲ್ಲಾ ಆ್ಯಕ್ಟಿವ್ ಜರ್ನಲಿಸ್ಟ್‌ಗಳಿಗೆ ಅನಿಷಾ ಇಷ್ಟವಾಗುತ್ತಿದ್ದುದು ಇದೇ ಕಾರಣಕ್ಕೆ. ಅದೆಲ್ಲಾ ಇರಲಿ. ಒಟ್ಟು ನಾವು ಕಾರಿನೊಳಗೆ ಕೂತು ಚೈತನ್ಯಳ ಕತೆ ಕೇಳುತ್ತಿದ್ದೆವು.

ಕೆ ಎಸ್ ರಾವ್ ರೋಡ್ ಮಂಗಳೂರಿನ ಜನನಿಭಿಡ ರಸ್ತೆ. ಡಿವೈಡರ್ ಹಾಕಿದ ಡಬ್ಬಲ್ ರೋಡ್ ಇದ್ದರೂ ಸಿಟಿ ಸೆಂಟರ್ ಮಾಲ್ ಸೇರಿ ಹಲವು ಕಟ್ಟಡಗಳು ಈ ರಸ್ತೆಯ ಬಹುಭಾಗವನ್ನು ನುಂಗಿ ಕಿಷ್ಕಿಂದೆ ಮಾಡಿ ಬಿಟ್ಟಿದೆ. ಕಿಷ್ಕಿಂದೆಯನ್ನು ಇನ್ನಷ್ಟೂ ಹಾಳು ಮಾಡಲು ಅನಿಷಾ ಕಾರನ್ನು ರಸ್ತೆ ಬದಿಯೇ ನಿಲ್ಲಿಸಿದ್ದಳು. ಡ್ರೈವರ್ ಸೀಟಲ್ಲಿ ಅನಿಷಾ ಇದ್ದರೆ, ಅವಳ ಪಕ್ಕದ ಮುಂದಿನ ಸೀಟಿನಲ್ಲಿ ನಾನಿದ್ದೆ. ಹಿಂದಿನ ಸೀಟಿನಲ್ಲಿ ಕುಳಿತು ಚೈತನ್ಯ ಅವಳ ಆತಂಕದ ಕತೆಯನ್ನು ಕಣ್ಣಾಲಿಗಳನ್ನು ತುಂಬಿಕೊಂಡು ಹೇಳುತ್ತಿದ್ದಳು. ನಾವು ಹಿಂದೆ ತಿರುಗಿ ಕೇಳುತ್ತಿದ್ದೆವು. ಒಂದು ಕ್ಷಣ ಕಾರಿನ ಗಾಜುಗಳ ಮೂಲಕ ಹೊರ ನೋಡುತ್ತೇನೆ, ಹತ್ತಾರು ಮಂದಿ ಕಾರಿನೊಳಗೆ ಇಣುಕುತ್ತಿದ್ದಾರೆ. ಅವರೆಲ್ಲರೂ ಚೈತನ್ಯಳನ್ನು ಹುಡುಕುತ್ತಿದ್ದ ಭಜರಂಗಿಗಳು. ಒಳಗಿರುವುದು ಚೈತನ್ಯ ಹೌದೋ ಅಲ್ಲವೋ ಎಂದು ಅವರಿಗಿನ್ನೂ ಖಾತ್ರಿಯಾದಂತಿಲ್ಲ. ಖಾತ್ರಿ ಆಗುವುದಕ್ಕೂ ಮುಂಚೆ ನಾವು ಜಾಗ ಖಾಲಿ ಮಾಡಿಕೊಳ್ಳಬೇಕು ಎಂದು ಯೋಚಿಸಿದ ನಾನು ಕಾರನ್ನು ನೇರ ಪೊಲೀಸ್ ಕಮಿಷನರ್ ಆಫೀಸಿಗೆ ಕೊಂಡೊಯ್ಯವಂತೆ ಹೇಳಿದೆ. ಕಾರ್ ಸ್ಟಾರ್ಟ್ ಮಾಡಿ ಹೊರಡಿದ ರೀತಿಯಿಂದಲೇ ಅದರೊಳಗಿರುವುದು ಚೈತನ್ಯ ಎಂದು ಅರಿತುಕೊಂಡ ಭಜರಂಗಿಗಳು ಬೈಕೇರಿ ಕಾರನ್ನು ಹಿಂಬಾಲಿಸತೊಡಗಿದರು. ಒಂದು ಮೂರು ನಿಮಿಷವಷ್ಟೆ. ಕಾರು ಪೊಲೀಸ್ ಆಯುಕ್ತರ ಕಚೇರಿಯ ಎದುರಿತ್ತು.

ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ರ ಕಚೇರಿಯೊಳಗೆ ಹೋಗುತ್ತಿದ್ದಂತೆ ಕಚೇರಿಯಲ್ಲಿ ಆಯುಕ್ತರಿಲ್ಲ. ಊಟಕ್ಕೆ ಮನೆಗೆ ಹೋಗಿದ್ದಾರೆ ಎಂದು ತಿಳಿಯಿತು. ಸೀಮಂತ್ ಕುಮಾರ್ ಸಿಂಗ್‌ಗೆ ಫೋನಾಯಿಸಿ ಎಲ್ಲಾ ಕತೆಗಳನ್ನು ಶುರುವಿಂದ ಹೇಳಿದೆ. ಸಾಲದಕ್ಕೆ “ಈ ಪ್ರಕರಣವನ್ನು ಸುಮ್ಮನೆ ಬಿಟ್ಟರೆ ಮರ್ಯಾದಾ ಹತ್ಯೆಯಂತಹ ಘಟನೆಗಳು ಮಂಗಳೂರಿನಲ್ಲಿ ಆಗಬಹುದು. ಅದಕ್ಕೆ ಆಸ್ಪದ ಕೊಟ್ಟರೆ ಕಷ್ಟ ಆಗುತ್ತೆ.” ಎಂದು ಸಲಹೆ ಕೊಟ್ಟೆ. ತಕ್ಷಣ ಸೀಮಂತ್ ಕುಮಾರ್ ಸಿಂಗ್ ಉತ್ತರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಮಕೃಷ್ಣರನ್ನು ಕಮಿಷನರ್ ಆಫೀಸ್‌ಗೆ ತೆರಳಿ ಯುವತಿ ಕೈಯಿಂದ ದೂರು ಸ್ವೀಕರಿಸಿ ಮದುವೆಯವರೆಗೂ ರಕ್ಷಣೆ ಕೊಡುವಂತೆ ಆದೇಶಿಸಿದರು. ಸಬ್ಇನ್ಸ್‌ಪೆಕ್ಟರ್ ರಾಮಕೃಷ್ಣ ಬಂದವರೇ ನನ್ನ ಜೊತೆ ಮಾತನಾಡಿ ಎಲ್ಲಾ ವಿವರ ಕಲೆ ಹಾಕಿದರು. ಅಷ್ಟರಲ್ಲಾಗಲೇ ಚೈತನ್ಯಳ ಮನೆಯವರಿಗೆ ಸುದ್ದಿ ತಿಳಿದು ಕಮಿಷನರ್ ಕಚೇರಿ ಮುಂದೆ ಜಮಾಯಿಸಿದ್ದರು. ಭಜರಂಗದಳದ ಒಂದಷ್ಟು ಕಾರ್ಯಕರ್ತರೂ ಬಂದರು. ಅದರಲ್ಲೊಬ್ಬ ಕಾರ್ಯಕರ್ತ ನನ್ನ ಬಳಿ ಬಂದವನೆ “ನೀವು ಎಂತ ಮಾರಾಯ್ರೆ. ಚೈತನ್ಯಳಿಗೆ ಮಂಡೆ ಸಮ ಇಲ್ಲ. ಅವನು ದಲಿತ. ಕೋಲ ಕಟ್ಟುವ ಜಾತಿಯವ. ಹೇಗೆ ಮದುವೆ ಮಾಡಿ ಕೊಡುವುದು. ಅವಳಿಗೆ ಮಂಡೆ ಸರಿ ಇಲ್ಲ ಅಂತ ನಿಮಗೂ ಮಂಡೆ ಸರಿ ಇಲ್ವ ಮಾರಾಯ?” ಎಂದ. ಅವನ್ನಲ್ಲೇನು ಮಾತು ಎಂದು ನಾನೂ ಸುಮ್ಮನಿದ್ದೆ. ಕೊನೆಗೆ ಸಬ್ಇನ್ಸ್‌ಪೆಕ್ಟರ್ ರಾಮಕೃಷ್ಣ ಹುಡುಗಿ ಕಡೆಯ ಪ್ರಮುಖರನ್ನು, ಭಜರಂಗದಳದ ಪ್ರಮುಖರನ್ನು ಕರೆಸಿಕೊಂಡರು. ಚೈತನ್ಯಳಿಗೆ ಮನೆಯವರು ಸಾಕು ಬೇಕಾಗುವಷ್ಟು ಬುದ್ದಿ ಹೇಳಿದರು. ಚೈತನ್ಯಳದ್ದು ಒಂದೇ ಹಠ. ಮದುವೆಯಾಗುವುದಾದರೆ ಪ್ರದೀಪ್ನನ್ನು ಮಾತ್ರ. “ನೀನು ಕೋಲ ಕಟ್ಟುವವನ್ನು ಮದುವೆಯಾಗುದಾದರೆ ನೀನು ಸತ್ತಿದ್ದಿ ಎಂದು ಭಾವಿಸುತ್ತೇವೆ. ನಮಗೂ ನಿಮಗೂ ಯಾವುದೇ ಸಂಬಂಧ ಇಲ್ಲ” ಎಂದು ಚೈತನ್ಯಳ ಸಂಬಂಧಿ ಭಜರಂಗದಳದ ಮುಖಂಡ ಗುಡುಗಿದ. ಅಲ್ಲಿಯವರೆಗೂ ಸುಮ್ಮನಿದ್ದ ನನಗೆ ಆಗ ಸುಮ್ಮನಿರಲಾಗಲಿಲ್ಲ. “ಅಲ್ರಿ, ದಲಿತರೂ ಹಿಂದೂಗಳು. ಅವರ್ಯಾರೂ ಕ್ರಿಶ್ಚಿಯನ್ ಅಥವಾ ಬೌಧ್ಧ ಧರ್ಮಕ್ಕೆ ಮತಾಂತರ ಆಗಬಾರದು ಎಂದು ಹೇಳುವ ಸಂಘಟನೆ ನಿಮ್ಮದೆ ಅಲ್ವ. ಮತ್ತೆ ನಿಮ್ಮ ಜಾತಿಯ ಹುಡುಗಿ ದಲಿತನನ್ನು ಮದುವೆಯಾದರೆ ಏನು ಕಷ್ಟ?” ಎಂದು ಕೇಳಿದೆ. ಇಂತಹ ಪ್ರಶ್ನೆಗಳು ಅರ್.ಎಸ್.ಎಸ್‌.ಗರಿಗೆ ಹಲವಾರು ಬಾರಿ ಬಂದಿರಬಹುದು. ಆದರೆ ಅವರದ್ದೇ ಮನೆಯ ಹುಡುಗಿಯ ಜೀವಂತ ಉದಾಹರಣೆ  ಮುಂದಿಟ್ಟುಕೊಂಡು ಮಾತನಾಡುವಾಗ ಕಪಾಳಕ್ಕೆ ಚಪ್ಪಲಿಯಲ್ಲಿ ಬಡಿದಂತಾಗಿತ್ತು. ಆದರೂ ಸಾವರಿಸಿಕೊಂಡ ಭಜರಂಗದಳದ ಮುಖಂಡ “ಇಲ್ಲ ನಮ್ಮದೇನೂ ಅಭ್ಯಂತರ ಇಲ್ಲ. ಏನು ಬೇಕಾದರೂ ಮಾಡಿಕೊಂಡು ಸಾಯ್ಲಿ ಅವಳು,” ಎಂದು ನನ್ನ ಕಡೆ ಕೆಕ್ಕರಿಸಿ ನೋಡಲು ಧೈರ್ಯವಿಲ್ಲದೆ ಅವಳತ್ತಾ ಕೆಕ್ಕರಿಸಿ ನೋಡಿ ಅವಳ ತಂದೆ ತಾಯಿಯನ್ನೂ ಚೇರಿನಿಂದ ಎಬ್ಬಿಸಿ ಕರೆದೊಯ್ದ.

“ಸಂಜೆ ಮದುವೆ ಇದೆ. ಹಿಂದೂ ಸಂಪ್ರದಾಯದ ಪ್ರಕಾರವೇ ಮದುವೆ. ದಯವಿಟ್ಟು ಬನ್ನಿ.” ಎಂದು ಹುಡುಗಿಯ ಬಾಯಿಯಿಂದಲೇ ಅವಳ ತಂದೆ ತಾಯಿ ಮತ್ತು ಭಜರಂಗಿಗಳಿಗೆ ಆಯುಕ್ತರ ಕಚೇರಿಯಲ್ಲೇ ಮದುವೆಯ ಆಹ್ವಾನ ನೀಡಲಾಯಿತು. ಉಂ ಅಥವಾ ಊಂ ಊಂ ಎಂಬ ಉತ್ತರವೂ ಬರಲಿಲ್ಲ. ಕನಿಷ್ಠ ತಲೆಯೂ ಅಲ್ಲಾಡಲಿಲ್ಲ. ಸಂಜೆ ಐದು ಗಂಟೆಗೆ ಡೊಂಗರಕೇರಿಯಲ್ಲಿರುವ ಕಾಶೀ ಸಧನದಲ್ಲಿ ಮದುವೆ ಮಾಡುವುದು ಎಂದು ನಿರ್ಧರಿಸಿ ಅಲ್ಲಿನ ಅರ್ಚಕರನ್ನು ಬುಕ್ ಮಾಡಿದೆವು. ಅದರ ಎಲ್ಲಾ ಜವಾಬ್ದಾರಿಯನ್ನು ವಿಚಾರವಾದಿ ಸಂಘದ ಮುಖಂಡ ನರೇಂದ್ರ ನಾಯಕರು ವಹಿಸಿದ್ದರು. ನಂತರ ಪೊಲೀಸರ ಸಹಾಯ ಪಡೆದು ಚೈತನ್ಯಳ ಜೊತೆ ಸಿಟಿ ಸೆಂಟರ್ ಮಾಲ್‌ನ ಅಂಗಡಿಗೆ ಹೋಗಿ ಅವಳ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಬಂದೆವು. ಸಂಜೆ ಐದು ಗಂಟೆಗೆ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಯಿತು. ಮರುದಿನ ರಿಜಿಸ್ಟ್ರಾರ್ ಆಫೀಸಿಗೆ ತೆರಳಿ ಮದುವೆಯನ್ನು ಕಾನೂನು ಬದ್ಧವಾಗಿ ನೊಂದಣಿ ಮಾಡಿಸಿದೆವು.

ಇದಾದ ಕೆಲವೇ ವಾರಗಳ ನಂತರ ಉಪ್ಪಿನಂಗಡಿಯಲ್ಲಿ ಹಿಂದೂ ಸಮಾವೇಶ ನಡೆಯಿತು.. ನಾನು ವರದಿ ಮಾಡಲು ಅಲ್ಲಿಗೆ ತೆರಳಿದ್ದೆ. ಆರ್.ಎಸ್.ಎಸ್. ಮುಖಂಡ ಭಟ್ಟರು ಭಾಷಣ ಮಾಡುತ್ತಿದ್ದರು: “ದಲಿತರನ್ನು ಮತ್ತು ಹಿಂದೂ ಧರ್ಮದ ಇತರ ಜಾತಿಗಳನ್ನು ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಕ್ರಿಶ್ಚಿಯನ್ನರು ಇದರ ಲಾಭ ಪಡೆದುಕೊಂಡು ದಲಿತರನ್ನು ಮತಾಂತರ ಮಾಡುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಯಾವುದೇ ಅಸ್ಪ್ರಶ್ಯತೆ ಇಲ್ಲ. ದಲಿತರು ಮತಾಂತರ ಆಗಕೂಡದು. ಹಿಂದೂ ನಾವೆಲ್ಲ ಒಂದು….”

19 thoughts on “ಆರ್.ಎಸ್.ಎಸ್. ಹಿಂದುತ್ವದಲ್ಲಿ ದಲಿತರ ಜೊತೆಗಿನ ವೈವಾಹಿಕ ಸಂಬಂಧಗಳು

 1. Ismail mohd.Thannirubavi

  I appreciate everyone those who are taken keen interest to end this complecated issue.Salute to Navin.

  Reply
 2. anand prasad

  ಹಿಂದೂ ಧರ್ಮದಲ್ಲಿರುವ ಮೇಲು ಕೀಳು ಜಾತಿ ತಾರತಮ್ಯವನ್ನು ಹಾಗೇ ಕಾಯ್ದುಕೊಂಡು ಹೋಗುವ ಉದ್ಧೇಶದಿಂದ ಹಾಗೂ ಕೆಳಜಾತಿಯವರನ್ನು ಮೇಲುಜಾತಿಯವರ ನಿಯಂತ್ರಣದಲ್ಲಿ ಇರಿಸುವುದಕ್ಕೊಸ್ಕರ ವಾರ್ಷಿಕವಾಗಿ ಹಿಂದೂ ಸಮಜೋತ್ಸವವನ್ನು ಏರ್ಪಡಿಸಲಾಗುತ್ತದೆ. ಈ ಉದ್ಧೇಶಕ್ಕಾಗಿ ಮತಾಂತರ, ಲವ್ ಜಿಹಾದ್, ಗೋಹತ್ಯೆ ತಡೆ ಮುಂತಾದ ಗುಮ್ಮನನ್ನು ತೋರಿಸಿ ಹಿಂದೂ ಸಮಾಜ ಒಟ್ಟಾಗಬೇಕು ಎಂದು ಪ್ರಚೋದಿಸುವುದೇ ವಾರ್ಷಿಕ ಹಿಂದೂ ಸಮಜೋತ್ಸವಗಳ ಪ್ರಧಾನ ಉದ್ಧೇಶ. ತನ್ಮೂಲಕ ಇಡೀ ಹಿಂದೂ ಸಮಾಜದ ನಿಯಂತ್ರಣ ಆರ್. ಎಸ್. ಎಸ್. ನ ಬ್ರಾಹ್ಮಣರ ಕೈಯಲ್ಲಿ ಇರುವಂತೆ ನೋಡಿಕೊಳ್ಳಲಾಗುತ್ತದೆ. ಇದರ ಅರಿವಿಲ್ಲದೆ ಕುರಿಗಳಂತೆ ಕೆಳಜಾತಿಯ ಜನರು ಇಂಥ ಸಮಾವೇಶಗಳಲ್ಲಿ ಭಾಗವಹಿಸಿ ಅನ್ಯ ಧರ್ಮೀಯರ ಬಗ್ಗೆ ದ್ವೇಷ ಬೆಳೆಸಿಕೊಳ್ಳುತ್ತಾರೆ.

  Reply
 3. sushrutha

  Naveen avare, nimmannu neevu uthprekshisikolli. beda annalla. nimma photo dalli iro haage nimma glass ittu samaaja nodabedi. Bhajaranga dala, RSS eshto intercaste marriage ge support maadide.udaaphe maathu nillisi. neevu samaaja seve madiddeeri antha nimage anisiddare swaagatha.innoo munduvarisi. naalage chata kadime maadi dooro vishayadalli

  Reply
  1. Shashikanth

   Dear Sushruta,
   why dont you come up with examples of intercaste marriages supported by bhajrang dal or RSS? We shall appreciate that. If that was the case why did they not support this case? Problem iddaaga dooralebeku. Adu chata antha kaanuvudu doorisikondavarige maatra!

   Reply
 4. vivian

  ಸಿಟಿ ಸೆಂಟರ್ ಮಾಲ್‌ನ ಸೆಕ್ಯೂರಿಟಿ ಕಾಂಟ್ರಾಕ್ಟ್ ಇರುವುದೇ ಭಜರಂಗದಳದ ಮುಖಂಡನಿಗೆ. ಮಾಲ್‌ನಲ್ಲಿ ಸಣ್ಣ ಗಲಾಟೆ ಆದರೂ ಸೆಕ್ಯೂರಿಟಿ ಕಾಂಟ್ರಾಕ್ಟ್ ಕ್ಯಾನ್ಸಲ್ ಆಗುತ್ತದೆ. ಹಾಗಾಗಿ ಮಾಲ್‌ನಲ್ಲಿ ಹಿಂದೂ ಯುವತಿ, ಮುಸ್ಲಿಂ ಯುವಕ ಆರಾಮಾವಾಗಿ ವಿಹರಿಸಬಹುದು.Sathya Meva Jayathe…

  Reply
 5. kumar

  naveen u have correctly pointed out the RSS philosophy,they need the lower caste for their own selfish purpose, and to keep the intrest ofthe brahmin community intact, the recent violence by HJV activist has shown that only people fromthe lower caste take part in violent actvities,while those of upper caste are not to be seen, vat hapnd to mahendra kumar of bajrangdal he is no where nw, think abt kalyan sing, uma bharathi, these RSS people haveused the lower caste people for their own slfish intrest, NArendra modi will also meet the same fat if BJPwins national election. by the way SHUSHRUT hw many intercaste marriage have bein arranged by RSS between a dalith and a upper caste people,by the way the incident naveen is a true incident buddy. i belive u must be hot headed guy, u wil realise wat RSS is in few years

  Reply
 6. Basavaraja Halli

  Kali kuntu kodigalige intaha Aalochanegalu Baruttave. Hindhu Hindhu Andu Samaja odeyuva ivarige Basunde Baruva Hage Janaru Nalku Bidabeku

  Reply
 7. ವಸಂತ

  ನವೀನ್ ಆರ್ಎಸ್ಎಸ್ ನ ದ್ವಂದ್ವವನ್ನು ಸರಿಯಾಗಿ ವಿಶ್ಲೇಷಣೆ ಮಾಡಿದ್ದಿರಿ. ಈ ಜನ ಹೇಳುವುದು ತತ್ವ ಮಾಡುವುದು ಅನಚಾರ. ಮೈಸೂರಿನಲ್ಲಿ ಕೆಲ ಪ್ರಗತಿಪರರು ಒಮ್ಮೆ ಹಿಂದೂ ಸಮಜೋತ್ಸವದ ಬಾವುಟ ತೆಗೆದರೆಂದು ಅಂದು ಬದುಕಿದ ವೇದಾಂತ ಹೆಮ್ಮಿಗೆ ಮತ್ತು ಲಿಂಗದೇವರು ಹಳೆಮನೆಯವರ ಬಗ್ಗೆ ಈ ಜನ ಅಸಹ್ಯವಾಗಿ ಮನಬಂದಂತೆ ಬೈತ್ತಿದ್ದರು. ಅದನ್ನು ನೋಡಿ ನಾನು ಈ ಜನ ಈ ನಾಗರಿಕ ಸಮಾಜದಲ್ಲಿ ಬದುಕಲು ಅಯೋಗ್ಯರು ಎಂದು ತಿಮಾ೵ನಿಸಿದ್ದೆ.
  ಸುಸ್ರುತ್ತರಂತ ಮನುವಾದಿಗಳ ಸಮಥ೵ಕರು ಯಾವಾಗ ಬುದ್ದಿ ಕಲಿಯುವರು?

  Reply
 8. shashikala rao

  Naveen avre jaathi bandanadinda horabaralu support eno kottidhdhiri,adre eradoo cummunitya thande thaayiyara MANAVOLISI maduve adare nantharada jeevana sulabha…..SVLPA CHINTHISI….

  Reply
 9. Vinod Bhagavati

  Superb article sir, you have done a great job.’Helod vedanta tinnod badanekayi” RSS & Bajarangadala are the best example for this………..

  Reply
 10. ವಿಶ್ವನಾಥ್

  ಹಿಂದೂ ಧರ್ಮದಲ್ಲಿರುವ ಮೇಲು ಕೀಳು ಜಾತಿ ತಾರತಮ್ಯವನ್ನು ಹಾಗೇ ಕಾಯ್ದುಕೊಂಡು ಹೋಗುವ ಉದ್ಧೇಶದಿಂದ ಹಾಗೂ ಕೆಳಜಾತಿಯವರನ್ನು ಮೇಲುಜಾತಿಯವರ ನಿಯಂತ್ರಣದಲ್ಲಿ ಇರಿಸುವುದಕ್ಕೊಸ್ಕರ ವಾರ್ಷಿಕವಾಗಿ ಹಿಂದೂ ಸಮಜೋತ್ಸವವನ್ನು ಏರ್ಪಡಿಸಲಾಗುತ್ತದೆ.

  Reply
 11. ಎಚ್. ಸುಂದರ ರಾವ್

  ನೀವು ಹೀಗೆ ಮದುವೆ ಮಾಡಿಸಿದ್ದು ಸಂತೋಷದ ವಿಷಯ. ಲೇಖನದ ಮೊದಲಿಗೆ ಜಾತಿವಿನಾಶದ ಪ್ರಸ್ತಾವ ಇರುವುದರಿಂದ, ಮತ್ತು ಇಂತಹ ಒಂಬತ್ತು ಮದುವೆಗಳನ್ನು ನೀವು ಮಾಡಿಸಿರುವುದರಿಂದ ಇಂಥ ಮದುವೆಗಳ ಮೂಲಕ ಜಾತಿವಿನಾಶ ಮಾಡುವುದೂ ನಿಮ್ಮ ಉದ್ದೇಶವಾಗಿದೆ ಎಂದು ಭಾವಿಸಿದ್ದೇನೆ.
  ಜಾತಿವಿನಾಶದ ಕುರಿತು ಇತ್ತೀಚೆಗೆ ಮಾತನಾಡುವವರು ಕಡಿಮೆಯಾಗಿದ್ದಾರೆ. ಸರಕಾರವೂ ಜಾತಿಯನ್ನು ಗುರುತಿಸುತ್ತದೆ ಇದು ಸರಕಾರಿ ಸೌಲಭ್ಯಗಳು ಸಿಗಲು ಮತ್ತು ಸಿಗದಿರಲು ಮಾನದಂಡವಾಗಿರುವುದರಿಂದ, ಜಾತಿ ದಿನದಿನಕ್ಕೂ ಹೆಚ್ಚು ಗಟ್ಟಿಯಾಗುತ್ತ ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ನಿಮ್ಮ ಉದ್ದೇಶ ಒಳ್ಳೆಯದೇ.
  ಆದರೆ ಅಂತರ್ಜಾತೀಯ ವಿವಾಹಗಳ ಮೂಲಕ ಜಾತಿನಾಶವಾಗುತ್ತದೆ ಎನ್ನುವುದು ಕಷ್ಟ. ಏಕೆಂದರೆ ನಮ್ಮ ದೇಶದಲ್ಲಿ ವಿವಾಹ ಮತ್ತು ಆಸ್ತಿಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ಜನಾಂಗದವರಿಗೆ ಬೇರೆ ಬೇರೆ ಕಾನೂನುಗಳಿವೆ. ನೀವು ಮಾಡಿಸಿದ ಈ ಮದುವೆಯೂ ಹಿಂದೂ ವಿವಾಹ ಕಾಯಿದೆಯ ಅನ್ವಯ ನೋಂದಣಿಯಾಗಿರುವ ಸಾಧ್ಯತೆ ಹೆಚ್ಚು. (ಅಥವಾ ಸ್ಪೆಷಲ್ ಮ್ಯಾರೇಜಸ್ ಆಕ್ಟ್ ಪ್ರಕಾರ ಆಗಿರುತ್ತದೆ. ಆ ಸಾಧ್ಯತೆ ತುಂಬ ಕಡಿಮೆ. ಒಂದು ವೇಳೆ ಹಾಗೆ ಆಗಿದ್ದರೂ ನನಗೆ ಗೊತ್ತಿರುವಂತೆ ಅಲ್ಲೂ ಜಾತಿ, ಜನಾಂಗಗಳನ್ನು ಪೂರ್ತಿ ಮೀರುವುದಿಲ್ಲ.) ಎಲ್ಲ ಭಾರತೀಯರಿಗೂ ಅನ್ವಯವಾಗುವ ಒಂದೇ ಕಾಯಿದೆಯ ಬೆಂಬಲ ಇಲ್ಲದಿದ್ದರೆ, ಜಾತಿವಿನಾಶದ ಕುರಿತು ಮಾಡುವ ಪ್ರಯತ್ನಗಳು ಯಾವ ಕಾಲಕ್ಕೂ ಗುರಿ ಮುಟ್ಟುವುದಿಲ್ಲ.
  ಮದುವೆ ಹಿಂದೂ ಸಂಪ್ರದಾಯದ ಪ್ರಕಾರ ಕಾಶೀ ಸದನದಲ್ಲಿ ಆಯಿತು ಎಂದು ನೀವೇ ಹೇಳಿದ್ದೀರಿ. ಎಂದರೆ ಅಪ್ಪಟ ಬ್ರಾಹ್ಮಣ ಪುರೋಹಿತರು ಮಂತ್ರಗಳನ್ನು ಹೇಳಿ ಮದುವೆ ಮಾಡಿಸಿದ್ದಾರೆ. ಬಹುಶಃ ವಧುವಿಗೆ ವರನಿಂದ ತಾಳಿಯನ್ನೂ ಕಟ್ಟಿಸಿದ್ದಾರೆ. ನರೇಂದ್ರ ನಾಯಕರಂಥ ಕಟ್ಟಾ ವಿಚಾರವಾದಿಗಳು ಇಂಥ ಮದುವೆಯ ಜವಾಬ್ದಾರಿ ವಹಿಸಿದ್ದು ನನಗೆ ತಮಾಷೆಯಾಗಿ ಕಾಣುತ್ತದೆ! “ಆದರೆ ಇವರೆಲ್ಲರನ್ನೂ ನಿಯಂತ್ರಿಸುವುದು ಆರ್.ಎಸ್.ಎಸ್‌ನ ಭಟ್ಟರು. ಎಂತಹ ಕೆಳವರ್ಗದ ಮಂದಿ ನಾಯಕರಾದರೂ ಭಟ್ಟರ ಪಾಲಿಗೆ ಅವರೆಲ್ಲಾ ಕಾರ್ಯಕರ್ತರೇ !” ಎಂದೆಲ್ಲ ಬರೆಯುವ ನೀವು ಒಂದು ಮದುವೆ ಮಾಡಿಸಲು ಅದೇ ಭಟ್ಟರುಗಳ ಬುಡಕ್ಕೇ ಹೋಗಬೇಕಾಗಿತ್ತೆ? ನೀವು ಮಾಡಿಸಿದ ಮದುವೆಯ ಕ್ರಮದಲ್ಲಿ ಜಾತಿವಿನಾಶದ ಯಾವ ಅಂಶ ಇದೆ?
  ನನ್ನ ಅಭಿಪ್ರಾಯದಲ್ಲಿ ಇಂಥ ಮದುವೆಗಳನ್ನು ಮಾಡಿಸಲು ಕುವೆಂಪು ಅವರ ಮಂತ್ರ ಮಾಂಗಲ್ಯ ಅತ್ಯಂತ ಶ್ರೇಷ್ಠ ವಿಧಾನ. ಅದರ ವಿವರಗಳು ಅಂತರ್ಜಾಲದಲ್ಲಿಯೂ ಲಭ್ಯವಿದೆ. ನೀವು ಈಗಾಗಲೇ ನೋಡಿರದಿದ್ದರೆ ದಯವಿಟ್ಟು ಒಮ್ಮೆ ಓದಿ ನೋಡಿ.
  ಹೋಂ ಸ್ಟೇ ಗಲಾಟೆಯ ಹಿನ್ನೆಲೆಯಲ್ಲಿ ಅನೇಕರು ಪೋಲೀಸರು ಆರೆಸ್ಸೆಸ್ಸಿನವರ ನಿಯಂತ್ರಣದಲ್ಲಿದ್ದಾರೆಂದು ದೂರಿದ್ದರು. ಈ ಪ್ರಕರಣದಲ್ಲಿ ಹಾಗೇನೂ ಇರುವುದು ಕಾಣಲಿಲ್ಲ. ಪೋಲೀಸರು ನಿಮ್ಮೊಂದಿಗೆ ಸಹಕರಿಸಿ ಕೆಲಸ ಮಾಡಿದ್ದಾರೆ. ಇನ್ನು ಮದುವೆ ನಿಲ್ಲಿಸಲು ಪ್ರಯತ್ನಪಟ್ಟವರಲ್ಲಿ ಹುಡುಗಿಯ ಕಡೆಯ ನೆಂಟರೂ, ಅವಳ ತಂದೆ ತಾಯಿಗಳೂ ಇದ್ದಾರೆ. ಅವರು ಹಾಗೆ ಮಾಡುವುದು, ಅವರ ಹಿನ್ನೆಲೆಯಲ್ಲಿ ಸಹಜವೇ. ಆದರೆ ಹಾಗೆ ನಿಲ್ಲಿಸುವವರಿಗೆ ಬೆಂಬಲವಾಗಿ ಯಾವ ಭಟ್ಟರ ಪಾತ್ರವೂ ಕಾಣುವುದಿಲ್ಲ. ಬದಲಿಗೆ (ದಕ್ಷಿಣೆ ತೆಗೆದುಕೊಂಡು) ಮದುವೆ ಮಾಡಿಸಿದ್ದರಲ್ಲಿ ಅವರ ಪಾತ್ರ ಕಾಣುತ್ತಿದೆ!

  Reply
  1. anand prasad

   ಈ ಮದುವೆ ಜಾತಿವಿನಾಶಕ್ಕಾಗಿ ಮಾಡಿಸಿದ್ದಲ್ಲ. ಪ್ರೇಮಿಸಿದ ಜೀವಗಳನ್ನು ಒಂದು ಮಾಡಿಸಲು ಪ್ರಗತಿಪರರು ಧೈರ್ಯ ನೀಡಿದ್ದಾರೆಯೇ ಹೊರತು ಜಾತಿವಿನಾಶ ಇದರ ಪ್ರಧಾನ ಉದ್ಧೇಶ ಆಗಿರಲಿಲ್ಲ. ಹಾಗಾಗಿ ಈ ಮದುವೆಯನ್ನು ಸಂಪ್ರದಾಯದ ಪ್ರಕಾರ ಮಾಡಿಸಿದ್ದರೆ ತೊಂದರೆಯೇನೂ ಇಲ್ಲ. ಅಸಂಪ್ರದಾಯಿಕವಾಗಿ ಮದುವೆ ಮಾಡಿಕೊಳ್ಳುವ ಮನೋಸ್ಥಿತಿ, ಪ್ರಬುದ್ಧ ಚಿಂತನೆ ಮದುವೆ ಆಗುವವರಲ್ಲಿ ಇದ್ದರೆ ಅಂಥ ಮದುವೆ ಮಾಡಿಸಬಹುದಿತ್ತೇನೋ. ಬಹುಶ: ಅಂಥ ಮದುವೆ ಆಗುವುದು ಅವರಿಗೆ ಇಷ್ಟವಿರಲಿಲ್ಲ ಏಕೆಂದರೆ ಅವರು ಬೆಳೆದು ಬಂದ ಪರಿಸರ ಹಾಗಿರಬಹುದು.

   Reply
   1. ಎಚ್. ಸುಂದರ ರಾವ್

    ಜಾತಿ ವಿನಾಶವೂ ಒಂದು ಉದ್ದೇಶ ಹೌದೆ ಅಲ್ಲವೆ ಎನ್ನುವುದನ್ನು ಸ್ವತಃ ನವೀನರು ಸ್ಪಷ್ಟೀಕರಿಸಿದರೆ ಒಳ್ಳೆಯದು. ಅವರು ಕೇವಲ ಧೈರ್ಯ ಕೊಡಲಿಲ್ಲ, ಮದುವೆಗೆ ಬೇಕಾದ ವ್ಯವಸ್ಥೆ ಮಾಡಿ ಮದುವೆ ಮಾಡಿಸಿದ್ದಾರೆ. ಹೀಗೆ ಮಾಡುವುದರ ಹಿಂದೆ ಉದಾತ್ತ ಉದ್ದೇಶಗಳಿಲ್ಲದಿದ್ದರೆ ಇದೊಂದು ಬಿಸಿನೆಸ್ ಆಗಲು ಹೆಚ್ಚು ಸಮಯ ಕಾಯಬೇಕಿಲ್ಲ.
    ಇಷ್ಟರಮೇಲೂ ಬಾಯಲ್ಲಿ ಭಟ್ಟರುಗಳನ್ನು ತೆಗಳುತ್ತ, ಕೈಯಲ್ಲಿ ಅವರಿಗೆ ದಕ್ಷಿಣೆ ಕೊಡುವುದು ಸರಿ ಎನ್ನುವುದಾದರೆ ನಾನೇನೂ ಹೇಳಲಾರೆ.

    Reply
 12. ಪ್ರಜೆ

  ಪ್ರಗತಿಪರ, ಚಿಂತಕ ಅನ್ನಿಸಿಕೊಳ್ಳಬೇಕಿದ್ರೆ ಏನು ಮಾಡಬೇಕು? ಆರ್ಎಸ್ಎಸ್ ಮತ್ತು ಬ್ರಾಹ್ಮಣರನ್ನು ಬಾಯಿಗೆ ಬಂದಂತೆ ಬೈಬೇಕು; ಅಗತ್ಯವಿಲ್ಲದಿದ್ದರೂ…ಹೀಗಂತ ಸ್ನೇಹಿತನೊಬ್ಬ ಹೇಳ್ತಿದ್ದದ್ದು ನೆನಪಾಯ್ತು.
  As usual, ನಾನೊಬ್ಬ ಪ್ರಗತಿಪರ-ಸಮಾಜ ಸುಧಾರಕ (ಅಂಬೇಡ್ಕರ್​ರನ್ನೂ ಮೀರಿದ?) ಅನ್ನುವ ಲೇಖಕರ ಭಾವ ವಾಕ್ಯ ವಾಕ್ಯದಲ್ಲೂ ವಿಜೃಂಭಿಸಿದೆ.
  ನಮ್ಮ ದೇಶದಲ್ಲಿ ಕೇವಲ ಮೇಲ್ಜಾತಿಯವರಷ್ಟೇ ಅಲ್ಲ, ಸಮಾಜದಲ್ಲಿ ಅತ್ಯಂತ ಕೆಳ ಜಾತಿ ಅಂತ ಗುರುತಿಸ್ಪಟ್ಟವರಲ್ಲೂ ತಮ್ಮ ಜಾತಿಯ ಗಡಿ ಮೀರಲಾಗದಂಥ ಮನಸ್ಥಿತಿಯಿದೆ.(ಲೇಖನದಲ್ಲೇ ಇರುವ ಉದಾಹರಣೆ ಕೊಟಾರಿ-ದಲಿತ) ಜಾತಿ ವಿನಾಶ ಇತ್ಯಾದಿಗಳ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಅದೆಷ್ಟೋ ಮಂದಿ ತಮ್ಮ ಸ್ವಂತ ಅಕ್ಕ ತಂಗಿಯರ ಮದುವೆ ವಿಷಯ ಬಂದಾಗ ಜಾತಿವಾದಿಗಳನ್ನೂ ಮೀರಿಸುವ ಅಟಾಟೋಪ ತೋರಿಸಿದ್ದನ್ನ ಸ್ವತಃ ನಾನೇ ನೋಡಿದ್ದೇನೆ.
  ಮೇಲಿನ ಪ್ರಕರಣದಲ್ಲೂ ಅಷ್ಟೇ, ಕಟು ವಿರೋಧ ಬಂದಿದ್ದು ಮನೆಯವರಿಂದಲೇ.ಮನೆಯ ಸದಸ್ಯ (ಭಜರಂಗದಳದ ಮುಖಂಡನೆ ಹೆಂಡತಿಯ ಕಡೆಯಿಂದ ಚೈತನ್ಯ ಸಂಬಂಧಿಯಾಗಬೇಕು…)ಅಕಸ್ಮಾತ್​ ಭಜರಂಗದಳದ ಬದಲು ಎಡರಂಗದಲ್ಲಿದ್ದರೂ ಅದೇ ವರ್ತನೆ ತೋರುತ್ತಿದ್ದ. ಹಾಗಾಗಿ ಭಜರಂಗದಳದ ಪ್ರಸ್ತಾಪ ಅತಾರ್ಕಿಕ ಮತ್ತು ಅನವಶ್ಯಕ. ಇನ್ನೂ ಇಂಟರೆಸ್ಟಿಂಗ್​ ವಿಷ್ಯ ಅಂದ್ರೆ, ಜಾತಿ ಇಲ್ಲದೆ ಹೋದ್ರೆ `ಎಡ` ಮತ್ತು `ಬಲ` ಎರಡೂ ನಾಶವಾಗೋದು ಗ್ಯಾರಂಟಿ. ಯಾಕಂದ್ರೆ ಇವ್ರಿಬ್ರ ಅಸ್ಥಿತ್ವಕ್ಕೂ ಇಂಥದ್ದೊಂದು ಹಗ್ಗ ಬೇಕು.
  ಇಷ್ಟಕ್ಕೂ ಬದಲಾಗಬೇಕಿರುವುದು ನಮ್ಮೆಲ್ಲರ ಮನೋಧೋರಣೆಗಳು.ದುರಂತ ಅಂದ್ರೆ ಅದನ್ನ ಮಾಡಬಲ್ಲಂಥ ಶಿಕ್ಷಣವ್ಯವಸ್ಥೆಯಾಗಲೀ, ಸಾಮಾಜಿಕ ಪರಿಸ್ಥಿತಿಯಾಗಲೀ ನಮ್ಮ ದೇಶದಲ್ಲಿ ಇಲ್ಲ.

  Reply
 13. sushrutha

  Praje yavare, sariyaagi heliddeeri. Soorinje yavarige thaanobba pragathipara emba ellarigoo kaaniso label beku. adakke e chata. Beko bedavo RSS nnu bayyabeku. thanmoolaka thaanobba mahaan antha ulidavaru kareyabeku anno bayake. Soorinje yavarige e lekhana vannu yaarannuu bayyade bareyabahudithu. aaga adondu uthama lekhana aagiruthithu. Hinde TK Dayanand saamaajika avyavasthe ya “Mala horuva” vishaya da kurithanthe adeshtu maarmika lekhana barediddaru. Yaavudakkoo color kannadaka ilisi jagathu nodidare innashtu sundara lekhana bandeethu!!

  Reply
 14. Raksha Chowta, Attavara, Mangalore

  ಈ ಚರ್ಚೆಯ ಭರಾಟೆಯಲ್ಲಿ ಲೇಖಕರು ತುಳುನಾಡಿನಲ್ಲಿರುವ ’ಕೊಟ್ಟಾರಿ’ ಜಾತಿಯ ಬಗ್ಗೆ ತಪ್ಪಾದ ಮಾಹಿತಿಯೊಂದನ್ನು ನೀಡಿದ್ದಾರೆ. ತುಳುನಾಡಿನ ಕೊಟ್ಟಾರಿಗಳನ್ನು ’ಕಂಚಿಗಾರರು’ ಎಂದು ಕರೆದಿರುವ ಲೇಖಕರ ಅಭಿಪ್ರಾಯ ಸಂಪೂರ್ಣವಾಗಿ ತಪ್ಪು. ಈ ’ಕೊಟ್ಟಾರಿ’ ಪದದ ವ್ಯುತ್ಪತ್ತಿ ’ಕೊಟ್ಟಾರ’ದ ಜೊತೆ ಸಂಬಂಧ ಹೊಂದಿದೆ. ’ಕೊಟ್ಟಾರ’ ಎಂದರೆ ಉಗ್ರಾಣವೂ ಹೌದು. ಕೊಟ್ಟಾರದ ಉಸ್ತುವಾರಿಯನ್ನು ನೋಡುವವರೇ ಕೊಟ್ಟಾರಿಗಳು. ಲೇಖಕರು ಯಾವ ಆಧಾರಗಳಿಂದ ಇವರನ್ನು ಕಂಚಿಗಾರರು ಎಂದು ಕರೆದಿರುವರೋ ತಿಳಿಯದು. ಕಂಚಿಗಾರರು ಎಂಬ ಪ್ರತ್ಯೇಕ ಜಾತಿ ತುಳುನಾಡಿನಲ್ಲಿದೆ. ಕಂಚಿನ ಕೆಲಸ ಮಾಡುವ ಇವರನ್ನು ’ಮೂಚಾರಿ’ ಎಂದು ಕರೆಯುವುದು ವಾಡಿಕೆ(ಮರದ ಅಥವಾ ಲೋಹದ ಕೆಲಸ ಮಾಡುವವರನ್ನು ’ಆಚಾರಿ’ ಎಂದು ಕರೆಯುವಂತೆ). ಕಂಚಿಗಾರರಾದ ’ಮೂಚಾರಿ’ಗಳನ್ನೇ ಕೊಟ್ಟಾರಿ ಎಂದು ಕರೆದಿರುವ ಲೇಖಕರ ಹೇಳಿಕೆ ಸಂಪೂರ್ಣವಾಗಿ ಸತ್ಯಕ್ಕೆ ದೂರವಾದುದು.
  ಕೊಟ್ಟಾರ ಎಂದರೆ ವಸ್ತು, ಸಾಮಾನು-ಸರಂಜಾಮುಗಳನ್ನು ದಾಸ್ತಾನು ಇಡುವ ಜಾಗ. ತುಳುನಾಡಿನಲ್ಲಿ ಹಿಂದೆ ಜೈನರ ಬೀಡು, ಬಂಟರ ಗುತ್ತಿನ ಮನೆಯ ಭಂಡಸಾಲೆಯನ್ನು ಕೊಟ್ಟಾರ ಎಂದೇ ಕರೆಯುತ್ತಿದ್ದರು. ಆಯಾ ಊರಿನ ಜನರು ತಮ್ಮ ಪಾಲಿನ ಗೇಣಿಯನ್ನು ಈ ಕೊಟ್ಟಾರದಲ್ಲಿ ಒಪ್ಪಿಸುತ್ತಿದ್ದರು. ಹಿಂದೆ ದೇವಸ್ಥಾನಗಳಲ್ಲೂ ದೇವರ ನಿತ್ಯ ಪೂಜಾ ಕಾರ್ಯ ಹಾಗೂ ಇತರ ಉತ್ಸವಗಳಿಗೆ ಅಗತ್ಯವಾದ ಸಾಮಾಗ್ರಿಗಳನ್ನು ಸಂಗ್ರಹಿಸಿಡಲು ಆಯಾ ದೇವಸ್ಥಾನಗಳಿಗೆ ಕೊಟ್ಟಾರ ಇರುತ್ತಿತ್ತು. ಈ ಕೊಟ್ಟಾರದ ಉಸ್ತುವಾರಿಯನ್ನು ನೋಡುತ್ತಿದ್ದವನು ಅಥವಾ ವ್ಯವಸ್ಥಾಪಕನಂತೆ ಕಾರ್ಯ ನಿರ್ವಹಿಸುತ್ತಿದ್ದನು ಕೊಟ್ಟಾರಿ. ಇದರ ಬಗೆಗೆ ಅಧಿಕೃತವಾದ ದಾಖಲೆಗಳಿವೆ. ಇದೊಂದು ಸಂಪೂರ್ಣವಾಗಿ ವೃತ್ತಿ ಆಧಾರಿತ ಕುಲನಾಮ. ಇಂದಿಗೂ ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಧರ್ಮಸ್ಥಳದಲ್ಲಿ ಉಗ್ರಾಣ ಅಥವಾ ಕೊಟ್ಟಾರವನ್ನು ನೋಡಿಕೊಳ್ಳುವವರು ಇದೇ ಕೊಟ್ಟಾರಿಗಳು.
  ಸಹಜವಾಗಿ ದೇವಸ್ಥಾನದ ಬಳಿ, ಬೀಡು-ಗುತ್ತು ಮನೆಗಳಲ್ಲಿ ಇರುತ್ತಿದ್ದ ಕೊಟ್ಟಾರಿಗಳು ಬ್ರಾಹ್ಮಣ, ಜೈನ, ಬಂಟರ ಆಪ್ತ ಹಾಗೂ ನಂಬಿಕಸ್ಥ ವಲಯದಲ್ಲಿ ಗುರುತಿಸಿಕೊಳ್ಳುತ್ತಿದ್ದರು. ಜೈನ, ಬಂಟ-ಬಾರಗರ ಹಾಗೂ ಈ ಕೊಟ್ಟಾರಿಗಳ ನಡುವೆ ಎಷ್ಟೊಂದು ಅನ್ಯೋನ್ಯತೆ ಇತ್ತೆಂದರೆ ಅವರ ಮನೆಯಲ್ಲಿನ ಹುಟ್ಟು-ಮರಣಗಳ ಸೂತಕ ಕೊಟ್ಟಾರಿಗಳಿಗೂ ಅನ್ವಯಿಸುತ್ತಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಅದೇ ರೀತಿಯಲ್ಲಿದ್ದಾರೆ. ಹೀಗೆಂದ ಮಾತ್ರಕ್ಕೆ ಈ ಜಾತಿಯನ್ನು ಹಿಂದುಳಿದ ಅಥವಾ ಅಸಂಘಟಿತ ಸಮುದಾಯವೆನ್ನುವುದು ತೀರಾ ಬಾಲಿಶ.

  Reply
 15. Raksha Chowta, Attavara, Mangalore

  ಲೇಖಕರಿಗೆ ಗೊತ್ತಿಲ್ಲದೆ ಇರುವ ಇನ್ನೊಂದು ವಿಷಯವೆಂದರೆ 1956ರಲ್ಲೇ ’ಕೊಟ್ಟಾರಿ ಯಾನೆ ಕೊಠಾರಿ ಸಂಘ’ ಅಂದಿನ ಬಂಟರ ಯಾನೆ ನಾಡವರ ಸಂಘದ ಮುಂದಾಳುಗಳ ನೇತೃತ್ವದಲ್ಲಿ (ಕೊಡಿಯಾಲಗುತ್ತು ದಿ.ಶಂಕರ ಆಳ್ವರು ಪ್ರಮುಖರು) ಮಂಗಳೂರಿನಲ್ಲೆ ಸ್ಥಾಪನೆಗೊಂಡಿದೆ. ಇಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಹಾನಗರ ಪಾಲಿಕೆ, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರಾಗಿ ಕೊಟ್ಟಾರಿಗಳು ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ಪ್ರತಿಪಕ್ಷ ನಾಯಕರಾಗಿ, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಅಧ್ಯಕ್ಷರಾಗಿಯೂ ಕೊಟ್ಟಾರಿಗಳು ಕಾರ್ಯ ನಿರ್ವಹಿಸಿದ್ದಾರೆ. ರಾಜ್ಯ ರಾಜಕಾರಣದ ಮಟ್ಟಿಗೆ ಹೇಳುವುದಾದರೆ 2004ರಲ್ಲಿ ವಿಟ್ಲ ವಿಧಾನ ಸಭಾ ಕ್ಷೇತ್ರದಿಂದ ಓರ್ವ ಕೊಟ್ಟಾರಿ ಶಾಸಕನಾಗಿ ಆಯ್ಕೆಯಾಗಿದ್ದಾರೆ. ತಳಮಟ್ಟದಿಂದ ರಾಜಕೀಯ ಅನುಭವ ಹೊಂದಿರುವ ಇವರು 2009-12ರ ಸಾಲಿಗೆ ರಾಜ್ಯದ ಆಡಳಿತಾರೂಢ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
  ಸತ್ಯ ಸಂಗತಿ ಹೀಗಿದ್ದರೂ ಪ್ರಸ್ತುತ ಲೇಖಕರು ತುಳುನಾಡಿನ ಒಂದು ’ಸೌಮ್ಯವಾದಿ’ ಜಾತಿಯ ಮೂಲವನ್ನೇ ತಪ್ಪಾಗಿ ಅರ್ಥೈಸಿ ಈ ಬ್ಲಾಗ್‍ನಲ್ಲಿ ಪ್ರಕಟಿಸಿರುವುದು ಆ ಜಾತಿಯವರ ಗಮನಕ್ಕೆ ಬಂದಿಲ್ಲ ಅನ್ನಿಸುತ್ತಿದೆ. ಇದಕ್ಕೂ ಕಾರಣ ಇಲ್ಲದಿಲ್ಲ. ಅದೇನೆಂದರೆ ತುಳುನಾಡಿನಲ್ಲಿ ಈ ಕೊಟ್ಟಾರಿಗಳ ಜನಸಂಖ್ಯೆ ಹತ್ತು ಸಾವಿರವೂ ದಾಟಿಲ್ಲ !!!!!!! ಆದರೂ ಇದೊಂದು ಬ್ರಾಹ್ಮಣ-ಜೈನ-ಬಂಟ ಜನಾಂಗಗಳ ಅತಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಒಂದು ಸಂಘಟಿತ ಸಮುದಾಯ

  Reply
 16. shreepadu

  ಹ ಹ ರಕ್ಷಾ ಅವರೇ ., ಸತ್ಯಕ್ಕೆ ಟಿ ಅರ್ ಪಿ ಹುಟ್ಟಿಸುವ ಗುಣವಿಲ್ಲ ಬಿಡಿ 🙂

  Reply

Leave a Reply

Your email address will not be published.