Daily Archives: August 8, 2012

ಮತ್ತೆ ವಿರೋಧಪಕ್ಷದ ನಾಯಕರಾಗಿ ಯಡಿಯೂರಪ್ಪ

– ಮಹೇಂದ್ರ ಕುಮಾರ್

ಯಡಿಯೂರಪ್ಪ ಬಾಯಿ ತೆರೆದರೆಂದರೆ ವಿರೋಧ ಪಕ್ಷಗಳಿಗೆಲ್ಲ ಹಿಗ್ಗು. ಬಿಜೆಪಿಯೊಳಗೆ ಸಣ್ಣಗೆ ನಡುಕ. ಇದೀಗ ಸುಮಾರು 15 ದಿನಗಳ ಬಳಿಕ, ಯಡಿಯೂರಪ್ಪ ಬಾಯಿ ತೆರೆದಿದ್ದಾರೆ. ಬಿಜೆಪಿ ಸರಕಾರ ಮುಖ ಮುಚ್ಚಿಕೊಂಡಿದೆ. ತನ್ನದೇ ಸರಕಾರದ ವಿರುದ್ಧ ಅವರು ಕೆಂಡ ಕಾರಿದ್ದಾರೆ. ತನ್ನ ಸರಕಾರದ ವಿರುದ್ಧ ಅವರು ಆಕ್ರೋಶವ್ಯಕ್ತಪಡಿಸುತ್ತಿರುವುದು ಇದೇನೂ ಮೊದಲಲ್ಲ. ಯಾವಾಗ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೋ ಅಲ್ಲಿಂದ ಪದೇ ಪದೇ ಬಿಜೆಪಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಆದರೆ ಸದನದಲ್ಲಿ ಕುಳಿತು ತನ್ನದೇ ಸರಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿರುವುದು ಮಾತ್ರ, ರಾಜ್ಯದ ಇತಿಹಾಸದಲ್ಲಿ ಒಂದು ದಾಖಲೆಯೇ ಸರಿ. ಯಡಿಯೂರಪ್ಪ ರಾಜ್ಯ ಸರಕಾರದ ವೈಫಲ್ಯದ ಕುರಿತಂತೆ ಹರಿಹಾಯ್ದರೆ ಅದನ್ನು ವಿರೋಧ ಪಕ್ಷಗಳು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.ಸರಕಾರವನ್ನು ಪಕ್ಷಾತೀತವಾಗಿ ವಿಮರ್ಶಿಸುವುದು, ಟೀಕಿಸುವುದು ರಾಜ್ಯದ ಹಿತದೃಷ್ಟಿಯಿಂದ ಸರಿಯಾದ ಕ್ರಮವೇ ಆಗಿದೆ. ಕೆಟ್ಟ ಹಾದಿಯನ್ನು ಹಿಡಿದರೆ ತನ್ನದೇ ಸರಕಾರವನ್ನೂ ಬಿಡದೆ ಟೀಕಿಸುವಾತ ನಿಜವಾದ ನಾಯಕ.

ಈ ನಿಟ್ಟಿನಲ್ಲಿ ಯಡಿಯೂರಪ್ಪ ಅಭಿನಂದನಾರ್ಹರು ನಿಜ. ಆದರೆ ಒಂದು ಸತ್ಯವಿದೆ. ಬರ ತಾಂಡವವಾಡುತ್ತಿರುವಾಗ ಸರಕಾರ ನಿಷ್ಕ್ರಿಯವಾಗಲು ಸದಾನಂದ ಗೌಡರ ಬಳಗ ಎಷ್ಟರಮಟ್ಟಿಗೆ ಕಾರಣವೋ, ಯಡಿಯೂರಪ್ಪ ಬಣವೂ ಅಷ್ಟೇ ಮಟ್ಟಿಗೆ ಕಾರಣ. ಬಿಜೆಪಿ ಅಧಿಕಾರಕ್ಕೆ ಬಂದ ಮೊದಲ 3 ವರ್ಷದ ಅವಧಿಯನ್ನು ಆಳಿದ್ದು ಯಡಿಯೂರಪ್ಪ.

ಆದರೆ ಈ ಅವಧಿಯಲ್ಲೂ ಅವರಿಗೆ ಆಳುವುದಕ್ಕೆ ಅವಕಾಶ ನೀಡುವ ಬದಲು ಅಳುವುದಕ್ಕೇ ಹೆಚ್ಚು ಅವಕಾಶ ಸಿಕ್ಕಿತು. ಒಂದು ದಿನವೂ ಅವರನ್ನು ನೆಮ್ಮದಿಯಿಂದ ಆಳಲು ಗಣಿ ರೆಡ್ಡಿಗಳು ಮತ್ತು ಕೇಂದ್ರದ ವರಿಷ್ಠರು ಅವಕಾಶ ನೀಡಲಿಲ್ಲ. ತಾನು ಅಧಿಕಾರದಿಂದ ಕೆಳಗಿಳಿದದ್ದೇ, ಅವರೂ ಅದೇ ತಂತ್ರವನ್ನು ಅನುಸರಿಸತೊಡಗಿದರು. ಉಳಿದವರನ್ನೂ ಆಳುವುದಕ್ಕೆ ಬಿಡೆ ಎಂದು ಯಡಿಯೂರಪ್ಪ ಹಟ ತೊಟ್ಟರು. ಪರಿಣಾಮವಾಗಿ ಒಂದು ವರ್ಷದ ಒಳಗೆ ಸದಾನಂದ ಗೌಡರು ಅಧಿಕಾರದಿಂದ ಕೆಳಗಿಳಿಯಬೇಕಾಯಿತು.

ಈ ನಾಲ್ಕು ವರ್ಷಗಳ ಅವಧಿಯಲ್ಲಿ ಬಿಜೆಪಿ ಸರಕಾರ ಕನಿಷ್ಠ ಒಂದು ವಾರ ಸರಿಯಾಗಿ ಆಡಳಿತ ನಡೆಸಿದರೆ ಅದೇ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ ಬರ, ರೈತರ ಸಮಸ್ಯೆ ಇತ್ಯರ್ಥವಾಗುವುದಾದರೂ ಹೇಗೆ? ಒಂದು ರೀತಿಯಲ್ಲಿ ಕನ್ನಡಿಯನ್ನು ನೋಡಿ ಉಗುಳಿದಂತಾಗಿದೆ ಯಡಿಯೂರಪ್ಪರು ಸದನದಲ್ಲಿ ತೋರಿಸಿದ ಆಕ್ರೋಶ. ಉಗಿದದ್ದು ಈಶ್ವರಪ್ಪ ಬಳಗಕ್ಕಾದರೂ, ಅದರ ಹನಿಗಳು ಯಡಿಯೂರಪ್ಪರ ಮುಖವನ್ನೂ ಅಪ್ಪಳಿಸಿದೆ. ನಿಜಕ್ಕೂ ಯಡಿಯೂರಪ್ಪ ಬರದ ಕುರಿತಂತೆ, ರೈತರ ಕುರಿತಂತೆ ಕಾಳಜಿಯನ್ನು ಹೊಂದಿದ್ದರೆ ತನ್ನ ಬಣ ರಾಜಕೀಯವನ್ನು ಪಕ್ಕಕ್ಕಿಟ್ಟು ಬರಗಾಲ ಪ್ರದೇಶದಲ್ಲಿ ತಿರುಗಾಡುತ್ತಿದ್ದರು. ಸದಾನಂದ ಗೌಡರಿಗೆ ಆಳ್ವಿಕೆ ನಡೆಸಲು ಅವಕಾಶವನ್ನು ನೀಡುತ್ತಿದ್ದರು.

ಸರಕಾರ ಇಂದು ವಿಫಲವಾಗಿ ನಿಂತಿದ್ದರೆ ಅದಕ್ಕೆ ಬಿಜೆಪಿಯ ಎಲ್ಲ ನಾಯಕರೂ ಕಾರಣರು. ಯಡಿಯೂರಪ್ಪರ ವೈಫಲ್ಯಕ್ಕೆ ಈಶ್ವರಪ್ಪ ಗುಂಪು ಹೇಗೆ ಕಾರಣವೋ, ಹಾಗೆಯೇ ಇಂದು ಸದಾನಂದಗೌಡರ ವೈಫಲ್ಯಕ್ಕೆ ಯಡಿಯೂರಪ್ಪ ಗುಂಪು ಕಾರಣ. ಆದುದರಿಂದ ಯಡಿಯೂರಪ್ಪರು ಆಕ್ರೋಶದಿಂದ ಆಡಿದ ಮಾತುಗಳಲ್ಲಿ ಸತ್ಯವಿದೆ. ಅವರು ತೆರೆದಿಟ್ಟ ನಾಡಿನ ಸ್ಥಿತಿಗೆ ಅವರೂ ಕೂಡ ಕಾರಣರು ಎನ್ನುವುದು ಇನ್ನೊಂದು ಸತ್ಯ.

ಯಡಿಯೂರಪ್ಪ ಅವರು ಸದನದಲ್ಲಿ ಘರ್ಜಿಸಿರುವ ರೀತಿ ನೋಡಿದರೆ ಇನ್ನೂ ಅವರ ಆಕ್ರೋಶ ತಣಿದಿಲ್ಲ. ಶೆಟ್ಟರ್ ಕುರಿತಂತೆಯೂ ಅವರು ಅಸಹನೆಯನ್ನು ಹೊಂದಿದ್ದಾರೆ ಎನ್ನುವ ಅಂಶ ಎದ್ದು ಕಾಣುತ್ತದೆ. ಸರಕಾರವನ್ನು ಅದೆಷ್ಟು ಹೀನಾಯವಾಗಿ ನಿಂದಿಸಿದ್ದಾರೆಂದರೆ, ವಿರೋಧ ಪಕ್ಷವೂ ಇಷ್ಟು ಆಕ್ರೋಶವನ್ನು ಈವರೆಗೆ ವ್ಯಕ್ತಪಡಿಸಿಲ್ಲ. ಯಡಿಯೂರಪ್ಪ ಈ ಪರಿ ವ್ಯಗ್ರರಾಗುವುದಕ್ಕೆ ರೈತರ ಮೇಲೆ ಹುಟ್ಟಿದ ಅನಿರೀಕ್ಷಿತ ಪ್ರೀತಿ ಎನ್ನುವುದನ್ನು ನಂಬುವಷ್ಟು ಮುಗ್ಧರಲ್ಲ ನಾಡಿನ ಜನತೆ. ವರಿಷ್ಠರ ವಿರುದ್ಧ ಮತ್ತೊಂದು ಯುದ್ಧ ಹೂಡುವುದಕ್ಕೆ ಯಡಿಯೂರಪ್ಪ ಸಿದ್ಧರಾಗುತ್ತಿರುವ ಸೂಚನೆಯಿದು.

ಈಗಾಗಲೇ ಯಡಿಯೂರಪ್ಪರ ಟೀಕೆಯನ್ನು ಸದಾನಂದ ಗೌಡ ಖಂಡಿಸಿದ್ದಾರೆ ಮಾತ್ರವಲ್ಲ, ಬಿಜೆಪಿಯಲ್ಲಿ ಮತ್ತೆ ಗೊಂದಲ ಹುಟ್ಟಿಸುವ ಪ್ರಯತ್ನದಲ್ಲಿದ್ದಾರೆ ಎಂದೂ ಆರೋಪಿಸಿದ್ದಾರೆ. ಇದರಲ್ಲಿ ಒಂದಿಷ್ಟು ಸತ್ಯವಿದೆ. ನಾಳೆ ಜಗದೀಶ್ ಶೆಟ್ಟರ್ ವರಿಷ್ಠರ ಪರವಾಗಿ ನಿಂತು ಬಿಟ್ಟರೆ ಯಡಿಯೂರಪ್ಪ ಮತ್ತೆ ದಂಗೆಯೇಳುವ ಸಾಧ್ಯತೆಯಿದೆ. ಪಕ್ಷಾಧ್ಯಕ್ಷ ಸ್ಥಾನ ಯಾರಿಗೆ ಸೇರಬೇಕು ಎನ್ನುವುದು ಎಲ್ಲಿಯವರೆಗೆ ಇತ್ಯರ್ಥವಾಗುವುದಿಲ್ಲವೋ, ಅಲ್ಲಿಯವರೆಗೆ ಬಿಜೆಪಿ ಸರಕಾರ ಕೆಂಡದ ಮೇಲೆ ನಿಂತಿರಬೇಕಾಗುತ್ತದೆ. ಅದೇನೇ ಇರಲಿ.

ಬರ ಮತ್ತು ರೈತರ ಕುರಿತಂತೆ ಸರಕಾರ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸುವ ಅಗತ್ಯವಂತೂ ಇದೆ. ಕಾರಣ ಏನೇ ಇರಲಿ, ಯಡಿಯೂರಪ್ಪರ ಆಕ್ರೋಶದಿಂದ ಸರಕಾರದ ಮೇಲೆ ಭಾರೀ ಒತ್ತಡ ಬಿದ್ದಂತಾಗಿದೆ. ವಿರೋಧ ಪಕ್ಷಕ್ಕೂ ಆನೆ ಬಲಬಂದಿದೆ. ಈ ಹಿನ್ನೆಲೆಯಲ್ಲಾದರೂ ರಾಜ್ಯ ಸರಕಾರ ಮುಂದಿನ ದಿನಗಳನ್ನು ನಾಡಿಗಾಗಿ ಮೀಸಲಿಟ್ಟರೆ ಅದು ನಾಡಿನ ಜನತೆಯ ಅದೃಷ್ಟ.

(ಚಿತ್ರಕೃಪೆ: ದ ಹಿಂದು ಮತ್ತು ಇತರೆ ಅಂತರ್ಜಾಲ ತಾಣಗಳು)

ಅಣ್ಣಾ, ನಿಮ್ಮ ಅಖಾಡ ಅದಾಗಿರಲಿಲ್ಲ!


-ಚಿದಂಬರ ಬೈಕಂಪಾಡಿ


ಥಿಯರಿಯಲ್ಲಿ ಅತ್ಯುತ್ತಮ ಅಂಕ ಪಡೆಯುವ ವಿದ್ಯಾರ್ಥಿ ಪ್ರಾಕ್ಟಿಕಲ್‌ನಲ್ಲೂ ಅದಕ್ಕೆ ಸರಿಸಮನಾದ ಅಂಕ ಪಡೆಯಬೇಕು, ಅದು ನಿರೀಕ್ಷೆ. ಆದರೆ ಅದೆಷ್ಟೋ ಸಂದರ್ಭದಲ್ಲಿ ಹಾಗೆ ಆಗುವುದಿಲ್ಲ. ಥಿಯರಿಯಲ್ಲಿ ಕನಿಷ್ಠ ಅಂಕ ಪಡೆದವ ಪ್ರಾಕ್ಟಿಕಲ್‌ನಲ್ಲಿ ಗರಿಷ್ಠ ಅಂಕ ಪಡೆಯುವ ಸಾಧ್ಯತೆಗಳಿರುತ್ತವೆ. ಒಬ್ಬನೇ ವಿದ್ಯಾರ್ಥಿಯಲ್ಲಿ ಥಿಯರಿ ಮತ್ತು ಪ್ರಾಕ್ಟಿಕಲ್‌ನಲ್ಲಿ ಯಾಕೆ ಇಂಥ ವ್ಯತ್ಯಾಸಗಳಾಗುತ್ತವೆ? ಥಿಯರಿ ಪುಸ್ತಕದಿಂದ ಪಡೆಯುವ ಅನುಭವ. ಬರೆದಿಟ್ಟ ಅನುಭವವನ್ನು ಓದಿಕೊಂಡು ಹಾಗೆಯೇ ಬರೆದುಬಿಡುತ್ತಾನೆ. ಅದರಲ್ಲಿ ಅವನ ಹೂಡಿಕೆ ಬೌದ್ಧಿಕ ಬಂಡವಾಳ ಮಾತ್ರ. ಪ್ರಾಕ್ಟಿಕಲ್ ಅಂದರೆ ಬೌದ್ಧಿಕ ಬಂಡವಾಳದ ಜೊತೆಗೆ ತನ್ನ ಗೆಯ್ಮೆಯನ್ನೂ ಹೂಡಬೇಕಾಗುತ್ತದೆ.

ಒಂದು ಶಿಲ್ಪವನ್ನು ಕಡೆಯುವ ಕುರಿತು ಥಿಯರಿ ಓದಿ ಬರೆದು ಬಿಡಬಹುದು. ಆದರೆ ಅದೇ ಶಿಲ್ಪವನ್ನು ಅವನಿಗೆ ಕೆತ್ತಲು ಕೊಟ್ಟರೆ ಖಂಡಿತಕ್ಕೂ ಕೆತ್ತಲಾರ. ಮನಸ್ಸಿನಲ್ಲಿ ಅವನು ಮೂಲಶಿಲ್ಪಕ್ಕಿಂತಲೂ ಸುಂದರವಾದ ಶಿಲ್ಪವನ್ನು ಕೆತ್ತಿನಿಲ್ಲಿಸಿಬಿಡುತ್ತಾನೆ. ಆದರೆ ಅದು ಅವನ ಒಳಗಣ್ಣಿಗೆ ಮಾತ್ರ ಕಾಣುತ್ತದೆ, ಹೊರಗಿನವರ ಕಣ್ಣಿಗೆ ಕಾಣಲು ಹೇಗೆ ತಾನೇ ಸಾಧ್ಯ? ಥಿಯರಿ ಮತ್ತು ಪ್ರಾಕ್ಟಿಕಲ್ ಎರಡರಲ್ಲೂ ಏಕರೂಪದ ಸಾಧನೆ ಸಾಧ್ಯವಿಲ್ಲದ ವಿದ್ಯಾರ್ಥಿಯ ಸ್ಥಿತಿ ಅಣ್ಣಾ ಮತ್ತವರ ತಂಡದ್ದು. ಅಣ್ಣಾ ಮತ್ತು ಅವರ ತಂಡ ಥಿಯರಿ ಹೇಳುತ್ತಲೇ ಹದಿನೆಂಟು ತಿಂಗಳು ದೇಶದ ಜನಮಾನಸದಲ್ಲಿ ನೆಲೆಯೂರಿದರು.

ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದು ಸಹಜವಾಗಿತ್ತು ಮತ್ತು ಅದು ಅಣ್ಣಾ ತಂಡದ ಥಿಯರಿ ಮಾತ್ರವಲ್ಲಾ ದೇಶದ ಶೇ.90ರಷ್ಟು ಜನರ ನಿಜವಾದ ಅನುಭವ ಕೂಡಾ. ಆದರೆ ಥಿಯರಿಯನ್ನು ಪ್ರಾಕ್ಟಿಕಲ್ ಹಂತಕ್ಕೆ ತರುವುದು ಅದೆಷ್ಟು ಕಠಿಣ ಎನ್ನುವುದಕ್ಕೆ ಛಿದ್ರವಾದ ಅಣ್ಣಾ ತಂಡವೇ ಸಾಕ್ಷಿ. ಪ್ರಬಲ ಲೋಕಪಾಲ್ ಜಾರಿಯಾಗಬೇಕು ಎನ್ನುವುದು ಥಿಯರಿ. ಜಾರಿಗೆ ಮಾಡುವುದು ಪ್ರಾಕ್ಟಿಕಲ್. ಥಿಯರಿಯಲ್ಲಿ ಅಣ್ಣಾ ತಂಡ ಅತ್ಯುತ್ತಮ ಸಾಧನೆ ಮಾಡಿತು, ಆದರೆ ಪ್ರಾಕ್ಟಿಕಲ್‌ನಲ್ಲಿ ಪರಾಭವಗೊಂಡಿತು. ಜಾರಿ ಮಾಡಬೇಕಾಗಿದ್ದವರು ಪ್ರಾಕ್ಟಿಕಲ್‌ನಲ್ಲಿ ಗೆದ್ದರು.

ಹಾಗೆ ನೋಡಿದರೆ ಅಣ್ಣಾ ಭ್ರಷ್ಟಾಚಾರದ ವಿರುದ್ಧ ಎತ್ತಿದ ಧ್ವನಿ ಈಗಲೂ ಸಮಂಜಸ, ಅವರ ಆರಂಭದ ಹೆಜ್ಜೆಯೂ ಸಮರ್ಪಕ. ಆದರೆ ಅವರು ಎಡವಿದ್ದು ಎಲ್ಲಿ ಎನ್ನುವುದು ಈಗಿನ ಸ್ಥಿತಿಯಲ್ಲಿ ಚರ್ಚೆಗೆ ಯೋಗ್ಯ. ತುತ್ತು ಕೂಳು ತಿನ್ನಲು ಅನುವಾಗುವಂತೆ ಕೂಲಿಗಾಗಿ ಕಾಳು ಯೋಜನೆಯಿಂದ ಹಿಡಿದು ದೇಶವನ್ನು ರಕ್ಷಿಸಲು ಖರೀದಿಸುವ ರಕ್ಷಣಾ ಸಲಕರಣೆಗಳ ಖರೀದಿ ತನಕ ಭ್ರಷ್ಟಾಚಾರದ ಕಮಟುವಾಸನೆ ಮೂಗಿಗೆ ಬಡಿಯುತ್ತದೆ. ಸತ್ತ ಹೆಣದ ಶವಪರೀಕ್ಷೆಯಿಂದ ಹಿಡಿದು ಉಸಿರಾಡಿಸುವ ಜೀವರಕ್ಷಕ ಔಷಧಿಯ ತನಕ ಭ್ರಷ್ಟಾಚಾರವಿದೆ ಅಂದ ಮೇಲೆ ಇದರ ಬೇರುಗಳ ಆಳ ಅದೆಷ್ಟು ಎನ್ನುವುದು ಗೋಚರವಾಗುತ್ತದೆ. ಇಂಥ ಬೇರುಗಳನ್ನು ಕೀಳಬೇಕಾದರೆ ಅದಕ್ಕೆ ಬೇಕಾದ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳ ಬೇಕಾಗಿತ್ತು. ಪಾರ್ಥೇನಿಯಮ್ ಗಿಡದಂತೆ ಬೆಳೆದು ನಿಂತಿರುವ ಭ್ರಷ್ಟಾಚಾರವನ್ನು ಬುಡಸಹಿತ ಕಿತ್ತು ಹಾಕಬೇಕೆನ್ನುವ ಸಂಕಲ್ಪ ಅಣ್ಣಾ ಅವರ ಮಾನಸಿಕ ಥಿಯರಿ ಹೊರತು ಅದು ಪುಸ್ತಕ ಥಿಯರಿ ಆಗಿರಲಿಲ್ಲ.

ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಮಹಾನ್ ಕ್ರಾಂತಿಗೆ ನಾಂದಿ ಹಾಡಿದರು. ಶೋಷಣೆ, ಸಾಮಾಜಿಕ ಅಸಮಾನತೆಯ ವಿರುದ್ಧ ಸೆಟೆದು ನಿಲ್ಲುವ ಮುನ್ನ ಅವುಗಳ ಕ್ರೌರ್ಯವನ್ನು ತುಂಬಾ ಹತ್ತಿರದಿಂದ ನೋಡಿದ್ದರು. ರಾಜನ ಆಡಳಿತದ ಭಾಗವಾಗಿದ್ದ ಬಸವಣ್ಣ ಅದರ ವಿರುದ್ಧವೇ ಹೋರಾಟಕ್ಕಿಳಿದು ಯಶಸ್ಸು ಕಂಡರು. ಒಬ್ಬ ಕಳ್ಳನ ಕೈಚಳಕವನ್ನು ಮತ್ತೊಬ್ಬ ಕಳ್ಳ ಗ್ರಹಿಸುವಷ್ಟು ಸುಲಭವಾಗಿ ಕಳ್ಳನಲ್ಲದಿದ್ದವನು ಗ್ರಹಿಸಲು ಸಾಧ್ಯವಿಲ್ಲ. ಭ್ರಷ್ಟಾಚಾರಿ ಮತ್ತು ಭ್ರಷ್ಟಾಚಾರದ ಅರಿವಿರದ ವ್ಯಕ್ತಿಗಳ ನಡುವಿನ ವ್ಯತ್ಯಾಸವೂ ಇದೇ ಆಗಿದೆ.

ಅಣ್ಣಾ ಭ್ರಷ್ಟಾಚಾರ ಮಾಡಿದವರಲ್ಲ. ಆದರೆ ಭ್ರಷ್ಟಾಚಾರದ ಬಗ್ಗೆ ಒಳನೋಟವಿದೆ. ಅಣ್ಣಾ ತಂಡದಲ್ಲಿದ್ದವರು ಭ್ರಷ್ಟ ವ್ಯವಸ್ಥೆಯ ಅರಿವಿದ್ದವರು. ಆಡಳಿತ ಯಂತ್ರದ ಒಳಗಿದ್ದು ಹೊರಬಂದವರು. ಆದ್ದರಿಂದಲೇ ಅವರಿಗೆ ಭ್ರಷ್ಟಾಚಾರದ ಬೇರುಗಳ ಸ್ಪಷ್ಟ ಕಲ್ಪನೆಯಿತ್ತು. ಈ ಕಾರಣಕ್ಕಾಗಿ ಅಣ್ಣಾ ಮತ್ತವರ ತಂಡ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸಮತೋಲನದ ತಂಡವಾಗಿ ಜನರಿಗೆ ಗೋಚರವಾಗಿತ್ತು. ಈ ತಂಡದಲ್ಲಿ ಬೌದ್ಧಿಕವಾದ ಅನುಭವ ಧಾರಾಳವಾಗಿತ್ತು, ಜೊತೆಗೆ ಯಾರ ಬೌದ್ಧಿಕತೆ ಹೆಚ್ಚು ಎನ್ನುವ ಆಂತರಿಕ ಮೇಲಾಟವೂ ಇತ್ತು. ತಮ್ಮದೇ ಆಂತರಿಕ ತುಡಿತ ಅಣ್ಣಾತಂಡದ ಧ್ವನಿಯಾಗಬೇಕು ಎನ್ನುವ ಹಂಬಲವೂ ಇಣುಕತೊಡಗಿತು. ಇಂಥ ಒಳತುಡಿತದ ತಾಕಲಾಟಗಳು ಮಾಧ್ಯಮಗಳ ಮೂಲಕ ಅಣ್ಣಾತಂಡದ ಒಡೆದ ಸ್ವರಗಳಾಗಿ ಕೇಳಿಸತೊಡಗಿದ್ದವು. ಇವೆಲ್ಲವನ್ನೂ ಅಣ್ಣಾ ಗ್ರಹಿಸಲಾಗದಷ್ಟು ದಡ್ಡರೆಂದು ಆ ತಂಡದಲ್ಲಿದ್ದ ಕೆಲವರು ಸ್ವಯಂ ನಿರ್ಧಾರಕ್ಕೆ ಬಂದದ್ದು ದುರ್ದೈವ.

ಅಣ್ಣಾತಂಡದ ಸಾಮೂಹಿಕ ನಿರ್ಧಾರ ತಂಡದ ವೇದಿಕೆಯಲ್ಲಿ ಆಗುವ ಬದಲು ಅವರವರ ಮನೆಗಳಲ್ಲಾಗತೊಡಗಿತು. ತಂಡದ ಬುದ್ಧಿವಂತರು ಹೇಳುವ ಮಾತು ಅಣ್ಣಾ ಅವರ ಬಾಯಿಯಿಂದ ಬರುವಂತಾಯಿತು. ಅಣ್ಣಾ ಅವರಿಗೆ ಆಂಗ್ಲಭಾಷೆಯ ಅರಿವಿಲ್ಲದ ಕಾರಣ ಅತ್ಯಂತ ಗಂಭೀರ ವಿಚಾರಗಳು ಮತ್ತು ಅಣ್ಣಾ ಅವರಿಗೆ ಗೊತ್ತಿಲ್ಲದ ಅಂಶಗಳು ಮಾಧ್ಯಮಗಳ ಮೂಲಕ ಪ್ರಚಾರಕ್ಕೆ ಬಂದು ಎಡವಟ್ಟು ಉಂಟುಮಾಡಿದವು. ಇದನ್ನೂ ಅಣ್ಣಾ ಸಹಿಸಿಕೊಂಡರು. ಇಡೀ ಹೋರಾಟದ ದಿಕ್ಕು ಕವಲು ದಾರಿಹಿಡಿದದ್ದು ಬಾಬಾ ರಾಮ್‌ದೇವ್ ಅಖಾಡಕ್ಕಿಳಿದಾಗ ಎನ್ನುವುದನ್ನು ಮರೆಯುವಂತಿಲ್ಲ. ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹೋರಾಟದ ದಾರಿ ಹಿಡಿದು ಜನರ ಚಳವಳಿಯನ್ನಾಗಿ ರೂಪಿಸುತ್ತಿದ್ದರೆ ಅದೇ ಹೊತ್ತಿಗೆ ಬಾಬಾ ರಾಮ್‌ದೇವ್ ಕಪ್ಪು ಹಣವನ್ನು ಭಾರತಕ್ಕೆ ತರುವ ಹೋರಾಟಕ್ಕಿಳಿದರು. ಈ ಮೂಲಕ ಜಂತರ್ ಮಂತರ್, ರಾಮಲೀಲಾ ಮೈದಾನದಲ್ಲಿ ಸೇರುತ್ತಿದ್ದ ಜನರು ಇಬ್ಬರು ಹೋರಾಟಗಾರರ, ಎರಡು ಭಿನ್ನಮುಖಗಳನ್ನು ಕಾಣತೊಡಗಿದರು. ಇದು ಒಂದು ನೆಲೆಯ ಗುರಿ ಹಿಡಿದು ಸಾಗುತ್ತಿದ್ದ ಚಳವಳಿ ಕವಲು ದಾರಿಯಲ್ಲಿ ಸಾಗಲು ಕಾರಣವಾಯಿತು.

ಅಣ್ಣಾ ಅವರನ್ನು ಜನರು ನೋಡುತ್ತಿದ್ದ ವಿಧಾನ, ಜನರು ಅಣ್ಣಾ ಅವರನ್ನು ಗ್ರಹಿಸುತ್ತಿದ್ದ ರೀತಿಗೂ ರಾಮ್‌ದೇವ್ ಅವರು ಜನರನ್ನು ನೋಡುತ್ತಿದ್ದ ವಿಧಾನ, ಜನರು ಅವರನ್ನು ಗ್ರಹಿಸುತ್ತಿದ್ದ ರೀತಿ ಭಿನ್ನವಾಗಿತ್ತು. ಅಣ್ಣಾ ಸಾಮಾಜಿಕ ಹೋರಾಟಗಾರರಾಗಿ ಕಾಣಿಸಿದರೆ ರಾಮ್‌ದೇವ್ ಅವರ ಕಾವಿಯೊಳಗೆ ಸುಪ್ತವಾಗಿದ್ದ ನಾಯಕತ್ವದ ಹಂಬಲ ವ್ಯಕ್ತವಾಗುತ್ತಿತ್ತು. ಏಕಕಾಲದಲ್ಲಿ ಧುತ್ತನೆ ಬಿದ್ದ ಎರಡು ಚಳವಳಿಗಳನ್ನು ಆಯ್ಕೆ ಮಾಡುವ ಸಂದಿಗ್ಧತೆ ಜನರಿಗಾಯಿತು. ಇದನ್ನೂ ಜನರು ಸಮಚಿತ್ತದಿಂದಲೇ ನೋಡಿದರು.

ಈ ಎರಡೂ ಹೋರಾಟಗಳ ಟಾರ್ಗೆಟ್ ದೇಶದ ಶಕ್ತಿಕೇಂದ್ರ ಸಂಸತ್ ಎನ್ನುವುದು ಅತ್ಯಂತ ಮುಖ್ಯ. ದೇಶ, ಭಾಷೆ, ಸಂಸ್ಕೃತಿ, ಹಕ್ಕು, ಕರ್ತವ್ಯ ಹೀಗೆ ನಮ್ಮನ್ನು ಆಳುವ ಅಧಿಕಾರ ಸ್ಥಾನ. ಮತ್ತೊಂದು ರೀತಿಯಲ್ಲಿ ಈ ಕೇಂದ್ರ ನಮ್ಮ ಪ್ರತಿಬಿಂಬ. ನಮ್ಮೆಲ್ಲರ ಪರವಾಗಿ ಅವರಿದ್ದಾರೆ. ನಮ್ಮಿಂದಾಗಿ ಅವರು ಅಲ್ಲಿದ್ದಾರೆ. ಅವರಿಗೆ ಅವರದ್ದೇ ಆದ ಸ್ಥಾನಮಾನ, ಪರಮಾಧಿಕಾರವನ್ನು ಸಂವಿಧಾನ ಕೊಟ್ಟಿದೆ. ಆ ಶಕ್ತಿ ಕೇಂದ್ರದೊಳಗೆ ನಮಗೆ ಬೇಕಾದ ಕಾನೂನನ್ನು ಅವರು ಮಾಡಬೇಕು. ನಾವು ಹೊರಗಿನಿಂದ ಹೇಳುವುದು ಕಾನೂನಾಗುವುದಿಲ್ಲ. ಇದು ವ್ಯತ್ಯಾಸ ನಮಗೆ ಮತ್ತು ಅದರೊಳಗಿರುವವರಿಗೆ. ನಮ್ಮ ಪರವಾಗಿ ಕಾನೂನು ಮಾಡದವರನ್ನು ಮತ್ತೆ ಆ ಕೇಂದ್ರದೊಳಗೆ ಕಾಲಿಡದಂತೆ ಮಾಡುವ ಪರಮಾಧಿಕಾರ ನಮಗಿದೆ ಹೊರತು ಅವರ ಪರಮಾಧಿಕಾರದೊಳಗೆ ಹಸ್ತಕ್ಷೇಪಮಾಡುವ ಅಧಿಕಾರ ನಮಗಿಲ್ಲ. ಇದು ಓರ್ವ ಸಾಮಾನ್ಯವಾಗಿ ನಾನು ಗ್ರಹಿಸಿದ ವಿಧಾನ, ಇದಕ್ಕಿಂತಲೂ ಭಿನ್ನವಾಗಿ ಹಕ್ಕು, ಕರ್ತವ್ಯಗಳನ್ನು ವ್ಯಾಖ್ಯಾನಿಸುವುದೂ ಸಾಧ್ಯವಿದೆ.

ಇಂಥ ವಾಸ್ತವ ಸ್ಥಿತಿಯಲ್ಲಿ ಸಂಸತ್ತನ್ನು ಹೈಜಾಕ್ ಮಾಡುವಂಥ ಅಥವಾ ಶಕ್ತಿಕೇಂದ್ರದ ಅವಗಣನೆಯನ್ನು ಯಾವುದೇ ಚಳವಳಿ ಮಾಡಬಾರದು. ಅಣ್ಣಾ ತಂಡ ಜನಬೆಂಬಲವನ್ನು ಮತಗಳಾಗಿ ಪರಿವರ್ತಿಸುವ ಬದಲು ಆ ಶಕ್ತಿಕೇಂದ್ರದೊಳಗಿರುವವರಿಗೆ ಹೊರಗಿದ್ದೇ ಪರ್ಯಾಯವೆನ್ನುವಂತೆ ವರ್ತಿಸಿದ್ದು ಅತಿಯಾಯಿತು ಎನ್ನುವ ಅನಿಸಿಕೆ ಶಕ್ತಿಕೇಂದ್ರದೊಳಗಿನವರನ್ನು ವಿರೋಧಿಸುವವರಲ್ಲೂ ಮೂಡುವಂತಾದದ್ದು ದುರಾದೃಷ್ಟ. ಇದು ಚಳವಳಿಗಾದ ಮೊದಲ ಹಿನ್ನಡೆ.

ಅಣ್ಣಾ ಅವರು ಒಬ್ಬ ವ್ಯಕ್ತಿಯಾಗಿ ಚಳವಳಿಯ ಹಾದಿ ಹಿಡಿದಾಗ, ಉಪವಾಸ ಕುಳಿತಾಗ ಶಕ್ತಿಕೇಂದ್ರದೊಳಗೆ ತಲ್ಲಣ ಉಂಟಾಗಿತ್ತು. ಅಂಥ ಶಕ್ತಿ ಅಣ್ಣಾ ಅವರ ಮೊದಲ ಹೆಜ್ಜೆಯಲ್ಲಿತ್ತು. ಆದರೆ ಅಣ್ಣಾ ತಂಡವಾಗಿ ಕಾಣಿಸಿಕೊಂಡಮೇಲೆ, ಅದರಲ್ಲೂ ಒಡಕುಗಳು ಬೆಳಕಿಗೆ ಬಂದ ಮೇಲೆ ಶಕ್ತಿಕೇಂದ್ರ ಇಳಿವಯಸ್ಸಿನ ಅಣ್ಣಾ ಉಪವಾಸಕ್ಕೆ ಕುಳಿತಾಗ ನಿರ್ಲಿಪ್ತವಾಗಿಬಿಡುತ್ತದೆ. ಅಂದರೆ ಉಪವಾಸ ಎನ್ನುವುದು ಅಹಿಂಸಾತ್ಮಕ ಚಳವಳಿಯ ಕೊನೆಯ ಅಸ್ತ್ರ ಮತ್ತು ಅದು ಅತ್ಯಂತ ನಿರ್ಣಾಯಕವಾದ ಅಸ್ತ್ರವೂ ಹೌದು.

ಗಾಂಧೀಜಿಯವರು ಬ್ರಿಟಿಷ್ ಸಾಮ್ರಾಜ್ಯವನ್ನೇ ಹಿಮ್ಮೆಟ್ಟಿಸಿದ್ದು ಕೂಡಾ ಇಂಥ ಅಹಿಂಸಾ ಚಳವಳಿಯ ಮೂಲಕವೇ. ಅಂಥದ್ದೇ ಚಳವಳಿಯನ್ನು ಹೂಡಿದ ಅಣ್ಣಾ ಯಾವುದೇ ಫಲವಿಲ್ಲದೆ ತಾವಾಗಿಯೇ ಶಸ್ತ್ರತ್ಯಾಗಮಾಡಿದಂತೆ ಉಪವಾಸ ನಿಲ್ಲಿಸಿದ್ದೂ ಕೂಡಾ ಚಳವಳಿಯಲ್ಲಿ ಶಕ್ತಿ ಇರಲಿಲ್ಲ ಎನ್ನುವುದಕ್ಕೆ ಸಾಕ್ಷಿ. ಪ್ರತಿಕ್ರಿಯೆ ಎನ್ನುವುದು ಕ್ರಿಯೆಯನ್ನು ಅವಲಂಬಿಸಿರುತ್ತದೆ. ನಿರಂತರವಾದ ಕ್ರಿಯೆಗೆ ನಿರಂತರವಾದ ಪ್ರತಿಕ್ರಿಯೆ ನಿರೀಕ್ಷಿಸಬಹುದು, ಆದರೆ ಅದು ಬರಲೇಬೇಕೆಂದಿಲ್ಲ. ಅಣ್ಣಾ ಉಪವಾಸದಲ್ಲೂ ಇದೇ ಆಗಿದ್ದು. ಉಪವಾಸ ಅಣ್ಣಾ ಅವರ ನಿರಂತರ ಅಸ್ತ್ರ ಎನ್ನುವಂತಾಯಿತು. ಒಂದು ರೀತಿಯಲ್ಲಿ ಅಣ್ಣಾ ಅವರ ಉಪವಾಸವನ್ನು ಶಕ್ತಿಕೇಂದ್ರ ನಿರ್ಲಕ್ಷ್ಯಕ್ಕೆ ಯೋಗ್ಯ ಎನ್ನುವಂತೆ ಗ್ರಹಿಸಿತು ಮಾತ್ರವಲ್ಲ ಹಾಗೆಯೇ ನಡೆದುಕೊಂಡಿತು.

ಈ ಘಟನೆವರೆಗೂ ಅತ್ಯಂತ ಸಹನೆಯಿಂದಲೇ ಇದ್ದ ಅಣ್ಣಾ ತಂಡದ ಕೆಲವರಲ್ಲಿ ವ್ಯಕ್ತವಾಗುತ್ತಿದ್ದ ಶಕ್ತಿಕೇಂದ್ರ ಪ್ರವೇಶಮಾಡುವ ಮಾನಸಿಕ ತುಡಿತವನ್ನು ಗ್ರಹಿಸಿ ಜರ್ಝರಿತರಾದರು. ತಾವೇ ಶಕ್ತಿಕೇಂದ್ರ ಪ್ರವೇಶ ಮಾಡಬೇಕೆನ್ನುವ ತುಡಿತ ಜನರಲ್ಲಿ ಹುಟ್ಟುವ ಮುನ್ನವೇ ತಾವೇ ಪ್ರವೇಶಿಸಬೇಕೆನ್ನುವ ತುಡಿತವನ್ನು ಅದುಮಿಟ್ಟುಕೊಳ್ಳಲಾಗದ ಮತ್ತು ಅದೇ ಮೂಲ ಉದ್ದೇಶವಾಗಿದ್ದ ತನ್ನವರ ಆಶಯವನ್ನು ಗ್ರಹಿಸಿದರು ಅಣ್ಣಾ. ಆದರೆ ಆ ತುಡಿತಕ್ಕೆ ಅವರು ಭಾವೋದ್ವೇಗಗೊಂಡದ್ದು ಮಾತ್ರ ಅಚ್ಚರಿಯೆನಿಸಿತು. ಪರ್ಯಾಯ ಶಕ್ತಿ ರೂಪಿಸುವ ಅಣ್ಣಾ ಆಶಯ ತಂಡದ ಕೆಲವರಲ್ಲಿ ಪರ್ಯಾಯ ರಾಜಕೀಯ ಪಕ್ಷವಾಗಿ ಅಂಕುರಿಸಿತು. ಈ ಹಂತದಲ್ಲಿ ನಿಜಕ್ಕೂ ಅಣ್ಣಾ ಎಚ್ಚೆತ್ತುಕೊಂಡರು. ಅಣ್ಣಾ ತಂಡವನ್ನು ವಿಸರ್ಜಿಸಿ ನಿರುಮ್ಮಳರಾದರು. ಇದು ಅವರು ಇಟ್ಟ ಸರಿಯಾದ ಹೆಜ್ಜೆ. ತಂಡವಾಗಿ ಅಣ್ಣಾ ಮತ್ತಷ್ಟು ದಿನ ಮುಂದುವರಿದಿದ್ದರೆ ಅವರಿಗೆ ಗೊತ್ತಿಲ್ಲದಂತೆಯೇ ಮತ್ತೊಂದು ತಪ್ಪಿಗೆ ನಾಂದಿಯಾಗುತ್ತಿದ್ದರು. ಪಕ್ಷ ರಾಜಕಾರಣ, ಅಣ್ಣಾ, ನಿಮ್ಮ ಅಖಾಡವಲ್ಲ. ಹೆಸರಿಲ್ಲದ ಪಕ್ಷಕ್ಕೆ ನೀವೇ ನಾಯಕ. ಪಕ್ಷದ ನಾಯಕಗೆ ಕಾಲಮಿತಿಯಿದೆ. ಜನರ ನಾಯಕ ತಾನೇ ಕಾಲ ನಿರ್ಧರಿಸುತ್ತಾನೆ. ನಿಮ್ಮ ಹಿಂದೆ ಜನರಿರಬೇಕು. ಶಕ್ತಿಕೇಂದ್ರದ ಮುಂದೆ ಉಪವಾಸ ಮಾಡಿ ದೇಹದಂಡಿಸುವುದು ಮುಖ್ಯವಲ್ಲ. ಶಕ್ತಿಕೇಂದ್ರವೇ ಜನರ ಮುಂದೆ ಮಂಡಿಯೂರುವಂತೆ ಮಾಡುವುದು ನಿಮ್ಮ ಗುರಿಯಾಗಬೇಕು ಎಂದು ಅನ್ನಿಸುವುದಿಲ್ಲವೇ?

ಓ ನನ್ನ ಚೇತನ


-ಬಿ. ಶ್ರೀಪಾದ್ ಭಟ್


ಸಂಗೀತವು ಕೇವಲ ಶಬ್ದಗಳು ಮತ್ತು ಬೀಟ್ಸ್ ಮಾತ್ರವಲ್ಲ, ಬದಲಾಗಿ ಸಂಗೀತವೆಂದರೆ ಮತ್ತೊಬ್ಬರ ಭಾವನಾತ್ಮಕ್ಕೆ ವಶವಾಗುವುದು. ಭಾವನೆಗಳನ್ನು ಶಬ್ದಗಳಾಗಿ ಪೋಣಿಸಿದಾಗ ಇಲ್ಲಿ ಆ ಶಬ್ದಗಳೇ ಸಂಗೀತವಾಗುತ್ತದೆ. ಇಲ್ಲಿ ಕೇವಲ 7 ಸ್ವರಗಳು ಮಾತ್ರವಿಲ್ಲ, ಬದಲಾಗಿ ನೂರಾರು ಸಣ್ಣದಾದ ಸ್ವರ ಕಣಗಳು ಸಂಗೀತದ ಆತ್ಮವನ್ನು ಜೀವಂತವಾಗಿರಿಸುತ್ತವೆ. ನನಗೆ ಹಾಡುವುದೆಂದರೆ ನನ್ನ ಆತ್ಮದೊಂದಿಗೆ ಮಾತನಾಡಿದಂತೆ. ಅಂದರೆ ನನ್ನೊಳಿಗಿನೊಂದಿಗೆ ಸಂಪರ್ಕ ಸಾಧಿಸುವುದು. ಶಬ್ದಗಳು ಮತ್ತು ಭಾವನೆಗಳು ಒಂದಕ್ಕೊಂದು ಪೂರಕವಾಗಿ ರಂಜಿಸುವುದರ ವಿರುದ್ಧ ಪ್ರತಿಯೊಬ್ಬ ಸಂಗೀತಗಾರನೂ ಎಚ್ಚರದಿಂದ ಇರಬೇಕು – ಕಿಶೋರಿ ಅಮೋನ್ಕರ್

ಖ್ಯಾತ ಹಿಂದುಸ್ತಾನಿ ಹಾಡುಗಾರ್ತಿ ‘ಕಿಶೋರಿ ಅಮೋನ್ಕರ್’ ಅವರಿಗೆ 80 ವರ್ಷ ತುಂಬಿದೆ. ಕಳೆದ ವರ್ಷ ಕಿಶೋರಿ ತಾಯಿಯವರು 80ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಪುಣೆಯಲ್ಲಿ ಮೂರು ದಿನಗಳ ಸಂಕಿರಣಗಳು ಹಾಗೂ ವಿವಿಧ ಕಲಾವಿದರಿಂದ ಹಿಂದೂಸ್ತಾನಿ ಸಂಗೀತವಿತ್ತು. ಅಲ್ಲದೆ ‘ಕಿಶೋರಿ ಅಮೋನ್ಕರ್’ ಅವರು ತಮ್ಮ 80ನೇ ವಯಸ್ಸಿನಲ್ಲಿ ಹಾಡುವ ಕಾರ್ಯಕ್ರಮವಿತ್ತು. ಇದಕ್ಕೆ ಹೋಗಲಾಗದಿದ್ದಕ್ಕೆ ಬಹಳ ಪರಿತಪಿಸುತ್ತಿದ್ದೆ. ಅಲ್ಲಿಂದ ನನ್ನ ಸ್ನೇಹಿತ ಸುರೇಶ ಇದರ ಲೈವ್ ಕಾಮೆಂಟ್ರಿ ಕೊಡುತ್ತ ನನ್ನೊಳಗೆ ಕಿಚ್ಚನ್ನು ಹತ್ತಿಸುತ್ತಿದ್ದ!!
ನನ್ನಂತಹವರ ಪಾಲಿಗೆ ‘ಕಿಶೋರಿ ಅಮೋನ್ಕರ್’ರವರು ನಿಜದ ನೈಟಿಂಗೇಲ್. ಇವರ ಧ್ವನಿಯಲ್ಲಿ ಭೂಪ್, ಸಂಪೂರ್ಣ ಮಾಲಕೌಂಸ್, ಜಾನ್ಪುರಿ, ಗುರ್ಜರಿ ತೋಡಿ, ಲಲಿತ್, ದೇಷ್ಕರ್, ಭೀಮ್‌ಪಲಾಸ್‌ಗಳಂತಹ ಅಪೂರ್ವ ರಾಗಗಳನ್ನು ಕೇಳಿದಾಗ ಅದು ಕೇವಲ ಕಲಾಪ್ರಜ್ಞೆಯುಳ್ಳ ಅನುಭೂತಿ ಮಾತ್ರವಲ್ಲ, ಜೊತೆಗೆ ಮಹಾನ್ ಸಂತೋಷ, ಆಳವಾದ ನೋವು ಮತ್ತು ಹತಾಶೆಗಳಂತಹ ಸಣ್ಣ ಸಣ್ಣ ವಿವರಗಳು ನಮ್ಮೊಳಗೆ ಆಳವಾಗಿ ಇಳಿದಂತಹ ಅನುಭವ. ಕಿಶೋರಿತಾಯಿಯವರ ಸಂಗೀತದಲ್ಲಿ ಅಧ್ಯಾತ್ಮವು ಅದ್ಭುತ ರೀತಿಯಲ್ಲಿ ಮಿಳಿತಗೊಂಡು ಭಾವೋದ್ರೇಕದ ಆತ್ಯಾನಂದವನ್ನೂ ಮೀರಿ ಮತ್ತೊಂದು ಮಜಲನ್ನು ತಲಪುತ್ತದೆ. ಬಾಗೇಶ್ರೀ ರಾಗವನ್ನು ಹಾಡುವಾಗ ಪಂಚಮವನ್ನು ವಿಸ್ತರಿಸುವುದು ಕಿಶೋರಿತಾಯಿಯವರಿಗೆ ಅದು ಸ್ವರ್ಗದೆಡಗಿನ ಪಯಣದಂತೆ, ಕೇಳುಗರಾದ ನಾವೆಲ್ಲ ಮೋಕ್ಷವನ್ನು ಅರಸಿದಂತೆ! ಕಿಶೋರಿತಾಯಿಯವರ ಜೊತೆಜೊತೆಗೆ ನಾವೂ ಸಹ ಆ ಪಯಣದಲ್ಲಿ ಆಳವಾಗಿ ಭಾಗವಹಿಸಿದಾಗಲೇ ನಮಗೂ ಅದರ ಅನುಭೂತಿ ದೊರಕುತ್ತದೆ.

ಜೈಪುರ ಘರಾಣ ಶೈಲಿಯಲ್ಲಿ ಹಾಡುತ್ತಿದ್ದ ತಮ್ಮ ತಾಯಿ ‘ಮೋಗುಬಾಯಿ ಕುರ್ಡೀಕರ್’ ಅವರ ಬಳಿ ಸಂಗೀತವನ್ನು ಅಭ್ಯಾಸ ಮಾಡಿದ ಕಿಶೋರಿತಾಯಿ ತದನಂತರ ತಮ್ಮ ತಾಯಿಯ ಜೈಪುರ ಘರಾಣದ ಪ್ರಭಾವವನ್ನೂ ಮೀರಿ ತಮ್ಮದೇ ಆದ ಶೈಲಿಯನ್ನು ರೂಪಿಸಿಕೊಂಡ ರೀತಿ ಹೃದಯಂಗಮವಾದದ್ದು. ಪು.ಲ.ದೇಶಪಾಂಡೆಯವರು ತಮ್ಮ ಸಮಕಾಲೀನ ಸಂಗೀತಗಾರ್ತಿಯರಾದ ಠುಮ್ರಿಯಲ್ಲಿ ಪರಿಣಿತಿ ಸಾಧಿಸಿದ ಗಿರಿಜಾದೇವಿ, ಶೋಭಾ ಗುರು ರವರಂತೆ ಭಜನ್‌ನಲ್ಲಿ ಪರಿಣಿತಿ ಸಾಧಿಸಿದ ಹಿರಾಬಾಯಿ ಬರೋಡೆಕರ್, ಗಂಗೂಬಾಯಿ ಹಾನಗಲ್‌ರಂತೆ  ಕಿಶೋರಿ ಅಮೋನ್ಕರ್ ಅವರು ಭಿನ್ನವಾಗಿ ನಿಲ್ಲವುದು ಅವರು ಅಪ್ಪಟ ಭಕ್ತಳಂತೆ ರಾಗಗಳನ್ನು ತನ್ನೊಳಗೆ ಅವಾಹಿಸಿಕೊಳ್ಳುವುದರ ಮೂಲಕ. ಇಲ್ಲಿ ವಾಸ್ತವತೆ ಮತ್ತು ಆಧ್ಯಾತ್ಮ ಸಂಯೋಜಗೊಳ್ಳುವ ರೀತಿ ಅವರನ್ನು ತಮ್ಮ ಸಮಕಾಲೀನ ಗಾಯಕಿರೊಂದಿಗೆ ಭಿನ್ನವಾಗಿ ನಿಲ್ಲಿಸುತ್ತದೆ ಎಂದು ಹೇಳುತ್ತಾರೆ. ಇದರಲ್ಲಿ ಅತಿಶಯೋಕ್ತಿಯಿಲ್ಲ. ಕಿಶೋರಿತಾಯಿಯವರು ಖಯ್ಯಾಲ್ ಗಾಯನದಲ್ಲಿ ವಿಳಂಬಿತ್ ತಾಲ್ ಹಾಗೂ ಧೃತ್ ತಾಲ್‌ಗಳನ್ನು ಬಳಸಿಕೊಳ್ಳುವ ರೀತಿಯನ್ನು ಅನುಭವಿಸಿದಾಗ, ಕಡೆಗೆ ಛೋಟೆ ಖಯ್ಯಾಲ್ ಅನ್ನು ಸಂಯೋಜಿಸಿ ಹಾಡುವ ಶೈಲಿಯನ್ನು ಕೇಳಿದಾಗ ಅವರ ಹಿರಿಮೆ ಅರ್ಥವಾಗುತ್ತದೆ.

ಕ್ಲಾಸಿಕ್ ಸಂಗೀತವನ್ನು ಮನರಂಜನೆಯನ್ನಾಗಿ ನೋಡುವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದ ‘ಕಿಶೋರಿ ಅಮೋನ್ಕರ್’ ಸಹಜವಾಗಿಯೇ ತಮ್ಮ ತೆಳ್ಳಗಿನ ದೇಹ ಹಾಗೂ ಕೋಲು ಮುಖದಿಂದಾಗಿ ಎಂದೂ ಜನಪ್ರಿಯವಾದ ಪ್ರದರ್ಶನದ ಸ್ಟಾರ್ ಆಗಿ ರೂಪಿತಗೊಳ್ಳಲೇ ಇಲ್ಲ. ಇದಕ್ಕೆ ಅವರೊಳಗಿನ ಅಂತರ್ಮುಖೀ ವ್ಯಕ್ತಿತ್ವವೂ ಕಾರಣ. ಹಿಂದೂಸ್ತಾನಿ ಸಂಗೀತವನ್ನು ವಿವರಿಸುವಂತೆ ಕೇಳಿದಾಗ ಕಿಶೋರಿ ತಾಯಿ ನಿರಾಕರಿಸುತ್ತ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದರೆ ನಿನಗೆ ಅದು ಕಣ್ಣಿಗೆ ಸಹ ಕಾಣದು, ಬದಲಾಗಿ ನೀನು ಅದನ್ನು ಆ ಪ್ರೀತಿಯ ತರಂಗಗಳ ಮೂಲಕ ಅನುಭವಿಸಬೇಕಷ್ಟೇ. ಹಿಂದುಸ್ತಾನಿ ಸಂಗೀತವೂ ಸಹ ಅಷ್ಟೇ ಎಂದು ಖಚಿತವಾಗಿ ಹೇಳುತ್ತಿದ್ದರು. ರಸಿಕ ಕೇಳುಗರೆನ್ನುವ ಪದವನ್ನು ತಿರಸ್ಕರಿಸುತ್ತಿದ್ದರು. ವಿಭಾ ಪುರಂದರೆ ಅವರು ಹೇಳಿದಂತೆ, she can say “Yes. I contradict myself. I contain many.”

ಮುಂದುವರೆದು ವಿಭಾ ಪುರಂದರೆ ಅವರು ಹೇಳುತ್ತಾರೆ ಕಿಶೋರಿತಾಯಿಯವರು ತಮ್ಮೊಳಗೆ ಮಗುವನ್ನು, ಮಿಸ್ಟಿಕ್ ಅನ್ನು, ಕಲಾವಿದೆಯನ್ನು ಕೂಡಿಟ್ಟುಕೊಂಡಿದ್ದರು. ಆಕೆ ತನಗೆ ಪರಿಚಿತ ಜಗತ್ತನ್ನು ಪ್ರೀತಿಸುವುದಕ್ಕಿಂತ ತನಗೆ ಅಪರಿಚಿತ ಜಗತ್ತಿನೊಂದಿಗಿನ ಗ್ರಹಿಕೆ ನಿಜಕ್ಕೂ ಮಂತ್ರಮುಗ್ಧಗೊಳಿಸುತ್ತದೆ. ಕಿಶೋರಿತಾಯಿಯವರು ತಮ್ಮನ್ನು ತಾವು ಕೇಳಿಕೊಳ್ಳುತ್ತಾರೆ ಈ ಸ್ವರಗಳು ಎಷ್ಟರಮಟ್ಟಿಗೆ ನನಗೆ ಪರಿಚಿತ? ಈ ಸ್ವರಗಳು ತಮ್ಮೊಳಗೆ ವರ್ತಿಸುವ ಬಗೆ ನಾನು ಹೇಗೆ ತಿಳಿದುಕೊಳ್ಳುವುದು? ಒಂದು ಇದನ್ನು ನಾನು ನೋಡುವಂತಾಗಿದ್ದರೆ ಬಹಶ ನಾನು ಈ ಸ್ವರಗಳೊಂದಿಗೆ ಮಾತನಾಡಬಹುದಿತ್ತು. ಸೌಂದರ್ಯದ ಹುಡುಕಾಟ ಕಿಶೋರಿತಾಯಿಯವರನ್ನು ಪಲಾಯನವಾದಿಗಳನ್ನಾಗಿ ಮಾಡಲಿಲ್ಲ. ಅವರ ಪ್ರಕಾರ ಜೀವನದ ಕ್ರೌರ್ಯಗಳಾದ ನೋವುಗಳು, ಹಿಂಸೆ ಮತ್ತು ಕತ್ತಲನ್ನು ಈ ಸಂಗೀತದ ಕಲೆಯು ಸ್ಪರ್ಶಿಸಿದಾಗ ಆ ಕ್ರೌರ್ಯಗಳು ಅಳಸಿಹೋಗುವುದಿಲ್ಲ, ಬದಲಾಗಿ ಆ ಕ್ರೌರ್ಯದಿಂದ ಹೊರಬರುವ ಶಕ್ತಿಯನ್ನು, ಬಲವನ್ನು, ಬೆಳಕನ್ನು ನೀಡುತ್ತದೆ.

ಗುಲಾಬಿಯೊಂದಿಗೆ ಅದರ ಮುಳ್ಳನ್ನು ಮುಟ್ಟಿದಾಗ ಆಗುವ ನೋವು ಶಾಂತಿಯ ಸ್ವರೂಪದ್ದಾಗಿರುತ್ತದೆ ಅದೇ ರೀತಿ ಕಲೆಯೂ ಸಹ. ಮೊನ್ನೆ ಮಂಗಳೂರಿನಲ್ಲಿ ಅಮಾಯಕ ಹೆಣ್ಣುಮಕ್ಕಳ ಮೇಲೆ ನಡೆದ ಅಮಾನುಷ ಹಲ್ಲೆಯನ್ನು ನೋಡಿ ಮನಸ್ಸು ಮುರಿದು ಹೋಗಿತ್ತು. ಗೂಂಡಾಗಳ ಈ ಹಲ್ಲೆಯನ್ನು ಸಾರ್ವಜನಿಕವಾಗಿ ಪ್ರತಿಭಟಿಸಿದರೂ ಮನಸ್ಸಿಗೆ ಸಮಾಧಾನವಿರಲಿಲ್ಲ. ಒಂದು ರೀತಿಯ ಅಪರಾಧ ಮನೋಭಾವ ಕಾಡುತ್ತಲೇ ಇತ್ತು. ಆಗ ನನ್ನ ಚೇತನ ಕಿಶೋರಿತಾಯಿಯ ಧ್ವನಿಯನ್ನು ಆಲಿಸತೊಡಗಿದಾಗ ಆ ಕ್ರೌರ್ಯದಿಂದ ಹೊರಬರುವ ಶಕ್ತಿ, ಮತ್ತು ಬೆಳಕು ಗೋಚರಿಸತೊಡಗಿತು.

ಕಿಶೋರಿ ಅಮೊನ್ಕರ್, ನಿನಗೆ ಸಾವಿರದ ಶರಣು.