Daily Archives: August 10, 2012

ಕಾಂಗ್ರೇಸ್ ಮತ್ತು ತಿರುಕನ ಕನಸು


– ಡಾ.ಎನ್.ಜಗದೀಶ್ ಕೊಪ್ಪ


 

ನಾಲ್ಕು ವರ್ಷಗಳ ಬಿ.ಜೆ.ಪಿ.ಯ ಭ್ರಷ್ಟ ಆಡಳಿತದಲ್ಲಿ ಕೇವಲ ಹನ್ನೊಂದು ತಿಂಗಳ ಕಾಲ ಪಾರದರ್ಶಕ ಆಡಳಿತ ನೀಡಿ, ತನ್ನದೇ ಪಕ್ಷದ ಕಳಂಕಿತರ ಬ್ಲಾಕ್ ಮೇಲ್ ರಾಜಕೀಯದಿಂದಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಸಂದರ್ಭದಲ್ಲಿ ಡಿ.ವಿ. ಸದಾನಂದಗೌಡ ಇಂಗ್ಲೀಷ್ ನಿಯತಕಾಲಿಕೆಗೆ ಸಂದರ್ಶನ ನೀಡಿದ್ದರು. ಅಲ್ಲದೇ ಕಾಂಗ್ರೇಸ್ ಪಕ್ಷದ ಮರ್ಮಕ್ಕೆ ತಾಗುವಂತೆ ಒಂದು ಮಾತು ಹೇಳಿದ್ದರು.

ಇಷ್ಟೆಲ್ಲಾ ಹಗರಣಗಳ ನಡುವೆ ಬಿ.ಜೆ.ಪಿ. ಪಕ್ಷ ಉಪಚುನಾವಣೆಗಳಲ್ಲಿ ಗೆಲುವು ಸಾಧಿಸದ ಗುಟ್ಟೇನು ಎಂಬ ಪ್ರಶ್ನೆಗೆ ಸದಾನಂದಗೌಡ ಉತ್ತರಿಸುತ್ತಾ, ರಾಜ್ಯದಲ್ಲಿ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಬೇಕಾಗಿದ್ದ ಕಾಂಗ್ರೇಸ್ ಪಕ್ಷದ ನಿಷ್ಕ್ರಿಯತೆ ನಮ್ಮ ಯಶಸ್ವಿನ ಗುಟ್ಟು ಎನ್ನುತ್ತಾ, ಇದು ಬಿ.ಜೆ.ಪಿ. ಪಕ್ಷದ ಗೆಲುವಿಗೆ ಕಾರಣವಾಯ್ತು ಎಂದಿದ್ದರು. ಕಳೆದ ನಾಲ್ಕು ವರ್ಷದ ರಾಜಕೀಯವನ್ನು ಗಮನಿಸಿದವರಿಗೆ ಸದಾನಂದಗೌಡರ ಮಾತಿನ ಹಿಂದಿನ ಮರ್ಮ ಅಥವಾ ಸತ್ಯ ಅರ್ಥವಾಗುತ್ತದೆ. ಜೊತೆಗೆ ಈ ಮಾತು ಅತಿಶಯೋಕ್ತಿ ಅಲ್ಲ ಎಂದೆನಿಸುತ್ತದೆ. ಆದರೆ, ಕಾಂಗ್ರೇಸಿಗರಿಗೆ ಮಾತ್ರ ಈ ಶತಮಾನದಲ್ಲಿ ಈ ವಾಸ್ತವ ಅರ್ಥವಾಗುವ ಸಾಧ್ಯತೆ ಕಡಿಮೆ.

ಬಿ.ಜೆ.ಪಿ. ಪಕ್ಷ ಮತ್ತು ಸರ್ಕಾರದ ಆಂತರೀಕ ಕಚ್ಚಾಟ ಹಾಗೂ ಮಿತಿ ಮೀರಿದ ಭ್ರಷ್ಟಾಚಾರ, ಜಾತಿಯತೆ ಇವುಗಳಿಂದ ಮುಂದಿನ ಚುನಾವಣೆಯಲ್ಲಿ ಮತ್ತೇ ಅಧಿಕಾರಕ್ಕೆ ಬರುವ ಸಾಧ್ಯತೆ ಕ್ಷೀಣಿಸಿದೆ. ಆದರೆ, ಬಿ.ಜೆ.ಪಿ. ಪಕ್ಷದ ವೈಫಲ್ಯತೆಯನ್ನು ತಮ್ಮ ಪಕ್ಷದ ಸಾಧನೆ ಎಂಬಂತೆ ಕನಸು ಕಾಣುತ್ತಿರುವ ಕಾಂಗ್ರೇಸಿಗರ ಇತ್ತೀಚೆಗಿನ ನಡವಳಿಕೆಗಳು ಪ್ರಜ್ಙಾವಂತರಲ್ಲಿ ಜಿಗುಪ್ಸೆಯ ಭಾವನೆ ಮೂಡಿಸಿವೆ. ಕರ್ನಾಟಕದ ಜನ ಮುಂದಿನ ಚುನಾವಣೆಯಲ್ಲಿ ಅಧಿಕಾರವನ್ನು ಬೆಳ್ಳಿ ತಟ್ಟೆಯಲ್ಲಿ ಇಟ್ಟು ಕೊಡುತ್ತಾರೆಂದು ಕಾಂಗ್ರೇಸಿಗರು ತಿರುಕನ ಕನಸು ಕಾಣುತಿದ್ದಾರೆ.

ಚುನಾವಣೆ ಹತ್ತಿರವಾಗುತಿದ್ದಂತೆ, ನಿದ್ರೆಯಿಂದ ಎದ್ದವರಂತೆ ಕಾಣುವ ಕಾಂಗ್ರೇಸ್ ಪಕ್ಷದ ನಾಯಕರು ಅಧಿಕಾರದ ಚುಕ್ಕಾಣಿ ಹಿಡಿಯುವ ಸಂಭ್ರ್ರಮದಲ್ಲಿ ಜಾತೀಯ ಬಣಗಳನ್ನು ರೂಪಿಸಿಕೊಂಡು ರಾಜಕೀಯ ತಂತ್ರಗಳನ್ನು ಹೆಣೆಯುತಿದ್ದಾರೆ. ಈಗಾಗಲೇ ಅಲ್ಪಸಂಖ್ಯಾತರ ಮುಸ್ಲಿಂ ಬಣ, ಒಕ್ಕಲಿಗರ ಬಣ, ಲಿಂಗಾಯತರ ಬಣ, ಮತ್ತು ಪರಿಶಿಷ್ಟಜಾತಿ ಮತ್ತು ಪಂಗಡಕ್ಕೆ ಸೇರಿದ ಬಣಗಳು ಕಾಂಗ್ರೇಸ್ ಪಕ್ಷದಲ್ಲಿ ಸೃಷ್ಟಿಯಾಗಿವೆ. ನಿನ್ನೆ ತಾನೆ (9-8-12) ಬೆಂಗಳೂರಿನ ಹೋಟೆಲ್ ಒಂದರಲ್ಲಿ ಹಿಂದುಳಿದ ವರ್ಗದವರ ಗೌಪ್ಯ ಸಭೆ ನಡೆಯಿತು. ಅಧ್ಯಕ್ಷ ಪಟ್ಟ ಪಡೆಯಲು ಲಿಂಗಾಯುತರು ಶ್ಯಾಮನೂರು ಶಿವಶಂಕರಪ್ಪ ಎನ್ನುವ ಕ್ಯಾಪಿಟೇಷನ್ ಮಾಫಿಯಾದ ದೊರೆಯನ್ನು ಮುಂದಿಟ್ಟುಕೊಂಡು ಚದುರಂಗದ ಆಟಕ್ಕೆ ಈಗಾಗಲೇ ಆಹ್ವಾನ ನೀಡಿದ್ದಾರೆ.

ಅಧಿಕಾರದ ಕನಸು ಕಾಣುತ್ತಿರುವ ಕಾಂಗ್ರೇಸ್ ಪಕ್ಷದ ನಾಯಕರಿಗೆ ಆತ್ಮಸಾಕ್ಷಿ ಇದ್ದರೆ, ತಮ್ಮ ಆತ್ಮಕ್ಕೆ ತಾವೇ ಪ್ರಶ್ನೆ ಹಾಕಿಕೊಂಡು ಉತ್ತರಕಂಡುಕೊಳ್ಳಬೇಕಿದೆ. ವೈಯಕ್ತಿಕ ನೆಲೆಯಲ್ಲಿ ಸಿದ್ಧರಾಮಯ್ಯ ಒಬ್ಬರನ್ನು ಹೊರತು ಪಡಿಸಿದರೆ, ಆಡಳಿತಾರೂಢ ಬಿ.ಜೆ.ಪಿ ಪಕ್ಷದ ವಿರುದ್ದ ಎಷ್ಟು ಮಂದಿ ಧ್ವನಿ ಎತ್ತಿದ್ದಾರೆ? ಬೆಂಗಳೂರು ನಗರದಲ್ಲಿ ಕಳೆದ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಶೋಭ ಕರಂದ್ಲಾಜೆ ವಿರುದ್ಧ ಸೋತ ಎಸ್.ಟಿ. ಸೋಮಶೇಖರ್ ಎಂಬ ಯುವಕ ಹಾಗೂ ಯುವ ಶಾಸಕರಾದ ದಿನೇಶ್‌ ಗುಂಡೂರಾವ್, ಕೃಷ್ಣ ಭೈರೇಗೌಡ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಎಂಬ ಯುವ ನಾಯಕರು ನಿರಂತರವಾಗಿ ಬಿ.ಜೆ.ಪಿ. ಸರ್ಕಾರವನ್ನು ಅಣಕು ಪ್ರದರ್ಶನಗಳ ಮೂಲಕ ವಿರೋಧಿಸುತ್ತಾ ಬಂದಿದ್ದನ್ನು ಬಿಟ್ಟರೆ, ಜಿಲ್ಲಾ ಮಟ್ಟದಲ್ಲಾಗಲಿ, ಪ್ರಾದೇಶಿಕ ವಲಯದ ಮಟ್ಟದಲ್ಲಾಗಲಿ, ಕಾಂಗ್ರೇಸಿಗರಿಂದ ಯಾವುದೇ ಪರಿಣಾಮಕಾರಿ ಪ್ರತಿಭಟನೆ ಸಾಧ್ಯವಾಗಲೇ ಇಲ್ಲ.

ಮುಂದಿನ ದಿನಗಳಲ್ಲಿ ಬಿ.ಜೆ.ಪಿ. ಅಧಿಕಾರ ಕಳೆದುಕೊಂಡರೆ, ಅದು ಸ್ವಯಂಕೃತ ಅಪರಾಧದಿಂದಲೇ ಹೊರತು, ಕಾಂಗ್ರೇಸ್ ಪಕ್ಷದ ಪರಿಣಾಮಕಾರಿ ವಿರೋಧಿ ನಿಲುವಿನಂದ ಅಲ್ಲ. ಕಾಂಗ್ರೇಸಿಗರ ಇತಿಹಾಸವೇ ಅಂತಹದ್ದು. ಅವರು ಅಧಿಕಾರ ನಡೆಸಬಲ್ಲವರೇ ಹೊರತು, ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಆಳುತ್ತಿರುವ ಸರ್ಕಾರದ ವೈಫಲ್ಯತೆಗಳನ್ನು ಹೊರ ತೆಗೆಯುವ ಯೋಗ್ಯತೆ ಇಲ್ಲ. ಕಳೆದ ನಾಲ್ಕು ದಶಕಗಳ ದೇಶದ ರಾಜಕಾರಣ ಮತ್ತು ಹಲವು ರಾಜ್ಯಗಳ ರಾಜಕೀಯ ಇತಿಹಾಸ ಗಮನಿಸಿದರೆ, ಈ ಸತ್ಯ ಅರ್ಥವಾಗಬಲ್ಲದು. ದಕ್ಷಿಣ ಭಾರತದ ತಮಿಳುನಾಡು, ಆಂಧ್ರ, ಕರ್ನಾಟಕದಲ್ಲಿ ಬಲವಾಗಿದ್ದ ಕಾಂಗ್ರೇಸ್ ಪಕ್ಷದಬೇರುಗಳು ಏಕೆ ಸಡಿಲಗೊಂಡವು? ಮತ್ತು ಮಹಾರಾಷ್ಟ್ರ, ರಾಜಸ್ಥಾನ್, ಉತ್ತರಪ್ರದೇಶ, ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ ರಾಜ್ಯಗಳಲ್ಲಿ ನೆಲೆ ಕಳೆದುಕೊಳ್ಳಲು ಕಾರಣವೇನು ಎಂಬುದರ ಬಗ್ಗೆ ಹಿರಿಯ ಕಾಂಗ್ರೇಸಿಗರು ಒಮ್ಮೆ ತಣ್ಣಗೆ ಕುಳಿತು ಪರಾಮರ್ಶಿಸಕೊಳ್ಳಬೇಕಾಗಿದೆ. ಇಂದಿರಾ ಗಾಂಧಿ ಕಾಲದ ಗರೀಭಿ ಹಠಾವೋ ಘೋಷಣೆಯಾಗಲಿ, ಅಥವಾ ಸೋನಿಯ ಮತ್ತು ರಾಹುಲ್ ಮುಖವುಳ್ಳ ಭಿತ್ತಿಚಿತ್ರವಾಗಲಿ ಮತಗಳನ್ನು ತರುವ ದಿನಗಳು ಈಗ ಇತಿಹಾಸದ ಗರ್ಭದೊಳಗೆ ಹೂತು ಹೋಗಿವೆ. ಪ್ರತಿ ಚುನಾವಣೆಗೆ ಹೊಸತಲೆಮಾರಿನ ಹೊಸಚಿಂತನೆಯ ಮತದಾರರು ಸೇರ್ಪಡೆಯಾಗುತಿದ್ದಾರೆ. ಮೊದಲು ಕಾಂಗ್ರೇಸಿಗರು ಇದನ್ನು ಮನನ ಮಾಡಿಕೊಳ್ಳುವುದು ಓಳ್ಳೆಯದು.

ಎರಡು ವರ್ಷಗಳ ಹಿಂದೆ ಬಳ್ಳಾರಿ ರೆಡ್ಡಿ ಸಹೋದರರು ವಿಧಾನ ಸಭೆಯಲ್ಲಿ ಬಳ್ಳಾರಿಗೆ ಬನ್ನಿ ನೋಡಿಕೊಳ್ಳುತ್ತೇವೆ ಎಂಬ ಸವಾಲನ್ನು ಎಸೆದಾಗ, ಸಿದ್ಧರಾಮಯ್ಯನವರನ್ನು ಹೊರತುಪಡಿಸಿ ಆ ಸವಾಲನ್ನು ಸ್ವೀಕರಿಸುವ ಶಕ್ತಿ ಯಾವ ಒಬ್ಬ ಕಾಂಗ್ರೇಸ್ ನಾಯಕನಿಗೆ ಇರಲಿಲ್ಲ. ವಿಧಾನ ಸಭೆಯ ಹೊರಗೆ ಮತ್ತು ಒಳಗೆ ಏಕಾಂಗಿ ಬಿ.ಜೆ.ಪಿ ಪಕ್ಷದ ವಿರುದ್ಧ ಧ್ವನಿಯೆತ್ತಿದ ಸಿದ್ಧರಾಮಯ್ಯ ಇವತ್ತು ಕಾಂಗ್ರೇಸ್ ಪಕ್ಷದಲ್ಲಿ ಅಕ್ಷರಶಃ ಏಕಾಂಗಿಯಾಗಿದ್ದಾರೆ. ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸುವ ಕುಟಿಲೋಪಾಯಗಳು ಮತ್ತು ತಂತ್ರಗಳು ಈಗಾಗಲೇ ಕಾಂಗ್ರೇಸ್ ಪಕ್ಷದಲ್ಲಿ ಸಿದ್ಧವಾಗಿವೆ. ಈ ಕಾರಣಕ್ಕಾಗಿ ಪಕ್ಷದ ಒಳಗೆ ಜಾತಿಯ ಬಣಗಳು ಬುಸುಗುಟುತ್ತಿವೆ.

ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಲಾಭಿ ನಡೆಸುತ್ತಿರುವ ಶ್ಯಾಮನೂರು ಶಿವಶಂಕರಪ್ಪನವರಿಗೆ ಇರುವ ಅರ್ಹತೆಯಾದರೂ ಏನು? ಪಕ್ಷಕ್ಕೆ ದೇಣಿಗೆ ಕೊಟ್ಟಿದ್ದನ್ನು ಬಿಟ್ಟರೆ, ದೊರೆಯಂತೆ, ಒಂದು ಸಂಸ್ಥಾನದ ಮಾಂಡಲೀಕನಂತೆ ಬದುಕಿದ್ದನ್ನು ಹೊರತುಪಡಿಸಿದರೆ, ಅವರು ಜನಸಾಮಾನ್ಯರ ಜೊತೆ ಬೆರತದ್ದಾಗಲಿ, ಕಷ್ಟ ಸುಖ ವಿಚಾರಿಸಿದ್ದನ್ನು ಕಂಡ ಜೀವಗಳು ಕರ್ನಾಟಕದಲ್ಲಿ ಇದ್ದಾವೆಯೆ? ಇವತ್ತು ವೈದ್ಯಕೀಯ ಶಿಕ್ಷಣ ದುಭಾರಿಯಾಗಿ, ಅದೊಂದು ದಂಧೆಯಾಗಿ, ಕ್ಯಾಫಿಟೇಷನ್ ಮಾಫಿಯ ಬೆಳೆಯಲು ಇಬ್ಬರು ಕಾಂಗ್ರೇಸ್ ನಾಯಕರು ಕಾರಣ. ಅವರೆಂದರೆ, ಒಬ್ಬರು, ಆರ್.ಎಲ್. ಜಾಲಪ್ಪ ಮತ್ತೊಬ್ಬರು ಶಿವಶಂಕರಪ್ಪ. ಇಂತಹವರನ್ನು ಮುಂದಿಟ್ಟುಕೊಂಡು ಯಾವ ಮುಖ ಹೊತ್ತುಕೊಂಡು ಕಾಂಗ್ರೇಸಿಗರು ಚುನಾವಣೆ ಎದುರಿಸುತ್ತಾರೆ?

ಚುನಾವಣೆಯಲ್ಲಿ ಸೋತರೂ, ಕಂಗೆಡೆದೆ ಉತ್ತರ ಕರ್ನಾಟಕದ 120ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕೇವಲ ಹತ್ತು ಪೈಸೆ ವೆಚ್ಚದಲ್ಲಿ ಒಂದು ಲೀಟರ್ ಶುದ್ಧ ಕುಡಿಯುವ ನೀರು ದೊರೆಯುವಂತೆ ಮಾಡುತ್ತಿರುವ ಕಾಂಗ್ರೇಸ್‌ನ ಮಾಜಿ ಸಚಿವ ಗದಗದ ಹುಲಕೋಟಿಯ ಕೆ.ಹೆಚ್. ಪಾಟೀಲ್ ಮತ್ತು ಅವರ ಸಹೋದರ ಡಿ.ಆರ್. ಪಾಟೀಲರಿಂದ ಕಾಂಗ್ರೇಸಿಗರು ಮತ್ತು ಕಾರ್ಯಕರ್ತರು ಕಲಿಯುವುದು ಬಹಳಷ್ಟಿದೆ.

ವಿದ್ಯುತ್ ಉತ್ಪಾದನೆ, ರಸ್ತೆ ದುರಸ್ತಿ, ಬರ ನಿರ್ವಹಣೆ, ಲೋಕಾಯುಕ್ತರ ನೇಮಕ ವಿಳಂಭ ಧೋರಣೆ ಕುರಿತು ಆಡಳಿತಾರೂಢ ಬಿ.ಜೆ.ಪಿ. ಸರ್ಕಾರದ ವಿರುದ್ಧ ರಾಜ್ಯವ್ಯಾಪಿ ಆಂದೋಲನ ಹಮ್ಮಿಕೊಳ್ಳುವಲ್ಲಿ ಕಾಂಗ್ರೇಸ್‌ ಪಕ್ಷ ಎಲ್ಲಿ ಎಡವಿದೆ ಎಂಬುದರ ಬಗ್ಗೆ ನಾಯಕರು ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಇವತ್ತು ಜಿಲ್ಲಾ ಮಟ್ಟದ ಕಾಂಗ್ರೇಸ್ ಸಭೆಗಳಿರಲಿ, ತಾಲೋಕು ಮಟ್ಟದ ಕಾಂಗ್ರೇಸ್ ಕಾರ್ಯಕರ್ತರ ಸಭೆಗೆ ನಾಯಕರು ತಲೆಗೆ ಹೆಲ್ಮೆಟ್ ಧರಿಸಿ ಹೋಗಬೇಕಾದ ಸ್ಥಿತಿ ಬಂದೊದಗಿದೆ. ಪ್ರತಿ ಜಿಲ್ಲಾ ಘಟಕದಲ್ಲೂ ಎರಡು ಮೂರು ಬಣ ಸೃಷ್ಟಿಯಾಗಿವೆ. ಇವರುಗಳ ಗರಡಿ ಮನೆ ವರಸೆ ಮತ್ತು ಜಂಗೀ ಕುಸ್ತಿಗಳು ದೃಶ್ಯ ಮಾಧ್ಯಮಗಳಲ್ಲಿ ದಿನ ನಿತ್ಯ ಪ್ರಸಾರವಾಗುತ್ತಿವೆ. ಕರ್ನಾಟಕದ ಜನತೆ ಇವರ ಅಸಹನೀಯ ಚಟುವಟಿಕೆಗಳಿಂದ ಬೇಸತ್ತಿದ್ದಾರೆ. ಇಂತಹ ಅಯೋಮಯ ಸ್ಥಿತಿಯಲ್ಲಿ ಪಕ್ಷದಲ್ಲಿ ಬಣಗಳನ್ನು ಸೃಷ್ಟಿಸಿಕೊಂಡು ಅಧಿಕಾರಕ್ಕಾಗಿ ನಾಯಕರು, ಕಾರ್ಯಕರ್ತರು ಕಚ್ಚಾಡಿದರೆ, ಕರ್ನಾಟಕದ ಜನತೆ ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಪಕ್ಷವನ್ನು ಕಸದ ಬುಟ್ಟಿಗೆ ಎಸೆಯುವುದು ಖಚಿತ.