ಮಂಗಳೂರು ಹೋಮ್‌ಸ್ಟೇ ದಾಳಿಯಲ್ಲಿ 28/07/12 ರಂದು ಹಲ್ಲೆಗೊಳಗಾದವರ ಪತ್ರಿಕಾ ಪ್ರಕಟಣೆ

ಮಂಗಳೂರಿನ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇಯಲ್ಲಿ ಬರ್ತ್‌ಡೇ ಪಾರ್ಟಿ ಆಚರಿಸಿಕೊಳ್ಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯ ನಂತರ ಹಲವಾರು ಬೆಳವಣಿಗೆಗಳು ನಡೆದಿದೆ. ವಿದ್ಯಾರ್ಥಿಗಳ ನಡತೆಯ ಬಗ್ಗೆ, ವಿದ್ಯಾರ್ಥಿಗಳ ಹೆತ್ತವರ ಹಿನ್ನೆಲೆಯ ಬಗ್ಗೆ ಹಾದಿ ಬೀದಿಯಲ್ಲಿ ಚರ್ಚೆಯಾಗಿದೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಕುಮಾರಿ ಮಂಜುಳಾ ಸರಕಾರಕ್ಕೆ ಬಹಳ ಬೇಜವಾಬ್ದಾರಿಯುತ ಮತ್ತು ಪಕ್ಷಪಾತಿ ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಟ್ಟಾರೆ ಘಟನೆ ಮತ್ತು ಒತ್ತಾಯಗಳ ಬಗ್ಗೆ ಹಲ್ಲೆಗೆ ಒಳಗಾದ ವಿದ್ಯಾರ್ಥಿಗಳೇ ಮಂಗಳೂರಿನ ಪ್ರೆಸ್ ಕ್ಲಬ್ಬಿನಲ್ಲಿ ಇಂದು, (11/08/12) ಪತ್ರಿಕಾಗೋಷ್ಠಿ ನಡೆಸಿದ್ದಾರೆ. ವಿದ್ಯಾರ್ಥಿಗಳು ನೀಡಿದ ಪತ್ರಿಕಾ ಪ್ರಕಟಣೆಯ ಯಥಾಪ್ರತಿ ಇದು.

ದಿನಾಂಕ : 11 ಆಗಸ್ಟ್
ಸ್ಥಳ : ಪ್ರೆಸ್ ಕ್ಲಬ್, ಮಂಗಳೂರು

ದಿನಾಂಕ 28-07-2012 ರಂದು ನಡೆದ ಘಟನೆ

ವಿಜಯ್ ಮತ್ತು ಸಂಜನಾ ಆತ್ಮೀಯ ಸ್ನೇಹಿತರಾಗಿದ್ದು ಜುಲೈ 28 ರಂದು ಇಬ್ಬರದ್ದೂ ಹುಟ್ಟುಹಬ್ಬವಾಗಿರುತ್ತದೆ. ಅವರಿಬ್ಬರಿಗೂ ತಮ್ಮ  ತಮ್ಮ ಮಿತ್ರರಿಗೆ ಖಾಸಗಿಯಾಗಿ ಊಟ ನೀಡಿ ಹುಟ್ಟು ಹಬ್ಬವನ್ನು ಸ್ನೇಹಿತರ ಹಾಜರಾತಿಯಲ್ಲಿ ಆಚರಿಸಬೇಕು ಎಂಬ ಹಂಬಲವಿತ್ತು. ವಿಜಯ್ ಮತ್ತು ಸಂಜನಾ ಈ ವಿಷಯವನ್ನು ಪರಸ್ಪರ ಹಂಚಿಕೊಂಡಾಗ ಹುಟ್ಟು ಹಬ್ಬದ ದಿನದಂದು ಯಾವುದಾದರೂ ಬಾಡಿಗೆಗೆ ಸಿಗುವ ಸಾರ್ವಜನಿಕ ಸ್ಥಳದಲ್ಲಿ ಆಚರಿಸಿಕೊಂಡು ಅದರ ಬಾಡಿಗೆಯನ್ನು ಪರಸ್ಪರ ಇಬ್ಬರೂ ಸಮಾನವಾಗಿ ಭರಿಸಿಕೊಳ್ಳುವುದೆಂದು ನಿರ್ಧರಿಸಲಾಗಿತ್ತು. ಈ ಕೂಟಕ್ಕೆ ಸಂಜನಾಳು ತನ್ನ ಆತ್ಮೀಯ ಸ್ನೇಹಿತರು ಮತ್ತು ಒಂದಿಷ್ಟು ಸಹಪಾಠಿಗಳನ್ನು ಕರೆದುಕೊಂಡು ಬರುವುದಾಗಿಯೂ ಮತ್ತಿ  ತಾನು ತನ್ನ ಸ್ನೇಹಿತರ ಜೊತೆ ಸಂಜೆ ಮೂರರಿಂದ ಸಂಜೆ ಏಳು ಗಂಟೆಯವರೆಗೆ ಮಾತ್ರ ಆಚರಿಸುವುದಾಗಿಯೂ ಆ ಬಳಿಕ ತಮ್ಮ ತಂದೆ ತಾಯಿ ನಮ್ಮನ್ನು ಕರೆದುಕೊಂಡು ಹೋಗಲು ಬರುವುದಾಗಿಯೂ ನಮಗೆ ಹೇಳಿದ್ದಳು. ಹಾಗೂ ತನ್ನ ಹುಟ್ಟು ಹಬ್ಬದ ಸಲುವಾಗಿ ತಿಂಡಿ ತಿನಸುಗಳನ್ನು ಮತ್ತು ಕೇಕನ್ನು ಹೊಟೇಲ್‌ನಿಂದ ತರುವುದಾಗಿಯೂ ಹೇಳಿದ್ದಳು.
ವಿಜಯ್‌ನ ಹುಟ್ಟು ಹಬ್ಬದ ಆಚರಣೆಯನ್ನು ರಾತ್ರಿ ಏಳು ಗಂಟೆಯಿಂದ ತನ್ನ ಆತ್ಮೀಯ ಸ್ನೇಹಿತ ಹುಡುಗರೊಂದಿಗೆ ಆಚರಿಸುವುದಾಗಿಯೂ ನಿರ್ಧರಿಸಲಾಗಿತ್ತು. ಸಂಜನಾಳ ಹುಟ್ಟು ಹಬ್ಬದ ಮತ್ತು ವಿಜಯ್‌ನ ಹುಟ್ಟು ಹಬ್ಬದ ಸಮಯ ಬೇರೆ ಬೇರೆ ಆಗಿದ್ದರಿಂದ ಅದೇ ರೀತಿ ಆಚರಿಸಲು ನಿರ್ಧರಿಸಲಾಗಿತ್ತು.

ಈ ಹುಟ್ಟು ಹಬ್ಬಕ್ಕಾಗಿ ಒಂದು ಹಾಲ್  ಹುಡುಕುತ್ತಿದ್ದಾಗ ಪಡೀಲ್‌ನಲ್ಲಿ ಒಂದು ಹಾಲ್ ಇದೆ ಎಂದು ತಿಳಿದು ಬಂದಿದ್ದರಿಂದ ಆ ಬಗ್ಗೆ ಸಂಬಂಧಿತ ವ್ಯಕ್ತಿಗಳನ್ನು ಹುಡುಕುತ್ತಿದ್ದೆವು. ಸುಮಾರು 1.30 ರ ವೇಳೆಗೆ ಹೋಂ ಸ್ಟೇ ಮಾಲೀಕರು ಮಂಗಳೂರು ಜಸ್ಟ್ ಕ್ಯಾಶುವಲ್ ಎಂಬ ಬಟ್ಟೆ ಅಂಗಡಿ ಮಾಲಕರಾಗಿದ್ದು ಅವರನ್ನು ಸಂಪರ್ಕಿಸಿ 24 ಗಂಟೆಗೆ ಐದು ಸಾವಿರ ರೂಪಾಯಿಯ ಒಟ್ಟು ಬಾಡಿಗೆಯನ್ನು ನಿಗದಿಪಡಿಸಿ ಒಂದು ಸಾವಿರ ರೂಪಾಯಿ ಹೆಚ್ಚುವರಿ ಠೇವಣಿಯಾಗಿ ಒಟ್ಟು ಆರು ಸಾವಿರ ರೂಪಾಯಿಯನ್ನು ನೀಡಿದ್ದೆವು. ಹುಟ್ಟು ಹಬ್ಬ ಆಚರಿಸಲು ಸ್ಥಳ ದೊರಕಿದ ಕೂಡಲೇ ಸಂಜನಾಳಿಗೆ ತಿಳಿಸಿದೆವು. ಆಕೆ ತನ್ನ ಸ್ನೇಹಿತೆಯರು ಮತ್ತು ಸ್ನೇಹಿತರೊಂದಿಗೆ ಸುಮಾರು 2.30 ಅಥವಾ 3.00 ಗಂಟೆಯ ವೇಳೆಗೆ ಜೀಪಿನಲ್ಲಿ ಹೋಂ ಸ್ಟೇಗೆ ಬಂದಿದ್ದಳು. ಸಂಜನಾಳು 3.15 ರಿಂದ 3.30 ರವೇಳೆಯಲ್ಲಿ ಕೇಕ್ ಕಟ್ ಮಾಡಿ, ಎಲ್ಲರಿಗೂ ಸಿಹಿ ಹಂಚಿ ಬರ್ತ್‌ಡೇ ಆಚರಿಸಿದ್ದಳು. ಈ ಸಮಯ ವಿಜಯ್ ಮತ್ತು ಆತನ ನಾಲ್ಕು ಮಂದಿ ಸ್ನೇಹಿತರು ರಾತ್ರಿ ನಡೆಯಲಿದ್ದ ವಿಜಯ್‌ನ ಹುಟ್ಟು ಹಬ್ಬದ ಆಚರಣೆಗಾಗಿ ವ್ಯವಸ್ಥೆ ಮಾಡುತ್ತಿದ್ದರು.

ಸಂಜನಾಳ ಹುಟ್ಟು ಹಬ್ಬ ಮುಗಿದ ಬಳಿಕ ಸುಮಾರು 5.40ರ ವೇಳೆಗೆ ಆಕೆಯ ಇಬ್ಬರು ಸ್ನೇಹಿತರು ಮನೆಗೆ ಮರಳಿದ್ದರು. ಸಂಜನಾ ಸೇರಿದಂತೆ ಉಳಿದವರು ಮನೆಗೆ ಹೋಗಲು ಸಿದ್ದರಾಗಿ ತಮ್ಮನ್ನು ಕರೆದುಕೊಂಡು ಹೋಗಲು ಬರಲಿದ್ದ ಹೆತ್ತವರಿಗಾಗಿ ಹೊಂ ಸ್ಟೇಯ ಹೊರಗಡೆ ಕಾಯುತ್ತಿದ್ದರು.

ಸುಮಾರು 7.00 ರಿಂದ 7.30 ರ ಸಂಜೆ ವೇಳೆಗೆ ನಾವಿದ್ದ ಹೋಂ ಸ್ಟೇಗೆ ಅಂದಾಜು ಮೂವತ್ತು ಮಂದಿಯಷ್ಟಿದ್ದ ತಂಡವೊಂದು ದಾಳಿ ಮಾಡುವಂತೆ ಪ್ರವೇಶ ಮಾಡಿತು. ಮನೆಗೆ ಹೊರಡಲು ತಯಾರಾಗಿ ಹೋಂ ಸ್ಟೇಯ ಹೊರಗಡೆ ನಿಂತಿದ್ದ ಸಂಜನಾ ದಾಳಿ ಮಾಡುವಂತೆ ಬರುತ್ತಿದ್ದ ಯುವಕರನ್ನು ಕಂಡು ಹೆದರಿ ಹೋಂ ಸ್ಟೇಯ ಒಳ ಬಂದು ಬಾಗಿಲು ಹಾಕಲು ಪ್ರಯತ್ನಿಸುತ್ತಿದ್ದಳು. ಆದರೆ 25ಕ್ಕೂ ಹೆಚ್ಚು ಯುವಕರು ಬಾಗಿಲನ್ನು ತಳ್ಳಿ ಒಳ ಬಂದು ಹುಡುಗಿಯರಿಗೆ ಹಲ್ಲೆಯನ್ನು ಮಾಡಿದ್ದಾರೆ. ಯುವತಿಯರು ಹಾಕಿಕೊಂಡಿದ್ದ ಬಟ್ಟೆ, ಕೋಟ್‌ಗಳನ್ನು ಎಳೆದಾಡಿದ್ದಾರೆ. ಯುವತಿಯರ ಅತ್ಯಾಚಾರಕ್ಕೆ ಯತ್ನಿಸುವ ರೀತಿಯಲ್ಲಿ ಕೈಯಾಡಿಸಿದ್ದಾರೆ. ಯುವತಿಯರು ಪ್ರತಿಭಟಿಸಿದಾಗ ಕೂದಲಿನಲ್ಲಿ ಹಿಡಿದು ತಲೆಯನ್ನು ಗೋಡೆಗೆ ಬಡಿದಿದ್ದಾರೆ. ಎಲ್ಲಾ ಯುವತಿಯರನ್ನು ಎಳೆದುಕೊಂಡು ಕೋಣೆಯ ಹಾಸಿಗೆಗೆ ದೂಡಿ ಕೆನ್ನೆಗೆ ಹೊಡೆದಿದ್ದಾರೆ. ಯುವಕರ ದಾಳಿಗೆ ಬೆಚ್ಚಿ ಬಿದ್ದ ಯುವತಿಯರಿಬ್ಬರು ಮೊದಲನೇ ಮಹಡಿಯಿಂದ ಜೀವದ ಹಂಗು ತೊರೆದು ಕೆಳಗೆ ಹಾರಿದ್ದಾರೆ. ನೆಲಕ್ಕೆ ಬಿದ್ದ ಯುವತಿಯರನ್ನೂ ಕನಿಷ್ಠ ಮಾನವೀಯತೆ ತೋರದೆ ಕೂದಲು ಹಿಡಿದುಕೊಂಡು ನೆಲದಲ್ಲಿ ಎಳೆದುಕೊಂಡೇ ಕೋಣೆಗೆ ತಂದಿದ್ದಾರೆ. ಇದನ್ನು ಪ್ರತಿಭಟಿಸಿದ ಹುಡುಗರ ಮೇಲೂ ಹಲ್ಲೆಗಳಾಗಿದ್ದಾವೆ. ಹುಡುಗರನ್ನು ಹಿಗ್ಗಾಮುಗ್ಗ ಬಡಿದು ಹಿಂಸಿಸಿ ಗಾಯಗೊಳಿಸಿದ್ದಾರೆ. ಇವೆಲ್ಲವನ್ನೂ ಕೂಡಾ ಮೀಡಿಯಾದ ಕ್ಯಾಮರಾಗಳು ಶೂಟಿಂಗ್ ಮಾಡುತ್ತಿದ್ದವು. ಇದಲ್ಲದೆ ನಮ್ಮನ್ನೆಲ್ಲಾ ಒಂದು ಕೋಣೆಯಲ್ಲಿ ಕೂಡಿ ಹಾಕಿ ದಾಳಿ ನಡೆಸಿದ ಯುವಕರು ಮೊಬೈಲ್‌ನಲ್ಲಿ ಫೋಟೋ ತೆಗೆದಿದ್ದಾರೆ.

ನಮ್ಮ ಮೇಲೆ ಇಷ್ಟೆಲ್ಲಾ ದಾಳಿಯಾಗುತ್ತಿದ್ದಾಗ ಮಾಧ್ಯಮದ ಕ್ಯಾಮರಾಗಳು ಎಲ್ಲವನ್ನೂ ಶೂಟಿಂಗ್ ಮಾಡುತ್ತಿದ್ದವು. ನಮ್ಮ ಮೇಲೆ ದಾಳಿ ನಡೆಸುತ್ತಿದ್ದ ಹತ್ತಾರು ಮಂದಿ ಮೊಬೈಲ್‌ನಲ್ಲೂ ಶೂಟಿಂಗ್ ಮಾಡುತ್ತಿದ್ದರು. ಕ್ಯಾಮರಾ ಹಿಡಿದುಕೊಂಡವರು ಮತ್ತು ಅವರ ಜೊತೆ ಇದ್ದ ಮತ್ತೊಬ್ಬರು ಹುಡುಗಿಯರಿಗೆ ಹೊಡೆಯಬೇಡಿ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಆಗ ದಾಳಿ ನಡೆಸಿದವರು ಮೀಡಿಯಾದ ಕ್ಯಾಮರ ಆಫ್ ಮಾಡುವಂತೆ ಹೇಳಿದರು. ಆದರೆ ಮೀಡಿಯಾದವರು ಕ್ಯಾಮರ ಹಿಡಿದುಕೊಂಡೇ ಇದ್ದರು. ಒಂದು ವೇಳೆ ಮೀಡಿಯಾದ ಕ್ಯಾಮರ ಇಲ್ಲದೇ ಇರುತ್ತಿದ್ದರೆ ಹುಡುಗಿಯರನ್ನು ನಮ್ಮೆದುರೇ ಅವರು ಅತ್ಯಾಚಾರ ಮಾಡುವ ಸಾಧ್ಯತೆ ಇರುವಂತೆ ಕಂಡು ಬಂತು. ದಾಳಿ ಮಾಡಿದವರೆಲ್ಲರೂ ಕುಡಿದಿದ್ದರು. ಕ್ಯಾಮರ ಇಲ್ಲದೇ ಇರುತ್ತಿದ್ದರೆ ಹುಡುಗಿಯರನ್ನು ಅತ್ಯಾಚಾರ ಮಾಡುತ್ತಿದ್ದರೂ ಅಲ್ಲಿ ಕೇಳುವವರೇ ಇಲ್ಲದ ಸ್ಥಿತಿ ಇತ್ತು.

ದಾಳಿಕೋರರ ಹಿಂದೆಯೇ ಪೊಲೀಸರು ಬಂದಿದ್ದು, ಪೊಲೀಸರ ಎದುರೇ ನಮ್ಮ ಮೇಲೆ ದಾಳಿಯಾಗಿದೆ. ದಾಳಿಕೋರರ ಜೊತೆ ಬಂದ ಇನ್ಸ್‌ಪೆಕ್ಟರ್ ನಮ್ಮ ಕೆನ್ನೆಗೆ ಹೊಡೆದರು. ನಂತರ ಬಾಗಿಲು ಹಾಕಿ ವಿಜಯ್ ಕೆನ್ನೆಗೂ ಮತ್ತೊಬ್ಬರು ಪೊಲೀಸರು ಹೊಡೆದರು. ನಮಗೆ ದಾಳಿಕೋರರು ಹೊಡೆಯುತ್ತಿದ್ದರೂ ಪೊಲೀಸರು ಸುಮ್ಮನಿದ್ದರು. ದಾಳಿಕೋರರನ್ನು ಪೊಲೀಸರು ಅರೆಸ್ಟ್ ಮಾಡದೆ ಅವರನ್ನು ಅಲ್ಲಿಂದ ಬೇಗ ಜಾಗ ಖಾಲಿ ಮಾಡುವಂತೆ ಸೂಚಿಸಿದರು.

ಆರೋಪಿಗಳನ್ನು ಮುಕ್ತವಾಗಿ ಬಿಟ್ಟ ಪೊಲೀಸರು ನಮ್ಮನ್ನು ರಾತ್ರಿ ಒಂದು ಗಂಟೆಯವರೆಗೆ ಪಾಂಡೇಶ್ವರ ಠಾಣೆಯಲ್ಲಿ ಕೂಡಿ ಹಾಕಿದರು. ಅಲ್ಲಿ ನಮಗೆ ಊಟ ತಿಂಡಿಯೂ ನೀಡದೆ, ಕನಿಷ್ಠ ಕುಡಿಯಲು ನೀರೂ ನೀಡದೆ, ಚಿಕಿತ್ಸೆಯನ್ನೂ ಕೊಡದೆ ಮಧ್ಯರಾತ್ರಿಯವರೆಗೆ ನಮಗೆ ಬೈಯ್ಯುತ್ತಿದ್ದರು. ಸುಮಾರು ಹನ್ನೊಂದು ಗಂಟೆಯವರೆಗೆ ನಮ್ಮನ್ನೇ ಆರೋಪಿಗಳಂತೆ ನೋಡಿಕೊಂಡು ದಾಳಿ ಮಾಡಿದ ಆರೋಪಿಗಳ ವಿರುದ್ದ ಯಾವುದೇ ಪ್ರಕರಣ ದಾಖಲಿಸದೆ ನಮಗೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಯಿಸಿ ಕಳುಹಿಸುವ ಯೋಚನೆ ಪೊಲೀಸರಿಗಿತ್ತು ಎಂಬಂತೆ ಅವರ ವರ್ತನೆ ಮತ್ತು ಮಾತುಕತೆಗಳಿದ್ದವು. ಮಾಧ್ಯಮಗಳಲ್ಲಿ ಸುದ್ಧಿ ಪ್ರಸಾರವಾಗುತ್ತಿರುವ ಬಗ್ಗೆ ಮತ್ತು ಸರಕಾರದಿಂದ ಒತ್ತಡ ಬರುತ್ತಿರುವ ಬಗ್ಗೆ ಪೊಲೀಸರು ಪರಸ್ಪರ ಮಾತನಾಡುತ್ತಿದ್ದು, ತಕ್ಷಣ ಒಮ್ಮೆಲೆ ಅವಸರಿಸಿಕೊಂಡ ಪೊಲೀಸರು ನಮ್ಮಲ್ಲಿ ದೂರು ನೀಡುವಂತೆ ಹೇಳಿದರು.

ದಾಳಿಕೋರರು ಹಿಂದೂ ಜಾಗರಣ ವೇದಿಕೆಗೆ ಸೇರಿದವರು ಎಂದು ಮಾತ್ರ ನಮಗೆ ಗೊತ್ತಿದ್ದು ಅವರುಗಳ ಹೆಸರುಗಳು ಗೊತ್ತಿಲ್ಲ. ಆದುದರಿಂದ ಯಾರ ಹೆಸರನ್ನೂ ನಾನು ನೀಡದೆ ಘಟನೆಯ ಬಗ್ಗೆ ಮಾತ್ರ ವಿವರಿಸಿದ್ದೆ. ನಂತರ ಖಾಲಿ ಕಾಗದಕ್ಕೆ ನನ್ನಿಂದ ಸಹಿ ಪಡೆದುಕೊಂಡ ಪೊಲೀಸರೇ ದೂರು ಸಿದ್ದಪಡಿಸಿದರು. ಮರುದಿವಸ ರವಿವಾರವೂ ನಮ್ಮನ್ನು ಠಾಣೆಗೆ ಬರುವಂತೆ ಹೇಳಿದ್ದರು. ಬೆಳಿಗ್ಗೆ ಠಾಣೆಗೆ ಹೋದಾಗ ನಮ್ಮನ್ನು ಸಾಲಾಗಿ ನಲ್ಲಿಸಿದ ಪೊಲೀಸರು ಅವಾಚ್ಯವಾಗಿ ಬೈದಿದ್ದಾರೆ.

ಕೇಂದ್ರ, ರಾಜ್ಯ ಸರಕಾರದ ಮುಂದೆ ನಮ್ಮ ಬೇಡಿಕೆಗಳು :

  1. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಘಟನೆಯ ಬಗ್ಗೆ ವರದಿಯನ್ನು ಸಿದ್ದಪಡಿಸಿ ಪತ್ರಿಕಾ ಹೇಳಿಕೆ ನೀಡಿದ್ದು ನಮಗೆ ಅಘಾತ ಉಂಟು ಮಾಡಿದೆ. ಹಲ್ಲೆಗೆ ಒಳಗಾದ ಹುಡುಗರು ಗಾಂಜಾ ಸೇವಿಸಿದ್ದರು ಎಂದು ಅವರು ಹೇಳಿದ್ದಾರೆ. ಅವರು ಯಾವ ಆಧಾರದ ಮೇಲೆ ಅದನ್ನು ಹೇಳಿದರು? ಪೊಲೀಸರು ಇಡೀ ಹೋಂ ಸ್ಟೇಯನ್ನು ಪರಿಶೀಲಿಸಿದ್ದಾರೆ. ಎಲ್ಲೂ ಗಾಂಜಾ ಸಿಕ್ಕಿಲ್ಲ. ಆಯೋಗದ ಅಧ್ಯಕ್ಷರಾಗಲೀ ಸದಸ್ಯರಾಗಲೀ ಸಂತ್ರಸ್ತರಾಗಿ ದೂರುದಾರರಾಗಿರುವ ನಮ್ಮನ್ನು ಬೇಟಿಯಾಗಿಲ್ಲ. ಹಲ್ಲೆಗೆ ಒಳಗಾಗಿರೋ ಹುಡುಗಿಯರನ್ನೂ ಕನಿಷ್ಠ ಬೇಟಿಯಾಗಿಲ್ಲ. ಆದುದರಿಂದ ರಾಜ್ಯ ಮಹಿಳಾ ಆಯೋಗದ ವರದಿಯನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು ಮತ್ತು ಮಹಿಳಾ ಆಯೋಗದ ಅಧ್ಯಕ್ಷರನ್ನು ವಜಾಗೊಳಿಸಬೇಕು.
  2. ಮೀಡಿಯಾದ ಕ್ಯಾಮರ ಮತ್ತು ವರದಿಗಾರರು ಘಟನೆಯ ಸ್ಥಳದಲ್ಲಿ ಇದ್ದಿದ್ದರಿಂದಲೇ ಹುಡುಗಿಯರ ಮೇಲೆ ನಡೆಯುತ್ತಿದ್ದ ಇನ್ನಷ್ಟೂ ದೌರ್ಜನ್ಯಗಳು ನಿಂತಿದೆ. ಕ್ಯಾಮರ ಇಲ್ಲದೆ ಇರುತ್ತಿದ್ದರೆ ಖಂಡಿತವಾಗಿಯೂ ಮೃಗೀಯ ವರ್ತನೆ ತೋರುತ್ತಿದ್ದ ದಾಳಿಕೋರರು ಹುಡುಗಿಯರ ಅತ್ಯಾಚಾರ ಮಾಡುತ್ತಿದ್ದರು. ಹೊಡೆಯುವಾಗ ಕ್ಯಾಮರ ಆಫ್ ಮಾಡಲು ದಾಳಿಕೋರರು ಹೇಳಿದರೂ ಕ್ಯಾಮರ ಆಫ್ ಮಾಡದೆ ಶೂಟಿಂಗ್ ಮಾಡುತ್ತಿದ್ದರು. ಕ್ಯಾಮರಗಳು ಅಲ್ಲಿದ್ದ ಹುಡುಗಿಯರ ಅತ್ಯಾಚಾರವಾಗುವುದನ್ನು ತಪ್ಪಿಸಿದೆ. ನಾವು ಮೀಡಿಯಾ ವಿರುದ್ಧ ಯಾವ ದೂರನ್ನೂ ನೀಡಿಲ್ಲ. ನಾವು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿದ್ದಾಗ ಮೀಡಿಯಾದ ಸುದ್ಧಿ ಪ್ರಸಾರವನ್ನು ನೋಡಿಯೇ ಪೊಲೀಸರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿದ್ದು ಎಂಬುದು ನಮಗೆ ಸ್ಪಷ್ಟವಾಗಿ ಗೊತ್ತು. ಪೊಲೀಸರು ಖಾಲಿ ಕಾಗದಕ್ಕೆ ನಮ್ಮ ಸಹಿ ಪಡೆದುಕೊಂಡು ದೂರಿನಲ್ಲಿ ಮೀಡಿಯಾದವರ ಹೆಸರನ್ನು ಸೇರಿಸಿದ್ದಾರೆ. ಆದುದರಿಂದ ನಮ್ಮನ್ನು ರಕ್ಷಿಸಿದ ಮೀಡಿಯಾದವರ ಹೆಸರನ್ನು ಕೈಬಿಡಬೇಕು.
  3. ಪೊಲೀಸರು ದಾಳಿಕೋರರ ಜೊತೆಯೇ ಹೋಂ ಸ್ಟೇ ಪ್ರವೇಶ ಮಾಡಿದ್ದಾರೆ. ದಾಳಿಕೋರರ ಹಿಂದೆಯೇ ಪೊಲೀಸ್ ವಾಹನ ಕೂಡಾ ಬಂದಿದೆ. ದಾಳಿಕೋರರು ಬಾಗಿಲು ದೂಡಿ ಒಳ ನುಗ್ಗುವಾಗ ಪೊಲೀಸ್ ವಾಹನ ವಾಪಾಸ್ಸು ಹೋಗಿದ್ದು, ದಾಳಿ ಮುಗಿದ ನಂತರ ಅದೇ ಪೊಲೀಸ್ ವಾಹನ ಮತ್ತೆ ಬಂದಿದೆ. ಬಂದ ಪೊಲೀಸರು ಆರೋಪಿಗಳ ಜೊತೆ ಸೇರಿ ಮತ್ತೆ ಹಲ್ಲೆ ಮಾಡಿದ್ದಾರೆ. ದಾಳಿಕೋರರು ದಾಳಿ ಮಾಡುವುದು ಪೊಲೀಸರಿಗೆ ಮೊದಲೇ ಗೊತ್ತಿತ್ತು ಮತ್ತು ಪೊಲೀಸರ ಜೊತೆಯೇ ದಾಳಿಕೋರರು ಬಂದಿದ್ದರಿಂದ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು.
  4. ನಮ್ಮ ಮೇಲೆ ನಡೆದ ದಾಳಿಯ ದಾರಿ ತಪ್ಪಿಸಲು ಏನೆಲ್ಲಾ ಕತೆಗಳನ್ನು ಕಟ್ಟುತ್ತಿದ್ದು, ಬರ್ತ್‌ಡೇಯನ್ನು ಆಚರಿಸಲು ಹೋಂ ಸ್ಟೇ ಯಾಕೆ ಬುಕ್ ಮಾಡಬೇಕಿತ್ತು? ನಮ್ಮ ತಂದೆ ತಾಯಿಯ ಚಾರಿತ್ರ್ಯ ಸರಿ ಇಲ್ಲ ಎಂಬಂತಹ ಹೇಳಿಕೆಗಳನ್ನು ನೀಡುತ್ತಿದ್ದು ಹಲವಾರು ವಿಧದಲ್ಲಿ ನಮ್ಮ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ದಾರಿ ತಪ್ಪುವಂತೆ ಮಾಡಲಾಗುತ್ತಿದೆ. ಆದುದರಿಂದ ಈ ಪ್ರಕರಣದ ತನಿಖೆಗೆ ವಿಶೇಷ ಕೋರ್ಟ್ ಸ್ಥಾಪಿಸಬೇಕು.
  5. ಪ್ರಕರಣದ ತನಿಖೆಯಲ್ಲಿ ನಾವು ಪೊಲೀಸ್ ಇಲಾಖೆಯನ್ನು ಒಂದಿನಿತೂ ನಂಬುವುದಿಲ್ಲ. ಆದುದರಿಂದ ನ್ಯಾಯಾಲಯದಲ್ಲಿ ನಮ್ಮ ಪರವಾಗಿ ವಾದ ಮಾಡಲು ನಮ್ಮ ಆಯ್ಕೆಯ ಸ್ಪೆಷಲ್  ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡಬೇಕು.
  6. ಎಲ್ಲಕ್ಕಿಂತ ಮುಖ್ಯವಾಗಿ ಪೊಲೀಸರು ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುವ ಭಾಗವಾಗಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಹೋಂ ಸ್ಟೇ ಮೇಲೆ ನಡೆದ ದಾಳಿ ಪ್ರಕರಣವನ್ನು ದಯವಿಟ್ಟು ಸಿಬಿಐಗೆ ವಹಿಸಬೇಕು ಎಂಬುದು ನಮ್ಮ ವಿನಮ್ರ ವಿನಂತಿ.

ಇಂತಿ ತಮ್ಮ ವಿಶ್ವಾಸಿಗಳು,
ವಿಜಯ್ ಮತ್ತು ಗುರುದತ್ ಕಾಮತ್

Leave a Reply

Your email address will not be published.