ಮಾನ ಹರಾಜಾಗಿದ್ದು ಪ್ರಭುತ್ವದ್ದೇ ಹೊರತು ಹುಡುಗಿಯರದ್ದಲ್ಲ


-ನವೀನ್ ಸೂರಿಂಜೆ


 

[ಮಂಗಳೂರು ಹೋಂ ಸ್ಟೇ ಮೇಲಿನ ದಾಳಿಯನ್ನು ಖಂಡಿಸಿ ರಾಜ್ಯಪಾಲರಿಗೆ “ಎದ್ದೇಳು ಮಂಗಳೂರು” ಎಂಬ ಸಂಘಟನೆಯ ಮೂಲಕ ಮಂಗಳೂರಿನ ವ್ಯಾಪಾರಿ ಮನಸ್ಸಿನ ಗಣ್ಯರು ಮನವಿಯನ್ನು ಸಲ್ಲಿಸಿದ್ದಾರೆ. ಈ ಮನವಿಯ ಭಾಗವೊಂದರಲ್ಲಿ ಟಿವಿ ಮಾಧ್ಯಮಗಳ ಕಾರ್ಯವೈಖರಿ ಬಗ್ಗೆ ಉಲ್ಲೇಖವಿದೆ. ಈ ಹಿನ್ನೆಲೆಯಲ್ಲಿ “ಎದ್ದೇಳು ಮಂಗಳೂರು” ಸಂಘಟನೆಗೆ ನವೀನ್ ಸೂರಿಂಜೆಯವರು ಈ ಪತ್ರ ಬರೆದಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಟಿವಿ ಮಾಧ್ಯಮಗಳ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಲ್ಲೂ ಸಂದೇಹಗಳಿರುವುದರಿಂದ ಆ ಪತ್ರವನ್ನು ವರ್ತಮಾನ.ಕಾಮ್‌ನಲ್ಲಿ ಪ್ರಕಟಿಸಲಾಗುತ್ತಿದೆ.]

ಮಂಗಳೂರಿನಲ್ಲಿ ಬರ್ತ್‌ಡೇ ಪಾರ್ಟಿ ನಿರತ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಹಲವಾರು ಜನಪರ ಸಂಘಟನೆಗಳು ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಎಲ್ಲರಿಗೂ ಮಹಿಳೆಯರ ಹಕ್ಕು, ಸ್ವಾತಂತ್ರ್ಯದ ಪ್ರಶ್ನೆಯಾದರೆ ಮಂಗಳೂರಿನ ಗಣ್ಯರು ಎನಿಸಿಕೊಂಡ ನಿಟ್ಟೆ ವಿನಯ ಹೆಗ್ಡೆ, ಡಾ ಸಿ ಪಿ ಹಬೀಬ್ ರೆಹ್ಮಾನ್, ಲತಾ ಆರ್ ಕಿಣಿ, ಇನ್ಫೋಸಿಸ್‌ನ ನರೇನ್, ವಾಲ್ಟರ್ ಡಿಸೋಜಾ, ಪಣಂಬೂರ್  ಬೀಚ್‌ನ ಯತೀಶ್ ಬೈಕಂಪಾಡಿ ಮತ್ತಿತರರಿಗೆ ಅವರ ವ್ಯವಹಾರದ ಚಿಂತೆ. ಆದುದರಿಂದಲೇ ಮಂಗಳೂರಿನಲ್ಲಿ ಇಂತಹ ದಾಳಿಗಳಾದರೆ ಹೂಡಿಕೆ, ಪ್ರವಾಸ, ಶೈಕ್ಷಣಿಕ ವಲಯದ ಮೇಲೆ ಪರಿಣಾಮ ಬೀರುತ್ತದೆ. ಮಾಹಿತಿ ತಂತ್ರಜ್ಞಾನ, ಆಸ್ಪತ್ರೆ, ನರ್ಸಿಂಗ್ ಹೋಂ, ಹೊಟೇಲ್ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೂ ಪರಿಣಾಮ ಬೀರಿದೆ ಎಂದು ಇವರುಗಳು “ಎದ್ದೇಳು ಮಂಗಳೂರು” ಎಂಬ ಹೆಸರಿನಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.

ಇದಲ್ಲದೆ ಪ್ರಕರಣದಲ್ಲಿ ಮಾಧ್ಯಮಗಳ ಪಾತ್ರವೇನು, ದಾಳಿಕೋರರು ಮತ್ತು ಮಾಧ್ಯಮದ ನಡುವಿನ ನಂಟೇನು ಎಂಬ ಪ್ರಶ್ನೆಯನ್ನು ಮನವಿಯಲ್ಲಿ ಎತ್ತಲಾಗಿದೆ. “ಕೆಲವು ಟಿವಿ ವಾಹಿನಿಗಳು ಸ್ಕೂಪ್‌ಗಾಗಿ ದಾಳಿಕೋರರ ಜೊತೆ ಕೈಜೋಡಿಸಿದೆ. ಅವು ಪೊಲೀಸರಿಗೆ ಸಕಾಲದಲ್ಲಿ ತಿಳಿಸುವುದಕ್ಕಿಂತಲೂ ಸ್ಕೂಪ್‌ಗೆ ಮಹತ್ವ ಕೊಟ್ಟಿದೆ. ವರದಿಗಾರರು ವಿಡಿಯೋ ಕ್ಲಿಪ್ಪಿಂಗ್ ಪ್ರಸಾರ ಮಾಡುವ ಮುನ್ನ ಸರಿಯಾದ ಸಮಯಕ್ಕೆ ಪೊಲೀಸರಿಗೆ ತಿಳಿಸಿದ್ದರೆ ಘಟನೆ ತಡೆಯಬಹುದಿತ್ತು. 2009 ರ ಜನವರಿಯಲ್ಲಿ ನಡೆದ ಪಬ್ ದಾಳಿಗೂ, ಹೋಂ ಸ್ಟೆ ದಾಳಿಗೂ ಸಾಮ್ಯತೆ ಇರುವುದರಿಂದ ಮಾಧ್ಯಮ ಮತ್ತು ಪುಂಡರ ನಡುವಿನ ಸಂಬಂಧವನ್ನು ತನಿಖೆ ಮಾಡಬೇಕು” ಎಂದು ಮನವಿಯಲ್ಲಿ ಕೋರಲಾಗಿದೆ.

“ಟಿವಿ ವಾಹಿನಿಗಳು ಸ್ಕೂಪ್‌ಗಾಗಿ ದಾಳಿಕೋರರ ಜೊತೆ ಕೈಜೋಡಿಸಿದ್ದವು” ಎಂಬ ತೀರ್ಮಾನಕ್ಕೆ ನೀವು ಬಂದಿದ್ದಾದರೂ ಹೇಗೆ? ನೀವು ಸತ್ಯ ಶೋಧನಾ ವರದಿಯನ್ನೇನಾದರೂ ಮಾಡಿದ್ದೀರಾ? ನಾವು ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂದು ಯಾವ ಆಧಾರದ ಮೇಲೆ ಹೇಳುತ್ತೀರಿ? ನೀವು ನಿಜವಾದ ಕಾಳಜಿಯನ್ನು ಇಟ್ಟುಕೊಂಡು ರಾಜ್ಯಪಾಲರಿಗೆ ಮನವಿ ಸಲ್ಲಿಸುವುದೇ ಆಗಿದ್ದಲ್ಲಿ ಘಟನಯನ್ನು ವರದಿ ಮಾಡಿದ ವರದಿಗಾರರ ಹೇಳಿಕೆಯನ್ನು ಪಡೆಯಬಹುದಿತ್ತು. ಮಂಗಳೂರಿನ ಮಹಿಳಾ ಪರ ಸಂಘಟನೆಗಳು ಈ ಘಟನೆಯ ಬಗ್ಗೆ ಸತ್ಯಶೋಧನಾ ವರದಿಯನ್ನು ಸಿದ್ಧಪಡಿಸಿದ್ದು, ಅದಕ್ಕಾಗಿ ನನ್ನನ್ನು “ವಿಚಾರಣೆ” ಮಾಡಿ ಹೇಳಿಕೆಯನ್ನು ಪಡೆದುಕೊಂಡಿದೆ. ನೀವು ಏಕಪಕ್ಷೀಯವಾಗಿ ಹೇಗೆ ತೀರ್ಮಾನಕ್ಕೆ ಬಂದಿದ್ದೀರಿ? ನಮ್ಮ ವರದಿಗಾರಿಕೆಯ ಸಂಧರ್ಭ ಪ್ರತಿಯೊಂದಕ್ಕೂ ದಾಖಲೆಗಳನ್ನು ಇಟ್ಟುಕೊಂಡೇ ವರದಿಯನ್ನು ಮಾಡುತ್ತೇವೆ. ಸರಿಯಾಗಿ ಏಳು ಗಂಟೆ ಹನ್ನೆರಡು ನಿಮಿಷ ಮೂವತ್ತೆಂಟು ಸೆಕೆಂಡಿಗೆ ದಾಳಿ ಪ್ರಾರಂಭವಾಗಿದೆ. ಏಳು ಗಂಟೆ ಹದಿನೈದು ನಿಮಿಷಕ್ಕೆ ನಾನೂ ಸೇರಿದಂತೆ ಇಬ್ಬರು ವರದಿಗಾರರು ಪೊಲೀಸ್ ನಿರೀಕ್ಷಕರಿಗೆ ದೂರವಾಣಿ ಕರೆ ಮಾಡಿದ್ದೇವೆ. ಏಳು ಗಂಟೆ ಇಪ್ಪತೆಂಟು ನಿಮಿಷ ಮೂರು ಸೆಕೆಂಡಿಗೆ ದಾಳಿ ಮುಗಿದಿದೆ. ಏಳು ಗಂಟೆ ಮೂವತ್ತೆರಡು ನಿಮಿಷ ಹನ್ನೆರಡು ಸೆಕೆಂಡಿಗೆ ಪೊಲೀಸರು ಬಂದಿದ್ದಾರೆ. ಇದಕ್ಕೆ ಸಂಬಂದಿಸಿದ ಎಲ್ಲಾ ದಾಖಲೆಗಳು ನಮ್ಮಲ್ಲಿ ಇದೆ. ಯಾವುದೇ ಸಂಘಟನೆ ಅಥವಾ ತನಿಖಾ ತಂಡಕ್ಕೆ ನಾವು ದಾಖಲೆ ಸಹಿತ ಮಾಹಿತಿ ನೀಡಲು ಸಿದ್ದ ಎಂದು ರಾಷ್ಟ್ರಮಟ್ಟದ ಪತ್ರಿಕೆಗಳು, ಮ್ಯಾಗಜೀನ್‌ಗಳು, ರಾಜ್ಯ ಮತ್ತು ರಾಷ್ಟ್ರೀಯ ಟಿವಿ ವಾಹಿನಿಗಳಲ್ಲಿ ಸಂದರ್ಶನ ನೀಡಿದ್ದರೂ ನೋಡದ ಕೂಪ ಮಂಡೂಕ “ಎದ್ದೇಳು ಮಂಗಳೂರಿನ” ಸದಸ್ಯರು ನಿದ್ದೆ ಮಾಡುತ್ತಿದ್ದರೆ?

ಟಿವಿ ಮಾಧ್ಯಮವೊಂದು ಸ್ಕೂಪ್‌ಗೆ ಮಹತ್ವ ಕೊಟ್ಟಿದೆ ಎಂದಿದ್ದೀರಿ. ಸ್ಕೂಪ್‌ಗೆ ಮಹತ್ವ ಕೊಟ್ಟಿದ್ದು ಹೌದಾದರೆ ಬೇರೆ ಟಿವಿ ವಾಹಿನಿಗಳಲ್ಲಿ ದಾಳಿ ದೃಶ್ಯಗಳು ಪ್ರಸಾರ ಆಗಿದ್ದು ಹೇಗೆ? ನಮ್ಮ ಒಂದೇ ಚಾನೆಲ್‌ನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಪ್ರಸಾರ ಆಗಬೇಕಿತ್ತಲ್ಲವೇ? ಇಷ್ಟಕ್ಕೂ ಟಿವಿ ಮಾಧ್ಯಮಗಳು ಈ ದೃಶ್ಯವನ್ನು ಪ್ರಸಾರ ಮಾಡಿದ್ದರಿಂದಲೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರಕರಣ ಚರ್ಚೆಯಾಯಿತು ಮತ್ತು 25 ಮಂದಿಯ ಬಂಧನವಾಯಿತು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೂ ಕೂಡಾ ಘಟನೆಯನ್ನು ಖಂಡಿಸಿ ಸರಕಾರಕ್ಕೆ ಎಚ್ಚರಿಕೆ ಕೊಡುವಂತಾಯಿತು. ಅದಕ್ಕಿಂತಲೂ ಮುಖ್ಯವಾಗಿ “ಆ ನೀಲಿ ಚೆಕ್ಸ್ ಶರ್ಟ್‌ನ ವ್ಯಕ್ತಿ ಯಾರು” ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸುವಂತಾಯಿತು. ಇದೆಲ್ಲವೂ ಸಾಧ್ಯವಾಗಿದ್ದು ನಮ್ಮ ವಿಝುವಲ್ಸ್‌ನಿಂದ.

ಹೋಂ ಸ್ಟೇ ದಾಳಿಯಲ್ಲಿ ಮಾಧ್ಯಮಗಳು ಕೈ ಜೋಡಿಸಿವೆ ಎಂದು ಆರೋಪಿಸುವ ನೀವು ಯಾವ ಆಧಾರದ ಮೇಲೆ ಪ್ರತಿಭಟನಾ ಸಭೆ ಮಾಡಿದ್ದೀರಿ? ಜಪ್ಪಿನ ಮೊಗರು ಮೋರ್ಗನ್ ಗೇಟ್ ಬಳಿಯ ಎಂಫಾಸಿಸ್ ಉದ್ಯೋಗಿ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿಗೆ ಎರಡು ತಿಂಗಳ ಹಿಂದೆ ಹಿಂದೂ ಯುವ ಸೇನೆಯ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಮುಖ ಮೂತಿಯಲ್ಲಿ ರಕ್ತ ಬರುವಂತೆ ಹಲ್ಲೆ ನಡೆಸಿದ್ದೇ ಅಲ್ಲದೆ ದಾಳಿಕೋರರೇ ಹಲ್ಲೆಗೊಳಗಾದ ಜೋಡಿಯನ್ನು ಪಾಂಡೇಶ್ವರ ಪೊಲೀಸರಿಗೆ ಒಪ್ಪಿಸಿದ್ದರು. ಪಾಂಡೇಶ್ವರ ಪೊಲೀಸರು ಹಲ್ಲೆಗೊಳಗಾದ ಪ್ರೇಮಿಗಳ ಮನೆಯವರನ್ನು ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆಗ ಯಾಕೆ ಯಾರೂ ಮಾತನಾಡಿಲ್ಲ? ಯಾಕೆಂದರೆ ಅದು ವಿಝುವಲ್  ಆಗಿರಲಿಲ್ಲ.

ಒಂದು ತಿಂಗಳ ಹಿಂದೆ ಮೇರಿಹಿಲ್  ಹೆಲಿಪ್ಯಾಡಿನ ವಿಹಂಗಮ ನೋಟ ಸವಿಯಲು ಬಂದ ವಿದ್ಯಾರ್ಥಿಗಳು ಕಾರಿನಲ್ಲಿ ಕುಳಿತು ಚಿಪ್ಸ್ ತಿನ್ನುತ್ತಿದ್ದರು. ಕಾರಿನ ನಾಲ್ಕೂ ಡೋರ್ ಓಪನ್ ಮಾಡಿ ವಿದ್ಯಾರ್ಥಿಗಳು ಚಿಪ್ಸ್ ತಿನ್ನುತ್ತಾ ಹರಟುತ್ತಿದ್ದರು. ಈ ಸಂಧರ್ಭ ದಾಳಿ ಮಾಡಿದ ಶ್ರೀರಾಮ ಸೇನೆ ಕಾರ್ಯಕರ್ತರು ವಿದ್ಯಾರ್ಥಿಗಳಿಗೆ ಹಲ್ಲೆ ಮಾಡಿ ವಿದ್ಯಾರ್ಥಿಗಳನ್ನು ದಾಳಿಕೋರರೇ ಕಾವೂರು ಪೊಲೀಸರಿಗೆ ಒಪ್ಪಿಸಿದ್ದರು. ಆಗ ಯಾಕೆ ಯಾರೂ ಮಾತನಾಡಿಲ್ಲ? ಯಾಕೆ ಅಂದರೆ ಆಗಲೂ ಅದು ವಿಝುವಲ್  ಆಗಿರಲಿಲ್ಲ.

ಅದೆಲ್ಲಾ ಬಿಟ್ಟು ಬಿಡಿ. ಹೋಂ ಸ್ಟೇ ದಾಳಿಯ ಮರುದಿನವೇ ಮಂಗಳೂರು ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲೇ ಯುವಕ ಯುವತಿಯ ಮೇಲೆ ದಾಳಿಯಾಗಿತ್ತು ಎಂಬುದು ಯಾರಿಗಾದರೂ ಗೊತ್ತಿದ್ಯಾ? ಕೆಲಸದ ಸಂದರ್ಶನಕ್ಕೆ ವಿಟ್ಲದಿಂದ ಮಂಗಳೂರಿಗೆ ಬಂದಿಳಿದ ಯುವತಿಗೆ ಆಕೆಯ ಸಹಪಾಠಿ ಎದುರಿಗೆ ಸಿಕ್ಕಾಗ ಮಾತನಾಡಿದ್ದಳು. ಅದೂ ಜನನಿಬಿಡ ಬಸ್ ನಿಲ್ದಾಣದಲ್ಲಿ.  ಅಷ್ಟಕ್ಕೇ ಆಕೆ ಮತ್ತು ಆತನ ಮೇಲೆ ಸಂಘಟನೆಯೊಂದು ಮುಗಿ ಬಿದ್ದು ಹಲ್ಲೆ ಮಾಡಿ ಪೊಲೀಸರಿಗೆ ಒಪ್ಪಿಸಿತ್ತು. ಯಥಾ ಪ್ರಕಾರ ಪೊಲೀಸರು ಗೆಳೆಯರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ಆಗ ಯಾಕೆ ಯಾರೂ ದ್ವನಿ ಎತ್ತಿಲ್ಲ? ಅಗಲೂ ಅದು ವಿಝುವಲ್  ಆಗಿಲ್ಲ. ಯಾರು ಯಾರನ್ನು ಬೇಕಿದ್ದರೂ ಹೊಡೆಯಲಿ. ಅದನ್ನು ಶೂಟಿಂಗ್ ಮಾಡಿ ಸುದ್ದಿ ಮಾಡಬೇಡಿ. ನಮ್ಮಲ್ಲಿಗೆ ಬರೋ ಹೂಡಿಕೆ ಕಡಿಮೆಯಾಗಿ ನಮ್ಮ ಬ್ಯಸಿನೆಸ್ ಕುಸಿಯುತ್ತದೆ ಎಂಬುದಷ್ಟೇ ಇಲ್ಲಿ ಹಲವಾರು ಗಣ್ಯರ ಒಮ್ಮತಾಭಿಪ್ರಾಯ ಎಂಬುದು ಸ್ಪಷ್ಟ.

ಆರೋಪಿಗಳ ಪೋಷಕರು ಯಾರು?

ಬರ್ತ್‌ಡೇ ಆಚರಿಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ದಾಳಿ ಅನಿರೀಕ್ಷಿತ ಪುಂಡರ ದಾಳಿಯಲ್ಲ. “ಇದು ನೈತಿಕ ಪೊಲೀಸ್‌ಗಿರಿಯಲ್ಲ. ಪುಂಡರ ಕೃತ್ಯ” ಎಂಬ ವಿನಯ ಹೆಗ್ಡೆಯವರ ಹೇಳಿಕೆಯಲ್ಲೇ ಈ ಪ್ರಕರಣದ ನಿಜವಾದ ಆರೋಪಿಗಳನ್ನು ರಕ್ಷಿಸುವ ಹುನ್ನಾರ ಇದೆ. ಇದು ಯಾವುದೋ ಪುಂಡರ ದಾಳಿಯಲ್ಲ. ಕೋಮುವಾದಿಗಳ ಅಜೆಂಡಾ ಈಡೇರಿಕೆಗಾಗಿ ನಡೆದಿರುವ ದಾಳಿ. ಅದರಲ್ಲಿ ನಿಟ್ಟೆ ವಿನಯ ಹೆಗ್ಡೆ ಕೂಡಾ ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಹಿಂದೂ ಸಮಾಜೋತ್ಸವಗಳನ್ನು ನಡೆಸುವ ಮೂಲಕ ಜಿಲ್ಲೆಯ ಹಿಂದುಳಿದ ವರ್ಗದ ಯುವಕರ ತಲೆಯಲ್ಲಿ ಧರ್ಮದ ಅಫೀಮು ತುಂಬಿಸಲಾಗುತ್ತದೆ. ಅದರ ಭಾಗವಾಗಿಯೇ ಇಂತಹ ದಾಳಿಗಳು ನಡೆಯುತ್ತದೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು. ಇಂತಹ ಸಮಾಜೋತ್ಸವಗಳನ್ನು ಸಂಘಟಿಸಿದವರಲ್ಲಿ ನಿಟ್ಟೆ ವಿನಯ ಹೆಗ್ಡೆ ಕೂಡಾ ಒಬ್ಬರು. ಹಿಂದೂ ಸಮಾಜೋತ್ಸವದಲ್ಲಿ ನಿಟ್ಟೆ ವಿನಯ ಹೆಗ್ಡೆ ಗೌರವಾಧ್ಯಕ್ಷರಾಗಿದ್ದರು. ಆದುದರಿಂದ ಈ ದಾಳಿಯಲ್ಲಿ ವಿನಯ ಹೆಗ್ಡೆಯವರೂ ಕೂಡಾ ಒರ್ವ “ನೈತಿಕ ಆರೋಪಿ” ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಇದೀಗ ದಾಳಿಯಿಂದಾಗಿ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ವಿನಯ ಹೆಗ್ಡೆಯವರ ಕಾಲೇಜಿಗೆ ಹೊರ ರಾಜ್ಯದಿಂದ ಬರುವ ಶ್ರೀಮಂತ ಮಕ್ಕಳ ಸಂಖ್ಯೆ ಕಡಿಮೆಯಾಗಬಹುದು ಎಂಬ ಬೀತಿಯಿಂದ “ಎಚ್ಚೆತ್ತಿದ್ದಾರೆ”. ಆದರೆ ಅವರು ಎಚ್ಚೆತ್ತಿರುವುದು ಕೋಮುವಾದದ ವಿರುದ್ಧವೂ ಅಲ್ಲ. ನೈತಿಕ ಪೊಲೀಸ್‌ಗಿರಿಯ ವಿರುದ್ಧವೂ ಅಲ್ಲ. ಜನರ ಹಕ್ಕಿನ ಪರವೂ ಅಲ್ಲ.

ದಾಳಿಯ ಪ್ರಮುಖ ಆರೋಪಿ ಸುಭಾಷ್ ಪಡೀಲ್‌ಗೆ ಗೂಂಡಾಗಿರಿ ವೃತ್ತಿ ನೀಡಿದ್ದೇ ಮಂಗಳೂರು ವಿಶೇಷ ಆರ್ಥಿಕ ವಲಯ. ಅಂದರೆ ಕೆಸಿಸಿಐ ಪಾಲುದಾರಿಕೆಯ ಎಸ್ಇಝಡ್. ಇದೀಗ ಕೆಸಿಸಿಐ ಕೂಡಾ “ಎದ್ದೇಳು ಮಂಗಳೂರು” ಸಂಘಟನೆಯಲ್ಲಿ ಭಾಗಿಯಾಗಿ ಘಟನೆಯನ್ನು ವಿರೋಧಿಸುತ್ತಿದೆ. ರೌಡಿಸಂ ಮಾಡುವುದು ಮತ್ತು ರೌಡಿಗಳ ಪಡೆಯನ್ನು ತಯಾರು ಮಾಡುವುದು ಭಾರತೀಯ ದಂಢ ಸಂಹಿತೆ ಪ್ರಕಾರ ಅಪರಾಧವಾಗುತ್ತದೆ. ಆದರೆ ಕೆಸಿಸಿಐ ಪಾಲುದಾರಿಕೆಯ ಮಂಗಳೂರು ವಿಶೇಷ ಆರ್ಥಿಕ ವಲಯವು ಭೂಸ್ವಾಧೀನಕ್ಕಾಗಿ ರೌಡಿಗಳನ್ನು ಬಳಕೆ ಮಾಡಿದೆ. ಬಜಪೆ ನೆಲ್ಲಿದಡಿಯ ಕೃಷಿ ಭೂಮಿ ಸ್ವಾಧೀನಕ್ಕೆ ಇದೇ ಸುಭಾಷ್ ಪಡೀಲ್ ನೇತೃತ್ವದ ತಂಡವನ್ನು ಸೆಝ್ ಬಳಕೆ ಮಾಡಿಕೊಂಡಿದೆ. ಈ ಬಗ್ಗೆ ಎರಡು ಪ್ರಕರಣಗಳು ಬಜಪೆ ಠಾಣೆಯಲ್ಲಿ ದಾಖಲಾಗಿದೆ. ಹಾಗಾದರೆ ಕೆಸಿಸಿಐ ಯಾವ ನೈತಿಕತೆಯಲ್ಲಿ ಹೋಂ ಸ್ಟೇ ದಾಳಿಯನ್ನು ವಿರೋಧಿಸುತ್ತದೆ?

ದಶಕಗಳಿಂದ ಮಂಗಳೂರಿನಲ್ಲಿ ಸಮಾಜೋತ್ಸವಗಳನ್ನು ನಡೆಸಿ ಹಿಂದುಳಿದ ವರ್ಗದ ಯುವಕರ ತಲೆಯಲ್ಲಿ ಕೋಮುವಾದವನ್ನು ಬಿತ್ತಿ ಸರಿಪಡಿಸಲಾರದ ಮಟ್ಟಕ್ಕೆ ತಂದು ನಿಲ್ಲಿಸಿದ ಸಮಾಜೋತ್ಸವದ ಸಂಚಾಲಕರುಗಳನ್ನು ಮತ್ತು ಸಮಿತಿ ಪದಾಧಿಕಾರಿಗಳನ್ನು ಬಂಧಿಸಬೇಕು ಎಂದು ಎಚ್ಚೆತ್ತ ಜನತೆ ಆಗ್ರಹಿಸಿದರೆ ಬಂಧಿತರ ಪಟ್ಟಿ ಹನುಮಂತನ ಬಾಲದಂತೆ ಬೆಳೆಯಬಹುದು.

ಹುಡುಗಿಯರು ಪಾರ್ಟಿ ಮಾಡುವುದು ಮಾನವಂತಿಕೆಯಲ್ಲ ಎಂದು ಘೋಷಿಸಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಯುವತಿಯರಿಗೆ ಹಲ್ಲೆ ನಡೆಸಿದ್ದನ್ನು ಪ್ರಸಾರ ಮಾಡಿದ್ದರಿಂದ ಮಂಗಳೂರಿನ ಮಾನ ಹರಾಜಾಯಿತು ಮತ್ತು ಹುಡುಗಿಯರ ಮಾನ ಹರಾಜಾಯಿತು ಎಂದು ಹೇಳುವವರ ಮನಸ್ಥಿತಿಗೂ ನೈತಿಕ ಪೊಲೀಸರ ಮನಸ್ಥಿತಿಗೂ ಯಾವುದೇ ವ್ಯತ್ಯಾಸ ಇಲ್ಲ. ಮಾನ ಹರಾಜಾಗಿದ್ದು ಹುಡುಗಿಯರ ಮೇಲೆ ಹಲ್ಲೆ ಮಾಡಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರದ್ದು ಮತ್ತು ಅವರನ್ನು ಈ ಮಟ್ಟಕ್ಕೆ ಪೋಷಿಸಿದ ಪ್ರಭುತ್ವದ್ದೇ ಹೊರತು ಹುಡುಗಿಯರದ್ದಾಗಲೀ, ಪ್ರದೇಶದ್ದಾಗಲೀ ಅಲ್ಲ.

7 thoughts on “ಮಾನ ಹರಾಜಾಗಿದ್ದು ಪ್ರಭುತ್ವದ್ದೇ ಹೊರತು ಹುಡುಗಿಯರದ್ದಲ್ಲ

 1. Avinash

  ಇದೆ ವರ್ತಮಾನದ ಸ್ಕಾರ್ಫ್ ವಿವಾದದ ಕುರಿತ ಬರಹದಲ್ಲಿ ಶ್ರೀಯುತ ನವೀನ ರವರು ಸ್ಕಾರ್ಫ್ ದರಿಸದೆ ಮುಸ್ಲಿಂ ಹೆಣ್ಣು ಮಕ್ಕಳು ಕಾಲೇಜ್ ಗೆ ಬರುವುದರಿಂದ ಮೂಲ ಭೂತವಾದಿಗಳು ಹೆಣ್ಣು ಮಕ್ಕಳನ್ನು ಬರದಂತೆ ತಡೆಯಬಹುದು ಆದರಿಂದ ಸ್ಕಾರ್ಫ್ ದರಿಸಲು ಅವಕಾಶ ಕೊಡುವಂತೆ ಅಪ್ಪಣೆ ಹೊರಿಡಿಸುತ್ತಾರೆ. ಆದರೆ ಹಿಂದೂ ಹೆಣ್ಣು ಮಕ್ಕಳು ಕಡಿಮೆ ಬಟ್ಟೆ ಮಾಡಿದ ಪಾರ್ಟಿಯಾ ಮೇಲೆ ಮೂಲ ಭುತವಾದಿಗಳ ದಾಳಿ ಖಂಡಿಸುತ್ತಾರೆ. ಇದು ವಿರೋದಾಭಾಸ ಅಲ್ಲವೇ. ಒಂದು ಮೂಲಬುತವಾದಿಗಳನ್ನು ಖಂಡಿಸಿ ಇಲ್ಲವೇ ಅವರಿಗಾಗಿ ಹೆಣ್ಣು ಮಕ್ಕಳಿಗೆ ಮೈ ತುಂಬಾ ಬಟ್ಟೆ ದರಿಸಲು ಸಲಹೆ ನೀಡಿ. ಧರ್ಮ ಆದಾರಿತ ನಿಮ್ಮ ನಿಲುವು ನಿಮ್ಮ ಉದ್ದೇಶವನ್ನೇ ಪ್ರಶ್ನಿಸುವಂತಿದೆ

  Reply
 2. Oduga

  ಒಂದು ವೇಳೆ ತೆಹೆಲ್ಕಾ ವರದಿಗಾರ ಸ್ಟಿಂಗ್ ಕಾಯಾ೯ಚರಣೆ ಮಾಡದೆ ಪೋಲಿಸರಿಗೆ ಮಾಹಿತಿ ನೀಡುತ್ತಿದ್ದರೆ ಇಂದು ಬಂಗಾರು ಲಕ್ಷ್ಮಣ್ ರವರು ಹಾಯಾಗಿ ಇರುತ್ತಿದ್ದರು, ಆ ಲಂಚಾಪರಾಧವೂ ಆಗುತ್ತಿರಲಿಲ್ಲ, ಅದು ನಾಗರೀಕ ಸಮಾಜದ ಮುಂದೆಯೂ ಬರುತ್ತಿರಲಿಲ್ಲ. ರಾಜಕೀಯದ ಹಾಗೂ ರಾಜಕಾರಣಿಗಳ ಕರಾಳ ಮುಖದ ಪರಿಚಯವೂ ಆಗುತ್ತಿರಲ್ಲಿಲ್ಲ.

  ಅದೇ ರೀತಿ ಕನಾ೯ಟಕ ಕರಾವಳಿಯಲ್ಲಿ ಕೋಮುವಾದ-ಪ್ರಚೋದಿತ ಘಟನೆಗಳು ಪ್ರತಿನಿತ್ಯದ ಸಂಗತಿಯಾಗಿ ಬಿಟ್ಟಿರುವಾಗ, ಮಾದ್ಯಮದ ಒಂದು ವಗ೯ ಹಾಗೂ ಕಾನೂನು ವ್ಯವಸ್ಥೆ ಕೋಮುವಾದಿಯಾಗಿರುವುದರ ಜೊತೆ ಜಾಣ ಕುರುಡು ಹಾಗೂ ಜಾಣ ಕಿವುಡುತನಕ್ಕೆ ಬಲಿಯಾಗಿರುವಾಗ, ಇಂತಹ ಮುನ್ಸೂಚನೆ ಗಮನಕ್ಕೆ ಬಂದರೂ ಅದನ್ನು ಸಂಬಂಧಪಟ್ಟವರಿಗೆ ತಿಳಿಸದೆ ವರದಿ ಮಾಡುವ ಸನ್ನಿವೇಶ ಹಾಗೂ ಅವಶ್ಯಕತೆ ಕರಾವಳಿಯಲ್ಲಿ ಇದೆ.

  ಎಂಟು-ಹತ್ತು ಮಂದಿ ಹೋಮ್ ಸ್ಟೇಯಲ್ಲಿ ಪೆಟ್ಟು ತಿಂದಿರಬಹುದು, ನವೀನ್ ಕರೆಗೆ ಪೋಲಿಸರು ಪ್ರತಿಕ್ರಯಿಸಿ ಅಲ್ಲಿ ಬಂದಿರುತ್ತಿದ್ದರೆ ಹೆಚ್ಚೆಂದರೆ ಆ ಯುವಕ-ಯುವತಿಯರು ದೈಹಿಕ-ಲೈಂಗಿಕ ಶೋಷಣೆಗೊಳಗಾಗುವುದು ತಪ್ಪುತ್ತಿತ್ತೆ ವಿನಹ ಮುಂದಿನ ದಿನಗಳಲ್ಲಿ ನೂರಾರು ಯುವಕ-ಯುವತಿಯರು ಕೋಮು/ನೈತಿಕ/ ಲೈಂಗಿಕ ಗೂಂಡಾಗಿರಿಗೆ ಒಳಗಾಗುವುದು ತಪ್ಪುತ್ತಿರಲಿಲ್ಲ. ಇಂತಹ ಘಟನೆಗಳು ಕಡ್ಡಾಯವಾಗಿ ವರದಿಯಾಗಬೇಕು. ಕೇಸ್ ಗಳು ದಾಖಲಾಗಬೇಕು, ಪೋಲಿಸ್ ಕೋಮುವಾದ ಹಾಗೂ ನಿಷ್ಕ್ರೀಯತೆ ಜನತೆಯ ಮುಂದೆ ಬರಬೇಕಾದುದು ಕರಾವಳಿಯಲ್ಲಿ ಮಾನವೀಯತೆಯ ಹಾಗೂ ಸೌಹಾದ೯ತೆಯ ಉಳಿವಿಗಾಗಿ ಬಹಳ ಅಗತ್ಯವಾಗಿದೆ.

  ಇನ್ನೊಂದು ವಿಷಯ, ಪೋಲಿಸರ ವತ೯ನೆ ದಾಳಿಗೊಳಗಾದ ಯುವಕರೊಡನೆ ಯಾವ ರೀತಿ ಇತ್ತು ಹಾಗೂ ಸಂಸ್ಕೃತಿ ರಕ್ಷಕರೊಡನೆ ಯಾವ ರೀತಿಯದಾಗಿತ್ತು ಎಂದು ಆ ವೀಡಿಯೋ ಕ್ಲಿಪಿಂಗ್ ಗಳನ್ನು ಗಮನವಿಟ್ಟು ವೀಕ್ಷಿಸಿದರೆ ಮಂಗಳೂರಿನ ಪೋಲಿಸರ ಪೌರಷ, ಪರಾಕ್ರಮ, ಧೈಯ೯ ಹಾಗೂ ಮನೋಸ್ಥಿತಿ ನಮಗೆ ತಿಳಿಯುತ್ತದೆ. ಅದು ಅವರ ಗೆಳೆತನವೋ, ಪುಕ್ಕಲುತನವೋ, ಅಥವಾ ಗುಲಾಮಗಿರಿಯೋ ಎಂದು ಅಥ೯ವಾಗಲ್ಲ. ಅದೇ, ಆ ನೈತಿಕ ಪೋಲಿಸರ ಜಾಗದಲ್ಲಿ, ಯಾವುದೋ ಮುಸಲ್ಮಾನ, ಪ್ರಗತಿಪರ, ಎಡಪಂಥೀಯ ಅಥವಾ ಕೇಸರಿಪಡೆಯಲಿಲ್ಲದ ವ್ಯಕ್ತಿಗಳಿರುತ್ತಿದ್ದರೆ, ಪೋಲಿಸರ “ಕಾನೂನುಪಾಲನೆ” ಯನ್ನೂ ಊಹಿಸುವುದೇ ಬೇಡವೆಂದೆನಿಸುತ್ತದೆ. ಅವರ ಬೂಟುಗಳು, ಅವರ ಲಾಟಿಗಳು, ಅವರ ಕೈಗಳು, ಸ್ಟೇಟ್ ಮೆಂಟ್ ಗಳು, ಐಪಿಸಿಯ ಸೆಕ್ಷನ್ ಗಳು……….ಅಬ್ಬಬ್ಬಾ……

  Reply
  1. Avinash

   ಕಾಮನ್ ವೆಲ್ತ್ ಗೇಮ್ ಹಗರಣದ ವೀಡಿಯೊ ಇದೆಯಾ ? ೨ಜಿ ಹಗರಣದ ವೀಡಿಯೊ ಇದೆಯಾ ? ಗಣಿ ಹಗರಣದ ವೀಡಿಯೊ ಇದೆಯಾ ? ಯಡಿಯೂರಪ್ಪನವರ ಡಿ ನೋಟಿಫಿ ಕೆಶನ್ ನ ವೀಡಿಯೊ ಇದೆಯಾ ? ಆದರ್ಶ ಹಗರಣದ ವೀಡಿಯೊ ಇದೆಯಾ ? ಹಾಗಾದರೆ ಈ ವೀಡಿಯೊ ಇಲ್ಲದ ಯಾವುದೇ ಕೃತ್ಯಗಳು ಬೆಳಕಿಗೆ ಬರಲ್ಲ ಅನ್ನೋದು ನಿಮ್ಮ ಅಭಿಪ್ರಾಯವ ? ತಿವಾರಿ ಯಾ ಪಿತೃತ ತೀರ್ಪು ಕೊಟ್ಟ ನ್ಯಾಯಧಿಶರು ತೀರ್ಪು ಕೊಡಲು ನಿಮ್ಮ ಹಾಗೆ ವೀಡಿಯೊ ಕೇಳಿದ್ರೆ ಏನು ಮಾಡಬೇಕಿತ್ತು ?

   Reply
 3. sahreepadu

  ಆಹಾ , ಟಿ ಅರ್ ಪಿ ಗಾಗಿ ಸುದ್ದಿ ಹಾದರಕ್ಕಿಳಿದ ಪತ್ರಕರ್ತನೊಬ್ಬ ಮಾಡಿಕೊಳ್ಳುತ್ತಿರುವ justification . ಆವತ್ತು ೧೦೦ ಗೆ ಯಾಕೆ ಕಾಲ್ ಮಾಡಲಿಲ್ಲ ಅಂತ ಕೇಳಿದರೆ ಉತ್ತರವೇ ಇಲ್ಲ. ಸ್ವಾಮೀ ಪೈಡ್ ನ್ಯೂಸ್ ಅಂತ ಬಂದಿದ್ದು ಇದೆ ಮಾಧ್ಯಮದಿಂದ ಅಲ್ಲವೇ ??. ಅನೈತಿಕ ಸಂಬಂಧಗಳನ್ನ marketting ಮಾಡುವುದು ಇದೆ ಮಾಧ್ಯಮ ಅಲ್ಲವೇ ??.
  ಇದೆ ಮಂಗಳೂರಿನಲ್ಲಿ ಕಾತಿಪಳ್ಳದಲ್ಲಿ ಮೂತ್ರ ಕುಡಿಸಿದ ಘಟನೆಗಳಿಗೆ ಕಣ್ಮುಚ್ಚಿ ಕುಳಿತಿದ್ದು ಮಾಧ್ಯಮ ಪತ್ರಕರ್ತರೇ ಅಲ್ಲವೇ??. ಕೇವಲ ಒಂದು ವರ್ಗವನ್ನ ಟಾರ್ಗೆಟ್ ಮಾಡುವುದರ ಹಿಂದೆ , ಬುದ್ದಿಜೀವಿಗಳ ಸಾಲಿನಲ್ಲಿ ನಿಲ್ಲುವ ತಹತಹಿಕೆ ಕಂಡರೆ ಅದು ಜನರ ತಪ್ಪೇ ?? ಅಷ್ಟಕ್ಕೂ , ಹಿಂದೂ ಮುಸ್ಲಿಂ ಹುಡುಗ ಹುಡುಗಿಯ ನಡೆದಾಡುವಾಗ ಕಂಡು ಬರುವ ಅಸಹನೆ ಯಾಕೆ ಹಿಂದೂ christian ಮಧ್ಯೆ ಬರುವುದಿಲ್ಲ??.

  ನವೀನ ಸೂರಿಂಜೆ ಆದಿಯಾಗಿ , ಅಲ್ಲಿ ನಡೆಯುವ ಘಟನೆಗಳ ಹಿಂದೆ ಇರುವ ಸಾಂಸ್ಕೃತಿಕ ಅಸಹನೆಯ ಮೂಲ ಕಾರಣಗಳು ಯಾರಿಗೂ ಬೇಕಾಗಿಲ್ಲ. ಅವರವರ ಲಾಭವನ್ನಷ್ಟೇ ನೋಡುತ್ತಾರೆ. ಅಷ್ಟಕ್ಕೂ ಮಾಧ್ಯಮಗಳು , ಪತ್ರಕರ್ತರು ಕೇವಲ ಸತ್ಯವನ್ನ ಮಾತ್ರ ನುಡಿಯುತ್ತಾರೆ ಎನ್ನುವಷ್ಟು ಮುರ್ಖರೇನಿಲ್ಲ ಜನ.ಜಪ್ಪಿನ ಮುಗರುವಿನಲ್ಲಿ ನಡೆದ ಘಟನೆಯಲ್ಲಿ ಮುಸ್ಲಿಂ ಹುಡುಗ ತಾನು ಹಿಂದೂ ಅಂತ ಸುಳ್ಳು ಹೇಳಿದ್ದ ವಿಷಯವನ್ನ ಮುಚ್ಚಿಟ್ಟು ಅರ್ಧ ಸತ್ಯ ಹೇಳುವುದರ ಹಿಂದಿರುವ ಉದ್ದೇಶ ಏನು ??. ಇದೆ ಕೆ ಎಫ್ ದಿ ಅಂತ ಸಂಘಟನೆಗಳು ಮಾಡುವ ದೇಶದ್ರೋಹದ ಕೆಲಸದ ಬಗ್ಗೆ ಯಾಕೆ ಮಾಧ್ಯಮ ಸೊಲ್ಲೆತ್ತುವುದಿಲ್ಲ ??

  ಸ್ವಾಮಿ , ನಾನಿಲ್ಲಿ ಹೋಂ stay ಪ್ರಕರಣ ಸಮರ್ಥಿಸುತ್ತಿಲ್ಲ. ಆದರೆ ಪದೇ ಪದೇ ಹಿಂದೂ ಕೋಮುವಾದ ಎಂದು ಅರಚುವ ನೀವು ಮುಸ್ಲಿಂ ಕೋಮುವಾದದ ಬಗ್ಗೆ ಯಾಕೆ ಉಸಿರುತ್ತುವುದಿಲ್ಲ ??. ಹೆಸರು ಮಾಡುವ ಚಟಕ್ಕೆ ಬಿದ್ದ ಪ್ರತಿಯೊಬ್ಬ ಸಾಹಿತಿಯೂ ನಮ್ಮ ಧರ್ಮವನ್ನ ಬೈಯುವಾಗ , ಇವರದ್ದು ಕೇವಲ political correctness , ಸುದ್ದಿ ಹಾದರ ಅನಿಸಿದರೆ , ಅದಕ್ಕೆ ಎದ್ದೇಳು ಮಂಗಳೂರನ್ನ ದೂರಬೇಕಿಲ್ಲ :p

  Reply
 4. dhwani

  ನವೀನ್, ನೀವು ಕೆಲಸ ಮಾಡುತ್ತಿರುವ ವಾಹಿನಿ ಕಸ್ತೂರಿ. ಹೇಳಿ ಕೇಳಿ ಕುಮಾರಸ್ವಾಮಿಯವರ ನೇರ ಹಿಡಿತದಲ್ಲಿರುವ ಚಾನೆಲ್. ಹೀಗಿರುವಾಗ ಬಿಜೆಪಿ ಸರ್ಕಾರಕ್ಕೆ ಏಟು ಕೊಡುವಂಥಹ ಯಾವುದೇ ಘಟನೆ ನಡೆದರೂ ಇಂಚಿಂಚೂ ವರದಿ ಮಾಡುವ ಆರ್ಡರ್ ನಿಮಗೆ ಈ ಮೊದಲೇ ಆಗಿರುತ್ತದೆ ಎನ್ನುವುದು ನಮಗೆ ಗೊತ್ತು…ಹೀಗಿರುವಾಗ ನಿಮ್ಮಲ್ಲಿ ಸಾಮಾಜಿಕ ಕಾಳಜಿ ಎನ್ನುವುದು ಹೇಗೆ ತಾನೇ ಜಾಗೃತವಾಗುತ್ತದೆ? ಇನ್ಸ್ಪೆಪೆಕ್ಟರ್ ಫೋನ್ ಎತ್ತದಿದ್ದರೆ ೧೦೦ಗೆ ಕರೆ ಮಾಡುವ‍ಷ್ಟು ಸಾಮಾಜಿಕ ಕಾಳಜಿ ನಿಮ್ಮಲ್ಲಿ ಇರಲಿಲ್ಲವೇ? ಎಲ್ಲವನ್ನೂ ಎಡಪಂಥೀಯ ಯೋಚನಾ ಲಹರಿಯಲ್ಲೇ ಚಿಂತಿಸುವ ನಿಮಗೆ ಹೋಂ ಸ್ಟೇ ದಾಳಿಯನ್ನು ತಡೆಯುವ ಮನಸ್ಸಾದರೂ ಹೇಗೆ ಬರುತ್ತದೆ ಅಲ್ಲವೇ? ಈ ವಿಚಾರವಾಗಿ ನೀವೆ‍ಷ್ಟೇ ಸಮರ್ಥಿಸಿಕೊಂಡರೂ ನಿಮ್ಮದು ತಪ್ಪು ತಪ್ಪಾಗಿಯೇ ಉಳಿಯುತ್ತದೆ. ಪತ್ರಕರ್ತನಾಗಿ ನಾನು ಸರಿಯಾಗಿದ್ದೀನಾ ಎನ್ನುವ ನೀವು ಕಸ್ತೂರಿ ಎಂಬ ರಾಜಕೀಯ ನಾಯಕನ ವಾಹಿನಿಯಿಂದ ಹೊರ ಬಂದು ಯೋಚಿಸಿ. ನಾವೆಲ್ಲಿರುತ್ತೇವೇಯೋ ಅಲ್ಲೆಲ್ಲಾ ಅವರ ತಾಳಕ್ಕೆ ತಕ್ಕಂತೆ ಕುಣಿಯಲೇ ಬೇಕು. ಕಸ್ತೂರಿ ವಾಹಿನಿಯಲ್ಲಿದ್ದುಕೊಂಡು ನೀವೆಷ್ಟೇ ಸಾಮಾಜಿಕ ಚಿಂತಕ ಎಂದು ಸಮರ್ಥಿಸಿಕೊಂಡರೂ ನಂಬುವ ಸ್ಥಿತಿಯಲ್ಲಿ ಈ ಸಮಾಜ ಇಲ್ಲ. ಮೊನ್ನೆಯಿಂದ ನಿಮ್ಮಿಂದ್ ಬರುತ್ತಿರುವ ಸಮರ್ಥನೆಗಳನ್ನು ಕೇಳಿ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಒಂದು ದಾಳಿಯನ್ನು ವರದಿ ಮಾಡಿ `NATIONAL FIGURE’ ಆಗುವ ಯೋಚನೆಯಿದ್ದರೆ ಬಿಟ್ಟು ಬಿಡಿ. ಪತ್ರಿಕೋದ್ಯಮದಲ್ಲಿ ಗುರುತಿಸಿಕೊಳ್ಳ್ಬೇಕು ನಿಜ. ಆದರೆ ಈ ರೀತಿ ಗುರುತಿಸಿಕೊಂಡರೆ ಎಲ್ಲರ (ರಾಜಕೀಯ್, ಸಿನಿಮಾ…) ತಪ್ಪುಗಳನ್ನು ಬೊಟ್ಟು ಮಾಡುವ ಪತ್ರಕರ್ತರಿಗೆ ಬೆಲೆ ಇಲ್ಲದಂತಾಗಬಹುದು. ಮೊನ್ನೆಯ ಘಟನೆಯಲ್ಲಿ ನಿಮ್ಮ್ ಕೆಲಸವನ್ನು ನೀವು ಪ್ರಾಮಾಣಿಕವಾಗಿ ಮಾಡಿದ್ದೀರಿ ಎಂದು ನಿಮ್ಮ್ ಆತ್ಮಸಾಕ್ಶಿಯಾಗಿ ನಿಮಗೆ ಅನಿಸಿದರೆ ಪ್ರತೀ ದಿನ ಅದನ್ನು ಸಮರ್ಥಿಸುವ ಅಗತ್ಯವಿಲ್ಲ…ನಿಮ್ಮ ಸಹೋದ್ಯೋಗಿ ಪತ್ರಕರ್ತರಾಗಿರುವ ರಾಜ್ಯದ ಖ್ಯಾತ ವಾಹಿನಿಯೊಂದರ ವರದಿಗಾರರೊಬ್ಬರನ್ನು ೨೦೦೬ರಿಂದ ಪತ್ರಿಕೋದ್ಯಮದಲ್ಲಿ ಗಮನಿಸಿದ್ದೇನೆ. ನನ್ನ ಪ್ರಕಾರ ಅವರು ಪತ್ರೀಕೋದ್ಯಮದಲ್ಲಿ ಗುರುತಿಸಿಕೊಳ್ಳದಿದ್ದರೂ ತನ್ನ ವೃತ್ತಿಗೆ ನ್ಯಾಯ ಸಲ್ಲಿಸುತ್ತಿದ್ದಾರೆ ಎನ್ನಬಹುದು.

  Reply
 5. Avinash

  ಹಿಂದೂ ಜಾಗರಣ ವೇದಿಕೆಯವರು ಮಾದ್ಯಮಗಳ ಎದುರು ನಾವು ಹೆಣ್ಣು ಮಕ್ಕಳಿಗೆ ಹೊಡೆದರೆ ಅದು ಸುದ್ದಿಯಾಗುವುದಿಲ್ಲ ಅಂದು ಕೊಂಡಿರುವಷ್ಟು ದಡ್ದರೆ ? ಅದೇನು ನೀವು ಹಿಡ್ದೆನ್ ಕ್ಯಾಮರ ತಗೆದು ಕೊಂದು ಹೋಗಿರಲಿಲ್ಲ. ಇಷ್ಟಕ್ಕೂ ಮಂಗಳೂರು ಪಬ್ ಪ್ರಕರಣದ ಅನುಭವ ಇದ್ದ ಅವರಿಗೆ ಅಷ್ಟು ಸಾಮಾನ್ಯ ಪ್ರಜ್ಞೆ ಇರಲಿಲ್ಲ ಅಂದರೆ ಆಶ್ಚರ್ಯ ಆಗುತ್ತದೆ. ನೀವು ಅವರ ಜೊತೆ ಕೈ ಜೋಡಿಸಿದ್ದಿರಿ ಅನ್ನುವುದು ಶುದ್ದ ಸತ್ಯ. ನಿಮಗೆ ಸುದ್ದಿ ಬೇಕಿತ್ತು ಅವರಿಗೆ ಪ್ರಚಾರ ಬೇಕಿತ್ತು ನಿಮಗೆ ಬಲಿಯಾದವರು . ಮಜಾ ಮಾಡಲು ಬಂದ ತಲೆ ಮಾಸಿದ ಹುಡುಗರು . ಇಲ್ಲದೆ ಹೋಗಿದ್ದರೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನ ಎದುರು ಮಾದ್ಯಮದವರಿಗೆ ಅದ ಗತಿಯೇ ನಿಮಗೂ ಆಗುತ್ತಿತ್ತು ಅಷ್ಟೇ. ಈಗ ದೊಡ್ಡ ಹೀರೋ ಆಗಲು ಪ್ರಯತ್ನ ಪಡುತ್ತಿದ್ದಿರಿ ಅಷ್ಟೇ.

  Reply

Leave a Reply

Your email address will not be published.