ಸದನದ ಕಲಾಪಗಳೇಕೆ ಈಗ ಹೀಗೆ?


-ಚಿದಂಬರ ಬೈಕಂಪಾಡಿ


 

ಮೌಲ್ಯಗಳು ಎಲ್ಲಾ ರಂಗಗಳಲ್ಲೂ ಇಳಿಮುಖವಾಗುತ್ತಿವೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಚರ್ಚೆಯಾಗುತ್ತಿರುವ ಅಂಶ. ನಂಬಿಕೆ, ನಡವಳಿಕೆ, ಆಚಾರ, ವಿಚಾರಗಳಿರಬಹುದು, ಸಾಮಾಜಿಕ, ಆರ್ಥಿಕ, ಔದ್ಯಮಿಕ ಕ್ಷೇತ್ರವೇ ಆಗಿರಬಹುದು ಒಂದು ರೀತಿಯಲ್ಲಿ ಬದಲಾವಣೆಯ ಬಿರುಗಾಳಿಗೆ ಸಿಕ್ಕಿ ಥರಗುಟ್ಟುತ್ತಿವೆಯೇನೋ ಅನ್ನಿಸುತ್ತಿದೆ. ಹಾಗೆಂದು ಎಲ್ಲವೂ ನಿಂತ ನೀರಾಗಿರಬೇಕು ಎನ್ನುವ ವಾದವಲ್ಲ ಅಥವಾ ಬದಲಾವಣೆಯೇ ಬೇಡ ಎನ್ನುವ ಸಂಕುಚಿತ ದೃಷ್ಟಿಯೂ ಅಲ್ಲ.

ಉದಾಹರಣೆಗೆ ವಿಧಾನ ಮಂಡಲ, ಸಂಸತ್ತಿನ ಕಲಾಪಗಳ ಗುಣಮಟ್ಟ ಕುಸಿಯುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ನಿಜಕ್ಕೂ ಹೀಗಾಗುತ್ತಿರುವುದು ಆತಂಕಕಾರಿ ಸಂಗತಿ. ಆದರೆ ಯಾಕೆ ಹೀಗಾಗುತ್ತಿದೆ ಎಂದು ಪ್ರಶ್ನೆ ಮಾಡುವುದು ಖಂಡಿತಕ್ಕೂ ಅಪರಾಧವಲ್ಲ. ಹಾಗೆ ನೋಡಿದರೆ ವಿಧಾನ ಮಂಡಲವಿರಬಹುದು, ಸಂಸತ್ತೇ ಆಗಿರಬಹುದು ಹಿಂದಿಗಿಂತಲೂ ಹೆಚ್ಚು ವಿದ್ಯೆ ಕಲಿತವರು ಆಯ್ಕೆಯಾಗಿ ಬರುತ್ತಿದ್ದಾರೆ. ಉದ್ಯಮಿಗಳು, ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದವರು ಕೂಡಾ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಹಿಂದಿಗಿಂತ ಈಗ ಕಲಾಪಗಳ ಗುಣಮಟ್ಟ ಕುಸಿಯುತ್ತಿದೆ, ವಿಚಾರಗಳ ಚರ್ಚೆ ಆಗುತ್ತಿಲ್ಲ. ಮೊದಲಿನಂತೆ ಚಿಂತನೆಗಳು ಸದಸ್ಯರ ಮಾತುಗಳಲ್ಲಿ, ವಾದ ಮಂಡನೆಯಲ್ಲಿ ಇಲ್ಲ. ಹರಿತವಾದ ಪ್ರಶ್ನೆಗಳು, ಮೊನಚಾದ ಉತ್ತರಗಳು ಕಂಪನ ಉಂಟುಮಾಡುತ್ತಿಲ್ಲ ಇತ್ಯಾದಿ ಕೊರತೆಗಳನ್ನು ಪಟ್ಟಿ ಮಾಡುತ್ತಾರೆ.

ಇದು ಎಷ್ಟರ ಮಟ್ಟಿಗೆ ನಿಜ ಮತ್ತು ಯಾಕೆ ಹೀಗೆ ಎನ್ನುವ ಕುರಿತು ಚಿಂತನೆ ಮಾಡುವುದು ಯೋಗ್ಯ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮವೊಂದರಲ್ಲಿ ಸದನದೊಳಗೆ ಚರ್ಚೆಯ ಗುಣಮಟ್ಟ ಕುಸಿಯುತ್ತಿದೆ. ವಾಟಾಳ್ ನಾಗರಾಜ್ ಅವರಂಥವರು ಸದನ ಪ್ರವೇಶಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕಳೆದ ಮೂರು ದಶಕಗಳಿಂದ ಸದನದೊಳಗೆ-ಹೊರಗೆ ಜನಪ್ರತಿನಿಧಿಯಾಗಿ ಹೋರಾಟ ಮಾಡುತ್ತಲೇ ಬಂದ ಯಡಿಯೂರಪ್ಪ ಕಲಾಪಗಳ ಗುಣಮಟ್ಟ ಕುಸಿಯುತ್ತಿದೆ ಎಂದರು ಎನ್ನುವ ಕಾರಣಕ್ಕಾಗಿಯಲ್ಲ, ವಾಸ್ತವವಾಗಿ ಕಲಾಪಗಳ ಗುಣಮಟ್ಟ ಕುಸಿಯುತ್ತಿದೆ ಎನ್ನುವುದನ್ನು ಒಪ್ಪಲೇಬೇಕು.

ಇಲಾಖೆಗಳ ಬೇಡಿಕೆಯ ಮೇಲಿನ ಚರ್ಚೆಯಾಗುವ ಸಂದರ್ಭದಲ್ಲಿ ಮಾತನಾಡುವ ಸದಸ್ಯ, ಒಂದಷ್ಟು ಮಂದಿ ಆ ಇಲಾಖೆಯ ಕುರಿತು ಆಸಕ್ತಿ ಇರುವವರು ಮಾತ್ರ ಸದನದಲ್ಲಿರುವುದು ಇತ್ತೀಚಿನ ದಿನಗಳ ವಾಸ್ತವ ಸ್ಥಿತಿ. ಇಲಾಖೆಯ ಬೇಡಿಕೆ ಮೇಲಿನ ಚರ್ಚೆಯ ವೇಳೆ ಸಂಬಂಧಪಟ್ಟ ಸಚಿವರೂ ಹಾಜರಾಗದಿರುವ ಉದಾಹರಣೆಗಳಿವೆ. ಪ್ರತಿಪಕ್ಷದ ಸದಸ್ಯ ಸರ್ಕಾರದ ಮೇಲೆ ಸವಾರಿ ಮಾಡುತ್ತಿದ್ದರೆ ಅದನ್ನು ಪ್ರತಿಭಟಿಸುವ ಅಥವಾ ಆ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಆಸಕ್ತಿಯೂ ಇಲ್ಲದೆ ತೂಕಡಿಸುವವರನ್ನೂ ಕಾಣುವುದಿದೆ. ಈ ಹಿನ್ನೆಲೆಯಲ್ಲಿ ಸದನದ ಕಲಾಪಗಳಲ್ಲಿ ಹಿಂದಿನಂತೆ ಚರ್ಚೆಗಳು ನಡೆಯುತ್ತಿಲ್ಲ ಎನ್ನುವುದನ್ನು ಇಂದಿನ ದಿನಗಳಿಗೆ ಹೋಲಿಸಿದರೆ ಒಪ್ಪಲೇಬೇಕು.

ಎಂಭತ್ತರ ದಶಕದಲ್ಲಿ ವಿಧಾನ ಮಂಡಲದ ಕಲಾಪಗಳನ್ನು ಪತ್ರಕರ್ತನಾಗಿ ವರದಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಈಗಿನ ಕಲಾಪವನ್ನು ವಿಶ್ಲೇಷಿಸುವುದಾದರೆ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹೇಳಿದ ಮಾತುಗಳು ಕಟು ಸತ್ಯ. ಕನ್ನಡ ಚಳವಳಿಯ ವಾಟಾಳ್ ನಾಗರಾಜ್ ಸದನದಲ್ಲಿದ್ದರೆ ಕಲಾಪಕ್ಕೆ ರಂಗಿರುತ್ತಿತ್ತು. ತಮಾಷೆ, ಕೀಟಲೆ, ಲೇವಡಿ ಮೂಲಕವೇ ಸರ್ಕಾರ, ಮಂತ್ರಿಗಳ ಮೇಲೆ ಅವರು ಬೀಸುತ್ತಿದ್ದ ಮಾತಿನ ಚಾಟಿಯನ್ನು ಈಗ ಕಾಣಲು ಸಾಧ್ಯವಾಗುತ್ತಿಲ್ಲ (ಇವರೊಬ್ಬರಿಗೇ ಈ ಮಾತು ಸೀಮಿತವಲ್ಲ, ಬೇರೆಯವರೂ ಇದ್ದರು). ಮುಖ್ಯಮಂತ್ರಿಯಾಗಿ ರಾಮಕೃಷ ಹೆಗ್ಡೆ, ವೀರೇಂದ್ರ ಪಾಟೀಲ್, ಸ್ಪೀಕರ್ ಆಗಿ ಎಸ್.ಎಂ.ಕೃಷ್ಣ, ಡಿ.ಬಿ.ಚಂದ್ರೇಗೌಡ, ರಮೇಶ್ ಕುಮಾರ್, ಸಚಿವರಾಗಿ ಎಚ್.ಡಿ.ದೇವೇಗೌಡ, ಎಸ್.ಆರ್.ಬೊಮ್ಮಾಯಿ, ಎಂ.ವೀರಪ್ಪ ಮೊಯ್ಲಿ, ಜೆ,ಎಚ್.ಪಟೇಲ್, ಕೆ.ಎಚ್.ರಂಗನಾಥ್, ಟಿ.ಎನ್.ನರಸಿಂಹಮೂರ್ತಿ, ಎಸ್.ಬಂಗಾರಪ್ಪ, ಎಂ.ಸಿ.ನಾಣಯ್ಯ, ಡಾ.ಜೀವರಾಜ್ ಆಳ್ವ, ಸಿ.ಭೈರೇಗೌಡ, ಪ್ರತಿಪಕ್ಷದ ಸಾಲಿನಲ್ಲಿ ಯಡಿಯೂರಪ್ಪ, ವಾಟಾಳ್ ನಾಗರಾಜ್ ಹೀಗೆ ಪಟ್ಟಿ ಮಾಡುತ್ತಾ ಸಾಗಬಹುದು. ಇವರೆಲ್ಲರ ಅಂದಿನ ವಿಚಾರ ಮಂಡನೆ, ವಾದ, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ವಿಧಾನ, ಸಚಿವರುಗಳು ಪ್ರತಿಪಕ್ಷಗಳನ್ನು ನಿಭಾಯಿಸುತ್ತಿದ್ದ ಚಾಕಚಕ್ಯತೆ ಈಗಿನ ಕೊರತೆ ಎನ್ನುವುದು ವಾಸ್ತವ.

ಬಿ.ಎಂ.ಇದಿನಬ್ಬರಂಥ ಕೆಲವು ಮಂದಿ ಶಾಸಕರು ಬೆಳಿಗ್ಗೆ ಹತ್ತು ಗಂಟೆಗೆ ಸದನಕ್ಕೆ ಹಾಜರಾದರೆ ಮಧ್ಯರಾತ್ರಿವರೆಗೂ ಕಲಾಪದಲ್ಲಿ ಕುಳಿತಿರುತ್ತಿದ್ದರು. ಆಗ ಸದನಗಳಲ್ಲಿ ಪ್ರಶ್ನೋತ್ತರ, ಶೂನ್ಯವೇಳೆ, ಗಮನ ಸೆಳೆಯುವ ಸೂಚನೆ ರಾಜ್ಯದ ಸಮಗ್ರ ಚಿತ್ರಣ ಕೊಡುತ್ತಿದ್ದವು, ಸಮಸ್ಯೆಗಳನ್ನು ಬಿಡಿಸಲು ಮುಖ್ಯ ಅಸ್ತ್ರವಾಗುತ್ತಿದ್ದವು. ಪ್ರತಿಪಕ್ಷಗಳ ಸದಸ್ಯರಂತು ಹಸಿದ ಹೆಬ್ಬುಲಿಯಂತೆ ಸರ್ಕಾರದ ವಿರುದ್ಧ ಘರ್ಜಿಸುತ್ತಿದ್ದರು. ಸದನಕ್ಕೆ ಬರುವ ಮುನ್ನ ಸಚಿವರುಗಳು ಮಾತ್ರವಲ್ಲ, ಶಾಸಕರೂ ಕೂಡಾ ಸಾಕಷ್ಟು ಪೂರ್ವತಯಾರಿ ಮಾಡಿಕೊಂಡು ಬರುತ್ತಿದ್ದುದನ್ನು ಹತ್ತಿರದಿಂದ ಕಂಡಿದ್ದೇನೆ. ಆದಿನಗಳಲ್ಲಿ ಸದನ ಸಮೀಕ್ಷೆಯನ್ನು ಮಾಧ್ಯಮಗಳು ಅತ್ಯಂತ ಗಂಭೀರವಾಗಿ ಮಾಡುತ್ತಿದ್ದವು. ಸದನ ಸಮೀಕ್ಷೆಯನ್ನು ಓದಿದರೆ ಕಲಾಪದಲ್ಲಿ ಕುಳಿತು ನೋಡಿದಂಥ ಅನುಭವ ಆ ಬರವಣಿಗೆಯಲ್ಲಿರುತ್ತಿತ್ತು.

ಸದನದಲ್ಲಿ ಚರ್ಚೆಯಾಗಬೇಕಾಗಿದ್ದ ಜನರ ಸಮಸ್ಯೆಗಳ ಸ್ಥಾನವನ್ನು ಈಗ ಪಕ್ಷ ರಾಜಕಾರಣ ಆಕ್ರಮಿಸಿಕೊಂಡಿದೆ. ರಾಜಕೀಯ ವಿಚಾರಧಾರೆಗಳನ್ನು, ಪರಸ್ಪರ ಟೀಕೆ ಮಾಡಿಕೊಳ್ಳುವುದನ್ನೇ ಕಾಣಬಹುದೇ ಹೊರತು ಯೋಜನೆಗಳ ಅನುಷ್ಠಾನದ ಬಗ್ಗೆ ಅಷ್ಟೇನೂ ಗಂಭೀರವಾಗಿ ಚರ್ಚೆಗಳಾಗುತ್ತಿಲ್ಲ ಎನ್ನಲೇಬೇಕು. ಹೀಗೆಂದ ಮಾತ್ರಕ್ಕೇ ಸದನದ ಕಲಾಪವನ್ನೇ ಋಣಾತ್ಮಕವಾಗಿ ನೋಡಲಾಗುತ್ತಿದೆ ಎಂದುಕೊಳ್ಳಬೇಕಾಗಿಲ್ಲ. ವಾಸ್ತವಾಂಶವನ್ನು ಅವಲೋಕಿಸುವ ಅಗತ್ಯವಿದೆ.

ಈಗಿನ ಕಲಾಪದಲ್ಲಿ ರಾಜಕೀಯದ ಜಿದ್ದು ಕಣ್ಣಿಗೆ ರಾಚುತ್ತದೆ. ನಿಂದನೆಯಲ್ಲೂ ಅದೇನೋ ಸುಖ ಅನುಭವಿಸುವ ಸ್ಥಿತಿ. ಉದಾಹರಣೆಗೆ ರಾಜ್ಯಸಭೆಯಲ್ಲಿ ಗುರುವಾರ ನಡೆದ ಒಂದು ಘಟನೆ ಈಗಿನ ಸಂಸತ್ ಕಲಾಪ ಸಾಗುತ್ತಿರುವ ದಿಕ್ಕನ್ನು ಪುಷ್ಠೀಕರಿಸಬಲ್ಲುದು. ಅಸ್ಸಾಂ ದಳ್ಳುರಿಯ ಬಗ್ಗೆ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಉತ್ತರಿಸುತ್ತಿದ್ದ ಸಂದರ್ಭ ಸದಸ್ಯೆ ಜಯಾ ಬಚ್ಚನ್ ಮಧ್ಯೆಪ್ರವೇಶಿಸಿದಾಗ ಅತ್ಯಂತ ಜವಾಬ್ದಾರಿಯುತ ಹುದ್ದೆಯಲ್ಲಿರುವ ಶಿಂಧೆ ’ಮೇಡಂ ಇದು ಸಿನಿಮಾದ ವಿಚಾರವಲ್ಲ’ ಎನ್ನುವ ಮೂಲಕ ಕ್ಷಮೆಯಾಚಿಸಬೇಕಾಯಿತು. ರಾಜ್ಯಸಭೆ ಪ್ರವೇಶಿಸಿರುವ ಆಕೆ ಈ ದೇಶದ ಓರ್ವ ಕಲಾವಿದೆ. ಆಕೆ ಅತ್ಯಂತ ಗಂಭೀರವಾದ ಅಸ್ಸಾಂ ಗಲಭೆಯ ಕುರಿತು ಪ್ರತಿಕ್ರಿಯೆಸಲು ಮುಂದಾದಾಗ ಶಿಂಧೆ ಆಡಿದ ಮಾತು ಕಲಾವಿದೆಗೆ ಮಾಡಿದ ಅವಮಾನ. ಓರ್ವ ಸಿನಿಮಾ ನಟಿ ಸಿನಿಮಾ ಬಗ್ಗೆಯೇ ಮಾತನಾಡಬೇಕು ಎನ್ನುವ ಚೌಕಟ್ಟು ಹಾಕಿನೋಡುವ ಪ್ರವೃತ್ತಿಯೇ ಆತಂಕಕಾರಿ. ಗೃಹ ಸಚಿವರೇ ಕ್ಷಮೆಯಾಚಿಸಬೇಕಾಗಿ ಬಂದದ್ದು ದುರಂತವೇ ಸರಿ.

ಬಿಜೆಪಿಯ ಹಿರಿಯ ತಲೆ, ಅತ್ಯುತ್ತಮ ಸಂಸದೀಯಪಟು ಎಲ್.ಕೆ.ಅಡ್ವಾಣಿ ಅವರು ಲೋಕಸಭೆಯಲ್ಲಿ ಯುಪಿಎ ವಿರುದ್ಧ ಹರಿಹಾಯ್ದು ಬಳಕೆ ಮಾಡಿದ ಪದ ಕೋಲಾಹಲಕ್ಕೆ ಕಾರಣವಾಯಿತು. ಆರು ದಶಕಗಳನ್ನು ರಾಷ್ಟ್ರರಾಜಕಾರಣದಲ್ಲಿ ಕಳೆದಿರುವ ಅಡ್ವಾಣಿ ಅವರು ’ಅನೈತಿಕ’ ಎನ್ನುವ ವ್ಯಾಖ್ಯಾನಕೊಟ್ಟದ್ದು ಆಘಾತಕಾರಿ ಕೂಡಾ. ಬೇರೆ ಬೇರೆ ಕಾರಣಗಳಿಗಾಗಿ ಆ ಪದವನ್ನು ಸಮರ್ಥಿಸಿಕೊಳ್ಳಬಹುದು ಎನ್ನುವುದು ಬೇರೆ ವಿಚಾರ. ಆದರೆ ಕಲಾಪದಲ್ಲಿ ಕೇಳಿಬರುತ್ತಿರುವ ಟೀಕೆಗಳಿಗೆ ಇಂಥ ಘಟನಾವಳಿಗಳು ಪೂರಕವಾಗುತ್ತವೆ ಅನ್ನಿಸುವುದಿಲ್ಲವೇ?. ಹಾಗಾದರೆ ಈಗ ಹೇಳಿ ಕಲಾಪಗಳ ಗುಣಮಟ್ಟ ಕುಸಿಯುತ್ತಿಲ್ಲವೇ? ಹೀಗಾಗದಂತಾಗಲು ಮುಂದೇನು ಮಾಡಬೇಕು? ಎನ್ನುವ ಪ್ರಶ್ನೆ ಧುತ್ತನೆ ಎದುರಾಗುತ್ತದೆ. ಇದು ಚರ್ಚೆಗೆ ಒಳಪಡಬೇಕು.

Leave a Reply

Your email address will not be published.