ಸರ್ವಾಧಿಕಾರಿಗಳೇ, ಎಚ್ಚರ..! – ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕ್ ಅಸೋಸಿಯೇಷನ್‌ನ ನೋಟೀಸ್

ಇಂಗ್ಲಿಷ್ ಮೂಲ: ಭಗತ್ ಸಿಂಗ್
ಕನ್ನಡಕ್ಕೆ: ಸುಧಾ ಚಿದಾನಂದಗೌಡ

ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕ್ ಅಸೋಸಿಯೇಷನ್‌ನ (Army) ನೋಟೀಸ್:

[1928ರ ಸಮಯ. ಸೈಮನ್ ಕಮಿಷನ್‌ನ ವಿರುದ್ಧ ಏರ್ಪಾಡಾಗಿದ್ದ ಬೃಹತ್ ಮೆರವಣಿಗೆಯ ಮುಂದಾಳತ್ವ ವಹಿಸಿದ್ದ ಲಾಲಾ ಲಜಪತ್‌ರಾಯ್‌‌ರ ಮೇಲೆ ಪೊಲೀಸ್ ಲಾಠಿಚಾರ್ಚ್ ನಡೆಸಲಾಯ್ತು. ಲಜಪತರಾಯ್‌ರು ಮಾರಣಾಂತಿಕವಾಗಿ ಗಾಯಗೊಂಡರು. ಚಂದ್ರಶೇಖರ್ ಆಜಾದ್, ಭಗತ್‌ಸಿಂಗ್, ಮತ್ತಿತರ ಹೋರಾಟಗಾರರು ಸೇಡು ತೀರಿಸಿಕೊಳ್ಳುವುದಾಗಿ ಪಣ ತೊಟ್ಟರು. ಈ ಕಾರ್ಯಾಚರಣೆಯಲ್ಲಿ ಭಗತ್‌ಸಿಂಗ್, ರಾಜಗುರು ಮತ್ತು ಆಜಾದ್ ಕಣ್ತಪ್ಪಿನ ಗೊಂದಲದಿಂದಾಗಿ ಸ್ಕಾಟ್‌ನ ಬದಲಾಗಿ ಜೆ.ಪಿ. ಸಾಂಡರ್‍ಸನನ್ನು, ಡಿಸೆಂಬರ್ 17, 1928ರಲ್ಲಿ ಕೊಂದು ಹಾಕಿದರು. ಈ ಘಟನೆಯ ಕುರಿತು ಪೋಸ್ಟರ್ ಒಂದನ್ನು ಪ್ರಕಟಿಸಿದ Army ಅದನ್ನು ವಿವಿಧ ಪ್ರದೇಶಗಳಲ್ಲಿ ಅಂಟಿಸಿತು. ಅದರಲ್ಲಿ ಈ ಚಳವಳಿಕಾರರು ಸಾಂಡರ್‍ಸನನ್ನು ಶೋಷಕರ ಮತ್ತು ಸರ್ವಾಧಿಕಾರಿ ವ್ಯವಸ್ಥೆಯ ಭಾಗವಾಗಿ ಗುರುತಿಸಿದರು.]

ಜೆ.ಪಿ. ಸಾಂಡರ್ಸ್ ಸಾವು: ತೀರಿದ ಲಾಲಾಜೀ ಸೇಡು

ನಿಜಕ್ಕೂ ಒಬ್ಬ ಮಾಮೂಲು ಅಧಿಕಾರಿಯಾದ ಸಾಂಡರ್‍ಸನಂಥ ಕೀಳುಮಟ್ಟದ ಹಿಂಸದಾಯಕ ಕೈಗಳು ಲಾಲಾ ಲಜಪತರಾಯ್‌ರಂಥ ವಯೋವೃದ್ಧರಾದ, 300 ಮಿಲಿಯ ಭಾರತೀಯರು ಪ್ರೀತಿಸಿ ಗೌರವಿಸುವ ವ್ಯಕ್ತಿಯನ್ನು ಅಗೌರವದಿಂದ ಮುಟ್ಟುವುದನ್ನೂ ಅವರ ಸಾವಿಗೆ ಕಾರಣವಾಗುವುದನ್ನೂ ಊಹಿಸಲೂ ಸಾಧ್ಯವಾಗುತ್ತಿಲ್ಲ. ಇಂಡಿಯಾದ ಯುವಜನತೆ ಮತ್ತು ಪುರುಷತ್ವವು ದೇಶದ ರಾಷ್ಟ್ರೀಯತೆಗೆ ತಲೆಯನ್ನೇ ಮೆಟ್ಟಿದಂತಿರುವ ಈ ಹೊಡೆತವನ್ನು ಸವಾಲಾಗಿ ಸ್ವೀಕರಿಸಿದೆ.

ಇಂಡಿಯಾ ಇನ್ನೂ ಜೀವಂತವಾಗಿದೆ ಎಂಬುದನ್ನು ಲೋಕ ತಿಳಿದುಕೊಳ್ಳಲಿ. ಯುವಕರ ಬಿಸಿರಕ್ತವು ಸಂಪೂರ್ಣವಾಗಿ ತಣ್ಣಗಾಗಿಲ್ಲ ಎಂಬುದನ್ನು, ಜೀವ ಒತ್ತೆಯಿಡುವ ಯುವಪಡೆ ದೇಶದ ಘನತೆ ಗೌರವಗಳಿಗೆ ಧಕ್ಕೆ ಉಂಟಾದಾಗ ಬಲಿಯಾಗಲು ಸದಾ ಸಿದ್ಧವಾಗಿರುತ್ತದೆಂದೂ ಅರಿತುಕೊಳ್ಳಲಿ. ಇದಕ್ಕೆ ಸ್ವಜನರೂ ಕೂಡ ಮೆಚ್ಚದ, ಸರ್ವರೂ ಹೀಗಳೆಯುವ ಸಾಂಡರ್‍ಸ್ ಹತನಾಗಿರುವುದೇ ಸಾಕ್ಷಿ.

ಸರ್ವಾಧಿಕಾರಿಗಳೇ, ಎಚ್ಚರ..!

ಶೋಷಣೆಗೆ ಮತ್ತು ತುಳಿತಕ್ಕೆ ಒಳಗಾದ ದೇಶದ ಭಾವನೆಗಳನ್ನು ಎಂದೂ ಗಾಯಗೊಳಿಸಬೇಡಿ. ಇಂಥ ಹೀನ, ದ್ವಂದ್ವ ನೀತಿಯ ಕೆಲಸಕ್ಕೆ ಕೈ ಹಾಕುವ ಮುನ್ನ ಎರಡೆರಡು ಸಲ ಯೋಚಿಸಿ, ಶಸ್ತ್ರಾಸ್ತ್ರ ಕಾಯಿದೆ, ಬಿಗಿ ಕಾವಲುಗಳನ್ನು ಹೊರತುಪಡಿಸಿಯೂ ರಿವಾಲ್ವರ್‌ಗಳು ಒಳಹರಿದು ನಮ್ಮ ಬಳಿಗೆ ಬರುತ್ತಲೇ ಇರುತ್ತವ. ನಿಜ, ಇದು ಸದ್ಯದ ಸಶಸ್ತ್ರ ಕ್ರಾಂತಿಗೆ ಸಾಲದಿರಬಹುದು. ಆದರೆ ದೇಶಕ್ಕಾಗುವ ಅಪಮಾನಗಳನ್ನು ಎದುರಿಸಲು, ಸೇಡು ತೀರಿಸಿಕೊಳ್ಳಲು ಇಷ್ಟು ಆಯುಧಗಳು ಸಾಕು.

ಸ್ವಂತದ ಸಂಗಾತಿಗಳ ಅವನತಿಯನ್ನೂ, ಪತನವನ್ನೂ ನೋಡುತ್ತಿದ್ದರೂ ಎದೆಗುಂದದೆ, ಯಾವ ಹೊಣೆಗಾರಿಕೆಯೂ ಇಲ್ಲದ ಪರದೇಶಿ ಸರ್ಕಾರಕ್ಕೆ, ಉದ್ಧಟತನದ ಅಧಿಕಾರಿಗಳ ಆಡಳಿತಕ್ಕೆ ನಮ್ಮ ಯುವಪಡೆ ಪಾಠ ಕಲಿಸಲು ಸದಾ ಸಿದ್ಧವಾಗಿ, ಜೀವಂತವಾಗಿ ಇರುತ್ತದೆ. ವಿರೋಧದ ಮತ್ತು ತುಳಿತದ ಮಧ್ಯದಲ್ಲೂ ಧೈರ್ಯವಾಗಿ, ಧೀರೋದತ್ತವಾಗಿ ಬಿರುಗಾಳಿಯಂತೆ ಚಲಿಸುತ್ತಾ ನಾವು ಘೋಷಿಸುತ್ತಲೇ ಇರುತ್ತೇವೆ– “ಕ್ರಾಂತಿ ಚಿರಾಯುವಾಗಲಿ” ಎಂದು.

ಈ ಮನುಷ್ಯನ ಸಾವಿಗಾಗಿ ವಿಷಾದಿಸುತ್ತೇವೆ. ಆದರೆ ಪಶ್ಚಾತ್ತಾಪವಿಲ್ಲ. ಸತ್ತ ವ್ಯಕ್ತಿ ಅತಿಕ್ರೂರ ಆಡಳಿತದ, ಕೀಳುಮಟ್ಟದ ಸರ್ಕಾರವೊಂದರ ಪ್ರತಿನಿಧಿ. ಅದು ನಾಶಗೊಳ್ಳಲೇಬೇಕು. ಸತ್ತಿರುವುದು ಇಂಡಿಯಾದಲ್ಲಿರುವ ಬ್ರಿಟಿಷ್ ಸರ್ಕಾರದ ಏಜೆಂಟ್. ಪ್ರಪಂಚದ ಸರ್ಕಾರಗಳಲ್ಲೇ ಅತ್ಯಂತ ನಿರಂಕುಷ ಸರ್ಕಾರದ ಏಜೆಂಟ್.

ಮನುಷ್ಯ ನೆತ್ತರನ್ನು ಚೆಲ್ಲಾಡಿದ್ದಕ್ಕಾಗಿ ವಿಷಾದವಿದೆ. ಆದರೆ ವ್ಯಕ್ತಿಗಳ ತ್ಯಾಗಗಳು ಕೆಲಬಾರಿ ಅನಿವಾರ್ಯ. ಸರ್ವರಿಗೂ ಸ್ವಾತಂತ್ರ್ಯ ತರುವ ಕ್ರಾಂತಿಯು ಮನುಷ್ಯನು ಮನುಷ್ಯನ ಮೇಲೆ ನಡೆಸುವ ಅನ್ಯಾಯ, ತುಳಿತಗಳನ್ನು ತಡೆಯುವುದಕ್ಕಾಗಿಯೇ ಇರುವಂಥದ್ದು. ಇಂಥಹ ಕಾರ್ಯಾಚರಣೆಗಳನ್ನು ಬೇರೆ ದಾರಿಯಿಲ್ಲದೆ ನಡೆಸಬೇಕಾಗಿದೆ.

ಕ್ರಾಂತಿ ಚಿರಾಯುವಾಗಲಿ

ಸರ್ದಾರ್ ಬಲರಾಜ್
ಕಮಾಂಡರ್ ಇನ್‌ಚೀಫ್

*

[ಬಲರಾಜ್ ಎಂಬುದು ಚಂದ್ರಶೇಖರ್ ಆಜಾದ್‌ರ (ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕ್ ಅಸೋಸಿಯೇಷನ್‌/ಆರ್ಮಿ ಮುಖ್ಯಸ್ಥ) ಅನೇಕ ಹೆಸರುಗಳಲ್ಲೊಂದು]

Leave a Reply

Your email address will not be published.