ಅನಾಮತ್ತಾಗಿ ದಕ್ಕಿದ ಸ್ವಾತಂತ್ರ್ಯದ ಸುಖ


-ಡಾ.ಎಸ್.ಬಿ. ಜೋಗುರ


ನಾನಾಗ ಏಳನೇ ತರಗತಿಯಲ್ಲಿರಬೇಕು. ಮನೆಯಲ್ಲಿ ತೀರಾ ಕಷ್ಟದ ದಿನಗಳು. ಒಂದಿತ್ತು ಒಂದಿಲ್ಲ ಎಂದರೂ ಎಲ್ಲವೂ ಇದೆ ಎನ್ನುವ ಹುರುಪಿನಲ್ಲಿ ಶಾಲೆಗೆ ಹೋಗುತ್ತಿದ್ದ ದಿನಗಳವು. ಒಂದೇ ಒಂದು ಯುನಿಫಾರ್ಮನ್ನು ರಾತ್ರಿ ತೊಳೆದು, ಒಣಗಲು ಹಾಕಿ ಅದನ್ನು ಡಬಲ್ ರೂಲ್ ಪಾತ್ರಧಾರಿಯಂತೆ ಬಳಸುತ್ತಿದ್ದೆ. ಸ್ವಾತಂತ್ರ್ಯದ ದಿನಾಚರಣೆಗೆಂದೇ ಮೆತ್ತನೆಯ ಹಳದೀ ಬಣ್ಣದ ಐದು ನೂರಾ ಒಂದು [ಬಿಜಾಪೂರ ಬದಿ ಅದನ್ನು ‘ಪಾಶೆ ಏಕ್’ ಅಂತಿದ್ದರು] ಸಾಬೂನಿನ ಒಂದು ಕಚ್‍‍ನ್ನು ನನ್ನ ಯುನಿಫಾರ್ಮ್ ಕ್ಲೀನ್ ಮಾಡಲಿಕ್ಕೆಂದೇ ಅವ್ವ ನನಗೆ ಕೊಡುವುದಿತ್ತು. ಸವಳು ಬಾವಿಯ ನೀರಿನಲ್ಲಿ ಅದನ್ನು ಗಚ ಗಚ ತಿಕ್ಕಿ ತೊಳೆದು ಒಣಹಾಕಿ, ಮಲಗುವಾಗ ಅದನ್ನು ಮಡಚಿ ತಲೆದಿಂಬಿನಡಿ ಇಟ್ಟು ನಿದ್ದೆ ಹೋಗುತ್ತಿದ್ದೆ.

ಅದು ಸ್ವಾತಂತ್ರ್ಯತ್ಯೋತ್ಸವ ದಿನದ ಮುನ್ನಾ ರಾತ್ರಿ. ಯಾವಾಗಂದ್ರೆ ಆವಾಗ ಎಚ್ಚರಾಗಿ ಗಣಪತಿ ಮಾಡಿನಲ್ಲಿಟ್ಟ ಜಂಡಾ ಹಾಗೂ ಕ್ಲೀನಾಗಿ ತೊಳೆದು ಮಡಚಿ ತಲೆಬುಡದಲ್ಲಿಟ್ಟ ಯುನಿಫಾರ್ಮಳೆರಡೂ ಮತ್ತೆ ಮತ್ತೆ ಒಂದು ಬಗೆಯ ಕಾತರ ಸೃಷ್ಟಿಸುತ್ತಿದ್ದವು. ಅವ್ವ ‘ಅದೇನು ಹೊರಳಾಡ್ತಿ ಸುಮ್ಮ ಬೀಳು’ ಅಂದಾಗಲೂ ಬಲವಂತದಿಂದ ಕಣ್ಣುಮುಚ್ಚುತ್ತಿದ್ದೆನೇ ಹೊರತು ನಿದ್ದೆ ಬರುತ್ತಿರಲಿಲ್ಲ. ಶುಭ್ರವಾದ ಬಿಳಿ ಅಂಗಿ, ಖಾಕಿ ಚಡ್ಡಿ ತೊಟ್ಟು ಬೆಳ್ಳಂಬೆಳಿಗ್ಗೆ ಎದ್ದು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಶಾಲೆಯ ಕಡೆ ಓಡಿದ್ದೇ ಓಡಿದ್ದು. ಆಗ ಇಡೀ ಊರು ಸಂಭ್ರಮ ಪಡುತ್ತಿತ್ತು. ನಮ್ಮ ಮನೆಯ ಮುಂದೊಂದು ಪೋಸ್ಟ್ ಆಫೀಸು, ಅಲ್ಲಿಯೂ ಧ್ವಜಾರೋಹಣ. ಅವರು ಹಿಂದಿನ ದಿನವೇ ಸುಣ್ಣ ಬಣ್ಣ ಬಳಿದು ಧ್ವಜದ ಕಟ್ಟೆ ಸಿದ್ಧ ಪಡಿಸಿರುತ್ತಿದ್ದರು.

ಬಗೆ ಬಗೆ ಬಣ್ಣದ ಪರಪರಿ ಹಾಗೂ ಬಾಗಿಲಲ್ಲಿ ಮಾವಿನ ತಳಿರಿನ ತೋರಣ ಅಲ್ಲಿದ್ದವರ ಸಡಗರಗಳೆಲ್ಲಾ ಸ್ವಾತಂತ್ರ್ಯೋತ್ಸವಕ್ಕೆ ಸಾಕ್ಷಿಯಾಗಿರುತ್ತಿತ್ತು. ಓದು ಬರಹ ತಿಳಿಯದ ಅವ್ವ -ಅಪ್ಪ ತಮ್ಮ ಮಗ ಬೆಳಿಗ್ಗೆ ಜಂಡಾ ಹಾರಸಲಿಕ್ಕ ಹೋಗ್ತಾನ ಅಂತ ಮಾತ್ರ ಹೇಳುತ್ತಿದ್ದುದಿತ್ತು. ಅವರಿಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿದಿದೆಯಾದರೂ ಆಗಸ್ಟ 15 ಹಾಗೂ ರಿಪಬ್ಲಿಕ್‌ಡೇ ನಡುವಿನ ಅಂತರಗಳು ತಿಳಿದಿರಲಿಲ್ಲ. ನಮ್ಮನ್ನ ಸ್ಕೂಲಗೆ ಜಂಡಾ ಹಾರಿಸಲು ಕಳುಹಿಸಿದ್ದೇ ಅವರು ಬುತ್ತಿ ಕಟ್ಟಿಕೊಂಡು ಹೊಲಕ್ಕೆ ನಡೆಯುತ್ತಿದರು. ಸ್ವಾತಂತ್ರ್ಯದ ದಿನವೂ ನಮ್ಮ ಅಪ್ಪ-ಅವ್ವಗೆ ಸೂಟಿ ಸಿಕ್ಕಿರಲಿಲ್ಲ. ನಾನು ಶಾಲೆಯಲ್ಲಿ ಧ್ವಜ ಹಾರಿಸಿ, ಆಮೇಲೆ ಊರಲ್ಲಿ ನಡೆಯುವ ಪ್ರಭಾತಪೇರಿಯಲ್ಲಿ ನನ್ನದೇ ಕ್ಲಾಸಿನ ಹುಡುಗರ ಕೈ ಕೈ ಹಿಡಿದು ಊರಲ್ಲಿ ಸಾಗುವಾಗ ನನ್ನ ಮನೆಯ ಹತ್ತಿರ ಬಂದಾಗ ನನ್ನ ಸಂಬಂಧಿಗಳು, ಪರಿಚಯದವರು ಯಾರಾದರೂ ಇದ್ದಾರೆಯೆ? ನನ್ನನ್ನು ಗಮನಿಸುತ್ತಿದ್ದಾರೆಯೆ.? ಎಂದು ಗಮತ್ತಿನಿಂದ ನೋಡುತ್ತಿದ್ದೆ. ತೀರಾ ಅಪರೂಪಕ್ಕೆ ಒಮ್ಮೊಮ್ಮೆ ಮನೆಯ ಹತ್ತಿರ ಬಂದಾಗ ಹೊಸ ಹೋರಿಯೊಂದು ನೊಗ ಕಳಚಿಕೊಳ್ಳುವಂತೆ, ಕೈ ಕೈ ಹಿಡಿದ ಗೆಳೆಯರನ್ನು ಬಿಟ್ಟು ಫರಾರಿಯಾಗುತ್ತಿದ್ದೆ.

ಅದಕ್ಕೆ ಹಸಿವಿನ ಕಿರಿಕಿರಿ ಕಾರಣವಾಗಿರುತ್ತಿತ್ತೇ ಹೊರತು ಬೇಕೆಂದು ಹಾಗೆ ಮಾಡುತ್ತಿರಲಿಲ್ಲ. ಇಡೀ ಊರಲ್ಲಿ ಪ್ರಭಾತಪೇರಿ ಹೊರಟು ತಹಶೀಲ್ದಾರ ಕಚೇರಿಯ ಬಳಿ ಧ್ವಜ ಹಾರಿಸಿ, ಅವರು ಹಂಚುವ ಪೆಪ್ಪರಮಿಂಟ್ ಬಾಯಿಗೆ ಬೀಳುವವರೆಗೂ ಅಲ್ಲಿರುತ್ತಿದ್ದೆ. ಪ್ರಾಥಮಿಕ ಹಂತದಲ್ಲಿದ್ದ ಆ ಹುರುಪು ಕ್ರಮೇಣವಾಗಿ ಕರಗುತ್ತಲೇ ಬಂತು. ಕಾಲೇಜಿನ ದಿನಗಳಲ್ಲಂತೂ ಹಾಗೆ ಬೆಳಿಗ್ಗೆ ಎದ್ದು ಜಂಡಾ ಹಾರಿಸಲು ತೆರಳಿದ್ದು ತೀರಾ ಕಡಿಮೆ. ಅಲ್ಲೇ ಮನೆಯ ಹತ್ತಿರವಿರುವ ಯಾವುದಾದರೂ ಒಂದು ಕಚೇರಿಯ ಧ್ವಜಾರೋಹಣದಲ್ಲಿ ಭಾಗವಹಿಸುತ್ತಿದ್ದೆ. ಸ್ವಾತಂತ್ರ್ಯದ ಜಂಡಾ ಹಾರಿಸುವ ಮಕ್ಕಳಾಗಿರುವಾಗಿನ ಆ ಹುರುಪು ಕ್ರಮೇಣವಾಗಿ ಕರಗಲು ಕಾರಣವಾದರೂ ಏನು..? ಎನ್ನುವ ಪ್ರಶ್ನೆಯನ್ನಿಟ್ಟುಕೊಂಡು ಅನೇಕ ಬಾರಿ ಯೋಚಿಸಿರುವೆ. ಅನಾಮತ್ತಾಗಿ ಯಾವುದೇ ಆಗಲೀ ದಕ್ಕಬಾರದು ಪಾರತಂತ್ರದ ನೊಗ ಹೊತ್ತವರಿಗೆ ಮಾತ್ರ ಸ್ವಾತಂತ್ರ್ಯದ ಮೌಲಿಕ ಅನುಭವ ಸಾಧ್ಯ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜನಿಸಿದ ಸಂತಾನಕ್ಕೆ ದೇಶಪ್ರೇಮದ ಪರಿಕಲ್ಪನೆ ಸರಿಯಾಗಿ ಅಂತರ್ಗತವಾಗಲಿಲ್ಲ. ಅವರ ಪಾಲಿಗೆ ಸ್ವಾತಂತ್ರ್ಯೋತ್ಸವದ ದಿನಾಚರಣೆ ಮಿಕ್ಕ ಇತರೆ ಸಾಂಪ್ರದಾಯಿಕ ಹಬ್ಬಗಳ ಸಾಲಲ್ಲಿ ಒಂದಾಯಿತೇ ಹೊರತು ಅದೊಂದು ಮೌಲಿಕ ಆಚರಣೆ ಎನ್ನುವ ಪರಿಪಾಠವನ್ನು ಪ್ರತಿಯೊಂದು ಮನೆಯಲ್ಲೂ ಬೆಳೆಸಲಿಲ್ಲ. ಆ ಬಗೆಯ ಪರಿಣಾಮದಲ್ಲಿಯೆ ಪಕ್ವವಾದ ಸಂತಾನ ಸ್ವಾತಂತ್ರ್ಯ ದಿನಾಚರಣೆ ರವಿವಾರ ಬಂತೆಂದರೆ ಪರಿತಪಿಸುವಂತಾದದ್ದು ಒಂದು ವಿಷಾದನೀಯ ಸಂಗತಿಯೆ ಹೌದು.

ಧ್ವಜಾರೋಹಣದ ಸಂಭ್ರಮ ಎನ್ನುವದು ಈಗ ಕೇವಲ ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ಎನ್ನುವಂಥಾ ಪರಿಸರ ನಿರ್ಮಾಣವಾಗಿದೆ. ಸ್ವಾತಂತ್ರ್ಯದ ಸುಖ ಅನುಭವಿಸುತ್ತಿರುವ ಈ ದೇಶದ ಪ್ರತಿಯೊಬ್ಬ ಪ್ರಜೆಯ ಹೊಣೆಗಾರಿಕೆ ಅದಾಗಿದೆ ಎನ್ನುವ ಪ್ರಜ್ಞೆ, ಪರಿಪಾಠ, ಸ್ವ ಒತ್ತಾಸೆ ಮೂಡಲೇ ಇಲ್ಲ. ಮಿಕ್ಕ ದಿನಾಚರಣೆಗಳ ಔಪಚಾರಿಕತೆ ಮತ್ತು ಕಾಟಾಚಾರ ಇಲ್ಲಿಯೂ ಎಂಟ್ರಿ ಹೊಡೆಯುವಂತಾದದ್ದು ಇನ್ನೊಂದು ದುರಂತ. ಅತ್ಯಂತ ಅರ್ಥವತ್ತಾಗಿ ಅಚರಿಸಬೇಕಾದ ಸ್ವಾತಂತ್ರ್ಯ ದಿನಾಚರಣೆಯನ್ನು ನಾವು ತೀರಾ ಯತಾರ್ಥವಾಗಿ ಆಚರಿಸುತ್ತಿದ್ದೇವೆ. ದೇಶ, ದೇಶಪ್ರೇಮದ ಭಾವನೆಗಳನ್ನು ಧರ್ಮ ಜಾತಿಯ ಸೋಂಕಿನಿಂದ ವಿಸ್ತೃತಗೊಳಿಸಲಾಗದು ಹಾಗಾದಾಗ ಅದು ರಾಷ್ಟ್ರೀಯ ಐಕ್ಯತೆಗೆ ಧಕ್ಕೆಯನ್ನು ತರುತ್ತದೆ. ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಕೂಡಾ ತನ್ನ ದೇಶ, ಭಾಷೆ, ಜನ, ಸಂಸ್ಕೃತಿಯನ್ನು ಯಾವುದೇ ರೀತಿಯ ಬಾಹ್ಯ ಒತ್ತಡವಿಲ್ಲದೇ ಪ್ರೀತಿಸಬೇಕು, ಗೌರವಿಸಬೇಕು. ಸ್ವಾತಂತ್ರ್ಯೋತ್ಸವದ ದಿನಾಚರಣೆ ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯಕ್ಕೆ ಒಂದು ಹೊಸ ಬಗೆಯ ಅರ್ಥವಂತಿಕೆಯನ್ನು ತಂದು ಕೊಡುವಂತಾಗಬೇಕು.

Leave a Reply

Your email address will not be published.