Daily Archives: August 17, 2012

ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣದ ಪ್ರಶ್ನೆಗಳು ಮತ್ತು ಉತ್ತರಗಳು


-ನವೀನ್ ಸೂರಿಂಜೆ


ಅದು ಕೇವಲ ನಾಲ್ಕು ನಿಮಿಷ ಐವತ್ತೊಂಬತ್ತು ಸೆಕೆಂಡು ನಡೆದ ಘಟನೆ. ಕಣ್ಮುಚ್ಚಿ ತೆರೆಯುವಷ್ಟರಲ್ಲಿ ನಡೆದ ಈ ಘಟನೆ ಮಂಗಳೂರಿನ ಕೋಮುವಾದಿಗಳ ಬಣ್ಣವನ್ನು ಬಯಲು ಮಾಡಿತ್ತು. ಆದರೆ ರಾಜ್ಯದ ಆಡಳಿತ ವ್ಯವಸ್ಥೆ ಈ ಕೋಮುವಾದಿಗಳ ಜೊತೆ ಸೇರಿಕೊಂಡು ಮಾಡುವ ಕಿರಾತಕ ಕಾರ್ಯಚಟುವಟಿಕೆಗಳನ್ನು ಈ ಘಟನೆ ಬಯಲಿಗೆ ತರಲೇ ಇಲ್ಲ. ಪೊಲೀಸರು ಮಾಧ್ಯಮದ ಪ್ರತಿನಿಧಿಗಳ ಮೇಲೆ ಕೇಸು ದಾಖಲಿಸಿ ಪ್ರಕರಣವನ್ನು ವಿಷಯಾಂತರ ಮಾಡಲು ಯತ್ನಿಸಿದ್ದರು. ಮಂಗಳೂರಿನ ಕೆಲವೊಂದು ಚೆಡ್ಡಿ ಪತ್ರಕರ್ತರ ಕೃಪೆಯಿಂದ ಅದರಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯೂ ಆದರು. ಆದರೆ ಸತ್ಯ ನಮ್ಮ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ದಿನಾಂಕ, ಸಮಯ ಸಹಿತ ಪೊಲೀಸರೂ ಈ ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ಕ್ಯಾಮರ ಕ್ಯಾಸೆಟ್ಟು ಸಾಕ್ಷಿ ನುಡಿಯುತ್ತದೆ.

ಮಂಗಳೂರಿನ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೆಯಲ್ಲಿ ಹಿಂದೂ ಯುವತಿಯರ ಜೊತೆ ಮುಸ್ಲಿಂ ಯುವಕರು ಪಾರ್ಟಿ ಮಾಡುತ್ತಿದ್ದಾರೆ ಎಂಬ ಮಾಹಿತಿಯ ಮೇಲೆ ಹಿಂದೂ ಜಾರಣ ವೇದಿಕೆಯ ಕಾರ್ಯಕರ್ತರು ಮಾರ್ನಿಂಗ್ ಮಿಸ್ಟ್ ಪ್ರವೇಶ ಮಾಡಿದ್ದರು. ಮಾರ್ನಿಂಗ್ ಮಿಸ್ಟ್ ಹೋಂ ಸ್ಟೆಯ ಕಂಪೌಂಡ್ ಗೇಟ್‌ನಿಂದ 40 ಮೀಟರ್ ದೂರದಲ್ಲಿ ಗೆಸ್ಟ್ ಹೌಸ್ ಇದೆ. ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಸರಿಯಾಗಿ ಸಂಜೆ 7.12 ಕ್ಕೆ ಗೇಟ್ ಬಳಿ ಜಮಾವಣೆಗೊಂಡಿದ್ದಾರೆ. 7.13ಕ್ಕೆ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೆಯ ಬಾಗಿಲು ದೂಡಿ ಒಳ ಪ್ರವೇಶಿಸಿದ್ದಾರೆ. 7.15ಕ್ಕೆ ನಾನು ಪೊಲೀಸ್ ಇನ್ಸ್‌ಪೆಕ್ಟರ್ ರವೀಶ್ ನಾಯಕ್ ರ ದೂರವಾಣಿ ಸಂಖ್ಯೆ 9480805330 ಗೆ ಕರೆ ಮಾಡಿದ್ದೇನೆ. ಅವರು ಕರೆ ಸ್ವೀಕರಿಸಿಲ್ಲ. ಅಷ್ಟರಲ್ಲಿ ನನ್ನ ಫೋನ್‌ಗೆ ನನ್ನ ವರದಿಗಾರ ಮಿತ್ರನೊಬ್ಬ ಕರೆ ಮಾಡಿದ್ದಾನೆ. ನಾನು ಆತಂಕದಿಂದಲೇ ದಾಳಿ ವಿಷಯವನ್ನು ಅವನಿಗೆ ತಿಳಿಸಿದೆ. ಅವನು ಸ್ವಲ್ಪ ಹೊತ್ತಿನಲ್ಲಿ ಮತ್ತೆ ನನಗೆ ಕರೆ ಮಾಡಿ ಅವನೂ ಪೊಲೀಸರಿಗೆ ಕರೆ ಮಾಡಿದ್ದು, ಅವರು ಕರೆ ಸ್ವೀಕರಿಸದಿರುವ ಬಗ್ಗೆ ತಿಳಿಸಿದ್ದಾನೆ. ಸರಿಯಾಗಿ 7.18 ಕ್ಕೆ ದಾಳಿ ನಡೆಯುತ್ತಿರುವ ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ. 7.20ಕ್ಕೆ ದಾಳಿ ಮುಕ್ತಾಯವಾಗಿದೆ.

ನಮ್ಮ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೆಯ ಜುಲೈ 28 ರ ಘಟನೆಯ ಬಗ್ಗೆ ಒಟ್ಟು ಒಂಬತ್ತು ನಿಮಿಷ ಹದಿನೈದು ಸೆಕೆಂಡಿನ ದೃಶ್ಯಾವಳಿಗಳಿವೆ. ಒಟ್ಟು ನಾಲ್ಕು ನಿಮಿಷ ಐವತ್ತೊಂಬತ್ತು ಸೆಕೆಂಡು ಹಲ್ಲೆ ನಡೆದಿದೆ. ನಾಲ್ಕು ನಿಮಿಷದಲ್ಲಿ ಒಬ್ಬ ವ್ಯಕ್ತಿ ಏನೆಲ್ಲಾ ಮಾಡಬಹುದೋ ಅದನ್ನೆಲ್ಲಾ ಪತ್ರಕರ್ತರಾಗಿಯೇ ನಮ್ಮ ಜವಾಬ್ದಾರಿಗಳನ್ನು ಮಾಡಿದ್ದೇವೆ. ಇನ್ಸ್‌ಪೆಕ್ಟರ್ ರವೀಶ್ ನಾಯಕ್‌‌ರ ಫೋನ್ ಪೂರ್ತಿ ರಿಂಗ್ ಆಗುವವರೆಗೆ ಕಾದಿದ್ದೇನೆ. ಅವರು ಕರೆ ಸ್ವೀಕರಿಸಿಲ್ಲ. ಬೇರೆ ಯಾರಿಗಾದರೂ ಫೋನ್ ಮಾಡಬೇಕು ಎಂದುಕೊಳ್ಳುವಷ್ಟರಲ್ಲಿ ನನ್ನ ಫೋನ್‌ಗೆ ನನ್ನ ವರದಿಗಾರ ಮಿತ್ರನೊಬ್ಬನ ಕರೆ ಬಂದಿದೆ. ಅವರಿಗೆ ಗಲಭೆಯ ಬಗ್ಗೆ ಪೂರಾ ವಿವರ ನೀಡಿದ್ದೇನೆ. ಆ ವರದಿಗಾರರು ತಕ್ಷಣ ಮರಳಿ ನನಗೇ ಫೋನ್ ಮಾಡಿದರು. “ನಾನು ರವೀಶ್ ನಾಯಕ್‌ರ ಫೋನ್‌ಗೆ ಕರೆ ಮಾಡುತ್ತಿದ್ದು, ಅವರು ರಿಸೀವ್ ಮಾಡುತ್ತಿಲ್ಲ” ಎಂದರು. ಇವೆಲ್ಲದರ ಮಧ್ಯೆ ಯುವತಿಯರ ಚೀರಾಟ ಕೇಳುತ್ತಿತ್ತು. ಮನುಷ್ಯ ಸಹಜವಾಗಿ ನನ್ನ ಮೆದುಳು, ಹೃದಯಗಳು ಅತ್ತ ಹೋಗುತ್ತಿದ್ದವು. ಅಷ್ಟರಲ್ಲಿ ರವೀಶ್ ನಾಯಕ್ ದಾಳಿಕೋರರ ಮಧ್ಯೆ ಇರುವುದು ಮತ್ತು ದಾಳಿಕೋರರ ಜೊತೆ ಸೇರಿಕೊಂಡು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡು ಬಂತು.

ನಾಲ್ಕು ನಿಮಿಷ ಐವತ್ತೊಂಬತ್ತು ಸೆಕೆಂಡಿನಲ್ಲಿ ಕೆಲವು ನಿಮಿಷಗಳು ಒಬ್ಬ ಇನ್ಸ್‌ಪೆಕ್ಟರ್‌ನ ಫೋನ್ ಪೂರ್ತಿ ರಿಂಗ್ ಆಗುವವರೆಗಿನ ಸಮಯವಾಗಿ ವ್ಯರ್ಥ ಆಗಿದೆ. ನಂತರ ನನ್ನ ವರದಿಗಾರ ಮಿತ್ರದ ಕರೆ ಸ್ವೀಕರಿಸಿ ಆತನಿಗೆ ವಿವರ ತಿಳಿಸಿದ್ದೇನೆ. ಅದರ ಮಧ್ಯೆ ನನ್ನ ಮನಸ್ಸು, ಮೆದುಳು ಎರಡೂ ಕೂಡಾ ದಾಳಿಯತ್ತಾ ನೆಟ್ಟಿತ್ತು. ನನ್ನ ಕಣ್ಣೆದುರೇ ಹುಡುಗಿಯರ ಸೂಕ್ಷ್ಮ ಭಾಗಗಳ ಮೇಲೆ ಹಲ್ಲೆಯಾಗುತ್ತಿರುವುದನ್ನು ಕಂಡೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಗೆ ನಾನು ತಲುಪಿದ್ದರ ಗೊಂದಲದಲ್ಲಿದ್ದೆ. ಅಷ್ಟರಲ್ಲಿ ನನ್ನ ವರದಿಗಾರ ಮಿತ್ರ ಮತ್ತೆ ಕರೆ ಮಾಡಿ ರವೀಶ್ ನಾಯಕ್ ಫೋನ್ ರಿಸೀವ್ ಮಾಡುತ್ತಿಲ್ಲ ಎಂದ. ನಾಲ್ಕು ನಿಮಿಷ ಐವತ್ತೊಂಬತ್ತು ಸೆಕೆಂಡಿನಲ್ಲಿ ಇನ್ನೇನು ಮಾಡಬಹುದಿತ್ತು ನಾನು? ಅಷ್ಟರಲ್ಲಿ ರವೀಶ್ ನಾಯಕ್ ಮತ್ತು ದಾಳಿಕೋರರು ಒಟ್ಟಾಗಿ ವಿದ್ಯಾರ್ಥಿಗಳ ಕೋಣೆಗೆ ತೆರಳಿ ಹಲ್ಲೆ ನಡೆಸಿದರು. ಆಗಲೂ ನಾನು ಪೊಲೀಸರಿಗೆ ಕರೆ ಮಾಡಬೇಕಿತ್ತೆ?

100 ಗೆ ಯಾಕೆ ಕರೆ ಮಾಡಿಲ್ಲ?
ತುಂಬಾ ಜನ ಕೇಳುತ್ತಾರೆ. ನೀವು 100 ಗೆ ಯಾಕೆ ಕರೆ ಮಾಡಿಲ್ಲ ಎಂದು. ಪೊಲೀಸರು ಕೂಡಾ ವಿಚಾರಣೆ ವೇಳೆ ಇದನ್ನೇ ಕೇಳಿದರು. ನಾನು ನನ್ನ ಕೈಯ್ಯಲ್ಲಿ ಲ್ಯಾಂಡ್ ಫೋನ್ ಇಟ್ಟುಕೊಂಡಿಲ್ಲ. ನನ್ನ ಮೊಬೈಲ್ ಫೋನ್‌ನಿಂದ ಮಂಗಳೂರಿನಲ್ಲಿ 100 ಗೆ ಕರೆ ಮಾಡಿದರೆ “ಪ್ಲೀಸ್ ಚೆಕ್ ದ ನಂಬರ್” ಎಂದು ವಾಯ್ಸ್ ಬರುತ್ತದೆ. ಅದರರ್ಥ ಮೋಬೈಲ್‌ನಿಂದ 100 ಗೆ ಕರೆ ಕನೆಕ್ಟ್ ಆಗುವುದೇ ಇಲ್ಲ. ಬೇಕಿದ್ರೆ ಇಲ್ಲಿ ಟ್ರೈ ಮಾಡಿ. ಇಷ್ಟಕ್ಕೂ ನಾನೀಗಲೂ 100 ಗೆ ಕರೆ ಮಾಡುತ್ತಾ ಕೂರಲು ನಾನೇನು 90ರ ದಶಕದಲ್ಲಿ ಇಲ್ಲ. ನನ್ನ ಬಳಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಇಲಾಖಾ ಮೊಬೈಲ್ ನಂಬರ್ ಇದೆ. ಯಾವ ಯಾವ ಸ್ಥಳ ಯಾವ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತೆ ಎಂಬುದೂ ನನಗೆ ಸ್ಪಷ್ಟವಾಗಿ ತಿಳಿದಿದೆ. ಆದುದರಿಂದ ಘಟನೆ ಆದ ತಕ್ಷಣ ನನ್ನ ನೆನಪಿಗೆ ಬಂದಿದ್ದು ಸ್ಥಳಿಯ ಇನ್ಸ್‌ಪೆಕ್ಟರ್‌. ಅವರು ಫೋನ್ ಕರೆ ಸ್ವೀಕರಿಸಿಲ್ಲ ಮತ್ತು ಕೆಲವೇ ಸೆಕೆಂಡುಗಳಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ದಾಳಿಕೋರರ ಮಧ್ಯೆ ಕಂಡು ಬರುತ್ತಾರೆ. ಪೊಲೀಸ್ ಇನ್ಸ್‌ಪೆಕ್ಟರ್ ಸೇರಿ ನಾಲ್ಕು ಮಂದಿ ಪೊಲೀಸರು ಘಟನಾ ಸ್ಥಳದಲ್ಲಿ ಇರುವುದನ್ನು ಗಮನಿಸಿಯೂ ನಾನು ಬೇರೆ ಪೊಲೀಸ್ ಅಧಿಕಾರಿಗಳಿಗೆ ಅಥವಾ 100 ಗೆ ಕರೆ ಮಾಡಲು ಪ್ರಯತ್ನಿಸಬೇಕು ಎನ್ನುವವರಿಗೆ ನಾನೇನೂ ಉತ್ತರಿಸಲಾರೆ.

ನಿಮ್ಮ ತಂಗಿ ಮೇಲೆ ಹಲ್ಲೆಯಾಗುತ್ತಿದ್ದರೆ ನೀವು ಶೂಟಿಂಗ್ ಮಾಡುತ್ತಿದ್ರಾ ?
ಇಂತಹ ಪ್ರಶ್ನೆಯನ್ನು ಹಲವಾರು ಪ್ರಗತಿಪರ ಲೇಖಕರೂ, ಕೇಸರಿ ಬರಹಗಾರರೂ, ಸಾಮಾನ್ಯ ಜನರೆಲ್ಲರೂ ಕೇಳಿದ್ದಾರೆ. ಪೊಲೀಸರೂ ಇದೇ ಪ್ರಶ್ನೆಯನ್ನು ಕೇಳಿದ್ದರು. ಪೊಲೀಸರಿಗೆ ನಾನು ಲಿಖಿತವಾಗಿ ನೀಡಿದ ಉತ್ತರ ಹೀಗಿದೆ: “ಈ ಪ್ರಶ್ನೆಯೇ ಪತ್ರಕರ್ತನಾದ ನನಗೆ ಅಪ್ರಸ್ತುತ. ನಾನು ನನ್ನ ವೃತ್ತಿ ಜೀವನದಲ್ಲಿ ಹಲವಾರು ಆಕ್ಸಿಡೆಂಟ್‌ಗಳನ್ನು ಶೂಟಿಂಗ್ ಮಾಡಿಸಿ ಸುದ್ದಿ ಮಾಡಿದ್ದೇನೆ. ವಿಮಾನ ದುರಂತದಲ್ಲಿ 158 ಮಂದಿ ಜೀವಂತ ಸುಟ್ಟು ಕರಕಲಾಗುವ ದೃಶ್ಯ ನನ್ನ ಬಳಿ ಇದೆ. ಅವರೆಲ್ಲರೂ ನನ್ನ ಅಣ್ಣಂದಿರಾಗಿದ್ದರೆ…… ನಾನು ಶೂಟಿಂಗ್ ಮಾಡಿ ಸುದ್ದಿ ಮಾಡುತ್ತಿದ್ದೆನಾ? ನಾನು ಎಷ್ಟೋ ಕೊಲೆ ಪ್ರಕರಣಗಳನ್ನು ವರದಿ ಮಾಡಿದ್ದೇನೆ. ನಿಮ್ಮ ತಂದೆಯೇ ಕೊಲೆಯಾಗಿದ್ದರೆ ನೀವು ವರದಿ ಮಾಡುತ್ತಿದ್ರಾ ಎಂದು ನನ್ನನ್ನು ಕೇಳಿದರೆ ಹೇಗೆ? ಅತ್ಯಾಚಾರಕ್ಕೆ ಒಳಗಾದ ಎಷ್ಟೋ ಹುಡುಗಿಯರ ಹಕ್ಕು, ಬದುಕಿನ ಬಗ್ಗೆ ಸುದ್ದಿ ಮಾಡಿದ್ದೇವೆ. ನಿಮ್ಮ ತಂಗಿಯನ್ನು ಯಾರಾದರೂ ಅತ್ಯಾಚಾರ ಮಾಡಿದ್ದರೆ ಸುದ್ದಿ ಮಾಡುತ್ತಿದ್ದಿರಾ ಎಂದು ಯಾರಾದರೂ ಕೇಳಿದರೆ ಏನನ್ನಬೇಕು? ಪತ್ರಕರ್ತರಿಗೆ ಮಾತ್ರವಲ್ಲ, ಪೊಲೀಸರು ಮತ್ತು ನ್ಯಾಯಾಧೀಶರಿಗೂ ಈ ಪ್ರಶ್ನೆ ಅಪ್ರಸ್ತುತ.

ಹಲ್ಲೆಯನ್ನು ನೀವು ಯಾಕೆ ತಡೆಯಲು ಹೋಗಿಲ್ಲ?
ಅಷ್ಟೊಂದು ಮಂದಿ ಯುವತಿಯರನ್ನು ಹಿಡಿದು ಅಮಾನವೀಯವಾಗಿ ಹಲ್ಲೆ ಮಾಡುತ್ತಿರಬೇಕಾದರೆ ನೀವ್ಯಾಕೆ ತಡೆಯಲು ಹೋಗಿಲ್ಲ ಎಂಬ ಪ್ರಶ್ನೆಯನ್ನು ಹಲವರು ಕೇಳಿದ್ದಾರೆ. ನಾನು ಮೊದಲಿನಿಂದಲೂ ಈ ಬಗ್ಗೆ ಹೇಳುತ್ತಲೇ ಬಂದರೂ ಉತ್ತರ ಕೆಲವರಿಗೆ ಸಮಾಧಾನ ತಂದಿಲ್ಲ. ದಾಳಿಕೋರರು ಅಂದಾಜು ಮೂವತ್ತರಿಂದ ನಲ್ವತ್ತು ಮಂದಿ ಇದ್ದಿರಬಹುದು. ಅವರೆಲ್ಲರೂ ಮದ್ಯಪಾನ ಮಾಡಿದ್ದರು. ಅವರು ಗೆಸ್ಟ್ ಹೌಸ್ ಒಳ ಪ್ರವೇಶಿಸಿದ ನಂತರ ಅವರ ಗಬ್ಬು ವಾಸನೆ ಸ್ಪಷ್ಟವಾಗಿ ಅರಿವಿಗೆ ಬರುತ್ತಿತ್ತು. ಅವರು ಎಷ್ಟೊಂದು ಕುಡಿದ ಮತ್ತಿನಲ್ಲಿದ್ದರೆಂದರೆ ಅವರು ಹುಡುಗಿಯರ ಮೇಲೆ ನಡೆಸಿದ ಅಮಾನವೀಯ ಹಲ್ಲೆಯಿಂದಲೇ ಗೊತ್ತಾಗುತ್ತದೆ. ನನ್ನ ಮುಖ ಪರಿಚಯ ಅಲ್ಲಿದ್ದ ಯಾವಾನಿಗೂ ಇರಲಿಲ್ಲ. ಮೊದಲೇ ಕುಡಿದಿದ್ದ ಅವರು ನಾನು ಹೇಳಿದ್ದನ್ನು ಕೇಳೋ ಸಾಧ್ಯತೆಗಳೇ ಇಲ್ಲ. ಒಂದು ವೇಳೆ ಅವರು ಹೊಡೆಯುತ್ತಿದ್ದ ಸಂಧರ್ಭ ನಾನು ಮಧ್ಯೆ ಹೋಗಿ ತಡೆದಿದ್ದರೆ ನನ್ನ ಮೇಲೆ ಹಲ್ಲೆಗಳಾಗುತ್ತಿತ್ತು. ಆದುದರಿಂದ ನಲ್ವತ್ತು ಮಂದಿ ಪೈಶಾಚಿಕ ಜೀವಿಗಳ ಎದುರು ನಾನು ನಿಸ್ಸಾಹಾಯಕನಾಗಿದ್ದೆ. ಇಷ್ಟಕ್ಕೂ ದಾಳಿಯ ಮಧ್ಯೆ ಇನ್ಸ್‌ಪೆಕ್ಟರ್ ರವೀಶ್ ನಾಯಕ್ ಕಂಡು ಬಂದಿದ್ದಾರೆ. ಅವರೇನೂ ನನ್ನಂತೆ ನಿಸ್ಸಾಹಾಯಕರಲ್ಲ. ಅವರ ಸೊಂಟದಲ್ಲಿ ರಿವಾಲ್ವರ್ ನೇತಾಡುತ್ತಿತ್ತು. ಆದರೆ ಅವರು ದಾಳಿಕೋರರ ಜೊತೆ ಸೇರಿ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ್ದಾರೆ. ಹೀಗಿರುವಾಗ ನಾನು ಯಾರನ್ನು ಹೇಗೆ ತಡೆಯಬೇಕಿತ್ತು ?

ಪೊಲೀಸರಿಗೆ ನನ್ನ ಪ್ರಶ್ನೆಗಳು:
ಈ ಪ್ರಕರಣದ ಸಂಬಂಧ ಪೊಲೀಸರು ನನ್ನ ಬಳಿ 47 ಲಿಖಿತ ಪ್ರಶ್ನೆಗಳನ್ನು ಕೇಳಿದ್ದಾರೆ. ಅವೆಲ್ಲಕ್ಕೂ ಅಂಕಿ ಅಂಶಗಳ ಸಹಿತ ದಾಖಲೆಗಳನ್ನು ನೀಡಿ ಸಮರ್ಪಕ ಉತ್ತರ ನೀಡಿದ್ದೇನೆ. 47 ಪ್ರಶ್ನೆ ಕೇಳಿದ ಪೋಲೀಸರಿಗೆ ನನ್ನಿಂದಲೂ ಕೆಲವು ಪ್ರಶ್ನೆಗಳಿವೆ.

 • ಪತ್ರಕರ್ತರ ದೂರವಾಣಿ ಕರೆಯನ್ನು ಇನ್ಸ್‌ಪೆಕ್ಟರ್ ಯಾಕೆ ರಿಸೀವ್ ಮಾಡಿಲ್ಲ?
 • ಪತ್ರಕರ್ತರು ದೂರವಾಣಿ ಕರೆ ಮಾಡಿಲ್ಲ ಎನ್ನುವ ನೀವು ಪೊಲೀಸ್ ಇನ್ಸ್‌ಪೆಕ್ಟರ್  ರವೀಶ್ ನಾಯಕ್‌ರ ಫೋನ್ ಡಾಟಾ ತೆಗೆದಿದ್ದೀರಾ ? ಮಿಸ್ಡ್ ಕಾಲ್‌ಗಳು ಕಾಲರ್ ಲಿಸ್ಟ್‌ನಲ್ಲಿ ಬರುವುದಿಲ್ಲ. ಫೋನ್ ಡಾಟಾ ತೆಗೆಯಬೇಕು. ತೆಗೆದಿದ್ದರೆ ಮಾಧ್ಯಮದವರು ಕರೆ ಮಾಡಿರುವ ಬಗ್ಗೆ ಸತ್ಯಾಸತ್ಯತೆ ಏನು?
 • ಪೊಲೀಸರಿಗೆ ದಾಳಿಯ ಬಗ್ಗೆ ಮಾಹಿತಿ ನೀಡಿದವರು ಯಾರು?
 • ಹಲ್ಲೆಗೊಳಗಾದ ವಿದ್ಯಾರ್ಥಿಗಳು ಹೇಳುವಂತೆ ಪೊಲೀಸರು ದಾಳಿಕೋರರ ಜೊತೆ ಬಂದಿದ್ದರು. ಪೊಲೀಸರು ಯಾಕೆ ದಾಳಿಕೋರರ ಜೊತೆ ಬಂದರು?
 • ವಿದ್ಯಾರ್ಥಿಗಳ ಹೇಳಿಕೆಗೆ ಪೂರಕವಾಗಿ ಪೊಲೀಸರು ದಾಳಿಕೋರರ ಜೊತೆ ಹರಟುವ ವಿಝುವಲ್ಸ್ ನಮ್ಮ ಬಳಿ ಇದೆ. ನಾವು ವಿಝುವಲ್ಸ್‌ಗಳ ದಾಖಲೆಗಳನ್ನು ನಿಮಗೆ ಒದಗಿಸಿದ್ದೇವೆ. ಅಂತಹ ಪೊಲೀಸರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ?
 • ಪೊಲೀಸರು ಘಟನಾ ಸ್ಥಳದಲ್ಲಿ ಇದ್ದರೂ ಪತ್ರಕರ್ತರು ಪೊಲೀಸರಿಗೆ ಮಾಹಿತಿ ನೀಡಬೇಕೆ?
 • ದಾಳಿಕೋರರ ಜೊತೆ ಇನ್ಸ್‌ಪೆಕ್ಟರ್ ರವೀಶ್ ನಾಯಕ್ ವಿದ್ಯಾರ್ಥಿಗಳಿಗೆ ಹಲ್ಲೆ ಮಾಡುವ ವಿಝುವಲ್ಸ್ ನಾವು ಸಹಾಯಕ ಪೊಲೀಸ್ ಆಯುಕ್ತರಿಗೆ ದಾಖಲೆಯಾಗಿ ನೀಡಿದ್ದೇವೆ. ಆದರೂ ರವೀಶ್ ನಾಯಕರನ್ನು ಯಾಕೆ ಬಂಧಿಸಿಲ್ಲ?
 • ಕಾರ್ಪೊರೇಟರ್ ಮತ್ತು ಪೊಲೀಸರು ಈ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೆಯ ಮಾಲಕರಿಂದ ಹಫ್ತಾ ಕೇಳಿದ್ದರು ಎಂಬ ಆರೋಪ ಇದೆ. ಹಫ್ತಾ ನೀಡದ ಹಿನ್ನಲೆಯಲ್ಲಿ ಹೋಂಸ್ಟೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ಪಾರ್ಟಿ ಮಾಡುತ್ತಿದ್ದ ಮಕ್ಕಳ ಮೇಲೆ ಕೇಸು ದಾಖಲಿಸುವ ಹುನ್ನಾರ ನಿಮ್ಮದಾಗಿತ್ತು. ಅದಕ್ಕಾಗಿ ದಾಳಿಕೋರರು, ಕಾರ್ಪೊರೇಟರ್ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ಮಾಡಿದ್ದರು. ಮಾಧ್ಯಮಕ್ಕೆ ಪ್ರಾರಂಭದಲ್ಲೇ ಮಾಹಿತಿ ಸಿಕ್ಕಿದ್ದೇ ಆಗಿರೋ ಎಡವಟ್ಟು ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?
 • ದಾಳಿಕೋರರು ದಾಳಿ ನಡೆಸುವ ಸಂದರ್ಭ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಘಟನಾ ಸ್ಥಳದಲ್ಲಿದ್ದರು. ಆಗಿನ್ನೂ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗಿಲ್ಲ. ಆದರೂ ಕಾರ್ಪೊರೇಟರ್‌ಗೆ ಸುದ್ದಿ ತಿಳಿದಿದ್ದು ಹೇಗೆ? ದಾಳಿ ಮೊದಲೇ ಅವರಿಗೆ ಗೊತ್ತಿತ್ತೆ? ಗೊತ್ತಿದ್ದರೆ ಹೇಗೆ ಎಂಬುದನ್ನು ತನಿಖೆ ಮಾಡಿದ್ದೀರಾ? ತನಿಖೆಯ ವಿವರ ಏನು?
 • ಪತ್ರಕರ್ತರು ಮಾಹಿತಿ ನೀಡಬೇಕಿತ್ತು ಎನ್ನುವ ನೀವು ಕಾರ್ಪೊರೇಟರ್ ನೀಡಿದ ಮಾಹಿತಿಯ ವಿವರ ನೀಡಬಲ್ಲಿರಾ? ಕಾರ್ಪೊರೇಟರ್ ಎಷ್ಟು ಗಂಟೆಗೆ ಯಾವ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿದ್ದರು?
 • ದಾಳಿಯಲ್ಲಿ ಕಾರ್ಪೊರೇಟರ್ ಮೋಹನ್ ಪಡೀಲ್ ಭಾಗಿಯಾಗಿದ್ದಾರೆ ಎಂದು 9 ಗಂಟೆಗೆ ಅವರನ್ನು ಬಂಧಿಸಿದ್ದೀರಿ. ಬಂಧಿಸೋ ಭಯಾನಕ ದೃಶ್ಯದ ವೀಝುವಲ್ಸ್ ನಮ್ಮ ಬಳಿ ಇದೆ. ಬಂಧಿಸಿರೋ ಕಾರ್ಪೊರೇಟರ್‌ರನ್ನು 9.30ಗೆ ಬಿಡುಗಡೆ ಮಾಡಿದ್ದೀರಿ. ಯಾವ ಆಧಾರದಲ್ಲಿ ಬಂಧಿಸಿದ್ದೀರಿ ಮತ್ತು ಯಾವ ರೀತಿಯ ತನಿಖೆ ನಡೆಸಿ ಬಿಡುಗಡೆ ಮಾಡಿದ್ದೀರಿ?
 • ಪತ್ರಕರ್ತರೊಬ್ಬರಿಗೆ ರಾತ್ರಿ ಒಂದು ಗಂಟೆಗೆ ದೂರವಾಣಿ ಕರೆ ಮಾಡಿದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ , “ನವೀನ್ ಯಾಕೆ ಸುದ್ದಿ ಮಾಡಬೇಕಿತ್ತು. ಮನೆಯಲ್ಲಿ ತಂಗಿಯರಿಗೆ ಹೊಡೆದರೆ ಸುದ್ದಿ ಮಾಡ್ತಾರಾ? ನಾನು ಬಿಡುವುದಿಲ್ಲ. ಅವನನ್ನು ಈ ಕೇಸ್‌ನಲ್ಲಿ ಫಿಕ್ಸ್ ಮಾಡುತ್ತೇನೆ” ಎಂದಿದ್ದಾರೆ. ಇದಕ್ಕೆ ದಾಖಲೆಯಾಗಿ ಮಾತಾಡಿರೋ ರೆಕಾರ್ಡ್ ಅನ್ನು ಏರ್‌ಟೇಲ್ ಕಚೇರಿಯಿಂದ ತೆಗೆಯಬಹುದು. ಈ ರೀತಿ ಫಿಕ್ಸ್ ಮಾಡುತ್ತೇನೆ ಎನ್ನುವುದು ಯಾವ ಕಾನೂನಿನಲ್ಲಿ ಬರುತ್ತದೆ.
 • ನಾನು ಪೊಲೀಸರಿಗೆ ಮಾಹಿತಿ ನೀಡಿಲ್ಲ ಎನ್ನುವುದಾದರೆ ಸ್ಥಳೀಯ ಇನ್ಸ್‌ಪೆಕ್ಟರ್  ನನ್ನ ವಿರುದ್ಧ ದೂರು ನೀಡಬೇಕಿತ್ತು. ಯಾವ ಪೊಲೀಸ್ ಅಧಿಕಾರಿಯೂ ನನ್ನ ವಿರುದ್ಧ ಯಾಕೆ ದೂರು ನೀಡಿಲ್ಲ.
 • ಹಲ್ಲೆಗೊಳಗಾದ ವಿಜಯ್‌ನಿಂದ ದೂರು ಪಡೆಯಲಾಗಿದೆ. ವಿಜಯ್ ಮೇಲೆ 7.15 ರ ವೇಳೆಗೆ ಹಲ್ಲೆಯಾಗಿದ್ದು 10 ಗಂಟೆಯ ವೇಳೆಗೆ ದೂರು ಸ್ವೀಕರಿಸಲಾಗಿದೆ. ಆತನಿಗೆ ನನ್ನ ಪರಿಚಯವೇ ಇರಲಿಲ್ಲ. ನನ್ನ ಹೆಸರನ್ನು ಆತ ನೀಡಲು ಹೇಗೆ ಸಾಧ್ಯವಾಯಿತು ?
 • ವಿಜಯ್ ಹೇಳುವ ಪ್ರಕಾರ ಆತ ನೀಡಿದ ಆತನ ಹಸ್ತಾಕ್ಷರ ಉಳ್ಳ ದೂರನ್ನು ಪೊಲೀಸರು ಸ್ವೀಕರಿಸದೆ ಖಾಲಿ ಕಾಗದಕ್ಕೆ ಸಹಿ ಪಡೆದುಕೊಂಡು, ಪತ್ರಕರ್ತರ ಹೆಸರು ಹಾಕಿದ್ದಾರೆ. ಆತನ ಹಸ್ತಾಕ್ಷರ ಉಳ್ಳ ದೂರಿನ ಪ್ರತಿ ನಮ್ಮ ಬಳಿ ಇದೆ. ಅಗತ್ಯ ಬಿದ್ದರೆ ಲ್ಯಾಬ್‌ಗೆ ಕಳುಹಿಸಿ ಆ ಪ್ರತಿಯ ದಿನಾಂಕ ದೃಡೀಕರಿಸಬಹುದು. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
 • ಪೊಲೀಸರು ಯಾಕೆ ವಿಜಯ್‌ನಿಂದ ಮಾತ್ರ ದೂರು ಪಡೆದುಕೊಂಡರು. ಹಲ್ಲೆಗೆ ಒಳಗಾದ ಹುಡುಗಿಯರಿಂದ ದೂರು ಯಾಕೆ ಪಡೆದಿಲ್ಲ? ಅವರು ದೂರು ನೀಡಲು ನಿರಾಕರಿಸಿದರೇ? ದೌರ್ಜನ್ಯಕ್ಕೊಳಗಾದ ಮಹಿಳೆ ದೂರು ನೀಡಲು ನಿರಾಕರಿಸಿದರೆ ಮಹಿಳಾ ಪೊಲೀಸರು ಆಕೆಯನ್ನು ದೂರು ನೀಡುವಂತೆ ಉತ್ತೇಜಿಸಬೇಕು ಎಂಬ ಹಿನ್ನಲೆಯಲ್ಲಿ ಮಹಿಳಾ ಪೊಲೀಸ್ ವಿಭಾಗವನ್ನು ಸ್ಥಾಪಿಸಲಾಗಿದೆ. ಮಹಿಳಾ ಪೊಲೀಸರು ದೂರು ನೀಡುವಂತೆ ದೌರ್ಜನ್ಯಕ್ಕೊಳಗಾದ ಹುಡುಗಿಯರಿಗೆ ಕೌನ್ಸೆಲಿಂಗ್ ಮಾಡಿದ್ದಾರೆಯೇ? ಮಹಿಳಾ ಪೊಲೀಸರ ಕೌನ್ಸೆಲಿಂಗ್ ವಿಫಲವಾದಾಗ ಸರಕಾರಿ ಅನುದಾನಿತ ಎನ್‌ಜಿಓಗಳಲ್ಲಿ ಕೌನ್ಸೆಲಿಂಗ್ ಮಾಡಬೇಕಾಗುತ್ತದೆ. (ಉದಾ: ಪ್ರಜ್ಞಾ) ಯಾವ ಎನ್‌ಜಿಓದಲ್ಲಿ ದೌರ್ಜನ್ಯಕ್ಕೊಳಗಾದ ಹುಡುಗಿಯರ ಕೌನ್ಸೆಲಿಂಗ್ ನಡೆಸಿ ದೂರು ಪಡೆದುಕೊಳ್ಳಲು ಪ್ರಯತ್ನ ಮಾಡಿದ್ದೀರಿ ?
 • ಪಬ್  ಅಟ್ಯಾಕ್‌ನಲ್ಲೂ ಹುಡುಗಿಯರ ದೂರು ಇಲ್ಲದೇ ಇರುವುದರಿಂದ ದಾಳಿಕೋರರಿಗೆ ಲಾಭವಾಯಿತು ಎಂಬುದರ ಬಗ್ಗೆ ತಮಗೆ ತಿಳಿದಿರಲಿಲ್ಲವೇ? ಹುಡುಗಿಯ ದೂರು ದಾಳಿಕೋರರ ವಿರುದ್ಧ ಎಫ್ಐಆರ್ ಮತ್ತು ಚಾರ್ಜ್‌ಶೀಟನ್ನು ಬಲಗೊಳಿಸುತ್ತದೆ ಎಂಬುದು ಪೊಲೀಸ್ ಆಯುಕ್ತರಾದ ನಿಮಗೆ ಗೊತ್ತಿರಲಿಲ್ಲವೇ? ಅಥವಾ ದಾಳಿಕೋರರಿಗೆ ಲಾಭವಾಗುವ ರೀತಿಯೇ ಎಫ್ಐಆರ್ ಹಾಕಿದ್ದೀರಿ ಎಂದುಕೊಳ್ಳಬೇಕೆ?
 • ನನ್ನನ್ನೂ ಸೇರಿ ಮಾದ್ಯಮದವರ ಮೇಲೆ ಜುಲೈ 28 ರ ರಾತ್ರಿಯೇ ಕೇಸು ದಾಖಲಿಸಿದ್ದೀರಿ. ಆದರೆ ಬಂಧಿಸಿಲ್ಲ. ತನಿಖೆಯನ್ನಷ್ಟೇ ಮಾಡುತ್ತೇವೆ ಎಂದಿದ್ದೀರಿ. ತನಿಖೆ ಮಾಡಿದ್ದೀರಿ. ದಾಳಿಯಲ್ಲಿ ನಮ್ಮ ಪಾತ್ರವೇನು? ನಮ್ಮನ್ನು ಯಾಕೆ ಬಂಧಿಸಿಲ್ಲ?
 • ನಾವು ನಿಮ್ಮ ಪ್ರಕಾರ ಇನ್ನೂ ತಪ್ಪಿತಸ್ಥರಾಗಿದ್ದರೂ ನಮ್ಮನ್ನು ಬಂಧಿಸದೇ ಇರುವಂತೆ ಯಾರಾದರೂ ಒತ್ತಡ ಹಾಕಿದ್ದಾರೆಯೇ? ಹಾಗೆ ಒತ್ತಡ ಹಾಕಿದವರು ಯಾರು? ನಿಮಗೂ, ಒತ್ತಡ ಹಾಕಿದವರಿಗೂ ಇರುವ ಮುಲಾಜುಗಳು ಏನು?
 • ಇಷ್ಟಕ್ಕೂ ಪಡೀಲ್ ಹೋಂ ಸ್ಟೆಯಲ್ಲಿ ನಡೆದ ದಾಳಿ ಮಂಗಳೂರಿನಲ್ಲಿ ನಡೆದ ಮೊದಲ ದಾಳಿಯಲ್ಲ. ಈ ದಾಳಿ ವಿಝುವಲ್ ಆಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ್ದರಿಂದ ಕ್ರಮ ಕೈಗೊಂಡಿದ್ದೀರಿ. ಜಪ್ಪಿನ ಮೊಗರು ಮೋರ್ಗನ್ ಗೇಟ್ ಬಳಿಯ ಎಂಫಾಸಿಸ್ ಉದ್ಯೋಗಿ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿಗೆ ಎರಡು ತಿಂಗಳ ಹಿಂದೆ ಹಿಂದೂ ಯುವ ಸೇನೆಯ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಮುಖ ಮೂತಿಯಲ್ಲಿ ರಕ್ತ ಬರುವಂತೆ ಹಲ್ಲೆ ನಡೆಸಿದ್ದೇ ಅಲ್ಲದೆ ದಾಳಿಕೋರರೇ ಹಲ್ಲೆಗೊಳಗಾದ ಜೋಡಿಯನ್ನು ಪಾಂಡೇಶ್ವರ ಪೊಲೀಸರಿಗೆ ಒಪ್ಪಿಸಿದ್ದರು. ಪಾಂಡೇಶ್ವರ ಪೊಲೀಸರು ಹಲ್ಲೆಗೊಳಗಾದ ಪ್ರೇಮಿಗಳ ಮನೆಯವರನ್ನು ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಇದೂ ಕೂಡಾ ನಾವು ಮಾಹಿತಿ ನೀಡದೇ ಇರುವುದರಿಂದ ನಡೆದ ಘಟನೆ ಎನ್ನುತ್ತೀರಾ? ಆಗ ಯಾಕೆ ದಾಳಿಕೋರರು ಠಾಣೆಗೆ ಬಂದರೂ ಕೇಸು ದಾಖಲಿಸಿಲ್ಲ. ದಾಖಲಿಸಿದ್ದರೆ ಕೇಸ್ ನಂಬರ್ ಏನು? ಯಾವ ಸೆಕ್ಷನ್ನಿನಲ್ಲಿ ಹಿಂದೂ ಯುವ ಸೇನೆಯ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿದ್ದೀರಿ? ಎಷ್ಟು ಆರೋಪಿಗಳು ಜೈಲಿನಲ್ಲಿದ್ದಾರೆ?
 • ಒಂದು ತಿಂಗಳ ಹಿಂದೆ ಮೇರಿಹಿಲ್ ಹೆಲಿಪ್ಯಾಡಿನ ವಿಹಂಗಮ ನೋಟ ಸವಿಯಲು ಬಂದ ವಿದ್ಯಾರ್ಥಿಗಳು ಕಾರಿನಲ್ಲಿ ಕುಳಿತು ಚಿಪ್ಸ್ ತಿನ್ನುತ್ತಿದ್ದರು. ಕಾರಿನ ನಾಲ್ಕೂ ಡೋರ್ ಓಪನ್ ಮಾಡಿ ವಿದ್ಯಾರ್ಥಿಗಳು ಹರಟುತ್ತಿದ್ದರು. ಈ ಸಂಧರ್ಭ ದಾಳಿ ಮಾಡಿದ ಶ್ರೀರಾಮ ಸೇನೆ ಕಾರ್ಯಕರ್ತರು ವಿದ್ಯಾರ್ಥಿಗಳಿಗೆ ಹಲ್ಲೆ ಮಾಡಿ ವಿದ್ಯಾರ್ಥಿಗಳನ್ನು ದಾಳಿಕೋರರೇ ಕಾವೂರು ಪೊಲೀಸರಿಗೆ ಒಪ್ಪಿಸಿದ್ದರು. ಇದೂ ಕೂಡಾ ನಾವು ಮಾಹಿತಿ ನೀಡದೇ ಇರುವುದರಿಂದ ನಡೆದ ಘಟನೆ ಎನ್ನುತ್ತೀರಾ? ಆಗ ಯಾಕೆ ದಾಳಿಕೋರರು ಠಾಣೆಗೆ ಬಂದರೂ ಕೇಸು ದಾಖಲಿಸಿಲ್ಲ. ದಾಖಲಿಸಿದ್ದರೆ ಕೇಸ್ ನಂಬರ್ ಏನು? ಯಾವ ಸೆಕ್ಷನ್ನಿನಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿದ್ದೀರಿ? ಎಷ್ಟು ಆರೋಪಿಗಳು ಜೈಲಿನಲ್ಲಿದ್ದಾರೆ ?
 • ಅದೆಲ್ಲಾ ಬಿಟ್ಟು ಬಿಡಿ. ಹೋಂ ಸ್ಟೇ ದಾಳಿಯ ಮರುದಿನ ಮಂಗಳೂರು ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲೇ ಯುವಕ ಯುವತಿಯ ಮೇಲೆ ದಾಳಿಯಾಗಿತ್ತು. ಕೆಲಸದ ಸಂದರ್ಶನಕ್ಕೆ ವಿಟ್ಲದಿಂದ ಮಂಗಳೂರಿಗೆ ಬಂದಿಳಿದ ಯುವತಿಗೆ ಆಕೆಯ ಸಹಪಾಠಿ ಎದುರಿಗೆ ಸಿಕ್ಕಾಗ ಮಾತನಾಡಿದ್ದಳು. ಅದೂ ಜನನಿಬಿಡ ಬಸ್ ನಿಲ್ದಾಣದಲ್ಲಿ. ಅಷ್ಟಕ್ಕೇ ಆಕೆ ಮತ್ತು ಆತನ ಮೇಲೆ ಸಂಘಟನೆಯೊಂದು ಮುಗಿ ಬಿದ್ದು ಹಲ್ಲೆ ಮಾಡಿ ಪೊಲೀಸರಿಗೆ ಒಪ್ಪಿಸಿತ್ತು. ಯಥಾ ಪ್ರಕಾರ ಪೊಲೀಸರು ಗೆಳೆಯರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ಇದೂ ಕೂಡಾ ನಾವು ಮಾಹಿತಿ ನೀಡದೇ ಇರುವುದರಿಂದ ನಡೆದ ಘಟನೆ ಎನ್ನುತ್ತೀರಾ? ಆಗ ಯಾಕೆ ದಾಳಿಕೋರರು ಠಾಣೆಗೆ ಬಂದರೂ ಕೇಸು ದಾಖಲಿಸಿಲ್ಲ? ದಾಖಲಿಸಿದ್ದರೆ ಕೇಸ್ ನಂಬರ್ ಏನು? ಯಾವ ಸೆಕ್ಷನ್ನಿನಲ್ಲಿ  ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿದ್ದೀರಿ? ಎಷ್ಟು ಆರೋಪಿಗಳು ಜೈಲಿನಲ್ಲಿದ್ದಾರೆ?
 • ಮೇಲೆ ಹೇಳಿದ ಮೂರು ಘಟನೆಗಳಂತೆ ವಾರಕ್ಕೆ ಎರಡು ಘಟನೆಗಳು ನಗರ ವ್ಯಾಪ್ತಿಯಲ್ಲಿ ನಡೆಯುತ್ತಿದ್ದು ಈ ಎಲ್ಲಾ ಸಂದರ್ಭಗಳಲ್ಲಿ ನೀವು ಅಂದರೆ ಪೊಲೀಸರು ನಿಮ್ಮ ಇಲಾಖೆಯನ್ನು ಆರೆಸ್ಸೆಸ್ಸಿನ ಘಟಕದಂತೆ ಕಾರ್ಯನಿರ್ವಹಿಸಿದ್ದರಿಂದಲೇ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೆ ಘಟನೆ ನಡೆಯಿತು ಎಂಬುದು ನನ್ನ ಅಭಿಪ್ರಾಯ. ಪೊಲೀಸ್ ಆಯುಕ್ತರಾಗಿ ನೀವು ಏನನ್ನುತ್ತೀರಿ?

ನನ್ನ ಮೇಲೆ ಪೊಲೀಸರು ಕೇಸು ದಾಖಲಿಸಿದ್ದಾರೆ ಎಂಬ ಕಾರಣಕ್ಕಾಗಿ ನಾನು ಈ ಪ್ರಶ್ನೆಗಳನ್ನೆತ್ತಿಲ್ಲ ಮತ್ತು ಉತ್ತರಗಳನ್ನು ನೀಡಿಲ್ಲ. ನಾನು ಪೊಲೀಸರಿಗೆ ಮಾಹಿತಿ ನೀಡಲಿಲ್ಲ ಮತ್ತು ನಾನು ಮನಸ್ಸು ಮಾಡಿದ್ದರೆ ದಾಳಿ ತಪ್ಪಿಸಬಹುದಿತ್ತು ಮತ್ತು ಹುಡುಗಿಯರ ಮೇಲಿನ ಹಲ್ಲೆಯನ್ನು ಚಿತ್ರೀಕರಿಸಬಾರದಿತ್ತು ಎಂಬ ಮಾತುಗಳು ವೆಬ್‌ಸೈಟುಗಲಲ್ಲಿ, ಬ್ಲಾಗ್, ಫೇಸ್‌ಬುಕ್‌ನಲ್ಲಿ ಕಂಡು ಬಂದಿದ್ದರಿಂದ ನನ್ನ ದಾಖಲೆಗಳಲ್ಲಿ ಇರುವ ಮಾಹಿತಿಯನ್ನು ನೀಡಬೇಕಾಯಿತು. ನಾನು ಇಲ್ಲಿ ಹೇಳಿರುವ ಎಲ್ಲಾ ಅಂಶಗಳಿಗೂ ನಮ್ಮಲ್ಲಿ ದಾಖಲೆ ಇವೆ. ಸಮಯದ ದೃಡೀಕರಣ ಮತ್ತು ಪೊಲೀಸರು ದಾಳಿಕೋರರ ಜೊತೆ ಸೇರಿ ಹಲ್ಲೆ ಮಾಡಿದ್ದಕ್ಕೆ ವಿಝುವಲ್ಸ್‌ಗಳು ಇವೆ. ಆಸಕ್ತರು ಬೇಕಿದ್ದರೆ ಮುಕ್ತವಾಗಿ ಪಡೆದುಕೊಳ್ಳಬಹುದು ಎಂದು ಹೇಳಲು ಇಷ್ಟೆಲ್ಲಾ ಹೇಳಬೇಕಾಯಿತು.

ಇಷ್ಟಕ್ಕೂ ಪೊಲೀಸರು ಕೇಸು ದಾಖಲಿಸಿರುವುದನ್ನು ನಾನು ತುಂಬಾನೇ ಎಂಜಾಯ್ ಮಾಡುತ್ತಿದ್ದೇನೆ. 2008 ರಲ್ಲಿ ನಡೆದ ಚರ್ಚ್ ದಾಳಿಯಲ್ಲೂ ನಾನು ಪ್ರತ್ಯಕ್ಷದರ್ಶಿಯಾಗಿದ್ದೆ. ಪೊಲೀಸರು ಮತ್ತು ಕೇಸರಿ ಪಡೆ ಯಾವ ರೀತಿ ಕ್ರಿಶ್ಚಿಯನ್ ಧಾರ್ಮಿಕ ಕೇಂದ್ರಗಳು ಮತ್ತು ಕ್ರಿಶ್ಚಿಯನ್ನರ ಮೇಲೆ ದಾಳಿ ನಡೆಸಿತು ಎಂಬುದನ್ನು ನಾನು ನೋಡಿದ್ದೆ. ಜಸ್ಟಿಸ್ ಸೋಮಶೇಖರ ಆಯೋಗದ ಮುಂದೆ ನಾನು ಕಂಡಿದ್ದೆಲ್ಲವನ್ನೂ ಹೇಳಲು ಅಫಿದಾವಿತ್ ಹಾಕಬೇಕು ಎಂದುಕೊಂಡಿದ್ದೆ. ಹಾಗೆ ಅಫಿದಾವಿತ್ ಹಾಕಬೇಕಾದರೆ ನಾನು ಕೆಲಸ ಮಾಡೋ ಸಂಸ್ಥೆಯಿಂದ ಒಪ್ಪಿಗೆ ಪಡೆಯಬೇಕು ಮತ್ತು ಆ ಸಂಧರ್ಭ ನಾನು ಪತ್ರಕರ್ತನ ಇತಿಮಿತಿಗಳನ್ನು ದಾಟುತ್ತಿದ್ದೇನೆ ಎನಿಸಿತು. ಅದಕ್ಕಾಗಿ ಆಯೋಗಕ್ಕೆ ಅಫಿದಾವಿತ್ ಹಾಕಿಲ್ಲ. ಈ ಬಾರಿ ಪೊಲೀಸರೇ ಅವಕಾಶ ನೀಡಿದ್ದಾರೆ. ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ದಾಳಿ ವಿಚಾರದಲ್ಲಿ ನನ್ನ ಮೇಲೆ ಕೇಸು ಹಾಕಿದ್ದಾರೆ. ಅದಕ್ಕಾಗಿ ನಾನು ಈ ಪ್ರಕರಣದ ಬಗ್ಗೆ ಪ್ರತ್ಯಕ್ಷ ಕಂಡಿದ್ದನ್ನು ನನಗೆ ಸಾಧ್ಯವಾದ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದೇನೆ. ನ್ಯಾಯಾಲಯಕ್ಕೂ ಸತ್ಯವನ್ನು ದಾಖಲೆ ಸಮೇತ ಹೇಳುತ್ತೇನೆ.

ಕಿವುಡರೇ, ಆಲಿಸಿ! – ಭಗತ್ ಸಿಂಗ್ ಬರಹ

ಇಂಗ್ಲಿಷ್ ಮೂಲ: ಭಗತ್ ಸಿಂಗ್
ಕನ್ನಡಕ್ಕೆ: ಸುಧಾ ಚಿದಾನಂದಗೌಡ

ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಆರ್ಮಿಯ ನೋಟಿಸ್.

[ಭಗತ್‌ಸಿಂಗ್ ಮತ್ತು ಬಟುಕೇಶ್ವರ ದತ್‌ರು 1929ರ ಏಪ್ರಿಲ್ 8 ರಂದು ಕೇಂದ್ರ ಸಂಸದೀಯ ಅಸೆಂಬ್ಲಿಯಲ್ಲಿ ಬಾಂಬ್ ಹಾಕಿದಾಗ, ಅದರೊಂದಿಗೆ ತಮ್ಮ ಗುರಿ ಮತ್ತು ಉದ್ದೇಶಗಳನ್ನೊಳಗೊಂಡ ಕರಪತ್ರಗಳನ್ನ ತೂರಿದ್ದರು. ತಾವು ನಡೆಸಿದ ಕೃತ್ಯದ ಸಕಲ ಜವಾಬ್ದಾರಿಯನ್ನೂ ತಾವೇ ಹೊತ್ತುಕೊಂಡಿದ್ದಲ್ಲದೆ ಕಿವುಡರು ಆಲಿಸುವಂತೆ ಮಾಡಬೇಕೆಂಬುದು ತಮ್ಮ ಉದ್ದೇಶ ಎಂದು ಘೋಷಿಸಿದರು. ಕೆಳಗಿರುವುದು ಕರಪತ್ರದ ಪೂರ್ಣಪಾಠ. ]

“ಕಿವುಡರು ಅಲಿಸುವಂತೆ ಮಾಡಬೇಕಾದರೆ ದೊಡ್ಡ ದನಿಯನ್ನೇ ತೆಗೆಯಬೇಕು.”

ಫ್ರೆಂಚ್ ಹುತಾತ್ಮ ವೇಲಿಯಂಟ್ ಇಂಥದ್ದೇ ಒಂದು ಸಂದರ್ಭದಲ್ಲಿ ಉಸುರಿದ ಈ ಸಾವಿಲ್ಲದ ಶಬ್ಧಗಳಿಂದ ನಾವು ನಮ್ಮ ಈ ಕೃತ್ಯವನ್ನು ಸಂಪೂರ್ಣವಾಗಿ, ಬಲವಾಗಿ ಸಮರ್ಥಿಸಿಕೊಳ್ಳುತ್ತೇವೆ.

ಸಮಾಜ ನಿರ್ಮಾಣದ ದಾರಿಯಲ್ಲಿ, ಕಳೆದ ಹತ್ತೇ ವರ್ಷಗಳ ಅವಧಿಯಲ್ಲಿ ಸತತವಾಗಿ ನಡೆಯುತ್ತಿರುವ ಅವಮಾನದ ಚರಿತ್ರೆಯ ಹಿನ್ನೆಲೆಯನ್ನು ಪುನಃ ನೆನಪಿಸಿಕೊಳ್ಳದೆಯೂ, ಇಂಡಿಯನ್ ಪಾರ್ಲಿಮೆಂಟ್ ಎಂಬ ಹೆಸರಿನ ಸಂಸ್ಥೆ ದೇಶದ ತಲೆಯ ಮೇಲೆ ಹೊಡೆದಂತೆ ಪದೇ ಪದೇ ನಡೆಸಿದ ನಾಚಿಕೆಗೇಡಿನ ಕೃತ್ಯಗಳ ಪ್ರಸ್ತಾಪಿಸದೆಯೂ, ಪ್ರಸ್ತುತ ಈಗ ನಡೆದಿರುವ ವರ್ತಮಾನದಲ್ಲಿಯೂ ಜನತೆ ಸೈಮನ್ ಕಮಿಶನ್‌ನಿಂದ ಸಮಾಜ ಸುಧಾರಿಸುವ ನಿಟ್ಟಿನಲ್ಲಿ ಕೆಲ ಮುಖ್ಯ ಹೆಜ್ಜೆಗಳನ್ನು ನಿರೀಕ್ಷಿಸುತ್ತಿರುವಾಗಲೂ ಈಗಲೂ ಇವರು ತಾವು ಹಂಚಿಕೊಳ್ಳಬಹುದಾದ ಎಲುಬುಗಳ ಕುರಿತೇ ಯೋಚಿಸುತ್ತಿದ್ದಾರೆ. ಈ ಬ್ರಿಟಿಷ್ ಸರ್ಕಾರ ಸಾರ್ವಜನಿಕ ಸುರಕ್ಷತೆ ಮತ್ತು ವಾಣಿಜ್ಯ ವಿವಾದದ ಮಸೂದೆಯಂಥವುಗಳನ್ನೆ ನಮ್ಮ ಮೇಲೆ ಹೇರಲು ಯತ್ನಿಸುತ್ತಿದೆ. ಅದಕ್ಕೆ ವಿರುದ್ಧವಾಗಿ ಪತ್ರಿಕಾ ಮಸೂದೆಯನ್ನು ಮುಂದಿನ ಅಧಿವೇಶನಕ್ಕೆ ಮೀಸಲಿಟ್ಟಿದ್ದಾರೆ. ಸಾಲದೆಂಬಂತೆ ಕಾರ್ಮಿಕ ಮುಖಂಡರನ್ನು, ಅದೂ ಹೊಲಗದ್ದೆಗಳಲ್ಲಿ ದುಡಿಯುತ್ತಿದ್ದವರನ್ನು ವಿನಾಕಾರಣ ಬಂಧಿಸಿರುವುದು. ಗಾಳಿ ಎತ್ತಕಡೆ ಬೀಸುತ್ತಿದೆಯೆಂಬುದನ್ನು ಕಣ್ಣೆದುರೇ ತೋರಿಸುತ್ತಿದೆ.

ಇಂಥ ಅತೀವ ಪ್ರಚೋದನಕಾರಿ ಪರಿಸ್ಥಿತಿಗಳನ್ನು ತುಂಬ ಗಂಭೀರವಾಗಿ ಪರಿಗಣಿಸಿರುವ ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ತನ್ನ ಜವಾಬ್ದಾರಿಯ ಸಂಪೂರ್ಣ ಅರಿವಿನಿಂದ ಈ ನಿರ್ದಿಷ್ಟ ಕೃತ್ಯವನ್ನು ಕೈಗೊಳ್ಳಲು ನಿರ್ಧರಿಸಿದೆ. ಇದರ ಮುಖ್ಯ ಉದ್ದೇಶ-ನಾಚಿಕೆಗೇಡಿನ ಅವಮಾನಗಳನ್ನು ಸಹಿಸದಿರುವುದು, ಈ ವಿದೇಶೀ ಬ್ಯುರಾಕ್ರಟಿಕ್ ಶೋಷಕರು ಏನೇನು ಮಾಡಬೇಕೆಂದು ಬಯಸುವರೋ ಅದನ್ನೆಲ್ಲ ಸಾರ್ವಜನಿಕವಾಗಿ ಜನಸಾಮಾನ್ಯರ ಕಣ್ಣುಗಳೆದುರಲ್ಲಿ ಬೆತ್ತಲುಗೊಳಿಸುವುದು.

ಜನಪ್ರತಿನಿಧಿಗಳು ತಕ್ಷಣ ತಮ್ಮ ತಮ್ಮ ಕ್ಷೇತ್ರಗಳಿಗೆ ಹಿಂದಿರುಗಿ ಹೊರಡಿ ಮತ್ತು ಜನಸಮುದಾಯವನ್ನು ಮುಂಬರುವ ಕ್ರಾಂತಿಗೆ ಅಣಿ ಮಾಡಿರೆಂಬುದು ನಮ್ಮ ಆಶಯ. ಸರ್ಕಾರ ಹಲವಿಷಯ ಅರಿಯಬೇಕಿದೆ. ಮುಖ್ಯವಾಗಿ,

ಅಸಹಾಯಕ ಬಲಿಪಶುಗಳಂತಾಗಿರುವ ಎಲ್ಲ ಭಾರತೀಯ ಜನಸಮುದಾಯಗಳ ಧ್ವನಿಯಾಗಿ, ಸಾರ್ವಜನಿಕ ಸುರಕ್ಷೆ ಮತ್ತು ವಾಣಿಜ್ಯ ವಿವಾದ ಮಸೂದೆಯನ್ನು ಸಂಪೂರ್ಣ ವಿರೋಧಿಸುತ್ತಾ, ಲಾಲಾ ಲಜಪತರಾಯ್‌ರ ಧಾರುಣ ಹತ್ಯೆಯನ್ನು ಪ್ರತಿಭಟಿಸುತ್ತಾ ನಾವು ಹೇಳುವುದಿಷ್ಟೇ-

ವ್ಯಕ್ತಿಗಳನ್ನು ಕೊಲ್ಲಬಹುದೇ ಹೊರತು ವಿಚಾರಗಳನ್ನಲ್ಲ. ಚರಿತ್ರೆಯ ಈ ಪಾಠ ಎಷ್ಟೊ ಬಾರಿ ಪುನರಾವರ್ತನೆಗೊಂಡಿದೆ. ಈಗಲೂ ನಮ್ಮೆದುರಿಗಿರುವುದು ಅದೇ. ವಿಶಾಲ ಸಾಮ್ರಾಜ್ಯಗಳು ಅನೇಕ ಬಾರಿ ನಾಶಗೊಂಡಿವೆ. ಆದರೆ, ಪ್ರತಿಬಾರಿಯೂ ವಿಚಾರಗಳು ಉಳಿದುಕೊಂಡಿವೆ. ಕ್ರಾಂತಿಯು ಕಹಳೆ ಮೊಳಗಿಸುತ್ತಾ ಯಶಸ್ವಿಯಾಗಿ ಮೆರವಣಿಗೆ ಸಾಗುವಾಗ ಬಾರ್ಬೋನ್‌ಗಳೂ, ಜಾರ್‌ಗಳೂ ನೆಲಕಚ್ಚಿ ಹೋಗಿದ್ದಾರೆ.

ನಾವುಗಳು ಮಾನವ ಬದುಕಿನ ಅಮೂಲ್ಯತೆ ಬಲ್ಲವರು. ಉಜ್ವಲ ಭವಿಷ್ಯದ ಕನಸನ್ನುಳ್ಳವರು. ಜನಸಾಮಾನ್ಯರು  ಪೂರ್ಣಶಾಂತಿಯನ್ನೂ, ಸ್ವಾತಂತ್ರ್ಯವನ್ನೂ ಮನಸಾರೆ ಅನುಭವಿಸುತ್ತಾ ಬದುಕಬೇಕೆಂಬ ಆಸೆಯುಳ್ಳವರು.

ಆದರೆ ನಮ್ಮ ದೌರ್ಭಾಗ್ಯ.

ಮನುಷ್ಯ ರಕ್ತ ಚೆಲ್ಲಾಡಲು ನಮ್ಮನ್ನು ಪ್ರೇರೇಪಿಸಲಾಗುತ್ತಿದೆ. ಆದರೆ ಒಂದಂತೂ ಅನಿವಾರ್ಯ. ವ್ಯಕ್ತಿಗಳು ಮಾಡುತ್ತಿರುವ ತ್ಯಾಗ, ಬಲಿದಾನಗಳು ಕ್ರಾಂತಿಯ ದಾರಿಯಲ್ಲಿ ಸ್ವಾತಂತ್ರ್ಯವನ್ನೇ ತರುತ್ತವೆ. ಮನುಷ್ಯನು ಮನುಷ್ಯನನ್ನು ಶೋಷಿಸುವ ಕ್ರಿಯೆಯನ್ನು ತೊಡೆದು ಹಾಕುವುದು ಅನಿವಾರ್ಯ.

ಕ್ರಾಂತಿ ಚಿರಾಯುವಾಗಲಿ.
ಸರ್ದಾರ್ ಬಲರಾಜ್
ಕಮಾಂಡರ್ ಇನ್ ಚೀಫ್.

*

[“ಬಲರಾಜ್” ಎಂಬುದು ಚಂದ್ರಶೇಖರ್ ಆಜಾದ್‌ರ ಅನೇಕ ಹೆಸರುಗಳಲ್ಲೊಂದು]