Daily Archives: August 18, 2012

ಓದುಗರ ಮತ್ತು ಕಾಮೆಂಟುದಾರರ ಗಮನಕ್ಕೆ…

ವರ್ತಮಾನದ ಓದುಗ ಮಿತ್ರರೇ,

ನಾನು ಇಲ್ಲಿ ಪ್ರಸ್ತಾಪಿಸಲಿರುವ ವಿಚಾರ ಇಲ್ಲಿಯವರೆಗೆ ನಾನು ಬರೆಯದಿದ್ದರೂ ನಿಮ್ಮಲ್ಲಿಯ ಬಹಳಷ್ಟು ಸೂಕ್ಷ್ಮ ಓದುಗರ ಅರಿವಿಗೆ ಈಗಾಗಲೆ ಬಂದಿರುತ್ತದೆ. ಆದರೂ ಎಲ್ಲರಿಗೂ ಮತ್ತು ಹೊಸದಾಗಿ ನಮ್ಮ ವರ್ತಮಾನ.ಕಾಮ್‌ನ ಓದುಗರಾಗುತ್ತಿರುವವರ ಅರಿವಿಗೂ ಬರಲಿ ಎಂದು ಕೆಲವೊಂದು ಸ್ಪಷ್ಟನೆ ಮತ್ತು ಒಂದೆರಡು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸುತ್ತೇನೆ.

ವರ್ತಮಾನ.ಕಾಮ್‌ಗೆ ಒಂದು ವರ್ಷ ತುಂಬಿದ ಬಗ್ಗೆ ಇತ್ತೀಚೆಗೆ ತಾನೆ ಬರೆದಿದ್ದೆ. ಈ ಒಂದು ವರ್ಷದಲ್ಲಿ 460 ಕ್ಕೂ ಹೆಚ್ಚು ಲೇಖನಗಳು ನಮ್ಮಲ್ಲಿ ಪ್ರಕಟವಾಗಿವೆ. (ಇಂದಿನವರೆಗೆ 479.) ನಮ್ಮ ಲೇಖಕರ ಬಳಗದಲ್ಲಿರುವ ಯಾರಿಗೂ ನಾವು ಸಂಭಾವನೆ ನೀಡಿಲ್ಲ. ಹಾಗೆ ನೀಡುವ ಸಂಭಾವ್ಯವೂ ಇಲ್ಲ. ವರ್ತಮಾನ ಆರಂಭಿಸಿದಾಗ ಬರೆದ ಪೀಠಿಕೆಯಂತೆ ಮುಖ್ಯವಾಹಿನಿ ಮಾಧ್ಯಮದಲ್ಲಿ ಪ್ರಸ್ತಾಪವಾಗದ ಮತ್ತು ಪ್ರಾಮುಖ್ಯ ಪಡೆಯದ ವಿಷಯಗಳ ಬಗ್ಗೆ ಮತ್ತು ಅಂತರ್ಜಾಲ ಮಾಧ್ಯಮವನ್ನು ಬಳಸಿಕೊಂಡು ಜನಪರ, ಪ್ರಗತಿಪರ, ಪ್ರಜಾಪ್ರಭುತ್ವಪರವಾದ ಪರ್ಯಾಯ ಮಾಧ್ಯಮವೊಂದರ ಸಾಧ್ಯತೆಯನ್ನು ಹುಡುಕುವುದು ನಮ್ಮ ಆಶಯ. ಆ ಆಶಯಕ್ಕೆ ಪೂರಕವಾಗಿ ನಮ್ಮ ಅನೇಕ ಸಮಾನಮನಸ್ಕ ಸ್ನೇಹಿತರು ಮತ್ತು ಹಿರಿಯರು ವರ್ತಮಾನಕ್ಕೆ ಬರೆಯುತ್ತಾ ಬರುತ್ತಿದ್ದಾರೆ. ನಿಮಗೆ ಗೊತ್ತಿರುವ ಹಾಗೆ ಅವರೆಲ್ಲ ವರ್ತಮಾನ.ಕಾಮ್‌ಗೆಂದೇ ಬರೆಯುವ ಬರಹಗಳು ಇವು. ಇದನ್ನು ಸಶಕ್ತವಾದ ಮಾಧ್ಯಮವಾಗಿ ಮತ್ತು ವೇದಿಕೆಯಾಗಿ ಬೆಳೆಸಬೇಕೆನ್ನುವ ತುಡಿತ ಮತ್ತು ಬದ್ಧತೆ ಇವರೆಲ್ಲರಲ್ಲಿ ಇದೆ. ಹಾಗಾಗಿಯೆ ನನ್ನೆಲ್ಲ ಧನ್ಯವಾದಗಳು ಮತ್ತು ಕೃತಜ್ಞತೆಗಳು ಅವರಿಗೆ ಸಲ್ಲುತ್ತವೆ ಸಹ. (ಕೆಲವು ಪತ್ರಿಕೆಗಳಲ್ಲಿ ಪ್ರಕಟವಾದ ಬರಹಗಳು ಆಗಾಗ ಇಲ್ಲಿಯೂ ಪ್ರಕಟವಾಗಿವೆ. ವಿಶೇಷ ಸಂದರ್ಭದಲ್ಲಿ ಬಿಟ್ಟು ಇನ್ನು ಮೇಲೆ ಹಾಗಾಗುವ ಸಾಧ್ಯತೆಗಳು ಕಮ್ಮಿ.)

ಮತ್ತು, ನಮ್ಮಲ್ಲಿ ಪ್ರಕಟವಾದ ಅನೇಕ ಬರಹಗಳು ನಾಡಿನ ಅನೇಕ ಕಡೆ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುತ್ತವೆ.  ಇದರ ಬಗ್ಗೆ ನಮ್ಮ ಅನೇಕ ಓದುಗರು ಆಗಾಗ ತಿಳಿಸುತ್ತಿರುತ್ತಾರೆ ಸಹ. ಆದರೆ ಕೆಲವು ಓದುಗರು ತಿಳಿಸಿದಂತೆ ಇಂತಹ ಹಲವು ಕಡೆ ಲೇಖಕರ ಹೆಸರೂ ಇಲ್ಲದೆ ಈ ಲೇಖನಗಳು ಪ್ರಕಟಗೊಂಡಿರುತ್ತವೆ. ಮತ್ತು ಬಹಳಷ್ಟು ಕಡೆ ವರ್ತಮಾನ.ಕಾಮ್‌ನ ಹೆಸರೂ ಪ್ರಸ್ತಾಪವಾಗಿರುವುದಿಲ್ಲ. ಇದು ಒಂದು ರೀತಿಯಲ್ಲಿ ಸರಿಯಲ್ಲಾ ಎಂದೇ ಇತ್ತೀಚೆಗೆ ನಾವು ಪಕ್ಕದಲ್ಲಿರುವ ಈ ಸೂಚನೆಯನ್ನು ಪ್ರಕಟಿಸಬೇಕಾಯಿತು. ನಮ್ಮಲ್ಲಿಯ ಅನೇಕ ಲೇಖಕರಿಗೆ ವರ್ತಮಾನ.ಕಾಮ್‌ನಲ್ಲಿ ಬರುವ ಲೇಖನಗಳು ಬೇರೆಡೆಯ ಸ್ಥಳೀಯ ಪತ್ರಿಕೆಗಳಲ್ಲಿ ಬಂದರೆ ಸಮಸ್ಯೆಯೇನೂ ಇಲ್ಲ. ಪ್ರಕಟಿಸಿ. ನಮಗೂ ಒಂದು ಸಾಲು ಬರೆದು ತಿಳಿಸಿ. ಆದರೆ ಲೇಖಕರ ಹೆಸರು ಇಲ್ಲದೆ ಪ್ರಕಟಿಸಬೇಡಿ. ಮತ್ತು ನೀವು ಲೇಖಕರಿಂದ ವಿಶೇಷ ಅನುಮತಿ ಪಡೆಯದೆ ಇದ್ದ ಪಕ್ಷದಲ್ಲಿ ವರ್ತಮಾನ.ಕಾಮ್ ಅನ್ನು ಹೆಸರಿಸಲು ಮರೆಯಬೇಡಿ. ಮೊದಲೇ ಹೇಳಿದಂತೆ ಇವರೆಲ್ಲ ಇಲ್ಲಿಗೆಂದೇ ಬರೆಯುವವರು. ನೀವು ವರ್ತಮಾನ.ಕಾಮ್ ಅನ್ನು ಉಲ್ಲೇಖಿಸಿದಷ್ಟೂ ಈ ವೇದಿಕೆಗೆ ಬಲವೂ ಮೌಲ್ಯವೂ ಹೆಚ್ಚುತ್ತಾ ಹೋಗುತ್ತದೆ.  ಪ್ರಕಾಶಕ ಮತ್ತು ಪತ್ರಕರ್ತ ಮಿತ್ರರು ದಯವಿಟ್ಟು ಸಹಕರಿಸಿ.

ಇನ್ನು ನಮ್ಮಲ್ಲಿಯ ಲೇಖನಗಳಿಗೆ ಸ್ಪಂದಿಸಿ ಕಾಮೆಂಟು ಹಾಕುವವರ ಬಗ್ಗೆ. ಕಳೆದ ವರ್ಷದಲ್ಲಿ ಸುಮಾರು ಸಾವಿರ+ ಕಾಮೆಂಟುಗಳು ಪ್ರಕಟವಾಗಿವೆ. ನಮ್ಮಲ್ಲಿ ಬಂದ ಹಲವಾರು ಸೂಕ್ಷ್ಮ ಮತ್ತು ವಿವಾದಾತ್ಮಕ ವಿಷಯಗಳಿಗೆ ಕಾಮೆಂಟು ಹಾಕುವಾಗಲೂ ನಮ್ಮ ಓದುಗರು ಅತೀವ ಗಾಂಭೀರ್ಯ ಮತ್ತು ಘನತೆಯಿಂದ ಪ್ರತಿಕ್ರಿಯಿಸಿದ್ದಾರೆ. ಆ ಇಡೀ ವರ್ಷದಲ್ಲಿ ಕೇವಲ ಇಪ್ಪತ್ತು ಚಿಲ್ಲರೆ ಅಭಿಪ್ರಾಯಗಳನ್ನು ಮಾತ್ರ ತಡೆ ಹಿಡಿಯಲಾಯಿತು ಎಂದರೆ ಅದು ವರ್ತಮಾನದ ಓದುಗರ ಅಭಿರುಚಿ ಮತ್ತು ಘನತೆಯನ್ನು ತೋರಿಸುತ್ತದೆ. ಅನೇಕ ವೆಬ್‌ಸೈಟ್‌ಗಳನ್ನು ಮತ್ತು ಅವುಗಳಲ್ಲಿಯ ವಿವಾದಾತ್ಮಕ ಲೇಖನಗಳಿಗೆ ಬರುವ ಅನಾಗರೀಕ ಕಾಮೆಂಟುಗಳನ್ನು ಕಂಡಿರುವ ನನಗೆ ವರ್ತಮಾನದ ಓದುಗರ ಮತ್ತು ಕಾಮೆಂಟುದಾರರ ಬಗ್ಗೆ ವಿಶೇಷ ಅಭಿಮಾನ ಮೂಡುತ್ತದೆ. ಇಲ್ಲಿ ಅನಾಮಿಕವಾಗಿ ಮತ್ತು ಕೆಟ್ಟದಾಗಿ ಪ್ರತಿಕ್ರಿಯಿಸಬೇಕು ಎಂದುಕೊಂಡವರಿಗೂ ಇಲ್ಲಿ ಎದ್ದು ಕಾಣುವ ಘನತೆ ಸೂಕ್ಷ್ಮವಾಗಿ ಎಚ್ಚರಿಸುತ್ತದೆ ಎನ್ನಿಸುತ್ತದೆ.

ಆದರೆ, ವಾರದಿಂದ ಈಚೆಗೆ ಇದು ಬದಲಾಗುತ್ತಿದೆ. ವಿಶೇಷವಾಗಿ ಮಂಗಳೂರಿನ ಹೋಮ್‌ಸ್ಟೇ ಘಟನೆ ನಮ್ಮ ವರ್ತಮಾನ.ಕಾಮ್‌ನಲ್ಲಿ ಹೆಚ್ಚುಹೆಚ್ಚು ಪ್ರಸ್ತಾಪವಾದಷ್ಟೂ. ಇದು ಒಂದು ವರ್ಗದ ಓದುಗರಿಗೆ ಸಹಿಸಿಕೊಳ್ಳಲಾಗದಷ್ಟು ಕಿರಿಕಿರಿ ನೀಡುತ್ತಿದೆ ಎನ್ನಿಸುತ್ತಿದೆ. ಹಾಗಾಗಿ ತಮ್ಮ ಪ್ರತಿಕ್ರಿಯೆಗಳಲ್ಲಿ ತೂಕ ತಪ್ಪುವಂತಹ ಪದಗಳನ್ನು ಉಪಯೋಗಿಸುತ್ತಿದ್ದಾರೆ. ಮತ್ತು ವಿರೋಧಿಸಲೇಬೇಕು ಎನ್ನುವ ಕಾರಣದಿಂದಾಗಿ ಎಚ್ಚರ ತಪ್ಪಿ ಪ್ರತಿಕ್ರಿಯಿಸುತ್ತಿದ್ದಾರೆ. ವಿರೋಧ ಮತ್ತು ಅಭಿಪ್ರಾಯಗಳು ಎಲ್ಲಿಯವರೆಗೆ ನಾಗರೀಕ ಭಾಷೆಯಲ್ಲಿ ಮತ್ತು ಅವೈಯಕ್ತಿಕ ನೆಲೆಯಲ್ಲಿ ಇರುತ್ತದೊ ಅಲ್ಲಿಯವರೆಗೂ ಅವನ್ನು ತಡೆಹಿಡಿಯಬಾರದು ಎನ್ನುವುದು ನನ್ನ ನಿಲುವು. ಹಾಗಾಗಿಯೆ ಇತ್ತೀಚಿನ ಕೆಲವು ಕೆಟ್ಟ ಭಾಷೆಯ ಮತ್ತು ವೈಯಕ್ತಿಕ ದಾಳಿಯ ಕಾಮೆಂಟುಗಳನ್ನು ತಡೆಹಿಡಿಯಲಾಗಿದೆ. ದಯವಿಟ್ಟು ಇಂತಹ ಕಾಮೆಂಟು ಹಾಕಿರುವ ಮತ್ತು ಹಾಕಲಿರುವ ಓದುಗರು ಗಮನಿಸಬೇಕು: ವ್ಯರ್ಥವಾಗುವ ಸಮಯ ಮತ್ತು ಶ್ರಮ ನಿಮ್ಮದೇ.

ನೆನ್ನೆ ತಡೆಹಿಡಿಯಲಾದ ಕಾಮೆಂಟ್‌ನ ಒಂದು ಭಾಗ ಹೀಗಿದೆ:  “ಮಂಗಳೂರಿನಲ್ಲಿ ಕೆಲವೇ ಪುಂಡರು ನಡೆಸಿದ ಘಟನೆಯ ಬಗ್ಗೆ ದಿನಗಟ್ಟಲೆ ಚರ್ಚೆಮಾಡುವ, ಪುಟಗಟ್ಟಲೆ ಬರಿಯುವ “ವರ್ತಮಾನ” ಪತ್ರಿಕೆಗೆ ಅಸ್ಸಾಂ, ಮುಂಬೈ ಘಟನೆ ಕಾಣಿಸುದಿಲ್ಲವೆ? ಇದೆನಾ ಜಾತ್ಯತೀತತೆ? ಇದೆನಾ ಸಮಾನತೆ? ಇದೆನಾ ಪತ್ರಿಕಾಧರ್ಮ?” ಇದಕ್ಕೆ ಉತ್ತರಿಸುವ ಮೂಲಕ ನಮ್ಮ ಎಲ್ಲಾ ಓದುಗರಿಗೂ ಒಂದು ವಿಷಯ ಹೇಳಿದಂತಾಗುತ್ತದೆ ಎನ್ನುವ ಕಾರಣಕ್ಕೆ ಇದಕ್ಕೆ ಇಲ್ಲಿ ಉತ್ತರಿಸುತ್ತಿದ್ದೇನೆ. ಈ ಲೇಖನದ ಆರಂಭದಲ್ಲಿಯೇ ಹೇಳಿದಂತೆ ನಮ್ಮ ಬಳಗದ ಲೇಖಕರ ಸಮಯ, ಸಂದರ್ಭ, ಕಾಳಜಿ, ಅಭಿರುಚಿ, ಆಶಯಗಳ ಒಟ್ಟು ಆಧಾರದ ಮೇಲೆ ಇಲ್ಲಿ ಲೇಖನಗಳು ಪ್ರಕಟವಾಗುತ್ತವೆ. ಇಂತಹ ವಿಷಯದ ಬಗ್ಗೆ ಬರೆಯಿರಿ ಎಂದು ನಾವು ಸೂಚಿಸುವುದು ಬಹುತೇಕ ಇಲ್ಲವೇ ಇಲ್ಲ ಅಥವ ಅಪರೂಪ. ಮಂಗಳೂರಿನ ಘಟನೆ ಬಗ್ಗೆ ನಮ್ಮಲ್ಲಿ ಹೆಚ್ಚಿಗೆ ಬರೆಯುತ್ತಿರುವವರು ನವೀನ್ ಸೂರಿಂಜೆ. ಅವರು ಕಳೆದ ಆರು ತಿಂಗಳಿನಿಂದಲೂ ನಮ್ಮಲ್ಲಿ ಬರೆಯುತ್ತಿದ್ದಾರೆ. ಈ ಹೋಮ್‍ಸ್ಟೇ ಘಟನೆಯಲ್ಲಿ ಅವರು ಪ್ರತ್ಯಕ್ಷದರ್ಶಿಯೂ ಆಗಿರುವ ಕಾರಣ ಮತ್ತು ದಕ್ಷಿಣ ಕನ್ನಡದಲ್ಲಿ ಹೇಗೆ ಸರ್ಕಾರ ಮತ್ತು ಆಡಳಿತಾಂಗ ಕೋಮುವಾದಿಗಳೊಂದಿಗೆ ಶಾಮೀಲಾಗಿ ಪರ್ಯಾಯ ಆಡಳಿತ ಮತ್ತು ಅನಾರೋಗ್ಯಕರ ಸಾಮಾಜಿಕ ಸಂದರ್ಭವನ್ನು ಸೃಷ್ಟಿಸುತ್ತಿದೆ ಎನ್ನುವ ಕಾರಣಕ್ಕೆ ಹೋಮ್‌ಸ್ಟೇ ದಾಳಿಯ ಬಗ್ಗೆ ಬರೆಯುತ್ತಿದ್ದಾರೆ. ಮತ್ತು ಒಂದು ಬರಹದಿಂದ ಹುಟ್ಟುವ ಮತ್ತಷ್ಟು ಪ್ರಶ್ನೆಗಳಿಗೆ ಉತ್ತರ ಮತ್ತು ವಿವರಣೆ ನೀಡುವ ಕೆಲಸ ಮಾಡುತ್ತಿದ್ದಾರೆ. ಅಸ್ಸಾಂ ಮತ್ತು ಮುಂಬೈ ಘಟನೆಗಳ ಬಗ್ಗೆ ಬರೆಯಲು ನಮ್ಮ ಬಳಗದ ಲೇಖಕರಿಗೆ ಬಹುಶಃ ಅದು ಕನ್ನಡ ಮತ್ತು ಕರ್ನಾಟಕದ ನಮ್ಮ ಸಂದರ್ಭಕ್ಕೆ ಪ್ರಸ್ತುತ ಅನ್ನಿಸಿಲ್ಲ,  ಅಥವ ಅದರ ಬಗ್ಗೆ ಬರೆಯಲು ಅವರಿಗೆ ಆ ವಿಷಯದ ಬೇರೆಬೇರೆ ಆಯಾಮಗಳು ತಿಳಿದಿಲ್ಲ, ಅಥವ ಮುಖ್ಯವಾಗಿ ಸಮಯ ಆಗುತ್ತಿಲ್ಲ. ಯಾರಾದರೂ ಬರೆದು ಕಳುಹಿಸಿದ ಸಂದರ್ಭದಲ್ಲಿ ಮತ್ತು ಅದು ವರ್ತಮಾನ.ಕಾಮ್‌ನ ಆಶಯಕ್ಕೆ ಪೂರಕವಾಗಿದ್ದಲ್ಲಿ ಅದನ್ನು ಪ್ರಕಟಿಸದೇ ಇರಲು ಯಾವುದೇ ಕಾರಣಗಳಿಲ್ಲ. ಮೊದಲೇ ಹೇಳಿದಂತೆ ನಮ್ಮ ಬಳಗದ ಲೇಖಕರು ನಮ್ಮ ರಾಜಕೀಯ-ಸಾಮಾಜಿಕ-ಆರ್ಥಿಕ ವಿದ್ಯಮಾನಗಳಿಗೆ ಪ್ರಸ್ತುತ ಎನ್ನಿಸಿದ ವಿಷಯಗಳ ಬಗ್ಗೆ ತಮ್ಮ ಬಿಡುವಿನ ಸಮಯದಲ್ಲಿ ಬರೆಯುತ್ತಾರೆ. ನಮ್ಮ ಲೇಖಕರ ಬಳಗ ಹೆಚ್ಚುಹೆಚ್ಚು ದೊಡ್ಡದಾದಷ್ಟೂ ಎಲ್ಲಾ ಪ್ರಸ್ತುತ ವಿಷಯಗಳ ಬಗ್ಗೆ ವರ್ತಮಾನ.ಕಾಮ್‌ನಲ್ಲಿ ಲೇಖನಗಳು ಪ್ರಕಟವಾಗುತ್ತವೆ. ಆ ದಿನಗಳನ್ನು ಹತ್ತಿರ ಮಾಡಿಕೊಳ್ಳುವ ಸವಾಲು ನಮ್ಮ ಬಳಗದ ಮೇಲಿದೆ.

ಈ  ನಿಟ್ಟಿನಲ್ಲಿ ಎಲ್ಲರ (ಓದುಗರ, ಕಾಮೆಂಟುದಾರರ, ಬರಹಗಾರರ, ಪ್ರಕಾಶಕರ) ಸಹಕಾರ ಬಯಸುತ್ತಾ…

ನಮಸ್ಕಾರ,
ರವಿ ಕೃಷ್ಣಾರೆಡ್ಡಿ