Daily Archives: August 20, 2012

ಈ ದುಷ್ಕೃತ್ಯವು ಈ ಮಟ್ಟದಲ್ಲಿ ನಮ್ಮನ್ನು ಘಾಸಿಗೊಳಿಸುವುದೆಂದು ನಾವೆಂದೂ ಧ್ಯಾನಿಸಿರಲಿಲ್ಲ


-ಬಿ. ಶ್ರೀಪಾದ್ ಭಟ್


ದ್ವೀದೆನ್ ಬ್ರಹ್ಮ ಶಾಲಾ ದಿನಗಳಿಂದಲೂ ನನ್ನ ಆತ್ಮೀಯ ಸ್ನೇಹಿತನಾಗಿದ್ದ. ನಾಲ್ಕನೇ ತರಗತಿಯಲ್ಲೇ ನಮಗೆಲ್ಲ ತನ್ನ ಪುಟ್ಟ ಪುಸ್ತಕದಿಂದ ಜಾತಕಗಳನ್ನು ಕುರಿತು ಓದಿ ವಿವರಿಸುತ್ತಿದ್ದ. ಈತನಿಗೆ ಬ್ಲಾಕ್ ಮ್ಯಾಜಿಕ್ ಬಗೆಗೆ ಮೋಹವಿತ್ತು. ಎಂಟನೇ ತರಗತಿಯಲ್ಲಿದ್ದಾಗ ನನಗೆ ಮೇರಿ ಶೆಲ್ಲಿಯ ಪುಸ್ತಕವನ್ನು ಕಾಣಿಕೆಯಾಗಿ ನೀಡಿದ್ದ. ಭವಿಷ್ಯದಲ್ಲಿ ಇಂಜಿನಿಯರ್ ಆಗುವುದನ್ನು ತಿರಸ್ಕರಿಸಿ ಬದಲಾಗಿ ಫ್ಯಾಷನ್ ಡಿಸೈನರ್ ಆಗುವ ಬಯಕೆಯನ್ನು ಹೊಂದಿದ್ದ. ಅಂದಿನ ಶಾಲಾ ದಿನಗಳಿಂದ ಹಿಡಿದು ಇಂದಿನ ಕಾಲೇಜಿನ ವರ್ಷಗಳವರೆಗೂ ನಾವಿಬ್ಬರು ಪ್ರಾಣ ಸ್ನೇಹಿತರಾಗಿದ್ದೇವೆ. ಬ್ರಹ್ಮನಿಗೆ ಜನಪದ ಹಾಡುಗಳ ಬಗೆಗೆ ತೀವ್ರವಾದ ಹುಚ್ಚಿತ್ತು. ನಾವಿಬ್ಬರೂ ಫೋನಿನಲ್ಲಿ ಮಾತನಾಡುವಾಗ ಈ ಜನಪದ ಹಾಡುಗಳನ್ನು ಕುರಿತಾಗಿ  ಮಾತಾಡಿಕೊಳ್ಳುತ್ತಿದ್ದೆವು. ಇದಕ್ಕೆ ಸಂಬಂಧಪಟ್ಟ ಅನೇಕ ವಿಡಿಯೋ ದೃಶ್ಯಗಳನ್ನು ಈ ಮೇಲ್ ಮೂಲಕ ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಈ ಸಂಗೀತದ ಮೇಲಿನ ನಮ್ಮಿಬ್ಬರ ಸಮಾನ ಪ್ರೇಮವೇ ನಮ್ಮ ನಡುವಿನ ವಿಭಿನ್ನ ಧರ್ಮಗಳ ಕಂದಕವನ್ನು ಅಳಿಸಿಹಾಕಿತ್ತು. ನಾವಿಬ್ಬರೂ ಬೇರೆ ಬೇರೆ ಧರ್ಮಗಳಿಗೆ ಸೇರಿದ್ದೆವೆಂದೂ ನಮಗೆಂದೂ ಅನಿಸಿರಲೇ ಇಲ್ಲ. ನಮ್ಮಿಬ್ಬರಿಗೂ ನಮ್ಮ ಧರ್ಮದ ಐಡೆಂಟಿಟಿ ಇರಲೇ ಇಲ್ಲ. ಅಂದಿಗೂ ಮತ್ತು ಇಂದಿಗೂ ಸಹ.

ಬೋಡೋಲ್ಯಾಂಡಿನ ಧುಬ್ರಿಯಲ್ಲಿರುವ ಆತನ ಮನೆಗೆ ಹೋದಾಗಲೆಲ್ಲ ‘ಬ್ರಹ್ಮ’ನ ತಾಯಿಯು ನನ್ನನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದರು ಅಲ್ಲದೆ ನಮಗೆ ರುಚಿರುಚಿಯಾದ ಮಟನ್ ಊಟವನ್ನು ಬಡಿಸುತ್ತಿದ್ದರು. ನಾನು ಮತ್ತು ಬ್ರಹ್ಮ ದೆಹಲಿಯಲ್ಲಿದ್ದಾಗಲೆಲ್ಲ ದಕ್ಷಿಣ ದೆಹಲಿಯಲ್ಲಿರುವ ಅವರ ಚಿಕ್ಕಮ್ಮನ ಮನೆಗೆ ಹೋಗುತ್ತಿದ್ದೆವು. ಅವರು ಸಹ ನನ್ನನ್ನು ಅತ್ಯಂತ ಆತ್ಮೀಯತೆಯಿಂದ ತಮ್ಮ ಮನೆಮಗನಂತೆ ಕಾಣುತ್ತಿದ್ದರು. ಆ ಸಂದರ್ಭಗಳಲ್ಲಿ ಬ್ರಹ್ಮನ ಚಿಕ್ಕಮ್ಮನವರು ತಮ್ಮ ಕಾಲೇಜಿನ ದಿನಗಳಲ್ಲಿ ಪ್ರತಿಮಾ ಪಾಂಡೆ ಬರೂವ ಅವರ ಹಾಡುಗಳನ್ನು ತಾವೆಲ್ಲ ರೇಡಿಯೋದಲ್ಲಿ ಮೈಮರೆತು ಕೇಳುತ್ತಿದ್ದದ್ದನ್ನು ಭಾವುಕತೆಯಿಂದ ನೆನೆಸಿಕೊಳ್ಳುತ್ತಿದ್ದರು. ಈ ಪದ್ಮಶ್ರೀ ಅವಾರ್ಡ್ ಪಡೆದ ಅಸ್ಸಾಮೀ ಪ್ರತಿಮಾ ಪಾಂಡೆಯ ಬಗೆಗೆ ಭಾವುಕತೆಯಿಂದ ವಿವರಿಸುತ್ತಿದ್ದರು. ಆಗ ನಾವೆಲ್ಲ ಮನುಷ್ಯನ ದೇಹದ ಅಸ್ಥಿರತೆಯ ಬಗೆಗೆ ಚರ್ಚಿಸುತ್ತಿದ್ದೆವು. ಆದರೆ ಆಗ ನಮಗೆಲ್ಲ ಒಂದು ಕ್ಷಣವೂ ಮುಂಬರುವ ಭಯೋತ್ಪಾದನೆಯ ಕರಿನೆರಳಿನ ಸುಳಿವು ದೊರೆತಿರಲಿಲ್ಲ ಹಾಗೂ ಅದರ ಚಿಂತನೆಗಳೂ ನಮ್ಮ ಮನಸ್ಸಿನಲ್ಲಿ ಬಂದಿರಲೇ ಇಲ್ಲ.

ಆದರೆ ಮೊನ್ನೆ ಅಸ್ಸಾಮಿನ ಬೋಡೋಲ್ಯಾಂಡಿನಲ್ಲಿ ಜನಾಂಗೀಯ ಗಲಭೆಗಳು ಸ್ಪೋಟಗೊಂಡಾಗ ಈ ನನ್ನ ಆತ್ಮೀಯ ಜೀವದ ಗೆಳೆಯ ದ್ವೀದೆನ್ ಬ್ರಹ್ಮನ ಸಂಸಾರವು ಧುಬ್ರಿಯಲ್ಲಿರುವ ತಮ್ಮ ಮನೆಯನ್ನು ತೊರೆದು ಓಡಿಹೋಗಬೇಕಾದಂತಹ ದುಸ್ಥಿತಿ ಉಂಟಾಯಿತು. ಈ ಬಂದರು ಪಟ್ಟಣದೊಂದಿಗಿನ ಕಳೆದ ಇಪ್ಪತ್ತು ವರ್ಷಗಳ ಸಂಬಂಧವನ್ನು ಅನಾಮತ್ತಾಗಿ ಕಡೆದುಕೊಳ್ಳಬೇಕಾದಂತಹ ದುರಂತವು ನಮಗೆಲ್ಲ ಅಪಾರ ನೋವನ್ನುಂಟು ಮಾಡಿತ್ತು. ಇದೇ ರೀತಿಯಾಗಿ ಬಾಂಗ್ಲ ಭಾಷೆ ಮಾತನಾಡುವ ಮುಸ್ಲಿಂ ಸಂಸಾರಗಳು ಈ ದುಷ್ರೃತ್ಯದಿಂದಾಗಿ  ತಮ್ಮ ಜೀವದ ಊರಾದ ಕೊಕ್ರಾಜಾರ್ ಪಟ್ಟಣದಿಂದ ಓಡಿಹೋಗಬೇಕಾಯಿತು. ಈ ಕೊಕ್ರಜಾರ್ ಪಟ್ಟಣದದೊಂದಿನ ಭಾವನಾತ್ಮಕವಾದ ಸಂಬಂಧವನ್ನು ಕಡೆದುಕೊಂಡು ಸದಾ ಅನುಮಾನಾಸ್ಪದವಾಗಿ ತಿರುಗುತ್ತ ತಮ್ಮ ನೆಲದಲ್ಲೆ ನಿರಾಶ್ರಿರಾಗುವ ಅಲ್ಲಿನ ಮುಸ್ಲಿಂರ ದುಸ್ಥಿತಿ ಮನಕಲಕುವಂತಹದ್ದು. ಅದೇ ರೀತಿಯ ಪರಿಸ್ಥಿತಿ ನನ್ನ ಸ್ನೇಹಿತ ದ್ವಿದಿಯ ಕುಟುಂಬದ್ದೂ ಸಹ. ನಾನು ದ್ವಿಯನ್ನು ಫೋನಿನಲ್ಲಿ ಮಾತನಾಡಿಸಿದಾಗ ಆತ ಅತ್ಯಂತ ಗದ್ಗದಿತನಾಗಿ ದುಃಖಿಸಿದ್ದು ನನ್ನನ್ನು ತಲ್ಲಣಗೊಳಿಸಿತು.

ಅಸ್ಸಾಮಿನ ಬೋಡೋ ಜಿಲ್ಲೆಯಲ್ಲಿನ ಜನಾಂಗೀಯ ಘರ್ಷಣೆಯಿಂದ 57 ಜನರು ತಮ್ಮ ಪ್ರಾಣ ಕಳೆದುಕೊಂಡರು. ಸುಮಾರು 4 ಲಕ್ಷ ಜನರು ನಿರಾಶ್ರಿತರಾಗಬೇಕಾಯಿತು. ಈ ಪ್ರತಿಯೊಬ್ಬ ನಿರಾಶ್ರಿತನಿಗೂ ತಾನು ಬಿಟ್ಟುಬಂದ ಊರಿನ ಕುರಿತಾಗಿ, ಅಲ್ಲಿನ ಸ್ನೇಹಿತರ ಕುರಿತಾಗಿ, ನೆರೆಹೊರೆಯವರ ಕುರಿತಾಗಿ, ದಿನನಿತ್ಯದ ಜಂಜಡದ ಕುರಿತಾಗಿ ನೆನಪುಗಳು ಆ ನಿರಾಶ್ರಿತರ ಶಿಬಿರದಲ್ಲಿ ಬಂದು ಅಪ್ಪಳಿಸುತ್ತಿದ್ದವು. ಆದರೆ ಹಿಂದೂ ಬಲಪಂಥೀಯರು ಈ ಜನಾಂಗೀಯ ಘರ್ಷಣೆಗೆ ಅನಗತ್ಯವಾಗಿ ಕೋಮು ಗಲಭೆಯ ಬಣ್ಣ ಹಚ್ಚಿದರು ಮತ್ತು ಅಸ್ಸಾಮಿ ಅಂಧಾಭಿಮಾನಿಗಳು ಈ ಗಲಭೆಗಳಿಗೆ ಬಾಂಗ್ಲಾ ದೇಶವಾಸಿಗಳ ಭಾರತ ದೇಶಕ್ಕೆ ಅಕ್ರಮ ವಲಸೆಯೇ ಕಾರಣವೆಂದು ಅಪಪ್ರಚಾರ ಹರಡಿದರು. ಇನ್ನು ಇಂಟರ್ನೆಟ್ ಹಿಂದೂಗಳು ಈ ಅಸ್ಸಾಮಿ ಅಂಧಾಭಿಮಾನಿಗಳೊಂದಿಗೆ ಸೇರಿಕೊಂಡು ಈ ಬಾಂಗ್ಲಾದೇಶದ ವಲಸೆಗಾರರನ್ನು ಗಡೀಪಾರು ಮಾಡಬೇಕು ಇಲ್ಲವೇ ಶಿಕ್ಷಿಸಬೇಕೆಂದು ಕಿರುಚಿತ್ತಿದ್ದರು. ಮನಮೋಹನ್ ಸಿಂಗ್ ಅವರು ಈ ಗಲಭೆಗಳು ದೇಶಕ್ಕೆ ಅಂಟಿದ ಕಳಂಕವೆಂದು ದುಖಿಸಿದರು. ಆದರೆ ಈ ಗಲಭೆಗಳಿಗೆ ತುತ್ತಾದ ಮುಸ್ಲಿಮರು ಬಾಂಗ್ಲಾದೇಶದ ಮುಸ್ಲಿಮರಲ್ಲವೆಂದು ನನಗೆ ಮತ್ತು ದ್ವಿದೇನ್ ಬ್ರಹ್ಮಗೆ ಸಂಪೂರ್ಣ ಮನವರಿಕೆಯಾಗಿತ್ತು. ಈ ಅಸ್ಸಾಮೀ ಮುಸ್ಲಿಮರಿಗೂ ಸಹ ತಮ್ಮ ಬೋಡೋ ಜನರಂತೆ ಈ ಜನಾಂಗೀಯ ಘರ್ಷಣೆಯ ಮೂಲಸೆಲೆ ಗೊತ್ತಾಗಲೇ ಇಲ್ಲ.

ಈ ಗಲಭೆಯ ಕೆಲವು ದಿನಗಳ ನಂತರ ನಾನು ಗೆಳೆಯ ದ್ವಿಯನ್ನು ಫೋನ್ ಮೂಲಕ ಮಾತನಾಡುತ್ತಿದ್ದಾಗ ಆತ ‘ತನ್ನ ಧುಬ್ರಿ ಹಳ್ಳಿಯಲ್ಲಿನ ಗ್ರಾಮಸ್ಥರು ಈ ಬೋಡೋ ಭಯೋತ್ಪಾದಕರು ಅಲ್ಲಿನ ಮುಸ್ಲಿಮರ ಮನೆಗಳನ್ನು ಸುಡುವುದನ್ನು ತಡೆದು ಈ ಗಲಭೆಕೋರರನ್ನು ಅಲ್ಲಿಂದ ಓಡಿಸಿದರೆಂದು’ ಹೇಳಿದ. ದ್ವಿ ದುಃಖಿಸುತ್ತ ಹೇಳಿದ್ದು  ಈ ವಿಷಯ ಅಲ್ಲಿನ ಜನರಿಗೆ ಮುಂಚಿತವಾಗಿಯೇ ಗೊತ್ತಾಗಿದ್ದರೆ ಯಾವುದೇ ರೀತಿಯ ಗಲಭೆಗಳು ಜರುಗುತ್ತಲೇ ಇರಲಿಲ್ಲ.

– ಇದು ದೆಹಲಿಯ ಜಾಕೀರ್ ಹುಸೇನ್ ಕಾಲೇಜಿನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ 21ರ ವಯಸ್ಸಿನ ‘ರೈಫುಲ್ ಅಲೋಮ್ ರಹಮಾನ್’ ಎನ್ನುವ ಅಸ್ಸಾಮೀ ತರುಣ ಕಳೆದ ವಾರದ ‘ತೆಹಲ್ಕ’ ವಾರಪತ್ರಿಕೆಯಲ್ಲಿ ಬರೆದ ಲೇಖನವೊಂದರ ಭಾವಾನುವಾದ.

ಮೇಲಿನ ಮನಕಲುಕುವ ಮಾತುಗಳು 21 ವರ್ಷದ ತರುಣನಿಂದ ಬಂದಿದ್ದು. ಅ ಅಸ್ಸಾಮಿ ಮುಸ್ಲಿಂ ಯುವಕನಿಂದ. ಈ 21ರ ಯುವಕನಿಗೆ ಸಾಧ್ಯವಾದ ಕಾಮನ್‌ಸೆನ್ಸ್ ಮತ್ತು ಮಾನವೀಯ ದೃಷ್ಟಿಕೋನಗಳು ಈ ಫ್ಯಾಸಿಸ್ಟ್ ಸಂಘಪರಿವಾರಕ್ಕೆ ದಕ್ಕಲೇ ಇಲ್ಲ. 84ರ ಇಳಿ ವಯಸ್ಸಿನಲ್ಲಿರುವ ಹಿರಿಯ ರಾಜಕಾರಣಿ ‘ಅಡ್ವಾನಿ’ಯವರು ಮೇಲಿನ 21ರ ತರುಣ ರಹಮಾನನ ಜೀವಪರ ಮನಸ್ಥಿತಿಯನ್ನು ಮೈಗೂಡಿಸಿಕೊಂಡಿದ್ದರೆ ಕಳೆದ 25 ವರ್ಷಗಳಲ್ಲಿ ಇಂಡಿಯಾ ದೇಶದಲ್ಲಿನ ಕೋಮುಗಲಭೆಗಳ ತೀವ್ರತೆಯ ನೆಲೆಗಳು ಹುಟ್ಟಿಕೊಳ್ಳುತ್ತಲೇ ಇರಲಿಲ್ಲ!! ಆದರೆ ಆರ್.ಎಸ್.ಎಸ್. ಮೂಲವಾಸಿಗಳಾದ ’ಅಡ್ವಾನಿ’ಯವರಿಂದ ಈ ಭಿನ್ನ ಮಾನವೀಯ ಗುಣಗಳನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ. ಇಂದಿಗೂ ಯಾವುದೇ ವಿವೇಚನೆ ಮತ್ತು ಆಳವಾದ ಗ್ರಹಿಕೆ ಇಲ್ಲದೆ ಈ ಸಂಘ ಪರಿವಾರದ ಸ್ವಯಂಸೇವಕರಾದ ‘ಅಡ್ವಾನಿ’ಯವರು ಸಾವಿರದ ಸಲ ಈ ಬಾಂಗ್ಲಾ ದೇಶದ ವಲಸೆಗರ ವಿರುದ್ಧವಾಗಿ ಗುಡುಗಿದರು. ಯಾವುದೇ ಪ್ರಜಾಪ್ರಭುತ್ವದ ದೇಶದಲ್ಲಿ 50 ವರ್ಷಗಳ ರಾಜಕೀಯ ಅನುಭವಿರುವ ರಾಜಕಾರಣಿಯೊಬ್ಬರು ಈ ಮಟ್ಟದಲ್ಲಿ ತಬ್ಬಲಿ ಮತ್ತು ಅನುಭವಿಯಾಗಿರುವ ಉದಾಹರಣೆ ನನಗಂತೂ ಕಾಣಿಸುತ್ತಿಲ್ಲ. ದಿಲ್ಲಿ ಮಾಯಾವಿಯ ಗದ್ದುಗೆಯ ಮೇಲೆ ಕಣ್ಣಿಟ್ಟಿರುವ ಈ ಅನನುಭವಿ, ಇಳಿವಯಸ್ಸಿನ ದಿಕ್ಕೆಟ್ಟ ರಾಜಕಾರಣಿ ಅಡ್ವಾನಿ ಮತ್ತು ಇದೇ ಮಾಯಾವಿ ದಿಲ್ಲಿಯ ಗದ್ದುಗೆಯನ್ನೇರುವ ಕನಸು ಕಾಣುತ್ತಿರುವ ಫ್ಯಾಸಿಸ್ಟ್, ಕೋಮುವಾದಿ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು 2014ರಲ್ಲಿ ಕೇಂದ್ರದಲ್ಲಿ ಅಧಿಕಾರವು ಇನ್ನೇದು ಕೈಗೆಟುಕಿದಂತೆಯೇ ಎಂದು ಜೊಲ್ಲು ಸುರಿಸುತ್ತಿರುವ ಮತೀಯವಾದಿ ಬಿಜೆಪಿ ಪಕ್ಷ ಇವರೆಲ್ಲರ ಈ ಸಂಗಮದ ಒಂದೇ ಸಮಾನ ಅಂಶ; ಅದು ದಿಲ್ಲಿ ಗದ್ದುಗೆ.

ಕಳೆದ 8 ವರ್ಷಗಳಲ್ಲಿ ಅನೇಕ ಕಾರಣಗಳಿಗಾಗಿ ಇಂಡಿಯಾ ದೇಶ ಕೋಮುಗಲಭೆಗಳಿಂದ ಮುಕ್ತವಾಗಿದೆ. ಇಂದಿನ ತಲೆಮಾರು ಕನಿಷ್ಟ ಈ ಕೋಮುವಾದದ ದಳ್ಳುರಿಯ ಬೆಂಕಿಯಿಂದ ದೂರ ಉಳಿದಿದೆ. ಆದರೆ ಈ ಸಂಘಪರಿವಾರದ ಕೋಮುವಾದಿಗಳ ಅಧಿಕಾರದ ದುರಾಸೆ ಮುಂದಿನ ದಿನಗಳಲ್ಲಿ ಭಾರತವನ್ನು ಮರಳಿ 90ರ ದಶಕದ ಕೋಮುಗಲಭೆಗಳ ದಿನಗಳಿಗೆ ತಂದು ಬಿಸಾಕಿದರೆ ಅದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಇಂದು ಈ ಅಸ್ಸಾಮಿನ ಜನತೆ ದಾಳಿಗೊಳಗಾಗುವ ಭೀತಿಯ ಗುಲ್ಲುಗಳಿಂದ ಭಯಭೀತರಾಗಿ ಕರ್ನಾಟಕದಿಂದಲೇ ಕಾಲ್ತೆಗೆಯುತ್ತಿರುವುದು ನಮಗಂತೂ ದಿಗ್ಭ್ರಮೆಗೊಳಿಸುತ್ತಿದೆ. ಇದರ ಪೂರ್ವಪರದ ಸತ್ಯಾಸತ್ಯತೆಗಳು ಬಯಲುಗೊಳ್ಳಬೇಕಾಗಿದೆ. ಇಸ್ಲಾಮ್ ಮೂಲಭೂತವಾದಿಗಳು ಭಾಗಿಯಾಗಿದ್ದಾರೆಂದು ಹೇಳಲಾಗುತ್ತಿರುವ ಈ ಇಡೀ ಅಸಂಗತ ದುರಂತ ದೃಶ್ಯದಲ್ಲಿ ಇಲ್ಲಿನ ಆರ್.ಎಸ್.ಎಸ್. ಮತ್ತು ಅವರ ಅಂಗ ಪಕ್ಷಗಳಾದ ಶ್ರೀರಾಮಸೇನೆಯ ನಡವಳಿಕೆಗಳು ಅತ್ಯಂತ ಅನುಮಾನಾಸ್ಪದವಾಗಿದೆ. ಇದು ಇನ್ನೊಂದು ಸಿಂಧಗಿ ಬಾವುಟ ಪ್ರಕರಣದ ಮರುಕಳಿಕೆಯೇ? ಇವರ ಮೊಸಳೆ ಕಣ್ಣೀರು ಇಂದು ನಗೆಪಾಟಲಿಗೀಡಾಗಿದೆ. ಈ ಮತೀಯವಾದಿಗಳು ಇನ್ನೂ ಎಷ್ಟು ವರ್ಷಗಳ ಕಾಲ ಈ ರೀತಿಯ ಸಂಚುಗಳನ್ನು, ಕುಟಿಲ ನೀತಿಗಳನ್ನು ಮುಂದುವರೆಸುತ್ತಾರೆ? ಎಲ್ಲಿಯವರೆಗೆ ಈ ನಾಡಿನ ಪ್ರಜ್ಞಾವಂತರು ತಮ್ಮ ಮರೆಮೋಸದ, ಆತ್ಮವಂಚನೆಯ ನಿದ್ರೆಯಿಂದ ಎಚ್ಚೆತ್ತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ. ಎಲ್ಲಿಯವರೆಗೆ ನಮ್ಮ ಬುದ್ಧಿಜೀವಿಗಳು ತಮ್ಮ ಕಂಫರ್ಟ್ ಗುಹೆಗಳಿಂದ ಹೊರಬಂದು ಜನಸಾಮಾನ್ಯರನ್ನು ಬುದ್ಧಿಜೀವಿಗಳನ್ನಾಗಿ ರೂಪಿಸುವುದಿಲ್ಲವೋ ಅಲ್ಲಿಯವರೆಗೆ. ಎಲ್ಲಿಯವರೆಗೆ ನಾವೆಲ್ಲ ಜನಪರ, ಮಾನವೀಯ, ಪ್ರತಿರೋಧದ ನೆಲೆಯ ಸಾಂಸ್ಕೃತಿಕ ಯಜಮಾನ್ಯವನ್ನು ಸ್ಥಾಪಿಸುವುದಿಲ್ಲವೋ ಅಲ್ಲಿಯವರೆಗೆ.

(ಚಿತ್ರಕೃಪೆ: ndtv.com)