ಮಮತಾ ದೀದಿಯ ದಾದಾಗಿರಿ


– ಡಾ.ಎನ್.ಜಗದೀಶ್ ಕೊಪ್ಪ


ಇತ್ತೀಚೆಗಿನ ಭಾರತದ ರಾಜಕೀಯದಲ್ಲಿ ಮಮತಾ ಬ್ಯಾನರ್ಜಿ ಸದಾ ಸುದ್ದಿಯಲ್ಲಿರುವ ಹೆಸರು. ಈವರೆಗೆ ತನ್ನ ವಿವೇಚಾನಾ ರಹಿತ ನಡುವಳಿಕೆಗಳಿಂದ ಹೆಸರಾಗಿದ್ದ ಮಮತಾ, ಈಗ ನ್ಯಾಯಾಲಯದ ತೀರ್ಪುಗಳನ್ನು ಖರೀದಿಸಬಹುದು ಎಂಬ ವಿವಾದಾಸ್ಪದ ಹೇಳಿಕೆ ನೀಡಿ ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿದ್ದಾರೆ. ಸುಧೀರ್ಘ 28 ವರ್ಷಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿ ಪಳಗಿದ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ನೀಡಿದ ಇಂತಹ ಹೇಳಿಕೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ.

1984ರಲ್ಲಿ ದಕ್ಷಿಣ ಕೊಲ್ಕತ್ತ ಲೋಕಸಭಾ ಕ್ಷೇತ್ರದಿಂದ ಕಮ್ಯೂನಿಷ್ಟ್ ಪಕ್ಷದ ಹಿರಿಯ ಮುತ್ಸದ್ಧಿ ಸೋಮನಾಥ ಚಟರ್ಜಿಯನ್ನು ಸೋಲಿಸುವುದರ ಮೂಲಕ ರಾಜೀವ್ ಗಾಂಧಿಯವರ ಕಣ್ಮಣಿಯಾಗಿ ರಾಷ್ಟ್ರ ರಾಜಕಾರಣಕ್ಕೆ ಬಂದ ಮಮತಾ 1989ರಲ್ಲಿ ಒಮ್ಮೆ ಸೋಲನ್ನು ಅನುಭವಿಸಿದ್ದನ್ನು ಬಿಟ್ಟರೆ, ಸತತವಾಗಿ ಆರು ಬಾರಿ ಲೋಕಸಭೆಗೆ ಸಂಸದೆಯಾಗಿ ಆರಿಸಿ ಬಂದು ರಾಜಕಾರಣದ ಒಳ-ಹೊರಗು ಮತ್ತು ಪಟ್ಟುಗಳನ್ನು ಕರಗತಮಾಡಿಕೊಂಡವರು.

1991ರ ಮೇ ತಿಂಗಳಿನಲ್ಲಿ ರಾಜೀವ್ ಹತ್ಯೆಯಾದ ನಂತರ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್  ಪಕ್ಷದ ಪ್ರಧಾನಿ ನರಸಿಂಹರಾವ್‌ರ ಮಂತ್ರಿಮಂಡಲದಲ್ಲಿ (1991) ಯುವಜನ ಖಾತೆಯ ರಾಜ್ಯ ಸಚಿವೆಯಾಗಿ, ನಂತರ ಅಧಿಕಾರಕ್ಕೆ ಬಂದ ಎನ್.ಡಿ.ಎ. ಮೈತ್ರಿಕೂಟದ ಜೊತೆ ಕೈಜೋಡಿಸಿ ವಾಜಪೇಯಿ ನೇತ್ರತ್ವದ ಸಂಪುಟದಲ್ಲಿ (2000) ರೈಲ್ವೆ ಸಚಿವೆಯಾಗಿ ಮತ್ತು 2004ರಲ್ಲಿ ಕಲ್ಲಿದ್ದಲು ಖಾತೆ ಸಚಿವೆಯಾಗಿ, ಅನುಭವಗಳಿಸಿದ ಮಮತಾ, 2009ರಲ್ಲಿ ನಡೆದ ಚುನಾವಣೆಯಲ್ಲಿ ಎನ್.ಡಿ.ಎ. ತೊರೆದು, ಸೋನಿಯಾ ನೇತೃತ್ವದ ಯು.ಪಿ.ಎ. ಮೈತ್ರಿಕೂಟಕ್ಕೆ ಬಂದು ಮತ್ತೇ ರೈಲ್ವೆ ಸಚಿವೆಯಾಗಿ ಅಧಿಕಾರ ಹಿಡಿದು ರಾಷ್ಟ್ರ ರಾಜಕಾರಣದ ಎಲ್ಲಾ ಮಗ್ಗುಲುಗಳನ್ನು ಅರಿತ ಪ್ರಬುದ್ಧೆ ಎಂಬುದು ಎಲ್ಲರ ಭಾವನೆಯಾಗಿತ್ತು.  ದುರಂತವೆಂದರೆ, 2011ರ ಮೇ ತಿಂಗಳಿನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ನಂತರದ ಮಮತಾ ಬ್ಯಾನರ್ಜಿಯವರ ಪ್ರತಿಹೆಜ್ಜೆ ಹಾಗೂ ನಿಲುವುಗಳು ಈಕೆಯ ಒಡಕಲು ವ್ಯಕ್ತಿತ್ವವನ್ನು (Split personality) ಪ್ರತಿಬಿಂಬಿಸುತ್ತಿವೆ.

ಕೊಲ್ಕತ್ತ ನಗರದ ಒಂದು ಮಧ್ಯಮ ವರ್ಗದ ಕುಟುಂಬದಿಂದ ಬಂದ ಮಮತಾ, ತನ್ನ ವಿದ್ಯಾರ್ಥಿ ಜೀವನದ ಬೀದಿ ಹೋರಾಟದಿಂದ ಆರಂಭಿಸಿದ ರಾಜಕೀಯ ಪಯಣದಲ್ಲಿ, ಅವಿವಾಹಿತೆಯಾಗಿ ಉಳಿದು ಸಂಸದೆಯಾಗಿ, ಕೇಂದ್ರ ಸಚಿವೆಯಾಗಿ, ಅತಿ ಚಿಕ್ಕ ವಯಸ್ಸಿನಲ್ಲಿ ಜನಸಾಮಾನ್ಯರ ನೋವಿಗೆ ಸ್ಪಂದಿಸುತ್ತಾ  ಬುದ್ಧಿವಂತರ ನೆಲವಾದ ಪಶ್ಚಿಮ ಬಂಗಾಳದಲ್ಲಿ ತನ್ನದೇ ಛಾಪು ಮೂಡಿಸಿದ ಹಾಗೂ ಅಪರೂಪದ ದಿಟ್ಟ ಹೆಣ್ಣು ಮಗಳು. ತನ್ನ ವ್ಯಕ್ತಿತ್ವದ ನ್ಯೂನತೆಗಳ ನಡುವೆ ಸೂರ್ಯ ಮುಳಗದ ನಾಡು ಎಂದು ಇಂಗ್ಲೆಂಡ್‌ಅನ್ನು ಕರೆವ ಹಾಗೆ ಕೆಂಪುಭಾವುಟವನ್ನು ಕೆಳಕ್ಕೆ ಇಳಿಸಲಾಗದ ರಾಜ್ಯ ಎಂಬ ಖ್ಯಾತಿಗೆ ಒಳಗಾಗಿದ್ದ ಪಶ್ಚಿಮ ಬಂಗಾಳಕ್ಕೆ, ಮತ್ತು ಅಲ್ಲಿನ ಎಡಪಂಥೀಯ ಚಿಂತರಿಗೆ ಈ ಶತಮಾನದ ರಾಜಕೀಯದಲ್ಲಿ ಅತಿ ದೊಡ್ಡ ಶಾಕ್ ಕೊಟ್ಟ ಛಲಗಾತಿ ಕೂಡ ಹೌದು.

ಈಕೆಯ ಹೋರಾಟ ಮತ್ತು ಇತಿಹಾಸ ಬಲ್ಲವರಿಗೆ ಇದು ಅನಿರೀಕ್ಷಿತ ಘಟನೆಯೇನಲ್ಲ. ಮಮತಾ ಬ್ಯಾನರ್ಜಿಯ ಆತ್ಮ ಕಥನ ಮರೆಯಲಾಗದ ನೆನಪುಗಳು (My Unforgettable Memories) ಕೃತಿಯನ್ನು ಓದಿದವರಿಗೆ, ಈಕೆಯ ಬಾಲ್ಯ, ಕಾಲೇಜು ದಿನಗಳ ವಿದ್ಯಾರ್ಥಿ ಸಂಘಟನೆಯ ನಾಯಕಿಯಾಗಿ ಹೋರಾಟದ ವೇಳೆ ಕಮ್ಯೂನಿಷ್ಟ್ ಕಾರ್ಯಕರ್ತರಿಂದ ತಿಂದ ಹೊಡೆತಗಳು, ಅನುಭವಿಸಿದ ಹಿಂಸೆ, ಹಾಗೂ ಜೈಲು ವಾಸ ಇವೆಲ್ಲವೂ ಪರೋಕ್ಷವಾಗಿ ಗಟ್ಟಿಗಿತ್ತಿಯನ್ನಾಗಿ ಮಾಡುವುದರ ಮೂಲಕ ಮಮತಾ ಬ್ಯಾನರ್ಜಿಗೆ ಸ್ಟ್ರೀಟ್ ಪೈಟರ್ ಎಂಬ ಬಿರುದನ್ನು ತಂದುಕೊಟ್ಟವು.

ಕಾಂಗ್ರೆಸ್ ಪಕ್ಷದ ಜೊತೆಗಿನ ರಾಜಕೀಯ ಭಿನ್ನಾಭಿಪ್ರಾಯಗಳಿಂದ ಪಕ್ಷ ತೊರೆದು, ತನ್ನದೇ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಕಟ್ಟಿದಾಗ ಮಮತಾರವರ ಯಶಸ್ಸನ್ನು ಯಾರೂ ಊಹಿಸಿರಲಿಲ್ಲ. ಇದೊಂದು ಅತೃಪ್ತ ರಾಜಕೀಯ ಮಹಿಳೆಯೊಬ್ಬಳ ರಾಜಕೀಯ ವರಸೆ ಇರಬಹುದೆಂದು ಎಂದು ಎಲ್ಲರೂ ವಿಶ್ಲೇಷಿಸಿದ್ದರು. ಹಾಗೆ ನೋಡಿದರೆ, ಮಮತಾ ಬ್ಯಾನರ್ಜಿಯ ರಾಜಕೀಯ ಯಶಸ್ಸಿನ ಹಿಂದೆ ಪರೋಕ್ಷವಾಗಿ ಕಮ್ಯೂನಿಷ್ಟ್ ಪಕ್ಷದ ಪಾತ್ರ ಕೂಡ ಇದೆ.

1974ರಲ್ಲಿ ಸಿದ್ಧಾರ್ಥ ಶಂಕರ್ ರಾಯ್ ನೇತೃತ್ವದ ಕಾಂಗ್ರೆಸ್  ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಿ, ಗದ್ದುಗೆ ಏರಿದ ಜ್ಯೋತಿ ಬಸು ನೇತೃತ್ವದ ಕಮ್ಯೂನಿಷ್ಟ್ ಸರ್ಕಾರ ಸುಧೀರ್ಘ ಮೂರುವರೆ ದಶಕಗಳ ಕಾಲ ಪಶ್ಚಿಮ ಬಂಗಾಳವನ್ನು ಆಳಿತು. ವೈಯಕ್ತಿಕ ನೆಲೆಯಲ್ಲಿ, ಹಾಗೂ ಸಾಮಾಜಿಕ ಮತ್ತು ರಾಜಕೀಯವಾಗಿ ಶುದ್ಧ ಚಾರಿತ್ರ್ಯದ ವ್ಯಕ್ತಿತ್ವ ಹೊಂದಿದ್ದ ಜ್ಯೋತಿ ಬಸುರವರು ಪಶ್ಚಿಮ ಬಂಗಾಳ ಮಾತ್ರವಲ್ಲ, ಇಡೀ ಭಾರತದಲ್ಲಿ ಒಬ್ಬ ಶ್ರೇಷ್ಠ ರಾಜಕೀಯ ಮುತ್ಸದಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಇದು ಪಕ್ಷದ ನಿರಂತರ ಗೆಲುವಿಗೆ ಸಹಕಾರಿಯಾಯಿತು.

ಕಮ್ಯೂನಿಷ್ಟ್ ಪಕ್ಷದ ವರ್ತಮಾನದ ದುರಂತವೆಂದರೆ, ಕಾಲ ಕಾಲಕ್ಕೆ ಬದಲಾಗುತ್ತಿರುವ ರಾಜಕೀಯ ಚಿಂತನೆಗಳನ್ನ ಪಕ್ಷದ ಆಶಯ ಮತ್ತು ಗುರಿಗಳಿಗೆ ಧಕ್ಕೆಯಾಗದಂತೆ ಅಳವಡಿಸಿಕೊಳ್ಳವಲ್ಲಿ ದಯನೀಯವಾಗಿ ಸೋತಿತು. ಇದು ಕಮ್ಯೂನಿಷ್ಟ್ ಪಕ್ಷದಲ್ಲಿ ಹೊಸ ತಲೆಮಾರಿನ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಭ್ರಮನಿರಸನವನ್ನುಂಟು ಮಾಡಿತು. ಜ್ಯೋತಿ ಬಸು ನೆರಳಲ್ಲಿ ಬೆಳೆದು ಬಂದ ಬುದ್ಧದೇಬ್ ಭಟ್ಟಾಚಾರ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಬರುವುದರೊಳಗೆ ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಷ್ಟ್ ಪಕ್ಷ ಒಡೆದ ಮನೆಯಂತಾಗಿತ್ತು.

ಒಂದು ಕಡೆ ಕಾರ್ಮಿಕರು ಹಾಗೂ ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರ ಪರ ಧ್ವನಿ ಎತ್ತುತ್ತಾ, ಮತ್ತೊಂದು ಕಡೆ ಜಾಗತೀಕರಣವನ್ನು ವಿರೋಧಿಸುತ್ತಲೇ, ಬಂದ ಪಶ್ಚಿಮ ಬಂಗಾಳದ ಕಮ್ಯೂನಿಷ್ಟ್ ಸರ್ಕಾರ 2007ರಲ್ಲಿ ನಂದಿ ಗ್ರಾಮದಲ್ಲಿ ಇಂಡೋನೇಷಿಯಾದ ಸಲೀಮ್ ಗ್ರೂಪ್ಸ್ ಕಂಪನಿಗೆ ಫಲವತ್ತಾದ 10 ಸಾವಿರ ಎಕರೆ ಭೂಮಿಯನ್ನ ಕೊಡುಗೆಯಾಗಿ ನೀಡಲು ಮುಂದೆ ಬರುವ ಮೂಲಕ ತನ್ನ ದ್ವಂದ್ವ ನೀತಿಯನ್ನು ಪ್ರದರ್ಶಿಸಿತು. ಇದನ್ನು ಪ್ರತಿಭಟಿಸಿದ ರೈತರ ಮೇಲೆ ತನ್ನ ಪಕ್ಷದ ಕಾರ್ಯಕರ್ತರನ್ನು ಛೂ ಬಿಟ್ಟಿದ್ದಲ್ಲದೆ, ಪೋಲಿಸರ ಗೋಲಿಬಾರ್ ಮೂಲಕ 14 ಮಂದಿ ರೈತರ ಹತ್ಯೆಗೆ ಕಾರಣವಾಯಿತು.

ಇದೊಂದು ಘಟನೆ ಮಮತಾ ಬ್ಯಾನರ್ಜಿಗೆ ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಮರಳಲು ಪ್ರೇರಣೆಯಾಯಿತು. ನಂತರ ಮುಖ್ಯಮಂತ್ರಿ ಬುದ್ಧದೇಬ್ ಭಟ್ಟಾಚಾರ್ಯ 2008ರಲ್ಲಿ ಟಾಟಾ ಕಂಪನಿಯ ನ್ಯಾನೊ ಕಾರು ತಯಾರಿಕೆಗೆ ಸಿಂಗೂರು ಬಳಿ 997 ಎಕರೆ ಪ್ರದೇಶವನ್ನು ರೈತರಿಂದ ಬಲವಂತವಾಗಿ 115 ಕೋಟಿ ರೂ.ಗಳಿಗೆ ಖರೀದಿಸಿ ಕೇವಲ 20 ಕೋಟಿ ರೂಪಾಯಿಗೆ ಟಾಟಾ ಕಂಪನಿಗೆ ನೀಡಿದಾಗಲೇ ಪಶ್ಚಿಮ ಬಂಗಾಳದ ಮತದಾರರು ಕಮ್ಯೂನಿಷ್ಟ್ ಸರ್ಕಾರದ ಮರಣ ಶಾಸನವನ್ನು ಬರೆದಿಟ್ಟರು.

ಈ ಎಲ್ಲಾ ಘಟನೆಗಳನ್ನು ಪರಾಮರ್ಶಿಸಿದಾಗ ಮಮತಾರವರ ತೃಣಮೂಲ ಕಾಂಗ್ರೇಸ್ ಪಕ್ಷದ ಯಶಸ್ಸಿನ ಹಿಂದೆ ಕಮ್ಯೂನಿಷ್ಟ್ ಪಕ್ಷದ ಕೊಡುಗೆಯೂ ಇದೆ ಎಂದು ತೀರ್ಮಾನಿಸಬಹುದು. ಹೀಗೆ ಪಶ್ಚಿಮ ಬಂಗಾಳದಲ್ಲಿ ಅನೀರಿಕ್ಷಿತವಾಗಿ ಮಮತಾ ಬ್ಯಾನರ್ಜಿ ಅಧಿಕಾರದ ಗದ್ದುಗೆಗೆ ಏರಿದಾಗ ಅಲ್ಲಿನ ಜನತೆ ಈಕೆಯ ಬಗ್ಗೆ ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಕೇವಲ 15 ತಿಂಗಳ ಅವಧಿಯಲ್ಲಿ ಅವರ ಕನಸುಗಳು ಛಿದ್ರಗೊಂಡಿವೆ.

ಮುಖ್ಯಮಂತ್ರಿಯಾದ  ಕೇವಲ 40 ದಿನಗಳಲ್ಲಿ ತನ್ನ ಸಹೋದರ ಸಂಬಧಿಯೊಬ್ಬನನ್ನು ಪೋಲಿಸರು ಬಂಧಿಸಿದರು ಎಂಬ ಏಕೈಕ ಕಾರಣಕ್ಕೆ ತಾನು ಒಂದು ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆತು, ತನ್ನ ಸ್ಥಾನದ ಘನತೆಯನ್ನೂ ಲೆಕ್ಕಿಸದೆ, ಠಾಣೆಗೆ ನುಗ್ಗಿ ಪೊಲೀಸರ ಮೇಲೆ ದಮಕಿ ಹಾಕಿದಾಗಲೇ ಮಮತಾ ಒಬ್ಬ ಅಪ್ರಭುದ್ಧ ಮಹಿಳೆ ಎಂದು ಪಶ್ಚಿಮ ಬಂಗಾಳದ ಜನತೆ ನಿರ್ಧರಿಸಿದ್ದರು. ಸೋಜಿಗದ ಸಂಗತಿಯೆಂದರೆ, ಇಂತಹ ಅವಿವೇಕದ ನಡುವಳಿಕೆಗಳು ಮಮತಾ ಬ್ಯಾನರ್ಜಿಯಿಂದ ಮುಂದುವರಿಯುತ್ತಲೇ ಹೋದವು. ತನ್ನ ವ್ಯಂಗ್ಯ ಚಿತ್ರವನ್ನು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕನೊಬ್ಬ (ಅಖಿಲೇಶ್ ಮಹಾಪಾತ್ರ) ಅಂತರ್ಜಾಲದಲ್ಲಿ ಗೆಳೆಯರೊಂದಿಗೆ ಹಂಚಿಕೊಂಡ ಎಂಬ ಕಾರಣಕ್ಕಾಗಿ ಆತನ್ನು ಜೈಲಿಗೆ ಅಟ್ಟಿದ ಮಮತಾ ಅಷ್ಟಕ್ಕೂ ಸುಮ್ಮನಾಗದೆ, ಬಂಧನದ ವಿರುದ್ಧ ಪ್ರತಿಭಟಿಸಿದವರ ಜೊತೆ ಮತ್ತೊಬ್ಬ ಪ್ರಾಧ್ಯಾಪಕ (ಸುಬ್ರತೊ ಸೇನ್ ಗುಪ್ತಾ) ಪಾಲ್ಗೊಂಡಿದ್ದಕ್ಕೆ ಆತನನ್ನೂ ಜೈಲಿಗೆ ಕಳಿಸಿ ತಾನು ಸರ್ವಾಧಿಕಾರಿಯ ಮುಂದುವರಿದ ಸಂತತಿ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟರು.

ಸಾರ್ವಜನಿಕ ರಂಗದಲ್ಲಿ ತೊಡಗಿಸಿಕೊಂಡ ಒಬ್ಬ ವ್ಯಕ್ತಿಗೆ ಅವಶ್ಯಕವಾಗಿ ಇರಬೇಕಾದ ಮುಖ್ಯ ಅರ್ಹತೆಗಳೆಂದರೆ, ತಾಳ್ಮೆ ಮತ್ತು ವಿವೇಚನೆ. ಇವೆರೆಡು ಅಂಶಗಳು ಮಮತಾ ಎಂಬ ಹೋರಾಟಗಾರ್ತಿಯ ಬದುಕಿನಲ್ಲಿ ಅಪರಿಚಿತ ಶಬ್ಧಗಳಾಗಿವೆ. ತನ್ನನ್ನು ಪ್ರಶ್ನಿಸಿದವರೆಲ್ಲಾ ಕಮ್ಯೂನಿಷ್ಟರು ಎಂಬ ಭ್ರಮೆ ಅವರನ್ನು ಆವರಿಸಿಕೊಂಡಿದೆ. ಇಂಗ್ಲಿಷ್ ಸುದ್ಧಿ ಚಾನಲ್ ಒಂದು ಏರ್ಪಡಿಸಿದ್ದ ಚರ್ಚೆ ಹಾಗೂ ಸಂದರ್ಶನದ ವೇಳೆಯಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿಗಳನ್ನು ಕಮ್ಯೂನಿಷ್ಟರು ಎಂದು ಜರಿದು, ನೇರಪ್ರಸಾರದ ಕಾರ್ಯಕ್ರಮದಿಂದ ಎದ್ದು ಹೋದ ಇದೇ ಮಮತಾ ಕಳೆದ ವಾರ ಸಾರ್ವಜನಿಕ ಸಭೆಯಲ್ಲಿ ಪ್ರಶ್ನೆ ಕೇಳಿದ ರೈತನನ್ನೂ ಜೈಲಿಗೆ ದೂಡಿದ್ದಾರೆ.

ಇದು ಸಾಲದಂಬಂತೆ ಈಗ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ದೂರುವುದರ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಮಮತಾ ಬ್ಯಾನರ್ಜಿಯವರ ಈ ಮಾತಿಗೆ ಕಾರಣವಾದದ್ದು ಎರಡು ಪ್ರಮುಖ ಘಟನೆಗಳು. ಒಂದು, ಟಾಟಾ ಕಂಪನಿಯ ಒಡೆತನದಲ್ಲಿರುವ ಸಿಂಗೂರು ಭೂಮಿಯನ್ನು ರೈತರಿಗೆ ವಾಪಸ್ ನೀಡಲು ನಿರ್ಧರಿಸಿ 2011ರಲ್ಲಿ ಪಶ್ಚಿಮ ಬಂಗಾಳ ವಿಧಾನ ಸಭೆಯಲ್ಲಿ ಸಿಂಗೂರು ಮಸೂದೆಯೊದನ್ನು ಜಾರಿಗೆ ತಂದರು. ಇದನ್ನು ಟಾಟಾ ಕಂಪನಿ ಕೊಲ್ಕತ್ತ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಕಳೆದ ಜೂನ್ 22ರಂದು ತೀರ್ಪು ನೀಡಿದ ಅಲ್ಲಿನ ಉಚ್ಛ ನ್ಯಾಯಾಲಯ ಸರ್ಕಾರದ ಮಸೂದೆಯನ್ನು ರದ್ದುಗೊಳಿಸಿ, ಟಾಟಾ ಕಂಪನಿ ಪರವಾಗಿ ತೀರ್ಪು ನೀಡಿತು. ಇದರ ಜೊತೆಗೆ ಗಾಯದ ಮೇಲೆ ಬರೆ ಎಳೆದಂತೆ, ಇದೇ ಆಗಸ್ಟ್ 13ರಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಪ್ರಾಧ್ಯಾಪಕರನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಗೊಳಿಸಿ, ಅವರಿಬ್ಬರಿಗೂ ಪರಿಹಾರ ನೀಡುವಂತೆ ಮಮತಾ ಸರ್ಕಾರಕ್ಕೆ ಆದೇಶಿಸಿದೆ. ಈ ಘಟನೆಗಳು ಮಮತಾ ಬ್ಯಾನರ್ಜಿಯನ್ನು  ಅಕ್ಷರಶಃ ಬಂಗಾಳದ ಕಾಳಿಯನ್ನಾಗಿ ಪರಿವರ್ತಿಸಿದೆ.

ತಾನು ಇಟ್ಟ ತಪ್ಪು ಹೆಜ್ಜೆಗಳನ್ನು ಸರಿಪಡಿಸಿಕೊಳ್ಳುವ ತಾಳ್ಮೆಯಾಗಲಿ, ವಿವೇಚನೆಗಳನ್ನು ಮಮತಾ ಬ್ಯಾನರ್ಜಿ ಮೈಗೂಡಿಸಕೊಳ್ಳದಿದ್ದರೆ, ಮುಂದಿನ ಚುನಾವಣೆಯಲ್ಲಿ ಈಕೆ ಇತಿಹಾಸದ ಕಸದ ಬುಟ್ಟಿಗೆ ಸೇರುವುದು ಖಚಿತ.  ಆದರೆ, ಸುಧಾರಣೆಯಾಗುವ ಯಾವ ಲಕ್ಷಣಗಳು ಮಮತಾ ಬ್ಯಾನರ್ಜಿಯ ವರ್ತನೆಯಲ್ಲಿ ಕಂಡು ಬರುತ್ತಿಲ್ಲ. ಅದೇ ಪಶ್ಚಿಮ ಬಂಗಾಳದ ಜನತೆಯ  ದುರಂತ.

3 thoughts on “ಮಮತಾ ದೀದಿಯ ದಾದಾಗಿರಿ

 1. prasad raxidi

  ಕಾಂಗ್ರೆಸ್ಸಿನ ಅಪ್ರಭುದ್ಧ ರಾಜಕಾರಣ ಹಾಗೂ ಜನತಾ ಪರಿವಾರದ ಅವಕಾಶವಾದಿ ರಾಜಕಾರಣ ಹೇಗೆ ಕರ್ನಾಟಕದಲ್ಲಿ ಕೋಮುವಾದಿಗಳು ಅಧಿಕಾರಕ್ಕೆ ಬರಲು ಸಹಾಯವಾಯಿತೋ ,ಹಾಗೇ ಪಶ್ಚಿಮ ಬಂಗಾಳದಲ್ಲಿ ಮಮತಾ ಮತ್ತು ಕಮ್ಯೂನಿಸ್ಟರು ಇಬ್ಬರೂ ಎಚ್ಚರವಾಗದಿದ್ದರೆ ಅಲ್ಲೂ ಕೋಮುವಾದಿಗಳು ತಲೆಯೆತ್ತುವ ಅಪಾಯ ಇದೆಯೆನಿಸುತ್ತದೆ..

  Reply
 2. mahanthesh.g.

  ಮಮತಾ ಬ್ಯಾನರ್ಜಿ ದಾದಾಗಿರಿ ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಹೇಳಿದ್ದರಲ್ಲಿ ತಪ್ಪೇನಿದೆ? ನ್ಯಾಯಾಂಗ ವ್ಯವಸ್ಥೆ ಮತ್ತು ನ್ಯಾಯಾಧೀಶರ ಮೇಲೆ ಬಹಳಷ್ಟು ಆರೋಪಗಳಿದಾವೆ. ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶದ ಮೂಲಕ ಬಂಧನಕ್ಕೆ ಒಳಗಾಗಿದ್ದ ಯಡಿಯೂರಪ್ಪನವರಿಗೆ ಜಾಮೀನು ನೀಡಿರುವ ಹಿಂದೆಯೂ ಸಾಕಷ್ಟು ಗುಮಾನಿಗಳಿದಾವೆ. ಇನ್ನು, ಬೆಂಗಳೂರಿನ ನ್ಯಾಯಾಂಗ ಇಲಾಖೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಅನುಮಾನಗಳಿದಾವೆ. ಹೈಕೋರ್ಟ್​, ಸುಪ್ರೀಂ ಕೋರ್ಟ್​ ನ್ಯಾಯಾಧೀಶರು ಕಾನೂನು ಬಾಹಿರವಾಗಿ ನಿವೇಶನ ಹೊಡೆದುಕೊಂಡಿಲ್ಲವೇ……? ಇಡೀ ನ್ಯಾಯಾಂಗ ವ್ಯವಸ್ಥೆಯೇ ಭ್ರಷ್ಟವಾಗಿಲ್ಲ. ಎಲ್ಲಾ ಕಡೆ ಇರುವಂತೆಯೂ ನ್ಯಾಯಾಂಗದಲ್ಲೂ ಭ್ರಷ್ಟರಿದ್ದಾರೆ. ನ್ಯಾಯಾಂಗದಲ್ಲಿರುವ ಭ್ರಷ್ಟರಿಗೆ ಶಿಕ್ಷೆ ಕೊಡುವ ವ್ಯವಸ್ಥೆ ಎಲ್ಲಿದೆ….? ಕನಿಷ್ಠ ಈ ಥರ ಹೇಳಿಕೆ ಕೊಡುವ ಮೂಲಕವಾದರೂ ನ್ಯಾಯಾಂಗ ವ್ಯವಸ್ಥೆಯನ್ನ ಎಚ್ಚರಿಸಬಹದಲ್ಲ…

  Reply
 3. Avinash

  ನ್ಯಾಯಾಂಗವನ್ನು ಕೊಳ್ಳಲಾಗದು ಎಂಬ ಮಾತು ಕೂಡ ಸುಳ್ಳಗುವಂತಹ ಕೆಲಸ ನಮ್ಮದೇ ರಾಜ್ಯದ ಜನಾರ್ದನ ರೆಡ್ಡಿಯವರಿಂದ ಆಗಿದೆ. ಹಾಗಾಗಿ ಅವರ ಮಾತಲ್ಲಿ ಉತ್ಪ್ರೇಕ್ಷೆ ಏನಿಲ್ಲ. ಆದರೆ ಇಡಿ ನ್ಯಾಯಾಂಗ ವೇ ಭ್ರಷ್ಟವಾಗಿದೆ ಅನ್ನುವುದು ಸರಿಯಲ್ಲ. ಇನ್ನು ರಕ್ಷಿದಿ ಯವರೇ ನೀವು ಮತದಾರನ್ನು ಬಹಳ under estimate ಮಾಡಿದ್ದಿರಿ ಅನ್ನಿಸುತ್ತಿದೆ. ಒಂದು ಪಕ್ಷ ಜನ ಮನ್ನಣೆ ಗಳಿಸಿವುದು ಅಷ್ಟು ಸುಲಭ ಅಲ್ಲ. ಉದಾರಣೆಗೆ ಕರ್ನಾಟಕದ ಕಾಂಗ್ರೆಸ್ಸ್ ಸಾಕ್ಷಿ. ಬಿಜೆಪಿ ಗೆ ಪರ್ಯಾಯ ಅಂತ ಇಂದಿಗೂ ಕೂಡ ಅನ್ನಿಸುತ್ತಿಲ್ಲ

  Reply

Leave a Reply

Your email address will not be published.