Daily Archives: August 23, 2012

ಪ್ರಜಾಪ್ರಭುತ್ವಕ್ಕೆ ಅಪಾಯ ತರಬಲ್ಲ ಮೂಲಭೂತವಾದ

– ಆನಂದ ಪ್ರಸಾದ್

ಇತ್ತೀಚೆಗಿನ ವರ್ಷಗಳಲ್ಲಿ ಭಾರತದಲ್ಲಿ ಧಾರ್ಮಿಕ ಮೂಲಭೂತವಾದ ಹೆಚ್ಚುತ್ತಿದೆ.  ಭಾರತದಲ್ಲಿ ಹಿಂದೂ ಮೂಲಭೂತವಾದಿ ಸಂಘಟನೆಗಳು ಹಾಗೂ ಅಂಥ ಸಂಘಟನೆಗಳ ಗರ್ಭದಿಂದ ಜನ್ಮ ತಳೆದ ರಾಜಕೀಯ ಪಕ್ಷವಾದ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದ ನಂತರ ಇಂಥ ಮೂಲಭೂತವಾದ ಬೆಳೆಯಲು ಹೆಚ್ಚು ಪ್ರೋತ್ಸಾಹ ಸಿಕ್ಕಿದಂತೆ ಆಯಿತು. ಮೂಲಭೂತವಾದವನ್ನು ಬೆಳೆಸುವುದು ಸುಲಭವಾದುದರಿಂದ ಇದು ವೇಗವಾಗಿ ಬೆಳೆಯುತ್ತದೆ. ವೈಚಾರಿಕ ಹಾಗೂ ರಾಜಕೀಯ ಪ್ರಜ್ಞೆ ಇಲ್ಲದ ಜನಸಮೂಹವನ್ನು ಧರ್ಮದ ಹೆಸರಿನಲ್ಲಿ ಸುಲಭವಾಗಿ ಪ್ರಚೋದಿಸಬಹುದು ಹಾಗೂ ಅಂಥ ಪ್ರಚೋದನೆಯನ್ನೇ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಅಧಿಕಾರ ಹಿಡಿಯುವ ಹವಣಿಕೆ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳ ಗುರಿಯೂ ಹೌದು. ಆದರೂ ಭಾರತದ ಸಹಿಷ್ಣು ಜನಸಮುದಾಯ ಇಂಥ ತಂತ್ರವನ್ನು ಅರ್ಥ ಮಾಡಿಕೊಳ್ಳಬಲ್ಲವರಾಗಿದ್ದಾರೆ ಎಂಬುದು 2004 ಹಾಗೂ 2009ರ ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ನೋಡಿದರೆ ಕಂಡುಬರುತ್ತದೆ.

ಅಯೋಧ್ಯೆಯ ರಾಮಮಂದಿರದ ಬೇಡಿಕೆ ಇಟ್ಟುಕೊಂಡು ಆರಂಭವಾದ ರಥಯಾತ್ರೆಯ ಮೂಲಕ ದೇಶದಲ್ಲಿ ಧಾರ್ಮಿಕ ಮೂಲಭೂತವಾದಿ ಮನೋಭಾವವನ್ನು ಬದಿದೆಬ್ಬಿಸುವಲ್ಲಿ ಯಶಸ್ವಿಯಾದ ಬಿಜೆಪಿ ಹಾಗೂ ಅದರ ಜನ್ಮದಾತ ಸಂಘ ಪರಿವಾರ ನಂತರ ಬಾಬ್ರಿ ಮಸೀದಿಯನ್ನು ನೆಲಸಮ ಮಾಡುವಲ್ಲಿಯೂ ಯಶಸ್ವಿಯಾಯಿತು. ಇದರ ಫಲವಾಗಿ ದೇಶದಲ್ಲಿ ಬಿಜೆಪಿಯು ದೊಡ್ಡ ಪ್ರಮಾಣದಲ್ಲಿ ಬೆಳೆಯಿತು. ನಂತರ ಮೈತ್ರಿಕೂಟ ರಚಿಸಿಕೊಂಡು ಕೇಂದ್ರದಲ್ಲಿಯೂ ಅಧಿಕಾರ ಹಿಡಿಯಿತು. ಇದು ಸಂಘ ಪರಿವಾರದ ಸಂಘಟನೆಗಳಿಗೆ ಆನೆಬಲ ತಂದುಕೊಟ್ಟಿತು. ದೇಶಾದ್ಯಂತ ಪರಿವಾರದ ಸಂಘಟನೆಗಳು ಬಲವಾಗಿ ಬೆಳೆದವು. ಆದರೆ ಇದರ ಸಮಾನಾಂತರವಾಗಿ ದೇಶದಲ್ಲಿ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳೂ ಬೆಳೆದಿವೆ. ಇದಕ್ಕೆ ಕಾರಣ ಹಿಂದೂ ಮೂಲಭೂತವಾದಿ ಸಂಘಟನೆಗಳು ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಹುಟ್ಟು ಹಾಕಿದ ಅಭದ್ರತೆಯ ಭಾವನೆ. ಇದರಿಂದಾಗಿ ಸೌಹಾರ್ದವಾಗಿ ಬದುಕುತ್ತಿದ್ದ ಹಿಂದೂ ಮುಸ್ಲಿಮರಲ್ಲಿ ಪರಸ್ಪರ ಸಂಶಯದ ವಾತಾವರಣ ರೂಪುಗೊಂಡಿತು.  ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಲವಾರು ತಾಣಗಳು ಹಿಂದೂ ಮೂಲಭೂತವಾದಿಗಳಿಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು, ತನ್ಮೂಲಕ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಸಹಾಯಕವಾಯಿತು. ಹಿಂದೂ ಮೂಲಭೂತವಾದಿಗಳು ತಮ್ಮ ಪ್ರಭಾವ ಬೆಳೆಸಿ ಉಳಿಸಿಕೊಳ್ಳಲು ಸತತವಾಗಿ ಹಿಂದೂ ಸಮಾಜೋತ್ಸವ, ಹಿಂದೂ ಜಾಗರಣ ದಿನ, ಅಖಂಡ ಭಾರತ ಸಂಕಲ್ಪ ದಿನ ಇತ್ಯಾದಿಗಳನ್ನು ಆಯೋಜಿಸುತ್ತಾ ಬರುತ್ತಿದ್ದಾರೆ.  ಅಖಂಡ ಭಾರತ ಅಂದರೆ ಸ್ವಾತಂತ್ರ್ಯಪೂರ್ವದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳನ್ನೊಳಗೊಂಡ ಭಾರತ ನಿರ್ಮಾಣ ಹೆಸರಿನಲ್ಲಿ ಜನತೆಯಲ್ಲಿ ಮೂಲಭೂತವಾದಿ ಭಾವನೆಗಳನ್ನು ಬಿತ್ತುವುದು ಹಾಗೂ ಅವರನ್ನು ಇನ್ನೊಂದು ಧರ್ಮದ ಜನರನ್ನು ದ್ವೇಷದಿಂದ ಕಾಣುವಂತೆ ಪ್ರಚೋದಿಸುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಗಳೇನೂ ಅಲ್ಲ. ಧರ್ಮದ ಆಧಾರದ ಮೇಲೆ ವಿಭಜನೆ ಆಗಿ ಆರು ದಶಕಗಳೇ ಕಳೆದಿರುವಾಗ ಅಖಂಡ ಭಾರತ ನಿರ್ಮಾಣ ಸಾಧ್ಯವೂ ಇಲ್ಲ, ಅಂಥ ಹೋರಾಟದ ಅಗತ್ಯವೂ ಇಲ್ಲ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳು ತಮ್ಮ ಆರಂಭದಲ್ಲಿ ಜಾತ್ಯತೀತ ಧೋರಣೆಗಳನ್ನು  ಹೊಂದಿದ್ದರೂ ನಂತರದಲ್ಲಿ ಮೂಲಭೂತವಾದಿಗಳ ಹಿಡಿತಕ್ಕೆ ಸಿಲುಕಿ ರಿಪೇರಿಯಾಗದಷ್ಟು ಕೆಟ್ಟು ಹೋಗಿವೆ.  ಹೀಗಾಗಿ ಅಂಥ ದೇಶಗಳನ್ನು ಮತ್ತೆ ಒಂದುಗೂಡಿಸುವುದು ಸಾಧ್ಯವಾಗದು. ಯುದ್ಧದ ಮೂಲಕ ಅವುಗಳನ್ನು ಸೋಲಿಸಿ ಗೆದ್ದುಕೊಳ್ಳುತ್ತೇವೆ ಎಂದು ಹೋದರೂ ಅದು ಕೂಡ ಸಾಧ್ಯವಾಗದ ಮಾತು. ಏಕೆಂದರೆ ಪಾಕಿಸ್ತಾನದ ಬಳಿ ನಮ್ಮ ಬಳಿ ಇರುವಂತೆಯೇ ಪರಮಾಣು ಅಸ್ತ್ರಗಳಿವೆ ಹಾಗೂ ಅದರ ಬೆಂಬಲಕ್ಕೆ ಚೀನಾ ಹಾಗೂ ಅಮೇರಿಕ ದೇಶಗಳು ಇವೆ.  ಹೀಗಾಗಿ ಅಂಥ ದುಸ್ಸಾಹಸವೂ ಕೂಡ ಸಾಧ್ಯವಿಲ್ಲ.

ಪಾಕಿಸ್ತಾನದಲ್ಲಿ ಸ್ವಾತಂತ್ರ್ಯಾನಂತರ 22% ಹಿಂದೂಗಳ ಜನಸಂಖ್ಯೆ ಇದ್ದದ್ದು ಈಗ 5% ಕ್ಕೆ ಇಳಿದಿದೆ. ಪಾಕಿಸ್ತಾನದಲ್ಲಿ ಧಾರ್ಮಿಕ ಮೂಲಭೂತವಾದಿಗಳು ಹಿಡಿತ ಸಾಧಿಸಿರುವ ಕಾರಣ ಅಲ್ಲಿನ ಹಿಂದೂಗಳ ಮೇಲೆ ತೀವ್ರ ಕಿರುಕುಳ ನಡೆಯುತ್ತಿದೆ ಎಂಬ ವರದಿಗಳಿವೆ. ಇದನ್ನು ನಮ್ಮ ದೇಶವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಎತ್ತಿ ನೋಡಬಹುದು.  ಆದರೂ ಇದರಿಂದ ಪ್ರಯೋಜನ ಆದೀತು ಎಂದು ಹೇಳಲಾಗದು, ಏಕೆಂದರೆ ಪಾಕಿಸ್ತಾನವು ರಿಪೇರಿಯಾಗದಷ್ಟು ಕೆಟ್ಟು ಹೋಗಿದೆ. ಇದೇ ಪರಿಸ್ಥಿತಿ ಬಾಂಗ್ಲಾ ದೇಶದಲ್ಲಿಯೂ ಇದೆ.  ಬಾಂಗ್ಲಾದಲ್ಲಿ ಸ್ವಾತಂತ್ರ್ಯಾನಂತರ 22% ಇದ್ದ ಹಿಂದೂಗಳ ಸಂಖ್ಯೆ ಈಗ 9% ಕ್ಕೆ ಇಳಿದಿದೆ. ಅಲ್ಲಿಯೂ ಹಿಂದೂಗಳ ಮೇಲೆ ಕಿರುಕುಳ ನಡೆಯುತ್ತಿದೆ ಎಂಬ ವರದಿಗಳಿವೆ. ಇದು ಮೂಲಭೂತವಾದದ ದುಷ್ಪರಿಣಾಮ ಹಾಗೂ ಆಧುನಿಕ ಪ್ರಜಾಪ್ರಭುತ್ವ ಮೌಲ್ಯಗಳನ್ನು, ರಾಜಕೀಯ ಪರಿಕಲ್ಪನೆಗಳನ್ನು ಬೆಳೆಸದೆ ಹೋದುದರಿಂದ ಉಂಟಾಗಿರುವ ಪರಿಸ್ಥಿತಿ. ಇದನ್ನು ಆ ದೇಶಗಳ ಜನರೇ ರಿಪೇರಿ ಮಾಡಬೇಕಷ್ಟೆ ಹೊರತು ಬೇರೆಯವರು ಏನೂ ಮಾಡಲು ಸಾಧ್ಯವಿಲ್ಲ.  ಪಾಕಿಸ್ತಾನದಲ್ಲಿ ಬೇರೆ ಅಲ್ಪಸಂಖ್ಯಾತ ಮುಸ್ಲಿಂ ಪಂಗಡಗಳ ಜನರಿಗೂ ಮೂಲಭೂತವಾದಿಗಳು ಕಿರುಕುಳ ನೀಡುತ್ತಿದ್ದಾರೆ ಎಂಬ ವರದಿಗಳಿವೆ.  ಪಾಕಿಸ್ತಾನದ ಇಂಥ ಬೆಳವಣಿಗೆಗಳಿಂದ ಅದು ಅಂತರರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವ ರೀತಿ ಆಗಿದೆ ಮತ್ತು ಇದು ಇಸ್ಲಾಂ ಧರ್ಮಕ್ಕೂ ಕೆಟ್ಟ ಹೆಸರು ತರಲು ಕಾರಣವಾಗಿದೆ. ಇದನ್ನು ಇಸ್ಲಾಂ ಧರ್ಮಗುರುಗಳೇ ರಿಪೇರಿ ಮಾಡಬೇಕಷ್ಟೆ ಹೊರತು ಬೇರೆಯವರು ಏನೂ ಮಾಡಲಾಗದು. ಇದು ಮೂಲತಹ: ಆಧುನಿಕ ಶಿಕ್ಷಣ, ವೈಚಾರಿಕತೆ, ವೈಜ್ಞಾನಿಕ ಮನೋಭಾವ, ಪ್ರಜಾಪ್ರಭುತ್ವದ ರಾಜಕೀಯ ಪ್ರಜ್ಞೆಯನ್ನು ಬೆಳೆಸದೆ ಇರುವುದರಿಂದ ಉಂಟಾಗಿರುವ ಸಮಸ್ಯೆ.  ಇಂದಿನ ಜಾಗತೀಕರಣಗೊಂಡ ಜಗತ್ತಿನಲ್ಲಿ ಇದು ಇಸ್ಲಾಂ ಧರ್ಮ ತಲೆ ತಗ್ಗಿಸುವಂತೆ ಮಾಡಬಹುದು.  ಹಾಗಾಗಿ ಈ ಕುರಿತು ಜಗತ್ತಿನ ಇಸ್ಲಾಂ ಧರ್ಮಗುರುಗಳು ಚಿಂತಿಸಬೇಕಾಗಿದೆ.

ಬಾಂಗ್ಲಾ ದೇಶೀಯರು ಅಕ್ರಮವಾಗಿ ಭಾರತಕ್ಕೆ ನುಸುಳಿ ದೇಶಾದ್ಯಂತ ಹರಡಿಹೋಗಿ ಸಮಸ್ಯೆಯಾಗುತ್ತಿದ್ದಾರೆ ಎಂದು ಹಿಂದೂ ಮೂಲಭೂತವಾದಿಗಳು ಹಾಗೂ ಅವರ ರಾಜಕೀಯ ಪಕ್ಷವು ಪದೇ ಪದೇ ಹೇಳುತ್ತಿದೆ. ಈ ವಿಷಯದ ಬಗ್ಗೆ ಪಕ್ಷಾತೀತವಾಗಿ ಚಿಂತಿಸಬೇಕಾದ ಅಗತ್ಯ ಇದೆ.  ಅಕ್ರಮ ಬಾಂಗ್ಲಾದೇಶೀಯರ ಸಂಖ್ಯೆ ದೇಶದಲ್ಲಿ ಮೂರು ಕೋಟಿ ಇದೆ ಎಂದು ಹೇಳಲಾಗುತ್ತಿದೆ.  ಇಲ್ಲಿ ಅಂಥ ಅಕ್ರಮ ವಲಸಿಗರಿಗೆ ರೇಶನ್ ಕಾರ್ಡ್, ವೋಟರ್ ಕಾರ್ಡ್ ಇತ್ಯಾದಿಗಳನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಅಕ್ರಮ ವಲಸಿಗರಿಗೆ ನಮ್ಮ ದೇಶದ ಇಂಥ ಕಾರ್ಡುಗಳನ್ನು ನೀಡುವುದು ಸಮಂಜಸವಲ್ಲ.  ಇದನ್ನು ವೋಟು ಬ್ಯಾಂಕಿನ ದೃಷ್ಟಿಯಿಂದ ನೀಡಲಾಗಿದ್ದರೆ ಅದು ಸಮಂಜಸವಾದ ಕ್ರಮವೂ ಅಲ್ಲ. ಇದರಿಂದ ಹಿಂದೂ ಮೂಲಭೂತವಾದಿಗಳ ವಾದಕ್ಕೆ ಮತ್ತಷ್ಟು ಬಲ ಬಂದು ನಮ್ಮ ದೇಶದಲ್ಲಿಯೂ ಮೂಲಭೂತವಾದಿಗಳು ಬೆಳೆಯಲು ಕಾರಣವಾದೀತು. ಹೀಗಾಗಿ ಎಲ್ಲ ಪಕ್ಷಗಳೂ ಇದನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಬೇಕಾದ ಅಗತ್ಯ ಇದೆ.