Daily Archives: August 24, 2012

ತೆಲಂಗಾಣ ನೆಲದ ನೆನಪುಗಳು


– ಡಾ.ಎನ್.ಜಗದೀಶ್ ಕೊಪ್ಪ


ನಕ್ಸಲ್ ಹೋರಾಟದ ಇತಿಹಾಸ ದಾಖಲಿಸುವ ನಿಟ್ಟಿನಲ್ಲಿ ಕಳೆದ ಜನವರಿಯಿಂದ ಹಲವು ರಾಜ್ಯಗಳನ್ನು ಸುತ್ತುತ್ತಿದ್ದೇನೆ. ನಕ್ಸಲ್ ಹೋರಾಟದ ಎರಡನೇ ಹಂತದ ಇತಿಹಾಸದಲ್ಲಿ ಅಂದರೆ, ಆಂಧ್ರದ ತೆಲಂಗಾಣ ಪ್ರಾಂತ್ಯದಲ್ಲಿ 1980ರ ದಶಕದಲ್ಲಿ ಆರಂಭಗೊಂಡ ಪ್ರಜಾಸಮರಂ ಅಥವಾ ಪೀಪಲ್ಸ್ ವಾರ್ ಗ್ರೂಪ್ ಎಂದು ಕರೆಸಿಕೊಳ್ಳುವ ನಕ್ಸಲಿಯ ಹೋರಾಟಕ್ಕೆ ಅತ್ಯಂತ ಮಹತ್ವವಿದೆ. ಇಂದು ದೇಶಾದ್ಯಂತ ನಡೆಯುತ್ತಿರುವ ನಕ್ಸಲಿಯರ ಹೋರಾಟಕ್ಕೆ ಮೂಲ ತಂತ್ರಗಳನ್ನು ಕಲಿಸಿಕೊಟ್ಟಿದ್ದು ಈ ಆಂಧ್ರದ ಕೊಂಡಪಲ್ಲಿ ಸೀತಾರಾಮಯ್ಯ ನೇತೃತ್ವದ ಪ್ರಜಾಸಮರಂ ತಂಡ.

ಇದರ ಇತಿಹಾಸ ಬರೆಯುವ ಮುನ್ನ ಆಂಧ್ರದ ಒಂದು ನೂರುವರ್ಷದ ರಾಜಕೀಯ ಮತ್ತು ಸಾಮಾಜಿಕ ಇತಿಹಾಸವನ್ನು ಕೆದುಕುತ್ತಾ, ತೆಲಂಗಾಣ ಪ್ರಾಂತ್ಯಕ್ಕೆ ಹೋದ ನನಗೆ ಹಲವಾರು ಮಹತ್ವದ ವಿಷಯಗಳು ದೊರೆತವು.

1925ರ ದಶಕದಲ್ಲಿ ಭಾರತಕ್ಕೆ ಬಂದ ಎಡಪಂಥೀಯ ಸಿದ್ಧಾಂತ (ಕಮ್ಯೂನಿಷ್ಟ್) 1926ರಲ್ಲಿ ಆಂಧ್ರದ ತೆಲಂಗಾಣ ಪ್ರಾಂತ್ಯದಲ್ಲಿ ಆಂಧ್ರ ಪತ್ರಿಕೆ ಮತ್ತು ವಿಶಾಲಾಂಧ್ರ ಎಂಬ ಕಮ್ಯೂನಿಷ್ಟ್ ಮುಖವಾಣಿಯಾದ ಪತ್ರಿಕೆಯಿಂದ ಅಲ್ಲಿನ ಜನರಲ್ಲಿ ಬೇರೂರಿದೆ. ಆಂಧ್ರ ಪತ್ರಿಕೆ 1922 ರಿಂದ ಗಾಂಧೀಜಿಯ ಹೋರಾಟಗಳ ಜೊತೆ ಜೊತೆಗೆ ಎಡಪಂಥೀಯ ಚಿಂತನೆಗಳನ್ನು ಜನತೆ ಬಳಿ ಕೊಂಡೊಯ್ದಿದ್ದು ನಿಜಕ್ಕೂ ಗಮನಾರ್ಹ ಸಂಗತಿ. ಗೋದಾವರಿ ಆಚೆಗಿನ ಆ ಪ್ರದೇಶದ ಅಂದಿನ ದಿನಗಳಲ್ಲಿ ಸುಸಂಸ್ಕೃತರು, ವಿದ್ಯಾವಂತರೆಂದರೆ, ಬಹುತೇಕ ಬ್ರಾಹ್ಮಣರು ಮಾತ್ರ. ಅತಿ ಹೆಚ್ಚು ಬುಡಕಟ್ಟು ಜನಾಂಗಗಳನ್ನು ಹೊಂದಿರುವ ಈ ಪ್ರದೇಶದಲ್ಲಿ ಶೂದ್ರರಿಗೆ ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಶಿಕ್ಷಣ ಸಿಕ್ಕಿತು. ಹಾಗಾಗಿ ಸ್ವಾತಂತ್ರ ಪೂರ್ವದ ಹೋರಾಟಗಾರರು, ಕ್ರಾಂತಿವೀರರು ಎಲ್ಲರೂ ಬಹುತೇಖ ಮೇಲ್ಜಾತಿಯಿಂದ ಬಂದವರಾಗಿದ್ದಾರೆ. ನಿಜಕ್ಕೂ ಆಶ್ಚರ್ಯವಾಗುವುದು, ಜಾತೀಯತೆ, ಶ್ರೇಣಿಕೃತ ಸಮಾಜದ ವ್ಯವಸ್ಥೆ ಇದ್ದ ಆದಿನಗಳಲ್ಲಿ ಅಗ್ರಹಾರ ಎನಿಸಿಕೊಂಡಿದ್ದ, ವಿಜಯವಾಡ ಮತ್ತು ರಾಜಮಂಡ್ರಿ ಪಟ್ಟಣದ ಬ್ರಾಹ್ಮಣರ ವಾಸಸ್ಥಳಗಳು ಎಲ್ಲಾ ಜಾತಿಗೆ ತೆರೆದುಕೊಂಡಿದ್ದವು. ಎಡಪಂಥೀಯ ಸಿದ್ಧಾಂತ ಅವರ ಮನಸ್ಸುಗಳನ್ನು ಎಲ್ಲಾ ವಿಧವಾದ ಕಂದಾಚಾರಗಳಿಂದ ಮುಕ್ತಗೊಳಿಸಿದ್ದವು. ಆ ಕಾಲದಲ್ಲಿ ಬಿಜೆವಾಡ ಎಂದು ಕರೆಸಿಕೊಳ್ಳುತಿದ್ದ ವಿಜಯವಾಡದಲ್ಲಿ ಅಪಾರ ಸಂಖ್ಯೆಯಲ್ಲಿ ಗಾಂಧಿ ಅಭಿಮಾನಿಗಳು ಇದ್ದರು. ಹಾಗಾಗಿ 1936ರಲ್ಲಿ ಗಾಂಧಿ ಇಲ್ಲಿಗೆ ಭೇಟಿ ನೀಡಿದ್ದರು.

ತೆಲಂಗಾಣ ಪ್ರಾಂತ್ಯದ ಬಹುತೇಕ ಹಳ್ಳಿಗಳು ಸಿದ್ಧ ಮಾದರಿಯಲ್ಲಿ ರೂಪುಗೊಂಡಿವೆ. ಅಂದರೆ, ದಕ್ಷಿಣದ ಆಗ್ನೇಯ ದಿಕ್ಕಿಗೆ ಮಾದಿಗರ (ಹರಿಜನ) ಕೇರಿಗಳು, ನಂತರ ಶೂದ್ರರ ಕೇರಿಗಳು, ಆನಂತರ ಉತ್ತರ ದಿಕ್ಕಿನಲ್ಲಿ ಬ್ರಾಹ್ಮಣರ ಅಗ್ರಹಾರಗಳು. ಇದರ ಇತಿಹಾಸ ಕೆದಕಿದಾಗ ತಿಳಿದು ಬಂದ ಅಂಶವೆಂದರೆ, ವಾಸ್ತು ಪ್ರಕಾರ ಆಗ್ನೇಯ  ಮೂಲೆಯಿಂದ ಯಾವುದೇ ಗಾಳಿ ಬೀಸುವುದಿಲ್ಲ. ಆ ಕಾರಣಕ್ಕಾಗಿ ಇವತ್ತಿಗೂ ಮನೆ ನಿರ್ಮಿಸುವಾಗ ವಾಸ್ತು ಶಾಸ್ತ್ರದಲ್ಲಿ ಅಡುಗೆ ಮನೆ ಆಗ್ನೇಯ  ದಿಕ್ಕಿನಲ್ಲಿರುವಂತೆ ಸೂಚಿಸುತ್ತಾರೆ. ಅಡುಗೆ ಒಲೆಗೆ ಬೀಸುವ ಗಾಳಿ ಅಡ್ಡಿಯಾಗಬಾರದೆಂಬುದು ವಾಸ್ತು ಶಾಸ್ತ್ರದ ನಿಯಮ. ಆದರೆ, ಇಲ್ಲಿ ಸತ್ತ ಪ್ರಾಣಿಗಳನ್ನು ತಿನ್ನುವ ಮತ್ತು ಸದಾ ಕೊಳಕಾಗಿರುವ ಹರಿಜನರಿಂದ ಯಾವುದೇ ಸೋಂಕು ಹರಡಬಾರದೆಂದು ಈ ರೀತಿ ಹಳ್ಳಿಗಳು ರಚನೆಯಾಗಿವೆಯಂತೆ.  ಇದಕ್ಕಿಂತ ಇನ್ನೊಂದು ಕುತೂಹಲದ ಸಂಗತಿ ನನ್ನ ಗಮನಕ್ಕೆ ಬಂದಿತು. ಸ್ವಾತಂತ್ರ್ಯ ಪೂರ್ವದಲ್ಲಿ ಅಲ್ಲಿನ ಬ್ರಾಹ್ಮಣರು ಮಧ್ಯಾಹ್ನ ಊಟದ ಸಮಯದಲ್ಲಿ ತಣ್ಣೀರು ಸ್ನಾನ ಮಾಡಿ ಪುಟ್ಟಗೋಚಿ ಎಂಬ, ಅಂದರೆ ಗುಪ್ತಾಂಗವನ್ನು ಮುಚ್ಚುವ ಸಣ್ಣ ಬಟ್ಟೆಯ ತುಂಡೊಂದನ್ನು ತಮ್ಮ ಉಡುದಾರಕ್ಕೆ ಸಿಕ್ಕಿಸಿಕೊಂಡು ಕುಳಿತು ಊಟ ಮಾಡುತ್ತಿದ್ದರಂತೆ. ಇದಕ್ಕೆ ಕಾರಣ ಅಲ್ಲಿನ ಬಿರು ಬಿಸಿಲಿನಲ್ಲಿ ಬಟ್ಟೆ ಧರಿಸಿ ನೆಮ್ಮದಿಯಾಗಿ ಊಟ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆ. ಈ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ, ಆದರೆ, ಸೊಂಟಕ್ಕೆ ಪಂಚೆ ಧರಿಸಿ ಬರೀ ಮೈಯಲ್ಲಿ ಕುಳಿತು ಊಟ ಮಾಡುತ್ತಾರೆ.

ನನ್ನ ಮಂಡ್ಯ ಜಿಲ್ಲೆಯಲ್ಲಿ ನಾನು ಬಾಲ್ಯದಿಂದಲೂ ಕೇಳಿದ ಒಂದು ಬೈಗುಳಕ್ಕೆ ನನಗೆ ಇಲ್ಲಿ ಆಧಾರ ಸಿಕ್ಕಿತು. ಯಾವುದಾದರು ವ್ಯಕ್ತಿ ತನಗೆ ಸರಿ ಸಮಾನನಲ್ಲ ಎಂದು ಅನಿಸಿದರೆ, ಪುಟಗೋಸಿನನ್ನಮಗ ಎಂಬ ಬೈಗುಳ ಚಾಲ್ತಿಯಲ್ಲಿದೆ. ತೆಲುಗಿನ ಪುಟ್ಟಗೋಚಿ ಕನ್ನಡದಲ್ಲಿ ಪುಟಗೋಸಿಯಾಗಿದೆ.

ಇವೆಲ್ಲಕ್ಕಿಂತ ಹೆಚ್ಚಾಗಿ 1930ರ ದಶಕದಲ್ಲಿ ಮಹಿಳೆಯರ ಶಿಕ್ಷಣ ಕುರಿತಂತೆ ರಾಜಮಂಡ್ರಿಯ ಒಂದು ಕುಟುಂಬದಲ್ಲಿನ ಮಾವ ಮತ್ತು ಸೊಸೆಯ ನಡುವಿನ ಹೋರಾಟ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ. ಆ ಕಾಲದಲ್ಲಿ ರಾಜಮಂಡ್ರಿ ಪಟ್ಟಣದ ಪ್ರಸಿದ್ಧ ವಕೀಲರಾಗಿದ್ದ ರೊಬ್ಬ ಕಮ್ಮೆಶ್ವರ ರಾವ್ ಎಂಬುವರು ತನ್ನ ಮಗನಿಗೆ ಏಳನೇ ತರಗತಿ ಓದಿದ್ದ ಸೀತಾರಾಮಮ್ಮ ಎಂಬ ಹೆಣ್ಣು ಮಗಳನ್ನು ವಿವಾಹ ಮಾಡಿ ಸೊಸೆಯನ್ನಾಗಿ ಮಾಡಿಕೊಳ್ಳುತ್ತಾರೆ. ಆಕೆ ಮುಂದಿನ ವಿದ್ಯಾಭ್ಯಾಸ ಮುಂದುವರಿಸಲು ಇಚ್ಚಿಸಿದಾಗ ತಡೆಯೊಡ್ಡುತ್ತಾರೆ. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ಆಗಿನ ಬ್ರಿಟಿಷ್ ನ್ಯಾಯಾಧೀಶನೊಬ್ಬನಿಂದ ತೀರ್ಪು ಸೊಸೆಯ ಪರವಾಗಿ ಹೊರಬೀಳುತ್ತದೆ.

ಸೀತಾರಾಮಮ್ಮ ವಿದ್ಯಾಭ್ಯಾಸಕ್ಕಾಗಿ ಪತಿ ಮತ್ತು ಮಾವನನ್ನು ತೊರೆದು, ಆಗಿನ ಮೆಟ್ರಿಕ್‌ವರೆಗೆ ಶಿಕ್ಷಣ ಮುಂದುವರಿಸಿ, ನಂತರ ಶಿಕ್ಷಣ ಇಲಾಖೆಯಲ್ಲಿ ಶಾಲಾ ಇನ್ಸ್‌ಪೆಕ್ಟರ್ ಆಗಿ ನೇಮಕವಾಗುತ್ತಾಳೆ. ತನಗೆ ಬಂದ ಹೋರಾಟದ ದುಃಸ್ಥಿತಿ ಭವಿಷ್ಯದ ಹೆಣ್ಣು ಮಕ್ಕಳಿಗೆ ಬರಬಾರದೆಂದು ತೀರ್ಮಾನಿಸಿ, ತನ್ನ ಆದಾಯವನ್ನೆಲ್ಲಾ ವಿನಿಯೋಗಿಸಿ, ವಿಜಯವಾಡದಲ್ಲಿ ಹೆಣ್ಣು ಮಕ್ಕಳ ಶಾಲೆಯೊಂದನ್ನು ತೆರೆಯುತ್ತಾಳೆ. ಸೀತಾರಾಮಮ್ಮ ತೆರೆದ ಶಾಲೆ ಇಂದು ಬೃಹತ್ ಶಿಕ್ಷಣ ಸಂಸ್ಥೆಯಾಗಿ ಬೆಳೆದು ನಿಂತಿದ್ದು,  ವಿಜಯವಾಡ ನಗರದಲ್ಲಿ ಹೆಣ್ಣು ಮಕ್ಕಳಿಗೆ ಪದವಿಯವರೆಗೂ ಸರ್ಕಾರಿ ಶುಲ್ಕದ ದರದಲ್ಲಿ ಶಿಕ್ಷಣವನ್ನು ಧಾರೆಯೆರೆಯುತ್ತಿದೆ. ಆಂಧ್ರದ ಒಂದು ಶತಮಾನದ ರಾಜಕೀಯ, ಸಾಮಾಜಿಕ, ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ಇಂತಹ ಅನೇಕ ಅಪರೂಪದ  ಘಟನೆಗಳು ನಮ್ಮ ಗಮನ ಸೆಳೆಯುತ್ತವೆ. ಇವೆಲ್ಲವನ್ನು ನಕ್ಸಲ್ ಹೋರಾಟದ ಇತಿಹಾಸ ಕುರಿತ ಕೃತಿಯಲ್ಲಿ ದಾಖಲಿಸುತ್ತಿದ್ದೇನೆ.