ರಾಜಕೀಯ ಕ್ಷೇತ್ರದ ಸುಧಾರಣೆಗೆ ಕೆಲವು ಆಲೋಚನೆಗಳು

-ಆನಂದ ಪ್ರಸಾದ್

ಪ್ರಜಾಪ್ರಭುತ್ವ ವ್ಯವಸ್ಥೆ ಭಾರತದಲ್ಲಿ ಬಹುತೇಕ ವಂಶವಾಹಿಪ್ರಭುತ್ವ ವ್ಯವಸ್ಥೆಯಾಗಿ ಮಾರ್ಪಾಡಾಗಿದ್ದು ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಾಗಿ ಉಳಿಸಿಕೊಳ್ಳಬೇಕಾದರೆ ಕೆಲವೊಂದು ತಿದ್ದುಪಡಿಗಳನ್ನು ಮಾಡಬೇಕಾಗುತ್ತದೆ. ಈಗ ಭಾರತದ ಬಹುತೇಕ ಪಕ್ಷಗಳು ಒಬ್ಬ ವ್ಯಕ್ತಿಯ ಅಥವಾ ಒಂದು ಕುಟುಂಬದ ಹಿಡಿತಕ್ಕೆ ಸಿಲುಕಿವೆ. ಹೀಗಾಗಿ ಎಷ್ಟೇ ಚುನಾವಣೆಗಳು ನಡೆದರೂ ಸರ್ಕಾರದ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಒಂದು ಕುಟುಂಬದ ವ್ಯಕ್ತಿಯೇ, ಆತ ಸರ್ಕಾರದ ಮುಖ್ಯಸ್ಥನಾಗಿರಲಿ ಇಲ್ಲದಿರಲಿ, ಆಗಿರುವುದು ಕಂಡು ಬರುತ್ತದೆ. ಇದನ್ನು ತಪ್ಪಿಸಬೇಕಾದರೆ ಒಂದು ರಾಜಕೀಯ ಪಕ್ಷದ ಅಧ್ಯಕ್ಷ ಹುದ್ಧೆಯನ್ನು ಒಂದು ಅವಧಿಗಿಂತ ಹೆಚ್ಚಾಗಿ ಒಬ್ಬನೇ ವಹಿಸುವಂತಿಲ್ಲ ಎಂಬ ತಿದ್ದುಪಡಿ ಮಾಡಬೇಕು. ಒಮ್ಮೆ ಅಧ್ಯಕ್ಷ ಸ್ಥಾನ ಪಡೆದವರು ಮತ್ತೆ ಎರಡನೇ ಬಾರಿ ಪಕ್ಷದ ಅಧ್ಯಕ್ಷ ಹುದ್ಧೆಯ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನಿಯಮವನ್ನು ಕಡ್ಡಾಯ ಮಾಡಬೇಕು. ಹೀಗೆ ಮಾಡಿದರೆ ವಂಶವಾಹೀ ಒಂದೇ ಕುಟುಂಬದವರು ಅಥವಾ ಒಬ್ಬನೇ ವ್ಯಕ್ತಿ ಆಜೀವನಪರ್ಯಂತ ಒಂದು ರಾಜಕೀಯ ಪಕ್ಷದ ಅಧ್ಯಕ್ಷನಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಮಾಡುವುದನ್ನು ತಡೆಯಲು ಸಾಧ್ಯವಿದೆ. ಎಲ್ಲ ರಾಜಕೀಯ ಪಕ್ಷಗಳಿಗೂ ಈ ನಿಯಮವನ್ನು ಚುನಾವಣಾ ಆಯೋಗ ಕಡ್ಡಾಯ ಮಾಡಬೇಕು ಮತ್ತು ಇದರಂತೆ ನಡೆದುಕೊಳ್ಳದ ರಾಜಕೀಯ ಪಕ್ಷದ ಮಾನ್ಯತೆಯನ್ನು ರದ್ದುಪಡಿಸಬೇಕು. ಇಂಥ ಒಂದು ನಿಯಮವನ್ನು ತರುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಬೇಕಾದ ಅಗತ್ಯ ಇದೆ. ಎಲ್ಲ ರಾಜಕೀಯ ಪಕ್ಷಗಳೂ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪಾಲಿಸುವುದು ಕಡ್ಡಾಯ ಆಗಬೇಕು. ಐದು ವರ್ಷಗಳಿಗೊಮ್ಮೆ ರಾಜಕೀಯ ಪಕ್ಷಗಳು ಚುನಾವಣೆಯ ಮೂಲಕ ತಮ್ಮ ಪಕ್ಷದ ಅಧ್ಯಕ್ಷರನ್ನು ಆರಿಸುವುದು ಕಡ್ಡಾಯವಾಗಬೇಕು. ಪಕ್ಷದ ಅಧ್ಯಕ್ಷರು ತಮ್ಮ ಸರ್ಕಾರದ ಪ್ರಧಾನ ಮಂತ್ರಿಯನ್ನು ಅಥವಾ ಮುಖ್ಯಮಂತ್ರಿಯನ್ನು ಪರೋಕ್ಷವಾಗಿ ನಿಯಂತ್ರಿಸಲು ಅವಕಾಶವನ್ನು ರಾಜಕೀಯ ಪಕ್ಷ ನೀಡದಂತೆ ಅದರ ಸಂವಿಧಾನ ಇರಬೇಕು. ಇಂಥ ನಿಯಂತ್ರಣ ಸಂವಿಧಾನಬಾಹಿರ ಶಕ್ತಿಗಳಿಗೆ ಅವಕಾಶ ಮಾಡಿಕೊಡುವುದರಿಂದ ಇಂಥ ನಿಯಂತ್ರಣ ಸಾಧ್ಯವಾಗದಂತೆ ಮಾಡಬೇಕು.

ಸಂಸತ್ತಿಗೆ ಹಾಗೂ ರಾಜ್ಯಗಳ ಶಾಸನಸಭೆಗಳ ಚುನಾವಣೆಗಳಿಗೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಜಾತಿ ನೋಡಿ ಹಾಗೂ ಹಣ ಒದಗಿಸಬಲ್ಲ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಚುನಾವಣೆ ಜಾತ್ಯಾಧಾರಿತವಾಗಿ ನಡೆಯುವಂತೆ ಮಾಡಿ ಭ್ರಷ್ಟರು ಜಾತಿಯ ಬಲದಿಂದ ಮತ್ತೆ ಮತ್ತೆ ಚುನಾಯಿತರಾಗುವಂತೆ ಮಾಡುತ್ತದೆ ಹಾಗೂ ಜಾತೀಯತೆ ಇಡೀ ಸರ್ಕಾರವನ್ನು ನಿಯಂತ್ರಿಸುವಂತೆ ಆಗುತ್ತದೆ. ಇದನ್ನು ತಪ್ಪಿಸಲು ಹಾಗೂ ಯೋಗ್ಯ ವ್ಯಕ್ತಿ ಅಭ್ಯರ್ಥಿಯಾಗುವುದನ್ನು ಖಚಿತಪಡಿಸಲು ಕೆಲವೊಂದು ಅರ್ಹತೆಗಳನ್ನು ಚುನಾವಣಾ ಆಯೋಗ ನಿಗದಿಪಡಿಸಬೇಕಾಗಿದೆ. ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಒಂದು ಪ್ರವೇಶ ಪರೀಕ್ಷೆಯನ್ನು ಏರ್ಪಡಿಸಿ ಅವರ ಜ್ಞಾನವನ್ನು ಅಳೆಯುವ ಕೆಲಸ ಮಾಡಿದರೆ ಹಾಗೂ ನಿರ್ದಿಷ್ಟ ಅಂಕಗಳನ್ನು ಗಳಿಸುವ ಅಭ್ಯರ್ಥಿಗಳು ಮಾತ್ರವೇ ಚುನಾವಣೆಗೆ ಸ್ಪರ್ಧಿಸುವಂತೆ ನಿಯಮ ತಂದರೆ ಅಯೋಗ್ಯರು ಚುನಾವಣೆಗಳಿಗೆ ಸ್ಪರ್ಧಿಸುವುದನ್ನು ತಪ್ಪಿಸಬಹುದು.

ಪ್ರವೇಶ ಪರೀಕ್ಷೆಯಲ್ಲಿ 80% ಅಂಕಗಳಿಸಿದವರು ಮಾತ್ರವೇ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ನಿಯಮವನ್ನು ಜಾರಿಗೆ ತರಬೇಕು. ಮೀಸಲು ಸ್ಥಾನಗಳಲ್ಲಿ ಈ ಮಿತಿಯನ್ನು 70% ನಿಗದಿ ಪಡಿಸಬಹುದು. ಪ್ರವೇಶ ಪರೀಕ್ಷೆಯನ್ನು ಚುನಾವಣೆ ನಡೆಯುವ ಮೊದಲು ಚುನಾವಣಾ ಆಯೋಗವೇ ನಡೆಸುವಂತೆ ಆಗಬೇಕು. ಅಭ್ಯರ್ಥಿಗಳ ಸಾಮಾನ್ಯ ಜ್ಞಾನ, ಸಂವಿಧಾನದ ಬಗೆಗಿನ ಜ್ಞಾನ, ರಾಜನೀತಿಯ ಬಗೆಗಿನ ಜ್ಞಾನ, ಭೌಗೋಳಿಕ ಜ್ಞಾನ, ಪರಿಸರ ಜ್ಞಾನ, ವಿಜ್ಞಾನ, ಕಲೆ, ಸಾಹಿತ್ಯ, ಆಡಳಿತದ ಬಗೆಗಿನ ಜ್ಞಾನ ಇತ್ಯಾದಿಗಳ ಬಗ್ಗೆ ಬಹು ಆಯ್ಕೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಪರೀಕ್ಷೆ ನಡೆಸಬೇಕು. ಈ ಪರೀಕ್ಷೆಯಲ್ಲಿ 80% ಕ್ಕಿಂತ ಹೆಚ್ಚು (ಸಾಮಾನ್ಯ ವರ್ಗ), 70% ಕ್ಕಿಂತ ಹೆಚ್ಚು (ಮೀಸಲು ಕ್ಷೇತ್ರ) ಅಂಕ ಗಳಿಸಿದವರು ಮಾತ್ರವೇ ಚುನಾವಣೆಗೆ ಸ್ಪರ್ಧಿಸುವ ಅರ್ಹತೆ ಪಡೆಯುವಂತೆ ಆಗಬೇಕು. ವೈದ್ಯಕೀಯ, ಇಂಜಿನಿಯರಿಂಗ್, ಐ.ಐ.ಟಿ., ಐ.ಎ.ಎಸ್., ಕೆ.ಎ.ಎಸ್. ಇತ್ಯಾದಿ ಪರೀಕ್ಷೆ ನಡೆಸಿ ಯೋಗ್ಯ ಹಾಗೂ ಪ್ರತಿಭಾವಂತರನ್ನು ಆರಿಸುವಂತೆ ಚುನಾವಣೆಗೆ ಯೋಗ್ಯ ಅಭ್ಯರ್ಥಿಗಳನ್ನು ಆರಿಸಲು ಇಂಥ ಒಂದು ಮಾನದಂಡವನ್ನು ಚುನಾವಣಾ ಆಯೋಗ ಜಾರಿಗೆ ತಂದರೆ ನಮ್ಮ ಸಂಸತ್ತಿಗೆ, ಶಾಸನಸಭೆಗಳಿಗೆ ಹೆಚ್ಚು ಪ್ರಜ್ಞಾವಂತರನ್ನು, ಚಿಂತನಶೀಲರನ್ನು, ನಿಸ್ವಾರ್ಥಿಗಳನ್ನು ಕಳುಹಿಸಲು ಸಾಧ್ಯವಾಗಬಹುದು. ರಾಜಕೀಯ ಪಕ್ಷಗಳಿಂದ ಚುನಾವಣೆಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಇಂಥ ಒಂದು ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಬರುವಂತಾದರೆ ಅವರು ಹೆಚ್ಚು ಯೋಗ್ಯರಾಗಿರುವ ಸಾಧ್ಯತೆ ಇದೆ. ಇಂಥ ಯೋಗ್ಯರ ನಡುವೆ ಚುನಾವಣೆಯಲ್ಲಿ ಸ್ಪರ್ಧೆ ಏರ್ಪಟ್ಟು ಅವರಲ್ಲಿ ಜನ ಯಾರನ್ನು ಆರಿಸುತ್ತಾರೋ ಆಗ ಶಾಸನಸಭೆಗಳು ಹೆಚ್ಚು ಜವಾಬ್ದಾರಿಯುತ ಹಾಗೂ ಸಂವೇದನಾಶೀಲರಿಂದ ತುಂಬಿ ಚೆನ್ನಾಗಿ ಕಾರ್ಯನಿರ್ವಹಿಸಲು ಸಾಧ್ಯ. ಇಂಥ ಪರೀಕ್ಷೆಗಳಲ್ಲಿ ಅರ್ಹತೆ ಪಡೆದು ಚುನಾವಣೆಗಳಲ್ಲಿ ಸ್ಪರ್ಧಿಸಿ ಆಯ್ಕೆಯಾದ ಶಾಸಕರು ಹಾಗೂ ಸಂಸದರು ಸಮರ್ಪಕವಾಗಿ ಹಾಗೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸದೆ ಇದ್ದರೆ ಇದಕ್ಕಾಗಿ ನಡೆಸುವ ಅರ್ಹತಾ ಪರೀಕ್ಷೆಯನ್ನು ಇನ್ನಷ್ಟು ಕಠಿಣಗೊಳಿಸಿ ಹೆಚ್ಚು ಮೇಧಾವಿಗಳು, ಚಿಂತಕರು, ಸಂವೇದನಾಶೀಲರು ಮಾತ್ರವೇ ಚುನಾವಣೆಗೆ ಸ್ಪರ್ಧಿಸುವಂತೆ ಆಗಬೇಕು.

ಕಾರ್ಯಾಂಗದಲ್ಲಿ ಪ್ರಮುಖ ಹುದ್ಧೆಗಳನ್ನು ನಿರ್ವಹಿಸಲು ಅತ್ಯಂತ ಪ್ರತಿಭಾವಂತರನ್ನು ಪ್ರವೇಶಪರೀಕ್ಷೆಗಳ ಮೂಲಕ (ಐ.ಎ. ಎಸ್., ಐ.ಪಿ.ಎಸ್., ಐ.ಎಫ್.ಎಸ್., ಕೆ.ಎ.ಎಸ್. ಇತ್ಯಾದಿ) ಆಯ್ಕೆ ಮಾಡಿ ಅವರಿಗೆ ನಿರ್ದೇಶನ ನೀಡಲು ಕಡಿಮೆ ಯೋಗ್ಯತೆಯುಳ್ಳ, ಸಂವೇದನಾರಹಿತ, ಭ್ರಷ್ಟ, ವ್ಯಕ್ತಿಗಳನ್ನು ಚುನಾಯಿಸುವ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೇ ಗಂಭೀರ ದೋಷ ಅಡಗಿದೆ. ಇದು ಹೇಗಿದೆ ಎಂದರೆ ಕಡಿಮೆ ಜ್ಞಾನ ಹೊಂದಿರುವ ಒಬ್ಬ ಗುಮಾಸ್ತನನ್ನು ಒಂದು ಸಂಸ್ಥೆಯ ಮುಖ್ಯಸ್ಥನನ್ನು ನಿಯಂತ್ರಿಸಲು ಹಾಗೂ ನಿರ್ದೇಶಿಸಲು ಬಿಟ್ಟರೆ ಹೇಗಿರುತ್ತದೋ ಹಾಗೆ ಆಗಿದೆ. ಇದರಿಂದಾಗಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸದಂತೆ ಆಗಿದೆ. ಚುನಾವಣೆಗೆ ಸ್ಪರ್ಧಿಸುವ ಯೋಗ್ಯ ಅಭ್ಯರ್ಥಿಗಳನ್ನು ಪ್ರವೇಶ ಪರೀಕ್ಷೆಯ ಮೂಲಕ ಆರಿಸುವ ತಿದ್ದುಪಡಿ ತರಲು ಹಾಗೂ ರಾಜಕೀಯ ಪಕ್ಷಗಳಲ್ಲಿ ವಂಶವಾಹೀ ವ್ಯವಸ್ಥೆಯನ್ನು ಹೋಗಲಾಡಿಸುವ ನಿಯಮ ತರಲು ಈಗಿರುವ ಕಾನೂನುಗಳಲ್ಲಿ ಅವಕಾಶ ಇಲ್ಲವೆಂದಾದರೆ ಸೂಕ್ತ ಕಾನೂನು ತಿದ್ದುಪಡಿ ಮಾಡಲು ಒತ್ತಾಯ ಪ್ರಜೆಗಳಿಂದ ರೂಪುಗೊಳ್ಳಬೇಕಾದ ಅಗತ್ಯ ಇದೆ.

ಕಾರ್ಯಾಂಗದ ವಿವಿಧ ಹುದ್ಧೆಗಳಿಗೆ ಆಯ್ಕೆ ಮಾಡುವ ಕೆ.ಎ.ಎಸ್., ಐ.ಎ.ಎಸ್., ಐ.ಪಿ.ಎಸ್. ಇತ್ಯಾದಿ ಪರೀಕ್ಷೆಗಳಲ್ಲಿ ಜಾತಿ ನೋಡಿ ಆರಿಸುವ ಪದ್ಧತಿ ಇಲ್ಲದಿರುವಾಗ ಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಆರಿಸುವಾಗ ಜಾತ್ಯಾಧಾರಿತವಾಗಿ ನಿರ್ಧರಿಸುವುದು ತಪ್ಪಬೇಕು. ಇದಕ್ಕಾಗಿ ಒಂದು ಸಂಸದ ಅಥವಾ ಶಾಸಕ ಮತಕ್ಷೇತ್ರದಲ್ಲಿ ಅತಿ ಹೆಚ್ಚು ಜನರಿರುವ ಜಾತಿಯ ಅಭ್ಯರ್ಥಿಯನ್ನು ಯಾವ ರಾಜಕೀಯ ಪಕ್ಷಗಳೂ ನಿಲ್ಲಿಸಬಾರದು ಎಂಬ ಒಂದು ನಿಯಮವನ್ನು ಚುನಾವಣಾ ಆಯೋಗ ತರಬೇಕು. ಉದಾಹರಣೆಗೆ ಕೆಲವು ಮತಕ್ಷೇತ್ರಗಳಲ್ಲಿ ಲಿಂಗಾಯತರು, ಇನ್ನು ಕೆಲವು ಕ್ಷೇತ್ರಗಳಲ್ಲಿ ಒಕ್ಕಲಿಗರು ಹೀಗೆ ಒಂದೊಂದು ಜಾತಿಯ ಜನ ಅಧಿಕ ಸಂಖ್ಯೆಯಲ್ಲಿರುವಾಗ ಇದನ್ನು ಲೆಕ್ಕ ಹಾಕಿಯೇ ಅಂಥ  ಕ್ಷೇತ್ರಗಳಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಅಭ್ಯರ್ಥಿಗಳನ್ನು ಅಭ್ಯರ್ಥಿಯಾಗಿ ನಿಲ್ಲಿಸುವ ಪದ್ಧತಿಯನ್ನು ಚುನಾವಣಾ ಆಯೋಗ ನಿಯಮದ ಮೂಲಕ ನಿಲ್ಲಿಸುವಂತೆ ಮಾಡಬೇಕು. ಹೀಗೆ ಮಾಡಿದರೆ ಜಾತಿ ನೋಡಿ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸುವ ರಾಜಕೀಯ ಪಕ್ಷಗಳ ಕುಟಿಲ ನೀತಿಯನ್ನು ತಡೆಯಬಹುದು. ಇಂಥ ಒಂದು ನಿಯಮ ಬಂದರೆ ಜಾತಿಯ ಆಧಾರದಲ್ಲಿ ಶಾಸಕರ ಗುಂಪನ್ನು ಕಟ್ಟಿ ರಾಜಕೀಯ ಪಕ್ಷದೊಳಗೆ ಗುಂಪುಗಾರಿಕೆ ಮಾಡುವ ಹುಂಬರನ್ನು ನಿಯಂತ್ರಿಸಲು ಸಾಧ್ಯವಿದೆ ಹಾಗೂ ಪರಮ ಭ್ರಷ್ಟರು, ಊಳಿಗಮಾನ್ಯ ಮನೋಸ್ಥಿತಿಯ ಹಾಗೂ ಹುಂಬ ರಾಜಕಾರಣಿಗಳು ಜಾತಿ ಆಧಾರದಲ್ಲಿ ಮತ್ತೆ ಮತ್ತೆ ರಾಜಕೀಯದಲ್ಲಿ ಮೇಲುಗೈ ಸಾಧಿಸುವುದನ್ನು ತಡೆಯಲು ಸಾಧ್ಯ.

ಚುನಾವಣಾ ಆಯೋಗ ಸುಧಾರಣೆಗಳನ್ನು ತರಲು ಸಾಧ್ಯವಾಗದೆ ಹೋದರೆ ರಾಜಕೀಯ ಕ್ಷೇತ್ರಕ್ಕೆ ಬದಲಾವಣೆ ತರಲು ಹೊಸ ಪಕ್ಷಗಳನ್ನು ಸ್ಥಾಪಿಸುವವರು ಕೆಲವೊಂದು ನಿಯಮಗಳನ್ನು ಹೊಂದುವುದರಿಂದ ತಾವು ಇತರ ಪಕ್ಷಗಳಿಗಿಂತ ಭಿನ್ನ ಎಂದು ತೋರಿಸಲು ಸಾಧ್ಯ. ವಂಶವಾಹೀ ಪ್ರಭುತ್ವ ಬರದಂತೆ ತಡೆಯಲು ಪಕ್ಷದ ಸಂವಿಧಾನ ರೂಪಿಸುವಾಗಲೇ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬದ ವ್ಯಕ್ತಿ ಪಕ್ಷದ ಅಧ್ಯಕ್ಷನಾಗಿ ಒಂದು ಬಾರಿ ಕಾರ್ಯ ನಿರ್ವಹಿಸಿದ್ದರೆ ಪುನಃ ಅವರು ಚುನಾವಣೆಗೆ ಸ್ಪರ್ಧಿಸಲಾಗದಂತೆ ನಿಯಮ ರೂಪಿಸಬಹುದು. ಇಂಥ ಒಂದು ನಿಯಮವನ್ನು ಸ್ವಾತಂತ್ರ್ಯ ದೊರಕಿದಾಗಲೇ ರಾಜಕೀಯ ಪಕ್ಷಗಳು ಸ್ವಯಂ ತಾವಾಗಿಯೇ ರೂಪಿಸಿಕೊಂಡಿದ್ದರೆ ಅಥವಾ ಸಂವಿಧಾನದಲ್ಲೇ ರಾಜಕೀಯ ಪಕ್ಷಗಳ ಸ್ಥಾಪನೆ ಹಾಗೂ ನಿರ್ವಹಣೆ ವಿಷಯದಲ್ಲಿ ಇಂಥ ಸೂತ್ರಗಳನ್ನು ಕಡ್ಡಾಯವಾಗಿ ವಿಧಿಸಿದ್ದರೆ ಇಂದು ಭಾರತ ವಂಶವಾಹೀ ಪ್ರಭುತ್ವಕ್ಕೆ ಒಳಗಾಗುವುದನ್ನು ತಪ್ಪಿಸಬಹುದಾಗಿತ್ತು. ಹೊಸದಾಗಿ ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆ ತರಬೇಕೆನ್ನುವವರು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಆರಿಸುವಾಗ ಕೆಲವೊಂದು ಮಾನದಂಡಗಳನ್ನು ಇಟ್ಟುಕೊಂಡರೆ ಹೆಚ್ಚು ಸಂವೇದನಾಶೀಲ, ಚಿಂತನಶೀಲ, ಪ್ರಜ್ಞಾವಂತ ವ್ಯಕ್ತಿಗಳು ಶಾಸನಸಭೆಗಳಿಗೆ ಅರಿಸಿಬರುವಂತೆ ನೋಡಿಕೊಳ್ಳಲು ಸಾಧ್ಯವಿದೆ. ಉದಾಹರಣೆಗೆ ಹೆಚ್ಚು ತಿಳುವಳಿಕೆ ಉಳ್ಳ ಪ್ರಾಧ್ಯಾಪಕರು, ಸಾಹಿತ್ಯ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ ಸಾಹಿತಿಗಳು, ವಿಜ್ಞಾನ ಸಂಶೋಧನೆ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ ವಿಜ್ಞಾನಿಗಳು ಮೊದಲಾದವರನ್ನು ಅವರ ನಿವೃತ್ತಿಯ ನಂತರ ಚುನಾವಣೆಗೆ ಅಭ್ಯರ್ಥಿಗಳನ್ನಾಗಿ ಮಾಡಿ ಗೆಲ್ಲಿಸಿ ಕಳುಹಿಸುವಂತಾದರೆ ಇವರೆಲ್ಲ ಚಿಂತನಶೀಲರಾಗಿರುವುದರಿಂದ ಭ್ರಷ್ಟಾಚಾರ, ಸ್ವಜನ ಪಕ್ಷಪಾತಕ್ಕೆ ಬಲಿಯಾಗುವ ಸಾಧ್ಯತೆ ಕಡಿಮೆ. ಇದರಿಂದ ಉತ್ತಮ ಸರ್ಕಾರ ರೂಪುಗೊಳ್ಳಲು ಸಾಧ್ಯ. ಕುವೆಂಪು, ಶಿವರಾಮ ಕಾರಂತರಂಥ ಮೇರು ಸಾಹಿತಿಗಳು ಮುಖ್ಯಮಂತ್ರಿಯಾಗುವ ಸಾಧ್ಯತೆ ಇದ್ದರೆ ಮಹತ್ವದ ಜನಪರವಾದ ಬದಲಾವಣೆಗಳನ್ನು ತರಲು ಸಾಧ್ಯ ಹಾಗೂ ಇಂಥವರು ಎಷ್ಟೇ ಉನ್ನತ ಅಧಿಕಾರ, ಪ್ರಸಿದ್ಧಿ ದೊರಕಿದರೂ ಭ್ರಷ್ಟರಾಗುವ ಸಾಧ್ಯತೆ ಇಲ್ಲ. ಕುವೆಂಪು, ಎಚ್. ನರಸಿಂಹಯ್ಯ ಮೊದಲಾದ ಚಿಂತನಶೀಲರು ಮೈಸೂರು ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಕೆಲಸ ಮಾಡಿ ತಮ್ಮ ಅವಧಿಯಲ್ಲಿ ವಿಶ್ವವಿದ್ಯಾನಿಲಯವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಇದಕ್ಕೆ ಅವರಲ್ಲಿ ಇದ್ದ ಚಿಂತನಶೀಲತೆ, ಅಂತರ್ಮುಖಿ ವ್ಯಕ್ತಿತ್ವ, ಕನಸುಗಾರಿಕೆ, ದೂರದೃಷ್ಟಿ ಕಾರಣ. ಇಂಥ ವ್ಯಕ್ತಿತ್ವ ಇರುವವರು ಎಷ್ಟೇ ದೊಡ್ಡ ಅಧಿಕಾರ ದೊರಕಿದರೂ ಭ್ರಷ್ಟರೂ, ಅಹಂಕಾರಿಗಳೂ, ಸ್ವಜನ ಪಕ್ಷಪಾತಿಗಳೂ ಆಗುವುದಿಲ್ಲ. ಹೀಗಾಗಿ ರಾಜಕೀಯ ಪಕ್ಷಗಳಲ್ಲಿ ಇಂಥವರಿಗೆ ಮಹತ್ವದ ಹುದ್ಧೆಯನ್ನು ಕೊಡುವ ಚಿಂತನೆ ಆಗಬೇಕು ಅಥವಾ ಹೊಸ ರಾಜಕೀಯ ವ್ಯವಸ್ಥೆಗಾಗಿ ಶ್ರಮಿಸುವವರು ಈ ಕುರಿತು ಯೋಚಿಸಬೇಕಾಗಿದೆ.

ಬಹಿರ್ಮುಖಿಗಳು, ಮುನ್ನುಗ್ಗಿ ಹೋಗುವ ಸ್ವಭಾವ, ಭಾರೀ ವಾಕ್ಚಾತುರ್ಯವುಳ್ಳವರು ಇಂಥ ವ್ಯಕ್ತಿತ್ವದ ಜನ ಸಂಘಟನೆಯಲ್ಲಿ ಮುಂದು, ಆದರೆ ಇಂಥವರು ಉನ್ನತ ಅಧಿಕಾರ ಸಿಕ್ಕಾಗ ಭ್ರಷ್ಟರಾಗುವ, ಅಹಂಕಾರಿಗಳಾಗುವ ಸಾಧ್ಯತೆ ಹೆಚ್ಚಿರುವ ಕಾರಣ ಇಂಥ ವ್ಯಕ್ತಿತ್ವವುಳ್ಳವರಿಗೆ ಉನ್ನತ ಅಧಿಕಾರ ಸ್ಥಾನವನ್ನು ರಾಜಕೀಯ ಪಕ್ಷದಲ್ಲಿ ನೀಡಲು ಸಾಧ್ಯವಾಗದಂತೆ ನಿಯಮ ರೂಪಿಸಬೇಕು. ಇಂಥವರಿಗೆ ಸಂಘಟನೆಯ ಜವಾಬ್ದಾರಿ ಮಾತ್ರ ನೀಡುವಂತೆ ಆಗಬೇಕು. ಉನ್ನತ ಸಾಧನೆ ಮಾಡಿದ ವಿಜ್ಞಾನಿಗಳು, ಕವಿಗಳು, ಸಾಹಿತಿಗಳು ಇಂಥ ವ್ಯಕ್ತಿಗಳನ್ನು ಪ್ರಧಾನಮಂತ್ರಿ, ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡುವ ಒಂದು ನಿಯಮವನ್ನು ಹೊಸ ರಾಜಕೀಯ ಪಕ್ಷಗಳು ರೂಪಿಸಬಹುದು. ಹೀಗೆ ಮಾಡಿದರೆ ಉನ್ನತ ಅಧಿಕಾರ ಸ್ಥಾನವಾದ ಪ್ರಧಾನಮಂತ್ರಿ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಚ್ಚಾಟ, ಪೈಪೋಟಿ ಉಂಟಾಗುವುದನ್ನು ತಡೆಯಬಹುದು. ಭಾರತದಲ್ಲಿ ಸ್ವಾತಂತ್ರ್ಯಾನಂತರ ನಾಯಕತ್ವದ ಪೈಪೋಟಿ, ಕಚ್ಚಾಟದಿಂದಾಗಿಯೇ ಪರ್ಯಾಯ ರಾಜಕೀಯ ವ್ಯವಸ್ಥೆಗಳನ್ನು ರೂಪಿಸುವ ಪ್ರಯತ್ನಗಳು ವಿಫಲವಾಗುತ್ತ ಬಂದಿವೆ. ಒಮ್ಮೆ ಅಧಿಕಾರಕ್ಕೆ ಬಂದ ಕೂಡಲೇ ಪಕ್ಷದಲ್ಲಿರುವ ನಾಯಕರ ನಡುವೆ ಅಥವಾ ಮೈತ್ರಿಕೂಟ ಸರ್ಕಾರವಾದರೆ ವಿವಿಧ ಘಟಕ ಪಕ್ಷಗಳ ನಡುವೆ ನಾಯಕತ್ವ ಸ್ಥಾನಕ್ಕಾಗಿ ಕಚ್ಚಾಟ ನಡೆಯುವುದು ಇಡೀ ಪರ್ಯಾಯ ರಾಜಕೀಯ ವ್ಯವಸ್ಥೆ ರೂಪಿಸುವ ಪ್ರಯತ್ನಗಳಿಗೆ ಹಿನ್ನಡೆ ಆಗಿ ಅದು ವಿಫಲವಾಗಲು ಕಾರಣ. ಪರ್ಯಾಯ ರಾಜಕೀಯ ವ್ಯವಸ್ಥೆ ರೂಪಿಸಲು ಪ್ರಯತ್ನಿಸುವವರು ಇದನ್ನು ತಪ್ಪಿಸಲು ಸ್ಪಷ್ಟ ನಿಯಮಗಳನ್ನು ರೂಪಿಸಿದರೆ ಮತ್ತು ರಾಜಕೀಯೇತರ ಉನ್ನತ ಸಾಧನೆ ಮಾಡಿದ ವ್ಯಕ್ತಿಯನ್ನು ನಾಯಕ ಸ್ಥಾನಕ್ಕೆ ತರುವ ನಿಯಮ ಮಾಡಿಕೊಂಡರೆ ಇಂಥ ಆಂತರಿಕ ಕಚ್ಚಾಟಗಳನ್ನು ನಿಯಂತ್ರಿಸಬಹುದು ಅಥವಾ ನಿವಾರಿಸಿಕೊಳ್ಳಬಹುದು.

3 thoughts on “ರಾಜಕೀಯ ಕ್ಷೇತ್ರದ ಸುಧಾರಣೆಗೆ ಕೆಲವು ಆಲೋಚನೆಗಳು

 1. nagraj.harapanahalli

  ವಂಶ ಪಾರಂಪರ್ಯ ರಾಜಕಾರಣದ ತಡೆ ಮತ್ತು ಚುನಾವಣ ಸುಧಾರಣೆ ಬಗ್ಗೆ ನಿಮ್ಮ ಲೇಖನದಲ್ಲಿ ವಿವರಿಸಿದ್ದೀರಿ. ಉನ್ನತ ರಾಜಕೀಯ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆ ಕುರಿತು ವಿಚಾರಗಳು ಮೇಲ್ನೋಟಕ್ಕೆ ಸರಿ ಅನ್ನಿಸಬಹುದು. ಆದರೆ ಭಾರತದಂತ ದೇಶದಲ್ಲಿ ಬಹುತೇಕರು ಅಧಿಕಾರದಿಂದ ವಂಚಿತರಾಗುತ್ತಾರೆ . ಅನೇಕ ವರ್ಗ ಮತ್ತು ಜಾತಿಗಳ ಜನರು ಅಧಿಕಾರದಿಂದ ದೊರವೇ ಉಳಿಯಬೇಕಾಗುತ್ತದೆ. ಚುನಾವಣ ವೆಚ್ಚ ತಗ್ಗಿಸುವ ಕುರಿತು ಯೋಚಿಸಬಹುದು. ಇನ್ನು ಸೋನಿಯಾ ವಂಶವಾಹಿನಿ ಅಪಾಯಕಾರಿ ಅಂತ ಅನ್ನಿಸುತ್ತಿಲ್ಲ. ಸ್ವತಹ ಸೋನಿಯಾ ಅಧಿಕಾರ ಬಿಟ್ಟು ಕೊಟ್ಟವರು. ರಾಹುಲ್ ಮಂತ್ರಿ ಅಗಬಹುದಿತ್ತಾದರು , ಅನುಭವಗಳಿಗಾಗಿ ಆತ ದೇಶ ಸುತ್ತುತ್ತಿದ್ದಾನೆ. ಪ್ರಿಯಾಂಕ ಅಜ್ಜಿ ತರಹ ಕಾಣಿಸುತ್ತಿದ್ದರು, ಇಂದಿರಾ ತರಹದ ಬುದ್ದಿ ಮತ್ತೆ ಪ್ರದರ್ಶಿಸುವ ಅವಕಾಶ ಅಕೆಗೆ ಸಿಕ್ಕಿಲ್ಲ. ಪ್ರಿಯಾಂಕ ಗಾಂಧೀ ಸರ್ವಾಧಿಕಾರಿ ಅಗಳಾರಲು. ಅಸ್ಟು ವಿಶ್ವಾಸ ನನಗಿದೆ.
  ರಾಜ್ಯ ರಾಜಕಾರಣದಲ್ಲಿ ಕುಮಾರಸ್ವಾಮಿ , ಸಿದ್ಧರಾಮಯ್ಯ ಓ.ಕೆ. ಯಡಿಯೂರಪ್ಪ ಮಾಡಿದ , ಕೆಲ ತಪ್ಪುಗಳನ್ನ ಅವರು ಅಧಿಕಾರಕ್ಕೆ ಬಂದರೆ ಮಾಡಲಾರರು.
  ಕವಿಗಳು , ಸಾಹಿತಿಗಳು ಪ್ರಧಾನಿ , ಮುಖ್ಯ ಮಂತ್ರಿ ಆದರೆ ಬ್ರಷ್ಟರಾಗಲಾರರು. ಅವ್ರಿಗೆ ಅಧಿಕಾರ ನೀಡಲು ಚುನಾವಣ ಸುಧಾರಣೆ , ತಿದ್ದುಪಡಿ ಕುರಿತು ಹೇಳಿದ್ದಿರಿ. ಇದನ್ನು ಒಪ್ಪಲಾಗದು. ಅವರು ಸಹ ಮನುಷ್ಯರೇ . ಅವರ ಆದರ್ಶ ಗಳಿಂದ ರಾಜಕೀಯ ಅಧಿಕಾರ ಉತ್ತಮವಾಗಿ ನಡೆಯುತ್ತೆ ಎಂಬುದು ಬ್ರೆಮೆ.

  Reply
 2. anand prasad

  ಚುನಾವಣೆಗೆ ಯೋಗ್ಯ ಅಭ್ಯರ್ಥಿಗಳನ್ನು ನಿಲ್ಲಿಸಲು ಅವರ ಜ್ಞಾನವನ್ನು ಅಳೆಯುವ ಪ್ರವೇಶ ಪರೀಕ್ಷೆ ನಡೆಸಿ ಆರಿಸಬಹುದು ಎಂದು ನನ್ನ ಅಭಿಪ್ರಾಯವೇ ಹೊರತು ಉನ್ನತ ವಿದ್ಯಾಭ್ಯಾಸದ ಪದವಿ ನಿಗದಿಪಡಿಸಬೇಕೆಂದು ನಾನು ಹೇಳಿಲ್ಲ. ಪ್ರವೇಶಪರೀಕ್ಷೆಗೆ ಯಾರು ಬೇಕಾದರೂ ಕುಳಿತು ಪ್ರತಿಭೆಯಿದ್ದಲ್ಲಿ ತೇರ್ಗಡೆಯಾಗಬಹುದಾದುದರಿಂದ ಯಾರೂ ಅವಕಾಶವಂಚಿತರಾಗುವ ಸಂಭಾವ್ಯತೆ ಇಲ್ಲ. ಎಲ್ಲ ಜಾತಿ, ವರ್ಗಗಳಲ್ಲೂ ಪ್ರತಿಭಾವಂತರಿದ್ದಾರೆ. ಹೀಗಾಗಿ ಪ್ರತಿಭಾವಂತರು ರಾಜಕೀಯಕ್ಕೆ ಬಂದರೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಾಧ್ಯ. ವಂಶವಾಹಿ ರಾಜಕಾರಣ ಪ್ರಜಾಪ್ರಭುತ್ವದ ಮೂಲಭೂತ ಆಶಯಕ್ಕೆ ಕೊಡಲಿಪೆಟ್ಟು ಹಾಕುತ್ತಿರುವ ಕಾರಣ ಅದನ್ನು ನಿಯಂತ್ರಿಸಲು ಹಾಗೂ ನಿವಾರಿಸಲು ಕ್ರಮ ಕೈಗೊಳ್ಳದೆ ಹೋದರೆ ನಿಧಾನವಾಗಿ ನಮ್ಮ ವ್ಯವಸ್ಥೆ ಪುನಃ ಊಳಿಗಮಾನ್ಯ ವ್ಯವಸ್ಥೆಯೆಡೆಗೆ ಸಾಗುವ ಎಲ್ಲ ಲಕ್ಷಣಗಳೂ ಈಗಾಗಲೇ ಕಂಡುಬರುತ್ತಿವೆ. ಸೋನಿಯಾ ಅವರು ಅಧಿಕೃತವಾಗಿ ಪ್ರಧಾನಿ ಸ್ಥಾನವನ್ನು ಬಿಟ್ಟುಕೊಟ್ಟರೂ ಇಂದಿಗೂ ಅವರು ಸರ್ಕಾರವನ್ನು ಹೊರಗಿನಿಂದಲೇ ನಿಯಂತ್ರಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಇದು ಸಂವಿಧಾನಬಾಹಿರ ನಿಯಂತ್ರಣವಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದದ್ದಾಗಿದೆ. ಹೆಚ್ಚು ಯೋಚನಾಶೀಲರೂ, ಜ್ಞಾನಿಗಳೂ ಅಧಿಕಾರದ ಸ್ಥಾನಕ್ಕೆ ಬಂದರೆ ಖಚಿತವಾಗಿ ಸುಧಾರಣೆಗಳನ್ನು ನಿರೀಕ್ಷಿಸಬಹುದು. ಜ್ಞಾನಿಗಳು ಯೋಚನಾಶೀಲರಾದುದರಿಂದ ಅವರು ಹಣ, ಅಂತಸ್ತು, ಅಧಿಕಾರ, ಪ್ರಚಾರ, ಪ್ರಸಿದ್ಧಿ ಇವುಗಳಿಗೆ ಮಹತ್ವ ಕೊಡುವುದಿಲ್ಲ. ಹೀಗಾಗಿ ಇಂಥವರು ಭ್ರಷ್ಟರೂ, ದುರಹಂಕಾರಿಗಳೂ ಆಗುವ ಸಾಧ್ಯತೆ ಕಡಿಮೆ. ಪ್ರಜಾಪ್ರಭುತ್ವ ಹೆಚ್ಚು ಪರಿಣಾಮಕಾರಿಯಾಗಬೇಕಾದರೆ ಉನ್ನತ ಅಧಿಕಾರ ಸ್ಥಾನಗಳಿಗೆ ಜ್ಞಾನಿಗಳು ಬರುವಂಥ ವ್ಯವಸ್ಥೆ ರೂಪಿಸುವುದರಿಂದಷ್ಟೇ ಸಾಧ್ಯ.

  Reply

Leave a Reply to ಪುಳಕ Cancel reply

Your email address will not be published.