Daily Archives: August 31, 2012

ನಿಜವನ್ನು ಎತ್ತಿಹಿಡಿಯಲಾಗದ, ಸುಳ್ಳನ್ನು ಖಂಡಿಸಲಾಗದ ಪರಿಸ್ಥಿತಿ


-ಬಿ. ಶ್ರೀಪಾದ್ ಭಟ್


 

ಸತ್ಯವನ್ನು ಮಾತನಾಡುವುದು ಯಾವಾಗಲೂ ಕ್ರಾಂತಿಕಾರಿ ಕೆಲಸವೇ. – ಗ್ರಾಮ್ಷಿ

ಫ್ರೊ.ಜಿ.ಹರಗೋಪಾಲ್, ಕನ್ನಾಬಿರಾನ್, ಫ್ರೊ.ಬಾಲಗೋಪಾಲ್; ಈ ಪ್ರಗತಿಪರ ಚಿಂತಕರು, ಮಾನವತಾವಾದಿಗಳು ಹಾಗೂ ಮಾನವ ಹಕ್ಕುಗಳ ಹೋರಾಟಗಾರರ ಬಗೆಗೆ ಮಾತನಾಡಬೇಕಾದಾಗಲೆಲ್ಲ ಒಬ್ಬರನ್ನು ಬಿಟ್ಟು ಇನ್ನೊಬ್ಬರ ಬಗೆಗೆ ಮಾತನಾಡುವುದು ಕಷ್ಟ. ಅಷ್ಟರ ಮಟ್ಟಿಗೆ ಇವರು ನಮ್ಮೊಂದಿಗೆ ಬೆರೆತು ಹೋಗಿದ್ದಾರೆ. ಇವರ ಚಿಂತನೆಗಳು ಕೇವಲ ಪುಸ್ತಕದ ಓದಿನಿಂದ ರೂಪಿತಗೊಂಡಿದ್ದಲ್ಲ ಅಥವಾ ಇವರು ಮಾತನಾಡಿದಾಗ ತಾವು ಆಳವಾಗಿ ಅಧ್ಯಯನ ಮಾಡಿದ ವಿಷಯಗಳನ್ನು ಅಷ್ಟೇ ಪ್ರತಿಭೆಯಿಂದ ಹೊರ ಹಾಕುವ ಕೇವಲ ಮಾತಿನ ಮಾಂತ್ರಿಕರೂ ಅಲ್ಲ. ಇವರಾರೂ ಜ್ಞಾನಪೀಠಿಗಳೂ ಅಲ್ಲ. ಆದರೆ ವಾಸ್ತವದ ವಿದ್ಯಾಮಾನಗಳಿಗೆ, ವ್ಯವಸ್ಥೆಯ ಕ್ರೂರತೆಯೊಂದಿಗೆ ನೇರವಾಗಿ ಮುಖಾಮುಖಿಯಾದವರು. ಪ್ರಭುತ್ವದ ಹಿಂಸೆಯನ್ನು ಮತ್ತು ಭೂಗತ ಚಳವಳಿಗಳ ಪ್ರತಿ ಹಿಂಸೆಯ ಕುರಿತಾಗಿ ಅಥೆಂಟಿಕ್ ಆಗಿ ಮಾತನಾಡಲು ಇವರಿಗೆ ಮಾತ್ರ ಸಾಧ್ಯವೇನೋ ಅನ್ನುವಷ್ಟರ ಮಟ್ಟಿಗೆ ಇವರು ತಮ್ಮ ಸಾರ್ವಜನಿಕ ಜೀವನವನ್ನು ವ್ಯವಸ್ಥೆಯ ಶಾಂತಿಗಾಗಿ ಮೀಸಲಿಟ್ಟಿದ್ದಾರೆ. ಹೃದಯಂಗಮವಾದ ಸರಳತೆ ಹಾಗೂ ಅದ್ಭುತ ಪ್ರತಿಭೆ ಎರಡೂ ಒಂದಕ್ಕೊಂದು ಪೂರಕವಾಗಿ ಇವರ ವ್ಯಕ್ತಿತ್ವದಲ್ಲಿ ಬೆರೆತು ಹೋಗಿದೆ.

ಇತ್ತೀಚೆಗೆ ನಮ್ಮ ರಾಜ್ಯದ ಮಾನವ ಹಕ್ಕುಗಳ ಹೋರಾಟಗಾರರಾದ, ಲೇಖಕ ಫ್ರೊ.ನಗರಗೆರೆ ರಮೇಶ್ ಅವರೊಂದಿಗೆ ಮಾತನಾಡುತ್ತಿದ್ದಾಗ ಅವರು  ಪ್ರೊ.ಬಾಲಗೋಪಾಲ್ ಅವರು ಕಾಕತೀಯ ವಿಶ್ವವಿದ್ಯಾಲಯದಲ್ಲಿ ಗಣಿತದ ರೀಡರ್ ಆಗಿದ್ದರು. ಮಾನವ ಹಕ್ಕುಗಳ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಸಲುವಾಗಿ ತಮ್ಮ ರೀಡರ್  ಹುದ್ದೆಗೆ ರಾಜೀನಾಮೆ ನೀಡಿದರು. ಆದರೂ ಬಡವರಿಗೆ, ಶೋಷಿತರಿಗೆ ಸಹಾಯವನ್ನು ಮಾಡಲೇಬೇಕೆಂಬ ಗುರಿಯಿಂದ ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪಡೆದರು. ನಂತರ ತಮ್ಮ ವಕೀಲ ವೃತ್ತಿಯ ಮೂಲಕ ಶೋಷಿತರ ಪರವಾಗಿಯೇ ಹೋರಾಡುತ್ತಿದ್ದರು. ಬಾಲಗೋಪಾಲ್ ಅವರು ಈ ಕೆಲಸಕ್ಕಾಗಿ ತೆಗೆದುಕೊಳ್ಳುತ್ತಿದ್ದ ಸಂಭಾವನೆ ಕೇವಲ ರೂ 500 ರಿಂದ ರೂ.1500 ಮಾತ್ರ. ಇದನ್ನು ಮೀರಿ ಒಂದು ಪೈಸೆಯನ್ನೂ ಸಹ ಹೆಚ್ಚಿಗೆ ತೆಗೆದುಕೊಳ್ಳುತ್ತಿರಲಿಲ್ಲ. ಅಲ್ಲದೆ ಈ ಕಾನೂನು ವೃತ್ತಿಯಿಂದ ಬರುವ ತಮ್ಮ ಮಾಸಿಕ ವರಮಾನದ ಮಿತಿಯನ್ನು ರೂಪಾಯಿ 18000 ಕ್ಕೆ ಮಿತಿಗೊಳಿಸಿಕೊಂಡಿದ್ದರು. ಇದನ್ನು ಎಂದೂ ದಾಟಲಿಲ್ಲ. ಒಂದು ವೇಳೆ ಇದಕ್ಕಿಂತಲೂ ಹೆಚ್ಚುವರಿ ಹಣ ದೊರೆತರೆ ತಮ್ಮ ಹೆಂಡತಿಗೆ ಕೊಟ್ಟುಬಿಡುತ್ತಿದ್ದರು, ಎಂದು ಹೇಳಿದರು.

ಈ ನಿಸ್ವಾರ್ಥದ ಮನೋಭಾವವೇ ಬಾಲಗೋಪಾಲ ಅವರನ್ನು ಮಾನವ ಹಕ್ಕುಗಳ ಹೋರಾಟಗಾರರಾಗಿ ರೂಪಿಸಿತು. ಇಲ್ಲಿ ಅವರು ದಣಿವರಿಯದೆ ದುಡಿದರು. ಪ್ರಾರಂಭದ ವರ್ಷಗಳಲ್ಲಿ ಫ್ರೊ.ಬಾಲಗೋಪಾಲ್ ಅವರು ನಕ್ಸಲ್ ಚಳವಳಿಯ ಸಿಂಪಥೈಸರ್ ಆಗಿ ಕಾಣಿಸಿಕೊಂಡರೂ ಕಾಲಕ್ರಮೇಣ ಈ ಮಾವೋವಾದಿ ಭೂಗತ ಚಳವಳಿ ಹಿಂಸೆಗೆ ಜಾರುತ್ತಿರುವುದನ್ನು ಕಂಡು ಸಂತಾಪಪಟ್ಟವರು. ಕಡೆಯ ವರ್ಷಗಳಲ್ಲಿ ಈ ಚಳವಳಿಯ ಬಗೆಗೆ, ಅದರ ಹಿಂಸೆಯ ಬಗೆಗೆ ತೀವ್ರ ವಿರೋಧವಾಗಿ ವಿಮರ್ಶಿಸಲಾರಂಭಿಸಿದರು. ಇವರ ಬದ್ಧತೆ ಎಷ್ಟರ ಮಟ್ಟಿಗೆ ಇತ್ತೆಂದರೆ ಸತ್ಯವನ್ನು ಹೇಳಲು ಎಂದೂ ಹಿಂದೆ ನೋಡುತ್ತಿರಲಿಲ್ಲ. ಕಡೆಗೆ ಮಾನವ ಹಕ್ಕುಗಳ ಒಕ್ಕೂಟದಿಂದ ಹೊರಬಂದು ತಮ್ಮದೇ ಆದ ಮಾನವ ಹಕ್ಕು ವೇದಿಕೆಯನ್ನು ಸ್ಥಾಪಿಸಿಕೊಂಡರು. ಅದಕ್ಕಾಗಿ ಪ್ರಭುತ್ವದಿಂದಲೂ ಮತ್ತು ಅನೇಕ ತೀವ್ರವಾದಿ ಎಡಪಂಥೀಯರ ಟೀಕೆಗೂ ಗುರಿಯಾಗಬೇಕಾಯಿತು. ಆದರೆ 2009ರ ಅಕ್ಟೋಬರ್ 1ರ ಮಾನವ ಹಕ್ಕುಗಳ ವೇದಿಕೆಯ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡುತ್ತಾ ಬಾಲಗೋಪಾಲ್ ಹೇಳಿದ ಮಾತುಗಳು: (ಕೃಪೆ: ಬಾಲಗೋಪಾಲ್ ಬರಹಗಳು, ಲಂಕೇಶ್ ಪ್ರಕಾಶನ) “ನಿಜವನ್ನು ನಿಜ ಎಂದು ಹೇಳಲಿಕ್ಕಾಗದ, ಭಯದಿಂದ ಬಾಯಿಕಟ್ಟಿಹೋಗಿರುವ ಪರಿಸ್ಥಿತಿ ಇಂದು ಯಾಕೆ ಮತ್ತು ಹೇಗೆ ಉಂಟಾಗಿದೆ? ನಿಜವನ್ನು ಎತ್ತಿಹಿಡಿಯಲಾಗದ, ಸುಳ್ಳನ್ನು ಖಂಡಿಸಲಾಗದ ಪರಿಸ್ಥಿತಿಯಲ್ಲಿ ಹಕ್ಕುಗಳಿಗೆ ಯಾವುದೇ ಅರ್ಥವೇ ಇರುವುದಿಲ್ಲ. ಜನರಿಂದ ಚುನಾಯಿತರಾದ ಪ್ರತಿನಿಧಿಗಳು ಏಕೆ ಕೆಲಸ ಮಾಡುತ್ತಿಲ್ಲ ಎಂದು ಕೇಳುವಷ್ಟು ನಿರ್ಭೀತ ವಾತಾವರಣವೇ ಹೊರಟುಹೋಗಿದೆ. ಮಾಧ್ಯಮಗಳು, ಮೇಧಾವಿಗಳು ಕೂಡ ಯಾಕೆ ವಾಸ್ತವವನ್ನು ಕಾಣದೆ ಹೋಗಿದ್ದಾರೆ? ಇದಕ್ಕೆ ಕಾರಣ ನಿಜದ ಭಯ ಇರಬಹುದು. ಅಥವಾ ಅವಕಾಶವಾದವೂ ಇರಬಹುದು. ಆದರೆ ನಿಜವನ್ನು ಹೇಳಲು ಆಗದ ಪರಿಸ್ಥಿತಿಯಲ್ಲಿ ಪ್ರಜಾಸ್ವಾಮ್ಯವೂ ಇರುವುದಿಲ್ಲ. ಮಾನವ ಹಕ್ಕುಗಳೂ ಇರುವುದಿಲ್ಲ. ಇನ್ನು ಹಕ್ಕುಗಳನ್ನು ಗಳಿಸಿಕೊಳ್ಳುವುದಂತೂ ದೂರದ ಮಾತು. ಇಂತಹ ದೌರ್ಭಾಗ್ಯದ ವಾತಾವರಣದಲ್ಲಿ ನಾವು ಬದುಕುತ್ತಿದ್ದೇವೆ.” ಇದು ಅವರ ಕಡೆಯ ಬಹಿರಂಗ ಭಾಷಣವೂ ಸಹ. “ಎಕನಾಮಿಕ್ಸ್ ಅಂಡ್ ಪೊಲಿಟಿಕಲ್ ವೀಕ್ಲಿ” (ಇಪಿಡಬ್ಲೂ) ಪತ್ರಿಕೆಗೆ ಅವರು ನಿರಂತರವಾಗಿ ಬರೆದ ಲೇಖನಗಳನ್ನು ಪ್ರತಿಯೊಬ್ಬರೂ ಓದಲೇಬೇಕು. ಕಡೆಗೆ ಮೂರು ವರ್ಷಗಳ ಹಿಂದೆ ತಮ್ಮ 58ನೇ ವಯಸ್ಸಿನಲ್ಲಿ ತೀವ್ರ ಅನಾರೋಗ್ಯದ ನಿಮಿತ್ತ ತೀರಿಕೊಂಡರು.

ಇದೆಲ್ಲ ಮತ್ತೆ ನೆನಪಾದದ್ದು ಇತ್ತೀಚೆಗೆ ಬೆಂಗಳೂರಿನ ಕಾನೂನು ವಿಶ್ವವಿದ್ಯಾಲಯದಲ್ಲಿ ಫ್ರೊ.ಜಾಫಟ್, ಐಜೂರ್ ಅವರ ನೇತೃತ್ವದಲ್ಲಿ ಆಯೋಜಿಸಿದ ಜಿ.ಹರಗೋಪಾಲ್ ಅವರ ಭಾಷಣ ಮತ್ತು ಸಂವಾದ ಕುರಿತಾದ ಕಮ್ಮಟದಲ್ಲಿ ಭಾಗವಹಿಸಿದಾಗ. ಫ್ರೊ.ಹರಗೋಪಾಲ್ ಅವರು ಸಹ ಬಾಲಗೋಪಲ್‌ರವರಂತೆ ಅಪ್ರತಿಮ ಚಿಂತಕರು ಮತ್ತು ಮಾನವ ಹಕ್ಕುಗಳ ಹೋರಾಟಗಾರರು. ಇವರು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ರಾಜಕೀಯ ವಿಜ್ಞಾನದ ಫ್ರೊಫೆಸರ್ ಆಗಿದ್ದರು. ಇವರು ಶೋಷಿತರ ಪರವಾದ ತೀವ್ರವಾದ ಕಾಳಜಿಗಳಿಂದ ಮತ್ತು ದಮನಿತರ ಪರವಾಗಿ ಸದಾಕಾಲ ಬಹಿರಂಗವಾಗಿ ಪ್ರಭುತ್ವದ ವಿರುದ್ಧ ಮಾತನಾಡಬಲ್ಲವರಾಗಿದ್ದರು. ಇವರ ಜನಪ್ರಿಯ ಗುಣಗಳಿಂದಾಗಿಯೇ ಸರ್ಕಾರಿ ಅಧಿಕಾರಿಗಳು, ಶಾಸಕರುಗಳ ಅಪಹರಣವಾದಾಗಲೆಲ್ಲ ಆಂಧ್ರಪ್ರದೇಶದ, ಒರಿಸ್ಸಾ ಮತ್ತು ಛತ್ತೀಸಘಡ ಸರ್ಕಾರಗಳು ಇವರನ್ನು ಮಾವೋವಾದಿಗಳೊಂದಿಗೆ ಸಂಧಾನಕಾರರಾಗಿ ವ್ಯವಹರಿಸಲು ನಿಯೋಜಿಸುತ್ತಿದ್ದರು. ಹರಗೋಪಾಲ್ ಅವರು ಪ್ರಥಮ ಬಾರಿಗೆ ಸಂಧಾನಕಾರರಾಗಿ ವ್ಯವಹರಿಸಿದ್ದು 1977ರಲ್ಲಿ, ಆಂಧ್ರಪ್ರದೇಶದಲ್ಲಿ. ಆಗ “ಪೀಪಲ್ಸ್ ವಾರ್ ಗ್ರೂಪ್” ಎನ್ನುವ ಬಲಿಷ್ಠ ನಕ್ಸಲ್ ಸಂಘಟನೆ ಆ ಕಾಲಕ್ಕೆ ಸರ್ಕಾರಿ ಅಧಿಕಾರಿಗಳನ್ನು ಅಪಹರಿಸಿತ್ತು.

ಹೀಗೆ 1977ರಿಂದ ಶುರುವಾದ ಈ ತಮ್ಮ ಈ ಸಂಧಾನದ ಪ್ರಕ್ರಿಯೆ 2011ರಲ್ಲಿ ವಿನಲ್ ಕೃಷ್ಣ ಹಾಗೂ 2012ರಲ್ಲಿ ಅಲೆಕ್ಸ್ ಪೌಲ್‌ವರೆಗೂ ನಡೆದುಬಂದಿತು. ಈ 1977 ಹಾಗೂ 2012ರ 35 ವರ್ಷಗಳ ಆ ಕಾಲಘಟ್ಟ ಫ್ರೊ.ಹರಗೋಪಾಲ್‌ರಂತಹ ಮಾನವತಾವಾದಿಗೆ ಅನೇಕ ಕತ್ತಲ ಜಗತ್ತುಗಳನ್ನು ತೆರೆದು ತೋರಿಸಿತು. ಈ 35 ವರ್ಷಗಳಲ್ಲಿ ಅವರು ಮೇಲ್ನೋಟಕ್ಕೆ ಅನೇಕ ನಕ್ಸಲ್ ಅಪಹರಣಗಳ ವಿದ್ಯಾಮಾನಗಳಿಗೆ ಸಂಧಾನಕಾರರಾಗಿ ಸಾಕ್ಷಿಯಾಗಿದ್ದಾರೆ ಎನ್ನಿಸಿದರೂ ಅದನ್ನು ಮೀರಿ ಅವರು ಗ್ರಹಿಸಿದ ಹಾಗೂ ದಾಖಲಿಸಿದ ಪ್ರಜಾಪ್ರಭುತ್ವದ ವಿಭಿನ್ನ ರೀತಿಯ ಸೋಲುಗಳು ಇನ್ನೂ ಭಯಾನಕವಾಗಿವೆ. ಈ ಕತ್ತಲ ದಾರಿಯೇ ನಡೆದುಬಂದ ದಾರಿ, ಪ್ರಭುತ್ವದ ಒಳಸುಳಿಗಳು, ಪ್ರಭುತ್ವದ ಹಿಂಸೆ ಹಾಗೂ ಇದಕ್ಕೆ ಪ್ರತಿರೋಧವಾಗಿ ನಕ್ಸಲರ ಪ್ರತಿಹಿಂಸೆ ಇವೆಲ್ಲವನ್ನು ಅಂದು ಹರಗೋಪಾಲ್ ಅವರು ವಿವರವಾಗಿ ಬಿಚ್ಚಿಟ್ಟರು. 1977ರ ಸರ್ಕಾರಿ ಅಧಿಕಾರಿಗಳ ಅಪಹರಣದ ಹಿನ್ನೆಯ ಕುರಿತಾಗಿ ಅವರು ಹೇಳಿದ್ದು ಸರಿ ಸುಮಾರು 70ರ ದಶಕದಷ್ಟರಲ್ಲಿ ಸಮಾತಾವಾದದ ಚಿಂತನೆಗಳು, ಬಡತನ ಮತ್ತು ಶೋಷಣೆ, ಅಸಮಾನತೆ ಮತ್ತು ದೌರ್ಜನ್ಯದ ವಿರುದ್ಧದ ಹೋರಾಟ ಆಂಧ್ರಪ್ರದೇಶದ ವರಂಗಲ್ ಜಿಲ್ಲೆಯಾದ್ಯಾಂತ ಪಸರಿಸಿಬಿಟ್ಟಿತ್ತು. ಸಮತಾವಾದದ ಬಗೆಗೆನ ಕೂಗು ಶಾಲಾ ಕಾಲೇಜುಗಳು. ಸರ್ಕಾರಿ ಸಂಸ್ಥೆಗಳು. ಆಸ್ಪತ್ರೆಗಳು ಹೀಗೆ ಯಾವ ವಲಯಗಳನ್ನು ಬಿಟ್ಟಿರಲಿಲ್ಲ. ಆಗ ಕಾಲೇಜುಗಳಲ್ಲಿ ಜಮೀನ್ದಾರರ ದಬ್ಬಾಳಿಕೆ ಮತ್ತು ಹತ್ಯಾಕಾಂಡಗಳು, ಮೇಲ್ಜಾತಿಗಳ ಶೋಷಣೆಗಳ ಕುರಿತಾಗಿಯೇ ಪಾಠ ಮಾಡಬೇಕಾದಂತಹ ಪರಿಸ್ಥಿತಿಯಿತ್ತು. ಆ ಬಗೆಯ ಒತ್ತಡಗಳಿದ್ದವು. ಇವನ್ನು ಬಿಟ್ಟು ಶೈಕ್ಷಣಿಕ ಪಠ್ಯಕ್ಕೆ ಕುರಿತಾದ ವಿಷಯಗಳ ಕುರಿತಾಗಿ ಪಾಠ ಮಾಡಿದರೆ ಅವೆಲ್ಲ ವಿಧ್ಯಾರ್ಥಿಗಳ ಕಣ್ಣಲ್ಲಿ ತಿರಸ್ಕೃತಗೊಳ್ಳುತ್ತಿದ್ದವು. ಅಧ್ಯಾಪಕರು ಬೂರ್ಜ್ವಗಳೆಂದೇ ಪರಿಗಣಿಸಲ್ಪಡುತ್ತಿದ್ದರು. ಅಷ್ಟರ ಮಟ್ಟಿಗೆ ಇಡೀ ವರಂಗಲ್ ಜಿಲ್ಲೆ ಸ್ಪೋಟಕ ಸ್ಥಿತಿಗೆ ತಲುಪಿತ್ತು.

ಶತಮಾನಗಳಿಂದ ಜಮೀನ್ದಾರ ಗುಂಪುಗಳಿಂದ ದಲಿತರು ಮತ್ತು ಬಡ ರೈತರ ಮೇಲೆ ನಡೆಯುತ್ತಿದ್ದ ಶೋಷಣೆಗಳಿಗೆ ಕೊನೆಯೇ ಇರಲಿಲ್ಲ. ಆಗ ಯಾವುದೇ ಜಮೀನ್ದಾರನು ತನಗೆ ಬೇಕೆನಿಸಿದಾಗಲೆಲ್ಲ ಬಡ ರೈತರ, ಕೂಲಿ ಕಾರ್ಮಿಕರ ಅಷ್ಟೇಕೆ ಬಡ ಶಾಲಾ ಮಾಸ್ತರರ ಹೆಂಡತಿಯರನ್ನು ತಮ್ಮ ವಾಡೆಗಳಿಗೆ ಬಲತ್ಕಾರವಾಗಿ ಎಳೆದುಕೊಂಡು ಅತ್ಯಾಚಾರ ನಡೆಸಿ ನಂತರ ತಮ್ಮ ಅಡಿಯಾಳಾಗಿ ಇಟ್ಟುಕೊಳ್ಳುತ್ತಿದ್ದರು. ಇದು ದೌರ್ಜನ್ಯದ ಒಂದು ಸ್ಯಾಂಪಲ್. ಈ ಶೋಷಿತರಿಗೆ ಪ್ರಭುತ್ವದಿಂದಲೂ ಯಾವುದೇ ಸಹಾಯ ಹಸ್ತವಾಗಲೀ, ಸುರಕ್ಷತೆಯ ಭರವಸೆಯಾಗಲೀ ದೊರಕದಿದ್ದಾಗ ಇಡೀ ಜಿಲ್ಲೆಯ ಶೋಷಿತ ಸಮುದಾಯ ನಕ್ಸಲಿಸಂ ಕಡೆಗೆ ಹೊರಳಿತು. ಅದೇ ಕಾಲದಲ್ಲಿ ಆಂಧ್ರಪ್ರದೇಶಾದ್ಯಾಂತ ಮಾಫಿಯಾ ಗುಂಪುಗಳು ಹುಟ್ಟಿಕೊಂಡವು. ಆಗಿನ ಸರ್ಕಾರ ನೀರಾವರಿ, ರಸ್ತೆಗಳು, ಸಾರ್ವಜನಿಕ ಸಂಸ್ಥೆಗಳು, ಗಣಿಗಾರಿಕೆ ಹೀಗೆ ವಿವಿಧ ವಲಯಗಳಿಗೆ ಅಪಾರವಾದ ಹಣವನ್ನು ಬಿಡುಗಡೆ ಮಾಡಿತು. ಆದರೆ ಆ ಹಣವೆಲ್ಲ ಈ ವಿವಿಧ ಮಾಫಿಯಾ ಗುಂಪಿಗೆ ಸೋರಿಹೋಯಿತು. ಈ ಅವ್ಯವಹಾರದ ಫಲವಾಗಿ ಅನೇಕ ಮಧ್ಯವರ್ತಿಗಳು ಹುಟ್ಟಿಕೊಂಡರು. ಹೀಗಾಗಿ ಸರ್ಕಾರ, ಮಧ್ಯವರ್ತಿಗಳು ಮತ್ತು ವಿವಿಧ ಮಾಫಿಯಾಗಳು ಇವೆಲ್ಲದರ ಒಂದು ವಿಷವರ್ತುಲ ಸ್ಥಾಪಿತಗೊಂಡಿತು. ಈ ವಿದ್ಯಾಮಾನಗಳು ಆದರ್ಶದ ರಾಜಕಾರಣವನ್ನು ನಾಮಾವಶೇಷ ಮಾಡಿತು. ಇದರ ಬದಲಾಗಿ ಐಡೆಂಟಿಟಿ ರಾಜಕೀಯ ಹುಟ್ಟಿಕೊಂಡಿತು. ಈ ಐಡೆಂಟಿಟಿ ರಾಜಕೀಯವು ಜಾತಿಗಳು, ಸಂಸ್ಥೆಗಳ ಕೇಂದ್ರ ಸ್ಥಾನವಾಗಿ ಬೆಳೆಯಿತು. ಇದೆಲ್ಲದರ ವಿರುದ್ಧ ಹುಟ್ಟಿಕೊಂಡಿದ್ದೇ ನಕ್ಸಲರ ಭೂಗತ ಚಳವಳಿ. ಅದರ ಮೊದಲ ಚಟುವಟಿಕೆಯೇ 1977ರ ಅಪಹರಣ. ಆ 70ರ ಹಾಗೂ 80ರ ದಶಕದ ಅಪಹರಣಗಳ ಸುಖಾಂತ್ಯವಾಗುತ್ತಿದ್ದುದು ಬಂಧನದಲ್ಲಿದ್ದ ಕೆಲವು ನಕ್ಸಲ್ ನಾಯಕರು ಹಾಗು ನಕ್ಸಲರೆಂದು ಗುಮಾನಿಗೊಳಪಟ್ಟು ಬಂಧಿತರಾಗುತ್ತಿದ್ದ ಮುಗ್ಧ ವ್ಯಕ್ತಿಗಳ ಬಿಡುಗಡೆಯ ಮೂಲಕ.

ಈ ರೀತಿಯ ಕೊಡುಕೊಳ್ಳುವಿಕೆಯ ನಾಟಕಗಳು 80ರ ದಶಕದುದ್ದಕ್ಕೂ ನಡೆಯಿತು. ಈ ಎರಡು ದಶಕಗಳಲ್ಲಿ ಪ್ರಭುತ್ವವು ಸಹ ಯಾವುದೇ ಜಿಜ್ಞಾಸೆಯಲ್ಲಿ ತೊಡಗುತ್ತಿರಲಿಲ್ಲ. ಅಧಿಕಾರಿಗಳ ಅಪಹರಣ ಮತ್ತು ನಕ್ಸಲ್ ನಾಯಕರು ಹಾಗೂ ಮುಗ್ಧ ಜನರ ಬಿಡುಗಡೆ ಈ ಇಡೀ ಪ್ರಕ್ರಿಯೆಯಲ್ಲಿ ಹಿಂಸೆಯ ಸುಳಿವು ಇರಲಿಲ್ಲ. ಆದರೆ ಹಿಂಸೆ ತಲೆಯೆತ್ತಿದ್ದು 90ರ ದಶಕದ ನಂತರ. ಅಲ್ಲಿಂದ ಈ ನಕ್ಸಲ್ ಚಟುವಟಿಕೆಗಳು ಮತ್ತು ಅಪಹರಣಗಳು ಮತ್ತೊಂದು ತಿರುವನ್ನೇ ತೆಗೆದುಕೊಂಡಿತು. ಹಿಂಸೆ ಅಡಿಯಿಟ್ಟಿತು. ಹೀಗೆ ಅತ್ಯಂತ ವಿವರವಾಗಿ, ಎಳೆಎಳೆಯಾಗಿ ಆ ದಿನಗಳ ತಲ್ಲಣಗಳನ್ನು ಬಿಚ್ಚಿಟ್ಟರು. ಇದೇ ಕಾಲಘಟ್ಟದಲ್ಲಿ ನಕಲಿ ಎನ್‌ಕೌಂಟರ್‌ಗಳ ಸಂಖ್ಯೆ ಸಹ ಹೆಚ್ಚಾಗಿದ್ದು ಮವೋವಾದಿಗಳ ಪ್ರತಿ ಹಿಂಸೆಗೆ ಕಾರಣವೆಂದು ವಿವರಿಸಿದರು. ಪ್ರಭುತ್ವದ ದೌರ್ಜನ್ಯದ ಕುರಿತಾಗಿ ಮತನಾಡಿದ ಫ್ರೊ.ಹರಗೋಪಾಲ್ ಅವರು ಇದು ತನ್ನ ಮೇಲುಗೈ ಸಾಧಿಸಿದ್ದು ಚಂದ್ರಬಾಬು ನಾಯ್ಡು ಆಡಳಿತದ ಅವಧಿಯಲ್ಲಿ ಎಂದು ಅನೇಕ ಉದಾಹರಣೆಗಳೊಂದಿಗೆ ವಿವರಿಸಿದರು. ಇವರ ಕಾಲದಲ್ಲಿಯೇ ಮಾನವ ಹಕ್ಕುಗಳ ಹೋರಾಟಗಾರರರನ್ನು ಹತ್ಯೆ ಮಾಡಲಾಯಿತು. ತನ್ನನ್ನು ತಾನು ಛೀಫ್ ಎಕ್ಸಿಕ್ಯೂಟಿವ್ ಆಫೀಸರ್ ಎಂದು ಕರೆದುಕೊಂಡಿದ್ದ ಈ ಚಂದ್ರಬಾಬು ನಾಯ್ಡು ಅವರಿಗೆ ಆಗ ಮಧ್ಯಮವರ್ಗದವರು ಸುಭವಾಗಿ ಮೋಸಹೋದದ್ದು ಸಹಜವೇ ಆಗಿತ್ತು. ಅಪಾರ ಸಂಪತ್ತನ್ನು ಗಳಿಸುವುದು ಹಾಗೂ ಅದನ್ನು ಕ್ರೋಢೀಕರಿಸುವುದರ ಕಲೆ ಹುಟ್ಟಿಕೊಂಡಿದ್ದು ಸಹ ಚಂದ್ರಬಾಬು ನಾಯ್ಡು ಅವರ ಕಾಲದಲ್ಲಿ. ಇವರ ಕಾಲದಲ್ಲಿ ರಾಜಕೀಯವು ಸಂಪತ್ತಿನ ಹಿಂದೆ ಸದಾ ಸುತ್ತುವ ಅಧಿಕಾರವಾಗಿಯೂ, ಅಧಿಕಾರವೂ ಈ ಸಂಪತ್ತನ್ನು ಗಳಿಸುವ ರಾಜಕೀಯವಾಗಿಯೂ ಪರಿವರ್ತನೆಗೊಂಡಿದ್ದರ ಬಗೆಗೆ ವಿಷಾದಿಸಿದರು. ಶಾಂತಿಯ ಮಂತ್ರವನ್ನೇ ಜಪಿಸುತ್ತ ಅಧಿಕಾರವನ್ನು ಕಬ್ಜಾ ಮಾಡಿಕೊಂಡ ದಿವಂಗತ ರಾಜಶೇಖರ ರೆಡ್ಡಿಯವರ ಕಾಲದಲ್ಲಿ ಮಾವೋವಾದಿಗಳೊಂದಿನ ಸಂಧಾನವನ್ನು ಅತ್ಯಂತ ವ್ಯವಸ್ಥಿವಾಗಿ ಹಾಳುಗೆಡವಿದ್ದರ ಬಗೆಗೆ ವಿವರಿಸಿದರು. ಆಗ ಹೆಚ್ಚೂ ಕಡಿಮೆ ಶಸ್ತ್ರಗಳನ್ನು ತ್ಯಜಿಸಿದ್ದ ಮಾವೋವಾದಿಗಳು ಈ ಮಾತುಕತೆಯ ವಿಫಲತೆಯ ನಂತರ ಮರಳಿ ಭೂಗತ ಲೋಕಕ್ಕೆ ತೆರಳಿ ಮತ್ತಷ್ಟು ಹಿಂಸೆಯನ್ನು ಮೈಗೂಡಿಸಿಕೊಂಡಿದ್ದರ ಕುರಿತಾಗಿ ವಿವರಿಸಿದರು. ಗುಜರಾತ್‌ನಲ್ಲಿ ಜರುಗಿದ ಮುಸ್ಲಿಂರ ಹತ್ಯಾಕಾಂಡ ಹಾಗೂ ಅದರ ರೂವಾರಿ ನರೇಂದ್ರ ಮೋದಿಯವರ ಫ್ಯಾಸಿಸ್ಟ್ ಆಡಳಿತ ಕುರಿತಾಗಿ ಸ್ವಲ್ಪವೂ ತಕರಾರು ಎತ್ತದ ನಮ್ಮ ಮಧ್ಯಮ ವರ್ಗ ಈ ನಕ್ಸಲರ ಹಿಂಸೆಯ ಬಗೆಗೆ ಆತಂಕ ವ್ಯಕ್ತಪಡಿಸುತ್ತಿರುವುದರ ಹಿಪೋಕ್ರಸಿಯನ್ನು ವಿವರಿಸಿದರು.

ಈ 35 ವರ್ಷಗಳ ಸಂಧಾನಕಾರರಾಗಿ, ಮಾನವ ಹಕ್ಕುಗಳ ಹೋರಾಟಗಾರರಾಗಿ ಫ್ರೊ.ಹರಗೋಪಾಲ್ ಅವರು ಪ್ರಭುತ್ವದ ಹಿಂಸೆ ಮತ್ತು ಮಾವೋವಾದಿಗಳ ಪ್ರತಿ ಹಿಂಸೆಯನ್ನು ಹತ್ತಿರದಿಂದ ಪ್ರತ್ಯಕ್ಷವಾಗಿ ಕಂಡು ಅನುಭವಿಸಿದವರು. ಅನೇಕ ಬಾರಿ ಸಾವಿನ ಅಂಚಿನಿಂದ ಪಾರಾಗಿ ಬಂದವರು. ಹೀಗಾಗಿ ಅವರ ಇಡೀ ಭಾಷಣಕ್ಕೆ ಬಲು ದೊಡ್ಡ ಅಥೆಂಟಿಸಿಟಿ ದಕ್ಕಿತ್ತು. ಹಾಗೂ ಇದು ಸಹಜವೇ ಕೂಡ. ಆದರೆ ಇಲ್ಲಿ ಪ್ರಭುತ್ವದ ಹಿಂಸೆಯೊಂದಿಗೆ ಖಾಸಗೀ ಪಡೆಯಾದ ಜಮೀನ್ದಾರರ ಹಿಂಸೆಯು ಒಂದಕ್ಕೊಂದು ತಳುಕು ಹಾಕಿಕೊಂಡು ಅಮಾಯಕರ ಮೇಲೆ ನಿರಂತರವಾಗಿ ನಡೆಸಿದ ಶೋಷಣೆ ಮತ್ತು ಅತ್ಯಾಚಾರಗಳೇ ಇವುಗಳಿಗೆ ವಿರೋಧವಾಗಿ ಪ್ರತಿ ಹಿಂಸೆಯ ರೂಪವಾಗಿ ನಕ್ಸಲಿಸಂ ಹುಟ್ಟಿಕೊಳ್ಳಬೇಕಾದಂತಹ ಅನಿವಾರ್ಯ ಪರಿಸ್ಥಿತಿಗೆ ಕಾರಣವಾಯಿತು ಎನ್ನುವ ಅತ್ಯಂತ ಸರಳ ಹಾಗು ಸಿನೀಮಿಯ ಮಾದರಿಯ ಕಟು ವಾಸ್ತವವನ್ನು ಫ್ರೊ.ಹರಗೋಪಾಲ್ ಅವರು ವಿವರಿಸಿದರು. ಆದರೆ ಇದಕ್ಕೆ ಪ್ರತಿಹಿಂಸೆಯ ಅಗತ್ಯತೆಯ ಬಗೆಗೆ ಪ್ರಶ್ನಿಸಿದಾಗ ಇದಕ್ಕೆ ಫ್ರೊಫೆಸರ್ ಅವರ ಉತ್ತರ ಮಾತ್ರ ಬೇರೆ ಯಾವ ದಾರಿಯಿತ್ತು ಹೇಳಿ ಎಂಬ ಮರು ಪ್ರಶ್ನೆಗೆ ಮತ್ತೆ ಮತ್ತೆ ಹೊರಳುತ್ತಿತ್ತು!!

ಮಾನವ ಹಕ್ಕುಗಳನ್ನು ಕಾಪಾಡಲು ಸಂಪೂರ್ಣವಾಗಿ ಸೋತುಹೋದ ಪ್ರಭುತ್ವ ಮತ್ತು ನಾಗರಿಕ ವ್ಯವಸ್ಥೆಗೆ ಇದೇ ಮಾನವ ಹಕ್ಕುಗಳ ಮೇಲೆ ನಕ್ಸಲರು ಪ್ರತ್ಯುತ್ತರವಾಗಿ ಹಿಂಸೆಯ ಮೂಲಕ ಮರುಹಲ್ಲೆ ನಡೆಸಿದಾಗ ನಮಗೆ ಪ್ರಶ್ನಿಸುವ ಹಕ್ಕೆಲ್ಲಿದೆ ಎಂದು ಹರಗೋಪಾಲ್ ಅವರು ಕೇಳಿದಾಗ ಅಲ್ಲಿರುವ ಹಿರಿಯ ಪ್ರಜ್ಞಾವಂತರಲ್ಲೂ, ನನ್ನ ತಲೆಮಾರಿನವರಲ್ಲೂ ಹಾಗೂ 20ರ ಹರೆಯದ ವಿಧ್ಯಾರ್ಥಿಗಳಲ್ಲೂ ಯಾವುದೇ ಉತ್ತರವಿರಲಿಲ್ಲ. ಆದರೆ ಮಾವೋವಾದಿಗಳ ವ್ಯವಸ್ಥೆಯ ಮೇಲೆ ನಡೆಸುವ ಹಿಂಸೆಯ ಜೊತೆಜೊತೆಗೆ ಅವರೊಳಗಿನ ಭೂಗತ ಲೋಕದ ಬದುಕಿನಲ್ಲೂ ಮನೆಮಾಡಿರುವ ಅಪಾರ ವೈರುಧ್ಯಗಳ ಬಗೆಗೆ ಫ್ರೊ.ಹರಗೋಪಲ್ ಅವರು ಸಾಕಷ್ಟು ಬೆಳಕು ಚೆಲ್ಲಲಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಮಾವೋವಾದಿಗಳು ಭೂಮಾಲೀಕರಿಂದ, ಉದ್ದಿಮೆದಾರರಿಂದ ಹಫ್ತಾ ವಸೂಲಿಯ ದಂಧೆಯನ್ನು ಮೈಗೂಡಿಸಿಕೊಂಡಿರುವ ಬಗೆಗಿನ ಆರೋಪಗಳ ಕುರಿತಾಗಿ ವಿವರಿಸಲಿಲ್ಲ. ಈ ಮಾವೋವಾದಿಗಳ ಭೂಗತ ಲೋಕದೊಳಗೆ ಕಾಮ್ರೇಡ್‌ಗಳಾಗಿ ಹೋರಾಟಕ್ಕೆ ಸೇರಿಕೊಂಡ ಕೆಲವು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಅನೇಕ ವರದಿಗಳಿವೆ. ಎಳೆ ವಯಸ್ಸಿನ ಬಾಲಕರನ್ನು ಈ ಭೂಗತ ಚಳವಳಿಗಳಿಗೆ ಸೇರಿಸಿಕೊಳ್ಳುತ್ತಿರುವ ಸ್ವಾರ್ಥದ ಕುರಿತಾಗಿ ಸಹ ಹೇಳಲಿಲ್ಲ. ತಮ್ಮ ಮೇಲೆ ಪೋಲಿಸ್ ಪಡೆಗಳ ತಂಡ ಎನ್ಕೌಂಟರ್ ನಡೆಸುವ ಸಂದರ್ಭಗಳಲ್ಲಿ, ತಮ್ಮ ಗುಪ್ತ ತಾಣಗಳ ಮೇಲೆ ನಡೆಸುವ ಶಸಸ್ತ್ರ ದಾಳಿಗಳಿಂದ ಪಾರಾಗಲು ಅಮಾಯಕ ಜನರು ಹಾಗೂ ಬಾಲಕರನ್ನು ಹ್ಯೂಮನ್ ಶೀಲ್ಡ್‌ಗಳಾಗಿ ಬಳಸಿಕೊಳ್ಳುತ್ತಿರುವ ಕೌರ್ಯದ ಕುರಿತಾಗಿ ಸಹ ಫ್ರೊ. ಮಾತನಾಡಲಿಲ್ಲ. ಅಲ್ಲದೆ ಬಲು ಮುಖ್ಯವಾಗಿ ಇಂದು ಒರಿಸ್ಸ ಹಾಗೂ ಛತ್ತೀಸಘಡ್ ರಾಜ್ಯಗಳಲ್ಲಿ ಮಾವೋವಾದಿಗಳಲ್ಲಿ ಹೆಚ್ಚಿನವರು ಆದಿವಾಸಿಗಳು. ಇದರ ವಿಪರ್ಯಾಸದ ಕುರಿತಾಗಿ ಚರ್ಚೆ ನಡೆಯಬೇಕಾಗಿತ್ತು. ಆದರೆ ನಾಗರಿಕ ಸಮಾಜದಲ್ಲಿ, ಪ್ರಜಾಪ್ರಭುತ್ವದಲ್ಲಿ ಜಾತೀಯತೆ, ಮಹಿಳೆಯ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆ ಮುಂತಾದ ಶೋಷಣೆಗಳು ಮಾನವ ಹಕ್ಕುಗಳ ಉಲ್ಲಂಘನೆಗಳೇ ಅದರಲ್ಲಿ ಅನುಮಾನವೇ ಇಲ್ಲ.

ಆದರೆ ಈ ಅಧಿಕೃತವಾಗಿ ನಡೆದ ಮಾನವ ಹಕ್ಕುಗಳ ಉಲ್ಲಂಘನೆಗೆ ವಿರೋಧವಾಗಿ ಪ್ರಜಾ ವಿಮೋಚನೆಯ ಹೆಸರಿನಲ್ಲಿ  ನಡೆಯುವ ಎಲ್ಲ ಬಗೆಯ ಭೂಗತ ಹೋರಾಟಗಳು ಹಿಂಸಾತ್ಮಕವಾಗಿದ್ದರೂ ಸರಿಯೇ ಅವು ಮತ್ತೊಂದು ಬಗೆಯಲ್ಲಿ ಮಾನವ ಹಕ್ಕುಗಳ ಪ್ರತಿಪಾದನೆಯನ್ನೇ ಮಾಡುತ್ತವೆ ಎನ್ನುವ ಪ್ರೊ.ಹರಗೋಪಾಲ್ ಅವರ ಸಮರ್ಥನೆ ಒಪ್ಪಲಿಕ್ಕೆ ಸಾಧ್ಯವೇ ಇಲ್ಲ ಆದರೆ ಈ ಅಸಹಾಯಕತೆಯ ಸಮರ್ಥನೆಯಲ್ಲೂ ಈ ಮಾವೋವಾದಿಗಳ ಸಶಸ್ತ್ರ ಸಂಘಟನೆ, ಹಿಂಸಾತ್ಮಕ ಕ್ರಾಂತೀ ಮಾರ್ಗ, ವಿಮೋಚನೆಯ ಹೆಸರಿನಲ್ಲಿ ಅಮಾಯಕರ ಹತ್ಯೆಗಳು ಇವೆಲ್ಲವನ್ನು ಫ್ರೊ.ಹರಗೋಪಾಲ್ ಅವರು ತೀವ್ರವಾಗಿ ಖಂಡಿಸಿದ್ದರು. ಹಿಂಸೆಗೆ ಅವರ ಸಮರ್ಥನೆ ಇರದಿದ್ದರೂ ಪರ್ಯಾಯ ಮಾರ್ಗಗಳ ಬಗೆಗಿನ ಅವರ ಪ್ರಶ್ನೆಗೆ ನಾವೆಲ್ಲ ಗಾಂಧೀ ಮಾದರಿಯನ್ನು ಉತ್ತರವಾಗಿ ಕೊಡಬೇಕಾಗಿತ್ತು. 70ರ, 80ರ ದಶಕದ ಫ್ಯೂಡಲ್ ವಿರೋಧಿ ನಕ್ಸಲ್ ಚಳವಳಿಗೂ 90ರ ದಶಕದ ಜಾಗತೀಕರಣಗೊಂಡ ಇಂಡಿಯಾ ನಂತರ 20 ವರ್ಷಗಳಲ್ಲಿ ಅನುಭವಿಸಿದ ಮಾವೋವಾದಿಗಳ ಭೂಗತ ಚಳವಳಿಗಳಿಗೂ ಹಾಗೂ ಅದರ ಹಿಂಸೆಯ ರೂಪಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಂದಿನ ನವ ಕಲೋನಿಯಲ್‌ನ ದಿನಗಳಲ್ಲಿ ಈ ಭೂಗತ ಚಳವಳಿ ದಕ್ಷಿಣದ ಆಂಧ್ರಪ್ರದೇಶದಿಂದ ಕ್ರಮೇಣ ಪಶ್ಚಿಮ ರಾಜ್ಯಗಳಿಗೆ ಕೇಂದ್ರಿತಗೊಂಡಿರುವುದರ ಹಿಂದೆ ಸರ್ಕಾರದ ಆತ್ಮಹ್ಯತ್ಯಾತ್ಮಕ ಹಾಗೂ ಭ್ರಷ್ಟಾಚಾರದ ಆಡಳಿತ ನೀತಿಗಳೇ ಕಾರಣ. ಇಲ್ಲಿನ ಖನಿಜ ಸಂಪತ್ತು ತಂದುಕೊಡುವ ಕೋಟ್ಯಾಂತರ ರೂಪಾಯಿಗಳ ಆದಾಯವು ಜಾಗತೀಕರಣದ ನೆಪದಲ್ಲಿ ಖಾಸಗಿ ಉದ್ಯಮಿಗಳ ಕೈಗೆ ಜಾರಿಕೊಂಡಿದ್ದು ಹಾಗೂ ಈ ಪ್ರಕ್ರಿಯೆಯಲ್ಲಿ ಆದಿವಾಸಿಗಳ ಹಾಗೂ ಹಿಂದುಳಿದ ಜನತೆಯ ಜನಜೀವನವೇ ಹದಗೆಟ್ಟು ಸಂಪೂರ್ಣವಾಗಿ ಅತಂತ್ರಗೊಂಡಿದ್ದು ಎಲ್ಲವೂ ಈಗಾಗಲೇ ಲೆಕ್ಕವಿಲ್ಲದಷ್ಟು ಬಾರಿ ಚರ್ಚಿತವಾಗಿದೆ. ಆದರೆ ಇದಕ್ಕೆ ಪರಿಹಾರ ಮಾತ್ರ ಇಂದು ಯಾರ ಕೈಗೂ ಸಿಗದಷ್ಟು ಬಲು ದೂರವಾಗಿ ಅವಸಾನಗೊಂಡಿದೆ. ಏಕೆಂದರೆ ಬಂಡವಾಶಾಹೀ ಮಾದರಿಗಳು ಸರ್ಕಾರಿ ಉದ್ದಿಮೆಗಳಾಗಿದ್ದಾಗ ಸಾಮಾಜಿಕ ಬದ್ಧತೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಅಷ್ಟೋ ಇಷ್ಟೋ ಪಾಲಿಸುತ್ತಿರುವಂತೆ ಕಂಡುಬಂದರೂ ಒಮ್ಮೆ ಅವು ಖಾಸಗೀಕರಣಗೊಂಡಾಗ ಈ ಎಲ್ಲಾ ನೆಲದ ಹಕ್ಕಿನ ಮಾದರಿಗಳಿಗೂ ತಿಲಾಂಜಲಿ ದೊರೆಯತ್ತದೆ. ಈ ಖಾಸಗೀ ಪಡೆಗಳಿಗೆ ಪ್ರಜಾತಾಂತ್ರಿಕ ಮೌಲ್ಯಗಳು ಕೇವಲ ಪುಸ್ತಕದ ಬದನೇಕಾಯಿ ಮಾತ್ರ. ಇಲ್ಲಿ ಐಡಿಯಾಲಜಿಗಳು ನಗೆಪಾಟಲಿಗೀಡಾಗುತ್ತವೆ. ಈ ಕಾಲಘಟ್ಟದಲ್ಲೇ ಸಾಮಾಜಿಕ ನ್ಯಾಯದ ಪರವಾದ ಚಳವಳಿಗಳು ಇನ್ನಿಲ್ಲದಂತೆ ನೆಲಕಚ್ಚಿದ್ದು ಈ ನವ ಕಲೋನಿಯಲ್‌ನ ಆರ್ಥಿಕ ಲಾಭ ತಂದುಕೊಡುವ ನವ ಫ್ಯೂಡಲ್‌ನ ರೋಮಾಂಚಕತೆಯ ಕಾರಣದಿಂದ. ಆಗಲೇ ಈ ಹಿಂಸಾತ್ಮಕ ಭೂಗತ ಮಾದರಿಗಳ ಮತ್ತೊಂದು ಆಯಾಮವೇ ಹುಟ್ಟಿಕೊಳ್ಳುತ್ತದೆ. ಚಿಂತಕ ‘ಚೊಮೆಸ್ಕಿ’ ತನ್ನ ದೇಶವಾದ ಅಮೇರಿಕಾದ ಬಗೆಗೆ ಹೇಳಿದ Manufactured Democracy ಮತ್ತು  friendly fascism ಪರಿಕಲ್ಪನೆ ನವ ಕಲೋನಿಯಲ್‌ ಸಂದರ್ಭದಲ್ಲಿ ಇಂಡಿಯಾದ ಪಾಲಿಗೂ ನಿಜವಾಗತೊಡಗಿರುವುದೂ ಸಹ ಪ್ರತಿರೋಧದ ನೆಲೆಯು ಹಿಂಸಾಚಾರಕ್ಕೆ ಹೊರಳುವುದಕ್ಕೆ ಕಾರಣ.

ಸರ್ಕಾರವೂ ಈ ಕೂಡಲೆ ನಕ್ಸಲ್‌ಪೀಡಿತ ಹಿಂದುಳಿದ ರಾಜ್ಯಗಳಲ್ಲಿ ಅಭಿವೃದ್ಧಿಯ ಕಾರ್ಯಗಳನ್ನು ಸಮರೋಪಾದಿಯಲ್ಲಿ ನಡೆಸಿ ಅಲ್ಲಿ ಸ್ವರ್ಗವನ್ನು ಸ್ಥಾಪಿಸಿದರೆ ಮಾವೋವಾದಿಗಳು ಇನ್ನಿಲ್ಲದಂತೆ ಮಾಯವಾಗುತ್ತಾರೆ ಎನ್ನುವ ಮಧ್ಯಮವರ್ಗದ ಸರಳೀಕೃತ ಗ್ರಹಿಕೆಯನ್ನು ಹರಗೋಪಾಲ್ ಅವರು ಬಹಳ ಆಳವಾಗಿ ವಿವೇಚಿಸಿದರು. ಇಂದಿನ ಭ್ರಷ್ಟ ವ್ಯವಸ್ಥೆಯಲ್ಲಿ ಒಂದು ಹುಲ್ಲು ಗರಿಕೆ ಬೆಳೆಯುವುದು ಸಹ ಕಷ್ಟವೆನ್ನುವುದನ್ನು ನಾವೆಲ್ಲ ಅರಿತುಕೊಳ್ಳಲೇಬೇಕು. ಆದರೆ ನಮ್ಮಲ್ಲಿಯೇ ಗೊಂದಲಗಳಿದ್ದವು. ಈ ಹಿಂಸೆ ಹಾಗೂ ಪ್ರತಿಹಿಂಸೆಯ ಕರ್ಮಕಾಂಡಗಳನ್ನು ಕೇವಲ ಅಧ್ಯಯನಗಳ ಮೂಲಕ, ಮಾಧ್ಯಮಗಳ ಮೂಲಕ ಅರಿತುಕೊಂಡ ನಾವು ಈ ಹಿಂಸೆ ಹಾಗೂ ಪ್ರತಿಹಿಂಸೆಯನ್ನು 35 ವರ್ಷಗಳ ಕಾಲ ನೇರವಾಗಿ ಮುಖಾಮುಖಿಯಾಗಿದ್ದ, ಅದರ ಕಾರಣಕರ್ತರುಗಳನ್ನು ಹತ್ತಿರದಿಂದ ಕಂಡು ಚರ್ಚಿಸಿದ್ದ ಫ್ರೊ.ಹರಗೋಪಾಲ್ ಅವರ ಬಳಿ ನಾವು ಗಾಂಧೀ ಮಾದರಿಯನ್ನು ಮಾತನಾಡಿದರೆ ನಗೆಪಾಟಲಿಗೆ ಈಡಾಗುತ್ತಿದ್ದೆವು. ಆದರೆ ಪ್ರಜಾಪ್ರಭುತ್ವದ ರಕ್ಷಕರಾದ ನಾವು ಗಾಂಧೀ ಮಾರ್ಗವನ್ನು ಮರಳಿ ಈ ಎರಡೂ ಬಗೆಯ ಹಿಂಸೆಗಳೊಂದಿಗೆ ಮುಖಾಮುಖಿಯಾಗಿಸುತ್ತಾ ಪರಿಹಾರವನ್ನು ಕಂಡುಕೊಳ್ಳಲೇಬೇಕು ಎನ್ನುವುದರಲ್ಲಿ ನಮ್ಮಲ್ಲಂತೂ ಯಾವುದೇ ಅನುಮಾನಗಳಿಲ್ಲ. ಇಲ್ಲಿ ಯಾವುದೂ ಸುಲಭವಲ್ಲ. ಅದು ಹೇಗೆ ಎಂದರೆ ಅದಕ್ಕೆ ಸಿದ್ಧ ಉತ್ತರವಂತೂ ದೊರಕದು. ನಾವು ಮರಳಿ ಈ ನವ ಕಲೋನಿಯಲ್ ವ್ಯವಸ್ಥೆಯನ್ನು ಗಾಂಧೀಜಿಯವರ ಹಿಂದ್ ಸ್ವರಾಜ್ ಚಿಂತನೆಯೊಂದಿಗೆ ಇಂದಿನ ಆಧುನಿಕ ಕಾಲಕ್ಕೆ ತಕ್ಕಂತೆ ಬಳಸಿಕೊಳ್ಳುವುದರ ಮೂಲಕ ಮೊದಲ ಹೆಜ್ಜೆಯನ್ನು ಶುರು ಮಾಡಬಹುದು. ಸಾಂಸ್ಕೃತಿಕ ಯಜಮಾನ್ಯಕ್ಕೆ ಹೆಚ್ಚಿನ ಅಧಿಕಾರ ದೊರಬೇಕು ಎಂದು ಹೇಳಿದ ಖ್ಯಾತ ರಾಜಕೀಯ ಚಿಂತಕ ಗ್ರಾಮ್ಷಿಯ ಮಾತುಗಳು ಇಂದಿಗೂ ಪ್ರಾಮುಖ್ಯತೆಯನ್ನು ಪಡೆದಿದೆ. ಗ್ರಾಮ್ಷಿ ಹೇಳಿದ ದುಡಿಯುವ ವರ್ಗಗಳನ್ನು ಬುದ್ಧಿ ಜೀವಿಗಳನ್ನಾಗಿಯೂ ರೂಪಿಸಬೇಕು ಎನ್ನುವ ಮಾತುಗಳು ಇಂದಿನ ಸಂದರ್ಭದಲ್ಲಿ ಬಹಳ ಮುಖ್ಯವೆನಿಸುತ್ತದೆ.

ಆದರೆ ಕೋಮುವಾದ ಹಿಂಸೆಯನ್ನು ಏಡ್ಸ್ ಮತ್ತು ಮಾವೋವಾದಿ ಹಿಂಸೆಯನ್ನು ವೈರಸ್ ಎಂತಲೂ ಕರೆದ ನಮ್ಮ ಪ್ರಮುಖ ಲೇಖಕರಾದ, ಕನ್ನಡದ ಅದ್ಭುತ ಕಥೆಗಾರರಾದ ಯು.ಆರ್.ಅನಂತಮೂರ್ತಿಯವರ ಜನಪ್ರಿಯ ಹೇಳಿಕೆ ಮಾತ್ರ ಅತ್ಯಂತ ಜೊಳ್ಳು ಎಂಬುದರ ಬಗೆಗೆ ಯಾವುದೇ ಸಂಶಯವಿಲ್ಲ. ಎಲ್ಲಾ ಬಗೆಯ ಸಂಸ್ಕೃತಿ ಚಿಂತನೆಗಳನ್ನು ರೋಮ್ಯಾಂಟಿಕ್‌ಗೊಳಿಸುವ, ಸದಾ ಜಗತ್ತಿನ ಚಿಂತಕರನ್ನು ಕೋಟ್ ಮಾಡುತ್ತಾ ಅತ್ಯಂತ ಆಕರ್ಷಕವಾಗಿ ಮಾತನಾಡುವ ನಮ್ಮ ಪ್ರೀತಿಯ ಲೇಖಕ ಅನಂತಮೂರ್ತಿಯವರಲ್ಲಿ ಯಾವುದೇ ಸಮಸ್ಯೆಗೆ ವಾಸ್ತವಾದದ ನೆಲೆಯ ಪರ್ಯಾಯ ಚಿಂತನೆಗಳಿದ್ದಂತಿಲ್ಲ. ಏಕೆಂದರೆ ಪ್ರತಿಯೊಂದನ್ನು ಅಮೂರ್ತವಾಗಿ, ಸಾಹಿತ್ಯದ ರೋಮಾಂಚಕತೆಯಲ್ಲಿ ಗ್ರಹಿಸುವ ಅನಂತಮೂರ್ತಿಯವರು ಯಾವುದನ್ನೂ ಹತ್ತಿರದಿಂದ ಹಾಗೂ ಅನುಭವದ ಮೂಸೆಯಲ್ಲಿ ಅರಿತು ಮಾತನಾಡಿದ್ದು ಕಡಿಮೆಯೆಂದೆನಿಸುತ್ತದೆ. ಅಷ್ಟೇಕೆ ಇಂಡಿಯಾದ ಸಮಾಜವಾದಿ ಚಳವಳಿಗಳ ಒಟ್ಟಾರೆ ಸಾಧನೆಗಳು, ಅದರ ಧನಾತ್ಮಕ ಹಾಗೂ ಖುಣಾತ್ಮಕ ಮಾದರಿಗಳು, ಈ ಚಳವಳಿ ಮತ್ತು ಸಿದ್ಧಾಂತ ಬಹುಪಾಲು ಸೋತದ್ದೆಲ್ಲಿ, ಕೆಲವೇ ಸಲ ಗೆದ್ದದ್ದೆಲ್ಲಿ ಎಂದು ಗುರುತಿಸಲು ಅನಂತಮೂರ್ತಿಯವರಿಗೆ ಇನ್ನೂ ಸಾಧ್ಯವಾದಂತಿಲ್ಲ. ಈ ಚಳವಳಿಯನ್ನು ಅದರಲ್ಲೂ ಕರ್ನಾಟಕದ ಸಮಾಜವಾದಿ ಚಳವಳಿಗಳನ್ನು ತೀರಾ ಹತ್ತಿರದಿಂದ ಕಂಡಂತಹ ಅನಂತಮೂರ್ತಿಯವರು ಇಂದಿಗೂ ಸಮಾಜವಾದವನ್ನು ಇಂಡಿಯಾದ ನೆಲೆಯಲ್ಲಿ ಅರ್ಥೈಸಲು ವಿಫಲರಾಗುತ್ತಾರೆ. ಏಕೆಂದರೆ ಇಂದಿಗೂ ಇವರಿಗೆ ನಮ್ಮ ಸಾಮಾಜಿಕ ಸಂರಚನೆಗಳು ಅರ್ಥವಾದಂತಿಲ್ಲ. ಏಕೆಂದರೆ ಬಲು ಸುಲಭವಾಗಿ ಇವರು ತಮ್ಮ ಮಾತಿನ ರೋಮಾಂಚಕತೆಗೆ ತಾವೇ ಮರುಳಾಗುವ ಗುಣದಿಂದ. ಏಕೆಂದರೆ ತಲ್ಲಣಗಳನ್ನು, ಕ್ರೈಸಿಸಸ್‌ನ್ನು ಖುಜುತ್ವದ ಗುಣದಿಂದ, ಶಬ್ದ ಸೂತಕದ ನೆಲೆಯಲ್ಲಿ ಮಾತನಾಡುವುದರ ಬದಲಾಗಿ ಆಕರ್ಷಕವಾಗಿ, ಅದ್ಭುತವಾಗಿ, ನಿರರ್ಗಳವಾಗಿ ಮಾತನಾಡುವುದರಿಂದ. ಏಕೆಂದರೆ ಎಲ್ಲವನ್ನೂ ಪುಸ್ತಕದ ಪಾಂಡಿತ್ಯದ ಮೂಲಕ ಅಧ್ಯಯನವನ್ನು ನಡೆಸಿ ಈ ಆಕರ್ಷಕ ಪಾಂಡಿತ್ಯವನ್ನೇ ತಮ್ಮ ವಾದಕ್ಕೆ ನೆಲೆಯನ್ನು ಬಳಸಿಕೊಂಡರೇ ಹೊರತಾಗಿ ಸಾಮಾನ್ಯ ಜನರ ಬದುಕಿನ ಜೀವನದೊಂದಿಗೆ ಒಡನಾಡಿ, ಬೆರೆತು ಆ ವಾಸ್ತವವಾದಿ ಅಧ್ಯಯನದಿಂದ ಜೀವಂತ ಮಾದರಿಗಳನ್ನು, ನೈಜ ಕಳಕಳಿಗಳನ್ನು ನಮ್ಮ ತಲೆಮಾರಿಗೆ ತಲುಪಿಸಲು ಅನಂತಮೂರ್ತಿಯವರು ವಿಫಲರಾಗಿದ್ದಾರೆ. ಉದಾಹರಣೆಗೆ ಪ್ರತಿಯಾಗಿ ಬಾಲಗೋಪಾಲ್ ಅವರು ಇಲ್ಲಿನ ಎನ್ಕೌಂಟರ್‌ಗಳ ಬಗೆಗೆ ಮಾತನಾಡಿದ್ದು, ಆದಿಲಾಬಾದಿನಲ್ಲಿ ಬರ ಹಾಗೂ ಟಾಡಾ, ಖುಷ್ಯಷೃಂಗನಿಗೆ ಕಾಯುತ್ತಿರುವ ರಾಯಲಸೀಮಾ, ಚುಂಡೂರು, ನಂತರದ ಇತರ ಚೂರುಗಳು ದಂತಹ ಅರ್ಥಪೂರ್ಣ ಒಳತೋಟಿಗಳನ್ನುಳ್ಳ, ನೆಲದ ಅಪ್ತತೆಯನ್ನು ಮೈದಾಳಿದ ನುಡಿಕಟ್ಟುಗಳ ಬರವಣಿಗೆಗಳನ್ನು ಹಾಗೂ ಚಿಂತನೆಗಳನ್ನು ನಮಗೆ ಕಾಣಿಸುವ ರೀತಿ ಬಲು ಅನನ್ಯವಾದದು. ಆದೇ ರೀತಿ ತೆಲಂಗಾಣ ಹೋರಾಟದ ಬಗೆಗೆ, ನವಕಲೋನಿಯಲ್‌ನ ಖಾಂಡವ ದಹನದ ಬಗೆಗೆ ಫ್ರೊ.ಹರಗೋಪಾಲ್ ಅವರು ಅತ್ಯಂತ ಮೌಲಿಕವಾಗಿ, ಮನಮುಟ್ಟುವಂತೆ ಬರೆದಿದ್ದಾರೆ ಹಾಗೂ ಮಾತನಾಡಿದ್ದಾರೆ. ಆದರೆ ನಮ್ಮ ಅನಂತಮೂರ್ತಿಯವರು ಹಾಗೂ ಅವರ ಮಾದರಿಯ ಕೆಲವು ಚಿಂತಕರಿಗೆ ಇದು ಸಾಧ್ಯವೇ ಅಗಲಿಲ್ಲ.

ತಮ್ಮ ಭಾಷಣದ ಮಧ್ಯೆ ಫ್ರೊ.ಹರಗೋಪಾಲ್ ಅವರು 35 ವರ್ಷಗಳ ಮಾನವ ಹಕ್ಕುಗಳ ಹೋರಾಟದ ಸಂದರ್ಭದಲ್ಲಿ ತಮ್ಮೊಂದಿಗೆ ಜೊತೆಜೊತೆಯಾಗಿ ನಡೆದ ಇಬ್ಬರು ಹಿರಿಯ ಐಎಎಸ್ ಆಫೀಸರ್‌ಗಳನ್ನು ನೆನೆಸಿಕೊಂಡರು. ಅವರು ಶಂಕರನ್ ಮತ್ತು ಬಿ.ಡಿ.ಶರ್ಮ. ಇದು ನಿಜಕ್ಕೂ ಹೃದಯಂಗಮವಾದದ್ದು. ಏಕೆಂದರೆ ಫ್ರೊ.ಹರಗೋಪಲ್ ಕುರಿತಾಗಿ ಮಾತನಾಡುವಾಗ ಮೇಲಿನ ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಹೊರತುಪಡಿಸಿ ಮಾತನಾಡಲು ಸಾಧ್ಯವೇ ಇಲ್ಲ.

ಶಂಕರನ್ ಅವರಂತೂ ಜನತೆಯ ಐಎಎಸ್ ಅಧಿಕಾರಿ ಎಂದು ಜನಪ್ರಿಯರಾಗಿದ್ದರು. ಬದಲಾವಣೆಗಾಗಿ ಕಾಯುತ್ತಾ ಕೂಡದೆ ಸ್ವತಃ  ತಾವೇ ಮುನ್ನುಗ್ಗಿ ಬದಲಾವಣೆಯ ಪ್ರಕ್ರಿಯೆಯೊಳಗೆ ಬೆರೆತದ್ದು ಈ ಶಂಕರನ್ ಅವರ ವಿಶೇಷತೆ. ತಮ್ಮ ಜೀವನವನ್ನೇ ದಲಿತರ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟ ಅಪರೂಪದ ಐಎಎಸ್ ಅಧಿಕಾರಿ. ಬ್ರಹ್ಮಚಾರಿಯಾಗಿದ್ದ ಶಂಕರನ್ ಅವರು ತುಂಬಾ ಸರಳವಾಗಿ ಬದುಕಿದರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡರ ಅಡಿಯಲ್ಲಿ ಸೇವೆ ಸಲ್ಲಿಸಿದರು. ತಮ್ಮ ಅಧಿಕಾರದ ಅವಧಿಯಲ್ಲಿ ಜೀತದ ಕಾಯಕವನ್ನು ನಿರ್ಮೂಲನೆಗೊಳಿಸಿದರು, ದಲಿತರಿಗೆ ವಿಶೇಷ  ಸ್ಥಾನಮಾನ ಕಲ್ಪಿಸಿದರು, ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ ಶೋಷಿತ ಸಮುದಾಯಕ್ಕೆ ವಿಶೇಷ ಸ್ಥಾನಮಾನಗಳನ್ನು, ಹಕ್ಕುಗಳನ್ನು ಕಲ್ಪಿಸಿಕೊಟ್ಟರು. ಆಂಧ್ರಪ್ರದೇಶದ ಸಮಾಜ ಕಲ್ಯಾಣ ಇಲಾಖೆಯ ಸೆಕ್ರೆಟರಿ ಆಗಿದ್ದಾಗ ಜೀತದಾಳುಗಳನ್ನು ಜೀತಮುಕ್ತಗೊಳಿಸಲು ತಾವೇ ಸ್ವತಃ  ಮುಂದೆ ನಿಂತು ಹಳ್ಳಿಗಳಿಗೆ ಸಂಚರಿಸಿ ಅಲ್ಲಿನ ಪ್ರತಿಯೊಬ್ಬರನ್ನು ವೈಯುಕ್ತಿಕವಾಗಿ ಮಾತನಾಡಿಸಿ ಜೀತವೆನ್ನುವುದರ ಕ್ರೌರ್ಯವನ್ನು ವಿವರಿಸಿ ಇದನ್ನು ತೊಲಗಿಸಲು ಮನವೊಲಿಸುತ್ತಿದ್ದರು. ಹಾಗೆಯೇ ತಮ್ಮ ಈ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಿದರು. ಆದರೆ ಇದನ್ನು ಜೀರ್ಣಿಸಿಕೊಳ್ಳಲು ಆಗದ ಹಾಗೂ ಆಗ ಇದರಿಂದ ಕುಪಿತರಾದ ಆಗಿನ ಆಂಧ್ರದ ಮುಖ್ಯಮಂತ್ರಿಗಳು ಶಂಕರನ್ನು ತಂಟೆಕೋರರೆಂದು ಹಂಗಿಸಿದರು, ಆದರೆ ಇದಕ್ಕೆ ಪ್ರತ್ಯುತ್ತರ ನೀಡಿದ ಶಂಕರನ್ ಇದು ತನ್ನ ಕರ್ತವ್ಯ ಹಾಗೂ ಮಾನವೀಯತೆಯ ಕೆಲಸ ಎಂದು ಸಮರ್ಥಿಸಿಕೊಂಡರು. ಕಡೆಗೆ ಸರ್ಕಾರವು ಇವರನ್ನು ರಜೆಯ ಮೇಲೆ ತೆರಳುವಂತೆ ಒತ್ತಡ ತಂದಿತು. ಆದರೆ ಇವರೆಷ್ಟು ಜನಪ್ರಿಯರೆಂದರೆ ಈ ಸಂದರ್ಭದಲ್ಲಿ ತ್ರಿಪುರಾದ ಮುಖ್ಯಮಂತ್ರಿಗಳಾಗಿದ್ದ ನೃಪೇನ್ ಚಕ್ರವರ್ತಿ ಅವರು ಶಂಕರನ್ ಅವರನ್ನು ತಮ್ಮ ರಾಜ್ಯಕ್ಕೆ ಆದ್ಯತೆಯ ಮೇರೆಗೆ ಕರೆಸಿಕೊಂಡು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಿಕೊಂಡರು. ಈ ಇಬ್ಬರು ಬ್ರಹ್ಮಚಾರಿಗಳ ಜೋಡಿ ಆ ಕಾಲಕ್ಕೆ ತ್ರಿಪುರಾ ರಾಜ್ಯದಲ್ಲಿ ಮನೆಮಾತಾಗಿತ್ತು. ಇವರಿಬ್ಬರೂ ಒಂದು ಕೋಣೆಯ ಸರ್ಕಾರಿ ಅತಿಥಿಗೃಹದಲ್ಲಿ ವಾಸಿಸುತ್ತಿದ್ದರು. ಒಬ್ಬರಿಗೊಬ್ಬರು ಪೂರಕವಾಗಿ ಕೆಲಸ ಮಾಡಿದರು. ಇವರಿಬ್ಬರ ಜೋಡಿಯ ಆಡಳಿತದ ಆ 6 ವರ್ಷಗಳು ಅತ್ಯಂತ ಯಶಸ್ವೀ ಅವಧಿಯಾಗಿತ್ತು ಎಂದು ಹರ್ಷ ಮಂದರ್ ಅವರು ನೆನಸಿಕೊಳ್ಳುತ್ತಾರೆ. ಶಂಕರನ್ ತಮ್ಮ ಜೀವನದುದ್ದಕ್ಕೂ ಈ ನಕ್ಸಲ್ ಚಳವಳಿಗಳ ಮಿಥ್ ಅನ್ನು, ಅದರ ವಿಫಲತೆಯ ಗುಣಗಳನ್ನು ಒಡೆಯುವ ಕಾರ್ಯಕ್ಕೆ ಕೈ ಹಾಕಿದ್ದರು. ಸುಪ್ರೀಂ ಕೋರ್ಟ್‌ಗೆ ಕಮಿಷನರ್ ಆಗಿ ನಿಯುಕ್ತರಾದಾಗ ಶಂಕರನ್ ಅವರು ಸರ್ಕಾರಗಳು ಹೇಗೆ ಅನುಕೂಲಕರ ಹಾಗೂ ಜನಪರ ಆಡಳಿತವನ್ನು ಕೊಡಲು ಸೋಲುತ್ತವೆ ಇವರ ಈ ಸೋಲಿನಿಂದ ಸಮಾಜದ ಕೆಳಗಿನ ವರ್ಗಗಳಿಗೆ ಆಗುವ ತೊಂದರೆಗಳು ಹಾಗೂ ಈ ತೊಂದರೆಗಳನ್ನು ಬಳಸಿಕೊಂಡು ಹುಟ್ಟಿಕೊಳ್ಳುವ ಮಾವೋವಾದಿಗಳು ಎಂಬುದರ ಕುರಿತಾಗಿ ಮನಮುಟ್ಟುವಂತೆ ವಿವರಿಸುತ್ತಿದ್ದರಂತೆ ಈ ಜನರ ಐಎಎಸ್ ಆಫೀಸರ್!! ಮಾವೋವಾದಿಗಳ ಸಮಸ್ಯೆಯನ್ನು ಗಾಂಧಿಯ ಮಾದರಿಯಲ್ಲಿ ಬಗೆಹರಿಸಲು ಶ್ರಮಿಸುತ್ತಿದ್ದರು. ಹಿಂಸೆಯನ್ನು ತೀವ್ರವಾಗಿ ಖಂಡಿಸುತ್ತಿದ್ದರು. ಅತ್ಯಂತ ಕುತೂಹಲದ ವಿಷಯವೆಂದರೆ ಇಂತಹ ಶಂಕರನ್ ಅವರನ್ನು ಕೂಡ ನಕ್ಸಲರು ಅಪಹರಿಸಿದ್ದರು!! ಆದರೆ ಈ ಮಾವೋವಾದಿಗಳು ಶಂಕರನ್ ಅವರನ್ನು ಅಪಹರಿಸಿದ್ದು ಒತ್ತೆಯಾಳಾಗಿ ಇರಿಸಿಕೊಳ್ಳಲು ಅಲ್ಲ. ಬದಲಾಗಿ ಶಂಕರನ್ ಅವರೊಂದಿಗೆ ಸಮಾಜದ ಕಲ್ಯಾಣದ ಕುರಿತಾಗಿ ಚರ್ಚಿಸಲು!! ತಾವು ನಿಜಕ್ಕೂ ಹಿಂಸಾವಾದಿಗಳು ಅಲ್ಲವೆಂದು ತಮ್ಮ ಆಶಯಗಳನ್ನು ಶಂಕರನ್ ಅವರಿಗೆ ಮನವರಿಕೆ ಮಾಡಿಕೊಳ್ಳಲು. ಕೆಲವು ದಿನಗಳ ನಂತರ ಯಾವುದೇ ಷರತ್ತಿಲ್ಲದೆ ಶಂಕರನ್ ಅವರನ್ನು ಬಿಡುಗಡೆಗೊಳಿಸಿದ್ದರು!! ಇದು ಶಂಕರನ್‌ರವರ ಜನಪ್ರಿಯ ಮಾದರಿ. ನಂತರ ಎರಡು ಬಾರಿ ಹರಗೋಪಾಲ್ ಅವರೊಂದಿಗೆ ಜೊತೆಗೂಡಿ ಮಾವೋವಾದಿಗಳೊಂದಿಗೆ ಸಂಧಾನಕಾರರಾಗಿಯೂ ಕೆಲಸ ಮಾಡಿದ್ದರು ಈ ಶಂಕರನ್.

ಇದನ್ನೆಲ್ಲ ಶಂಕರನ್ ಸಾಧಿಸಿದ್ದು ಒಬ್ಬ ಐಎಎಸ್ ಅಧಿಕಾರಿಯಾಗಿಯೇ ಹೊರತು ರಾಜಕಾರಣಿಯಾಗಿಯಲ್ಲ. 1992ರಲ್ಲಿ ತಾವು ನಿವೃತ್ತಿ ಹೊಂದಿದ ನಂತರವೂ ಪುಂಜಗೊಟ್ಟದಲ್ಲಿ ಒಂದು ಕೋಣೆಯ ಸಣ್ಣ ಅಪಾರ್ಟಮೆಂಟ್ ಒಂದರಲ್ಲಿ ವಾಸಿಸುತ್ತಿದ್ದರು. ತಮ್ಮ ಪಿಂಚಣಿಯ ಅರ್ಧಭಾಗವನ್ನು ದಲಿತ ವಿಧ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ತಮ್ಮ ಕಡೆಯ ದಶಕವನ್ನು ಸಫಾಯಿ ಕರ್ಮಚಾರಿಗಳ ಏಳಿಗೆಗಾಗಿ ಮೀಸಲಿಟ್ಟರು. ಮಲದ ಗುಂಡಿಯನ್ನು ತೊಳೆಯುವ ಭಂಗಿಗಳ ಸಂಖ್ಯೆಯನ್ನು 13 ಲಕ್ಷದಿಂದ 3 ಲಕ್ಷಕ್ಕೆ ಇಳಿಸಿದ್ದರು ಈ ಶಂಕರನ್. ಸಫಾಯಿ ಕರ್ಮಚಾರಿ ಸಂಘದ ನಾಯಕನದ ‘ಬಿಜವಾಡ ವಿಲ್ಸನ್’ ಇವರ ಮಗನಂತಿದ್ದ. ತಮ್ಮ ಅಧಿಕಾರದ ಅವಧಿಯಲ್ಲಿ ಅವರು ಸರ್ಕಾರಿ ಕೆಲಸದ ಮೇಲೆ ಪ್ರವಾಸದ ಹೊರಟಾಗ ಇಳಿದುಕೊಳ್ಳುತ್ತಿದ್ದುದು ದಲಿತರ ಕೇರಿಗಳಲ್ಲಿ! ಅನೇಕ ರಾಜ್ಯಗಳು ಮತ್ತು ದೆಹಲಿ ಹಾಗೂ ಆಂಧ್ರಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಂಕರನ್ ಅವರು ತಮ್ಮ ಅಧಿಕಾರದ ಅವಧಿಯುದ್ದಕ್ಕೂ ತಮ್ಮೊಂದಿಗೆ ಕೂಡಿಟ್ಟುಕೊಂಡಿದ್ದು ಕೇವಲ ಒಂದು ಭ್ರೀಫ್ಕೇಸ್ ಮತ್ತು ಅದರಲ್ಲಿ ಕೇವಲ ಎರಡು ಜೊತೆ ಬಟ್ಟೆಗಳು ಮಾತ್ರ. ಇದನ್ನು ಹರಗೋಪಾಲ್ ಅವರು  ಬಹಳ ಭಾವುಕರಾಗಿ ಆಗಿ ನೆನಸಿಕೊಂಡರು. ತಾವು ಸಾಯುವಾಗಲೂ ಈ ಐಎಎಸ್ ಅಧಿಕಾರಿ ಶಂಕರನ್ ಬಿಟ್ಟುಹೋಗಿದ್ದು ಈ ಭ್ರೀಫ್ಕೇಸ್ ಮತ್ತು ಆ ಎರಡು ಜೊತೆ ಬಟ್ಟೆಗಳು ಮತ್ತು ಸಾವಿರಾರು ವರ್ಷಗಳ ಕಾಲ ಜೀವಂತವಾಗಿ ಬದುಕುಳಿಯುವ ಆದರ್ಶದ, ಜನಪರ ಜೀವನದ ಮಾದರಿ.

ಅಕ್ಟೋಬರ್ 10 2010ರಲ್ಲಿ ತಮ್ಮ 76ರ ವಯಸ್ಸಿನಲ್ಲಿ ಹೃದಯಾಘಾತದಿಂದ ಶಂಕರನ್‌ಗುರು ತೀರಿಕೊಂಡರು. ಆಗ ಒಬ್ಬ ಜನನಾಯಕನ ಶವಸಂಸ್ಕಾರಕ್ಕೆ ಮುತ್ತುವಂತೆ ಜನಸಾಗರವೇ ಹರಿದುಬಂದಿತ್ತು. ಈ ಜನಸಾಗರದಲ್ಲಿ ಸರ್ಕಾರಿ ಅಧಿಕಾರಿಗಳು, ಪೋಲೀಸರು, ದಲಿತರು, ಆದಿವಾಸಿಗಳು, ಕೂಲಿಕಾರ್ಮಿಕರು ಎಲ್ಲರೂ ಸೇರಿದ್ದರು. ಈ ಎಲ್ಲರ ಕಣ್ಣಲ್ಲಿ ನೀರು. ಬರೀ ನೀರು. ತಂದೆಯನ್ನು, ಪೋಷಕನನ್ನು, ಗೆಳೆಯನನ್ನು ಕಳೆದುಕೊಂಡ ಅಪಾರವಾದ ಸಂಕಟ ಅಲ್ಲಿ ಮನೆಮಾಡಿತ್ತು.

ಫ್ರೊ.ಹರಗೋಪಾಲ್ ಅವರ ಮಾನವ ಹಕ್ಕುಗಳ ಹೋರಾಟದಲ್ಲಿ ಅವರ ಜೊತೆಗೆ ಎರಡನೇ ಸರ್ಕಾರಿ ಅಧಿಕಾರಿಯಾಗಿ ಹೆಗಲುಕೊಟ್ಟವರು ಮತ್ತೊಬ್ಬ ಐಎಎಸ್ ಅಧಿಕಾರಿ 87ರ ಹರೆಯದ ಬಿ.ಡಿ.ಶರ್ಮ. ಇವರೂ ಸಹ ತಮ್ಮ ಸರಳ ಜೀವನಕ್ಕೆ ಹೆಸರುವಾಸಿ. ಐಎಎಸ್ ಅಧಿಕಾರಿಯಾಗಿದ್ದರೂ ಜೀವನ ಪೂರ್ತಿ ಖಾದಿ ಬಟ್ಟೆಯನ್ನು ಮಾತ್ರ ತೊಟ್ಟರು. ಜೀವನಪೂರ್ತಿ ಆದಿವಾಸಿಗಳ ಹಕ್ಕಿಗಾಗಿ ಹೋರಾಡಿದರು. ಇವರು ತೀರಾ ಇತ್ತೀಚೆಗೆ ತಮ್ಮ 87ರ ಹರೆಯದಲ್ಲಿ  ಸುಕ್ಮ ಕಲೆಕ್ಟರ್ ಅಲೆಕ್ಸ ಪೌಲ್ ಮೆನನ್ ಮತ್ತು ಇಬ್ಬರು ಇಟಲಿ ಒತ್ತೆಯಾಳುಗಳ ಬಿಡುಗಡೆಗಾಗಿ ಹರಗೋಪಾಲ್ ಅವರೊಂದಿಗೆ ಸಂಧಾನಕಾರರಾಗಿ ಭಾಗವಹಿಸಿದ್ದರು. ಈ ಅಧಿಕಾರಿಗಳ ಅಪಹರಣದ ಬಗ್ಗೆ ಕೇಳಿದಾಗ ಬಿ.ಡಿ.ಶರ್ಮ ಹೇಳುತ್ತಿದ್ದುದು ‘ಸಾವಿರಾರು ಅಮಾಯಕ ಬಡವರು, ಆದಿವಾಸಿಗಳನ್ನು ಅನುಮಾನಾಸ್ಪದವಾಗಿ ಜೈಲಿನಲ್ಲಿ ಬಂಧಿಸಿಟ್ಟೀದ್ದೀರಲ್ಲ ಇದು ಅಪಹರಣವಲ್ಲವೇ’ ಎಂದು ಪ್ರಶ್ನಿಸುತ್ತಿದ್ದರು ಈ ಮಾಜಿ ಐಎಎಸ್ ಅಧಿಕಾರಿ! ಆದರೂ ಸಹ ಇವರು ಮಾವೋವಾದಿಗಳ ಹಿಂಸೆಯನ್ನು ಖಂಡಿಸುತ್ತಿದ್ದರು. ಇವರೊಂದಿಗೆ ಅನೇಕ ವರ್ಷಗಳ ಕಾಲ ಕೆಲಸ ಮಾಡಿರುವ ಫ್ರೊ.ಹರಗೋಪಾಲ್ ನೆನೆಸಿಕೊಳ್ಳುತ್ತಾ  ಬಿ.ಡಿ.ಶರ್ಮ ಅವರು ಕಮಿಷನರ್ ಆಗಿದ್ದರೂ ಸಹ ಎರಡನೇ ದರ್ಜೆಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಒಂದು ವೇಳೆ ಮುಂಗಡ ಟಿಕೇಟು ಸಿಗದಿದ್ದರೆ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಒರಿಸ್ಸಾದ ಆ ಸುಡುಬಿಸಿಲಿನಲ್ಲಿಯೂ ಶರ್ಮ ಅವರು ಫ್ಯಾನ್ ಅನ್ನು ಬಳಸುತ್ತಿರಲಿಲ್ಲ. ಈ ರೀತಿಯ ಸೌಲಭ್ಯಗಳನ್ನು ಬಯಸುವವನು ಅದು ಹೇಗೆ ಆದಿವಾಸಿಗಳ, ಕೂಲಿ ಕಾರ್ಮಿಕರ ಪರವಾಗಿ ಹೋರಾಡಲು ಸಾಧ್ಯ ಎಂದು ಸವಲತ್ತುಗಳನ್ನು ತಿರಸ್ಕರಿಸುತ್ತಿದ್ದರು. ಒರಿಸ್ಸಾದ ಬಸ್ತರ್‌ನಲ್ಲಿ ಕಮೀಷನರ್ ಆಗಿ ಕೆಲಸ ಮಾಡುವಾಗ ಗೊಂಡಾರಣ್ಯಗಳಲ್ಲಿ ಏಕಾಂಗಿಯಾಗಿ ಸಂಚರಿಸುತ್ತಿದ್ದರು. ನನ್ನ ಜಿಲ್ಲೆಗೆ, ನನ್ನ ಜನರ ಬಳಿಗೆ ಹೊರಡುವಾಗ ನನಗೆ ಸುರಕ್ಷತೆ ಬೇಡ ಎಂದು ಹೇಳುತ್ತಿದ್ದರು. ಇವರು ಮಧ್ಯಪ್ರದೇಶದಲ್ಲಿ ಬುಡಕಟ್ಟುಗಳ ಸೆಕ್ರೆಟರಿ ಆಗಿದ್ದಾಗ ಅಲ್ಲಿನ ಸರ್ಕಾರವು 15 ಪೇಪರ್ ಕಾರ್ಖಾನೆಗಳನ್ನು ಸ್ಥಾಪಿಸುವುದನ್ನು ತಡೆದರು. ಈ ಕಾರ್ಖಾನೆಗಳು ಆದಿವಾಸಿಗಳ ಬದುಕನ್ನು ಹಾಳು ಮಾಡುತ್ತದೆಂದು ಗುಡುಗಿದ್ದರು. ಆದರೆ ಸರ್ಕಾರ ಇವರ ವಿರೋಧಕ್ಕೆ ಬೆಲೆ ಕೊಡದಿದ್ದಾಗ ಶರ್ಮ ರಾಜೀನಾಮೆಯನ್ನು ಕೊಟ್ಟರು. ಎಂದು ನೆನಸಿಕೊಳ್ಳುತ್ತಾರೆ. ಕೆಲಸದಿಂದ ನಿವೃತ್ತಿ ಹೊಂದಿದ ನಂತರ ‘ಭಾರತ ಜನಾಂದೋಲನ’ ವೆನ್ನುವ ಸಂಘವನ್ನು ಸ್ಥಾಪಿಸಿದರು. ಇದರ ಮೂಲಕ ಒರಿಸ್ಸಾದಲ್ಲಿ ಪೋಸ್ಕೋ ಕಂಪನಿಯ ವಿರುದ್ಧ ಆದಿವಾಸಿಗಳ ಪರವಾಗಿ ಹೋರಾಡಿದರು. ಪ್ರತಿ ಹಂತದಲ್ಲೂ ಸರ್ಕಾರವನ್ನು ಚಾಲೆಂಜ್ ಮಾಡುತ್ತಿದ್ದರು ಈ ನಿವೃತ್ತ ಐಎಎಸ್ ಅಧಿಕಾರಿ ಶರ್ಮ!!

ಆದರೆ ಬೌದ್ಧಿಕವಾಗಿ ದಿವಾಳಿಯಾದ ನಮ್ಮ ಮಾಧ್ಯಮಗಳಿಗೆ, ಅಧಿಕಾರಿಶಾಹಿಗೆ, ಮಧ್ಯಮವರ್ಗಕ್ಕೆ ಇವರ ಸರಳತೆ, ನಿಸ್ಪೃಹತೆ, ಮಾನವೀಯತೆ ಮತ್ತು ಸಮಾಜಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟದ್ದು ಎಲ್ಲವೂ ಅಸಂಬದ್ಧವಾಗಿಯೂ, ಅನಗತ್ಯವಾಗಿಯೂ ಕಾಣಿಸಿರಲಿಕ್ಕೂ ಸಾಕು!. ಏಕೆಂದರೆ ಇವರಿಗೆ ಎಲ್ಲವೂ ಸರಕಾಗಿ ಕಾಣಿಸಿಕೊಳ್ಳಬೇಕು. ಆಗಲೇ ಇವನ್ನು ಪ್ಯಾಕೇಜ್ ಆಗಿ ಮಾರಲು ಸಾಧ್ಯ!!