ಸಿದ್ಧಾಂತ ಮತ್ತು ವ್ಯಕ್ತಿ ನಡುವೆ ಬಿಜೆಪಿ ತೊಳಲಾಟ


-ಚಿದಂಬರ ಬೈಕಂಪಾಡಿ


ಇದು ಎರಡು ಅತ್ಯಂತ ಮುಖ್ಯ ವಿಷಯಗಳ ನಡುವಿನ ಆಯ್ಕೆ, ಸಿದ್ಧಾಂತ ಮತ್ತು ವ್ಯಕ್ತಿ. ಸಿದ್ಧಾಂತ ಅನಿವಾರ್ಯವೋ, ವ್ಯಕ್ತಿ ಅನಿವಾರ್ಯವೋ? ಸಿದ್ಧಾಂತವನ್ನು ರೂಪಿಸುವವನು ವ್ಯಕ್ತಿ. ಸಿದ್ಧಾಂತವನ್ನು ಅನುಷ್ಠಾನ ಮಾಡುವವನು ವ್ಯಕ್ತಿ. ಇವೆರಡರಲ್ಲಿ ಯಾವುದು ಮುಖ್ಯ? ಎರಡೂ ಮುಖ್ಯ ಎನ್ನುವ ಉತ್ತರ ಸಹಜವಾದರೂ ಆಯ್ಕೆ ಮಾಡಬೇಕಾಗಿರುವುದು ಒಂದನ್ನು ಮಾತ್ರ.

ನಿಜಕ್ಕೂ ಇಂಥ ಸಂದರ್ಭದಲ್ಲಿ ಆಯ್ಕೆ ಅಷ್ಟು ಸುಲಭವಲ್ಲ, ಇದೇ ಸ್ಥಿತಿ ಈಗ ಬಿಜೆಪಿಗೆ. ಸೂರಜ್‌ಕುಂಡ್‌ನಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿಯಲ್ಲಿ ಕೂಡಾ ಈ ವಿಚಾರ ಅತ್ಯಂತ ಗಹನವಾಗಿ ಚರ್ಚೆಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ. ರಾಷ್ಟ್ರಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿ ಕೂಡಾ ಬಿಜೆಪಿಯ ಪಾಲಿಗೆ ಸಿದ್ಧಾಂತ ಮತ್ತು ವ್ಯಕ್ತಿ ನಡುವೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಕಗ್ಗಂಟಾಗಿದೆ. ವಾಸ್ತವ ಸ್ಥಿತಿಯ ಹಿನ್ನೆಲೆಯಲ್ಲಿ ಬಿಜೆಪಿಯ ಇತಿಹಾಸವನ್ನು ಅವಲೋಕಿಸಿದರೆ ಇನ್ನೂ ಹೆಚ್ಚು ಸೂಕ್ಷ್ಮವಾದ ಸಂಗತಿಗಳು ಅನಾವರಣಗೊಳ್ಳುತ್ತವೆ.

ಸಂಘಪರಿವಾರ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು, ಹೀಗೆಂದು ವ್ಯಾಖ್ಯಾನಿಸಲಾಗುತ್ತದೆ. ಇದು ಅರ್ಧ ಸತ್ಯ ಈಗ. ಬಿಜೆಪಿ ಅಸ್ತಿತ್ವಕ್ಕೆ ಬರುವ ಮೊದಲು ಜನಸಂಘವನ್ನು ನೆನಪಿಸಿಕೊಂಡರೆ ಅದು ನಿಜಕ್ಕೂ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಯಾವ ಕಾಲಕ್ಕೂ ಪ್ರಸ್ತುತವಾಗುವ ತನ್ನದೇ ವ್ಯಾಪ್ತಿ ಮತ್ತು ಉದ್ದೇಶಗಳನ್ನು ಇಟ್ಟುಕೊಂಡು ಕಾರ್ಯಾಚರಿಸುತ್ತಿದ್ದ ಸಂಘಟನೆ. ಅದಕ್ಕೆ ರಾಜಕೀಯವಾದ ಮಹತ್ವಕಾಂಕ್ಷೆ ಅಂದು ಇರಲಿಲ್ಲ, ಬದಲಾಗಿ ಸಿದ್ಧಾಂತವನ್ನು ಪ್ರತಿಪಾದಿಸುವುದು ಮೂಲ ಆಶಯವಾಗಿತ್ತು. ಚುನಾವಣೆಗೆ ಸ್ಪರ್ಧಿಸುತ್ತಿದ್ದರೂ ಗೆಲುವನ್ನು ನಿರೀಕ್ಷೆ ಮಾಡುತ್ತಿರಲಿಲ್ಲ ಬದಲಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದೇ ಆದ್ಯತೆಯಾಗಿತ್ತು.

ಆದರೆ ರಾಜಕೀಯ ಆಶೋತ್ತರಗಳು ಬೆಳೆದಂತೆಲ್ಲಾ ಸಂಘಪರಿವಾರವೂ ತನ್ನ ಅಜೆಂಡಾವನ್ನು ಅನುಷ್ಠಾನಕ್ಕೆ ತರಲು ಮನಸ್ಸು ಮಾಡಿತು. ಸಿದ್ಧಾಂತವನ್ನು ಇಟ್ಟುಕೊಂಡೇ ರಾಜಕೀಯ ಶಕ್ತಿಯನ್ನು ಉದ್ಧೀಪನಗೊಳಿಸುವುದು ಅದರ ಆಶಯವಾಗಿ ಗೋಚರಿಸಿತು. ಇದಕ್ಕೆ ಕ್ರಿಯಾತ್ಮಕ ಮತ್ತು ಹೆಚ್ಚು ವ್ಯವಸ್ಥಿತವಾದ ಚೌಕಟ್ಟು ಹಾಕಿಕೊಳ್ಳಲು ಅದಕ್ಕೆ ಸಾಧ್ಯವಾಗಿರಲಿಲ್ಲ ದೇಶದಲ್ಲಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಜಾರಿಗೊಳಿಸುವ ತನಕ. ತನ್ನ ಸರ್ವಾಧಿಕಾರಕ್ಕೆ ಧಕ್ಕೆಯಾಗುತ್ತಿದೆ ಎನ್ನುವ ಆತಂಕ ಕಾಡಿದಾಗ ಇಂದಿರಾಗಾಂಧಿ ಮನಸ್ಸಿನಲ್ಲಿ ಮೂಡಿದ ತುರ್ತು ಪರಿಸ್ಥಿತಿ ಘೋಷಣೆ ಸಂಘಪರಿವಾರ ಬಯಸುತ್ತಿದ್ದ ಮತ್ತು ರಾಜಕೀಯ ಶಕ್ತಿಯಾಗಿ ಬೆಳೆಯಲು ಬೇಕಾದ ತನ್ನದೇ ಆದ ಚೌಕಟ್ಟು ಹಾಕಿಕೊಳ್ಳಲು ನೆರವಾಯಿತು ಎನ್ನುವುದನ್ನು ಮರೆಯಬಾರದು. ಸಂಘಪರಿವಾರದ ಟಿಸಿಲಾಗಿ ಬಿಜೆಪಿ ಚಿಗುರಲು ಈ ದೇಶದಲ್ಲಿ ಜನರು ಕಾರಣರು ಎನ್ನುವುದು ವಾಸ್ತವ ಸತ್ಯವಾದರೂ ಇಂದಿರಾಗಾಂಧಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದ್ದೇ ಇದು ನೀರು, ಗೊಬ್ಬರ ದೊರಕಿ ಪೊಗದಸ್ತಾಗಿ ಬೆಳೆಯಲು ಕಾರಣ ಎಂದರೆ ಅತಿಶಯೋಕ್ತಿಯಲ್ಲ. ಈ ಕಾರಣಕ್ಕಾಗಿ ಬಿಜೆಪಿ ತನ್ನ ಹುಟ್ಟುಹಬ್ಬದಂದು ಇಂದಿರಾ ಅವರ ಸ್ಮರಣೆಯನ್ನು ಮಾಡಿದರೆ ತಪ್ಪಿಲ್ಲ.

ಬಿಜೆಪಿಯ ಸಿದ್ಧಾಂತ ಸಂಘಪರಿವಾರದ ಸಿದ್ಧಾಂತದ ಪಡಿಯಚ್ಚಲ್ಲ ಅಥವಾ ಹೌದು ಎನ್ನುವುದು ಚರ್ಚೆಯ ಮತ್ತೊಂದು ಮುಖ. ಆದರೆ ಸಂಘಪರಿವಾರದ ಸಿದ್ಧಾಂತದ ತಳಹದಿಯಮೇಲೆಯೇ ಬಿಜೆಪಿ ಬೆಳೆದಿದೆ ಎನ್ನುವುದನ್ನು ಯಾರೂ ನಿರಾಕರಿಸುವಂತಿಲ್ಲ. ಸಂಘಪರಿವಾರಕ್ಕೆ ತನ್ನ ಸಿದ್ಧಾಂತವನ್ನು ಗಟ್ಟಿಗೊಳಿಸುತ್ತಾ ರಾಜಕೀಯ ಶಕ್ತಿಯಾಗಿ ಬೆಳೆಯಬೇಕೆನ್ನುವುದು ಆಶಯ. ಆದರೆ ಬಿಜೆಪಿ ಸಂಘಪರಿವಾರದ ಆಶಯವನ್ನು ಪೂರ್ಣವಾಗಿ ಅನುಷ್ಠಾನಗೊಳಿಸಲಾಗದೆ, ರಾಜಕೀಯ ಶಕ್ತಿಯಾಗಿ ಬೆಳೆಯಲು ತನ್ನದೇ ಆದ ಅಜೆಂಡಾವನ್ನು ಅನುಷ್ಠಾನಕ್ಕೆ ತರಲಾಗದೆ ತೊಳಲಾಡಿರುವುದು ಕೂಡಾ ಇತಿಹಾಸದ ಒಂದು ಭಾಗ.

ರಾಮಜನ್ಮಭೂಮಿ ವಿವಾದ ಅಥವಾ ಶ್ರೀರಾಮ ಮಂದಿರ ನಿರ್ಮಾಣ ಬಿಜೆಪಿಯ ಮೊದಲ ಆದ್ಯತೆ ಎಂದು ಒಪ್ಪಿಕೊಳ್ಳಲಾಗದು. ಒಂದು ವೇಳೆ ಇದೇ ಆಗಿದ್ದರೆ ಕೇಂದ್ರದಲ್ಲಿ ಅಧಿಕಾರವಿದ್ದಾಗ ಸಂಘಪರಿವಾರದ ಆಶಯವನ್ನು ಒಪ್ಪಿಕೊಂಡು ಅದನ್ನು ಕಾರ್ಯಗತಮಾಡುವಂಥ ದಿಟ್ಟತನವನ್ನು ತೋರಿಸುತ್ತಿತ್ತು, ಅದು ಸರಿಯೇ?, ತಪ್ಪೇ? ಎನ್ನುವುದು ಚರ್ಚೆಯ ಮತ್ತೊಂದು ಮಗ್ಗುಲು, ಇಲ್ಲಿ ಅದನ್ನು ಚರ್ಚಿಸುವುದು ಉದ್ದೇಶವಲ್ಲ. ಬಿಜೆಪಿಗೆ ಆಗಲೂ ಸಂಘಪರಿವಾರದ ಪರಿಧಿಯಲ್ಲೇ ಸಾಗುತ್ತಾ ತನ್ನದೇ ಆದ ಕ್ಯಾನ್ವಾಸ್ ರೂಪಿಸಿಕೊಳ್ಳುವುದು ಮುಖ್ಯವಾಗಿತ್ತು. ಆದ್ದರಿಂದ ಯಾರೂ ಬಿಜೆಪಿ ಸಿದ್ಧಾಂತದಿಂದ ಅರ್ಥಾತ್ ಸಂಘಪರಿವಾರದ ಸಿದ್ಧಾಂತದಿಂದ ದೂರಾವಾಗಿದೆ ಎಂದು ಭಾವಿಸಬೇಕಾಗಿಲ್ಲ ಅಥವಾ ಅದನ್ನೇ ನೆಚ್ಚಿಕೊಂಡಿದೆ ಎಂದೂ ಭ್ರಮೆಗೊಳಗಾಗುವ ಅಗತ್ಯವಿಲ್ಲ. ಸಿದ್ಧಾಂತದೊಂದಿಗೆ ರಾಜಕೀಯ ಶಕ್ತಿಯಾಗಿ ಬೆಳೆಯುವ ಮಹತ್ವಾಕಾಂಕ್ಷೆ ಇದೆ.

ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ನಿತಿನ್ ಗಡ್ಕರಿ, ಮುರಳಿಮನೋಹರ ಜೋಷಿ, ರಾಜನಾಥ್ ಸಿಂಘ್, ನರೇಂದ್ರಮೋದಿ, ಬಿ.ಎಸ್. ಯಡಿಯೂರಪ್ಪ ಅವರುಗಳೊಳಗೇ ಸಂಘಪರಿವಾರ ಮತ್ತು ಬಿಜೆಪಿ ಸಿದ್ಧಾಂತಗಳ ತಾಕಲಾಟವಿದೆ.

ಸಂಘಪರಿವಾರದ ಮನಸ್ಸುಗಳು ಅಡ್ವಾಣಿಯವರನ್ನು ಒಪ್ಪುವಂತೆ, ನರೇಂದ್ರ ಮೋದಿಯವರನ್ನು ಒಪ್ಪುವಂತೆ ನಿತಿನ್ ಗಡ್ಕರಿ ಅವರನ್ನು ಒಪ್ಪುವುದಿಲ್ಲ. ಹಾಗೆಯೇ ಬಿಜೆಪಿ ಮನಸ್ಸುಗಳು ಕೂಡಾ ಈ ನಾಯಕರುಗಳ ನಡುವೆ ವ್ಯತ್ಯಾಸಗಳನ್ನು ಗುರುತಿಸುತ್ತವೆ. ಅಟಲ್ ಬಿಹಾರಿ ವಾಜಪೇಯಿ ರಾಜಕೀಯ ಮುತ್ಸದ್ದಿಯಾದ ಕಾರಣ ಸಂಘಪರಿವಾರ ಮತ್ತು ಬಿಜೆಪಿಯ ನಡುವೆ ಸಮತೋಲನ ಕಾಪಾಡಿಕೊಂಡು ಯಶಸ್ವಿ ನಾಯಕರೆಂದು ಈಗಲೂ ಗೌರವಪಡೆಯುತ್ತಿದ್ದಾರೆ.

ಈ ಹಿನ್ನೆಲೆಯಲ್ಲೇ ಸಿದ್ಧಾಂತ ಮತ್ತು ವ್ಯಕ್ತಿ ಈ ಎರಡರ ನಡುವೆ ಆಯ್ಕೆ ಬಹುಕಷ್ಟ ಎನ್ನುವುದು. ನರೇಂದ್ರ ಮೋದಿಯವರ ಅಭಿವೃದ್ಧಿಯ ಹೆಜ್ಜೆಗಳನ್ನು ಗುಣಗಾನಮಾಡುವವರು ಅವರ ಸಿದ್ಧಾಂತವನ್ನು ಇಷ್ಟಪಡುವುದಿಲ್ಲ. ನಿತಿನ್ ಗಡ್ಕರಿಯನ್ನು ಸಂಘಪರಿವಾರ ಮೆಚ್ಚಿಕೊಂಡರೂ ಅದರ ಭಾಗವೇ ಆಗಿರುವ ಅಡ್ವಾಣಿಯವರು ಯಾಕೆ ಮೆಚ್ಚುತ್ತಿಲ್ಲ?, ಮೋದಿಯನ್ನು ಯಾಕೆ ಬೆಂಬಲಿಸುತ್ತಿಲ್ಲ?, ಇಲ್ಲೇ ತಾಕಲಾಟವಿರುವುದು.

ಸಂಘಪರಿವಾರದ ಮೂಲಕವೇ ಬೆಳೆದು ಬಂದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಈಗಿನ ನಡೆಗಳಲ್ಲಿ ಯಾವ ಸಿದ್ಧಾಂತವನ್ನು ಗುರುತಿಸಲು ಸಾಧ್ಯ?. ಸಂಘಪರಿವಾರದ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಅವರು ರಾಜಕೀಯ ಮಾಡುತ್ತಿದ್ದಾರೆಯೇ ಅಥವಾ ಬಿಜೆಪಿಯ ಸಿದ್ಧಾಂತವನ್ನು ಪ್ರತಿಪಾದಿಸುತ್ತಾ ಮುನ್ನಡೆಯುತ್ತಿದ್ದಾರೆಯೇ?

ಕರ್ನಾಟಕದಲ್ಲಿ ಅಧಿಕಾರ ಸೂತ್ರ ಹಿಡಿದಿರುವ ಬಿಜೆಪಿಯಲ್ಲಿ ಸಂಘಪರಿವಾರದ ಸಿದ್ಧಾಂತವನ್ನು ಕಾಣುತ್ತಿದ್ದೀರಾ?, ಅಥವಾ ರಾಜಕೀಯ ಪಕ್ಷವಾಗಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಹಂಬಲವನ್ನು ಗುರುತಿಸುತ್ತಿದ್ದೀರಾ? ’ಬಿಜೆಪಿಗೆ ಬರುವವರು ಸಿದ್ಧಾಂತವನ್ನು ಜೀರ್ಣಿಸಿಕೊಳ್ಳಲು ಮೊದಲು ಕಲಿಯಿರಿ,’ ಹೀಗೆಂದು ಬಿಜೆಪಿ ಹಿರಿತಲೆಗಳೇ ರಾಮಕೃಷ್ಣ ಹೆಗಡೆ ಕಟ್ಟಾಶಿಷ್ಯ ಡಾ.ಜೀವರಾಜ್ ಆಳ್ವರನ್ನು ಕುರಿತು ಹೇಳಿದ್ದ ಹಳೆ ಮಾತು ಎನ್ನುವಂತಿಲ್ಲ. ಯಾಕೆಂದರೆ ಆಪರೇಷನ್ ಕಮಲದ ಮೂಲಕ ಬಂದವರಿಗೆ ಇತ್ತೀಚೆಗೆ ಬಿಜೆಪಿ ನಾಯಕರು ಹೇಳುತ್ತಿರುವ ನೀತಿ ಪಾಠ.

ಹಾಗಾದರೆ ಬಿಜೆಪಿಯಿಂದ ಹೊರಗೆ ಹೋಗುವವರು ತಮ್ಮ ಸಿದ್ಧಾಂತವನ್ನು ಬಿಟ್ಟುಹೋಗಲೇ ಬೇಕಲ್ಲವೇ? ಯಾಕೆಂದರೆ ಅವರು ನಂಬಿಕೊಂಡು ಬಂದ ಸಿದ್ಧಾಂತ ಅವರನ್ನು ಅಧಿಕಾರದಿಂದ ವಂಚಿಸಿದೆ ಎನ್ನುವ ಕಾರಣಕ್ಕಾಗಿಯಲ್ಲವೇ ಪಕ್ಷ ತೊರೆಯುತ್ತಿರುವುದು.

ಆದ್ದರಿಂದಲೇ ಕರ್ನಾಟಕದಲ್ಲಿ ಯಡಿಯೂರಪ್ಪ ಮತ್ತು ಬಿಜೆಪಿ ಸಿದ್ಧಾಂತ ಇವೆರಡರಲ್ಲಿ ಒಂದನ್ನು ಆಯ್ಕೆಮಾಡಿಕೊಳ್ಳುವುದು ಅದೆಷ್ಟು ಕಠಿಣವೆಂದು. ಬಿಜೆಪಿ ಹೈಕಮಾಂಡ್ ಇದೇ ಸಂಧಿಗ್ಧತೆಯಲ್ಲಿದೆ ಅನ್ನಿಸುತ್ತದೆ. ಇದನ್ನು ಯಡಿಯೂರಪ್ಪ ಅವರೂ ಚೆನ್ನಾಗಿ ಅರಿತುಕೊಂಡಿರುವುದರಿಂದಲೇ ಪಟ್ಟುಹಿಡಿದಿದ್ದಾರೆ. ಸಿದ್ಧಾಂತವನ್ನು ಪಾಲಿಸಲೇಬೇಕು, ಶಿಸ್ತನ್ನು ಬಿಡುವಂತಿಲ್ಲ ಎಂದಾರೆ ಯಡಿಯೂರಪ್ಪ ಅವರನ್ನು ಹೈಕಮಾಂಡ್ ಸಹಿಸುವಂತಿಲ್ಲ. ಸಿದ್ಧಾಂತಕ್ಕಿಂತಲೂ ವ್ಯಕ್ತಿ ಮತ್ತು ಅಧಿಕಾರ ಮುಖ್ಯ ಎನ್ನುವುದಾದರೆ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಮಣೆ ಹಾಕಲೇಬೇಕು. ಸಿದ್ಧಾಂಕ್ಕಿಂತ ತನಗೆ ಅಧಿಕಾರವೇ ಮುಖ್ಯ, ತಾನು ಆ ಪಕ್ಷಕ್ಕೆ ಅನಿವಾರ್ಯವೆಂದು ಯಡಿಯೂರಪ್ಪ ಭಾವಿಸಿದರೆ? ಈ ಹಿನ್ನೆಲೆಯಲ್ಲಿ ಸೂರಜ್‌ಕುಂಡ್ ಸಿದ್ಧಾಂತ ಮತ್ತು ವ್ಯಕ್ತಿ ಇವೆರಡರಲ್ಲಿ ಯಾವುದನ್ನು ಆಯ್ಕೆಮಾಡಿಕೊಳ್ಳಬಹುದು ಎನ್ನುವುದು ಈಗಿನ ಕುತೂಹಲ.

Leave a Reply

Your email address will not be published.