ಕಾವೇರಿ ಸಮಸ್ಯೆ : ಮಿಡಿಯಾ ಡಾರ್ಲಿಂಗ್ ಸುರೇಶ್ ಕುಮಾರ್ ಎಲ್ಲಿದ್ದಾರೆ?

 – ರಮೇಶ್ ಕುಣಿಗಲ್

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಾರ್ವಜನಿಕವಾಗಿ ಗೊತ್ತಿರುವ ಅಂಕಿ ಅಂಶಗಳು ಹೇಳುತ್ತವೆ. ಇಲ್ಲದಿರುವ ನೀರನ್ನು ಬಿಡುವುದು ಹೇಗೆ? ಅಥವಾ ನಮ್ಮ ಅಗತ್ಯಗಳನ್ನು ಬಲಿಕೊಟ್ಟು ನೀರು ಬಿಡುವುದು ಹೇಗೆ? ಎಂದು ಚರ್ಚೆ, ಹೋರಾಟಗಳು ನಡೆಯುತ್ತಿವೆ. ರಾಜ್ಯದ ಅಂಕಿ ಅಂಶಗಳನ್ನು ನ್ಯಾಯಾಲಯದಲ್ಲಿ ಸೂಕ್ತವಾಗಿ ಮಂಡಿಸಿ, ರಾಜ್ಯದ ಹಿತ ಕಾಪಾಡಬೇಕಾದ್ದು ರಾಜ್ಯ ಸರಕಾರದ ಕರ್ತವ್ಯ.

ಇಂತಹ ಸಂದರ್ಭಗಳಲ್ಲಿ ಈ ನೆಲದ ಕಾನೂನು ಮಂತ್ರಿಯ ಹೊಣೆ ದೊಡ್ಡದು. ಈ ಹಿಂದೆ ಸುಪ್ರೀಂ ಕೋರ್ಟ್ ತೀರ್ಪನ್ನು ಧಿಕ್ಕರಿಸಿದ್ದಾಗ ಉಂಟಾಗಿದ್ದ ಪರಿಸ್ಥಿತಿಯಲ್ಲಿ ಕಾನೂನು ಮಂತ್ರಿಯಾಗಿ ಹೈರಾಣಾದವರು ಡಿ.ಬಿ ಚಂದ್ರೇಗೌಡರು. ಅವರು ಇಂದು ಬಿಜೆಪಿಯಲ್ಲಿದ್ದಾರೆ. ಆದರೆ ಇದೇ ಬಿಜೆಪಿಯ ಸದ್ಯದ ಕಾನೂನು ಮಂತ್ರಿ ಸುರೇಶ್ ಕುಮಾರ್‌ಗೆ ಏನಾಗಿದೆ?

ಅಸ್ಸಾಂ ಯುವಕರು ಬೆಂಗಳೂರು ಬಿಟ್ಟು ರೈಲು ಹತ್ತಿ ತಾಯ್ನಾಡಿಗೆ ಹೊರಟು ನಿಂತಿದ್ದಾಗ, ರೈಲ್ವೇ ನಿಲ್ದಾಣಕ್ಕೆ ಹೋಗಿ ಆರು ಗಂಟೆಗಳ ಕಾಲ ಅವರಿಗೆ ಸಂತೈಸುವ ‘ನಾಟಕ’ ಆಡಿ ಫೇಸ್‌ಬುಕ್ ಸ್ಟೇಟಸ್ ಹಾಕಿಕೊಳ್ಳುವ ಮಂತ್ರಿಗೆ ಕಾವೇರಿ ವಿಚಾರದಲ್ಲಿ ಏಕೆ ಮೌನ? ಈ ಹಿಂದಿನ ಕಾವೇರಿ ಪ್ರಾಧಿಕಾರದ ಸಭೆಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದವರು ಮುಖ್ಯಮಂತ್ರಿ, ನೀರಾವರಿ ಮಂತ್ರಿ ಮತ್ತು ಕಾನೂನು ಮಂತ್ರಿ. ಆದರೆ ಮೊನ್ನೆ ನಡೆದ ಸಭೆಯಲ್ಲಿ ಸುರೇಶ್ ಕುಮಾರ್ ಹಾಜರಿರಲಿಲ್ಲ. ಅಷ್ಟೇ ಅಲ್ಲ ಮುಖ್ಯಮಂತ್ರಿಯವರು ದೆಹಲಿಯಲ್ಲಿ ನಡೆಸಿದ ಕಾನೂನು ತಜ್ಞರ ಸಭೆಗಳಲ್ಲೂ ಇವರು ಹಾಜರಾದ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿಲ್ಲ. ಆದರೆ ಇವರು ಬಿಜೆಪಿ ಕಾರ್ಯಕಾರಿಣಿ ಸಭೆಗೆ ಹಾಜರಾದರು. ಕಾವೇರಿಗಿಂತ ಪಕ್ಷದ ಸಭೆ ಮುಖ್ಯವಾಯಿತು.

ಮಾಧ್ಯಮದ ಹಿರಿ ತಲೆಗಳ ಪೈಕಿ ಹಲವರಿಗೆ ಸುರೇಶ್ ಕುಮಾರ್ – ಸಜ್ಜನ, ಪ್ರಾಮಾಣಿಕ, ನಿಷ್ಠ. ಹಾಗಾದರೆ ಇವರು ದಕ್ಷರಾಗುವುದು ಯಾವಾಗ? ಸಜ್ಜನಿಕೆ ಅಥವಾ ಪ್ರಾಮಾಣಿಕತೆ ಎಲ್ಲಾ ವ್ಯಕ್ತಿಗಳಲ್ಲೂ ನಿರೀಕ್ಷಿಸಬಹುದಾದ ಸಾಮಾನ್ಯ ಗುಣಗಳು. ಆದರೆ ಒಬ್ಬ ಮಂತ್ರಿ ಪ್ರಾಮಾಣಿಕನಾಗಿದ್ದರಷ್ಟೇ ಸಾಲದು. ತನ್ನ ಕರ್ತವ್ಯ ಅರಿತುಕೊಂಡು ದಕ್ಷತೆಯಿಂದ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. (ಅವರು ಎಷ್ಟರ ಮಟ್ಟಿಗೆ ಪ್ರಾಮಾಣಿಕ ಅನ್ನುವುದು ಈಗ ಸಂಶಯ ಬಿಡಿ. ಸುಳ್ಳು ಮಾಹಿತಿ ಕೊಟ್ಟು ಎರಡೆರಡು ನಿವೇಶನ ಪಡೆದ ಆರೋಪ ಇಲ್ಲವೆ? ಆ ಸಂದರ್ಭದಲ್ಲಂತೂ ಕೆಲ ಮಾಧ್ಯಮ ಸಂಸ್ಥೆಗಳು ‘ಅತ್ಯಂತ ಪ್ರಾಮಾಣಿಕ ವ್ಯಕ್ತಿಗೆ ಅಂಟಿದ ಕಳಂಕ’ ಎಂದೆಲ್ಲಾ ಕಣ್ಣೀರು ಹಾಕಿದರು.)

“ಕಾವೇರಿ ಸಮಸ್ಯೆ ಬಗೆಹರಿಸಲು ಪರ್ಯಾಯ ಮಾರ್ಗಗಳನ್ನು ಹುಡುಕಲಾಗುತ್ತಿದೆ..” ಎಂಬರ್ಥದ ಸವಕಲು ಹೇಳಿಕೆಗಳನ್ನು ಹೊರತುಪಡಿಸಿದರೆ ಸುರೇಶ್ ಕುಮಾರ್ ಇದುವರೆಗೆ ಕಾವೇರಿ ವಿಚಾರದಲ್ಲಿ ಒಂದೇ ಒಂದು ಗಂಭೀರ ಹೇಳಿಕೆ ನೀಡಲಿಲ್ಲ. ವಿಚಿತ್ರವೆಂದರೆ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸುವ ವಿರೋಧ ಪಕ್ಷಗಳು ಮುಖ್ಯಮಂತ್ರಿ ಮತ್ತು ನೀರಾವರಿ ಮಂತ್ರಿಯನ್ನಷ್ಟೆ ಟೀಕಿಸುತ್ತವೆಯೇ ಹೊರತು, ಕಾನೂನು ಮಂತ್ರಿಯ ವೈಫಲ್ಯದ ಬಗ್ಗೆ ಮಾತನಾಡುವುದಿಲ್ಲ.

ಸುರೇಶ್ ಕುಮಾರ್ ಅವರ ನಡವಳಿಕೆಯನ್ನು ಕೆಲಕಾಲ ಗಮನಿಸಿದ ಯಾರಿಗೇ ಆದರೂ ಅರ್ಥವಾಗುವ ಸಂಗತಿ ಎಂದರೆ, ಅವರು ವಿವಾದಾತ್ಮಕ ಘಟನೆಗಳ ಬಗ್ಗೆ ಮೌನ ವಹಿಸುತ್ತಾರೆ. ನಿಮ್ಮ ಮಂತ್ರಿಗಳು ವಿಧಾನ ಸಭೆಯಲ್ಲಿ ಬ್ಲೂ ಫಿಲಂ ನೋಡ್ತಾ ಇದ್ದರಲ್ಲ ಅಂತ ಕೇಳಿದಾಕ್ಷಣ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆಯನ್ನು ಈಗಷ್ಟೇ ಮುಗಿಸಿ ಬಂದವರಂತೆ ಅವರು ಗಂಭೀರವದನರಾಗಿ – ‘ಅಂತಹದೊಂದು ಪ್ರಕರಣ ನಡೆದದ್ದೇ ಆಗಿದ್ದರೆ..ಅದು ಖಂಡನೀಯ’ ಎನ್ನುತ್ತಾರೆ. ಬಿಜೆಪಿಯ ಆಂತರಿಕ ಕಲಹ ಮುಗಿಲು ಮುಟ್ಟಿದ್ದರೂ ಊಹ್ಞುಂ ಒಂದೇ ಒಂದು ಮಾತೂ ಇಲ್ಲ. ಸುಮ್ಮನೆ ಮಾತನಾಡಿ ಯಾರಾದಾದರೂ ವಿರೋಧ ಕಟ್ಟಿಕೊಳ್ಳುವುದೇಕೆ ಎನ್ನುವ ಮನೋಭಾವ.

ಬೆಂಗಳೂರಿನ ನೀರು ಸರಬರಾಜು ಕೂಡಾ ಅವರದೇ ಖಾತೆ. ನಗರಕ್ಕೆ ನಾಲ್ಕನೇ ಹಂತದ ಕುಡಿವ ನೀರಿನ ಯೋಜನೆಗಾಗಿ ಜನರಿಂದ ಹಣ ಪಡೆದುಕೊಂಡು ವರ್ಷಗಳೇ ಉರುಳಿವೆ. ಅವರಿಗಿನ್ನೂ ನೀರು ಕೊಟ್ಟಿಲ್ಲ. ಬೆಂಗಳೂರಿಗೆ ನೀರು ಬೇಕಿದ್ದರೆ ಕಾವೇರಿಯಲ್ಲಿ ನೀರು ಇರಬೇಕು. ಆದರೂ ಅವರು ಕಾವೇರಿ ಬಗ್ಗೆ ಮಾತನಾಡುವುದಿಲ್ಲ.

ಹಾಗಾದರೆ ಇವರಿಗೆ ಜವಾಬ್ದಾರಿ ಇಲ್ಲವೆ ಅಥವಾ ಜವಾಬ್ದಾರಿಯನ್ನು ಕಸಿಯಲಾಗಿದೆಯೆ? ಅವರೇ ಸ್ಪಷ್ಟಪಡಿಸಬೇಕು.

8 thoughts on “ಕಾವೇರಿ ಸಮಸ್ಯೆ : ಮಿಡಿಯಾ ಡಾರ್ಲಿಂಗ್ ಸುರೇಶ್ ಕುಮಾರ್ ಎಲ್ಲಿದ್ದಾರೆ?

 1. Naveen

  ವರ್ತಮಾನ ಎಂಬ ಬ್ಲಾಗ್ ಇರುವದೆ ಬೋಜೆಪಿಯನ್ನು ಟೀಕಿಸುವದಕ್ಕೆ ಎಂಬುದು ದಿನೇ ದಿನೇ ಧೃಢಪಡುತ್ತಿದೆ. ನಿಮಗೆ ಸುರೇಶ ಕುಮಾರ ನೆನಪಾಗ್ತಾರೆ ಆದ್ರೆ ಕೇಂದ್ರದಲ್ಲಿ ಗೂಟ ಹೊಡ್ಕೊಂಡು ಕೂತಿರೋ mr Sophesticated ಮಂಡ್ಯದ ಜನರ ಆಶಿರ್ವದದಿಂದಲೇ ಬದುಕುವ ಜಾಣ ಮೌನ ತಾಳಿರುವ ನಮ್ಮ ವಿದೇಶಿ ಮಂತ್ರಿ ನೆನಪಾಗಲ್ಲ!!
  ಇಂದು ಎಲ್ಲರಿಂದು ಸುಮ್ಯ, ಶಾಂತ, ಆಕಳು ಸ್ವಭಾವದವ ಎಂದು ತೆಗಳಿಸಿಕೊಂಡ ಮುಖ್ಯಮಂತ್ರಿ ಶೆಟ್ಟರ ಎಂಥ ಧುರ್ಯಸ್ಥ ಗಂಡುಮಗ cm ಸಹ ಮಾಡದ ಕೆಲಸ ಮಾಡಿ ಬಂದಿದ್ದಾರೆ ಅದು ಕಾವೇರಿ ನ್ಯಾಯಮಂಡಳಿಯ ಆದೇಶವನ್ನೇ ಧಿಕ್ಕರಿಸಿ ಅರ್ಧಕ್ಕೆ ಎದ್ದು ಬಂದಿದ್ದಾರೆ. ಅಲ್ಲಿಗೆ ಚೆಂಡು ಹಾಗು ಆರೋಪ ಎರಡನ್ನು ಪ್ರಧಾನಿ ಹಾಗು ಕೇಂದ್ರ ಸರ್ಕಾರದ ಅಂಗಳದಲ್ಲೇ ಬಿಟ್ಟು ಬಂದಿದ್ದಾರೆ. ಈಗ ನಿಜವಾಗಲು ನೆನಪಾಗಬೇಕಾದವರು ಕೇಂದ್ರದಲ್ಲಿ ಗೂಟ ಹೊಡೆದು ಕೂತಿರುವ ತ್ರಿಮೂರ್ತಿಗಳು ಹೊರತು ರಾಜ್ಯದ ಸುರೇಶ ಕುಮಾರ ಅಲ್ಲ!!

  ಇಷ್ಟಕ್ಕೂ ಸುರೇಶ ಕುಮಾರ ಕೆಲಸ ಇರುವದು ಕೋರ್ಟಿನ ಒಳಗಡೆ ಹೊರತು ಬೀದಿಯಲ್ಲಿ ಅಥವಾ ಮೀಡಿಯಾ ಮುಂದೆ ಅಲ್ಲ!! ಈಗ ಕೇಂದ್ರದ ತ್ರಿಮೂರ್ತಿ ಸಚಿವತ್ರಯರು ಏನು ಮಾಡ್ತಿದ್ದಾರಂತ ಹುಡುಕ್ಕೊಂಡು ಬನ್ನಿ.

  Reply
 2. anand prasad

  ನ್ಯಾಯಾಲಯಗಳಿಗೆ ನದಿ ನೀರು ಹಂಚಿಕೆ ವಿಚಾರದಲ್ಲಿ ಮಧ್ಯಪ್ರವೇಶಿಸಿ ನ್ಯಾಯ ನೀಡುವ ಅಧಿಕಾರ ಸಂವಿಧಾನಾತ್ಮಕವಾಗಿ ಇಲ್ಲ, ಈ ಅಧಿಕಾರ ಕೇಂದ್ರ ಸರ್ಕಾರ ಹಾಗೂ ಸಂಸತ್ತಿಗೆ ಇದೆ ಎಂಬುದು ಕಾವೇರಿ ಕುರಿತ ‘ಏನ್ ಗುರು.. ಕಾಫಿ ಆಯ್ತಾ’ ಬ್ಲಾಗಿನ ಕಾವೇರಿ ವಿವಾದ ಕುರಿತಾದ ಸರಣಿ ಲೇಖನದಿಂದ ತಿಳಿದು ಬರುತ್ತದೆ. ಕೇಂದ್ರ ಸರ್ಕಾರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಪ್ರಧಾನಿಗಳಿಗೆ ಅಥವಾ ಕಾಂಗ್ರೆಸ್ ಅಧ್ಯಕ್ಷರಿಗೆ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳನ್ನು ತಿಳಿಸದೇ ಮೌನವಾಗಿ ಕರ್ನಾಟಕದಲ್ಲಿ ತಮ್ಮ ಪಕ್ಷದ ಅವಕಾಶಗಳಿಗೆ ತಾವೇ ಕಲ್ಲು ಹಾಕಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಇಂದಿಗೂ ಗಟ್ಟಿಯಾದ ತಳಪಾಯವನ್ನು ಹೊಂದಿದೆ. ಆದರೆ ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗಟ್ಟಿಯಾದ ಬುನಾದಿಯೂ ಇಲ್ಲ, ರಾಜಕೀಯವಾಗಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಒಂದು ಶಕ್ತಿಯೂ ಅಲ್ಲ. ಹೀಗಿರುವಾಗ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಿ ತಮಿಳುನಾಡಿಗೆ ಲಾಭ ಮಾಡಿಕೊಟ್ಟು ಕರ್ನಾಟಕದಲ್ಲಿ ತನ್ನ ಪಕ್ಷಕ್ಕೇ ತಾನೇ ಅನ್ಯಾಯ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವ ಹೀಗೆ ಮಾಡುತ್ತಾ ಹೋದರೆ ಕರ್ನಾಟಕದಲ್ಲಿಯೂ ಕಾಂಗ್ರೆಸ್ ಪಕ್ಷವು ಬಲಗುಂದಿ ಪ್ರಾದೇಶಿಕ ಪಕ್ಷಗಳ ಬೆಳವಣಿಗೆಗೆ ವೇದಿಕೆ ನಿರ್ಮಿಸಿ ಕೊಟ್ಟಂತೆ ಆಗುತ್ತದೆ. ಕಾಂಗ್ರೆಸ್ಸಿನ ಕೇಂದ್ರ ನಾಯಕತ್ವಕ್ಕೆ ರಾಜಕೀಯ ವಿವೇಕ ಇಲ್ಲ ಎಂಬುದು ಇದರಿಂದ ತಿಳಿದುಕೊಳ್ಳಬಹುದು.

  Reply
 3. tuLuva

  I have no objections on your views on BJP politicians here. I don’t see any different attitude from Congress politicians either. Why not criticize them too? Why ‘vartamana’ is targeting only BJP? why not take a holistic view and accept that all karnataka politicians lack political will and good for nothing, irrespective of the party that they belong to?

  Reply
 4. ಪ್ರಜೆ

  ತುಂಬ ಒಳ್ಳೆಯ ಲೇಖನ.
  ಕೇಂದ್ರದ ನ್ಯಾಯ ಕೊಡುತ್ತೆ ಅನ್ನೋ ನಿರೀಕ್ಷೆ ನಮಗೆ ಮೊದಲೇ ಇರ್ಲಿಲ್ಲ ಬಿಡಿ, ಆದ್ರೆ ಸಣ್ಣ ವಿಷಯಕ್ಕೂ ದೊಡ್ಡ ವೇದಾಂತಿಯ ಹಾಗೆ ಸಚಿವ ಸುರೇಶ್​ಕುಮಾರ್ ವಕಾಲತ್ತು ಮಾಡ್ತಾರೆ. ರಾಜ್ಯದ ಪ್ರಮುಖ ಸಮಸ್ಯೆಯ ಬಗ್ಗೆ ಸುಪ್ರೀಂಕೋರ್ಟ್​ನಲ್ಲಿ ವಾದ ಮಾಡಬೇಕಿದ್ದ ಸಂದರ್ಭ ರಾಜ್ಯದ ಪರ ವಹಿಸೋದಕ್ಕೆ ಹಿರಿಯ ವಕೀಲರೇ ಹಾಜರಿರ್ಲಿಲ್ಲ. ತೀರ್ಪು ಬಂದು ವಾರ ಕಳೆದರೂ ಮರುಪರಿಶೀಲನಾ ಅರ್ಜಿ ಸಲ್ಲಿಸೋದಕ್ಕೆ ರಾಜ್ಯ ಸರ್ಕಾರ ಇನ್ನೂ ಮೀನಾ ಮೇಷ ಎಣಿಸ್ತಿದೆ.ಇದು ಮುಖ್ಯಮಂತ್ರಿ ಮತ್ತು ಕಾನೂನು ಸಚಿವರಿಗೆ ರಾಜ್ಯದ ಬಗ್ಗೆ ಎಷ್ಟು ಕಾಳಜಿ ಇದೆ ಅನ್ನೋದನ್ನ ಸ್ಪಷ್ಟಪಡಿಸುತ್ತೆ.
  ಅಸ್ಸಾಂ ಜನರ ಹತ್ರ ಓಡೋಡಿ ಹೋದ ಸುರೇಶ್​ಕುಮಾರ್​ ಮತ್ತು ಆರ್​ಎಸ್​ಎಸ್​ ಮಂದಿಗೆ ನಮ್ಮ ರೈತರ ಬಳಿ ಹೋಗಿ ಅವರ ಕಷ್ಟ ಸುಖ ವಿಚಾರಿಸುವ ಕನಿಷ್ಟ ಸೌಜನ್ಯವೂ ಇಲ್ವಾ? ಥೂ ಇವ್ರ ಜನ್ಮಕ್ಕಿಷ್ಟು…

  Reply
 5. ಕನ್ನಡಿಗ

  ಒಳ್ಳೆಯ ಬರಹ, ನಾಡಿನ ನೆಲ-ಜಲಕ್ಕೆ ಧಕ್ಕೆಯಾದಾಗ ಅಧಿಕಾರದ ಮುಖಕ್ಕೆ ಉಗಿದು ಬಂದು ನಾಡಿಗಾಗಿ ಹೋರಾಟದ 28 ಸಂಸದರು, ನಾಡಿನ ಎಲ್ಲಾ ಶಾಸಕ-ಸಚಿವರು ನಿಷ್ಪ್ರಯೋಜಕರು.

  Reply

Leave a Reply

Your email address will not be published.