ಪ್ರಳಯ ಮತ್ತು ಟಿವಿ ಚಾನಲ್‌ಗಳ ಮಹಾದ್ರೋಹ

– ರಮೇಶ್ ಕುಣಿಗಲ್

ಎರಡನೇ ಕ್ಲಾಸ್‌ನಲ್ಲಿ ಓದುತ್ತಿರುವ ಬಾಲಕಿಯೊಂದಿಗೆ ಇತ್ತೀಚೆಗೆ ಮಾತನಾಡುತ್ತಿದ್ದೆ. “ನೀನು ಮುಂದೆ ಏನು ಓದ್ತಿಯ? ನಿಂಗೆ ಏನು ಆಗಬೇಕು ಅಂತ ಆಸೆ?” ಎಂದು ಕೇಳಿದೆ. ಬಾಲಕಿ, “ನನಗೆ ಏನೂ ಆಸೆ ಇಲ್ಲ. ನಾನು ಏನೂ ಆಗೊಲ್ಲ” ಎಂದಳು. ಯಾಕಮ್ಮ ಎಂದರೆ, “ಡಿಸೆಂಬರ್‌ನಲ್ಲಿ ಪ್ರಳಯ ಆಗುತ್ತಲ್ಲ, ಆಮೇಲೆ ನಾವೆಲ್ಲಿ ಇರ್ತೀವಿ?” – ಉತ್ತರಿಸಿದಳು. ಗಾಬರಿಯಾಯಿತು.

ಟಿವಿ ಚಾನೆಲ್‌ಗಳು ಪ್ರಳಯದ ಭೀತಿ ಸೃಷ್ಟಿಸಿರುವ ಪರಿಣಾಮ ಇದು. ಟಿಆರ್‌ಪಿಗಾಗಿ ಪ್ರಳಯದ ಕೌಂಟ್‌ಡೌನ್ ಚಾನೆಲ್‌ಗಳಲ್ಲಿ ಆರಂಭವಾಗಿದೆ. ಪತ್ರಿಕೆಯೊಂದರಲ್ಲಿ ವರದಿಯಾಗಿರುವ ಪ್ರಕಾರ, ಅನೇಕ ರೋಗಿಗಳು ತಮ್ಮ ಆಪರೇಶನ್ ದಿನಾಂಕವನ್ನು ಮುಂದೂಡಿದ್ದಾರೆ. ಪ್ರಳಯ ಸಂಭವಿಸುವುದೇ ಆದರೆ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದಾದರೂ ಏಕೆ ಎನ್ನುವುದು ಅವರ ವಾದ. ಒಂದು ಪಕ್ಷ ನಿಗದಿತ ದಿನದಂದು ಪ್ರಳಯ ನಡೆಯದೆ ಬದುಕುಳಿದರೆ ಚಿಕಿತ್ಸೆ ಮಾಡಿಸಿಕೊಂಡರಾಯಿತು – ಅವರ ಲೆಕ್ಕಾಚಾರ.

ಯಾವುದು ಸಾಧ್ಯ ಅಲ್ಲವೋ, ಯಾವುದು ಅಸತ್ಯವೋ.. ಅಂತಹವುಗಳನ್ನು ನಂಬಿಸುವುದು ಈ ಕಾಲದಲ್ಲಿ ಬಹು ಸಲೀಸು. ಪಂಡಿತ ಎಂದು ಕರೆಸಿಕೊಳ್ಳುವ ಒಬ್ಬನನ್ನು ತಂದು ಕೂರಿಸಿ ಅವನಿಂದ ಎಲ್ಲಾ ಸುಳ್ಳುಗಳನ್ನು, ಆಧಾರ ರಹಿತ ಮಾಹಿತಿಯನ್ನು ಬಿತ್ತರಿಸಿದರೆ ಸಾಕು, ಜನ ಬೇಸ್ತು ಬೀಳುತ್ತಾರೆ ಮತ್ತು ನಂಬುತ್ತಾರೆ.

ಇದೇ ರೀತಿ 1999 ರ ಅಂತ್ಯದಲ್ಲೂ ಪ್ರಳಯ ಆಗುತ್ತೆ ಅಂತ ನರೇಂದ್ರ ಎಂಬ ಪ್ರಳಯಾಂತಕ ಪುಸ್ತಕ ಬರೆದು ಪ್ರಚಾರ ಗಿಟ್ಟಿಸಿದ್ದರು. ‘ತರಂಗ’ ಎಂಬ ವಾರ ಪತ್ರಿಕೆ ಪ್ರಳಯದ ಬಗ್ಗೆ ವಿಶೇಷ ಸಂಚಿಕೆಯನ್ನು ಹೊರತಂದು ಲಾಭ ಮಾಡಿಕೊಂಡಿತ್ತು. ಅದರ ಪ್ರತಿಗಳು ನಿಗದಿತ ದರಕ್ಕಿಂತ ಮೂರು-ನಾಲ್ಕು ಪಟ್ಟು ಹೆಚ್ಚಿನ ರೇಟಿಗೆ ಮಾರಾಟವಾಗಿದ್ದವು. ಆದರೆ ಪ್ರಳಯ ಆಯಿತೆ? ಊಹ್ಞುಂ. ಲಾಭ ಆಯಿತು – ’ತರಂಗ’ದ ಮಾಲೀಕರಿಗೆ.

ಸಾವಿನ ಬಗ್ಗೆ ಆತಂಕ ಇಟ್ಟುಕೊಂಡಿರುವ ಜನರಿಗೆ ಇಂತಹ ಸಂಗತಿಗಳ ಬಗ್ಗೆ ಕುತೂಹಲ ಇದ್ದೇ ಇರುತ್ತದೆ. ಆ ಕುತೂಹಲವನ್ನು ಲಾಭವನ್ನಾಗಿ ಪರಿವರ್ತಿಸುವ ಉದ್ದೇಶ ಈ ಚಾನೆಲ್‌ಗಳದ್ದು. ವೈಜ್ಞಾನಿಕ ದೃಷ್ಟಿಕೋನ ಬೆಳೆಸಬೇಕಾದ ಇವರು ಹೀಗೆ ಅಜ್ಞಾನದ ಕೂಪಕ್ಕೆ‍ ತಳ್ಳುತ್ತಿದ್ದಾರೆ.

ಈಗಷ್ಟೆ ಶಾಲೆಗೆ ಹೋಗುವ ಮಕ್ಕಳಲ್ಲೂ ಪ್ರಳಯದ ಭೀತಿ.ಇಂತಹ ಸುದ್ದಿಗಳ ಪರಿಣಾಮ ಏನು ಎನ್ನುವುದರ ಪ್ರಜ್ಞೆ ಕಿಂಚಿತ್ತೂ ಚಾನೆಲ್‌ನವರಿಗೆ ಇದ್ದಂತಿಲ್ಲ. ಸರ್ಜರಿ ಮುಂದೂಡಿದವರ ಆರೋಗ್ಯ ಸ್ಥಿತಿ ಎಷ್ಟು ಹದಗೆಟ್ಟೀತು ಎಂಬುದರ ಕಲ್ಪನೆಯೂ ಇವರಿಗೆ ಇದ್ದಂತಿಲ್ಲ.

ಇವರಿಗೆ ಜವಾಬ್ದಾರಿಯಿಂದ ವರ್ತಿಸುವಂತೆ ತಿಳಿಸುವವರಾರು?

7 thoughts on “ಪ್ರಳಯ ಮತ್ತು ಟಿವಿ ಚಾನಲ್‌ಗಳ ಮಹಾದ್ರೋಹ

 1. Anand

  ಇನ್ನೊಂದು 20-25 ದಿನಗಳು ತಾನೆ… ಆದಾದ ಮೇಲೆ ಈ ಚಾನೆಲನವರನ್ನು ಒಂದು ನೋಡ್ಕೊಳ್ಳೋಣ 🙂

  Reply
  1. oduga

   Intha suddigalannu non-stop bittarisuva TV channel galige pralaya maadisibittare? Most of them show some video clips from youtube and repeattem throughout the day.

   Reply
 2. ಪ್ರಜೆ

  ಪ್ರಳಯದ ಬಗ್ಗೆ ಸುಳ್ಳು ಸುದ್ದಿ ಬಿತ್ರಿಸುತ್ತಿರೋರಲ್ಲಿ ಮುಂಚೂಣಿಯಲ್ಲಿರೋದು ಪಬ್ಲಿಕ್​ ಟಿವಿ. ಪ್ರಳಯ ಫಿಕ್ಸ್​ ಅನ್ನೋ ಹೆಸ್ರಲ್ಲಿ ದಿನಾ ಅಸಂಬದ್ಧ ಹೇಳಿ ಜನ್ರಲ್ಲಿ ಭಯ ಬಿತ್ತುತ್ತಿದ್ದಾರೆ. ಆದ್ರೆ ಜನಶ್ರೀ ಚಾನೆಲ್​ ಮಾತ್ರ ಇದಕ್ಕೆ ತದ್ವಿರುದ್ಧವಾಗಿ `ಪ್ರಳಯವೆಂಬುದು ಬೊಗಳೆ` ಅನ್ನೋ ಸರಣಿ ಪ್ರಸಾರ ಮಾಡುತ್ತಿದೆ. ಲೇಖಕರು ಗಮನಿಸಿಲ್ಲ ಅನಿಸುತ್ತೆ. ಇಂಥ ವಿಷ್ಯಗಳಲ್ಲಿ ಉಳಿದೆಲ್ಲ ಚಾನೆಲ್​ಗಳಿಗಿಂತ ಜನಶ್ರೀ ಆರಂಭದಿಂದ್ಲೂ ಭಿನ್ನವಾಗಿ ಮೂಡಿಬರ್ತಿದೆ. ಸದ್ಯಕ್ಕೆ ವೈಜ್ಱಾನಿಕ ಮತ್ತು ವೈಚಾರಿಕ ಧೋರಣೆ ಹೊಂದಿರುವ ಏಕೈಕ ಚಾನೆಲ್​ ಜನಶ್ರೀ. ಆದ್ರೆ ಜನ ಅದನ್ನ ಅಷ್ಟಾಗಿ ಬೆಂಬಲಿಸುತ್ತಿರೋ ಹಾಗೆ ಕಾಣ್ತಿಲ್ಲ.

  Reply
 3. ಕನ್ನಡಿಗ

  ನೀವೂ ಒಂದಲ್ಲ ಎರಡೂ ಕೈನಿಂದ ನೋಡ್ಕೊಳಿ… ಅದಕ್ಕೂ ಮುನ್ನ ಯಾವ ಯಾವ ಸುದ್ದಿ ವಾಹಿನಿಯ ಮನೋಧೋರಣೆ ಎಂತಹದ್ದು ಅನ್ನೋದನ್ನೂ ನೋಡಿ ಮುಂದುವರೆಯಿರಿ. ಫೇಸ್​ಬುಕ್​ನಲ್ಲೊಂದು ಕಾಮಿಡಿ ಹರಿದಾಡುತ್ತಿದೆ. ಅದೇನಪ್ಪ ಅಂದ್ರೆ ಪ್ರಳಯ ಶುರುವಾಗೋದು ಬೆಂಗಳೂರಿನ ಯಶವಂತಪುರ ಬಸ್​ಸ್ಟಾಂಡ್​ನಿಂದ ಅಂತ…ಇಂತದ್ದೇ ವಿಚಾರ ಇಟ್ಕೊಂಡು ತರಂಗ ಸಾಕಷ್ಟು ದುಡ್ಡು ಮಾಡಿಕೊಳ್ತು. ಆಮೇಲೆ ಅದರ ವಿಶ್ವಾಸಾರ್ಹತೆ ಹಾಳಾಯ್ತು. ಅದೇ ಪಬ್ಲಿಕ್​ಗೂ ಉಳಿದ ಚಾನೆಲ್​ಗಳಿಗೂ ಆಗುತ್ತೆ. ನಮ್ಮ ವರ್ತಮಾನದಲ್ಲೂ ಈ ವೈಜ್ಞಾನಿಕ ವಿಚಾರ ಹಾಗೂ ಬೊಗಳೆ ಚಾನೆಲ್​ಗಳ ಬುರುಡೆಯನ್ನೂ ಬಿಚ್ಚಿಡುವ ಲೇಖನಗಳು ಬರಲಿ…

  Reply
 4. ಅಪ್ಪಟ ಕನ್ನಡಿಗ

  ಪ್ರಳಯ ಫಿಕ್ಸ್​ ಅಂತಾ ದಿನಗಣನೆ ಮಾಡುತ್ತಿರುವ ಪಬ್ಲಿಕ್ ಟಿವಿ, ಇಷ್ಟು ದಿನ ಪ್ರಳಯ ಆಗಿಯೇ ಬಿಡುತ್ತೆ ಅಂತಾ ಬೊಬ್ಬಿಡುತ್ತಿದ್ದ ಟಿವಿ9, ಪ್ರಳಯ, ಪ್ರಳಯ ಅಂತಾ ಪಟಾಕಿ ಹಾರಿಸ್ತಿದ್ದ ಕಸ್ತೂರಿ ನ್ಯೂಸ್ 24… ಒಂದಕ್ಕಿಂತಲೂ ಒಂದು ಚಾನೆಲ್​ನಲ್ಲಿ ಪ್ರಳಯದ ಕುರಿತು ಬಂದ ವಿಶ್ಲೇಷಣೆಗಳೇನು, ತೋರಿಸಿದ ಚಿತ್ರಗಳೇನು.. ಈಗ ಎಲ್ಲರೂ ಉಲ್ಟಾ ಹೊಡೆದಿದ್ದಾರೆ.. ಪ್ರಳಯ ಆಗೋದಿಲ್ಲ. ಪ್ರಳಯ ಪೋಸ್ಟ್​ ಪೋನ್​ ಆಗಿದೆ ಅಂತಾ ಇನ್ನೊಂದು ಕಥೆ ಶುರು ಮಾಡಿದ್ದಾರೆ. ನಾಚಿಕೆ ಆಗಬೇಕು ಇವರಿಗೆಲ್ಲ. ಟಿಆರ್​ಪಿಗಾಗಿ ಏನು ಬೇಕಾದರೂ ಮಾಡೋದಕ್ಕೆ ಸಿದ್ಧವಿದ್ದಾರೆ. ಆದರೆ ಈ ನಾಲಾಯಕ್ ಸುದ್ದಿವಾಹಿನಿಗಳ ಮಧ್ಯೆ, ಜನಶ್ರೀ, ಸಮಯ ಪರವಾಗಿಲ್ಲ… ಮನೆಮಂದಿಯಲ್ಲ ಕುಳಿತು, ಯಾವುದೇ ಆತಂಕವಿಲ್ದದೆ ನೋಡಬಹುದು.. ಅಷ್ಟರ ಮಟ್ಟಿಗೆ ಇವೆರಡೂ ಚಾನೆಲ್​ಗಳು ತಮ್ಮತನವನ್ನು ಉಳಿಸಿಕೊಂಡು ಹೋಗುತ್ತಿವೆ. ಇವರನ್ನು ನೋಡಿ ನಾಲಾಯಕ್ ಟಿವಿ9, ನಾಚಿಕೆ ಬಿಟ್ಟಿರುವ ಪಬ್ಲಿಕ್ ಟಿವಿ, ಗುರಿಯಿಲ್ಲ ಕಸ್ತೂರಿ ನ್ಯೂಸ್​ 24ನವರು ಕಲಿಯಲಿ….

  Reply

Leave a Reply

Your email address will not be published.