ಪ್ರಜಾ ಸಮರ – 16 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

ಕರ್ನಾಟಕದಲ್ಲಿ ಅಧಿಕೃತವಾಗಿ ನಕ್ಸಲ್ ಚಟುವಟಿಕೆ ದಾಖಲಾದದ್ದು 2002 ರಲ್ಲಿ. ಚಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಮೆಣಸಿನಹಾಡ್ಯ ಬಳಿಯ ಕಾಡಿನಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಮೊದಲ ಗುಂಡಿನ ಚಕಮಕಿಯಲ್ಲಿ ನಕ್ಸಲ್ ಮಹಿಳೆಯೊಬ್ಬಳ ಕಾಲಿಗೆ ಗುಂಡು ತಗಲುವುದರ ಮೂಲಕ ನಕ್ಸಲರು ಕರ್ನಾಟಕದ ಮಲೆನಾಡಿಗೆ ಕಾಲಿಟ್ಟಿದ್ದಾರೆ ಎಂಬುದನ್ನು ಧೃಡಪಡಿಸಿತು. ನಂತರ 2003 ರ ನವಂಬರ್ ತಿಂಗಳಿನಲ್ಲಿ ಈದು ಎಂಬ ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ರಾಯಚೂರು ಜಿಲ್ಲೆಯ ಪಾರ್ವತಿ ಮತ್ತು ಹಾಜಿಮ ಎಂಬ ಯುವತಿಯರು ಬಲಿಯಾಗುವುದರ ಮೂಲಕ ಕರ್ನಾಟಕದಲ್ಲಿ ನಕ್ಸಲ್ ರಕ್ತ ಚರಿತ್ರೆಗೆ ಮೊದಲ ಅಧ್ಯಾಯ ಬರೆದರು.

ಕರ್ನಾಟಕಕಕ್ಕೆ ನಕ್ಷಲ್ ಚಳುವಳಿಯನ್ನು ವಿಸ್ತರಿಬೇಕೆಂಬುದು ಆಂಧ್ರ ಪೀಪಲ್ಸ್ ವಾರ್ ಗ್ರೂಪ್ 1982 ರಲ್ಲಿ ತೀರ್ಮಾನ ತೆಗೆದುಕೊಂಡಿತ್ತು. ಸಂಘಟನೆಯನ್ನು ರೂಪಿಸುವ ಜವಬ್ದಾರಿಯನ್ನು ಚುರುಕುರಿ ರಾಜ್‌ಕುಮಾರ್ ಅಲಿಯಾಸ್ ಅಜಾದ್ ಎಂಬಾತನಿಗೆ ವಹಿಸಲಾಗಿತ್ತು. 1982 ರಿಂದ ಕರ್ನಾಟಕದ ಉಸ್ತುವಾರಿ ಹೊಣೆ ಹೊತ್ತಿದ್ದ ಅಜಾದ್ ರಾಯಚೂರು, ಬೀದರ್, ಗುಲ್ಬರ್ಗಾ ಮತ್ತು ಮಧುಗಿರಿ, ಪಾವಗಡ ಮಂತಾದ ಸ್ಥಳಗಳಲ್ಲಿ ಸಂಚರಿಸುತ್ತಾ ಯುವಕರನ್ನು ಸೆಳೆಯುವಲ್ಲಿ ನಿರತನಾಗಿದ್ದ. ವಾರಂಗಲ್ ಪಟ್ಟಣದ ಇಂಜಿನಿಯರಿಂಗ್ ಕಾಲೇಜಿನಿಂದ ಎಂ.ಟೆಕ್ ಪದವಿ ಪಡೆದು ನಕ್ಸಲ್ ಚಳುವಳಿಗೆ ಸೇರ್ಪಡೆಯಾಗಿದ್ದ ಅಜಾದ್ ತನ್ನ ವಿದ್ಯೆ ಮತ್ತು ಸಂಘಟನಾ ಚಾತುರ್ಯದಿಂದಾಗಿ ಸಿ.ಪಿ.ಐ.(ಎಂ.ಎಲ್.) ನ ಪಾಲಿಟ್ ಬ್ಯೂರೊ ನ ಸದಸ್ಯನಾಗಿ ಕೂಡ ಕಾರ್ಯ ನಿರ್ವಹಿಸಿದ್ದ. ಈತನನ್ನು 2010 ರಲ್ಲಿ ಆಂಧ್ರ ಪೊಲೀಸರು ಮಹಾರಾಷ್ಟ್ರದಲ್ಲಿ ಬಂಧಿಸಿ ಜೊತೆಗಿದ್ದ ಹೇಮಂತ್ ಕುಮಾರ್ ಪಾಂಡೆ ಎಂಬ ಪತ್ರಕರ್ತನನ್ನು ಸಹ ಕರೆದೊಯ್ದು ಆಂಧ್ರ ಗಡಿಭಾಗದ ಅರಣ್ಯದಲ್ಲಿ ಎನ್ ಕೌಂಟರ್ ಮಾಡಿ ಮುಗಿಸಿದರು. 1982 ರ ನಂತರ ಮಾವೋವಾದಿ ನಕ್ಸಲ್ ಸಂಘಟನೆಗೆ ಕರ್ನಾಟಕದಿಂದ ಸಿರಿಮನೆ ನಾಗರಾಜ್ SakethRajanಮತ್ತು ಸಾಕೇತ್ ರಾಜನ್ ಇವರ ಬೆಂಬಲ ದೊರೆತ ನಂತರ ರಾಯಚೂರು ಜಿಲ್ಲೆಯ ಕಮ್ಯೂನಿಷ್ಟ್ ಪಕ್ಷದ ಅನೇಕ ಯುವ ಕಾರ್ಯಕರ್ತರು ಕೈ ಜೋಡಿಸಿದರು. ಆನಂತರ ಅದಕ್ಕೊಂದು ಸ್ವತಂತ್ರ ಅಸ್ತಿತ್ವ ಬಂತು.

ಹಾಗೇ ನೋಡಿದರೇ 1975-76 ರ ಸಮಯದಲ್ಲಿ ಕರ್ನಾಟಕಕ್ಕೆ ಕೇರಳದ ಕಣ್ಣೂರು ಮತ್ತು ಕಾಸರಗೂಡು ಮೂಲಕ ನಕ್ಸಲ್ ಚಟುವಟಿಕೆ ವಿಸ್ತರಿಸುವ ಪ್ರಯತ್ನಗಳು ನಡೆದು ವಿಫಲವಾಗಿದ್ದವು. ಕೇರಳದಲ್ಲಿ 1968 ರಲ್ಲಿ ಅಂಬಾಡಿ ಶಂಕರನ್ ಕುಟ್ಟಿ ಮತ್ತು ಕುನ್ನಿಕಲ್ ನಾರಾಯಣನ್ ಹಾಗೂ ಅವರ ಪುತ್ರಿ ಕೆ.ಅಜಿತಾ ಇವರ ನೇತೃತ್ವದಲ್ಲಿ ಆರಂಭವಾದ ಚಟುವಟಿಕೆ 1976 ರವರೆಗೆ ತಲಚೇರಿ, ಕಣ್ಣೂರು, ಕೊಟ್ಟಾಯಂ, ತಿರುವನಂತಪುರಂ, ವೈನಾಡು,ಕಾಸರಗೂಡು, ಕೊಲ್ಲಂ ಜಿಲ್ಲೆಗಳಿಗೆ ವಿಸ್ತರಿಸಿ ನಂತರ ಸ್ಥಗಿತಗೊಂಡಿತು. 1976 ರ ನಂತರ ಸಿ.ಪಿ.ಐ (ಎಂ.ಎಲ್) ರೆಡ್ ಪ್ಲಾಗ್ (ಕೆಂಬಾವುಟ) ಹೆಸರಿನಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿದ್ದುಕೊಂಡು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾಗವಹಿಸುತ್ತಾ, ಕಾರ್ಮಿಕರ ಪರವಾಗಿ ಹೋರಾಟ ನಡೆಸಲು ಆರಂಭಿಸಿತು.

ಕರ್ನಾಟಕದ ನಕ್ಸಲ್ ಹೋರಾಟಕ್ಕೆ ಸಾಂಸ್ಥಿಕ ರೂಪ ಕೊಟ್ಟು ಹೋರಾಟದ ಮುಂಚೂಣಿಯಲ್ಲಿ ನಿಂತು ಗುಂಡಿಗೆ ಬಲಿಯಾದ ಮೈಸೂರಿನ ಸಾಕೇತ್ ರಾಜನ್ ಬದುಕು ನಿಜಕ್ಕೂ ದುರಂತ ಕಥನವೇ ಸರಿ. ಕರ್ನಾಟಕದ ಜನತೆಗೆ ಸಾಕೇತ್‌ ರಾಜನ್ ಜೀವನಚಿತ್ರ ಪೊಲೀಸರ ಗುಂಡಿಗೆ ಬಲಿಯಾದ ನಂತರವಷ್ಟೇ ಪರಿಚಿತವಾಯಿತು, ಆದರೆ ಮೈಸೂರು, ಮಂಡ್ಯ ಮತ್ತು ಬೆಂಗಳೂರಿನಲ್ಲಿ 80 ರ ದಶಕದಲ್ಲೇ ಎಲ್ಲಾ ಪ್ರಗತಿಪರರಿಗೆ, ಯುವ ಬರಹಗಾರರಿಗೆ ತೀರಾ ಹತ್ತಿರದ ವ್ಯಕ್ತಿಯಾಗಿದ್ದರು. ಈ ದಿನ ನಮ್ಮ ನಡುವಿನ ಬರಹಗಾರರಾದ ಡಾ.ಮೊಗಳ್ಳಿ ಗಣೇಶ, ಡಾ. ಬಂಜಗೆರೆ ಜಯಪ್ರಕಾಶ್, ಅಬ್ದುಲ್ ರಶೀದ್, ಪತ್ರಕರ್ತ ಬಿ.ಎಸ್. ಸತ್ಯನಾರಾಯಣ, ಬಡಗಲಪುರ ನಾಗೇಂದ್ರ, ಕೇಶವ ಶರ್ಮ, ರೈತ ವಿದ್ಯಾರ್ಥಿ ಒಕ್ಕೂಟದ ಡಿ. ಹೊಸಳ್ಳಿ ಶಿವು, ಬರಹಗಾರ ಕೆ.ಶಿವಸುಂದರ್, ಪತ್ರಕರ್ತೆ ಗೌರಿ ಲಂಕೇಶ್, ಮೈಸೂರು ಮಿತ್ರ ಸಂಪಾದಕ ಕೆ.ಬಿ.ಗಣಪತಿ, ಪ್ರೊ. ಲಿಂಗರಾಜ್ ಗಾಂಧಿ ಸೇರಿದಂತೆ ಹಲವರ ಜೊತೆ ಸಾಕೇತ್ ರಾಜನ್‌ಗೆ ಒಡನಾಟವಿತ್ತು.

ಅಯ್ಯಂಗಾರ್ ಕುಟುಂಬಕ್ಕೆ ಸೇರಿದ ನಿವೃತ್ತ ಮಿಲಿಟರಿ ಅಧಿಕಾರಿಯೊಬ್ಬರ ಪುತ್ರನಾಗಿ ಜನಿಸಿದ ಸಾಕೇತ್ ರಾಜನ್ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು ನಂತರ ದೆಹಲಿಯ ಜವಹರಲಾಲ್ ನೆಹರೂ ವಿ.ವಿ.ಗೆ ಸೇರಿದ ಪ್ರತಿಷ್ಟಿತ ಇಂಡಿಯನ್ ಇನ್ಸಿಟ್ಯೂಟ್ ಆಪ್ ಮಾಸ್ ಕಮ್ಯೂನಿಕೇಷನ್ ಸಂಸ್ಥೆಯಲ್ಲಿ ಪತ್ರಿಕೋದ್ಯಮದ ಸ್ನಾತ್ತಕೋತ್ತರ ಪದವಿಗೆ ಸೇರ್ಪಡೆಯಾಗಿದ್ದರು. ಮೈಸೂರಿನಲ್ಲಿದ್ದಾಲೇ ಇಂಗ್ಲೀಷ್ ಭಾಷೆಯಲ್ಲಿ ಪಾಂಡಿತ್ಯ ಮತ್ತು ವೈಚಾರಿಕತೆಯನ್ನು ಮೈಗೂಡಿಸಿಕೊಂಡಿದ್ದ ಸಾಕೇತ್ ದೆಹಲಿಯಲ್ಲಿದ್ದಾಗ ಮಾವೋವಾದಿ ನಕ್ಸಲರ ಸಂಪರ್ಕಕ್ಕೆ ಬಂದಿದ್ದರು. Frantz_Fanon_The_Wretched_of_the_Earthಆ ವೇಳೆಗೆ ಅವರು ಓದಿಕೊಂಡಿದ್ದ ಫ್ರ್ಯಾನ್ಜ್ ಫಾನನ್ ಎಂಬಾತನ “Wretched of the Earth” (ಭೂಮಿ ಮೇಲಿನ ತಿರಸ್ಕೃತರು) ಎಂಬ ಕೃತಿ ಅವರ ಮನಸ್ಸನ್ನು ಸಂಪೂರ್ಣವಾಗಿ ಕ್ರಾಂತಿಯತ್ತ ತಿರುಗಿಸಿತ್ತು. ಪತ್ರಿಕೋದ್ಯಮದಲ್ಲಿ ನಾಲ್ಕು ಚಿನ್ನದ ಪದಕದೊಂದಿಗೆ ಪದವಿ ಪಡೆದು, ದೆಹಲಿಯ ಜವಹರಲಾಲ್ ನೆಹರೂ ವಿ.ವಿ.ಯ ಘಟಿಕೋತ್ಸವದಲ್ಲಿ ಅಂದಿನ ಕೇಂದ್ರ ಶಿಕ್ಷಣ ಸಚಿವ ವಿ.ಸಿ. ಶುಕ್ಲಾ ರವರಿಂದ ಪದವಿ ಪತ್ರ ಸ್ವೀಕರಿಸಿದ ಕೂಡಲೇ ವೇದಿಕೆಯ ಮೇಲೆ ಅದನ್ನು ಹರಿದು ಹಾಕಿ ವ್ಯವಸ್ಥೆಯ ಬಗ್ಗೆ ಧಿಕ್ಕಾರ ಕೂಗಿದ ಮೊದಲ ಕ್ರಾಂತಿಕಾರಿ ವಿದ್ಯಾರ್ಥಿ ಸಾಕೇತ್ ರಾಜನ್. (ಸಾಕೇತ್ ರಾಜನ್ ಬೆಂಗಳೂರಿನ ವಿ.ವಿ.ಯಲ್ಲಿ ಕೂಡ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ ಪಡೆದಿದ್ದರು. ಗೌರಿ ಲಂಕೇಶ್ ಅವರ ಸಹಪಾಠಿಗಳಲ್ಲಿ ಒಬ್ಬರು.) ದೆಹಲಿಯಲ್ಲಿದ್ದಾಗಲೇ ಎಡಪಂಥೀಯ ವಿಚಾರಧಾರೆಗಳಿಂದ ಪ್ರೆರೇಪಿತರಾಗಿದ್ದ ರಾಜನ್ ಅಂತಹದೊಂದು ಪಡೆಯನ್ನು ಕಟ್ಟಬೇಕೆಂದು ಕನಸು ಕಾಣುತ್ತಾ 1982 ರಲ್ಲಿ ಮೈಸೂರಿಗೆ ಬಂದರು.

ಮೈಸೂರಿನ ಪ್ರತಿಷ್ಟಿತ ಬಡಾವಣೆ ಜಯಲಕ್ಷ್ಮಿಪುರಂ ಬಡಾವಣೆಯಲ್ಲಿ ಬಂಗಲೆ ಇದ್ದರೂ ಕೂಡ ಮನೆಗಿಂತ ಹೆಚ್ಚಾಗಿ ಸ್ನೇಹಿತರ ಹಾಸ್ಟಲ್ ರೂಮುಗಳಲ್ಲಿ ಕಾಲ ಕಳೆಯುತಿದ್ದ ಸಾಕೇತ್ ರಾಜನ್, ಮೈಸೂರು ವಿ.ವಿ. ಮುಂಭಾಗದ ಕುಕ್ಕರಳ್ಳಿ ಕೆರೆ ಏರಿಯನ್ನು ಹಗಲಿನ ವೇಳೆಯಲ್ಲಿ ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡಿದ್ದರು. ಕುಕ್ಕರಹಳ್ಳಿ ಕೆರೆಗೆ ಮೈಸೂರು ನಗರದ ಬಡಾವಣೆಗಳಿಂದ ಕೊಳಚೆ ನೀರು ಬಂದು ಸಂಗ್ರಹವಾಗುವುದನ್ನು ಪ್ರತಿಭಟಿಸಿ ಮೈಸೂರಿನ “ಸ್ಟಾರ್ ಆಪ್ ಮೈಸೂರು” ಇಂಗ್ಲೀಷ್ ಪತ್ರಿಕೆಯಲ್ಲಿ ನಿರಂತರ ಲೇಖನಗಳನ್ನು ಬರೆದು ನಾಗರೀಕರಲ್ಲಿ ಜಾಗೃತಿ ಮೂಡಿಸಿದರು. ಆ ವೇಳೆಗೆ ಕರ್ನಾಟಕದಲ್ಲಿ ಪ್ರೊ. ಎಂ.ಡಿ. ನಂಜುಂಡಸ್ವಾಮಿ ನೇತೃತ್ವದಲ್ಲಿ ರೈತ ಚಳುವಳಿ ಆರಂಭವಾಗಿತ್ತು. ಅಹಿಂಸೆಯ ಮಾದರಿಯಲ್ಲಿ ನಡೆಯುತಿದ್ದ ರೈತ ಚಳುವಳಿಗೆ ಒಲವು ತೋರಿಸದ ಸಾಕೇತ್ ರಾಜನ್ ತಮ್ಮ ವೈಯಕ್ತಿಕ ನೆಲೆಯಲ್ಲಿ ಕಷ್ಟಕ್ಕೆ ಸಿಲುಕಿದ ರೈತರಿಗೆ ನೆರವಾಗುತಿದ್ದರು.

“ಮೇಕಿಂಗ್ ಹಿಸ್ಟರಿ” ಎಂಬ ಎರಡು ಸಂಪುಟಗಳಲ್ಲಿ ಬಂದಿರುವ ಸಾಕೇತ್ ರಾಜನ್ ಕೃತಿಗಳು ಅವರ ವಿದ್ವತ್ ಮತ್ತು ಪ್ರತಿಭೆಗೆ ಸಾಕ್ಷಿಯಾಗಿವೆ. ಮೊದಲನೆ ಸಂಪುಟದಲ್ಲಿ ಕರ್ನಾಟಕ ಇತಿಹಾಸವನ್ನು ಟಿಪ್ಪು ಸುಲ್ತಾನ್ ಬ್ರಿಟಿಷರೊಂದಿಗೆ ಕಾದಾಡಿ 1799 ರ ನಾಲ್ಕನೆ ಮೈಸೂರು ಯುದ್ದದಲ್ಲಿ ಮಡಿಯುವವರೆಗೆ ಕಟ್ಟಿಕೊಟ್ಟಿರುವ ಸಾಕೇತ್, ಎರಡನೇ ಸಂಪುಟದಲ್ಲಿ 1799 ರಿಂದ 1857 ರ ಸಿಪಾಯಿ ದಂಗೆಯವರೆಗೆ ದಾಖಲಿಸಿದ್ದಾರೆ. 1995 ಮತ್ತು 1997 ರಲ್ಲಿ ಈ ಕೃತಿಗಳು ಪ್ರಕಟಣೆಗೊಂಡವು. 1857 ರಿಂದ 1947 ರ ವರೆಗಿನ ಇತಿಹಾಸ ಮೂರನೇ ಸಂಪುಟದಲ್ಲಿ ಬರಬೇಕಾಗಿತ್ತು. ಅಷ್ಟರಲ್ಲಿ ಸಾಕೇತ್ ಮೈಸೂರನ್ನು ತೊರೆದು ಆಂಧ್ರದತ್ತ ವಲಸೆ ಹೋದ ಕಾರಣ ಬೆಳಕು ಕಾಣಲಿಲ್ಲ. ದುರಂತವೆಂದರೆ, 2005 ರ ಪೆಬ್ರವರಿ 6 ರಂದು ಸಾಕೇತ್ ರಾಜನ್ ನಕ್ಸಲಿಯರ ನಾಯಕನೆಂಬ ಹಣೆಪಟ್ಟಿಯೊಂದಿಗೆ ಪೊಲೀಸರ ಗುಂಡಿಗೆ ಬಲಿಯಾಗಿ ಅರಣ್ಯದಲ್ಲಿ ಅನಾಥ ಶವವಾಗಿ ಮಲಗಿದ್ದ ಸಂದರ್ಭದಲ್ಲಿ ಅವರ ಕೃತಿಗಳ ಹಲವಾರು ಪ್ರಬಂಧಗಳು ದೇಶದ ಹಲವಾರು ವಿ.ವಿ.ಗಳಲ್ಲಿ ಇತಿಹಾಸದ ಪಠ್ಯಗಳಾಗಿ ವಿದ್ಯಾರ್ಥಿಗಳಿಗೆ ಬೋಧಿಸಲ್ಪಡುತಿದ್ದವು. ಭಾರತದ ಇತಿಹಾಸವನ್ನು ವೈಜ್ಞಾನಿಕವಾಗಿ ಮತ್ತು ಎಡಪಂಥೀಯ ಚಿಂತನೆಯ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿದ ಎಂ.ಡಿ. ಕೊಸಾಂಬಿ ನಂತರ ನಮ್ಮ ನಡುವೆ ಇರುವ ರೊಮಿಲಾ ಥಾಪರ್ ಮತ್ತು ಇರ್ಪಾನ್‌ ಹಬೀಬ್ ಎಂಬ ಇತಿಹಾಸ ತಜ್ಞರಿಗೆ ಸಮನಾಗಿ ನಿಲ್ಲುವ ಪ್ರತಿಭೆ ಸಾಕೇತ್ ರಾಜನ್‌ಗೆ ಇತ್ತು.

ಸಾಕೇತ್ ರಾಜನ್‌ರವರ ಈ ಎರಡು ಕೃತಿಗಳ ರಚನೆ ಮತ್ತು ಹೋರಾಟದ ಹಿಂದೆ ಇದ್ದ ಅವರ ಸಂಗಾತಿ ರಾಜೇಶ್ವರಿಯರ ಶ್ರಮ ಮತ್ತು ತ್ಯಾಗ ಮನೋಭಾವವನ್ನು ಅಲ್ಲಗೆಳಯಲಾಗದು. ಮೈಸೂರಿನ ಬಡಕುಟುಂಬದಲ್ಲಿ ಜನಿಸಿದ ರಾಜೇಶ್ವರಿ ಅಲಿಯಾಸ್ ಅನಿತಾ ಎಂದು ಕರೆಸಿಕೊಳ್ಳುತಿದ್ದ ಈ ಹೆಣ್ಣು ಮಗಳು ಪದವಿ ಶಿಕ್ಷಣ ಮುಗಿಸುವ ವೇಳೆಗೆ ಲೊಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತಿದ್ದ ಅವರ ತಂದೆ ಅಕಾಲ ಮರಣಹೊಂದಿದರು. com-rajeshwariರಾಜೇಶ್ವರಿ ಕುಟುಂಬದ ಹಿರಿಯ ಮಗಳಾದ್ದರಿಂದ ಕುಟುಂಬದ ಹೊಣೆ ಹೊರುವ ಸಲುವಾಗಿ ಸರ್ಕಾರ ನೀಡುವ ಅನುಕಂಪ ಆಧಾರಿತ ಉದ್ಯೋಗದ ಯೋಜನೆಯಡಿ ಲೋಕೊಪಯೋಗಿ ಇಲಾಖೆಯಲ್ಲಿ ಗುಮಾಸ್ತೆಯಾಗಿ ದುಡಿದರು. ಸತತ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ, ಸಹೋದರ-ಸಹೋದರಿಯರು ನೆಲೆ ನಿಂತ ನಂತರ ಉದ್ಯೋಗಕ್ಕೆ ರಾಜಿನಾಮೆ ನೀಡಿ ಎಡಪಂಥೀಯ ಚಿಂತ ಮತ್ತು ಹೋರಾಟಗಳೊಂದಿಗೆ ಗುರುತಿಸಿಕೊಂಡರು. ಉದ್ಯೋಗದಲ್ಲಿದ್ದಾಗಲೇ ಅನೇಕ ಪ್ರಗತಿ ಪರ ಸಂಘಟನೆಗಳೊಂದಿಗೆ ಸಂಬಂಧವಿರಿಸಿಕೊಂಡಿದ್ದ ರಾಜೇಶ್ವರಿ ಸಹಜವಾಗಿ ಸಾಕೇತ್‌ ರಾಜನ್ ಜೊತೆ ಗುರುತಿಸಿಕೊಂಡರು. ಸಾಕೇತ್ ಬರೆದ ಎರಡು ಸಂಪುಟಗಳಿಗೆ ತಾವೇ ನಿಂತು ಡಿ.ಟಿ.ಪಿ. ಟೈಪಿಂಗ್ ಮಾಡಿದರು. ಆಗ ತಾನೇ ಆರಂಭಗೊಂಡಿದ್ದ ಡಿ.ಟಿ.ಪಿ.ಯನ್ನು ಕಲಿಯಲು ಮೂರು ತಿಂಗಳ ಡಿಪ್ಲೊಮ ಕೋರ್ಸ್‌ಗೆ ರಾಜೇಶ್ವರಿ ಸೇರ್ಪಡೆಯಾಗಿದ್ದರು.

ಕರ್ನಾಟಕದ ಪರಿಸರ ಸಂರಕ್ಷಣ ಚಳುವಳಿಯನ್ನು ರಾಜ್ಯಾದ್ಯಂತ ವಿಸ್ತರಿಸಬೇಕೆಂಬುದು ಸಾಕೇತ್ ಅವರ ಕನಸಾಗಿತ್ತು. ಕಾರವಾರದ ಬಳಿ ಸ್ಥಾಪಿಸಲಾದ ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಬೇಕಾದ ಯುರೇನಿಯಂ ಅದಿರನ್ನು ಸಂಸ್ಕರಿಸಲು ಮೈಸೂರಿನ ರಟ್ಟೆಹಳ್ಳಿ ಬಳಿ ಸಂಸ್ಕರಣಾ ಘಟಕ ಆರಂಭಿಸಿದಾಗ ಇದರ ಬಗ್ಗೆ ಪ್ರತಿಭಟಿಸಿ ರಾಜ್ಯದ ಗಮನ ಸೆಳೆದಿದ್ದರು. ಇತ್ತ ಮಲೆನಾಡಿನಲ್ಲಿ ಕಲ್ಕುಳಿ ವಿಠಲ ಹೆಗ್ಡೆ ಮತ್ತು ಅನೇಕ ಸ್ನೇಹಿತರು ತುಂಗಾ ಉಳಿಸಿ ಎಂಬ ಆಂಧೋಲನ ಆರಂಭಿಸಿದ್ದರು. ಕುದುರೆ ಮುಖ ಗಣಿಗಾರಿಕೆಯಂದ ಆಗುವ ಪರಿಸರ ನಾಶದ ಬಗ್ಗೆ ಪರಿಸರವಾದಿಗಳು ಹೋರಾಟ ಆರಂಭಿಸಿದಾಗ ಹೋರಾಟಕ್ಕೆ ಬೆಂಬಲ ಸೂಚಿಸಿ ಲೇಖನಗಳನ್ನು ಬರೆದು ಅದನ್ನು ರಾಜ್ಯವ್ಯಾಪಿ ಚಳವಳಿಯಾಗಿ ರೂಪಿಸಬೇಕೆಂದು ಬಯಸಿದ್ದರು. ಇದೇ ವೇಳೆಗೆ ಕುದುರೆಮುಖ ಅರಣ್ಯ ಪ್ರದೇಶವನ್ನು ರಾಷ್ಟ್ರೀಯ ಅಭಯಾರಣ್ಯವೆಂದು ಕೇಂದ್ರ ಸರ್ಕಾರ ಘೋಷಿಸಿದ್ದರಿಂದ ಅರಣ್ಯದಲ್ಲಿದ್ದ ಅನೇಕ ನಿವಾಸಿಗಳು ತಮ್ಮ ನೆಲೆಗಳನ್ನು ಕಳೆದುಕೊಳ್ಳುವ ಸ್ಥಿತಿಗೆ ದೂಡಲ್ಪಟ್ಟರು. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಬಲಿಷ್ಟ ನಕ್ಸಲ್ ಚಳುವಳಿಯನ್ನು ಕಟ್ಟಬೇಕೆಂಬುದು ಸಾಕೇತ್ ರಾಜನ್‌ವರ ಯೋಜನೆಯಾಗಿತ್ತು. ಆ ವೇಳೆಗಾಗಲೇ ಅವರು ತಮ್ಮ ವಿದ್ವತ್ ಮತ್ತು ಪ್ರತಿಭೆಯಿಂದಾಗಿ ರಾಷ್ಟ್ರ ಮಟ್ಟದಲ್ಲಿ ಸಿ.ಪಿ.ಐ.( ಎಂ.ಎಲ್) ಕಮ್ಯುನಿಸ್ಟ್ ಸಂಘಟನೆಯಲ್ಲಿ ಗುರುತಿಸಿಕೊಂಡು ರಾಜ್ಯ ಘಟಕದ ಕಾರ್ಯದರ್ಶಿಯಾಗಿದ್ದರು. ಕರ್ನಾಟಕದಲ್ಲಿ ಯಾವುದೇ ಹಿಂಸಾತ್ಮಕ ಹೋರಾಟ ನಡೆಯದೇ ಇದ್ದ ಕಾರಣ ಈ ಬೆಳವಣಿಗೆಯನ್ನು ಕರ್ನಾಟಕ ಪೊಲೀಸರು ಹೆಚ್ಚು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಇವರ ಒಡನಾಟ ಆಂಧ್ರದ ಪೀಪಲ್ಸ್ ವಾರ್ ಗ್ರೂಪ್( ಸಿ.ಪಿ.ಐ.(ಎಂ.ಎಲ್.) ಜೊತೆ ಇದೆ ಎಂಬುವುದನ್ನು ಅರಿತಿದ್ದ ಪೊಲೀಸರು ಮೈಸೂರಿನಲ್ಲಿ ಸಾಕೇತ್‌ರ ಎಲ್ಲಾ ಚಲನ ವಲನಗಳ ಮೇಲೆ ನಿಗಾ ಇಟ್ಟಿದ್ದರು. ರಾಜೇಶ್ವರಿಯ ಸಂಪಾದಕತ್ವದಲ್ಲಿ ಹೊರ ಬರುತಿದ್ದ “ವನಿತಾ ವಿಮುಕ್ತಿ” ಎಂಬ ಪತ್ರಿಕೆಯಲ್ಲಿ ನಿರಂತರವಾಗಿ ಲೇಖನ ಬರೆಯುತಿದ್ದರು. ಜೊತೆಗೆ “ಪ್ರಜಾ ವಿಮುಕ್ತಿ” ಎಂಬ ಪತ್ರಿಕೆಯಲ್ಲಿ ಆಂಧ್ರದ ನಕ್ಸಲ್ ಚಳುವಳಿ ಮತ್ತು ಅಲ್ಲಿನ ನಾಯಕರ ಸಂದರ್ಶನಗಳು ಪ್ರಕಟವಾಗುತಿದ್ದವು. ಸ್ವತಃ ರಾಜೇಶ್ವರಿ ಆಂಧ್ರಕ್ಕೆ ಪ್ರಯಾಣ ಬೆಳಸಿ ಅಲ್ಲಿ ನಡೆಯುತಿದ್ದ ದೌರ್ಜನ್ಯಗಳನ್ನು ದಾಖಲಿಸಿಕೊಂಡು ಬಂದು ಪತ್ರಿಕೆಯಲ್ಲಿ ಬರೆಯುತಿದ್ದರು. ಅವರ ಇಂತಹ ಪ್ರಯತ್ನ ಅಂತಿಮವಾಗಿ ದುರಂತದಲ್ಲಿ ಅಂತ್ಯಗೊಂಡಿತು.

2001 ರ ಮಾರ್ಚ್ 20 ರಂದು ಆಂಧ್ರದ ಉತ್ತರ ಭಾಗದ ಪೂರ್ವ ಗೋದಾವರಿ ಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಬಳಿ ಕೊತ್ತಪಲ್ಲಿ ಎಂಬ ಅರಣ್ಯದಲ್ಲಿ “ಪೀಪಲ್ಸ್ ವಾರ್ ಗ್ರೂಪ್”‌ಗೆ ಸೇರಿದ ಇಬ್ಬರು ದಳಂ ನಾಯಕರನ್ನು ಬೇಟಿ ಮಾಡಿ ಸಂದರ್ಶಿಸುತಿದ್ದಾಗ ರಾಜೇಶ್ವರಿ ಆಂಧ್ರ ಪೊಲೀಸರಿಂದ ಬಂಧಿಸಲ್ಪಟ್ಟರು. ಆ ಕ್ಷಣದಲ್ಲಿ ರಾಜೇಶ್ವರಿ ಬಳಿ ಇದ್ದುದ್ದು ಒಂದು ನೋಟ್ ಬುಕ್, ಪೆನ್ ಮತ್ತು ಕ್ಯಾಮರಾ ಮಾತ್ರ. ತಾನೊಬ್ಬ ಕರ್ನಾಟಕ ಮೂಲದ ಪತ್ರಕರ್ತೆ ಎಂದು ರಾಜೇಶ್ವರಿ ಪರಿಪರಿಯಾಗಿ ಬೇಡಿಕೊಂಡರೂ ಸಹ ಆಂಧ್ರ ಪೊಲೀಸರು ಕರುಣೆ ತೋರಲಿಲ್ಲ. ಆಂಧ್ರದ ಇಬ್ಬರು ದಳಂ ನಾಯಕರನ್ನು ಬೆಳಿಗ್ಗೆ 11 ಗಂಟೆಗೆ ಎನ್‌ಕೌಂಟರ್ ಮೂಲಕ ಮುಗಿಸಿದ ಪೊಲೀಸರು ರಾಜೇಶ್ವರಿಯನ್ನು ಅರಣ್ಯದ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಸಂಜೆ ನಾಲ್ಕು ಗಂಟೆಯವರೆಗೆ ನಕ್ಸಲರ ಕುರಿತ ಮಾಹಿತಿಗಾಗಿ ಇನ್ನಿಲ್ಲದಂತೆ ಚಿತ್ರ ಹಿಂಸೆ ನೀಡಿದ್ದರು. ಅಂತಿಮವಾಗಿ ಸಂಜೆ 4 ಗಂಟೆಗೆ ಅವರನ್ನು ಸಹ ಗುಂಡಿಟ್ಟು ಕೊಂದು, ಪೊಲೀಸರು ಮತ್ತು ನಕ್ಸಲರ ಗುಂಡಿನ ಚಕಮಕಿಯಲ್ಲಿ ಆದಿವಾಸಿ ಮಹಿಳೆಯ ಸಾವು ಎಂಬ ಸುದ್ದಿಯನ್ನು ಪ್ರಕಟಿಸಿದರು. ಆದರೆ ಈ ಎಲ್ಲಾ ಘಟನೆಗಳನ್ನು ಪೊದೆಯ ಹಿಂದೆ ಅಡಗಿ ಕುಳಿತು ವೀಕ್ಷಿಸಿದ್ದ ಅಲ್ಲಿನ ಆದಿವಾಸಿಗಳು ಹೊರ ಜಗತ್ತಿಗೆ ನಿಜವಾದ ಸುದ್ದಿಯನ್ನು ತಲುಪಿಸಿದ್ದರು. ರಾಜೇಶ್ವರಿಯರ ದೇಹದ ಮೇಲೆ ಪೊಲೀಸರು ಸಿಗರೇಟಿನಿಂದ ಸುಟ್ಟಿದ್ದ ಗಾಯದ ಕಲೆಗಳಿದ್ದವು. ತಾರತಮ್ಯವಿಲ್ಲದ ಸುಂದರ ಸಮಾಜದ ಕನಸು ಕಂಡಿದ್ದ ಈ ಮೈಸೂರಿನ ಹೆಣ್ಣು ಮಗಳು ಕೇವಲ ತನ್ನ 37 ನೇ ವಯಸ್ಸಿಗೆ ಆಂಧ್ರದ ಅರಣ್ಯದಲ್ಲಿ ಅನಾಥ ಹೆಣವಾಗಿಬಿಟ್ಟಳು. ರಾಜೇಶ್ವರಿಯ ಹತ್ಯೆಯ ಬಗ್ಗೆ ಕರ್ನಾಟಕದಲ್ಲಾಗಲಿ, ಅಥವ ರಾಷ್ಟ್ರಮಟ್ಟದಲ್ಲಾಗಲಿ, ಯಾವೊಂದು ಮಾದ್ಯಮವೂ ಧ್ವನಿ ಎತ್ತಲಿಲ್ಲ. ಬರಹಗಾರ ಮಿತ್ರ ಕೆ.ಶಿವಸುಂದರ್ ಮಾತ್ರ ಈ ಹತ್ಯೆಯ ಬಗ್ಗೆ ಬೆಂಗಳೂರಿನಲ್ಲಿ ದೊಡ್ಡದಾಗಿ ದ್ವನಿಯೆತ್ತಿ ದೇಶದ ಗಮನ ಸೆಳೆದರು.

ಸಂಗಾತಿ ರಾಜೇಶ್ವರಿಯ ಸಾವು ಸಾಕೇತ್ ರಾಜನ್ ಅವರನ್ನು ತೀವ್ರ ಹತಾಶರನ್ನಾಗಿ ಮಾಡಿತು. ಜೊತೆಗೆ ಅವರು ಯಾವಾಗಲೂ ರೂಪಕದ ಭಾಷೆಯಲ್ಲಿ ಬಳಸುತಿದ್ದ “ಪೆನ್ ಅಂಡ್ ಗನ್”, ಅಂದರೆ ಲೇಖನಿ ಮತ್ತು ಬಂದೂಕ ಎರಡು ಹೋರಾಟ ಒಟ್ಟಿಗೆ ಸಾಗಬೇಕು ಎಂಬ ಅವರ ಆಲೋಚನೆಗೆ ಮೈಸೂರಿನ ಯಾವೊಬ್ಬ ಮಿತ್ರನಿಂದ ಬೆಂಬಲ ದೊರೆಯದಿದ್ದದು ನಿರಾಶೆ ಮೂಡಿಸಿತ್ತು. ಅಂತಿಮವಾಗಿ 2001 ರ ಕೊನೆಯ ದಿನಗಳಲ್ಲಿ ಯಾರೊಬ್ಬರಿಗೂ ಒಂದು ಸಣ್ಣ ಸುಳಿವು ನೀಡದೇ ಒಬ್ಬಂಟಿಯಾಗಿ ಆಂಧ್ರದತ್ತ ನಡೆದು ಕೈಗೆ ಎ.ಕೆ. 47 ಬಂದೂಕ ಕೈಗೆತ್ತಿಕೊಳ್ಳುವುದರ ಮೂಲಕ ಒಂದು ತಂಡದೊಂದಿಗೆ 2002 ರಲ್ಲಿ ಮಲೆನಾಡು ಅರಣ್ಯ ಪ್ರವೇಶ ಮಾಡಿ ನಕ್ಸಲ್ ಹೋರಾಟಕ್ಕೆ ಮುನ್ನುಡಿ ಬರೆದರು.

2003 ರ ನವೆಂಬರ್ ತಿಂಗಳಿನಲ್ಲಿ ಉಡುಪಿ ಜಿಲ್ಲೆಯ ಈದು ಗ್ರಾಮದ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಹಾಜಿಮಾ ಮತ್ತು ಪಾರ್ವತಿಯ ಸಾವು ಮತ್ತು ಇದಕ್ಕೆ ಪ್ರತಿಯಾಗಿ ಶೃಂಗೇರಿ ತಾಲ್ಲೂಕಿನ ನೆಮ್ಮೂರು ಬಳಿಯ ಅರಣ್ಯ ಇಲಾಖೆಯ ಅತಿಥಿ ಗೃಹದ ಧ್ವಂಸ ಹಾಗೂ 2004 ರಲ್ಲಿ ಶೃಂಗೇರಿ ತಾಲ್ಲೂಕು ಕಿಗ್ಗಾ ಗ್ರಾಮದ ಮಗ್ಗೆಬಯಲು ಚಂದ್ರಶೇಖರ ಇವರ ರಕ್ಷಣೆಗೆ ನೇಮಿಸಿದ್ದ ಪೊಲೀಸ್ ಪೇದೆ ಮುದ್ದಪ್ಪ ಅಪಹರಣ, ನಂತರ ಬಂದೂಕ ಕಸಿದುಕೊಂಡು ಬಿಡುಗಡೆ, ಈ ಎಲ್ಲಾ ಘಟನೆಗಳ ಹಿಂದೆ ಸಾಕೇತ್ ರಾಜನ್ ಇದ್ದರು. ಅವರ ಒಂದು ಮರೆಯಲಾರದ ಶ್ರೇಷ್ಟ ಗುಣವೊಂದನ್ನು ನಾವು ಮೆಚ್ಚಲೇಬೇಕು. ಕರ್ನಾಟಕದಲ್ಲಿ ಮೂರು ವರ್ಷಗಳ ಕಾಲ ನಕ್ಸಲ್ ಚಟುವಟಿಕೆ ನಡೆಸಿದರೂ ಸಹ ಅದರ ಒಂದು ಸಣ್ಣ ಸುಳಿವನ್ನು ಸಾಕೇತ್ ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ. ಏಕೆಂದರೆ, ಅವರ ಈ ನಿರ್ಧಾರ ಹಿಂದೆ ತಮ್ಮ ಹಳೆಯ ಮಿತ್ರರ ಬದುಕನ್ನು ಸಂರಕ್ಷಿಸುವ ಆಶಯವಿತ್ತು. ಸಾಕೇತ್ ಇತ್ತ ಅರಣ್ಯದಲ್ಲಿ ಏಕಾಂಗಿಯಾಗಿ ಬಂದೂಕು ಹಿಡಿದಿದ್ದರೇ ಅತ್ತ ಸಮಾಜದಲ್ಲಿ ಅವರ ಗೆಳೆಯರೆಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಉಪನ್ಯಾಸಕರಾಗಿ, ಕೆಲವರು ಪತ್ರಕರ್ತರಾಗಿ ಬದುಕು ಕಟ್ಟಿಕೊಂಡಿದ್ದರು. ಕರ್ನಾಟಕದ ನಕ್ಸಲ್ ಹೋರಾಟದ ಹಿಂದೆ ಸಾಕೇತ್ ರಾಜನ್ ಇದ್ದಾರೆ ಎಂಬ ಸಣ್ಣ ಸುಳಿಹು ಪೊಲೀಸರಿಗೆ ಸಿಕ್ಕಿದ್ದರೆ ಬಹುತೇಕ ಅವರ ಹಳೆಯ ಮಿತ್ರರೆಲ್ಲಾ ಮಾಹಿತಿ ನೆಪದಿಂದ ಪೊಲೀಸರಿಂದ ಕಿರುಕುಳ ಅನುಭವಿಸಬೇಕಾಗಿತ್ತು. ಈ ಕಾರಣಕ್ಕಾಗಿ ತಮ್ಮ ಚಟುವಟಿಕೆಯನ್ನು ಬಚ್ಚಿಟ್ಟಿದ್ದರು.

ಪೊಲೀಸ್ ಅಪಹರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಉಜ್ಜನಿಗೌಡ ಬಂಧನವಾದ ಕೆಲವೇ ದಿನಗಳಲ್ಲಿ ಅಂದರೇ 2005 ರ ಫೆಬ್ರವರಿ 5 ರಂದು ಚಿಕ್ಕಮಗಳೂರು ಡಿವೈಎಸ್ಪಿ ಶಿವಕುಮಾರ್ ನೇತೃತ್ವದ 80 ಜನರ ಪೊಲೀಸರ ತಂಡ ನಾಲ್ಕು ತಂಡಗಳಾಗಿ ಸಾಕೇತ್ ರಾಜನ್ ಇದ್ದ ಅರಣ್ಯ ಪ್ರದೇಶವನ್ನು ಸುತ್ತುವರಿಯಿತು. ಮೆಣಸಿನ ಹಾಡ್ಯ ಗ್ರಾಮದ ಶೇಷಯ್ಯ ಎಂಬಾತ ಸಾಕೇತ್ ರಾಜನ್ ಮತ್ತು ಸಂಗಡಿಗರು ಇದ್ದ ಸ್ಥಳದ ಬಗ್ಗೆ ಪೊಲೀಸರಿಗೆ ನಿಖರವಾದ ಮಾಹಿತಿ ರವಾನಿಸಿದ್ದ. ಬೆಳಗಿನ ಜಾವ ಒಂದು ಗಂಟೆ ಸಮಯದಲ್ಲಿ ಚಿಕ್ಕಮಗಳೂರಿನ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ saketh_rajan_head_blown_offಸಾಕೇತ್ ರಾಜನ್ ಮತ್ತು ಅವರ ಅಂಗ ರಕ್ಷಕನಾಗಿದ್ದ ಶಿವಲಿಂಗು ಪೊಲೀಸರ ಗುಂಡಿಗೆ ಬಲಿಯಾಗಿದ್ದರು.

ಈ ದುರ್ಘಟನೆ ನಡೆಯುವ ಒಂದು ತಿಂಗಳ ಮುಂಚೆಯಷ್ಟೆ ಸಾಕೇತ್ ರಾಜನ್ ಪ್ರಥಮ ಬಾರಿಗೆ ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕರ್ನಾಟಕದ ಕೆಲವು ಆಯ್ದ ಪತ್ರಕರ್ತರನ್ನು ಬೇಟಿಯಾಗಿದ್ದರು. ಇವರಲ್ಲಿ ಅವರ ಮಾಜಿ ಸಹಪಾಠಿ ಗೌರಿ ಲಂಕೇಶ್ ಕೂಡ ಒಬ್ಬರು. ಸಾಕೇತ್ ರಾಜನ್ ಹತ್ಯೆಯಿಂದ ಕೆರಳಿದ ಆಂಧ್ರದ ಅನಂತಪುರ ಜಿಲ್ಲೆಯ ಪೀಪಲ್ಸ್ ವಾರ್ ಗ್ರೂಪ್ ಕಾರ್ಯಕರ್ತರು 2005 ರ ಮಾರ್ಚ್ ತಿಂಗಳಿನಲ್ಲಿ ಮಧುಗಿರಿ ಜಿಲ್ಲೆ ಪಾವಗಡ ತಾಲ್ಲೂಕಿನ ವೆಂಕಮನಹಳ್ಳಿಯ ಶಾಲೆಯಲ್ಲಿ ಬೀಡು ಬಿಟ್ಟಿದ್ದ ಕರ್ನಾಟಕ ಪೊಲೀಸರ ಮೇಲೆ ದಾಳಿ ನಡೆಸಿ ಏಳು ಪೊಲೀಸರನ್ನು ಹತ್ಯೆಗೈಯ್ದುರು. ಸಾಕೇತ್ ಸಾವಿನ ಸಂದರ್ಭದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ ನಕ್ಸಲರು ಮೇ ತಿಂಗಳಿನಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದ ಮೆಣಸಿನಹಾಡ್ಯದ ಶೇಷಯ್ಯನನ್ನು ಮನೆಯಿಂದ ಹೊರಗೆ ಎಳೆತಂದು ಗುಂಡಿಕ್ಕಿ ಕೊಲ್ಲುವುದರ ಮೂಲಕ ಸಾಕೇತ್ ಸಾವಿಗೆ ಸೇಡು ತೀರಿಸಿಕೊಂಡರು.

ಸಾಕೇತ್ ಪೊಲೀಸರ ಗುಂಡಿಗೆ ಬಲಿಯಾದ ಸಂದರ್ಭದಲ್ಲಿ, rajalakshmi saketh rajan motherಮೈಸೂರು ನಗರದಲ್ಲಿ ಯಾವೊಬ್ಬ ಮಾಧ್ಯಮ ಪ್ರತಿನಿಧಿಗೂ ಸಂದರ್ಶನ ನೀಡದೇ ಮನೆಯ ಬಾಗಿಲು ಹಾಕಿಕೊಂಡಿದ್ದ ಅವರ ತಾಯಿ ಪೊಲೀಸರ ಅಧಿಕಾರಿಗಳ ಜೊತೆ ಮಾತನಾಡುವಾಗ ತಮ್ಮ ಮಗನ ಬಗ್ಗೆ ಹೆಮ್ಮೆಯಿಂದ ಸಮರ್ಥಿಸಿಕೊಂಡರು. ಬಾಲ್ಯದಿಂದಲೂ ಬಡವರ ಕುರಿತು ಅವನಿಗಿದ್ದ ಕಾಳಜಿಯನ್ನು ಪೊಲೀಸರಿಗೆ ವಿವರಿಸಿದರು. ಆದರೆ, ಅವನ ಶವವನ್ನು ನೋಡುವ ಧೈರ್ಯ ತನಗಿಲ್ಲವೆಂದು ಹೇಳಿ ಶವ ಪಡೆಯಲು ನಿರಾಕರಿಸಿದರು.

ಹಿಂಸೆಯ ಹಾದಿಯನ್ನು ತುಳಿಯದಿದ್ದರೆ, ಈ ನಾಡಿನ ಒಬ್ಬ ಧೀಮಂತ ಪತ್ರಕರ್ತ ಇಲ್ಲವೇ ಲೇಖಕನಾಗಬಹುದಾಗಿದ್ದ ಎಲ್ಲಾ ಗುಣಗಳನ್ನು ಹೊಂದಿದ್ದ ಸಾಕೇತ್ ರಾಜನ್ ಬಡವರ ಮೇಲಿನ ಕಾಳಜಿಯಿಂದಾಗಿ ತನ್ನ ಶ್ರೀಮಂತಿಕೆಯ ಬದುಕು ತೊರೆದು ಅರಣ್ಯದಲ್ಲಿ ಅನಾಥ ಶವವಾಗಿ ಮಲಗಿದ್ದು, ಕರ್ನಾಟಕ ಹೋರಾಟದ ಇತಿಹಾಸದ ಪುಟಗಳಲ್ಲಿ ಒಂದು ದುರಂತ ಅಧ್ಯಾಯ.

(ಮುಂದುವರಿಯುವುದು)

3 thoughts on “ಪ್ರಜಾ ಸಮರ – 16 (ನಕ್ಸಲ್ ಕಥನ)

 1. Darel Dsouza,Mangalore

  This series is coming out nicely.Great hard work of Jagadish sir have to be appreciated.Saketh Rajan..Many a times i felt he should have fought Non violently.Might be very early he had realised it is not going to impact our bureaucrats.I wish our political masters researched a little why educated youths or scholars support these movements..

  Reply
 2. manaswi

  Saketh great human being. His two books about coffee `bitter coffeee’ making history speaking all and name of exploitation. His way not acceptable. but his legendary life contributes state, their own way. our saaki cannot die.

  Reply
 3. anand prasad

  ಕರ್ನಾಟಕದಲ್ಲಿ ನಕ್ಸಲ್ ಚಳುವಳಿ ಬೆಳೆಯುವ ವಾತಾವರಣ ಇಲ್ಲ. ಇದಕ್ಕೆ ಪ್ರಧಾನ ಕಾರಣ ಇಲ್ಲಿ ದೇವರಾಜ ಅರಸು ನೇತೃತ್ವದಲ್ಲಿ ನಡೆದ ಭೂಸುಧಾರಣೆ. ಹೀಗಾಗಿ ನಕ್ಸಲ್ ವಿಧಾನದ ಹೋರಾಟಕ್ಕಿಂತ ಶಾಂತಿಯುತ ಹೋರಾಟಕ್ಕೆ ಸಾಕೇತ್ ರಾಜನ್ ನೇತೃತ್ವ ನೀಡಿದ್ದರೆ ಹೆಚ್ಚಿನದನ್ನು ಸಾಧಿಸಲು ಸಾಧ್ಯವಿತ್ತು. ಬಂದೂಕು ಎತ್ತಿಕೊಂಡು ಹೋರಾಟಕ್ಕೆ ಇಳಿದ ಕೂಡಲೇ ಪೊಲೀಸರಿಗೆ ಹಾಗೂ ಹಾಗೂ ಅವರ ಮಾಲಿಕರಾದ(?) ಪಟ್ಟಭದ್ರ ಅಧಿಕಾರಸ್ಥ ರಾಜಕಾರಣಿಗಳಿಗೆ ಹೋರಾಟಗಾರರನ್ನು ಎನ್ಕೌಂಟರ್ ಎಂಬ ನಕಲಿ ಕಾರ್ಯಾಚರಣೆ ಮೂಲಕ ಕೊಂದು ತಮಗೆ ಬರಬಹುದಾದ ಅಡ್ಡಿ ಆತಂಕಗಳನ್ನು ನಿವಾರಿಸಿಕೊಳ್ಳಲು ದಾರಿ ಸುಗಮವಾಗುತ್ತದೆ. ಎಸ್. ಆರ್. ಹಿರೇಮಠ, ಅಣ್ಣಾ ಹಜಾರೆ, ಅರವಿಂದ್ ಕೇಜರಿವಾಲರಂತೆ ಹೋರಾಟ ಮಾಡಿದರೆ ಪಟ್ಟಭದ್ರರಿಗೆ ನಕ್ಸಲರನ್ನು ಎನ್ಕೌಂಟರ್ ಹೆಸರಿನಲ್ಲಿ ಕೊಂದಂತೆ ಕೊಂದುಹಾಕಲಾಗುವುದಿಲ ಏಕೆಂದರೆ ಅದರಿಂದ ಜನಾಕ್ರೋಶವನ್ನು ಎದುರಿಸಬೇಕಾಗುತ್ತದೆ. ನಕ್ಸಲರನ್ನು ನಕಲಿ ಎನ್ಕೌಂಟರ್ ಮೂಲಕ ಕೊಂದರೂ ಅಂಥ ಜನಾಕ್ರೋಶವೇನೂ ಹುಟ್ಟಿಕೊಳ್ಳುವುದಿಲ್ಲ ಏಕೆಂದರೆ ಅವರು ಹಿಂಸೆಯ ಹಾದಿ ಹಿಡಿದ ಕಾರಣ ರಾಷ್ಟ್ರಹಿತಕ್ಕೆ ಮಾರಕ ಎಂಬ ಅಭಿಪ್ರಾಯ ಸಾಮಾನ್ಯವಾಗಿ ಜನರಲ್ಲಿರುತ್ತದೆ. ವಾಸ್ತವವಾಗಿ ಭಗತ್ ಸಿಂಗ್ ಅವರಂಥ ಮುನ್ನುಗ್ಗಿ ಹೋಗುವ ನಾಯಕತ್ವ ಗುಣ ಉಳ್ಳವರು ಬಲಿದಾನ ಮಾಡಿ ಸಾಧಿಸುವುದಕ್ಕಿಂತ ನೂರು ನೂರು ಪಟ್ಟು ಹೆಚ್ಚಿನದನ್ನು ಜೀವಂತವಾಗಿದ್ದು ಹೋರಾಡುತ್ತಲೇ ಸಾಧಿಸಲು ಸಾಧ್ಯ. ರಾಷ್ಟ್ರಕ್ಕೆ ಸ್ವಾತಂತ್ರ್ಯ ಸಿಕ್ಕುವ ವೇಳೆ ಭಗತ್ ಸಿಂಗ್ ಅವರಂಥ ಮುನ್ನುಗ್ಗಿ ಹೋಗುವ ಪ್ರಗತಿಶೀಲ ನಾಯಕ ಇದ್ದಿದ್ದರೆ ಭಾರತದ ಬೆಳವಣಿಗೆಯ ಗತಿಯೇ ಪ್ರಗತಿಶೀಲವಾಗಿ ಬದಲಾಗುತ್ತಿತ್ತು. ಅಂಥ ಮುನ್ನುಗ್ಗಿ ಹೋಗುವ ಸಾಮರ್ಥ್ಯ ಭಗತ್ ಸಿಂಗ್ ಅವರಲ್ಲಿತ್ತು. ಹೀಗಾಗಿ ಅಂಥ ಸಾಮರ್ಥ್ಯ ಹಾಗೂ ತ್ಯಾಗ ಗುಣ ಉಳ್ಳವರು ಬಲಿದಾನ ಮಾಡಿದರೆ ರಾಷ್ಟ್ರಕ್ಕೆ ದೊಡ್ಡ ನಷ್ಟವೇ ಹೊರತು ಹೆಚ್ಚಿನ ಪ್ರಯೋಜನ ಆಗುವುದಿಲ್ಲ. ಸಾಕೇತ್ ರಾಜನ್ ಅವರ ವಿಷಯದಲ್ಲೂ ಇದು ಸತ್ಯ. ನಕ್ಸಲರಲ್ಲಿ ತ್ಯಾಗ ಹಾಗೂ ಬಲಿದಾನದ ಗುಣ ಇದೆಯಾದರೂ ಈವರೆಗೆ ಹಲವು ದಶಕಗಳ ಹೋರಾಟದ ನಂತರವೂ ಹೆಚ್ಚಿನದನ್ನು ಸಾಧಿಸಲು ಸಾಧ್ಯವಾಗಿಲ್ಲ ಏಕೆಂದರೆ ಹಿಂಸೆಯ ಹಾದಿಗೆ ಭಾರತದಂಥ ರಾಷ್ಟ್ರದಲ್ಲಿ ಬಹುಜನರ ಬೆಂಬಲ ಸಿಗುವುದಿಲ್ಲ. ರಾಷ್ಟ್ರಕ್ಕಾಗಿ ತನ್ನ ಕೌಟುಂಬಿಕ ಜೀವನವನ್ನು ತ್ಯಾಗ ಮಾಡಿದ ಗಾಂಧೀಜಿಯವರಿಗೆ ಜನತೆಯ ಅಪಾರ ಬೆಂಬಲ ಸಿಕ್ಕಿತ್ತು. ಇಂದು ಆ ರೀತಿಯಲ್ಲಿ ತ್ಯಾಗ ಮಾಡಿ ಜನರನ್ನು ಸಂಘಟಿಸುವ ಮುನ್ನುಗ್ಗಿ ಹೋಗುವ ನಾಯಕತ್ವ ಭಾರತದಲ್ಲಿ ಕಂಡುಬರುತ್ತಿಲ್ಲ.

  Reply

Leave a Reply

Your email address will not be published.