“ವರ್ತಮಾನ”ಕ್ಕೆ ನಿಮ್ಮ ಬೆಂಬಲದ ನಿರೀಕ್ಷೆಯಲ್ಲಿ…

ಸ್ನೇಹಿತರೇ,

ಇತ್ತೀಚೆಗೆ ನಮ್ಮ ವರ್ತಮಾನ.ಕಾಮ್ ನಿಯಮಿತವಾಗಿ “ಅನಿಯಮಿತ”ವಾಗುತ್ತಿರುವುದನ್ನು ನೀವು ಗಮನಿಸಿಯೇ ಇರುತ್ತೀರ. ದಿನಕ್ಕೆ ಕನಿಷ್ಟ ಒಂದಾದರೂ ಲೇಖನ ಇರಬೇಕು ಮತ್ತು ಹಾಗಿದ್ದಲ್ಲಿ ಮಾತ್ರ ಅದು ತನ್ನ ಓದುಗವಲಯವನ್ನು ಹಿಡಿದಿಟ್ಟುಕೊಂಡಿರುತ್ತದೆ ಮತ್ತು ವಿಸ್ತರಿಸಿಕೊಳ್ಳುತ್ತದೆ ಎನ್ನುವ ನಂಬಿಕೆ ನನ್ನದು. ಆದರೆ, ಇತ್ತೀಚಿನ ದಿನಗಳಲ್ಲಿ ಅದು ಆಗುತ್ತಿಲ್ಲ. ಕಾರಣಗಳು ಅನಗತ್ಯ.

ಕರ್ನಾಟಕದ ರಾಜಕಾರಣ ಮತ್ತೊಮ್ಮೆ ಪಾತಾಳದಿಂದ ಪಾತಾಳಕ್ಕೆ ಜಾರುತ್ತಿದೆ. ಇದನ್ನೊಂದು ಅಸಂಗತ ನಾಟಕದಂತೆ ನೋಡುತ್ತ ಖುಷಿ ಪಡುವವರಿಗೆ ಬರಲಿರುವ ದಿನಗಳು ಇನ್ನೂ ಮಜಾ ಕೊಡಲಿವೆ. ನಮ್ಮ ಬಹುಪಾಲು ಸಮಸ್ಯೆಗಳಿಗೆ ಸಹನೀಯ ಪರಿಹಾರ ನೀಡಬಲ್ಲ ಪ್ರಜಾಪ್ರಭುತ್ವದ ರಾಜಕಾರಣ ಒಂದು ಒಳ್ಳೆಯ ಸಸ್ಪೆನ್ಸ್-ಥ್ರಿಲ್ಲರ್ ಸಿನೆಮಾದ ಚಿತ್ರಕತೆಯಂತೆ ರೋಚಕವಾಗೇನೋ ಸಾಗುತ್ತಿದೆ.

ಆದರೆ, ಜನತೆಯ ಜೀವನ ಮತ್ತು ಸಾಮಾಜಿಕ ಮೌಲ್ಯಗಳ ಸ್ಥಿತಿಗತಿಗಳೇನು? ರೋಚಕತೆಯ ಅಡ್ಡ ಪರಿಣಾಮಗಳೇನು? ಈಗಾಗಲೆ ರಾಗಿ ಕೆಜಿಗೆ ರೂ.30 ದಾಟಿದೆ. ಅಕ್ಕಿಯೂ ಗಗನಮುಖಿಯಾಗಿದೆ, ಮಧ್ಯಮವರ್ಗವೇನೋ ಬಚಾವಾಗಬಹುದು. ಆದರೆ, ಪಡಿತರ ವ್ಯವಸ್ಥೆಯಿಂದ ಹೊರಗಿರುವ ಬಡವರಿಗೆ ಮತ್ತು ಕೆಳಮಧ್ಯಮವರ್ಗದ ಬಡವರಿಗೆ ಈ ಬೇಸಿಗೆಯಲ್ಲಿ ನೀರೂ ಸಿಗದು. ಚಳಿಗಾಲದ ಮಧ್ಯಾಹ್ನಗಳು ಈಗಾಗಲೆ ಬೇಸಿಗೆಯ ಭಯ ಹುಟ್ಟಿಸುತ್ತಿವೆ. ಅಕ್ಕಿಬೇಳೆ, ನೀರು, ವಿದ್ಯುತ್; ಇವು ಮುಂದಿನ ದಿನಗಳಲ್ಲಿ ಬೇರೆಲ್ಲ ವಿಚಾರಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ಪಡೆಯಲಿವೆ ಮತ್ತು ಬಹುಶಃ ಅದೇ ನಮ್ಮ ಮುಂದಿನ ದಿನಗಳ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳನ್ನು ಪ್ರಭಾವಿಸಲಿವೆ.

ಆದರೆ, ಸದ್ಯದ ಮಟ್ಟಿಗೆ ಇವು ಅಂತಹ ಗಂಭೀರ ವಿಷಯಗಳಲ್ಲ. ಮುಂದಿನ ಮೂರು-ನಾಲ್ಕು ತಿಂಗಳು ಕರ್ನಾಟಕದ ಜನರನ್ನು ರಾಜಕೀಯ ಮತ್ತು ಚುನಾವಣೆಗಳು ಆವರಿಸಿಕೊಳ್ಳಲಿವೆ. ನಾವು ಇಂದು ತೆಗೆದುಕೊಳ್ಳುವ ನಿರ್ಧಾರಗಳು vartamaana-reqನಮ್ಮ ಮುಂದಿನ ದಿನಗಳನ್ನು ನಿರ್ಧರಿಸುತ್ತವೆ ಎಂಬ ಪರಿವೆ ಇಲ್ಲದೆ ಬಹುಪಾಲು ಜನ ತೀರ್ಮಾನಗಳನ್ನು ಕೈಗೊಳ್ಳಲಿದ್ದಾರೆ. ಯಾರೇನು ಮಾಡಬಹುದು?

ವೈಯಕ್ತಿಕವಾಗಿ ಹೇಳುವುದಾದರೆ, ಮುಂದಿನ ಮೂರ್ನಾಲ್ಕು ತಿಂಗಳು ನನ್ನೆಲ್ಲ ಸಮಯವನ್ನು ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಿಗೆ ಮೀಸಲಿಡಲಿದ್ದೇನೆ. ಅಪ್ರಿಯವಾದರೂ ಹೇಳಬೇಕಾದ, ನ್ಯಾಯವಾದ, ಪ್ರಸ್ತುತವಾದ ವಿಷಯಗಳನ್ನು ನನ್ನ ಕೈಲಾದ ಮಟ್ಟಿಗೆ ಹೇಳುವ ಪ್ರಯತ್ನ ಮಾಡುತ್ತೇನೆ. ಏನು ಮಾಡಿದರೆ ಅದು ಪರಿಣಾಮಕಾರಿಯಾಗಬಲ್ಲುದು ಎನ್ನಿಸುತ್ತದೆಯೋ ಅದನ್ನು ಮಾಡುತ್ತೇನೆ. ಫಲ-ನಿಷ್ಫಲಗಳ ಬಗ್ಗೆ ಯೋಚನೆಯಿಲ್ಲ. ಪ್ರಯತ್ನದ ಬಗ್ಗೆಯಷ್ಟೇ ನನ್ನ ಬದ್ಧತೆ.

ಈ ಹಿನ್ನೆಲೆಯಲ್ಲಿ ವರ್ತಮಾನ.ಕಾಮ್‌ಗೆ ಎಷ್ಟು ಕೆಲಸ ಮಾಡಬಲ್ಲೆನೋ ಗೊತ್ತಿಲ್ಲ. ಹಾಗಾಗಿ ನಮ್ಮ ಬಳಗದ ಎಲ್ಲಾ ಲೇಖಕರಲ್ಲಿ ಮತ್ತು ಬೆಂಬಲಿಗರಲ್ಲಿ ಈ ಮೂಲಕ ವಿನಂತಿ ಮಾಡುವುದೇನೆಂದರೆ, ದಯವಿಟ್ಟು ಹೆಚ್ಚುಹೆಚ್ಚು ಬರೆಯಿರಿ ಮತ್ತು ಈ ವೇದಿಕೆ ಇನ್ನಷ್ಟು ಸಶಕ್ತವಾಗಿಸಲು ನಿಮ್ಮ ಕೈಲಾದುದನ್ನು ಮಾಡಿ. ಬರಹ ನಿಲ್ಲಿಸಿರುವವರು ಮತ್ತೆ ಆರಂಭಿಸಿ, ಕಡಿಮೆ ಬರೆಯುತ್ತಿರುವವರು ಹೆಚ್ಚು ಮಾಡಿ, ಬರೆಯದೇ ಇದ್ದವರು ಬರೆಯಲು ಆರಂಭಿಸಿ. ಬರೆಯಲು ವಿಷಯಗಳಿಗೇನೂ ಕೊರತೆಯಿಲ್ಲ. ಮತ್ತು ವರ್ತಮಾನ.ಕಾಮ್‌ನ ಆಶಯ ಮತ್ತು ಕಾಳಜಿಗಳು, ಅದರಲ್ಲಿ ಎತ್ತಲ್ಪಡುವ ವಿಷಯಗಳು, ಅದಕ್ಕಿರುವ ಓದುಗವಲಯ, ಮತ್ತು ಅದರ ಹಿಗ್ಗುತ್ತಲೇ ಇರುವ ಪ್ರಸ್ತುತತೆ; ಇವೆಲ್ಲ ನಿಮಗೆ ಗೊತ್ತಿರುವಂತಹುದೇ.

ಮತ್ತು, ಚುನಾವಣೆ ಮುಗಿದ ನಂತರ ಕನಿಷ್ಟ ಕೆಲವು ತಿಂಗಳುಗಳನ್ನು ವರ್ತಮಾನ.ಕಾಮ್‌ಗೆ ಮೀಸಲಿಡುತ್ತೇನೆ. ಅದಕ್ಕೆ ಪೂರಕವಾಗಿ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ. ಮತ್ತು ಇತರೆ ಆಯಾಮಗಳತ್ತಲೂ ಆಲೋಚಿಸಬೇಕಿದೆ. ಈ ವರ್ಷ ವರ್ತಮಾನ.ಕಾಮ್‌ಗೂ ನಿರ್ಣಾಯಕ ವರ್ಷವಾಗಲಿದೆ. ಇಲ್ಲಿಯತನಕ ಕೈಹಿಡಿದವರು ಕೈಬಿಡಲಾರರು ಎನ್ನುವ ನಿರೀಕ್ಷೆಯಲ್ಲಿ…

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

4 thoughts on ““ವರ್ತಮಾನ”ಕ್ಕೆ ನಿಮ್ಮ ಬೆಂಬಲದ ನಿರೀಕ್ಷೆಯಲ್ಲಿ…

 1. ಮಹೇಶ

  ಬರಹಗಾರರು ಬರೆಯುವುದು ಎಷ್ಟು ಮುಖ್ಯವೋ , ಅಷ್ಟೇ ಮುಖ್ಯ , ಕಾಮೆಂಟುಗಳಿಗೆ, ಪ್ರಶ್ನೆಗಳಿಗೆ ಉತ್ತರಿಸುವದೂ ಎಂದು ನನ್ನ ಭಾವನೆ.

  Reply
 2. ಮಂಕವಿ

  ಆತ್ಮಿಯ ಸಂಪಾದಕರೆ
  ತಾವು ಬರೆಯಿರಿ ಎಂದಿದ್ದು ಸ್ವಾಗರ್ಹವಾದದ್ದು ಆದರೆ ಎಷ್ಟು ಜನರಿಗೆ ನೀವು ಬರೆಯಲು ಪ್ರಚೋಧನೆ ನೀಡಿದ್ದೀರಿ ಎನ್ನುವದು ಮುಖ್ಯವಾಗುತ್ತದೆ. ತಾವು ಬರಿ ಬೆಳಿದು ನಿಂತು ಮಾವಿನ ಮರಗಳಿಗೆ ನೀರೆರೆದು ಬೆಳಿಸದರೆ ಸಾಲದು ಹೊಸ ಯುವಕರಿಗೆ ಅವಕಾಶಕೊಡಿ ಹೊಸಬರಿಗೆ ಬೆಳಿಸಿ ಎಷ್ಟೊ ಜನರು ತಮ್ಮ ಬರಹ ಪ್ರಕಟವಾಗಲಿಲ್ಲಾ ಎಂದು ಒದ್ದಾಡುತ್ತಾರೆ. ಬೆಳೆದು ನಿಂತ ಮಾಧ್ಯಮದಲ್ಲಿ ಮುಂದುವರೆದ ಜನರು ಹಿಂದಿರುವ ಜನರರನ್ನು ಬೆಳಿಸಿದ್ದು ಬೆಳೆಯಲು ಅವಕಾಸ ಕೊಟ್ಟಿದ್ದೀರಿ ಎನ್ನವೆದು ತುಂಬಾ ಯೋಚಿಸಲೇಬೇಕಾದ ಅಗತ್ಯವಿದೆ.

  Reply
 3. chinnu

  ಕಳೆದ ೪-೫ ದಿನಗಳಿಂದ ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಯ ಆಯ್ಕೆಗೆ ಸಂಬಂಧಿಸಿದಂತೆ ನಮ್ಮ ಸ್ನೇಹಿತರೊಬ್ಬರ ತಳಮಳವನ್ನು ದಿನಾ ಗಮನಿಸುತ್ತಿದ್ದೇನೆ. ಸಂಶೋಧನಾ ಕೇಂದ್ರವೊಂದರಲ್ಲಿ ಉನ್ನತ ಹುದ್ದೆಯೊಂದರಲ್ಲಿರುವ ಅವರು ಈ ಹುದ್ದೆಗೆ ಸೂಚಿಸಲ್ಪಟ್ಟ ಪಟ್ಟಿಯಲ್ಲಿ ಇದ್ದಾರೆ ಎಂದು ಗೊತ್ತಾದ ದಿನದಿಂದ ಅವರು ಚಟಪಡಿಸುತ್ತಿದ್ದಾರೆ. ನನಗೆ ಗೊತ್ತಿರುವಂತೆ ಆ ಮನುಷ್ಯ ಅಕಾಡೆಮಿಕ್ ಆಗಿ ಒಬ್ಬ ಪ್ರೋಪೆಸರ್ ಮಾಡಬೇಕಾಗಿರುವ ಕಾರ್‍ಯಗಳನ್ನು ದಕ್ಷತೆಯಿಂದ ಮಾಡಿರುವುದಲ್ಲದೆ, ಈ ಸ್ಥಾನಕ್ಕೆ ಸೂಕ್ತ ವ್ಯಕ್ತಿ. ಆದರೆ ಉಪಕುಲಪತಿ ಆಯ್ಕೆಯಲ್ಲಿ ನಡೆಯುವ ಜಾತಿ ಲಾಬಿ ಅವರು ಇದುವರೆಗೂ ಬಳಸಿಕೊಳ್ಳದ ಜಾತಿ ಲಾಬಿಯನ್ನು ಬಳಸಿಕೊಳ್ಳುವಂತೆ ಮಾಡಿದೆ. ಎಲ್ಲಾ ಅರ್ಹತೆ ಇದ್ದು ಜಾತಿ ಲಾಬಿಯಿಂದ ಕಂಗೆಟ್ಟಿರುವ ಆತ ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗೆ ಆಗುತ್ತದಲ್ಲಾ ಎಂದು ಮಾನಸಿಕವಾಗಿ ದುರ್ಬಲರಾಗಿ ಜಾತಿ ಸ್ವಾಮೀಜಿಗಳನ್ನು ಸಂಪರ್ಕಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಜಾತಿಲಾಬಿ ಮಾಡುತ್ತಿದ್ದಾರೆ.
  ಇನ್ನೊಬ್ಬರು ಪ್ರತಿಷ್ಠಿತ ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲರು. ಕಂಪ್ಯೂಟರ್ ಸೈನ್ಸ್‌ನಲ್ಲಿ ಅತೀ ಚಾಣಾಕ್ಷ. ಕೋರ್ ಬ್ಯಾಕಿಂಗ್ ತಂತ್ರಜ್ಷಾನ ಇವರ ಕೊಡುಗೆ. ಉಪಕುಲಪತಿ ಸ್ಥಾನಕ್ಕೆ ಎಲ್ಲಾ ಅರ್ಹತೆ ಇರುವ ವ್ಯಕ್ತಿ. ಆದರೆ ಆ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಇವರ ಪ್ರಾಂಶುಪಾಲ ಸ್ಥಾನ ಕೂಡ ಹಂಗಾಮಿ. ಅತೀ ಸರಳ ವ್ಯಕ್ತಿತ್ವದ, ಎಲ್ಲಾ ಅರ್ಹತೆ ಇರುವ ಇವರನ್ನು ವಿಶ್ವವಿದ್ಯಾಲಯ ಗುರಿತಿಸಿಯೇ ಇಲ್ಲ. ಇವರ ಪ್ರಕಾರ ಇವರಿಗೆ ವಿದೇಶದ ಯಾವುದೇ ವಿವಿಯಲ್ಲಿ ಬೇಕಾದರೂ ಬೇಕಾದ ಸ್ಥಾನಮಾನ ಸಿಗಬಹುದು ಆದರೆ ಇಲ್ಲಿ ಮಾತ್ರ ಅಲ್ಲ.
  ಇಷ್ಟರಲ್ಲೇ ಆಗಬೇಕಿದ್ದ ಉಪಕುಲಪತಿ ಆಯ್ಕೆ ಇನ್ನೂ ಆಗಿಲ್ಲ. ಸಂಬಂಧ ಪಟ್ಟವರ ಪ್ರಕಾರ ಅಂತಿಮ ಹಂತದಲ್ಲಿರುವ ವ್ಯಕ್ತಿಗೆ ಕಿಕ್‌ಬ್ಯಾಕ್ ಹೋಗುವವರೆಗೂ ಆಯ್ಕೆ ಸಾಧ್ಯ ಇಲ್ಲ.
  ಜಾತಿಯೇ ಎಲ್ಲಾವುದರಲ್ಲೂ ನಿರ್ಧಾರಕ ಅಂಶವಾಗಿರುವಾಗ ಯಾವ ಜಾತಿ ರಹಿತ ಸಮಾಜದ ನಿರ್ಮಾಣ ಸಾಧ್ಯ? ಅರ್ಹತೆ ಗೆ ಸ್ಥಾನವೇ ಇಲ್ಲ. ಆದರ್ಶವನ್ನು ಪಾಲನೆ ಮಾಡುವವರು ಈ ಜಾತಿ ಹಣದ ಗೊಡವೆಯೇ ಬೇಡ ಎಂದು ತಮ್ಮಷ್ಟಕ್ಕೆ ತಾವೇ ಸುಮ್ಮನಾಗಿದ್ದಾರೆ. ಹಣ ಜಾತಿ ಕೇವಲ ರಾಜಕೀಯ ವನ್ನು ಮಾತ್ರ ಬಿಗಿಯಾಗಿ ಹಿಡಿದಿಲ್ಲ. ಅದರ ಹಿಡಿತ ನಿಧಾನವಾಗಿ ಎಲ್ಲಾ ಕ್ಷೇತ್ರಗಳನ್ನು ಆವರಿಸುತ್ತಿದೆ. ಈ ಎಲ್ಲಾ ಬೆಳವಣಿಗೆಗಳು ಪರೋಕ್ಷವಾಗಿ ಐಟಿ ದೊರೆಗಳಿಗೆ ಲಾಭವಾಗಿ ಪರಿಣಮಿಸಿದೆ. ನಾವು ಅರ್ಹತೆಯ ಆಧಾರದಲ್ಲಿ ಉದ್ಯೋಗ ನೀಡುತ್ತೇವೆ. ಜಾತಿ ಆಧಾರದಲ್ಲಿ ಅಲ್ಲ ಎಂದು ಸಾರುತ್ತಾ ಎಲ್ಲಾ ಯುವಕರ ಮನಸ್ಸನ್ನು ಮರಳು ಮಾಡುತ್ತಿದೆ.

  Reply

Leave a Reply

Your email address will not be published.