ಬದಲಾಗುತ್ತಿರುವ ಭ್ರಷ್ಟಾಚಾರದ ವಾಖ್ಯಾನಗಳು


– ಡಾ.ಎನ್.ಜಗದೀಶ್ ಕೊಪ್ಪ


 

ಜಾಗತೀಕರಣದ ವ್ಯವಸ್ಥೆಯನ್ನು ಇನ್ನಿಲ್ಲದಂತೆ ಹಾಡಿ ಹೊಗಳಿ ಅಟ್ಟಕ್ಕೇರಿಸಿದವರ ಮುಖವಾಡಗಳು ಇತ್ತೀಚೆಗೆ ಒಂದೊಂದಾಗಿ ಕಳಚಿ ಬೀಳುತ್ತಿವೆ. ಭಾರತದಲ್ಲಿ ಅನಾವರಣಗೊಳ್ಳತ್ತಿರುವ ಭ್ರಷ್ಟಾಚಾರದ ಪ್ರಕರಣಗಳು ನಾವು ಈವರೆಗೆ ಕಾಣದೆ ಉಳಿದಿದ್ದ ಜಾಗತೀಕರಣದ ಮತ್ತೊಂದು ಕರಾಳ ಮುಖವನ್ನು ನಮ್ಮೆದುರು ಪ್ರದರ್ಶನಕ್ಕಿಟ್ಟಿವೆ. ಇವುಗಳ ಜೊತೆಯಲ್ಲಿಯೆ ಭ್ರಷ್ಟಾಚಾರ ಕುರಿತಂತೆ ನಮ್ಮ ವಾಖ್ಯಾನಗಳು ಕೂಡ ಬದಲಾಗುತ್ತಿವೆ. ಈ ವಾಖ್ಯಾನ್ಯಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಬೇಕಾದ ಸಾಂಸ್ಕೃತಿಕ ಜಗತ್ತು ಗರಬಡಿದಂತೆ ನಿಸ್ತೇಜನಗೊಂಡಿದೆ. ಇದರ ಹಲವು ವಾರಸುದಾರರು, ಭ್ರಷ್ಟರಾಜಕಾರಣಿಗಳ ಮತ್ತು ಅಧಿಕಾರಿಗಳ ಆಸ್ಥಾನದಲ್ಲಿ ವಿದ್ವಾಂಸರಾಗಿ ಪ್ರತಿಷ್ಟಾಪನೆಗೊಂಡು, ವಿದೂಷಕರಾಗಿ ನಾಡಿನ ಜನಕ್ಕೆ ಮನರಂಜನೆ ಒದಗಿಸುತ್ತಿದ್ದಾರೆ.

ಇತ್ತೀಚೆಗೆ ಬೆಳಕಿಗೆ ಬಂದ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಭಾರತದ ವಾಯುಪಡೆಯ helicopterಮಾಜಿ ಮುಖ್ಯಸ್ಥನೊಬ್ಬನ ಹೆಸರು ನೇರವಾಗಿ ಪ್ರಸ್ತಾಪವಾಗಿದೆ. ಇಟಲಿ ಮೂಲದ ವೆಸ್ಟ್ ಲ್ಯಾಂಡ್ ಕಂಪನಿಯ ಈ ವ್ಯವಹಾರ ನಿಜಕ್ಕೂ ಬೆಚ್ಚಿ ಬೀಳಿಸುವಂತಹದ್ದು. ಈಗಾಗಲೆ ತನಿಖೆಯಾಗಿ ಮಣ್ಣು ಸೇರಿದ ಬೋಫೋರ್ಸ್ ಪಿರಂಗಿ ಹಗರಣದಲ್ಲಿ ಕೂಡ ಇದೇ ಇಟಲಿ ಮೂಲದ ಕ್ವಟ್ರಾಚಿ ಎಂಬಾತ ಸೂತ್ರಧಾರನಾಗಿ ಕಾರ್ಯನಿರ್ವಹಿಸಿದ್ದನ್ನು ಮರೆಯಲಾಗದು.

ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ನೀಡಲಾದ ಲಂಚವನ್ನು ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ಬರ್ಲುಸ್ಕೋನಿ “ಇದೊಂದು ಉದ್ಯಮದ ಭಾಗ,” ಎಂದು ಬಣ್ಣಿಸುವುದರ ಮೂಲಕ ಜಾಗತೀಕರಣದ ವಾಹಕಗಳಾದ ಬಹುರಾಷ್ಟ್ರೀಯ ಕಂಪನಿಗಳ ಕರಾಳ ಮುಖವನ್ನು ಅನಾವರಣಗೊಳಿಸಿ, ಭ್ರಷ್ಟಾಚಾರಕ್ಕೆ ಹೊಸವಾಖ್ಯಾನ ನೀಡಿದ್ದಾರೆ.
ಚಿಲ್ಲರೆ ಮಾರುಕಟ್ಟೆಯ ದೈತ್ಯ ಕಂಪನಿಯಾದ ವಾಲ್‌ಮಾರ್ಟ್ ಈ ಭ್ರಷ್ಟಾಚಾರವನ್ನು “ಲಾಬಿ” ಎಂದು ಹೆಸರಿಸಿದೆ. ಅಮೇರಿಕಾ ಮೂಲದ ಈ ಬಹುರಾಷ್ಟ್ರೀಯ ಕಂಪನಿ ಅಲ್ಲಿನ ಸಂಸತ್ತಿಗೆ ಸಲ್ಲಿಸಿರುವ ವಿವರಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಒಳಗೊಂಡಂತೆ ಹಲವು ರಾಷ್ಟ್ರಗಳಲ್ಲಿ ಲಂಚಕ್ಕಾಗಿ 25 ದಶಲಕ್ಷ ಡಾಲರ್ ಹಣ ವಿನಿಯೋಗಿಸಿರುವುದಾಗಿ ಹೇಳಿಕೊಂಡಿದೆ.Wal-Mart ಭಾರತದಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಮೋಜು ಮಸ್ತಿಗಾಗಿ ವರ್ಷವೊಂದಕ್ಕೆ 11,500 ಡಾಲರ್ ಖರ್ಚುಮಾಡಲಾಗಿದೆ ಎಂದು ಕಂಪನಿ ತನ್ನ ವಾರ್ಷಿಕ ವರದಿಯಲ್ಲಿ ಬಹಿರಂಗವಾಗಿ ಒಪ್ಪಿಕೊಂಡಿದೆ.

ಇಪ್ಪತ್ತೊಂದನೇ ಶತಮಾನದ ಮಹಾನ್ ಪ್ರವಾದಿಗಳಂತೆ ಮಾತನಾಡುತ್ತಿರುವ ರಾಜಕಾರಣಿಗಳು ಮತ್ತು ಕಂಪನಿಯ ವಕ್ತಾರರ ಪ್ರಕಾರ ಲಂಚವೆಂಬುದು ಉದ್ಯಮದ ಒಂದು ಭಾಗವಾದರೆ, ವೇಶ್ಯಾವೃತ್ತಿ ಕೂಡ ವೃತ್ತಿಯ ಒಂದು ಭಾಗವಾಗುತ್ತದೆ. ತಲೆಹೊಡೆಯುವುದು, ಕೊಲೆ ಮಾಡುವುದು ದರೋಡೆಕಾರನ ವೃತ್ತಿಯ ಒಂದು ಭಾಗವಾಗುತ್ತದೆ. ಹಣ, ಹೆಂಡ ಮತ್ತು ಹೆಣ್ಣು, ಈ ಮೂರು ಅಂಶಗಳು ಆಧುನಿಕ ಜಗತ್ತು ಮತ್ತು ಸಮಾಜವನ್ನು ಮಲೀನಗೊಳಿಸುತ್ತಿರುವ ಬಗೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಜನಬಳಕೆಯ ನಡುವೆ ಇರುವ ಮಾತುಗಳಿಗೆ ಹೊಸ ಅರ್ಥವನ್ನು ಕಂಡುಕೊಳ್ಳಬೇಕಿದೆ. ಏಕೆಂದರೆ ಇತ್ತೀಚೆಗೆ ಕಡು ಭ್ರಷ್ಟಾಚಾರ ಕುರಿತು ಮಾತನಾಡುವುದು ಅಥವಾ ವ್ಯಾಖ್ಯಾನಿಸುವುದು ಕೂಡ ಸಿನಿಕತನದ ಒಂದು ಭಾಗವೇನೊ ಎಂಬಂತಾಗಿದೆ.

ಭ್ರಷ್ಟಾಚಾರದ ಹಗರಣಗಳು ಭಾರತೀಯರಿಗೆ ಹೊಸದೇನಲ್ಲ. ಅವರು ಈಗಾಗಲೇ ಅವುಗಳ ಬಗ್ಗೆ ತಮ್ಮ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಹಳ್ಳ ಹಿಡಿದ ಲಾಲು ಪ್ರಸಾದ್ ಅವರ ಮೇವು ಖರೀದಿ ಹಗರಣ, ಜಯಲಲಿತ, ಮಾಯಾವತಿ, ಮುಲಾಯಂಸಿಂಗ್ ಯಾದವ್ ಮತ್ತು ಯಡಿಯೂರಪ್ಪ ಇವರ ಅಕ್ರಮ ಆಸ್ತಿ ಹಗರಣ, ಬೊಫೋರ್ಸ್ ಪಿರಂಗಿ ಖರೀದಿ ಹಗರಣ, ಮೋಬೈಲ್ ತರಾಂಗಾಂತರ ಹಂಚಿಕೆ ಹಗರಣ, ಗಣಿ ವಿವಾದ, ಇತ್ತೀಚೆಗಿನ ಹೆಲಿಕಾಪ್ಟರ್ ಹಗರಣ, ಇವೆಲ್ಲವೂ ಸಮಯಕ್ಕೆ ತಕ್ಕಂತೆ ರಾಜಕೀಯ ಚದುರಂಗದಾಟದಲ್ಲಿ ಬಳಕೆಯಾಗುವ ರಾಜ, ರಾಣಿ, ಮಂತ್ರಿ, ಕುದುರೆ, ಸಿಪಾಯಿಗಳೆಂಬ ಆಟದ ಕಾಯಿಗಳು. ಇದನ್ನು ನೋಡುವ ಮತ್ತು ಫಲಿತಾಂಶಕ್ಕಾಗಿ ಕಾಯುವ ನಾವುಗಳು ಮಾತ್ರ ನಿಜವಾದ ಅರ್ಥದಲ್ಲಿ ಮೂರ್ಖರು.

ದೆಹಲಿ ಮೂಲದ ನೀರಾ ರಾಡಿಯ ಎಂಬ ಅಸಾಮಾನ್ಯರಿಗಷ್ಟೇ ಗೊತ್ತಿದ್ದ ಮಹಿಳೆ ಅಕ್ರಮ ವ್ಯವಹಾರಗಳಿಗೆ ದಲ್ಲಾಳಿಯಾಗಿದ್ದು, nira raadiaತನ್ನ ವೃತ್ತಿಯನ್ನು ಲಾಬಿ ಎಂದು ಕರೆದುಕೊಂಡಿದ್ದಾಳೆ. ದೆಹಲಿಯ ಪ್ರತಿಷ್ಟಿತರಲ್ಲಿ ಮುಖ್ಯಳಾಗಿರುವ ಈಕೆ ಈಗ ಸಾವಿರಾರು ಕೋಟಿ ರೂಪಾಯಿಗಳ ಒಡತಿ. ದೆಹಲಿ ಹೊರವಲಯದ ತೋಟದ ಮನೆಯಲ್ಲಿ ರಾಜಕಾರಣಿಗಳು, ಕಂಪನಿಯ ಅಧಿಕಾರಿಗಳಿಗೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಪ್ರತಿ ನಿತ್ಯ ಪಾರ್ಟಿ ಏರ್ಪಡಿಸುವ ಇವಳನ್ನು ನಮ್ಮ ಪರಮ ಪೂಜ್ಯ ಶ್ರಿ.ಶ್ರೀ.ಶ್ರೀ. (ಇನ್ನೊಂದಷ್ಟು ಶ್ರೀಗಳನ್ನು ಸೇರಿಸಿಕೊಳ್ಳಿ) ಪೇಜಾವರ ಸ್ವಾಮಿಗಳು ತನ್ನ ಪರಮಶಿಷ್ಯೆ ಎಂದು ಘೊಷಿಸಿಕೊಂಡಿದ್ದಾರೆ. ಇವಳು ಸಂಪಾದಿಸಿದ ಪಾಪದ ಹಣವನ್ನು ಯಾವ ಆತ್ಮ ಸಾಕ್ಷಿಯೂ ಇಲ್ಲದೆ ದೇಣಿಗೆಯಾಗಿ ಸ್ವೀಕರಿಸಿದ್ದಾರೆ. ನಮ್ಮ ಯಡಿಯೂರಪ್ಪ ತಾನು ತಿಂದ ಎಂಜಲನ್ನು ನಮ್ಮ ಮಠಾಧೀಶರ ಬಾಯಿಗೆ ಒರೆಸಲಿಲ್ಲವೆ?ಅದೇ ರೀತಿ ನೀರಾ ರಾಡಿಯ ಕೂಡ ತಾನು ಬೆಳೆಯುತ್ತಿರುವ ಪಾಪದ ಫಸಲನ್ನು ಮಠಗಳಿಗೂ ಹಂಚುತ್ತಿದ್ದಾಳೆ. ದುರಂತದ ಸಂಗತಿಯೆಂದರೆ, ವರ್ತಮಾನದ ಸಮಾಜಕ್ಕೆ ಆವರಿಸಿಕೊಳ್ಳತ್ತಿರುವ ವೈಚಾರಿಕತೆಯ ಶೂನ್ಯತೆಯಿಂದಾಗಿ ಹೊಸ ರೂಪ ಪಡೆಯುತ್ತಿರುವ ಸಾಮಾಜಿಕ ಅನಿಷ್ಟಗಳಿಗೆ ನಾವೀಗ ಸಾಕ್ಷಿಯಾಗಬೇಕಾಗಿದೆ.

4 thoughts on “ಬದಲಾಗುತ್ತಿರುವ ಭ್ರಷ್ಟಾಚಾರದ ವಾಖ್ಯಾನಗಳು

 1. Ananda Prasad

  ಅನ್ಯಾಯ, ಭ್ರಷ್ಟಾಚಾರ, ಕೊಲೆ ಮೊದಲಾದವುಗಳನ್ನು ನಡೆಸಿದವನ್ನು ರಕ್ಷಿಸುವ ವಕೀಲ ವೃತ್ತಿ (ಎಲ್ಲರೂ ಅಲ್ಲ, ಶೇಕಡಾ ೫೦ರಷ್ಟು) ಯಾವ ರೀತಿ ಗೌರವಾನ್ವಿತ ಉದ್ಯೋಗವೋ ಅದೇ ರೀತಿ ಕಾರ್ಪೋರೇಟ್ ಉದ್ಯಮಿಗಳ ಪರವಾಗಿ ಮಾಡುವ ದಲ್ಲಾಳಿ/ಲಾಬಿ ಕೆಲಸವೂ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಒಂದು ಗೌರವಾನ್ವಿತ ಉದ್ಯೋಗವಾಗಿದೆ. ಈ ಉದ್ಯೋಗಕ್ಕೆ ತರಬೇತಿ ನೀಡಲು ತರಬೇತಿ ಶಾಲೆಗಳನ್ನು ತೆರೆಯುವುದು ಒಂದು ಬಾಕಿ ಇದೆ.
  ಪುರೋಹಿತಶಾಹಿ ವ್ಯವಸ್ಥೆಗೆ ಹಣ ಯಾವ ರೀತಿ ಸಂಪಾದಿಸಿದ್ದು ಎಂಬುದು ಮುಖ್ಯವಲ್ಲ. ಹೀಗಾಗಿ ಅಕ್ರಮ ಗಣಿಗಾರಿಕೆಯಿಂದ ಸಂಪಾದಿಸಿದ ಹಣ, ಭ್ರಷ್ಟಾಚಾರದಿಂದ ಸಂಪಾದಿಸಿದ ಹಣ ಹೀಗೆ ಯಾವ ರೀತಿ ಸಂಪಾದಿಸಿದ ಹಣವಾದರೂ ಆದೀತು ಒಟ್ಟಿನಲ್ಲಿ ತಮಗೆ ಅಧೀನವಾಗಿ ನಡೆದುಕೊಳ್ಳುವ ಯಾರದೇ ಹಣವಾದರೂ ಅದಕ್ಕೆ ಮಾನ್ಯವೇ. ಆದರೆ ಸಮಾಜಕ್ಕೆ ಉಪದೇಶ ಕೊಡುವುದರಲ್ಲಿ ಮಾತ್ರ ಇವರು ಹಿಂದೆ ಬೀಳುವುದಿಲ್ಲ. ಲಾಗಾಯ್ತಿನಿಂದಲೂ ಇದು ಪುರೋಹಿತಶಾಹೀ ವ್ಯವಸ್ಥೆಯ ಪ್ರಧಾನ ಲಕ್ಷಣವೇ ಆಗಿದೆ.

  Reply
  1. maheshbadagal@gmail.com

   ಜಾಗತಿಕ ಬಂಡವಾಳ ಶಾಹಿಗಳಿಗೆ ಭಾರತ ಒಂದು ಪ್ರಯೋಗ ಶಾಲೆ ಎಂಬಂತಾಗಿದೆ. ವಿದೇಶಿಯರು ತಿರಸ್ಕರಿಸುವ ಯಾವುದೇ ವಸ್ತುಗಳನ್ನು ನಾವು ತೆರೆದ ಮನಸಿನೊಂದಿಗೆ ಸ್ವೀಕರಿಸುತ್ತೇವೆ,ಬನ್ನಿ,ಹಾಗೆ ಒಳಬರುವಾಗ ಹಣದ ಥೈಲಿ ಚೀಲ ತನ್ನಿ ಎನ್ನುವಂತಹ ಮನೆಹಾಳ ನಾಯಕರು ಇರುವವರೆಗೆ ಭಾರತದ ನೆಲದಲ್ಲಿ ಹಗರಣಗಳು ಜೀವಂತವಾಗೇ ಇರುತ್ತವೆ. ವಿಶ್ವದ ಅತಿ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರ ಎಂಬ ಹಣೆಪಟ್ಟಿಯನ್ನು ತಗಲುಹಾಕಿ ಕೊಂಡಿರುವುದೇ ಈ ದೇಶದ ಬಹುದೊಡ್ಡ ವ್ಯಂಗ್ಯ. ಸ್ವಾತಂತ್ರ್ಯನಂತರದ ವರ್ಷಗಳಲ್ಲಿ ಭಾರತ ಆರ್ಥಿಕವಾಗಿ,ವೈಜ್ಞಾನಿಕವಾಗಿ,ಸಮಾಜಮುಖಿಯಾಗಿ ಎಷ್ಟು ಬಲಾಢ್ಯವಾಗಿದೆಯೋ ಅದರ ನೂರು ಪಟ್ಟಿಗೂ ಮಿಗಿಲಾಗಿ ಭ್ರಷ್ಟಾಚಾರ ಮಾಡುವುದರಲ್ಲೂ ಬಲಾಢ್ಯವಾಗಿರುವುದು ಈ ದೇಶದ ದುರಂತವೇ ಸರಿ. ಬಹುಶ: ನಮ್ಮ ದೇಶದ ಉದ್ದಗಲಕ್ಕೂ ಎಲ್ಲೆಂದರಲ್ಲಿ ನಡೆದಿರುವ ,ಮುಂದೆ ನಡೆಯುವ ಭ್ರಷ್ಟಾಚಾರ ಪ್ರಕರಣಗಳು ಕಡಿಮೆ ಎಂದರೂ 10 ವಿ.ವಿಗಳಿಗೆ ಬೋಧನಾ ಸಾಮಗ್ರಿಯಾಗಿ ಮಿಗಬಹುದೇನೊ..

   Reply
 2. Naveen_H

  Following is the excerpts from a blog written by editor of popular satire news site..

  Now, this in itself is not any news frankly. “Lobbying” is no secret or crime; it’s called “Public Affairs” by most of the Public Relations consultancy companies and they proudly put it up under the “services” section on their websites. Take for example the following paragraph that appears on the website of IPAN, one of the leading PR agencies of India:

  “Among our successful campaigns are those on behalf of STAR TV (to beat back a discriminatory cable TV regulation bill), the Soaps and Toiletries Manufacturers Association (to secure reduction in duties on cosmetics), the Express Industry Council of India (to stall a bill designed to protect the monopoly of the post office), the All India Meat and Livestock Exporters Association (to counter militant vegetarian groups seeking the closure of mechanized abattoirs producing meat for exports) and the Tea Packeters Association of India (to secure removal of excise duty on packaged tea).”

  From the above paragraph, one can conclude, and (s)he would technically be not wrong, that some corporates paid money (unless IPAN carried out those campaigns out of some goodwill) to “beat back” and “stall” bills (inside or outside the parliament?) and decide excise duties that determine the revenue receipt of the government.

  Should we be outraged that this is how policies of our nation are framed?

  Source: http://blog.fakingnews.com/2010/11/radia-barkha-peepli-live/

  This is the fate of our rulers and us. Our rules and regulations are determined by corporates not us!!

  Reply
 3. tuLuva

  ನೀವು ಹೇಳಿದ ಹೆಚ್ಚಿನ ವಿಚಾರಗಳನ್ನು ನಾನು ಒಪ್ಪುತ್ತೇನಾದರೂ ಇದಕ್ಕೆ ಕೇವಲ ಜಾಗತೀಕರಣ+ಬಂಡವಾಳಶಾಹಿ ವ್ಯವಸ್ತೆಯೇ ಕಾರಣ ಎನ್ನುವುದು ಅಷ್ಟು ಸೂಕ್ತವಲ್ಲವೇನೋ.. ಹಾಗಿದ್ದದ್ದೆ ಆದರೆ ರಷಿಯ, ಚೀನಾಗಳಲ್ಲಿ ಭ್ರಷ್ಟಾಚಾರವೇ ಇಲ್ಲದಿರಬೇಕಿತ್ತು..

  Reply

Leave a Reply

Your email address will not be published.