Daily Archives: March 1, 2014

ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮ ಹಾಗೂ ದಿನೇಶ್ ಅಮೀನ್ ಮಟ್ಟು ಭಾಷಣ

– ಇರ್ಷಾದ್

“ಮುಸ್ಲಿಮ್ ಲೇಖಕರ ಸಂಘ” ಶುಕ್ರವಾರ ಸಂಜೆ ಮಂಗಳೂರಿನಲ್ಲಿ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಹಾಗೂ ಹಿರಿಯ ಮುಸ್ಲಿಂ ಸಾಹಿತಿಗಳಿಗೆ ಸನ್ಮಾನ, ಜೊತೆಗೆ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಪ್ರಧಾನ ಭಾಷಣಕಾರರಾಗಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಆಗಮಿಸಿದ್ದರು. ಪ್ರಗತಿಪರ ಚಿಂತಕ, ಕೋಮುವಾದ ಮೂಲಭೂತವಾದ ವಿರೋಧಿ ಮನಸ್ಥಿತಿ ಹೊಂದಿರುವ ಹಾಗೂ ತಮ್ಮ ಮೊನಚಾದ ಬರಹಗಳಿಂದ ಜನರ ಹೃದಯ ಗೆದ್ದಿರುವ ದಿನೇಶ್ ಅಮೀನ್ ಮಟ್ಟು ಅವರ ಭಾಷಣದಲ್ಲಿ ಏನಿರಬಹುದು ಎಂಬ ಕುತೂಹಲದಿಂದ ನಾನೂ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಮೀನ್ ಮಟ್ಟು ಅವರ ಮಾತುಗಳ ಕುರಿತಾಗಿ ಹೇಳೋದಕ್ಕಿಂತ ಮೊದಲು ಕೆಲವೊಂದು ವಿಚಾರಗಳ dinesh-amin-mattu-2ಕುರಿತಾಗಿ ಹೇಳಲೇ ಬೇಕಾಗುತ್ತದೆ.

ಕೆಲವು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಸಾಹಿತ್ಯ ವಲಯದಲ್ಲಿ ಪ್ರಗತಿಪರ ಚಿಂತನೆ ಮಾಡುವ ಸಾಹಿತಿಗಳ ಬರಹಗಾರರ ದಂಡೇ ಇತ್ತು. ಬೊಳುವಾರು ಮುಹಮ್ಮದ್, ಫಕೀರ್ ಮುಹಮ್ಮದ್ ಕಟಪಾಡಿ, ಬಿ.ಎಮ್. ರಶೀದ್, ಸಾರಾ ಅಬೂಬಕ್ಕರ್, ಮುಂತಾದ ಪ್ರಗತಿಪರ ಬರಹಗಾರರು ಮುಸ್ಲಿಮ್ ಸಮಾಜದಲ್ಲಿರುವ ಮೂಲಭೂತವಾದತ್ವವನ್ನು ಖಂಡಿಸುವುದರ ಜೊತೆಗೆ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದ ಮೇಲೆ ಬಹುಸಂಖ್ಯಾತ ಕೋಮುವಾದಿಗಳಿಂದ ನಡೆಯುತ್ತಿರುವ ದೌರ್ಜನ್ಯದ ವಿರುದ್ಧವೂ ಧ್ವನಿ ಎತ್ತಿದವರು. ಆದರೆ ಈ ಎಲ್ಲಾ ಪ್ರಗತಿಪರ ಲೇಖಕರು ಮುಸ್ಲಿಂ ಸಮುದಾಯಕ್ಕೆ ಲೇಖಕರಾಗಿ ಕಂಡುಬಂದಿಲ್ಲ. ಬದಲಾಗಿ ಇವರ ಪ್ರಗತಿಪರ ಚಿಂತನೆ ಮುಸ್ಲಿಂ ಸಮುದಾಯದ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗತೊಡಗಿತು. ಪ್ರಸ್ತುತ ದಿನಗಳಲ್ಲಿ ಮುಸ್ಲಿಂ ಮಹಿಳೆಯರ ಪರಿಸ್ಥಿತಿ ಕುರಿತಾಗಿ ಧ್ವನಿ ಎತ್ತುವುದರ ಜೊತೆಗೆ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ಕುರಿತಾಗಿಯೂ ಧ್ವನಿ ಎತ್ತುತ್ತಿರುವ ಲೇಖಕಿಯರಾದ Sara-Abubakarಸಾರಾ ಅಬೂಬಕ್ಕರ್, ಕೆ.ಶರೀಫಾ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಮುನೀರ್ ಕಾಟಿಪಳ್ಳ ಹಾಗೂ ಜೊಹರಾ ನಿಸಾರ್ ಅಹಮ್ಮದ್ ಅಂತವರನ್ನು ಜಮಾತೇ ಇಸ್ಲಾಂಮೀ ಹಿಂದ್ ಸಿದ್ದಾಂತ ಯಾವತ್ತೂ ಒಪ್ಪಿಕೊಳ್ಳುವುದಿಲ್ಲ. ಅವರ ಪಾಲಿಗೆ ಇವರೆಲ್ಲಾ ಧರ್ಮವಿರೋಧಿಗಳು. ಯಾಕೆಂದರೆ ಇವರುಗಳು ಧರ್ಮ ವಿಧಿಸಿರುವ ಕಟ್ಟುಪಾಡುಗಳೊಳಗಿಲ್ಲ. ಮುಸ್ಲಿಮ್ ಸಮಾಜದಲ್ಲಿರುವ ಬಹುಪತ್ನಿತ್ವದ ದುರುಪಯೋಗ ಹಾಗೂ ಅದರಿಂದಾಗುತ್ತಿರುವ ಅನಾಹುತಗಳು, ಮುಸ್ಲಿಮ್ ಮಹಿಳೆಯರ ಪರಿಸ್ಥಿತಿ, ಧಾರ್ಮಿಕ ಕಟ್ಟುಪಾಡುಗಳು, ಕುರುಡು ನಂಬಿಕೆಗಳಿಂದಾಗುತ್ತಿರವ ಅನಾಹುತಗಳ ಕುರಿತಾಗಿ ಸಾಕಷ್ಟು ಲೇಖನಗಳನ್ನು ಬರೆದವರು ಹಾಗೂ ಈ ಕುರಿತು ಬೆಳಕು ಚೆಲ್ಲಿದವರು. ಆದರೆ ಈ ಎಲ್ಲಾ ವಿಚಾರವಾದಿಗಳ ಕುರಿತಾಗಿ ಮುಸ್ಲಿಂ ಲೇಖಕರ ಸಂಘದ ನಿಲುವೇನು ಎಂಬುವುದಂತೂ ಸ್ಪಷ್ಟ.

ಯಾಕೆಂದರೆ “ಮುಸ್ಲಿಮ್ ಲೇಖಕರ ಸಂಘ” ಮುಸ್ಲಿಮ್ ಧಾರ್ಮಿಕ ಸಂಘಟನೆ ಜಮಾತೆ ಇಸ್ಲಾಂಮೀ ಹಿಂದ್ ಸಂಘಟನೆಯ ಹಿನ್ನೆಲೆಯಲ್ಲಿ ಕಾರ್ಯಾಚರಿಸುವಂತಹಾ ಸಂಘವಾಗಿದೆ. ಜಮಾತೆ ಇಸ್ಲಾಂ ಸಂಘಟನೆ ಧಾರ್ಮಿಕ ಮೂಲಭೂತವಾದವನ್ನು ಮೈಗೂಡಿಸಿಕೊಂಡಿರುವ ಸಂಘಟನೆ. ಜೊತೆಗೆ ಇಸ್ಲಾಂ ರಾಷ್ಟ್ರವನ್ನು ಪ್ರತಿಪಾದಿಸುವ ಸಂಘಟನೆಯಾಗಿದೆ. ಇನ್ನು ಸಂಘದ ಕಾರ್ಯಕ್ರಮದಲ್ಲಿ ಸನ್ಮಾನಿತಗೊಂಡ ಲೇಖಕರು ಕೂಡಾ ಜಮಾತ್ ಇಸ್ಲಾಮೀ ಹಿಂದ್ ಕಾರ್ಯಕರ್ತರು. (ಮರಿಯಮ್ಮ ಇಸ್ಮಾಯಿಲ್ ಹಾಗೂ ಎಸ್. ಅಬ್ದುಲ್ ಕರೀಮ್ ದಾವಣಗೆರೆ) ಈ ಎಲ್ಲಾ ವಿಚಾರಗಳನ್ನು ನೋಡಿಕೊಂಡು ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡಿದ ದಿನೇಶ್ ಅಮೀನ್ ಮಟ್ಟು ಅವರ ಮಾತುಗಳಲ್ಲಿ ನನಗೆ ಸಹಜ ಕುತೂಹಲವಿತ್ತು. ಯಾಕೆಂದರೆ ಮಹಿಳಾ ಪರ, ಕೋಮುವಾದತ್ವ, ಮೂಲಭೂತವಾದತ್ವ ವಿರೋಧಿ, ಪ್ರಗತಿಪರ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ಅಮೀನ್ ಮಟ್ಟು ಇಲ್ಲಿ ಸಾಕಷ್ಟು ವಿಚಾರಗಳ ಕುರಿತಾಗಿ ಮಾತನಾಡೋದಿತ್ತು. ಆದರೆ ಅವರು ಇಲ್ಲಿ ತಮ್ಮ ನೈಜ್ಯ ಜವಾಬ್ದಾರಿಯನ್ನು ಪೂರ್ಣಗೊಳಿಸಿಲ್ಲ ಎಂದನಿಸಿದೆ.

ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮಕ್ಕೆ ಬಂದಂತಹಾ ಬಹುತೇಕ ಜನರಿಗೆ ಅಮೀನ್ ಮಟ್ಟು ಅವರ ಬರವಣಿಗೆ ಪ್ರಿಯವಾದುದು. ಯಾಕೆಂದರೆ ಅವರು ಆರ್.ಎಸ್.ಎಸ್ ನ್ನು ಹಾಗೂ ಪಿ.ಎಫ್.ಐ ಯನ್ನೂ ಖಂಡಿಸುತ್ತಾರೆ. ಈ ಕಾರಣಕ್ಕಾಗಿ ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮದ ಆಯೋಜಕರಾದ ಜಮಾತೇ ಇಸ್ಲಾಂಮೀ ಹಿಂದ್ ಹಾಗೂ ಕಾರ್ಯಕ್ರಮದಲ್ಲಿದ್ದಂತಹಾ ಜಮಾತ್ ಕಾರ್ಯಕರ್ತರೂ ಆರ್.ಎಸ್.ಎಸ್ ಹಾಗೂ ಪಿ.ಎಫ್.ಐ ಖಂಡಿಸುತ್ತಾರೆ. ಆದರೆ ಇಸ್ಲಾಂ ಧಾರ್ಮಿಕ ಮೂಲಭೂತವಾದವನ್ನಲ್ಲ. ಅದಕ್ಕಾಗಿ ಈ ಸಂಘಕ್ಕೆ ಮುಸ್ಲಿಂ ತೀವ್ರವಾದ ಸಂಘಟನೆ PFI-eventಪಿ.ಎಫ್.ಐ ಜೊತೆ ಜೊತೆಗೆ ಮುಸ್ಲಿಂ ಪ್ರಗತಿಪರ ಲೇಖಕರಾದ ಸಾರಾ ಅಬೂಬಕ್ಕರ್, ಬೊಳುವಾರು ಮೋಹಮ್ಮದ್ ಕುಌ, ಮುಹಮ್ಮದ್ ಕಟಪಾಡಿ ಅಂತಹಾ ಸಾಹಿತಿಗಳು ಮುಸ್ಲಿಂ ಸಾಹಿತಿಗಳಾಗಿ ಕಂಡಿಲ್ಲ. (ಹಿಂದೂ) ಎಡಪಂಥೀಯವಾದ ಹಾಗೂ ಪ್ರಗತಿಪರ ಚಿಂತನೆಗಳನ್ನು ಒಪ್ಪುವ ಈ ಮನಸ್ಥಿತಿ (ಮುಸ್ಲಿಮ್) ಎಡಪಂಥೀಯವಾದವನ್ನು, ಪ್ರಗತಿಪರ ಚಿಂತನೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಬಹುಸಂಖ್ಯಾತ ಕೋಮುವಾದಿಗಳಿಂದ ದಬ್ಬಾಳಿಕೆ ಸಂದರ್ಭದಲ್ಲಿ ಜ್ಯಾತ್ಯಾತೀತರಾಗುವ ಈ ಮನಸ್ಥಿತಿ ಮುಸ್ಲಿಮ್ ಧಾರ್ಮಿಕ ವಿಚಾರಗಳು ಬಂದಾಗ ಪಕ್ಕಾ ಮೂಲಭೂತವಾದವನ್ನು ಪ್ರತಿನಿಧಿಸುತ್ತದೆ.

ಈ ಎಲ್ಲಾ ವಿಚಾರಗಳ ಕುರಿತಾಗಿ ಮಾಹಿತಿಯನ್ನು ಹೊಂದಿರುವ ದಿನೇಶ್ ಅಮೀನ್ ಮಟ್ಟು ಅವರು ಇಲ್ಲಿ ಮಾತನಾಡಬೇಕಾಗಿದ್ದು ಇಂಥಹಾ ವಿಚಾರಗಳನ್ನೇ. ಮುಸ್ಲಿಮ್ ಸಮುದಾಯದಲ್ಲಿರುವ ನ್ಯೂನತೆಗಳು, ಧರ್ಮದ ಹೆಸರಲ್ಲಿ ಹೇರಲ್ಪಡುತ್ತಿರುವ ಕಟ್ಟುಪಾಡುಗಳ ವಿರುದ್ಧ ಪ್ರಗತಿಪರ ನೆಲೆಯಲ್ಲಿ ಹೋರಾಟಗಳನ್ನು ನಡೆಸುವ ಹಾಗೂ ಧಾರ್ಮಿಕ ಮೂಲಭೂತವಾದತ್ವವನ್ನು ವಿರೋಧಿಸಿ ಬರವಣಿಗೆಗಳ ಮೂಲಕ ಧ್ವನಿ ಎತ್ತುವ ಮುಸ್ಲಿಂ ಲೇಖಕರ ಹೋರಾಟಗಾರರ ಪರಿಸ್ಥಿತಿ ಹೇಗಿದೆ? ಅವರನ್ನು ಮುಸ್ಲಿಂ ಸಮುದಾಯದ ಮೂಲಭೂತ ಮನಸ್ಥಿತಿಗಳು ನೋಡುತ್ತಿರುವ ದೃಷ್ಟಿಕೋನದಲ್ಲಿ ಆಗಬೇಕಾದ ಬದಲಾವಣೆಗಳು ಯಾವುವು ಎಂಬುವುದರ ಕುರಿತಾಗಿದೆ. ಮುಸ್ಲಿಂ ಲೇಖಕರ ಸಂಘದ ಬೆನ್ನೆಲುಬಾಗಿರುವ ಜಮಾತೇ ಇಸ್ಲಾಂಮೀ ಹಿಂದ್ ಧಾರ್ಮಿಕ ಸಂಘಟನೆ ಪ್ರಗತಿಪರ ಚಿಂತಕರು ಹಾಗೂ ಮಹಿಳಾ ಪ್ರಗತಿಪರತೆ ಕುರಿತಾಗಿ ತಳೆದಿರುವ ನಿಲುವುಗಳೇನು ಎಂಬುವುದರ ಕುರಿತಾಗಿರಬೇಕಿತ್ತು. ಮುಸ್ಲಿಂ ಪ್ರಗತಿಪರ ಲೇಖಕಿ ಸಾರಾ ಅಬೂಬಕ್ಕರ್ ಕುರಿತಾಗಿ ಜಮಾತ್ ಹೊಂದಿರುವ ನಿಲುವಿನ ಕುರಿತಾಗಿ ಸ್ಪಷ್ಟತೆ ಇರುವ ಅಮೀನ್ ಮಟ್ಟು ಅವರು ಕಾರ್ಯಕ್ರಮದ ಸಭಾಂಗಣದಲ್ಲಿ ತುಂಬಿದ ಸಾಹಿತ್ಯಾಭಿಮಾನಿಗಳ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದರೇ ವಿನಹ ಜಮಾತ್ ನಂತಹಾ ಪ್ರಗತಿಪರ ಚಿಂತನೆಗಳ ವಿರೋಧಿ ಸಂಘಟನೆಯ ಕುರಿತಾಗಿ ಚಕಾರವೆತ್ತಿಲ್ಲ. ಈ ಹಿಂದೆ ಖ್ಯಾತ ಸಾಹಿತಿ ಹಾಗೂ ಬಂಡಾಯ ಬರಹಗಾರರಾದ devanurದೇವನೂರು ಜಮಾತೇ ಇಸ್ಲಾಂಮೀ ಹಿಂದ್ ಮುಸ್ಲಿಮ್ ರ ಆರ್.ಎಸ್.ಎಸ್ ಎಂಬ ಹೇಳಿಕೆಯನ್ನು ನಿಡಿದ್ದರು ಎಂಬುವುದನ್ನು ನಾವಿಲ್ಲಿ ಗಮನಿಸಬೇಕು. ಮಟ್ಟು ಅವರು ತಮ್ಮ ಭಾಷಣದಲ್ಲಿ ಹಿಂದೂ ಸಂಘಟನೆಗಳು ಹಿಂದೂ ಸಮಾಜದಲ್ಲಿದ್ದ ಕೆಲವೊಂದು ಆಚರಣೆಗಳ ವಿರುದ್ಧ ಹೇಗೆ ಧ್ವನಿಎತ್ತಬೇಕು ಎಂದು ವಿವರಣೆ ನೀಡಿದರೆ ಹೊರತು ಮುಸ್ಲಿಂ ಧಾರ್ಮಿಕ ಸಂಘಟನೆಗಳ ಸಮಾಜ ತಿದ್ದುವ ಕಾರ್ಯಗಳ ಕುರಿತಾಗಿ ಎಳ್ಳಷ್ಟೂ ಮಾತನಾಡಿಲ್ಲ. ಅವರ ಮಾತುಗಳ ಪ್ರಕಾರ ಸಾಹಿತ್ಯ ಧ್ವನಿ ಇಲ್ಲದವರ ಧ್ವನಿಯಾಗಬೇಕು. ಜನರ ನೋವುಗಳನ್ನು ಹೊರಹಾಕುವಲ್ಲಿ ಸಾಹಿತ್ಯ ಪಾತ್ರದ ಕುರಿತಾಗಿ ಉಲ್ಲೇಖಿಸಿದರೂ, ಸಾಹಿತ್ಯವನ್ನು ಧಾರ್ಮಿಕ ಕಟ್ಟುಪಾಡಿನಲ್ಲಿಟ್ಟು ಧಾರ್ಮಿಕ ಸಾಹಿತ್ಯ ಮಾತ್ರ ನೈಜ್ಯ ಸಾಹಿತ್ಯ ಉಳಿದೆಲ್ಲಾ ಅಶ್ಲೀಲ ಸಾಹಿತ್ಯ ಎಂಬ ಮನಸ್ಥಿತಿ ಹೊಂದಿರುವವರ ಕುರಿತಾಗಿ ಮಾತನಾಡದೇ ಇರುವುದು ನಿಜಕ್ಕೂ ಬೇಸರ ತಂದಿದೆ. ಇನ್ನು ಹಿಂದೂ ಧರ್ಮದಲ್ಲಿ ಪ್ರಗತಿಪರ ಚಿಂತನೆಗಳಿಗೆ ಅವಕಾಶವಿದೆ ಹಾಗೂ ಇಸ್ಲಾಂ ಧರ್ಮದಲ್ಲಿ ಪ್ರಗತಿಪರ ಚಿಂತನೆಗೆ ಅವಕಾಶವಿಲ್ಲ ಎಂಬ ಮಾತನ್ನಾಡುವ ಸಂದರ್ಭದಲ್ಲಿ ಪ್ರಗತಿಪರ ಚಿಂತನೆಗೆ ಎಳ್ಳಷ್ಟೂ ಅವಕಾಶವನ್ನು ನೀಡದ ಧಾರ್ಮಿಕ ಸಂಘಟನೆ ಜಮಾತೇ ಇಸ್ಲಾಂಮೀ ಹಿಂದ್ ಹಾಗೂ ಅವರ ಅಧೀನದಲ್ಲಿರುವ ಮುಸ್ಲಿಂ ಲೇಖಕರ ಸಂಘದ ನಿಲುವಿನ ಕುರಿತಾಗಿ ಚಕಾರವೆತ್ತದೇ ಇರುವುದು ಆಶ್ವರ್ಯ ಉಂಟುಮಾಡಿದೆ. ದಿನೇಶ್ ಅಮೀನ್ ಮಟ್ಟು ಅವರ ಈ ನಡೆ ಅವರ ನಿಲುವುಗಳಿಂದ ಪ್ರೇರಿತರಾಗಿ ಅವರನ್ನು ಹಿಂಬಾಲಿಸುವ ಅದೆಷ್ಟೋ ಜನರನ್ನು ತಪ್ಪುದಾರಿಗೆ ಎಳೆದಂತಾಗುತ್ತದೆ.