Daily Archives: March 8, 2014

ಒಬ್ಬರ ಮೌನವನ್ನು ಇನ್ನೊಬ್ಬರ ಮಾತು ಮುರಿಯುವಂತೆ ಮಾಡಬಾರದು : ಅಕ್ಷತಾ ಹುಂಚದಕಟ್ಟೆ

– ಅಕ್ಷತಾ ಹುಂಚದಕಟ್ಟೆ

ನಾನು ತುಂಬಾ ಮೆಚ್ಚುವ, ಗೌರವಿಸುವ ಇಬ್ಬರು ಪತ್ರಕರ್ತರು ದಿನೇಶ ಮಟ್ಟು ಮತ್ತು ನವೀನ ಸೂರಿಂಜೆ. ಅವರಿಬ್ಬರ ನಡುವಿನ ವಾಗ್ವಾದ ಸ್ವರೂಪದ ಸಂವಾದ ಸರಣಿ ನನ್ನನ್ನು ಇದಕ್ಕೆ ಪ್ರತಿಕ್ರಿಯಿಸಲು ಹಚ್ಚಿತು.

ನವೀನ ಹೇಳುತ್ತಿರುವುದು ಜಮಾತೆ ಇಸ್ಲಾಮಿ ಹಿಂದ್ ಮುಸ್ಲಿಂ ಲೇಖಕರ ಸಂಘ ಮತ್ತು ಶಾಂತಿ dinesh-amin-mattu-2ಪ್ರಕಾಶನ ಎಲ್ಲವು ಒಂದೇ ಸಂಘಟನೆಯ ವಿವಿಧ ಕವಲುಗಳು. ಮತ್ತೆ ಈ ಎಲ್ಲ ಸಂಘಟನೆಗಳು ಮೂಲಭೂತವಾದಿಗಳಿಂದ ಕೂಡಿದ್ದು, ಅದರ ಪ್ರಸರಣೆಯಲ್ಲೂ ತೊಡಗಿವೆ ಅನ್ನೋದು. ದಿನೇಶ್ ಸರ್ ಅಂಥಹ ಪ್ರಗತಿಪರರು ಅಲ್ಲಿ ಹೋಗಿ ಮಾತಾಡುವುದರಿಂದ, ಅವರು ಇಂಥವರು ನಮ್ಮ ವೇದಿಕೆಗೆ ಬಂದು ಮಾತಾಡಿದ್ರು ಅನ್ನೋ ವಿಷಯವನ್ನೇ ತೆಗೆದುಕೊಂಡು ನಾಳೆ ತಮ್ಮ ಅಜೆಂಡಾವನ್ನು ನೆರವೇರಿಸಿ ಕೊಳ್ಳಲು ಬಳಸುತ್ತಾರೆ. ಈ ಮೂಲಕ ಯಾರು ಮೂಲಭೂತವಾದವನ್ನು ವಿರೋಧಿಸುತಿದ್ದೆವೆಯೋ ಅವರೇ ಅದರ ಬೆಳವಣಿಗೆಗೂ ಕಾರಣರಾಗುವ ಸಂಭವ ಉಂಟಾಗಬಹುದು ಎನ್ನುವುದು ನವೀನನ ಆತಂಕ…

ಇವೆಲ್ಲ ಸರಿಯೇ ಇರಬಹುದು ನವೀನ. ನಾನು ಸರ್ ವಾದ ಮಾಡಿದ ಹಾಗೆ ಜಮಾತೆಗು ಲೇಖಕರ ಸಂಘಕ್ಕೂ ಸಂಬಂಧ ಇಲ್ಲ ಅಂತಲೂ ವಾದಿಸುವುದಿಲ್ಲ. ಏಕೆಂದರೆ ಆ ಸಂಘದಲ್ಲಿ ಲೇಖಕರು ಯಾರು ಇಲ್ಲದೆ ಇರುವುದರಿಂದ (ಇಲ್ಲ ಅಲ್ಲಿರುವವರು ಲೇಖಕರೆ ಅಂತ ಅಂದರೆ ಕನ್ನಡ ಸಾಹಿತ್ಯದ ನನ್ನ ಓದು ಅಷ್ಟೇನು ಖರಾಬಿಲ್ಲ ಅಂತ ಮಾತ್ರ ಹೇಳಬಲ್ಲೆ) ಅಂಥದೊಂದು ಸಂಘ ಇಂಥ ಸಂಘಟನೆಗಳ ನೆರವು ಅಥವಾ ಸರ್ಕಾರಿ ಕೃಪಾಪೋಷಿತವಾಗಿ ಮಾತ್ರ ಇಲ್ಲಿ ಹುಟ್ಟುವುದಕ್ಕೆ ಸಾದ್ಯ. ಇದು ಯಾರಿಗಾದರು ಮೇಲ್ನೋಟಕ್ಕೆ ಕಾಣುವ ಸತ್ಯ. ನವೀನ ನೀನು jamathmlore-blogspotಸಾಕ್ಷ್ಯಾಧಾರದ ಸಮೇತ ಇಟ್ಟಿದಿಯಲ್ಲ ಶಾಂತಿ ಪ್ರಕಾಶನ ಎಂಥ ಪುಸ್ತಕಗಳನ್ನು ಪ್ರಕಟಿಸುತ್ತದೆ… ಆ ಪುಸ್ತಕಗಳ ವಸ್ತು ವಿಷಯ… ಅಲ್ಲಿರುವ ಸಾಲುಗಳು `ಮಹಿಳೆಯರು ತಮ್ಮ ಮನೆಯಲ್ಲಿರಬೇಕು. ಸೌಂದರ್ಯ ಪ್ರದರ್ಶನ ಮಾಡುತ್ತಾ ತಿರುಗಾಡಬಾರದು ಅಥವ `ಸ್ತ್ರೀ ಪುರುಷರು ಒಟ್ಟಿಗೆ ಸೇರಬಾರದು…’ ಅಥವಾ` ಓರ್ವ ಮುಸ್ಲಿಂ ಮಹಿಳೆ ಸೈನಿಕ ತರಬೇತಿಯಲ್ಲಾಗಲಿ, ಆಟೋಟದಲ್ಲಾಗಲಿ ಭಾಗವಹಿಸುವಂತಿಲ್ಲ. ಪೇಟೆಯಿಂದ ಪಾರ್ಲಿಮೆಂಟ್ ತನಕ ಮಹಿಳೆಯು ಪುರುಷನೊಂದಿಗೆ ಬೆರೆಯುವುದು ಇಸ್ಲಾಂ ವಿರೋಧಿಯಾಗಿದೆ….’ ಇಂಥ ಸಾಲುಗಳು ಶಾಂತಿ ಪ್ರಕಾಶನ ಅಥವಾ ಇನ್ಯಾವುದೇ ಕೋಮುವಾದಿ ಪ್ರಕಾಶನದ ಪುಸ್ತಕಗಳಲ್ಲಿ ಮಾತ್ರ ಕಂಡು ಬರುತ್ತದೆ ಎಂಬುದು ನಿನ್ನ ನಂಬಿಕೆಯೇ? ಆದರೆ ಈ ಸಾಲುಗಳು ಸೂಚಿಸುವ ಮತ್ತು ಹೊಮ್ಮಿಸುವ ಮನಸ್ತಿತಿ ಇದೆಯಲ್ಲ ಅದು ಎಲ್ಲಿ ಕಂಡು ಬರುವುದಿಲ್ಲ ಎಂಬುದೇ ಹೆಣ್ಣಾಗಿ ನನ್ನನ್ನು ಕಾಡುವ ಪ್ರಶ್ನೆ… ಮತ್ತೆ ಇಂಥ ಮನಸ್ಥಿತಿ ಯಾರಲ್ಲಿ ಕಂಡು ಬರುವುದಿಲ್ಲ ಅಂತೇನಾದರೂ ಹುಡುಕುತ್ತಾ ಹೊರಟರೆ ಸಾವಿಲ್ಲದ ಮನೆಯ ಸಾಸಿವೆಯ ಹುಡುಕಾಟ ಆದೀತೆ ಎಂಬ ಅನುಮಾನವೂ ನನ್ನದು. ಮತ್ತೆ ಇಂಥ ಮನಸ್ಥಿತಿ jamate-mangaloreಎಂಥ ಹೊತ್ತಲ್ಲೂ ಉದ್ಭವಿಸಿ ಬಿಡಬಹುದೆಂಬ ಭಯವು ಜೊತೆಗೆ… ನನ್ನ ಒಂದು ಪದ್ಯದ ಎರಡು ಸಾಲು ಹೀಗಿದೆ: “ನಿಮಗೆ ಶಿಲಾಯುಗಕ್ಕೆ ದಾರಿಯಾದರೂ ಇದೆ. ನಮಗೆ ಶಿಲೆಯಾಗುವುದೇ ಉಳಿದಿದೆ”. ಹಾಗೂ ಭಯ; ರಾಮ ಬರುವ ಬದಲು ಅವನ ಸೇನೆ ಬಂದರೆ??? ನನಗಂತೂ ಈ ಮನಸ್ಥಿತಿ ಹಲವು ಹತ್ತು ವೇದಿಕೆಗಳಲ್ಲಿ ಕಂಡಿದೆ…

ತುಂಬಾ ಪ್ರಗತಿಪರ ಅಂತ ಕರೆಯೋ ಮಠಗಳು ಮತ್ತು ಮನುಷ್ಯರು ಸಹ ಹೆಣ್ಣಿನ ವಿಷಯದಲ್ಲಿ ಇ ಮನಸ್ಥಿತಿಯಿಂದಲೇ ನಡೆದುಕೊಳ್ಳುವುದು ಹಲವು ಹತ್ತು ಬಾರಿ. ತುಂಬಾ ಪ್ರಗತಿಪರ ಎಂದು ಕರೆಸಿಕೊಳ್ಳುವ ಮಠ ಒಂದಕ್ಕೆ ಪ್ರೀತಿಸಿದ ಯುವಜೋಡಿಯೊಂದು ಸಾವು ಬದುಕಿನ ಸನ್ನಿವೇಶದಲ್ಲಿ ಮದುವೆ ಮಾಡಿಸಲು ಬೇಡಿದಾಗ ಹುಡುಗ ಲಿಂಗಾಯಿತನಾದ ಕಾರಣಕ್ಕೆ ಮದುವೆ ಮಾಡಲು ಒಪ್ಪಿದ ಮಠದ ಧನಿಗಳು ಹುಡುಗಿ ಲಿಂಗ ಕಟ್ಟಿ ಲಿಂಗಾಯಿತಲಾದರೆ ಮಾತ್ರ ಎಂಬ ಅಲಿಖಿತ ನಿಯಮವನ್ನು ಮುಂದಿಟ್ಟರು. ಚೂರು ಇಷ್ಟವಿಲ್ಲದಿದ್ದರೂ ಹುಡುಗಿ ಅದಕ್ಕೆ ಒಪ್ಪಬೇಕಾಯಿತು. ಏಕೆಂದರೆ ನಮಗೆ ಬಿನ್ನ ಅಯ್ಕೆಗಳಿರುವುದಿಲ್ಲ. ಇದ್ದರು ಅವು ಒಂದಕಿಂತ ಇನ್ನೊಂದು ಭಯಂಕರವಾಗಿರುತ್ತದೆ.

ಇವೆಲ್ಲ ಇರಲಿ ಏಕೆಂದರೆ ಕೊನೆಗೂ ಇವೆಲ್ಲದರಿಂದ ಪಾರಾಗಬೇಕಾದದ್ದು ನಮ್ಮ ಪ್ರಯತ್ನಗಳಿಂದಲೇ. ಅಂತ ಮನಸ್ಥಿತಿ ಒಂದು ನಿರ್ವಾತದಲ್ಲಂತೂ ನಿರ್ಮಾಣ ಆಗುವುದಿಲ್ಲ. ನೀನು ಹೇಳುತ್ತಿರುವೆಯಲ್ಲ ಜಮಾತೆಯವರು ಎಂಥ ಮೂಲಭೂತವಾದದ ಒಂದು ಪರಿಸರ ನಿರ್ಮಾಣಕ್ಕೆ ಶ್ರಮಿಸುತಿದ್ದಾರೆ ಅಂತ… ಅದಕಿಂತ ಚೂರು ಪಾರು ಉದಾರವಗಿದ್ದರೂ ಅಂಥದ್ದೇ ಧೋರಣೆಯ ಪರಿಸರದಲ್ಲೇ ನನ್ನಂತಹ ಎಸ್ಟೋ ಹೆಣ್ಣುಮಕ್ಕಳು ಹುಟ್ಟಿ ಬೆಳೆದಿದ್ದು… ಅಂಥದೊಂದು ಕಿಟಕಿ ಬಾಗಿಲುಗಳು ಮುಚ್ಚಿದ ಪರಿಸರದಲ್ಲಿ ನಮ್ಮ ಶಾಲೆ, ಪಾಠ, ಇವೆಲ್ಲ ತುಸು ತುಸುವೇ ಬೆಳಕನ್ನು ನಮಗೆ ತೋರಿಸ್ತಿದ್ದ್ರು ಆದರೆ ಅಲ್ಲೇ ಇಂಥದರ ಜೊತೆಗೆ ನಾವೇನು ಮಾತಾಡುತಿದ್ದೆವೆಯೋ ಅಂತ ಮನಸ್ಥಿತಿಯಾ ಪೋಷಣೆ ಸಹ ನಡೆಯುತ್ತಿತ್ತು. ಮತ್ತೆ ಅದು ಹೆಣ್ಣುಮಕ್ಕಳ ಕ್ಷೇಮ ಮತ್ತು ಹಿತಚಿಂತನೆಗಾಗಿ ಎಂಬ ನಂಬಿಕೆ ಹಿಂದೆಯೂ… ಈಗಲೂ ಇರುವುದು. ಅಂಥದ್ರಲ್ಲಿ ಎಲ್ಲೋ ಸಿಕ್ಕಿದ ಲಂಕೇಶ್ ಎಂಬ ಪತ್ರಿಕೆ, ಅಲ್ಲಿನ ಬರಹಗಳು ತೂರಿದ ಬೆಳಕು ನಿಧಾನಕ್ಕೆ ನಮ್ಮನ್ನು ಬುರ್ಕಾ (ಮನಸಿಗೆ ಹಾಕಿದ್ದು) ದ ಒಳಗಿಂದ ಇಣುಕಲು ಪ್ರೇರೇಪಿಸಿತು…

ಇದನೆಲ್ಲ ನಾನು ಯಾಕೆ ಹೇಳುತಿದ್ದೆನೆಂದರೆ ದಿನೇಶ್ ಸರ್ ಆ ಕಾರ್ಯಕ್ರಮಕ್ಕೆ ಹೋಗಿದ್ರಿಂದ ಅದರ ಸಂಘಟಕರು, ಅಷ್ಟೇ ಯಾಕೆ ಅಲ್ಲಿ ಸೇರಿದ ಅಸಂಖ್ಯಾತ ಮಂದಿಯ ದೃಷ್ಟಿ ಕೋನ ಬದಲಾಗಲಾರದು ನನಗೆ ಗೊತ್ತಿದೆ . ಮತ್ತೆ ದಿನೇಶ್ ಸರ್ ಕೂಡ ಇಷ್ಟು ವರ್ಷದಲ್ಲಿ ಎಲ್ಲೂ ಯಾರ ಅಮಿಷಕ್ಕು ಸಿಲುಕದವರು ಜಮಾತೆಯವ್ರ ಆಮಿಷಕ್ಕೆ ಸಿಲುಕುವ ಸಾಧ್ಯತೆಯೇ ಇಲ್ಲ ಇದು ನಿನಗೂ ಗೊತ್ತಿದೆ. naveen-shettyಆದರೆ ನವೀನ ಅಲ್ಲಿ ಬುರ್ಖಾದಡಿ ಮುಖ ಮರೆಸಿ ಕೂತಿದ್ದರಲ್ಲ (ಅಥವಾ ಅವರನ್ನು ಹಾಗೆ ಮಾಡಿ ಕೂರಿಸಲಾಗಿತ್ತು) (ಮತ್ತೆ ಸರ್ ಬರೆದ ಮಾತುಗಳನ್ನು ಓದಿ ಜೋರು ನಗು ಬಂತು ಸಂಘಟಕರು ಹೇಳಿದರಂತೆ ಮೊದಲೆಲ್ಲ ಹೆಣ್ಣುಮಕ್ಕಳು ಎಲ್ಲೋ ಮೂಲೆಯಲ್ಲಿ ಮುಖ ಮರೆಸಿ ಕೂತಿರುತಿದ್ದರು ಈ ಹೊತ್ತು ವೇದಿಕೆಯ ಎದುರಿಗೆ ಕೂರುವ ದೈರ್ಯ ಮಾಡಿದಾರೆ ….’ ಅಲ್ಲ ದಿನೇಶ್ ಸರ್ ಅದನ್ನು ಬಹಳ ಹೆಮ್ಮೆಯಿಂದ ನೀವು ಅವರ ಮಾತುಗಳನ್ನು ಕಾಣಿಸಿದಿರಲ್ಲ ನಿಜಕ್ಕೂ ಆ ಹೆಣ್ಣುಮಕ್ಕಳೇ ಮುದುಡಿ ಕಣ್ಣಿಗೆ ಕಾಣದಂತೆ ಕೂತಿದ್ದರೆ ಅಥವಾ ಅವರನ್ನು ಹಾಗೆ ಮಾಡಲಾಗಿತ್ತೆ ? ಹೋಗಲಿ ಈಗ ಕೂಡ ಅವರಿಸ್ಟದಂತೆ ಆ ಹೆಣ್ಣುಮಕ್ಕಳು ಅಲ್ಲಿ ಇದ್ದಾರೆಂದು ನಿಮಗೆ ಅನ್ನಿಸುತ್ತದೆಯೇ? ಆದರೆ ಇಸ್ಟಾದರು ಸಾದ್ಯವಾದ್ದು ದೊಡ್ಡದೇ) ಆ ಹೆಣ್ಣು ಮಕ್ಕಳಲ್ಲಿ ಒಂದೈದಾರು ಮಂದಿಯಾದರೂ ದಿನೇಶ್ ಸರ್ ಮಾತಿನಿಂದ ಪ್ರೇರೇಪಿತರಾಗಿ ಇವರು ಬರೆದಿದ್ದನೆಲ್ಲ ಓದುವ ಕುತೂಹಲಕ್ಕೆ ಸಿಲುಕಿದರೆ ಅದು ತರುವ ಬದಲಾವಣೆ ದೊಡ್ಡದು ನವೀನ್ . ಅದಕ್ಕಾಗಿ ಸರ್ ಅಲ್ಲಿ ಹೋಗಿ ಮಾತಾಡಿದ್ದು ಇಷ್ಟಕಾದರು ಕಾರಣವಾಗಬಲ್ಲದಾದರೆ ಅದು ದೊಡ್ಡ ಬದಲಾವಣೆಯೇ ಎಂಬುದು ನನ್ನ ಸ್ಪಸ್ಟ ಅಭಿಪ್ರಾಯ. `ಮುಸ್ಲಿಂ ಲೇಖಕರ ಸಂಘ ಮತ್ತು ಜಮಾತೆ ಮತ್ತು ಶಾಂತಿ ಪ್ರಕಾಶನ ಎಲ್ಲವು ಒಂದೇ ಬೇರಿನ ಬೇರೆ ಬೇರೆ ಕವಲುಗಳು’ ಎಂದು ನವೀನ್ ಸೂರಿಂಜೆ `ಅಲ್ಲವೇ ಅಲ್ಲ. ನಾನು ಹೋಗಿದ್ದು ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮಕ್ಕೆ ಅದಕ್ಕೂ ಜಮಾತೆಗು ಸಂಬಂಧವೇ ಇಲ್ಲ’ ಎಂದು ದಿನೇಶ್ ಮಟ್ಟು ಹೇಳುತಿದ್ದಾರೆ . ನವೀನ್ ಅವರೆಡರ ನಡುವಿನ ಸಂಬಂದಕ್ಕೆ ಬೇಕಾದ ಸಾಕ್ಷ್ಯಗಳನ್ನು ಇಟ್ಟಿದಾರೆ… ಆದರೆ ದಿನೇಶ್ ಸರ್ ಅವರನ್ನು ಲೇಖಕರ ಸಂಘದ ಕಾರ್ಯಕ್ರಮಕ್ಕೆ ಸಂಘಟಕರು ಕರೆದರು. ಸರ್ ಅಲ್ಲಿಗೆ ಹೋಗಿದಾರೆ ಮಾತಾಡಿ ಬಂದಿದ್ದಾರೆ… ಅಲ್ಲಿ ಜಮಾತೆಯವ್ರ ವಿಷಯ ಬಂದಿಲ್ಲದೇ ಇರೋದ್ರಿಂದ, ಸರ್ ಮುಸ್ಲಿಂ ಲೇಖಕರ ಸಂಘವನ್ನು ಉದ್ದೇಶಿಸಿ ಮಾತಾಡಿದ್ರಿಂದ ಅವರಿಗೆ ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮಕ್ಕೆ ತಾನು ಹೋಗಿದ್ದು ಅಸ್ಟೆ ಎಂಬ ನಂಬಿಕೆ ಇದೆ. ನಾವು ಈಗ ಏನೇ ಸಾಕ್ಷ್ಯಾಧಾರ ಪುರಾವೆಗಳನ್ನು ಒದಗಿಸಿ ಅವೆರಡು ಸಂಸ್ಥೆಗಳು ಒಟ್ಟಿಗಿದಾವೆ ಎಂಬುದನ್ನು ನಿರುಪಿಸಬಹುದು ಆದರೆ ಅವು ಒಂದೇ ಅಲ್ಲ ಎನ್ನುವ ನಂಬಿಕೆಯಿಂದ ದಿನೇಶ ಸರ್ ಅಲ್ಲಿಗೆ ಹೋಗಿ ಮಾತಾಡಿ ಬಂದಮೇಲು ಅದೇ ನಂಬಿಕೆ ಅವರದಾಗಿ ಉಳಿದಿದಿದ್ದರೆ… ಮತ್ತಲ್ಲಿ ಅವರಿಗೆ ಅಂತ ಯಾವ ಪುರಾವೆಗಳು ದೊರೆಯದರಿಂದ ಅವರ ನಂಬಿಕೆ ಸುಳ್ಳು ಎಂದು ನಂಬಿಸುವ ಪ್ರಯತ್ನಕಿಂತ ಅವರ ನಂಬಿಕೆಯನ್ನು ಗೌರವಿಸೋಣ. ಮತ್ತು ಅವರ ನಂಬಿಕೆಯೇ ಸತ್ಯವಾಗಲಿ ಎಂದು ಆಶಿಸೋಣ.

ತೀರ ಸಾಕ್ಷಿಗಳನ್ನು ಹಿಡಿದು ಇಲ್ಲಿ ನೋಡಿ ಇಲ್ಲಿದೆ ಸಾಕ್ಷಿ… ಅಂತೆಲ್ಲ ಮುಖಕ್ಕೆ ಹಿಡಿಯುವ ಕೆಲಸ ಮಾಡುತ್ತಾ ಹೋದರೆ ಅದು ನಿಲ್ಲುವುದೇ ಇಲ್ಲ… ಏನಕ್ಕೂ ಸಾಕ್ಷಿ ಕಲೆ ಹಾಕಬಹುದು ಎಂಬುದು ನಮಗೆಲ್ಲ ನೆನಪಿರಬೇಕು. ಒಬ್ರಿಗೆ ಸಾಕು ನಾನು ಹೇಳುವುದೆಲ್ಲ ಹೇಳಿಯಾಗಿದೆ ಅನಿಸಿದರೆ ಅದಕ್ಕೂ ಅವಕಾಶವಿರಬೇಕು ಮತ್ತು ಇನ್ನೊಬ್ರಿಗೆ ನಾನು ಹೇಳುವುದೇನೋ ಉಳಿದಿದೆ ಅನಿಸಿದರೆ ಅದಕ್ಕೂ ಅವಕಾಶ ಇರಬೇಕು. ಇಬ್ಬರೂ ಪ್ರಬುದ್ದರಾಗಿ ಯೋಚಿಸುವರಿದ್ದಾಗ ಒಬ್ರ ಮೌನವನ್ನು ಇನ್ನೊಬ್ಬರ ಮಾತು ಮುರಿಯುವಂತೆ ಮಾಡಬಾರದು. ಇದು ಇಬ್ಬರು ಪ್ರಬುದ್ಧರ ನಡುವಿನ ಸಂವಾದ. ಈ ಹೊತ್ತಿನ ಅತ್ಯಗತ್ಯ ಕೂಡ. ಆದರೆ ಜಾಸ್ತಿ ಎಳೆದರೆ ಮೂಲ ಉದ್ದೇಶವೇ ಮರೆಯಾಗುವ ಸಾದ್ಯತೆ ಇರುತ್ತದೆ.

ಕೊನೆಯದಾಗಿ ಸಿದ್ದಾಂತದ ಮಡಿವಂತಿಕೆ ಬಿಡಬೇಕೆ ಬೇಡವೇ ಎಂಬುದಕಿಂತ ಮುಖ್ಯವಾಗಿ ನಾವೆಲ್ಲಾ ನಂಬಿರುವ ಪ್ರಗತಿಪರ ಸಿದ್ದಾಂತದ ಪ್ರಸಾರವಾಗಲಿ ಎಂದು ಆಶಿಸುವವಳು ನಾನು. ಯಾಕೆಂದರೆ ಹೆಣ್ಣು ದನಿಯ ಅಭಿವ್ಯಕ್ತಿಗೆ ತಳಹದಿಯೇ ಅದು. ಎಲ್ಲರಿಗೂ ಮಹಿಳಾ ದಿನದ ಶುಭಾಶಯಗಳು.

ಭೈರಪ್ಪನವರ ’ಕವಲು’ ನಾನೇಕೆ ನಿರಾಕರಿಸುತ್ತೇನೆ?


– ರೂಪ ಹಾಸನ


 

[ಇಂದು ಮತ್ತೆ ಮಹಿಳಾ ದಿನಾಚರಣೆ ಬಂದಿದೆ. ಇದು ಮಹಿಳಾ ಬದುಕಿನ ಅವಲೋಕನದ ಜೊತೆಗೆ ಮಹಿಳೆಯೆಡೆಗಿನ ಪುರುಷ ಪ್ರಪಂಚದ ಧೋರಣೆಯ ಅವಲೋಕನವೂ ಆಗಿರುತ್ತದೆಂದು ನಾನು ಭಾವಿಸುತ್ತೇನೆ. ಆ ಹಿನ್ನೆಲೆಯಲ್ಲಿ ಈ ಬರಹ.]

ಕನ್ನಡದ ಹಿರಿಯ ಕಾದಂಬರಿಕಾರರಾದ ಎಸ್.ಎಲ್. ಭೈರಪ್ಪನವರ ಹೊಸ ಕಾದಂಬರಿ ’ಕವಲು’ ವಾರದೊಳಗೆ ನಾಲ್ಕನೆಯ ಮುದ್ರಣ ಕಂಡ ಹಿನ್ನೆಲೆಯಲ್ಲಿ 2010 ಜುಲೈ ಒಂದರಂದು ಪ್ರಜಾವಾಣಿಯಲ್ಲಿ ಅವರ ಕಿರು ಸಂದರ್ಶನ ಪ್ರಕಟವಾಗಿತ್ತು. ಅದರಲ್ಲಿ ಕಾದಂಬರಿಯ ಪಾತ್ರವೊಂದು ’ಓದಿದ ಗಂಡಸರೆಲ್ಲಾ ಹೆಂಗಸರಾಗ್ತಾರೆ. ಓದಿದ ಹೆಂಗಸರೆಲ್ಲಾ ಗಂಡಸರಾಗ್ತಾರೆ. ಗಂಡಸರು ಗಂಡಸರಾಗಿ ಹೆಂಗಸರು ಹೆಂಗಸರಾಗಿ ಇರಬೇಕಾದರೆ ಯಾರೂ ಓದಕೂಡದು’ ಎನ್ನುತ್ತದೆ, ಅದು ಸತ್ಯವೂ ಆಗುತ್ತಿದೆ ಎಂದು ಭೈರಪ್ಪನವರು ಕಳವಳಿಸಿದ್ದರು! ಅದನ್ನು ಓದಿ ಬೆಚ್ಚಿಬಿದ್ದಿದ್ದೆ. bhyrappa-Kavaluಜೊತೆಗೆ ’ಮಹಿಳಾಪರ ಕಾನೂನುಗಳು ಶೇಕಡ 98 ರಷ್ಟು ದುರ್ಬಳಕೆ ಆಗುತ್ತಿವೆ, ಇದರಿಂದ ಇಡೀ ಭಾರತೀಯ ಕುಟುಂಬದಲ್ಲಿ ಆಗುತ್ತಿರುವ ಬದಲಾವಣೆಗಳು, ತಲ್ಲಣಗಳೇ ತಮ್ಮ ಕಾದಂಬರಿಯ ವಸ್ತು’ ಎಂದು ಅವರು ಹೇಳಿದ್ದು ಕೇಳಿ ಉಗ್ರ ಕುತೂಹಲದಿಂದ ಅಂದೇ ಕಷ್ಟಪಟ್ಟು ಪುಸ್ತಕ ಸಂಪಾದಿಸಿ ಎರಡೇ ದಿನಕ್ಕೆ ಕವಲು ಓದಿ ಮುಗಿಸಿದ್ದೆ.

ಪುಸ್ತಕ ಓದಿ ಮುಚ್ಚಿಟ್ಟ ನಂತರ, ಈ ಕಾದಂಬರಿಯಲ್ಲಿ ವಿಶೇಷವೇನಿದೆ? ಎಂದು ಪ್ರಶ್ನಿಸಿಕೊಂಡರೆ ನಿಜಕ್ಕೂ ಅಂಥದ್ದೇನೂ ವಿಶೇಷ ಕಾಣಲಿಲ್ಲ. ಭೈರಪ್ಪನವರ ಮಾಮೂಲಿ ಪುರುಷ ಮೂಲಭೂತವಾದಿ ಮನಸ್ಸಿನ ಪಾರದರ್ಶಕ ದರ್ಶನವಷ್ಟೇ! ಪುಸ್ತಕದಿಂದ ಭೈರಪ್ಪನವರ ಹೆಸರು ತೆಗೆದು ಹಾಕಿದರೆ ಅದೊಂದು ಪೂರ್ವಗ್ರಹ ಪೀಡಿತವಾದ ಮನಸ್ಸಿನ ಯಾರೂ ಬರೆಯಬಹುದಾದ ಸಾಮಾನ್ಯವಾದ ಕಾದಂಬರಿ. ಇಂತಹದ್ದೇ ವಿಷಯದ ಹಲವು ಕಾದಂಬರಿಗಳನ್ನು ಹಲವಾರು ಬರಹಗಾರರು ಈಗಾಗಲೇ ಬರೆದಿದ್ದಾರೆ. ಇಲ್ಲಿ ಭೈರಪ್ಪನವರ ಹೆಗ್ಗಳಿಕೆಯೆಂದರೆ ಮಹಿಳಾಪರ ಕಾನೂನುಗಳನ್ನು ಯಾವ ರೀತಿಯೆಲ್ಲಾ ದುರ್ಬಳಕೆ ಮಾಡಿಕೊಳ್ಳಬಹುದೆಂಬುದರ ಅತ್ಯಂತ ಸೂಕ್ಷ್ಮ ವಿವರಗಳನ್ನೂ ಚೆನ್ನಾಗಿ ಅಧ್ಯಯನ ಮಾಡಿ ತಮ್ಮ ಕಾದಂಬರಿಯಲ್ಲಿ ಚಿತ್ರಿಸಿ, ಅದರ ಅವಶ್ಯಕತೆಯಿರುವ ಹೆಣ್ಣು ಮಕ್ಕಳಿಗೆ ಅನುಕೂಲ ಮಾಡಿದ್ದಾರೆ! ಅದಕ್ಕೆ ಅವರಿಗೆ ಧನ್ಯವಾದ ಹೇಳಬೇಕು.

ಕಾದಂಬರಿಯಲ್ಲಿ ಅವರು ಚಿತ್ರಿಸಿರುವ ಮಹಿಳಾ ಖಳಪಾತ್ರಗಳಂಥಾ ವ್ಯಕ್ತಿಗಳು ನಮ್ಮ ಮಧ್ಯೆ ಇಲ್ಲದಿಲ್ಲ. ಆದರೆ ಅಂಥವರ ಸಂಖ್ಯೆ ಅತ್ಯಲ್ಪ. ನಮ್ಮ ಕಿರುತೆರೆ ಧಾರಾವಾಹಿಗಳಲ್ಲಿ ಭೈರಪ್ಪನವರಿಗಿಂಥಾ ಕೆಟ್ಟದಾಗಿ ಖಳನಾಯಕಿಯರ ಪಾತ್ರಗಳಲ್ಲಿ ಹೆಣ್ಣನ್ನು ಚಿತ್ರಿಸಲಾಗುತ್ತಿದೆ. ನಾವು ಸುಮ್ಮನಿದ್ದೇವೆ. ಏಕೆಂದರೆ ಅದು ಮನರಂಜನೆಗಾಗಿ ಮಾತ್ರ ಎಂಬ ರಿಯಾಯಿತಿಯಿಂದ. ಆದರೆ ’ಕಾಲ್ಪನಿಕ’ವಾದ ಈ ಕವಲು ಕಾದಂಬರಿಯ ಕಥೆ ಹಾಗೂ ಅಲ್ಲಿ ಚಿತ್ರಿತವಾಗಿರುವ ನೆಗೆಟೀವ್ ಸ್ತ್ರೀ ಪಾತ್ರಗಳು ಸುಮ್ಮನೇ ಹುಟ್ಟಿಕೊಂಡವಲ್ಲ. ಅದು ಕೇವಲ ಮನರಂಜನೆಗೆ ಬರೆದ ಕಾದಂಬರಿಯೂ ಅಲ್ಲ. ಅದರ ಹಿಂದೆ ಮಹಿಳಾ ಅರಿವಿನ ವಿಸ್ತರಣೆಯ ವಿರೋಧಿಯಾದ ಒಂದು ಮನಸ್ಸಿದೆ. alva-nudisiri-baraguru-bhairappaಅದು ಮನು ಹೇಳುವಂಥಾ ’ಹೆಣ್ಣು ಕ್ಷೇತ್ರ. ಗಂಡು ಕ್ಷೇತ್ರಾಧಿಪತಿ’ಎಂಬ ನಿಲುವನ್ನು ಅಕ್ಷರಶಃ ಒಪ್ಪಿಕೊಂಡ ಮನಸ್ಸು. ಒಟ್ಟಾರೆ ಭೈರಪ್ಪನವರ ನಿಲುವು, ಕಾದಂಬರಿಯ ಧೋರಣೆ, ಸಂದೇಶಗಳು, ಪೂರ್ವ-ಪರ ಚಿಂತನೆಯಿಲ್ಲದೇ ಆಕ್ರಮಣ ಮಾಡುವ ಸೈನಿಕ ನಿಲುವಿನಿಂದ ಕೂಡಿರುವುದೇ, ಕಾದಂಬರಿ ಕುರಿತು ಚರ್ಚೆಯನ್ನು ಹುಟ್ಟುಹಾಕುವುದಕ್ಕೆ ಮುಖ್ಯ ಕಾರಣವಾಗಿವೆ.

ಇದಕ್ಕೆಲ್ಲಾ ಮುಖ್ಯ ಹೊಣೆಗಾರರು ಭೈರಪ್ಪನವರೇ. ಏಕೆಂದರೆ, ಕಾದಂಬರಿ ಬರೆದು ಅವರು ಸುಮ್ಮನಾಗಿಬಿಡುವುದಿಲ್ಲ. [ಅಥವಾ ಭೈರಪ್ಪ ಫ್ಯಾನ್ ಮತ್ತು ಮಾಧ್ಯಮಗಳು ಅವರು ಸುಮ್ಮನಿರಲು ಬಿಡುವುದಿಲ್ಲ!] ತಮ್ಮ ಕಾದಂಬರಿಯಾಚೆಗೂ ಅವರು ಅಲ್ಲಿನ ಪಾತ್ರಗಳಿಂದ ಹೇಳಿಸಿದ ಮಾತುಗಳನ್ನು ಸಮರ್ಥಿಸಿಕೊಳ್ಳುತ್ತಾರೆ, ಅದನ್ನು ತಮ್ಮ ಚರ್ಚೆಗಳಲ್ಲಿ ಪುಷ್ಟಿಗೊಳಿಸುತ್ತಾರೆ, ತಮ್ಮ ಮೂಗಿನ ನೇರಕ್ಕೇ ಅಂಕಿ ಅಂಶಗಳನ್ನು ಕಲೆ ಹಾಕಿ ತಮ್ಮ ಸೈನಿಕ ಆಕ್ರಮಣದ ವಾದವನ್ನೇ ಅಂತಿಮ ಸತ್ಯವೆಂದು ಪ್ರತಿಪಾದಿಸುತ್ತಾರೆ. [ಹೀಗಾಗಿಯೇ ನಾವೂ ಅವರ ಕಾದಂಬರಿಯಾಚೆಗೆ ಹೋಗಿಯೇ ಅವರ ಇಂತಹ ಏಕಪಕ್ಷೀಯ ವಾದವನ್ನು ವಿಶ್ಲೇಷಿಸಬೇಕಾಗುತ್ತದೆ, ಚರ್ಚಿಸಬೇಕಾಗುತ್ತದೆ.] ಅವರ ಬುದ್ಧಿಪೂರ್ವಕ ಯೋಚನೆ ಹಾಗೂ ಯೋಜನೆಯಂತೆಯೇ ಕಥೆ ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ, ತರ್ಕಬದ್ಧವಾಗಿ ರೂಪಿತವಾಗುತ್ತದೆ. ಮತ್ತು ಅವರು ನಂಬಿರುವ ತತ್ವಕ್ಕನುಗುಣವಾಗಿಯೇ ಅಂತ್ಯ ಕಾಣುತ್ತದೆ. ಅವರ ಕಾದಂಬರಿ ಬಿಡುಗಡೆಗೆ ಮೊದಲೇ ಮಾಧ್ಯಮಗಳು ಕಥೆಯ ವಸ್ತುವನ್ನು ಅತಿ ರಂಜಿಸಿ ಪ್ರಚಾರ ಮಾಡಿಬಿಡುತ್ತವೆ. ತಮ್ಮದೇ ಆದ ಇಂತಹ ಪ್ರಚಾರ ತಂತ್ರ, ಅದರ ಸಮರ್ಥ ನೆಟ್‌ವರ್ಕಿಂಗ್‌ನಿಂದಾಗಿ ಅವರ ಅಭಿಮಾನಿಗಳು ಕಾದಂಬರಿ ಓದಿದರೆ, ಎಲ್ಲಕ್ಕಿಂಥಾ ಮುಖ್ಯವಾಗಿ ಅವರ ಸಮಷ್ಠಿ ಬದಲಾವಣೆಯ ವಿರೋಧಿ ನಿಲುವಿನಿಂದಾಗಿ ಇಷ್ಟವಿರಲೀ ಬಿಡಲಿ, ಅವರ ಅಭಿಮಾನಿಯಿರಲೀ, ವಿರೋಧಿಸುವವರಿರಲಿ ಅವರ ಕಾದಂಬರಿಯನ್ನು ಓದಲೇಬೇಕೆಂಬ ಅನಿವಾರ್ಯ ತುರ್ತು ನನ್ನಂಥವರಿಗೆ ಹುಟ್ಟಿಬಿಡುತ್ತದೆ! [ಹುಟ್ಟಿಸಲಾಗುತ್ತದೆ.] ನಾವು ಮುಖ್ಯವಾಗಿ ವಿರೋಧಿಸಬೇಕಿರುವುದು ಸತ್ಯಕ್ಕೆ ಹಲವು ಮುಖಗಳಿರುವುದನ್ನು ಒಪ್ಪದೇ ಕಾದಂಬರಿಯಲ್ಲಿ ಪ್ರತಿಪಾದಿತವಾಗುವ ತಮ್ಮ ವೈಯಕ್ತಿಕ ನಿಲುವನ್ನೇ ಅಂತಿಮ ಸತ್ಯವೆನ್ನುವಂತೆ ವೈಭವೀಕರಿಸುವ, ಎತ್ತಿಹಿಡಿಯುವ ಭೈರಪ್ಪನವರ ಈ ಮನೋಧರ್ಮವನ್ನು.

ನಾವೂ ವಿನಾಕಾರಣ ಇಂಥಹ ಋಣಾತ್ಮಕ ನೆಲೆಯ ಕಾದಂಬರಿಯ ಕುರಿತು ಚರ್ಚಿಸಿ ಅದರ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತಿದ್ದೇವೇನೋ ಎಂಬ ಆತಂಕ ನನ್ನಂತೆಯೇ ಅನೇಕರನ್ನು ಕಾಡಿರಬಹುದು. ಮಹಿಳೆಯರು ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾಲಿಡಲಾರಂಭಿಸಿದ 70ರ ದಶಕದಿಂದಾ ಇಂದಿನವರೆಗೆ ನಾಲ್ಕು ದಶಕಗಳೇ ಕಳೆದಿವೆ. ಅನೇಕ ಲೇಖಕಿಯರು [ಮಾತ್ರವಲ್ಲ ಲೇಖಕರೂ] ಸ್ತ್ರೀ ಸಂವೇದನೆಯ ನೆಲೆಯಲ್ಲಿ, ಮಹಿಳೆಯ ಅನನ್ಯತೆ, ವಿಭಿನ್ನತೆಯನ್ನು ವಿವಿಧ ಪ್ರಕಾರದ ತಮ್ಮ ಅಭಿವ್ಯಕ್ತಿಯಲ್ಲಿ ಸೂಕ್ಷ್ಮವಾಗಿ, ಅಷ್ಟೇ ವಿವೇಕಯುತವಾಗಿ ಕಟ್ಟಿಕೊಡುತ್ತಾ ಬಂದಿದ್ದಾರೆ. women-gp-membersಅಂತಹ ಬರಹಗಳನ್ನು ಈ ಕವಲು ಕಾದಂಬರಿಗೆ ಮಾಡುತ್ತಿರುವಂತೆ ಸಮಗ್ರವಾಗಿ ವಿಶ್ಲೇಷಿಸಿ, ಚರ್ಚಿಸಿ ಪ್ರೋತ್ಸಾಹಿಸುವಂತಹ ಧನಾತ್ಮಕ ಕೆಲಸವನ್ನು ನಾವೆಲ್ಲಿ ಮಾಡಿದ್ದೇವೆ? ಒಟ್ಟಾರೆಯಾಗಿ ಈ ನಾಲ್ಕು ದಶಕಗಳಲ್ಲಿ ಹೆಣ್ಣಿನ ಅಸ್ಮಿತೆಯನ್ನು ಕಟ್ಟಿಕೊಡುವ ಪ್ರಯತ್ನದ ಮಹಿಳಾ ಅಭಿವ್ಯಕ್ತಿಗೆ ನಾವೇ ಎಲ್ಲಿ ಮಾನ್ಯತೆ ನೀಡಿದ್ದೇವೆ? ಸಮಗ್ರವಾಗಿ ಅಂತಹುದ್ದನ್ನು ದಾಖಲಿಸುವ, ನಮ್ಮಲ್ಲಿಯೂ ಇಂಥಹ ಸಮರ್ಥ ಅಭಿವ್ಯಕ್ತಿಗಳು ಬಂದಿವೆ ಎಂದು ಸಮಾಜಕ್ಕೆ ಕಾಣುವಂತೆ ಅದರ ಎದುರು ಎಲ್ಲಿ ಎತ್ತಿಹಿಡಿದಿದ್ದೇವೆ? ಪ್ರದರ್ಶಿಸಿದ್ದೇವೆ? ಈ ಎಲ್ಲ ಕಾರಣಗಳಿಂದಾಗಿಯೇ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನಮ್ಮ ಇಂತಹಾ ವಿಭಿನ್ನ, ಅನನ್ಯ ಅಭಿವ್ಯಕ್ತಿಗಳು ಸರಿಯಾದ ಕ್ರಮದಲ್ಲಿ ದಾಖಲಾಗದೇ ಉಳಿದುಬಿಟ್ಟವೇ? ಸಕಾರಾತ್ಮಕ ಅಭಿವ್ಯಕ್ತಿಯನ್ನು ಗುರುತಿಸುವ ಕೆಲಸಕ್ಕಿಂಥಾ ನಕಾರಾತ್ಮಕ ಅಭಿವ್ಯಕ್ತಿಯೇ ಸಮಾಜದಿಂದ ಹೆಚ್ಚು ಗುರುತಿಸಲ್ಪಡುತ್ತದೆ ಹಾಗೂ ವಿಜೃಂಭಿಸುತ್ತದೆ ಎಂಬುದು ನಿಜವೇ? ಇದು ಈ ಸಂದರ್ಭದಲ್ಲಿ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಪ್ರಶ್ನೆಗಳು.

’ಓದಿದ ಗಂಡಸರೆಲ್ಲಾ ಹೆಂಗಸರಾಗ್ತಿದ್ದಾರೆ, ಓದಿದ ಹೆಂಗಸರೆಲ್ಲಾ ಗಂಡಸರಾಗ್ತಿದ್ದಾರೆ. ಗಂಡಸರು ಗಂಡಸರಾಗಿ, ಹೆಂಗಸರು ಹೆಂಗಸರಾಗಿ ಇರಬೇಕಾದರೆ ಯಾರೂ ಓದಬಾರದು’ ಎಂಬ ಮಾತೇ ಅತ್ಯಂತ ರೂಕ್ಷವಾದ್ದು. ಅವರ ಇಡೀ ಕಾದಂಬರಿಗೆ ಈ ಮಾತುಗಳೇ ಮೂಲಮಂತ್ರ. ಮೂಲತಃ ಈ ಮಾತೇ ಗಂಡು-ಹೆಣ್ಣಿನ ನಡುವಿನ ಅಸಮಾನತೆಯನ್ನು ಎತ್ತಿಹಿಡಿಯುವಂತದ್ದು. ಪ್ರಕೃತಿಯಲ್ಲಿ ಗಂಡು-ಹೆಣ್ಣು ಸಮಾನಜೀವಿಗಳು. ಜೊತೆಗೆ ಸಹಜೀವಿಗಳು. ಈ ಪ್ರಾಕೃತಿಕ ಸತ್ಯವನ್ನು ಅರ್ಥಮಾಡಿಕೊಂಡು ಸಮಾಜ ನಿರ್ಮಾಣಗೊಂಡರೆ ಅಸಮಾನತೆಯ ನೆಲೆಯ ಯಾವ ಸಮಸ್ಯೆಯೂ ಬರುವುದಿಲ್ಲ. ಗಂಡು-ಹೆಣ್ಣು ಪದಗಳು ಲಿಂಗ ಸೂಚಕವೇ ಹೊರತೂ ನಮ್ಮ ಪುರುಷ ಪ್ರಧಾನ ಸಮಾಜ ನಿರ್ದೇಶಿಸುವಂತೆ ಶ್ರೇಷ್ಟತೆ-ಕನಿಷ್ಟತೆಯ ಸೂಚಕವಲ್ಲ. ಆದರೆ ಭೈರಪ್ಪನವರ ಈ ಕಾದಂಬರಿಯುದ್ದಕ್ಕೂ ಈ ಅಸಮಾನತೆಯ ನೆಲೆಯನ್ನು ವೈಭವೀಕರಿಸುವ ಹಲವಾರು ಉದಾಹರಣೆಗಳು ಹೆಜ್ಜೆ ಹೆಜ್ಜೆಗೂ ಸಿಗುತ್ತಲೇ ಹೋಗುತ್ತದೆ. ಕುಟುಂಬ ವಿಘಟನೆಗೆ ಹೆಣ್ಣಿನ ಬೌದ್ಧಿಕತೆ, ಪ್ರಗತಿಪರತೆ, ಲೈಂಗಿಕ ಸ್ವಾತಂತ್ರ್ಯ, Indian-policewomanವೃತ್ತಿ ಔನತ್ಯದ ಕುರಿತ ದೃಢತೆ ಕಾರಣವೆಂದು ಪ್ರತಿಯೊಂದು ಪಾತ್ರದಿಂದಲೂ ಅತ್ಯಂತ ಜಾಣ್ಮೆಯಿಂದ ನಿರ್ದೇಶಿಸುತ್ತಾ ಬಂದಿದ್ದಾರೆ. ಇಂಥಹಾ ಯಾವ ವೈಚಾರಿಕತೆಯೂ ಇಲ್ಲದ ಹೆಣ್ಣುಮಕ್ಕಳು ಗಂಡಿನ ಅನುಯಾಯಿಗಳಾಗಿ, ಆದರ್ಶ ಸ್ತ್ರೀಯರಾಗಿ ಚಿತ್ರಿತವಾಗಿದ್ದಾರೆ. ಈ ಹೊತ್ತಿನಲ್ಲಿ ಸಮಾನ ಗೌರವದ ಸಮಾಜ ನಿರ್ಮಾಣದ ಕನಸು ಕಾಣುತ್ತಿರುವ ಮಹಿಳೆಯಿಂದ ಓಬೀರಾಯನ ಕಾಲದ ಯಥಾಸ್ಥಿತಿವಾದವನ್ನು ಬಯಸುವ ಪುರುಷ ಶ್ರೇಷ್ಟತೆಯ ಭ್ರಮೆಯಲ್ಲಿರುವ ಗಂಡಿನ ಮನಸ್ಥಿತಿಯೂ ಕಾದಂಬರಿಯಲ್ಲಿ ಢಾಳಾಗಿಯೇ ಅನಾವರಣಗೊಳ್ಳುತ್ತದೆ. ಇದರ ಹಿಂದಿನ ಮನೋಭಾವವು ಒಂದು ಶತಮಾನ ಮಿಕ್ಕಿ ನಡೆದ ಭಾರತ ಸಾತಂತ್ರ್ಯ ಹೋರಾಟ, ಪ್ರಜಾಪ್ರಭುತ್ವದ ಕಲ್ಪನೆ ನಮ್ಮ ಸಂವಿಧಾನ ಮತ್ತು ಮಹಿಳಾ ಹೋರಾಟ ನಡೆದು ಬಂದ ಹಾದಿಯಿಂದ ಒಂದು ಶತಮಾನದಷ್ಟು ಹಿಂದೆ ಸರಿದಿದೆ. ಇಷ್ಟು ಹೇಳಿದರೆ ಸಾಕು ಭೈರಪ್ಪನವರು ಇನ್ನೂ ಎಲ್ಲಿದ್ದಾರೆ ಎಂಬುದು ಅರ್ಥವಾಗಿಬಿಡುತ್ತದೆ.

ಹೆಣ್ಣನ್ನು ಸಂಗಾತಿಯೆಂದು, ಸಹಜೀವಿಯೆಂದು ಮೇಲುನೋಟಕ್ಕೆ ತೋರಿಕೆಯ ನಟನೆಯಾಡುತ್ತಾ ಒಳಗೇ ಪುರುಷ ಪ್ರಭುತ್ವದ ಸ್ಥಾಪಿತ ಮೌಲ್ಯಗಳನ್ನು ಒಪ್ಪಿಕೊಂಡಿರುವ, ಹೊಂದಾಣಿಕೆ ತನ್ನ ನೆಲೆಯಿಂದ ಸಾಧ್ಯವೇ ಇಲ್ಲವೆಂದು ಉದ್ದೇಶಿಸಿರುವ ಗಂಡು ಮನಸ್ಸಿನ ಅಹಂ ಹಾಗು ಮೇಲರಿಮೆಯನ್ನು ಪ್ರಾಮಾಣಿಕವಾಗಿ ಚಿತ್ರಿಸುತ್ತಾ ಕವಲು ಮೂಲಕ ಭೈರಪ್ಪನವರು ತಮ್ಮ ಪುರುಷ ಮೂಲಭೂತವಾದಿ ಮನಸ್ಸಿನ ದರ್ಶನ ಮಾಡಿಸುತ್ತಾರೆ. ಜೊತೆಗೇ, ಅವರು ತಾವು ನಂಬಿದಂತಾ ನಿಲುವನ್ನು ಯಾವುದೇ ಮುಖವಾಡವಿಲ್ಲದೆಯೂ ಪ್ರತಿಪಾದಿಸುತ್ತಾರಲ್ಲ! ಅದಕ್ಕಾಗಿಯಾದರೂ ಅವರನ್ನು ಅಭಿನಂದಿಸಲೇಬೇಕು.

ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಆಗುತ್ತಿರುವ ಪಲ್ಲಟಗಳಿಗೆಲ್ಲಾ ಹೆಣ್ಣನ್ನೇ ಕಾರಣವಾಗಿಸಿರುವ ಮೂಲಸಂಸ್ಕೃತಿರಕ್ಷಕರಾದ ಭೈರಪ್ಪನವರಿಗೆ ನಮ್ಮ ಕುಟುಂಬ ವ್ಯವಸ್ಥೆ ನಿಂತಿರುವುದೇ ಅಸಮಾನತೆಯ ಆಧಾರದ ಮೇಲೆ ಎನ್ನುವ ಅರಿವಿಲ್ಲವೇ? ಇಲ್ಲಿ ಹೆಂಡತಿ ಗಂಡನ ಆಜ್ಞಾನುವರ್ತಿ, Indian Women Paintingsಗೃಹಕೃತ್ಯ ನೋಡಿಕೊಳ್ಳುವ ಪರಿಚಾರಕಿ, ಅವನಿಗೆ ವಿಧೇಯಳಾಗಿರಬೇಕೆಂಬುದೇ ನಿಯಮ. ಮದುವೆಯಾಗಿ ಹೆಣ್ಣು ಗಂಡನ ಮನೆಗೆ ಹೋಗಿ ಅಲ್ಲಿನ ಪರಿಸರವನ್ನೇ ತನ್ನ ಪರಿಸರವೆಂದು ನಂಬಿ ಆ ಕುಟುಂಬದ ಎಲ್ಲ ಜವಾಬ್ದಾರಿಯನ್ನೂ [ಗೃಹಕೃತ್ಯ, ಮನೆವಾರ್ತೆ, ಮಕ್ಕಳ-ವೃದ್ಧರ ಪಾಲನೆ…… ಇತ್ಯಾದಿ] ನಿರ್ವಹಿಸಬೇಕೆಂಬ ಕಟ್ಟುಪಾಡಿನಿಂದ ಮೊದಲುಗೊಳ್ಳುವ ಅಸಮಾನತೆಯ ಹಿಂದೆ ನಮ್ಮ ಪುರುಷ ನಿರ್ಮಿತ ಸಮಾಜ ಹಾಗೂ ಸಂಸ್ಕೃತಿಯ ಏಕಪಕ್ಷೀಯ ಸ್ವಾರ್ಥವಿದೆಯೆಂಬುದನ್ನು ಉದ್ದೇಶಪೂರ್ವಕವಾಗಿ ಮರೆತಿದ್ದಾರೆಯೇ? ಕುಟುಂಬ, ಸಮಾಜ, ನೈತಿಕತೆಯ ಚೌಕಟ್ಟುಗಳನ್ನು ಕಾಲದಿಂದ ಕಾಲಕ್ಕೆ ನಮ್ಮ ಪುರುಷಪ್ರಧಾನ ಸಮಾಜ ತನಗೆ ಬೇಕೆಂದಂತೆ ಬದಲಾಯಿಸಿಕೊಳ್ಳುತ್ತಾ ಹೋಗಿರುವುದು ಚರಿತ್ರೆಯ ಅಧ್ಯಯನಕಾರರೂ ಆಗಿರುವ ಭೈರಪ್ಪನವರಿಗೆ ಹೊಳೆದಿಲ್ಲವೇ? ನಮ್ಮ ಈ ಲೋಕ ರಾಜಕಾರಣವನ್ನು ಮೀರಿ ಪ್ರಕೃತಿ ಸತ್ಯಗಳು ಅತ್ಯಂತ ನಿಗೂಢವೂ, ಸಂಕೀರ್ಣವೂ ಆಗಿರುತ್ತದೆ ಅದನ್ನು ಲೈಂಗಿಕ ಸಂಬಂಧವೊಂದರಿಂದಲೇ ಅಳೆಯಲು ಬರುವುದಿಲ್ಲ. ಜೊತೆಗೆ ಬದಲಾವಣೆ ಬಾಳಿನ ನಿಯಮ. ಅದು ಸರಿಯೋ-ತಪ್ಪೋ ನದಿಯಂತೆ ತನಗೆ ಬೇಕೆಂದಂತೆ ಹರಿಯುತ್ತಾ ಹೋಗುತ್ತದೆ. ನಾವು ಹೀಗೇ ಎಷ್ಟೇ ಬಾಯಿ ಬಡಿದುಕೊಂಡರೂ ಅದರ ದಿಕ್ಕು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಸತ್ಯದ ಬಗೆಗೆ ಭೈರಪ್ಪನವರಿಗೆ ಜಾಣಕುರುಡೇ?

ಸಾಲಂಕೃತಳಾಗದೇ ಸಹಜವಾಗಿರುವ ಹೆಣ್ಣು ಭೈರಪ್ಪನವರಿಗೆ ಸಂವೇದನೆಗಳಿಲ್ಲದ ಸೂತಕದವಳಂತೆ ಕಾಣುತ್ತಾಳೆ. ಸೂತಕ ಎಂದರೆ ಏನು? ಹೊರಗಿನ ಸೂತಕದ ಮಾತನಾಡುವ ಇವರ ಒಳ ಮನಸ್ಸೇ ನಿಜವಾಗಿ ಸೂತಕದ ಮಡು. ಅದನ್ನು ಸಮಾಜಕ್ಕೂ ಆರೋಪಿಸುತ್ತಿರುವುದು ಅವರ ನಿಂತಲ್ಲೇ ನಿಂತು ಕೊಳೆತು ಹೋಗಿರುವ ಮನಸ್ಸಿನ ಸಂಕೇತ. ಹಾಗಿದ್ದರೆ, ಸೀರೆ, ಕುಂಕುಮ, ಹೂವು, ಬಳೆ, ಸರಗಳಿಂದ ಅಲಂಕಾರ ಮಾಡಿಕೊಳ್ಳದ ವಿಶ್ವದ ಬಹು ಸಂಖ್ಯಾತ ಹೆಣ್ಣುಮಕ್ಕಳಿಗೆ, ಹೆಣ್ಣು ಪ್ರಾಣಿಗಳಿಗೆ ಲೈಂಗಿಕ ಸಂವೇದನೆಗಳು ಇರಲು ಸಾಧ್ಯವೇ ಇಲ್ಲ ಎಂದು ಇದರ ಅರ್ಥವೇ? ಭೈರಪ್ಪನವರದು ಅದೆಂಥಾ ಹಾಸ್ಯಾಸ್ಪದ ನಿಲುವು! ಹೆಣ್ಣು ಸದಾ ಪುರುಷ ನಿರ್ಮಿಸಿದ ಸಂಸ್ಕೃತಿಯ ರಕ್ಷಕಳಾಗಿರಬೇಕೇ ಹೊರತು ಅದನ್ನು ತನ್ನ ನೆಲೆಯಿಂದ ನಿರ್ಮಿಸಿದರೆ ಅಪರಾಧವೆಂಬಂಥಾ ಅಲಿಖಿತ ಕಾನೂನನ್ನು, ಇತ್ತೀಚಿನ ಎಚ್ಚೆತ್ತ ಮಹಿಳೆ ಪ್ರತಿಭಟಿಸುತ್ತಿದ್ದಾಳೆ. ಪ್ರಶ್ನಿಸುತ್ತಿದ್ದಾಳೆ. ತಾನೇ ತನ್ನ ವರ್ತಮಾನ ಕಟ್ಟಿಕೊಳ್ಳುವ ಹಾದಿಯಲ್ಲಿ ಸಾಗುತ್ತಿದ್ದಾಳೆ ಎಂಬುದು ಭೈರಪ್ಪನವರಂಥಾ ಮನುವಾದಿಗಳಿಗೆ ನುಂಗಲಾರದ ತುತ್ತಾಗುತ್ತಿದೆಯೇ?

ಮಹಿಳಾಪರ ಕಾನೂನುಗಳು ಶೇಕಡ 98 ರಷ್ಟು ಪ್ರಕರಣಗಳಲ್ಲಿ ದುರ್ಬಳಕೆಯಾಗುತ್ತಿವೆ ಎಂದು ಇತ್ತೀಚೆಗಿನ ಸಂಶೋಧನಾ ವರದಿಯೊಂದನ್ನು ಉಲ್ಲೇಖಿಸಿ ಹೇಳಿರುವ ಅವರ ಮಾತು ಎಷ್ಟು ಸತ್ಯ? ಏಕೆಂದರೆ ನಮ್ಮ ದೇಶದ ಶೇಕಡ 90 ರಷ್ಟು ಮಹಿಳೆಯರಿಗೆ ಕಾನೂನಿನ ಅರಿವಿಲ್ಲದಿರುವುದೇ ಅವರು ಆರ್ಥಿಕವಾಗಿ, ಸಾಮಾಜಿಕವಾಗಿ, ಕೌಟುಂಬಿಕವಾಗಿ ಶೋಷಿತರಾಗುತ್ತಿರುವುದಕ್ಕೆ ಮುಖ್ಯಕಾರಣ ಎನ್ನುತ್ತದೆ ಮತ್ತೊಂದು ಸಂಶೋಧನಾ ವರದಿ. ಹಾಗೆ ಕಾನೂನಿನ ಅರಿವಿರುವ ಬಹಳಷ್ಟು ಮಹಿಳೆಯರೂ ಭಾರತೀಯ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಬದುಕು, ಘನತೆ, ಸಂಬಂಧಗಳ ಆಪ್ತತೆಯನ್ನು ಹರಾಜಿಗಿಟ್ಟು ಕಾನೂನಿನ ಮೊರೆ ಹೋಗುವುದು ಕಡಿಮೆಯೇ. ಬಹಳಷ್ಟು ವಿಚ್ಛೇದನ ಪ್ರಕರಣಗಳಲ್ಲಿ ಕಾನೂನಿನ ರೀತ್ಯ ಜೀವನಾಂಶ ಕೊಡಬೇಕೆಂದು ತೀರ್ಮಾನವಾಗಿದ್ದರೂ, ಕಾನೂನಿನ ಕಣ್ ತಪ್ಪಿಸಿ ಅದನ್ನು ಕೊಡದೇ ತಪ್ಪಿಸಿಕೊಳ್ಳುವ ಪ್ರಸಂಗಗಳೇ ಹೆಚ್ಚಿವೆ. ಕಾನೂನು ತಜ್ಞರು, ಮಹಿಳಾ ಕಾನೂನಿನ ದುರ್ಬಳಕೆಯ ಪ್ರಮಾಣವನ್ನು ಅಧ್ಯಯನ ಹಾಗೂ ಸಂಶೋಧನೆಗಳ ಮೂಲಕ ಸಾಬೀತು ಪಡಿಸಬೇಕಿದೆ. ತನ್ಮೂಲಕ ಭೈರಪ್ಪನವರು ಎತ್ತಿರುವ ಮೂಲಭೂತ ಆಕ್ಷೇಪಣೆಗೆ ಉತ್ತರ ಹುಡುಕುವ ಪ್ರಯತ್ನಗಳಾಗಬೇಕಿವೆ. ಆದರೆ ಇದರ ಜೊತೆಗೇ ಕಾನೂನಿನ ತೆಕ್ಕೆಗೇ ಬರದೇ ತಾರತಮ್ಯ, ಅಸಮಾನತೆ, ದೌರ್ಜನ್ಯಗಳಿಂದ ನಿತ್ಯ ನರಳುತ್ತಿರುವ ಅಸಂಖ್ಯಾತ ಹೆಣ್ಣುಜೀವಗಳ ಸಂಕಟವನ್ನೂ ಅಧ್ಯಯನ ಮಾಡಿ ಸತ್ಯಾಂಶವನ್ನು ಅರಿಯುವ ಪ್ರಯತ್ನಗಳು ನಡೆಯಬೇಕಿದೆ. ಏಕೆಂದರೆ ನಮ್ಮ ಸಂವಿಧಾನಕ್ಕೆ ಬದ್ಧವಾಗಿ ನಡೆಯುವ ಸಂಕಲ್ಪವನ್ನೇನಾದರೂ ಮಾಡಿಕೊಂಡು, ಹೆಣ್ಣಿನ ದೃಷ್ಟಿಯಿಂದ ವಿವೇಚಿಸಿದರೆ, ಆಗ ಪ್ರತಿ ಮನೆಯೂ ಸಂವಿಧಾನವನ್ನು ಉಲ್ಲಂಘಿಸುತ್ತಿರುವುದು ವೇದ್ಯವಾಗುತ್ತದೆ.

ಸಮಾನತೆಯ ಆಧಾರದಲ್ಲಿ ಇಡೀ ಸಮಾಜದ ಒಟ್ಟು ಬೆಳವಣಿಗೆಗೆ ಪೂರಕವಾದ ಆಶಯವನ್ನು ಉಳ್ಳ ವಿಚಾರಗಳು ಮಾತ್ರ ಘನತೆಯುಳ್ಳವೂ ಗೌರವಿಸಲ್ಪಡುವುವು ಆಗಿರುತ್ತವೆ. ಅದಿಲ್ಲದೇ ಅಪವಾದವೆನ್ನುವಂತಾ ಬೆರಳೆಣಿಕೆಯಷ್ಟಿರುವ, bhyrappaಕವಲು ಕಾದಂಬರಿಯಲ್ಲಿ ಪ್ರಸ್ತಾಪಿತವಾದ ಪೂರ್ವಗ್ರಹ ಪೀಡಿತ ಏಕಮುಖ ವೈಯಕ್ತಿಕ ನಿಲುವುಗಳನ್ನೇ ವೈಭವೀಕರಿಸಿದರೆ ಅದು ಸತ್ಯವಾಗಿಬಿಡುವುದಿಲ್ಲ. ಭೈರಪ್ಪನವರು ಮಹಿಳೆಯರ ಅರಿವು ಹಾಗೂ ಜ್ಞಾನಕ್ಕೆ ಹಿಡಿದಿರುವ ಬಂದೂಕಿನ ನಳಿಕೆ, ಪಕ್ಕದ ದೇಶದವರ ಶತ್ರುತ್ವಕ್ಕಿಂಥಲೂ ಅಪಾಯಕಾರಿಯಾದುದು! ಯಾವುದೇ ಪ್ರಬುದ್ಧ ಸಾಹಿತಿ-ಕಲಾವಿದನ ಮಾಗಿದ ವಯಸ್ಸು, ಪ್ರತಿಭೆ, ಕಲೆಗಾರಿಕೆ, ಕಥನ ಕೌಶಲದಿಂದ ಸಮಚಿತ್ತವಾದ, ವಿಶ್ವಾತ್ಮಕ ನಿಲುವಿನ, ಸಾಂಸ್ಕೃತಿಕ ಸೂಕ್ಷ್ಮತೆ ಹಾಗೂ ಮಾನವೀಯ ಸಂವೇದನೆಯ ಅಭಿವ್ಯಕ್ತಿಯನ್ನು ಸಮುದಾಯ ಸದಾ ನಿರೀಕ್ಷಿಸುತ್ತದೆ. ಯಾವುದೇ ಅಭಿವ್ಯಕ್ತಿ ವೈಯಕ್ತಿಕ ನೆಲೆಯದಾದರೂ ಅದಕ್ಕೊಂದು ಸಮಷ್ಟಿ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ ಇಲ್ಲದಿದ್ದರೆ ಅದನ್ನು ನಿರಾಕರಿಸುವ ಹಾಗೂ ತಿರಸ್ಕರಿಸುವುದಕ್ಕಿಂಥಾ ದೊಡ್ಡ ಶಿಕ್ಷೆ ಲೇಖಕನಿಗೆ ಇನ್ನೊಂದಿಲ್ಲ ಎಂಬುದು ನನ್ನ ಭಾವನೆ.