Daily Archives: March 10, 2014

ವಿರೋಧದ ನೆಲೆಗಳು ಮುಸ್ಲಿಮ್ ಮೂಲಭೂತವಾದಕ್ಕೆ ಪ್ರತಿಯಾಗಿ ನಿರ್ಮಾಣಗೊಂಡಿವೆಯೇ?

– ತೇಜ ಸಚಿನ್ ಪೂಜಾರಿ

ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ಮಂಗಳೂರಿನ ಮುಸ್ಲಿಮ್ ಲೇಖಕರ ಸಂಘದ ಕಾರ್‍ಯಕ್ರಮದಲ್ಲಿ teja-sachin-poojaryಭಾಗವಹಿಸಿದ ಹಿನ್ನೆಲೆಯಲ್ಲಿ ನವೀನ್ ಸೂರಿಂಜೆ ಹಾಗೂ ಇರ್ಷಾದ್ ಅವರು ಸಹಜವಾದ ಹಲವು ಪ್ರಶ್ನೆಗಳನ್ನು ವರ್ತಮಾನದ ವೇದಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ. ಅದಕ್ಕೆ ಸಾಕಷ್ಟೂ ಪ್ರತಿಕಿಯೆಗಳೂ ವ್ಯಕ್ತವಾಗಿವೆ. ಚರ್ಚೆಯೂ ನಡೆಯುತ್ತಿದೆ. (ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ.) ಆದರೆ “ಜಾಸ್ತಿ ಎಳೆದರೆ ಮೂಲ ಉದ್ದೇಶವೇ ಮರೆಯಾಗುವ ಸಾಧ್ಯತೆ ಇರುತ್ತದೆ” ಎಂಬ ಆತಂಕ ವ್ಯಕ್ತಪಡಿಸುತ್ತಲೇ ಅಕ್ಷತಾ ಹುಂಚದಕಟ್ಟೆ ಬರೆದ ಲೇಖನ ಮುಂದಕ್ಕೆ ಎಳೆಯಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ.

ಮಟ್ಟು ಅವರು ಪ್ರಸ್ತುತ ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದರ ಕುರಿತು ನವೀನ್ ವ್ಯಕ್ತಪಡಿಸಿದ್ದ ಆತಂಕಗಳನ್ನು ಅವರ ವೈಯಕ್ತಿಕ ಅಸಮಧಾನವೆಂಬಂತೆ ಅಕ್ಷತಾ ಹುಂಚದಕಟ್ಟೆ ಗ್ರಹಿಸಿದ್ದಾರೆ. ಅದು ತಪ್ಪು. ನವೀನ್ ಅಥವಾ ಇರ್ಷಾದ್ ಅಭಿವ್ಯಕ್ತಿಸಿದ ವಿಚಾರಗಳು ಕೇವಲ ಅವರದ್ದಷ್ಟೇ ಅಲ್ಲ; ಕೋಮುವಾದ ಹಾಗೂ ಮೂಲಭೂತವಾದದಂತಹ ಸಮಸ್ಯಗಳಿಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತಿರುವ ಕರಾವಳಿಯ ಹಲವು ಯುವ ಸಾಮಾಜಿಕ ಕಾರ್‍ಯಕರ್ತರ ಅಭಿಪ್ರಾಯವೂ ಆಗಿದೆ. ಸಮೂಹದ ಯೋಚನೆಗೆ ನವೀನ್ ಧ್ವನಿಯಾಗಿದ್ದಾರೆ ಆಷ್ಟೇ. ಹಾಗಿದ್ದೂ ನವೀನ್ ಒಬ್ಬರನ್ನೇ ಕಟಕಟೆಯಲ್ಲಿ ನಿಲ್ಲಿಸುವುದು ಬೌದ್ಧಿಕ ಅಪರಾಧ.

ಅಕ್ಷತಾ ಹುಂಚದಕಟ್ಟೆ ಅವರು ಮುಂದುವರಿದು, “ಒಬ್ರಿಗೆ ಸಾಕು ನಾನು ಹೇಳಿದ್ದೆಲ್ಲಾ ಹೇಳಿಯಾಗಿದೆ ಅನಿಸಿದರೆnaveen-shetty ಅದಕ್ಕೂ ಅವಕಾಶವಿರಬೇಕು ಮತ್ತು ಇನ್ನೊಬ್ರಿಗೆ ನಾನು ಹೇಳುವುದೇನೋ ಉಳಿದಿದೆ ಅನ್ನಿಸಿದರೆ ಅದಕ್ಕೂ ಅವಕಾಶವಿರಬೇಕು” ಅಂದಿದ್ದಾರೆ. ಹೇಳುವ ಹಾಗೂ ಹೇಳದಿರುವ ಸ್ವಾತಂತ್ರ್ಯ ಖಂಡಿತಾ ಎಲ್ಲರಿಗೂ ಅದೆ. ಆದರೆ ಅಕ್ಷತಾ ಹುಂಚದಕಟ್ಟೆ ಅವರ ವಿಚಾರ, ಮಾತು ಅಥವಾ ಮೌನದ ಅಭಿವ್ಯಕ್ತಿಗಳಿಗೆ ಪ್ರತಿಕ್ರಿಯಿಸುವ ಸ್ವಾತಂತ್ರ್ಯವನ್ನೇ ಪ್ರಶ್ನಿಸುವಂತಿದೆ. ನುಡಿದಾತ ಅಥವಾ ನುಡಿಯಲಿರುವಾತ ಬಯಸುತ್ತಾನೋ ಇಲ್ಲವೋ (ಅಥವಾ ಭಾಗಿಯಾಗುತ್ತಾನೋ ಇಲ್ಲವೋ) ಆತನ ಮಾತುಗಳು ಮುಂದಿನ ಚರ್ಚೆಗಳಿಗೆ ದಾರಿ ಮಾಡಿಕೊಡುತ್ತವೆ. ಅದು ಅನಿವಾರ್ಯ ಕೂಡಾ. ಇಲ್ಲದೆ ಹೋದಲಿ, ಕೃತಿಯೊಂದನ್ನು ರಚಿಸಿ “ನಾನು ಹೇಳಿದ್ದೆಲ್ಲಾ ಹೇಳಿಯಾಗಿದೆ”’ ಎಂಬಂತೆ ಸಮ್ಮನಿದ್ದು ಬಿಡುವ ಭೈರಪ್ಪ ಅವರನ್ನೇ ಮತ್ತೆ ಮತ್ತೆ ಎಳೆತಂದು ಅವರು ಎಂದೋ ’ಹೇಳಿಯಾದ’, (ಕವಲೋ ಅವರಣವೋ) ಮಾತುಗಳನ್ನೇ ಮತ್ತೆ ಮತ್ತೆ ಕೆದಕಿ ಚರ್ಚಿಸುವುದಾದರೂ ಯಾತಕ್ಕೆ? ಸಮೂಹದಲ್ಲಿ ನುಡಿ ಹಾಗೂ ನಡೆ ಇವೆರಡೂ ಕ್ರಿಯೆಗಳು ತಮಗೆ ಎದುರಾಗುವ ಅಷ್ಟೂ ಪ್ರತಿಕ್ರಿಯೆಗಳಿಗೆ ಗೌರವ ಸಲ್ಲಿಸುವುದು ಅ ಸಮೂಹದ ಆರೋಗ್ಯ ಹಾಗೂ ಜೀವಂತಿಕೆಗೆ ಅತ್ಯಂತ ಮೂಲಭೂತವಾಗಿರುತ್ತದೆ. ಚರ್ಚೆಯಲ್ಲಿ ಮಟ್ಟು ಅವರು ಭಾಗವಹಿಸುತ್ತಾರೋ ಇಲ್ಲವೋ ಇಲ್ಲಿ ಅದು ಅಪ್ರಸ್ತುತ. ಚರ್ಚೆ ಮಟ್ಟು ಸರ್ ಹಾಗೂ ನವೀನ್ ಇಬ್ಬರನ್ನೂ ಮೀರಿ ಬೆಳೆಯಬೇಕು. ಬೆಳೆಯುತ್ತದೆ ಕೂಡಾ.Mohammad Irshad

ನವೀನ್ ಪ್ರಸ್ತಾಪಿಸಿದ ವಿಚಾರ ಮಟ್ಟು ಅವರು ಮುಸ್ಲೀಮ್ ಲೇಖಕರ ಸಂಘದ ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದು ಸರಿಯೋ ತಪ್ಪೋ ಎಂಬ ತಕ್ಕಡಿ ನಿರ್ಣಯಕ್ಕೆ ಸೀಮಿತವಾದದ್ದಲ್ಲ. ಅದು ಕೋಮುವಾದ ಹಾಗೂ ಮೂಲಭೂತವಾದದಂತಹ ವಿಚಾರಗಳಲ್ಲಿ ಬೌದ್ಧಿಕ ವರ್ಗ ತೋರುತ್ತಿರುವ ನಡವಳಿಕೆಗೆ ಸಂಬಂದಿಸಿದ್ದಾಗಿದೆ. ಅಲ್ಲಿ ಕಂಡುಬರುತ್ತಿರುವ ತರತಮ ಪ್ರಜ್ಞೆಯ ಕುರಿತಾದದ್ದಾಗಿದೆ.

ಮೂಲಭೂತವಾದ ಹಾಗೂ ಕೋಮುವಾದ ಇಂದಿನ ಬಹುದೊಡ್ಡ ಸವಾಲು. ಧರ್ಮಗಳನ್ನಾಶ್ರಯಿಸಿ ಬೆಳೆಯುತ್ತಿರುವ ಮೂಲಭೂತವಾದ ಒಂದೆಡೆ ಅನ್ಯ ಕೋಮಿನ ಜೊತೆಗೆ ಹಿಂಸಾರೂಪದ ಬೀದಿ ಸಂಘರ್ಷಗಳಿಗೆ, ಇನ್ನೊಂದೆಡೆ ಆಂತರಿಕ ನೆಲೆಯಲ್ಲಿ ಧರ್ಮದೊಳಗೇ ಇರುವಂತಹ ದುರ್ಬಲರ ಪೀಡನೆಗೆ ಕಾರಣವಾಗಿದೆ. ಹಿಂದೂ ಹಾಗೂ ಮುಸ್ಲಿಮ್ ಇವೆರಡೂ ಧಾರ್ಮಿಕ ಗುಂಪುಗಳಲ್ಲಿ ಇಂತಹ ಮೂಲಭೂತವಾದಿ ಪ್ರವೃತ್ತಿಗಳು ಪ್ರಧಾನವಾಗಿ ಕಾಣಿಸಿಕೊಳ್ಳುತ್ತಿವೆ. ಕರಾವಳಿ ತೀರದಲ್ಲಂತೂ ಅದರ ವಿರಾಟ್ ರೂಪದ ಪ್ರದರ್ಶನ ಗಳಿಗೆಲೆಕ್ಕದಲ್ಲಿ ನಡೆಯುತ್ತಿದೆ. ಆಯಾ ಧರ್ಮಗಳಲ್ಲಿರುವ ನಿರ್ದಿಷ್ಟ ಗುಂಪುಗಳು ತಮ್ಮ ತಮ್ಮ ಮತಗಳಲ್ಲಿ ಮೂಲಭೂತವಾದಿ ಚಳವಳಿಗಳನ್ನು ಮುನ್ನಡೆಸುತ್ತಿರುವ ವಿಚಾರ ತೀರಾ ದುರ್ಬೀನು ಹಾಕಿಯೇ ನೋಡಬೇಕಾದ ಸತ್ಯವಲ್ಲ. ಅವುಗಳ ರಹಸ್ಯ ಕಾರ್ಯಸೂಚಿಗಳೂ ಕೂಡಾ ಅಷ್ಟೇ ಸ್ಪಷ್ಟ.

ಆದಾಗ್ಯೂ ಅಂತಹ ಮೂಲಭೂತವಾದೀ ಚಳವಳಿಯನ್ನು ಎದುರಿಸುವ, ಅದನ್ನು ಪ್ರಸರಿಸುತ್ತಿರುವ ಗುಂಪುಗಳನ್ನುdinesh-amin-mattu-2 ವಿರೋಧಿಸುವ ಕ್ರಮದಲ್ಲಿ ಮಾತ್ರವೇ ಬಹಳ ಸಮಸ್ಯೆಗಳಿವೆ. ಹಿಂದೂ ಮೂಲಭೂತವಾದದ ಜೊತೆಗೆ ನಿಂತು ಮುಸ್ಲಿಮ್ ಮೂಲಭೂತವಾದವನ್ನು ಖಂಡಿಸುವುದು ಎಷ್ಟರಮಟ್ಟಿಗೆ ಅಸಂಗತವೋ ಮುಸ್ಲಿಮ್ ಮೂಲಭೂತವಾದೀ ವೇದಿಕೆಯಲ್ಲಿ ಆಸೀನರಾಗಿ ಹಿಂದೂ ಕೋಮುವಾದವನ್ನು ಟೀಕಿಸುವುದು ಕೂಡಾ ಅಷ್ಟೇ ಅಸಹಜ. ಒಂದರ ಜೊತೆಗಿನ ಸಾಹಚರ್ಯ ಇನ್ನೊಂದರ ಕಡೆಗಿನ ಟೀಕೆಯನ್ನು ಅಪಮೌಲ್ಯಗೊಳಿಸುತ್ತದೆ. ಆದರೆ ದುರಾದೃಷ್ಟವಶಾತ್ ಇಂತಹ ಬೇಜವಾಬ್ದಾರಿ ನಡವಳಿಕೆಗಳು ನಮ್ಮ ಪ್ರಗತಿಪರ ವರ್ಗದಲ್ಲಿ ಥರೇವಾರಿ ಕಾಣಿಸಿಕೊಳ್ಳುತ್ತಿವೆ. ನವೀನ್ ಅಥವಾ ಇರ್ಷಾದ್ ಪ್ರತಿನಿಧಿಸುವ ಆತಂಕ ಇದೇ ಆಗಿದೆ.

ಹಿಂದೂ ಮೂಲಭೂತವಾದವನ್ನು ತಿರಸ್ಕರಿಸಲು ಬೌದ್ಧಿಕ ವಲಯ ಸ್ಪಷ್ಟವಾದ ಒಂದು ವೇದಿಕೆಯನ್ನು ಈಗಾಗಲೇ ಸಿದ್ಧಗೊಳಿಸಿದೆ. ಅದರ ಅಷ್ಟೂ ಆಯಾಮಗಳನ್ನು ಗುರುತಿಸಿ ಅದಕ್ಕೆ ಸೈದ್ಧಾಂತಿಕ ವಿರೋಧದ ನೆಲೆಗಳನ್ನು ಗಟ್ಟಿಗೊಳಿಸಿದೆ. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಆಚರಣೆ ಹೀಗೇ ಎಲ್ಲೆಲ್ಲಿ ಮೂಲಭೂತವಾದದ ಸುಳಿವು ಕಾಣಿಸಿಕೊಳ್ಳುತ್ತಿದೆಯೋ ಅಲ್ಲೆಲ್ಲಾ ಅದನ್ನು ಖಂಡಿಸುವ ಕ್ರಿಯೆಗಳು akshatha-hunchadakatteಅಟೋಮ್ಯಾಟಿಕ್ ಅನ್ನಿಸುವಂತೆ ನಡೆಯುತ್ತಿವೆ. ’ಸಂಘ ಪರಿವಾರ’ ಪರಿಕಲ್ಪನೆಯ ಅಡಿಯಲ್ಲಿ ಹಿಂದೂ ಮೂಲಭೂತವಾದವನ್ನು ಸಮಗ್ರವಾಗಿ ಹಿಡಿದಿಡುವ, ಅದಕ್ಕೆ ಪ್ರತಿಕ್ರಿಯಿಸುವ ನೆಲೆಯನ್ನು ಬುದ್ಧಿಜೀವಿ ವರ್ಗ ಸಾಧಿಸಿದೆ. ಇದು ತುರ್ತು ಅನಿವಾರ್ಯವಾಗಿದ್ದ ಬೆಳವಣಿಗೆ. ಅದರಲ್ಲಿ ನಮ್ಮ ಪ್ರಗತಿಪರ ಗುಂಪುಗಳು ಯಶಸ್ಸು ಕಂಡಿವೆ.

ಆದರೆ ಇಂತಹದ್ದೇ ವಿರೋಧದ ನೆಲೆಗಳು ಮುಸ್ಲಿಮ್ ಮೂಲಭೂತವಾದಕ್ಕೆ ಪ್ರತಿಯಾಗಿ ನಿರ್ಮಾಣಗೊಂಡಿದೆಯೇ? ಸಮಸ್ಯೆ ಇರುವುದು ಇಲ್ಲೇ. ನಮ್ಮ ಬೌದ್ಧಿಕ ವರ್ಗ ಮುಸ್ಲಿಮ್ ಸಮುದಾಯದಲ್ಲಿ ಮೂಲಭೂತದದ ಬೀಜಗಳನ್ನು ಬಿತ್ತುತ್ತಿರುವ ಗುಂಪುಗಳು ಅಥವಾ ಸಂಘಟನೆಗಳ ಬಗ್ಗೆ ಸ್ಪಷ್ಟತೆಯನ್ನು ಇನ್ನೂ ಹೊಂದಿಲ್ಲ. ಅದು ಮುಸ್ಲಿಮ್ ಮೂಲಭೂತವಾದವನ್ನು ಪರಸ್ಪರ ತಿಳಿಯದ ಯಾರೋ ವ್ಯಕ್ತಿಗಳು ಅಥವಾ ಅದೆಲ್ಲಿಂದಲೋ ಬಂದ ಅಲೆಯೊಂದು ಸೃಷ್ಟಿಸಿದ ವಿದ್ಯಮಾನವೆಂಬಂತೆ ಗ್ರಹಿಸುತ್ತಿದೆ. ಹೀಗಾಗಿ ಮೂಲಭೂತವಾದದ ಪ್ರಸರಣಕ್ಕೆ ಸಂಘಟನೆಗಳ ಮಟ್ಟದಲ್ಲಿ ನಡೆಯುತ್ತಿರುವ ವ್ಯವಸ್ಥಿತವಾದ ಪಿತೂರಿಗಳನ್ನು ಒಪ್ಪುವ ಮನಸ್ಥಿತಿಯಲ್ಲಿ ಅದು ಇಲ್ಲ.

ಸಾಮಾನ್ಯವಾಗಿ ಸಾಂಪ್ರದಾಯಿಕ ಸ್ವರೂಪದ ಸಮಾಜಗಳಲ್ಲಿ ಅಲ್ಪಸಂಖ್ಯಾತ ಗುಂಪುಗಳ ಮೂಲಭೂತ ಆಚರಣೆಗಳಿಗೆಯೇ ಹಲವು ಅಡ್ಡಿಗಳಿರುತ್ತವೆ. ಇನ್ನೊಂದು ಸಾಂಸ್ಕೃತಿಕ ಅಸ್ಮಿತೆಯ ಬಗೆಗಿನ ಅರಿವಿನ ಕೊರತೆ ಅಥವಾ ಪುರೋಗಾಮಿ ಆಧುನಿಕ ವಿಚಾರಧಾರೆಗಳ ಪ್ರಸರಣದ ಕೊರತೆ ಅಂತಹ ಅಡ್ಡಿಗಳನ್ನು ಸೃಷ್ಟಿಸುತ್ತವೆ. ಇಂತಹ ಸನ್ನಿವೇಶದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಸಾಧನೆಯ ನಿಟ್ಟಿನಲ್ಲಿ ಆಯಾ ಸಮಾಜದ ಪ್ರಗತಿಪರ ವರ್ಗಗಳು ಅಲ್ಪಸಂಖ್ಯಾತ ಸಮುದಾಯಗಳೊಳಗಿನ ಗುಂಪುಗಳ ಜೊತೆಗೆ ನಿಲ್ಲುವುದು ಅವಶ್ಯವಾಗಿರುತ್ತದೆ. ಹಾಗೇ ಬೆಂಬಲ ಪಡೆದುಕೊಳ್ಳುವ ಗುಂಪುಗಳು ಬಹುಮಟ್ಟಿಗೆ ಸಂಪ್ರದಾಯ ಶರಣ ವರ್ಗಗಳೇ ಆಗಿರುತ್ತವೆ. jamate-mangaloreಬೌದ್ಧಿಕ ವರ್ಗದ ನೆಲೆಯಲ್ಲಿ ಇದು ಆರಂಭಿಕ ಸ್ವರೂಪದ ಕ್ರಿಯಾಶೀಲತೆಯಾಗಿರುತ್ತದೆ. ಹಾಗೆಯೇ ತರುವಾಯದ ಹಂತದಲ್ಲಿ ಸಮಾಜದ ಬುದ್ಧಿಜೀವಿ ವಲಯ ಅಲ್ಪಸಂಖ್ಯಾತ ಸಮುದಾಯಗಳ ಪ್ರಗತಿಪರ ಗುಂಪುಗಳ ಜೊತೆಗೆ ಗುರುತಿಸಿಕೊಳ್ಳುವುದು ಅದರ ಆರಂಭಿಕ ಸ್ವರೂಪದ ಕ್ರಿಯಾಶೀಲತೆಯ ತಾತ್ವಿಕ ಮುಂದುವರಿಕೆಯಾಗಿರುತ್ತದೆ. ಇಲ್ಲದೆ ಹೋದಲ್ಲಿ ಆರಂಭದಲ್ಲಿ ಬೆಂಬಲ ಪಡೆದುಕೊಳ್ಳುವ ಸಂಪ್ರದಾಯ ಶರಣ ಗುಂಪುಗಳು ಕ್ರಮೇಣ ಒಳಗೂ ಹೊರಗೂ ಘಾತಕವಾಗಿ ಬೆಳೆಯುತ್ತವೆ.

ಆದರೆ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಂಬಂದಿಸಿದಂತೆ ಅಂತಹ ಎರಡನೆಯ ಹಂತದ ಕ್ರಿಯಾಶೀಲತೆಯು ನಮ್ಮ ಬೌದ್ಧಿಕ ವಲಯದಲ್ಲಿ ಸಹಜವಾಗಿ ಕಾಣಿಸಿಕೊಳ್ಳುತ್ತಿದೆಯೇ? ಇಲ್ಲ ಅನ್ನುವುದೇ ನಮ್ಮ ಸಾಮಾಜಿಕ ಸಂದರ್ಭದ ದೊಡ್ಡ ದುರ್ದೈವ. ಹೀಗಾಗಿ ಮುಸ್ಲಿಮ್ ಮೂಲಭೂತವಾದೀ ಗುಂಪುಗಳ ಜೊತೆಗೆ ಅದು ಮತ್ತೆ ಮತ್ತೆ ಅಸೋಸಿಯೇಟ್ ಆಗುತ್ತಿದೆ. ಒಂದು ಗುಂಪಿನ ಮೂಲಭೂತವಾದವನ್ನು ಅಪ್ಪಿಕೊಂಡು ಇನ್ನೊಂದು ಗುಂಪಿನ ಮೂಲಭೂತವಾದವನ್ನು ರಿಜೆಕ್ಟ್ ಮಾಡುವ ಅತಿರೇಕದ ನಡೆಗಳನ್ನು ಅದು ಅನುಸರಿಸುತ್ತಿದೆ.

ಇಂತಹ ದ್ವಂಧ್ವ ನಿಲುವುಗಳು ತಳಮಟ್ಟದಲ್ಲಿ ಕ್ರಿಯಾಶೀಲವಾಗಿರುವ ಕಾರ್ಯಕರ್ತರನ್ನು ಇಕ್ಕಟ್ಟಿಗೆ ಸಿಲುಕಿಸುತ್ತವೆ. ಬಹುಸಂಖ್ಯಾತ ಸಮಾಜದ ಮೂಲಭೂತವಾದವನ್ನು ಶ್ರೀಸಾಮಾನ್ಯರ ಮಟ್ಟದಲ್ಲಿ ಎದುರಿಸಲು ಪ್ರಯತ್ನಿಸುವ ಅವರು ಜನರ ನಡುವೆ ವಿಶ್ವಾಸದ ಕೊರತೆಯನ್ನು ಅನುಭವಿಸುತ್ತಾರೆ. ಹೀಗೆ, ವಿಚಾರವಾದಿ, ಪ್ರಗತಿಪರ, ಸೆಕ್ಯುಲರಿಸ್ಟ್ ಅಥವಾ ಬುದ್ಧಿಜೀವಿ ಮೊದಲಾದ ಐಡೆಂಟಿಟಿಗಳು ಗೌರವ ಕಳೆದುಕೊಳ್ಳುವಲ್ಲಿ, ಮುಲಭೂತವಾದದ ಸ್ಥಾನದಲ್ಲಿ ಅವುಗಳೇ ಟೀಕೆಗಳಿಗೆ ಗುರಿಯಾಗುತ್ತಿರುವುದರಲ್ಲಿ ಇತರೆ ಅಂಶಗಳ ಜೊತೆಗೆ ನಮ್ಮ ಬೌದ್ಧಿಕ ವಲಯದ ಪಾತ್ರವೂ ಇದೆ.

ನವೀನ್ ಹಾಗೂ ಅವರ ಸಂಗಾತಿಗಳು ಪ್ರಸ್ತಾಪಿಸುತ್ತಿರುವ ವಿಚಾರ, ಎದುರಿಸುತ್ತಿರುವ ಸಮಸ್ಯೆ ಇದೇ ಆಗಿದೆ. ಮೂಲಭೂತವಾದದಲ್ಲಿ ಒಳ್ಳೆಯ ಅಥವಾ ಕೆಟ್ಟ ಮೂಲಭೂತವಾದಗಳು, ಅಪಾಯಕಾರಿ ಅಥವಾ ನಿರುಪದ್ರವಿ, ಜಸ್ಟಿಫೈಡ್ ಅಥವಾ ಅನ್ ಜಸ್ಟಿಫೈಡ್ ಮೂಲಭೂತವಾದಗಳು ಹೀಗೆ ವಿಂಗಡನೆ ಮಾಡುವಂತದ್ದು ನಿಜಕ್ಕೂ ಅಘಾತಕಾರಿ ಬೆಳವಣಿಗೆ. ಅಷ್ಟೂ ಮೂಲಭೂತವಾದಿ ಚಳುವಳಿಗಳನ್ನು ಏಕಪ್ರಕಾರದ ಅಸ್ಖಲಿತ ತತ್ವ ನಿಷ್ಠೆಯಿಂದ ಎದುರಿಸಬೇಕಾಗಿದೆ. ಇದು ಸದ್ಯದ ಅನಿವಾರ್ಯತೆ ಕೂಡಾ.