Daily Archives: March 17, 2014

‘ಇಲ್ಲಿ ಯಾರೂ ನೆಟ್ಟಗಿಲ್ಲ’ ಎಂಬ ಸಿನಿಕತನ ಮತ್ತು ಮತದಾನ


– ಡಾ.ಎಸ್.ಬಿ. ಜೋಗುರ


 

‘ಈ ಪ್ರಜಾರಾಜ್ಯದಲಿ ತರತರದ ಆಟ
ನೂರು ಸಲ ಹೋದರೂ ಸಿಗಲಿಲ್ಲ ಕೋಟಾ
ಆಮೇಲೆ ಒಂದು ದಿನ ನೀಡಿದರು ಕಾಳು.
ಮನೆಗೊಯ್ದು ನೋಡಿದರೆ ಸಂಪೂರ್ಣ ಹಾಳು’
– ದಿನಕರ ದೇಸಾಯಿ

ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಅಲ್ಲಿ ಕಂಡುಬರುವ ಅನೇಕ ಬಗೆಯ ರಾಜಕೀಯ ಸ್ಥಿತ್ಯಂತರಗಳು ನೈತಿಕವಾಗಿ ಹದಗೆಡುತ್ತಾ ಬಂದ ರಾಜಕೀಯ ಸನ್ನಿವೇಶವನ್ನು ಅನಾವರಣಗೊಳಿಸುವ ಜೊತೆಜೊತೆಗೆ ಮೌಲ್ಯಾಧಾರಿತ ರಾಜಕೀಯ ಎನ್ನುವುದು ಹೇಗೆ ಕುಸಿದು ಅಪಮೌಲೀಕರಣದ ಸಹವಾಸದಲ್ಲಿಯೇ ಸುಖ ಅನುಭವಿಸುವ ಖಯಾಲಿಯಾಗಿ ಪರಿಣಮಿಸಿದೆ ಎನ್ನುವ ಒಂದು ಸ್ಥೂಲ ನೋಟವೊಂದನ್ನು ನಮಗೆ ಪರಿಚಯಿಸುತ್ತವೆ. ಅದನ್ನೇ ಈ ಕಾಲಮಾನದ ವಿಪ್ಲವ ಮತ್ತು ವಾಸ್ತವ ಎಂಬಂತೆ ಬಿಂಬಿಸಲಾಗುತ್ತಿದೆ. ಎಂಬತ್ತರ ದಶಕದ ಮುಂಚಿನ ಅರ್ಧದಷ್ಟಾದರೂ ರಾಜಕೀಯ ಪ್ರಭೃತಿಗಳು ತಕ್ಕ ಮಟ್ಟಿಗಾದರೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುವ ನಿಟ್ಟಿನಲ್ಲಿ ತಮ್ಮ ರಾಜಕೀಯ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದರು. ಎಂಬತ್ತರ ದಶಕದ ನಂತರ ರಾಜಕಾರಣವೆನ್ನುವುದು ಮೌಲ್ಯ ಮತ್ತು ನೈತಿಕತೆಯ ಸಹವಾಸದಿಂದ ಗಾವುದ ಗಾವುದ ದೂರ ಎನ್ನುವ ಹಾಗೆ ಮಾರ್ಪಟ್ಟಿದ್ದು ದೊಡ್ಡ ವಿಷಾದ. ಆನಂತರದ ದಿನಗಳಲ್ಲಿ ‘ನೈತಿಕ ಅಧ:ಪತನದ ಮಾರ್ಗದಲ್ಲಿ ನಡೆದು, ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಅಣಕಿಸುವ ಹಾಗೆ ರಾಜಕಾರಣ ಮಾಡುವವರು ಮಾತ್ರ ಇಲ್ಲಿ ಸಲ್ಲುತ್ತಾರೆ’ ಎನ್ನುವಷ್ಟರ ಮಟ್ಟಿಗೆ ರಾಜಕೀಯ ಪರಿಸರ ಕಲುಷಿತಗೊಂಡದ್ದು ಈ ದೇಶದ ಬಹುದೊಡ್ಡ ದುರಂತ. ಸ್ವಾತಂತ್ರ್ಯ ಹೋರಾಟದ ಯಾವ ಗಂಧ-ಗಾಳಿಯ ಸೋಂಕಿಲ್ಲದ ವರ್ತಮಾನದ ಕೆಲ ರಾಜಕಾರಣಿಗಳು ಬ್ರಹ್ಮಾಂಡ ಭ್ರಷ್ಟ ವ್ಯವಸ್ಥೆಯನ್ನು ರೂಪಿಸುವ ಮೂಲಕ ‘ನಮಗೆ ಸ್ವಾತಂತ್ರ್ಯ ಸಿಕ್ಕಿದ್ದೇ ತಪ್ಪಾಯಿತಲ್ಲ’ ಎನ್ನುವ ಹತಾಶೆಯ ಭಾವನೆ ಶ್ರೀಸಾಮಾನ್ಯರಲ್ಲಿ ಮೂಡುವಂತೆ ಮಾಡಿದ್ದಾರೆ.

ರಾಜಕಾರಣ ಎನ್ನುವುದು ಒಂದು ಮೌಲಿಕವಾದ ಕೆಲಸ ಎನ್ನುವ ಭಾವನೆ, ಅಭಿಪ್ರಾಯಗಳನ್ನು ದಾಟಿ ನಾವು ಹಿಂದೆ ಹೊರಳಿ ನೋಡಲಾಗದಷ್ಟು ದೂರವನ್ನು ಕ್ರಮಿಸಿದ್ದೇವೆ. ಗಂಭೀರವಾದ ತಾತ್ವಿಕವಾದ, ಬದ್ಧತೆಯನ್ನಿಟ್ಟುಕೊಂಡು ಮಾಡಬಹುದಾದ ರಾಜಕಾರಣ ಮತ್ತು ರಾಜಕಾರಣಿಗಳನ್ನು ನೋಡುವುದೇ ತೀರಾ ಅಪರೂಪ ಮತ್ತು ದುಸ್ತರ ಎನ್ನುವ ಸಂದರ್ಭದಲ್ಲಿ ಇವತ್ತು ನಾವಿದ್ದೇವೆ. ಮತದಾರ ಇಂದು ಸರಿ ತಪ್ಪುಗಳ, ಯುಕ್ತಾಯುಕ್ತತೆಯ ತೀರ್ಮಾನಗಳ ಬಗ್ಗೆಯೇ ಗೊಂದಲದಲ್ಲಿದ್ದಾನೆ. ಒಳ್ಳೆಯವರಿಗೆ ಇದು ಕಾಲವಲ್ಲ ಎಂದು ಹೇಳುತ್ತಲೇ ಮತದಾನ ಮಾಡಬೇಕಾದ ಸಂದಿಗ್ದತೆಯ ನಡುವೆ, ಎಂಥವನನ್ನು ನಮ್ಮ ಜನನಾಯಕನನ್ನಾಗಿ ಆಯ್ಕೆ ಮಾಡಬೇಕು ಎನ್ನುವುದೇ ಬಹುದೊಡ್ಡ ಸಮಸ್ಯೆಯಾಗಿದೆ.

ಹಿಂದೊಮ್ಮೆ ಫಿಲಿಪೈನ್ಸ್ ದೇಶದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಏರ್ಪಟ್ಟಿತ್ತು. ಅನೇಕರು ಕಣದಲ್ಲಿದ್ದರೂ ಮುಖ್ಯವಾಗಿ ಸ್ಪರ್ಧೆ ಇದ್ದದ್ದು ಚಿತ್ರನಟ ಜೊಶೆಫ್ ಎಷ್ಟ್ರಾಡಾ ಮತ್ತು ರೇ ಬ್ಯಾಗೆತ್ ಸಿಂಗ್ ನಡುವೆ. ಬ್ಯಾಗೆತ್ ಸಿಂಗ್ ಚುನಾವಣಾ ಭಾಷಣವೊಂದರಲ್ಲಿ ಜೊಶೆಫ್ ಎಷ್ಟ್ರಾಡಾ ಅವರ ಪೆದ್ದುತನ, ಮೊಂಡುತನ ಮತ್ತು ಇತರೆ ದೌರ್ಬಲ್ಯಗಳನ್ನು ಕುರಿತಂತೆ ತುಂಬಿದ ಸಭೆಯಲ್ಲಿ ಭಾಷಣ ಮಾಡುತ್ತಾ ಹೀಗೆ ಕೇಳಿದನಂತೆ

‘ಅತ್ಯಂತ ದೊಡ್ದ ವ್ಯಭಿಚಾರಿ ಯಾರು..? ಜನರು ಜೋರಾಗಿ
‘ಜೊಶೆಫ್ ಎಷ್ಟ್ರಾಡಾ’
‘ಮಹಾ ಜೂಜುಕೋರ ಯಾರು..? ಎಂದು ಕೇಳಿದ್ದಕ್ಕೆ  ಜನ ಇನ್ನೂ ಜೋರಾಗಿ
‘ಜೊಶೆಫ್ ಎಷ್ಟ್ರಾಡಾ’ ಎಂದರಂತೆ
‘ದೊಡ್ಡ ಪೆದ್ದ ಯಾರು..?’
‘ಜೊಶೆಫ್ ಎಷ್ಟ್ರಾಡಾ’
‘ಹಾಗಾದರೆ ನೀವು ಮತ ಹಾಕುವುದು ಯಾರಿಗೆ..?’ ಎಂದಾಗ ಜನ ಅಷ್ಟೇ ಜೋರಾಗಿ
‘ಜೊಶೆಫ್ ಎಷ್ಟ್ರಾಡಾ’ ಎಂದರಂತೆ

ನಮ್ಮ ಜನರ ಪರಿಸ್ಥಿತಿಯೂ ಹೀಗೇ ಆಗಿದೆ. ಅಭ್ಯರ್ಥಿಯ ಪೂರ್ವಾಪರಗಳ ಬಗ್ಗೆ ಪೂರ್ಣ ಅರಿವಿದ್ದರೂ ಚುನಾವಣೆಯ ಸಂದರ್ಭದಲ್ಲಿ ಅವರು ಸಮೂಹ ಸನ್ನಿಗೆ ಒಳಗಾಗುತ್ತಿದ್ದಾರೆ. ತೀರಾ ಸಾತ್ವಿಕನಾದವನು, ಶುದ್ಧ ಹಸ್ತನು ರಾಜಕೀಯ ಅಖಾಡದಲ್ಲಿ ಇರುವದನ್ನು ಸದ್ಯದ ರಾಜಕೀಯ ಪರಿಸರವೇ ಸಹಿಸುವದಿಲ್ಲ ಎನ್ನುವ ವಾಸ್ತವವನ್ನು ನಾವು ಮರೆಯುವದಾದರೂ ಹೇಗೆ? ಒಂದು 1ಅವಧಿಗೆ ಎಂ.ಎಲ್.ಎ. ಆದರೂ ಸಾಕು ಕೋಟಿಗಟ್ಟಲೆ ಹಣ ಕಮಾಯಿಸುವ ಇವರ ದುಡಿಮೆಯಾದರೂ ಎಂಥದ್ದು? ಎನ್ನುವ ಪ್ರಶ್ನೆ ನಮ್ಮ ಜನಸಾಮಾನ್ಯನ ಒತ್ತಡದ ಬದುಕಿನ ನಡುವೆ ಉದ್ಭವವಾಗುವುದೇ ಇಲ್ಲ. ಇದೇ ಪರಮಭ್ರಷ್ಟ ರಾಜಕಾರಣಿಗಳಿಗೆ ವರವಾಗುತ್ತಿದೆ. ಇಂದು ಬಹುತೇಕ ರಾಜಕಾರಣಿಗಳು ನಮ್ಮ ಜನಸಮುದಾಯವನ್ನು ದುಡಿಮೆಯಿಂದ ವಂಚಿಸುವ ಜೊತೆಗೆ ಅವರನ್ನು ಆಲಸಿಗಳನ್ನಾಗಿಸುವ, ಪರಾವಲಂಬಿ ಪ್ರಜೆಗಳನ್ನಾಗಿಸುವ ಸಕಲ ಷಂಡ್ಯಂತ್ರಗಳನ್ನೂ ಹೊಸೆಯುತ್ತಿದ್ದಾರೆ. ಆ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯನ್ನು ದಿವಾಳಿ ಎಬ್ಬಿಸುವ ದಿವಾಳಿಕೋರತನದ ನೀತಿ ಇಂದಿನ ರಾಜಕಾರಣಿಗಳ ತಲೆ ಹೊಕ್ಕಂತಿದೆ.ಇಂದು ನಾವು ಯಾರಿಗೆ ಮತ ನೀಡಬೇಕು ಎನ್ನುವುದೇ ಅತ್ಯಂತ ಜಟಿಲವಾದ ಪ್ರಶ್ನೆ. ಎರಡು ದಶಕಗಳ ಹಿಂದೆ ನಮ್ಮ ಎದುರಲ್ಲಿ ಕೊನೆಯ ಪಕ್ಷ ಆಯ್ಕೆಗಳಾದರೂ ಇದ್ದವು. ಈಗ ಹಾಗಿಲ್ಲ. ನೀವು ಎಷ್ಟೇ  ವಿವೇಚಿಸಿ ಮತದಾನ ಮಾಡಿದರೂ ನಿಮ್ಮ ಜನನಾಯಕ ಬ್ರಹ್ಮಾಂಡ ಭ್ರಷ್ಟ ಎನ್ನುವುದು ಆಯ್ಕೆಯಾದ ಕೆಲವೇ ತಿಂಗಳಲ್ಲಿ ಬಟಾಬಯಲಾಗಿ ನಾವೇ ಪಶ್ಚಾತ್ತಾಪ ಪಡುವ ಸ್ಥಿತಿ ಎದುರಾಗುತ್ತದೆ.

ಪ್ಲೇಟೊ ಮೊದಲಾದ ದಾರ್ಶನಿಕರು ಆದರ್ಶ ರಾಜ್ಯದ ನಿರ್ಮಾಣದ ಬಗ್ಗೆ ಮಾತನಾಡುವಾಗ ರಾಜಕೀಯ ನಾಯಕರಾಗುವವರು ತತ್ವಜ್ಞಾನಿಗಳಾಗಿರಬೇಕು ಇಲ್ಲವೇ ತತ್ವಜ್ಞಾನಿಗಳಾದವರು ರಾಜರಾಗಬೇಕು ಎಂದಿದ್ದರು. ಇಂಥಾ ಯಾವುದೇ ಮಾನದಂಡಗಳು ನಮ್ಮಲ್ಲಿಲ್ಲ. ಅವನು ಶತಪಟಿಂಗ, ಶತದಡ್ಡ ಇಂಥಾ ನೂರಾರು ಶತ ಅನಿಷ್ಟಗಳ ನಡುವೆಯೂ ಆತ ಆಯ್ಕೆಯಾಗುವ ಸಾಧ್ಯತೆಗಳಿವೆ. ನಮ್ಮಲ್ಲಿ ರಾಜಕಾರಣಿಯಾಗಲು ಕನಿಷ್ಟ ವಿದ್ಯಾರ್ಹತೆ ಇಲ್ಲ, ನಿವೃತ್ತಿಯ ವಯಸ್ಸಿಲ್ಲ. ಅವನಿಗೆ ನಡೆದಾಡಲಾಗದಿದ್ದರೂ ಅವನು ನಮ್ಮ ಜನನಾಯಕ. ಕೋಟಿ ಕೋಟಿ ಕಮಾಯಿಸಿದರೂ ಯಾರೂ ಕಿಮಿಕ್ ಅನ್ನುವಂತಿಲ್ಲ. ಇಂಥಾ ಪರಿಸರದ ನಡುವೆ ರಾಜಕಾರಣಿಯಾಗುವುದು ಯಾರಿಗೆ ಬೇಡ? ಜಾಗತೀಕರಣದ ಸಂದರ್ಭದಲ್ಲಿ ಮುಕ್ತ ಮಾರುಕಟ್ಟೆಯ ಸೂತ್ರಕ್ಕೆ ಅಳವಡಿಕೆಯಾದಂತೆ ಇಂದಿನ ರಾಜಕಾರಣದಲ್ಲಿ ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧಿಸುವಂತಾಗಿದೆ. ಎಲ್ಲಾ ವಲಯಗಳಲ್ಲಿ ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳುವಾಗ ಆತನ ಅನುಭವವನ್ನು ಪರಿಶೀಲಿಸಲಾಗುತ್ತದೆ. ಇಲ್ಲಿ ಅಂಥಾ ಯಾವ ಅನುಭವವೂ ಬೇಕಿಲ್ಲ. ತಂದೆ ಇಲ್ಲವೇ ತಾಯಿ ಈಗಾಗಲೇ ರಾಜಕಾರಣಿಯಾಗಿ ಅಪಾರ ಪ್ರಮಾಣದ ಆಸ್ತಿಯನ್ನು ಸಂಪಾದಿಸಿರುವದೇ ಅವರ ಮಕ್ಕಳ ರಾಜಕೀಯ ಪ್ರವೇಶಕ್ಕಿರುವ ವಿಶೇಷ ಅರ್ಹತೆ. ಜಾತಿ, ಧರ್ಮ, ಹಣ, ಹೆಂಡ ಮುಂತಾದವುಗಳನ್ನೇ ಆಧರಿಸಿ ರಾಜಕೀಯ ಅಖಾಡಕ್ಕೆ ಧುಮುಕುವವರಿಂದ ಮತದಾರ ನಿರೀಕ್ಷಿಸುವುದಾದರೂ ಏನನ್ನು? ಸದ್ಯದಲ್ಲೇ ಜರುಗಲಿರುವ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿರುವವರ ಪೈಕಿ ಅದೆಷ್ಟು ಜನರ ಮೇಲೆ ಅಪರಾಧದ ಪ್ರಕರಣಗಳಿವೆಯೋ ಅವರೇ ಮುಟ್ಟಿ ನೋಡಿಕೊಳ್ಳಬೇಕು.

ಇಂದು ರಾಜಕೀಯ ವಿದ್ಯಮಾನಗಳ ಬಗ್ಗೆ ತೀರಾ ಗಹನವಾದ ತಿಳುವಳಿಕೆಯಿದ್ದು ರಾಜಕೀಯ ಪ್ರವೇಶ ಮಾಡುವವರು ಅಪರೂಪವಾಗುತ್ತಿದ್ದಾರೆ. ರಾಜಕೀಯ ಸತ್ತೆಯ ಭಾಗವಾಗಿ ಗೂಟದ ಕಾರಲ್ಲಿ ಮೆರೆಯುವ ಖಯಾಲಿ, ಮಕ್ಕಳು ಮೊಮ್ಮಕ್ಕಳು ಅನಾಮತ್ತಾಗಿ ದುಡಿಯದೇ ಬದುಕುವ ಹಾಗೆ ಹಣ ಕೂಡಿ ಹಾಕುವ ಹಪಾಪಿತನ, ಕುರ್ಚಿಗಾಗಿ ಕಿತ್ತಾಟ, ಹುಚ್ಚಾಟ ಮತ್ತೆಲ್ಲಾ ಆಟಗಳನ್ನು ಆಡುವದೇ ರಾಜಕಾರಣ ಎಂದು ಬಗೆದಿರುವ ತೀರಾ ಹಗುರಾಗಿರುವ ರಾಜಕೀಯ ನಾಯಕರ ಸಂಖ್ಯೆ ಈಗೀಗ ಹೆಚ್ಚುತ್ತಿದೆ. ಸಂಸತ್ ಭವನದಲ್ಲಿ ಪೆಪ್ಪರ್ ಸ್ಫ್ರೇ ಮಾಡುವಷ್ಟು ಕನಿಷ್ಟ ಮಟ್ಟಕ್ಕೂ ಇಳಿಯುವವರೂ ನಮ್ಮ ನಾಯಕರೇ! ಅನೇಕ ಬಗೆಯ ಕ್ರಿಮಿನಲ್ ಆರೋಪಗಳನ್ನು ಹೊತ್ತವರು ಕೂಡಾ ತಮಗೊಂದು ಅವಕಾಶ ಕೊಡಿ ಎಂದು ಮತ ಕೇಳುವುದು ಬಹುಷ: ಈ ದೇಶದಲ್ಲಿ ಮಾತ್ರವೇ ಸಾಧ್ಯ. ಇಂಥವರೇ ಹೆಚ್ಚಾಗಿರುವ ಸದ್ಯದ ರಾಜಕೀಯ ಸಂದರ್ಭದಲ್ಲಿ ಜನ ಸಾಮಾನ್ಯನಿಗೆ ಎಂಥವನಿಗೆ ಮತ ಚಲಾಯಿಸಬೇಕು ಎನ್ನುವುದು ಬಹುದೊಡ್ಡ ತೊಡಕಾಗಿದೆ.

ಇಂತಹ ವಿಷಮ ಸ್ಥಿತಿಯಲ್ಲಿ ಯಾವುದೋ ಒಬ್ಬ ರಾಜಕಾರಣಿ ಕೊಡುವ ಒಂದಷ್ಟು ಚಿಲ್ಲರೆ ಹಣ, Vote1ಒಂದು ಮದ್ಯದ ಬಾಟಲ್ ಗೆ ನಮ್ಮ ಮತವನ್ನು, ನಮ್ಮತನವನ್ನು ಒತ್ತೆಯಿಟ್ಟು ರಾಜ್ಯವನ್ನು ಲೂಟಿಕೋರರ ಕೈಗೆ ಕೊಡುವುದು ಬೇಡ. ಸಾರಾಸಾರ ವಿವೇಚಿಸಿ ಮತ ಚಲಾಯಿಸೋಣ. ನಾವು ತೆಗೆದುಕೊಳ್ಳುವ ತೀರ್ಮಾನದಲ್ಲಿಯೇ ಈ ದೇಶದ ಭವಿಷ್ಯ ಅಡಗಿದೆ. ಭ್ರಷ್ಟರಿಗೆ, ಭಂಡರಿಗೆ, ಹುಸಿ ಭರವಸೆ ನೀಡುವವರಿಗೆ, ಆರಿಸಿ ಬಂದದ್ದೇ ತಮ್ಮ ಕಾರ್ಯಕ್ಷೇತ್ರವನ್ನು ಮರೆತು ರಾಜಧಾನಿಯಲ್ಲಿಯೇ ಠಿಕಾಣಿ ಹೂಡುವವರಿಗೆ, ತನ್ನ ಸಂಬಂಧಿಗಳ, ಜಾತಿಯ ಜನರ ಉದ್ದಾರಕ್ಕಾಗಿಯೇ ತಾನು ಆಯ್ಕೆಯಾಗಿರುವೆ ಎನ್ನುವ ಹಾಗೆ ಈಗಾಗಲೇ ಒಂದು ಅವಧಿಗೆ ಅಧಿಕಾರ ಮೆರೆದವರಿಗೆ ಮತ ಬೇಡ. ಒಂದು ಮತವೂ ನಿರ್ಣಯಕವಾಗಲಿದೆ. ‘ಎಲ್ಲರೂ ಅವರೇ ಇಲ್ಲಿ ಯಾರೂ ನೆಟ್ಟಗಿಲ್ಲ’ ಎಂದು ಮತ ಚಲಾಯಿಸದೇ ಇರುವವರಿಗಿಂತಲೂ ತಮಗೆ ಸೂಕ್ತ ಎನಿಸಿದವರಿಗೆ ಮತ ನೀಡುವಲ್ಲಿಯೇ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಚಲನಶೀಲತೆ ಅಡಕವಾಗಿದೆ.