Daily Archives: March 24, 2014

“ರಾಷ್ಟ್ರಕ್ಕೆ ಮೋದಿ, ರಾಜ್ಯಕ್ಕೆ ಮುತಾಲಿಕ್”


– ನವೀನ್ ಸೂರಿಂಜೆ


 

’ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಬೇಕು’ ಎಂಬ ಒಂದೇ ಉದ್ದೇಶದಿಂದ ತಾನು ಬಲವಾಗಿ ವಿರೋಧಿಸುತ್ತಿದ್ದ ಬಿಜೆಪಿಯನ್ನು ಸೇರುತ್ತಿರುವುದಾಗಿ ಹೇಳಿ ಬಿಜೆಪಿಗೆ ಸೇರ್ಪಡೆಯಾದ ಶ್ರೀರಾಮ ಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್  ದಿನ ಬೆಳಗಾಗುವುದರೊಳಗೆ ಅಲ್ಲಿಂದ ಹೊರದಬ್ಬಲ್ಪಟ್ಟಿದ್ದಾರೆ. ಬಿಜೆಪಿಯು ಹಲವು ತಿಂಗಳ (2013 ಸೆಪ್ಟೆಂಬರ್  13) ಹಿಂದೆಯೇ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರೂ ಅಂದು ಬಿಜೆಪಿಗೆmuthalik_joins bjp ಬೆಂಬಲ ನೀಡದೆ  ಆ ಪಕ್ಷವನ್ನು ನಿರಂತರವಾಗಿ  ಟೀಕಿಸುತ್ತಲೇ ಬಂದ ಪ್ರಮೋದ್ ಮುತಾಲಿಕ್  2014  ಮಾರ್ಚ್ 10 ರಂದು ರಾಜ್ಯದ ಆರು ಲೋಕಸಭಾ ಕ್ಷೇತ್ರಗಳಿಗೆ ಶ್ರೀರಾಮ ಸೇನೆಯ ಅಭ್ಯರ್ಥಿಗಳ ಪಟ್ಟಿಯನ್ನು ಕೂಡಾ ಬಿಡುಗಡೆ ಮಾಡಿದ್ದರು. ಅದಾದ ಹದಿಮೂರನೆಯ ದಿನಕ್ಕೇ ”ನರೇಂದ್ರ ಮೋದಿ ದೇಶದ ಪ್ರಧಾನಿಯಾಗಬೇಕು” ಎಂದು ಮುತಾಲಿಕ್ ಗೆ ಜ್ಞಾನೋದಯವಾಗಿ ತಾವೇ ಖುದ್ದು ಬಿಜೆಪಿ ಸೇರ್ಪಡೆಗೊಂಡು ಕೆಲವೇ ಕ್ಷಣಗಳಲ್ಲಿ ಮುಖಭಂಗ ಅನುಭವಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಸ್ಪರ್ಧಿಸುತ್ತಿರುವ ಹುಬ್ಬಳ್ಳಿ ಧಾರವಾಡ ಕ್ಷೇತ್ರದಿಂದ ಸ್ವತಃ ತಾವೇ ಸ್ಪರ್ಧಿಸುವುದಾಗಿ ಪ್ರಮೋದ್ ಮುತಾಲಿಕ್ ಘೊಷಿಸಿದ್ದರು. ಉಳಿದಂತೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ರಮಾಕಾಂತ ಕೊಂಡೂಸ್ಕರ, ಚಿಕ್ಕೋಡಿಗೆ ಜಯದೀಪ ದೇಸಾಯಿ,  ಬಾಗಕೋಟೆಯಲ್ಲಿ ಬಸವರಾಜ ಮಹಾಲಿಂಗೇಶ್ವರಮಠ, ಹಾವೇರಿಯಿಂದ ಕುಮಾರ ಹಕಾರಿ ಹಾಗೂ  ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಿ.ಎಸ್‌. ಶಾರದಮ್ಮರವರನ್ನು ಶ್ರೀರಾಮ ಸೇನೆಯ ವತಿಯಿಂದ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಸುವುದಾಗಿ ಪ್ರಮೋದ್ ಮುತಾಲಿಕ್ ಘೋಷಿಸಿದ್ದರು. ವಿಶೇಷವೆಂದರೆ ಈ ಪಟ್ಟಿ ಬಿಡುಗಡೆ ಮಾಡುವ ಸಂಧರ್ಭದಲ್ಲೂ  ಶ್ರೀರಾಮ ಸೇನೆಯು ರಾಜ್ಯದ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವುದು ನರೇಂದ್ರ ಮೋದಿಯನ್ನು ಪ್ರಧಾನಿ ಮಾಡುವ ಉದ್ದೇಶದಿಂದಲೇ ಎಂದು ನುಡಿದಿದ್ದರು. ಇದೀಗ ಅದೇ ಮುತಾಲಿಕ್  ”ಹಿಂದೂ ಮತಗಳು ಒಡೆಯಬಾರದು” ಎಂಬ ಕಾರಣ ಮುಂದಿಟ್ಟುಕೊಂಡು ಬಿಜೆಪಿ ಸೇರಿದ್ದಾರೆ. ಇನ್ನುಳಿದ ಐದು ಕ್ಷೇತ್ರಗಳಲ್ಲಿ  ಶ್ರೀರಾಮ ಸೇನೆಯ ಅಭ್ಯರ್ಥಿಗಳ ಪಾಡೇನು ಎಂಬುದರ ಬಗ್ಗೆ ಮುತಾಲಿಕ್ ಸ್ಪಷ್ಟನೆ ನೀಡದೆಯೇ ಬಿಜೆಪಿ ಸೇರಿದ್ದರು.

ಯಾರು ಈ ಮುತಾಲಿಕ್?

ಪ್ರಮೋದ್ ಮುತಾಲಿಕ್ ಅವರ ಪೂರ್ತಿ ಹೆಸರು ಪ್ರಮೋದ ಮುತಾಲಿಕ ದೇಸಾಯಿ. ಅವರ ತಂದೆ ಬೆಳಗಾವಿ ಜಿಲ್ಲೆ ಹುಕ್ಕೇರಿಯ ಜಮೀನ್ದಾರರು. ಕೃಷ್ಣಾ ನದಿ ತೀರದಲ್ಲಿ ಕಬ್ಬು ಬೆಳೆದು ತಕ್ಕಮಟ್ಟಿಗೆ ಸ್ಥಿತಿವಂತ ಎನ್ನಿಸಿಕೊಂಡವರು. ಪ್ರಮೋದ್ ಅವರ ಸಂಬಂಧಿಕರಲ್ಲಿ ಅನೇಕರು ಆರ್ ಎಸ್ ಎಸ್ ಬೆಂಬಲಿಗರಾಗಿದ್ದರಿಂದ ಅವರ ಮನೆಯಲ್ಲಿ ಸಹಜವಾಗಿಯೇ ಸಂಘದ ಪ್ರಭಾವವಿತ್ತು.

ಮುತಾಲಿಕ್ ಸಣ್ಣ ವಯಸ್ಸಿನಲ್ಲಿಯೇ ಆರ್ ಎಸ್ ಎಸ್ ಸ್ವಯಂ ಸೇವಕರಾದರು. ಸಂಘದ ತತ್ವ ಸಿದ್ಧಾಂತಗಳಿಗೆ ತುಸು ಅತಿಯಾಗಿಯೇ ಒಡ್ಡಿಕೊಂಡಿದ್ದರಿಂದ ಅವರನ್ನು ಅವರ ಗೆಳೆಯರು `ಇವ ಆರು ಎಸ್ ಎಸ್ ಅಲ್ಲ, ಏಳು ಎಸ್ ಎಸ್’ ಎಂದು ಕರೆಯುತ್ತಿದ್ದರಂತೆ.  ಪದವಿ ಮುಗಿಸಿದ ನಂತರದಲ್ಲಿ ಉದ್ಯೋಗಕ್ಕೆ ಸೇರದೆ ಮದುವೆಯೂ ಆಗದೆ ನೇರವಾಗಿ ಸಂಘದ ಪೂರ್ಣಾವಧಿ ಕಾರ್ಯಕರ್ತರಾದರು. ಪ್ರಚಾರಕರಾಗಿ ರಾಜ್ಯವೆಲ್ಲಾ ಸುತ್ತಿದರು. ಮುಂದೆ ಮೈಸೂರು ವಿಭಾಗದ ಪ್ರಚಾರಕರಾಗಿ ಅಲ್ಲಿ ನೆಲೆಸಿದರು. ಆ ಸಂದರ್ಭದಲ್ಲಿ ಮುತಾಲಿಕ್  ತುಂಬ ಶಾಂತ ಸ್ವಭಾವದವರು, ಸಹನೆ ಉಳ್ಳವರು ಅಂತ ಹೆಸರು ಗಳಿಸಿದ್ದರಿಂದ ಮಕ್ಕಳಿಗೆ ಕತೆ ಹೇಳುವ ಆರ್ ಎಸ್ ಎಸ್ ನ ”ಕಿಶೋರ ವಿಭಾಗ” ದ ಜವಾಬ್ದಾರಿ ನೀಡಲಾಗಿತ್ತು.

ತರುವಾಯ ಆರ್ ಎಸ್ ಎಸ್ ನಿಂದ ವಿಶ್ವ ಹಿಂದೂ ಪರಿಷತ್ ಗೆ, ಅಲ್ಲಿಂದ ಬಜರಂಗ ದಳಕ್ಕೆ ಎರವಲು ಸೇವೆಯ ಮೇಲೆ ಮುತಾಲಿಕರನ್ನು ಕಳುಹಿಸಲಾಯಿತು. ಕ್ರಮೇಣ ಮುತಾಲಿಕ್ ಮುತಾಲಿಕ್ ಜೀ ಆದರು. ನಿಧಾನವಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದರು. ಅವರ ಖಾರವಾದ, ಖತರನಾಕ್ ಭಾಷಣಗಳು ಆರಂಭವಾದದ್ದು ಇಲ್ಲಿಂದಲೇ. ಭಜರಂಗದಳದ ರಾಜ್ಯಾಧ್ಯಕ್ಷರಾದ ಮುತಾಲಿಕ್ ನಂತರದಲ್ಲಿ ಅದೇ ಸಂಘಟನೆಯಲ್ಲಿ ದಕ್ಷಿಣ ಭಾರತ ಪ್ರಾಂತ್ಯ ಸಂಚಾಲಕ ಸ್ಥಾನ ಪಡೆದರು. ಮುಂದೆ ತನ್ನ ಭಾಷಣಗಳಿಂದಲೇ ಬಿಜೆಪಿ ಶಾಸಕರು ಆಯ್ಕೆಯಾಗುತ್ತಿದ್ದಾರೆ ಎಂದು ಹೇಳುವ ಮೂಲಕ ಎಡವಟ್ಟು ಮಾಡಿಕೊಂಡ ಮುತಾಲಿಕ್  ಆರ್ ಎಸ್ ಎಸ್ ಮತ್ತು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾದರು.  ನಿಧಾನವಾಗಿ ಮುತಾಲಿಕ್ ಆರ್ ಎಸ್ ಎಸ್ ಅನ್ನು ತಾನೇ ತೊರೆಯುವಂತೆ ಮಾಡುವಲ್ಲಿ ಸಂಘದ ಹಿರಿಯ ಮುಖಂಡರು ಯಶಸ್ವಿಯಾಗಿದ್ದರು.

ಶ್ರೀರಾಮ ಸೇನೆ ಸ್ಥಾಪನೆ

ಪ್ರಮೋದ್ ಮುತಾಲಿಕ್ ಆರ್ ಎಸ್ ಎಸ್ ತೊರೆದ ನಂತರ ಶ್ರೀರಾಮ ಸೇನೆ ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಆ ಸಂಧರ್ಭದಲ್ಲಿ ’ಆರ್ ಎಸ್ ಎಸ್ ಸಂಘಟನೆಯದ್ದು 20090124pub4ರಾಜಕೀಯ ಹಿಂದುತ್ವ. ನಮ್ಮದು ನೈಜ ಹಿಂದುತ್ವ” ಎಂದು ಘೋಷಿಸಿದ್ದರು. ಪ್ರಗತಿಪರ ವಿಚಾರಧಾರೆಗಳು ಮತ್ತು ಮಹಿಳಾ ಸ್ವಾತಂತ್ರ್ಯವನ್ನು ಬಲವಾಗಿ ವಿರೋಧಿಸುವ ಮೂಲಕ ಮನುವಾದವನ್ನು ಜಾರಿಗೆ ತರುವುದೇ ನಿಜವಾದ ಹಿಂದುತ್ವ ಎಂದು ಬಲವಾಗಿ ನಂಬಿದ್ದ ಮುತಾಲಿಕ್ ಅದರ ಅನುಷ್ಠಾನಕ್ಕೆ ಶ್ರೀರಾಮ ಸೇನೆ ಸಂಘಟನೆಯ ಮೂಲಕ ಶ್ರಮಿಸಿದ್ದರು. ಇದರ ಭಾಗವಾಗಿಯೇ ನಡೆದದ್ದು ಪಬ್ ನಲ್ಲಿ ಊಟ ಮಾಡುತ್ತಿದ್ದ ಯುವತಿಯರ ಮೇಲೆ ದಾಳಿ. ಮಂಗಳೂರಿನ ಅಮ್ನೇಶಿಯಾ ಪಬ್ ನಲ್ಲಿ ಯುವಕ ಯುವತಿಯರು ಒಟ್ಟಿಗೆ ಕುಳಿತು ಪಾರ್ಟಿ ಆಚರಿಸುತ್ತಿದ್ದಾರೆ ಎಂದು ತಿಳಿದ ಶ್ರೀರಾಮ ಸೇನೆಯ ಕಾರ್ಯಕರ್ತರು ಅಲ್ಲಿ ದಾಳಿ ನಡೆಸಿದ್ದರು. ಯುವತಿಯರ ಮೇಲೆ ನಡೆದ ಅಮಾನುಷ ದಾಳಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಮುತಾಲಿಕ್ ಸಹಿತ ಶ್ರೀರಾಮ ಸೇನೆಯ ಹಲವು ಕಾರ್ಯಕರ್ತರು ಬಂಧಿಸಲ್ಪಟ್ಟಿದ್ದರು. ನಂತರ ಕೆಲ ದಿನ ಮುತಾಲಿಕ್ ಸುವರ್ಣಯುಗ ಆರಂಭವಾಗಿತ್ತು. ರಾಷ್ಟ್ರಮಟ್ಟದ ನಾಯಕನ ರೀತಿ ಮಿಂಚಿದ್ದ ಮುತಾಲಿಕ್ ಹೇಳಿಕೆಗಳು ಮಾಧ್ಯಮಗಳಿಗೆ ಮುಖ್ಯವಾಗಿ ಬಿಟ್ಟಿತ್ತು. ಪ್ರೇಮಿಗಳ ದಿನ, ಹೋಟೆಲ್ ನಲ್ಲಿ ಬರ್ತ್ ಡೇ ಆಚರಣೆಯನ್ನೂ ಮುತಾಲಿಕ್ ವಿರೋಧಿಸಲು ಶುರು ಮಾಡುವ ಮೂಲಕ ಭಜರಂಗದಳಕ್ಕೆ ಪರ್ಯಾಯ ಹಿಂದೂ ಸಂಘಟನೆಯಾಗಿ ಶ್ರೀರಾಮ ಸೇನೆಯನ್ನು ಬೆಳೆಸುವಲ್ಲಿ ಸಫಲರಾದರು.  ಶ್ರೀರಾಮ ಸೇನೆಯ ಕಾರ್ಯಕರ್ತರು ನಿರಂತರವಾಗಿ ಮಂಗಳೂರಿನಲ್ಲಿ ಪ್ರೇಮಿಗಳ ಮೇಲೆ  ದಾಳಿ ನಡೆಸುತ್ತಿದ್ದರು . ಇದೇ ಸಂದರ್ಭದಲ್ಲಿ ಮಂಗಳೂರಿಗೆ ಎಸ್ಪಿಯಾಗಿ ನೇಮಕಗೊಂಡು ಆಗಮಿಸಿದ ಡಾ ಎ ಸುಬ್ರಹ್ಮಣ್ಯೇಶ್ವರ ರಾವ್  ಶ್ರೀರಾಮ ಸೇನೆಯ ಆಟಾಟೋಪಗಳನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಪ್ರೇಮಿಗಳನ್ನು ಅಡ್ಡಗಟ್ಟಿ ದಾಳಿ ನಡೆಸುವ ಶ್ರೀರಾಮ ಸೇನೆಯ ಕಾರ್ಯಕರ್ತರ ಮೇಲೆ ಅತ್ಯಾಚಾರ, ಡಕಾಯಿತಿ ಕೇಸು ಹಾಕುವಂತೆ ಪೊಲೀಸ್ ಠಾಣೆಗಳಿಗೆ ಆದೇಶ ನೀಡಿ ಅದು ಜಾರಿಯಾಗುವಂತೆ ನೋಡಿಕೊಳ್ಳುವ ಮೂಲಕ ಶ್ರೀರಾಮ ಸೇನೆಯ ಆರ್ಭಟವನ್ನು ಅಕ್ಷರಶ ನಿಲ್ಲಿಸಿದ್ದರು. ಇದರ ಮಧ್ಯದಲ್ಲಿಯೇ ಪ್ರೇಮಿಗಳ ದಿನಾಚರಣೆಯ ದಿನ ಕೆಲವು ಮಹಿಳಾ ಕಾರ್ಯಕರ್ತರು ”ಪಿಂಕ್ ಚೆಡ್ಡಿ ಅಭಿಯಾನ” ಮಾಡಿದರು. ಪಿಂಕ್ ಚೆಡ್ಡಿಗಳನ್ನು ಮುತಾಲಿಕ್ ಮನೆ ವಿಳಾಸ ಮತ್ತು ಕಚೇರಿಗಳಿಗೆ ಕೊರಿಯರ್ ಮಾಡಿ ಅವರಿಗೆ ಮುಜುಗರ ಹುಟ್ಟಿಸಿದ್ದರು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ಬಲ ಕಳೆದುಕೊಂಡು ಮುತಾಲಿಕ್ ಮುಸ್ಲಿಂ ವಿರೋಧಿ ಭಾಷಣಕ್ಕಷ್ಟೇ ಪ್ರಾಮುಖ್ಯತೆ ಪಡೆದುಕೊಂಡಿದ್ದರು.

ಹಣಕ್ಕಾಗಿ ಹಿಂದುತ್ವ?

ಪ್ರಮೋದ್ ಮುತಾಲಿಕ್ ಹಣ ಸಂಪಾದನೆಯ ದೃಷ್ಠಿಯಿಂದ ಹಿಂದುತ್ವದ ಬಗ್ಗೆ ಬೊಗಳೆ ಬಿಡುತ್ತಿದ್ದಾರೆ ಎಂಬ ಆರೋಪ ಇಂದು ನಿನ್ನೆಯದ್ದಲ್ಲ. ಮಂಗಳೂರಿನ ಪಬ್ ದಾಳಿಯ ಹಿಂದೆಯೂ ಹಪ್ತಾ ಮಾಫಿಯಾ ಇದೆ ಎಂಬ ಗುಮಾನಿ ಇತ್ತು. ಮಂಗಳೂರಿನಲ್ಲಿ ಹಲವಾರು ಪಬ್ ಗಳಿದ್ದರೂ ಕೇವಲ ಅಮ್ನೇಶಿಯಾ  ಮಾತ್ರವೇ ದಾಳಿಗೆ ಗುರಿಯಾಗಿದ್ದು ಯಾಕೆ ಎಂಬ ಪ್ರಶ್ನೆಗೆ ಅಮ್ನೇಶಿಯಾ ಪಬ್ ಮಾಲಕರು, ”ವಾರದ ಹಿಂದೆ ಶ್ರೀರಾಮ ಸೇನೆಯ ಕೆಲ ಯುವಕರು ಬಂದು ಪಬ್ ನ ಸೆಕ್ಯೂರಿಟಿ ಕಾಂಟ್ರಾಕ್ಟ್ ಮತ್ತು ಬೌನ್ಸರ್ ಗಳ ಕಾಂಟ್ರಾಕ್ಟನ್ನು ನಮಗೇ ನೀಡಬೇಕು ಎಂದು ಕೇಳಿಕೊಂಡಿದ್ದರು. ನಾನು ಒಪ್ಪಿರಲಿಲ್ಲ. ಇಂದು ದಾಳಿಯಾಗಿದೆ” ಎಂದು ಉತ್ತರಿಸಿದ್ದರು. ನಂತರ ನಾನು ಮತ್ತು ನನ್ನ ಗೆಳೆಯರು ಇತರ ಪಬ್ ಮತ್ತು ಬಾರ್ ಗಳನ್ನು ಪರಿಶೀಲಿಸಿದಾಗ ಹಲವಾರು ಕಡೆಗಳಲ್ಲಿ ಶ್ರೀರಾಮ ಸೇನೆ ಸೆಕ್ಯೂರಿಟಿ ಕಾಂಟ್ರಾಕ್ಟ್ ಮತ್ತು ಬೌನ್ಸರ್ ಕಾಂಟ್ರಾಕ್ಟ್ ಹೊಂದಿರುವ ಸಂಗತಿ ಅರಿವಿಗೆ ಬಂತು. ಎಲ್ಲೆಲ್ಲಿ ಶ್ರೀರಾಮ ಸೇನೆ ಈ ರೀತಿ ಕಾಂಟ್ರಾಕ್ಟ್ ಗಳನ್ನು ಹೊಂದಿದೆಯೋ ಅಂತಹ ಪಬ್ ಗಳಲ್ಲಿ ಹುಡುಗ ಹುಡುಗಿಯರು ಹಿಂದುತ್ವ ಮರೆತು ಕುಡಿಯಬಹುದು ಮತ್ತು ನರ್ತಿಸಬಹುದು ಎಂಬ ಅಂಶ ಅಲ್ಲಿಗೆ ಸ್ಪಷ್ಟವಾಯಿತು.

ಇಷ್ಟೇ ಅಲ್ಲದೆ ಹಣ ನೀಡಿದರೆ ದೇಶದಲ್ಲಿ ಹಿಂಸಾಚಾರ ಮತ್ತು ಗಲಭೆ ಸೃಷ್ಟಿಸಲು ಸಿದ್ಧ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒಪ್ಪಿಕೊಂಡಿರುವ ವಿಷಯ ತೆಹಲ್ಕಾ-ಹೆಡ್‌ಲೈನ್ಸ್ ಟುಡೆ ನಡೆಸಿದ ಜಂಟಿ ಗುಪ್ತ ಕಾರ್ಯಾಚರಣೆಯಲ್ಲಿ ಬಹಿರಂಗಗೊಂಡಿತ್ತು. ಸೂಕ್ತ ಮೊತ್ತದ ಹಣ ನೀಡಿದರೆ ಯಾವುದೇ ಹಿಂಸಾಚಾರ ಅಥವಾ ಹಿಂಸಾತ್ಮಕ ಪ್ರತಿಭಟನೆಯನ್ನು ನಡೆಸಲು ತಾನು ಸಿದ್ಧನಿರುವುದಾಗಿ ಗುಪ್ತ ಕಾರ್ಯಾಚರಣೆಯ ತಂಡಕ್ಕೆ ಮುತಾಲಿಕ್ ಭರವಸೆ ನೀಡಿರುವ ವಿಷಯ ಕ್ಯಾಮರಾದಲ್ಲಿ ದಾಖಲಾಗಿತ್ತು. ಕುಟುಕು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪತ್ರಕರ್ತರು ಮುತಾಲಿಕ್ ಅನ್ನು ಬೇಟಿಯಾಗಿ ”ತಮ್ಮ  ವ್ಯವಹಾರ ಪ್ರಸಿದ್ದಿ ಪಡೆಯಲು ವಿನಾಕಾರಣ ವಿವಾದ ಸೃಷ್ಠಿಸಿ ಗಲಬೆ ಎಬ್ಬಿಸಬೇಕು” ಎಂದು ದೀರ್ಘ ಕಾಲ ಮಾತುಕತೆ ನಡೆಸಿದ್ದರು. ಅದಕ್ಕೆ ಮುತಾಲಿಕ್ ಒಪ್ಪಿಕೊಂಡಿದ್ದರು. ಈ ಮೂಲಕ  ಈವರೆಗೆ ಮುತಾಲಿಕ್ ನಡೆಸಿರುವ ಸಂಸ್ಕೃತಿ ರಕ್ಷಣೆಯ ದಾಳಿಗಳೆಲ್ಲಾ ಹಫ್ತಾ ಪ್ರಾಯೋಜಿತ ಎಂದು ಸಾಬೀತಾಗಿತ್ತು.

ಬಿಜೆಪಿ ಸೇರ್ಪಡೆ ಹಿಂದೆ ವ್ಯವಹಾರ?

ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಸ್ಪರ್ಧಿಸುವ ಹುಬ್ಬಳ್ಳಿ ದಾರವಾಡ ಲೋಕಸಭಾ ಕ್ಷೇತ್ರವೂ ಸೇರಿದಂತೆ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಶ್ರೀರಾಮ ಸೇನೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಪ್ರಮೋದ್ ಮುತಾಲಿಕ್ ಕೇವಲ 13 ದಿನಗಳಲ್ಲಿ ಬಿಜೆಪಿ ಜೊತೆ ವಿಲೀನವಾಗುವುದರ ಹಿಂದೆ ಭಾರೀ ಮೊತ್ತದ ಹಣಕಾಸು ವ್ಯವಹಾರ ನಡೆದಿದೆ ಎನ್ನಲಾಗುತ್ತಿದೆ. ಆದರೆ ಇದಕ್ಕೆ ”ಮೋದಿ ದೇಶದ ಪ್ರಧಾನಿಯಾಗಬೇಕು” ಎಂಬ ತಲೆಬರಹ ನೀಡಲಾಗುತ್ತಿದೆಯಷ್ಟೇ ಎಂಬ ಸಂಶಯ ಇದೆ. ’ಮೋದಿ ದೇಶದ ಪ್ರಧಾನಿಯಾಗಬೇಕು’ ಎಂದು ಪ್ರಮೋದ್ ಮುತಾಲಿಕ್ ಹಣಕಾಸು ವ್ಯವಹಾರ ಮಾಡುತ್ತಿರುವುದು ಇದೇ ಮೊದಲಲ್ಲ. ಮೋದಿ ಹೆಸರಲ್ಲಿ ಮುತಾಲಿಕ್ ಹಣ ಸಂಪಾದನೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದು ಬೇರಾರೂ ಅಲ್ಲ. ಬಿಜೆಪಿಯ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಬಿಜೆಪಿ ಅಧ್ಯಕ್ಷ ಲಿಂಗರಾಜ್ ಪಾಟೀಲ್.

2013 ನವೆಂಬರ್ 8 ರಿಂದ ಮೂರು ದಿನಗಳ ಕಾಲ ಶ್ರೀರಾಮಸೇನೆ ಹಾಗೂ ಹಿಂದೂ ಜನಜಾಗೃತಿ ಸಮಿತಿ ಹಿಂದೂ ಅಧಿವೇಶನ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕಾಗಿ ”ಮೋದಿ-ಮುತಾಲಿಕ್ ಬ್ರಿಗೇಡ್ ”ಸ್ಥಾಪನೆಗೊಂಡಿದ್ದು, ”ದೇಶಕ್ಕೆ ಮೋದಿ-ರಾಜ್ಯಕ್ಕೆ ಮುತಾಲಿಕ್” ಎಂದು ಬ್ಯಾನರ್ ಬರೆದುಕೊಂಡು ಸ್ಥಳೀಯರಿಂದ 100 ರೂ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ನವೆಂಬರ್ 09 ರಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮತ್ತು ಸ್ಥಳೀಯ ಬಿಜೆಪಿ ಮುಖಂಡ ಲಿಂಗರಾಜ್ ಪಾಟೀಲ್ ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದರು. ಹುಬ್ಬಳ್ಳಿ ದಾರವಾಡ ಮಹಾನಗರ ಬಿಜೆಪಿಯ ಅಧ್ಯಕ್ಷ ಲಿಂಗರಾಜ್ ಅವರ ಆರೋಪ ಇಷ್ಟಕ್ಕೇ ಮುಗಿದಿರಲಿಲ್ಲ. ಅವರು ಮುತಾಲಿಕ್ ರನ್ನು ಉದ್ದೇಶಿಸಿ ಪತ್ರಿಕಾಗೋಷ್ಠಿಯಲ್ಲಿ ಹೀಗೆ ಹೇಳಿದ್ದರು, ” ಮೈಬಗ್ಗಿಸಿ ದುಡಿದು ಬದುಕಲು ಯೋಗ್ಯತೆಯಿಲ್ಲದ ಕಿಡಿಗೇಡಿಗಳು ದೇವರ ಹೆಸರಿನಲ್ಲಿ ಹಣ ಪೀಕುವಂತೆ ಅಥವಾ ಗೂಂಡಾಗಿರಿ ದಬ್ಬಾಳಿಕೆ ಮಾಡಿ ಹಣ ವಸೂಲಿ ಮಾಡುವಂತೆ, ಹಣ ಹೊಂದಿಸುವ ನಿಟ್ಟಿನಲ್ಲಿ ಐದಾರು ರೂಪಾಯಿ ಮೌಲ್ಯದ ಸ್ಟಿಕರೊಂದನ್ನು ಮುದ್ರಿಸಿ ಅದನ್ನು ನೂರು ರೂಪಾಯಿಗೆ ಒತ್ತಾಯಪೂರ್ವಕವಾಗಿ ಮಾರಾಟ ಮಾಡುವ ಅಡ್ಡ ಕಸುಬು ನಡೆಸುತ್ತಿದ್ದಾರೆ. ರಸ್ತೆಯಲ್ಲಿ ಓಡಾಡುವ ಜನಸಾಮಾನ್ಯರಿಂದ ಹಿಡಿದು ಸಣ್ಣಪುಟ್ಟ ಚಿಲ್ಲರೆ ವ್ಯಾಪಾರಸ್ಥರ ಮೇಲೂ ದಬ್ಬಾಳಿಕೆ ಪ್ರದರ್ಶಿಸುತ್ತಿರುವ ಶ್ರೀರಾಮ ಸೇನೆಯ ಕಾರ್ಯಕರ್ತರು, ತಾವು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಅಭಿಮಾನಿಗಳು ಎಂದು ಪರಿಚಯಿಸಿಕೊಂಡು ಪ್ರತೀ ಟಿಕೇಟಿಗೆ ನೂರು ರೂಪಾಯಿಯಂತೆ ಹಣ ವಸೂಲಿ ಮಾಡುತ್ತಿದ್ದಾರೆ” ಎಂದು  ಲಿಂಗರಾಜ್ ಪಾಟೀಲ್ ನೇರವಾಗಿ ಆರೋಪಿಸಿದ್ದರು.

ಇದೀಗ ಅದೇ ಪ್ರಮೋದ್ ಮುತಾಲಿಕ್ ಬಿಜೆಪಿ ಸೇರಿ ಒದೆ ತಿಂದಿದ್ದಾರೆ. ಮತ್ತದೇ ನರೇಂದ್ರ ಮೋದಿಯ ಕಾರಣಕ್ಕಾಗಿ.

ಪ್ರತಾಪ ಸಿಂಹ: ಯಾರೂ ‘ತುಳಿಯಬಾರದ’ ಹಾದಿ!

– ಶಿವರಾಜ್

ನರೇಂದ್ರ ಮೋದಿ ಹಾವಳಿಯಿಂದ ತತ್ತರಿಸಿದವರ ಹಿರಿಯ ನಾಯಕರ ಪಟ್ಟಿಯಲ್ಲಿ ಕರ್ನಾಟಕದವರೂ ಇದ್ದಾರೆ. ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರೂ ಮೈಸೂರಿನಲ್ಲಿ ಸ್ಪರ್ಧಿಸುವ ಅವಕಾಶ ಸಿ.ಎಚ್.ವಿಜಯಶಂಕರ್ ಅವರಿಗೆ ಸಿಗಲಿಲ್ಲ. ಕಳೆದ ಬಾರಿ ಅವರು ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಅವರಿಂದ ಕೇವಲ 7,600 ಮತಗಳ ಅಂತರದಿಂದ ಸೋತಿದ್ದರು. ಲೋಕಸಭಾ ಚುನಾವಣೆಯಲ್ಲಿ ಅದು ಅಲ್ಪ ಮತದ ಅಂತರ ಎಂದೇ ಪರಿಗಣಿಸಿ ರೂಢಿ. ಆದರೆ ಪ್ರತಾಪ್ ಸಿಂಹ ಎಂಬ ಪತ್ರಕರ್ತನಿಗೆ ಅವಕಾಶ ಮಾಡಿಕೊಡಲು ವಿಜಯಶಂಕರ್ ಅವರನ್ನು ಹಾಸನಕ್ಕೆ ಕಳುಹಿಸಿದರು. ಅವರು ಪಾಪ ಒಲ್ಲದ ಮನಸ್ಸಿನಿಂದ ಹಾಸನಕ್ಕೆ ಹೋಗಿ ಪ್ರಚಾರಕ್ಕೆ ನಿಂತಿದ್ದಾರೆ. ಹಾಸನ ಮೂಲದ ಪ್ರತಾಪ ಸಿಂಹನಿಗೆ ಇಲ್ಲಿ ಅವಕಾಶ ಕೊಟ್ಟು, ತನ್ನನೇಕೆ ಹಾಸನಕ್ಕೆ ಕಳುಹಿಸಿದರು ಎಂಬ ಪ್ರಶ್ನೆಗೆ ಅವರಿಗಿನ್ನೂ ಸಮಾಧಾನದ ಉತ್ತರ ಸಿಕ್ಕಿಲ್ಲ.

ಹಾಸನ ಮೂಲದವನಾಗಿದ್ದರೂ ಮೈಸೂರಿಗೆ ಬಂದ ಮಹಾಶಯ ‘ಸಿಂಹಕ್ಕೆ ಪ್ರಬಲ ಪೈಪೋಟಿಯ ಕ್ಷೇತ್ರವೇ ಬೇಕಿತ್ತು. ಹಾಗಾಗಿ ಮೈಸೂರು ಆಯ್ಕೆ ಮಾಡಿಕೊಂಡೆ..’ ಎಂದು ಅಲ್ಲಲ್ಲಿ ಹೇಳಿಕೊಳ್ಳುತ್ತಿರುವ ಸಂಗತಿಯಂತೂ ವಿಜಯಶಂಕರ್ ಅವರನ್ನು ಇನ್ನಿಲ್ಲದ ಸಂಕಟದಿಂದ ಬಳಲುವಂತೆ ಮಾಡಿರಬಹುದು. ಸಿಂಹಕ್ಕೆ ಜಿದ್ದಾಜಿದ್ದಿನ ಕ್ಷೇತ್ರ ಬೇಕಿದ್ದರೆ ಹಾಸನವೇ ಇತ್ತಲ್ಲ! ಅಲ್ಲಿ ಸ್ಪಧರ್ಿಸಿ ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸಿದ್ದರೆ…ಪಕ್ಷವೇನು ಬೇಡ ಎನ್ನುತ್ತಿತ್ತೆ?

photo-pratap

ಇತ್ತೀಚೆಗೆ ಅನೇಕ ಪತ್ರಕರ್ತರು ವಿವಿಧ ರಾಜಕೀಯ ಪಕ್ಷಗಳನ್ನು ಸೇರಿ ಚುನಾವಣೆಗೆ ನಿಂತಿದ್ದಾರೆ. ಸರಕಾರದಲ್ಲಿ ಅಧಿಕಾರಿಗಳಾಗಿದ್ದು ಅಥವಾ ಪತ್ರಕರ್ತರಾಗಿದ್ದು ಚುನಾವಣಾ ರಾಜಕೀಯಕ್ಕೆ ಪ್ರವೇಶಿದರೆ, ಅಂತಹವರು ತಮ್ಮ ಹಿಂದಿನ ಕ್ಷೇತ್ರದಲ್ಲಿ ನಡೆದುಕೊಂಡಿದ್ದ ಬಗೆ ಏನು ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸುವ ಅಗತ್ಯವಿದೆ. ಎಸ್. ಎಂ. ಕೃಷ್ಣ ಅವರ ಕಾಲದಲ್ಲಿ ಮುಖ್ಯ ಕಾರ್ಯದರ್ಶಿಯಾಗಿದ್ದವರು ನಿವೃತ್ತಿ ನಂತರ ಕಾಂಗ್ರೆಸ್ ನಿಂದ ಲೋಕಸಭೆ ಚುನಾವಣೆಗೆ ನಿಂತು ಸೋತರು. ಹಾಗಾದರೆ, ಅವರು ತಮ್ಮ ವೃತ್ತಿ ಕಾಲದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ ಆಗುವ ಹಾಗೆ ಕೆಲಸ ಮಾಡಿದ್ದರೆ ಎಂಬ ಸಂಶಯ ಸಹಜ. ಅದೇ ಪ್ರಶ್ನೆ ಪತ್ರಕರ್ತರನ್ನು ಕೇಳಬೇಕಾಗುತ್ತದೆ.

ಪ್ರತಾಪ ಸಿಂಹರ ಸಂದರ್ಭದಲ್ಲಂತೂ ಈ ಅಂಶ ಸ್ಪಷ್ಟ. ಅವರು ಬರೆದಿದ್ದು ಅಂಕಣಗಳೇ ಇರಬಹುದು. ಆದರೆ ಅವುಗಳಲ್ಲಿ ಬಹುತೇಕ ಬರಹಗಳು ಬಿಜೆಪಿ ಪಕ್ಷದ ಕರಪತ್ರಗಳೇ. ಪ್ರಮುಖ ಪತ್ರಿಕೆಯಲ್ಲಿ ಕೆಲಸ ಮಾಡಿಕೊಂಡಿದ್ದು ನರೇಂದ್ರ ಮೋದಿ: ಯಾರೂ ತುಳಿಯದ ಹಾದಿ ಎಂಬ ಹೆಸರಿನ ಕೇವಲ ಬಹುಪರಾಕುಗಳನ್ನು ಉಳ್ಳ ಪುಸ್ತಕ ಬರೆಯುವ ಉದ್ದೇಶವಾದರೂ ಏನು? ಆ ಕೃತಿಯನ್ನು ಮೋದಿಯ ಮೊದಲ ‘ಬಯೋಗ್ರಫಿ’ ಎಂದು ಹಲವರು ಬಣ್ಣಿಸುತ್ತಾರೆ. ಒಂದು ವ್ಯಕ್ತಿತ್ವದ ವಿಮರ್ಶಾತ್ಮಕ ಅಧ್ಯಯನ ಇಲ್ಲದೇ ಹೋದರೆ ಅದು ಗಂಭೀರ ಕೃತಿಯಾಗುವುದೇ ಇಲ್ಲ. ಅದು ಗಂಭೀರ ಆದರೆಷ್ಟು ಬಿಟ್ಟರೆಷ್ಟು ನರೇಂದ್ರ ಮೋದಿ ಕೃಪೆಯಿಂದ ಮೈಸೂರಿನಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ಆ ಕೃತಿ ಲಾಭದಾಯಕವಾಗಿದ್ದಂತೂ ಸತ್ಯ.

ಹೀಗೆ ಒಂದು ಪಕ್ಷದ ಪರ, ಒಬ್ಬ ವ್ಯಕ್ತಿಯ ಪರ ಕರಪತ್ರಗಳನ್ನು ಬರೆದುಕೊಂಡಿದ್ದವರನ್ನು ಪತ್ರಕರ್ತ ಎಂದು ಕರೆಯುತ್ತಿರುವುದು ಸರಿಯೆ? ಪ್ರಚೋದನಕಾರಿ ಸುಳ್ಳುಗಳನ್ನು ಬರೆದುಕೊಂಡು ಟಿಕೆಟ್ ಗಿಟ್ಟಿಸಿದ್ದಲ್ಲದೆ, ಪ್ರಚಾರದ ಸಂದರ್ಭದಲ್ಲೂ ಅಂತಹದೇ ಮಾತುಗಳನ್ನಾಡುತ್ತಿದ್ದಾರೆ. ಪಾಕಿಸ್ತಾನ ಎರಡು ತಲೆ ಕಡಿದರೆ, ಇಂಡಿಯಾ ನಾಲ್ಕು ತಲೆ ಕಡಿಯಬೇಕಿತ್ತಂತೆ. ಜಾಗತಿಕವಾಗಿ ಪಾಕಿಸ್ತಾನದ ಸ್ಥಾನ, ಘನತೆ ಏನು, ಇಂಡಿಯಾದ ಮಾನ, ಘನತೆಗಳೇನು ಎನ್ನುವ ಅರಿವು ಇದ್ದರೆ ಹೀಗೆ ಮಾತನಾಡುತ್ತಿದ್ದರೆ? ಅನೇಕರಿಗೆ ನೆನಪಿರಬಹುದು ಈ ಪತ್ರಕರ್ತ (ಹಾಗಂತ ಕರೆಯಲ್ಪಡುತ್ತಿರುವ) ವಿಜಯ ಕರ್ನಾಟಕದಲ್ಲಿ ವಿ.ಪಿ. ಸಿಂಗ್ ಸತ್ತಾಗ ಅಂಕಣ ಬರೆದಿದ್ದರು. ಮೈಸೂರಿನ ಜನತೆ ಇಂತಹವರಿಗೆ ಮಣೆ ಹಾಕುವ ಮುನ್ನ ಒಮ್ಮೆ ಆ ಬರಹವನ್ನು ಜ್ಞಾಪಿಸಿಕೊಳ್ಳಬೇಕು (ಪ್ರಕಟವಾದದ್ದು ನವೆಂಬರ್ 2008 ರಲ್ಲಿ).

ಹಿಂದುಳಿದ ವರ್ಗಗಳಿಗೆ ಮೀಸಲಾತಿ ಪ್ರತಿಪಾದಿಸುವ ಮಂಡಲ್ ವರದಿಯನ್ನು ಜಾರಿಗೆ ತಂದದ್ದು, ಈ ಪತ್ರಕರ್ತನ ಪ್ರಕಾರ ‘ದೇಶಕ್ಕೆ ತುಂಬಲಾರದ ನಷ್ಟ’! ವಿ.ಪಿ ಸಿಂಗ್ ಅವರ ಕೊಡುಗೆಯನ್ನು ಹಿಯಾಳಿಸುವ ವ್ಯಕ್ತಿ ಲೋಕಸಭೆಗೆ ಹೋಗಿ ಯಾವ ಹಿಂದುಳಿದವರ ಪರ, ದಲಿತರ ಪರ ಮಾತನಾಡಬಲ್ಲ. ಬಹುಶಃ ಆತನ ಮಾತುಗಳೇನಿದ್ದರೂ ತಲೆ ಕಡಿಯುವುದಕ್ಕೆ ಮಾತ್ರ ಸೀಮಿತ. ಪಾಕಿಸ್ತಾನ ಸೈನಿಕರ ತಲೆ ಕಡಿಯುವುದರಿಂದ ಮೈಸೂರು ಕ್ಷೇತ್ರ ಜನತೆಗೆ ಕುಡಿವ ನೀರೇನು ಸಿಗೋಲ್ಲ. ರಸ್ತೆ ಗುಂಡಿಗಳು ಮುಚ್ಚಲ್ಲ. ಕಾವೇರಿ ನದಿ ಹರಿದು ನೆಲ ಹಸಿರಾಗುವುದಿಲ್ಲ.

ಹುಟ್ಟು, ಹುಟ್ಟುವ ಮನೆ, ಲಿಂಗ, ಜಾತಿ, ಕುಲ, ಧರ್ಮ ಯಾವುದೂ ಯಾರ ಆಯ್ಕೆಗಳಲ್ಲ. ಹಾಗಾಗಿ ಯಾವುದರ ಆಯ್ಕೆಗೆ ಅವಕಾಶ ಇಲ್ಲವೋ ಅದರ ಆಧಾರದ ಮೇಲೆ ಭಿನ್ನತೆ ಮಾಡುವುದು ಅಥವಾ ತುಚ್ಚವಾಗಿ ಕಾಣುವುದು ಅಕ್ಷಮ್ಯ.photo-pratap-2 ಪ್ರತಾಪ ಸಿಂಹನಂತಹ (ಅಂತಹ ಅನೇಕರು ಇದ್ದಾರೆ) ವ್ಯಕ್ತಿಗಳು ಅರ್ಥಮಾಡಿಕೊಳ್ಳಬೇಕಾದ್ದೇ ಇದನ್ನು. ಒಂದು ಜನಸಮೂಹವನ್ನು ಕೋಮಿನ ಆಧಾರದ ಮೇಲೆ ದೂಷಿಸುತ್ತಾ, ಟೀಕಿಸುತ್ತಾ, ಹೀಯಾಳಿಸುತ್ತ ಹೋದರೆ ಅಂತ್ಯ ಎಲ್ಲಿದೆ? ಇಂದು ಅನ್ಯ ಧರ್ಮೀಯರನ್ನು ಶತ್ರುಗಳಂತೆ ಕಾಣುವ ಜನರಿಗೆ, ನಾಳೆ ಅನ್ಯ ಜಾತಿಯವರು ಹಾಗೇ ಕಾಣುತ್ತಾರೆ. ದಲಿತರನ್ನು ಇನ್ನೂ ಮನೆಯ ಅಂಗಳಕ್ಕೇ ಸೇರಿಸಿಲ್ಲ. ಇಂತಹ ಧಮರ್ಾಂಧ ಮನಸುಗಳಿಗೆ ನಾಳೆ ಶತ್ರುಗಳಾಗಿ ಕಾಣುವವರು ಅವರೇ. ಏಕೆಂದರೆ ಶತ್ರು ಒಬ್ಬನನ್ನು ಸೃಷ್ಟಿಸಿ ಗಲಭೆ ಎಬ್ಬಿಸಿ ಲಾಭ ಪಡೆಯುವುದಷ್ಟೆ ಕೆಲವು ಸಿದ್ಧಾಂತಗಳ ತಿರುಳು ಆಗಿರುವಾಗ ಬೇರೇನನ್ನು ನಿರೀಕ್ಷಿಸಲು ಸಾಧ್ಯ.